ಆರೋಗ್ಯಧಾಮ -‘ಚಿತ್ರಕೂಟ’

• ಚಿತ್ರ-ಲೇಖನ: ಧರ್ಮಾನಂದ ಶಿರ್ವ

ಚಿತ್ರಕೂಟ ಹೆಸರು ಕೇಳಿದೊಡನೆ ನಮ್ಮ ಮನಸ್ಸು ರಾಮಾಯಣಕ್ಕೆ ಜಿಗಿಯುತ್ತದೆ. ರಾಮ, ಲಕ್ಷ್ಮಣ, ಸೀತೆ ತಮ್ಮ ವನವಾಸದ ಆರಂಭದಲ್ಲಿ ನೆಲೆಯೂರಿದ ಸ್ಥಳವಿದು. ಆದರೆ ನಾನಿಲ್ಲಿ ಹೇಳಲು ಹೊರಟಿರುವುದು ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಪ್ರಶಾಂತ ಹಸಿರ ಸಿರಿಯ ಮಧ್ಯೆ ಬೆಚ್ಚಗೆ ತಲೆ ಎತ್ತಿ ನಿಂತ ಆಯುರ್ವೇದ ಚಿಕಿತ್ಸಾಲಯ ಚಿತ್ರಕೂಟದ ಬಗ್ಗೆ. ಹಲವು ವೈಶಿಷ್ಟ್ಯಗಳಿಂದ ಕೂಡಿದ ಈ ಚಿಕಿತ್ಸಾಲಯ ಇತ್ತೀಚೆಗೆ ದೇಶ ವಿದೇಶಿಗರ ಗಮನ ಸೆಳೆಯುತ್ತಿದೆ. ಈ ಒಂದು ಸಮಗ್ರ ಯೋಜನೆಯ ದೈತ್ಯ ಶಕ್ತಿಯಾಗಿ ನಿಂತವರು ಡಾ. ರಾಜೇಶ್ ಬಾಯರಿ ಮತ್ತು ಅವರ ಪತ್ನಿ ಡಾ. ಅನುಲೇಖಾ.

ಡಾ. ರಾಜೇಶ್ ಬಾಯರಿ ಮತ್ತು ಡಾ. ಅನುಲೇಖಾ.

ಹೆಸರ ವಿಶೇಷ ಮತ್ತು ವೈಶಿಷ್ಟ್ಯಗಳು

ಪ್ರಕೃತಿಯಂತೆ ಮನುಷ್ಯನ ಜೀವನ ಸರಳವಾಗಿರಬೇಕು ಎನ್ನುವ ಮಾತೊಂದಿದೆ. ಅಂದರೆ ಪ್ರಕೃತಿದತ್ತವಾದ ನಮ್ಮ ದೇಹಕ್ಕೆ ಪ್ರಕೃತಿಯಲ್ಲಿ ಸಿಗುವ ಸಕಲ ವಸ್ತುಗಳು ಜೀವನಾಧಾರಾವಾಗಿದ್ದು ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಹೋಗಲು, ಆ ಮೂಲಕ ಸರಳ ಜೀವನಶೈಲಿಯನ್ನು ರೂಪಿಸಲು ನೆರವಾಗುತ್ತವೆ. ಪ್ರಕೃತಿಯೊಂದಿಗಿನ ಸಮರಸದ ಜೀವನ ಭಾರತೀಯ ಮೂಲದ ಆಯುರ್ವೇದ ಚಿಕಿತ್ಸಾ ಪದ್ಧತಿಯ ಮೂಲತತ್ವ. ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಆಯುರ್ವೇದ, ಯೋಗ, ಯೋಗಾಸನ, ಕೃಷಿ, ಹೈನುಗಾರಿಕೆ, ಸಂಗೀತ… ಇತ್ಯಾದಿಗಳ ಸಮಾವೇಶದ ತಾಣವೇ ಈ ಚಿತ್ರಕೂಟ. ಇದು ಇಲ್ಲಿಯ ವೈಶಿಷ್ಟ್ಯವೂ ಹೌದು.
ಇಲ್ಲಿ ಆಯುರ್ವೇದ ಚಿಕಿತ್ಸೆಯೊಂದಿಗೆ ಬೆಳಿಗ್ಗೆ ಸಂಜೆ ಯೋಗ ಯೋಗಾಸನದ ತರಗತಿಗಳಿವೆ. ಇಲ್ಲಿನ `ಪಥ್ಯಾಹಾರ’ ಹೆಸರಿನ ಅಡುಗೆಮನೆಯಲ್ಲಿ ಇಲ್ಲಿಯೇ ಬೆಳೆದ ತರಕಾರಿ, ಸೊಪ್ಪು, ಹಣ್ಣು, ತೆಂಗಿನಕಾಯಿಯ ಬಳಕೆಯಾಗುತ್ತದೆ. ಆಯುರ್ವೇದ ಔಷಧಿಗಳಿಗೆ ಇಲ್ಲಿರುವ ಔಷಧೀಯ ಸೊಪ್ಪನ್ನು ಬಳಸುತ್ತಾರೆ. ರೋಗಿಗಳಿಗೆ ಬೇಕಾಗುವ ಹಾಲು, ಮಜ್ಜಿಗೆ, ತುಪ್ಪ ಇಲ್ಲಿ ಸಾಕಿದ ಹತ್ತಾರು ಗಿರ್ ತಳಿಯ ಹಸುಗಳಿಂದ ದೊರೆಯುತ್ತದೆ. ಆರೈಕೆಗೆ ಬೇಕಾಗುವ ಎಲ್ಲ ಔಷಧಗಳು ಸ್ವಂತ ಬ್ರ್ಯಾಂಡಿನೊಂದಿಗೆ ಇಲ್ಲಿಯೇ ತಯಾರಾಗುತ್ತವೆ. ಇದಕ್ಕಾಗಿ ಪ್ರತ್ಯೇಕ ಔಷಧ ತಯಾರಿಕಾ ಘಟಕವಿದೆ. ಚಿತ್ತ ಶಾಂತಿಗೆ ಇಂಪಾದ ಮೆಲುದನಿಯ ಸಂಗೀತ ಲಹರಿ ಹರಿಯುತ್ತದೆ. ಈಜಲು ಈಜು ಕೊಳವಿದೆ. ಹೀಗೆ ಇದು ಮಿಕ್ಕ ಆಯುರ್ವೇದ ಚಿಕಿತ್ಸಾಲಯಗಳಿಂದ ಭಿನ್ನವಾಗಿ ನಿಲ್ಲುತ್ತದೆ.

ರೋಚಕ ಆರಂಭ

ವೈಜ್ಞಾನಿಕ ಮನೋಭಾವದ ಡಾ. ರಾಜೇಶ್ ಬಾಯರಿ ತಮ್ಮ ಬಿ.ಎ.ಎಮ್,ಎಸ್. ವ್ಯಾಸಂಗದ ದ್ವಿತೀಯ ವರ್ಷ ಮುಗಿಯುತ್ತಿದ್ದಂತೆ ಭವಿಷ್ಯತ್ತಿನ ನೀಲನಕ್ಷೆಯೊಂದನ್ನು ಮನಸ್ಸಿನಲ್ಲಿಯೇ ತಯಾರಿಸಿದ್ದರು. ಅವರ ತಂದೆಯ ಹದಿನೇಳು ಎಕರೆಯಷ್ಟು ಜಮೀನು ಆಲೂರಿನಲ್ಲಿತ್ತು. ಡಿಗ್ರಿ ಮುಗಿಯುತ್ತಿದ್ದಂತೆ ಅವರೆದುರು ಎರಡು ಆಯ್ಕೆಗಳು ತೆರೆದುಕೊಂಡವು. ಒಂದು ಎಲ್ಲರಂತೆ ಕ್ಲಿನಿಕ್ ಇಟ್ಟೋ ಇಲ್ಲಾ ದೊಡ್ಡ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವುದು. ಎರಡನೆಯದಾಗಿ ಇರುವ ಜಮೀನನ್ನು ಅಭಿವೃದ್ಧಿಪಡಿಸುವ ಜೊತೆಗೆ ಅಲ್ಲಿ ತಾನು ಕಲಿತ ವಿದ್ಯೆಯನ್ನು ಸಾರ್ಥಕ ಹಂತಕ್ಕೆ ಒಯ್ಯುವುದು. ಹೀಗೆ ಮಾಡಿದರೆ ಗ್ರಾಮೀಣ ಭಾಗದ ಒಂದಿಷ್ಟು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಬಹುದು ಎನ್ನುವ ಯೋಚನೆ ಅವರ ಮನ ಹೊಕ್ಕಿದ್ದೇ ತಡ ಎರಡನೆಯ ಆಯ್ಕೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೆ ಪೂರ್ವಭಾವಿಯಾಗಿಯೋ ಎಂಬಂತೆ 2008 ರಲ್ಲಿಯೇ ಪುತ್ರಂಜೀವಕ ಎಂಬ ಸಸಿಯನ್ನು ನೆಟ್ಟು ಈ ಯೋಜನೆಗೆ ಸಂಕಲ್ಪ ಮಾಡಿದ್ದರು.

ಆಯುರ್ವೇದ ಪದವಿ ಮುಗಿಯುತ್ತಿದ್ದಂತೆ ಡಾ. ರಾಜೇಶ್ 2010 ಮಾರ್ಚ್‍ನಲ್ಲಿ ಒಂದು ಹಾಸಿಗೆಯ ಸಣ್ಣ ಕ್ಲಿನಿಕ್‍ನೊಂದಿಗೆ ಮನೆಯ ಪಕ್ಕದಲ್ಲಿಯೇ ತಮ್ಮ ವೃತ್ತಿಯನ್ನು ಆರಂಭಿಸಿದರು. ಮೊದಲೆರಡು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ರೋಗಿಗಳು ಬಂದಾಗ ಇವರ ಸ್ನೇಹಿತರು, ಹಿತಚಿಂತಕರು ಇದನ್ನು ತೊರೆದು ಹೊರಬರುವಂತೆ ಸಲಹೆ ನೀಡಿದರು. ಆದರೆ ರಾಜೇಶ್ ಅವರ ನಿಲುವು ಈ ನಿಟ್ಟಿನಲ್ಲಿ ಅಚಲವಾಗಿತ್ತು. 2010 ಡಿಸೆಂಬರ್ 30 ರಂದು ರಾಜೇಶ್ ಅವರ ವಿವಾಹ ಆಯುರ್ವೇದಿಕ್ ಡಾಕ್ಟರ್ ಅನುಲೇಖಾ ಅವರೊಂದಿಗೆ ನಡೆಯಿತು. ಅವರೂ ಗಂಡನಿಗೆ ಒತ್ತಾಸೆಯಾಗಿ ನಿಂತರು. ಎರಡು ವರ್ಷಗಳ ನಂತರ ಎರಡು ಬೆಡ್ಡಿನ ಸೌಕರ್ಯದೊಂದಿಗೆ ಚಿಕಿತ್ಸಾಲಯ ಕೊಂಚ ಚೇತರಿಕೆಯ ಹಾದಿಯಲ್ಲಿ ಸಾಗಿತು. 2014 ರಲ್ಲಿ ನರೇಂದ್ರ ಮೋದಿಯವರ ಕೃಪೆಯಿಂದ ವೈಫೈ ಸಂಪರ್ಕ ಸಿಕ್ಕಿತು. 2017 ರಲ್ಲಿ ಅಲ್ಲಿಗೆ ಭೇಟಿಕೊಟ್ಟವರೊಬ್ಬರು ಚಿತ್ರಕೂಟದ ಸಮಗ್ರ ವಿಡಿಯೋ ಒಂದನ್ನು ತಯಾರಿಸಿ ಹರಿಯಬಿಟ್ಟರು. ಜೊತೆಗೆ ಇಲ್ಲಿಯ ಚಿಕಿತ್ಸಾ ವಿಧಾನ, ಆರೈಕೆ, ಗುಣಮುಖದ ಪರಿಣಾಮಗಳು ಬಾಯಿಂದ ಬಾಯಿಗೆ ಬಿತ್ತರಗೊಂಡಾಗ ಇದನ್ನು ಹುಡುಕಿಕೊಂಡು ಬರುವವರ ಸಂಖ್ಯೆ ವರ್ಷಂಪ್ರತಿ ಹೆಚ್ಚಾಯಿತು. ಈಗ ಇದು 50 ಬೆಡ್‍ಗಳ, 45 ಸಿಬ್ಬಂದಿಯನ್ನು ಒಳಗೊಂಡ ಸುಸಜ್ಜಿತ ಚಿಕಿತ್ಸಾಲಯವಾಗಿದೆ. ಸಿಬ್ಬಂದಿಗೆ ಬೇಕಾದ ಮೊದಲ ಆರು ತಿಂಗಳ ತರಬೇತಿಯನ್ನು ಇಲ್ಲಿಯೇ ಕೊಡಲಾಗುತ್ತದೆ. ಇರುವ ಸಾಕಷ್ಟು ಸ್ಥಳದಲ್ಲಿ ಎಲ್ಲ ಸೌಕರ್ಯಗಳೊಂದಿಗೆ ಹೊಸ ಕಟ್ಟಡಗಳು ತಲೆ ಎತ್ತಿವೆ.

ಕೈಹಿಡಿದ ಕೊರೊನಾ!

2020 ರ ಆರಂಭದಲ್ಲಿ ಭಾರತಕ್ಕೆ ಕೊರೊನಾ ಕಾಲಿಟ್ಟಾಗ ಚಿತ್ರಕೂಟದ ಹೆಸರು ಜನಜನಿತವಾಗಿತ್ತು. ಅಲ್ಲಿಯ ತನಕ ಚಿಕಿತ್ಸೆಗೆ ಬರುವವರ ಸಂಖ್ಯೆಯಲ್ಲಿಯೂ ಏರುಮುಖವಾಗಿತ್ತು. ವಿದೇಶಿಯರು ಇದನ್ನು ಹುಡುಕಿಕೊಂಡು ಬರುವಂತಾಗಿತ್ತು. ಇವೆಲ್ಲವು ಜಾಹೀರಾತಿಲ್ಲದೆ ನಡೆದ ಬೆಳವಣಿಗೆಗಳು. ಕೊರೊನಾ ಬಂದ ಸಂದರ್ಭದಲ್ಲಿ ಇಲ್ಲಿ ಹತ್ತು ಮಂದಿ ಸಿಬ್ಬಂದಿ ಇದ್ದರು. ಕೊರೊನಾ ಕಾರಣದಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ಕ್ರಮೇಣ ಇಳಿಮುಖವಾಗತೊಡಗಿತು. ಇರುವ ಸಿಬ್ಬಂದಿಗೆ ಸಂಬಳ ಕೊಡುವುದು ದುಸ್ತರವಾಯಿತು. ಅವರೆಲ್ಲ ಕೆಳಮಧ್ಯಮ ವರ್ಗದಿಂದ ಬಂದವರಾಗಿದ್ದರು. ಅವರನ್ನು ಮನೆಗೆ ಕಳುಹಿಸುವುದು ಮಾನವೀಯ ದೃಷ್ಟಿಯಿಂದ ಹಿತವಲ್ಲ ಎಂದರಿತ ಡಾಕ್ಟರ್ ದಂಪತಿಗಳು ‘ರಕ್ಷ ಪಂಚಕ' ಎನ್ನುವ ಕೊರೊನಾ ಸಂಬಂಧಿತ ಮುಂಜಾಗೃತ ಕಿಟ್ ಒಂದನ್ನು ಆವಿಷ್ಕರಿಸಿದರು. ಇದರಲ್ಲಿ ಹರ್ಬಲ್ ಟೀ, ಮೂಗಿಗೆ ಹಾಕುವ ‘ನಾಸಾಂಮೃತ’, ಗಂಟಲು ರಕ್ಷಣೆಗೆ ‘ಸ್ವರಸುಧಾ', ಹೊಟ್ಟೆಗೆ ತೆಗೆದುಕೊಳ್ಳಲು ‘ಸ್ವಾಸ್ಥ್ಯ ರಸಾಯನ’ ಲೇಹ ಮತ್ತು `ರಾಕ್ಷೋಬ್ಣ’ ಧೂಪದ ಆಪತ್ಭಾಂಧವ ಚಿಕಿತ್ಸಕಾ ಪರಿಕರಗಳಿದ್ದವು. ಇದು ಬೆಂಗಳೂರು, ಉಡುಪಿ, ಕುಂದಾಪುರ, ಮಂಗಳೂರು ತುಂಬೆಲ್ಲಾ ಹೆಸರುವಾಸಿಯಾಯಿತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಬೇಡಿಕೆಯೂ ಬಂತು. ಇದರಿಂದ ಇರುವ ಸಿಬ್ಬಂದಿಗೆ ಎಂದಿನಂತೆ ನೀಡುವ ವೇತನ ಪಾವತಿಯ ಕಷ್ಟ ನೀಗಿತು.

ಚಿಕಿತ್ಸೆಗಳು

ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಇರುವಂತೆ ಇಲ್ಲಿ ಪಂಚಕರ್ಮಗಳ ಚಿಕಿತ್ಸೆ ಇದೆ. ಚಿಕಿತ್ಸೆಗೆಂದು ಬಂದವರ ಕಾಯಿಲೆಗೆ ಅನುಗುಣವಾಗಿ ವಮನ, ವೀರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣ ಪಂಚಕರ್ಮಗಳ ಜೊತೆಗೆ ಸ್ನೇಹಪಾನ, ದೇಹಕ್ಕೆ ಆಯುರ್ವೇದ ತೈಲ ಮರ್ದನ, ಕಷಾಯ ಸ್ನಾನ, ಹಬೆಸ್ನಾನ, ಪತ್ರಪಿಂಡ ಸ್ವೇದ, ಶಿರೋಧಾರಗಳ ಮೂಲಕ ಶುಶ್ರೂಷೆ ನಡೆಯುತ್ತದೆ. ಈ ಕ್ರಿಯೆಗಳ ಮೂಲಕ ಮೊದಲು ವಾತ, ಕಫ, ಪಿತ್ತಗಳನ್ನು ದೇಹದಿಂದ ಹೊರದಬ್ಬಿ ಅನಂತರ ಔಷಧೋಪಚಾರ ನಡೆಯುತ್ತದೆ. ಚಿಕಿತ್ಸೆಗೆಂದು ಬಂದವರು ಅಲ್ಲಿರಬೇಕಾದ ಸಮಯವನ್ನು ಅವರ ಚಿಕಿತ್ಸೆಗೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ. ವಸತಿ, ಊಟ, ಪಥ್ಯದ ಒತ್ತಟ್ಟಿಗೆ ವೈದ್ಯರ ಸಲಹೆ, ಸೂಚನೆ, ಪರಿಶೀಲನೆಗಳ ಅನುಕೂಲವಿದೆ. ಸೌಕರ್ಯಗಳಿಗೆ ಅನುಸಾರವಾಗಿ ರೂಂಗಳ ಬಾಡಿಗೆ ದರ ವ್ಯತ್ಯಾಸವಾಗುತ್ತದೆ. ಇಲ್ಲಿ ಮುಖ್ಯವಾಗಿ ಪಾಶ್ರ್ವವಾಯು, ಬೆನ್ನುನೋವು, ಗಂಟುನೋವು, ಚರ್ಮವ್ಯಾಧಿ, ಅರೆ ತಲೆನೋವು, ಗ್ಯಾಸ್ಟ್ರಿಕ್, ನಿಶ್ಶಕ್ತಿ, ಬೊಜ್ಜಿನ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈಗೀಗ ಸುಮಾರು 20 ಹೊರದೇಶಗಳಿಂದ ಜನರು ಈ ಕೇಂದ್ರಕ್ಕೆ ಆರೋಗ್ಯ ಸುಧಾರಣೆಯನ್ನು ಬಯಸಿ ಬರುತ್ತಿದ್ದಾರೆ.

ಚಿತ್ರಕೂಟದ ಸುತ್ತ ಬೆಳೆದು ನಿಂತ ಸಸ್ಯರಾಶಿ ಮನಸ್ಸಿಗೆ ಮುದನೀಡುತ್ತದೆ. ತೆಂಗು, ಕಂಗು, ಮಾವು, ತೇಗ, ಹಲಸು, ಲಕ್ಷ್ಮಣಫಲ, ಪೇರಳೆ, ಚಿಕ್ಕು, ಅಂಜೂರ, ಬಾದಾಮಿ, ದೀವಿಹಲಸು, ನುಗ್ಗೆ, ಮುರುಗಲ, ಗೇರು, ಬಿಂಬುಳಿ, ಹಾಲೆಮರಗಳ ಸಮೃದ್ಧ ಹಸಿರಿದೆ. ತುಳಸಿ, ಆಡುಸೋಗೆ, ನಿರ್ಗುಂಡಿ, ಎಕ್ಕೆ, ಔಡಲ, ಹೊನಗೊನ್ನೆ, ಚಕ್ರಮುನಿ, ಅರಸಿನ, ಕೊಕೊ, ಗಸಗಸೆ, ಸುವರ್ಣಗಡ್ಡೆ ಗಿಡಗಳ ಮಧ್ಯೆ ಕರಿಮೆಣಸಿನ ಬಳ್ಳಿಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಅಲಸಂದೆ, ಹೀರೇಕಾಯಿ, ಪಡುವಲ, ತೊಂಡೆ, ಕುಂಬಳಕಾಯಿ, ಮಡಹಾಗಲ ತರಕಾರಿ ಗಿಡಗಳಿವೆ. ನಡಿಗೆಯ ಹಾದಿಯ ಅಕ್ಕಪಕ್ಕ, ಕಿರು ಉದ್ಯಾನದಲ್ಲಿ ಬಗೆಬಗೆಯ ಬಣ್ಣದ ದಾಸವಾಳ, ಗುಲಾಬಿ ಗಿಡಗಳು ಕಣ್ಣು ಹಾಯಿಸಿದಲ್ಲೆಲ್ಲ ಕಂಡುಬರುತ್ತವೆ. ಮುಂಜಾನೆಯ ಆರೋಗ್ಯಕರ ನಡಿಗೆಗೆ ಪೆಬಲ್ ಪಾತ್ ಇದೆ. ಹೂವಿನ ಮಕರಂದದ ಆಸೆಗೆ ಬರುವ ದುಂಬಿಗಳು, ಬಣ್ಣಕ್ಕೆ ಮನಸೋಲುವ ಚಿಟ್ಟೆಗಳು, ನಾನಾವಿಧದ ಹಕ್ಕಿಗಳು, ಅವುಗಳ ಚಿಲಿಪಿಲಿ ನಾದ, ಮಳೆ ಬಂತೆಂದರೆ ವಟಗುಟ್ಟುವ ಕಪ್ಪೆಗಳು, ಜೀರುಂಡೆಗಳ ಏಕತಾನದ ಸಂಗೀತ, ನವಿಲುಗಳ ಕೇಕೆ ಎಲ್ಲವೂ ಕಣ್ಮನ ತುಂಬುತ್ತವೆ. ಅದೊಂದು ಪ್ರಾಕೃತಿಕ ಪರಿಶುದ್ಧ ವಾತಾವರಣದ ನಿಷ್ಕಲ್ಮಶ ನೆಲೆ; ಮನಸ್ಸಿನ ಒತ್ತಡ ನಿವಾರಿಸುವ ತಾಣ. ಕುಂದಾಪುರದಿಂದ ಆಲೂರಿಗೆ ಇರುವ ದಾರಿ ದೂರ 28 ಕಿ.ಮೀ. ಸ್ವಂತ ವಾಹನ ಇಲ್ಲದವರು ಕುಂದಾಪುರದಿಂದ ವಂಡ್ಸೆ ಹಾದಿಯಲ್ಲಿ ಚಿತ್ತೂರಿಗೆ ಬಂದು ಅಲ್ಲಿಂದ ಚಿತ್ರಕೂಟಕ್ಕೆ ಆಟೋದಲ್ಲಿ ಹೋಗಬಹುದು.
ಚಿತ್ರಕೂಟದ ಸಂಪರ್ಕ ಸಂಖ್ಯೆ: 8762220168, 9480011578.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

25 thoughts on “ಆರೋಗ್ಯಧಾಮ -‘ಚಿತ್ರಕೂಟ’”

  1. Raghavendra Mangalore

    ಆಯುರ್ವೇದ ಚಿಕಿತ್ಸೆಗಳ ಹಾಗೂ ಚಿತ್ರಕೂಟದ ಕುರಿತು ಬರೆದ ಚಿತ್ರ ಬರಹ ತುಂಬಾ ಚೆನ್ನಾಗಿದೆ. ಅಭಿನಂದನೆಗಳು ಸಾರ್.

  2. Shivanand Chinti

    ಸರ, ತುಂಬ ಒಳ್ಳೆಯ ಲೇಖನ. ಬಹಳಷ್ಟು ಸದಸ್ಯರು ಉಪಯೋಗ ಪಡೆಯಬಹುದು

    1. Prakash Kundapur

      ಪ್ರಕೃತಿಯ ಹಾಗೂ ಆಯುರ್ವೇದ ಚಿಕಿತ್ಸೆಯ ಸಮ್ಮಿಲನದ ಚಿಕಿತ್ಸಾ ಕೇಂದ್ರವಾದ ಚಿತ್ರಕೂಟದ
      ನಿಮ್ಮ ಲೇಖನ ಸೊಗಸಾಗಿ ಮೂಡಿಬಂದಿದೆ. ಬಾಯರಿ ದಂಪತಿಗಳ ಪರಿಶ್ರಮದ ಬಗ್ಗೆ ಹಾಗೂ ಯಶಸ್ಸಿನ ಚಿತ್ರಣವನ್ನು ಸ್ಥೂಲವಾಗಿ ಪರಿಚಯಿಸಿದ್ದಿರಿ.
      ಹತ್ತಿರ ಇರುವ ನಂಗೆ ಹೋಗಲು ಮನಸಾಗಿದೆ.

  3. ಬಿ.ಟಿ.ನಾಯಕ್.

    ನಿಮ್ಮ ಅಮೋಘವಾದ ಲೇಖನ ಓದಿದೆ. ಇದರಲ್ಲಿ ಒಂದು ವಿಶಿಷ್ಟತೆ ಕಂಡುಕೊಂಡೆ. ತೆರೆಯ ಮರೆಯಲ್ಲಿರುವ ಸಾಧಕರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಆಯುರ್ಯವೇದ ಸಸ್ಯ ಫಲಗಳಾದ ಲಕ್ಷ್ಮಣ ಫಲ ಇತ್ಯಾದಿ ಕ್ಯಾನ್ಸರ್ ಗುಣಕಾರಿ ಅಂಶಗಳನ್ನು ಹೊಂದಿವೆ. ಅಲ್ಲದೇ, ಲೇಖನ ಒಂದು ರನ್ನಿಂಗ್ ಕಮೆಂಟರಿ ತರಹ ಅಲ್ಲಿಗೆ ಕೊಂಡೊಯ್ಯುತ್ತದೆ. ಅಭಿನಂದನೆಗಳು ಮತ್ತು ಧನ್ಯವಾದಗಳು. : ಬಿ.ಟಿ.ನಾಯಕ್.

    1. ಎಲೆಮರೆಯ ಕಾಯಿಯಂತೆ ಇದ್ದು ಸಮಾಜಕ್ಕೆ ಉತ್ತಮ ಸೇವೆಯನ್ನು ಕೊಡುತ್ತಿರುವ ಬಾಯರಿ ದಂಪತಿಗಳ ಪರಿಚಯ ಲೇಖನ ಅತ್ಯುತ್ತಮವಾಗಿದೆ. ಅಭಿನಂದನೆಗಳು.

  4. ಶೇಖರಗೌಡ ವೀ ಸರನಾಡಗೌಡರ್

    ಹದವಾದ ಭಾಷೆಯಲ್ಲಿ ರೂಪುಗೊಂಡಿರುವ ಉತ್ಕೃಷ್ಟ ಲೇಖನ. ಚಿತ್ರಕೂಟದಲ್ಲಿನ ಚಿಕಿತ್ಸಾಧಾಮದಲ್ಲಿನ ಚಿಕಿತ್ಸಾ ಪದ್ಧತಿಯ ಬಗ್ಗೆ ಸೊಗಸಾಗಿ ಮೂಡಿಬಂದಿದೆ. ನಿಸರ್ಗ ತಾಣದಲ್ಲಿ ಪ್ರಕೃತಿದತ್ತ ಚಿಕಿತ್ಸೆಯ ಜೊತೆ ಯೋಗ, ಯೋಗಾಸನಗಳು, ಪಥ್ಯಾಹಾರ, ಪಂಚಕರ್ಮ ಮುಂತಾದ ಆಯುರ್ವೇದ ಪದ್ಧತಿಯ ಚಿಕಿತ್ಸೆಗಳು ತುಂಬಾ ಪರಿಣಾಮಕಾರಿ ಎಂದು ಸಾಬೀತು ಪಡಿಸುತ್ತಿದ್ದಾರೆ ಬಾಯಿರಿ ಡಾಕ್ಟರ್ ದಂಪತಿಗಳು ಮತ್ತು ಅವರ ಸಹೋದ್ಯೋಗಿಗಳು.
    ಬಹಳಷ್ಟು ವಿವರವಾದ ಮಾಹಿತಿ ನೀಡುತ್ತಿರುವ ನಿಮ್ಮ ಲೇಖನ ಜನೋಪಯೋಗಿ.
    ಅಭಿನಂದನೆಗಳು.

    1. ಧರ್ಮಾನಂದ ಶಿರ್ವ

      ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು

  5. ಮ.ಮೋ.ರಾವ್ ರಾಯಚೂರು

    ತಮ್ಮ ಈ ‘ ಆರೋಗ್ಯಧಾಮ – ಚಿತ್ರಕೂಟ’ ದ ಪರಿಚಯ ಚಿತ್ರ-ಲೇಖನ ಸರಳ ಸಮಗ್ರವಾಗಿದೆ. ವೈಭವಿಕರಣವಿಲ್ಲದ ನೈಸರ್ಗಿಕ ಮತ್ತು ವಾಸ್ತವಿಕ ಚಿತ್ರಣ ಈ ಚಿತ್ರಕೂಟವನ್ನು ಪ್ರೇಕ್ಷಣೀಯ ಸ್ಥಳವಾಗಿಸಿದೆ. ಅಭಿನಂದನೆಗಳು.

  6. ಲೇಖನ ಉತ್ತಮವಾಗಿ ಮೂಡಿಬಂದಿದೆ, ನಮ್ಮಲ್ಲಿರಿರುವ ಪ್ರತಿಯೊಂದು ಚಿಕಿತ್ಸೆಗಳ ಬಗ್ಗೆ ಬಹಳ ಅದ್ಭುತವಾಗಿ ಬರೆದಿರುವ ತಮಗೆ ನಮ್ಮ ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.

  7. Chintamani Sabhahit

    ವೈದ್ಯ ಬಾಯರಿ ದಂಪತಿಗಳ ಸಶ್ರಮ ಸಂಕಲ್ಪದ, ಚಿತ್ತ ಶಾಂತಿಯ ಆರೋಗ್ಯಧಾಮ ‘ಚಿತ್ರಕೂಟ’ದ ಚಿತ್ರ ಮನೋಹರವೀ ಲೇಖನ. ಧನ್ಯವಾದಗಳು.

  8. Arogyadhama -Chitrakoota a very nice article.The efforts of the Dr.couple to build up the Arogyadhama and their achievements narrated in a natural style.Everry line in the article is written beautifully and impressively.The perfect choice of words and writing more effective and appealing overall.Great piece of Article.The information is very useful to the people.Your ideas and thoughts are really well on the paper.congratulations..Iam wishing you all the best.

    1. ಧರ್ಮಾನಂದ ಶಿರ್ವ

      Thank you very much for your constructive and encouraging critic which not only increased my responsibility in presenting the best but also keep going on writing in future.
      Your patronage is my energy in writing field.
      Thank you

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter