ಮಾತು ಮಥನ

Small things make the difference ಎನ್ನುವ ಒಂದು ಮಾತಿದೆ. ಕೆಲವೊಮ್ಮೆ ಸಣ್ಣ ವಿಷಯಗಳೂ ಅನೇಕ ಬದಲಾವಣೆಗಳನ್ನು ತರುತ್ತವೆ. ಇವು ಅನೇಕ ರೀತಿಯಲ್ಲಿ ನಮ್ಮ ಭಾವಕೋಶಗಳ ಮೇಲೆ ಲಗ್ಗೆ ಇಡುತ್ತಲೇ ನಮ್ಮ ಬದುಕನ್ನು ರೂಪಿಸುತ್ತವೆ ಎನ್ನುವುದು ಸತ್ಯ. ಅವುಗಳನ್ನು ತೊಡೆದು ಹಾಕಬಹುದು, ಮರೆತು ಬಿಡಬಹುದು ಅಥವಾ ಅವು ಎಂದಿಗೂ ಸಂಭವಿಸಲೇ ಇಲ್ಲ ಎಂಬಂತೆ ಬಿಂದಾಸ್ ಇರಬಹುದು. ಸಣ್ಣಪುಟ್ಟ ವಿಷಯಗಳ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತೀರ್ರೀ? ಬಿಟ್ಟು ಬಿಡಿ ಅದನ್ನು. ಎಂದು  ಸಾಮಾನ್ಯವಾಗಿ ಆತ್ಮೀಯರಾದವರು ಹೇಳುತ್ತಾರೆ.  ಏಕೆಂದರೆ ಈ ಸಣ್ಣಪುಟ್ಟ ವಿಷಯಗಳ ಪರಿಣಾಮ  ಏಕಮುಖಿಯಾಗಿ ಇರುವುದಿಲ್ಲ ಎಂಬುದನ್ನು  ಆ ಸಮಯದಲ್ಲಿ ಒಮ್ಮೆ ನೆನಪಿಸಲು ಅಷ್ಟೇ.  ಕೆಲವೊಮ್ಮೆ ಸಣ್ಣ ಸಣ್ಣ ವಿಷಯಕ್ಕೆ ಒತ್ತುಕೊಡುತ್ತಾ ಹೋದಂತೆ ಅವು ಒಂದಕ್ಕೊಂದು ಕೊಂಡಿಯಾಗಿ ಎಲ್ಲೆಲ್ಲೋ ಹೋಗಿ ಬಿಡುತ್ತವೆ.  ಅವುಗಳಿಂದ ಅವಾಂತರಗಳಾಗುವುದಂತೂ ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ವಿಷಯಗಳ ಅಭಿವ್ಯಕ್ತಿ ಯಾಗುವುದು ಮುಖ್ಯವಾಗಿ ಮಾತುಗಳ ಮೂಲಕ. ಜಗತ್ತಿನಲ್ಲಿ ನಂಬಿಕೆ ನಿಂತಿರುವುದೂ ಸಾಮಾನ್ಯವಾಗಿ ಮಾತಿನ ಮೇಲೆಯೇ. ಬೇರೆ ಬೇರೆ ಸಂದರ್ಭಕ್ಕನುಸಾರವಾಗಿ ಆಯಾ ಜನರ ಸ್ವಭಾವಕ್ಕನುಸಾರವಾಗಿ ಮಾತು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಆಪ್ಯಾಯಮಾನವಾದ ಮಾತು, ಅನುಭವದ ಮಾತು, ಅಸಮಾಧಾನದ ಮಾತು, ಅವಮಾನದ ಮಾತು, ಅಧಿಕಪ್ರಸಂಗದ ಮಾತು, ಅಟ್ಟ ಹಾಸದ ಮಾತು, ಬಿಚ್ಚುಮಾತು, ಚುಚ್ಚುಮಾತು, ಪಿಸು ಮಾತು, ಹುಸಿ ಮಾತು, ಹಾಸ್ಯಭರಿತ ಮಾತು, ಹಾಸ್ಯಾಸ್ಪದ ಮಾತು, ಹೊಗಳುವ ಮಾತು, ತೆಗಳುವ ಮಾತು, ಕತ್ತು ಕತ್ತರಿಸುವ ಮಾತು, ಕಿತ್ತು ತಿನ್ನುವ ಮಾತು ಹೀಗೆ ಹತ್ತು ಹಲವಾರು ಮಾತುಗಳು ಚಕಮಕಿಯಾಗಿ, ಚುರುಕಾಗಿ ಹಾಯುತ್ತಿರುತ್ತವೆ. ಅನೇಕರು ಕೆಡುಕಿನ ಮಾತಿಗೆ  ತಲೆಕೆಡಿಸಿಕೊಂಡು ಅದಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಧಾರೆ ಎರೆಯುತ್ತಾರೆ. ಕೆಲವರು ಅದನ್ನು ಕೊಡವಿಕೊಂಡು ನಿತ್ಯವೂ ಹೊಸ ಹುಟ್ಟು ಪಡೆದುಕೊಳ್ಳುವರು. ಅಂಥವರು ಮುಖ್ಯ ಬದಲಾವಣೆಗೆ ಕಾರಣವಾಗುವ ಸಣ್ಣ ಮಾತನ್ನಷ್ಟೇ ತಮ್ಮ ಜೋಳಿಗೆಗೆ ತುಂಬಿಸಿ ಅದನ್ನು ಒಳಿತಿಗಾಗಿ ಬಳಸಿಕೊಳ್ಳುವರು. ಅದರ ಕುರಿತು ಚಿಂತಿಸಿ ಬುದ್ಧಿಯನ್ನು ಮಸೆದು ಹೊಸತೊಂದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೂ ಇದೆ. ಅನ್ವೇಷಣೆಗೆ, ಸಂಶೋಧನೆಗೆ ಸಣ್ಣ ವಿಷಯವೇ ಬೀಜ. 

ಈ ‘ಮಾತು’ ಎಂಬ ಎರಡಕ್ಷರ ಯಾವಾಗ ಯಾವ ಯಾವ ರೂಪ ಪಡೆಯುತ್ತವೆ ಎಂಬುದು ಅನೂಹ್ಯ. ಬಹಳ ವರ್ಷಗಳ ಹಿಂದೆ ಯಕ್ಷಗಾನ ಕಲಾವಿದರೊಬ್ಬರು ಆಡುಭಾಷೆಯಲ್ಲಿ ಹೇಳಿದ ಮಾತೊಂದು ನೆನಪಾಗುತ್ತಿದೆ. ‘ರಾಯರ ಚಿತ್ತ ಕಾಯ್ ಕತ್ತ ಮಸೆದ್ಹಾಂಗೂ ಹರ್ತ’ ಎಂದು. ಮನುಷ್ಯನ ಚಿತ್ತ ತೆಂಗಿನಕಾಯಿಯ ಸಿಪ್ಪೆಯ ನಾರಿನಂತೇ. ಎಳೆದಷ್ಟೂ ಉದ್ದ, ಮಸೆದಷ್ಟೂ ಹರಿತವಾಗುವುದು ಎಂಬ ಅರ್ಥದಲ್ಲಿ ಈ ಗಾದೆಯಿದೆ. ಅದು ನಿಜವೇ. ಚಿತ್ತದಲ್ಲಿ ಮೂಡಿಬಂದ ವಿಷಯಗಳನ್ನು ಮಾತಾಗಿ ನುಡಿಯುವಾಗಲೂ ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳು  ಹಿಗ್ಗುತ್ತಾ , ಹರಿತವಾಗುತ್ತಾ ಹೋಗುವುದುಂಟು. ಇಲ್ಲಿ ‘ಹರ್ತ’ (ಹರಿತ) ಎಂಬುದು ಸಾಂದರ್ಭಿಕವಾಗಿ ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ. ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ” ಎಂದು ಬಸವಣ್ಣನವರು ಶಿವನಲ್ಲಿ ಹೇಳಿಕೊಳ್ಳುತ್ತಾರೆ.”ಮಾತು ಮಾತು ಮಥಿಸಿ ಬಂದ ನಾದದ ನವನೀತ” ಎಂಬುದಾಗಿ ಬೇಂದ್ರೆ ಹಾಡಿಸುತ್ತಾರೆ.  ಇಂತಹ ಅನುಭಾವದ ನುಡಿಗಳು  ಕಾಲಾತೀತವಾದ ಸತ್ಯವಂತೂ ಹೌದು.

ಭಾವಗಳು ಸಹಜವಾದ ಮಾತಾಗಿ ಹೊರ ಹೊಮ್ಮುವುದು ನಮ್ಮ ತಾಯ್ನುಡಿಯಲ್ಲಿಯೇ. ಶುದ್ಧ ಮಾತೃಭಾಷೆಯ ಮಾತಿಗೆ ಈಗ ತತ್ವಾರ ಎಂದೇ ಹೇಳಬಹುದು. ಆಯಾ ಪ್ರದೇಶದಲ್ಲಿ ಅಲ್ಲಿಯದೇ ಶೈಲಿಯ ಮಾತನ್ನು ಬಳಸಿ ಮಾತನಾಡಿದರೆ ಮಾತ್ರ ಅವರು ನಮ್ಮವರು, ಇಲ್ಲವಾದರೆ ಪರಕೀಯರು ಎಂಬ ಭಾವನೆ ಮೂಡುವ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಕೀಯತೆಯ ಪಿಡುಗು ಎಲ್ಲೆ ಮೀರಿ ಎಲ್ಲವನ್ನೂ ಆಕ್ರಮಿಸಿಕೊಂಡಿದೆ. 

 ಒಮ್ಮೆ ನಾನು ಕನ್ನಡ ರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದೆ. ಅಲ್ಲಿ ನೆರೆದ ಸಭಿಕರಿಗೆ ಒಂದು ಸ್ಪರ್ಧೆ ಇತ್ತು. ಒಂದೂ ಇಂಗ್ಲಿಷ್ ಪದವನ್ನು ಬಳಸದೆಯೇ ಸೂರ್ಯನಡಿಯಲ್ಲಿ ಬರುವ ಯಾವುದೇ ವಿಷಯದ ಮೇಲಾದರೂ ಸರಿ. ಐದು ನಿಮಿಷ ಮಾತನಾಡ ಬೇಕೆಂದು ನಿರೂಪಕರು ಕೇಳಿಕೊಂಡಾಗ ಕೆಲವರಷ್ಟೇ ಕೈ ಎತ್ತಿದರು. ತಮಾಷೆಯೆಂದರೆ ಒಬ್ಬರಿಗೂ ಶುದ್ಧ ಕನ್ನಡದಲ್ಲಿ ಮಾತನಾಡಲು ಬರಲಿಲ್ಲ. ಅವರಲ್ಲೇ ಸಂಭಾವಿತರೊಬ್ಬರು ವಾಕ್ಯವನ್ನೇನೋ ಕನ್ನಡದಲ್ಲಿಯೇ ಕಷ್ಟಪಟ್ಟು ಹೇಳಿದರು. ಆದರೆ ಪ್ರತಿ ವಾಕ್ಯದ ನಡುವೆಯೂ ‘ಸೋ..ಸೋ..ಎನ್ನುತ್ತಲೇ ಮುಗಿಸಿದ್ದರು. ಫಲಿತಾಂಶ ಘೋಷಣೆಯಾಯಿತು.   ‘ನಮ್ಮ ರೂಟೀನ್ ಭಾಷೆಯಲ್ಲಿ ಇಂಗ್ಲಿಷ್ ಹಾಸು ಹೊಕ್ಕಾಗಿರುವುದರಿಂದ ಇವತ್ತಿನ ಸ್ಪರ್ಧೆ ಎಲ್ಲರಿಗೂ ಒಂದು ಸವಾಲಾಗಿತ್ತು. ಅದನ್ನು ಆದಷ್ಟು ಸಮರ್ಥವಾಗಿ ನಿಭಾಯಿಸಿರುವ ಅಬಕ ಅವರು ಮೊದಲ ಬಹುಮಾನವನ್ನು ಪಡೆದಿದ್ದಾರೆ’ ಎಂಬುದಾಗಿ. ಇದು ನಮ್ಮ ಈಗಿನ ಪರಿಸ್ಥಿತಿ. ಯಾವುದಾದರೊಂದು ರೀತಿಯಲ್ಲಿ ಬೇರೆಯವರಿಗೆ ಅರ್ಥವಾದರಾಯಿತು. ಅದು ಶುದ್ಧ ಕನ್ನಡವೇ ಇರಬೇಕು ಎಂಬುದೆಲ್ಲ ಈಗಿನ ಕಾಲಕ್ಕೆ ಹೊಂದುವಂಥದ್ದಲ್ಲ ಎಂಬುದಾಗಿ ಬಲ್ಲವರೇ ಸಮರ್ಥನೆ ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ ನಮ್ಮತನವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ಸೂಚನೆಯಾಗಿ ನನಗೆ ಕಂಡು ಬಂದದ್ದು ಸುಳ್ಳಲ್ಲ.

ಯಕ್ಷಗಾನ ಪ್ರಸಂಗಗಳಲ್ಲಿ ಅರ್ಥಧಾರಿಗಳ ಸಂದರ್ಭೋಚಿತ ಆಶು ಮಾತಿನಾಟ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು. ಆಗಷ್ಟೇ ಮಾತು ಎದೆಗಿಳಿಯುವ ವಯಸ್ಸಿನಲ್ಲಿ ನಾನೊಂದು ಪ್ರಸಂಗಕ್ಕೆ ಹೋಗಿದ್ದೆ. ಅರ್ಥಧಾರಿಯೊಬ್ಬರು ಮಾತನಾಡುತ್ತಾ ‘ನಿನ್ನ ಈ ಕಂಡಿಷನ್ನಿಗೆ ನಾನು ಒಪ್ಪುವುದಿಲ್ಲ. ನನ್ನ ಎಬಿಲಿಟಿ ಏನು ಎಂಬುದು ನಿನಗೆ ಗೊತ್ತಿದೆಯೇ? ಮೂರ್ಖ’ ಎಂದರು. ಅದು ಅವರ ತಪ್ಪಲ್ಲ. ವೈದ್ಯಕೀಯ ಓದಿ ಜನಪ್ರಿಯ ವೈದ್ಯರೆನಿಸಿಕೊಂಡ ಹವ್ಯಾಸಿ ಮಾತುಗಾರ ಅವರು. ಕಲಿಕೆಯಿಂದ ಹಿಡಿದು ವೃತ್ತಿಜೀವನದಲ್ಲೂ ಇಂಗ್ಲಿಷ್ ಭಾಷೆಯಲ್ಲೇ ಮುಳುಗಿಕೊಂಡವರು. ಅದಕ್ಕೆ ಎದುರಾಳಿ ಪಾತ್ರದಾರಿ ಅವರನ್ನು ಮಾತಿನಲ್ಲಿ ಮಣಿಸಲು ಒಳ್ಳೆಯ ಅವಕಾಶ ಎಂದುಕೊಂಡು  ‘ನೀನು ಯಾವ ಲೋಕದ ಭಾಷೆಯನ್ನು ಮಾತನಾಡುತ್ತಿರುವೆ? ನನಗೆ ನಿನ್ನ ಭಾಷೆಯೇ ಅರ್ಥವಾಗದು. ನಿನ್ನ ಯೋಗ್ಯತೆಯ ಬಗ್ಗೆ ಹೇಗೆ ತಿಳಿಯುವುದು?’ ಎಂದರು. ಆಗ ವೈದ್ಯರು  ‘ಇದು ದೇವರ ಭಾಷೆ, ನಿನ್ನಂಥ ಸಾಮಾನ್ಯನಿಗೆ ಅರ್ಥವಾಗದು’ ಎಂದುಬಿಟ್ಟರು. ಬಾಯಿತಪ್ಪಿನಿಂದ ಆಡಿದ ಮಾತನ್ನು ಸಮರ್ಥಿಸಿಕೊಂಡ ರೀತಿಗೆ ಎಲ್ಲರ ಕರತಾಡನವಾಯಿತು. ಈ ಮಾತಿನಾಟದಲ್ಲಿ ಭಾಷೆಯ ತೊಡಕು ಎದ್ದು ಕಾಣಲೇ ಇಲ್ಲ. ಬದಲಾಗಿ ದೇವಲೋಕದ ಭಾಷೆ ಎಂಬ ಸಣ್ಣ ವಿಷಯವೇ ಜಿಜ್ಞಾಸೆ ಹುಟ್ಟಿಸಿತು. ದೇವರ ಭಾಷೆ ಯಾವುದಿರಬಹುದು?ಬೇರೆ ಬೇರೆ ದೇವತೆಗಳ ಆಡುಭಾಷೆ ಬೇರೆ ಬೇರೆ ಇರಬಹುದೇ? ಸರ್ವತ್ರ ಸಂಸ್ಕೃತವೇ? ಆಯಾ ದೇವತೆಗಳ ಪ್ರಾದೇಶಿಕ ಆಡುಭಾಷೆ ಇರಬಹುದೇ?  ಕಾಲಮಾನ ಅಲ್ಲೂ ಬದಲಾಗಿರಬಹುದಲ್ಲ? ಅದಕ್ಕೆ ತಕ್ಕ ಹಾಗೆ ಭಾಷೆಯ ಪ್ರಭಾವ ಅಲ್ಲೂ ಆಗಿರಬಹುದೇ?ಹಾಗೆ ನೋಡಿದರೆ ಅವರ ಸಮರ್ಥನೆಯ ಮಾತಿನಲ್ಲೂ ಸತ್ಯವಿರಬಹುದು. ಇತ್ಯಾದಿ ಪ್ರಶ್ನೆಗಳು ಉದ್ಭವವಾಗಿ ಆ ದಿನ ನನ್ನ ನಿದ್ದೆಗೆಡಿಸಿತ್ತು.  ಇರುವುದೆಲ್ಲವ ಬಿಟ್ಟು ಅರಿಯಲಾಗದ್ದರ ಬಗ್ಗೆ ಚಿಂತೆ ನಿನಗೆ ಎಂಬ ಬೈಗುಳ ಬೇರೆ ಸಿಕ್ಕ ಕ್ಷಣದಲ್ಲಿ ಅದರಿಂದ ತಣ್ಣಗೆ ಹೊರಬಂದಿದ್ದೆ. 

‘ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆ ಕೊಲೆಯು ಮಾತಿನಿಂ ಸರ್ವಸಂಪದವು ಲೋಕಕ್ಕೆ ಮಾತೆ ಮಾಣಿಕವು ಸರ್ವಜ್ಞ.” ನಮ್ಮ ಹಿರಿಯರು ಮಾತಿನ ಮಹತ್ವವನ್ನು  ಅನೇಕ ಗಾದೆಮಾತುಗಳಿಂದ ಹೇಳಿರುತ್ತಾರೆ.  ಮಾತು ಮನೆ ಕೆಡಿಸಿತು ತೂತು ಒಲೆಯ ಕೆಡಿಸಿತ್ತು, ಮಾತು ಬಲ್ಲವ ಮಾಣಿಕ್ಯ ತಂದ ಮಾತರಿಯದವ ಜಗಳ ತಂದ, ಮಾತೇ ಮುತ್ತು ಮಾತೇ ಮೃತ್ಯು, ಹೀಗೇ ಗಾದೆಗಳ ಸರಮಾಲೆಯನ್ನೇ ಅವರು ಧರಿಸಿರುತ್ತಾರೆ. 

ಇನ್ನು ಪುರಾಣ ಇತಿಹಾಸಗಳಲ್ಲಿ ಬರುವ ಮಾತು ಬೇರೆಯದೇ. ಅಸತ್ಯವನ್ನು ನುಡಿಯಲಾರೆ ಎಂದ ಹರಿಶ್ಚಂದ್ರನಿಗೆ ರಾಜ್ಯ ಸಂಪತ್ತನ್ನೆಲ್ಲ ಬಿಟ್ಟು ಸ್ಮಶಾನ ಕಾಯುವ ಪರಿಸ್ಥಿತಿ ಬಂತು. ದಶರಥ ಕೈಕೇಯಿಗೆ ಕೊಟ್ಟ ಒಂದು ಮಾತಿನಿಂದ ಶ್ರೀರಾಮಚಂದ್ರ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕಾಯಿತು. ತೊಟ್ಟ ಬಾಣವ ಪುನಃ ತೊಡಲಾರೆ ಎಂದ ಕರ್ಣನ ಅವಸಾನವಾಯಿತು. ಸಾಂದರ್ಭಿಕವಾಗಿ ಕೊಟ್ಟ ಮಾತುಗಳಾದರೂ ಅದನ್ನು ಉಳಿಸಿಕೊಳ್ಳಲು ಅವರಿಗೆಲ್ಲ ಹರಸಾಹಸ ಮಾಡಬೇಕಾಯಿತು. ಹಾಗಿದ್ದರೂ ಈ ಎಲ್ಲ ಮಾತುಗಳ ಹಿಂದಿರುವ ನೀತಿ ಪಾಠ ಅಮೂಲ್ಯವಾದದ್ದು. ಪುಣ್ಯ ಕೋಟಿ ಎಂಬ ಸಾಧು ಪ್ರಾಣಿ ವ್ಯಾಗ್ರವನ್ನು ಸೆಣೆಸಿದ್ದು ಕೊಟ್ಟ ಮಾತಿಗೆ ತಪ್ಪದಿರುವುದರಿಂದಲೇ. ಹಳ್ಳಿಗಳಲ್ಲಿ ಕೃಷಿ ಮಾಲಿಕರು ಸಹಾಯಕರಿಗೆ ಸಂಬಳ ಕೊಟ್ಟು “ನಾಳೆ ಬರ್ತೀಯಲ್ಲಾ?” ಎನ್ನುವಾಗ ಆ ಮುಗ್ಧರು ” ಮಾತು ಕೊಟ್ಟ ಮೇಲೆ ತಪ್ಪುವುದಿಲ್ಲ ಒಡೆಯಾ” ಎಂದು ಉತ್ತರಿಸುವುದು ಈ ನೀತಿ ಪಾಠಗಳ ಪ್ರಭಾವದಿಂದಾಗಿಯೇ. ಹರಟೆ ಕಟ್ಟೆಯ ಮೇಲೆ ಕುಳಿತು ನಮ್ಮ ಹಿರಿಯರಾಡುವ ಮಾತುಗಳನ್ನು ಕೇಳುತ್ತ ಆಡುತ್ತಾ ಕಳೆದ ದಿನಗಳಲ್ಲಿ ಕಲಿತ ನಡತೆ ಜೀವನದುದ್ದಕ್ಕೂ ಸಾಥ್ ನೀಡುವ ಚೇತನ. ಅವೆಲ್ಲವೂ ಸಾಧಾರಗಳಿಂದ ಕೂಡಿದ ಸೋದಾಹರಣವಾದ ಮಾತುಗಳಾಗಿದ್ದವು. ಗಿಡಮೂಲಿಕೆಗಳ ಮನೆ ಮದ್ದಿನಂತಿರುವ ಅವು  ದಿನ ನಿತ್ಯದ ಚಿಂತೆ, ಭಯ ಮುಂತಾದ ಅಂಟುರೋಗ ನಿವಾರಕ ಮಾತುಗಳಾಗಿ ಎಂದೆಂದಿಗೂ ನಮ್ಮೊಂದಿಗಿರುವಂಥವು. ‘ಪ್ರಾಸಕ್ಕೆ ತ್ರಾಸಿಲ್ಲ. ಅದು ಅತ್ರಾಸ ತಿಂದ ಹಾಗೆ’ ಎಂದು ನಮ್ಮಲ್ಲಿ ಹೇಳುವ ವಾಡಿಕೆಯಿದೆ. ಹಿರಿಯರಾಡುವ ಕೆಲವು ಪ್ರಾಸಬದ್ಧ ಮಾತುಗಳು ಇಂದಿಗೂ ತ್ರಾಸನ್ನು ದೂರಮಾಡುವುದು ನಿಜವೇ. ಆರು ಹೆಚ್ಚಲ್ಲ ಮೂರು ಕಡಿಮೆಯಲ್ಲ ಎಂಬಂತಿರುವ ಅನೇಕರು ಸ್ವತಃ ನಂಜುಂಡನಾದರೂ  ತಮ್ಮ ಮಾತಿನಲ್ಲಿ ಬೆಣ್ಣೆ ಹಚ್ಚದೇ ಬೆಣ್ಣೆ ಹಂಚುತ್ತ ಮಿಂಚುತ್ತಾರೆ. ಸ್ವಂತಿಕೆಯ, ಅರ್ಥಪೂರ್ಣ ವಿವೇಕದ ಮಾತುಗಳಿಗೆ ಎಲ್ಲವನ್ನೂ ಸಾಕ್ಷಾತ್ಕರಿಸಿಕೊಳ್ಳುವ ಬಲವಿದೆ. ಅದಕ್ಕಾಗಿ ಮುದಿತ ಮಂದಹಾಸದಿ ಮಾತು ಮಾತಿನ ಮಥನವಾಗಿ ಮೇದಿನಿಯು ಸುಖಿಸಲಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “   ಮಾತು ಮಥನ”

  1. ಸುನೀಲ ದೇಶಪಾಂಡೆ

    ಮಾತು ಕುರಿತಾದ ಸುಂದರ ಮಾತುಗಳು ಎನ್ನಬಹುದು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter