ದೇಹ ಮಾತಾಡುತ್ತದೆ

(ಲಘು ಕತೆ)
ಮೂಲ: ಡಾ. ಶಬನಮ್ ಆಲಮ್, ಅಲೀಗಢ
ಅನುವಾದ: ಡಾ. ಮಾಧವಿ ಎಸ್. ಭಂಡಾರಿ

‘ದೇಹ ಮಾತಾಡುತ್ತದೆ’ ಕೇಳಿದರೆ ನಿಮಗೆ ವಿಚಿತ್ರ ಅನ್ನಿಸುತ್ತಿದೆಯಲ್ವಾ? ನನಗೂ ಹಾಗೆಯೇ ಅನ್ನಿಸಿತ್ತು. ಇದೊಂದು ಬಹಳ ಹಿಂದಿನ ಘಟನೆ. ನಾನಾಗ ಚಿಕ್ಕವಳು. ಹಳ್ಳಿಯಲ್ಲಿ ಇರ್ತಾ ಇದ್ದೆ. ನಮ್ಮೂರಲ್ಲಿ ಒಬ್ಬ ಎಮ್ ಎಲ್ ಎ ಇದ್ದರು. ಅವರ ಹೆಸರು ರಾಮಖೇಲಾವನ್ ಯಾದವ. ಅವರ ಮನಸ್ಸಿಗೆ ವಿರುದ್ಧವಾಗಿ ಅವರಮ್ಮ ಎದೆ ಸೀಳಿದರೆ ಒಂದಕ್ಷರ ಇಲ್ಲದ ಪಕ್ಕದ ಊರಿನ ಹಳ್ಳಿಗುಗ್ಗುನ ತಂದು ಅವರ ಕೊರಳಿಗೆ ಕಟ್ಟಿದ್ದರು. ಅವರಿಗೆ ತಮ್ಮ ಹೆಂಡತಿಯನ್ನು ಕಂಡರೆ ಆಗ್ತಾ ಇರಲಿಲ್ಲ. ಅವಳನ್ನು ಎಷ್ಟು ದ್ವೇಷಿಸ್ತಾ ಇದ್ದರು ಅಂದರೆ, ಸಾಯೋ ತನಕ ಅವಳ ಹತ್ತಿರ ಮಾತಾಡಿದ್ದನ್ನು ಯಾರ್ಯಾರೂ ಕಂಡಿಲ್ಲ. ಆದರೆ ಅವಳ ಬೇಕು-ಬೇಡಗಳನ್ನು ಅವರೆಂದೂ ಕಡೆಗಣಿಸಿರಲಿಲ್ಲ. ಅವರಿಗೆ ಆರು ಮಕ್ಕಳಿದ್ದರು. ಇದೊಂದು ವಿಡಂಬನೆಯಲ್ಲದೆ ಮತ್ತಿನ್ನೇನು? ಬಾಯಿ ಬಂದಾಗಿದ್ದರೂ, ದೇಹ ಮಾತಾಡ್ತಾನೇ ಇತ್ತು. ಇದೆಲ್ಲ ಹೇಗೆ ಸಾಧ್ಯ? ಆ ದಿನಗಳಲ್ಲಿ ನನಗೆ ನಂಬಿಕೆನೇ ಬರ್ತಾ ಇರಲಿಲ್ಲ.
ಇವತ್ತು ನನ್ನ ಕೆಲಸದಾಕೆ ತುಂಬಾ ಟೆನ್ಶನ್‍ನಲ್ಲಿ ಇದ್ದಳು. “ಯಾಕಮ್ಮಾ, ಏನಾಯ್ತು? ಆಕಾಶವನ್ನೇ ತಲೆಮೇಲೆ ಹೊತ್ತುಕೊಂಡಿದ್ದೀಯಾ.” ಎಂದು ಕೇಳಿದ್ದಕ್ಕೆ ಹೇಳಿದಳು, “ಮೇಡಂ, ನನ್ನ ಗಂಡ ಬಲು ವಿಚಿತ್ರ ಮನುಷ್ಯ. ಹಗಲಿಡಿ ನನ್ನ ಮುಖ ನೋಡೋದಿಲ್ಲ. ನನ್ನ ಹತ್ರ ಮಾತಾಡೋದಿಲ್ಲ. ನಾನವನ ಪಾಲಿನ ಶಾಪವೇನೋ ಅನ್ನೋಥರ ಮಾಡ್ತಾನೆ. ಆದರೆ ರಾತ್ರಿಯ ಕಥೆಯೇ ಬೇರೆ! ಏನನ್ನೂ ಹೇಳದೆಯೂ, ಕೇಳದೆಯೂ ನನ್ನೆಲ್ಲ ಮಾತುಗಳನ್ನು ಅವನು ಅರ್ಥ ಮಾಡಿಕೊಂಡುಬಿಡ್ತಾನೆ.
ಆ ಕ್ಷಣ ನನಗೆ ನಮ್ಮೂರ ಎಮ್ ಎಲ್ ಎ ಸಾಹೇಬರು ಮತ್ತವರ ಆರು ಮಕ್ಕಳು ಕಣ್ಮುಂದೆ ಬಂದರು. ಆಮೇಲೆ ನನಗೆ ವಿಶ್ವಾಸ ಆಯ್ತು, ದೇಹಕ್ಕೂ ಅದರದೇ ಆದ ಭಾಷೆ ಇರ್ತದೆ. ಅಂದರೆ, ದೇಹ ಮಾತಾಡ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter