ಪ್ರವಾಸ ಕಥನ : ‘ಗಿಂಡಿಯಲ್ಲಿ ಗಂಗೆ’

                                           
ಪ್ರವಾಸ ಕಥನ : ಗಿಂಡಿಯಲ್ಲಿ ಗಂಗೆ
ಲೇಖಕರು : ಡಾ. ಚಿಂತಾಮಣಿ ಕೊಡ್ಲೆಕೆರೆ
ಪ್ರಕಾಶಕರು : ಚಿತ್ರಮೂಲ ಪ್ರಕಾಶನ, ಬೆಂಗಳೂರು - 560091
ಮೊದಲನೇ ಮುದ್ರಣ : 2022
ಬೆಲೆ : ರೂ.140.00
'ಗಂಗಾ ಯಾನ'ದ ಅನುಭವ ಕಥನ : ಡಾ. ಚಿಂತಾಮಣಿ ಕೊಡ್ಲೆಕೆರೆ

ಡಾ.ಚಿಂತಾಮಣಿ ಕೊಡ್ಲೆಕೆರೆ

‘ಗಿಂಡಿಯಲ್ಲಿ ಗಂಗೆ’ ಡಾ.ಚಿಂತಾಮಣಿ ಕೊಡ್ಲೆಕೆರೆಯವರ ‘ಕಥೆಗಳ ಬೆನ್ನು ಹತ್ತಿದ ಒಂದು ಪ್ರವಾಸ ಕಥನ’. ಆದರೆ ಅದು ಅಷ್ಟಕ್ಕೇ ಸೀಮಿತವಾಗಿರುವದಿಲ್ಲ. ಜೀವನದಲ್ಲಿ ಒಮ್ಮೆ ‘ಕಾಶಿಯಾತ್ರೆ’ ಮಾಡುವದು ಹಿಂದುಗಳಿಗೆ ಒಂದು ಸಂಪ್ರದಾಯ, ಹಲವರಿಗೆ ಅದೊಂದು ಕನಸು; ಇನ್ನು ಕೆಲವರಿಗೆ ಕಂಡುಕೊಂಡು ಬಂದ, ಒಂದು ನೆನಪು. ಈ ಪ್ರವಾಸ ಕಥನ, ಕಾಶೀಯಾತ್ರೆಯನ್ನು ಮಾಡಲೇಬೇಕಾದ ಹುಮ್ಮಸ, ಉತ್ಸುಕತೆಯನ್ನು ತುಂಬಬಹುದಾದ ಒಂದು ಸ್ಪಷ್ಟ ಮಾರ್ಗಸೂಚಿಯ ಮಾಹಿತಿಗಳೊಂದಿಗೆ, ಸಮಸ್ತ ಕನ್ನಡಿಗರಿಗೆ, ಸಮಗ್ರವಾಗಿ ಸಾಮಗ್ರಿಯನ್ನೊದಗಿಸುವ ಒಂದು ಕೈಪಿಡಿಯೇ ಆಗಿದೆ ಅಂದರೆ ಅತಿಶಯೋಕ್ತಿಯಲ್ಲ, ಲೇಖಕರು ಈ ಉದ್ದೇಶದಿಂದ ಬರೆಯದಿದ್ದರೂ ಕೂಡ! ಕಾಶಿ, ಪ್ರಯಾಗ (ತ್ರಿವೇಣಿ ಸಂಗಮ / ಭಾರದ್ವಾಜ ಆಶ್ರಮ), ಗಯಾ, ಬುಧ್ಧ ಗಯಾ, ಚಿತ್ರಕೂಟ, ಅಯೋಧ್ಯಾ, ಸೀತಾಮಡಿ, ವಿಂಧ್ಯಾಚಲ ಧಾಮ ಇತ್ಯಾದಿ ಸ್ಥಳಗಳ ಹತ್ತು ದಿನಗಳ ಬಹೂಪಯೋಗಿ ಪ್ರವಾಸಕ್ಕೆ ಸಕಾರಾತ್ಮಕ, ಅಭ್ಯಾಸಪೂರ್ವಕ ನಿರ್ದಿಷ್ಟ ಯೋಜನೆಗಳೊಂದಿಗೆ ಸ್ರಜನಶೀಲವಾಗಿ, ಸುಂದರವಾಗಿ ಪ್ರಸ್ತಾಪಿಸುವ ಈ ಪ್ರವಾಸ ಕಥನ, ಅನೇಕ ಅತೀತ ಸಂಬಂಧಗಳನ್ನು ಸುಲಲಿತವಾಗಿ ಮೆಲಕು ಹಾಕುತ್ತ ಜೋಡಿಸುವ, ಪೌರಾಣಿಕ, ಐತಿಹಾಸಿಕ, ಭೌಗೋಲಿಕ, ಅರ್ವಾಚೀನ ತಂತುಗಳ ಸಾಮಯಿಕ ಹಾಗೂ ಸಮರ್ಪಕ ಉದಾಹರಣೆಗಳೊಂದಿಗೆ, ನಿಯಮಿತ ೧೩ ಅಧ್ಯಾಯಗಳಲ್ಲಿ, ಅಸದೃಶ ಪ್ರತೀಕಗಳನ್ನು ಎದುರು ನಿಲ್ಲಿಸುವಾಗ, ಲೇಖಕರ ನುರಿತ ಪರಿಶ್ರಮ, ಸಾಂದರ್ಭಿಕ ಸತ್ಯವನ್ನು ಹುಡುಕಿ, ಹುಡುಕಿ ಹೊರತೆಗೆದಿಡುವ ಛಲ, ಅಂತರಂಗದ ಸಾರ್ಥಕ್ಯದ ಪರಿಭಾಷೆಯಲ್ಲಿ, ಸ್ತುತ್ಯವಾಗುತ್ತದೆ! ಇದಕ್ಕೆ ಹೊತ್ತು ಹೊತ್ತಿಗೆ ಪರವಶನಾಗುತ್ತ, ಹೊರಹೊಮ್ಮುವ, ಲೇಖಕರ ಕಾಲಾತೀತ, ಪವಿತ್ರ ಪ್ರಜ್ಞೆಯ ಅಭಿವ್ಯಕ್ತಿಗಳೇ ಸಾಕ್ಷಿ!!

ಪ್ರಾಂಜಲತೆಯೇ ಜೀವಾಳವಾಗಿರುವ ಈ ಪ್ರವಾಸಕಥನದಲ್ಲಿ, ಸಮಯಾ ಸಮಯದ ಅನುಭವಗಳ ನಿಸ್ಸಂಕೋಚ ಪ್ರತಿಪಾದನೆ, ಪ್ರಯಾಣದುದ್ದಕ್ಕೂ ತನ್ನ ಸುತ್ತಮುತ್ತಲಿನ ಕ್ಷಣ, ಕ್ಷಣಗಳ ಆಗುಹೋಗುಗಳ ಬಗೆಗಿರುವ ಕಾಳಜಿಗಳೇ, ಈ ಪ್ರವಾಸ ಕಥನದ ಗತಿಗೆ ಪುಷ್ಟಿ ಕೊಡುವ ವೇಗವರ್ಧಕಗಳು. ಪ್ರತ್ಯಕ್ಷವಾಗಿ,ಅಪ್ರತ್ಯಕ್ಷವಾಗಿ, ಸಹಜವಾಗಿ, ಪದೇ ಪದೇ ಬರುವ, ಹೆಚ್ಚಾಗಿ, ರಾಮಾಯಣದ, ಕೊಂಚ ಮಹಾಭಾರತದ ಕೂಡ, ಅನೇಕ ಸನ್ನಿವೇಶಗಳು, ಅರ್ಥವತ್ತಾಗಿ ಮೂರ್ತವಾಗುತ್ತವೆ. ನಡುವೆ, ಅಧ್ಯಾಯ ೬ : ‘ವಿಂಧ್ಯಾಚಲ ವಾಸಿನಿ, ವಿಷ್ಣು ಮಾಯಾ ವಿಲಾಸಿನಿ’ ಪು.೫೭ ರಲ್ಲಿ, ದೇವಾಲಯಕ್ಕೆ ಭೇಟಿಯಿತ್ತಾಗ, ವಿಂಧ್ಯಾವಾಸಿನಿ ಶಕ್ತಿ ಪೀಠವು, ನಮ್ಮ ದೇಶದ ಶಕ್ತಿ ಪೀಠಗಳಲ್ಲಿ ಅಗ್ರಸ್ಥಾನದಲ್ಲಿದ್ದುದಕ್ಕೆ, ಲಲಿತಾ ಸಹಸ್ರನಾಮದ ೨೨ನೆ ಶ್ಲೋಕವನ್ನು ಉಧ್ಹರಿಸುತ್ತಾರೆ:
‘ವಿಶ್ವಾಧಿಕಾ ವೇದ ವಿದ್ಯಾ ವಿಂಧ್ಯಾಚಲವಾಸಿನೀ
ವಿಧಾತ್ರೀ ವೇದಜ್ಞಾನೀ ವಿಷ್ಣು ಮಾಯಾ ವಿಲಾಸಿನೀ”

ಹೀಗೆ, ಕಥನದುದ್ದಕ್ಕೂ ಧನಾತ್ಮಕವಾಗಿ ಮಿಡಿಯುವ ಪರಿಪಕ್ವ ಮನಸ್ಸು, ತಾಜಾತನದ ಮೆರುಗಿನಲ್ಲಿ, ಹೇಳ ಬೇಕಾದ, ಹೇಳಲೇ ಬೇಕಾದ ಸತ್ವಯುತ ಸತ್ಯವನ್ನು, ಅತ್ಯಂತ ಪ್ರಾಮಾಣಿಕವಾಗಿ, ಸುಪುಷ್ಟವಾಗಿ, ಸಮಾಭೀಷ್ಟವಾಗಿ, ಅತೀತ, ಅರ್ವಾಚೀನದ ಆಯಾಮದ ಆಸರೆಯಲ್ಲಿ, ಜಾಣ್ಮೆಯಿಂದ ಜಡೆಹೊಯ್ಯುವ ಭಾಷಾ ಪ್ರಯೋಗದಲ್ಲಿ, ಸೀತೆಯ ನೈತಿಕತೆ / ಅನೈತಿಕತೆಯ ಪ್ರಶ್ನೆಯ ಮನೋಮಂಥನಕ್ಕೆ ಕೊಟ್ಟ ಶ್ರೀರಾಮನ ಐತಿಹಾಸಕ ತೀರ್ಪಿನಿಂದ, ಮಕ್ಕಳನ್ನು ತಂದೆಗೊಪ್ಪಿಸಿ, ಸೀತಾಮಾತೆ ತನ್ನ ತಾಯಿಯ ಒಡಲಾಳವನ್ನು, ಸೇರುವ ಆರ್ದ್ರ ಸನ್ನಿವೇಶವನ್ನು ವರ್ಣಿಸುವಾಗ, ಭಾವಾತಿಶಯದ ಪರಾಕಾಷ್ಠೆಯಲ್ಲಿ, ಕವಿ ಹೃದಯದ ಲೇಖಕರ ಕಣ್ಣು ತೇವವಾಗುತ್ತದೆ.( ಅಧ್ಯಾಯ ೭, ‘ಸೀತೆಯ ಸನ್ನಿಧಿ’ ಪು.೬೭)

ಮುಂದೆ ‘ಗಂಗಾರತಿ’ಯ ವಿರಾಟ ರೂಪವನ್ನು, ಮನಃಪೂರ್ತಿ ವಿವರಿಸುವಾಗ ಕಣ್ಣಿಗೆ ಕಟ್ಟುವಂತೆ ನೀಡುವ, ಹಿಂದೂಗಳ ಆತ್ಮಪ್ರವಿತ್ರ ಪ್ರಜ್ಞೆಯ ಕಾಶಿಯ ಅವಿಚ್ಛಿನ್ಹ ಸಂಪೂರ್ಣ ದರ್ಶನ, ಒಂದು ಮಾದರಿಯಾಗಿ ನಿಲ್ಲುತ್ತದೆ! ( ಅಧ್ಯಾಯ ೮, ‘ಬಾನು ಭೂಮಿಯ ಒಂದಾಗಿಸಿತು ಗಂಗಾರತಿ’ ಪು. ೬೯-೭೪) ಅಲ್ಲಿಯೇ, ‘ಮನುಷ್ಯ ಕತ್ತಲನ್ನು ಗೆಲ್ಲಬಲ್ಲ. ಅದಕ್ಕೆ ಅವನು ಒಂದು ಹಣತೆ ಹಚ್ಚಿದರೂ ಬೇಕಾದಷ್ಟಾಯಿತು.ಅದೇ ಆರತಿಯೂ ಆಗುವುದು,ಮುಂದೆ ಸಾಗಲು ಬೆಳಕೂ ಆಗುವುದು’ ಅನ್ನುವ ಮಹೋದಾತ್ತ ವಿಚಾರಧಾರೆಯನ್ನು ಅನುಮೋದಿಸುತ್ತಾರೆ! ‘ದೀಪ ತನ್ನ ಹಾದಿ ಹಿಡಿದು ಹೊರಟಿದೆ’ (ಪು. ೭೩) ಅನ್ನುವಾಗ ಗಂಭೀರವಾಗಿ, ಐಹಿಕ ಪ್ರಪಂಚಕ್ಕೆ ಪಾರಮಾರ್ಥಿಕ ಲೇಪನವನ್ನು ಕೊಟ್ಟ ಲೇಖಕರು, ‘ವೃಧ್ಹಾಶಿಷ್ಯ ಗುರೋರ್ಯುವ’ (ಅಧ್ಯಾಯ ೯, ‘ತಾಯಿ ಮಡಿಲಲ್ಲಿ ಮುಳುಗು’ ಪು. ೭೬ ) ಸಂದರ್ಭದಲ್ಲಿ ತಿಳಿಹಾಸ್ಯದ ಎರಕ ಹೊಯ್ಯುತ್ತಾರೆ. ಬುಧ್ಧ ಕುಳಿತ ನೆನಪನ್ನು ಹೊತ್ತ ಬೋಧಿವೃಕ್ಷ ಮತ್ತು ಅದರ ಕವಲುಗಳು ನಮ್ಮನ್ನು ಕಾಡುವ ಮಹಾಕೌತುಕದ ಚಿರಂತನ ಪ್ರತೀಕಗಳ ಪರಿಚಯವೇ, ‘ಬುಧ್ಧನಿಗೆ ಶರಣು” (ಅಧ್ಯಾಯ ೯, ಪು.೮೩ )

ಒಳಗಿನಿಂದ ಹೊರಗೆ ನೋಡುವ, ಹೊರಗಿನಿಂದ ಒಳವನ್ನು ವೀಕ್ಷಿಸುವ, ಈ ಒಳ ಹೊರಗಿನಿಂದಲೂ ಬೇರೆಯಾಗಿ ಬೆಳಗುವ ವಿವರಣೆಯಲ್ಲಿ, ಬೆಳೆಯುವ ವಿವೇಚನೆಯಲ್ಲಿ, ಮುಖಾಮುಖಿಯಾಗಲಿ, ಅಂತರ್ಮುಖಿಯಾಗಲಿ, ತನ್ನಿಂತಾನೇ ಮೂಡುವ ವಿಶದತೆ / ಪರವಶತೆ, ಕಥನದುದ್ದಕ್ಕೂ ಒಂದೇ ಸಮನೆ ಸಂಭವಿಸುವ, ಭೌತಿಕ, ಪಾವಿತ್ರಿಕ, ಆಧ್ಯಾತ್ಮಿಕಗಳ ಎಲ್ಲೆಗಳನ್ನೆಲ್ಲ ಮೀರುತ್ತ, ಹಿಂದೂಗಳ ಪರಮ ಪೂಜ್ಯವಾದ ‘ಗಂಗೆ’ ಅವರ ಗಿಂಡಿಯಲ್ಲಿ ಸಾಂದ್ರೀಕರಿಸುತ್ತಾಳೆ. ಮಜಾ ಎಂದರೆ, ಈ ಪೂರ್ತಿ ಯಾನದಲ್ಲಿ, ತನ್ಮಯತೆಯಿಂದ ಓದುವ ಪ್ರತೀ ಓದುಗನ ”ಮನೋ ಗಿಂಡಿ’ಯಲ್ಲೂ, ‘ಗಂಗೆ’ ತುಂಬಿಕೊಳ್ಳುತ್ತಾಳೆ! ಯಾಕೆಂದರೆ, ನಾವು ಬರುವಾಗ ತಂದಿದ್ದೇನು? ಹೋಗುವಾಗ ಸಂಗಡ ಒಯ್ಯುವದೇನು?

ಪುಸ್ತಕದ ಕೊನೆಯಲ್ಲಿ, ಲೇಖಕರು ‘ಕಾಶಿ ವಿಶ್ವನಾಥ’ನ ಸಂಸ್ಥಾನದ ಅನೇಕ ಮಂದಿರಗಳ, ನೋಡಲೇ ಬೇಕಾದ ಅನೇಕ ಘಾಟುಗಳ,ಇನ್ನಿತರ ಸ್ಥಳಗಳ ಬಗ್ಗೆ ಟಿಪ್ಪಣಿಗಳನ್ನೂ, ಮಾಹಿತಿಗಳನ್ನೂ ವಿಶೇಷವಾಗಿ ಓದುಗನ ಮಸ್ತಕದಲ್ಲಿ ತುಂಬಲು ಮರೆಯುವದಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಈ ಪ್ರವಾಸ ಕಥನದ ಪುಸ್ತಕವು ‘ಕನ್ನಡದ ಕಾಯಕ’ದಲ್ಲಿ, ಹಿಂದೂ ಧರ್ಮದ ಮೂಲಭೂತ ಮಹತ್ವದ, ಪುರಾಣಕ್ಕೆ ಸಂಬಂಧಪಟ್ಟ, ಜ್ಞಾನ ಪ್ರಚುರಿತ, ಸುಯೋಗ್ಯ ವಾಚನಕ್ಕೆ ಆಧುನಿಕ ಮಾಹಿತಿಗಳೊಂದಿಗೆ, ಕರ್ನಾಟಕ ಸರಕಾರದ ಪ್ರಸ್ತುತ ಪರಿಷ್ಕರಿಸಲ್ಪಡುತ್ತಿರುವ ಕನ್ನಡೀಕರಣದ ಪಠ್ಯ ಪುಸ್ತಕ ಮಾಧ್ಯಮದಲ್ಲಿ, ಪ್ರಕಾಶಗೊಳಿಸಬಹುದಾದ, ಸರ್ವ ಅರ್ಹತೆಗಳನ್ನೂ ಹೊಂದಿದೆ ಎನ್ನುವದು ನಿರ್ವಿವಾದ! ಈ ದಿಶೆಯಲ್ಲಿ ಸಂಬಂಧಿತ ಶಿಕ್ಷಣ ಕ್ರಮದ ಪರಿಷ್ಕರಣ ಸಮಿತಿಯ ಉಸ್ತುವಾರಿ ಸರಕಾರೀ ಅಧಿಕಾರಿಗಳು ಸಮಯೋಚಿತ, ಸುಯೋಚಿತ ಗಮನ ಹರಿಸಿದರೆ, ಭವಿಷ್ಯದಲ್ಲಿ ಓದಿಕೊಳ್ಳುವ ಕನ್ನಡದ ವಿದ್ಯಾರ್ಥಿವೃಂದದ ಸಕ್ಷಮ ಬೆಳವಣಿಗೆಗೆ, ಇನ್ನೊಂದು ಶುಭ ನಾಂದಿಯಾದೀತು ಎಂದು ಹಾರೈಸುವ,

-ಚಿಂತಾಮಣಿ ಸಭಾಹಿತ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter