ಮುಂಬಯಿ ಕನ್ನಡಿಗರ ಹೆಮ್ಮೆಯ ಸಂಸ್ಥೆ ‘ಬಿಎಸ್ ಕೆ ಬಿ’ ಶತಮಾನದ ಹೊಸ್ತಿಲಲ್ಲಿ 


ಯಾರಾದರೂ ವಿಶೇಷವಾದ, ಅಸಾಮಾನ್ಯವಾದ ಸಾಧನೆಯನ್ನು ಮಾಡಿದಾಗ ಭಗೀರಥ ಪ್ರಯತ್ನ, ಹರಸಾಹಸ ಎಂದೆಲ್ಲ ನಾವು ಕರೆದು ಕೊಂಡಾಡುವುದುಂಟು. ವೃತ್ತಿಯಲ್ಲಿ ಹೆಸರಾಂತ ವೈದ್ಯರಾಗಿದ್ದುಕೊಂಡು ದೂರದ ಮುಂಬೈಯಲ್ಲಿ ಸುಮಾರು 55 ಕೋಟಿ ರೂಪಾಯಿ ವೆಚ್ಚದಲ್ಲಿ ಗೋಕುಲಧಾಮ ತಲೆಯೆತ್ತಿ ನಿಲ್ಲುವಂತೆ ಮಾಡಿದ ಡಾ.ಸುರೇಶ್ ರಾವ್ ಅವರ ಸಾಹಸ ಕಥನ ಹಾಗೂ ಅವರು ನೇತೃತ್ವ ವಹಿಸಿರುವ ಶತಮಾನದ ಸಂಭ್ರಮದಲ್ಲಿರುವ ಬಿಎಸ್ ಕೆಬಿಯ ಸಾಧನೆಯ ಕಿರು ನೋಟ ಇಲ್ಲಿದೆ.


ಸಂಘಟನೆಯಲ್ಲಿ ಮುಂಬೈ ಕನ್ನಡಿಗರದು ಎತ್ತಿದ ಕೈ. ಮುಂಬೈಯಲ್ಲಿರುವಷ್ಟು ಕನ್ನಡ ಸಂಘ ಸಂಸ್ಥೆಗಳು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ತಾಣವೆಂದರೆ ಮುಂಬೈ ಮಹಾನಗರ. ಇಂದಿಗೂ ಮುಂಬೈಯಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ತುಳು-ಕನ್ನಡಿಗರು ನೆಲೆಸಿ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಾ ಬಂದಿರುವುದು ಉಲ್ಲೇಖನೀಯ ಅಂಶ. ಈ ಮಾಯಾನಗರಿಯಲ್ಲಿ ಇವತ್ತಿಗೂ 150ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕನ್ನಡದ ತೇರನೆಳೆಯುವ ಕಾಯಕದಲ್ಲಿ ನಿರತವಾಗಿರುವುದು ಸಾಮಾನ್ಯದ ಸಂಗತಿಯಲ್ಲ.

ಮುಂಬೈನ ಮುಂಚೂಣಿಯಲ್ಲಿರುವ ತುಳು-ಕನ್ನಡಿಗರ ಸಂಘ ಸಂಸ್ಥೆಗಳಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಸಹ ಒಂದು. 1925ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಈಗ ಶತಮಾನದ ಹೊಸ್ತಿಲಲ್ಲಿದೆ. ‘ಗೋಕುಲ’ ಎಂದೇ ಜನಪ್ರಿಯವಾಗಿರುವ ಬಿಎಸ್‌ ಕೆಬಿ ಅಸೋಸಿಯೇಶನ್  ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ನವನಿರ್ಮಾಣಗೊಂಡು ಕನ್ನಡಿಗರ ಆಕರ್ಷಣೀಯ ಕೇಂದ್ರವಾಗಿ ಕಂಗೊಳಿಸುತ್ತಿದೆ. ಈ ಗೋಕುಲದ ನವನಿರ್ಮಾಣದ ರೂವಾರಿ ವೈದ್ಯಭೂಷಣ ಡಾ. ಸುರೇಶ್ ರಾವ್ ಎಂಬುದು ಅಭಿಮಾನದ ಸಂಗತಿ.

 ಮುಂಬೈಯ ಹೃದಯಭಾಗದಲ್ಲಿರುವ ಸಯನ್‌ನಲ್ಲಿ ತನ್ನದೇ ಆದ ಸ್ವಂತ ಜಾಗವನ್ನು ಹೊಂದಿ ಇದೀಗ ಅತ್ಯಾಧುನಿಕ ರೀತಿಯಲ್ಲಿ ವಾಸ್ತುವಿನ್ಯಾಸದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡಿರುವ ಬಿಎಸ್‌ಕೆಬಿಎಯ ಒಳಗೆ ಬಹು ಸುಂದರವಾದ ಗೋಪಾಲಕೃಷ್ಣನ ದೇವಾಲಯ ತಲೆಯೆತ್ತಿ ಗೋಕುಲಧಾಮವಾಗಿ ಜನಪ್ರಿಯವಾಗಿದೆ.

‘ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸು…’ಎಂಬುದಾಗಿ ಕನ್ನಡ ನಾಡಿನ ಪ್ರಾಚೀನ ಶಾಸನ ಕವಿಯೊಬ್ಬ ಹೇಳಿದ್ದು ಎಲ್ಲರಿಗೂ ತಿಳಿದ ಸಂಗತಿ. ಅದು ಅಂದಿನ ಅಗತ್ಯತೆಯಾಗಿತ್ತು. ಇಂದಿನ ಆದ್ಯತೆ ‘ಆಸ್ಪತ್ರೆಯಂ ಕಟ್ಟಿಸು ಶಾಲೆಯಂ ಮಾಡಿಸು ಸಂಘ ಸಂಸ್ಥೆಯನ್ನು ತಲೆಯೆತ್ತುವಂತೆ ಮಾಡು’ ಎಂಬಂತೆ ಕಾಯಾ ವಾಚಾ ಮನಸಾ ಗೋಕುಲ ಭವನ ಹಾಗೂ ಅದರೊಳಗೆ ಭವ್ಯ ಕೃಷ್ಣ ಮಂದಿರ ನಿರ್ಮಾಣಗೊಳ್ಳಲು ಕಾರಣರಾದವರು ಧೀಮಂತ ಕನ್ನಡಿಗ ಕ್ರಿಯಾಶೀಲ ಡಾಕ್ಟರ್ ಸುರೇಶ್ ರಾವ್ ಅವರು. ಏಳು ಮಹಡಿಗಳ ಭವ್ಯ ಗೋಕುಲ ನವನಿರ್ಮಾಣ ಸಂಕುಲ ಮುಂಬೈ ಜನತೆಯನ್ನು ಕೈಬೀಸಿ ಕರೆಯುವಲ್ಲಿ ಯಶಸ್ವಿಯಾಗಿದೆ. 225 ಆಸನಗಳುಳ್ಳ ಸುಸಜ್ಜಿತ ಹವಾ ನಿಯಂತ್ರಿತ ಸಭಾಗೃಹ, ಎರಡು ದೊಡ್ಡ ಸಭಾಂಗಣ, ಆಧುನಿಕ ಸೌಕರ್ಯಗಳುಳ್ಳ ಮೂರು ಪಾಕ ಶಾಲೆ, ಸುಸಜ್ಜಿತ ವಾಚನಾಲಯ, ಮನರಂಜನೆಗಾಗಿ ಒಳಾಂಗಣ ಕ್ರೀಡಾಂಗಣ ಹೀಗೆ ಭವ್ಯ ಗೋಕುಲ ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿದೆ. ಮೊಗವೀರ ಮಂಡಳಿ, ಬಿಲ್ಲವರ ಭವನ, ಬಂಟರ ಭವನದಂತೆ ಈಗ ಗೋಕುಲ ಮುಂಬೈ ಕನ್ನಡಿಗರ ಹೆಮ್ಮೆಯ ಕೇಂದ್ರವಾಗಿ ಹೊರಹೊಮ್ಮಿದೆ.

ಮಾಧ್ಯಮಿಕ ಶಿಕ್ಷಣವನ್ನು ಊರಲ್ಲಿ ಮುಗಿಸಿ ಹೆಚ್ಚಿನ ಕಲಿಕೆಗೆ ಮುಂಬೈ ಸೇರಿದ ಸುರೇಶ್ ರಾವ್ ಅವರು ತಮ್ಮ ಸತತ ಪರಿಶ್ರಮದಿಂದ ವೈದ್ಯಕೀಯ ಶಿಕ್ಷಣ ಪಡೆದು ‘ಸಂಜೀವನಿ’ ಆಸ್ಪತ್ರೆಯನ್ನು ಸ್ಥಾಪಿಸಿ ಹೆಸರು ಮಾಡಿದರು. ಅಂಧೇರಿಯಲ್ಲಿ ಇವತ್ತು ಸಂಜೀವನಿ ಆಸ್ಪತ್ರೆ ಐವತ್ತು ಹಾಸಿಗೆಗಳುಳ್ಳ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಾಗಿ ಮಧ್ಯಮ, ಕೆಳಮಧ್ಯಮ ವರ್ಗದ ಆಶಾಕಿರಣವಾಗಿದೆ. ಇಲ್ಲೆಲ್ಲ ಡಾ. ಸುರೇಶ್ ರಾವ್ ಅವರ ಸಾಹಸ ಸಾಧನೆ, ಶ್ರಮ, ಬದ್ಧತೆ, ದೂರದೃಷ್ಟಿ ಕೆಲಸ ಮಾಡಿದೆ.

ಡಾ.ಸುರೇಶರಾಯರು ಬಾಳಿನೊಂದಿಗೆ ಗುದ್ದಾಡಿ ಮೇಲೆ ಬಂದ ಮಹಾನ್ ಚೇತನ. ಅವರಿಗೆ ದಣಿವೆಂಬುದಿಲ್ಲ. ದಕ್ಷತೆ, ಪ್ರತಿಭೆ, ಸರಳತೆ, ಕ್ರಿಯಾಶೀಲತೆ ರಾವ್ ಅವರ ವ್ಯಕ್ತಿತ್ವದ ನಾಲ್ಕು ಮುಖಗಳು. ವೈದ್ಯರಾಗಿದ್ದುಕೊಂಡು ಸಮುದಾಯದ ಹಿತಕ್ಕೆಡಾ.ರಾವ್ ಅವರು ಮಾಡಿರುವ ಕಾರ್ಯ ಅಮೂಲ್ಯವಾದುದು. ತಮ್ಮ ಹುಟ್ಟೂರಾದ ಕಟೀನಲ್ಲಿ ಬೃಹತ್ ಆಸ್ಪತ್ರೆಯನ್ನು ಕಟ್ಟಿಸಿ ಸುತ್ತಲಿನ ಬಡಜನರಿಗೆ ಉಚಿತ ಸುಸ್ತೂಷೆ ಸಿಗುವಂತೆ ಮಾಡಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸಮುದಾಯದ ಹಿತಕ್ಕಾಗಿ ನಾಡಿನ ಏಳಿಗೆಗಾಗಿ ಡಾ. ಸುರೇಶ್ ರಾವ್ ಅವರು ಅಹರ್ನಿಶಿ ಶ್ರಮಿಸುತ್ತಾ ಬಂದಿದ್ದಾರೆ.ನಿರ್ದಿಷ್ಟ ಗುರಿಗೆ ಬದ್ಧರಾಗಿ ಪ್ರಾಮಾಣಿಕವಾಗಿ ಕಾರ್ಯನಿಷ್ಠರಾದವರನ್ನು ಕೀರ್ತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ.ಡಾ. ರಾವ್ ಅವರ ಸಾಧನೆಯನ್ನು ಗಮನಿಸಿ ಕರ್ನಾಟಕ ಸರಕಾರ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿರುವುದು ಉಲ್ಲೇಖನೀಯ ಅಂಶ.

ಡಾ. ಸುರೇಶ್ ರಾವ್ ಮುಂಬೈಯಲ್ಲಿ ಬಲು ಚಿರಪರಿಚಿತ ಹೆಸರು. ಯಾರಲ್ಲೂ ತಾರತಮ್ಯ ಮಾಡದ ಅಪರೂಪದ ಸ್ನೇಹ ಸೌಜನ್ಯಮೂರ್ತಿ, ವೈದ್ಯಕೀಯ ಶಿಕ್ಷಣ, ಸಮಾಜಸೇವೆ ಹೀಗೆ ಎಲ್ಲವೂ ರಾವ್ ಅವರ ಆಸಕ್ತಿಯ ಕ್ಷೇತ್ರಗಳು, ತಾವೊಬ್ಬ ವೈದ್ಯ ಶ್ರೇಷ್ಠ ಎಂಬ ಅಹಂಕಾರ ಇನಿತೂ ಅವರಿಗಿಲ್ಲ. ಯಾವ ಬಿಂಕ, ಬಿಗುಮಾನವಿಲ್ಲದೆ ಅವರು ಎಲ್ಲರೊಂದಿಗೆ ಬೆರೆಯಬಲ್ಲ ವೈದ್ಯೋತ್ತಮ. ಸುರೇಶ್ ರಾವ್ ವ್ಯಕ್ತಿಯಲ್ಲ; ಮಹಾಶಕ್ತಿ ಎಂಬುದನ್ನು ಅವರು ಗೋಕುಲ ನವನಿರ್ಮಾಣದ ಮೂಲಕ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಸಂಕಲ್ಪವಿದ್ದರೆ ಹಣಕ್ಕೇನೂ ಅಡ್ಡಿ ಆತಂಕ ಎದುರಾಗದು ಎಂಬುದನ್ನು ರುಜುವಾತುಪಡಿಸಿದ್ದಾರೆ. ಸಮುದಾಯದ ಹಿತಕ್ಕೆ ನಾಡಿನ ಏಳಿಗೆಗೆ ಕೈಜೋಡಿಸುವವರು, ಸಮಾಜಸೇವೆ ಮಾಡುವವರು ಡಾ. ಸುರೇಶ್ ರಾವ್ ಅವರನ್ನು ನೋಡಿ ಕಲಿಯಬೇಕಾಗಿದೆ. ನವನಿರಾಣಗೊಂಡ ಗೋಕುಲ ಕೇವಲ ಒಂದು ದೇವಾಲಯವಷ್ಟೇ ಅಲ್ಲ, ಅದೊಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಬೇಕು ಎಂಬ ಹಂಬಲ ಡಾ. ಸುರೇಶ್ ರಾವ್ ಅವರದು. ಐದಾರು ಲಕ್ಷ ರೂಪಾಯಿ ಖರ್ಚು ಮಾಡಿ

‘ಶ್ರೀ ಕೃಷ್ಣ ದರ್ಶನ’ ಎಂಬ ಬೃಹತ್ ಗ್ರಂಥವೊಂದನ್ನು ಹೊರತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕನ್ನಡವೆಂದರೆ ರಾವ್ ಅವರಿಗೆ ವಿಶೇಷವಾದ ಅಭಿಮಾನ ಅವರದು ಬಹುಭಾಷಿಕ ಸಂವೇದನೆ. ಕಟೀಲಿನಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ತೆರೆದ ಹೆಗ್ಗಳಿಕೆ ಅವರದು. ಡಾ. ರಾವ್ ಅವರದು ಹಿತಮಿತ ಮೃದು ವಚನ. ಯಾರ ಮನಸ್ಪೂ ನೋಯಿಸದಂತಹ ಅವರ ಮಾತು. ಅವರ ಸೌಮ್ಯತೆಯ ಹಿಂದೆ ಇರುವ ದೃಢ ಸಂಕಲ್ಪ ದೊಡ್ಡದು. ಈ ವೈದ್ಯರು ಸಂಗೀತಪ್ರಿಯರು, ಯಕ್ಷಗಾನ ಕುಣಿತಕ್ಕೂ ಸೈ. ರಾವ್ ಅವರು ಮುಂಬೈಗೆ ವಲಸೆ ಬಂದದ್ದು ಒಂದು ಆಕಸ್ಮಿಕ. ಈ ಕರ್ಮಭೂಮಿಯಲ್ಲಿ ಅವರು ಇಂದು ಮನೆಮಾತಾಗಿರುವುದು ಸಾಮಾನ್ಯದ ಮಾತಲ್ಲ. ಇಂಥವರ ಸಂತತಿ ಸಾವಿರವಾಗಲಿ ಎಂಬುದು ಎಲ್ಲರ ಹಾರೈಕೆ.

ಬಿಎಸ್ ಕೆ ಬಿ ಅಸೋಸಿಯೇಷನನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಅವರು ಕಾರ್ಯನಿರತರಾಗಿದ್ದಾರೆ. ಶತಮಾನದ ಸಂಭ್ರಮದಲ್ಲಿರುವ ಗೋಕುಲ ಮುಂಬೈನ ತುಳು ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿ ಇನ್ನಷ್ಟು ಬೆಳಗಲಿ ಎಂದು ಈ ಸಂದರ್ಭದಲ್ಲಿ ಹಾರೈಸೋಣ.

  • ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮುಂಬಯಿ ಕನ್ನಡಿಗರ ಹೆಮ್ಮೆಯ ಸಂಸ್ಥೆ ‘ಬಿಎಸ್ ಕೆ ಬಿ’ ಶತಮಾನದ ಹೊಸ್ತಿಲಲ್ಲಿ ”

  1. Chintamani Sabhahit

    ಮುಂಬಯಿ ಶಹರದ ಖಾಸೀಯತ್ತೇ ಹಾಗೆ!

    ವಲಸೆ ಹೋದ ಕನ್ನಡಿಗರಿಗಂತೂ ಮುಂಬಯಿ ಕರ್ಮ ಭೂಮಿಯೇ, ‘ಸಂಜೀವಿನಿ’. ಅದರಲ್ಲೂ, ನಿಜವಾದ ಮಾನವೀಯ ಉತ್ಕಟ ಮಹತ್ವಾಕಾಂಕ್ಷೆಯುಳ್ಳ ಡಾ. ಸುರೇಶ ರಾವ್ ರಂಥ ವ್ಯಕ್ತಿಗಳಿಗೆ, ಮುಂಬಯಿ ನಿಸ್ಸಂದೇಹವಾಗಿಯೂ, ಅತ್ಯಂತ ಅನುಕೂಲಕರ, ಸೌಹಾರ್ದಯುತ ಹಾಗೂ ಬೆಂಬಲಿಸುವ ಫಲಪ್ರದ ಭೂಮಿ!

    ಅಚಲ ನಿಷ್ಠೆಯಿದ್ದ ಯಾರಿಗೂ, ಮುಂಬಯಿ ಬದುಕಿನಲ್ಲಿ ‘ಚಿಂತೆ ಮಾಡಲೂ ಸಮಯವಿಲ್ಲ’ದಷ್ಟು ಧನಾತ್ಮಕ ವಾತಾವರಣ. ಬೈಬಲ್ಲಿನ ಎರಡು ಮಾತು ಅದೆಷ್ಟು ಸರಳವೆನ್ನುವ ಸಹಜವಾಗಿಸುವ ಪ್ರೇರಣೆ : ‘Seek, you shall find it.’ ‘It is there, just go and take it.’ ಫಲಶೃತಿಯಲ್ಲಿ ನಿರಾಸೆ ಅಂದರೆ, ಪ್ರಯತ್ನದಲ್ಲಿ ಕೊರತೆ ಎಂದಷ್ಟೇ ಅರ್ಥ; ಎದುರಿಗಿರುವ ಅವಕಾಶಗಳಿಗೆ ಅದು ಅನ್ವಯವಲ್ಲ.

    ಮುಂಬಯಿ ಕನ್ನಡದ ಬೆಳವಣಿಗೆಯಲ್ಲಿ ತುಳು ಕನ್ನಡಿಗರ ಉತ್ಸಾಹ, ಪರಿಶ್ರಮ, ನಿಷ್ಠೆ, ತ್ಯಾಗ ಹಾಗೂ ಯೋಗದಾನ ಅಪ್ರತಿಮ ಅನ್ನುವುದಕ್ಕೆ ಎರಡನೆಯ ಅಭಿಪ್ರಾಯವೇ ಇಲ್ಲ. ಸಹಕಾರಕ್ಕೆ ಎಂದೆಂದಿಗೂ ‘ಸಕಾರ’ ಅವರದು!

    ಡಾ. ಸುರೇಶ ರಾವ್ ರ ಈ ಕಿರು ಪರಿಚಯ, ಪ್ರೊ. ಜಿ. ಏನ್. ಉಪಾಧ್ಯರಿಂದ ಪ್ರಮಾಣಬಧ್ಧವಾಗಿ ಸಕಾಲಿಕ, ಸುವಿದಿತ ಹಾಗೂ ಸ್ತುತ್ಯ!
    ಅಭಿನಂದನೀಯ ಪ್ರಸ್ತುತಿ!!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter