ಅಯ್ಯೋ! ಅಯ್ಯಯ್ಯೋ!!

(ಹಾಸ್ಯ / ವಿಡಂಬನೆ ಬರಹ)

ಮುಂಜಾನೆಯ  ನಾಷ್ಟ ಬಿಸಿ  ಉಪ್ಪಿಟ್ಟು  ನಿಧಾನವಾಗಿ ತಿನ್ನುತ್ತಾ   ಕುಳಿತಿದ್ದ ಬಸಾಟೆಪ್ಪನಿಗೆ ಜನ ಗುಂಪು ಗುಂಪಾಗಿ ಓಡುವ ಶಬ್ದ ಕೇಳಿ ಬಂತು. ಹೊರಗೆ ಬಂದು ಕೇಳಿದ  ಅವಸರದಿಂದ ಓಡಲು  ಸಿದ್ಧನಾದ ಪಕ್ಕದ ಮನೆಯ ಅಲ್ಲಾಬಕ್ಷಿಯನ್ನು ” ಏನು ಸಮಾಚಾರ ? ” ಎನ್ನುವಂತೆ.  ಸಾಹುಕಾರ ಗುಂಡಣ್ಣ  ನಮ್ಮ ಹಳ್ಳಿಗೆ ಬಂದಿದ್ದಾರೆ.  ಎಲ್ಲರನ್ನೂ  ಅಗಸಿ ಮುಂದಿನ ಆಂಜನೇಯ ಗುಡಿಯ ಹತ್ತಿರದ ಆಲದ ಮರದ ಕಟ್ಟೆಯ ಬಳಿ ಜಲ್ದಿ ಬರಲು  ಹೇಳಿದ್ದಾರೆ ಎಂದ ಒಬ್ಬ ‘ ಪಿ ಯು ಸಿ  ಡ್ರಾಪ್ ಔಟ್ ‘  ಹುಡುಗ  ಜೋರಾಗಿ ಅರಚುತ್ತಾ ಓಡಿದ.

ಈ ಸಲ ಸಾಹುಕಾರ  ಗುಂಡಣ್ಣ ನಮಗಾಗಿ ಏನು ತಂದಾನೋ ಏನೋ? ಹೋದ ಸಲ ಬಂದಾಗ ಏನು ಕೊಟ್ಟು ಹೋಗ್ಯಾನ? ಆಗಲೇ ಐದು ವರ್ಷ ಆಯ್ತೇನು ಸಾಹುಕಾರ ಬಂದು ಹೋಗಿ ಎಂದು ಗೊಣಗುತ್ತಾ ತಿನ್ನುತ್ತಿದ್ದ ಉಪ್ಪಿಟ್ಟನ್ನು ಅರ್ಧಕ್ಕೆ ಬಿಟ್ಟು  ಕೋಲನ್ನು ಹಿಡಿದು ನಿಧಾನವಾಗಿ ಅರಳಿಕಟ್ಟೆಯತ್ತ  ಹೆಜ್ಜೆ ಹಾಕತೊಡಗಿದ   ಎಂಭತ್ತರ ಹರೆಯದ ಬಸಾಟೆಪ್ಪ.

ಮುಂದೆ ಸಾಹುಕಾರ  ಗುಂಡಣ್ಣನ  ಹಡಗಿನಂತಹ ಒಂದು ದೊಡ್ಡ ಕಾರು ಅದರ ಹಿಂದೆ ಸಾಲು ಸಾಲಾಗಿ ಹಿಂಬಾಲಕರ ಕಾರು – ಜೀಪುಗಳು ಅರಳಿಕಟ್ಟೆಯನ್ನು ಆಗಲೇ ಸುತ್ತುವರೆದಿದ್ದವು.  ಅರಳಿಕಟ್ಟೆಯ ಮೇಲೆ ಕೂತ ಸಾಹುಕಾರ ಗುಂಡಣ್ಣ  ಎಲ್ಲರನ್ನೂ ಅವರವರ  ಹೆಸರಿಟ್ಟು ಕರೆದು ( ಅದೇ ಹಳ್ಳಿಯ ಆಪ್ತ ಹಿಂಬಾಲಕನೊಬ್ಬನ ನೆರವಿನೊಂದಿಗೆ! ) ಪ್ರೀತಿಯಿಂದ ನಗುತ್ತಾ ಮಾತನಾಡಿಸಿ ಅವರವರ ಯೋಗಕ್ಷೇಮ ವಿಚಾರಿಸುತ್ತಿದ್ದ. ಎಲ್ಲರೂ ಬಂದದ್ದು ಖಾತ್ರಿಯಾದ ಬಳಿಕ ಅವರತ್ತ ವಿನಯದಿಂದ ಒಮ್ಮೆ  ಕೈ ಜೋಡಿಸಿ  ನಮಸ್ಕಾರ ಮಾಡಿದ ಸಾಹುಕಾರ ಗುಂಡಣ್ಣ ಮೆಲ್ಲನೆ ಮಾತು ಆರಂಭಿಸಿದ  ” ಈಗ  ಸರಿಯಾಗಿ ಹತ್ತು ವರುಷದ ಹಿಂದೆ ಇದೇ ಜಾಗಕ್ಕೆ ಬಂದಿದ್ದೆ. ತಮಗೆಲ್ಲ ನೆನಪಿರಬಹುದು. “

 ” ಹೌದೌದು ಸಾಹುಕಾರರೇ ನೀವು ಬಂದದ್ದು ಇನ್ನೂ ನೆನಪಿದೆ ” ಎಂದು ಮುಂದಿನ ಸಾಲಲ್ಲಿ ಕೂತ ಬೊಚ್ಚು ಬಾಯಿಯ ಮುದುಕನೊಬ್ಬ ಹೇಳಿದ.

 ” ಎಷ್ಟು ಸರಿಯಾಗಿ ನೆನಪಿಟ್ಟಿಯಾ ಕಲ್ಲಪ್ಪ ( ಯಾವುದೋ ಒಂದು ಹೆಸರು ಹೇಳಬೇಕಲ್ಲ! ) ” ಎಂದು ಮುದುಕನ ಬೆನ್ನು ಚಪ್ಪರಿಸಿ ನುಡಿದ  ಸಾಹುಕಾರ ಗುಂಡಣ್ಣ.   ನಂತರ ಒಂದೆರಡು ನಿಮಿಷಗಳ ಬಳಿಕ ” ನನ್ನ ಪ್ರೀತಿ ಪಾತ್ರರಾದ  ನಿಮಗೆ  ಆಗ  ಕಾಣಿಕೆಯಾಗಿ ಏನನ್ನು  ಕೊಟ್ಟಿದ್ದೆ ಅಂತ ತಮಗೆಲ್ಲ ನೆನಪಿರಬೇಕಲ್ಲ?” ಎಂದು ಅರ್ಧದಲ್ಲೇ ಮಾತು ನಿಲ್ಲಿಸಿದ ಸಾಹುಕಾರ ಗುಂಡಣ್ಣ  ಅಲ್ಲಿ ನೆರೆದ ಜನರತ್ತ ನೋಡಿ  ಮುಸಿ ಮುಸಿ ನಗುತ್ತಾ . ಒಬ್ಬ ‘ ಸೂಪರ್ ಸೀನಿಯರ್ ‘ ಮುದುಕ  ” ಅಂದು ತಾವು ನೀಡಿದ  ಆಶ್ವಾಸನೆಗಳನ್ನೆಲ್ಲ ಒಟ್ಟುಗೂಡಿಸಿ  ತುಂಬಿಸಿದ   ದೊಡ್ಡ  ಮೂಟೆಯನ್ನು  ಮನೆಗೊಂದರಂತೆ ಕೊಟ್ಟು ಹೋಗಿದ್ದೀರಿ ಸಾಹುಕಾರರೇ.” ಎಂದು  ಮೆತ್ತನೆಯ  ಸ್ವರದಿಂದ ನುಡಿದ.

” ಸರಿ, ಅವು ಮಾಮೂಲು ಮೂಟೆಗಳು ಅಲ್ಲ.ಎಲ್ಲರೂ  ಮನೆಗಳಿಗೆ ಒಯ್ದು ಬಿಚ್ಚಿ ನೋಡಿದಿರಿ ತಾನೇ…ಅದರಲ್ಲಿ ತುಂಬಿಸಿಟ್ಟಿದ್ದ ನನ್ನ  ಮೃದು ಮಧುರ  ಆಶ್ವಾಸನೆಗಳನ್ನು ಕೇಳಿ ನಿಮ್ಮ ಕಷ್ಟ – ಕಾರ್ಪಣ್ಯಗಳು ದೂರವಾಗಿ   ಈಗ  ಎಲ್ಲರೂ ಸಂತೋಷದಿಂದ ಇದ್ದೀರಿ ಅಂತ ಭಾವಿಸುತ್ತೇನೆ.” ಎಂದ ಸಾಹುಕಾರ ಗುಂಡಣ್ಣ  ಭುಜ ಹಾರಿಸುತ್ತಾ.

” ನಮ್ಮೆಲ್ಲ ಬಡತನವನ್ನು   ನೀಗಿಸಿಕೊಳ್ಳಲೆಂದೇ ನೀವು ಪ್ರೀತಿಯಿಂದ  ಕೊಟ್ಟ  ಆಶ್ವಾಸನೆಗಳ ಮೂಟೆಯನ್ನು  ಮನೆಗೆ ಒಯ್ದೆವು.ಅದನ್ನು ಬಿಚ್ಚಿದಾಗ  ಅದರಲ್ಲಿ ತಾವು ತುಂಬಿಸಿಟ್ಟ  ಆಶ್ವಾಸನೆಗಳು ಒಮ್ಮೇಲೆ ಬೀಸಿದ ಬಿರು ಗಾಳಿಗೆ ಚಲ್ಲಾಪಿಲ್ಲಿಯಾಗಿ ಹಾರಿ ಹೋದವು. ನಾವು ಹಿಡಿಯೋಕೆ  ಮೇಲೆ ಕೆಳಗೆ ಬಿದ್ದು ಬಹಳ ಪ್ರಯತ್ನ ಮಾಡಿದೆವು ಸಾಹುಕಾರರೇ, ಆದರೆ ಒಂದೂ ಕೈಗೆ ಸಿಗಲಿಲ್ಲ! ಕೊನೆಗೆ ಮನೆಯಲ್ಲಿ ಉಳಿದದ್ದು  ಖಾಲಿ ಮೂಟೆ  ಮತ್ತು  ಅದರ ಬಾಯಿಯನ್ನು ಹೊಲಿದ  ದಾರ ಮಾತ್ರ .” ಎಂದು ರೋಷದಿಂದ ಉತ್ತರಿಸಿದ ಮುಂದೆ ಕೂತ ಅಜ್ಜಿಯ ಮುದ್ದಿನ  ‘ಯಂಗ್ ಮೊಮ್ಮಗ ಕಂ  ರೆಬೆಲ್ ‘ ಯುವಕ.

”  ಅಯ್ಯೋ…ಅಯ್ಯಯ್ಯೋ… ಎಂತಹ ತಪ್ಪಾಯಿತು. ನೀವು  ಮೂಟೆಯನ್ನು ಬಿಚ್ಚುವುದರಲ್ಲಿ ಏನೋ ವ್ಯತ್ಯಾಸವಾಗಿರಬೇಕು…ಇರಲಿ… ಹೋಗಲಿ ಬಿಡಿ…ಅದು ಹತ್ತು ವರ್ಷ  ಹಿಂದಿನ ಹಳೆಯ ಕಥೆ… ಮೊನ್ನೆ  ಐದು ವರ್ಷದ ಕೆಳಗೆ  ಬಂದಾಗ ಎಲ್ಲರಿಗೂ ಇನ್ನೊಂದು ಕೊಟ್ಟು ಹೋಗಿದ್ದೇನೆಲ್ಲ… ಅದು ಏನು ಅಂತ  ನೆನಪಿದೆ ತಾನೇ? ”  ಎಂದು ಪ್ರಶ್ನಿಸಿದ ಸಾಹುಕಾರ ಗುಂಡಣ್ಣ ನೆರೆದ ಸಭಿಕರನ್ನು ಉದ್ದೇಶಿಸಿ…

ಮುಂದಿನ ಸಾಲಲ್ಲಿ ಕೂತ ಬಸಾಟೆಪ್ಪ “ಸಾಹುಕಾರರೇ ..ಆಗ ನೀವು ಕೊಟ್ಟು ಹೋಗಿದ್ದು ಹೋಳಿಗೆಗಳು  ತುಂಬಿದ  ಗಂಟು ಮತ್ತು ತುಪ್ಪದ ಪಾಕೆಟ್.ಹೌದಲ್ಲವೇ? ” ಎಂದ ತುಂಬಾ ಉತ್ಸಾಹದ ಧ್ವನಿಯಲ್ಲಿ.

” ಬಾಯಲ್ಲಿನ ಎಲ್ಲ ಹಲ್ಲುಗಳು ಬಿದ್ದು ಬೊಚ್ಚು ಬಾಯಿಯಾಗಿದ್ದರೂ ಎಷ್ಟು ಚೆನ್ನಾಗಿ ನೆನಪಿಟ್ಟು ಕೊಂಡಿರುವೆ ಬಸಾಟೆಪ್ಪ ನೀನು…ಹೋಳಿಗೆ ರುಚಿ ಅಂದರೆ ಹಾಗೇ ಇರುತ್ತದೆ ಮತ್ತೆ! ಜೊತೆಗೆ  ‘ ಅಣ್ಣಿಗೇರಿ ತುಪ್ಪ ‘  ಸೇರಿದರೆ ಅದರ ಖದರ್ರೇ ಬೇರೆ…ಹೋಳಿಗೆ ತುಪ್ಪ  ತಿಂದ ಮೇಲೆ ನಿಮ್ಮ ಕಷ್ಟ – ಸಂಕಷ್ಟಗಳು ಎಲ್ಲ ಅಡ್ರೆಸ್  ಇಲ್ಲದಂತೆ ಮಾಯವಾಗಿರಬೇಕು ಇಲ್ಲಾ ಹೋಳಿಗೆ ಜೊತೆಗೆ ನಿಮ್ಮ ಹೊಟ್ಟೆಯಲ್ಲಿ ಅವೆಲ್ಲಾ  ಜೀರ್ಣವಾಗಿರಬೇಕು… ಹೌದಲ್ಲಾ.. ” ಎಂದ ಸಾಹುಕಾರ ಗುಂಡಣ್ಣ  ಮುಗುಳು ನಗೆ  ಸೂಸುತ್ತಾ.

” ಅಡ್ರೆಸ್ ಸಿಗದಂತೆ ಮಾಯವಾಗಿದ್ದು ನಮ್ಮ  ಕಷ್ಟಗಳು ಅಲ್ಲ.ಬದಲಿಗೆ ನೀವು ದಯಪಾಲಿಸಿದ ಹೋಳಿಗೆಗಳು ಮತ್ತು ತುಪ್ಪ ಸಾಹುಕಾರರೇ…” ಎಂದು ಮೂರನೆಯ  ಸಾಲಿನಲ್ಲಿ ನಿಂತ ಯುವಕನೊಬ್ಬ ವ್ಯಂಗ್ಯವಾಗಿ   ಜೋರಾಗಿ ಕೂಗಿದ.

” ಅಯ್ಯೋ! ಅಯ್ಯಯ್ಯೋ!! ಎಲ್ಲೋ ಎಡವಟ್ಟು ಆದಂತಿದೆ. ನಾನು ಮೂಟೆಯಲ್ಲಿ ತುಂಬಿಸಿಟ್ಟ ಆಶ್ವಾಸನೆಗಳಿಂದ ಅಥವಾ ಹೋಳಿಗೆ, ಅಣ್ಣಿಗೇರಿ ತುಪ್ಪದಿಂದ ನಿಮ್ಮ ಬಡತನ ನಿರ್ಮೂಲನೆ ಆಗೋದು ಇರಲಿ  ಸ್ವಲ್ಪ  ಸಹಾ  ಕಡಿಮೆ ಆಗಿಲ್ಲ ಎಂದರೆ ನನಗೆ ತುಂಬಾ ಬೇಸರವಾಗುತ್ತಿದೆ. ಜೊತೆಗೆ ದುಃಖವೂ ಆಗುತ್ತಿದೆ… ನೀವೆಲ್ಲ ನನ್ನ  ಒಡ ಹುಟ್ಟಿದವರು. ಸ್ವಂತ ( ಬಾಡಿಗೆ ಅಲ್ಲ! ) ಕುಟುಂಬದ ಸದಸ್ಯರು ಇದ್ದಂತೆ!. ಈ ಸಲ ಹೊಸ ತರಹದ್ದು… ಎಂದೂ ನೀವು ಕಾಣದ್ದು…ನಿಮ್ಮ ಮನೆ ಮನೆಗೆ ಹೊಸ ಬಗೆಯ  ದೀಪವನ್ನು ತಲುಪಿಸುತ್ತೇನೆ .” ಎಂದ ಸಾಹುಕಾರ ಗುಂಡಣ್ಣ ತಲೆ ಮೇಲೆ ಹಾಕಿದ್ದ  ಬಿಳಿ ಖಾದಿ ಟೋಪಿಯನ್ನು ಮೇಲೆ ಕೆಳಗೆ ಆಡಿಸುತ್ತಾ…

” ಅಂದರೆ ಎಣ್ಣೆ ಹಾಕದ, ಬತ್ತಿ ಇಲ್ಲದೆ  ಬೆಳಗದ ದೀಪ ಕೊಟ್ಟು ನಮ್ಮನ್ನು  ಯಾಮಾರಿಸಬೇಕೆಂದು ಅಂದುಕೊಂಡೀರಾ ಸಾಹುಕಾರರೇ…”  ಎಂದ ಮುಂದೆ ಕುಳಿತ ‘ ಚಾಲಾಕಿ ‘ ಮುದುಕ ಬಸಾಟೆಪ್ಪ.

” ಇದು ಮಾಮೂಲಿ ದೀಪ ಅಲ್ಲ ಬಸಾಟೆಪ್ಪ, ಒಂದು ತರಹದ ಅಲ್ಲಾವುದ್ದಿನ್ ದೀಪದ ಟೈಪ್.ಇದಕ್ಕೆ ಎಣ್ಣೆ ಅವಶ್ಯಕತೆ ಇಲ್ಲ. ಬತ್ತಿ ಅಂತೂ ಮೊದಲೇ  ಬೇಕಾಗಿಲ್ಲ.ನೀವು ಯಾವುದಾದರೂ ತೆಂಗಿನ ಚಿಪ್ಪು ಅಥವಾ ಪ್ಲಾಸ್ಟಿಕ್ ವೈರಿನ ತಂತಿ  ಕೊನೆಗೆ ಪೆನ್ನಿನ ತುದಿಯಿಂದ ಮುಟ್ಟಿಸಿದರೆ ಸಾಕು ದೀಪ ಭಗ್ಗನೆ ಹತ್ತಿಕೊಳ್ಳುತ್ತದೆ. ನಂತರ  ಅದರಿಂದ  ಭೂತ ಕೂಡಲೇ  ಹೊರ ಬರುತ್ತದೆ.  ಅದು ಕ್ಷಣ ಮಾತ್ರದಲ್ಲಿ ನಿಮ್ಮಎಲ್ಲ  ಸಂಕಷ್ಟಗಳನ್ನು  ಪರಿಹರಿಸುತ್ತದ .ನನ್ನ ಮಾತನ್ನು ನಂಬಿ. ಹೇಗಿದ್ದರೂ ಮತ್ತೈದು ವರ್ಷದ ಬಳಿಕ ಮತ್ತೆ ನಿಮ್ಮಲ್ಲಿಗೆ ಬಂದೇ ಬರುತ್ತೇನಲ್ಲ.ಆಗ ಹೇಳಿ ನಾನು ಹೇಳಿದ್ದು ಸುಳ್ಳೋ – ನಿಜಾನೋ ಅಂತ… ” ಎಂದ ಸಾಹುಕಾರ ಗುಂಡಣ್ಣ ಪ್ರೀತಿ ಬೆರೆತ ಮೃದು ಮಧುರ ಧ್ವನಿಯಲ್ಲಿ.

ನಂತರ ಮನೆಗೊಂದರಂತೆ ಮಾಯಾ  ದೀಪವನ್ನು ಹಂಚಿದರು  ಸಾಹುಕಾರ ಗುಂಡಣ್ಣನ  ಹಿಂಬಾಲಕರು.  ಯಾವ ಯಾವ ಉಚಿತ ಕೊಡುಗೆಗಳು  ನಿಮಗೆ  ಬೇಕೆನಿಸಿದಾಗ  ಭೂತ   ಎಲ್ಲರಿಗೂ ಹೇಗೆ ಕರಾರುವಾಕ್ಕಾಗಿ ತಲುಪಿಸುತ್ತದೆ ಎಂದು  ಪ್ರಾತ್ಯಕ್ಷಿಕವಾಗಿ  ನೆರೆದ ಎಲ್ಲ ಸಭಿಕರ  ಮುಂದೆ ( ಜಾದೂ ಮಾಡಿ! ) ತೋರಿಸಿದ ಗುಂಡಣ್ಣನ ‘ ತಾಂತ್ರಿಕ ತಂಡ ‘  ನಂತರ ನಿಧಾನವಾಗಿ ಸಾಹುಕಾರ   ಗುಂಡಣ್ಣನನ್ನು ಹಿಂಬಾಲಿಸಿತು. 

ಒಂದೆರಡು ಕ್ಷಣಗಳಲ್ಲಿ ಅಲ್ಲಿ ನೆರೆದಿದ್ದ ಸಾಹುಕಾರ ಗುಂಡಣ್ಣನ  ತಂಡ  ಕಣ್ಣಿಗೆ ಕಾಣದಂತೆ ಮಾಯವಾಯಿತು. ಹತ್ತು ವರ್ಷದ  ಹಿಂದೆ ಸ್ವೀಕರಿಸಿದ ಭರ್ಜರಿ ಆಶ್ವಾಸನೆಗಳ ಮೂಟೆ…ಐದು ವರ್ಷದ ಹಿಂದೆ  ತಿಂದ  ಹೋಳಿಗೆ ಮತ್ತು ಅಣ್ಣಿಗೇರಿ ತುಪ್ಪ ತಮ್ಮ ಕಷ್ಟಗಳನ್ನು ನಿವಾರಿಸಲಿಲ್ಲ…ಅಂತಹ ನಿರಾಸೆ  ಮತ್ತೆ ಈ ಸಲ ಆಗುವದಿಲ್ಲ  ಎನ್ನುವ   ವಿಶ್ವಾಸದಿಂದ ದೀಪವನ್ನು ತಂದು  ಮನೆಯ ಹಾಲಿನಲ್ಲಿ ಇಟ್ಟರು  ಹಳ್ಳಿ ಜನರು.  ತಮಗೆ ಯಾವ ಉಚಿತ  ಕೊಡುಗೆ ಬೇಕೋ ಅದನ್ನು ಕೇಳಲು  ದೀಪವನ್ನು ಬೆಳಗಿದರು. ಎಲ್ಲರ ಮನೆಯಲ್ಲಿಯೂ ಭೂತ ಪ್ರತ್ಯಕ್ಷವಾಯಿತು.  ” ಸಾಹುಕಾರ ಗುಂಡಣ್ಣ  ( ದೇವರು ) ವರ  ಕೊಟ್ಟರೂ ಅಲ್ಲಾವುದ್ದೀನ್ ( ಪೂಜಾರಿ ) ವರ ಕೊಡಲಿಲ್ಲ! “.  ಕಾರಣ  ದೀಪದಿಂದ ಹೊರ ಬಂದದ್ದು  ಅರೇಬಿಕ್ ಭಾಷೆಯ ಭೂತ…ಅದಕ್ಕೆ ಕನ್ನಡ ಭಾಷೆ ಇರಲಿ ಬೇರೆ ಭಾರತ ಭಾಷೆಯೂ ಗೊತ್ತಿಲ್ಲ ಪಾಪ!…ತಾತ ಮುತ್ತಾತನ  ಕಾಲದ ಭೂತ ಭಾಷೆ ಗೊತ್ತಿದ್ದ ಸರದಾರ ಆ ಊರಲ್ಲೇ ಅಲ್ಲ…ಅಂತಹವನು ಈಗ ಇಡೀ ಭೂ ಮಂಡಲದಲ್ಲೇ ಇಲ್ಲ!

‘ ನಂಬಿಕೆಯೇ ದೇವರು ‘  ಎನ್ನುವ  ಪ್ರಾಂಜಲ ಮನೋಭಾವದ  ಮತದಾರ  ಮೊದಲು  ಮೂಟೆಯಲ್ಲಿ ತುಂಬಿಸಿ ಕೊಟ್ಟ  ಆಶ್ವಾಸನೆಗಳನ್ನು ನಂಬಿದ. ಬಳಿಕ ಹೋಳಿಗೆ ತುಪ್ಪದ ಆಸೆಗೆ  ಬಿದ್ದ. ಈಗ ಮತ್ತೆ ಅಲ್ಲಾವುದ್ದೀನ್ ದೀಪ! .ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವ ದೇಶದಲ್ಲಿ   ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ  ಇಂತಹ ‘ ಮತದಾನ  ಸಂಭ್ರಮ ಸಡಗರದ ಜಾತ್ರೆಗಳಿಗೆ ‘  ಕೊನೆಯೇ ಇಲ್ಲ!

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

15 thoughts on “ಅಯ್ಯೋ! ಅಯ್ಯಯ್ಯೋ!!”

  1. JANARDHANRAO KULKARNI

    ಚುನಾವಣೆಯ ಸಂದರ್ಭದಲ್ಲಿ ಅಯ್ಯೋ ಅಯ್ಯಯ್ಯೋ ವಿಡಂಬನಾತ್ಮಕ ಬರಹ ಚೆನ್ನಾಗಿದೆ .

  2. ಮ.ಮೋ.ರಾವ್ ರಾಯಚೂರು

    ಜನರಿಗೆ ತಿಳಿಯದ ಭಾಷೆಯಲ್ಲಿ ಅರ್ಥವಾಗದ ಲೆಕ್ಕಾಚಾರ ಹೇಳುವ ಸಾಹುಕಾರ ಗುಂಡಣ್ಣನಂಥ ರಾಜಕಾರಣಿಗಳೇ ತುಂಬಿದ್ದಾರೆ. ಅವರನ್ನು ವಿಂಗಡಿಸುವುದೇ ಕಷ್ಟ. ನಾಗರಿಕರ ಸ್ಥಿತಿ ಅಯ್ಯೋ ಅಯ್ಯಯ್ಯೋ! ಅಭಿನಂದನೆಗಳು.

  3. ಶೇಖರಗೌಡ ವೀ ಸರನಾಡಗೌಡರ್

    ಪ್ರಸ್ತುತ ರಾಜಕೀಯ ವ್ಯಕ್ತಿಗಳ ಡೊಂಬರಾಟ, ಪೊಳ್ಳು ಆಶ್ವಾಸನೆಗಳನ್ನು ಸೊಗಸಾಗಿ ಚಿತ್ರಿಸಿದ್ದೀರಿ. ವಿಡಂಬನೆ ಅರ್ಥಪೂರ್ಣ.
    ಅಭಿನಂದನೆಗಳು.

  4. ಧರ್ಮಾನಂದ ಶಿರ್ವ

    ಅಯ್ಯೋ.. ಅಯ್ಯಯ್ಯೋ… ವಿಡಂಬನೆ ಚೆನ್ನಾಗಿದೆ. ಕೊನೆಯ ಅಲ್ಲಾವುದ್ದೀನ್ ದೀಪದ ಭಾಷೆ ಅರಿಯದ ಪಂಚ್ ಸಕತ್ತಾಗಿದೆ. ಅಂತೂ ರಾಜಕೀಯ ವ್ಯಕ್ತಿಗಳ ಆಶ್ವಾಸನೆಗಳು ಕೇವಲ ತುಟಿಗಳಲ್ಲಿ ಮಾತ್ರ ಎಂಬುದನ್ನು ಬರಹ ಸಾಬೀತುಪಡಿಸಿದೆ. ಅಭಿನಂದನೆಗಳು.

  5. ಸುಗೀರಪ್ಪ ಸೊಂಡೂರು

    ಲಘು ಬರಹದ ಮೂಲಕ ರಾಜಕಾರಣಿಗಳ ಚುನಾವಣಾ ಆಶ್ವಾಸನೆಗಳ ಬಗ್ಗೆ ವಿಡಂಬನಾತ್ಮಕವಾಗಿ ಹೇಳಿದ್ದೀರಿ. ಆದರೂ ಜನರು ಇನ್ನೂ ಈ ಆಶ್ವಾಸನೆಗಳನ್ನು ನಂಬಿ ಮತದಾನ ಮಾಡುವುದು ದುರಂತ

  6. MURALIDAHR JOSHI , GANGAVATHI

    ಪ್ರಸ್ತುತ ಬರಹದ ವಿಡಂಬನೆ ಅದ್ಭುತ. ನಿಮ್ಮ ವಿಡಂಬನೆ ಬರಹ ಉತ್ತುಂಗಕ್ಕೇರಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter