ಗಂಗಾ

(ಮಿನಿಕತೆ )

ಏಪ್ರಿಲ್ ತಿಂಗಳ ರಣಬಿಸಿಲು ಹೊರಗೆ ಕಾಲಿಡುವಂತಿಲ್ಲ, ಮನೆಯೊಳಗೂ ಅಷ್ಟೇ ತಾರಸಿ ಕಾದ ಕಾವು.ಆಗಲೇ ಗಂಟೆ ಎರಡು ದಾಟಿದ್ದು ನೋಡಿ ಬಡ ಬಡನೆ ನಾಲ್ಕು ಚೆoಬು ತಣ್ಣೀರು ಸುರಿದು ಕೊಂಡವಳೇ ಮಧ್ಯಾಹ್ನದ ಅಡುಗೆಗೆ ಮಡಿಸೀರೆ ಉಟ್ಟು ಬಂದಳು ಗಂಗಾ.

ಮುಖದಿಂದ ಬಸಿಯುತ್ತಿದ್ದ ಬೆವರೊರೆಸಿಕೊಳ್ಳುತ್ತ ಬಾವಿ ನೀರು ಸೇದಿ ಕುಕ್ಕರ್ ಇಟ್ಟಳು. ಸೆಕೆ ತಾಳಲಾಗದೆ ಒಂದು ಉದ್ದ ಲೋಟಕ್ಕೆ ಫ್ರಿಜ್ ವಾಟರ್ ಸುರಿದು ಬಾಯ್ಗೆ ಅನಿಸಬೇಕು ಅಷ್ಟರಲ್ಲಿ ಕಾಲಿಂಗ್ ಬೆಲ್ ಮ್ಯೂಸಿಕ್..ಕೈಯಲ್ಲಿ ನೀರಿನ ಲೋಟ ಹಿಡಿದೇ ಮುಂಬಾಗಿಲ ಬೋಲ್ಟ್ ಸರಿಸಿ ನಿಧಾನಕ್ಕೆ ಅರ್ಧ ಬಾಗಿಲು ತೆರೆದಾಗ ಬೆನ್ನಿಗೆ ಕಪ್ಪು ಬ್ಯಾಗ್ ಏರಿಸಿ, ನೀಟಾಗಿ ಪ್ಯಾಂಟ್, ಶರ್ಟ್ ಧರಿಸಿದ್ದ ಹುಡುಗ ನಿಂತಿದ್ದ.ಜೇಬಿಗೆ ಅಂಟಿಸಿದ ಕೆಂಪು ಬ್ಯಾಡ್ಜ್ ಅವನೊಬ್ಬ ಸೇಲ್ಸ್ ಬಾಯ್ ಎಂದು ತೋರಿದರೂ ಅನುಮಾನಾಸ್ಪದವಾಗಿ ಅವನನ್ನೇ ದಿಟ್ಟಿಸಿ ನೋಡುತ್ತಾ  “ಏನಪ್ಪ ಈ ಹೊತ್ತಲ್ಲಿ ಬಂದಿದ್ದೀಯ? ಏನಾಗ್ಬೇಕಿತ್ತು?” ಎಂದು ಕೇಳಲು,

ಆತ ನಮ್ರತೆಯಿಂದ “ಸಧ್ಯಕ್ಕೆ ಒಂದು ಲೋಟ ನೀರು ಕೊಡಿ ತಾಯಿ ಊರೂರು ಸುತ್ತಿ ತುಂಬಾ…”ಆತ ಹೇಳಿ ಮುಗಿಸುವ ಮುನ್ನವೇ “ನೀರು ಗೀರು ಏನೂ ಇಲ್ಲ ಮುಂದೆ ಹೋಗಪ್ಪ” ಎಂದು ದಡ್ಡನೆ ಬಾಗಿಲು ಮುಚ್ಚಿ ಬಿಟ್ಟಳು. ಹೋದನೋ ಅಲ್ಲೇ ನಿಂತಿದ್ದಾನೋ ಎಂಬ ಸಂಶಯದಿ ಕಿಟಕಿ ಗ್ಲಾಸ್ ಲಿ ಇಣುಕಿದಾಗ ಅವ ಏನೋ ಸಣ್ಣಕೆ ಗೊಣಗುತ್ತಾ ಹಿಂತಿರುಗಿ ಸಹ ನೋಡದೆ ಸರ ಸರ ಮೆಟ್ಟಿಲಿಳಿದು ಕಂಪೌಂಡ್ ಆಚೆ ಮರೆಯಾಗಿ ಬಿಟ್ಟ.!

ಒಂದು ಸಂಪ್ರದಾಯಸ್ಥ ಮನೆತನದ ಹೆಣ್ಣಾದ ಗಂಗಾ ಇಷ್ಟು ವರ್ಷವೂ ಮನೆ ಬಾಗಿಲಿಗೆ ಬಂದವರ ಎಂದೂ ಬರಿಗೈಲಿ ಕಳಿಸಿದವಳೇ ಅಲ್ಲ . “ಛೇ ಕೊನೆ ಪಕ್ಷ ಗಾರ್ಡನ್ ಲ್ಲಿರುವ ನಲ್ಲಿ ನೀರನ್ನಾದ್ರೂ ಬಾಟಲಿಗೆ ತುಂಬಿಕೋ” ಎಂದು ತೋರಿಸಬೇಕಿತ್ತು ಎಂದು ಮರುಗತೊಡಗಿದಳು. ಏನನ್ನಿಸಿತೋ ಮತ್ತೆ ಬಾಗಿಲು ತೆಗೆದು ರಸ್ತೆ ಗೇಟ್ ತನಕ ಓಡು ವಷ್ಟರಲ್ಲಿ ಆ ಹುಡುಗ ಮಾಯವಾಗಿದ್ದ!

ಇತ್ತ ಅನ್ನದ ಕುಕ್ಕರ್ ನಾಲ್ಕೈದು ಶೀಟಿ ಹೊಡೆದಾಗಿತ್ತು ಭಾರವಾದ ಹೆಜ್ಜೆಯಿಟ್ಟು ಒಳ ಬಂದು ನಿಧಾನ ಗ್ಯಾಸ್ ಆಫ್ ಮಾಡಿ ಕೈಲಿದ್ದ ನೀರಿನ ಲೋಟ ಎತ್ತಿದವಳೇ ಸಟ್ ಅಂತ ಕೈ ಕೆಳಗಿಳಿಸಿದಳು. ಯಾಕೊ ಒಂದು ತೊಟ್ಟು ನೀರು ಕುಡಿಯಲು ಮನಸ್ಸಾಗಲೇ ಇಲ್ಲ.ಏನೋ ಕುರಿ ಕುರಿ ಒಳಗೊಳಗೆ ಅಪರಾಧೀ ಭಾವ. ಅಷ್ಟರಲ್ಲಿ ಗಂಡ ಗಿರಿ ಸ್ನಾನ ಮಾಡಿ ಪೂಜೆ ಮುಗಿಸಿದವನೇ  ತೀರ್ಥ ತಗೋ ಎಂದಾಗ ಗಂಗಾ ಕೈ ಉದ್ದಕೆ ನೀಡಿದರೂ ಹಾಕಿದ ಮೂರು ಚಮಚೆ ತೀರ್ಥವೂ ಬೆರಳುಗಳ ಸಂಧಿಯಲ್ಲಿ ಇಳಿದು ಹೋಗಿತ್ತು 

ಊಟಕ್ಕೆ ಕೂತರೂ ಯಾಕೊ ಎತ್ತಿದ ತುತ್ತು ಗಂಟಲಲ್ಲಿ ಇಳಿಯಲಿಲ್ಲ. ತಾ ಮಾಡಿದ್ದು ತಪ್ಪೇ ಸರಿಯೇ ಎಂದು ಮನವೆಲ್ಲ ಗೊಂದಲದ ಗೂಡಾಗಿತ್ತು. ಹೆಂಡತಿಯ ಸಣ್ಣ ಮುಖ ಸೂಕ್ಶ್ಮವಾಗಿ ಗಮನಿಸಿದ ಗಿರೀಶ “ಏನಾಯಿತು ನಿಂಗೆ ಇದ್ದಕಿದ್ದಂತೆ??! ಬಹಳ ಬಳಲಿದ್ದೀಯ ಎಳನೀರು ತಂದು ಕೊಡಲೇ?” “ಏನೂ ಬೇಡ ರೀ ಯಾಕೊ ತುಂಬಾ ಸಂಕಟವಾಗ್ತಿದೆ.

ಪಕ್ಕದ ಹಳ್ಳಿಯ ಶಾಂತಕ್ಕನ ಮನೆಗೆ ಹಾಡು ಹಗಲೇ ಕಳ್ಳ ನುಗ್ಗಿ ಕರಿಮಣಿಸರ ಎಳೆದುಕೊಂಡು ನಾಪತ್ತೆಯಾದ ಘಟನೆ ನಡೆದದ್ದು ನಿನ್ನೆಯಷ್ಟೇ ಅಲ್ಲವೇ… “ಇನ್ಮೇಲೆ ಒಬ್ಬಳೇ ಇದ್ದಾಗ ಯಾವಾಗಲೂ ಹೆಬ್ಬಾಗಿಲು ಚಿಲಕ ಹಾಕಿಯೇ ಇಡು, ಯಾರೋ ಕರೆದರೆಂದು ಬಾಗಿಲು ತೆರೆದು ಬಿಟ್ಟೀಯ ಹುಷಾರು’ ಎಂದು ಬೈದದ್ದು ನೀವಲ್ಲವೇ??  ನೋಡಿ ಇಂದು ಅದೇ ಭಯದ ಗುಂಗಲ್ಲಿ  ಈ ಮಟ ಮಟ ಮಧ್ಯಾಹ್ನ ಮನೆಬಾಗಿಲಿಗೆ ಬಂದು ನೀರು ಕೇಳಿದವನಿಗೆ ಇಲ್ಲವೆಂದು ಕಳಿಸಿಬಿಟ್ಟೆ ಪಾಪ ‘ ಎನ್ನುತ್ತಾ ಅಪರಾಧೀ ಭಾವದಿ ಮುಖ ತಗ್ಗಿಸಿ ಕಣ್ಣೀರು ಹರಿಸತೊಡಗಿದಳು ಗಂಗಾ.

 “ಅಂತಹ ದೊಡ್ಡ ತಪ್ಪೇನು ಮಾಡಿಲ್ಲ ನೀ. ಇಂದಿನ ಕಾಲಮಾನವೇ ಹೀಗಿದ..ನಂಬಿಕೆ ಎನ್ನೋ ಪದಕ್ಕೆ ಅರ್ಥವೇ ಇಲ್ಲ.ಕಳ್ಳರ, ವಂಚಕರ ನಡುವೆ ಒಳ್ಳಯವರಿಗೂ ಕಾಲವಿಲ್ಲ” ಎಂದೆಲ್ಲ ಗಂಡ ಎಷ್ಟೇ ಸಮಾಧಾನ ಪಡಿಸಿದರೂ  ಹಸಿದಾಗ ಸಿಗದ ಅನ್ನ, ಬಾಯಾರಿಕೆ ನೀಗದ ನೀರು, ಎಷ್ಟಿದ್ದರೂ ನಿಷ್ಪ್ರಯೋಜಕ 

ಬೆಳಗ್ಗೆ ಮೊಬೈಲ್ ಲಿ ಓದಿದ ವಾಟ್ಸಪ್ಪ್ ಸ್ಟೇಟಸ್ ಕಣ್ಣೆದುರು ಮತ್ತೆ ಮತ್ತೆ ಸುಳಿದು ಗಂಗಾಳನ್ನು ಅಣಕಿಸುತಿತ್ತು!!

         ✍️ ಕುಸುಮಾ. ಜಿ.ಭಟ್

       

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗಂಗಾ”

  1. ಪಿ. ಜಯರಾಮನ್

    ಮಿನಿ ಕಥೆ ಆದರೂ ಇಂದಿನ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಈ ರೀತಿಯ ಘಟನೆಗಳು ಈ ನಡುವೆ ಸಾಕಷ್ಟು ನಡೆಯುವುದನ್ನು ಪೇಪರ್, ಟಿವಿ ಗಳಲ್ಲಿ ನೋಡುತ್ತೇವೆ. ಇಲ್ಲಿ ವಿಪರ್ಯಾಸ ಎಂದರೆ, ನಿಜವಾಗಿ ಬಾಯಾರಿಕೆಯಿಂದ ಬಂದವರನ್ನೂ ಅನುಮಾನದಿಂದ ನೋಡುವಂತಾಗಿದೆ. ಕಥೆ ಚೆನ್ನಾಗಿದೆ ಮೇಡಂ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter