ವಿಕಾಸ ಹೊಸಮನಿಯವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’

ಕೃತಿಯ ಹೆಸರು : ಗಾಳಿ ಹೆಜ್ಜೆ ಹಿಡಿದ ಸುಗಂಧ
ವಿಮರ್ಶಕರು : ವಿಕಾಸ ಹೊಸಮನಿ
ಪ್ರಕಾಶಕರು : ಸ್ನೇಹ ಎಂಟರ್ ಪ್ರೈಸಸ್, ಬೆಂಗಳೂರು
ಬೆಲೆ : 240/-

‘ಗಾಳಿ ಹೆಜ್ಜೆ ಹಿಡಿದ ಸುಗಂಧ’ ಎಂಬುದು ವಿಕಾಸ ಹೊಸಮನಿಯವರ ಮೊದಲ ವಿಮರ್ಶಾ ಲೇಖನಗಳ ಸಂಗ್ರಹವಾಗಿದೆ. ಮೂಲತಃ ಹಾವೇರಿಯವರಾದ ವಿಕಾಸ ಹೊಸಮನಿಯವರು ವೃತ್ತಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾದರೂ ಕನ್ನಡ ಸಾಹಿತ್ಯದೆಡೆಗೆ ಅವರು ಹೊಂದಿರುವ ವಿಶೇಷ ಆಸಕ್ತಿ ಹಾಗೂ ಆರಾಧನ ಭಾವ ಗಮನಾರ್ಹವಾಗಿದೆ. ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಮಾತ್ರವಲ್ಲದೆ ‘ವಿಶ್ವಧ್ವನಿ’ ಡಿಜಿಟಲ್ ಪತಿಕ್ರೆಯಲ್ಲಿ ಪ್ರತಿ ಸೋಮವಾರ ಮೂಡಿ ಬರುತ್ತಿರುವ ‘ಮಿಂಚಿನ ಬಳ್ಳಿ’ ಅಂಕಣದ ಮೂಲಕವೂ ಪರಿಚಿತರು. ಬಿಡಿ ವಿಡಿಯಾಗಿ ಪ್ರಕಟಗೊಂಡ ವಿಮರ್ಶಾ ಲೇಖನಗಳು ಅವರ ಅಸ್ತಿತ್ವವನ್ನು ಭದ್ರಗೊಳಿಸುವ ಕೃತಿಯಾಗಿ ಹೊರಬಂದಿರುವುದು ಅಭಿನಂದನಾರ್ಹ ವಿಚಾರವಾಗಿದೆ.

ಕೃತಿಯ ಮೂರು ಭಾಗಗಳಲ್ಲಿ ತಲಾ ಎಂಟು ಲೇಖನಗಳಿದ್ದು, ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ ಸಾಹಿತಿಗಳ ಶೈಲಿ, ಧಾಟಿ ಮತ್ತು ವಿಚಾರಧಾರೆಗಳನ್ನು ತನ್ನದೇ ರೀತಿಯಲ್ಲಿ ವಿಮರ್ಶಿಸುತ್ತವೆ. ಈಗ ಬರೆಯುತ್ತಿರುವ ಮತ್ತು ನೇಪಥ್ಯಕ್ಕೆ ಸರಿದಿರುವ ಲೇಖಕರ ಪಕ್ವ ಬರಹಗಳ ಬಗ್ಗೆ ಮುಕ್ತವಾಗಿ ಮಾತನಾಡುವ ವಿಮರ್ಶಕರು ಅಂಥ ಕೃತಿಗಳೆಡೆಗೆ ಮೆಚ್ಚುಗೆ ತೋರಿ, ಯೋಗ್ಯ ಮನ್ನಣೆ ಸಿಗದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸುವುದರಲ್ಲಿ ಮಾತ್ರ ನಿರತರಾಗದೆ ಅವುಗಳ ನಿಜವಾದ ಸತ್ವವನ್ನು ಪ್ರಕಟ ಪಡಿಸಿರುವುದರಿಂದ ಅಂಥ ಕೃತಿಗಳನ್ನು ಓದುವ ಆಸಕ್ತಿಯನ್ನು ಮೂಡಿಸುತ್ತದೆ. ಓದುಗರ ಹಾಗೂ ಬರಹಗಾರರ ಮೆದುಳಿಗೆ ಹೊಸಬಗೆಯ ಅರಿವು, ಸುಲಲಿತ ಬರವಣಿಗೆಯ ಶೈಲಿಯನ್ನು ಮನಗಾಣಿಸುವ ಕೃತಿಯು ಓದಿನ ಹಸಿವನ್ನು ಹೊಂದಿರುವವರ ಪಾಲಿಗೆ ಕೈತುತ್ತಾಗಿ ಕಂಡು ಬಂದರೆ ಅಚ್ಚರಿಯಲ್ಲ.

ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಪ್ರಾಬಲ್ಯ, ಮಹಿಳಾ ದಿಟ್ಟತನ ಹಾಗೂ ನಗರಪ್ರಜ್ಞೆಯ ಹಿನ್ನಲೆಯಲ್ಲಿ ಮಹತ್ವವನ್ನು ಪಡೆದಿರುವ ದೇಸಾಯಿಯವರ ಕೃತಿಗಳು ಕನ್ನಡದ ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ ‘ಮಳೆ’, ‘ಓಂ ಣಮೋ’, ‘ತೃಪ್ತ’, ‘ವಿಯೋಗ’, ‘ರಾಕ್ಷಸ’, ‘ಜವಾಬ್ದಾರಿ’, ‘ಅಂತರ’, ‘ಸಮಗ್ರ ಕಥೆಗಳು’ ಕೃತಿಗಳ ಕುರಿತು ಪರಿಚಯಾತ್ಮಕ ವಿವರಗಳನ್ನು ನೀಡುವ ಮೂಲಕ ವಿಮರ್ಶಕರು ಶಾಂತಿನಾಥ ದೇಸಾಯಿಯವರನ್ನು ಈಗಿನ ವಸ್ತು ಸ್ಥಿತಿಗೆ ಜೋಡಿಸುವ ಅವರ ಮಹತ್ವವನ್ನು ಈಗಲೂ ಸಮರ್ಥಿಸುವ ಬಗೆ ಗಮನಾರ್ಹವಾಗಿದೆ. ಕನ್ನಡ ನವ್ಯ ಸಾಹಿತ್ಯದ ಮುಂಚೂಣಿಯ ಲೇಖಕರಲ್ಲೊಬ್ಬರಾದ ಶಾಂತಿನಾಥ ದೇಸಾಯಿಯವರ ಕೃತಿಗಳ ಕಡೆಗೆ ಚೆಲ್ಲಿದ ವಿಮರ್ಶಕರು ಅದೇ ಬೆಳಕನ್ನು ಕನ್ನಡದ ಇತರ ಸಾಹಿತಿಗಳ ಬೇರೆ ಬೇರೆ ಕೃತಿಗಳ ಕಡೆಗೂ ಹಾಯಿಸಿ, ಅದನ್ನೇ ಮತ್ತಷ್ಟು ದೂರಕ್ಕೆ ವಿಸ್ತರಿಸುತ್ತಾ, ಓದುಗರ ಮನದಲ್ಲೂ ಅರಿವಿನ ಬೆಳಕನ್ನು ಹಚ್ಚಿದ್ದಾರೆ.

1942ರಲ್ಲಿ ಮುದ್ರಣವನ್ನು ಕಂಡ ಅ. ನ. ಕೃ ಅವರ ‘ಅಗ್ನಿಕನ್ಯೆ’ ಎಂಬ ಸಂಕಲನದ ‘ಪ್ರತಿರೂಪ’, ‘ದೊಡ್ಡ ಮನುಷ್ಯ’, ಮಣ್ಣಿನ ಮಗ’, ‘ಪೂರ್ವ – ಪಶ್ಚಿಮ’, ‘ಅನ್ನದ ಕೂಗು’, ‘ಮಧುರ ಸ್ವಪ್ನ’, ‘ಗಿರಿಜವ್ವನ ರೊಟ್ಟಿ’, ‘ಮೃತ್ಯು ಶಾಂತಿ’ ಎಂಬ ಕಥೆಗಳನ್ನು ವಿಶ್ಲೇಷಿಸುತ್ತಾ, ಸಮಾಜದ ನಾನಾ ವರ್ಗಗಳು ಹಾಗೂ ಅವು ಬದುಕಿನಲ್ಲಿ ಅನುಸರಿಸಿದ, ಅಳವಡಿಸಿದ ಜೀವನ ಕ್ರಮವನ್ನು ಸೂಕ್ಷ್ಮ ನೆಲೆಯಲ್ಲಿ ವಿವರಿಸಿದ್ದಾರೆ. 1940ರಂದು ಬಂಗಾಳದಲ್ಲಿ ಕಾಣಿಸಿದ ಭೀಕರ ಬರಗಾಲದಿಂದಾಗಿ ನಿಲ್ಲಲು ನೆಲೆಯಿಲ್ಲದೆ, ಉಣಲು ತುತ್ತು ಸಿಗದೇ ಊರು ಬಿಟ್ಟು ಬೆಂಗಳೂರನ್ನು ಸೇರುವ ತಾಯಿ ಮಕ್ಕಳ ಬದುಕಿನ ಪರಿಸ್ಥಿತಿಯ ಚಿತ್ರಣವೇ ‘ಅನ್ನದ ಕೂಗು’. ಅನಾಥರಾಗಿ ಅಲೆಯುತ್ತಿದ್ದ ತಾಯಿ ಮತ್ತು ಮಗಳು ಸುಷಮಾಳಿಗೆ ಆಶ್ರಯ ನೀಡಿ, ಒಂದೇ ಮನೆಯವರಂತೆ ಬಾಳುವೆ ನಡೆಸಲು ಅನುವು ಮಾಡಿಕೊಟ್ಟ ಸೋಮು ಕೊನೆಗೆ ಸುಷಮಾಳನ್ನೇ ವರಿಸಿ ಮಾನವೀಯತೆ ಮೆರೆಯುವಲ್ಲಿಗೆ ಕಥೆ ಮುಗಿಯುತ್ತದೆ.

ಅಂಥ ಬರಗಾಲದಲ್ಲೂ ಅಸ್ತಿತ್ವದಲ್ಲಿದ್ದ ಮಾನವೀಯತೆಯ ಪರಿಕಲ್ಪನೆಯು ಓದುಗರನ್ನು ಭಾವುಕಗೊಳಿಸುತ್ತದೆ. ಶಿಸ್ತಿನ ಸಿಪಾಯಿಯಾಗಿದ್ದ ಗಂಗ ಎಂಬ ಯುವಕನು ಸೈನ್ಯವನ್ನು ಸೇರಿ, ಕಾರಣಾಂತರಗಳಿಂದ ನಿರುದ್ಯೋಗಿಯಾಗಿ ಮನೆ – ಹೊಲ, ಗದ್ದೆಗಳನ್ನು ಕಳೆದುಕೊಂಡು ದಿಕ್ಕೆಟ್ಟು ಕೊಲೆಗಾರನಾಗಿ ತನ್ನ ಬದುಕನ್ನು ದಾರುಣವಾಗಿ ಅಂತ್ಯಗೊಳಿಸುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ‘ಮಣ್ಣಿನ ಮಗ’ ಕಥೆಯು ಓದುಗರಿಗೆ ಸ್ವಾತಂತ್ರ್ಯ ಪೂರ್ವದ ಚಿತ್ರಣವನ್ನು ನೀಡುತ್ತದೆ. ಇಂದಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಲಿಂಗ ರತಿಯ ಕುರಿತು ಎಪ್ಪತ್ತೈದು ವರ್ಷಗಳ ಹಿಂದೆಯೇ ಬರೆದ ‘ಮಧುರ ಸ್ವಪ್ನ’, ಸಹೋದರತೆಯಿಂದ ಬದುಕುತ್ತಿದ್ದ ಹಿಂದೂ – ಮುಸ್ಲಿಮರ ನಡುವೆ ಕಾಲ ಸಂದಂತೆ ಟಿಸಿಲೊಡೆದ ದ್ವೇಷದ ಭಾವವನ್ನು ಎಳೆಎಳೆಯಾಗಿ ಚಿತ್ರಿಸುವ ‘ಮೃತ್ಯುಶಾಂತಿ’ ಯು ಇಂದಿಗೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿರುವುದಲ್ಲದೆ ಅ. ನ. ಕೃ ಅವರ ದೂರದೃಷ್ಟಿಯನ್ನು ಪರಿಚಯಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಏರ್ಪಡುವ ಘಟನಾವಳಿಗಳ ಕುರಿತು ಬೆಳಕು ಚೆಲ್ಲುವ ‘ಅಗ್ನಿಕನ್ಯೆ’ ಎಂಬ ಕತೆಯಲ್ಲಿ ಅನಿಲಬಾಬು ಮತ್ತು ಹಮೀದ್ ಜಂಟಿಯಾಗಿ ಆರಂಭಿಸಿದ್ದ ಬೀಡಿ ಕಾರ್ಖಾನೆಯೊಂದು ಸಾಂಗವಾಗಿ ನಡೆಯುತ್ತಿರುವಾಗಲೇ ದೇಶ ವಿಭಜನೆಯಾಗುತ್ತದೆ.

ಮುಸ್ಲಿಂ ಲೀಗಿನವರ ಕಡೆಯಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆಯ ಕೂಗು ಹೆಚ್ಚುತ್ತಿದ್ದಂತೆ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷದ ಕಿಚ್ಚು ಭುಗಿಲೇಳುತ್ತದೆ. ಪರಿಣಾಮವಾಗಿ ನಡೆದ ಹಮೀದನ ಪಾಶವೀ ಕೃತ್ಯಗಳು ಎರಡೂ ಕುಟುಂಬಗಳನ್ನು ಬೇರ್ಪಡಿಸುವುದರೊಂದಿಗೆ ಹಿಂಸೆಗಳಿಗೆ ನಾಂದಿಯಾಗುತ್ತವೆ. ತನ್ನದೇ ಒಡನಾಡಿಯಾದ ಅನಿಲ ಬಾಬುವನ್ನು ಸುಟ್ಟು, ಅವನ ತಾಯಿಯ ಮೇಲೆ ಅತ್ಯಾಚಾರ ನಡೆಸಿ, ಅವನ ಪುಟ್ಟ ಕಂದ ಶುಭಳನ್ನು ಕೊಂದು, ಮಡದಿ ಬೀಣಾಳನ್ನು ಅಪಹರಿಸಿ ಬಲವಂತದಿಂದ ವರಿಸುವ ದಾರುಣ ಘಟನೆ ‘ಅಗ್ನಿಕನ್ಯೆ’ ಕಥೆಯಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿದೆ. ಹಮೀದನಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ ಬೀಣಾಳಿಗೆ ಎಚ್ಚರವಾದಾಗ ತಾನೇ ಅಗ್ನಿಕನ್ಯೆಯಾಗಿ ಬದಲಾಗಿ ಆತನನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಬಳಿಕ ‘ವಂದೇ ಮಾತರಂ’ ಎಂದು ಕೂಗುವುದರೊಂದಿಗೆ ಕತೆ ಮುಗಿಯುತ್ತದೆ. ದೇಶ ವಿಭಜನೆಯ ಸಂದರ್ಭದಲ್ಲಿ ಏರ್ಪಡುವ ಸಾಮಾಜಿಕ ಬಿಕ್ಕಟ್ಟುಗಳು, ಸ್ತ್ರೀಯರ ಮಾನಭಂಗ, ಆರ್ಥಿಕ ಏರಿಳಿತಗಳು ಹಾಗೂ ಜನಸಾಮಾನ್ಯರ ಜೀವದ ಹರಣ ಮೊದಲಾದ ಘಟನೆ ಮತ್ತು ಅದರ ಪರಿಣಾಮಗಳನ್ನು ಮಾರ್ಮಿಕವಾಗಿ ಚಿತ್ರಿಸಿದ ಅ. ನ. ಕೃ ಕಥಾ ಸಂಕಲನ ಇಂದಿಗೂ ಓದಲರ್ಹವಾದದ್ದು ಎಂದು ಸಾರುವ ವಿಮರ್ಶಕರು ಈ ಮೂಲಕ ಅ. ನ. ಕೃ ಅವರ ಕೃತಿಗಳ ಸತ್ವವನ್ನು ತಿಳಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕಥೆ’ಯ ಮೂಲಕ ಭಾರತದಲ್ಲಿ ಈಗಲೂ ಉಸಿರಾಡುತ್ತಿರುವ ಭ್ರಷ್ಟ ಆಳ್ವಿಕೆ, ರಾಜಕೀಯ ಬಿಕ್ಕಟ್ಟುಗಳ ಕುರಿತು ಬೆಳಕು ಚೆಲ್ಲುವ ಬಗೆಯನ್ನು ವಿವರಿಸುವ ಸಮಕಾಲೀನ ಲೇಖಕರು ವಸ್ತು ಸ್ಥಿತಿಯನ್ನು ಮತ್ತಷ್ಟು ಬೆಳಕಿಗೆ ತಂದಿದ್ದಾರೆ. ತಬರನೆಂಬ ಸರಕಾರಿ ನೌಕರನೊಬ್ಬ ತನ್ನ ಪಿಂಚಣಿ ಮೊತ್ತಕ್ಕಾಗಿ ಕಛೇರಿಗಳಿಗೆ ಅಲೆದಾಡುವುದು, ಸೂಕ್ತ ಸ್ಪಂದನೆ ದಕ್ಕದೇ ಒದ್ದಾಡುವುದು, ಮಡದಿ ಅಪ್ಪಿಯ ಅನಾರೋಗ್ಯ, ಆಕೆಯನ್ನು ಉಳಿಸಿಕೊಳ್ಳಲೆಂದು ಆತ ಪಡುವ ಪ್ರಯತ್ನಗಳು, ಕೊನೆಗೆ ಅದಾವುದೂ ಸಫಲವಾಗದೇ ಉಂಟಾಗುವ ಮಡದಿಯ ಮರಣದಿಂದ ನೊಂದ ತಬರಸೆಟ್ಟಿ ಕೊನೆಗೂ ಹುಚ್ಚನೆನಿಸಿಕೊಳ್ಳುವ ಕ್ರಿಯೆಗಳು ಭಾರತದಲ್ಲಿ ಕೊಳೆತು ನಾರುತ್ತಿರುವ ಭ್ರಷ್ಟಾಚಾರ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಓದುಗರು ನಿರ್ಧಾರಕ್ಕೆ ಬರುವಂತೆ ಮಾಡುವಲ್ಲಿ ವಿಮರ್ಶಕರ ಜಾಣ್ಮೆ ವ್ಯಕ್ತವಾಗುತ್ತದೆ.

ಮಲಯಾಳಂ ಸಾಹಿತ್ಯದ ಪ್ರಮುಖ ಲೇಖಕರಾದ ಎಂ. ಟಿ. ವಾಸುದೇವನ್ ನಾಯರ್ ಅವರ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಮಲಯಾಳಂ ಸಾಹಿತ್ಯದ ರುಚಿಯನ್ನು ಉಣಬಡಿಸಿದ ಮೋಹನ ಕುಂಟಾರ್ ಅವರು ಅನುವಾದಿಸಿದ ‘ವಾಸುದೇವ ನಾಯರ್ ಕತೆಗಳು’ ಎಂಬ ಸಂಕಲನದ ಕುರಿತಾದ ವಿಮರ್ಶೆಯ ಸಾಲುಗಳನ್ನು ಓದಿದ ಓದುಗರು ತಮ್ಮ ಓದಿನ ಅಭಿರುಚಿಯನ್ನು ಮಲಯಾಳಂ ಸಾಹಿತ್ಯದೆಡೆಗೆ ವಿಸ್ತರಿಸದೆ ಇರಲಾರದು. ಕೇರಳದಲ್ಲಿ ಅಸ್ತಿತ್ವದಲ್ಲಿದ್ದ ನಾಯರ್ ತರವಾಡುಗಳ ಕುರಿತಾದ ವಿಚಾರಗಳನ್ನು ವಸ್ತುವನ್ನಾಗಿಟ್ಟುಕೊಂಡು ಬರೆದ ಕಥೆಗಳು ಅವರ ಆತ್ಮಕಥನದಂತೆಯೇ ಭಾಸವಾಗುತ್ತದೆ. ಅವರ ಅಷ್ಟೂ ಕಥೆಗಳು ನೈಜತೆಗೆ ಸಂಬಂಧವಿರುವ ವಸ್ತು ವಿಷಯಗಳೇ ಆಗಿದ್ದು ಅದು ಎಂ. ಟಿ. ಯವರ ಬಾಲ್ಯದ ದಿನಗಳೊಂದಿಗೆ ಬೆಸೆದುಕೊಂಡಿವೆ ಎಂದು ಮುಕ್ತವಾಗಿ ತಿಳಿಸುವ ವಿಮರ್ಶಕರು ಮಲಯಾಳಂ ಸಾಹಿತ್ಯದ ಕುರಿತು ಹೊಂದಿರುವ ತಮ್ಮ ಆಸಕ್ತಿಯನ್ನು ಪ್ರಕಟಿಸಿದ್ದಾರೆ.

2008ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡ ‘ಹಳ್ಳ ಬಂತು ಹಳ್ಳ’ ಕಾದಂಬರಿಯ ಕರ್ತೃ ಶ್ರೀನಿವಾಸ ವೈದ್ಯ ಅವರ ಆಯ್ದ ಕಥೆಗಳ ಕುರಿತು ಬರೆದ ವಿಮರ್ಶಾ ಲೇಖನವು ಮುಖ್ಯವಾಗುತ್ತದೆ. ಅತಿಯಾದ ಸಲುಗೆ – ಪ್ರೀತಿ ಮಕ್ಕಳ ಬದುಕನ್ನು ದಿಕ್ಕು ತಪ್ಪಿಸುತ್ತದೆ ಎಂದು ಭಾವಿಸಿದ ತಂದೆಯು ತನ್ನ ಮಗನೊಂದಿಗೆ ಕಟುವಾದ ನಂಟನ್ನು ಹೊಂದಿಕೊಂಡಿರುವಂತೆ ತೋರಿಸಿಕೊಂಡಿದ್ದರೂ, ಕೊನೆಗೊಂದು ದಿನ ಉದ್ಯೋಗ ನಿಮಿತ್ತ ಪರ ಊರಿಗೆ ತೆರಳುವ ಮಗನನ್ನು ಅತ್ಯಂತ ಭಾವುಕನಾಗಿ ಬೀಳ್ಕೊಡುವ ಬಗೆಯನ್ನು ಮನಮುಟ್ಟುವಂತೆ ನಿರೂಪಿಸುವ ‘ಶ್ರದ್ಧಾ’ ಕಥೆಯ ಶ್ರೇಷ್ಠತೆಯನ್ನು ಬಿಂಬಿಸಿದ ರೀತಿಯು ಮನೋಜ್ಞವಾಗಿದೆ. ಗಂಡ ಹೆಂಡಿರ ದಾಂಪತ್ಯ ಬದುಕಿನ ಏರಿಳಿತಗಳನ್ನು ವಿವರಿಸುವ ‘ಗಂಡಭೇರುಂಡ’ವು ದಂಪತಗಳ ಅಲ್ಪಕಾಲದ ಅಗಲಿಕೆಯು ಬಳಿಕ ಸುಖಾಂತ್ಯ ಕಾಣುವ ಬಗೆಯು ಭಾವನಾತ್ಮಕ ನಂಟುಗಳಿಗೆ ವೈದ್ಯರು ನೀಡಿದ ಮಹತ್ವವನ್ನು ತಿಳಿಸುತ್ತದೆ.

ಹದಿಹರೆಯದಲ್ಲುಂಟಾಗುವ ಮೊದಲ ಪ್ರೀತಿ – ಪ್ರೇಮ ಭಾವಗಳು, ಏರ್ಪಡುವ ಮಧುರ ಅನುಭವಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಿಸುವ ‘ತ್ರಯಸ್ಥ’ , ನೆನಪುಗಳ ಯಾಣದಲ್ಲಿ ಸಾಗುತ್ತಾ ತಮ್ಮ ಹರೆಯದ ಹಾಗೂ ಮದುವೆಯ ಕುರಿತಾದ ನೆನಪುಗಳನ್ನು ಮೆಲುಕು ಹಾಕುವ ದಂಪತಿಗಳ ಪ್ರಬುದ್ಧ ಪ್ರೇಮದ ಮೂಲಕ ಬದುಕಿನ ಸಾಮರಸ್ಯವನ್ನು ಹೇಳುವ ‘ಸಹಪ್ರಯಾಣ’, ಮದುವೆಗೆ ಮುನ್ನ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದ ಮಾಯಕ್ಕ ಮದುವೆಯ ಬಳಿಕ ಕ್ರೌರ್ಯದ ಬಿಂಬವಾಗಿ ಬದಲಾಗಿ, ಕೈಹಿಡಿದ ಪತಿಯ ಹಿಂಸೆಗೆ ಪ್ರತಿಯಾಗಿ ಹಲ್ಲೆ ಮಾಡಿ, ಅಲ್ಲಿಂದ ಓಡಿಹೋಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವ ಪಲ್ಲಟಗಳನ್ನು ವಿಶ್ಲೇಷಿಸುತ್ತಾ ಕೌಟುಂಬಿಕ ಅಭದ್ರತೆಯು ದುರಂತಕ್ಕೆ ಕಾರಣವಾಗುವ ಬಗೆಯನ್ನು ಬಿಂಬಿಸುವ ‘ಅಗ್ನಿಕಾರ್ಯ’ ಮೊದಲಾದ ಕಥೆಗಳ ಕುರಿತು ಪ್ರಸ್ತಾಪಿಸುತ್ತಾ ಸಾಗುವ ಲೇಖನವು ಆ ಬರಹಗಳನ್ನು ಓದುವ ಆಸಕ್ತಿಯನ್ನು ಹುಟ್ಟಿಸುತ್ತದೆ ಎಂದರೆ ಅದು ವೈದ್ಯರ ಕಥಾ ಸಾಮಥ್ರ್ಯದ ತೂಕಬದ್ಧವಾದ ನಿರೂಪಣೆಗೆ ಮತ್ತು ಕತೆಗಳ ವಿಮರ್ಶೆಯ ಯಶಸ್ಸಿಗೆ ದೊರೆತ ಅಂಗೀಕಾರವೇ ಸರಿ.

ನವ್ಯೋತ್ತರ ಬರಹಗಾರರಲ್ಲಿ ಒಬ್ಬರಾದ ‘ಜಯಂತ ಕಾಯ್ಕಿಣಿ ಅವರ ಅಯ್ದು ಕಥೆಗಳು’ ಎಂಬ ಕೃತಿಯಲ್ಲಿ ಅವರ ಹನ್ನೊಂದು ಕಥೆಗಳನ್ನು ಕುರಿತ ವಿಮರ್ಶಾ ಲೇಖನಗಳನ್ನು ಕಾಣಬಹುದು. ವಿವಿಧ ಪಾತ್ರಗಳನ್ನು ಕಥೆಯೊಳಗೆ ಸೇರಿಸುತ್ತಾ ಲವಲವಿಕೆಯ ನಿರೂಪಣೆಯ ಮೂಲಕ ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ‘ದಗಡೂ ಪರಬನ ಅಶ್ವಮೇಧ’ವು ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ಕಥೆಯೊಡನೆ ಸಾಮ್ಯತೆ ಹೊಂದಿರುವ ಬಗೆಯನ್ನು ಮಾತ್ರ ವಿಮರ್ಶಿಸದೆ ಆ ಕತೆಯು ಓದುಗರ ಮನಸ್ಸಲ್ಲಿ ಜೀವಂತವಾಗಿ ಪಡಿಮೂಡಿದ ಬಗೆಯನ್ನು ಎತ್ತಿ ಹಿಡಿಯುತ್ತದೆ. ಬದುಕಿನಲ್ಲಿ ಹಾಸುಹೊಕ್ಕ ಜೀವನಾನುಭವಗಳು ವಾಸ್ತವತೆ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಧೋರಣೆಯನ್ನು ಇಟ್ಟುಕೊಂಡು ಬರೆದ ‘ಟಿಕ್ ಟಿಕ್ ಗೆಳೆಯ’ ಎಂಬ ಕಥೆಯು 1984ರಲ್ಲಿ ಏರ್ಪಟ್ಟ ಭೋಪಾಲ್ ವಿಷಾನಿಲ ದುರಂತದ ಪ್ರಭಾವ ವರುಷಗಳು ಸಂದರೂ ತನ್ನ ಇರುವಿಕೆಯನ್ನು ಉಳಿಸಿಕೊಂಡ ಬಗೆಯನ್ನು ಮಧುಬನಿ ಎಂಬ ಹುಡುಗಿಯ ಚರ್ಯೆಗಳ ಮೂಲಕ ಮನಗಾಣಿಸುವ ಕಾಯ್ಕಿಣಿಯವರು ಅಂದಿನ ಸ್ಥಿತಿಗತಿಗಳನ್ನು ವಿವರಿಸಿದ ಬಗೆ ವಿಮರ್ಶಾ ಲೇಖನದಲ್ಲಿ ವ್ಯಕ್ತಗೊಂಡಿದೆ. ಸಂಕಲನದ ಮಹತ್ವದ ಕಥೆಯಾದ ‘ಸೇವಂತಿ ಹೂವಿನ ಟ್ರಕ್ಕು’ ಮುಂಬೈ ನಿವಾಸಿ ಸುಧೀರ ಮಹಾಜನ ಎಂಬುವವರ ಕುಟುಂಬದ ಮನೆಗೆಲಸಕ್ಕೆ ಆಧಾರವಾಗಿದ್ದ ದುರ್ಗಿಯ ಜೀವನದ ಪ್ರತಿಯೊಂದು ಮಜಲುಗಳನ್ನು ವಿವರಿಸುತ್ತಾ ಅವಳ ದಾರುಣ ಅಂತ್ಯದೊಂದಿಗೆ ಕೊನೆಗೊಳ್ಳುತ್ತದೆ. ಕವಿಯಾಗಿ ಪ್ರಸಿದ್ಧರಾಗಿರುವ ಜಯಂತರು ಕನ್ನಡ ಗದ್ಯ ಸಾಹಿತ್ಯಲ್ಲೂ ಪ್ರತಿಭಾನಿತರಾಗಿದ್ದಾರೆ ಎಂಬ ವಿಚಾರವನ್ನು ಈ ಲೇಖನವು ಪ್ರತಿಪಾದಿಸುತ್ತದೆ.

ಕೆ. ಸತ್ಯನಾರಾಯಣರ ಒಂಬತ್ತನೇ ಕಥಾ ಸಂಕಲನ ‘ಮನುಷ್ಯರು ಬದಲಾಗುವರೇ?’ ಎಂಬ ಕೃತಿಯ ಹಿನ್ನೆಲೆಯಲ್ಲಿ ವಿಮರ್ಶಕರು ಆ ಸಂಕಲನದಲ್ಲಿ ಹಾದುಹೋಗುವ ವಿಭಿನ್ನ ಕಥಾವಸ್ತುಗಳ ಹಾಗೂ ಲೇಖಕರ ಪ್ರಯೋಗಶೀಲತೆಯ ಕುರಿತು ಮಾತನಾಡುತ್ತಾರೆ. ಬದುಕಿನ ಪಯಣದಲ್ಲಿ ಬದಲಾಗುವ ಗುರಿ, ಬಾಳಿನ ಹೆಜ್ಜೆಗಳಲ್ಲಿ ನೆಮ್ಮದಿ ಕಂಡುಕೊಳ್ಳುವ ಪಾತ್ರಗಳನ್ನು ಪರಿಗಣಿಸುವ ದಿವಾಕರನ ಬದುಕು ಕೇವಲ ಅವನದ್ದಷ್ಟೇ ಆಗಿರದೇ ಸಮಾಜದ ವ್ಯಕ್ತಿಗಳಿಗೂ ಅನ್ವಯವಾಗುವ ರೀತಿಯನ್ನು ವಿವರಿಸುವ ‘ವಾಷಿಂಗ್ಟನ್ ಮೆಮೋರಿಯಲ್ ಮುಂದೆ’, ಭಾವನಾತ್ಮಕ ಸಂಬಂಧಗಳ ಪರಿಚಯ ಮಾಡುತ್ತಾ ತಂದೆಗಾಗಿ ಮಗ ಅನುಭವಿಸುವ ಕೆಲವೊಂದು ತೀವ್ರತರವಾದ ನೋವಿನ ಸಂಗತಿಗಳ ಕಡೆಬೆಳಕು ಹಾಯಿಸುವ ‘ಫೋಟೋ ವಲಸೆ’, ಗೂಡಾಚಾರಿಕೆ – ಸರಕಾರದ ನೀತಿ ನಿಯಮಾವಳಿಗಳನ್ನು ತಳಹದಿಯಾಗಿಟ್ಟು ಹೆಣೆದ ‘ಹನಿ ಟ್ರ್ಯಾಪ್’ ಎಂಬ ಪ್ರೇಮ ಕಥೆಯ ಜೊತೆಗೆ ‘ನಾಲ್ವಡಿಯವರ ವಿಮೋಚನೆ’ ಎಂದ ಹೃದ್ಯ ಕಥೆಯೊಳಗೆ ಬಿಚ್ಚಿಡುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯನವರ ವಿವೇಚನಾ ಶಕ್ತಿ, ದಕ್ಷ ಆಡಳಿತ ಹಾಗೂ ಪ್ರಾಮಾಣಿಕತೆಯ ಕುರಿತು ಕಥೆಗಾರರು ಆಡುವ ಮಾತು ಮಹತ್ವಪೂರ್ಣವಾಗಿದೆ. ಈ ಸಂಕಲನದ ಕುರಿತು ವಿಮರ್ಶಕರು ನೀಡುವ ಮಾಹಿತಿಗಳು ಕೆ. ಸತ್ಯನಾರಾಯಣರ ಕೃತಿಗಳ ಬಗ್ಗೆ ಹೆಮ್ಮೆಯನ್ನು ಉಂಟುಮಾಡುತ್ತವೆ.
ಸಂಕಲನ ಎರಡನೇ ಭಾಗದಲ್ಲಿ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’, ತ.ರಾ.ಸು ಅವರ ‘ಹಂಸಗೀತೆ’, ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’, ಮಲ್ಲಿಕಾರ್ಜುನ ಹಿರೇಮಠರ ‘ಹಾವಳಿ’, ಮೊಗಸಾಲೆ ಅವರ ‘ಧಾತು’, ಗುರುಪ್ರಸಾದ್ ಕಾಗಿನೆಲೆಯವರ ‘ಕಾಯಾ’, ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಎಂಬ ಎಂಟು ಕೃತಿಗಳು ಪ್ರಬುದ್ಧ ವಿಮರ್ಶೆಯ ಮೂಲಕ ಜೀವಂತ ಅಸ್ತಿತ್ವವನ್ನು ಪಡೆಯುತ್ತವೆ.

ತಳುಕಿನ ರಾಮಸ್ವಾಮಿ ಸುಬ್ಬರಾವ ಅವರ ‘ಹಂಸಗೀತೆ’ ಯ ಕುರಿತು ಮಾತನಾಡುವ ವಿಮರ್ಶಕರು ಆ ಕಾದಂಬರಿಯನ್ನು ‘ಅದ್ಘುತ ಕಥಾ ವಸ್ತು ಹೊಂದಿದ ಹೊತ್ತಗೆ’ ಎಂದು ನಿರ್ಧರಿಸಿರುವುದರಲ್ಲಿ ಅರ್ಥವಿದೆ. ಚಿತ್ರದುರ್ಗದ ಪಾಳೆಯಗಾರನಾದ ವೀರ ಮದಕರಿಯ ಕಾಲಘಟ್ಟದಲ್ಲಿ ಬದುಕಿದ ಸಂಗೀತಗಾರನಾದ ಭೈರವಿ ವೆಂಕಟಸುಬ್ಬಯ್ಯನ ಕುರಿತು ವಿಶ್ಲೇಷಣೆ ಮಾಡುವ ಪರಿ ಆತನ ಜೀವನದ ಪ್ರತಿಯೊಂದು ತಿರುವುಗಳ ಬಗೆಗೆ ಸ್ಪಷ್ಟವಾದ ಮಾಹಿತಿ ನೀಡುತ್ತದೆ. ಬಾಲ್ಯದಲ್ಲಿ ಗುರುವನ್ನು ಮೀರಿಸುವ ಶಿಷ್ಯ, ನಂತರ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಾ ಊರೂರು ಅಳೆದು ಕೊನೆಗೆ ಅಲೆಮಾರಿಯಾದ ಸದಾನಂದ ಬುವಾ ಎಂಬಾತನ ಶಿಷ್ಯನಾಗಿ ಸಂಗೀತ ಕಲಿತು ಪ್ರತಿಭಾನ್ವಿತನಾಗುವುದು, ನಂತರ ಚಂದ್ರಸಾನಿಯಲ್ಲಿ ಅನುರಕ್ತನಾಗಿ ಸರ್ವಸ್ವವನ್ನು ಅವಳಿಗೆ ಸಮರ್ಪಿಸಿದರೂ ಬದುಕಿಗೆ ಮರಳುವ ಸನ್ನಾಹದಲ್ಲಿ ಚಂದ್ರಸಾನಿ ಆತ್ಮಹತ್ಯೆ ಮಾಡಿಕೊಳ್ಳುವ ಭೀಕರತೆ, ದೇವರ ಸಾನಿಧ್ಯದಲ್ಲಿ ಮಾತ್ರ ಹಾಡುವ ವೆಂಕಟಸುಬ್ಬಯ್ಯ ಅಂದಿನ ನವಾಬ ಟಿಪ್ಪುವಿನ ಕೋರಿಕೆಯಾದ ಆಸ್ಥಾನ ಗಾಯನವನ್ನು ವಿರೋಧಿಸಿ ತನ್ನ ನಾಲಗೆಯನ್ನು ಕತ್ತರಿಸುವ ಘಟನಾವಳಿಗಳು ಕಾದಂಬರಿಯಲ್ಲಿ ಮನಮುಟ್ಟುವಂತೆ ಚಿತ್ರಿತವಾದ ಬಗೆಯನ್ನು ವಿವರಿಸುವಾಗ ಪ್ರಸ್ತುತ ಕೃತಿಯ ಮೇಲೆ ವಿಮರ್ಶಕರಿಗೆ ಇರುವ ಆರಾಧನ ಭಾವ ಕಂಡುಬರುತ್ತದೆ. ಬರವಣಿಗೆಯ ಚಾಣಾಕ್ಷತನ, ಭಾಷಾ ಪ್ರೌಢಿಮೆ ಮತ್ತು ಚಿತ್ರಮಯತೆ, ಉಪಮೆ ರೂಪಕಗಳ ಮೂಲಕ ಘಟನೆಗಳನ್ನು ವಿವರಿಸುವ ಶೈಲಿಯಿಂದಾಗಿ ತ. ರಾ. ಸು ಅವರ ‘ಹಂಸಗೀತೆ’ ಜನಮಾನಸದಲ್ಲಿ ಇಂದಿಗೂ ಹಸಿರಾಗಿದೆ.

ರಾಘವೇಂದ್ರ ಪಾಟೀಲರ ಮಹತ್ವದ ಕಾದಂಬರಿಯಾದ ‘ಗೈರ ಸಮಜೂತಿ’ಯ ಶೀರ್ಷಿಕೆಯು ‘ಅಪಾರ್ಥ’ ಅಥವಾ ‘ತಪ್ಪು ತಿಳುವಳಿಕೆ’ ಎಂಬ ಅರ್ಥವನ್ನು ಧ್ವನಿಸುತ್ತಿದ್ದು ಅಪಾರ್ಥ ಧೋರಣೆಯಿಂದ ಸಂಭವಿಸುವ ಹಾಗೂ ಸಂಭವಿಸಿದ ಘಟನೆಗಳ ಆಳ ವಿಸ್ತಾರಗಳನ್ನು ತೋರಿಸಿಕೊಡುತ್ತದೆ. ಹೊಸತಾಗಿ ಮದುವೆಯಾಗಿದ್ದ ಅಚ್ಯುತ್ತನ ಕೊಲೆ ಹಾಗೂ ಕಾದಂಬರಿಯ ಕೊನೆಯಲ್ಲಿ ಕಾಣಿಸಿಕೊಳ್ಳುವ ಸತ್ಯಬೋಧಾಚಾರ್ಯರ ಕೊಲೆ ಪ್ರಸ್ತುತ ಕಾದಂಬರಿಯ ಮುಖ್ಯ ಗೈರ ಸಮಜೂತಿಗಳಾಗಿವೆ. ಇದರೊಂದಿಗೆ ನೇರ ಸಂಬಂಧ ಹೊಂದಿರುವ ‘ವಚ್ಚಕ್ಕ’ ಈ ಕೃತಿಯುದ್ದಕ್ಕೂ ನಡೆದಾಡುವ ಪಾತ್ರ. ಅಚ್ಯುತನ ಮಡದಿಯಾದ ವಚ್ಚಕ್ಕ ಆತನ ಮರಣಾನಂತರ ಕುಗ್ಗಿ ಹೋದರೂ ಕೂಡ ಚಿಕ್ಕಪ್ಪ ಸತ್ಯಬೋಧಾಚಾರ್ಯರ ಶ್ರಮ ಹಾಗೂ ಚಿಂತನೆಗಳಿಂದ ಹೊಸ ಬದುಕು ಕಟ್ಟಿಕೊಳ್ಳಲು ಮಾಡುವ ಯತ್ನ ಹಾಗೂ ಅದರಲ್ಲಿ ಕಾಣುವ ಗೆಲುವು ಕಾದಂಬರಿಯ ತೂಕವನ್ನು ಹೆಚ್ಚಿಸುತ್ತದೆ. ಸತ್ಯಬೋಧಾಚಾರ್ಯರ ಮರಣಾನಂತರ ಸೂಲಗಿತ್ತಿಯಾಗಿ ಕರ್ಮನಿರತಳಾಗುವ ವಚ್ಚಕ್ಕ ಧರ್ಮ ಸಾಮರಸ್ಯ ಮೆರೆಯುವ ಬಗೆ ಕೃತಿಯನ್ನು ಇಂದಿಗೂ ಹಸಿರಾಗಿಸಿದೆ. ಇಂಥ ಕೃತಿಯನ್ನು ತಮ್ಮದೇ ಶೈಲಿಯಲ್ಲಿ ಪರಿಚಯಿಸಿ, ಅದರ ಆಳ ಮತ್ತು ವ್ಯಾಪ್ತಿಯನ್ನು ಓದುಗರ ಮನದಾಳಕ್ಕೆ ತಲುಪಿಸಿದ ವಿಮರ್ಶಕರ ಪ್ರಯತ್ನ ವ್ಯರ್ಥವಾಗಲಾರದು.

ಮಲ್ಲಿಕಾರ್ಜುನ ಹಿರೇಮಠರ ‘ಹಾವಳಿ’ಯು ಕನ್ನಡದಲ್ಲಿ ಇತ್ತೀಚೆಗೆ ಪ್ರಕಟವಾದ ಮಹತ್ವದ ಕಾದಂಬರಿ ಎಂದು ಹೊಗಳುವ ವಿಮರ್ಶಕರು ತಮ್ಮ ಪ್ರಶಂಸೆಗೆ ಕಾರಣವಾದ ಅಂಶಗಳನ್ನು ಸ್ಪಷ್ಟಪಡಿಸುತ್ತಾರೆ. ದೇಶ ವಿಭಜನೆಯ ನಂತರ ಹೈದರಬಾದ್ ಸಂಸ್ಥಾನದಲ್ಲಿ ಏರ್ಪಡುವ ಹೋರಾಟವೇ ಕೃತಿಯ ಒಡಲಾಗಿದ್ದು, ಹಿಂದೂ – ಮುಸ್ಲಿಂ ಜನಾಂಗದ ನಡುವಿನ ಒಡಕು, ಸ್ತ್ರೀ ಹಿಂಸೆ, ರಾಜಕೀಯ ಪಲ್ಲಟಗಳು ಮುಂತಾದ ಗಹನವಾದ ಘಟನೆಗಳು ಏರ್ಪಟ್ಟ ಬಗೆಯನ್ನು ಸೂಕ್ಷ್ಮವಾಗಿ ತಿಳಿಸುತ್ತಾ ಸಾಗುವ ವಿಮರ್ಶೆಯು ಆ ಕಾಲದ ಹಿಂಸೆಯು ಇಂದಿಗೂ ಹೇಗೆ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಾರೆ. ಇತಿಹಾಸ ಕಲಿಸುವ ಪಾಠದಿಂದ ಸಮಾಜ ಎಚ್ಚೆತ್ತು ಮುನ್ನಡೆಯುವ ಅನಿವಾರ್ಯತೆ ಹಾಗೂ ಅಗತ್ಯತೆ ಇದೆ ಎಂಬ ಹಿರೇಮಠರ ವಾದ ಸಮಂಜಸವಾದದ್ದು ಎಂದು ನಾವು ಒಪ್ಪಿಕೊಂಡರೆ ಅವರ ಕೃತಿಗೆ ಗೌರವವನ್ನು ಸಲ್ಲಿಸಿದಂತಾಗುತ್ತದೆ.

ಸೀತಾಪುರದ ಶಿವಳ್ಳಿ ಬ್ರಾಹ್ಮಣ ಕುಟುಂಬವೊಂದರ ಚಿತ್ರಣ ನೀಡುತ್ತಾ ಅಲ್ಲಿನ ಮೂರು ತಲೆಮಾರುಗಳ ಕಥನವನ್ನು ಕಟ್ಟಿಕೊಡುವ ಡಾ. ನಾ ಮೊಗಸಾಲೆ ಅವರ ‘ಇದ್ದೂ ಇಲ್ಲದ್ದು’ ಎಂಬ ಕಾದಂಬರಿ ಅವರ ಮನೆದೇವರಾದ ವೆಂಕಟರಮಣನೊಂದಿಗೆ ಹೊಂದಿದ ನಂಟನ್ನು ವಿಶ್ಲೇಷಿಸುತ್ತದೆ. ಕುಟುಂಬದಲ್ಲಿ ಏರ್ಪಡುವ ಅಂತರ್ಜಾತಿ ವಿವಾಹ ಮತ್ತದರ ಪ್ರಭಾವದಿಂದ ಕಂಡುಬರುವ ಪಲ್ಲಟಗಳು, ಕೃಷಿಯಿಂದ ಹಿಮ್ಮುಖಗೊಳ್ಳುತ್ತಿರುವ ಯುವಸಮೂಹ, ಕೃಷಿಯನ್ನೇ ನೆಚ್ಚಿದ ಕೃಷಿಕರ ಸಮಸ್ಯೆಗಳ ಕುರಿತು ಅರಿವನ್ನು ಉಂಟು ಮಾಡುವ ಕಾದಂಬರಿಯನ್ನು ಯುವಸಮೂಹವು ಓದಲೇಬೇಕು ಎಂದು ಸಾರುವ ವಿಮರ್ಶಕರ ಮಾತಿನಲ್ಲಿ ಅರ್ಥವಿದೆ. ಮೊಗಸಾಲೆ ಅವರ ‘ಧಾತು’ ಕಾದಂಬರಿಯನ್ನು ವಿಮರ್ಶಿಸುತ್ತಾ ಕಥಾ ನಾಯಕ ನಾರಾಯಣರಾಯರ ಕುರಿತು ಮಾಹಿತಿ ನೀಡುವುದರೊಂದಿಗೆ ಕಥಾನಾಯಕ ತನ್ನ ಮಡದಿಯ ಮರಣಾನಂತರ ಮರುಮದುವೆಯಾಗಲಿಚ್ಛಿಸುವುದನ್ನು ಕುರಿತ ಪ್ರಸ್ತಾಪ, ಪತ್ರಿಕೆಯೊಂದರಲ್ಲಿ ಪ್ರಕಟಗೊಳುವ ಕಥಾನಾಯಕನ ‘ಮನದ ಮುಂದಿನ ಮಾಯೆ’ ಎಂಬ ಕಥೆಗೆ ದೊರಕುವ ಜನಪ್ರಿಯತೆ, ಆ ಮೂಲಕ ಸಂಧಿಸುವ ‘ರಾಧಾ’ ಎಂಬುವವಳ ಸಖ್ಯ, ಅವಳೆಡೆಗೆ ತಿರುಗುವ ಆಕರ್ಷಣೆ, ಅದೇ ಆಕರ್ಷಣೆ ಕ್ರಮೇಣ ಗೌಣವಾಗಿ ಅತ್ಮಸಖ್ಯವಾಗಿ ಬದಲಾಗುವ ಬಗೆ, ಅದೇ ಭಾವನೆ ಬದುಕಿನಲ್ಲಿ ವಿಶಿಷ್ಠವಾಗಿ ಕಾಣುವ ಸೂಕ್ಷ್ಮ ಸಂಗತಿಗಳು ಕಾದಂಬರಿಯುದ್ದಕ್ಕೂ ಹದವಾಗಿ ಬಿಂಬಿಸಿದ ರೀತಿಯನ್ನು ವಿಮರ್ಶಕರು ಓದುಗರಿಗೆ ಮನದಟ್ಟಾಗುವಂತೆ ಹೇಳಿದ್ದಾರೆ. ಪ್ರೀತಿ, ಪ್ರೇಮ, ಕಾಮ, ಪ್ರಣಯ ಮೊದಲಾದ ಅಂಶಗಳು ಮಾನವನ ಸಹಜ ಆಶಯಗಳೇ ಆದರೂ ಕೂಡ ‘ಆತ್ಮಸಾಂಗತ್ಯ’ ಎಂಬುದು ಅವೆಲ್ಲದಕ್ಕಿಂತ ಮಿಗಿಲು ಎಂದು ಬಿಂಬಿಸಿದ ಮೊಗಸಾಲೆ ಅವರ ಆಶಯ ವಿಮರ್ಶೆಯ ಮೂಲಕ ಸ್ಪಷ್ಟವಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯವೊಂದರ ಓದು ಕೇವಲ ಸಾಹಿತ್ಯಾಭಿರುಚೆ, ಜ್ಞಾನ ನೀಡುವುದು ಮಾತ್ರವಲ್ಲದೇ ಮಾನವೀಯ ಅಂಶಗಳೊಂದಿಗೆ ವ್ಯಕ್ತಿಯ ಆಲೋಚನಾ ದೃಷ್ಟಿಯನ್ನು ವಿಸ್ತರಿಸುವ ನೆಲೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಮಾತಿಗೆ ಇಂಬು ನೀಡಿದ ‘ಧಾತು’ ಅಭಿನಂದನೀಯವಾದ ಕೃತಿಯಾಗಿದೆ.

ಕಾರ್ಪೊರೇಟ್ ಸಂಸ್ಥೆಗಳ ಹೊಯ್ದಾಟ, ಒಳ ಜಗಳಗಳು, ದೃಷ್ಟಿಕೋನ ಸಂಘರ್ಷಗಳು, ತಲೆಮಾರುಗಳ ಅಂತರಗಳ ಚಿತ್ರಣ ನೀಡುವ ಎಂ. ಆರ್. ದತ್ತಾತ್ರಿಯವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿಯೊಂದಿಗೆ ಸಲಿಂಗ ಕಾಮ, ಪ್ಲಾಸ್ಟಿಕ್ ಸರ್ಜರಿ, ಸೌಂದರ್ಯ ಪ್ರಜ್ಞೆ, ಏಡ್ಸ್, ಮಾದಕ ವಸ್ತುಗಳ ವ್ಯಸನ ಹಾಗೂ ಇದರೊಂದಿಗೆ ಬೆಸೆದು ಕೊಂಡಿರುವ ರಾಜಕೀಯ ಸ್ಥಿತಿಗತಿಗಳನ್ನು ನಿರ್ದಿಷ್ಟ ಚೌಕ್ಕಟ್ಟಿನಲ್ಲಿ ಹೆಣೆದ ಗುರುಪ್ರಸಾದ್ ಕಾಗಿನೆಲೆಯವರ ‘ಕಾಯಾ’ ವಿಮರ್ಶಾ ವ್ಯಾಪ್ತಿಯಲ್ಲಿ ಬಂದಿದ್ದು ಓದುಗವರ್ಗಕ್ಕೆ ಸಮೂಹಕ್ಕೆ ಕನ್ನಡದ ಉದಯೋನ್ಮುಖ ಲೇಖಕರ ಪರಿಚಯ ಮಾಡಬಯಸುವ ವಿಮರ್ಶಕರ ನಡೆ ಸಮಂಜಸವಾಗಿದೆ.


ವಿಮರ್ಶಾ ಸಂಕಲನದ ಮೂರನೇ ಭಾಗ ಒಟ್ಟಾರೆ ಕೃತಿಯ ತೂಕವನ್ನು ಹೆಚ್ಚಿಸಿದುದು ಮಾತ್ರವಲ್ಲದೇ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’ ಕೃತಿಯನ್ನು ಭರವಸೆಯ ಕೃತಿಯನ್ನಾಗಿಸಿದೆ. 1995ರಲ್ಲಿ ಪ್ರಕಟವಾದ ಶಂಕರ ಮೊಕಾಶಿ ಪುಣೇಕರರ ‘ಅಪೂರ್ಣ ವರ್ತಮಾನಕಾಲ’ ಎಂಬ ವಿಮರ್ಶಾ ಕೃತಿಯ ಕುರಿತು ವಿಚಾರ ಮಂಡಿಸುವ ವಿಮರ್ಶಕರು ಶಂಕರ ಮೊಕಾಶಿ ಪುಣೇಕರ್ ತಮ್ಮ ಕಾಲದ ಖ್ಯಾತ ಲೇಖಕರು ಮತ್ತು ಬರಹಗಾರರ ಕೃತಿಗಳನ್ನು ವಿಮರ್ಶಿಸುವ ಶೈಲಿಯ ಬಗ್ಗೆ ಮಾತನಾಡಿದ್ದಾರೆ. ಪುಣೇಕರ್ ಬರೆದ ‘ಗೋವಿಂದ ಪೈಗಳ ವೈಶಾಖಿ’, ‘ಕುವೆಂಪು ಮತ್ತು ಇಂಗ್ಲೇಷ್ ರೊಮ್ಯಾಂಟಿಕ್ ಕಾವ್ಯ’, ‘ವಿನಾಯಕರ ತ್ರಿವಿಕ್ರಮರ ಆಕಾಶ ಗಂಗೆ’, ‘ಗೋಕಾಕರ ಇಂಗ್ಲೀಷ್ ಕವನಗಳು’, ‘ಕಣವಿಯವರ ಎರಡು ದಡ’, ‘ಗಂಗಾದರ ಚಿತ್ತಾಲರ ದುಃಖಗೀತೆ’, ‘ಮಾಸ್ತಿಯವರ ಸಾಹಿತ್ಯದ ಹಿನ್ನಲೆಗಿದ್ದ ಸಾಂಸ್ಕೃತಿಕ ಸಂದರ್ಭಗಳು’,‘ಕಾರಂತರ ಕಾದಂಬರಿಗಳು:  ಒಂದು ಸೃಜನಾತ್ಮಕ ಪ್ರತಿಕ್ರಿಯೆ’, ‘ಬಿ. ಪುಟ್ಟಸ್ವಾಮಿಯವರ  ಕ್ರಾಂತಿ ಕಲ್ಯಾಣ’,  ‘ಟಿ. ಪಿ. ಕೈಲಾಸಂ – ಟೊಳ್ಳುಗಟ್ಟಿ’,  ‘ಚದುರಂಗರ ವೈಶಾಖ’, ‘ಕನ್ನಡದಲ್ಲಿ ಅಸ್ತಿತ್ವವಾದ ಸಾಹಿತ್ಯ’, ‘ಶೂನ್ಯ ಸಂಪಾದನೆ - ಭೂಸನೂರಮಠರ ಒಂದು ಅಧ್ಯಾಯ’ ಎಂಬ ಲೇಖನಗಳನ್ನು ಆಧಾರವಾಗಿರಿಸಿಕೊಂಡು ವಿಮರ್ಶಿಸಿದ ‘ಅಪೂರ್ಣ ವರ್ತಮಾನಕಾಲ’ ಕೃತಿಯನ್ನು ವಸ್ತು, ಶೈಲಿ ಮತ್ತು ಒಳನೋಟಗಳ ದೃಷ್ಟಿಯಿಂದ ಅತ್ಯುತ್ತಮ ವಿಮರ್ಶಾ ಸಂಕಲನ ಎಂದು ಸಾರಿದುದರ ಹಿಂದೆ ಅಡಕವಾಗಿರುವ ತಥ್ಯವನ್ನು ಓದುಗರು ಅರತುಕೊಳ್ಳಬೇಕಿದೆ.

ವರಕವಿ ಬೇಂದ್ರೆಯವರ ವೈಚಾರಿಕ ಮತ್ತು ವಿಮರ್ಶಾತ್ಮಕ ಲೇಖನಗಳ ಸಂಕಲನವಾದ ‘ವಿಚಾರ ಮಂಜರಿ’ಯಲ್ಲಿ ಅವರು ತಮ್ಮ ವಿಚಾರಗಳನ್ನು ಕನ್ನಡ ನಾಡು ನುಡಿ, ಧರ್ಮ, ವಿಚಾರ, ವ್ಯಕ್ತಿ – ವಿಮರ್ಶೆ ಎಂಬ ಐದು ಭಾಗಗಳಾಗಿ ವಿಂಗಡಿಸಿ, ವಿಸ್ತರಿಸಿರುವುದನ್ನು ಓದಬಹುದು. ಭಾಷೆಗೂ ನಾಡಿಗೂ ನೇರ ಸಂಬಂಧ ಕಲ್ಪಿಸುತ್ತಾ ‘ಯಾವುದೇ ಒಂದು ಭಾಷೆಯ ವಾಙ್ಮಯ ಸಂಪತ್ತು ಶ್ರೀಮಂತವಾಗಿದ್ದರೆ ಆ ನಾಡೂ ಸಂಪತ್ಭರಿತವಾಗಿರುತ್ತದೆ’ ಎಂದ ಬೇಂದ್ರೆಯವರ ಮಾತು ಅರ್ಥಪೂರ್ಣವಾಗಿದ್ದು, ಕನ್ನಡ ನಾಡು - ನುಡಿಯೆಡೆಗೆ ಅವರು ಹೊಂದಿರುವ ದೃóಷ್ಟಿಕೋನವನ್ನು ವ್ಯಕ್ತಪಡಿಸುತ್ತದೆ.

‘ಹೂ ಬಿಸಿಲಿನ ಕೆಳಗೆ’ ಎಂಬುದು ಮೊಗಸಾಲೆಯವರ ವ್ಯಕ್ತಿಚಿತ್ರ ಸಂಕಲನವಾಗಿದ್ದು, ಸ್ವತಃ ವಿಮರ್ಶಕರಾದ ವಿಕಾಸ ಹೊಸಮನಿಯವರೇ ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವದಿಂದ ಮೊದಲಾಗಿ ಒಟ್ಟು ನಲವತ್ತೊಂಬತ್ತು ವ್ಯಕ್ತಿಚಿತ್ರಗಳು ಇವೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು, ಹಾ. ಮಾ. ನಾಯಕ, ಸು.ರಂ. ಎಕ್ಕುಂಡಿ, ಗೋಪಾಲಕೃಷ್ಣ ಅಡಿಗ, ಸಾಹಿತಿ ಮತ್ತು ರಾಜಕಾರಣಿ ನೀರ್ಪಾಜೆ ಭೀಮಭಟ್ಟ, ಪಾಟೀಲ ಪುಟ್ಟಪ್ಪ, ಸುಬ್ರಾಯ ಚೊಕ್ಕಾಡಿ, ಮಾಧವ ಕುಲಕರ್ಣಿ, ವಿ.ಗ.ನಾಯಕ, ವಿಷ್ಣುನಾಯಕ, ಹರಿಹರಪ್ರಿಯ, ಪದ್ಮಪ್ರಸಾದ, ತುಳುವಿನ ಲೇಖಕರಾದ ಕೃಷ್ಣಾನಂದ ಚೌಟ, ಕೆ. ಕೆ. ಪೈ, ಸಂಘಟಕರಾದ ಡಾ. ಹೆಚ್. ಶಾಂತಾರಾಮ್, ರಂಗನಾಥ ಶೆಣೈ, ಯಕ್ಷಗಾನ ಕಲಾವಿದರುಗಳಾದ ಕೋಳ್ಯೂರು ರಾಮಚಂದ್ರ ರಾವ್ ಮತ್ತು ಗೋಪಾಲಕೃಷ್ಣ ಜೋಶಿ, ಬನ್ನಂಜೆ ಗೋವಿಂದಾಚಾರ್ಯರು, ರಾಘವೇಂದ್ರ ಪಾಟೀಲರು ಹೀಗೆ ಮೊದಲಾದ ಖ್ಯಾತ ಸಾಹಿತಿಗಳು, ದಕ್ಷ ಸಂಘಟಕರು, ಕಲಾವಿದರುಗಳ ಕುರಿತಾದ ಆಪ್ತ ಚಿತ್ರವೊಂದನ್ನು ‘ಹೂ ಬಿಸಿಲಿನ ಕೆಳಗೆ’ ಕೃತಿಯಲ್ಲಿ ಕಟ್ಟಿಕೊಟ್ಟ ಮೊಗಸಾಲೆಯವರ ಲೇಖನಿಯ ಶಾಯಿಯ ಪ್ರತಿಯೊಂದು ಹನಿ ಕೂಡ ತನ್ನ ಸಾರ್ಥಕತೆಯನ್ನು ಕಾಣದೇ ಇರಲಾರದು ಎಂಬ ನಿಲುವನ್ನು ತಳೆದಿರುವಂತೆ ವಿಮರ್ಶಕರು ಕೃತಿಯ ಬಗ್ಗೆ ಬರೆದಿದ್ದಾರೆ.
ವಿನಾಯಕ ಕೃಷ್ಣ ಗೋಕಾಕರ ‘ಇಂದಿನ ಕರ್ನಾಟಕ’ ಕೃತಿಯನ್ನು ಪರಿಚಯಿಸುತ್ತಾ ಸುಮಾರು ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ಅಖಂಡ ಕರ್ನಾಟಕದ ಕನಸು ಕಂಡ ಕನ್ನಡಿಗರ ಮನದ ತುಡಿತ, ಭಾವಗಳ ಮಿಡಿತ ಹಾಗೂ ಅದಕ್ಕಾಗಿ ಹಾತೊರೆದ ಬಗೆ ಹೇಗಿತ್ತು ಎಂಬುದರ ಕುರಿತು ಲೇಖಕರು ಮಾಹಿತಿಯನ್ನು ನೀಡಿದ್ದಾರೆ.

ಲಕ್ಷ್ಮೀನಾರಾಯಣ ಭಟ್ಟರ ‘ಪ್ರಾಯೋಗಿಕ ವಿಮರ್ಶೆ’ ಎಂಬ ಸಂಕಲನದ ಕುರಿತು ತಿಳಿವು ನೀಡುವ ವಿಮರ್ಶಕರು ಪ್ರಾಯೋಗಿಕ ವಿಮರ್ಶೆಯ ಮೂಲಕ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತೆ ಮೂಡಿಬಂದ ಮೊದಲ ವಿಮರ್ಶಾ ಕೃತಿಯಿದಾಗಿದೆ ಎನ್ನುತ್ತಾರೆ. ಭಟ್ಟರ ಸಂಪಾದಕತ್ವದಲ್ಲಿ ಮೂಡಿಬಂದ ಕೃತಿ ಆದಿಕವಿ ಪಂಪ, ಜನ್ನ, ಬಸವಣ್ಣ, ಕುವೆಂಪು, ಬೇಂದ್ರೆ, ಕುಮಾರವ್ಯಾಸ, ಪು. ತಿ. ನ, ಜಿ. ಎಸ್. ಶಿವರುದ್ರಪ್ಪ, ಕಣವಿ ಮುಂತಾದ ಖ್ಯಾತ ಕವಿಗಳ ಕವನಗಳ ಬಗೆಗೆ ಟಿ. ಎಸ್. ವೆಂಕಣಯ್ಯ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಯು. ಆರ್. ಅನಂತಮೂರ್ತಿ, ಸುಮತೀಂದ್ರ ನಾಡಿಗ್, ಎಂ. ಜಿ. ಕೃಷ್ಣಮೂರ್ತಿ ಮೊದಲಾದ ಲೇಖಕರು ಬರೆದ ಇಪ್ಪತೆರಡು ವಿಮರ್ಶಾ ಬರಹಗಳನ್ನು ಪರಿಚಯಿಸುತ್ತಾ ಕೃತಿಯ ಒಡಲನ್ನು ಓದುಗರ ಮುಂದೆ ತೆರೆದಿಡುವ ಪರಿ ಅಂತಹ ಕೃತಿಗಳೆಡೆಗೆ ಓದುಗರು ಆಸಕ್ತಿ ತೋರುವಂತೆ ಮಾಡುವ ಶ್ರಮವನ್ನು ಕೈಗೊಳ್ಳುತ್ತದೆ.

ವಿಮರ್ಶಾ ಸಂಕಲನದ ಕೊನೆಯ ಬರಹವಾಗಿ ಕಾಣಿಸಿಕೊಳ್ಳುವ ತ. ರಾ. ಸು ಅವರ ವ್ಯಕ್ತಿಚಿತ್ರಣವು ಅವರನ್ನು ಅಪೂರ್ವ ಕಾದಂಬರಿಕಾರರು ಎಂಬುದಕ್ಕೆ ಪೂರಕವಾದ ಮಾಹಿತಿಗಳನ್ನು ನೀಡುತ್ತದೆ. ವಿಮರ್ಶೆಯ ಬಗ್ಗೆ ಎಂದೂ ಯೋಚಿಸದ ತರಾಸು ಅವರ ಗಮನ ಕೇವಲ ಬರವಣಿಗೆಯತ್ತ ಕೇಂದ್ರೀಕೃತವಾಗಿತ್ತೇ ಹೊರತು ವಿಮರ್ಶೆಯೆಡೆಗೆ ಅಲ್ಲ. ಆದರೂ ತ. ರಾ. ಸು ಅವರ ಸಾಹಿತ್ಯ ಹಾಗೂ ಇಂದಿಗೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವುದು ಅವರ ಕಥನ ಕಲೆಗೆ ಸಾಕ್ಷಿಯಾಗಿದೆ ಎಂಬ ಮಾತನ್ನು ಒತ್ತಿ ಹೇಳುವ ವಿಮರ್ಶಕರ ಮಾತಿನಲ್ಲಿ ಅವರ ಕೃತಿಗಳ ಜೀವಂತಿಕೆಯ ಬಗ್ಗೆ ಸ್ಪಷ್ಟ ನಿಲುವಿದೆ. ತ. ರಾ. ಸು ಅವರ ‘ಚಂದವಳ್ಳಿಯ ತೋಟ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಆಕಸ್ಮಿಕ’, ‘ನಾಗರಹಾವು’, ‘ಗಾಳಿಮಾತು’ ಎಂಬ ಕಾದಂಬರಿಗಳು ಚಲನಚಿತ್ರಗಳಾಗಿ ಕಂಡ ಯಶಸ್ಸು ಲೇಖಕರ ಲೇಖನಿಯ ಶಕ್ತಿಯನ್ನು ಧ್ವನಿಸುತ್ತದೆ. ಬಿರುದು, ಸಮ್ಮಾನ, ಪ್ರಶಸ್ತಿಗಳಿಗೆ ಹಂಬಲಿಸದ ತ. ರಾ. ಸು ಅವರು ತಮ್ಮ ಬದುಕನ್ನು ಕನ್ನಡ ನಾಡು ನುಡಿಯ ಏಳ್ಗೆಗಾಗಿ ಮೀಸಲಿಟ್ಟ ಬಗೆಗೆ ಪ್ರತಿಯೋರ್ವ ಕನ್ನಡಿಗನೂ ಕೂಡ ಗೌರವಾದರಗಳನ್ನು ತೋರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಲೇಖನವು ತ. ರಾ. ಸು ಅವರನ್ನು ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕವಾಗಿ ಗುರುತಿಸುತ್ತದೆ.

ವಿಮರ್ಶೆಯ ಪ್ರತಿಯೊಂದು ಸಾಲುಗಳನ್ನು ಕೂಡ ವಿಮರ್ಶೆಯಲ್ಲವೆನ್ನುವ ವಿಕಾಸರ ಅ ಅವರಭಿಮತವು ಮನದಾಳದಿಂದ ಬಂದಿದೆ. ತರ್ಕದಿಂದ ಕೂಡಿರದ ಮಾತುಗಳನ್ನು ಸ್ವಗತವೆಂಬಂತೆ ಹೇಳುತ್ತಾ ಹೋದರೂ ಚರ್ಚಿತ ಕೃತಿಗಳೆಡೆಗೆ ತೋರಿದ ಹಾಗೂ ಅದರ ಕಡೆಗೆ ಓದುಗರ ಗಮನ ಹರಿಯುವಂತೆ ಪ್ರೇರೇಪಿಸುವ ಸೌಮ್ಯದನಿಯಿದೆ. ಆ ದನಿ ಸಂಕಲನದುದ್ದಕ್ಕೂ ಒಂದೇ ಸ್ಥಾಯಿಯಲ್ಲಿ ಸಾಗಿರುವುದು ಗಮನಾರ್ಹ. ತಮ್ಮ ಓದಿಗೆ ನಿಲುಕಿದ ಅಷ್ಟೂ ಅಂಶಗಳನ್ನು ಸ್ಪಷ್ಟವಾಗಿ, ಹದವಾಗಿ ಬರೆಯುತ್ತಾ ಸಾಗಿದ ವಿಮರ್ಶಕರು ತಮ್ಮ ವಿಮರ್ಶಾ ಸಂಕಲನದ ವ್ಯಾಪ್ತಿಗೆ ಮಹಿಳಾ ಲೇಖಕಿಯರು ಹಾಗೂ ಬರಹಗಾರ್ತಿಯರನ್ನು ತರದೇ ಹೋದದ್ದು ಕೊಂಚ ಮಟ್ಟಿಗೆ ಬೇಸರದ ಸಂಗತಿಯಾದರೂ ಕೃತಿಯ ಆಳವಾದ ಓದಿನಿಂದ ಮೂಡಿದ ವಿಚಾರಧಾರೆಯನ್ನು ಗಮನಿಸಿದಾಗ ಪ್ರಸ್ತುತ ಕೃತಿಯು ಯುವ ಓದುಗ ಸಮೂಹದ ಪಾಲಿಗೆ ಮೌಲ್ಯಯುತವಾಗಿದೆ ಎಂದು ವೇದ್ಯವಾಗುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ವಿಕಾಸ ಹೊಸಮನಿಯವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’”

  1. ಡಾ. ಸುಭಾಷ್ ಪಟ್ಟಾಜೆ

    ಉತ್ತಮ ಲೇಖನ. ಭರವಸೆಯ ವಿಮರ್ಶಕಿ ಆಗಬಲ್ಲ ಲಕ್ಷಣಗಳು ಕಾಣುತ್ತವೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter