“ಹಾರ್ನಬಿಲ್ ಹಾರುತಿದೆ ನೋಡಿದಿರಾ?”

(  ಪ್ರವಾಸಾನುಭವ )

ಇತ್ತೀಚೆಗೆ ದಾಂಡೇಲಿಗೆ ಹೋಗಿ ಬರುವ ಅವಕಾಶ ಆಕಸ್ಮಿಕವಾಗಿ ಒದಗಿ ಬಂದಿತು(ಫೆಬ್ರವರಿ ೨೯, ೨೦೨೪, ಗುರುವಾರ).  ಉತ್ತರ ಕನ್ನಡ ಜಿಲ್ಲಾ ಕನ್ನಡ  ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ  ಶ್ರೀ ಬಿ. ಎನ್. ವಾಸರೆಯವರು  ದಾಂಡೇಲಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಬರುವಂತೆ ಆಹ್ವಾನಿಸಿದ್ದರಿಂದ ಈ ಪ್ರಯಾಣ ಕೈಗೊಂಡೆ. ನಾನು ಉ.ಕ. ದವನಾದರೂ ಇನ್ನೂ ದಾಂಡೇಲಿ ನೋಡಿದವನಲ್ಲ! ಬಿ.ಎಸ್.ಎನ್.ಎಲ್. ಉದ್ಯೋಗಿಯಾಗಿ ಮೂವತ್ತೈದು ವರ್ಷಗಳ ಸೇವಾವಧಿಯ ಬಹುಪಾಲು ಕುಟೀಚಕನಾಗಿಯೇ ಕಳೆದಿರುವೆ. 

ದಾಂಡೇಲಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಉಸ್ತಾದ್ ಶ್ರೀ ಕೆ. ಎಲ್. ಜಮಾದಾರ್ ಅವರು.  ರಾಷ್ಟ್ರಾದ್ಯಂತ ಪ್ರಸಿದ್ಧರಾದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ತಬಲಾ ವಾದಕರು. ಬಾಲ್ಯದಲ್ಲಿ ಬಡತನ. ಕೂಲಿ ಮಾಡಿ ಹಣ ಸಂಪಾದಿಸಿ ತಬಲಾ ವಾದನ ಕಲಿತರಂತೆ. ತೊಂಬತ್ತನಾಲ್ಕರ ಹರಯದಲ್ಲಿ ಉತ್ಸಾಹದಿಂದ ಪುಟಿಯುತ್ತಾ ಇಡೀ ದಿನ ಸಮ್ಮೇಳನದಲ್ಲಿ ಪಾಲುಗೊಂಡರು.  ವಯೋವೃದ್ಧ, ಜ್ಞಾನವೃದ್ಧ ಹದ ಹರಯದ  ಹಿರಿಯರೊಂದಿಗೆ ಸಾಕಷ್ಟು  ಹದಿಹರಯದ ವಿದ್ಯಾರ್ಥಿಗಳೂ ಸಭೆಯಲ್ಲಿದ್ದರು. "ಇತ್ತೀಚೆಗೆ ನಗರಗಳಲ್ಲೇ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಕಿರಿಯರು ಕಾಣುತ್ತಿಲ್ಲ. ಇಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ  ನಿಮ್ಮನ್ನು ಕಂಡು  ಸಂತೋಷವಾಗುತ್ತಿದೆ" ಎಂದೆ. ಅವರಿಗಾಗಿ ಪಂಚತಂತ್ರದ ಒಂದು ಕಥೆ ಹೇಳಿದೆ.  ದೇವದತ್ತನೆಂಬ ಬ್ರಾಹ್ಮಣನ ಕಥೆ ಅದು.

 ದೇವದತ್ತನಿಗೆ ಕಥೆಗಳೆಂದರೆ ಪ್ರೀತಿ. ಜೀವಮಾನದ ಗಳಿಕೆಯನ್ನೆಲ್ಲ ಕೊಟ್ಟು ಒಂದು ಕತೆ ಕೇಳುವ ಆಸೆ  ಅವನದು. ಅವನನ್ನು ತಿನ್ನಲು ಬಂದ ಬ್ರಹ್ಮರಾಕ್ಷಸನಿಗೂ ತಾನು ಕತೆ ಕೇಳಿ ಬರುವವರೆಗೆ ತಡೆಯಲು ಕೋರುತ್ತಾನೆ. " ಬದುಕಿನಲ್ಲಿ ಒಮ್ಮೆ ಸಿಕ್ಕವರು ಮತ್ತೊಮ್ಮೆ ಸಿಕ್ಕರೆ ಅವರು ನಮ್ಮ ನೆಂಟರು" ಇದು ದೇವದತ್ತ ಕೇಳಿಬಂದ ಕಥಾಸಾರ. ಈ ಕಥೆ ಕೇಳಲು ಅವನು ತನ್ನ ಜೀವಿತಾದ್ಯಂತ ಸಾವಿರ ವರಾಹ ಸಂಗ್ರಹಿಸಿದ್ದ. ಅದನ್ನು ಪಡೆದು ಉಜ್ಜಯಿನಿಯ ಡಾವರಡಾಕಿನಿ ಹೇಳಿದ ಕಥೆ ಇದು, ಇದಿಷ್ಟೇ. ವಾಪಸು ಬಂದ ಬ್ರಾಹ್ಮಣ ರಾಕ್ಷಸನಿಗೆ ಈ ಕಥೆ ಹೇಳಿದ. ಇದನ್ನು ಕೇಳಿಸಿಕೊಂಡ ರಾಕ್ಷಸ ಅಚ್ಚರಿಯಿಂದ ಬ್ರಾಹ್ಮಣನ ಬಳಿ ಹೇಳುತ್ತಾನೆ: " ಹಾಗಾದರೆ ನಾವಿಬ್ಬರೂ ಈಗ ನೆಂಟರು!". ಮಕ್ಕಳಿಗೆ ಹೇಳಿದೆ: " ಇದು ಸಾಹಿತ್ಯದ ಶಕ್ತಿ.  ಸಾವಿನಿಂದ ಪಾರುಮಾಡಬಲ್ಲ ಶಕ್ತಿಯದು.  ಮಾನವ ದಾನವರನ್ನೂ  ಒಂದು ನೆಲೆಯಲ್ಲಿ ಒಂದುಮಾಡುವ, ದಾನವನನ್ನು ಮಾನವನನ್ನಾಗಿಸುವ ಶಕ್ತಿ ಅದಕ್ಕಿದೆ. ಈ ಸಂದೇಹವಾದಿ ಯುಗದಲ್ಲಿ ರಾಜಕಾರಣಿಗಳೂ, ಧರ್ಮಪೀಠಗಳೂ  ಮಾಡಲಾರದ ಕೆಲಸವನ್ನು ಸಾಹಿತ್ಯ ಮಾಡಬಲ್ಲುದು. ಮಳೆ, ಬಿಸಿಲು, ವಿದ್ಯುತ್ತಿನಂತೆ ಅದೂ ಅಷ್ಟೇ ಬಲವಾದ ನೈಸರ್ಗಿಕ ಶಕ್ತಿ." ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ನಾರಾಯಣ ಎಲ್. ನಾಯ್ಕ ಮತ್ತು ಅವರ ತಂಡ ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಿತು. 

ನನ್ನ ಮಾತುಗಳಲ್ಲಿ ಶ್ರೀ ಕೆ. ಎನ್. ರಾವ್ ಎಂಬ ದಾಂಡೇಲಿಯ ವಿಶಿಷ್ಟ ವ್ಯಕ್ತಿಯೊಬ್ಬರನ್ನು  ನೆನೆದೆ. ದಾಂಡೇಲಿಯ ಸಾಹಿತ್ಯ ಇತಿಹಾಸವನ್ನು ಹುಡುಕುವಾಗ ಹಿರಿಯರಾದ ಶ್ರೀ ನಾರಾಯಣ ಶಾನಭಾಗರು  ದಿ. ಕಾಮತ ನರಸಿಂಹರಾಯ ಬಾಬಣ್ಣ( ಕೆ. ಎನ್. ರಾವ್)  ಅವರ ಕುರಿತು ವಿವರವಾಗಿ ಹೇಳಿದ್ದರು. ಕಾಮತರು  ದಕ್ಷಿಣ ಕನ್ನಡದವರಾದರೂ ದಾಂಡೇಲಿ ಅವರ ಜೀವನದ ನೆಲೆಯಾಯಿತು. ಇವರು ವಿಜ್ಞಾನ ಓದಿದವರು. ಮೂರು  ವರ್ಷ ಸಾಬರಮತಿ ಆಶ್ರಮದಲ್ಲಿದ್ದರು. ಮುಂದೆ ಸೇನೆ ಸೇರಿದರು! ಸುಭಾಷಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್  ಆರ್ಮಿಯಲ್ಲಿ  ನಾಲ್ಕು ವರ್ಷ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದರು! ಸ್ವಾತಂತ್ರ್ಯ ಹೋರಾಟದಲ್ಲಿ ಒಟ್ಟು ನಾಲ್ಕು ವರ್ಷ ಹತ್ತು ತಿಂಗಳು ಸೆರೆಮನೆಯಲ್ಲಿದ್ದರು. ಹದಿನಾರು ಭಾಷೆ ಬಲ್ಲವರಾಗಿದ್ದರು. ಕನ್ನಡದಲ್ಲಿ ದಾಂಡೇಲಿಯ ಇತಿಹಾಸದ ಕುರಿತ ಕೃತಿಯೂ ಸೇರಿ ಸುಮಾರು ಹದಿನೈದು ಕೃತಿಗಳನ್ನು ರಚಿಸಿದ್ದಾರೆ. ಒಬ್ಬ ವ್ಯಕ್ತಿ ಒಂದು ಜೀವನದಲ್ಲಿ ಇಷ್ಟೆಲ್ಲಾ ಕಾರ್ಯಗಳನ್ನು ಮಾಡಬಲ್ಲರೇ ಎಂಬ ಅಚ್ಚರಿ ಹುಟ್ಟುವಂಥ ಜೀವನ ಅವರದು. ಬಹುಪಾಲು ವಲಸಿಗರೇ ನಿರ್ಮಿಸಿದ ದಾಂಡೇಲಿಯ ಸಾಹಿತ್ಯ ಇತಿಹಾಸದ ಶಿಖರದಲ್ಲಿ ಕೆ. ಎನ್. ರಾವ್ ಅವರಿದ್ದಾರೆ ಎಂದೆ. ನನಗೆ ಮುಂದೊಂದು ಆಶ್ಚರ್ಯ ಕಾದಿದೆ ಎಂದು ನನಗಾಗ ತಿಳಿದಿರಲಿಲ್ಲ. ಸಭೆ ಮುಗಿದ ಮೇಲೆ ಎಪ್ಪತ್ತರ ಹರಯದ ಹಿರಿಯರೊಬ್ಬರು ವೇದಿಕೆಗೆ ಬಂದು ತುಂಬಾ ವಿನಯದಿಂದ "ನೀವು ಪ್ರಸ್ತಾಪಿಸಿದ ಕೆ. ಎನ್. ರಾವ್ ಅವರ ಮಗ ನಾನು" ಎಂದರು.  ಇದು ನಿಜಕ್ಕೂ  ಅನಿರೀಕ್ಷಿತವಾಗಿತ್ತು.  ಶ್ರೀ ಬಿ. ಎನ್. ಶ್ರೀವತ್ಸ ಎಂದು ಅವರ ಹೆಸರು. ಗೆಳೆಯರ ಬಳಗಕ್ಕೆಲ್ಲ ಅವರು ಬಾಬಣ್ಣ. ಸಮ್ಮೇಳನದ ಬಳಿಕ ಅವರ ಮನೆಗೂ ಹೋಗಿ ಆತಿಥ್ಯ ಸ್ವೀಕರಿಸಿ ಬಂದೆ. ದಾಂಡೇಲಿಯ ಮೊದಲ ಸಾಹಿತ್ಯ  ಸಮ್ಮೇಳನದ ಅಧ್ಯಕ್ಷರಾಗಿದ್ದ ಗೆಳೆಯ ಶ್ರೀ ಆರ್. ಜಿ. ಹೆಗಡೆಯವರು ಜೊತೆಗಿದ್ದರು. 

ದಾಂಡೇಲಿಯ ಹೆಸರಿಗೆ ಕಾರಣನಾದ ದಾಂಡೇಲಪ್ಪನ ಗುಡಿ ನಾನು ಉಳಿದುಕೊಂಡ ಪ್ರವಾಸಿ ಮಂದಿರಕ್ಕೆ ಹತ್ತಿರದಲ್ಲಿತ್ತು. ಚಿಕ್ಕದೊಂದು ದೇವಾಲಯ. ಒಳಗೆ ಊರಿನ ಚರಿತ್ರೆಯನ್ನು ತನ್ನೊಳಗೆ ಧರಿಸಿದ ದಾಂಡೇಲಪ್ಪ ಶಾಂತವಾಗಿ ಕುಳಿತಿದ್ದಾನೆ. ಸ್ವಾಮಿನಿಷ್ಠೆಗಾಗಿ ತನ್ನ ಬದುಕನ್ನೇ ಅರ್ಪಿಸಿದ ಅವನು ಇಂದು ದಂತಕಥೆಯಾಗಿದ್ದಾನೆ, ದೈವಿಕ ಪುರುಷನಾಗಿದ್ದಾನೆ, ಶಿವಲಿಂಗವೇ ಆಗಿ ಪೂಜೆಗೊಳ್ಳುತ್ತಿದ್ದಾನೆ. ದಾಂಡೇಲಪ್ಪನ ಜಾತ್ರೆ ಪ್ರತಿವರ್ಷ ದಸರೆಯ ಸನಿಹದಲ್ಲಿ ನಡೆಯುವುದಂತೆ. ನಮ್ಮ ಜನರ ಮುಗ್ಧ ಆದರ, ಪ್ರೀತಿ, ವಿಶ್ವಾಸಗಳು ಮೈ ತಳೆವ ಬಗೆ ಸೋಜಿಗ ಹುಟ್ಟಿಸುತ್ತದೆ. ಶತಮಾನಗಳಿಂದ ಪೂಜೆ ಸ್ವೀಕರಿಸುತ್ತ ದಾಂಡೇಲಪ್ಪ ಊರಿನ ಎಲ್ಲ ಬೆಳವಣಿಗೆಗಳನ್ನೂ ಶಾಂತನಾಗಿ ವೀಕ್ಷಿಸುತ್ತಿದ್ದಾನೆ. 

ದಾಂಡೇಲಿಯ ಜಾತಕ  ಅಪರೂಪದ್ದೆನ್ನಬೇಕು. ಅದು  ಕಾಳಿನದಿಯ ದಡದ ಊರುಗಳಲ್ಲಿ ಒಂದು. ಪಶ್ಚಿಮ ಘಟ್ಟ ಸುತ್ತುವರಿದಿದೆ. ಸುದೀರ್ಘ ದಟ್ಟ ಮೌನದ ಕಣಿವೆಯಂತಿದ್ದ ಈ ಊರು ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಪುಟ್ಟ ಕೈಗಾರಿಕಾ ನಗರವಾಗಿ ಬೆಳೆದುಬಿಟ್ಟಿತು. ಒಂದೆಡೆ ಈ ಊರು ಅಂಬಿಕಾನಗರವಾಗಿ ವಿಕಾಸಗೊಂಡಿದೆ.  ಕಾಗದ ಕಾರ್ಖಾನೆ, ಕೆ.ಪಿ. ಸಿ. ಯೋಜನೆಗಳು, ಇನ್ನಿತರ ಕೆಲ ಉದ್ಯಮಗಳು ಈ ಊರಿಗೆ ಬೇರೆಯದೇ ಸ್ವರೂಪ ಕಲ್ಪಿಸಿದವು. ಹೀಗಾದಾಗ ಇಂಥ ಊರುಗಳ ಚರಿತ್ರೆಗೆ ಹೊಸ ಅಧ್ಯಾಯಗಳು ಸೇರಿಕೊಳ್ಳುತ್ತವೆ.  ಅವೆಲ್ಲ ಹಳೆಯ ನೆನಪುಗಳೆಂಬಂತೆ ಮಸುಕಾಗತೊಡಗುವಾಗ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ದಾಂಡೇಲಿಗೆ ಹೊಸ ಪ್ರಭೆ ತಂದುಕೊಟ್ಟಿದೆ. ದಾಂಡೇಲಿ ಸ್ವತಃ ತಾಲೂಕಾಗುವ ಮುನ್ನ(೨೦೧೮) ಹಳಿಯಾಳ ತಾಲೂಕಿನ ಭಾಗವಾಗಿತ್ತು. 

ಇಂದಿಗೂ ದಾಂಡೇಲಿ ದಟ್ಟ ಕಾಡಿನಿಂದ ಆವೃತವಾದ ಪುಟ್ಟ ಊರೇ.  ದೇಶದ ಎಲ್ಲ ಕಡೆಗಳಿಂದ ಬಂದು ಒಂದಾದ ಹಲವು ಭಾಷೆ, ಜಾತಿ, ಮತಗಳ  ಜನಸಮುದಾಯ ಇಲ್ಲಿಯದು. ಸೌಹಾರ್ದಕ್ಕೆ ಇನ್ನೊಂದು ಹೆಸರೆಂಬಂತೆ ರೂಪುಗೊಂಡಿರುವ ಪಟ್ಟಣ. ಮರುದಿನ ಕಾರಿನ ಚಾಲಕ ಮಂಜು ತುಂಬಾ ಪ್ರೀತಿ, ಅಭಿಮಾನದಿಂದ ತಮ್ಮೂರಿನ ಮೂಲೆ, ಮೂಲೆಗಳನ್ನು ತೋರಿಸಿದನೆನ್ನಬೇಕು.  ವೆಸ್ಟ್ ಕೋಸ್ಟ್ ಪೇಪರ್ ಮಿಲ್, ಮೊಸಳೆ ಪಾರ್ಕ್, ಅದರ ಪಕ್ಕದಲ್ಲಿ ದಾಂಡೇಲಪ್ಪನ ಗುಡಿ(ಜಾತ್ರೆ ನಡೆಯುವ ಸ್ಥಳ), ಮುಂದೆ ಒಂದು ದತ್ತಮಂದಿರ .. ಇವನ್ನೆಲ್ಲ ಅವನು ತೋರಿಸುತ್ತಿದ್ದಂತೆ ನಾನು ಹೇಳಿದೆ: " ನನಗಿರುವ ಒಂದೇ ದಿನದಲ್ಲಿ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಲು ಸಾಧ್ಯವಿಲ್ಲ. ಆದರೆ ನನಗೆ ನಿಮ್ಮೂರಿನ ನಾಡಿಮಿಡಿತ ಕೇಳಬೇಕು". ನನ್ನ ಮಾತು ಕೇಳಿ ಮಂಜು ಗಾಬರಿ ಆಗಿರಬೇಕು. ನಕ್ಕು ಹೇಳಿದೆ: "ಯೋಚಿಸಬೇಡ, ನಾನು ಟೂರಿಸ್ಟ್ ಥರ ಊರು ನೋಡುತ್ತಿಲ್ಲ , ಎಲ್ಲಾ ಜಾಗ ತೋರಿಸಿಬಿಡಬೇಕು ಎಂದುಕೊಳ್ಳಬೇಡ. ಎಲ್ಲೆಲ್ಲಿ ಏನೇನು ಇದೆ ಎಂದು ಹೇಳುತ್ತಾ ಹೋಗು, ನನಗೆ ಬೇಕಾದ್ದು ನೋಡುವೆ, ಸರಿಯೇ?" ಎಂದೆ . ಈಗ ಅವನು ನಿರಾಳನಾದ. 

ನಾನಿಲ್ಲಿ ದಾಂಡೇಲಿಯಲ್ಲಿ ಏನೇನು ನೋಡಿದೆ, ನೋಡಬಹುದು ಎಂಬ ವರದಿ ಬರೆಯುತ್ತಿಲ್ಲ. ಅಂಥ ನೂರಾರು ಬರಹಗಳು ಇಂದು ಪ್ರವಾಸಿಗರಿಗೆ ಅಂತರ್ಜಾಲದಲ್ಲಿ ಸಿಗುತ್ತವೆ. ದಾಂಡೇಲಿಯ ದಟ್ಟ ಕಾಡಿನಲ್ಲಿ ನನ್ನನ್ನು ಮುದಗೊಳಿಸಿದ ಎರಡು ಸಂಗತಿಗಳೆಂದರೆ ಮಂಗಟ್ಟೆ( ಹಾರ್ನ್ ಬಿಲ್) ಮತ್ತುಅದರ ಬೆನ್ನು ಬಿದ್ದಿರುವ ಉಮೇಶ್. " ನೀವು ಉಮೇಶ್ ಅವರನ್ನು ನೋಡಲೇಬೇಕು, ಅವರೊಬ್ಬ ಅದ್ಭುತ ವ್ಯಕ್ತಿ" ಎಂದು ವಾಸರೆಯವರು ಮೊದಲೇ ಹೇಳಿದ್ದರು. ಅವರ ರೆಸಾರ್ಟಿನಲ್ಲಿ ತಣ್ಣಗೆ ತಾನೂ ಒಬ್ಬ ಪ್ರವಾಸಿಗನಂತೆ ಸರಳವಾಗಿ  ಕುಳಿತಿದ್ದ ವ್ಯಕ್ತಿಯೇ ಉಮೇಶ್ ಎಂದು ತಿಳಿದು ನಗು ಬಂತು. ಸಂತೋಷ ಸೂಚಿಸಿ ಕೈ ಕುಲುಕಿದೆ. ಕೆಲವೇ ನಿಮಿಷಗಳಲ್ಲಿ ಆತ್ಮೀಯರಾಗಿಬಿಟ್ಟೆವು. " ಇದೇನು ಹಾರ್ನ್ ಬಿಲ್? ನನಗೆ ನೀವು ಅದರ ಬಗ್ಗೆ ಎಲ್ಲಾ ಹೇಳಬೇಕು" ಎಂದು ಗಂಟುಬಿದ್ದೆ. ' ಸಂದರ್ಭ ಸಿಕ್ಕರೆ ತನ್ನನ್ನು ಮೀರಿಸಬಲ್ಲ ಮರುಳನೊಬ್ಬ ಬಂದಿದ್ದಾನೆ' ಎಂದು ಉಮೇಶ್ ಸಂತಸಗೊಂಡಿರಬೇಕು. 'ಎಲ್ಲಾ ಹೇಳುತ್ತೇನೆ, ಮೊದಲು ಊಟವಾಗಲಿ' ಎಂದು ಹಸಿದ ಜೀವಕ್ಕೆ ಹೊಟ್ಟೆ ತುಂಬಾ ಊಟ ಇತ್ತರು. ಜೊತೆಯಲ್ಲೇ ಹಾರ್ನಬಿಲ್ ಪಕ್ಷಿಯಿಂದ ಮನುಷ್ಯ ಏನೆಲ್ಲಾ ಕಲಿಯಬಹುದು ಎಂದು ಉತ್ಸಾಹದಿಂದ ಹೇಳುತ್ತಾ ಹೋದರು. 

 ಉಮೇಶ್ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಒಂದೇ ಹಾರ್ನಬಿಲ್ ಹಕ್ಕಿಜೋಡಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರ ರೆಸಾರ್ಟ್ ಮುಂದೆ  ಇರುವ ನದಿಯ ಕಿರು ಹರಿವು ದಾಟಿ ಇನ್ನೊಂದು ದಡದಲ್ಲಿ ಕುಳಿತು ದಿನಗಟ್ಟಲೆ ಅವುಗಳ ಜೀವನ ಗಮನಿಸುತ್ತಾರೆ. ತುಂಬಾ ನಾಚಿಕೆ ಸ್ವಭಾವದ ಹಕ್ಕಿಗಳವು, ಮನುಷ್ಯರಿಂದ ದೂರ. ಆದರೆ ಉಮೇಶ್  ತಮ್ಮ ಬಳಗದ ಹಿತೈಷಿಯೆಂದು ಈ ಜೋಡಿಗೆ  ಖಚಿತವಾಗಿದೆಯಂತೆ.  ಹಾರ್ನಬಿಲ್ ಪಕ್ಷಿಗಳು ಬಾಳಿನುದ್ದಕ್ಕೂ ಒಬ್ಬನೇ ಸಂಗಾತಿಯೊಡನೆ ವಾಸಿಸುತ್ತವೆ. ( ನೆನಪಿಡಬೇಕು, ಯಾರೂ ಈ ಪಕ್ಷಿಗಳ ಜಾತಕ  ನೋಡಿ ಮದುವೆ ಮಾಡಿಲ್ಲ!). ಅವು  ಕುಟುಂಬ ಜೀವನವನ್ನು ನಡೆಸುವ ರೀತಿಯೇ ಅಚ್ಚರಿ ಹುಟ್ಟಿಸುವಂತಿದೆ.  ಎತ್ತರದ ವೃಕ್ಷಗಳಲ್ಲಿ ಗೂಡು ಕಟ್ಟಿ ವಾಸಿಸುವವು. ಹೆಣ್ಣು ಹಾರ್ನಬಿಲ್ ಗರ್ಭ ಧರಿಸಿದ ಬಳಿಕ ಮರಿ ಹಕ್ಕಿಗಳು ದೊಡ್ಡದಾಗಿ ಹಾರಾಡುವವರೆಗೂ ಅವು ಗೂಡುಗಳಲ್ಲಿಯೇ ಭದ್ರವಾಗಿ ವಾಸಿಸುತ್ತವೆ. ಅವುಗಳಿಗೆ ಆಹಾರ ಒದಗಿಸುವ ಜವಾಬ್ದಾರಿ ಗಂಡ ಹಕ್ಕಿಯದು. ಗೂಡಿಗೆ ಮಣ್ಣಿನ ಬಾಗಿಲು ನಿರ್ಮಿಸಿರುವುದರಿಂದ ಬೇರಾವ ಪಕ್ಷಿ, ಹಾವು ಒಳಬರಲು ಸಾಧ್ಯವಿಲ್ಲ. ಈ ಪಕ್ಷಿಗಳು ನೀರು ಕುಡಿಯುವುದಿಲ್ಲ. ನಾವು ವಿಷಕಾರಿ ಎಂದು ಭಾವಿಸುವ ಹಣ್ಣುಗಳೇ ಇವುಗಳ ಆಹಾರ. 

ಮಾತಿನ ಮಧ್ಯೆ ಅವರ ರೆಸಾರ್ಟ್ ಪಕ್ಕದ ಕಾಡುಭಾಗದಲ್ಲಿ ದೊಡ್ಡದೊಂದು ಮರದತ್ತ ಧೇನಿಸಲಾರಂಭಿಸಿದರು. ಚಿಕ್ಕ ದನಿಯಲ್ಲಿ "ಮೇಲೊಂದು ಪೊಟರೆ ಥರ ಇದೆ. ಅಲ್ಲೊಂದು ಹಕ್ಕಿ ಇದೆ,  ನೋಡಿ" ಎಂದರು. ಊಹುಂ , ಕಾಣಲಿಲ್ಲ. ಅದೇ ಹೊತ್ತಿಗೆ ಆ ಹಕ್ಕಿ ತಲೆ ತಿರುವಿತು,  ತನ್ನ ಕೊಕ್ಕು ಹೊರಗೆ ಚಾಚಿತು. ಅರೆರೇ, ಕಂಡೇಬಿಟ್ಟಿತು. ಉಲ್ಲಾಸದಿಂದ ಸಣ್ಣದಾಗಿ ಚಪ್ಪಾಳೆ ತಟ್ಟಿದೆ.   

ಸುಮಾರು ನಲವತ್ತು ನಲವತ್ತೈದು ವರ್ಷ ಬದುಕುವುದಂತೆ ಈ ಹಕ್ಕಿ. ಈ ಹೊತ್ತಿಗಾಗಲೇ ಆಂಧ್ರ ಮೂಲದ, ವನ್ಯಜೀವಿ ಚಿತ್ರಗಳ ಹವ್ಯಾಸಿ ಕಲಾವಿದ, ಇಂಜಿನಿಯರ್ ಒಬ್ಬರು ನಮ್ಮ ಜೊತೆಗೂಡಿದ್ದರು. ಮಾತಾಡುತ್ತಾ ರೆಸಾರ್ಟ್ ಕಡೆ ಬರುತ್ತಿದ್ದಂತೆ ಆ ಮನುಷ್ಯ ಉದ್ವೇಗದಿಂದ ಆಕಾಶದತ್ತ ಕೈ ತೋರಿ ಕೂಗಿದರು:
“ಸಾರ್, ಹಾರ್ನಬಿಲ್, ನೋಡಿ, ನೋಡಿ”
ನನಗದೊಂದು ಅಪೂರ್ವ ದರ್ಶನ. ನಮಗೆ ಕೆಲವು ಕ್ಷಣಗಳ ಹಿಂದಿನವರೆಗೂ ನಿಗೂಢಾತಿನಿಗೂಢ ಅನಿಸಿದ್ದ ಪಕ್ಷಿ ಇದೋ ಕಣ್ಣಳತೆಯಲ್ಲೇ ಗರಿ ಬಿಚ್ಚಿ ಹಾರುತ್ತಿದೆ. ಕಂದು ಬಣ್ಣ, ಕೆಂಪು ಕಣ್ಣು, ನಮ್ಮ ಕಡೆ ಅದರ ಲಕ್ಷ್ಯವಿಲ್ಲ. ಒಂದೆಡೆ ಕಾಳಿ, ಇನ್ನೊಂದೆಡೆ ದಂಡಕಾರಣ್ಯ , ಮೇಲೆ ಬಾನು, ಇಲ್ಲಿ ಈ ಪುಟ್ಟ ಹಕ್ಕಿ, ಅದಕ್ಕೆ ಭೂತ, ಭವಿಷ್ಯತ್ತುಗಳ ಹಂಗಿಲ್ಲ, ಮಾತಿಲ್ಲ, ತಾನೇ ತಾನಾಗಿ ಹಾರುತ್ತಿದೆ.

ಈ ದಂಡಕಾರಣ್ಯ ತನ್ನೊಳಗೆ ಹುದುಗಿಸಿಕೊಂಡ ವಿಸ್ಮಯ ಬಯಲಲ್ಲಿ ತೇಲುತ್ತಿದ್ದಂತೆ, ದಾಂಡೇಲಿಯ ನಾಡಿಮಿಡಿತ ಕೇಳಿಸಿಬಿಟ್ಟಿತು! ಮುಂದೆ ಸೈಕ್ಸ್ಪಾ ಯಿಂಟಿಗೆ ಹೋಗಿ ದಿಗ್ದೆಸೆ ತುಂಬಿದ ದಟ್ಟಡವಿಯನ್ನು ನೋಡುತ್ತಾ, ಆ ಸಮೃದ್ಧ ಮೌನದಲ್ಲಿ ಒಂದಾಗುತ್ತಾ ‘ಶ್ರೀಮನ್ಮೂಕನಾದೆ’.

(ದಾಂಡೇಲಿಯ ಕೆಲವು ಚಿತ್ರಗಳು)

ಕಾಳಿ ಹರಿಯುತ್ತಿದ್ದಳು.

ಹಾರ್ನಬಿಲ್ ಹಾರುತ್ತಿತ್ತು.

ವಾಸರೆ

ಜಮಾದಾರ

ಬಾಬಣ್ಣ

ದೇವದತ್ತ ..

ಹಾದುಹೋದರು

ದಾಂಡೇಲಪ್ಪ ನನ್ನ ಕಣ್ಣುಗಳೆದುರು ಗಂಭೀರವಾಗಿ ಅಡಿಯಿಡುತ್ತಿದ್ದ…

ಕೇಳುತ್ತಿದ್ದ …

“ಹಾರ್ನಬಿಲ್ ಹಾರುತಿದೆ ನೋಡಿದಿರಾ?”

(ಹಾರ್ನಬಿಲ್ ಫೋಟೋ ಕೃಪೆ:ಶ್ರೀ ಉಮೇಶ್ G. E.)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on ““ಹಾರ್ನಬಿಲ್ ಹಾರುತಿದೆ ನೋಡಿದಿರಾ?””

  1. ಓದುವದಕ್ಕೆ ತುಂಬ ಸಂತೋಷ ಆಗುತ್ತಿದೆ.
    ಸ್ವತ: ನೋಡುತ್ತಿರುವ ಅನುಭವ.
    ಚಿಂತಾಮಣಿ ಕೊಡ್ಲೆಕೆರೆ ಅವರ ಕನ್ನಡ ಇಷ್ಟ ವಾಗುತ್ತದೆ

  2. ಜಿ ವಿ ಅರುಣ

    ಇತ್ತೀಚೆಗೆ ನಡೆದ ಸಾಹಿತ್ಯ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಒಂದು ಊರಿನ ಹಿಂದಿನ ಕಥೆಯನ್ನು- ಇಂದಿನ ಸ್ಥಿತಿಯ ಬಗ್ಗೆ ಗಮನ ಸೆಳೆಯುತ್ತಾ ಊರಿನ ಹಿರಿಯರ ನೆನಪು ಮಾಡಿಕೊಂಡು ಅವರ ಇಂದಿನ ಪೀಳಿಗೆಯವರನ್ನು ಭೇಟಿಯಾದದ್ದನ್ನು ಮೆಲುಕು ಹಾಕುತ್ತಾ ಹಾರ್ನ್ ಬಿಲ್ ಪಕ್ಷಿ ವೀಕ್ಷಣೆಯನ್ನು ರೋಚಕವಾಗಿ ಕಟ್ಟಿಕೊಟ್ಟಿರುವ ಈ ಆಕರ್ಷಕ ಲೇಖನಕ್ಕೆ ನಿಮಗೆ ಧನ್ಯವಾದಗಳು.
    ಚಿತ್ರಗಳು ಬಹಳ ಆಕರ್ಷಕವಾಗಿವೆ.

  3. ಜಾತಕ ಇಲ್ಲದೆಯೂ ಒಂದೇ ಸಂಗಾತಿ , ಬಹಳ ಸುಂದರ ಮತ್ತು ಅರ್ಥ ಗರ್ಬಿತ ಮಾತು.ಒಟ್ಟಿನಲ್ಲಿ ಚೆನ್ನಾಗಿದೆ ಪ್ರವಾಸವಲ್ಲದ ಕಥೆ.

  4. Chintamani Sabhahit

    ‘ಸಾಹಿತ್ಯ’ ಅಂದರೆ – ನಮ್ಮಗುರುಗಳಲ್ಲೊಬ್ಬರಾದ ಗೌರೀಶ್ ಕೈಕಿಣಿಯವರು ಯಾವಾಗಲೂ ಹೇಳುತ್ತಿದ್ದುದು – ‘ಸಹಿತಾನಾಮ್ ಭಾವಃ!

    ‘ಅಲ್ಲಿ ಮಿಳಿತವಿದೆ, ಸೆಳೆತವಿದೆ, ಹೃದಯವಂತಿಕೆ ಇದೆ, ಸ್ಪಂದನೆಯಿದೆ, ಪ್ರಶಂಸೆಯಿದೆ, ವಿಕಸನದ ತುಡಿತವಿದೆ, ಹಿತವಿದೆ, ಅರಳುವ ಚಿಲುಮೆಯಿದೆ! ಸ್ರಜನವಾದ ಶಬ್ದಗಳು ಬುದ್ಧಿಗೆ ಹತ್ತಿರವಿದ್ದಾಗ, ವಿಮರ್ಶೆಯಾಗಬಹುದು, ವೈಚಾರಿಕ ಕಥನವಾಗಬಹುದು, ನಿಬಂಧವಾಗಬಹುದು, ಲೇಖನವಾಗಬಹುದು ; ಹೃದಯಕ್ಕೆ ಹತ್ತಿರವಾಗಿದ್ದರೆ ಗೀತೆಯಾಗಬಹುದು, ಕವನವಾಗಬಹುದು, ಕವಿತೆಯಾಗಬಹುದು, ಲಲಿತ ಬರೆಹವಾಗಬಹುದು, ಕತೆಯಾಗಬಹುದು.

    ಚಿಂತಾಮಣಿಯವರ ಈ ಪ್ರವಾಸದ ಅನುಭವ, ಯಾವಕಡೆ ವಾಲಿದೆ ಅನ್ನುವದು ವಿದಿತವಾದರೂ, ನೋಡುವ ಕೇಳುವ ಉತ್ಸುಕತೆಯಲ್ಲಿ, ಆಸಕ್ತಿ ಅರಳುತ್ತಿದ್ದಂತೆ, ವಸ್ತು – ವಿಷಯವನ್ನು, ತನ್ನೊಳಗಿದ್ದ ಒಬ್ಬ ನುರಿತ ಬಾಲ್ಯದ ವ್ಯಕ್ತಿಗೆ ನಿರರ್ಗಳವಾಗಿ ಒಪ್ಪಿಸಿ, ಡಿಟ್ಯಾಚ್ ಆಗುತ್ತಾರೆ. ಈ ಪ್ರವಾಸಾನುಭವದ ಪ್ರಸ್ತುತಿ, ಈ ಹಂತದಲ್ಲಿ ಜನಿಸಿದೆ ಅಂತ ಅನಿಸುತ್ತದೆ. ಉ.ಕ. ದವರಾದರೂ ಇನ್ನೂ ದಾಂಡೇಲಿ ನೋಡಿದವರಲ್ಲರಾದುದರಿಂದಲೇ ಒಳ್ಳೆಯದಾಯಿತು.

    ಮತ್ತೆ ನೆನಪಿಸಿದ್ದಾರೆ : ತೊಂಬತ್ತನಾಲ್ಕರ ಹರಯದಲ್ಲೂ, ಪ್ರಸಿದ್ಧ ತಬಲಾ ವಾದಕರಾದ, ಉಸ್ತಾದ್ ಶ್ರೀ ಕೆ. ಎಲ್. ಜಮಾದಾರ್ ರ ಬದುಕಿನ ಉತ್ಸಾಹದ ಬಗ್ಗೆ, “ಬದುಕಿನಲ್ಲಿ ಒಮ್ಮೆ ಸಿಕ್ಕವರು ಮತ್ತೊಮ್ಮೆ ಸಿಕ್ಕರೆ ಅವರು ನಮ್ಮ ನೆಂಟರು” ಎಂಬ ದೇವದತ್ತನ ಕಥಾಸಾರದ ಬಗ್ಗೆ, ಸಾಹಿತ್ಯದ ಶಕ್ತಿಯ ಬಗ್ಗೆ, ಮುಖ್ಯತಃ, ಮೂಲತಃ ದಕ್ಷಿಣ ಕನ್ನಡದವರಾದರೂ, ಹದಿನಾರು ಭಾಷೆ ಬಲ್ಲವರಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಒಟ್ಟು ನಾಲ್ಕು ವರ್ಷ ಹತ್ತು ತಿಂಗಳು ಸೆರೆಮನೆಯಲ್ಲಿದ್ದ, ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ, ಕನ್ನಡದಲ್ಲಿ ದಾಂಡೇಲಿಯ ಇತಿಹಾಸದ ಕುರಿತ ಕೃತಿಯೂ ಸೇರಿ ಸುಮಾರು ಹದಿನೈದು ಕೃತಿಗಳನ್ನು ರಚಿಸಿದ್ದ, ದಾಂಡೇಲಿಯ ಸಾಹಿತ್ಯ ಇತಿಹಾಸದ ಶಿಖರದಲ್ಲಿ ವಿರಾಜಮಾನರಾದ, ದಿ. ಕಾಮತ ನರಸಿಂಹರಾಯ ಬಾಬಣ್ಣ (ಕೆ. ಎನ್. ರಾವ್)ನ ಬಗ್ಗೆ, ದಾಂಡೇಲಿಯ ಹೆಸರಿಗೆ ಕಾರಣನಾದ, ಇಂದು ದಂತಕಥೆಯಾದ, ದೈವಿಕ ಪುರುಷನಾದ, ದಾಂಡೇಲಪ್ಪನ ಗುಡಿಯ ಬಗ್ಗೆ , ಕಾಳಿನದಿಯ ದಡದ, ಪಶ್ಚಿಮ ಘಟ್ಟ ಸುತ್ತುವರಿದ, ಸುದೀರ್ಘ ದಟ್ಟ ಮೌನದ ಕಣಿವೆಯಂತಿದ್ದ ಊರು, ಉತ್ತರ ಕನ್ನಡದ ಪುಟ್ಟ ಕೈಗಾರಿಕಾ ನಗರವಾಗಿ ಬೆಳೆದು ನಿಂತ ದಾಂಡೇಲಿಯ ಬಗ್ಗೆ, ಕಣ್ಣಳತೆಯಲ್ಲೇ ಗರಿ ಬಿಚ್ಚಿ ಹಾರುತ್ತಿದ್ದರೂ ನೋಟಕರ ಲಕ್ಷ್ಯವಿಲ್ಲದ, ಭೂತ, ಭವಿಷ್ಯತ್ತುಗಳ ಹಂಗಿಲ್ಲದ, ತಾನೇ ತಾನಾಗಿ ಹಾರುತ್ತಿದ್ದ, ತುಂಬಾ ನಾಚಿಕೆ ಸ್ವಭಾವದ, ಜಾತಕ ನೋಡಿ ಮದುವೆಯಾಗದ, ಬಾಳಿನುದ್ದಕ್ಕೂ ಒಬ್ಬನೇ ಸಂಗಾತಿಯೊಡನೆ ವಾಸಿಸುವ ವಿಸ್ಮಯ ವಿಶೇಷ ಹಾರ್ನಬಿಲ್ ಹಕ್ಕಿಯ ಬಗ್ಗೆ, ಅವರ ಬಳಗದ ಹಿತೈಷಿಯಾದ ಉಮೇಶ್ ಬಗ್ಗೆ – ಹೀಗೆ, ಅಚ್ಚರಿಯ ಕಂತೆಯನ್ನೇ ಪೇರಿಸಿಟ್ಟಿದ್ದಾರೆ.

    ದಾಂಡೇಲಿಯ ಸವಿನೆನಪುಗಳಿಗೆ ಮತ್ತೊಮ್ಮೆ ಧನ್ಯವಾದಗಳು !

  5. ಧರ್ಮಾನಂದ ಶಿರ್ವ

    ಸೊಗಸಾದ ಅಪೂರ್ವ ಲೇಖನ. ದಾಂಡೇಲಿಯ ನಾಡಿಮಿಡಿತವನ್ನು ಹಿಡಿದಿಟ್ಟ ಶೈಲಿಯಲ್ಲಿ ಓದುಗನೂ ಜೊತೆಯಾಗುವಂತೆ ಸಾಗಿದ ಬರಹಕ್ಕೆ ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter