ಮೂಲಾ ನಕ್ಷತ್ರದ ಒಳ ಸುಳಿಗಳು

"ನನ್ಮಗ ನನ್ ಕಣ್ಮುಂದೇನೇ ಹೊಂಟೋದ್ರೆ ಹೆತ್ತೊಡಲಿಗೆ ಹೆಂಗಾಗ್ತದೆ ಅಂತ ನೀವೇ ಹೇಳ್ರಿ...? ನನ್ಮಗ ಒಬ್ನೇ ಅಲ್ಲ, ನನ್ನ ಹಣೆಯ ಸಿಂಗಾರ ಮತ್ತು ನನ್ನ ಹೀರೀ ಮಗನ ಮಗ ಅಂದ್ರೆ ಮೊಮ್ಮಗನೂ ನನ್ಕಣ್ಮುಂದೇನೇ ನನ್ನೆದೆಗೆ ಕೊಳ್ಳಿ ಇಟ್ಟು ಕಣ್ಮರೆಯಾದ್ರು. ನಂದು ಕಲ್ಲು ಜೀವ. ಹತ್ತು ವರ್ಷದ ಹಿಂದೆ ನನ್ನ ತಾಳಿಯನ್ನು ಕಿತ್ಕೊಂಡ ಆ ದೇವ್ರು ಎರಡು ವರ್ಷದ ಹಿಂದೆ ಬರೀ ಇಪ್ಪತ್ತೆರಡು ವರ್ಷದ ನನ್ನ ಮೊಮ್ಮಗನ ಜೀವ ತೊಗೊಂಡು ಹೋದ. ಈಗ ಎರಡನೇ ಮಗ ಶಂಕರ ದೂರಾದ. ಮುದ್ದಿನ ಮಗ ಶಂಕರ ನಮ್ಮ ಮನೆತನಕ್ಕೇ ಬಂಗಾರದಂಥ ಮನುಷ್ಯ. ಮೂರು ಜನ ಗಂಡು ಮಕ್ಕಳಲ್ಲಿ ಶಂಕರನೇ ಕಣ್ಮಣಿಯಾಗಿದ್ದ. ಹಾರಾಡುತ್ತಿದ್ದ  ಪಾರಿವಾಳವನ್ನು ಗಿಡುಗ ಎತ್ಕೊಂಡು ಹೋದಂತೆ ಆ ಕ್ರೂರ ವಿಧಿ ಆಡಾಡುತ್ತಿದ್ದ ನನ್ಮಗನನ್ನು ಎತ್ಕೊಂಡು ಹೋಗಿಬಿಟ್ಟ. 
ಈ ಪ್ರಪಂಚಕ್ಕೆ ನನ್ನಿಂದ ಏನಾಗ್ಬೇಕಿದೆ ಅಂತ ನನ್ನ ಇನ್ನೂ ಇಲ್ಲಿ ಉಳಿಸ್ಯಾನೋ ಆ ಯಮರಾಜ! ಮಕ್ಳು, ಮೊಮ್ಮೊಕ್ಳು ಎಲ್ಲಾರ್ನು ಕಂಡೀನಿ. ನನ್ ಶಂಕರನನ್ನು ಬಿಟ್ಟು ನನ್ನ ಕರ್ಕೊಂಡು ಹೋಗಿದ್ರೆ ಆ ದೇವ್ರಿಗೆ ಅದೇನು ತ್ರಾಸು ಆಗ್ತಿತ್ತು...? ಆ ದೇವ್ರಿಗೆ ಕಣ್ಣಿಲ್ಲ. ಅವ ನಿಷ್ಕರುಣಿ! ಪಕ್ಷಪಾತಿ! ಹೃದಯಹೀನ! ನಮ್ಮಂಥ ಮುದುಕರು ಕಾಣಂಗಿಲ್ಲ ಆ ದೇವ್ರಿಗೆ. ಎಪ್ಪಾ, ನನ್ನೆದೆಯೊಳಗಿನ ತ್ರಾಸು ನಾ ಹೆಂಗ್ ಹೇಳ್ಲಿ...?" ಅಜಮಾಸು ಎಂಭತ್ತೈದು ವರ್ಷದ ಶಂಕರನ ತಾಯಿ ಶಿವರುದ್ರಮ್ಮ ಎದೆ ಬಡಿದುಕೊಂಡು ಒಂದೇ ಸಮನೇ ರೋದಿಸತೊಡಗಿದ್ದಳು. ಶಂಕರನ ಶಿವಗಣಾರಾಧನೆಗೆಂದು ಅವನ ಊರಿಗೆ ಹೋಗಿದ್ದ ಅವನ ಆತ್ಮೀಯ ಸ್ನೇಹಿತ ಮತ್ತು ಸಹೋದ್ಯೋಗಿ ರಾಜಶೇಖರ್ ಮೊದಲು ಗೆಳೆಯನ ಹೆಂಡತಿ ಮಂಗಳಾ ಮತ್ತು ಮಕ್ಕಳಿಗೆ ಸಮಾಧಾನ ಹೇಳಿ ನಂತರ ಶಂಕರನ ತಾಯಿಯ ಹತ್ತಿರ ಹೋಗಿದ್ದ. ಇಳಿ ವಯಸ್ಸಿನ ಆ ತಾಯಿಯ ರೋದನ ಕರುಳು ಕಿವುಚುವಂತಿತ್ತು. 
"ಅಮ್ಮಾ, ಹೆತ್ತೊಡಲಿನ ದುಃಖ ಏನೆಂದು ನನಗೆ ಗೊತ್ತಾಗುತ್ತೆ. ಒಬ್ಬ ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಅಂತ ಯಾರಿಗೂ ತಿಳಿದಿಲ್ಲ. ಮರಣವನ್ನು ಮುಂದೆ ಹಾಕಬಹುದೇ ವಿನಃ ತಡೆಯುವದಂತು ಯಾರಿಂದಲೂ ಸಾಧ್ಯವಿಲ್ಲ. ಏನೋ, ಅವನು ಪಡೆದುಕೊಂಡು ಬಂದಿದ್ದು ಇಷ್ಟೇ ಅಂತ ತಿಳಿದುಕೊಂಡು ಸಮಾಧಾನ ಮಾಡಿಕೊಳ್ಳಬೇಕು. ಶಂಕರನಿಗೂ ವಯಸ್ಸು ಕಡಿಮೆಯೇನು ಆಗಿರಲಿಲ್ಲ. ಮೊನ್ನೆ ಆಗಷ್ಟಿಗೆ ಅರವತ್ತೈದು ತುಂಬಿದ್ದವಲ್ಲ? ಆದರೂ ಇಷ್ಟು ಬೇಗ ಹೋಗಬಾರದಿತ್ತು. ಸದ್ಯದ ಕಾಲಮಾನದಲ್ಲಿ ಇದೇನು ಸಾಯುವ ವಯಸ್ಸಲ್ಲ. ಒಳ್ಳೇ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನಾವೆಲ್ಲಾ ಏನೇನೋ ಮಾಡ್ತೀವಿ. ಆದರೆ ವಿಧಿಯಾಟ ಬಲ್ಲವರಾರು...? ಆರೋಗ್ಯವನ್ನು ಹಾಳುಮಾಡುವಂಥಹ ಯಾವ ಕೆಟ್ಟ ಚಟವೂ ಶಂಕರನಿಗೆ ಇರಲಿಲ್ಲ. ಊಟದಲ್ಲೂ ತುಂಬಾ ಕಟ್ಟು-ನಿಟ್ಟಿನ ಮನುಷ್ಯ. ಹಾಳಾದ ಹೃದ್ರೋಗ ಅವನ ಜೀವವನ್ನೇ ನುಂಗಿಬಿಟ್ಟಿತು. ಕೆಲಸದಲ್ಲಿನ ಒತ್ತಡ ಹೃದ್ರೋಗಕ್ಕೆ ಕಾರಣವಿರಬಹುದು. ನಾವೆಷ್ಟೇ ಜಾಣ್ಮೆ, ಕೌಶಲ್ಯ, ಚಾಣಾಕ್ಷತನದಿಂದ ಕೆಲಸವನ್ನು ನಿಭಾಯಿಸುತ್ತಿದ್ದರೂ ಎಲ್ಲೆಲ್ಲಿಂದಲೋ ಒತ್ತಡ ಹೇರಲ್ಪಡುತ್ತದೆ. ಹೀಗಾಗಿ ಶಂಕರನ ಆರೋಗ್ಯ ಹದ ತಪ್ಪಿತು. ಸಮಾಧಾನ ಮಾಡಿಕೊಳ್ಳಿರಿ." ರಾಜಶೇಖರ್ ತನಗೆ ತೋಚಿದಂತೆ ಗೆಳೆಯನ ತಾಯಿಯನ್ನು ಸಂತೈಸಲು ಮುಂದಾಗಿದ್ದ.
"ಅಜ್ಜಿ, ಈಗ ಈ ರಂಪಾಟವೇಕೆ...? ಅತ್ತೂ ಅತ್ತೂ ಆರೋಗ್ಯವನ್ನು ಹಾಳು ಮಾಡಿಕೊಂಡು ಹಾಸಿಗೆ ಹಿಡಿಯಬೇಕೆಂದಿರುವಿಯೇನು? ನಿನ್ನ ಆರೋಗ್ಯವೂ ಈಗೀಗ ಬಹಳ ಸೂಕ್ಷ್ಮವಾಗಿದೆ. ಚಿಕ್ಕಪ್ಪನಂತೂ ನಮ್ಮೆಲ್ಲರನ್ನೂ ಬಿಟ್ಟು ಹೊರಟು ಹೋಗಿಬಿಟ್ಟ. ಉಳಿದ ಮಕ್ಕಳು, ಮೊಮ್ಮಕ್ಕಳ ಮುಖ ನೋಡಿಕೊಂಡು ಅಳುವುದನ್ನು ನಿಲ್ಲಿಸಿ ನಿನ್ನ ಆರೋಗ್ಯದ ಕಡೆಗೆ ಗಮನ ಹರಿಸು. ಚಿಕ್ಕಪ್ಪ ಹೋದ ದಿನದಿಂದ ನೀನು ಹೀಗೇ ಅಳುತ್ತಿರುವಿ. ಹೀಗಾದರೆ ನಿನ್ನ ಆರೋಗ್ಯದ ಗತಿಯೇನು? ಈಗ ಸಾಕು, ಮೇಲೇಳು. ಒಳಗೆ ಹೋಗು. ಪಾಪ, ದೂರದೂರಿನಿಂದ ಬಂದಿರುವ ಅವರಿಗೆ ಬೇಸರ ತರಿಸಬೇಡ" ಎಂದೆನ್ನುತ್ತಾ ಶಂಕರನ ಅಣ್ಣನ ಮಗಳು ರಶ್ಮಿಕಾ ಶಿವರುದ್ರಮ್ಮನನ್ನು ಒತ್ತಾಯದಿಂದ ಹೊರಡಿಸಿಕೊಂಡು ಒಳಗೆ ಹೋದಳು. 

"ಸರ್, ಇವರು ಶಂಕರನ ಮತ್ತೊಬ್ಬ ತಾಯಿ."
"ಹೌದಾ? ಮತ್ತೆ ಆಗಲೇ ಒಬ್ಬ ತಾಯಿಯನ್ನು ನೋಡಿದೆನಲ್ಲ...? ಅಂದರೆ ಶಂಕರನ ತಂದೆಯವರಿಗೆ ಇಬ್ಬರು ಹೆಂಡಂದಿರೇ...? ಅವರು ಹೆತ್ತ ತಾಯಿಯಾ ಅಥವಾ ಇವರು ಹೆತ್ತ ತಾಯಿಯಾ...?" ಅನುಮಾನಿಸುತ್ತಾ ಪ್ರಶ್ನಿಸಿದ ರಾಜಶೇಖರ್.
"ಇವರು ಶಂಕರನ ಸಾಕು ತಾಯಿ, ಅವರು ಹೆತ್ತ ತಾಯಿ."
"ಶಂಕರನ ಹೆತ್ತ ತಾಯಿಯೇ ಇರುವಾಗ, ಮತ್ತೇಕೆ ಸಾಕು ತಾಯಿ...?" ಕುತೂಹಲ, ಅನುಮಾನ ಒಮ್ಮೆಲೇ ಉದ್ಭವಿಸಿದ್ದವು ರಾಜಶೇಖರನೆದೆಯಲ್ಲಿ.
"ಇವರು ಶಂಕರನ ಚಿಕ್ಕಮ್ಮ ಗಿರಿಜಮ್ಮ ಅಂತ. ಶಂಕರನ ತಾಯಿ ಇವರೂ ಖಾಸಾ ಅಕ್ಕ-ತಂಗಿಯರು. ಇಲ್ಲಿಂದ ಐದಾರು ಕಿಮೀ ದೂರವಷ್ಟೇ ಇವರು ಊರು. ಶಂಕರ ಜನಿಸಿದಾಗ ಊರಿನಲ್ಲಿದ್ದ ಪಂಡಿತರೊಬ್ಬರು, `ಮಗು ಮೂಲಾ ನಕ್ಷತ್ರದಲ್ಲಿ ಹುಟ್ಟಿದೆ. ತಂದೆ-ತಾಯಿಗಳ ಜೊತೆಗೆ ಬೆಳೆದರೆ ಅವರ ಜೀವಕ್ಕೆ ಕುತ್ತು. ಮಗುವಿಗೆ ಹನ್ನೆರಡು ವರ್ಷ ತುಂಬುವವರೆಗೆ ಬೇರೆ ಕಡೆಗೆ ಬೆಳೆಸಬೇಕು. ಇಲ್ಲವಾದರೆ ಜನ್ಮದಾತರಿಗೆ ಅಕಾಲಿಕ ಮೃತ್ಯು ಬರುತ್ತದೆ. ಇವನ ಆಯುಷ್ಯ ಮೂವತ್ತರಿಂದ ನಲವತ್ತು ವರ್ಷ ಅಷ್ಟೇ. ಮಗುವಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಬೇರೆ ತಾಯಿಯೊಬ್ಬರ ಮಡಿಲಿನಲ್ಲಿ ಹಾಕಿಬಿಡಿರಿ' ಎಂದು ಹೇಳಿದ್ದರಂತೆ ಮಗು ಹುಟ್ಟಿದ ಸಮಯವನ್ನು ನೋಡಿ. ಕೃಷ್ಣ ನಂದಗೋಲ ಸೇರಿ ಯಶೋಧೆಯ ಮಡಿಲು ಸೇರಿದಂತೆ ಮೂರು ತಿಂಗಳು ತುಂಬುತ್ತಿದ್ದಂತೆ ಮೊಲೆಗೂಸು ಶಂಕರ ಇವರ ಮಡಿಲು ಸೇರಿಕೊಂಡ. ಇವರು ಶಂಕರನನ್ನು ಹೆತ್ತ ತಾಯಿಗಿಂತ ಚೆನ್ನಾಗೇ ನೋಡಿಕೊಂಡರು. ಹನ್ನೆರಡು ವರ್ಷ ತುಂಬುತ್ತಿದ್ದಂತೆ ಹೆತ್ತ ತಾಯಿಯ ಮಡಿಲಿಗೆ ಮರಳಿ ಬರುವಾಗ ಇವರ ಮತ್ತು ಶಂಕರನ ರಂಪಾಟ ನೋಡಬೇಕಿತ್ತು... ಹಿಂಡನ್ನಗಲಿದ ಹಸುವಿನಂತೆ ಆಗಿತ್ತು ಶಂಕರನ ಮನಃಸ್ಥಿತಿ. ಯಶೋಧೆ ಕೃಷ್ಣನ್ನು ಬೆಳೆಸಿದಂತೆ ಇವರು ಶಂಕರನನ್ನು ಪ್ರೀತಿಯಿಂದ ಬೆಳೆಸಿದ್ದರು. ಶಂಕರನಿಗೂ ತನ್ನ ತಾಯಿಗಿಂತ ಇವರ ಮೇಲೆಯೇ ಹೆಚ್ಚಿನ ಮಮಕಾರ. ಅಗಲಿಕೆ ಅನಿವಾರ್ಯವಾಗಿತ್ತು. ಶಂಕರನನ್ನು ಕಾಣಲು ಇವರೂ ಆಗಾಗ ಬರುತ್ತಿದ್ದರು. ಶಂಕರನೂ ಶಾಲೆಗೆ ರಜೆ ಬಂದಿತೆಂದರೆ ಚಿಕ್ಕಮ್ಮನ ಮಡಿಲು ಸೇರಲು ಹಂಬಲಿಸುತ್ತಿದ್ದ. ಅವನೆಂದರೆ ಇವರಿಗೆ ಜೀವ; ಇವರೆಂದರೆ ಅವನಿಗೂ ಜೀವ. ಶಂಕರ ತೀರಿಕೊಂಡ ದಿನದಿಂದ ಇವರು ಒಂದಿನಾನೂ ಹೊಟ್ಟೆ ತುಂಬ ಊಟ ಮಾಡಿಲ್ಲ." ಶಂಕರನ ಹತ್ತಿರದ ಸಂಬಂಧಿ ಸುಶೀಲೇಂದ್ರ ಅನ್ನುವವರು ಶಂಕರನ ಚಿಕ್ಕಮ್ಮ ಗಿರಿಜಮ್ಮನ ಬಗ್ಗೆ ಚುಟುಕಾಗಿ ಹೇಳಿದರು ರಾಜಶೇಖರನಿಗೆ. ಗಿರಿಜಮ್ಮ ಶಿವರುದ್ರಮ್ಮನಿಗಿಂತ ಒಂದೆರಡು ವರ್ಷ ಚಿಕ್ಕವಳಿರಬೇಕು ಅಷ್ಟೇ.
"ಅಯ್ಯೋ ಎಪ್ಪಾ, ನನ್ನ ಜೀವವೇ ಹೋದಂತಾಗಿದೆ. ಶಂಕರೂ ನನಗೆ ಸರ್ವಸ್ವವೇ ಆಗಿದ್ದ. ನನ್ನ ಹೊಟ್ಟೇಲಿ ಹುಟ್ಟಿದ ಮಕ್ಳಿಗಿಂತ ಶಂಕರಾನೇ ನನಗೆ ಪ್ರೀತಿಯ ಮಗ. ಅವನಂಥ ಚೆಂದದ ಮನುಷ್ಯ ನಮ್ಮ ಮನೀತನದಾಗೇ ಇರ್ಲಿಲ್ಲ. ಅದೇನು ಶಾಣ್ಯಾತನ ಅವನಲ್ಲಿ...? ದೊಡ್ಡ ಬ್ಯಾಂಕಿನಾಗ ಅದೇನೋ ಎಜಿಎಮ್ಮೋ, ಡಿಜಿಎಮ್ಮೋ ಆಗಿದ್ರೂ ಒಂಚೂರೂ ಜಂಬ ಅನ್ನೋದು ಅವನೆದೆಯೊಳಗೆ ಮೂಡ್ಲಿಲ್ಲ. ಆಕಳಿನಂತೆ ಸೀದಾ-ಸಾದಾ ಮನುಷ್ಯ. ಅದೆಷ್ಟು ಸರಳತೆ, ಆತ್ಮೀಯತೆ ಅವನಲ್ಲಿ...? ಊರಿಗೆ ಬಂದಾಗ ಓಡೋಡಿ ಬರ್ತಿದ್ದ ನನ್ನ ಹತ್ತಿರ. ಪ್ರತಿ ಸಾರೆ ಬರುವಾಗ ಬಟ್ಟೆ-ಬರೆ, ರಾಶಿರಾಶಿ ಹಣ್ಣು-ಹಂಪಲಗಳನ್ನು ತರ್ತಿದ್ದ. ಬಂದಾಗೊಮ್ಮೆ ಮೊದಲು ನನ್ನ ಕಾಲಿಗೆ ನಮಸ್ಕರಿಸಿ ಮಾತಿಗೆ ಮುಂದಾಗುತ್ತಿದ್ದ. ಅದೇನು ನಯ, ವಿನಯ ಅಂತೀದಿ ಅವನಲ್ಲಿ? ತುಂಬಿದ ಕೊಡದಂತಿದ್ದ. ಕೂಸಿದ್ದಾಗ ನನ್ನ ಮಡಿಲು ಸೇರಿ ಬಾಲಕನಾಗಿ ಮತ್ತೆ ತನ್ನೂರಿಗೆ ಹೋದರೂ ನನ್ನ ಹತ್ತಿರ ಬಂದಾಗೊಮ್ಮೆ ಮಗುವಿನಂತೆ ಮಗುವಾಗಿ ಬಿಡ್ತಿದ್ದ. ಬೇಡವೆಂದರೂ ಹೋಗುವಾಗ ಮತ್ತೆ ಪಾದಗಳಿಗೆ ನಮಸ್ಕರಿಸಿ ನನ್ನ ಕೈಯಲ್ಲಿ ನೋಟುಗಳ ಕಂತೆಯನ್ನು ತುರುಕಿ ಹೋಗ್ತಿದ್ದ. `ಇಲ್ಲಿನ ಮಕ್ಳು ಬೇಡಿದಾಗೊಮ್ಮೆ ಕೊಡ್ತಾರೆ. ಮತ್ಯಾಕೆ ಈ ದುಡ್ಡು? ಬೇಡ' ಎಂದು ನಯವಾಗಿ ತಿರಸ್ಕರಿಸಲು ಮುಂದಾದರೆ, `ಇರ್ಲಿ, ಈ ದುಡ್ಡು ಇಟ್ಕೋ. ಯಾತಕ್ಕಾದರೂ ಬರ್ತದೆ. ಬೇಡ ಅನ್ಬೇಡ ನನ್ನವ್ವ' ಅಂತ ಹೇಳಿ ಮುದ್ದು ಮಾಡುತ್ತಾ ಹಣ ಕೊಟ್ಟು ಹೋಗ್ತಿದ್ದ. ನನ್ನ ಶಂಕ್ರುಂದು ಹೆಂಗರುಳಿನ ಮನಸ್ಸು. ನಾ ಹೆಂಗ್ ಮರೀಲಿ ಎಪ್ಪಾ ನನ್ನ ಕಾನಾನನ್ನು...?" ಗಿರಿಜಮ್ಮನ ಅಳು ಮುಗಿಲು ಮುಟ್ಟುವಂತಿತ್ತು. ಎದೆ ಬಡಿದುಕೊಂಡು ಅಳತೊಡಗಿದ್ದಳು. ಕಣ್ಣೀರಧಾರೆ ಹೃದಯ ಕಲಕುವಂತಿತ್ತು.
"ಅತ್ತೆ, ಶಂಕರೂ ಮಾಮ ಅಲ್ಪಾಯು ಎಂದು ಅದ್ಯಾರೋ ಪಂಡಿತ ತಾನು ಹೇಳಿದ್ದೇ ನಡೆಯುತ್ತೆ ಎಂಬಂತೆ ಕರಾರುವಾಕ್ಕಾಗಿ ಹೇಳಿದ್ದೆಲ್ಲವೂ ಸುಳ್ಳಾಯಿತು. ಶಂಕರೂ ಮಾಮ ಅರವತ್ತೈದು ವರ್ಷ ಬದುಕಿದರೆ ಅವನಪ್ಪ ಎಂಬತ್ತು ವರ್ಷ ಬಾಳಿದ. ನನ್ನ ಪ್ರೀತಿಗೆ ಕಲ್ಲು ಚಪ್ಪಡಿ ಎಳೆದುಬಿಟ್ಟ ಪಂಡಿತ. ಮುಗ್ಧ ಜೀವಿಗಳ ಪ್ರಾಣ, ಜೀವನದ ಜೊತೆಗೆ ಇಂಥಹ ಪಂಡಿತರು ಚೆಲ್ಲಾಟವಾಡುತ್ತಿದ್ದಾರೆ. ಧಿಕ್ಕಾರವಿರಲಿ ಇಂಥಹವರಿಗೆ. ಇರಲಿ, ಆಗಬೇಕಾದದ್ದು ಆಗಿದೆ. ಅವರನ್ನು ಹಳಿದು ನನ್ನ ನಾಲಿಗೆಯನ್ನೇತಕೆ ಹೊಲಸು ಮಾಡಿಕೊಳ್ಳಲಿ? ಅತ್ತೆ, ನೀನು ಈ ರೀತಿ ಅಳುತ್ತಾ ಕುಳಿತರೆ ನಿನ್ನ ಆರೋಗ್ಯ ಏನಾಗಬೇಕು? ಅತ್ತೂ ಅತ್ತೂ ನಿನ್ನ ಧ್ವನಿ ಹೋಗಿ ಬಿಟ್ಟಿದೆ. ಹೀಗೆ ಅತ್ತರೆ ಸ್ವರ್ಗದಲ್ಲಿರೋ ಶಂಕರ್ ಮಾಮಾನ ಆತ್ಮಕ್ಕೆ ಶಾಂತಿ ಸಿಗ್ತದೇನು? ಹುಚ್ಚೀ ತರಹ ಹೀಗೆ ಅಳಬೇಡ. ಮಾಮಾ ದೇವರಂಥ ಮನುಷ್ಯ. ಒಳ್ಳೇ ಮನಸ್ಸಿತ್ತು; ಸಾಗರದಂಥ ವಿಶಾಲ ಹೃದಯವಿತ್ತು ಅವನಿಗೆ. ತನ್ನವರೆಲ್ಲರನ್ನೂ ಪ್ರೇಮದಿಂದ ನೋಡಿದ. ಎಲ್ಲರ ಒಳಿತು, ಏಳಿಗೆಗಾಗಿ ಕನವರಿಸಿದ. ಅತ್ತೆ, ನೀನು ಅತ್ತರೆ ನನಗೂ ಅಳು ಬರುತ್ತೆ" ಎಂದೆನ್ನುತ್ತಾ ಅರವತ್ತರ ಆಜು-ಬಾಜುವಿನ ವಯಸ್ಸಿನ ಚೆಂದದ ಮೊಗದ ಹೆಂಗಸೊಬ್ಬಳು ತಾನೂ ಗಿರಿಜಮ್ಮನೊಂದಿಗೆ ದುಃಖಿಸಿ ದುಃಖಿಸಿ ಅಳತೊಡಗಿದಳು. 
"ಮೇಘನಾ, ನೀನು ಅಳಬೇಡ ತಾಯಿ. ನಿನ್ನ ಕಷ್ಟ ಏನೆಂದು ನನಗೆ ಗೊತ್ತು. ಆಯಿತು, ನಾನು ಅಳುವುದಿಲ್ಲ. ನೀನೂ ಅಳಬೇಡ" ಎಂದೆನ್ನುತ್ತಾ ಗಿರಿಜಮ್ಮ ಮೇಘನಾಳ ಕಣ್ಣೀರೊರೆಸಿ ಬಿಗಿದಪ್ಪಿಕೊಂಡು ಮುಂಗುರುಳು ನೇವರಿಸಿ, ಬೆನ್ನ ಮೇಲೆ ಕೈಯಾಡಿಸುತ್ತ ಸಂತೈಸತೊಡಗಿದಳು. ಮೇಘನಾ ಗಿರಿಜಮ್ಮನ ಕಣ್ಣೀರನ್ನು ಒರೆಸುತ್ತಾ ಅವಳ ತೆಕ್ಕೆಯಲ್ಲಿ ಸೇರಿಕೊಂಡಿದ್ದಳು. ಮೌನದ ಗಾಢತೆಯಲ್ಲಿ ಇಬ್ಬರ ದೀರ್ಘ ಉಸಿರಾಟ ಪಕ್ಕದಲ್ಲಿದ್ದವರ ಹೃದಯ ಕಲಕುವಂತಿತ್ತು. ರಾಜಶೇಖರ್, ಪಕ್ಕದಲ್ಲಿದ್ದ ಸುಶೀಲೇಂದ್ರನಿಗೆ, `ಇವರ್ಯಾರು?' ಎಂದು ಕೈಸನ್ನೆಯಲ್ಲೇ ಕೇಳಿದಾಗ ಅವರು ಅವನನ್ನು ತುಸು ಆಚೆಗೆ ಕರೆದುಕೊಂಡು ಹೋಗಿ, `ಸಾರ್, ಅದೊಂದು ದೊಡ್ಡ ಕಥೆ. ಚುಟುಕಾಗಿ ಹೇಳ್ತೇನೆ' ಅಂತ ಶುರುವಿಟ್ಟುಕೊಂಡಾಗ ರಾಜಶೇಖರ್ ಮೌನದಲ್ಲಿ ಅವರ ಮಾತುಗಳನ್ನು ಆಲಿಸತೊಡಗಿದ.

"ಈ ಮೇಘನಾ ನಮ್ಮ ಶಂಕರನ ಸೋದರತ್ತೆಯ ಮಗಳು. ಶಂಕರ್ ತನ್ನ ಬಿಎಸ್ಸಿ ಮುಗಿಸಿದಾಗ ಈಕೆ ಎಸ್ಸೆಸ್ಸೆಲ್ಸಿ ಮುಗಿಸಿದ್ದಳು. ಪದವಿ ಮುಗಿಯುತ್ತಲೇ ಶಂಕರ್ ರಾಷ್ಟ್ರೀಕೃತ ಬ್ಯಾಂಕಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡ. ಪಿಯುಸಿಗೆ ಮೇಘನಾಳ ವಿದ್ಯಾಭ್ಯಾಸ ಮೊಟಕುಗೊಂಡಿತು. ಬುದ್ಧಿ ತಿಳಿದಾಗಿನಿಂದ ಮೇಘನಾಗೆ ಶಂಕರನೆಂದರೆ ತುಂಬಾ ಅಚ್ಚು-ಮೆಚ್ಚು. ಅವನಲ್ಲಿ ಅವಳಿಗೆ ಒಲವೂ ಮೂಡಿತ್ತು. `ಪ್ರಪಂಚ ಎಂಬ ಊರಿನಲ್ಲಿ ನಾನೊಂದು ಚಿಕ್ಕ ಜೀವವಾದರೂ ನಿನ್ನನ್ನು ಪ್ರೀತಿಸುವ ನನ್ನ ಜೀವಕ್ಕೆ ನೀನೇ ಪ್ರಪಂಚ' ಎಂದೆನ್ನುತ್ತಾ ಪ್ರೀತಿಯ ಸೆಳೆತದ ಗುಂಗಿನಲ್ಲೂ ಇದ್ದಳು. `ಅಲ್ಪಾಯು ಶಂಕರನಿಗೆ ಹೆಣ್ಣು ಕೊಡಲು ಜನರು ಹಿಂದೆ-ಮುಂದೆ ನೋಡುತ್ತಿದ್ದರೂ ಮೇಘನಾ ತಾನು ಶಂಕರನನ್ನು ಮದುವೆಯಾಗುವುದಾಗಿ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದಾಗ ಅವಳ ತಂದೆ-ತಾಯಿಗಳು ಹುಬ್ಬೇರಿಸಿದ್ದರು. ಶಂಕರನಿಗೂ ಅವಳನ್ನು ಮದುವೆಯಾಗಲು ಮನಸೂ ಇತ್ತು. ಆದರೆ ಅವನ ಸೋದರತ್ತೆ ಮತ್ತು ಮಾವನಿಗೆ ಮೇಘನಾಳನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಲು ಸುತಾರಾಂ ಇಷ್ಟವಿರಲಿಲ್ಲ. 
"ವಿಧಿ ಲಿಖಿತವನ್ನು ಯಾರೂ ಕಂಡು ಬಂದವರಿಲ್ಲ. ಶಂಕರ್ ಎಷ್ಟೇ ವರ್ಷ ಬದುಕಿದರೂ ಅವನೊಂದಿಗೆ ಬದುಕನ್ನು ಹಂಚಿಕೊಳ್ಳಲು ತಯಾರು. ನನ್ನ ಬದುಕು ಅಷ್ಟೇ ಎಂದು ಅಂದುಕೊಳ್ಳುವೆ. ಶಂಕರನ ಹೆಂಡತಿಯಾಗಿ ಅವನ ಜೊತೆಗೆ ಒಂದು ದಿನ ಬಾಳುವೆ ಮಾಡಿದರೂ ನನ್ನ ಜೀವನ ಸಾರ್ಥಕ ಎಂದುಕೊಳ್ಳುವೆ. ವಿಶಾಲ ಮನಸ್ಸಿನಿಂದ ನಮ್ಮನ್ನು ಹರಸಿ ಆಶೀರ್ವದಿಸಿರಿ" ಎಂದು ಮೇಘನಾ ಎಷ್ಟೇ ಗೋಗರೆದರೂ ಅವಳ ತಂದೆ-ತಾಯಿಗಳ ಮನಸ್ಸು ಕರಗಲಿಲ್ಲ. ಕೊನೆಗೆ ಶಂಕರನೇ ಮೇಘನಾಳನ್ನು ಸಂತೈಸಬೇಕಾಗಿ ಬಂದಿತ್ತು. 
"ಮೇಘನಾ, ನಿನ್ನ ಮನಸ್ಸು, ಹೃದಯಗಳೆರಡನ್ನೂ ನಾನು ಬಲ್ಲೆ. ನಿನ್ನ ಅಂದ-ಚೆಂದ, ಮನಸ್ಸು, ಹೃದಯಗಳೆಲ್ಲವೂ ಚೆಂದವೇ. ನಿನ್ನ ಪ್ರೀತಿಯ ಆಳವನ್ನು ನನ್ನ ಹೃದಯ ಅರಿಯದೇ ಇದ್ದೀತೇ? ಪ್ರೀತಿಗಾಗಿ ಹೆತ್ತವರ ಮನಸ್ಸನ್ನು ನೋಯಿಸುವುದು ಸಲ್ಲದು. ನಮ್ಮಿಬ್ಬರ ನಿಷ್ಕಲ್ಮಶ ಪ್ರೀತಿಗೆ ಹಿರಿಯರ ಒಪ್ಪಿಗೆಯ ಮುದ್ರೆ ಸಿಗದಿದ್ದರೂ ಅವರ ಇಚ್ಛೆಗೆ ವಿರುದ್ಧವಾಗಿ ನಾವು ಒಂದಾಗುವುದು ಅಷ್ಟಾಗಿ ಸರಿ ಕಾಣುವುದಿಲ್ಲ. ಇದು ಒಂದು ದಿನದ ಮಾತಲ್ಲ, ಇಡೀ ಜೀವನ ಕಾಡುವ ಪ್ರಶ್ನೆ. ನಿನ್ನಂಥಹ ಒಳ್ಳೇ ಹುಡುಗಿಗೆ ನನಗಿಂತಲೂ ಸುಂದರ ಮತ್ತು ಅಷ್ಟೇ ಸಹೃದಯಿ ಹುಡುಗ ಸಿಕ್ಕೇ ಸಿಗುತ್ತಾನೆ ಎಂದು ನನ್ನ ಆರನೇ ಇಂದ್ರಿಯ ಹೇಳುತ್ತಿದೆ. ಹೆತ್ತವರಿಚ್ಛೆಯಂತೆ ನಡೆದರೆ ಅವರಿಗೂ ಖುಷಿ. ನಿನ್ನ ಬಾಳೂ ಸುಲಲಿತವಾಗಿ ಸಾಗುತ್ತದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿರುವ ನನ್ನ ಜೀವನವು ಹೇಗೋ ಸಾಗುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವಂತೆ. ಒಂದು ಗಂಡಿಗೆ ಒಂದು ಹೆಣ್ಣನ್ನು, ಒಂದು ಹೆಣ್ಣಿಗೆ ಒಂದು ಗಂಡನ್ನು ಆ ಭಗವಂತ ಸೃಷ್ಟಿಸಿರುತ್ತಾನೆ. ನೀನು ನನ್ನ ಬಗ್ಗೆ ಅಷ್ಟಾಗಿ ಚಿಂತಿಸುವ ಅವಶ್ಯಕತೆ ಇಲ್ಲ. ನನ್ನನ್ನು ಮರೆತು ಹೆತ್ತವರ ಇಚ್ಛೆಯಂತೆ ಬೇರೊಬ್ಬ ಹುಡುಗನನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡು. ನಿನಗಾಗಿ ಒಂದೊಳ್ಳೆಯ ಚೆಲುವನನ್ನು ಹುಡುಕಲು ನಾನೂ ಪ್ರಯತ್ನಿಸುವೆ. ನಿನ್ನಂಥಹ ವಿಶಾಲ ಮನಸ್ಸಿನ ಹುಡುಗಿಯ ಕೈ ಹಿಡಿಯುವ ಹುಡುಗ ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು" ಎಂದು ಶಂಕರ್ ಮೇಘನಾಳಿಗೆ ಹಿತವಚನ ನೀಡಿ ಅವಳ ಮನಸ್ಸು ಪರಿವರ್ತನೆಯಾಗುವಂತೆ ಮಾಡಿದ್ದ. ಒಲ್ಲದ ಮನಸ್ಸಿನಿಂದ ಮೇಘನಾ ಶಂಕರನ ಮಾತಿಗೆ ತಲೆ ಬಾಗಿದ್ದಳು. 
"ಮಾಮಾ, ನೀನು ಅಲ್ಪಾಯು ಎಂದು ಯಾವ ಹೆಣ್ಣು ಯಾವಾಗ ಕೈಹಿಡಿಯುವಳೋ ಏನೋ? ನೀನೇ ನನ್ನ ಜೀವ ಮತ್ತು ಜೀವನ ಅಂತ ಅಂದ್ಕೊಂಡಿದ್ದೆ. ಅದೇನೇ ಕಷ್ಟ ಬಂದರೂ ದಿಟ್ಟತನದಿಂದ ಎದುರಿಸಬೇಕೆಂದಿದ್ದೆ. ಆದರೆ ಅಪ್ಪ-ಅಮ್ಮ ಅಡ್ಡಗಾಲು ಹಾಕಿದ್ದಾರೆ. ನಿನ್ನಿಚ್ಛೆಯಂತೆ ನಾನು ಬೇರೆ ಹುಡುಗನನ್ನು ವರಿಸುವೆ. ಆದರೆ ನೀನು ಮಾತ್ರ ಆದಷ್ಟು ಬೇಗ ಹಸೆಮಣೆ ಏರಲು ಪ್ರಯತ್ನಿಸಬೇಕು. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂದು ಹೇಳುತ್ತಾರೆ. ನಿನ್ನ ಜನ್ಮನಕ್ಷತ್ರದ ಬಗ್ಗೆ ಬೇರೆಯವರ ಜೊತೆಗೆ ಟಾಂಟಾಂ ಹೊಡೆಯಬೇಡ. ಅದನ್ನು ಮುಚ್ಚಿಟ್ಟು ಮದುವೆಯಾದರೂ ತಪ್ಪೇನಿಲ್ಲ. ನಿನ್ನ ಮೇಲಿನ ಪ್ರೀತಿಯನ್ನಂತೂ ನಾನು ಮರೆಯಲಾರೆ. ನಿನ್ನ ಮನಸ್ಸನ್ನರಿತುಕೊಂಡು ನಡೆಯುವ ಹುಡುಗಿಯೊಬ್ಬಳು ನಿನ್ನ ಬಾಳನ್ನು ಆದಷ್ಟು ಬೇಗ ತುಂಬಲಿ ಎಂದು ಹಂಬಲಿಸುವೆ ನಾನು. ಶಂಕ್ರೂ, ಒಂದೇ ಒಂದು ಸಲ ನಾನು ನಿನ್ನೆದೆಯೊಳಗೆ ಸೇರಿಕೊಂಡು ಸಂಭ್ರಮಿಸುವೆ. ಅಭ್ಯಂತರವಿಲ್ಲ ತಾನೇ?" ಎಂದೆನ್ನುತ್ತಾ ಶಂಕರನ ಪ್ರತಿಕ್ರಿಯೆಗಾಗಿ ಕಾಯದೇ ಅವನನ್ನು ಬಿಗಿದಪ್ಪಿಕೊಂಡು ಅವನ ಹಣೆಗೆ ಹೂಮುತ್ತೊಂದನ್ನಿಡುತ್ತಾ ಸಂಭ್ರಮಿಸಿದ್ದಳು ಮೇಘನಾ. 
ಶಂಕರ್ ನುಡಿದಂತೆ ನಡೆದುಕೊಂಡ. ಮೇಘನಾಳಿಗೆ ಯೋಗ್ಯ ವರನನ್ನೂ ಹುಡುಕಿಕೊಟ್ಟ. ಬೆಂಗಳೂರಿನ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ವಿಜಯ್ ಸದ್ಗುಣ ಸಂಪನ್ನನೂ ಆಗಿದ್ದ. ಮೇಘನಾಳ ಬಾಳು ಹಸನಾಗಿಬಿಟ್ಟಿತು. ಶಂಕರನ ಮೇಲೆ ಅವಳಿಗಿದ್ದ ಪ್ರೀತಿ ಇನ್ನೂ ಹೆಚ್ಚಾಗಿತ್ತು. ಅವನು ತನ್ನ ಪಾಲಿನ ದೇವರೇ ಎಂದು ಅಂದುಕೊಂಡಳು. ಮೇಘನಾ ಕೈ ಹಿಡಿದ ಪತಿಗೆ ತಾನು ಶಂಕರನನ್ನು ಪ್ರೀತಿಸಿದ ಬಗ್ಗೆಯೂ ತಿಳಿಸಿದಳು. ಶಂಕರನ ಅಂತ್ಯಕ್ರಿಯೆಯ ದಿನ ಮೇಘನಾ ಶಂಕರನ ಗುಣಗಾನ ಮಾಡುತ್ತಾ, ಹಾಡಿ ಹಾಡಿ ಬೋರಾಡಿ ಅತ್ತಿದ್ದಳು. 
"ಭಾರೀ ಇಂಟರೆಸ್ಟಿಂಗ್ ಸ್ಟೋರಿ ಇದು." ರಾಜಶೇಖರ್ ತನಗನಿಸಿದ್ದನ್ನು ವ್ಯಕ್ತಪಡಿಸಿದ. 
"ಸರ್, ಇನ್ನೂ ಒಂದು ತುಂಬಾ ಇಂಟರೆಸ್ಟಿಂಗ್ ಸ್ಟೋರಿ ಇದೆ" ಎಂದೆನ್ನುತ್ತಾ ಸುಶಿಲೇಂದ್ರ ರಾಜಶೇಖರನ ಮುಖ ದಿಟ್ಟಿಸತೊಡಗಿದ.                      
"ಹೇಳಿ, ಹೇಳಿ. ಅದನ್ನೂ ಕೇಳುವೆ." ಕುತೂಹಲ ತಡೆಯದೇ ಅವಸರಿಸಿದ ರಾಜಶೇಖರ್.
"ಆಗಲಿ ಸರ್ ಹೇಳ್ತೀನಿ" ಎಂದೆನ್ನುತ್ತಾ ಸುಶಿಲೇಂದ್ರ ಕಥೆಗೆ ಶುರುವಿಟ್ಟುಕೊಂಡರು.

"ಶಂಕರನ ತಾಯಿಯ ತಮ್ಮ ಅಂದರೆ ಸೋದರಮಾವನಿಗೆ ಸಮುದ್ಯತಾ ಅಂತ ಮಗಳಿದ್ದಾಳೆ. ಅವಳೂ ಮೇಘನಾಳ ವಾರಿಗೆಯವಳೇ. ಸಮುದ್ಯತಾ ಇಂಜನಿಯರಿಂಗ್ ಪದವೀಧರೆ. ಪದವಿ ಮುಗಿಯುತ್ತಿದ್ದಂತೆ ಅವಳಿಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಸಮುದ್ಯತಾಳನ್ನು ಶಂಕರನಿಗೆ ತೆಗೆದುಕೊಂಡು ತನ್ನ ತವರುಮನೆಯ ಸಂಬಂಧವನ್ನು ಹಸಿರಾಗಿಸಬೇಕೆಂಬ ಹೆಬ್ಬಯಕೆ ಶಂಕರನ ತಾಯಿಗೆ ಇತ್ತು. ಸಮುದ್ಯತಾ ಮೇಘನಾಳಿಗಿಂತ ರೂಪಸಿ ಬೇರೆ. ಅವಳ ತಂದೆ-ತಾಯಿಗಳಿಗೂ ಶಂಕರನಿಗೆ ಧಾರೆಯೆರೆಯಬೇಕೆಂಬ ಹಂಬಲವಿತ್ತು. ಆದರೆ ಸಮುದ್ಯತಾ ಸುತಾರಾಂ ಒಪ್ಪಿಕೊಳ್ಳಲಿಲ್ಲ. ಅಲ್ಲಿ ಮೇಘನಾ ಶಂಕರನನ್ನು ಮದುವೆಯಾಗಲು ಇಷ್ಟಪಟ್ಟಿದ್ದರೆ, ಅವಳ ತಂದೆ-ತಾಯಿಗಳಿಗೆ ಇಷ್ಟವಿರಲಿಲ್ಲ. ಇಲ್ಲಿ ಸಮುದ್ಯತಾಳ ತಂದೆ-ತಾಯಿಗಳಿಗೆ ಇಷ್ಟವಾಗಿದ್ದರೆ, ಅವಳಿಗೆ ಇಷ್ಟವಾಗಲಿಲ್ಲ. 
ಸಮುದ್ಯತಾ ತುಂಬಾ ಫಾಸ್ಟ್ ಈಗಿನ ಹುಡುಗಿಯರಂತೆ. "ಅಯ್ಯೋ, ಆ ಅಲ್ಪಾಯು ಶಂಕರನನ್ನು ಕಟ್ಟಿಕೊಂಡು ನಾನು ಮೂವತ್ತಕ್ಕೇ ರಂಡಿ-ಮುಂಡಿಯಾದರೆ ನಿಮಗೆ ಹೋಳಿಗೆ-ತುಪ್ಪ ಉಂಡಷ್ಟು ಖುಷಿಯೇ? ನಿಮ್ಮ ಖುಷಿಗೋಸ್ಕರ ನಾನೇನು ಶಂಕರೂ ಮಾಮನನ್ನು ಮದುವೆಯಾಗುವುದಿಲ್ಲ. ಮೂವತ್ತರ ನಂತರದ ವಯಸ್ಸು ಪ್ರತಿಯೊಬ್ಬ ಮಾನವ ಜೀವಿಗೆ ಅತಿಮುಖ್ಯವಾದ ಘಟ್ಟ. ದೈಹಿಕ ಸುಖದ ಪರಾಕಾಷ್ಠೆಯಲ್ಲಿ ಮಿಂದು-ಮೀಯುವ ಕಾಲವದು. ಅವನ ಅಲ್ಪಾಯುವಿಗೆ ನಾನು ಬಲಿಪಶುವಾಗಲಾರೆ" ಎಂದು ಖಡಾಖಂಡಿತವಾಗಿ ಹೇಳಿದ್ದಳು ತನ್ನ ಹೆತ್ತವರಿಗೆ.
ಶಂಕರ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. `ಸಮುದ್ಯತಾ, ಸ್ವಾತಂತ್ರ್ಯ ಅಂತ ಸ್ವೇಚ್ಛಾಚಾರಕ್ಕೆ ಇಳಿದು ನಿನ್ನ ಸುಂದರ ಜೀವನವನ್ನು ಕುರೂಪಗೊಳಿಸಬೇಡ. ನಿನಗೆ ಶುಭವಾಗಲಿ' ಎಂದು ಶಂಕರ್ ಸಮುದ್ಯತಾಳಿಗೆ ಹಾರೈಸುತ್ತಾ ಕಿವಿಮಾತೂ ಹೇಳಿದ್ದ. ಆದರೆ ಅಷ್ಟೊತ್ತಿಗೆ ಅವಳು ತನ್ನ ಪಿಜಿಗೆ ಸಮೀಪದ ಜೆಂಟ್ಸ್ ಪಿಜಿಯೊಂದರಲ್ಲಿ ವಾಸಿಸುತ್ತಿದ್ದ ಕೋಲ್ಕೋತ್ತಾ ಮೂಲದ ನಿಕುಂಜ್ ಎಂಬ ಬಂಗಾಳಿ ಹುಡುಗನೊಂದಿಗೆ ತಳಿಕೆ ಹಾಕಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಹೆತ್ತವರ, ಒಡಹುಟ್ಟಿದವರ, ಸಂಬಂಧಿಕರ ವಿರೋಧದ ನಡುವೆ ಸಮುದ್ಯತಾ ಅವನನ್ನೇ ಮದುವೆಯಾದಳು. ಒಲ್ಲದ ಮನಸ್ಸಿನಿಂದ ಸಮುದ್ಯತಾಳನ್ನು ನಿಕುಂಜನಿಗೆ ಧಾರೆ ಎರೆದು ಕೊಟ್ಟಿದ್ದರು ಅವಳ ಹೆತ್ತವರು. ಅವಳ ದಾಂಪತ್ಯ ಜೀವನ ಚೆಂದಾಗಿಯೇ ಸಾಗಿತ್ತು. ಮದುವೆಯಾಗಿ ವರ್ಷವಾಗಿತ್ತೇನೋ? ಅವಳಿಗೆ ತನ್ನ ಕಂಪನಿಯ ವತಿಯಿಂದ ಎರಡು ವರ್ಷಗಳವರೆಗೆ ಯುಎಸ್‍ಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಯುಎಸ್‍ಗೆ ಹೋಗಿ ಬರಲು ನಿಕುಂಜ್ ಪ್ರೋತ್ಸಾಹಿಸಿದ. ಆರು ತಿಂಗಳ ನಂತರ ಸಮುದ್ಯತಾ ಬೆಂಗಳೂರಿಗೆ ಬಂದು ಒಂದು ವಾರದ ಮಟ್ಟಿಗೆ ಗಂಡನ ಜೊತೆಗಿದ್ದು ಹೋದಳು. ಅದೇನೋ ಗೊತ್ತಿಲ್ಲ, ಮತ್ತೆ ಆರು ತಿಂಗಳು ತುಂಬುವಷ್ಟರಲ್ಲಿ ಪ್ರೀತಿಸಿ ಮದುವೆಯಾದವರಿಬ್ಬರೂ ಬೇರೆ ಸಂಗಾತಿಗಳನ್ನು ಹುಡುಕಿಕೊಂಡು ಸಹಬಾಳ್ವೆಯ ಜೀವನ ನಡೆಸತೊಡಗಿದರು. ನಿಕುಂಜ್ ದಿಲ್ಲಿ ಮೂಲದ ಹುಡುಗಿಯ ತೋಳಲ್ಲಿ ಸೆರೆಯಾಗಿದ್ದರೆ ಸಮುದ್ಯತಾ ಯುಎಸ್‍ನ ಹ್ಯಾರಿಸ್ ಜೊತೆಗೆ ಜೀವನ ಹಂಚಿಕೊಳ್ಳತೊಡಗಿದ್ದಳು. 
ಸಮುದ್ಯತಾ ತನ್ನರೆಲ್ಲರನ್ನು ಮರೆತು ಯುಎಸ್‍ದಲ್ಲೇ ಸೆಟ್ಲಾಗಿ ಬಿಟ್ಟಳು. ಹ್ಯಾರಿಸ್ ಜೊತೆಗಿನ ಸಂಬಂಧವೂ ಒಂದು ವರ್ಷದಲ್ಲಿ ಹಳಸಿದಾಗ ಮತ್ತೊಬ್ಬ ಸಂಗಾತಿ ಚಾಲ್ರ್ಸ್‍ನ ಜೊತೆಗೆ ಕೆಲವು ವರ್ಷ ಕಳೆದಳು. ಚಾಲ್ರ್ಸ್ ಕೈಕೊಟ್ಟಾಗ ತನಗಿಂತಲೂ ಐದಾರು ವರ್ಷಗಳಷ್ಟು ಚಿಕ್ಕವನಾದ, ಭಾರತೀಯ ಸಂಜಾತ ಪಂಜಾಬ್ ಮೂಲದ ಸುಪ್ರೀತ್‍ನೊಂದಿಗೆ ಸಹಬಾಳ್ವೆಗೆ ಮುಂದಾದಳು. ಈಗ ಸುಪ್ರೀತನೊಂದಿಗೆ ಪುನಃ ಬೆಂಗಳೂರಿಗೆ ಬಂದಿದ್ದಾಳೆ. ನಡೆದಾಡುವ ಹಾದಿಯಲ್ಲಿ ಹುಲ್ಲೂ ಹುಟ್ಟುವುದಿಲ್ಲವೆಂಬಂತೆ ಹಲವರ ಜೊತೆಗೆ ಸಂಬಂಧವಿರಿಸಿಕೊಂಡಿದ್ದ ಸಮುದ್ಯತಾಳ ಹೊಟ್ಟೆಯಲ್ಲಿ ತನ್ನದೇ ಆದ ಕುಡಿಯೊಂದೂ ಮಿಸುಕಾಡಲಿಲ್ಲ. ಅದೇ ಮೇಘನಾಳಿಗೆ ಒಬ್ಬ ಮಗ, ಒಬ್ಬ ಮಗಳು. ಇಬ್ಬರಿಗೂ ಮದುವೆಯಾಗಿ ಜೀವನದಲ್ಲಿ ನೆಲೆ ನಿಂತಿದ್ದಾರೆ. 
ಸಮುದ್ಯತಾ ಈಗ ಶಂಕರ್ ಹೇಳಿದ್ದ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತಾಳೆ. "ನನ್ನ ಶಂಕರೂ ಮಾಮ ನನಗೆ ನೈತಿಕತೆಯ ಬಗ್ಗೆ ಗಿಣಿಗೆ ಹೇಳಿದಂತೆ ಹೇಳಿದ. ಆದರೆ ನನ್ನ ಕಿವಿಗೆ ಬೀಳಲೇ ಇಲ್ಲ. ಯೌವನಮದ, ರೂಪಮದ, ಹಣಮದದಿಂದ ನಾನು ಅಧೋಗತಿಗೆ ಇಳಿದು ನನ್ನ ಕಾಲಮೇಲೆ ನಾನೇ ಕಲ್ಲುಚಪ್ಪಡಿ ಎಳೆದುಕೊಂಡೆ. ಈಗ ಪಶ್ಚಾತ್ತಾಪವಾಗಿದೆ. ಆದರೆ ಕಾಲ ಮಿಂಚಿ ಹೋಗಿದೆ. ಮೇಕಪ್ಪಿಲ್ಲದಿದ್ದರೆ ಥೇಟ್ ಮುದುಕಿಯಂತೆ ಕಾಣುತ್ತಿದ್ದೇನೆ. ಮೇಘನಾಳಿಗೂ ನನ್ನಷ್ಟೇ ವಯಸ್ಸಾಗಿದ್ದರೂ ಅವಳಿನ್ನೂ ನಲವತ್ತರ ಆಜು-ಬಾಜುವಿನ ಸಹಜ ಸುಂದರಿಯಂತೆ ಕಂಗೊಳಿಸುತ್ತಿದ್ದಾಳೆ. ನನ್ನದೆಲ್ಲವನ್ನೂ ಕಳೆದುಕೊಂಡ ನಂತರ ಹಲುಬಿದರೇನು...? ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತಾಗಿದೆ ನನ್ನ ಬಾಳು." ಶಂಕರನ ಶವಸಂಸ್ಕಾರಕ್ಕೆ ಬಂದಿದ್ದಾಗ ಎದೆಎದೆ ಬಡಿದುಕೊಂಡು ಮನದುಂಬಿ ಮನಕಲಕುವಂತೆ ಅತ್ತಿದ್ದಳು ಸಮುದ್ಯತಾ. ಇಂದು ಅವಳ್ಯಾಕೋ ಇನ್ನೂ ಬಂದಿಲ್ಲ, ಆದರೂ ಬರಬಹುದೆಂಬ ನಂಬಿಕೆ ಇದೆ" ಎಂದು ಸುಶಿಲೇಂದ್ರ ಹೇಳಿದಾಗ ರಾಜಶೇಖರ್ ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡು ಅಚ್ಚರಿ ವ್ಯಕ್ತಪಡಿಸಿದ್ದ. 

"ಮತ್ತೆ ಗೆಳೆಯ ಶಂಕರನ ಕಲ್ಯಾಣ ಮಹೋತ್ಸವ ಯಾವಾಗ ಆಯಿತು...?" ಹಿಂಜರಿಕೆಯಿಂದ ಕೇಳಿದ ರಾಜಶೇಖರ್.   
"ಸಮುದ್ಯತಾ ಶಂಕರನನ್ನು ತಿರಸ್ಕರಿಸಿ ತುಸು ದಿನಗಳಾಗುವಷ್ಟರಲ್ಲಿ ಮಂಗಳಾ ಮಂಗಳಗೌರಿಯಂತೆ ಶಂಕರನ ಬಾಳೆಂಬ ನೌಕೆಯನ್ನು ಏರಿದರು. ಹೆಣ್ಣು ನೋಡಲು ಹೋದಾಗ ಶಂಕರ್ ಪಂಡಿತರು ಹೇಳಿದ್ದ ತನ್ನ ಜನ್ಮ ನಕ್ಷತ್ರ, ಅಲ್ಪಾಯುವಿನ ಬಗ್ಗೆ ನೇರವಾಗಿ ಮತ್ತು ಅಷ್ಟೇ ದಿಟ್ಟತನದಿಂದ ತಿಳಿಸಿದ್ದ. ಶಂಕರನ ನೇರ ನುಡಿ, ಸಜ್ಜನಿಕೆ, ಚೆಲುವು ಮಂಗಳಾಳಿಗೆ ಮತ್ತು ಅವಳ ತಂದೆ-ತಾಯಿಗಳಿಗೆ ಇಷ್ಟವಾದವು. 
"ನೋಡ್ರೀ, ಯಾರು ಎಷ್ಟು ವರ್ಷ ಜೀವಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಈ ಭೂಮಿಯಲ್ಲಿ. ಇಂಥಹ ಪಂಡಿತರು ಹೇಳುವುದು ಅವರದೇ ಆದ ಒಂದು ಲೆಕ್ಕಾಚಾರದ ಪ್ರಕಾರ. ಇಂಥಹುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ಜೀವನ, ನನ್ನ ಬಾಳು. ನನ್ನ ಜೀವನದಲ್ಲಿ ಏನು ಆಗಬೇಕಿರುವುದೋ ಅದು ಆಗದೇ ಬೇರೇನೂ ಆಗುವುದಿಲ್ಲ. ನೀವು ನನಗೆ ಇಷ್ಟವಾಗಿರುವಿ" ಎಂದು ಮಂಗಳಾ ತುಂಬಾ ಖುಷಿಯಿಂದ ಹೇಳಿ ಸಂಭ್ರಮಿಸಿದ್ದಳು ತನ್ನ ಮಧುರ ಧ್ವನಿಯಲ್ಲಿ. ಶಂಕರನಿಗೂ ಮಂಗಳಾ, ಅವಳ ಮಾತು, ತೀಡಿದ ಗೊಂಬೆಯಂಥಹ ಮೈಮಾಟ ಎಲ್ಲವೂ ಇಷ್ಟವಾದ ಮೇಲೆ ವಾಲಗ ಊದುವುದಕ್ಕೆಷ್ಟು ಸಮಯ ಬೇಕಾದೀತು...? ಜಟ್‍ಪಟಾಂತ ಶಂಕರ್, ಮಂಗಳಾರ ಮದುವೆ ಸಮುದ್ಯತಾಳ ಮದುವೆಗಿಂತ ಮುಂಚೇನೇ ಮುಗಿದು ಹೋಯಿತು.  
ಮಂಗಳಾ ಶಂಕರನ ಮೈ, ಮನ ತುಂಬಿದಳು. ಅತ್ತೆ-ಮಾವನವರಿಗೆ ಮುದ್ದಿನ ಸೊಸೆಯೂ ಆದಳು. ಮದುವೆಯಾಗಿ ಐದು ವರ್ಷ ತುಂಬುವಷ್ಟರಲ್ಲಿ ಮಕ್ಕಳಿಬ್ಬರಿಗೆ ತಾಯಿಯೂ ಆದಳು. ಶಂಕರನಿಗೆ ಮೂವತ್ತು ತುಂಬುತ್ತಿದ್ದಂತೆ ಶಂಕರ್ ಮತ್ತು ಮಂಗಳಾರ ಎದೆಗಳಲ್ಲಿ ಆತಂಕ ಕಂಡು ಬಂದಿತ್ತಾದರೂ ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಿ ನಿಂತುಕೊಂಡಿದ್ದರು. ಮೂವತ್ತೆಂಟು ದಾಟಿತು, ನಲವತ್ತು ದಾಟಿತು, ನಲವತ್ತೈದೂ ದಾಟಿತು ಶಂಕರನಿಗೆ. ಎದೆಯೊಳಗಿದ್ದ ಆತಂಕ ತನ್ನಷ್ಟಕ್ಕೆ ತಾನೇ ದೂರವಾಗಿತ್ತು. ಪಂಡಿತ ಹೇಳಿದ್ದು ಹಸಿಸುಳ್ಳು ಎಂದು ಮನದಟ್ಟಾಗಿತ್ತು. `ಆ ಪಂಡಿತ ಹಾಗೆ ಹೇಳಿದ್ದಕ್ಕೆ ನಿನ್ನಂಥಹ ಅನಘ್ರ್ಯ ರತ್ನ ನನ್ನದಾಯಿತು. ತುಂಬಾ  ಅದೃಷ್ಟಶಾಲಿ ನಾನು.' ಶಂಕರನ ಎದೆಯೊಳಗೆ ಮುಖವಿರಿಸಿ ಮಂಗಳಾ ಆಗಾಗ ಪ್ರೇಮರಾಗ ಹಾಡುತ್ತಿದ್ದಳು.     
ಮಕ್ಕಳು ಸುಪ್ರಭಾತ್ ಮತ್ತು ಫಲ್ಗುಣಿ ಬಿದಿಗೆಯ ಚಂದ್ರನಂತೆ ಬೆಳೆದರು. ಇಬ್ಬರೂ ಇಂಜಿನಿಯರ್ಸ್. ಇಬ್ಬರಿಗೂ ಮದುವೆಯೂ ಆಯಿತು. ಅಳಿಯ ಮತ್ತು ಸೊಸೆ ಅವರೂ ಇಂಜಿನಿಯರ್ಸೇ. ಮಗಳಿಗೆ ಇಬ್ಬರು, ಮಗನಿಗೆ ಇಬ್ಬರು ಎಂಬಂತೆ ಒಟ್ಟು ನಾಲ್ಕು ಮುದ್ದಾದ ಮೊಮ್ಮೊಕ್ಕಳು ಶಂಕರ್ ಮತ್ತು ಮಂಗಳಾ ದಂಪತಿಗಳಿಗೆ. ಐವತ್ತೆಂಟನೇ ವಯಸ್ಸಿನಲ್ಲಿ ಶಂಕರನಿಗೆ ಲಘು ಹೃಯಾಘಾತವಾಗಿ ಹೃದಯದಲ್ಲಿ ಒಂದು ಸ್ಟೆಂಟ್ ಅಳವಡಿಸಲಾಯಿತು. ಬ್ಯಾಂಕಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಅಂತ ನಿವೃತ್ತಿಯೂ ಆಯಿತು. ನಿವೃತ್ತಿ ಜೀವನ ನೆಮ್ಮದಿ, ಶಾಂತಿ, ಆರಾಮದಾಯಕವಾಗಿ ಸಾಗಿತ್ತು. ಇದ್ದಕ್ಕಿದ್ದಂತೆ ಅರವತ್ತಾರನೇ ವಯಸ್ಸಿನಲ್ಲಿ ಶಂಕರ್ ಇಹದ ಋಣ ಮುಗಿಸಿಕೊಂಡು ಹೊರಟೂ ಹೋದನು." ಸುಶೀಲೇಂದ್ರ ಮಾತು ಮುಗಿಸಿದ್ದರು. 
ಶಂಕರನ ತಾಯಿಯಂದಿರಿಬ್ಬರ ಪಾದಗಳಿಗೆ ನಮಿಸಿ, ಮಂಗಳಾ, ಮೇಘನಾರಿಗೆ ಹೇಳಿ ರಾಜಶೇಖರ್ ವಾಪಾಸು ತನ್ನೂರಿಗೆ ಪಯಣ ಬೆಳೆಸಬೇಕೆನ್ನುವಷ್ಟರಲ್ಲಿ ಸಮುದ್ಯತಾ ಬಂದಿದ್ದಳು. ಸುಶಿಲೇಂದ್ರ ಪರಸ್ಪರ ಪರಿಚಯ ಮಾಡಿಸಿದ. ಉಭಯಕುಷಲೋಪರಿಯ ನಂತರ ರಾಜಶೇಖರ್ ಹೊರಡಲು ಮುಂದಡಿ ಇಟ್ಟ. ಜೀವನ ಅನ್ನೋದು ಹರಿಯುವ ನದಿಯಂತೆ. ನದಿಯ ಹರಿವಿನಲ್ಲಿರುವ ಸುಳಿಗಳು, ಒಳಸುಳಿಗಳು ಮಾನವನ ಜೀವನದಲ್ಲೂ ಹಾಸು ಹೊಕ್ಕಾಗಿವೆ ಎಂದು ಮನದೊಳಗೇ ಅಂದುಕೊಳ್ಳುತ್ತಾ ಕಾರನ್ನೇರಿದ.

* ಶೇಖರಗೌಡ ವೀ ಸರನಾಡಗೌಡರ್, 
ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಮೂಲಾ ನಕ್ಷತ್ರದ ಒಳ ಸುಳಿಗಳು”

  1. JANARDHANRAO KULKARNI

    ಶಂಕರನ ಜೀವನ ಕಥೆ ಚನ್ನಾಗಿದೆ. ಜನ್ಮನಕ್ಷತ್ರ ಮೂಲವಾಗಿಟ್ಟುಕೊಂಡು ಜೀವನ ನಡೆಸಲು ಆಗದು. ಆಗುವುದು ಆಗೇ ಆಗುತ್ತದೆ ಎನ್ನುವುದು ಕಥೆಯ ತಿರುಳು.

    1. ಶೇಖರಗೌಡ ವೀ ಸರನಾಡಗೌಡರ್

      ಧನ್ಯವಾದಗಳು ಜನಾರ್ಧನ್ ರಾವ್.

  2. Raghavendra Mangalore

    ಒಂದು ಕಾಲದ ಮೂಲಾ ನಕ್ಷತ್ರದಲ್ಲಿ ಜನಿಸಿದವರ ನಂಬಿಕೆಯ ಕುರಿತು ಹೆಣೆದ ಕಥೆ ಮನಸಿಗೆ ಹಿಡಿಸಿತು. ಜಾತಕವು ಒಮ್ಮೊಮ್ಮೆ ಜ್ಯೋತಿಷಿಯ ಕರಾಮತ್ತು ಮತ್ತು ಕುರುಡು ನಂಬಿಕೆ ಕೂಡ ಆಗಬಹುದು.

    1. ಶೇಖರಗೌಡ ವೀ ಸರನಾಡಗೌಡರ್

      ಧನ್ಯವಾದಗಳು ಎಂ ಆರ್.

  3. ಮ.ಮೋ.ರಾವ್ ರಾಯಚೂರು

    ಒಳಸುಳಿಗಳು.
    “ನದಿಯ ಹರಿವಿನಲ್ಲಿರುವ ಸುಳಿಗಳು ಒಳಸುಳಿಗಳು ಮಾನವನ ಜೀವನದಲ್ಲೂ ಹಾಸುಹೊಕ್ಕಾಗಿವೆ” ತುಂಬ ಮಾರ್ಮಿಕವಾಗಿ ಹೆಣೆದಿದ್ದಾರೆ ಕವಿ ಶ್ರೀ. ಶೇಖರಗೌಡ. ವೀ. ಸರನಾಡಗೌಡರು.
    ಮೂಲಾನಕ್ಷತ್ರದ ಮೂಢನಂಬಿಕೆಯನ್ನು ಧೃಢವಾಗಿ ಹಿಂದೆತಳ್ಳುತ್ತಾ ಹೆಣೆದ ಕಥೆ ಸುಂದರವಾಗಿದೆ. ಸಂಸಾರದಲ್ಲಿ ಪ್ರೀತಿಯೇ ಮುಖ್ಯವೆಂದು ಕಥೆಯನ್ನು ಇನ್ನೊಬ್ಬರಿಂದ ಹೇಳಿಸುತ್ತಾ ನಮಗೆ ಸಮಗ್ರವಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಅಭಿನಯದ ಬಂಗಾರದ ಪಂಜರ ಚಿತ್ರ (ವಿ. ಸೋಮಶೇಖರ್ ನಿರ್ದೇಶನ) ನೆನಪಾಯಿತು. 👌👍
    ಜೊತೆಯಲ್ಲೇ, ಶಂಕರನ ಈ ‘ಅಲ್ಪಾಯುಷ್ಯ’ ಭವಿಷ್ಯವನ್ನು ನಂಬುತ್ತಾ ನಿರ್ಭಿಡೆ ಮತ್ತು ಸ್ವೇಚ್ಛಾಚಾರಿಯಾಗಿ, ಬದುಕನ್ನೇ ಹಾಳುಮಾಡಿಕೊಂಡ ಸಮ್ಯುದ್ಯತಾಳ ಸ್ಥಿತಿಯನ್ನೂ ಸೂಚ್ಯವಾಗಿ ನಿವೇದಿಸಿದ್ದಾರೆ.
    ಕಥಾನಾಯಕ ಬ್ಯಾಂಕ್ ಉದ್ಯೋಗಿಯೆಂದು ತಿಳಿಸುತ್ತಾ ಅಲ್ಲಿಯ ಕೆಲಸದ ಬಹಿರ್ವೋತ್ತಡಗಳ ಪರಿಣಾಮವನ್ನೂ ದಾಖಲಿಸಿದ್ದಾರೆ.
    ಒಂದು ಲೆಕ್ಕದ ಪ್ರಕಾರ ಮನುಷ್ಯನಿಗೆ ನೂರು ನೂರಿಪ್ಪತ್ತು ವರ್ಷ ಪೂರ್ಣಾಯುಸ್ಸು. ಸಾಮಾಜಿಕ, ಸಾಂಸಾರಿಕ ಜವಾಬ್ದಾರಿಗಳನ್ನು ನಿಭಾಯಿಸಿದಮೇಲೆ, ಉಳಿದರೆ, ಉಳಿದದ್ದೆಲ್ಲಾ ಬೋನಸ್ಸು. ಈ ಬೋನಸ್ಸು ಶಂಕರನಿಗೆ ದೊರೆಯದಿದ್ದದ್ದು ಓದುಗರ ಮನ ತಟ್ಟುತ್ತದೆ. ಸುಶಿಲೇಂದ್ರ- ರಾಜಶೇಖರರ ಸಂವಾದದಲ್ಲಿ ಕಥೆ ಸುಂದರವಾಗಿ ಮೂಡಿದೆ. ಅಭಿನಂದನೆಗಳು.💐
    ಮದನ್, ರಾಯಚೂರು
    ೦೬.೦೫.೨೦೨೪ ಸೋಮವಾರ

    1. ಶೇಖರಗೌಡ ವೀ ಸರನಾಡಗೌಡರ್

      ಮದನ್, ನಿಮ್ಮ ಸುದೀರ್ಘವಾದ ವಿಮರ್ಶೆ ಮನಸ್ಸಿಗೆ ಬಹಳಷ್ಟು ಮುದ ನೀಡಿತು. ಮನದುಂಬಿದ ಧನ್ಯವಾದಗಳು.

  4. ಧರ್ಮಾನಂದ ಶಿರ್ವ

    ಕಥೆ ಓದಿಸಿಕೊಂಡು ಹೋಗುವಂತಿದೆ.
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter