ಹೀಗೊಂದು ಸಂಕಲ್ಪವಿರಲಿ

ವರುಷ ವರುಷ ಕಳೆದರೂ ವರುಷ ಮರಳಿ ಬರುತಿದೆ
ಹೊಸ ರಂಗಿನ ಉತ್ಕರ್ಷದ ಭರವಸೆಯನು ತರುತಿದೆ…

ಹೊಸ ವರುಷ 2024ರ ಹೊಸ್ತಿಲಲ್ಲಿ ನಿಂತಿರುವ ನಮಗೆ ಹಿಂದಿನಕ್ಕಿಂತಲೂ ಮುಂದಿನ ವರುಷ ಹೆಚ್ಚಿನ ಸುಖ, ಶಾಂತಿ, ನೆಮ್ಮದಿ, ಸಂಪತ್ತನ್ನು ಹೊತ್ತು ತರಲಿ ಎನ್ನುವ ಆಶಯವಿರುವುದು ಸಹಜ. ಯಾವಾಗಲೂ ಕಳೆದು ಹೋದದ್ದಕ್ಕಿಂತ ಮುಂಬರುವ ಕಾಲಗತಿಯ ಬಗ್ಗೆನೇ ಹೆಚ್ಚು ಲೆಕ್ಕಾಚಾರವಿರುವುದು ಲೋಕರೂಢಿ. ನಮ್ಮ ಮನಸ್ಸೂ ಈ ಪರಿಯಲ್ಲಿ ಪಳಗಿದೆ. ಹಿಂದಿನ ಕಷ್ಟ ಸುಖಗಳ ಗೊಡವೆ ಬೇಡ… ಮುಂದಿನದ್ದಾದರೂ ನೆಟ್ಟಗಿರಲಿ ಎನ್ನುವುದು ಸಂಕಷ್ಟಗಳ ಹಾದಿ ತುಳಿದವರ ಆಶಾಭಾವ. ಅದಕ್ಕಾಗಿ ಇನ್ನಿಲ್ಲದ ಕಸರತ್ತನ್ನು, ಸಂಕಲ್ಪವನ್ನು ಆರಂಭದಲ್ಲಿಯೇ ರೂಪಿಸಿಕೊಳ್ಳುತ್ತೇವೆ. ಹಾಗೆ ನೋಡಿದರೆ ಸಂಕಲ್ಪಕ್ಕೆ ಹೊಸ ವರುಷವೇ ಬರಬೇಕಂತೇನು ಇಲ್ಲ. ಪ್ರತಿಯೊಂದು ದಿನವೂ ಹೊಸತಿನ ಉಗಮವೆನ್ನುವುದು ನಿರ್ವಿವಾದ.

ಸಂಕಲ್ಪ ಎನ್ನುವುದು ಭವಿಷ್ಯತ್ತಿನ ಅದೃಶ್ಯ ಗುರಿಯ, ಒಳಿತಿನ ಕುರಿತಾದ ಆಶಯಕ್ಕೆ ಇಡುವ ಮೊದಲ ಮಾನಸಿಕ ಹೆಜ್ಜೆ. ಇದೊಂದು ಮಾನಸಿಕ ದೃಢ ನಿರ್ಧಾರ. ಯಾವುದೇ ಕೆಲಸಕ್ಕೆ ಸಂಕಲ್ಪವೆನ್ನುವುದು ಅತ್ಯಗತ್ಯ. ಮಾಡುವ ಕೆಲಸ ಚಿಕ್ಕದಿರಲಿ ದೊಡ್ಡದಿರಲಿ ಅದಕ್ಕೊಂದು ಮಾನಸಿಕ ತಯಾರಿ, ಜೊತೆಗೆ ಶ್ರಮ ಇಲ್ಲದಿದ್ದರೆ ಆ ಕೆಲಸ ಕೆಟ್ಟಿತೆಂತಲೇ ಅರ್ಥ. ಕಷ್ಟ ಬಂದಾಗ ದೇವರಲ್ಲಿ ಬೇಡುತ್ತಾ ಹೊರುವ ಹರಕೆ, ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಹಿರಿಯರೆಲ್ಲ ಸೇರಿ ಯಾವ ವಿಘ್ನಗಳೂ ಇಲ್ಲದೆ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿ ಎಂದು ಸಲ್ಲಿಸುವ ಪ್ರಾರ್ಥನೆ, ದೇವರ ಪೂಜಾಕಾರ್ಯಗಳಲ್ಲಿ ಪುರೋಹಿತರು ವಿಧಿವಿಧಾನದ ಆರಂಭದಲ್ಲಿ ಉಚ್ಛರಿಸುವ ಮಂತ್ರಗಳು ಎಲ್ಲವೂ ಸಂಕಲ್ಪದ ನಾನಾರೂಪಗಳು. ನಮ್ಮ ವೈಯಕ್ತಿಕ ಜೀವನಕ್ಕೂ ಇಂತಹ ಸಂಕಲ್ಪದ ಅಗತ್ಯವಿದೆ. ಹೊಸ ವರುಷದ ಆರಂಭ ಇದಕ್ಕೊಂದು ಶುಭಮುಹೂರ್ತ.
ಕಳೆದು ಹೋದ ವರ್ಷದಲ್ಲಿ ತಮ್ಮ ನಡೆನುಡಿಗಳಿಂದ, ತೆಗೆದುಕೊಂಡ ನಿರ್ಧಾರಗಳಿಂದ, ಮಾಡಿದ ಕೆಲಸಗಳಿಂದ ಪಾಠ ಕಲಿತುಕೊಳ್ಳುವ ಅವಕಾಶಗಳನ್ನು ಕಳೆದುಕೊಂಡಿದ್ದರೆ ಹೊಸ ವರ್ಷದ ಆರಂಭದಲ್ಲೊಂದು ಗಟ್ಟಿ ನಿರ್ಧಾರ ಮಾಡಿಕೊಂಡು ಸಂಕಲ್ಪದ ರಥ ಏರುವ ಹುಮ್ಮಸ್ಸು ಅನೇಕರದ್ದು. ಇದು ಹೆಚ್ಚಿನವರ ಜೀವನವರಸೆಯೂ ಹೌದು.

ಹಾಗೆಂದು ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿ ರಾತ್ರಿಯೆಲ್ಲ ಮದಿರೆಯಲ್ಲಿ ತೇಲಾಡಿ ಅಲ್ಲಿ ತೆಗೆದುಕೊಳ್ಳುವ ಸಂಕಲ್ಪಗಳು ಕೆಲವೊಮ್ಮೆ ಬೆಳಕು ಹರಿಯುವ ಮುನ್ನ ಕರಗಿಹೋಗುವುದುಂಟು. ನಮ್ಮ ಸುಖಸಮೃದ್ಧಿಯ ಪ್ರಗತಿಪರ ಬದುಕಿಗೆ ಬೇಕಾಗಿರುವುದು ಶ್ರಮಬೇಡುವ ಅಚಲ ಸಂಕಲ್ಪ. ಮುಂದಿನ ವರ್ಷ ನಾನೇನು ಮಾಡಬೇಕು, ನನ್ನ ಜೀವನಶೈಲಿಯಲ್ಲಿ ಯಾವ ಬದಲಾವಣೆಯನ್ನು ತರಬೇಕು, ಯಾವುದನ್ನು ತಂದರೆ ಒಳಿತು, ನನ್ನ ಗುರಿಯ ಕಡೆಗೆ ನಾನಿಟ್ಟ ಹೆಜ್ಜೆ ಸರಿಯಾಗಿದೆಯೇ ಎಂಬಿತ್ಯಾದಿ ಸ್ವವಿಮರ್ಶೆಯ ಕಡೆಯುವಿಕೆಯಲ್ಲಿ ಸಾಧ್ಯವಾಗುವ ಸಂಕಲ್ಪ ಕೈಗೊಂಡರೆ ಅದನ್ನು ಈಡೇರಿಸುವುದು ಸುಲಭ.

ಹೊಸವರ್ಷದ ಕೈಪಿಡಿಯೊಂದು ನಮ್ಮೊಳಗೆ ತಯಾರಾಗಬೇಕು. ನಮಗೆ ಅನುಕೂಲವಾಗುವ, ಅನುಷ್ಠಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಮ್ಮ ದಿನಚರಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದಿಷ್ಟು ಬದಲಾವಣೆ ಜೀವನದಲ್ಲಿ ಸದಾ ಹೊಸತನವನ್ನೂ, ಉತ್ತೇಜನವನ್ನೂ ಕಾಪಿಡಬಲ್ಲದು. ನಿವೃತ್ತರಿದ್ದರೆ ನಿದ್ದೆಯಂತೂ ಮೊದಲಿನಂತೆ ಇರುವುದಿಲ್ಲ. ಹೀಗಾಗಿ ನೇಸರನುದಿಸುವ ಮುಂಚೆ ಎದ್ದು ಒಂದಿಷ್ಟು ಧ್ಯಾನ, ಪ್ರಾಣಾಯಾಮದಲ್ಲಿ ತೊಡಗಿಸಿಕೊಂಡು ನಂತರ ಮುಂಜಾನೆಯ ವಾಕಿಂಗ್‍ಗೆ ಸಂಗಾತಿ ಇದ್ದರೆ ಅವರ ಜೊತೆ ತೆರಳಬಹುದು. ಈಗಂತೂ ಹಾಸಿಹೊದ್ದುಕೊಳ್ಳುವಷ್ಟು ಸಮಯವಿರುವುದರಿಂದ ಅಡುಗೆಮನೆಯ ಕೆಲಸಕ್ಕೆ ಕೈಹಚ್ಚಬಹುದು. ಹೆಚ್ಚಿನ ಉಮೇದು, ತರಬೇತಿ ಇದ್ದರೆ ಹೊಸರುಚಿ ತಯಾರಿಸಿ ಮನೆಮಂದಿಯಿಂದ ಶಹಬ್ಬಾಶ್‍ಗಿರಿ ಪಡೆದುಕೊಳ್ಳಬಹುದು. ಮೊಮ್ಮಕ್ಕಳಿದ್ದರೆ ಅವರಿಗೆ ಕಥೆಹೇಳುತ್ತಾ ಎಳೆಮನಸ್ಸಿಗೆ ಸಾಹಿತ್ಯದ ಗುಂಗನ್ನು ಹಚ್ಚಬಹುದು.

ಮನೆಗೆ ಬೇಕಾದ ದಿನಸಿ, ಕಾಯಿಪಲ್ಲೆ, ತರಕಾರಿ, ಹಣ್ಣು ಹಂಪಲು ತರುತ್ತಾ ಬಿಡುಸಮಯದಲ್ಲಿ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಅಂದಹಾಗೆ ಇದರ ಜೊತೆಜೊತೆಗೆ ಗೆಳೆಯರನ್ನು ಕಂಡು ಹರಟುವ, ಅವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದು ಮಾನಸಿಕ ಒತ್ತಡವನ್ನು ಕಡಿಮೆಮಾಡಲು ಸಹಕಾರಿ. ಕುಡಿಯುವ, ಸೇದುವ ಚಟವಿದ್ದಲ್ಲಿ ಆರೋಗ್ಯದ ದೃಷ್ಟಿಯಿಂದ ಅದರ ಪ್ರಮಾಣವನ್ನು ತಗ್ಗಿಸಬಹುದು. ದಿನವಿಡೀ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಾಗ ಆಲಸ್ಯವೆನ್ನುವುದು ದೂರವಾಗಿ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಜಡಮನಸ್ಸು ಯಾವತ್ತೂ ರೋಗಗ್ರಸ್ತವಾಗಿರುತ್ತದೆ. ಜೀವನೋತ್ಸಾಹವೆನ್ನುವುದು ಈ ಕ್ಷಣಕ್ಕೆ ಬೇಕಾಗುವ ಟಾನಿಕ್. ದೇವದರ್ಶನ, ಪ್ರವಚನಗಳ ಶ್ರವಣ ಜೀವನವನ್ನು ಜೀವಂತವಾಗಿಡುವ ಸಂಜೀವಿನಿಗಳು.

ಹದಿಹರೆಯ ಮತ್ತು ನಡುವಯಸ್ಸಿನವರು ಹೊಸವರ್ಷಕ್ಕೆ ಯಾವುದಾದರೂ ಸಂಕಲ್ಪ ತೊಡುವುದಿದ್ದರೆ ಮೊದಲು ದಿನದ ಒಂದಿಷ್ಟು ಗಂಟೆ ಮೊಬೈಲಿನಿಂದ ದೂರವಿರುವ ನಿರ್ಧಾರ ತೆಗೆದುಕೊಳ್ಳಬಹುದು. ಇದು ಕಣ್ಣು ಮನಸ್ಸಿಗೆ ಸ್ವಲ್ಪ ಸಮಯ ವಿರಾಮವನ್ನು ನೀಡಬಲ್ಲುದು. ಮನೆಗೆ ಬಂದ ನಂತರ ಮನೆಮಂದಿಯೊಂದಿಗೆ ಕೂತು ಹರಟುವುದು ಸೂಕ್ತ. ಇದು ಸಂಸಾರದೊಳಗಿನ ಬಂಧವನ್ನು ಗಟ್ಟಿಗೊಳಿಸುತ್ತದೆ. ಮುಂಜಾನೆ ಬೇಗ ಏಳುವ ಹವ್ಯಾಸವನ್ನು ರೂಢಿಸಿಕೊಂಡರೆ ಸಾಕಷ್ಟು ಸಮಯ ವಿನಿಯೋಗಕ್ಕೆ ದೊರೆಯುತ್ತದೆ. ವಿರಾಮ, ರಜಾಕಾಲದಲ್ಲಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಮನಸ್ಸಿಗೆ ಮುದಕೊಡುವುದರ ಜೊತೆಗೆ ಜ್ಞಾನಾರ್ಜನೆಗೂ ದಾರಿಯಾಗುತ್ತದೆ. ಅಲ್ಲದೆ ಈ ಹವ್ಯಾಸ ನಿವೃತ್ತಿಯ ನಂತರದ ಸಮಯಕೊಲ್ಲುವಿಕೆಗೆ ಸಹಕಾರಿಯಾಗುತ್ತದೆ.

ವರ್ತಮಾನ ಕಾಲದ ಸಾಕಷ್ಟು ಸಮಸ್ಯೆಗಳಿಗೆ ಸಂವಹನದ ಕೊರತೆಯೇ ಕಾರಣವಾಗಿರುವಾಗ ಪರಸ್ಪರ ಮಾತನಾಡುವುದಕ್ಕೂ ಸಮಯವನ್ನು ಹೊಂದಿಸಿಕೊಳ್ಳಬೇಕು. ಕೊಳ್ಳುಬಾಕ, ತಿನ್ನುಬಾಕ ಸಂಸ್ಕೃತಿ ಇದ್ದರೆ ಒಂದಿಷ್ಟು ಕಡಿವಾಣ ಹಾಕಿದರೆ ಒಳ್ಳೆಯದು. ಇದು ಆರೋಗ್ಯ ಮತ್ತು ಆರ್ಥಿಕ ಭಾಗ್ಯವನ್ನು ತಂದುಕೊಡಬಲ್ಲದು. ಯಾವಾಗಲೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಎಲ್ಲ ದೃಷ್ಟಿಯಿಂದಲೂ ಒಳಿತು. ಹೀಗೆ ಅವರವರ ಭಾವಕ್ಕೆ, ಅವರವರ ಅಭಿರುಚಿಗೆ ತಕ್ಕಂತೆ ಹೊಸವರ್ಷದ ಸಂಕಲ್ಪಕ್ಕೊಂದು ಮೂರ್ತರೂಪ ಕೊಡುತ್ತಾ ಅದನ್ನು ಈಡೇರಿಸುವ ಸಂಕಲ್ಪದ ಛಲವನ್ನು ತೊಟ್ಟರೆ ಜೀವನ ಸುಗಮವಾಗಿ ಸಾಗಬಹುದು.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

12 thoughts on “ಹೀಗೊಂದು ಸಂಕಲ್ಪವಿರಲಿ”

  1. Raghavendra Mangalore

    ಬಹಳ ಚೇತೋಹಾರಿ ಬರಹ. ಎಲ್ಲದಕ್ಕೂ ಸಂಕಲ್ಪ ಮುಖ್ಯ . ಪುಟ್ಟ ಲೇಖನ ಹೊಸ ವರ್ಷಕ್ಕೆ ದಾರಿ ಸೂಚಿಯಂತೆ ಇದೆ. ಅಭಿನಂದನೆಗಳು ಸಾರ್.

  2. ಶೇಖರಗೌಡ ವೀ ಸರನಾಡಗೌಡರ್

    ಆಶಾಭಾವವೇ ಜೀವನವನ್ನು ಮುನ್ನಡೆಸುತ್ತದೆ ಅಲ್ಲವೇ…?
    ಸಮಯೋಚಿತ ಮಾರ್ಗದರ್ಶಿ ಮಾತುಗಳಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

  3. ವಿಷಯ ಚಿಕ್ಕದಾದರೂ ಚೊಕ್ಕವಾಗಿ, ವಿಶಿಷ್ಟವಾಗಿ ನಿರೂಪಣೆ ಮಾಡುವ ನಿಮ್ಮ ಶೈಲಿ ಅನನ್ಯವಾದುದು. ಹಾರ್ದಿಕ ಅಭಿನಂದನೆಗಳು.

  4. ಸುನೀತ ಶ್ರೀಪಾದ

    ಹೊಸ ವರ್ಷದ ಹೊಸ್ತಿಲಿನಲ್ಲಿ ಒಂದು ಒಳ್ಳೆಯ ಬರಹ

  5. JANARDHANRAO KULKARNI

    ಸಂಕಲ್ಪ ಮಾಡಿದ ಮೇಲೆ ಅದರಂತೆ ಆಚರಣೆ ಇರಬೇಕು. ಇಲ್ಲದಿದ್ದರೆ ಸಂಕಲ್ಪಕ್ಕೆ ಅರ್ಥ ಇರುವುದಿಲ್ಲ. ನಿಮ್ಮ ಲೇಖನದಲ್ಲಿ ಉತ್ತಮವಾದ ಆಚರಣೆಯ ಕೆಲಸಗಳು ಇವೆ. ಸೂಪರ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter