ಗಿರಿಮನೆ ಶ್ಯಾಮರಾವರ ಎರಡು ಕಾದಂಬರಿಗಳು

ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೊಸ ರೀತಿಯ ಬರವಣಿಗೆಗಳಿಂದ ಓದುಗ ವೃಂದಕ್ಕೆ ಚಿರಪರಿಚಿತರಾದ ಗಿರಿಮನೆ ಶ್ಯಾಮರಾವರು ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕೌತುಕ ಹೊಂದಿದವರು. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿರುವ ಇವರು ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಮುಂತಾದ ಕ್ಷೇತ್ರಗಳಲ್ಲಿ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ಗ್ರಾಮದವರಾ ಇವರು ಗಿರಿಮನೆ ಪ್ರಕಾಶನದ ಮೂಲಕ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

‘ಮುಂಗಾರಿನ ಕರೆ’
ಕಾದಂಬರಿಯ ಹೆಸರು – ‘ಮುಂಗಾರಿನ ಕರೆ’
ಲೇಖಕರು _ ಗಿರಿಮನೆ ಶ್ಯಾಮರಾವ್
ಪ್ರಕಾಶಕರು _ ಗಿರಿಮನೆ ಪ್ರಕಾಶನ, ಸಕಲೇಶಪುರ.
ಬೆಲೆ _ ರೂ. 220/-

“ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ” ಎಂಬ ಚೆನ್ನವೀರ ಕಣವಿಯರ ಕವಿತೆಯ ಸಾಲುಗಳನ್ನು ಆಲಿಸುತ್ತಿದ್ದಂತೆ ಮನಸ್ಸು ವರ್ಷಧಾರೆಗೆ ಹೆಸರಾಗಿರುವ ಕರಾವಳಿ ಹಾಗೂ ಮಲೆನಾಡಿನತ್ತ ಚಲಿಸಿ ಬಿಡುತ್ತದೆ. ರಾಗ ತಾಳ ಲಯ ಬದ್ಧವಾಗಿ ಗುನುಗುನಿಸುವ ಬಗೆ ಕೂಡ ಮನಸ್ಸಿಗೆ ಆಹ್ಲಾದಕರ ಭಾವನೆಯನ್ನು ಉಂಟು ಮಾಡುತ್ತದೆ. ಸುತ್ತೆಲ್ಲಾ ವನಸಿರಿಯ ಹಸಿರು ಸೊಬಗು, ಅಲ್ಲಲ್ಲಿ ನಿನಾದಿಸುವ ಜೀರುಂಡೆಗಳ ಮಾರ್ಧನಿ, ನಮ್ಮ ಹೆಜ್ಜೆಗಳ ಜೊತೆ ಹೆಜ್ಜೆ ಹಾಕುತ್ತಿರುವ ಭಾವವನ್ನು ಮೂಡಿಸುವ ತರಗೆಲೆಗಳ ಸಪ್ಪಳ, ತನುಮನವನ್ನು ತಬ್ಬಿ ಮುಖವನ್ನು ಮುತ್ತಿಡುವ ತಂಗಾಳಿ, ಮಳೆ ಮಂಜುಗಳ ಸೇಚನ, ಹಸಿರು ವನಗಳ ಸಾಲನ್ನೇ ಚಾದರವಾಗಿ ಹೊದ್ದು ನಿಂತ ಪ್ರಕ್ಥತಿಯ ದೃಶ್ಯಗಳನ್ನು ಒಂದಿಷ್ಟೂ ಮರೆಮಾಚದೆ ಅಭಿವ್ಯಕ್ತಿಗೊಳಿಸುವ ಪ್ರಕೃತಿಯ ಸುಂದರ ತಾಣದಲ್ಲಿ ವಿಹರಿಸುವ ಪಾತ್ರಗಳ ನಡುವೆ ನಾವೂ ಇರುವೆವೋ ಎಂಬ ಅನುಭವವನ್ನು ನೀಡುವ ಗಿರಿಮನೆ ಶ್ಯಾಮರಾವರ ‘ಮುಂಗಾರಿನ ಕರೆ’ ಎಂಬ ಕಾದಂಬರಿ ಮೊದಲ ಓದಿಗೇ ಆಪ್ತವೆನಿಸಿಕೊಳ್ಳುತ್ತದೆ.

ಗಿರಿಮನೆ ಶ್ಯಾಮರಾವ್ ಅವರ ‘ಮಲೆನಾಡಿನ ರೋಚಕ ಕಥೆಗಳು’ ಸರಣಿಯ ಏಳನೆ ಕೃತಿ ‘ಮುಂಗಾರಿನ ಕರೆ’ಯ ಒಡಲಿನುದ್ದಕ್ಕೂ ಕಾಣ ಸಿಗುವ ‘ನಿಧಿ’ ಕಾದಂಬರಿಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಮಲೆನಾಡಿನ ಪರಿಸರಕ್ಕೆ ಹೊಂದಿಕೊಂಡು, ಅಲ್ಲಿನ ಬೆಟ್ಟ – ಗುಡ್ಡಗಳನ್ನು ಜೀವಂತಿಯ ನೆಲೆಯಲ್ಲಿ ಇರಿಸಿಕೊಂಡು ಇಳೆಯನ್ನೇ ನೆಚ್ಚಿ ಬದುಕುತ್ತಿದ್ದ ‘ಕಾಡುಗಂಬ ಕಾಫೀ ಎಸ್ಟೇಟ್’ನ ಮಾಲಿಕರಾಗಿದ್ದ ನಿಧಿಯ ತಂದೆ ಸುಂದರಗೌಡರ ಅಚಾನಕ್ ಅನಾರೋಗ್ಯ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದ ಆತನ ಮಗಳು ನಿಧಿಯನ್ನು ಮಲೆನಾಡಿನ ಪರಿಸರಕ್ಕೆ ಕರೆತರುತ್ತದೆ. ಆರೋಗ್ಯವಂತರಾಗಿದ್ದ ತಂದೆಯ ಪರಿಸ್ಥಿತಿಯು ಹೀಗಾದದ್ದು ಆಕೆಯ ಪಾಲಿಗೆ ಬಿಡಿಸಲಾರದ ಕಗ್ಗಂಟಾಗುತ್ತದೆ.. ಸುಂದರ ಗೌಡರ ಎರಡನೇ ಪತ್ನಿ ಕವಿತಾಳ ಮಗಳು ನಿಧಿಗೂ, ಮೊದಲ ಪತ್ನಿ ಕುಮುದಾಳ ಮಗ ಲೋಕೇಶನಿಗೂ ಅಲ್ಲಿಂದಲ್ಲಿಯ ನಂಟು. ಹುಟ್ಟಿನಿಂದಲೂ ನಿಧಿಯನ್ನು ದ್ವೇಷಿಸುತ್ತಲೇ ಬಂದಿದ್ದ ಲೋಕೇಶನ ಈ ಬಗೆಯ ವರ್ತನೆ ನಿಧಿಯನ್ನು ಬೆಂಗಳೂರಿಗೆ ನೆಚ್ಚುವಂತೆ ಮಾಡಿದ್ದಲ್ಲಿ, ಪ್ರೀತಿ, ಅಕ್ಕರೆ ಹಾಗೂ ಸಹೋದರ ವಾತ್ಸ್ಯಲ್ಯದ ಅಭಾವ ನಿಧಿಯನ್ನು ಮಲೆನಾಡಿನ ಪರಿಸರದಿಂದ ವಿಮುಖಗೊಳಿಸಿದ್ದರಲ್ಲಿ ಅಚ್ಚರಿಯಿಲ್ಲ. ವ್ಯವಹಾರದಲ್ಲಿ ಅಷ್ಟೇನೂ ಚತುರೆಯಾಗಿರದೆ ಮನೆ ವಾರ್ತೆಗೆ ಸೀಮಿತಳಾಗಿದ್ದ ನಿಧಿಯ ತಾಯಿ ಕವಿತಾಳಿಗೆ ಮಗಳನ್ನು ತನ್ನೆಡೆಗೆ ಕರೆಸಿಕೊಳ್ಳಬೇಕೆಂಬ ಯೋಚನೆ ಮೂಡದಿದ್ದುದೂ ಸೋಜಿಗದ ಸಂಗಾತಿಯಾಗಿದೆ. ಏನೇ ಇದ್ದರೂ ನಿಧಿ ತನ್ನ ಭೂತಕಾಲದ ಘಟನೆಗಳನ್ನು ಮರೆತವಳಂತೆ ಕಾಡುಗಂಬ ಕಾಫೀ ಎಸ್ಟೇಟಿಗೆ ಹಿಂತಿರುಗುವುದು ಕಾದಂಬರಿಯ ಹೊಸ ಬೆಳವಣಿಗೆಯಾಗಿದೆ.

ವಿಶಾಲ ಮನೆಯ ಪಡಸಾಲೆಯಲ್ಲಿ ಜೀವ ಇಲ್ಲದವರಂತೆ ಮಲಗಿದ್ದ ತಂದೆಯನ್ನು ಕಾಣುತ್ತಲೇ ನಿಧಿಯ ಅಂತರಂಗ ಎಚ್ಚೆತ್ತುಕೊಳ್ಳುತ್ತದೆ. ತನ್ನ ಕೈಗಳೊಂದಿಗೆ ಬೆಸೆದ ಮಗಳ ಸಾಮೀಪ್ಯದ ಹಿತವನ್ನು ಅನಿಭವಿಸಿದ ಸುಂದರ ಗೌಡರಿಗೆ ಅದೇನೋ ಚೇತನ ಬಂದಂತೆ ದೇಹದಲ್ಲಿ ಕಾಣಿಸಿಕೊಂಡ ನಿಧಾನಗತಿಯ ಸಂಚಾರ ನಿಧಿಯಲ್ಲಿ ಒಂದು ರೀತಿಯ ಸಂಚಲನವನ್ನು ಉಂಟುಮಾಡುತ್ತದೆ. ತಂದೆಯ ಅಂತರಂಗ ಏನನ್ನೋ ನುಡಿಯ ಬಯಸುತ್ತಿದೆ ಎಂಬುದನ್ನು ಅರಿತ ನಿಧಿ ಅದರಾಳವನ್ನು ಗ್ರಹಿಸುವ ಮುನ್ನವೇ ತಂದೆಯನ್ನು ಕೆಳೆದುಕೊಳ್ಳುಬೇಕಾಗಿ ಬರುವ ಸ್ಥಿತಿ ಶೋಕದ ವಾತವರಣವನ್ನು ನಿರ್ಮಿಸುತ್ತದೆ. ದೀರ್ಘ ನಿಟ್ಟುಸಿರಿನೊಂದಿಗೆ “ಇನ್ನೇನೂ ಉಳಿದಿಲ್ಲ” ಎನ್ನುವ ನಿಧಿಯ ಮಾತು ಎಸ್ಟೇಟಿನ ಭವ್ಯತೆಯನ್ನು ಮಾಸುವಂತೆ ಮಾಡುತ್ತದೆ.

ಎಸ್ಟೇಟಿನ ಗತ ವೈಭವವನ್ನು ಮೆಲುಕು ಹಾಕುವ ನಿಧಿಗೆ ಆಕೆಯ ಇರುವಿಕೆಯ ಮಹತ್ವವನ್ನು ತಿಳಿಸಿ ಹೇಳುವ ಅಡಿಗೆಯವ ತಮ್ಮಯ್ಯ ನಿಧಿಯ ಕೌತುಕಗಳಿಗೆ ತೆರೆ ಎಳೆಯುವ ಮಾರ್ಗದರ್ಶಕನಾಗಿಯೂ, ಅವಳ ಸಾಮಾಜಿಕ ಬದುಕಿನಲ್ಲಿ ಕಾಣ ಸಿಗುವ ಗೊಂದಲಗಳಿಗೆ ಉತ್ತರಿಸುವ ಆಪ್ತನಾಗಿಯೂ ಕಂಡುಬರುವ ಸನ್ನಿವೇಶ ಕಾದಂಬರಿಯ ವಿಸ್ತಾರಕ್ಕೆ ಕಾರಣವಾಗುತ್ತದೆ. ಎಸ್ಟೇಟಿನ ಮ್ಯಾನೇಜರ್ ರಂಗದೊರೆ, ಮರದ ವ್ಯಾಪಾರಿ ಮುತ್ತುರಾಜ್, ಕೆಲಸದಾಳು ವಲ್ಲಿ, ಎಸ್ಟೇಟಿನ ಕೂಲಿಯಾಕೆ ಸುಬ್ಬಿ, ಮೂಢನಂಬಿಕೆಗಳಿಗೆ ಸಿಲುಕಿ ಕೋಪ ಅನುಭವಿಸುವ ಕೋಮಲ – ಸೀತು, ನಿಧಿಯ ಸಹಪಾಠಿಗಳಾದ ಲೀನ ಹಾಗೂ ವೃತ್ತಿ ಬಾಂಧವ್ಯದ ನೆಲೆಯಲ್ಲಿ ಆಪ್ತನಾಗುವ ಡಾIಪ್ರಶಾಂತ್ ಮೊದಲಾದವರೊಂದಿಗೆ ನಿಧಿಯ ಮನೋತರಂಗ ಹೆಣೆದುಕೊಳ್ಳುವುದರಿಂದ ಆಕೆಯೊಳಗಿನ ಚಾಕಚಕ್ಯತೆ ಹಾಗೂ ಸಾಮಥ್ರ್ಯ ಬೆಳಕಿಗೆ ಬರುತ್ತದೆ.

ಕಾಡುಗಂಬ ಕಾಫೀ ಎಸ್ಟೇಟಿನ ಸಿರಿವಂತಿಕೆ ಹಾಗೂ ಪ್ರಕೃತಿ ಸಹಜ ಮನೋಭಾವಗಳಿಗೆ ಸಾಕ್ಷಿಯಾಗುವ ನಿಧಿಗೆ ಅವುಗಳು ತನ್ನ ಬದುಕಿನ ದಿಕ್ಕನ್ನು ಬದಲಿಸಬಹುದು ಎಂಬ ಕಲ್ಪನೆ ಇರುವುದಿಲ್ಲ. ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಮಟ್ಟದ ಸಾಧನೆಯನ್ನು ಮಾಡಲು ಬಯಸಿದ್ದ ಆಕೆಗೆ ಎಸ್ಟೇಟಿನ ಸ್ಥಿತಿ ಗತಿಗಳು ಹಿನ್ನಡೆಯನ್ನು ಉಂಟುಮಾಡುತ್ತದೆ. ಮ್ಯಾನೇಜರ್ ರಂಗದೊರೆ ಮತ್ತು ಮರದ ವ್ಯಾಪಾರಿ ಮುತ್ತುರಾಜ್ ಮಾಡುವ ಮೋಸದ ಲೆಕ್ಕಾಚಾರ, ಹಣದ ಆಮಿಷಕ್ಕೆ ಬಲಿಯಾದ ವಲ್ಲಿ ಕಾರಿರುಳ ಭೂತವಾಗಿ ನಿಧಿಯ ಕೋಣೆಯುದ್ದಕ್ಕೂ ಚಲಿಸಿ ಹುಟ್ಟಿಸುವ ಭೀಕರತೆ, ಆರೋಗ್ಯ ಸಮಸ್ಯೆಗಳನ್ನು ಮಾಟ ಮಂತ್ರದ ದೆಸೆಯಿಂದ ಕಾಣುತ್ತಾ ಹೆಣ್ಣಿನ ಮಾನವನ್ನು ದುರ್ಬಳಕೆ ಮಾಡಿಕೊಳ್ಳುವ ರೀತಿ, ಕುಡಿತದ ಚಟಕ್ಕೆ ಬಿದ್ದ ಪತಿಯಿಂದ ದೈಹಿಕ ಹಿಂಸೆ ಅನುಭವಿಸುವ ಸುಬ್ಬಿ, ಎಸ್ಟೇಟಿನ ಹೊರವಲಯದಲ್ಲಿ ಕಳ್ಳಭಟ್ಟಿ ವ್ಯವಹಾರಗಳನ್ನು ದಿಟ್ಟತನದಿಂದ ಎದುರಿಸುವ ರೀತಿಯೂ ನಿಧಿಯನ್ನು ಎಸ್ಟೇಟಿನ ಒಡತಿಯನ್ನಾಗಿ ಮಾರ್ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಆಕಸ್ಮಿಕ ಅಪಘಾತಕ್ಕೆ ಒಳಗಾದ ನಿಧಿಯನ್ನು ಉಪಚರಿಸುವ ಶಶಾಂಕನೊಂದಿಗಿನ ಒಡನಾಟ ಮಧು ಬಾಂಧವ್ಯಕ್ಕೆ ಕಾರಣವಾಗುವ ಬಗೆ ಕಾದಂಬರಿಯಲ್ಲಿ ಅಡಗಿರುವ ರಮ್ಯತೆಯ ಸತ್ವವನ್ನು ಪರಿಚಯಿಸುತ್ತದೆÉ. ಅಪರಿಚಿತನಾದ ಶಶಾಂಕನನ್ನು ನಿಧಿಯ ಬದುಕಿನ ಪ್ರತಿಯೊಂದು ಹೆಜ್ಜೆಗೂ ಬೆಸೆಯುವಂತೆ ಮಾಡಿದ ಬಗೆ ಗಮನಾರ್ಹ. ಪೇಟೆಯ ಜಂಜಡಗಳಿಗೆ ವಿದಾಯ ಹೇಳುವ ಶಶಾಂಕ ಮಲೆನಾಡಿನ ಪರಿಸರದ ಪ್ರಾಮಾಣಿಕ ಕೃಷಿಕನಾಗಿಯೂ, ನಿಸರ್ಗ ನಿರ್ಮಿತ ಸೋಜಿಗಗಳ ಬಗ್ಗೆ ಸಂಶೋಧನೆ ನಡೆಸುತ್ತಾ ಅವುಗಳೆಡೆಗೆ ಬೆಳಕು ಚೆಲ್ಲುವ ಭರವಸೆಯ ಬರಹಗಾರನಾಗಿ ರೂಪುಗೊಳ್ಳುವ ವಿಧಾನ ಯುವ ಜನಾಂಗಕ್ಕೆ ಮಾದರಿಯಾಗಿದೆ. ಶಶಾಂಕನ ಬರಹಗಳು ನಿಧಿಗೆ ಮಲೆನಾಡಿನ ಜೀವಚರಗಳ, ಕೃಷಿ ಅಂಶಗಳ ಕುರಿತು ಮಾಹಿತಿ ನೀಡಿದರೆ ಶಶಾಂಕನ ಒಡನಾಟ ಮಾನಸಿಕ ನೆಮ್ಮದಿ ಮತ್ತು ಸಂತಸವನ್ನು ನೀಡುತ್ತದೆ. ಅವರ ನಡುವಿನ ಭಾವಪೂರ್ಣ ನಂಟು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಶಶಾಂಕನ ನೆರವಿನಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡೊಕೊಳ್ಳುವ ನಿಧಿ ಎಸ್ಟೇಟಿನಲ್ಲಿನ ಕಾರ್ಮಿಕರ ಸಮಸ್ಯೆ, ಎಸ್ಟೇಟಿನ ಹೊರವಲಯದಲ್ಲಿ ನಡೆಯುವ ಕಳ್ಳ ದಂಧೆಗಳನ್ನು ಯಶಸ್ವಿಯಾಗಿ ಹತ್ತಿಕ್ಕುವುದರಲ್ಲಿ ಸಫಲಳಾಗಿ, ಕೆಲಸಗಾರ ಕುಟುಂಬಗಳಿಗೂ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸಲು ಪ್ರೇರಣೆ ನೀಡುತ್ತದೆ. ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣವನ್ನು ಪಡೆಯಲಿಚ್ಛಿಸಿದ್ದ ನಿಧಿ ತನ್ನ ಎಸ್ಟೇಟಿನಲ್ಲೇ ಕಿರು ಆರೋಗ್ಯ ಕೇಂದ್ರವನ್ನು ಆರಂಭಿಸುವ ಮನ ಮಾಡುತ್ತಾಳೆ. ತಾನು ಕಲಿತ ವಿದ್ಯೆಯನ್ನು ತನ್ನ ನೆಲದ ಒಳಿತಿಗಾಗಿ ಮುಡಿಪಾಗಿಟ್ಟ ಕಾರ್ಮಿಕರ ಆರೋಗ್ಯ ಮತ್ತು ಭದ್ರತೆಗೆ ಸದುಪಯೋಗಗೊಳಿಸುವ ಬಗೆ ಎಸ್ಟೇಟಿನ ಸದಸ್ಯರುಗಳಿಗೆ ಮೆಚ್ಚುಗೆಯಾಗುವುದಲ್ಲದೇ ಶಶಾಂಕ ಹಾಗೂ ನಿಧಿಯ ನಡುವಿನ ಸಂಬಂಧವನ್ನೂ ಹತ್ತಿರವಾಗಿಸುತ್ತದೆ. ಕೊನೆಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಳ್ಳುವ ರಂಗದೊರೆ, ವಲ್ಲಿ, ಸೀತು, ಕೋಮಲ ಮೊದಲಾದ ಪಾತ್ರಗಳು ತಮ್ಮ ಒಡತಿಯ ಮಾನವೀಯ ಮೌಲ್ಯಗಳನ್ನು ಓದುಗರ ಮುಂದೆ ತೆರೆದಿಡುತ್ತದೆ. ಸಹಪಾಠಿ ಡಾIಪ್ರಶಾಂತನನ್ನು ವಿವಾಹವಾಗಲು ತೀರ್ಮಾನಿಸುವ ನಿಧಿ ತನ್ನ ತೀರ್ಮಾನದಲ್ಲಿ ಮುಂದುವರೆಯುವ ವಿಚಾರದಲ್ಲಿ ಒಂದೆಡೆ ಗೊಂದಲಕ್ಕೆ ಸಿಲುಕಿದರೆ, ಆಕೆಯು ತನ್ನ ಜೀವನದಲ್ಲಿ ಕನಸಾಗಿ ಉಳಿಯುವುದನ್ನು ನೆನೆದು ಮರುಗುವ ಶಶಾಂಕನ ನೋವು ಹೃದಯವನ್ನು ತಟ್ಟುತ್ತದೆ. ತನ್ನ ನಿರ್ಧಾರವನ್ನು ದೃಢಗೊಳಿಸುವ ನಿಧಿ ತನ್ನ ವಿವಾಹ ಸಂಬಂಧೀ ಮಾತುಕಥೆಗಾಗಿ ಪ್ರಶಾಂತನನ್ನು ಪಟ್ಟಣದಲ್ಲಿ ಸಂಧಿಸುವ ತೀರ್ಮಾನಕ್ಕೆ ಬರುತ್ತಾಳೆ. ಪಟ್ಟಣದಲ್ಲಿ ಸ್ವಂತ ಆಸ್ಪತ್ರೆಯನ್ನು ಹೊಂದಿದ್ದ ಪ್ರಶಾಂತ ತನ್ನ ಕೈಕೆಳಗೆ ಕೆಲಸ ನಿರ್ವಹಿಸುವ ದಾದಿ ಲೀನಾಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಬೆಳಕಿಗೆ ಬರುತ್ತದೆ. ಇದು ನಿಧಿಯ ತೀರ್ಮಾನವನ್ನು ಬದಲಿಸುವಂತೆ ಮಾಡುವುದಲ್ಲದೇ, ತನ್ನ ಬದುಕಿನ ಋಣವು ತನ್ನದೇ ಆದ ಕಾಡುಗಂಬ ಎಸ್ಟೇಟಿನ ಮಣ್ಣಿನಲ್ಲಿದೆ ಎಂಬ ವಾಸ್ತವವನ್ನು ನಿಧಿಗೆ ಮನವರಿಕೆ ಮಾಡಿಕೊಡುತ್ತದೆ.. ತನ್ನ ಬದುಕಿಗೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರುವುದರಲ್ಲಿ ಗೊಂದಲಕ್ಕೆ ಒಳಗಾಗುವ ನಿಧಿ ಕ್ರಮೇಣ ಚೈತನ್ಯವನ್ನು ಮೈಗೂಡಿಸಿಕೊಂಡು ಎಸ್ಟೇಟಿನ ಬಿಕ್ಕಟ್ಟುಗಳು, ಕಾರ್ಮಿಕತ ಸಮಸ್ಯೆ, ಒಳ ಜಗಳಗಳನ್ನು ಬಗೆಹರಿಸುವಲ್ಲಿ ಸಫಲಳಾಗುವ ಸನ್ನಿವೇಶವು ಓದುಗರ ಮನದೊಳಗೆ ಆಕೆಯ ವ್ಯಕ್ತಿತ್ವವನ್ನು ಸ್ಥಾಪಿಸುತ್ತದೆ. ಒಂದು ಕಡೆ ಅಡುಗೆ ತಮ್ಮಯ್ಯ ಶಶಾಂಕನ ಇರವನ್ನು ನಿಧಿಯ ಜೀವನದಲ್ಲಿ ಬಿಂಬಿಸುತ್ತಾ ಸಾಗಿದರೆ ಇನ್ನೊಂದು ಕಡೆ ನಿಧಿಯಂತಹ ಜಾಣೆ ತನ್ನ ಮಗನ ಜೀವನದ್ದುದ್ದಕ್ಕೂ ಇದ್ದರೆ ಒಳ್ಳೆಯದು ಎಂದು ಭಾವಿಸುವ ಶಶಾಂಕನ ತಾಯಿಯ ನಿಲುವು ಸ್ವಾಗತಾರ್ಹವಾಗಿದೆ. ಜಾತಿ ಅಂತಸ್ತುಗಳ ವಿಚಾರದಲ್ಲಿ ಪರಸ್ಪರ ಭಿನ್ನವಾಗಿರುವ ಶಶಾಂಕ ಮತ್ತು ನಿಧಿಯ ಜೋಡಿಯನ್ನು ಕಾಣಬಯಸುವ ಓದುಗರಿಗೆ ಕಾದಂಬರಿ ನಿರಾಸೆ ಉಂಟುಮಾಡುವುದಿಲ್ಲ. ಜಾತಿ, ಆಸ್ತಿ, ಅಂತಸ್ತು ಹಾಗೂ ಹಣಕಾಸಿನ ಮೂಲಕ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುವ ನಿಧಿ ಕೊನೆಗೂ ಅನ್ಯಜಾತಿಯ ಶಶಾಂಕನನ್ನು ವರಿಸುವುದು ಆಕೆಯ ಧೈರ್ಯ ಹಾಗೂ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಬಯಸುವ ಯೋಚನೆಗಳನ್ನು ಪ್ರತಿಧ್ವನಿಸುತ್ತದೆ. ಈ ಮೂಲಕ ಕಾದಂಬರಿಯು ತನ್ನ ಸತ್ವ ಹಾಗೂ ಸ್ತ್ರೀ ಕೇಂದ್ರಿತ ನೆಲೆಗಳಿಂದ ಮುಖ್ಯವೆನಿಸಿಕೊಳ್ಳುತ್ತದೆ.

ಭಾರತ ಸ್ವಾತಂತ್ರ್ಯ ಪಡೆದು ಸುಮಾರು ಎಪ್ಪತ್ತು ದಶಕಗಳೇ ಸಂದರೂ ಸ್ತ್ರೀಯರ ವಿಚಾರ ಇಂದಿಗೂ ಶೋಚನೀಯವಾಗಿದೆ. ಗ್ರಾಮಾಂತರ ಭಾಗಗಳಲ್ಲಿ ಸಾಮಾಜಿಕ ಪಿಡುಗುಗಳು ಮಹಿಳೆಯರ ಈಗಲೂ ಪೀಡಿಸುತ್ತಿದ್ದರೆ ಇನ್ನೊಂದು ಕಡೆ ಮಹಿಳೆಯರ ಸ್ಥಾನ ಮಾನ ಆರ್ಥಿಕವಾಗಿ ಅಷ್ಟೊಂದು ಮೇಲೇರದಿರುವುದು ಚಿಂತೆಯನ್ನು ಉಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನಿಧಿಯಂತಹ ಸಾಮಾನ್ಯ ಹೆಣ್ಣು ಮಗಳು ತನ್ನ ಬುದ್ಧಿವಂತಿಕೆ, ಚಾಣಾಕ್ಷತನ ಹಾಗೂ ದಿಟ್ಟ ಹೆಜ್ಜೆಗಳ ಮೂಲಕ ನೆಲದ ಮೇಲಿನ ಹಕ್ಕನ್ನು ಅಧಿಕಾರವೇದು ಪರಿಗಣಿಸಿ, ಅಲ್ಲಿನ ದ್ವಂದ್ವಗಳನ್ನು, ಬಿಕ್ಕಟ್ಟುಗಳನ್ನು ಬಗೆಹರಿಸಿ ಅಲ್ಲಿನ ಜನರುಗಳ ಒಂದು ಭಾಗವಾಗಿ ತನ್ನನ್ನು ಭಾವಿಸಿಕೊಂಡು ಅಲ್ಲೇ ಬದುಕಲು ಹೊರಟಿರುವುದು ಇಂದಿನ ಮಹಿಳಾ ಸಮಾಜದ ಭಾಗವಾಗಿ ಅಲ್ಲೇ ಬದುಕಲು ಹೊರಟಿರುವುದು ಮಹಿಳೆಯರ ಪಾಲಿಗೆ ಸಕಾರಾತ್ಮಕ ಸಂದೇಶವಾಗಿಯೂ, ಪ್ರೇರಕ ಶಕ್ತಿಯಾಗಿಯೂ ಕಂಡು ಬರುತ್ತದೆ. ತೊಟ್ಟಿಲು ತೂಗುವ ಕೈಗಳು ಲೆಕ್ಕಪತ್ರಗಳನ್ನು ಹಿಡಿದು, ಅಡುಗೆ ಮಾಡುವ ದಿನಚರಿಯು ವ್ಯವಹಾರಗಳೊಂದಿಗೆ ಮಿಳಿತಗೊಂಡು, ಶೋಷಣೆ – ಪಿಡುಗುಗಳಿಗೆ ಬಲಿಪಶುವಾಗುವ ತಲೆಯು ಸ್ಥೈರ್ಯದಿಂದ ಎತ್ತಿ ಮುನ್ನಡೆದಾಗ ಆಗುವ ಊಹಾತೀತ ಪರಿವರ್ತನೆಗಳಿಗೆ ನಿಧಿ ಸ್ಪಷ್ಟ ಉದಾಹರಣೆಯಾಗಿ ಕಂಡು ಬರುತ್ತಾಳೆ. ಯಾರಿಗೂ ಕಾಯದೇ ಓಡುವ ಕಾಲದೊಂದಿಗೆ ತನ್ನತನವನ್ನು ಬಿಟ್ಟುಕೊಡದೇ, ಬದುಕಿನ ಹೆಜ್ಜೆಗಳನ್ನು ಯೋಚಿಸಿ ಕ್ರಮಿಸಿದಾಗ ಆಗುವ ಪಲ್ಲಟಗಳು ಸಕಾರಾತ್ಮಕ ನೆಲೆಗೆ ಮುನ್ನುಡಿಯಾಗತ್ತದೆ ಎಂಬುದನ್ನು ನಿಧಿ ಸಾಬೀತು ಪಡಿಸುವ ಬಗೆ ಪ್ರಸ್ತುತ ಕಾದಂಬರಿಯ ಸಾರ್ವಕಾಲಿಕತೆಗೆ ಕಾರಣವಾಗುತ್ತದೆ.

ದುಷ್ಕೃತ್ಯ
ಕಾದಂಬರಿಯ ಹೆಸರು – ‘ದುಷ್ಕೃತ್ಯ’
ಲೇಖಕರು _ ಗಿರಿಮನೆ ಶ್ಯಾಮರಾವ್
ಪ್ರಕಾಶಕರು _ ಗಿರಿಮನೆ ಪ್ರಕಾಶನ, ಸಕಲೇಶಪುರ.
ಬೆಲೆ _ ರೂ. 200/-

ದುಷ್ಕೃತ್ಯ ಎಂಬುದು ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ಮೂರನೇ ಕೃತಿಯಾಗಿದೆ. ಸಮಾಜದಲ್ಲಿ ಘಟಿಸುವ ಅಪರಾಧವು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆಗಳ ಕುರಿತು ಕಾದಂಬರಿ ಚರ್ಚಿಸುತ್ತದೆ.

ಬಡತನವು ಎಲ್ಲಾ ಬಗೆಯ ಹಸಿವುಗಳಿಗೆ ಕಾರಣವಾಗುತ್ತದೆ. ಹಾಗೆಯೇ ಬಡತನದಿಂದ ಹುಟ್ಟುವ ಛಲ, ಉತ್ಸಾಹ ಹಾಗೂ ಪ್ರಾಮಾಣಿಕ ಪ್ರಯತ್ನ ಗೆಲುವಿನ ಹಾದಿಉ ಕಡೆಗೆ ಕರೆದೊಯ್ಯುತ್ತದೆ ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ಬರುವ ಸುಚಲ ಮತ್ತು ಸುನೀತಾಳ ಪಾತ್ರಗಳು ಉದಾಹರಣೆಯಾಗಿದೆ. ಬಡತನದ ವಿಷವರ್ತುಲದ ಸುಳಿ ಸುಚಲಾ ಮತ್ತು ಅವಳ ಕುಟುಂಬವನ್ನು ಆವರಿಸಿದ್ದರೂ ಅದನ್ನು ಲೆಕ್ಕಿಸದೇ ದಿಟ್ಟತನದ ಹೆಜ್ಜೆ ಇಟ್ಟ ಸುಚಲಾ ಕೊನೆಗೂ ಉತ್ತಮ ಸಂಬಳ ದಕ್ಕುವ ಉದ್ಯೋಗವನ್ನು ಪಡೆಯುವುದರಲ್ಲಿ ಯಶಸ್ವಿಯಾಗುತ್ತಾಳೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಆಕೆಯ ಭೂತಕಾಲವು ಅವಳ ವರ್ತಮಾನದ ಬದುಕಿನ ಮುಂದೆ ಸೋಲುತ್ತದೆ. ಊಹೆಗೂ ಮೀರಿದ ತಿಂಗಳ ವೇತನ, ಲಭಿಸಲಿರುವ ಭಡ್ತಿಯ ಕನಸು ಆಕೆಗೆ ಹೊಸ ಚೈತನ್ಯವನ್ನು ನೀಡುತ್ತದೆ. ತಂದೆಯಿಲ್ಲದ ಬದುಕಿನಲ್ಲಿ ತಾಯಿಯೇ ತಂದೆಯಾಗಿ ತಮ್ಮನ್ನು ಬೆಳೆಸಿದ ತಾಯಿ ವಿದ್ಯಾವತಿಗೆ ಸಾಥ್ರ್ಯಕ್ಯದ ಭಾವ ಒದಗಿಸಬೇಕೆಂದು ಹವಣಿಸುವ ಸುಚಲಾ ಮತ್ತವಳ ತಂಗಿ ಸುನೀತಾಳ ಪಾತ್ರಗಳು ಜೀವಂತವಾಗಿ ಕಂಗೊಳಿಸುತ್ತದೆ.

ಬಿರುಗಾಳಿ ಎದ್ದ ಬಳಿಕ ಸಹಜ ಸ್ಥಿತಿಗೆ ಮರಳಿದ ಕಡಲಿನಲ್ಲಿ ಮತ್ತೊಮ್ಮೆ ಅನಿರೀಕ್ಷಿತವಾಗಿ ಏಳುವ ಬಿರುಗಾಳಿಯಿಂದಾಗಿ ಉಂಟಾಗುವ ಅನಾಹುತಗಳು ಕಲ್ಪನೆಗೂ ನಿಲುಕದ ಪರಿವರ್ತನೆಗಳಿಗೆ ನಾಂದಿಯಾಗುವಂತೆ ಸುಚಲಾಳ ಬದುಕಿನಲ್ಲೂ ವಿಧಿಯ ಬಿರುಗಾಳಿ ಕಷ್ಟಗಳನ್ನು ತಂದು ಕೊಡುತ್ತದೆ. ತನ್ನ ಮೊದಲ ಗಳಿಕೆಯಲ್ಲಿ ತಾಯಿ ಮತ್ತು ತಂಗಿಯ ಅಪೇಕ್ಷೆಗಳನ್ನು ಸಾಕಾರಗೊಳಿಸುವ ಮೂಲಕ ವೃತ್ತಿ ಬದುಕಿನ ಸಂತೃಪ್ತಿಯನ್ನು ಅನುಭವಿಸಲು ಬಯಸುವ ಸುಚಲಾಳ ನಡೆ ಒಂದೆಡೆಯಾದರೆ, ಸರಳ ಉಡುಗೆಯಲ್ಲೂ ಚೆಲುವೆಯಾಗಿ ಕಾಣುವ ಆಕೆಯಲ್ಲಿ ಸುಖ ಕಾಣ ಬಯಸುವ ಉದ್ದೇಶದಿಂದ ಕುತಂತ್ರ ರೂಪಿಸುವ ಕಾಮುಕರ ನಡೆ ಕೃತಿಯ ಉತ್ತರಾರ್ಧದಲ್ಲಿ ಕವಲೊಡೆಯಬಹುದಾದ ಪಲ್ಲಟಗಳನ್ನು ಬಿಂಬಿಸುತ್ತದೆ. ಮನೆಯಿಂದ ದೂರದಲ್ಲಿರುವ ಸುಚಲಾಳ ಕರ್ಮಭೂಮಿ ಅವಳ ಆಶಾ ಗೋಪುರವನ್ನು ಕೆಡವಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾಗುವುದು ಅಭಿವೃದ್ಧಿ ತರಬಹುದಾದ ಅಪಾಯಗಳನ್ನು ಸೂಚಿಸುತ್ತದೆ. ತನ್ನ ಮನೆಯ ಗಲ್ಲಿಗಳಲ್ಲೇ ಓಡಾಡುವ ಲಂಪಟತನ ಮನವರಿಕೆಯಾಗುವುದರೊಳಗೆ ವಿಕೃತ ಕಾಮಿಗಳಾದ ಬಳ, ಭಾಷಾ, ರಶೀದ್ ಮತ್ತು ವೇಲುವಿನ ಬಲಾತ್ಕಾರಕ್ಕೆ ಬಲಿಯಾಗಿ ದಾರುಣ ಅಂತ್ಯ ಕಾಣುವ ಸುಚಲಾಳ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ಮೊದಲ ವೇತನದಿಂದ ತನ್ನ ತಾಯಿ ಮತ್ತು ತಂಗಿಗೆ ಉಡುಗೊರೆಗಳ್ನು ಒಯ್ಯುವ ಸುಚಲಾಳ ಬಹುದಿನಗಳ ಕನಸು ಕಾಮುಕರ ಕೈಗಳಲ್ಲಿ ಕಮರಿ ಹೋಗುವುದರೊಂದಿಗೆ ಆಕೆಯ ಆರ್ತನಾದ ಓದುಗರ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ.

ಸುಚಲಾಳ ಮರಣದ ನಂತರ ಭಾವಜೀವಿಯೂ, ಹಿಂಜರಿಕೆಯ ಸ್ವಭಾವದವಳೂ ಆದ ಸುನೀತಾಳ ಮನಸ್ಸು ಬದಲಾಗುವುದಲ್ಲದೇ ಅಕ್ಕನ ದಿಟ್ಟತನವನ್ನು ತನ್ನೊಳಗೆ ವಿಸ್ತರಿಸಿಕೊಳ್ಳುವ ರೀತಿಯು ತನ್ನ ತಂಗಿಯ ಮೂಲಕ ಸುಚಲಾ ಜೀವಂತವಾಗಿ ಉಳಿದಿರುವ ಭಾವವನ್ನು ಮೂಡಿಸುತ್ತದೆ. ಅಕ್ಕನ ಮೇಲಿನ ಅತ್ಯಾಚಾರ ಮತ್ತು ಮರಣಕ್ಕೆ ಕಾರಣರಾದ ಆರೋಪಿಗಳನ್ನು ಕಾನೂನಿನ ವ್ಯಾಪ್ತಿಗೆ ತರುವ ಮೂಲಕ ಸುನೀತಾಳ ದಿಟ್ಟತನದ ಹೆಜ್ಜೆಗಳಿಗೆ ಜೊತೆ ನೀಡುವಂತೆ ಓಡಾಡುವ ಆರಕ್ಷಕ ಇಲಾಖೆಯ ಅಧಿಕಾರಿಗಳಾದ ದೇವದತ್ ಮತ್ತು ಸುಂದರಂ ಇವರುಗಳ ಸಹಕಾರ ಸುನೀತಾಳ ವ್ಯಕ್ತಿತ್ವವನ್ನು ವಿಸ್ತರಿಸಲು ನೆರವಾಗುತ್ತದೆ. ಇದು ಕಾದಂಬರಿಯ ತಿರುವಿಗೆ ಕಾರಣವಾಗುತ್ತದೆ.

ಈ ಜ್ವಲಂತ ವಿದ್ಯಮಾನಗಳ ನಡುವೆ ತಲೆ ಹಾಕುವ ರಾಜಕಾರಣಿ ಶುಭರತ್ನಂ, ಇತರರ ಸಂಕಷ್ಟಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಾ ವೃತ್ತಿ ನಿಯಮಕ್ಕೆ ಎರಡು ಬಗೆಯುವ ಎ. ಎಸ್. ಐ. ಪ್ರದೀಪ್ ಈಗಿನ ಸಮಾಜದಲ್ಲಿ ಜೀವಂತವಾಗಿರುವ ಭ್ರಷ್ಟಾಚಾರ, ಅನೈತಿಕತೆಯನ್ನು ಪೋಷಿಸುವ ಪಾತ್ರಗಳಾಗಿ ಕಂಡು ಬರುತ್ತದೆ. ಸುಚಲಾಳ ಸಾವಿನೊಂದಿಗೆ ನೇರ ಸಂಪರ್ಕ ಹೊಂದಿದ ಶುಭರತ್ನಂ ತನ್ನ ಮಗನನ್ನು ಆರೋಪದಿಂದ ವಿಮುಖಗೊಳಿಸುವ ಹಿನ್ನಲೆಯಲ್ಲಿ ಕೈಗೊಳ್ಳುವ ಪ್ರಯತ್ನಗಳು ಒಂದು ಹಂತದವರೆಗೆ ಯಶಸ್ಸು ಕಾಣುವ ಬಗೆಯು ಒಳಿತಿನ ಪಕ್ಷದವರಲ್ಲಿ ಛಲವನ್ನು ಹುಟ್ಟಿಸಿ, ಕ್ರಾಂತೆಕಾರಿ ಬದಲಾವಣೆಗಳಿಗೆ ಕಾರಣವಾಗುವ ಅಂಶವಾಗಿ ಕಂಡು ಬರುತ್ತದೆ. ಕಾನೂನು, ಶಿಕ್ಷೆ, ನೀತಿ ಮತ್ತು ನಿಯಮಾವಳಿಗಳು ಆರೋಪಗಳನ್ನು ಶಿಕ್ಷಿಸದೆ ಸರಿದು ನಿಂತಾಗ ದೇವದತ್ ಮತ್ತು ಸುಂದರಂ ಕೈಗೊಳ್ಳುವ ನಿರ್ಧಾರ ಗತಿಸಿದ ಸುಚಲಾಳಿಗೆ ನ್ಯಾಯ ದೊರಕಿಸುವಂತದ್ದು. ಕನಸನ್ನು ಸಾಕಾರಗೊಳಿಸುವ ಮೂಲಕ ಬದುಕಿನ ಸಾರ್ಥಕತೆ ಕಾಣಲು ಹವಣಿಸಿ, ಆ ನೆಲೆಯಲ್ಲಿ ಹೆಜ್ಜೆ ಊರುತ್ತಿರುವಾಗಲೇ ಅಸುನೀಗಿದ ಸುಚಲಾ ನ್ಯಾಯವಂಚಿತಳಾಗುವುದನ್ನು ಬಯಸದ ಸುಂದರಂ ಮತ್ತು ದೇವದತ್ ಆರೋಪಿಗಳ ವಿಚಾರದಲ್ಲಿ ಕೈಗೊಳ್ಳುವ ತೀರ್ಪು ಮಾನವ ಹಕ್ಕುಗಳ ಉಲ್ಲಂಘನೆಯಂತೆ ಕಂಡು ಬಂದರೂ ಹೆಣ್ಣಿನ ಜೀವಕ್ಕೆ ದಾರುಣ ಮರಣ ತಂದವರ ಬದುಕು ಅದೇ ತೆರನಾಗಿ ಅಂತ್ಯ ಕಾಣುವಂತೆ ಮಾಡಿದ್ದರಲ್ಲಿ ಅತಿಶಯೋಕ್ತಿಯಿಲ್ಲ. ಆರೋಪಿಗಳ ನಕಲಿ ಎನ್ಕೌಂಟರ್ ನಂತರ ಸುಚಲಾ ಪ್ರಕರಣ ಮುಕ್ತಾಯಗೊಂಡು ಆಕೆಯ ಕುಟುಂಬ ಸಹಜ ಸ್ಥಿತಿಗೆ ಮರಳುವಂತೆ ಕಂಡು ಬಂದರೂ ಕುಟುಂಬದ ಸದಸ್ಯರ ಪಾಲಿಗೆ ಮಾಸದ ಗಾಯವಾಗಿ ಉಳಿದುಕೊಳ್ಳುತ್ತದೆ. ಸಮಾಜದಲ್ಲಿ ಕಾಣಿಸಿಕೊಳ್ಳುವ ಕ್ರೌರ್ಯದ ಬೇರಿನ ಆಳ ಎಷ್ಟಿರಬಹುದು ಎಂಬುದನ್ನು ಆಲೋಚಿಸುವಂತೆ ಮಾಡುತ್ತದೆ. ಪರಿಸ್ಥಿತಿಯನ್ನು ತಿಳಿಯಾಗಿಸುವಲ್ಲಿ ಸುನೀತಾ ಮತ್ತು ಆಕೆಯ ತಾಯಿಗೆ ನೆರವು ನೀಡುತ್ತಾ ಬಂದ ಎಸ್. ಪಿ ಸುಂದರಂ ಅವರು ಸುನೀತಾಳನ್ನು ತಮ್ಮ ಮಗನಿಗೆ ತಂದುಕೊಳ್ಳುವ ಮೂಲಕ ಆಕೆಯನ್ನು ಮನೆ ಬೆಳಗುವ ದೀಪವನ್ನಾಗಿ ಆರಿಸಿಕೊಳ್ಳುವ ಬಗೆ ಸಮಾಜದಲ್ಲಿ ಉಳಿದಿರುವ ಮಾನವೀಯತೆಯನ್ನು ಪ್ರತಿಫಲಿಸುತ್ತದೆ. ಸುಚಲಾಳ ಮರಣಾನಂತರ ಬದಲಾಗಲು ಬಯಸುವ ಸುನೀತಾ ತನ್ನೊಳಗಿನ ಮುಗ್ಧತೆಯನ್ನು ಕಳೆದುಕೊಂಡು ದಿಟ್ಟೆಯಾಗಿ ಬೆಳೆಯುವ ಪ್ರಕ್ರಿಯೆಯು ಬದುಕಿಗೆ ಹೊಸ ಅರ್ಥವನ್ನು ನೀಡುತ್ತದೆ.

ಹುಟ್ಟಿನಲ್ಲಿ ಯಾರೂ ಸಬಲರಾಗಲಿ ದುರ್ಬಲರಾಗಲಿ ಆಗಿರುವುದಿಲ್ಲ ಎಂಬ ತತ್ವದ ಎಳೆಯನ್ನು ಇಟ್ಟುಕೊಂಡು ಮೈವೆಡೆದ ಕೃತಿಯು ತನ್ನ ಪ್ರತಿಯೊಂದು ಮಗ್ಗುಲಲ್ಲಿಯೂ ಏಳ್ಗೆಯ ಬಗೆಯನ್ನು ಹೊತ್ತು ಸಾಗುತ್ತದೆ. ಕೃತಿಯ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡ ಸುಚಲಾ ಮತ್ತು ಸುನೀತಾ ಕೇವಲ ಪಾತ್ರಗಳಷ್ಟೇ ಆಗಿರದೇ ದಿನನಿತ್ಯದ ಬದುಕಿನಲ್ಲಿ ಕಾಣಿಸಿಕೊಳ್ಳುವ ಜೀವಂತ ಚರ್ಯೆಗಳಾಗಿವೆ. ನೋವು, ನಿರಾಸೆ, ಕಷ್ಟ, ಕಂಬನಿಗಳು ವ್ಯಕ್ತಿಗಳ ಗುರಿಯನ್ನು ದೃಢಗೊಳಿಸಿ ಆ ಮೂಲಕ ಅವರನ್ನು ಬೆಳೆಸಲು ಕಾರಣವಾಗುವಂತೆ ಕಾಲಾನಂತರದಲ್ಲಿ ಈರ್ಷೆ, ಅನೈತಿಕತೆ, ವ್ಯಾಮೋಹದ ಪರಮಾವಧಿಯಲ್ಲಿ ಬೆಳವಣೆಗೆಗಳನ್ನು ಅಕಾಲದಲ್ಲಿ ಮುರುಟಿಸುವ ರೀತಿಯನ್ನು ಬಿಂಬಿಸುವುದರೊಂದಿಗೆ, ಸಮಾಜದಲ್ಲಿ ನಡೆಯುವ ದಾರುಣ ಘಟನೆಗಳು ಮತ್ತು ಅವುಗಳಿಗೆ ಕಾರಣರಾದವರ ಕಡೆಗೂ ಬೆಳಕು ಚೆಲ್ಲಿ ಇದೆಲ್ಲವೂ ಅವರು ಬೆಳೆದು ಬಂದ ರೀತಿಯಿಂದ ಪ್ರೇರಣೆಗೊಂಡಿವೆ ಎಂಬ ಕಹಿಸತ್ಯವನ್ನು ಓದುಗರ ಮುಂದಿಡುತ್ತದೆ. ‘ಮನಸ್ಸು’ ಎಂಬುದು ದೇಹದ ಒಂದು ಭಾಗವಷ್ಟೇ ಆಗಿರದೆ ಮಾನವ ತನ್ನ ಜೀವಿತಾವಧಿಯಲ್ಲಿ ಕಲ್ಪಿಸಿಕೊಂಡ ಕನಸುಗಳು, ವಾಂಛೆಗಳು ಮತ್ತು ಆಶಯಗಳಿಗೆ ಚೈತನ್ಯವನ್ನು ನೀಡಿ, ಮನುಷ್ಯನ ಗೆಲುವಿನ ಕಡೆಗೆ ಮಹತ್ವದ ಕೊಡುಗೆ ನೀಡುವ ಜೀವನಾಡಿಯೇ ಆಗಿದೆ. ಬಾಳ್ವೆಯ ಜವಾಬ್ದಾರಿಯುತ ಹೆಜ್ಜೆಗಳನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ಪೂರ್ವತಯಾರಿಗಳು ಎಳವೆಯಿಂದಲೇ ಆಗಬೇಕಿದ್ದು, ದಾರಿ ಮಧ್ಯದಲ್ಲಿ ಎಡವಿದರೆ ಆಗಬಹುದಾದ ಎಡವಟ್ಟುಗಳನ್ನು ವಿವರಿಸುವ ಕಾದಂಬರಿ ಎಲ್ಲಾ ಕಾಲಕ್ಕೂ ಸಲ್ಲುವಂತಿದೆ. ಸುಚಲಾಳ ಬದುಕಿನ ಅಂತ್ಯ, ಅವಳ ದಯನೀಯ ಸ್ಥಿತಿಯನ್ನು ಧ್ವನಿಸುವುದರಿಂದ ಓದುಗರ ಮನಸ್ಸು ಅವಳು ಅನುಭವಿಸಿರಬಹುದಾದ ಹಿಂಸೆಗಳ್ನು ಕಲ್ಪಿಸಿಕೊಳ್ಳುವಂತೆ ಮಾಡಿದರೆ, ಸುನೀತಾಳ ಬದುಕು ಸುಚಲಾಳ ಸಾವಿನ ನೋವನ್ನು ಅರಗಿಸಿ ಅಕ್ಕನ ಮೇಲೆ ಆದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ದಿಟ್ಟ ಹೆಣ್ಣು ಮಗಳಾಗಿ ಗೋಚರಿಸುತ್ತಾಳೆ. ಪ್ರಸ್ತುತ ಕೃತಿ ಸ್ತ್ರೀ ಕೇಂದ್ರಿತ ಎಂಬಂತೆ ಕಂಡುಬರುತ್ತಿದ್ದರೂ ಪುರುಷರನ್ನು ದ್ವೇóಷಿಸುತ್ತಾ ಹೆಣ್ಣನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಸ್ತ್ರೀ ಮತ್ತು ಪುರುಷರಿಬ್ಬರನ್ನೂ ಸಮಾನ ನೆಲೆಯಿಂದ ಚಿತ್ರಸುವ ಕೃತಿ ಸುಚಲಾ ಮತ್ತು ಸುನೀತಾಳ ಮೂಲಕ ತನ್ನ ಉದ್ದೇಶವನ್ನು ವ್ಯಕ್ತಪಡಿಸಿರುವುದು ಕೃತಿಯ ಜೀವಂತಿಕೆಗೆ ಸಾಕ್ಷಿಯಾಗಿದೆ. ದೇಶದ ಕಾನೂನು ಅಥವಾ ಯಾವುದೇ ವ್ಯವಸ್ಥೆ ಎಷ್ಟೇ ಬಲವಾಗಿರಲಿ ಅವುಗಳನ್ನು ಬೇಗನೆ ಕಾಂiÀರ್iರೂಪಕ್ಕೆ ತಂದರೆ ಮಾತ್ರ ವ್ಯವಸ್ಥೆ ಸಾರ್ಥಕವಾಗುತ್ತದೆ. ವ್ಯವಸ್ಥೆ ಕೇವಲ ಹೆಸರಿಗಷ್ಟೇ ಇದ್ದು, ಒಳಗೆ ಟೊಳ್ಳಾಗಿದ್ದರೆ ನಿರೀಕ್ಷೆಗಳು ಭಾಗಶಃ ಸತ್ತು ವ್ಯಕ್ತಿಗತ ನಿರ್ಶಾರಗಳು ತಲೆಎತ್ತಲು ಕಾರಣವಾಗಬಹುದು ಎಂಬ ದನಿ ಇಲ್ಲಿದೆ. ಸಮಾಜದಲ್ಲಿ ಕಾಣಸಿಗುವ ಅತಿರೇಕದ ಘಟನೆಗಳ ಎಳೆಯನ್ನು ಹಿಡಿದು, ಅವುಗಳನ್ನು ಪ್ರೇರೇಪಿಸುವ ಅಂಶಗಳು, ಅವುಗಳಿಂದ ಹುಟ್ಟುವ ದುರಂತಗಳನ್ನು ಸರಳ ಭಾಷೆ ಹಾಗೂ ಸಹಜ ನಿರೂಪಣೆಗಳ ಮೂಲಕ ತಿಳಿಸುವ ಗಿರಿಮನೆ ಶ್ಯಾಮರಾವ್ ಅವರ ‘ದುಷ್ಕøತ್ಯ’ ಕಾದಂಬರಿ ಎಂದೆಂದಿಗೂ ಪ್ರಸ್ತುತವೆನಿಸಿಕೊಳ್ಳುತ್ತದೆ.

ಗಿರಿಮನೆ ಶ್ಯಾಮರಾವ್ ಅವರ ‘ಮುಂಗಾರಿನ ಕರೆ’ ಮತ್ತು ‘ದುಷ್ಕೃತ್ಯ’ ಕಾದಂಬರಿಗಳಲ್ಲಿ ಹೆಣ್ಣೇ ಕೇಂದ್ರವಾಗಿದ್ದು ಆಕೆ ಸಾಮಾಜಿಕ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ಎದುರಿಸಿ ಗೆಲ್ಲುವ ರೀತಿ ಕುಖ್ಯವಾಗುತ್ತದೆ. ಇಲ್ಲಿ ಹೆಣ್ಣು ಒಂಟಿಯಾಗಿರದೇ ಆಕೆಯ ಸಮಸ್ಯೆಗಳನ್ನು ಪರಿಹರಿಸಲು ಗಂಡಸರೂ ಸಹಕರಿಸುವುದರಿಂದ ಕಾದಂಬರಿಯಲ್ಲಿ ಪುರುಷ ವಿರೋಧಿ ಧೋರಣೆ ಹಾಗೂ ಏಕಪಕ್ಷೀಯ ದೃಷ್ಟಿಕೋನವು ಕಂಡುಬರುವುದಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬಗೆಗೆ ಕಂಡುಬರುವ ತಾತ್ಸಾರ, ಆಕೆಯ ತಲ್ಲಣಗಳ ಕುರಿತು ಹೊಂದಿರುವ ನಿರ್ಲಕ್ಷ್ಯ, ನಕಾರಾತ್ಮಕ ಧೋರಣೆಗಳಿಂದ ಹೊರತಾಗಿರುವ ಕೃತಿಗಳು ಹೆಣ್ಣಿನ ಮನೋಸ್ಥೈರ್ಯ, ದಿಟ್ಟ ನಡೆ ಮತ್ತು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ರೋಗಗ್ರಸ್ಥವಾಗಿರುವ ಸಮಾಜದಲ್ಲೂ ದನಿ ಎತ್ತಿ ಗೆಲ್ಲುವ ಬಗೆಯನ್ನು ಚಿತ್ರಿಸಿದ ರೀತಿಯಿಂದ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿವೆ. ನೆನ್ನೆಗಳ ನೆನಪುಗಳಲ್ಲಿ ಕಳೆದುಹೋಗಿ ವರ್ತಮಾನದ ಕಡೆ ಕುರುಡಾಗದೇ, ಭವಿಷ್ಯದಲ್ಲಿ ಎಡವದಂತೆ ಜೊತೆ ನೀಡುವ ಗಂಡಸರ ಔದಾರ್ಯ ಒಂದೆಡೆಯಾದರೆ ಎಲ್ಲಿಯೂ ಮುಗ್ಗರಿಸದೆ, ಪರಿಸ್ಥಿತಿಯನ್ನು ನಿಭಾಯಿಸಬೇಕಿದ್ದ ಹೆಣ್ಣೊಬ್ಬಳು ಕುತಂತ್ರಿಗಳ ಬಲೆಯಲ್ಲಿ ಬಿದ್ದು, ಒದ್ದಾಡಿ ಅಸುನೀಗಿದರೂ ಕೊರಗಿದವಳ ಕರುಳ ಕೂಗಿಗೆ ಓಗೊಟ್ಟು ನ್ಯಾಯ ಒದಗಿಸಿ ಮಾನವೀಯತೆಯನ್ನು ಜಾಗೃತಗೊಳಿಸುತ್ತಾ ಅರ್ಥಬದ್ಧ ವ್ಯವಸ್ಥೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಸಹಾಯ ಹಸ್ತ ನೀಡಿ ಕರ್ತವ್ಯ ನಿಭಾಯಿಸುವ ಬಗೆಯೂ ಮುಖ್ಯವಾಗುತ್ತದೆ. ಯಾವ ಸಿದ್ದಾಂತಕ್ಕೂ ಒಳಗಾಗದೇ ಜನಪ್ರಿಯ ಶೈಲಿಯ ಮೂಲಕ ಓದಿಸಿಕೊಂಡು ಹೋಗುವ ಕಾದಂಬರಿಗಳು ತಮ್ಮೆಲ್ಲ ಸರಳತೆಯೊಂದಿಗೆ ಆಪ್ತವೆನಿಸುವುದರೊಂದಿಗೆ ಆಧುನಿಕ ಸಮಸ್ಯೆಗಳು ಮತ್ತು ಅದರ ಪರಿಹಾರೋಪಾಯಗಳನ್ನು ಸೂಚಿಸುವುದರಿಂದ ಎಲ್ಲಾ ಕಾಲಕ್ಕೂ ಸಲ್ಲುವ ಕೃತಿಗಳಾಗಿ ಉಳಿದುಕೊಳ್ಳುತ್ತವೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter