ಪಕ್ಷಿಗಳೊಂದಿಗೆ ಪಿಸುಮಾತು

ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ರೇಡಿಯೋದಲ್ಲಿ ಹಾಡು ಕೇಳುತ್ತಿತ್ತು. ಈ ನಗರದಲ್ಲಿ ಬೆಳ್ಳಿ ಮೂಡಿದಾಗಲೂ ಇದ್ದಬಿದ್ದ ಕೋಳಿಗಳೆಲ್ಲ ಮಾಂಸದಂಗಡಿಯ ಮುಂದೆ ಇಟ್ಟಿರುವ ಪಂಜರದಂತಹ ಪೆಟ್ಟಿಗೆಯಲ್ಲಿ ಸಾವಿನೆದುರು ಮೌನವಾಗಿ ಬಿಕ್ಕುತ್ತಿರುತ್ತವೆ… ಎಂದು ಅಲವತ್ತುಕೊಂಡೆ. ಕೋಳಿ ಕೂಗದಿದ್ದರೂ ಬೆಳಗಾಗುವುದಂತೂ ಸತ್ಯವೇ ಎಂದು ಗೊಣಗಿಕೊಳ್ಳುತ್ತಾ ಪೊರಕೆಯೊಂದನ್ನು ಹಿಡಿದು ಅಂಗಳಕ್ಕಿಳಿದೆ. ಮೂರು ದಿನದಿಂದ ಕಾಂಪೌಂಡಿನಲ್ಲಿ ಸುತ್ತುತ್ತಿದ್ದ ಗಡವ ಬೆಕ್ಕು ರಾತ್ರಿ ಯಾವುದೋ ಹಕ್ಕಿಯನ್ನು ಬೇಟೆಯಾಡಿರಬೇಕು.. ಬೂದು ಬಣ್ಣದ ಹಕ್ಕಿಯ ರೆಕ್ಕೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.. ಕಸ ಗುಡಿಸುವಾಗ ಮನದ ತುಂಬೆಲ್ಲ ನೋವು ಈ ಸತ್ತ ಹಕ್ಕಿ ಹೆಣ್ಣಾಗಿರಬಹುದೇ ಪುಟ್ಟ ಪುಟ್ಟ ಮರಿಗಳು ಅದನ್ನು ಇದಿರು ನೋಡುತ್ತಿರಬಹುದೇ? ತಾಯಿ ಹಕ್ಕಿ ಸತ್ತರೆ ರೆಕ್ಕೆ ಬಲಿಯದ ಮರಿಗಳು ಸತ್ತೇ ಹೋಗಬಹುದೇ… ಎಂದೆಲ್ಲ ವಿಚಾರ ಮಾಡುತ್ತಾ ಮಮ್ಮಲ ಮರುಗಿದೆ. ದಾಸವಾಳದ ಗಿಡದ ಕೆಳಗೆ ಡುಮ್ಮ ಹೊಟ್ಟೆ ಮಾಡಿಕೊಂಡು ಮತ್ತೆ ಪಕ್ಷಿ ಬೇಟೆಗೆ ಕುಳಿತ ಗಡವ ಬೆಕ್ಕನ್ನು ಕಂಡಾಗ ಸಿಟ್ಟು ನೆತ್ತಿಗೇರಿತು. ‘ಎಲ್ಲಾ ಹಕ್ಕಿ ನೀನೇ ತಿಂದು ಮುಗಿಸ್ತ್ಯನು.’. ನಡಿ ಇಲ್ಲಿಂದ’ ಎಂದು ಬೆದರಿಸಿ ಓಡಿಸಿದೆ.

ಮಲೆನಾಡಿನಲ್ಲಿ ಕಳೆದ ಬಾಲ್ಯದಲ್ಲಿ ಹಕ್ಕಿಗಳ ಬದುಕೆಂದರೆ ಸುಖ, ಹಾಯಾಗಿ ಹಾರಾಡಿಕೊಂಡು ಗಾಳಿಯಲ್ಲಿ ತೇಲಾಡಿಕೊಂಡಿರಬಹುದು ಎನಿಸುತ್ತಿತ್ತು. ಶಾಲೆಗೆ ಹೋಗುವಾಗ ಬೆಳ್ಳಕ್ಕಿಗಳು ಹಾರುವುದನ್ನು ಕಂಡರೆ ಸಾಕು. ‘ಬೆಳ್ಳಕ್ಕಿ ಬೆಳ್ಳಕ್ಕಿ ನಿಂಗೊಂದ ಉಂಗ್ರಾ ಕೊಡ್ತಿ ಯಂಗೊಂದು ಉಂಗುರಾ ಕೊಡ್ ಕೊಡ್ ಕೊಡ್’ ಎಂದು ಗೆಳತಿಯರೆಲ್ಲರೂ ಸೇರಿ ಕಿರುಚುತ್ತಿದ್ದೆವು. ಉಗುರಿನ ಮೇಲೆ ಆಗುವ ಅರ್ಧ ಚಂದ್ರಾಕಾರದ ಬಿಳಿಯ ಗುರುತುಗಳನ್ನು ಬೆಳ್ಳಕ್ಕಿಯ ಗುರುತುಗಳೆಂದೇ ನಂಬುತ್ತಿದ್ದೆವು. ಬೆಟ್ಟ ಬೇಣಗಳಿಗೆ ಮೇವಿಗೆಂದು ಹೋಗುತ್ತಿದ್ದ ಎಮ್ಮೆ ಹಸುಗಳ ಮೈ ಮೇಲೆ ಆಗುತ್ತಿದ್ದ ಉಣುಗನ್ನು ತಿಂದು ಅವುಗಳ ಬೆನ್ನ ಮೇಲೆ ಸವಾರಿ ಮಾಡುತ್ತಿದ್ದ ಬೆಳ್ಳಕ್ಕಿಗಳ ಠೀವಿಯನ್ನು ನೋಡುತ್ತಾ ಮೈ ಮರೆತು ಶಾಲೆಗೆ ಹೋಗಲು ತಡವಾಯಿತು ಎಂದು ಅರ್ಧ ದಾರಿ ಓಡುತ್ತಲೇ ಸಾಗುವುದೂ ಇರುತ್ತಿತ್ತು. ಬೆಟ್ಟಗಳಲ್ಲಿ ನವಿಲುಗಳ ಕೂಗು ನಿತ್ಯವೂ ಕೇಳುತ್ತಿದ್ದರೂ ಅವು ಕಣ್ಣಿಗೆ ಬೀಳುವುದು ಅಪರೂಪವೇ ಆಗಿತ್ತು. ಆಗೀಗ ಅವು ಉದುರಿಸಿದ ಗರಿಯೊಂದು ಸಿಕ್ಕಿದರೆ ಅರ್ಧ ರಾಜ್ಯವೇ ದೊರಕಿದಷ್ಟು ಸಂಭ್ರಮವಾಗುತ್ತಿತ್ತು. ‘ಐಯಾ ನೋಡೇ ಎಷ್ಟ ಚೆಂದಿದ್ದು’ ಎಂದು ಗೆಳತಿಯರ ಮುಖದ ಮುಂದೆ ಆಡಿಸಿ ಅವರ ಕಂಗಳಲ್ಲಿ ಆಸೆಯ ಬೆಳಕು ಮೂಡಿಸಿ, ನಂತರ ಜೋಪಾನವಾಗಿ ನೋಟ್ಬುಕ್ಕಿನಲ್ಲಿ ಅಡಗಿಸಿಡುವ ಸಂಭ್ರಮ ನೆನಪಾದರಿಂದಿಗೂ ನಗೆಯುಕ್ಕುತ್ತದೆ.

ಇನ್ನು ರತ್ನ ಪಕ್ಷಿ ಯಾನೆ ಕೆಂಬೂತ ಕಂಡರೆ ಮತ್ತೊಂದು ಬಗೆಯ ಸಂತೋಷ. ಕೆಂಬೂತ ಕಂಡರೆ ಸಿಹಿ ತಿನಿಸು ತಿನ್ನಲು ಸಿಗುತ್ತದೆ ಎಂದು ಹಿರಿಯರು ಹೇಳುವ ಮಾತು ಹಸಿಗೋಡೆಯ ಮೇಲೊಗೆದ ಹರಳಿನಂತೆ ಭದ್ರವಾಗಿ ಮನಸದಲ್ಲಿ ಕುಳಿತುಬಿಟ್ಟಿತ್ತು. ಅದು ಟಕಟಕನೇ ಬಿಂಕದಲ್ಲಿ ಓಡಾಡುವುದನ್ನು ಕಂಡರೆ ಸಾಕು ಅಮ್ಮ ಮಾಡುವ ತಿಂಡಿಗಳಾದ ಲಾಡು, ಹಲ್ವಾ, ಕಡುಬು, ಶಿರಾ, ಉಂಡೆಗಳಾದಿ ಹತ್ತಾರು ತಿಂಡಿಗಳ ಚಿತ್ರ ಅದರ ಪರಿಮಳದೊಂದಿಗೆ ನೆನಪಾಗಿ ಇಂದೇನು ತಿನ್ನುವ ಯೋಗವಿದೆಯೋ ಎಂಬ ತವಕದಲ್ಲಿ ಭಾರವಾದ ಸ್ಕೂಲ್ ಬ್ಯಾಗು ಹಗುರಾವಾದಂತೆನಿಸಿ ನಿಧಾನ ನಡಿಗೆ ಓಡು ನಡಿಗೆಯಾಗಿ ಬದಲಾಗಿ ಮನೆಗೆ ಬಹು ಬೇಗನೇ ತಲುಪಿಬಿಡುತ್ತಿದ್ದೆ. ಅಮ್ಮಾ ಇವತ್ತೆಂತಾರು ಸ್ವೀಟು ಮಾಡಿದ್ಯನೇ ಎಂದು ಚಪ್ಪಲಿ ಕಳಚುವುದರೊಳಗೇ ಪ್ರಶ್ನೆ ಹಾರಿಸುತ್ತಿದ್ದೆ.

ನಡುಮನೆಯಲ್ಲಿ ಪುಟ್ಟ ಹಂಚಿನ ಮಾಡೊಂದನ್ನು ಮಾಡಿ ಸ್ವಂತಕ್ಕೊಂದು ಮನೆ ಕಟ್ಟಿದಾಗ ಗುಬ್ಬಚ್ಚಿ ಸಂಸಾರವೊಂದು ನಮಗಿಂತ ಮೊದಲೇ ಬಂದು ಗೂಡು ಕಟ್ಟಿ ವಾಸ್ಥವ್ಯ ಹೂಡಿತ್ತು. ಈ ಬಾಡಿಗೆ ಕೊಡದ ಬಾಡಿಗೆದಾರ ಗುಬ್ಬಚ್ಚಿಗಳು ನೋಡಲೇನೋ ಪುಟ್ಟಹಕ್ಕಿಗಳು, ಆದರೆ ಅವರ ದಾದಾಗಿರಿ ಏನು ಚಿಕ್ಕದಲ್ಲ ಎನ್ನುವುದು ಕ್ರಮೇಣ ಅರಿವಿಗೆ ಬರಲಾರಂಭಿಸಿತು. ಮೊಟ್ಟೆ ಇಡುವ ಸಮಯದಲ್ಲೆಲ್ಲ ಗೂಡು ದೊಡ್ಡದು ಮಾಡುತ್ತಿದ್ದ ಗುಬ್ಬಚ್ಚಿಗಳು ಕೇಜಿಗಟ್ಟಲೆ ಹುಲ್ಲು ಕಸ ಕಡ್ಡಿಗಳನ್ನು ತಂದುಗೂಡಿಗೆ ಸಿಕ್ಕಿಸುವ ಸಡಗರದಲ್ಲಿ ನಡುಮನೆಯಲ್ಲಿ ಕೆಡವಿ ಗುಡಿಸಿದಷ್ಟೂ ಕಸ ನಿರ್ವಹಣೆಗೆ ಹಚ್ಚಿದವು. ಮರಿಗಳಿಗೆ ರೆಕ್ಕೆ ಕೊಂಚ ಬಲಿತಾಗ ಮನೆಯಲ್ಲೇ ಹಾರಾಟ ಕಲಿಸುವ ಟ್ರೇನಿಂಗ ಕೊಡುತ್ತಿದ್ದವು. ಆಗ ನಾವು ಮನೆಯಲ್ಲಿ ಅತ್ತಿತ್ತ ಓಡಾಡಿದರೆ ಅವುಗಳಿಗೆ ಡಿಸ್ಟರ್ಬ ಆಗಿ ಬೈಯುವಂತೆ ಸತತವಾಗಿ ಕೂಗುತ್ತಿದ್ದವು. ನಮ್ಮ ಕಾಂಪೌಂಡಿನಲ್ಲಿ ಬೃಹದಾಕಾರವಾಗಿ ಬೆಳೆದ ಗಿಡಗಳ ಮೇಲೆ ಇನ್ಯಾವುದೇ ಹಕ್ಕಿಗಳು ಗೂಡು ಕಟ್ಟಲೆತ್ನಿಸಿದರೂ ನಿರ್ದಾಕ್ಷಿಣ್ಯವಾಗಿ ಗೂಡನ್ನೇ ಕಿತ್ತೆಸೆಯುತ್ತಿದ್ದವು. ಆದರೂ ಸ್ವಿಫ್ಟ ಎಂಬ ಹಠಮಾರಿ ಹಕ್ಕಿಯೊಂದು ಮಣ್ಣಿನಪುಟ್ಟ ಪುಟ್ಟ ಉಂಡೆಗಳನ್ನು ಮಾಡಿ ಅಂಟಿಸಿ ಪೋರ್ಟಿಕೊದ ಸೂರಿಗೆ ಗೂಡು ಕಟ್ಟಿ ಮರಿ ಮಾಡಿತು. ನಿತ್ಯವೂ ಗುಬ್ಬಚ್ಚಿಗಳೊಂದಿಗೆ ಜಟಾಪಟಿ ನಡೆಸುತ್ತಾ ಆ ಹಕ್ಕಿ ಮರಿಗೆ ಗುಟುಕು ನೀಡುವುದಕ್ಕೂ ಕಷ್ಟಪಡುತ್ತಿತ್ತು. ಅದನ್ನು ಕಂಡು ಗುಬ್ಬಚ್ಚಿಗಳ ಮೇಲೂ ನನಗೆ ಬ್ರಹ್ಮಾಂಡದಂತಹ ಸಿಟ್ಟು ಬರುತ್ತಿತ್ತು. ‘ಹೊಟ್ಟೆಕಿಚ್ಚನು ನಿಂಗಕ್ಕಿಗೆ, ನಿಂಗಳ ಗೂಡಲ್ಲಿ ನಿಂಗ ಇರಿ’ ಎಂದು ಕೆಲವೊಮ್ಮೆ ಗುಬ್ಬಚ್ಚಿಗಳನ್ನು ಬೆದರಿಸುತ್ತಿದ್ದೆ. ‘ಗುಬ್ಬಚ್ಚಿಗೆ ಹವ್ಯಕ ಕನ್ನಡಾ ಅರ್ಥ ಆಗತಿಲ್ಯೆ ಅಮ್ಮಾ’ ಎಂದು ಮಗ ರಾಗ ಎಳೆಯುತ್ತಿದ್ದ. ಅಂತೂ ಇಂತೂ ಹದಿನೈದಿಪ್ಪತ್ತು ದಿನಗಳಲ್ಲಿ ಸ್ಪಿಫ್ಟ ಹಕ್ಕಿಗಳು ಮರಿಗಳ ರೆಕ್ಕೆ ಬಲಿತು ಅವು ಹೊರಗಡೆ ಹಾರಿ ಹೋದವು ಆಗ ಗುಬ್ಬಚ್ಚಿಗಳು ಒಂದಿಷ್ಟು ಕಡ್ಡಿ ಕಸಗಳನ್ನು ತಂದು ತಂದು ಬೆಳಗಿನಿಂದ ಸಂಜೆಯವರೆಗೂ ಆ ಗೂಡಿನಲ್ಲಿ ತುಂಬಿದವು! ಎಲಾ ಎಲಾ ಗುಬ್ಬಿಗಳೇ ಏನೀತೆರನಾಟ ನಿಮದು!ಎಂದು ಆಶ್ಚರ್ಯಪಟ್ಟೆವು. ಗುಬ್ಬಚ್ಚಿಗಳ ಚಿನ್ನಾಟ ಹಾರಾಟ ಮೊಂಡಾಟಗಳನ್ನು ಹಲವಾರು ವರ್ಷಗಳ ಕಾಲ ಹತ್ತಿರದಿಂದ ಗಮನಿಸುವ ಭಾಗ್ಯ ನಮಗೆ ಸಿಕ್ಕಿತ್ತು. ಹಿತ್ತಲಲ್ಲಿ ಸೊಂಪಾಗಿ ಹಬ್ಬಿದ ಬಸಳೆ ಬಳ್ಳಿಗೆ ಪ್ರತಿ ವರ್ಷ ಗೂಡು ಕಟ್ಟುವ ಬಿಲ್ ಬುಲ್ ಬಾಣಂತನ ನೋಡುವುದು ಬಲು ಮೋಜಿನ ವಿಷಯ ಗೂಡು ಕಟ್ಟುವಾಗ ಸ್ನೇಹ ಮಯಿಯಾಗಿರುವ ಹಕ್ಕಿ ಮೊಟ್ಟೆ ಇಟ್ಟ ನಂತರ ಸಂಶಯ ಪಿಶಾಚಿಯಂತಾಡುತ್ತದೆ. ಗಿಡಗಳಿಗೆ ನೀರು ಹಾಕುವಾಗ ನಾವು ಮರಿಗಳಿಗೇನಾದರೂ ಅಪಾಯ ಮಾಡಿದರೆ ಎಂಬ ಆತಂಕದಲ್ಲಿ ರಿವ್ವನೇ ನಮ್ಮ ಮುಖದವರೆಗೆ ಬಂದು ಹೆದರಿಸುತ್ತದೆ. ‘ಮಾರಾಯ್ತಿ ನೀ ನಿನ್ನ ಮಕ್ಕಳನ್ನ ಬೆಳಸಿಗ್ಯಂಡು ಹೋಗೇ. ಯಂಗ ಎಂತಾ ಮಾಡತ್ವಿಲ್ಲೆ’ಎಂದು ಅದರ ವಿಶ್ವಾಸ ಗಳಿಸಲು ಯತ್ನಿಸಿ ಮರಿಗಳಿಗೆ ಗುಟುಕು ಕೊಡುವ ಚಿತ್ರ ಕ್ಲಿಕ್ಕಿಸಿ ಸಮಾಧಾನ ಪಟ್ಟುಕೊಳ್ಳುತ್ತೇನೆ.

ಮನೆಯ ಮುಂದೆ ನುಗ್ಗಿಮರ ಎತ್ತರವಾಗಿ ಬೆಳೆಯಿತು. ಮಂಗಟ್ಟೆ ಜೋಡಿ ಬರಲಾರಂಭಿಸಿತು. ಅದೇನು ಪ್ರೀತಿಯೋ ನಾಕಾಣೆ ಹಾಲ್‍ನ ಬೆಳಕಿಂಡಿಗೆಂದು ಕೂಡಿಸಿದ ತ್ರಿಕೋನಾಕಾದ ಕಿಟಕಿಗೆ ಒಂದು ಹಕ್ಕಿ ತನ್ನ ಗಟ್ಟಿ ಕೊಕ್ಕಿನಿಂದ ಕಟ ಕಟನೇ ಕುಕ್ಕುತ್ತಿತ್ತು. ಪ್ರತಿಬಿಂಬವನ್ನು ನೋಡಿ ಮತ್ತೊಂದು ಹಕ್ಕಿ ಎಂದುಕೊಂಡು ಸಿಟ್ಟಿನಿಂದ ಕುಕ್ಕುತಿದೆಯೇ ಎಂಬ ಸಂದೇಹವೂ ಬರುತ್ತಿತ್ತು. ಗ್ಲಾಸು ಒಡೆದರೆ ಮತ್ತೆ ಖರ್ಚು ಎಂದುಕೊಂಡು ಟೆರೆಸ್ ಏರಿ ಹುಶ್ ಹುಶ್ ಎಂದು ಬೆದರಿಸಿ ಬಂದರೆ ಹಾರಿಹೋಗಿ ನುಗ್ಗಿ ಮರದ ಮೇಲೆ ಕತ್ತು ಕೊಂಕಿಸುತ್ತಾ ಜೊತೆಯಲ್ಲಿ ಬಂದ ಪ್ರಿಯತಮೆಯೊಂದಿಗೆ ಸರಸ ಸಲ್ಲಾಪ ನಡೆಸುತ್ತಿತ್ತು. ಎಲಾ ಇದರಾ ಸ್ವಲ್ಪವೂ ನಾಚಿಗೆ ಇಲ್ಲದವು ಎಂದು ಕೆಳಗಿಳಿದು ಬಂದರೆ ಮತ್ತದೇ ಕಟ ಕಟ ಕುಟ್ಟೋಣ ಆರಂಭ. ಮತ್ತೆ ಮತ್ತೆ ಮೆಟ್ಟಿಲು ಏರಿ ಇಳಿಯುತ್ತಾ ‘ಅಲ್ಲಾ ಈ ಮಂಗಟ್ಟೆಗೆ ನಾನು ತೂಕ ಇಳಿಸಬೇಕು ಎಂದು ವಿಚಾರ ಮಾಡಿದ್ದೇನಾದರೂ ತಿಳಿದು ಹೀಗೆ ಮಾಡುತ್ತಿದೆಯಾ’ ಡೌಟು ಶುರುವಾಗಿದ್ದೂ ಉಂಟೆನ್ನಿ. ಈ ಮಂಗಟ್ಟೆಗಳು ಏಕಪತ್ನಿ ವ್ರತಸ್ಥ ಹಕ್ಕಿಯಂತೆ. ಜೊತೆಗಿರುವ ಹೆಣ್ಣುಹಕ್ಕಿ ಮರದ ಪೊಟರೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಾಗ ರೆಕ್ಕೆಯನ್ನೆಲ್ಲ ಉದುರಿಹೋಗುತ್ತವೆಯಂತೆ. ಗಂಡು ಹಕ್ಕಿ ಪೊಟರೆಯ ಬಹುಭಾಗವನ್ನು ಮಣ್ಣಿನಿಂದ ಮುಚ್ಚಿ ಮರಿಗೆ ರೆಕ್ಕೆ ಬಲಿಯುವವರೆಗೆ ತಾಯಿ ಹಕ್ಕಿಗೆ ರೆಕ್ಕೆ ಮತ್ತೆ ಹುಟ್ಟುವವರೆಗೂ ಆಹಾರವನ್ನು ತಂದುಕೊಡುತ್ತದೆಯಂತೆ. ಆಹಾರ ಅರಸಿಹೋದ ಹಕ್ಕಿ ಸತ್ತರೆ ಹೆಣ್ಣುಹಕ್ಕಿ ಹಾಗೂ ಮರಿಗಳು ಸಾಯುತ್ತವೆ ಎಂದು ಓದಿದಾಗ ನಿಬ್ಬೆರಗಾದೆ. ಜೀವ ಜಗತ್ತಿನಲ್ಲಿ ಎಂತಹ ಅನೂಹ್ಯ ಸಂಗತಿಗಳೆಲ್ಲ ಇವೆ!
ಕಷ್ಟದಲ್ಲಿ ಕಷ್ಟ ಎಂದರೆ ಪಕ್ಷಿಗಳ ಫೋಟೋ ತೆಗೆಯುವುದು ಮಾರಾಯ್ರೆ. ಪೇರಲೆ ಮರದಡಿ ಚಿಕ್ಕದಾಗಿ ಹೆಚ್ಚಿದಂತೆ ಪೇರಲಹಣ್ಣಿನ ಚೂರುಗಳು ಕಂಡರೆ ಮೇಲೆಲ್ಲ ಕಣ್ಣು ಹಾಯಿಸುತ್ತಿದ್ದೆ. ಅಲ್ಲೆಲ್ಲೋ ಗಿಳಿ ಕಂಡಿತು ಎಂದಾದರೆ ಮನೆಯೊಳಗೋಡಿ ಕ್ಯಾಮರಾ ತಂದು ಅದನ್ನು ಓಪನ್ ಮಾಡುವುದರೊಳಗೆ ಅದು ಪುರ್ ಎಂದು ಹಾರಿ ಮಂಗಮಾಯವಾಗಿರುತ್ತಿತ್ತು ಅಥವಾ ಜೂಮ್ ಮಾಡಿ ತೆಗೆದರೂ ಗಿಣಿಯೂ ಪೇರಲೆ ಎಲೆಯಂತೆ ಕಾಣುತ್ತಿತ್ತು. ಮೊಗ್ಗೆ ದಾಸವಾಳದ ಗಿಡಕ್ಕೆ ನಿತ್ಯವೂ ಲಗ್ಗೆ ಇಕ್ಕುವ ಹೂ ಕುಟುಕ ಅತೀ ಪುಟ್ಟ ಹಕ್ಕಿ ಅದೆಷ್ಟು ಚುರುಕು. ಹತ್ತಾರು ದಿನ ಹೆಣಗಿದರೂ ಒಂದೂ ಒಂದು ಫೋಟೋ ತೆಗೆಯಲಾರದೆ ಹೋದೆ. ಅಮ್ಮಾ ಹಕ್ಕಿಗಳ ಫೋಟೋ ತೆಗೆಯುವವರು ಹಸಿರು ಬಟ್ಟೆಯನ್ನು ಮುಚ್ಚಿಕೊಂಡೋ ಟೆಂಟ್ ಹಾಕಿಕೊಂಡೋ ಸೈಲೆಂಟಾಗಿ ಗಂಟೆಗಟ್ಟಲೆ ಕುಳಿತಿರುತ್ತಾರೆ.. ನೀನು ದೋಸೆ ಕಾವಲಿ ಗ್ಯಾಸ್ ಒಲೆಯ ಮೇಲಿಟ್ಟು ಕ್ಯಾಮರಾ ಹಿಡಿದು ಅಂಗಳಕ್ಕೆ ಓಡುತ್ತೀಯಾ’ ಎಂದ ಮಗರಾಯ. ಅವನ ಮಾತೂ ಸತ್ಯವೇ ಆಗಿತ್ತೆನ್ನಿ. ಆದರೂ ನನ್ನ ನಿರಾಸೆ ಅದು ಹೇಗೋ ಪಾರಿವಾಳದ ಲೋಕಕ್ಕೆ ತಿಳಿದಿರಬೇಕು ಮನೆಯ ಹಿಂದಿನ ಕಿಟಕಿಯ ಸಜ್ಜಾದ ಮೇಲೆ ಪಾರಿವಾಳ ಗೂಡು ಕಟ್ಟಿ ಒಂದೆರಡು ದಿನದಲ್ಲೇ ಮೊಟ್ಟೆ ಇಟ್ಟಿತು. ಮೊಟ್ಟೆ ಇಟ್ಟ ನಂತರ ಧ್ಯಾನಸ್ಥವಾಗಿ ಗೂಡಿನ ಮೇಲೆ ಕುಳಿತಿತ್ತು(ಎಷ್ಟು ಫೋಟೋ ಬೇಕಾದರೂ ತೆಗೆ ನನಗೇನೂ ಸಂಬಂಧವಿಲ್ಲ ಎಂಬಂತೆ) ಹತ್ತೇರಕಿ ಒಂದೇ ಪೋಸು ಗೊಣಗಿಕೊಂಡರೂ ನಾಲ್ಕಾರು ಫೋಟೋ ತೆಗೆದು ಪರವಾಗಿಲ್ಲ ಹಕ್ಕಿಯ ಫೋಟೋ ಹೊಡೆದು ನನ್ನ ಬೆನ್ನು ನಾನೇ ಚಪ್ಪರಿಸಿಕೊಂಡೆ.

ನನ್ನ ನಾಲ್ಕನೇ ಕ್ಲಾಸ್ ಓದುವ ನನ್ನ ಪುಟಾಣಿ ಮಗನ ಸಹಪಾಠಿಗಳು ಹಾಗೂ ಪಕ್ಷಿತಜ್ಞರೊಂದಿಗೆ ಒಂದು ದಿನ ಧಾರವಾಡದ ವಿಶ್ವವಿದ್ಯಾಲಯದ ಬೊಟಾನಿಕಲ್ ಗಾರ್ಡನ್ನಿಗೆ ಹೋಗಿದ್ದೆ. ‘ಓ ಆ ಮುತ್ತುಗದ ಮರದ ತುದಿಗೆ ನೋಡ್ರಿ ಒಂದ ಚೆಂದದ ಹಕ್ಕಿ ಕುಂತದ. ಅದರ ಹೆಸರು ಯಾರಿಗಾರ ಗೊತ್ತದೇನು?’ ಎಂದು ಪಕ್ಷಿತಜ್ಞರು ಪ್ರಶ್ನೆಯನ್ನೆಸೆದರು. ಉಡಾಳ ಪಟ್ಯಾ ಅಂದರ ಪ್ರತೀಕ ‘ಅದ ಕಾಗೀರಿ ಎನ್ನಬೇಕೇ. ‘ಕಾಗಿ ಚೆಂದಿರ್ತದೇನು ಹುಚ್ಚ ಮಂಗ್ಯಾ ಎಂದೊಬ್ಬ ಅವನ ಸ್ನೇಹಿತ ಬೈದ. ‘ಕಾಗಿ ಚೆಂದ ಇರದಿದ್ರೇನಾತು. ಊರಾಗಿನ ಮಂದಿ ಎಸೆದ ಮುಸರಿ ತಿಂದು ಊರ ಸ್ವಚ್ಛ ಇಡತದ ಚೂರೇ ಚೂರು ತಿಂಡಿ ಸಿಕ್ಕರೆ ಸಾಕು, ತನ್ನ ಬಳಗಾ ಎಲ್ಲಾ ಕರೀತದ ಭಾಳ ಅಂದ್ರ ಭಾಳ ಒಳ್ಳೆ ಹಕ್ಕಿ ಕಾಗಿ’ ಅಂತಾ ನಮ್ಮ ಪಾಠದಾಗ ಬಂದಿಲ್ಲೇನು ಎಂದು ಪಟ್ಯಾ ತನ್ನ ಜ್ಞಾನ ಪ್ರದರ್ಶಿಸಿದ. ‘ಏ ಗಪ್ಪಾರ್ರೋ ಹುಡುಗರ್ಯಾ ಅದು ಕಾಗಿ ಅಲ್ಲ ನೀಲಕಂಠ ಪಕ್ಷಿ’ ಎಂದು ಅವರು ಹೇಳುವಷ್ಟರಲ್ಲಿ ಹಕ್ಕಿ ಹಾರಿ ಹೋಗಿತ್ತು. ನಮ್ಮ ಪರಿಸ್ಥಿತಿ ನೋಡಿ ಕಾವಿ ಬಣ್ಣದ ಮುತ್ತುಗದ ಹೂವುಗಳು ಕಿಲ ಕಿಲ ನಕ್ಕಂತೆನಿಸಿತು. ನಂತರ ಕಂಡ ಯಾವ ಹಕ್ಕಿಗೂ ಕನ್ನಡದ ಹೆಸರು ಹೇಳದೇ ರೆಡ್ ಹೆಡೆಡ್ ಬುಲ್ಲ ಬುಲ್, ಯೆಲ್ಲೋ ಹೆಡೆಡ್ ಸ್ಪಾರೋ ಎಂದು ಅವರು ಪರಿಚಯಿಸುವುದರೊಳಗೆ ನನ್ನ ಮಗ ವಿಕ್ರಮ ಅವನ ಸ್ನೇಹಿತ ರಾಘುವಿಗೆ ಪಕ್ಷಿ ವೀಕ್ಷಣೆ ಮಾಡುವ ಆಸಕ್ತಿ ಕರಗಿತ್ತು. ನನ್ನ ಕಣ್ತಪ್ಪಿಸಿ ಅವರಿಬ್ಬರೂ ಸಮೀಪದಲ್ಲಿದ್ದ ಅಶೋಕಾ ಮರವನ್ನೇರಿದ್ದರು. ಅದು ನನ್ನ ಗಮನಕ್ಕೆ ಬಂದು ‘ಏ ಮಕ್ಕಳ್ರಾ ಬಿದ್ರೆ ಕಾಲು ಮುರಿತದ ಇಳಿರಿ ಕೆಳಗೆ ಎಂದೆ. ‘ಏರೂವಾಗ ಕಷ್ಟ ಆಗಿಲ್ರಿ ಆಂಟಿ, ಈಗ ಇಳಿಯಾಕ ಅಂಜಿಕೀರಿ ಎನ್ನಬೇಕೆ ರಾಘು’! ನಾನು ಅಶೋಕಾ ವೃಕ್ಷದ ಕೆಳಗೆ ಶೋಕತಪ್ತ ಸೀತೆಯಂತೆ ಕುಳಿತೆ. ನಂತರ ಸಕಲೆಂಟು ದೇವರನ್ನು ಮನದಲ್ಲಿ ನೆನೆದು ‘ಈತ್ತಾ ಕಡಿ ಟೊಂಗಿ ಹಿಡಿ ಅಲ್ಲಿ ಕಾಲು ಕೊಡು’ ಎಂದೆಲ್ಲ ಸಲಹೆ ಸೂಚನೆ ಕೊಟ್ಟು ಅಂತೂ ಇಂತೂ ಅವರಿಬ್ಬರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಪಕ್ಷಿ ವೀಕ್ಷಣೆಗೆ ಮಂಗಳ ಹಾಡಿ ಮನೆಯತ್ತ ಹೊರಟೆ.

ನಾಲ್ಕಾರು ದಿನಗಳಾಗಿರಬೇಕು ಪಕ್ಕದ ಮನೆಯವರು ತಮ್ಮ ಚೆಂದದ ಮನೆಗೆ ದೃಷಿ ತಾಕದಿರಲೆಂದು ಗೀಜಗದ ಗೂಡನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಕಟ್ಟಿದರು. ಅಷ್ಟು ಕಲಾತ್ಮಕವಾಗಿ ಗೂಡನ್ನು ನೇಯ್ದ ಪುಟ್ಟ ಹಕ್ಕಿಯ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳದೇ ಅದನ್ನು ಕಿತ್ತು ತಂದು ಮೊಟ್ಟೆ ಮರಿಗಳನ್ನು ಸಾವಿಗೆ ಕಾರಣವಾಗುವ ಮಾರಾಟಗಾರರನ್ನು, ಅದನ್ನು ಖರೀದಿಸುವವರನ್ನು ಮನಸಾ ಶಪಿಸಿದೆ.

ಪಕ್ಷಿಗಳನ್ನು ಹುಡುಕಿಕೊಂಡು ನೀವು ಎಲ್ಲೆಲ್ಲೋ ಅಲೆಯಬೇಕಾಗಿಲ್ಲ. ಅವು ನಿಮ್ಮ ಮನೆಯಂಗಳಕ್ಕೇ ಬರುತ್ತವೆ. ಅವುಗಳನ್ನು ಗಮನಿಸುವ ವ್ಯವಧಾನ ನಿಮಗಿರಬೇಕು ಎಂದು ಎಲ್ಲೋ ಓದಿದ ಸಾಲು ನೆನಪಿಗೆ ಬರುತ್ತದೆ. ಇಳಿ ಸಂಜೆಗೆ ತಾರಸಿ ಏರಿ ಒಂದಿಷ್ಟು ಕಿರು ಧಾನ್ಯಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಇನ್ನೊಂದು ತಟ್ಟೆಯಲ್ಲಿ ಒಂದಿಷ್ಟು ನೀರಿಟ್ಟು ಹಕ್ಕಿಗಳಿಗೆ ಆಹ್ವಾನ ಕೊಡುತ್ತೇನೆ. ರಿವ್ವನೆ ಹಾರುವ ಗಿಡಗಗಳನ್ನು, ಕರೆಂಟ್ ತಂತಿಯ ಮೇಲೆ ಕುಳಿತ ಗೂಬೆಯನ್ನು, ಹೆಸರೇ ತಿಳಿಯದ ಹಲವು ಹಕ್ಕಿಗಳನ್ನು ನೋಡುತ್ತಾ ‘ಅಲ್ಲಾ ಈ ಆಕಾಶದಾಗ ಒಂದ ರಸ್ತೆ ಸುದ್ದಕ್ಕ ಇರಂಗಿಲ್ಲಾ. ನಿಮಗೆ ನಿಮ್ಮ ನಿಮ್ಮ ಗೂಡುಗಳಿಗೆ ಹೋಗೋ ದಿಕ್ಕುಗಿಕ್ಕು ಹೆಂಗರ ತಿಳಿತೋ ಏನೋ” ಎಂದು ಗೊಣಗುತ್ತೇನೆ. ನಮಗ ಈಗೀಗ ಗೊತ್ತಾದ ಗೂಗಲ್ಮ್ಯಾಪಿನಂಥಾದ್ದೇನೋ ಒಂದು ಮ್ಯಾಪನ್ನು ಪ್ರತೀ ಹಕ್ಕಿ ತಲೆಯೊಳಗೆ ದೇವರು ಇಟ್ಟಿರಬೇಕು ಅಂತ ನನಗ ಡೌಟ ಅದ. ನಿಮಗ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter