ನೀಲದಲ್ಲಿ ಲೀನವಾಗಿ ಕಂಡ ಬದುಕಿನ ದಾರಿ- ‘ನೀಲಿ ನಕ್ಷೆ’

ಕಾದಂಬರಿ- ನೀಲಿ ನಕ್ಷೆ

ಲೇಖಕರು – ಅಮಿತಾ ಭಾಗ್ವತ್
ಪ್ರಕಾಶಕರು – ಅಂಕಿತ ಪುಸ್ತಕ
ಬೆಲೆ -350/-

ಬದುಕು ನಮಗೆ ಪಾಠವನ್ನು ಕಲಿಸುತ್ತದೆ. ಕಲಿಯುತ್ತಲೇ ಬದುಕುವಾಗ ಕೆಲವರು ಹುಟ್ಟಿದ್ದಕ್ಕೆ ಹೇಗಾದರೂ ಬದುಕಿ ಸಾಯಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಕೆಲವರು ಮಹತ್ವಾಕಾಂಕ್ಷಿಗಳು ಎದುರಾಗುವ ಅಡೆತಡೆಗಳಿಗೆ ಮುಗ್ಗರಿಸದೆ ಆದರ್ಶ ಜೀವನವನ್ನು ನಡೆಸುತ್ತಾರೆ. ಇನ್ನು ಕೆಲವರಿಗೆ ಮಹತ್ವಾಕಾಂಕ್ಷೆ ಇದ್ದರೂ ಹೇಗೆ ನಿಭಾಯಿಸ ಬೇಕೆಂಬುದು ತಿಳಿದಿರುವುದಿಲ್ಲ. ಈ ಮೂರು ಬಗೆಯ ಕೆಲವರಿಗೆ ಮಾರ್ಗದರ್ಶಕವಾಗಬಲ್ಲ ಕಾದಂಬರಿ ನೀಲಿ ನಕ್ಷೆ. ಇದು ಮುಂಬೈಯ ಲೇಖಕರಾದ ಅಮಿತಾ ಭಾಗ್ವತ್ ಅವರ ಮೊದಲ ಕಾದಂಬರಿ. ಅನೇಕ ಅಡೆತಡೆಗಳನ್ನು ದಾಟಿ ನಾಯಕಿ ಸರಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ಘನತೆಯಿಂದ ಬದುಕುವ ದಾರಿಯನ್ನು ಕಂಡುಕೊಳ್ಳುವುದು ಇಲ್ಲಿನ ಕಥಾವಸ್ತು. ಇದು ಕಾರವಾರದ ಕಡಲ ತೀರದ ಹಾಗೂ ಮುಂಬೈ ನಗರದ ಜನಜೀವನದಲ್ಲಿ ನಿರಾಯಾಸವಾಗಿ ಸಂಚರಿಸಿದೆ.

‘ನೀಲಿ ನಕ್ಷೆ’ ಕಾದಂಬರಿ ಸ್ತ್ರೀ ಬದುಕಿನ ಮೀಮಾಂಸೆ. ಅಬ್ಬರವಿಲ್ಲದೆ ಸಾಗಿ ಕಡಲ ಸೇರಿ ಅದರೊಳಗೆ ಒಂದಾಗಿ ಸುಖಿಸುವ ನದಿಯಂತೆ ನಾಯಕಿಯ ಚಿತ್ರಣವಿದೆ. ಸ್ವತಂತ್ರ, ಶುದ್ಧ ಬಣ್ಣವಾದ ನೀಲಿಯು ಸಂಕೇತಿಸುವ ನ್ಯಾಯ, ಪರಿಪೂರ್ಣತೆ, ಸ್ಥಿರತೆಗಳನ್ನು ಒಳಗೊಂಡ ಒಂದು ನಕಾಶೆಯನ್ನು ರೂಪಿಸಿಕೊಂಡು ಆಕೆ ಬದುಕನ್ನು ಜಯಿಸುತ್ತಾಳೆ. ಅವಳ ಅಪ್ರತಿಮ ಸೌಂದರ್ಯವೇ ಅಪ್ಪನ ಪ್ರೀತಿಯಿಂದ ಅವಳನ್ನು ವಂಚಿತಳನ್ನಾಗಿ ಮಾಡುತ್ತದೆ. ಕಿಶೋರಾವಸ್ಥೆಯಲ್ಲಿ ಸಾಮಾನ್ಯವಾಗಿ ಸವಾಲೊಡ್ಡುವ ಗಂಡು ಹೆಣ್ಣಿನ ಆಕರ್ಷಣೆ, ಅದರಿಂದ ಘಟಿಸುವ ವಿಪರೀತ ಸನ್ನಿವೇಶಗಳು, ಸಾಮಾಜಿಕ ಒತ್ತಡ, ಮುಂಬಯಿಗೆ ಬಂದ ಮೇಲೆ ಸ್ವಾಭಿಮಾನಕ್ಕೆ ಎದುರಾಗುವ ಸವಾಲುಗಳು ಇವೆಲ್ಲವೂ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತವೆ.

ಕಾರವಾರದ ಕಡಲ ತಡಿಯ ಜೀವನ, ಮುಂಬೈಯ ವರ್ಗ ವ್ಯವಸ್ಥೆಯ ದರ್ಶನ ಇವು ಕಾದಂಬರಿಯ ಧನಾತ್ಮಕ ಅಂಶಗಳು. ಒಂದು ಕಾಸ್ಮೋಪಾಲಿಟನ್ ನಗರ ಜೀವನದ ಹಲವು ಎಳೆಗಳನ್ನು ಕತೆಯಲ್ಲಿ ಸುಂದರವಾಗಿ ಹೆಣೆಯುವ ಸುಲಭವಲ್ಲದ ಕೆಲಸ ಈ ಕಾದಂಬರಿಯಲ್ಲಾಗಿದೆ. ಬಾಂದ್ರಾ ಬ್ಯಾಂಡ್ ಸ್ಟಾಂಡ್ ನಲ್ಲಿ ಸುತ್ತುವ ಸರಯೂ ಮತ್ತು ವಿಶಾಲ್ “ಪ್ರೇಮ ಪಕ್ಷಿಗಳು ಬೀಳ್ಗೊಡುತ್ತಿದ್ದರು. ಸುಂದರವಾದ ನಾಳೆ ನಮ್ಮನ್ನು ಕಾಯುತ್ತಿದೆ ಎನ್ನುವ ಭರವಸೆಯೊಂದಿಗೆ ಇನ್ನೂ ಕಾಯಬೇಕು ಎನ್ನುವ ಅಸಹನೆಯೂ ಸೇರಿ ಹುಳಿ ಮತ್ತು ಸಿಹಿ ಬೆರೆತ ಶ್ರೀಖಂಡದಂತೆ ದಿನಗಳು ಬಾಯಿ ಚಪ್ಪರಿಸುತ್ತಿದ್ದವು” ಇಂತಹ ಮಧುರವಾದ ಭಾಷೆ ಹಲವು ಕಡೆಗಳಲ್ಲಿ ಇಣುಕಿದೆ. ಲೇಖಕರ ಅನುಭವ, ಅವರ ನಿರೀಕ್ಷಣೆ ಹಾಗೂ ಗ್ರಹಿಕೆಗಳನ್ನು ಮೀರಿ ಕತೆ ಹೋಗುವುದಿಲ್ಲ. ವಾಸ್ತವಕ್ಕೆ ತೀರಾ ಹತ್ತಿರವಾದ ಕಟ್ಟುವಿಕೆ ಇಲ್ಲಿದೆ. ಕತೆಯಲ್ಲಿ ಬರುವ ಹಿರಿಯರ ಪ್ರಜ್ಞೆಯೊಳಗೆ ಕೆಲವು ಸಂಪ್ರದಾಯದ ನಂಬಿಕೆಗಳು ರೀತಿ ರಿವಾಜುಗಳು ಉಳಿದುಕೊಂಡು ಜೀವ ತಳೆದಿವೆ. ಉದಾ- “ಸಮುದ್ರ ಬಲಿ ಕೇಳುತ್ತದೆ’ ಈ ಮಾತು ಆನಂದುವಿನ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು.” ಅತಿಶಯತೆಗೆ ಭಾವ ತೀವ್ರತೆಗೆ ಹೆಚ್ಚಿನ ಆಸ್ಪದ ನೀಡಿದೆ ಪಾತ್ರಗಳು ಮಾನಸಿಕ ಸಮತೋಲನವನ್ನು ಕಾಯ್ದುಕೊಂಡಿವೆ.

ಚಿತ್ತಾಲರು, ಬಲ್ಲಾಳರು, ನಿಂಜೂರರು ಕಾದಂಬರಿಗಳಲ್ಲಿ ಚಿತ್ರಿಸಿರುವುದಕ್ಕಿಂತ ಭಿನ್ನ ಬಗೆಯ ಮುಂಬೈ ಬದುಕಿನ ಚಿತ್ರಣ ಇದರಲ್ಲಿದೆ. – ಮುಖ್ಯವಾಗಿ ಟ್ಯೂಷನ್ ಸಂಸ್ಕೃತಿಯ ಅನಾವರಣ. ಸಾಮಾಜಿಕ ಬದಲಾವಣೆ, ಅಡೆತಡೆಗಳನ್ನು ಮೀರುತ್ತಲೇ ಪಾತ್ರಗಳಿಗೆ ಧ್ವನಿ ಕೊಡುವಂತಹ ಶಕ್ತಿ ಈ ಕಾದಂಬರಿಯ ಹೆಚ್ಚುಗಾರಿಕೆ. ಯಾವುದೇ ಪಾತ್ರಗಳಿಗೂ ವಿರೋಧ ಸಮರ್ಥನೆ ಎನ್ನುವ ಪ್ರಮೇಯಕ್ಕೆ ಇಲ್ಲಿ ಅವಕಾಶವೇ ಇಲ್ಲ. ಇಲ್ಲಿ ಬರುವ ಎಲ್ಲ ಪಾತ್ರಗಳೂ ಅವರವರ ಬದುಕಿನ ಹೋರಾಟದಲ್ಲಿ, ಕೌಟುಂಬಿಕವಾಗಿ ಅವರವರು ವಹಿಸಿರುವ ಜವಾಬ್ದಾರಿಯ ದೃಷ್ಟಿಯಲ್ಲಿ ಸರಿಯಾಗಿಯೇ ನಡೆದುಕೊಂಡಿರುತ್ತಾರೆ. ಇಲ್ಲಿ ನಾಯಕಿ ಸರಯೂ ತನಗೆ ಬೇಸರವಾಗುವ ಸಂದರ್ಭಗಳಲ್ಲಿ ಅದಕ್ಕೆ ಕಾರಣರಾದವರ ಸ್ಥಾನದಲ್ಲಿ ತಾನು ನಿಂತು ಯೋಚಿಸುವ ಮೂಲಕ ತಾನೇ ತನ್ನ ನಿರ್ಧಾರವನ್ನು ಬದಲಿಸುವ ರೀತಿ, ಅದನ್ನು ಕಾದಂಬರಿಯಲ್ಲಿ ತಂದಿರುವ ವಿಧಾನ ವಿಶೇಷವೆನಿಸುತ್ತದೆ.

ಬದುಕಿನ ನಡಿಗೆಯಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಘಟಿಸುವಾಗ ಅದಕ್ಕೆ ಕಾರಣರಾದ ಮುಖ್ಯ ಪುರುಷ ಪಾತ್ರಗಳು ಒಮ್ಮೆ ನಿಂತು ಯೋಚಿಸುವ, ಪಶ್ಚಾತ್ತಾಪ ಪಡುವ, ಅವಳ ಅಂಜದ ಮುನ್ನಡೆಯನ್ನು ಕಂಡು ಹೆಮ್ಮೆ ಪಡುವ ಸನ್ನಿವೇಶವು ಕತೆಯಲ್ಲಿ ಬಂದಿದೆ. ಇದು ಸ್ತ್ರೀ ಧ್ವನಿಗೆ ಗಟ್ಟಿತನವನ್ನು ನೀಡಿದೆ. ಸಹಜವಾಗಿಯೇ ಕಾಲ ತಂದೊಡ್ಡುವ ಸವಾಲುಗಳನ್ನು ಅತಿರೇಕಕ್ಕೆ ಹೋಗಲು ಬಿಡದೆ ತಾಳ್ಮೆಯಿಂದ ನಿಭಾಯಿಸುವ ವಿಧಾನವನ್ನು ಈ ಕಾದಂಬರಿ ತಿಳಿಸಿಕೊಡ್ತದೆ. ಸಹಜವಾಗಿ ಒದಗಿ ಬರುವ ವಿವರಗಳ ಜೊತೆಯಲ್ಲಿ ಬೇಕೆನಿಸಿದಲ್ಲಿ ಕೆಲವು ವಿವರಗಳನ್ನು ಕಲ್ಪಿಸಿಕೊಂಡು ಈಗಾಗಲೇ ತನ್ನ ಗ್ರಹಿಕೆಯಲ್ಲಿರುವ ಕೆಲವು ಅಂಶಗಳನ್ನು ಕಥೆಯ ಓಘಕ್ಕೆ ಭಂಗ ಬರದಂತೆ ಕಟ್ಟಿರುವ ರೀತಿಯು ಇದೊಂದು ಮೊದಲ ಕಾದಂಬರಿ ಎನ್ನುವುದನ್ನು ಮರೆಮಾಚಿಸಿದೆ.

ಸಹಜವಾಗಿಯೇ ನಮ್ಮದು ವರ್ಣ ವರ್ಗ ಜಾತಿ, ಲಿಂಗ ಮುಂತಾದವುಗಳ ಮೂಲಕ ಹರಿದು ಹಂಚಿಹೋಗಿರುವ ಸಮಾಜ. ಇದರಿಂದಾಗಿ ಪರಸ್ಪರರಲ್ಲಿ ಅನುಮಾನ,ಈರ್ಷ್ಯೆ, ತಿರಸ್ಕಾರ, ಭಯ, ಇವೆಲ್ಲ ಭಾವನಾತ್ಮಕ ಅಂಶಗಳು ಕಾದಂಬರಿಯಲ್ಲಿದೆ. ಸಂಬಂಧಗಳಲ್ಲಿ ಸಾಮಿಪ್ಯದ ಜೊತೆಯಲ್ಲೇ ಇರುವ ಅಂತರವನ್ನೂ ಕಾದಂಬರಿ ತೋರಿಸಿದೆ. ಸರಯೂ ಮತ್ತು ಆಕೆಯ ಪ್ರಿಯಕರನಾಗಿದ್ದ ವಿಶಾಲನ ಅಮ್ಮ ಶಾಲ್ಮಲಾ, ಸರಯೂ ಮತ್ತು ಸುಂದರ ಮಾಮನ ಹೆಂಡತಿ ಸುಕನ್ಯಾ ಇವರ ಸಂಬಂಧದಲ್ಲಿ ಇದು ಎದ್ದು ಕಾಣುತ್ತದೆ.

ಸಮಾಜದ ಹಲವು ಸಮುದಾಯಗಳನ್ನು ಪ್ರೀತಿಯಿಂದ, ತಿಳುವಳಿಕೆಯಿಂದ ಒಳಗೊಳ್ಳುವ ಗುಣ ಕಾದಂಬರಿಗೆ ಇದೆ. ಇಲ್ಲಿ ಮೀನುಗಾರರ ಸಮುದಾಯ, ಬ್ರಾಹ್ಮಣ ಸಮುದಾಯ, ಕನ್ನಡ, ಕೊಂಕಣಿ, ಮರಾಠಿ,ಗುಜರಾತಿ ಕುಟುಂಬ ಹೀಗೆ ಹಲವು ಸಂಸ್ಕೃತಿಯನ್ನು, ಪರಿಚಯಿಸುವ ಅನೇಕ ಅಂಶಗಳಿವೆ. ನಿರೂಪಣೆಯಲ್ಲಿ ಬಳಸಿರುವಂತಹ ಕಾವ್ಯಾತ್ಮಕ ಶೈಲಿ ಕಾದಂಬರಿಯ ರಸಾಸ್ವಾದವನ್ನು, ಓದುಗರ ರುಚಿ ಶುದ್ದಿಯನ್ನು ಹೆಚ್ಚಿಸುವಲ್ಲಿ ಸಫಲವಾಗಿದೆ.

ದೇಸೀ ಒರತೆ, ಆಧುನಿಕತೆಯ ನಿಖರತೆ ಇವೆರಡೂ ಕತೆಯಲ್ಲಿ ಹದವನ್ನು ಕಾಯ್ದುಕೊಂಡಿವೆ. ಒಟ್ಟಾರೆಯಾಗಿ ಪ್ರಸ್ತುತ ವಿದ್ಯಮಾನವನ್ನು, ಅದಕ್ಕೆ ಸ್ಪಂದಿಸಬೇಕಾದ ರೀತಿಯನ್ನು ಒಂದು ಸ್ತ್ರೀ ಪಾತ್ರದ ಮೂಲಕ ಸಾರ್ವತ್ರಿಕವಾಗಿಸಿದ, ಕನ್ನಡ ಸಾರಸ್ವತ ಲೋಕ ಆಪ್ತವಾಗಿ ಸ್ವೀಕರಿಸಬೇಕಾದ ಅಪರೂಪದ ಕಾದಂಬರಿ ನೀಲಿ ನಕ್ಷೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter