ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಪ್ರಖ್ಯಾತ ಕಥಾಸಂಕಲನ ‘ಅಬಚೂರಿನ ಪೋಸ್ಟಾಫೀಸು’. ೧೯೭೩ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿಯಲ್ಲಿ ಕನ್ನಡದ ಅತ್ಯುತ್ತಮ ಕಥೆಗಳಾದ ‘ಅಬಚೂರಿನ ಪೋಸ್ಟಾಫೀಸು’, ‘ಅವನತಿ’, ‘ಕುಬಿ ಮತ್ತು ಇಯಾಲ’, ‘ತಬರನ ಕತೆ’ ಹಾಗೂ ‘ತುಕ್ಕೋಜಿ’ ಕಥೆಗಳಿವೆ. ತೇಜಸ್ವಿಯವರು ನವ್ಯ ಸಾಹಿತ್ಯವನ್ನು ಸಂಪೂರ್ಣವಾಗಿ ಧಿಕ್ಕರಿಸಿ ಸಮಾಜಮುಖಿಯಾಗಿ ಬರೆಯಲು ನಿರ್ಧರಿಸಿದ್ದು ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದ ಮೂಲಕ. ಈ ಕೃತಿಯ ಆರಂಭದಲ್ಲಿರುವ ‘ಹೊಸ ದಿಗಂತದೆಡೆಗೆ’ ಎಂಬ ಲೇಖನ ನವ್ಯ ಸಾಹಿತ್ಯದ ಇತಿ-ಮಿತಿಗಳನ್ನು, ಅದರ ಅತಿರೇಕಗಳನ್ನು ಮತ್ತು ಕನ್ನಡ ಕಥನ ಸಾಹಿತ್ಯ ಹೊಸ ದಾರಿಯನ್ನು ಹಿಡಿಯಬೇಕಾದ ಅವಶ್ಯಕತೆಯನ್ನು ತುಂಬ ವಸ್ತುನಿಷ್ಠವಾಗಿ ಪ್ರತಿಪಾದಿಸಿದೆ. ಈ ಸಂಕಲನದ ಮೂಲಕ ತೇಜಸ್ವಿಯರ ಕಥನ ಸಾಹಿತ್ಯ ಹೊಸ ಹಾದಿ ಹಿಡಿಯಿತು. ಮುಂದೆ ತೇಜಸ್ವಿಯರು ತಾವು ಘೋಷಣೆ ಮಾಡಿದಂತೆ ಸಮಾಜಮುಖಿ ಸಾಹಿತ್ಯ ರಚನೆ ಮಾಡಿ ಅಪಾರ ಖ್ಯಾತಿ ಪಡೆದರು. ಇರಲಿ, ಪ್ರಸ್ತುತ ಲೇಖನದಲ್ಲಿ ‘ಅಬಚೂರಿನ ಪೋಸ್ಟಾಫೀಸು’ ಕಥೆಯ ಕುರಿತು ಮಾತ್ರ ಚರ್ಚಿಸಿದ್ದೇನೆ.
ಸುಮಾರು ಐವತ್ತು ವರ್ಷಗಳ ಹಿಂದೆ ಪ್ರಕಟವಾದ ‘ಅಬಚೂರಿನ ಪೋಸ್ಟಾಫೀಸು’ ಕಥೆಯನ್ನು ಕೇವಲ ಬೋಬಣ್ಣನ ವಿಷಮ ದಾಂಪತ್ಯದ ಕಥೆಯೆಂದು ನೋಡಿದರೆ ಕಥೆಯನ್ನು ತುಂಬ ಸರಳೀಕರಿಸಿದಂತಾಗುತ್ತದೆ. ಅಬಚೂರೆಂಬ ಮಲೆನಾಡಿನ ಕುಗ್ರಾಮಕ್ಕೆ ಪೋಸ್ಟಾಫೀಸು ಬಂದ ನಂತರ ಬೋಬಣ್ಣನ ಕುಟುಂಬ ಮತ್ತು ಅಬಚೂರಿನ ಚಿಕ್ಕ ಸಮಾಜದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಾಗುತ್ತವೆ.
ಬೋಬಣ್ಣ ಅಬಚೂರಿನ ಪೋಸ್ಟಾಫೀಸಿನ ಹಂಗಾಮಿ ಪೋಸ್ಟ್ ಮಾಸ್ಟರ್. ಅಬಚೂರಿನ ಮಾಚಮ್ಮನ ಮಗಳು ಕಾವೇರಿಯನ್ನು ಮದುವೆಯಾಗಿ ಮನೆಯಳಿಯನಾಗಿರುವ ಬೋಬಣ್ಣ ಸದ್ಯ ತನ್ನ ಮನೆಯ ಒಂದು ಭಾಗವನ್ನೇ ಪೋಸ್ಟಾಫೀಸಾಗಿ ಮಾಡಿ, ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಪೋಸ್ಟ್ ಮಾಸ್ಟರ್ ಕೆಲಸ ಅವನಿಗೆ ಸುತ್ತಣ ಸಮಾಜದಲ್ಲಿ ತಕ್ಕ ಮಟ್ಟಿಗೆ ವರ್ಚಸ್ಸು ತಂದುಕೊಟ್ಟಿದೆ. ಮಂಗಳೂರಿನಲ್ಲಿ ಓದುತ್ತಿದ್ದ ಅಲ್ಲೀಜಾನ್ ಸಾಬರ ಮಗ ಅಜೀಜನಿಗೆ ಬಂದ ಪತ್ರದಲ್ಲಿರುವ ಅರೆನಗ್ನ ಚಿತ್ರವೊಂದು ಬೋಬಣ್ಣನ ಸುಪ್ತ ಲೈಂಗಿಕ ಕಾಮನೆಗಳನ್ನು ಬಡಿದೆಬ್ಬಿಸುತ್ತದೆ.
“ಬೋಬಣ್ಣ ನಾಲ್ಕಾರು ದಿನ ಕಳೆದ ನಂತರ ಇನ್ನು ಇದನ್ನು ಕೊಟ್ಟರೆ ಅದಕ್ಕೂ ಗುಮಾನಿ ಬರುತ್ತದೆಂದು ಬಗೆದು ಅದನ್ನು ಬಿಚ್ಚಿ ಓದಲು ನಿರ್ಧರಿಸಿದನು. ಆ ದಿನ ತೋಟಕ್ಕೆ ಹೋದವನು ಏನನ್ನೊ ನೋಡುವವನಂತೆ ಆಳುಗಳು ಕಾಣದ ಒಂದು ಮರೆಗೆ ಹೋಗಿ ಅದನ್ನು ಒಡೆದು ನೋಡಿದನು. ಆ ಕವರಿನೊಳಗೆ ಒಂದು ಕಾರ್ಡು ಮಾತ್ರವಿತ್ತು ಹಾಗೂ ಉರ್ದು ಲಿಪಿಯಲ್ಲಿ ಅದರಲ್ಲಿ ಏನೇನೋ ಬರೆದಿತ್ತು. ಬೋಬಣ್ಣನಿಗೆ ಹತಾಶೆಯಾಯ್ತು. ಅದರ ಬಗ್ಗೆ ಏನೇನೋ ಈವರೆಗೆ ಕಲ್ಪನೆ ಮಾಡಿಕೊಂಡುದಕ್ಕಾಗಿ ತನ್ನ ಮೇಲೆ ತನಗೇ ಮುನಿಸು ಬಂದಿತು. ಅಷ್ಟರಲ್ಲಿ ಆ ಕಾಗದ ಹಿಡಿದುಕೊಂಡಿದ್ದವನು ಅದರ ಇನ್ನೊಂದು ಪಾರ್ಶ್ವಕ್ಕೆ ತಿರುಗಿಸಿದನು. ಬೋಬಣ್ಣನಿಗೆ ಆ ಕಡೆ ಸೊಂಟದವರೆಗೆ ನಗ್ನಳಾಗಿದ್ದ ಹೆಂಗಸಿನ ಚಿತ್ರವೊಂದು ಕಂಡಿತು. ಅವಳ ಕೆಂಪು ಶರೀರ, ದುಂಡು ಕುಚಗಳು, ದೊರೆಸಾನಿಯಂಥ ಮುಖ ಎಲ್ಲಾ ನೋಡಿ ಬೋಬಣ್ಣನಿಗೆ ಅಚ್ಚರಿಯಾಗಿ ಮೂಕನಾಗಿ ಹೋದನು. ಕೊಂಚ ಹೊತ್ತು ಅದರಲ್ಲೇ ತಲ್ಲೀನನಾಗಿದ್ದವನು ತಕ್ಕನೆ ಎಚ್ಚೆತ್ತು ಅದನ್ನು ಜೇಬಿನೊಳಗಿಟ್ಟು ಕೊಂಡು ಕೆಲಸಕ್ಕೆ ಹಿಂದಿರುಗಿದನು…”
(ಅಬಚೂರಿನ ಪೋಸ್ಟಾಫೀಸು ಪುಟ – ೩)
ಬೋಬಣ್ಣನ ಮನದಲ್ಲಿರುವ ಲೈಂಗಿಕ ಆಸೆಗಳನ್ನು ಕೆರಳುವಂತೆ ಮಾಡುವ ಅರೆನಗ್ನ ಚಿತ್ರ ಅವನ ನೆಮ್ಮದಿಗೆ ಭಂಗ ತರುತ್ತದೆ. ಸಭ್ಯ ಗೃಹಸ್ಥನಾದ ಬೋಬಣ್ಣ ತನ್ನ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳಲು ಅಡ್ಡ ಹಾದಿ ತುಳಿಯುವುದಿಲ್ಲ. ಆದರೆ ಹೆಂಡತಿ ಕಾವೇರಿಯನ್ನು ನೋಡಿದಾಗ ಮಾತ್ರ ಅವನಿಗೆ ತನ್ನ ತೀವ್ರ ಕಾಮಾಸಕ್ತಿಯನ್ನು ತಡೆದುಕೊಳ್ಳಲಾಗುವುದಿಲ್ಲ. ಹೆಂಡತಿಯಾದ ಕಾವೇರಿಯಲ್ಲಿ ಅರೆನಗ್ನ ಚಿತ್ರದ ಸುಂದರಿಯ ಹೋಲಿಕೆ ಕಂಡು, ತನ್ನ ಲೈಂಗಿಕ ಆಸೆಯನ್ನು ಹೆಂಡತಿಯ ಜೊತೆ ತೀರಿಸಿಕೊಳ್ಳಲು ಬಯಸುವ ಬೋಬಣ್ಣನ ಚರ್ಯೆ ಕಾವೇರಿಗೆ ತುಂಬ ನಾಚಿಕೆ ಮತ್ತು ಕೋಪ ತರಿಸುತ್ತದೆ. ಅವಳಿಗೆ ಬದಲಾದ ಬೋಬಣ್ಣನ ಚರ್ಯೆ ಕಂಡು ಅವನಲ್ಲಿ ಗತಕಾಲದ ಪೋಕರಿ ಚಾಳಿಗಳು ಮರುಕಳಿಸುತ್ತಿವೆ ಎಂದು ಅನಿಸತೊಡಗುತ್ತದೆ.
“ಬೋಬಣ್ಣ ಕೆಟ್ಟವನೇನಲ್ಲ. ಅವನು ಆ ಚಿತ್ರ ನೋಡಿ ಉದ್ರೇಕಿತನಾಗಿ ಸೂಳೆಯ ಮನೆಗೆ ಹೋಗಲೂ ಇಲ್ಲ ಅಥವಾ ಯಾವುದೇ ಹೆಂಗಸಿನೊಡನೆ ಅನ್ಯಾಸಕ್ತನಾಗಲೂ ಇಲ್ಲ. ಆದರೆ ತನ್ನ ಹೆಂಡತಿ ಕಾವೇರಿಯನ್ನು ನೋಡಿದಾಗಲೆಲ್ಲ ಅವನಿಗೆ ನಿಜವಾಗಿಯೂ ಕಾವೇರುತ್ತಿದ್ದಿತು. ಸ್ತ್ರೀಯ ನಗ್ನ ಸ್ವರೂಪದ ಅನಂತ ಸಾಧ್ಯತೆಗಳನ್ನು ಆಕೆಯ ವದನದ ಅಡಿ ರಚಿಸುತ್ತಿದ್ದನು…”
(ಅಬಚೂರಿನ ಪೋಸ್ಟಾಫೀಸು ಪುಟ – ೪)
ಇದರ ಜೊತೆಗೆ ಪೋಸ್ಟಾಫೀಸಾದ ನಂತರ ಬೋಬಣ್ಣನಲ್ಲಾದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಮಾಚಮ್ಮನಿಗೆ ಅವನು ತನ್ನ ಅಂಕೆ ಮೀರಿ ಹೋಗುತ್ತಿದ್ದಾನೆಂಬ ಭಾವನೆ ಬಲವಾಗತೊಡಗುತ್ತದೆ. ಒಂದು ಹಂತದಲ್ಲಿ ಕಾವೇರಿಗೆ ಮದುವೆ ಮಾಡಲು ಮನಸ್ಸಿಲ್ಲದ ಮಾಚಮ್ಮನಿಗೆ ಬೋಬಣ್ಣ ಮನೆಯಳಿಯನಾಗಲು ಒಪ್ಪಿದ್ದರಿಂದ ಮಾತ್ರ ಅವನಿಗೆ ಕಾವೇರಿಯನ್ನು ಮದುವೆ ಮಾಡಿ ಕೊಟ್ಟಿರುತ್ತಾಳೆ. ತುಂಬ ಸ್ವಾರ್ಥಿಯಾದ ಮಾಚಮ್ಮನಿಗೆ ಬೋಬಣ್ಣ-ಕಾವೇರಿಯರು ಸುಖವಾಗಿರುವುದು ಮುಖ್ಯವಲ್ಲ. ಅವಳಿಗೆ ತಾನು ಚೆನ್ನಾಗಿರಬೇಕು ಮತ್ತು ಕಾವೇರಿ ತನ್ನ ಅಂಕೆ ಮೀರಿ ಹೋಗಕೂಡದು, ಅಂತಹ ಒಂದು ಪ್ರಸಂಗ ಬಂದರೂ ಕೂಡ ಕಾವೇರಿ ಬೋಬಣ್ಣನನ್ನು ಬಿಡಬೇಕೇ ಹೊರತು ತನ್ನನ್ನು ಬಿಟ್ಟು ಹೋಗಕೂಡದು ಎಂಬುದು ಅವಳ ಮನದ ಇಂಗಿತ. ಇದನ್ನವಳು ಕಾವೇರಿಗೆ ಸ್ಪಷ್ಟವಾಗಿ ತಿಳಿಸುತ್ತಾಳೆ. ತಾಯಿಯ ಮಾತನ್ನು ಮೀರದ ಮತ್ತು ಗಂಡನ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಕಾವೇರಿ ಬರುಬರುತ್ತಾ ಬೋಬಣ್ಣನಿಂದ ದೂರವಾಗತೊಡಗುತ್ತಾಳೆ.
ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಂಡತಿಯ ಜೊತೆ ಹೊಂದಾಣಿಕೆ ಸಾಧ್ಯವಾಗದೆ ಒದ್ದಾಡುವ ಬೋಬಣ್ಣ ತುಂಬ ಸಂಯಮದಿಂದ ಇದನ್ನೆಲ್ಲ ನಿರ್ವಹಿಸಲು ಯತ್ನಿಸಿದರೂ ಸಹ ಅದರಲ್ಲಿ ಸಫಲವಾಗುವುದಿಲ್ಲ. ಅಜೀಜನಿಗೆ ಬಂದ ಅರೆನಗ್ನ ಚಿತ್ರ ಒಂದು ನಿಮಿತ್ತದಂತೆ ಅವನ ಮನದಲ್ಲಿರುವ ಲೈಂಗಿಕ ಆಸೆಗಳು ಸ್ಫೋಟಿಸುವಂತೆ ಮಾಡುತ್ತದೆ. ಆದರೆ ಅವನ ಭಾವನೆಗಳನ್ನು ಅರ್ಥಮಾಡಿಕೊಳ್ಳದ ಹೆಂಡತಿಯ ದೆಸೆಯಿಂದಾಗಿ ಅವನು ನರಳಬೇಕಾಗುತ್ತದೆ. ಇದರೊಂದಿಗೆ ಪೋಸ್ಟಾಫೀಸಿನ ಕೆಲಸದಿಂದಾಗಿ ಅವನಿಗೆ ಪ್ರಾಪ್ತವಾದ ಒಂದು ಗೌರವದ ಸ್ಥಾನ ಮತ್ತು ಕರ್ತವ್ಯದ ಭಾಗವಾಗಿ ಓದುವ ಮತ್ತು ಬರೆಯುವ ಮತ್ತೊಬ್ಬರ ಕಾಗದಗಳು ಅವನಿಗೆ ಮನರಂಜನೆಯ ಜೊತೆ ಜೊತೆಗೆ ಪೇಚಿಗೂ ಸಹ ಸಿಲುಕುವಂತೆ ಮಾಡುತ್ತವೆ. ಸೇಂದಿ ಕೆಲಸಗಾರ ಬೇಲಾಯದನ ಮಗಳು ಪದ್ಮಿಯ ಚಾರಿತ್ರ್ಯದ ಕುರಿತ ಬರೆದ ಅಂಚೆ ಕಾರ್ಡೊಂದು ಬೋಬಣ್ಣನ ಜೀವನವನ್ನೇ ಕಲಕಿಬಿಡುವಂತೆ ಮಾಡುತ್ತದೆ. ಹಾದಿ ತಪ್ಪಿದ ಪದ್ಮಿಯ ನಡತೆಯ ಕುರಿತ ಕಾಗದ ಅಬಚೂರಿನ ಪೋಸ್ಟಾಫೀಸಿನಲ್ಲಿ ನೆರೆಯುವ ಮಂದಿಗೆ ಮನರಂಜನೆಯ ವಸ್ತುವಾಗುತ್ತದೆ. ಆ ಕಾಗದವನ್ನು ಮತ್ತೆ ಮತ್ತೆ ಓದಿ, ಚರ್ಚಿಸುವ ಮೂಲಕ ಪುಳಕಿತರಾಗುವ ಮಂದಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೋಬಣ್ಣನ ಕೌಟುಂಬಿಕ ಶಾಂತಿ ಕಲಕುವಂತೆ ಮಾಡುತ್ತಾರೆ.
ಅಜೀಜನಿಗೆ ಬಂದ ಅರೆನಗ್ನ ಚಿತ್ರದಲ್ಲಿರುವ ದೊರೆಸಾನಿಯಂತಹ ಹೆಣ್ಣಿನ ಚಿತ್ರ ಬೋಬಣ್ಣನಿಗೆ ಯಾವುದೋ ಹಿಂಗಲಾರದ ಕಾಮನೆಗಳ ಸಂಕೇತದಂತೆ ಕಾಣತೊಡಗುತ್ತದೆ. ಇತ್ತ ಹೆಂಡತಿ ಕಾವೇರಿಯೊಂದಗಿನ ವಿರಸ ಹೆಚ್ಚಾಗುತ್ತ ಹೋದಂತೆ ಮನೆಯಲ್ಲಿ ನೆಮ್ಮದಿ ನಾಶವಾಗಿ, ವಿಷಾದ ಹೆಚ್ಚಾಗುತ್ತ ಹೋಗುತ್ತದೆ. ಗಂಡನನ್ನು ಅರ್ಥ ಮಾಡಿಕೊಳ್ಳದ ಕಾವೇರಿ, ತಾಯಿಯ ಪ್ರೀತ್ಯರ್ಥವಾಗಿ ಬೋಬಣ್ಣನ ಮೇಲೆ ಬಲವಂತವಾಗಿ ದ್ವೇಷ ಬೆಳೆಸಿಕೊಳ್ಳತೊಡಗುತ್ತಾಳೆ. ಇದು ಬೋಬಣ್ಣನನ್ನು ಇನ್ನಷ್ಟು ನೋಯುವಂತೆ ಮಾಡುತ್ತದೆ.
“ಕಾವೇರಿ, ಬೋಬಣ್ಣ ಅಮ್ಮನಿಗೆ ಬೇಜಾರು ಮಾಡುತ್ತಿದ್ದಾನಲ್ಲಾ ಎಂದು ಬೇಜಾರು ಮಾಡಿಕೊಂಡಿದ್ದಳು. ಬೋಬಣ್ಣನ ಮೇಲೆ ಒಂದು ಬಲಾತ್ಕಾರದ ಸೇಡನ್ನು ಬೆಳೆಸಿಕೊಳ್ಳತೊಡಗಿದಳು. ಬೋಬಣ್ಣನನ್ನು ಪ್ರೀತಿಯಿಂದ ಆಲಂಗಿಸಿದರೆ ಅವಳಿಗೆ ಅಮ್ಮನಿಗೆ ದ್ರೋಹ ಬಗೆದಂತಾಗುತ್ತಿತ್ತು. ದಿನಾ ರಾತ್ರಿ ಏನಾದರೊಂದು ಜಗಳ ತೆಗೆದು ಮುಖ ತಿರುಗಿಸಿಕೊಂಡು ಮಲಗತೊಡಗಿದಳು. ಬೋಬಣ್ಣ ಎಂಥ ಸಂದರ್ಭವಾದರೇನು ತನ್ನ ಕಾಮ ತೃಷೆ ತೀರಿದರಾಯ್ತೆಂಬ ಮೃಗವಾಗಿರಲಿಲ್ಲ. ಆದ್ದರಿಂದ ಕಾವೇರಿಯೊಡನೆ ಪ್ರೀತಿಯಿಂದರಲು, ಪ್ರೇಮದ ವಾತಾವರಣ ಸೃಜಿಸಲು ಯತ್ನಿಸಿದನು. ಒಂದು ದಿನ ಕಾವೇರಿ ಬೋಬಣ್ಣನನ್ನು ನಿದ್ದೆಗಣ್ಣಿನಲ್ಲಿ ಆಲಂಗಿಸಿಕೊಂಡಿದ್ದವಳು ಹಾಗೇ ಎಚ್ಚರಾದಂತಾಗಿ ಬೋಬಣ್ಣನನ್ನು ದೂಡಿ ಆ ಕಡೆಗೆ ತಿರುಗಿ ಮಲಗಿದಳು…”
(ಅಬಚೂರಿನ ಪೋಸ್ಟಾಫೀಸು ಪುಟ – ೧೧)
ಒಟ್ಟಿನಲ್ಲಿ ಅಜೀಜನಿಗೆ ಬಂದ ಅರೆನಗ್ನ ಚಿತ್ರ ಮತ್ತು ಬೇಲಾಯದನ ಮಗಳು ಪದ್ಮಿಯ ಚಾರಿತ್ರ್ಯದ ಕುರಿತ ಪತ್ರದ ಪ್ರಚಾರದ ಬಳಿಕ ಬೋಬಣ್ಣನ ಮನಃಶಾಂತಿ ಕದಡಿ ಹೋಗುತ್ತದೆ. ಹೆಂಡತಿ ಕಾವೇರಿ ಮತ್ತು ಅತ್ತೆ ಮಾಚಮ್ಮನೊಂದಿಗಿನ ಮನಸ್ತಾಪ ಕೌಟುಂಬಿಕ ಕಲಹ ಹೆಚ್ಚಾಗುವಂತೆ ಮಾಡುತ್ತದೆ. ಸ್ವಾರ್ಥಿಯಾದ ಮಾಚಮ್ಮ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿ ಬೋಬಣ್ಣ – ಕಾವೇರಿಯರು ಅಗಲುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾಳೆ. ಹೆಂಡತಿ, ಮಕ್ಕಳ ಬಗ್ಗೆ ಪ್ರೀತಿಯುಳ್ಳ, ಅತ್ತೆಯ ಬಗ್ಗೆ ಗೌರವವುಳ್ಳ ಬೋಬಣ್ಣ ಇದನ್ನೆಲ್ಲ ಸರಿಪಡಿಸಲು ಎಷ್ಟೇ ಪ್ರಯತ್ನಿಸಿದರೂ ಕೂಡ ಪರಿಸ್ಥಿತಿ ಬಿಗಡಾಯಿಸುತ್ತ ಹೋಗುತ್ತದೆ. ಗಂಡ -ಹೆಂಡತಿಯ ಖಾಸಗಿ ವಿಷಯದಲ್ಲಿ ಸಹ ತನ್ನ ಮಾತೇ ನಡೆಯಬೇಕೆಂಬ ಅತ್ಯಾಗ್ರಹ ಮಾಚಮ್ಮನದು.
ಪ್ರೇಮ – ಕಾಮ ದಾಂಪತ್ಯ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಪರಸ್ಪರ ಅರ್ಥ ಮಾಡಿಕೊಂಡಲ್ಲಿ ಮಾತ್ರ ದಾಂಪತ್ಯ ಚೆನ್ನಾಗಿ ನಡೆಯಲು ಸಾಧ್ಯ. ಆದರೆ ಬೋಬಣ್ಣ ಮತ್ತು ಕಾವೇರಿಯರ ನಡುವೆ ಇಂತಹ ಹೊಂದಾಣಿಕೆ ಸಾಧ್ಯವಾಗುವುದೇ ಇಲ್ಲ. ಮಾಚಮ್ಮ ಬೋಬಣ್ಣನ ವಿರುದ್ಧ ಕಾವೇರಿಯನ್ನು ಎತ್ತಿಕಟ್ಟುತ್ತಾಳೆಯೇ ಹೊರತು ಸರಿಪಡಿಸಲು ಪ್ರಯತ್ನಿಸುವುದಿಲ್ಲ. ಕಾವೇರಿಯ ಲೈಂಗಿಕ ಅಜ್ಞಾನ ಮತ್ತು ಮಾಚಮ್ಮನ ಕೆಟ್ಟ ಉಪದೇಶದ ಕಾರಣದಿಂದ ಬದಲಾದ ಅವಳ ಚರ್ಯೆಯಿಂದ ಬೋಬಣ್ಣ ಕಂಗಾಲಾಗುವಂತಾಗುತ್ತದೆ. ಈ ಕೌಟುಂಬಿಕ ಕಲಹದಲ್ಲಿ ನಿಜಕ್ಕೂ ಸಂತ್ರಸ್ತನಾದವನೆಂದರೆ ಬೋಬಣ್ಣ. ಕೌಟುಂಬಿಕ ಹಿಂಸೆ ಅದು ದೈಹಿಕ ಅಥವಾ ಮಾನಸಿಕ ಯಾವುದೇ ಬಗೆಯದಾಗಿರಬಹುದು ಮನೆ ಮತ್ತು ಮನಸ್ಸು ಎರಡನ್ನೂ ಒಡೆಯುವಂತೆ ಮಾಡುತ್ತದೆ. ಬೋಬಣ್ಣನಿಗೆ ಮಾನಸಿಕ ಹಿಂಸೆ ಕೊಡುವ ಮಾಚಮ್ಮ ಮತ್ತು ಕಾವೇರಿಯರು ಅವನನ್ನು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡುತ್ತಾರೆ. ಕಥೆಯ ಕೊನೆಯಲ್ಲಿ ಬೇಲಾಯದನ ಮಗಳು ಪದ್ಮಿಯ ಕಡೆಯವರು ಬಂದು ಜಗಳ ಮಾಡುವಾಗ ಕಾವೇರಿಯ ಚಾರಿತ್ರ್ಯದ ಬಗ್ಗೆ ಕೆಟ್ಟದಾಗಿ ಮಾತಾಡಿದರೂ ಕೂಡ ಬೋಬಣ್ಣನ ಮೇಲಿನ ಸೇಡಿನಿಂದ ಅವರು ಅದನ್ನು ಕೂಡ ಸಹಿಸಲು ತಯಾರಾಗುವುದು ಬೋಬಣ್ಣ ಖತಿಗೊಳ್ಳುವಂತೆ ಮಾಡುತ್ತದೆ. ಬೋಬಣ್ಣ ಕಥೆಯ ಕೊನೆಯಲ್ಲಿ ತನ್ನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಆವೇಶಕ್ಕೊಳಗಾಗಿ ಹೊಡೆದಾಡಿ ಪರಾರಿಯಾಗುವುದು ತೀರ ಸಹಜವಾಗಿದೆ.
ಸಾಮಾನ್ಯವಾಗಿ ಕೌಟುಂಬಿಕ ಹಿಂಸೆಗೆ ಹೆಚ್ಚಾಗಿ ಬಲಿಯಾಗುವವರು ಹೆಂಗಸರು ಆದರೆ ಈ ಕಥೆಯಲ್ಲಿ ಗಂಡಸಾದ ಬೋಬಣ್ಣ ಹೆಂಡತಿ ಮತ್ತು ಅತ್ತೆಯಿಂದ ಇನ್ನಿಲ್ಲದ ಮಾನಸಿಕ ಯಾತನೆ ಅನುಭವಿಸುತ್ತಾನೆ. ಕಾವೇರಿ ತೀರ ಮೂರ್ಖಳಂತೆ ಕಂಡರೆ, ಮಾಚಮ್ಮ ತಣ್ಣನೆಯ ಕ್ರೌರ್ಯದ ಪ್ರತೀಕದಂತಿದ್ದಾಳೆ. ವಿಶೇಷವೆಂದರೆ ಕೌಟುಂಬಿಕ ಆವರಣದಲ್ಲಿ ನಡೆಯುವ ಗಂಡಿನ ಶೋಷಣೆಗೆ ಬೆಲೆಯೇ ಇಲ್ಲ. ಮಾಚಮ್ಮಳಂತಹ ಸರ್ವಾಧಿಕಾರಿ ಧೋರಣೆಯ ಅತ್ತೆಯಂದಿರು ಮತ್ತು ಕಾವೇರಿಯಂತಹ ಮೂರ್ಖ ಮತ್ತು ಹಠಮಾರಿ ಹೆಂಡತಿಯರು ಆಗಲೂ ಇದ್ದರು ಮತ್ತು ಈಗಲೂ ಇದ್ದಾರೆ. ಕಾಲ ಬದಲಾದಂತೆ ಶೋಷಣೆಯ ವಿಧಾನಗಳು ಬದಲಾಗಿಯವಷ್ಟೆ. ಬೋಬಣ್ಣನಂತಹ ನತದೃಷ್ಟ ಗಂಡಸರು ಅನುಭವಿಸುವ ಮಾನಸಿಕ ಯಾತನೆಯನ್ನು ಕೇಳುವವರಿಲ್ಲ. “ಮರ್ದ್ ಕೋ ದರ್ದ್ ನಹೀ ಹೋತಾ” ಎಂದು ಯಾರೋ ಹೇಳಿದ್ದಾರೆ. ಆದರೆ ಬೋಬಣ್ಣನಂತಹ ಶೋಷಿತ ಗಂಡಸರನ್ನು ನೋಡಿದರೆ ಇದು ಸಂಪೂರ್ಣ ಸುಳ್ಳು ಎಂಬುದು ತಿಳಿಯುತ್ತದೆ. ದುರ್ದೈವವಶಾತ್ ಯಾವುದೇ ಕಾನೂನಿನ ರಕ್ಷಣೆ ಸಹ ಶೋಷಿತ ಗಂಡಸರಿಗೆ ಸಿಗುವುದಿಲ್ಲ. ಭಾರತೀಯ ಕಾನೂನು ಸಹ ಹೆಂಗರುಳಿನದು, ಅದಕ್ಕೆ ಗಂಡಸರ ಕಷ್ಟ ಅರ್ಥವಾಗುವುದಿಲ್ಲ! ಬೋಬಣ್ಣ ಕೌಟುಂಬಿಕ ಹಿಂಸೆಯಿಂದ ತೀವ್ರವಾಗಿ ನೊಂದ ಶೋಷಿತ ಗಂಡಂದಿರ ಪ್ರತಿನಿಧಿಯಂತೆ ಕಾಣುತ್ತಾನೆ!
ತೇಜಸ್ವಿಯವರು ‘ಅಬಚೂರಿನ ಪೋಸ್ಟಾಫೀಸು’ ಕಥೆಯಲ್ಲಿ ಬೋಬಣ್ಣನ ವಿಷಮ ದಾಂಪತ್ಯದ ಕಥೆಯನ್ನು ತುಂಬ ಸಂಯಮದಿಂದ, ಸಾರವತ್ತಾಗಿ ಚಿತ್ರಿಸಿದ್ದಾರೆ. ಈ ಕಥೆ ಕೇವಲ ಬೋಬಣ್ಣನ ವೈಯಕ್ತಿಕ ದುರಂತಕ್ಕೆ ಸೀಮಿತವಾಗುವುದಿಲ್ಲ, ಅದರ ಜೊತೆ ಜೊತೆಗೆ ಸುಮಾರು ಅರ್ಧ ಶತಮಾನದ ಹಿಂದೆ ಕುಗ್ರಾಮಗಳಿಗೆ ಆಧುನಿಕತೆಯ ಪ್ರವೇಶವಾದಾಗ ಉಂಟಾಗುವ ಬದಲಾವಣೆಗಳು ಯಾವ ರೀತಿ ಅಂದಿನ ಸಮಾಜದ ಮೇಲೆ ಪರಿಣಾಮ ಬೀರಿತು ಎಂಬುದು ಸಹ ಇಲ್ಲಿ ತುಂಬ ಅರ್ಥಪೂರ್ಣವಾಗಿ ಬಂದಿದೆ.
ತೇಜಸ್ವಿಯವರು ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳು ಮಾಡಬಹುದಾದ ಅವಾಂತರವನ್ನೇ ಆ ಕಾಲಘಟ್ಟದಲ್ಲಿ ಅಬಚೂರಿನ ಪೋಸ್ಟಾಫೀಸು ಮಾಡಿತು ಎನ್ನುವುದನ್ನು ಈ ಕಥೆಯಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಬೇಲಾಯದನ ಮಗಳು ಪದ್ಮಿಯ ಚಾರಿತ್ರ್ಯದ ಕುರಿತ ಪತ್ರದ ಹಗರಣ ಮತ್ತು ಬೋಬಣ್ಣನ ವೈಯಕ್ತಿಕ ದುರಂತಗಳ ಹಿಂದೆ ಬಹು ಸೂಕ್ಷ್ಮವಾದ ಸಾಮಾಜಿಕ ಕ್ರೌರ್ಯದ ಎಳೆಯಿದೆ ಮತ್ತು ಅದಕ್ಕೆ ನಿಮಿತ್ತವಾದುದು ಆಧುನಿಕತೆಯ ಸಂಕೇತವಾದ ಪೋಸ್ಟಾಫೀಸು ಎಂಬುದನ್ನು ತೇಜಸ್ವಿಯವರು ತುಂಬ ಮಾರ್ಮಿಕವಾಗಿ ಮತ್ತು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಇನ್ನು ತೇಜಸ್ವಿಯವರ ಅದ್ಭುತ ಕಥನ ಕಲೆ, ಅನನ್ಯ ಭಾಷಾ ಶೈಲಿ ಮತ್ತು ತಿಳಿ ಹಾಸ್ಯ ಮಿಶ್ರಿತ ನಿರೂಪಣೆ ಕಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ‘ಅಬಚೂರಿನ ಪೋಸ್ಟಾಫೀಸು’ ಕಥೆಯ ವಸ್ತು ಅಂದಿನಂತೆಯೇ ಇಂದಿಗೂ ಸಹ ಪ್ರಸ್ತುತವಾಗುವಂತಿದೆ. ಆದ್ದರಿಂದಲೇ ಇದು ಕನ್ನಡದ ಅತ್ಯಂತ ಯಶಸ್ವಿ ಕಥೆಗಳಲ್ಲೊಂದಾಗಿದೆ.
ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಿಕಾಸ ಹೊಸಮನಿ
ಯುವ ವಿಮರ್ಶಕ, ಲಲಿತ ಪ್ರಬಂಧಕಾರ ಮತ್ತು ಸಂಘಟಕರಾದ ವಿಕಾಸ ಹೊಸಮನಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಗಂಗಾ, ಧಾರವಾಡ ಸಂಸ್ಥೆಯ ಸ್ಥಾಪಕರು ಮತ್ತು ಮುಖ್ಯಸ್ಥರು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ಸಂಸ್ಥೆಯ ಸಂಚಾಲಕರು. ಭಾರತೀಯ ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮತ್ತು ಕ್ರಿಕೆಟ್ ಕುರಿತು ಅಪಾರ ತಿಳುವಳಿಕೆಯುಳ್ಳ ವಿಕಾಸ ಹೊಸಮನಿಯವರು ತಮ್ಮ ನೇರ, ನಿಷ್ಠುರ ಮತ್ತು ನಿರ್ಭೀತ ಬರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆ.
ಅವರ 'ಗಾಳಿ ಹೆಜ್ಜೆ ಹಿಡಿದ ಸುಗಂಧ' (ವಿಮರ್ಶೆ), 'ಮಿಂಚಿನ ಬಳ್ಳಿ' (ಲಲಿತ ಪ್ರಬಂಧ) ಮತ್ತು 'ಹೃದಯದ ಹಾದಿ' (ಸಂಪಾದಿತ) ಕೃತಿಗಳು ಪ್ರಕಟವಾಗಿವೆ. 'ವೀತರಾಗ' (ವಿಮರ್ಶೆ) ಹಾಗೂ 'ಮಂದಹಾಸ' (ಸಂಪಾದಿತ) ಕೃತಿಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.
All Posts
1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು”
ನೆನಪು ತಾಜಾ ಆಗುವ ಆತ್ಮೀಯ ಅಧ್ಯಯನ, ನೀರಪೇಕ್ಷಿತ ವಿಶ್ಲೇಷಣೆ; ಉತ್ತಮ ಸಂಯೋಜನೆ, ಆಕರ್ಷಕ ನಿರೂಪಣೆ!