” ವರ್ಷ ಭವಿಷ್ಯ…”

(ಹಾಸ್ಯ/ವಿಡಂಬನೆ ಬರಹ)


ಜ್ಯೋತಿಷ್ಯ ಶಾಸ್ತ್ರದ ಪ್ರಖರ ಪಂಡಿತರು ಶ್ರೀ ಗುಂಡಾಶಾಸ್ತ್ರಿಗಳು ನೂತನ ಕ್ಯಾಲೆಂಡರ್ ವರ್ಷ 2024 ರ ಸಲುವಾಗಿ ನಿಮಗೆಂದೇ ಪ್ರತ್ಯೇಕವಾಗಿ ರಚಿಸಿದ ‘ ವರ್ಷ ಭವಿಷ್ಯ ‘ ಕೆಳಗಿಂತಿದೆ. ನೀವೂ ಒಮ್ಮೆ ಓದಿ ಜನ್ಮ ಸಾರ್ಥಕ ಪಡಿಸಿಕೊಳ್ಳಿ.

ಮೇಷ ರಾಶಿ

ಆದಾಯ 7 ವ್ಯಯ 5.

ಶನಿ ವಕ್ರ ದೃಷ್ಟಿಯಿಂದ ಹುಚ್ಚು ನಾಯಿ ಕಡಿಯುವ ಸಂಭವವಿದೆ. ಇದನ್ನು ತಪ್ಪಿಸಿಕೊಳ್ಳಬೇಕೆಂದರೆ ಪ್ರತೀ ದಿನ ಬೆಳಿಗ್ಗೆ ಭೈರವ ನಾಮ ಪಠಿಸಬೇಕು. ಅಲ್ಲದೇ ಓಣಿಯ ನಾಯಿಗಳಿಗೆ ದಿನವೂ ಬಿಸ್ಕತ್ತುಗಳನ್ನು ಹಾಕಬೇಕು ಮತ್ತು ಅವುಗಳ ಜೊತೆ ಸ್ನೇಹದಿಂದ ಇರಬೇಕು. ಜೂಲೈ ಬಳಿಕ ನಿಮಗೆ ಒಳ್ಳೆಯ ಶುಭ ಯೋಗವಿದೆ. ಆಗ ನಿಮ್ಮ ಹೆಂಡತಿ ನಿಮ್ಮೊಂದಿಗೆ ವಿನಾಕಾರಣ ಜಗಳವಾಡಿ ತವರು ಮನೆಗೆ ಹೋಗುತ್ತಾರೆ. ನಂತರ ಸ್ವಯಂ ನಳಪಾಕದಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಅನಂತರದ ದಿನಗಳಲ್ಲಿ ನಿಮ್ಮ ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಆಗಾಗ್ಗೆ ಪಾರ್ಟಿ ಆಯೋಜಿಸಿಕೊಂಡು ನೆಮ್ಮದಿಯಾಗಿ ಕಾಲ ಕಳೆಯುತ್ತೀರಿ.

ವೃಷಭ ರಾಶಿ

ಆದಾಯ 14 ವ್ಯಯ 10.

ನೀವು ಶ್ರಮ ಜೀವಿಗಳು. ಹಗಲೂ ರಾತ್ರಿ ಬೇಸರವೆನ್ನದೆ ಕಾಯಕದಲ್ಲಿ ತೊಡಗುತ್ತೀರಿ. ಯಾವ ಕೆಲಸ ಇರದಿದ್ದರೆ ಕೊನೆಗೆ ನಾಯಿಯ ಬಾಲವನ್ನಾದರು ನೆಟ್ಟಗೆ ಮಾಡಲು ಪ್ರಯತ್ನಿಸುವಿರಿ. ನೀವು ಮನೆಯಲ್ಲೇ ತಯಾರಿಸಿ ಮಾರುವ ಪುಗ್ಗಿ – ಡಾಣಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಾಗಿ ನಿಮಗೆ ಅಂತರರಾಷ್ಟ್ರೀಯ ‘ ರಫ್ತುದಾರ ‘ ಪ್ರಶಸ್ತಿ ಸಿಗುತ್ತದೆ. ಆ ಕಾರಣದಿಂದ ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದ ಇರಬೇಕು. ಅದಕ್ಕೆ ಪ್ರತೀ ದಿನ ದೇವಿ ಸ್ತೋತ್ರವನ್ನು ಪಠಣ ಮಾಡಬೇಕು.

ಮಿಥುನ ರಾಶಿ

ಆದಾಯ 14 ವ್ಯಯ 8.

ಸಮಾಜದಲ್ಲಿ ಸಾಹಿತಿ ಎಂದು ಹೆಸರು ಮಾಡಿದ (ಆರೋಪಕ್ಕೆ ಒಳಗಾದ…) ಈ ರಾಶಿಯವರಿಗೆ ಶುಕ್ರದಶೆ. ನೀವು ಬರೆದ ಅದ್ಭುತ ಸಾಹಿತ್ಯದ ಪ್ರತೀಕವಾದ ನಿಮ್ಮ ‘ ಕಥಾ ಸಂಕಲನ ‘ ಮತ್ತು ‘ ಕವನ ಸಂಕಲನ ‘ ಗಳನ್ನು ನೀವೇ ಅಚ್ಚು ಹಾಕಿಸಿ, ಸಮಾರಂಭ ಆಯೋಜಿಸಿ ( ಸಂಪೂರ್ಣ ನಿಮ್ಮದೇ ಖರ್ಚಿನಲ್ಲಿ…) ಸಾಹಿತಿ ಪ್ರೇಮಿಗಳಿಗೆ ಉಚಿತವಾಗಿ ಹಂಚಿ ‘ ಕನ್ನಡ ತಾಯಿ ಭುವನೇಶ್ವರಿ ‘ ಸೇವೆಗೆ ಪಾತ್ರರಾಗುತ್ತೀರಿ. ಅಲ್ಲದೇ ನೀವೇ ನಿರ್ವಹಣೆ ಮಾಡುವ ಸಾಹಿತ್ಯದ ವಾಟ್ಸಪ್ ಗ್ರೂಪಿನ ಸದಸ್ಯರು ಹೊರ ಹೋಗಲಾರದೆ ( ಎಕ್ಸಿಟ್ ಆಗದೆ…) ಅವರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುವಿರಿ. ಕೊನೆಗೆ ನೀವು ಬರೆದ ‘ ಆತ್ಮ ಕಥೆ ‘ ಯನ್ನು ಬೇರೆ ಯಾರೂ ಓದದೇ ನೀವು ಮರಣ ಹೊಂದಿದ ಬಳಿಕ ನಿಮ್ಮ’ ಆತ್ಮವೇ ‘ ಕೊನೆಗೆ ಅದನ್ನು ಓದಿ ಕೃತಾರ್ಥವಾಗುವದು.

ಕರ್ಕ ರಾಶಿ

ಆದಾಯ 9 ವ್ಯಯ 12.

ಈ ರಾಶಿಯವರಿಗೆ ಈ ವರ್ಷ ವಿವಾಹ ಯೋಗವಿದೆ. ನೆಮ್ಮದಿಯ ಅವಿವಾಹಿತ ಬದುಕಿನಿಂದ ವಿವಾಹದ ಅಶಾಂತಿಯ ಜೀವನಕ್ಕೆ ಕಾಲಿಡುತ್ತೀರಿ. ಹೆಂಡತಿ ಗರ್ಭವತಿ ಎಂದು ತಿಳಿದಾಕ್ಷಣ ಕನ್ನಡಿಗ ಗಂಡ ಪ್ರತಿಷ್ಠಿತ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಮಗುವನ್ನು ಸೇರಿಸಲು ಅನುಕೂಲವಾಗಲೆಂದು ಅಡ್ವಾನ್ಸ್ ಆಗಿ ಅಪ್ಲಿಕೇಶನ್ ಹಾಕಿ ಸೀಟು ರಿಸರ್ವ್ ಮಾಡುತ್ತಾರೆ. ಮಗುವನ್ನು ಡಾಕ್ಟರ್ ಅಥವಾ ಇಂಜನಿಯರ್ ಮಾತ್ರ ಮಾಡಲೇಬೇಕೆಂದು ಹಠ ತೊಟ್ಟು ಹೆಸರಾಂತ ಕಾಲೇಜುಗಳನ್ನು ಈಗಿನಿಂದಲೇ ಹುಡುಕಲು ಆರಂಭಿಸುತ್ತಾರೆ.

ಸಿಂಹ ರಾಶಿ

ಆದಾಯ 2 ವ್ಯಯ 14.

ಈ ರಾಶಿಯವರು ಮೇಲಿನ ಅಧಿಕಾರಿಗಳನ್ನು ಕಂಡರೆ ಗ್ರಾಮ ಸಿಂಹಗಳಂತೆ ಬಾಲ ಮುದುಡಿಕೊಂಡು
ವಿಧೇಯವಾಗಿ ವರ್ತಿಸುವರು. ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿಕೊಂಡು ಇಸ್ಪೀಟ್ ಆಟದಲ್ಲಿ, ಕ್ರಿಕೆಟ್ ಬೆಟ್ಟಿಂಗಿನಲ್ಲಿ ಸರ್ವಸ್ವವನ್ನು ಕಳೆದುಕೊಂಡು ಸ್ವಲ್ಪ ದಿನ ಊರು ಬಿಟ್ಟು ಅಲ್ಲಲ್ಲಿ ಅಲೆಯುತ್ತಿರುತ್ತಾರೆ.
ಅಲ್ಲದೇ ಯುಗಾದಿ ಹಬ್ಬಕ್ಕೆ ಬಂದ ಕಿರಿಯ ಮಗಳು ಮತ್ತು ಹೊಸ ಅಳಿಯ ದೀಪಾವಳಿಯನ್ನು ಸಹಾ ನಿಮ್ಮ ಮನೆಯಲ್ಲಿಯೇ ಆಚರಿಸಿಕೊಂಡು ಹೋಗುವ ಎಲ್ಲ ಲಕ್ಷಣಗಳೂ ಈ ವರ್ಷದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಆದರೂ ಅಂತಹ ದೋಷ ನಿವಾರಣೆ ಮಾಡಲು ದಿನ ನಿತ್ಯ ಉಗ್ರ ನರಸಿಂಹ ಸ್ತೋತ್ರ ಪಠಿಸಿದರೆ ಉಪಯೋಗವಾಗುವುದು.

ಕನ್ಯಾ ರಾಶಿ

ಆದಾಯ 2 ವ್ಯಯ 10.

ಈ ರಾಶಿಯವರಿಗೆ ಈ ವರ್ಷ ಗುರು ಬಲ ಜಾಸ್ತಿ ಇದೆ. ಹಿಡಿದೆದ್ದೆಲ್ಲ ಬಂಗಾರವಾಗುವ ಲಕ್ಷಣಗಳಿವೆ. ನಿಮ್ಮ ‘ ಏಕ ಮಾತ್ರ ಹೆಂಡತಿ ‘ ಮರಣ ಹೊಂದಿದ ಬಳಿಕ ಮತ್ತೊಮ್ಮೆ ಮದುವೆಯಾಗಿ ಹೊಸ ಹೆಂಡತಿಯೊಂದಿಗೆ ಸಂಸಾರ ಶುರು ಮಾಡುವ ಶುಭ ಲಕ್ಷಣಗಳಿವೆ. ಆದರೆ ರಾಹು ಕೇತು ಎನ್ನುವ ಆಕೆಯ ಸೋದರರು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಅವಕಾಶಗಳು ಹೆಚ್ಚು ಇವೆ. ಧೃತಿಗೆಡದೆ ಪ್ರತಿ ದಿನ ಹನುಮಾನ್ ಚಾಲಿಸ ಪಠಿಸಿ.

ತುಲಾ ರಾಶಿ

ಆದಾಯ 14 ವ್ಯಯ 11.

ಇವರು ಜೀಪುಣರಲ್ಲಿ ಮಹಾ ನಿಪುಣರು ಮತ್ತು ಹೆಸರಾಂತ ಮೋಟಿವೇಟ್ ಸಾಹಿತಿಗಳು. ಇವರು ಬರೆದ ‘ ಒಂದು ಪೈಸೆಯನ್ನೂ ಖರ್ಚು ಮಾಡದೆ ಶ್ರೀಮಂತರಾಗುವದು ಹೇಗೆ? ‘ ಎನ್ನುವ ಪುಸ್ತಕದ ಪ್ರಚಾರಕ್ಕೆ ಮಾತ್ರ ಲಕ್ಷಾಂತರ ಖರ್ಚು ಮಾಡಿ ರಾಜ್ಯದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿಕೊಳ್ಳುವರು. ಈ ಬಾರಿಯ ರಾಜ್ಯ ಪ್ರಶಸ್ತಿಯನ್ನು ಪಡೆಯುವ ಮಹದಾಸೆಯಿಂದ ತಮ್ಮ ಕುಲದ ಮಠಾಧೀಶರ ಬೆನ್ನು ಬೀಳುವರು. ಅಲ್ಲದೇ ಕೋವಿಡ್ ಹೆಮ್ಮಾರಿ ಮತ್ತೊಮ್ಮೆ ವಕ್ರಿಸುವ ಲಕ್ಷಣಗಳೂ ಇರುವ ಸಂದರ್ಭದಲ್ಲಿ ಸಾಫ್ಟ್ ವೇರ್ ಅಳಿಯ ಹೆಂಡತಿಯೊಂದಿಗೆ ‘ ವರ್ಕ್ ಫ್ರಮ್ ಹೋಂ ‘ ನೆಪದಲ್ಲಿ ಮಾವನ ಮನೆಯಲ್ಲಿ ಖಾಯಂ ಠಿಕಾಣಿ ಹೂಡುವ ಎಲ್ಲ ಅವಕಾಶಗಳು ಇರುವುದರಿಂದ ಮಾವನವರು ಇದರ ಬಗ್ಗೆ ಅತೀ ಜಾಗೃತೆ ವಹಿಸಬೇಕು.

ವೃಶ್ಚಿಕ ರಾಶಿ

ಆದಾಯ 5 ವ್ಯಯ 12.

ಈ ರಾಶಿಯವರಿಗೆ ನೂತನ ಸಂವತ್ಸರ ಕಿಂಚಿತ್ತೂ ಬಲವಿಲ್ಲ. ಬಿಸಿಲು ಮಳೆಯಂತೆ ಒಂದರ ಹಿಂದೆ ಒಂದು ಕಷ್ಟಗಳು ಎದುರಾಗಲಿವೆ. ಇವರು ಕುದುರೆ ಪಂದ್ಯಾಟದಲ್ಲಿ ಹಾಗೂ ಒನ್ ನಂಬರ್ ಲಾಟರಿಯಲ್ಲಿ ಇದ್ದ ಬದ್ದ ಆಸ್ತಿಯನ್ನು ಕಳೆದುಕೊಂಡು ಬರಿಗೈ ದಾಸರಾಗುತ್ತಾರೆ. ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡು ಆಸ್ಪತ್ರೆ ಸೇರುತ್ತಾರೆ. ಆದರೆ ಅಲ್ಲಿಯ ನರ್ಸಿನೊಂದಿಗೆ ಪ್ರೇಮಾಯಣ ಶುರು ಮಾಡಿ ಮತ್ತೊಮ್ಮೆ ತಂದೆಯಾಗುವ ಅವಕಾಶವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ!

ಧನು ರಾಶಿ

ಆದಾಯ 9 ವ್ಯಯ 12.

ಈ ರಾಶಿಯವರು ಮೊದಲ ಆರು ತಿಂಗಳು ತುಂಬಾ ಸಂಕಷ್ಟಕ್ಕೆ ಈಡಾಗುತ್ತಾರೆ. ಎಡವಿದ ಕಾಲೇ ಎಡವುವದು ಹೆಚ್ಚು ಎನ್ನುವ ನಾಣ್ಣುಡಿ ಈ ರಾಶಿಯವರಿಗೆ ಸರಿ ಹೋಗುತ್ತದೆ. ತೆಂಗಿನ ಕಾಯಿ ವ್ಯಾಪಾರದಿಂದ ಆದ ನಷ್ಟವನ್ನು ಸರಿದೂಗಿಸಲು ಉಪ್ಪಿನ ವ್ಯವಹಾರ ಆರಂಭಿಸುತ್ತಾರೆ. ಆದರೆ ಅಧಿಕ ಮಳೆಯಿಂದಾಗಿ ಅದರಲ್ಲಿ ಬಹಳಷ್ಟು ನಷ್ಟ ಅನುಭವಿಸಿ ಊರು ಬಿಡುತ್ತಾರೆ. ಇವರು ಕಷ್ಟ ಬಂದಾಗ ಗುಡಿ ಗುಂಡಾರಗಳನ್ನು ಸುತ್ತುತ್ತಾರೆ. ಸುಖ ಬಂದಾಗ ಪಬ್ಬುಗಳಲ್ಲಿ ಮೆರೆಯುತ್ತಾರೆ. ಅಂತಹ ನಿಶೆಯಲ್ಲಿ ಒಮ್ಮೆ ಆಕ್ಸಿಡೆಂಟ್ ಮಾಡಿ ಜೈಲು ಸೇರುತ್ತಾರೆ. ನಂತರ ಅವರಿವರ ಕಾಲು ಹಿಡಿದು ಜಾಮೀನು ಪಡೆದು ಉಳಿದ ಜೀವನವನ್ನ ಹೇಗೋ ಸಾಗಿಸುತ್ತಾರೆ.

ಮಕರ ರಾಶಿ

ಆದಾಯ 9 ವ್ಯಯ 11.

ಈ ವರ್ಷ ನೀವು ಎಲ್ಲರೊಂದಿಗೆ ಅನಾವಶ್ಯಕವಾಗಿ ಜಗಳಕ್ಕೆ ಬೀಳುತ್ತೀರಿ. ಅದೇ ರೀತಿ ಹೆಂಡತಿಯ ಜೊತೆ ಜಗಳ ತಾರಕಕ್ಕೇರಿದಾಗ ಆಕೆ ತವರು ಮನೆಗೆ ಹೋಗುತ್ತಾಳೆ. ಅಲ್ಲೇ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ತಪ್ಪು ಅರಿವಾಗಿ ಆಕೆಯನ್ನು ಮತ್ತು ಮಕ್ಕಳನ್ನು ವಾಪಾಸು ಕರೆ ತರುವಿರಿ. ಮಕ್ಕಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಇಂಜನೀಯರುಗಳಾಗಿ ಸ್ಟೇಟ್ಸ್ ಸೇರಿ ಅಲ್ಲೇ ಗ್ರೀನ್ ಕಾರ್ಡಿಗೆ ಅಪ್ಲೈ ಮಾಡುತ್ತಾರೆ. ” ನಾವಿಬ್ಬರು ನಮಗಿಬ್ಬರು ” ಎನ್ನುವ ನಾಣ್ಣುಡಿ ಹೋಗಿ ಕೊನೆಗೆ ” ನಾವಿಬ್ಬರು ನಾವೇ ಇಬ್ಬರು! ” ಎಂದು ಬದುಕಿನ ಅಂತಿಮ ಕ್ಷಣದಲ್ಲಿ ವೃದ್ಧ ದಂಪತಿಗಳು ಆದ ನೀವು ಮಕ್ಕಳು ಇದ್ದೂ ಇಲ್ಲದಂತೆ ಜೀವನ ಸಾಗಿಸುತ್ತೀರಿ.

ಕುಂಭ ರಾಶಿ

ಆದಾಯ 12 ವ್ಯಯ 6.

ಈ ರಾಶಿಯವರಿಗೆ ಮೊದಲ ಆರು ತಿಂಗಳು ಸಂತೋಷ ತರುತ್ತದೆ. ನೀವು ಹೊರಗೆ ಹುಲಿ ವೇಷ ಹಾಕಿದರೂ ಮನೆಯಲ್ಲಿ ಮಾತ್ರ ಮಾರ್ಜಾಲ ಬೆಕ್ಕು. ಕಾಲೇಜಿಗೆ ಹೋಗುವ ವಯಸಿನ ನಿಮ್ಮ ಮಗಳ ಸಲುವಾಗಿ ಸುತ್ತು ಮುತ್ತಲಿನ ಅಷ್ಟೇ ಅಲ್ಲ ಇಡೀ ಬೀದಿಯ ಪಡ್ಡೆ ಹುಡುಗರ ಕಾಟ ತಪ್ಪಿಸಲು ಆಕೆಯನ್ನು ಬೇರೆ ಊರಲ್ಲಿ ಓದಲು ಬಿಟ್ಟು ಅಲ್ಲೇ ಹಾಸ್ಟೆಲ್ ನಲ್ಲಿ ಇರುವಂತೆ ಮಾಡಬೇಕು. ಈ ಕೆಲಸ ಬಹಳ ಮುಖ್ಯ. ಇಷ್ಟರಲ್ಲಿ ನಿಮ್ಮ ಕೂದಲೆಲ್ಲ ಉದುರಿ ಬೋಳು ತಲೆಯ ಒಡೆಯನಾಗುವಿರಿ. ಒಮ್ಮೆ ವರಂಡಾದ ಈಜಿ ಛೇರಿನಲ್ಲಿ ಕೂತು ವಿಶ್ರಾಂತಿ ತೆಗೆದುಕೊಳ್ಳುವಾಗ ಮೇಲಿಂದ ಕಲ್ಪವೃಕ್ಷದ ಕಾಮಧೇನು ತೆಂಗಿನ ಮರದ ತೆಂಗಿನಕಾಯಿ ನಿಮಗೆಂದೇ ಕಾದು ನಿಮ್ಮ ತಲೆಯ ಮೇಲೆ ಬಿದ್ದಾಗ ಆಸ್ಪತ್ರೆ ಸೇರಿ ಅರೆಹುಚ್ಚನಂತೆ ವರ್ತಿಸುವಿರಿ.

ಮೀನ ರಾಶಿ

ಆದಾಯ 8 ವ್ಯಯ 5.

ಈ ರಾಶಿಯವರಿಗೆ ಮೊದಲ ಆರು ತಿಂಗಳು ಕಷ್ಟ ಮತ್ತೆ ಆರು ತಿಂಗಳು ಸುಖದ ಸುಪ್ಪತ್ತಿನ ಯೋಗವಿದೆ. ಇವರಿಗೆ ನೀರಿನ ಗಂಡಾಂತರ ಇರುತ್ತದೆ. ಅದು ಹೋಗಲು ಒಂದು ತಿಂಗಳು ವರುಣ ಜಪ ಮಾಡಬೇಕು. ಆಗಾಗ್ಗೆ ತಂಬಿಗೆಯಲ್ಲಿ ತುಂಗಭದ್ರಾ ನೀರು ತುಂಬಿಕೊಂಡು ಗಂಗಾ ನದಿಯಲ್ಲಿ ಬಿಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರತೀ ದಿನ ಕನಿಷ್ಠ ಒಂದು ಡಜನ್ ಮಿನರಲ್ ವಾಟರಿನ ಬಾಟಲ್ ದಾನ ಮಾಡಬೇಕು. ಟಿ ವಿ ಕಲಾವಿದರಾಗಿ ಆಗಾಗ್ಗೆ ಪ್ರೇಕ್ಷಕರನ್ನು ನೀವು ನಿಮ್ಮ ನಟನೆಯಿಂದ ರಂಜಿಸುವಿರಿ (ಹೆದರಿಸುವಿರಿ!). ಅಲ್ಲದೇ ಈಗಷ್ಟೇ ಮುಕ್ತಾಯವಾದ ಅತ್ಯಂತ ಜನಪ್ರಿಯ ಧಾರಾವಾಹಿ ‘ ಗಟ್ಟಿ ಮೇಳ – ಭಾಗ 2 ‘ ಬರುವ ಜೂನ್ ತಿಂಗಳಲ್ಲಿ ಶುರುವಾಗಿ ಒಂದು ಪಂಚ ವಾರ್ಷಿಕ ಅವಧಿ ( ಐದು ವರ್ಷ…) ಯಲ್ಲಿ ಸುಮಾರು 1500 ಕ್ಕಿಂತ ಹೆಚ್ಚು ಸಂಚಿಕೆಗಳನ್ನು ಪೂರೈಸುವ ಅವಕಾಶಗಳಿವೆ. ಅದರಲ್ಲಿ ನಿಮಗೊಂದು ಉತ್ತಮ ಪಾತ್ರ ಸಿಗುವ ಸಂಭವವಿದೆ.

Disclaimer (ನಿರಾಕರಣೆ) : ಮೇಲಿನ ಭವಿಷ್ಯದಂತೆ ಯಾರ ಜೀವನದಲ್ಲಿಯಾದರೂ ಸಂಘಟಿಸಿದರೆ ಅದು ಕೇವಲ ಕಾಕತಾಳೀಯ ಎಂದು ಭಾವಿಸಬೇಕು. ಸದ್ಯದ ರಾಜ್ಯದ ರಾಜಕೀಯ ರಂಗದಲ್ಲಿ ಅನಿಶ್ಚಿತ ಪರಿಸ್ಥಿತಿ ಇರುವ ಕಾರಣ ಭವಿಷ್ಯವಾಣಿಯಲ್ಲಿ ಅದನ್ನು ಕೈ ಬಿಡಲಾಗಿದೆ.
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

10 thoughts on “” ವರ್ಷ ಭವಿಷ್ಯ…””

  1. ಧರ್ಮಾನಂದ ಶಿರ್ವ

    ಲಘುಬರಹ ತುಂಬ ಸ್ವಾರಸ್ಯವಾಗಿದ್ದು ನಗು ಉಕ್ಕಿಸುವಂತಿದೆ. ದೈನಂದಿನ ಆಗುಹೋಗುಗಳನ್ನು ಲಘುವಾಗಿ ಭವಿಷ್ಯದ ನುಡಿಗಳಿಗೆ ಅಳವಡಿಸಿದ ರೀತಿ ಚೆನ್ನಾಗಿದೆ.
    ನಮ್ಮ ಭವಿಷ್ಯವನ್ನು ನಾವಿಲ್ಲೇ ಕಾಣಬಹುದು.
    ಅಭಿನಂದನೆಗಳು

  2. Bhojaraja Soppimath

    ವಿಡಂಬನೆ ಸೊಗಸಾಗಿದೆ ನಗಿಸುತ್ತಾ ಹೋಗುತ್ತದೆ. ಮುಖದಲ್ಲಿ ಮಂದಹಾಸ ಮೂಡಿಸುವಂತಹ ಇಂಥ ವಿಡಂಬನೆಗಳು ನೆಮ್ಮದಿಯನ್ನು ತಂದುಕೊಡಬಲ್ಲವು. ಮಂಗಳೂರು ರಾಘವೇಂದ್ರ ಅವರಿಗೆ ಅಭಿನಂದನೆಗಳು.

  3. JANARDHANRAO KULKARNI

    ವಿಡಂಬನಾತ್ಮಕವಾಗಿ ‘ ವರ್ಷ ಭವಿಷ್ಯ ‘ ಚೆನ್ನಾಗಿ ಮೂಡಿಬಂದಿದೆ.

  4. ಶೇಖರಗೌಡ ವೀ ಸರನಾಡಗೌಡರ್

    ಬಹಳಷ್ಟು ಸ್ವಾರಸ್ಯಕರವಾದ ಮಾಹಿತಿಗಳೊಂದಿಗೆ ನಗೆ ಬರಹ ಓದುಗರ ಮನಸ್ಸನ್ನು ಗೆಲ್ಲುತ್ತದೆ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter