ಆನೆಕಾಲಿಗೆ ಅಂಕುಶವಿಕ್ಕಿದ ಸೇವಾತತ್ಪರ ಐಎಡಿಯ ಹೆಜ್ಜೆಗಳು

ಚಿತ್ರ ಲೇಖನ : ಡಾ. ಮಹೇಶ್ವರಿ ಯು.

ಕಾಸರಗೋಡಿನ ಉಳಿಯತ್ತಡ್ಕದಲ್ಲಿ ಸ್ಥಾಪಿತವಾದ ಐಎಡಿ ( ಇನ್ಸ್ಟಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟಾಲಜಿ) ಆರೋಗ್ಯ ಕ್ಷೇತ್ರದಲ್ಲಿ ತಂದಿರುವ ಕ್ರಾಂತಿಕಾರಕ ಹೆಜ್ಜೆಗಳಿಂದ ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುತ್ತಿದೆ. ದಶಕಗಳ ಹಿಂದೆ ಆರಂಭಗೊಂಡ ಈ ಸಂಸ್ಥೆ ಎಲೋಪತಿ, ಆಯುರ್ವೇದ, ಯೋಗ, ಪಾರಂಪರಿಕ ವೈದ್ಯ- ಹೀಗೆ ಭಿನ್ನ ಚಿಕಿತ್ಸಾ ಪದ್ಧತಿಗಳ ಸಂಯೋಜಿತ ಚಿಕಿತ್ಸಾ ಪದ್ಧತಿಯನ್ನು ಸಂಶೋಧನೆಯ ಮೂಲಕ ಆವಿಷ್ಕರಿಸಿದ್ದು ಮಾತ್ರವಲ್ಲದೆ ಅನುಷ್ಠಾನಗೊಳಿಸಿ ಯಶಸ್ವಿಯಾದದ್ದು ಒಂದು ಸಾಹಸ ಗಾಥೆ.

ಚರ್ಮರೋಗ ತಜ್ಞರಾದ ಐಎಡಿಯ ಸ್ಥಾಪಕ ನಿರ್ದೇಶಕ ಡಾ.ಎಸ್ .ಆರ್. ನರಹರಿ ಹಾಗೂ ಎಲ್ಲ ಹೆಜ್ಜೆಗಳಲ್ಲಿ ಅವರಿಗೆ ಜೊತೆಯಾಗಿರುವ ಪತ್ನಿ ಡಾ. ಪ್ರಸನ್ನ ಇವರಿಂದು ಸೇವಾಬದ್ಧ ಐಎಡಿ ಟೀಮ್‍ನೊಂದಿಗೆ ಹಲವು ರೋಗಿಗಳ ಬಾಳಿಗೆ ಬೆಳಕನ್ನು ನೀಡಿದ ಧನ್ಯತೆಯನ್ನು ಹೊಂದಿದ್ದಾರೆ. ಮುಖ್ಯವಾಗಿ ಗುಣವಾಗದ ಕಾಯಿಲೆಯೆಂದು ಗುರುತಿಸಲ್ಪಟ್ಟ ಆನೆಕಾಲು ರೋಗದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಕುಗ್ಗಿ ಬಸವಳಿದ ಅದೆಷ್ಟೋ ಮಂದಿಯ ಬಾಳಿನಲ್ಲಿ ಆಶಾಕಿರಣವಾಗಿ ಕಾಣಿಸಿ ಕೊಂಡವರು. ಸಂಯೋಜಿತ ಚಿಕಿತ್ಸೆಯ ಹರಿಕಾರರಾಗಿ ಮನ್ನಣೆಯನ್ನು ಪಡೆದ ಡಾ. ಎಸ್ ಆರ್. ನರಹರಿಯವರು.

ಡಾ. ಎಸ್ . ಆರ್. ನರಹರಿ

ಅವರ ಹುಟ್ಟೂರು ಮೂಲತ: ವಿಟ್ಲದ ಸಮೀಪದ ಸರವು. ಮಡದಿ ಪ್ರಸನ್ನ ಅವರ ತವರು ಕಾಸರಗೋಡಿನ ಕೋಡಿಮೂಲೆ ಎಂಬ ಒಂದು ಹಳ್ಳಿ. ಈ ದಂಪತಿ ಕಾಸರಗೋಡನ್ನು ತಮ್ಮ ಕರ್ಮಭೂಮಿಯಾಗಿ ಆರಿಸಿ ಕೊಂಡದ್ದು ಮತ್ತು ಮುಂದೆ ಜಾಗತಿಕ ಆರೋಗ್ಯ ನಕ್ಷೆಯಲ್ಲಿ ಈ ಪ್ರದೇಶ ಗುರುತಿಸುವಂತಾದದ್ದು ಈ ನೆಲದ ಪುಣ್ಯ. ಸಂಸ್ಥೆ ನಡೆದು ಬಂದ ದಾರಿಯನ್ನು ಅವಲೋಕಿಸಿದರೆ ಅದರ ಸಾಧನೆಗಳು ಅನೇಕ. ಸರಕಾರಿ ಸಂಸ್ಥೆಗಳು ಏಡ್ಸ್ ನಿಯಂತ್ರಣದ ಕ್ರಮಗಳನ್ನು ಒಂದು ಆಂದೋಲನವಾಗಿ ರೂಪಿಸುವುದಕ್ಕೂ ಮೊದಲು ರೋಗದ ಭೀಕರತೆಯನ್ನು ಮನಗಂಡು ಈ ನಿಟ್ಟಿನಲ್ಲಿ ರೋಗನಿಯಂತ್ರಣದ ಮಹತ್ವದ ಕ್ರಮಗಳನ್ನು, ಪರಿಹಾರೋಪಾಯಗಳನ್ನು ಕೈಗೊಂಡದ್ದು ಐತಿಹಾಸಿಕ ವಿದ್ಯಮಾನ.ಹಾಗೆಯೇ ಬೀದಿಬದಿಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಸಂಸ್ಥೆಯ ರಚನಾತ್ಮಕ ಹೆಜ್ಜೆಗಳು ಕೂಡ ವಿಶೇಷವಾದದ್ದು. ಆನೆಕಾಲು ರೋಗವನ್ನು ಗುಣಪಡಿಸುವ ಸೂಕ್ತಚಿಕಿತ್ಸೆ ಎಲೋಪತಿಯಲ್ಲಾಗಲಿ ಆಯುರ್ವೇದದಲ್ಲಾಗಲೀ ಇಲ್ಲದಿರುವುದರಿಂದ ಈ ಭಿನ್ನಪದ್ಧತಿಗಳ ಸಂಯೋಜಿತ ಚಿಕಿತ್ಸೆ ಪರಿಣಾಮಕಾರಿಯಾಗ ಬಹುದೆಂಬ ಆಲೋಚನೆಯು ಅಧ್ಯಯನ, ಸಂಶೋಧನೆ ಮತ್ತು ಪ್ರಯೋಗಗಳಿಂದ ಬಲಿಷ್ಠಗೊಂಡು ವಿಶ್ವದಲ್ಲೇ ಮೊದಲಬಾರಿಗೆ ಐಎಡಿಯಲ್ಲಿ ಸಾಕಾರಗೊಂಡದ್ದು ಒಂದು ಮಹತ್ಸಾಧನೆ. ಜಾಗತಿಕ ಆರೋಗ್ಯದ ನೆಲೆಯಲ್ಲೂ ಒಂದು ಮೈಲುಗಲ್ಲು. ಈ ಸಂಯೋಜಿತ ಚಿಕಿತ್ಸಾಪದ್ಧತಿಯಲ್ಲಿ ಭಾರತದ ಪ್ರಾಚೀನ ಪರಂಪರೆಯ ಯೋಗವೂ ಒಳಗೊಂಡಿದೆ.

ಡಾ. ಟೆರೆನ್ಸ್ ಜೆ.ರೆಯಾನ್ ಮತ್ತು ಡಾ.ನರಹರಿ

ಡಾ.ನರಹರಿಯವರ ಕನಸುಗಳಿಗೆ ಬೆಂಬಲ ಕೊಟ್ಟವರು ಅನೇಕರಿದ್ದಾರೆ. ಅವರಲ್ಲಿ ಆಕ್ಸ್‍ಫರ್ಡ್ ಯುನಿವರ್ಸಿಟಿಯಲ್ಲಿ ಎಮೆರಿಟಸ್ ಪ್ರೊಫೆಸರ್ ಆಗಿರುವ ಡಾ. ಟೆರೆನ್ಸ್ ಜೆ.ರೆಯಾನ್ ಅವರದು ಮುಖ್ಯಪಾತ್ರ. ಆದ್ದರಿಂದಲೇ ತಮ್ಮ ಮೆಂಟರ್ ಎಂದೇ ನರಹರಿಯವರು ಆರಾಧಿಸುವ, 90ರ ಇಳಿವಯಸ್ಸಿನಲ್ಲೂ ನೊಂದ ಜನಗಳ ಸೇವೆಯ ಐಎಡಿಯ ಧ್ಯೇಯದೊಂದಿಗೆ ಉತ್ಸಾಹದಿಂದ ಬೆರೆಯುವ ಈ ಹಿರಿಯಜ್ಜನ ನಗುಮೊಗದ ಭಾವಚಿತ್ರವು ಐಎಡಿಯ ಮೊಗಸಾಲೆಯಲ್ಲಿ ನಮ್ಮನ್ನು ಸ್ವಾಗತಿಸುತ್ತದೆ. 24 ವರ್ಷಗಳ ಐಎಡಿಯ ಯಶೋಗಾಥೆಯಲ್ಲಿ ಸಾಧನೆಯ ಮತ್ತು ಗೌರವದ ಗರಿಗಳು ಅನೇಕವಿವೆ.ಕರ್ನಾಟಕ, ಕೇರಳ. ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲದೆ ಉತ್ತರ ಭಾರತದ ಬಿಹಾರ, ಉತ್ತರಪ್ರದೇಶ, ಛತ್ತೀಸಘಡ- ಹೀಗೆ ನಾನಾ ಭಾಗಗಳಿಂದ ಬಂದ ಸುಮಾರು 5000 ರೋಗಿಗಳು ಸಂಯೋಜಿತ ಚಿಕಿತ್ಸೆಯ ಪ್ರಯೋಜನವನ್ನು ಪಡೆದಿದ್ದಾರೆ . ಆನೆಕಾಲಿಗೆ ಈ ಚಿಕಿತ್ಸಾಪದ್ಧತಿಯಿಂದ ಸರಾಸರಿ 75ರಿಂದ 80ರಷ್ಟು ಗುಣವಾಗುವ ಭರವಸೆಯನ್ನು ಖಾತರಿ ಪಡಿಸಿದ ಏಕೈಕ ಜಾಗತಿಕ ಸಂಸ್ಥೆ ಇದಾಗಿರುವುದರಿಂದ ವಿದೇಶಗಳಿಂದಲೂ ರೋಗಿಗಳು ಬಂದು ಚಿಕಿತ್ಸೆಗೊಳಗಾಗಿ ಸಂತುಷ್ಟರಾಗಿ ತೆರಳಿದ್ದಾರೆ. ಭಾರವಾದ ಕಾಲುಗಳನ್ನು ಹೊತ್ತು ಭಾರವಾದ ಮನಸ್ಸಿನಿಂದ ಬದುಕೇ ದುರ್ಭರವೆನಿಸಿದ್ದ ಅದೆಷ್ಟೋ ರೋಗಿಗಳು ಹೊಸ ಜೀವನೋತ್ಸಾಹವನ್ನು ಪಡೆದಿದ್ದಾರೆ. ಊತದ ಗಣನೀಯ ಇಳಿಕೆ, ಆಗಾಗ ಬಾಧಿಸುವ ಜ್ವರದ ಗೈರು ಹಾಜರಿ- ಇವುಗಳಿಂದ ಸ್ವತಂತ್ರವಾಗಿ ಓಡಾಡುವ, ಸ್ವಾವಲಂಬಿಗಳಾಗಿ ಬದುಕಿನಲ್ಲಿ ಮುನ್ನಡೆಯುವ ಆತ್ಮ ವಿಶ್ವಾಸವು ಅವರಲ್ಲಿ ತುಂಬಿದೆ. ಅಂತಹ ಅನೇಕರ ಕಥೆಗಳು ಐಎಡಿಯ ಸೇವಾತತ್ಪರ ತಂಡಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ.

ಸಂಸ್ಥೆಯ ನಿರ್ದೇಶಕ ಡಾ.ನರಹರಿಯವರ ಜೊತೆ ಆಯುರ್ವೇದ ತಜ್ಞರಾದ ಡಾ.ಗುರುಪ್ರಸಾದ ಅಗ್ಗಿತ್ತಾಯ, ಡಾ. ರೂಪಾ ಕಾಮತ್, ಮಾತ್ರವಲ್ಲದೆ ಶುಶ್ರೂಷಾ ವಿಭಾಗದ ಹರಿಣಾಕ್ಷಿ, ಶ್ರುತಿಮೋಳ್, ಯೋಗ ಶಿಕ್ಷಕ ಜಯಂತ ಮೊದಲಾದವರೆಲ್ಲ ಒಂದು ಟೀಮ್ ಆಗಿ ರೋಗ ಬಾಧಿತ ವ್ಯಕ್ತಿಯ ರೋಗದ ಬಗ್ಗೆ ಸಮಗ್ರ ವಿವರಗಳನ್ನು ಪಡೆದು ಸಂಯೋಜಿತ ಚಿಕಿತ್ಸೆಯ ಪ್ರೊಟೋಕಾಲ್‍ಗೆ ಅನುಸಾರವಾಗಿ ಹಂತ ಹಂತದ ಔಷಧೋಪಚಾರಗಳನ್ನು ನಿರ್ವಹಿಸಿ ಆ ಬಳಿಕದ ಫಾಲೋಅಪ್ ಗಳಲ್ಲೂ ಕಾಳಜಿವಹಿಸಿ ರೋಗಿಯು ಬದುಕಿನಲ್ಲಿ ಹೊಸ ಭರವಸೆಯಿಂದ ತೆರಳುವಾಗ ಧನ್ಯತೆಯ ನಗುವನ್ನು ತಾವೂ ಬೀರುತ್ತಾರೆ. ಈ ತಂಡದ ಸಮರ್ಪಣಾ ಭಾವದ ದುಡಿಮೆಯ ಫಲಶ್ರುತಿಯಾಗಿ ರೋಗವನ್ನು ಮೆಟ್ಟಿನಿಂತ ಫಲಾನುಭವಿಗಳ ನಿಜ ಕಥನವು ಈ ಚಿಕಿತ್ಸಾವಿಧಾನಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟಿತು. ಡಾ.ನರಹರಿ, ಡಾ. ಗುರುಪ್ರಸಾದ್ ಅಗ್ಗಿತ್ತಾಯ- ಇವರು ಈ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ವಿಚಾರ ಮಂಡನೆ ಮಾಡಿದ್ದು ಕೂಡ ದೇಶೀಯ ಮತ್ತು ಜಾಗತಿಕ ಗೌರವ ದೊರಕಲು ನಿಮಿತ್ತವಾಯಿತು. ಆಯುಷ್ ಇಲಾಖೆ (ನ್ಯಾಷನಲ್ ಆಯುಷ್ ಮಿಷನ್) ತನ್ನ ಅನುಷ್ಠಾನದ ಮಾರ್ಗಸೂಚಿಗಳು( ಆಪರೇಷನಲ್ ಗೈಡ್ ಲೈನ್ಸ್) ಸಿದ್ಧಪಡಿಸಿದಾಗ ಇದರ ‘ಎಚ್’ ವಿಭಾಗದಲ್ಲಿ ಫೈಲೇರಿಯಾ ಚಿಕಿತ್ಸೆಗೆ ಸಂಬಂಧಿಸಿದಂತೆ ಐಎಡಿಯ ಚಿಕಿತ್ಸಾ ವಿಧಾನದ ಉಲ್ಲೇಖವನ್ನು ಒಳಗೊಂಡಿರುವುದು ಮಹತ್ಸಾಧನೆ.

ಇತ್ತೀಚೆಗೆ ಬ್ರಿಟಿಷ್ ಜರ್ನಲ್ ಆಫ್ ಡರ್ಮಟಾಲಜಿಯು ತನ್ನ ಸಂಚಿಕೆಯಲ್ಲಿ ಮುಖಪುಟ ಲೇಖನವಾಗಿ ಐಎಡಿಯನ್ನು ಆಯ್ಕೆಮಾಡಿದ್ದು ಮತ್ತೊಂದು ಗೌರವದ ಗರಿ. ಈ ಹಿಂದೆ ಕರೆಂಟ್ ಸಯನ್ಸ್ ಪತ್ರಿಕೆಯು ಸಂಯೋಜಿತ ಚಿಕಿತ್ಸೆಯ ಬಗ್ಗೆ ವಿಶೇಷ ಸಂಚಿಕೆಯನ್ನು ಪ್ರಕಟಪಡಿಸಿತ್ತು. ಅದರ ಸಂಪಾದಕತ್ವದ ಜವಾಬ್ದಾರಿಯನ್ನು ಪ್ರೊ. ಟೆರೆನ್ಸ್ ಜೆ. ರೆಯಾನ್ ಡಾ.ನರಹರಿ ಹಾಗೂ ಡಾ. ಗುರುಪ್ರಸಾದ್ ಅಗ್ಗಿತ್ತಾಯ- ಇವರು ನಿರ್ವಹಿಸಿದ್ದು ಐಎಡಿಯ ಈ ಆವಿಷ್ಕಾರದ ಬಗ್ಗೆ ಜಾಗತಿಕವಾಗಿ ಅರಿವನ್ನು ಮೂಡಿಸಲು ಮಹತ್ವದ ಹೆಜ್ಜೆಯಾಗಿತ್ತು (2015). ಜಾಗತಿಕ ಆರೋಗ್ಯ ಸಂಸ್ಥೆ ಕೂಡ ಐಎಡಿಯ ಚಿಕಿತ್ಸಾ ವಿಧಾನವನ್ನು ಮಾನ್ಯ ಮಾಡಿರುವುದು ಹೆಮ್ಮೆಯ ವಿಚಾರ. ಐಎಡಿಯ ಮತ್ತೊಂದು ಸಾಧನೆಯೆಂದರೆ ಚರ್ಮರೋಗದ ಶುಶ್ರೂಷೆಗೆ (ಡರ್ಮಟಾಲಜಿ ನರ್ಸಿಂಗ್) ಸಂಬಂಧಿಸಿದಂತೆ ಪ್ರತ್ಯೇಕವಾದ ಪಠ್ಯಪದ್ಧತಿಯೊಂದು ಇಲ್ಲದಿರುವ ಸಂದರ್ಭದಲ್ಲಿ ಅದರ ಅಗತ್ಯವನ್ನು ಮನಗಂಡು ಐಎಡಿಯು ಅದಕ್ಕಾಗಿಯೇ ಪ್ರತ್ಯೇಕ ಪಠ್ಯ ಪದ್ಧತಿಯನ್ನು ರೂಪಿಸಿದ್ದು ಇದು ಜಗತ್ತಿನಲ್ಲಿಯೇ ಪ್ರಥಮವಾಗಿದೆ. ಆಯುಷ್ ಇಲಾಖೆ ಹಾಗೂ ಜಾಗತಿಕ ಆರೋಗ್ಯ ಸಂಸ್ಥೆಯು ಅದನ್ನು ಒಪ್ಪಿರುವುದು ಕೂಡ ಐಎಡಿಯ ಹೆಗ್ಗಳಿಕೆ.

ಐಎಡಿಯು ಕೇರಳದ ಆಲೆಪ್ಪಿ ಮತ್ತು ಕರ್ನಾಟಕದ ಮಳಖೇಡ ಎಂಬ ಸ್ಥಳಗಳಲ್ಲಿ ಆನೆಕಾಲು ರೋಗದ ಚಿಕಿತ್ಸೆ ಮತ್ತು ಶುಶ್ರೂಷೆಗೆ ಸಂಬಂಧಿಸಿದಂತೆ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸಿ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ತಜ್ಞರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿತ್ತು.(1/8/2010ರಿಂದ 10/4/2012ರ ವರೆಗೆ) ಐಎಡಿಯ ಚಿಕಿತ್ಸಾ ವಿಧಾನವು ವಿಶೇಷ ಮನ್ನಣೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಆನೆಕಾಲು ರೋಗಿಗಳು ಬಹು ಸಂಖ್ಯಾತರಾಗಿರುವ ಬಿಹಾರದಲ್ಲೂ ಉತ್ತರ ಪ್ರದೇಶದಲ್ಲೂ ಅದರ ಚಿಕಿತ್ಸೆಗಾಗಿಯೇ ಒಟ್ಟು ನಾಲ್ಕು ಕೇಂದ್ರಗಳನ್ನು ತೆರೆಯಲು ಸಾಧ್ಯವಾದದ್ದು ಇತ್ತೀಚೆಗಿನ ಸಾಧನೆ. ಬಿಹಾರದ ಬೇಗುಸರಾಯ್ ಮತ್ತು ಪಟ್ನಾ ಹಾಗೂ ಉತ್ತರಪ್ರದೇಶದ ವಾರಣಾಸಿ ಮತ್ತು ಲಕ್ನೋಗಳಲ್ಲಿ ಈ ಕೇಂದ್ರಗಳಿವೆ. ಬಿಲ್‍ಮತ್ತುಮಿಲಿಂಡಾ ಗೇಟ್ಸ್ ಫೌಂಡೇಶನ್‍ನ ಅನುದಾನದ ಜೊತೆಗೆ ಆಯುಷ್ ಇಲಾಖೆಯ ಸಹಕಾರದೊಂದಿಗೆ ಎರಡುವರ್ಷಗಳ ಅವಧಿಯ ಐಎಡಿಯ ಈ ವಿಸ್ತರಣಾ ಘಟಕಗಳು ಆರಂಭಗೊಂಡು ಆ ಭಾಗದ ರೋಗಿಗಳಿಗೆ ವರದಾನವಾಗಿ ಬಹಳ ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು- ಹೀಗೆ ಪ್ರತಿಯೊಂದು ಕೇಂದ್ರದಲ್ಲೂ ಒಟ್ಟು ಒಂಬತ್ತು ಮಂದಿಯನ್ನೊಳಗೊಂಡ ತಂಡಗಳು ಸಂಯೋಜಿತ ಚಿಕಿತ್ಸೆಯ ಪ್ರೊಟೋಕಾಲ್ ಅಥವಾ ಅನುಕ್ರಮವನ್ನು ಅನುಸರಿಸಿ ಚಿಕಿತ್ಸೆ ನೀಡಿ ಕಂಗೆಟ್ಟರೋಗಿಗಳ ಮುಖದಲ್ಲಿ ನಗೆಯನ್ನು ಅರಳಿಸುತ್ತಿದ್ದಾರೆ. ಉಚಿತವಾಗಿ ದೊರಕುವ ಈ ಚಿಕಿತ್ಸೆಯ ಪ್ರಯೋಜನವನ್ನು ಪಡೆದು ಚಪ್ಪಲಿ ಹಾಕಲಾಗದವರು, ಚೂಡಿದಾರ್ ಧರಿಸಲಾಗದವರು, ಬಿಡದೆ ಬಾಧಿಸುವ ಜ್ವರ, ನೋವುಗಳಿಂದ ನರಳುತ್ತಿದ್ದವರು, ನಡೆಯಲಾಗದೆ ಸಂಕಟಪಡುತ್ತಿದ್ದವರು ಈಗ ಹೊಸ ಆತ್ಮವಿಶ್ವಾಸದಿಂದ ಹೆಜ್ಜೆಯಿಟ್ಟು ಬದುಕಿನಲ್ಲಿ ಮುಂದುವರಿಯುತ್ತಿದ್ದಾರೆ .ಅನೇಕ ರೋಗಿಗಳು ಕ್ಯೂವಿನಲ್ಲಿದ್ದು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ಐಎಡಿಯ ತಜ್ಞರಿಂದ ಸರಿಯಾದ ತರಬೇತಿಯನ್ನು ಪಡೆದ ಆಯಾ ಪ್ರದೇಶಗಳ ಸ್ಥಳೀಯರು ಈ ಚಿಕಿತ್ಸಾ ತಂಡಗಳಲ್ಲಿರುವುದು ಗಮನಾರ್ಹ. ಸ್ವಲ್ಪವೂ ಲೋಪ ಬರದಂತೆ ಖುದ್ದಾಗಿ ಅಲ್ಲಿನ ತಂಡದೊಂದಿಗೆ ಕೆಲಕಾಲ ಇದ್ದೂ ಆನ್‍ಲೈನ್ ಆಗಿಯೂ ಎಲ್ಲವನ್ನು ನಿರಂತರ ಮಾನಿಟರಿಂಗ್ ಮಾಡುವ ಐಎಡಿಯ ಡಾ.ನರಹರಿ, ಡಾ. ಗುರುಪ್ರಸಾದ್ ಅಗ್ಗಿತ್ತಾಯ, ಡಾ. ರೂಪಾ ಕಾಮತ್, ಡಾ. ಉಮಾಭಾರತಿ , ಅಲ್ಲದೆ ಅನುಭವಿ ಚಿಕಿತ್ಸಕರಾದ ಹರಿಣಾಕ್ಷಿ ಮೊದಲಾದವರ ಅರ್ಪಣಾ ಮನೋಭಾವದ ಸೇವೆಗೆ ನಿಜವಾಗಿಯೂ ಅಭಿಮಾನ ಪಡಬೇಕು. ಐಎಡಿಯ ಈ 24ವರ್ಷಗಳ ಯಾನದಲ್ಲಿ ಇಡೀ ತಂಡದ ಸಾಮಾಜಿಕ ಕಾಳಜಿ, ಸೇವಾತತ್ಪರತೆ, ಲಾಭದ ಆಸೆಯಿಲ್ಲದೆ ಬಡವ ಬಲ್ಲಿದ ಭೇದವಿಲ್ಲದೆ ಜಾತಿ ಮತ ತಾರತಮ್ಯವಿಲ್ಲದೆ ಪ್ರತಿಯೊಬ್ಬ ರೋಗಿಯೊಡನೆ ಮಾನವೀಯವಾಗಿ ವ್ಯವಹರಿಸುವ ಮನೋಭಾವ, ನಿಖರವಾದ ಪರಿಶೀಲನೆಯ ಬಳಿಕ ನೀಡುವ ಕ್ರಮಬದ್ಧವಾದ ಚಿಕಿತ್ಸೆ- ಈ ಎಲ್ಲ ಸಕಾರಾತ್ಮಕ ಅಂಶಗಳು ಕಾರಣವಾಗಿ ಸರಕಾರದ ಮತ್ತು ಸರಕಾರೇತರ ಸಂಸ್ಥೆಗಳ ಬೆಂಬಲವು ಐಎಡಿಗೆ ಲಭಿಸಿದೆ. 2014-15ರ ಬಜೆಟ್ ನಲ್ಲಿ ಕೇರಳ ಸರಕಾರವು ‘ಸೆಂಟರ್ ಫಾರ್ ಇಂಟಗ್ರೇಟೆಡ್ ಮೆಡಿಸಿನ್ ಏಂಡ್ ಪಬ್ಲಿಕ್ ಹೆಲ್ತ್’ ಎಂಬ ಹೆಸರಿನಲ್ಲಿ ಉಳಿಯತ್ತಡ್ಕದಲ್ಲಿ ಸಾರ್ವಜನಿಕ ಆರೋಗ್ಯಕೇಂದ್ರವನ್ನು ಆರಂಭಿಸಲು ಅನುದಾನವನ್ನಿತ್ತುದು ಸಂಸ್ಥೆಯ ಬೆಳವಣಿಗೆಗೆ ದೊಡ್ಡ ಚಾಲನೆಯನ್ನು ನೀಡಿತು. ಕೇಂದ್ರ ಸರಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್’ಸ್ ಮಾಳಖೇಡ ಮತ್ತು ಆಲೆಪ್ಪಿಗಳಲ್ಲಿ ಸಂಯೋಜಿತ ಚಿಕಿತ್ಸಾ ಶಿಬಿರಗಳನ್ನು ನಡೆಸಲು ಅನುದಾನವನ್ನು ನೀಡಿದುದು ಕೂಡ ಉಲ್ಲೇಖಾರ್ಹ.

ಇದಲ್ಲದೆ ಸಂಸ್ಥೆಯ ಕಾರ್ಯವೈಖರಿ ಹಾಗೂ ಮಾನವೀಯ ನಡೆಗೆ ಒಲಿದು ತಾವಾಗಿ ದೇಣಿಗೆಯನ್ನು ನೀಡುವ ದಾನಿಗಳ ಬೆಂಬಲವೂ ಈ ಸಂಸ್ಥೆಗೆ ಇದೆ.ಹಾಗೆಯೇ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಸಂಸ್ಥೆಯ ಬೆಳವಣಿಗೆಗೆ ಹಲವು ಬಗೆಯಲ್ಲಿ ಕೈಜೋಡಿಸುವ ಸನ್ಮನಸ್ಸಿನ ಹಲವು ಮಂದಿ ಇದ್ದಾರೆ. ಇದರಿಂದಾಗಿ ಬಡರೋಗಿಗಳ ಚಿಕಿತ್ಸೆಗೆ ಸಹಾಯವಾಗುತ್ತದೆ. ಐಎಡಿಯಲ್ಲಿ ಸಂಯೋಜಿತ ಚಿಕಿತ್ಸೆಯ ಪ್ರಯೋಜನವು ಆನೆಕಾಲುರೋಗ ಮಾತ್ರವಲ್ಲದೆ ಸೋರಿಯಾಸಿಸ್, ಬಿಳಿತೊನ್ನು, ಗುಣವಾಗದ ವ್ರಣಗಳು ಮುಂತಾದ ಚರ್ಮರೋಗಗಳಿಗೂ ದೊರಕುತ್ತಿರುವುದು ಗಮನಾರ್ಹ.

‘ನಾನು ಒಬ್ಬ ವೈದ್ಯ ಮಾಡ ಬೇಕಾದುದನ್ನಷ್ಟೇ ಮಾಡುತ್ತಿದ್ದೇನೆ. ಎಲ್ಲರೂ ಹಾಗೆ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ’ ಎಂದು ಸರಳವಾಗಿ ಹೇಳುವ ಡಾ.ನರಹರಿಯವರು ದೊಡ್ಡ ಕನಸುಗಳನ್ನು ಕಾಣುತ್ತಾರೆ . ಆ ಕನಸುಗಳನ್ನು ಸಾಕಾರಗೊಳಿಸಲು ತಮ್ಮ ತಂಡದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ. ಒಮ್ಮೆ ತೀವ್ರತರ ಅನಾರೋಗ್ಯದಿಂದ ಬಾಧಿತರಾಗಿ ಅವರು ಆಸ್ಪತ್ರೆಯಲ್ಲಿದ್ದಾಗ ಅವರ ಅಮ್ಮ ಹೇಳಿದ್ದರಂತೆ ‘ರೋಗಿಗಳಿಗೆ ಭಾಗ್ಯವಿದ್ದರೆ ನನ್ನ ಮಗ ಬದುಕಿಯಾನು’. ಅಮ್ಮನ ಹರಕೆ ಫಲಿಸಿತು. ರೋಗಿಗಳಿಗೆ ಭಾಗ್ಯವಿತ್ತು. ಐಎಡಿಯ ಜೊತೆ ದೀರ್ಘಕಾಲದ ಒಡನಾಟವಿದ್ದು ಪ್ರಸ್ತುತ ಅದರ ಆಢಳಿತಾಧಿಕಾರಿ ಯಾಗಿರುವ ಕೇರಳದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಎಂ.ಭಾಸ್ಕರನ್ ಹೇಳುತ್ತಾರೆ- “ ಡಾ. ನರಹರಿಯವರಂತೆ ಒಂದು ಧ್ಯೇಯಕ್ಕಾಗಿ ತಮ್ಮನ್ನು ಸಮರ್ಪಿಸಿ ಕೊಂಡಿರುವವರು ಅತ್ಯಂತ ವಿರಳ. ಅವರ ಜೊತೆ ದುಡಿಯುವುದು ನಮಗೆ ಅಭಿಮಾನ” ಐಎಡಿ ತಂಡದಿಂದ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ತೆರಳಿದ ಸಾವಿರಗಟ್ಟಲೆ ರೋಗಿಗಳ ಹರಕೆ ಹಾರೈಕೆಗಳು ಡಾ. ನರಹರಿಯವರನ್ನು ಮತ್ತು ಅವರನ್ನು ತಮ್ಮ ಮೆಂಟರ್ ಎಂದು ತಿಳಿದು ಅವರ ಕನಸನ್ನು ನನಸಾಗಿಸಲು ಶ್ರದ್ಧೆಯಿಂದ ಶ್ರಮಿಸುವ ಅವರ ಸಹೋದ್ಯೋಗಿಗಳನ್ನು ಸದಾ ಕಾಪಾಡುತ್ತವೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಆನೆಕಾಲಿಗೆ ಅಂಕುಶವಿಕ್ಕಿದ ಸೇವಾತತ್ಪರ ಐಎಡಿಯ ಹೆಜ್ಜೆಗಳು”

  1. ಡಾ. ಸುಭಾಷ್ ಪಟ್ಟಾಜೆ

    ಬಹಳ ಒಳ್ಳೆಯ ಹೃದಯಸ್ಪರ್ಶಿ ಲೇಖನ.

  2. Chintamani Sabhahit

    ಇನ್ಸ್ಟಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟಾಲಜಿ ಟೀಮಿನ ಸಕ್ಷಮ ಪರಿಚಯ ಮತ್ತು ಉಪಯುಕ್ತ ಮಾಹಿತಿಗಾಗಿ ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter