‘ಮೊಬೈಲ್ ಆಖ್ಯಾನ’

ಮೊಬೈಲ್, ಮೊಬೈಲ್, ಮೊಬೈಲ್……ಇಪ್ಪತ್ತೊಂದನೇ ಶತಮಾನದಲ್ಲಿ ಕಣ್ಣಿಗೆ ಕಾಣುವ ಜೊತೆ ಜೊತೆಗೆ ಕಿವಿಗಳಿಗೆ ಒಂದಿಷ್ಟು ಅಲ್ಲ ಬಹಳಷ್ಟು ಮನೋರಂಜನೆ ನೀಡುವ ಸಂವಹನ ಮಾಧ್ಯಮಗಳ ಪೈಕಿ ಈ ಮೊಬೈಲ್ ಅಂತೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಬಿಟ್ಟಿದೆ ಎಂದು ಉದ್ಘೋಷಿಸಿದರೆ ಬಹುಶಃ ತಪ್ಪಲ್ಲವೇ ಅಲ್ಲ ಬಿಡಿ. ಏಕೆ ಅಂತೀರಾ ? ಅಲ್ಲದೇ ಮತ್ತಿನ್ನೇನು ಪ್ರಿಯ ಓದುಗರೇ..? ಕಂಡಲ್ಲಿ, ಕೇಳುವಲ್ಲಿ, ಹೋದಲ್ಲಿ, ಬಂದಲ್ಲಿ ಅದೂ ಸಾಲದೇನೋ ಎಂಬಂತೆ ಮಲಗುವಲ್ಲಿ ಕೂಡ ತನ್ನ ಸ್ಥಾನವನ್ನು ಇನ್ನಿಲ್ಲದಂತೆ ಜರೂರು ಪಡಿಸುತ್ತಾ ಮೆಲ್ಲಮೆಲ್ಲನೆ ಬಂದರೂ ಆಳವಾಗಿ ಠಿಕಾಣಿ ಹೂಡಿದ ಅದೆಷ್ಟೋ ಸಮಾನು-ಸರಂಜಾಮುಗಳ ಪೈಕಿ ಈ ಮೊಬೈಲ್ ಎಂಬ ಮಾಯಾಜಾಲ ಹಿರಿದು ಎಂದೇ ಭಾಸವಾಗುತ್ತಿದೆ ನೋಡಿ. ಬಡವ-ಬಲ್ಲಿದ, ಹರೆಯದವರು-ಮುದುಕರು ಹೀಗೆ ಅವರಿವರೆಂಬ ವಯೋಭೇದವನ್ನು ತೋರದೇ ಎಲ್ಲೆಡೆಯೂ ಸಮಾನವಾಗಿ ಅಷ್ಟೇ ಸಮೂಹಿಕವಾಗಿ ವ್ಯಾಪಿಸಿದ ಏಕೈಕ ಆಸ್ತಿ ಎಂದರೆ ಅದು ಮೊಬೈಲ್ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ. ಹಾಲು ಕುಡಿಯುವ ಹಸುಳೆಗೂ ಮೊಬೈಲ್ ಎಂದರೆ ಪಂಚಪ್ರಾಣ ಇರಬೇಕು. ಕುಡಿದ ಹಾಲು ಬಹುಶಃ ಅದರ ಮೈಗೆ ಒಗ್ಗುವುದಕ್ಕೂ ಈ ಮೊಬೈಲಿಗೂ ಏನಾದರೂ ನಂಟೇ? ಹೀಗೊಂದು ಭಾವ ಕಾಡಿ ಕಾಡಿ ಪ್ರಶ್ನೆಯಾಗಿ ಟಿಸಿಲೊಡೆದರೂ ಕೂಡ ಇದೊಂದು ಉತ್ತರವಿರದ ಪ್ರಶ್ನೆಯೇ ಹೌದಷ್ಟೇ ?

ತಾಯಿಯ ಪುಟ್ಟ ಗರ್ಭದಲ್ಲಿ ಭ್ರೂಣವೊಂದು ಬೆಳೆಯುತ್ತಿರುವಾಗಲೇ ಮೊಬೈಲ್ ಪಾಠವನ್ನು ಸುಲಭವಾಗಿ ಕಲಿತು ಬಿಡುವಷ್ಟು ಚಾಣಾಕ್ಷತನವನ್ನ ಹೊಂದಿರುತ್ತದೆಯೋ ಏನೋ? ಇಲ್ಲವಾದರೆ ತೊದಲು ನುಡಿಗಳಿಗೆ ತನ್ನ ಜಿಹ್ವೆಯನ್ನು ತೊಡಗಿಸಿಕೊಳ್ಳುವ ಮೊದಲ ಪ್ರಯತ್ನದಲ್ಲಿ ಮಗುವು ಇರುವಾಗಲೇ ಮೊಬೈಲ್ ಬಳಕೆಯನ್ನು ಸರಿಸುಲಭವಾಗಿ ನಿರ್ವಹಿಸುತ್ತದೆ ಎಂದರೆ ಅದೇನು ಸಣ್ಣ ವಿಷಯವಲ್ಲ. ದಿನೇ ದಿನೇ ವೇಗದೂತದಂತೆ ಬೆಳೆಯುತ್ತಿರುವ ಆಧುನಿಕ ಕಾಲದಲ್ಲಿ ಎಲ್ಲದಕ್ಕೂ ಡೊನೇಷನ್, ಫೀಸು ಎಂದೆಲ್ಲಾ ಓಡಾಡುತ್ತಾ ವ್ಯಾಸಂಗ ನಿಮಿತ್ತ ಎರಡು ಮೂರು ವರ್ಷಗಳ ಮೊದಲೇ ಸೀಟು ಕಾದಿರಿಸುವ ವ್ಯವಸ್ಥೆಯನ್ನು ಇದೀಗ ನಾವಯ ಎಲ್ಲೆಂದರಲ್ಲಿ ಸರ್ವೇಸಾಮಾನ್ಯವಾಗಿ ನೋಡಬಹುದು. ಇಂತಹ ಜಂಜಾಟದಲ್ಲಿ ಹೆತ್ತವರು ಸಿಲುಕಿ ಸಿಲುಕಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಎಷ್ಟೆಲ್ಲಾ ಒದ್ದಾಡುತ್ತಿದ್ದಾರೆಂದರೆ ಪಾಪ..ಅವರಿಗಿಂತ ಮೊದಲೇ ಆಧುನೀಕ ಕಾಲದ ಚಿತ್ರಣವನ್ನು ಕೇವಲ ಮೊಬೈಲಿನಲ್ಲೇ ವೀಕ್ಷಿಸಿ ವಿವರಿಸುವಷ್ಟರ ಮಟ್ಟಿಗೆ ತಲುಪಿದ್ದಾರೆ ನಮ್ಮ 21ನೇ ಶತಮಾನದ ಕಂದಮ್ಮಗಳು.

‘ಸಾಮಾಜೀಕರಣ’ ಮಕ್ಕಳ ಭವಿಷ್ಯದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವಂತದ್ದು. ಸಮಾಜದಲ್ಲಿ ಸಂಘಜೀವಿಯಾಗಿ ಓರ್ವ ಮಗು ಹೇಗೆ ಬದುಕಬೇಕು, ಯಾವ ರೀತಿಯಲ್ಲಿ ವ್ಯವಹರಿಸಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸುವ ಕಲಿಕಾ ಪ್ರತಿಕ್ರಿಯೆಯನ್ನೇ ಸಾಮಾಜೀಕರಣ ಎಂದು ವ್ಯಾಖ್ಯಾನಿಸಬಹುದು. ಮಕ್ಕಳ ಮುಂದಿನ ಬದುಕು ಯಾವ ರೀತಿ ಹಸನಾಗಬೇಕೆಂಬ ದೂರದೃಷ್ಟಿಯ ನಿಲುವಿನಿಂದ ಹೆತ್ತವರು ಪುಟ್ಟ ವಯಸ್ಸಿನ ಆ ಮುಗ್ಧ ಮನಸ್ಸುಗಳಿಗೆ ಸಂಸ್ಕಾರ, ಸಂಸ್ಕøತಿ, ನೀತಿ, ನಿಯಮ, ಬದುಕುವ ಬಗೆ, ಬಾಳುವೆಯ ಪರಿಪಾಠ,ವಿವಿಧ ವಯೋಮಾನದವರೊಂದಿಗೆ ಹೇಗೆ – ಯಾವ ರೀತಿ ನಡೆದು ಕೊಳ್ಳಬೇಕೆಂಬುದನ್ನೆಲ್ಲಾ ತಿಳಿಸಿಕೊಡುವುದರಲ್ಲೇ ಹೈರಾಣವಾಗುತ್ತಾರೆಂದರೆ ಖಂಡಿತಾ ಇದು ಹೆತ್ತವರ ತಾಳ್ಮೆಗೆ ಸವಾಲೊಡ್ಡುವ ಸಂಗತಿಯೇ ಹೌದು.

ಆಧುನೀಕತೆಯ ಧಾವಂತದಲ್ಲಿ ತಂದೆ ತಾಯಿಯರಿಬ್ಬರೂ ಉದ್ಯೋಗಸ್ಥರೇ ಆಗಿರುವುದರಿಂದ ಬೆಳಗ್ಗಿನ ತರೇವಾರಿ ಕೆಲಸಗಳಲ್ಲಿ ಮನಸ್ಸಿದ್ದೋ ಇಲ್ಲದೆಯೋ ಅನಿವಾರ್ಯವಾಗಿ ತೊಡಗಿಸಿಕೊಳ್ಳುವ ಅದೆಷ್ಟೋ ಅಮ್ಮಂದಿರ ಪಾಲಿಗೆ ಮೊಬೈಲ್ ಆತ್ಯಾತ್ಮೀಯವಾದ ಸರಕಲ್ಲದೇ ಮತ್ತಿನ್ನೇನು ? ಸೀರೆ ಸೆರಗು ಹಿಡಿದು “ಅಮ್ಮ”..ಎನ್ನುತ್ತಲೇ ಅದೂ ಇದೂ ಎಂದು ಅಮ್ಮನ ಹಿಂದೆ ಮುಂದೆ ಸುತ್ತುತ್ತಾ ಘಳಿಗ್ಗೆಗೊಮ್ಮೆ ಚಟಪಟನೆ ಮಾತನಾಡುವ ಮಕ್ಕಳನ್ನು ಸುಮ್ಮನಿರುವಂತೆ ರಮಿಸಲು ಈ ಮೊಬೈಲ್ ಒಂದು ರಾಮಬಾಣವೇ ಹೌದು ಎಂದು ಉಲ್ಲೇಖಿಸಿದರೆ ಅದೇನು ಅತಿಶಯೋಕ್ತಿಯಲ್ಲ ಬಿಡಿ.

ಸಾವಿರಾರು ರುಪಾಯಿಗಳನ್ನು ಸುರಿದು ತಂದ ಐಶಾರಾಮಿ ಸೋಪಾಗಳ ಮೇಲೆ ಹಾಯಾಗಿ ಮಲಗಿದ ಕಂದಮ್ಮಗಳಿಗೆ ನಿರ್ಜೀವವಾದರೂ ಜೀವಕ್ಕೆ ಹತ್ತಿರವಾಗುವ ಮೊಬೈಲನ್ನು ಒಂದರೆ ಘಳಿಗೆಯೂ ತೊರೆದಿರಲಾಗದಷ್ಟೂ ವ್ಯಾಮೋಹ. ಆರಾಮವಾಗಿ ಈ ಧಾವಂತದ ಬದುಕಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ತಮ್ಮದೇ ಪ್ರಪಂಚದಲ್ಲಿ ಮುಳುಗಿರುವ ಮಕ್ಕಳಿಗೆ ಏನೇ ಅನಾಹುತಗಳು ಸಂಭವಿಸಿದರೂ ಅರಿವಿಗೆ ಬರುವುದಿಲ್ಲ ಎಂಬುದು ವಿಪರ್ಯಾಸದ ವಿಷಯವೇ ಸರಿ. ಗೂಗಲ್ ಪ್ಲೇಸ್ಟೋರ್ ಗೆ ಹೋದದ್ದೇ ತಡ ಹಿರಿಯರಿಗೂ ತಿಳಿದಿರದ ಅದೆಷ್ಟೋ ಯ್ಯಾಪ್ ಗಳನ್ನು ಸೆಕೆಂಡ್ ಒಂದರಲ್ಲಿ ಟೈಪಿಸಿ ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ತಮ್ಮ ಇಷ್ಟದ ಯ್ಯಾಪನ್ನು ಡೌನ್ಲೋಡ್ ಮಾಡಿದ ಸಂತೃಪ್ತ ಭಾವವನ್ನು ಅವರ ಮುಖದಲ್ಲಿ ಕಂಡಾಗಳೆಲ್ಲಾ ಅದೇನೋ ಸಾಹಸ ಮಾಡಿದ್ದಾರೆ ಎಂಬ ಹುಸಿ ಸಂಭ್ರಮ ಮೂಡದಿರಲು ಹೇಗೆ ತಾನೆ ಸಾಧ್ಯ ?

ಮೊದಲೆಲ್ಲಾ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಅಮ್ಮಂದಿರ ಮನೋಸ್ಥಿತಿ ಈಗೆಲ್ಲಾ ಪರಿವರ್ತನೆಯ ಹಾದಿ ಹಿಡಿದಿದೆ. ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು ಅಮ್ಮ ಕೊಡುವ ಕೈತುತ್ತು ಅದೆಷ್ಟು ಬೇಗ ಹೊಟ್ಟೆಯನ್ನು ಸೇರುತ್ತದೆ ಎಂದರೆ ಅಮ್ಮನಿಗೂ ಅಚ್ಚರಿಯಾಗುತ್ತದೆ ! “ಅರೆರೆ ಇಷ್ಟು ಬೇಗನೇ ತಟ್ಟೆ ಖಾಲಿಯಾದುದು ಹೇಗೆ ಎಂದು?”.. ರಚ್ಚೆ ಹಿಡಿದು ರೋಧಿಸುವ ಕಂದನನ್ನು ಸಮಾಧಾನಗೊಳಿಸಬೇಕಾದರೆ ಅಬ್ಬಬ್ಬಾ, ಸಾಕಪ್ಪಾ ಸಾಕು ಎನ್ನುವ ಕಾಲ ಇದೀಗ ಬದಲಾಗಿ ಮೊಬೈಲನ್ನೇ ಸಾಂತ್ವನಕ್ಕೆ ಬಳಸಿಕೊಳ್ಳುತ್ತಿರುವ (ಅ)ವ್ಯವಸ್ಥೆಗೆ ಏನೆನ್ನಬೇಕು ಎಂಬುದೇ ತೋಚುತ್ತಿಲ್ಲ. ಕಣ್ಣ ಅಂಚು ಕಂಬನಿಯ ಹನಿಯೊಂದನ್ನು ಜಿನುಗಿಸಿದ್ದೇ ತಡ ಬ್ಯಾಗಿನ ತಳದಲ್ಲಿ ಅವಿತಿದ್ದ ಮೊಬೈಲ್ ರಪ್ಪನೆ ತಾಯಿಯ ಕೈಯಿಂದ ಮಗುವಿನ ಮಡಿಲಿಗೆ ವರ್ಗಾಯಿಸಲ್ಪಡುವುದನ್ನು ಕಂಡಾಗಲೆಲ್ಲಾ ಅನ್ನಿಸುವುದು “ಅಬ್ಬಾ..ಮೊಬೈಲ್ ರಾಯನ ಮಹಿಮೆಗೆ ಅದೆಷ್ಟು ಪ್ರಶಂಸೆಯನ್ನು ಸಲ್ಲಿಸಿದರೂ ಕಡಿಮೆಯೇ” ಎಂದು.

ಮೂರು ರುಪಾಯಿಯ ಆ ಕಾಗದದಲ್ಲಿ ಮನಸ್ಸಿನ ಭಾವನೆಗಳಿಗೆ ಪದಗಳ ರೂಪ ಕೊಟ್ಟು ಸುದೀರ್ಘವಾಗಿ ಬರೆದು ಅಂಚೆ ಪೆಟ್ಟಿಗೆಗೆ ಹಾಕಿ ಪ್ರಿಯ ಅಂಚೆಯಣ್ಣನ ಮೂಲಕ ಆ ಪತ್ರ ತಲುಪ ಬೇಕಾದಲ್ಲಿಗೆ ತಲುಪಿ ಅತ್ತ ಕಡೆಯಿಂದ ಪ್ರತಿಕ್ರಿಯೆ ಬರುವ ತನಕವೂ ಮನಸ್ಸಿನಲ್ಲಿ ಅದೇನೋ ಆತಂಕ, ಗೊಂದಲ. ಅಂತೂ ಇಂತೂ ಮಳೆಯನ್ನು ನಿರೀಕ್ಷಿಸುವ ಚಾತಕಪಕ್ಷಿಯ ಕಾತುರತೆ ಸುರಿದ ಇಬ್ಬನಿಯ ತಂಬೆಲರಿನಲ್ಲಿ ತಣಿಯುವಂತೆ ಅಂಚೆಯಣ್ಣನ ದರ್ಶನ ಮತ್ತೊಮ್ಮೆ ಆಗುತ್ತಿದ್ದಂತೆ ನೆಮ್ಮದಿಯ ಭಾವ ಮನಸ್ಸಿನಲ್ಲಿ. ಕೈಸೇರಿದ ಪತ್ರವನ್ನು ಓದುವುದಕ್ಕೂ ಹಲವು ಬಾರಿ ಜಗಳವಾದದ್ದೂ ಇದೆ. ಅಷ್ಟೊಂದು ಕಾತುರ ಪತ್ರದ ಒಡಲನ್ನು ಆಲಿಂಗಿಸುವುದಕ್ಕೆ. ಆದರೆ ಈಗ ? ಎಲ್ಲವೂ ಅದೃಶ್ಯವಾಗಿದಯೇನೋ ಎಂಬ ಸಣ್ಣ ನೋವು ಮನವನ್ನು ಆಗ್ಗಾಗ್ಗೆ ತಿವಿಯದೇ ಇರುವುದಿಲ್ಲ. ಸೆಕೆಂಡೊಂದರಲ್ಲೇ ಮನೆಯಲ್ಲು ಕುಳಿತು ವಿಶ್ವದ ಮೂಲೆ ಮೂಲೆಗೂ ತೆರಳಿ ನಮ್ಮವರು, ತಮ್ಮವರೆಂದೆನಿಸಿ ಕೊಂಡವರೊಂದಿಗೆ ಹಾಯಾಗಿ ಮಾತಾಡಿ ಬರಬಹುದೆಂಬ ವ್ಯವಸ್ಥೆ ಒಂದರ್ಥದಲ್ಲಿ ಅಭಿವೃದ್ಧಿಯ ಮಹಾ ಪರ್ವದ ಇರುವಿಕೆಯನ್ನು ಬಿಂಬಿಸಿದರೆ ಇನ್ನೊಂದು ಕಡೆ ಭಾವನಾತ್ಮಕೆಯ ನೆಲೆ ಅದೆಲ್ಲೋ ಕುಸಿಯುತ್ತಿದೆ ಎಂಬ ಭೀತಿ ನನ್ನ ಅಂತರಾತ್ಮದಲ್ಲಿ.

ಹೀಗೊಮ್ಮೆ ನೆಂಟರ ವಿವಾಹ ಮಹೋತ್ಸದ ಅಂಗವಾಗಿ ನನ್ನೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಉದ್ದೇಶ ಪೂರ್ವಕವಾಗಿಯೇ ಎರಡು ದಿನಕ್ಕೆ ಮುಂಚಿತವಾಗಿ ಹೊರಟು ನಿಂತಿದ್ದೆ. ವಿವಾಹ ಎಂದ ಮೇಲೆ ಕೇಳಬೇಕೇ ? ಏನೋ ಹರುಷ..ಅದೇನೋ ಸಂಭ್ರಮ ಮನದ ಮೂಲೆ ಮೂಲೆಯಲ್ಲೂ. ಮದುವೆ ಮನೆ ತಲುಪಿದ ನಂತರ ಹೇಳುವುದಕ್ಕೇನಿದೆ ? ಅದು ಇದು ಎಂದು ಮನಸೋ ಇಚ್ಛೆ ಹರಟುತ್ತಾ ಸಮಯ ಸಾಗಿದುದರ ಪರಿವೆಯೂ ಇಲ್ಲವೇನೋ ಎಂಬಂತಿತ್ತು ಬದುಕು. ಮದುವೆಯ ದಿನ ಧಾರಾ ಮುಹೂರ್ತ ಬೆಳಗ್ಗೆ ಬೇಗನೇ ಇದ್ದುದಕ್ಕೆ ನಾನೂ ಬೇಗನೆ ತಯಾರಾಗಿದ್ದೆ. ಎಂದೂ ಫ್ಯಾಷನ್ ಜಗತ್ತಿನೆಡೆ ಮುಖ ಮಾಡದ ನಾನು ಅಂದೇ ತುಸು ಅಲಂಕಾರದತ್ತ ಮನ ಮಾಡಿದ್ದೆ. ಅಂತೂ ವರನ ದಿಬ್ಬಣ ಬಂತು, ವರೋಪಚಾರವೂ ಸಾಂಗವಾಗಿ ನೆರವೇರಿತು. ಎಲ್ಲೆಡೆಯೂ ಸಂತಸದ ವಾತಾವರಣ ಗೆಜ್ಜೆ ಕಟ್ಟಿ ಕುಣಿಯುತ್ತಿತ್ತು. ನನ್ನ ಗಮನ ಇದ್ದಕ್ಕಿದ್ದಂತೆ ಸಭಾಮಂಟಪದ ದೂರದ ಮೂಲೆಯೊಂದರಲ್ಲಿ ಸಪ್ಪೆ ಮುಖಮಾಡಿ ಕುಳಿತ ನನ್ನಕ್ಕನ ಮಗಳತ್ತ ಹರಿಯಿತು. ಪಾಪದ ಕೂಸು ಅದು ! ಮದುವೆ ಮನೆಯಲ್ಲಿ ನಾನು ಬಂದಾಗಿನಿಂದ ಗಮನಿಸಿದಂತೆ ಅತಿಯಾದ ಆಸಕ್ತಿಯಿಂದ ಓಡಾಡಿಕೊಂಡಿದ್ದ ಅವಳೇಕೆ ಇಂದು ಹೀಗಾದಳು ಎಂದು ನನ್ನ ಒಳಮನಸ್ಸು ಕೇಳದೇ ಉಳಿಯಲಿಲ್ಲ. ಹೀಗೊಂದು ಭಾವ ಮನಸ್ಸಿನಲ್ಲಿ ಇಣುಕಿದೊಡನೆಯೇ ಕಾರ್ಯಪ್ರವೃತ್ತಳಾದೆ. ಅವಳನ್ನು ಸಮೀಪಿಸುತ್ತಲೇ, “ಯಾಕೋ ಮರಿ ಏನಾಯ್ತು ? ಎಲ್ರೂ ಅವರವರ ಕೆಲಸದಲ್ಲಿ ಇದ್ದಾರೆ ಅಂತ ಬೇಜಾರಾ ? ಬಾ. ನಾನು ಬಂದೆ ಅಲ್ವಾ ನಡಿ ಹೋಗೋಣ.. ನಿಂಗಿಷ್ಟವಾದ ತಿಂಡಿ ಇದೆ ಇವತ್ತು ಗೊತ್ತಾ, ಬಾ ಕೊಡಿಸ್ತೇನೆ” ಎಂದು ಮೆದುದನಿಯಲ್ಲೇ ರಮಿಸುತ್ತಿದ್ದಂತೆಯೇ ಅವಳಿಗದೇನಾಯಿತೋ ಗೊತ್ತಿಲ್ಲ.

ಮರುಮಾತಿಗೆ “ಅಯ್ಯೋ ಚಿಕ್ಕಿ, ನಿಂಗೇನು ಗೊತ್ತು ? ನನ್ನ ಮೊಬೈಲ್ ಇದೆಯಲ್ವಾ ಅದರಲ್ಲಿ ನೆಟ್ ಪ್ಯಾಕೇನೋ ಇದೆ. ಆದ್ರೆ ಹಾಳಾದ್ದು ಇಲ್ಲಿ 4G ನೇ ಸಿಗಲ್ಲ. ನಂಗೆ ತುಂಬಾ ಬೋರ್ ಹೊಡೀತಿದೆ” ಎಂದು ಒಂದೇ ಉಸಿರಿಗೆ ತನ್ನ ವರ್ತನೆಗೆ ಸಬೂಬು ಕೊಟ್ಟು ಮತ್ತೆ ಅದೇ ನಿರ್ಜೀವ ವಸ್ತುವಿನೊಳಗೆ ಕಣ್ಣುಗಳನ್ನು ಹುದುಗಿಸಿ ಏನೋ ಅನ್ವೇಷಣೆಯಲ್ಲಿ ತೊಡಗಳಾರಂಭಿಸಿದಳು. 9ವರ್ಷದ ಪೋರಿಯ ಮಾತು ನನ್ನನ್ನು ತೀರಾ ಗೊಂದಲಕ್ಕೆ ಒಳಗಾಗುವಂತೆ ಮಾಡಿಬಿಟ್ಟಿತು. “ಅಲ್ಲಾ ಈ 4G ಸಿಗದ ಒಂದೇ ಒಂದು ಕಾರಣಕ್ಕೆ ಹೀಗೆ ಆಕಾಶವೇ ತಲೆಯ ಮೇಲೆ ಬಿದ್ದುಹೋಯಿತು ಎಂಬಂತೆ ಕೊರಗಿ ಕೂರುವುದಕ್ಕಾದರೂ ಏನು ಅರ್ಥವಿದೆ” ಎಂಬ ಪ್ರಶ್ನೆ ಮನಸ್ಸಿನಲ್ಲಿ ಅಲೆಅಲೆಯಾಗಿ ಮೂಡಿದ್ದು ಸುಳ್ಳಲ್ಲ. ಅವಳ ಈ ಬಗೆಯ ತಲೆಬುಡವಿಲ್ಲದ ಪ್ರಶ್ನಾ ವೈಖರಿಗೆ ಉತ್ತರಿಸುವುದು ಕೂಡ ವ್ಯರ್ಥ ಎಂದು ನಿರ್ಧರಿಸಿ ಮೆಲ್ಲನೆ ಜಾಗ ಖಾಲಿ ಮಾಡಿದೆ.

ಇನ್ನು ಮೊಬೈಲಿಗೆ ಊಟ ಮಾಡಿಸುವ ಪದ್ಧತಿ ಯಾವಾಗ ಬಂತೋ ? ಯಾರು ಬಲ್ಲರು ? ಅರೆರೆ..ಇದೇನು ಅಂತೀರಾ..! ಹೌದು ಮಿತ್ರರೇ, ಇಪ್ಪತ್ತೊಂದನೇ ಶತಮಾನದ ಹಲವು ಅದ್ಭುತಗಳ ಪೈಕಿ ಇದೂ ಒಂದು ನೋಡಿ. ಏನಾದರೂ ವಿಶೇಷ ಔತಣ ಕೂಟ, ಹೋಟೆಲ್ ಭೇಟಿಯಾಗಿ ಹಸಿವಿನಿಂದ ಕಂಗೆಟ್ಟ ಹೊಟ್ಟೆಯ ಹಸಿವಿನ ದಯನೀಯ ಕೂಗನ್ನು ಶಮನಪಡಿಸಲೋಸುಗ ಬಿಸಿಬಿಸಿಯಾದ ಇಡ್ಲಿ – ವಡೆಗೆ ಆರ್ಡರ್ ಮಾಡಿದಾಕ್ಷಣಕ್ಕೆ ಮೊಬೈಲ್ ಎಲ್ಲಿ ಎಂದು ಹುಡುಕುವ ಸಾಹಸಿಗರಿಗೇನೂ ಈ ಯುಗದಲ್ಲಿ ಬರಗಾಲವಿಲ್ಲ ಬಿಡಿ. ಸಪ್ಲೈ ಮಾಡುವ ಹೋಟೆಲ್ ಕಾರ್ಮಿಕರು ನಮ್ಮ ಮುಂದೆ ಹೊಗೆಯಾಡುವ ತಾಜಾ ತಿಂಡಿಯನ್ನು ತಂದಿಟ್ಟಾಕ್ಷಣ ಅದು ಮೊದಲಿಗೆ ತಿನಿಸಲ್ಪಡುವುದು ಸ್ಮಾರ್ಟ್ ಫೋನಿನ ಕ್ಯಾಮರಾ ಫ್ಲಾಶ್ ಬೆಳಕಿಗೇ ಅಲ್ಲವೇ ? ನಾನಾ ವಿಧದಲ್ಲಿ ಸೆರೆಹಿಡಿದ ಈ ಚಿತ್ರಗಳು ಇನ್ನೇನು ಬೆಚ್ಚಗೆ ಗ್ಯಾಲರಿಯಲ್ಲಿ ಕೂತು ಬಿಡಬೇಕು ಎನ್ನುವಷ್ಟರಲ್ಲಿ ಮೊಬೈಲ್ ನ ಸ್ಟೇಟಸ್ ಖಾತೆಗೆ ಅಪ್ಲೋಡ್ ಆಗಿಬಿಡುತ್ತದೆ ಹಲವರ ಬಾಯಲ್ಲಿ ನೀರೂರಿಸುವ ನೆಚ್ಚಿನ ಖಾದ್ಯವಾಗಿ. ಅಲ್ಲ ? ನಮ್ಮದೇ ದುಡಿಮೆಯಿಂದ ದುಡಿದ ಹಣದಿಂದ ನಮ್ಮ ಹಸಿವು ತಣಿಸುವ ತಿಂಡಿಗೂ ಮೊಬೈಲ್ ಕಾಟ ತಪ್ಪಲಿಲ್ಲ ಎಂಬ ಕೊರಗು ಈಗಲೂ ನನ್ನ ಮನಸ್ಸಿಗೆ.

ಮೊಬೈಲ್ ರಾಯನ ಅವಾಂತರಗಳಿಗೇನೂ ಕಮ್ಮಿಯಿಲ್ಲ ಬಿಡಿ. ಬದುಕಿನ ಹಲವಾರು ಸಂದರ್ಭಗಳಲ್ಲಿ ನಾನಾ ರೀತಿಯಲ್ಲಿ ಉಪಯೋಗಕಾರಿ ಆಗಿರುವ ಈ ಮೊಬೈಲ್ ನ ಇನ್ನೊಂದು ಮುಖ ತುಂಬಾ ಭೀಕರ ಎಂಬ ಕಟುಸತ್ಯವನ್ನಂತೂ ನಾವು ಮರೆಯಲೇಬಾರದು. ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಮೆಸೆಂಜರ್.. ಹೀಗೆ ಮೊಬೈಲ್ ನ ಮಡಿಲನ್ನು ತುಂಬಿದ ಹಲವಾರು ಹೊಚ್ಚಹೊಸ ಯ್ಯಾಪ್ ಗಳಲ್ಲಿ ಹರಿದಾಡುವ ಸಂದೇಶಗಳ Short form ಅದೆಷ್ಟು ಅನಾಹುತಗಳಿಗೆ ಮುನ್ನುಡಿ ಬರೆಯುವುದಿಲ್ಲ ? chatting ನಲ್ಲಿ ತೊಡಗುವ ಇತ್ತಂಡಗಳ ಪೈಕಿ ಒಂದು ತಂಡ ಮೆಸೇಜ್ ಗಳನ್ನು ಓದಿ ಗ್ರಹಿಸಿ ಕಳುಹಿಸುವ ಸಂದೇಶಗಳ ಅರ್ಥವನ್ನು ಇತ್ತ ಉಳಿದ ಇನ್ನೊಂದು ತಂಡ ಓದಲು ಹರಸಾಹಸ ಮಾಡಿ ಅರ್ಥೈಸಿಕೊಂಡರೂ ಅದರ ಅಂತಿಮ ಅರ್ಥ ಏನೆಂಬ ಗೊಂದಲಕ್ಕೆ ಬಿದ್ದು, ಮತ್ತೇನನ್ನೋ ಮರುಉತ್ತರವೆಂದು ಕಳುಹಿಸಿ ಅದು ಮಾಡುವ ಅನಾಹುತಗಳಿಗೆ ಮರುಗುವ ಮುಗ್ಧ ಮನಗಳು ಅದೆಷ್ಟೋ ? ಇನ್ನು ಮೊಬೈಲಿವ ಕೀಬೋರ್ಡ್‍ನಲ್ಲಿ ಟೈಪ್ ಮಾಡುವುದಕ್ಕೂ ಕೆಲವೊಮ್ಮೆ ಹಿಂದೆ ಬೀಳುವ ಸೋಮಾರಿಗಳು ಕಳುಹಿಸುವ ಎಮೋಜಿಗಳ ಮಹಿಮೆಯೂ ಅಷ್ಟರಲ್ಲೇ ಇದೆ. ಈ ಬಗೆಯ ಎಮೋಜಿ ಭಾಷೆಯನ್ನರಿಯದವರು ತಾವು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ಸಾಭೀತುಪಡಿಸುವುದಕ್ಕೆ ಮುಂದಾಗುತ್ತಾ ಎಮೋಜಿ ಭಾಷೆಯನ್ನು ಅರ್ಥೈಸಿಕೊಳ್ಳಲೆಂದೇ ಗೂಗಲ್ ಮಾಮನ ಸಹಾಯ ಕೇಳುವುದೂ ಇದೆ. ಇನ್ನು ಗಡಿಬಿಡಿಯಿಂದಲೋ ಅಥವಾ ತಮ್ಮಿಂದ ಇನ್ನೊಬ್ಬರ ಕೆಲಸಕ್ಕೆ ಕಿಂಚಿತ್ತೂ ತೊಂದರೆಯಾಗುವುದು ಬೇಡವೆಂಬ ನೆಲೆಯಿಂದ ಇಂದು ಮಾಡಿದ ಮೆಸೇಜ್ ಗಳನ್ನು ನೋಡುವುದಕ್ಕೂ ಪುರುಸೊತ್ತಿರದ ಅತ್ತ ಕಡೆಯವರು ಮತ್ತೆಂದೂ ಅವುಗಳನ್ನು ಕಂಡು ಕಾಲ ಮಿಂಚಿ ಹೋಯಿತೆಂದು ಅಳುವುದೋ, ದೂರುವುದೋ ಮಾಡಿಕೊಳ್ಳುತ್ತಾ ಜಗಳಕ್ಕೆ ನಾಂದಿ ಹಾಡಿದಾಗ ಬೇಕಿತ್ತೇ ಈ ಮೆಸೇಜ್ ಸಹವಾಸ ಎಂದು ಮನ ಮಿಡಿದು, ಇನ್ನೆಂದೂ ಈ ಮೆಸೇಜ್ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದ ಗಟ್ಟಿ ಮನಸ್ಸಿನವರೂ ಇದ್ದಾರೆ.

ಬಾಲ್ಯದ ದೋಸ್ತಿಗಳು ಸಿಕ್ಕರೆ ಅದರದ್ದು ಇನ್ನೊಂದು ಪುರಾಣ. ಆ ದಿನಗಳ ಮೆಲುಕು..ತುಂಟಾಟಗಳ ಅನಾವರಣ ಮಾಡುತ್ತಾ ಮಾಡುತ್ತಾ ಕೊನೆಗೆ ಬಂದು ನಿಲ್ಲುವ ಮಾತು, “ನಿನ್ಜೊತೆ ವಾಟ್ಸಪ್ ಇದೆ ತಾನೆ ? ನಂಬರ್ ಒಂದು ಕೊಟ್ಟು ಬಿಡೆ, ಫ್ರೀ ಇದ್ದಾಗ ಮೆಸೇಜಾದ್ರೂ ಮಾಡಬಹುದು ಅಲ್ವಾ ? ಈಗ ಮಾತಾಡ್ತಾ ನಿಲ್ಲೋಕೆ ಪುರುಸೊತ್ತಿಲ್ಲ ಕಣೇ, ಕೆಲಸ ರಾಶಿ ಬಿದ್ದಿದೆ ಮನೇಲಿ..” ಎಂದೆನ್ನುತ್ತಾ ನಂಬರ್ ಗಿಟ್ಟಸಿಕೊಳ್ಳುವ ಪರಿಯನ್ನು ನೋಡಿದರೆ ಅಬ್ಬಾ ! ಇವರ ಮಾತುಗಳೇ ಎಂದನಿಸದೇ ಇರಲಾರದು. ಅಲ್ಲದೇ ಮತ್ತಿನ್ನೇನು ಹೇಳಿ ? ಕೆಲಸದ ಒತ್ತಡ ಇದೆ ಎಂಬ ಮಾತಿಗೆ ನನ್ನದೇನೂ ಎರಡು ಮಾತಿಲ್ಲ. ಹಾಗೆಂದ ಮಾತ್ರಕ್ಕೆ ಏಕಮುಖಿ ಭಾವಗಳನ್ನು ವ್ಯಕ್ತಪಡಿಸಿ ಎದುರಿಗೆ ನಿಂತಿರುವ ವ್ಯಕ್ತಿಯ ಭಾವಗಳನ್ನು ಹಾಗೂ ಅವರು ನಿರ್ವಹಿಸುವ ಕೆಲಸಗಳನ್ನು ಪರಿಗಣಿಸದೆ ವ್ಯವಹರಿಸುವುದನ್ನು ಕಂಡಾಗ “ಯಾಕಪ್ಪಾ ಬೇಕಿತ್ತು ಇಂತಹವರ ಸಹವಾಸ” ಎಂಬ ಒಳಮನದ ಇಂಗಿತ ಸುಳ್ಳಲ್ಲವಷ್ಟೇ ?

ಮೊಬೈಲ್ ವಿರಹದ ಗೋಳನ್ನು ವ್ಯಾಖ್ಯಾನಿಸುವುದಕ್ಕೆ ಹೊರಟರೆ ಒಂದಿನಿತೂ ಸುಖವಿಲ್ಲ ಬಿಡಿ. ಮೊಬೈಲ್ ವ್ಯಾಮೋಹಕ್ಕೆ ಗಂಟುಬಿದ್ದು ಕೊನೆಗೆ ಅದರ ಅಗಲಿಕೆಯ ನೋವನ್ನು ಸಹಿಸಲಾರದೆ ತಮ್ಮ ಅತ್ಯಮೂಲ್ಯ ಜೀವಕ್ಕೆ ಕುತ್ತನ್ನು ತಂಡುಕೊಳ್ಳುವ ಬಗೆಯನ್ನು ಕಂಡಾಗ “ಛೇ.. ಬದುಕೆಂದರೆ ಏನೆಂಬ ಅರ್ಥವೇ ತಿಳಿಯದ ಇವರು ಹೀಗೂ ಬದುಕಿಗೊಂದು ಅಂತ್ಯ ಕಂಡುಕೊಳ್ಳುವುದೇ?” ಎಂಬ ಗೊಂದಲದ ಭಾವ ಮನವನ್ನು ಕಾಡದೇ ಇರುವುದಿಲ್ಲ. ಮೊನ್ನೆ ಪಕ್ಕದ ಮನೆಯ ಗೆಳತಿ ಪದ್ಮಜಾಳ 16ನೇ ವರ್ಷದ ಮುದ್ದಿನ ಕಣ್ಮಣಿ ‘ಕನ್ನಿಕಾ’ ಯಾಕೋ ಸಪ್ಪೆ ಮೋರೆ ಹಾಕಿಕೊಂಡು ಆಕಾಶವನ್ನೇ ದಿಟ್ಟಿಸಿ ನೋಡುತ್ತಿದ್ದಳು. ನಾನೇ ಕೊಂಚ ಆಸಕ್ತಿ ವಹಿಸಿ ವಿಚಾರಿಸಿದಾಗ ಅವಳು ಹೇಳಿದ ಮಾತು ಕೇಳಿ ಈ ವಯಸ್ಸಿಗೆ ಇಂತಹ ದ್ವೇಷವೇ ಎಂದೆನಿಸಿ ಬೆಪ್ಪಾದೆ. “ಬಿಡಿ ಅಕ್ಕ..ನಿಮಗೇನು ಗೊತ್ತು ? ನನ್ನ ಕಷ್ಟ ನನಗಷ್ಟೇ ಪ್ರೀತಿ ಎನ್ನುವ ಹಾಗೆ ಆಗಿದೆ ಪರಿಸ್ಥಿತಿ. ಲಾಕ್ ಡೌನು, ಅದೂ ಇದೂ ಅಂತ ಇಡೀ ಪ್ರಪಂಚಕ್ಕೇ ಸಾಕಷ್ಟು ಕಷ್ಟ – ನಷ್ಟ ಆಗಿಹೋಯಿತು ಅಂತ ಆನ್ಲೈನ್ ಕ್ಲಾಸ್ ಶುರುಮಾಡಿದ್ದು ನಿಮಗೂ ಗೊತ್ತೇ ಇದೆ. ಅದರ ನಂತರವೂ ಕೂಡ ಬೇರೆ ಬೇರೆ ಕೋಚಿಂಗು ಅಂತ ಸಾಕಷ್ಟು ಕ್ಲಾಸುಗಳು ಇದೀಗ ಆನ್ಲೈನ್ ನಲ್ಲೇ ನಡೀತಾ ಇರೋದು. ಇಷ್ಟೆಲ್ಲಾ ಗೊತ್ತಿದ್ದೂ ನನ್ನಪ್ಪ ಮಾತ್ರ ಇದಕ್ಕೆ ವಿರೋಧ ಹೇಳ್ತಾ ಇದ್ದಾರೆ ಗೊತ್ತ ? ನಾನು ನೋಡ್ತೇನೆ, ಅಪ್ಪನ ಹಟ ಮೇಲಾ ಅಥವಾ ನನ್ನದಾ ಅಂತ?” ಎಂದು ಒಂದೇ ಉಸಿರಿಗೆ ಉಸುರಿ ಏದುಸಿರು ಬಿಡತೊಡಗಿದ ಕನ್ನಿಕಾ ನನಗ್ಯಾಕೋ ಒಗಟಿನ ಮುದ್ದೆಯಾಗಿ ಗೋಚರಿಸಿದಳು. ಆ ವಿಷಯವನ್ನು ಅಲ್ಲಿಗೆ ಬಿಟ್ಟರೂ ಅದನ್ನು ಯಾಕೋ ನನ್ನ ಮಸ್ತಕದ ಪುಟಗಳಿಂದ ತೊರೆದು ಹಾಕುವ ಹಾಗಿರಲಿಲ್ಲವಷ್ಟೇ ? ಒಂದು ಸಂಜೆ ಟೆರೇಸ್ ನಲ್ಲಿ ಟೀ ಆಸ್ವಾದಿಸುತ್ತಾ ಕುಳಿತ ಕನ್ನಿಕಾಳ ತಂದೆಯನ್ನು ಅರಸಿ ಹೊರಟಿದ್ದೆ ಒಂದು ಸಣ್ಣ ಪತ್ತೇದಾರಿ ಕಾರ್ಯಕ್ಕೆ ಹೊರಟವಳಂತೆ. ತದೇಕ ಚಿತ್ತದಿಂದ ನನ್ನನ್ನೇ ದಿಟ್ಟಿಸಿದ ಕನ್ನಿಕಾಳ ತಂದೆ, “ವಾಸ್ತವ ಸಂಗತಿ ಇಷ್ಟೇ..ನಾನೇನೂ ಅವಳ ಯಾವುದೇ ಆನ್ಲೈನ್ ದಿನಚರಿಗೆ ಅಡ್ಡಿ ಬಂದಿಲ್ಲ..ಬರೋದೂ ಇಲ್ಲ. ನನ್ನ ಮೊಬೈಲನ್ನೇ ಬಳಸಿಕೊಳ್ಳಲು ತಿಳಿಸಿದೆ ಎಂಬ ಒಂದೇ ಕಾರಣಕ್ಕೆ ಅವಳ ಸಿಟ್ಟು. ಅವಳಿಗೆ ಅವಳದ್ದೇ ಆದ ಮೊಬೈಲ್ ಬೇಕಂತೆ. ಮೊದಲೇ ಇಲ್ಲಿ ಹಣಹೊಂದಿಸೋಕೆ ಆಗದೇ ಕಷ್ಟ ಪಡ್ತಾ ಇದ್ದೇನೆ..ಇದರ ನಡುವೆ ಅವಳದ್ದೊಂದು ಗೋಳು” ಎಂದು ಕ್ಷೀಣದನಿಯಲ್ಲಿ ಉಸುರಿ ಮೆತ್ತಗಾದರು. ಅವರ ಹವಣಿಸುವಿಕೆಯನ್ನು ಕಂಡು ನನಗೆ ಬಂದ ನಖಶಿಖಾಂತ ಕೋಪವನ್ನು ವ್ಯಕ್ತಪಡಿಸುವುದಾದರೂ ಯಾರಲ್ಲಿ ಎಂಬ ಅಸಹನೆಯಿಂದಲೇ ನಾನೂ ಮೌನಿಯಾಗಬೇಕಾಯಿತು.

ಮೊಬೈಲ್ ಮಹರಾಯ ಇಂದಿಲ್ಲದ ಸ್ಥಳಗಳೇ ಇಲ್ಲ.. ವಿಸ್ತರಿಸದ ಜಾಗಗಳೇ ಇಲ್ಲ. ಅನಾಯಾಸವಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ತನ್ನ ಪಾರುಪತ್ಯವನ್ನು ಸ್ಥಾಪಿಸಿದ ಮೊಬೈಲಿನ ಈ ಒಂದು ಬಗೆಯ ಸಾಹಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸದಿದ್ದರೆ ಆದೀತೇನು ? ಒಟ್ಟಿನಲ್ಲಿ ಮನೆಯಿಂದ ಹೊರಡಲು ಹಣವಿದೆಯೇ ಇಲ್ಲವೇ ಅದು ಮುಖ್ಯವಲ್ಲ. ಆದರೆ ಹ್ಯಾಂಡ್ ಬ್ಯಾಗಿನಲ್ಲಿ ಮೊಬೈಲಿನ ಠಿಕಾಣಿ ಭದ್ರವಾಗಿದೆಯೇ ಎಂದು ನೋಡಿಕೊಳ್ಳುವಷ್ಟರ ಮಟ್ಟಿಗೆ ಪ್ರಮುಖ ಪಾತ್ರ ವಹಿಸಿದೆ ಈ ಮೊಬೈಲ್. ಮೊಬೈಲ್, ಮೊಬೈಲ್.. ಎಂದು ಪ್ರಚಾರದಲ್ಲಿರುವ ನಾನಾ ಬಗೆಯ ವೈಖರಿಯನ್ನು ತನ್ನೊಳಗೆ ರೂಪಿಸಿಕೊಂಡು ಮೆರೆಯುತ್ತಿರುವ ಈ ಒಂದು ಮಾಯಾ ಸಾಧನದಲ್ಲಿ ಅಡಗಿರುವ ಸದ್ವಿನಿಯೋಗದ ಬಗೆಗಳು ಕೂಡ ಬಹಳಷ್ಟು. ಪುಟ್ಟದಾದ ಒಡಲೊಳಗೆ ಅದೆಷ್ಟೋ ವಿಚಾರಗಳನ್ನು ಹುದುಗಿಸಿ ನಾನಾ ಶೈಲಿಯಲ್ಲಿ ಭಿನ್ನ ಭಿನ್ನವಾಗಿ ಅಸ್ತಿತ್ವಕ್ಕೆ ಬರುತ್ತಿರುವ ಮೊಬೈಲಿನೊಳಗೆ ಇರುವ ಉತ್ತಮ ವಿಚಾರಗಳನ್ನು ಕಣಕಣವಾಗಿ ಸೂಕ್ಷ್ಮೀಕರಿಸುವ ಮೂಲಕ ನಮ್ಮ ಚಿಂತನೆಗಳು ಬೆಳೆಯುವಂತಾದಾಗಲೇ ಮೊಬೈಲಿನ ಇರುವಿಕೆಗೂ ಒಂದು ರೀತಿಯ ಮೌಲ್ಯ ಹಾಗೂ ಸಾರ್ಥಕ್ಯ..

  • ನಯನ. ಜಿ. ಎಸ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter