ವೈಕಂ ಮುಹಮ್ಮದ್ ಬಷೀರ್ ಅವರ ‘ಪ್ರೇಮಪತ್ರ’

ಕೇರಳದ ಪ್ರಸಿದ್ಧ ಲೇಖಕರಾದ ವೈಕಂ ಮುಹಮ್ಮದ್ ಬಷೀರ್ ಅವರು ಮಲಯಾಳಂನಲ್ಲಿ ಮುಸ್ಲಿಂ ಸಂವೇದನೆಯನ್ನು ತಂದ ಮೊದಲಿಗರು. ಮುಸ್ಲಿಂ ಸಂಸ್ಕೃತಿಯ ಅನಾವರಣವನ್ನು ಮಾಡುವುದರೊಂದಿಗೆ ತಮ್ಮ ಸಮುದಾಯದವರೂ ಒಳಗೊಂಡಂತೆ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಮೂಢರು, ಸೋಗಲಾಡಿ ರಾಜಕಾರಣಿಗಳು, ಹುಸಿ ಕ್ರಾಂತಿಕಾರಿಗಳನ್ನು ಚಿತ್ರಿಸಿದರು. ಎಲ್ಲಾ ಮತಧರ್ಮಗಳಲ್ಲಿರುವ ಒಳಿತನ್ನು ಸ್ವೀಕರಿಸುವುದರೊಂದಿಗೆ ಕೆಡುಕುಗಳನ್ನು ವಿರೋಧಿಸಿದರು. ಎಲ್ಲೂ ರೊಚ್ಚು, ಆವೇಶ ಮತ್ತು ಅಬ್ಬರಗಳಿಲ್ಲ. ಯಾಕೆಂದರೆ ಅವರಲ್ಲಿರುವ ಹಾಸ್ಯ ಪ್ರಜ್ಞೆಯು ಭಾವಾತಿರೇಕ ಮತ್ತು ಅತಿಯಾದ ಅದರ್ಶಗಳಿಗೆ ಕಟ್ಟೆಯನ್ನು ಕಟ್ಟಿತು. ವ್ಯವಸ್ಥೆಯನ್ನು ವಿರೋಧಿಸಿ ಬರೆಯುವಾಗ ಅವರು ಕ್ರಾಂತಿಕಾರಿ ಎನಿಸಿಕೊಳ್ಳದೆ ಮಾನವ ಪ್ರೇಮಿ ಎನಿಸಿಕೊಂಡರು. ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕøತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯವು ಸದಾ ಜೀವಂತವಾಗಿರುತ್ತದೆ. ಆದ್ದರಿಂದ ಮೋಹನ ಕುಂಟಾರ್ ಅವರು ವೈಕಂ ಮುಹಮ್ಮದ್ ಬಷೀರ್ ಅವರ ಇಪ್ಪತ್ತೈದು ಕತೆಗಳನ್ನು ಅನುವಾದಿಸಿ ‘ಪ್ರೇಮಪತ್ರ’ ಎಂಬ ಹೆಸರಿನಲ್ಲಿ ಸಂಕಲನವನ್ನು ಹೊರತಂದಿದ್ದು 2021ನೇ ಸಾಲಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನವನ್ನು ಪಡೆದುಕೊಂಡಿದೆ.

ಮೋಹನ ಕುಂಟಾರ್

ಇಲ್ಲಿನ ಪ್ರಾತಿನಿಧಿಕ ಕತೆಯಾಗಿರುವ ‘ಪ್ರೇಮಪತ್ರ’ದ ನಾಯಕ ಕೇಶವನು ತನ್ನ ಬಾಡಿಗೆ ಮನೆಯ ನೆರೆಹೊರೆಯವಳಾದ ಸಾರಾಮ್ಮ ಎಂಬ ಕ್ರೈಸ್ತ ಯುವತಿಯನ್ನು ಪ್ರೀತಿಸುತ್ತಾನೆ. ಆಕೆಗೆ ಉದ್ಯೋಗವನ್ನು ಮಾಡಬೇಕೆಂಬ ಆಸೆಯು ಇರುತ್ತದೆ. ತಕ್ಕ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ ಕೇಶವನು ತನ್ನನ್ನು ಪ್ರೀತಿಸುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡರೆ ಪ್ರತಿ ತಿಂಗಳೂ ಸಂಬಳವನ್ನು ಕೊಡುವುದಾಗಿ ಹೇಳುತ್ತಾನೆ. ನವಿರಾದ ನಿರೂಪಣೆ ಮತ್ತು ಸರಸ ಸಲ್ಲಾಪಗಳ ಮೂಲಕ ಗಮನ ಸೆಳೆಯುವ ಕತೆಯು ಭಿನ್ನ ಕೋಮುಗಳಿಗೆ ಸೇರಿದ ಪ್ರೇಮಿಗಳ ಮಿಲನದೊಂದಿಗೆ ಮುಕ್ತಾಯವಾಗುತ್ತದೆ. ‘ಹೂಬಾಳೆ ಹಣ್ಣು’ ಇದರ ಮುಂದಿನ ಅಧ್ಯಾಯದಂತಿದೆ. ಜಮೀಲಾ ಬೀಬಿಯನ್ನು ಪ್ರೀತಿಸಿ ಮದುವೆಯಾದ ಅಬ್ದುಲ್ ಖಾದರನ ಬದುಕಿನಲ್ಲಿ ಏಳುವ ಸಾಂಸಾರಿಕ ರಂಪ ಮತ್ತು ಗುಲ್ಲು ಇದರ ವಸ್ತುವಾಗಿದೆ. ಮದುವೆಯಾದ ಹೊಸತರಲ್ಲಿ ಹೂಬಾಳೆ ಹಣ್ಣನ್ನು ತರಬೇಕೆಂದು ಹೇಳಿದ ಜಮೀಲಾ ಬೀಬಿಯಯ ಮಾತಿಗೆ ಅನುಸಾರವಾಗಿ ಅಂಗಡಿಗೆ ಹೋದ ಅಬ್ದುಲ್ ಖಾದರನಿಗೆ ಹೂಬಾಳೆ ಹಣ್ಣುಗಳು ಸಿಗದೆ ಕಿತ್ತಳೆಯ ಹಣ್ಣುಗಳನ್ನು ಖರೀದಿಸಿ ಹಿಂತಿರುವಾಗ ದೋಣಿಯು ಸಿಗದಿದ್ದುದರಿಂದ ಹೊಳೆಯನ್ನು ಈಜಿ ದಡವನ್ನು ಸೇರಿದರೂ ದಾರಿತಪ್ಪಿ, ಕಿತ್ತಳೆಯ ಹಣ್ಣುಗಳನ್ನು ಭದ್ರವಾಗಿರಿಸಿಕೊಂಡು ಹೆಂಡತಿಯ ಬಳಿ ಬಂದಾಗ ತನಗೆ ಹೂಬಾಳೆ ಹಣ್ಣೇ ಬೇಕು ಎಂದು ಹಟವನ್ನು ಮಾಡುತ್ತಾಳೆ. ತಾನು ಇಷ್ಟು ಕಷ್ಟಪಟ್ಟು ತಂದುದನ್ನು ತಿರಸ್ಕಾರ ಭಾವದಿಂದ ಕಂಡ ಹೆಂಡತಿಯ ಮೇಲೆ ಸಿಟ್ಟುಗೊಂಡ ಗಂಡನು ಆಕೆಗೆ ಬೆತ್ತದಿಂದ ಹೊಡೆದು ಕಿತ್ತಳೆ ಹಣ್ಣುಗಳನ್ನು ತಿನ್ನಿಸುತ್ತಾನೆ. ಕೊನೆಗೆ ಅವರಿಗೆ ವಯಸ್ಸಾಗಿ ಮಕ್ಕಳು ಮೊಮ್ಮಕ್ಕಳ ಜೊತೆ ಕಾಲ ಕಳೆಯುವಾಗ ಅಬ್ದುಲ್ ಖಾದರನು ಜಮೀಲಾಬೀಬಿಯಲ್ಲಿ ಕೇಳುತ್ತಾನೆ.
“ಮಹಾರಾಣಿ, ಹಿಂದೊಮ್ಮೆ ನೀನು ಹೂಬಾಳೆ ಹಣ್ಣು ಬೇಕೆಂದು ಕೇಳಿದಾಗ, ನದಿ ಈಜಿ ನಾನೇನು ತಂದು ಕೊಟ್ಟುದು?
ಜಮೀಲಾಬಿ ನಗುತ್ತಾ ಹೇಳುವಳು – ಹೂಬಾಳೆ ಹಣ್ಣು
ಯಜಮಾನ ಕೇಳುವನು – ಅದು ಹೇಗಿತ್ತು?
ಯಜಮಾನತಿ ಹೇಳುವಳು- ಓರೆಂಜಿನಂತೆ ದುಂಡಗಿತ್ತು” (ಪುಟ 127)
ಗಂಡ ಹೆಂಡತಿಯರ ನಡುವಿನ ಅಪಾರ ಪ್ರೀತಿ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಗಂಡಸಿನ ಯಜಮಾನ್ಯ ಧೋರಣೆಯನ್ನು ಹಾಸ್ಯಮಯವಾಗಿ ಚಿತ್ರಿಸಿರುವ ಬಷೀರರು ಪುರುಷರ ಆಧಿಪತ್ಯವನ್ನು ಪ್ರತಿನಿಧಿಸುತ್ತಿರುವರೇ ಅಥವಾ ತಟಸ್ಥರಾಗಿರುವರೇ ಎಂದು ಓದುಗರೇ ಊಹಿಸಬೇಕಾಗಿದೆ. ‘ಐಷುಕುಟ್ಟಿ’ ಎಂಬ ಕತೆಯಲ್ಲಿ ಹೆಣ್ಣು ಹೆರಿಗೆಯ ನೋವಿನಲ್ಲಿ ಬಳಲುತ್ತಿರುವ ಹೊತ್ತಿನಲ್ಲೂ ತನ್ನ ಹಟವನ್ನು ಸಾಧಿಸಿಕೊಂಡ ಸ್ವಾರಸ್ಯಕರ ಘಟನೆಯ ನಿರೂಪಣೆಯಿದೆ. ಗಂಡನ ತಮ್ಮನ ಹೆಂಡತಿಯು ಡಾಕ್ಟರನ ಸಮ್ಮುಖದಲ್ಲಿ ಹೆತ್ತಿರುವುದರಿಂದ ತನ್ನ ಹೆರಿಗೆಯ ಸಂದರ್ಭದಲ್ಲಿ ಸೂಲಗಿತ್ತಿಯು ಪಕ್ಕದಲ್ಲಿದ್ದರೂ ಮಾರಣಾಂತಿಕವಾಗಿ ಚೀರುತ್ತಾ ಡಾಕ್ಟರನ್ನು ಕರೆತರುವಂತೆ ಹಟತೊಟ್ಟು ಹೆರುವ ಸನ್ನಿವೇಶವು ಇಲ್ಲಿದೆ. ಗಂಡುಮಗುವನ್ನು ಹೆತ್ತು ಹಗುರವಾಗುವುದಕ್ಕಿಂತಲೂ ಡಾಕ್ಟರ್ ಬಂದ ಮೇಲೆಯೇ ಹೆತ್ತಿರುವೆನೆಂಬ ಕಾರಣಕ್ಕಾಗಿ ನೆಮ್ಮದಿಯನ್ನು ಅನುಭವಿಸುತ್ತಾಳೆ. ಎಸ್. ಎಲ್. ಭೈರಪ್ಪನವರ ‘ಜಲಪಾತ’ ಕಾದಂಬರಿ ಮತ್ತು ಕೆ. ಪಿ. ಸುಧೀರ ಅವರ ‘ಜನ್ಮಸಾರ್ಥಕ್ಯ’ ಎಂಬ ಕತೆಯಲ್ಲಿರುವಂತೆ ಹೆರುವ ಪ್ರಕ್ರಿಯೆಯ ಗಂಭೀರ ಸ್ವರೂಪವು ಇಲ್ಲಿಲ್ಲ. ಅಪಾರ ಜಾಣ್ಮೆ ಮತ್ತು ಬುದ್ಧಿಮತ್ತೆಯನ್ನು ಹುದುಗಿಸಿಕೊಂಡಿರುವ ಹೆಣ್ಣು ಸೂಕ್ತ ಸಮಯವನ್ನು ನೋಡಿ ಉದ್ದೇಶವನ್ನು ಈಡೇರಿಸಿಕೊಳ್ಳುವ ಚಾಕಚಕ್ಯತೆಯನ್ನು ಮನಗಾಣಿಸುವ ವಿಚಾರ ಮುಖ್ಯವಾಗುತ್ತದೆ. ಸಂಸಾರದಲ್ಲಿ ನಡೆಯುವ ಘಟನೆಗಳು, ಕುಟುಂಬದ ಸದಸ್ಯರು ಮಾಡುವ ತಪ್ಪನ್ನು ನೇರವಾಗಿ ಹೇಳಿದರೆ ಮನಸ್ಸಿನಲ್ಲಿ ಸಿಟ್ಟು, ಬೇಸರ ತಲೆದೋರುವ ಸಾಧ್ಯತೆಗಳು ಇರುವುದರಿಂದ ಹಾಸ್ಯದ ಲೇಪನವನ್ನು ಮಾಡಿ ಯಾರಿಗೂ ನೋವಾಗದ ರೀತಿಯಲ್ಲಿ ಸಮಾಜದ ಹುಳುಕುಗಳನ್ನು ಹೇಳುವ ಬಷೀರತನದ ಅಂಗವಾಗಿ ಈ ಕತೆಯು ಮೂಡಿ ಬಂದಿದೆ. ಆದರೆ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳನ್ನು ವಸ್ತುವನ್ನಾಗಿರಿಸಿ ಕೊಂಡು ಬರೆದ ಕತೆಗಳಲ್ಲಿ ಅವರ ಹಾಸ್ಯದ ಸ್ವರೂಪವು ಬೇರೆಯೇ ಆಯಾಮವನ್ನು ಪಡೆದುಕೊಂಡು ವ್ಯಮಗ್ಯ, ವಿಡಂಬನೆ ಮತ್ತು ಕಟಕಿಗಳ ಮೊನಚನ್ನು ಪಡೆದುಕೊಳ್ಳುತ್ತವೆ. ‘ಅಟ್ಟೆಕಾಲ ಮಮ್ಮುಂಞ’ ಎಂಬ ಕತೆಯು ಮೇಲ್ನೋಟಕ್ಕೆ ಹೆಣ್ಣನ್ನು ಅವಮಾನಿಸುವಂತೆ ಕಾಣುತ್ತಿದ್ದರೂ ಅವುಗಳಿಗೆ ಅದನ್ನು ಮೀರಿದ ನೆಲೆಯಿದೆ. ಏನನ್ನೂ ಸಾಧಿಸದೆ ಬಾಯಿಬಡುಕತನವನ್ನು ಬಂಡವಾಳವನ್ನಾಗಿರಿಸಿಕೊಂಡ ವ್ಯಕ್ತಿಗಳು, ರಾಜಕಾರಣಿಗಳು ಅವರ ಕತೆಗಳ ಕೇಂದ್ರದಲ್ಲಿದ್ದಾರೆ.
‘ಚಿನ್ನದುಂಗುರ’ದ ನಾಯಕನು ಹುಟ್ಟುವ ಮಗುವಿನ ಲಿಂಗವನ್ನು ಮೊದಲೇ ಊಹಿಸಿ ಹೆಂಡತಿ ಮತ್ತು ಗೆಳೆಯರೊಂದಿಗೆ ಪಂಥವನ್ನು ಕಟ್ಟಿ ಗೇಲಿಗೊಳಗಾಗುವುದು ಈ ಕತೆಯ ವಸ್ತು. ಮಗು ಗಂಡಾದರೆ ಹೆಂಡತಿಯು ಆಕೆಯ ಬೆರಳಿನಲ್ಲಿರುವ ಉಂಗುರವನ್ನು ಕೊಡಬೇಕೆಂದೂ, ಮಗು ಹೆಣ್ಣಾದರೆ ತಾನು ಐವತ್ತು ರೂಪಾಯಿಗಳನ್ನು ಹೆಂಡತಿಗೆ ಕೊಡುವೆನೆಂದೂ ಒಪ್ಪಂದವಾಗುತ್ತದೆ. ಗೆಳೆಯರಲ್ಲೂ ಇದೇ ಪಂಥವನ್ನು ಕಟ್ಟುತ್ತಾನೆ. ಹುಟ್ಟಿದ ಮಗು ಹೆಣ್ಣಾಗಿದ್ದರೂ ಗಂಡು ಮಗು ಹುಟ್ಟಿದೆ ಎಂದು ಸುಳ್ಳು ಹೇಳಿ ಹೆತ್ತು ದಣಿದು ಮಲಗಿದ್ದ ಹೆಂಡತಿಯ ಬೆರಳಿನಿಂದ ಉಂಗುರವನ್ನು ಕಳಚಿ ತೆಗೆದು ಗೆಳೆಯರ ಬಳಿಯಿಂದ ಐವತ್ತು ರೂಪಾಯಿಗಳನ್ನು ವಸೂಲು ಮಾಡುತ್ತಾನೆ. ಮನೆಗೆ ಬಂದಾಗ ಸತ್ಯದ ಅರಿವಾಗಿ ಮುಜುಗರಕ್ಕೆ ಒಳಗಾಗುತ್ತಾನೆ. ಮಾಮೂಲು ರಚನೆಯಾಗಿ ಗಮನಕ್ಕೆ ಬರುವ ಈ ಕತೆಯು ಅನುವಾದ ಕಲೆಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ಮುಸಲ್ಮಾನನಾದ ನಾಯಕನು ತನ್ನ ಹೆಂಡತಿಯನ್ನು ‘ಕೆಟ್ಟಿಯೋಳ್’ ಎನ್ನುವ ಬದಲು ನಂಬೂದಿರಿ ಬ್ರಾಹ್ಮಣರ ಪರಿಭಾಷೆಯಲ್ಲಿ ‘ವೇಳಿ’ ಎನ್ನುತ್ತಾನೆ. ನಂಬೂದಿರಿ ಬ್ರಾಹ್ಮಣರ ಕುಟುಂಬದಲ್ಲಿ ಹಿರಿಯ ಮಗನಿಗೆ ಮಾತ್ರ ಸ್ವಜಾತೀಯ ಕನ್ಯೆಯನ್ನು ಮದುವೆಯಾಗುವ ಅವಕಾಶವಿದ್ದು ಮಿಕ್ಕವರು ‘ಸಂಬಂಧ’ (ಕೂಡಿಕೆ) ಮಾಡಿಕೊಳ್ಳಬೇಕಿತ್ತು. ಇಲ್ಲಿನ ನಾಯಕನು ಮುಸಲ್ಮಾನನಾಗಿದ್ದುಕೊಂಡು ಸ್ವಜಾತೀಯ ಕನ್ಯೆಯನ್ನು ಮದುವೆಯಾಗಿರುವುದರಿಂದ ‘ವೇಳಿ’ ಎಂದು ವ್ಯಂಗ್ಯ ಮಾಡುತ್ತಾನೆ. ಬ್ರಾಹ್ಮಣ ಮತ್ತು ಮುಸಲ್ಮಾನರು ಸ್ವಜಾತಿಯ ಕನ್ಯೆಯನ್ನು ಮದುವೆಯಾಗುವ ವಿಧಾನವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವ ಮೂಲಕ ಭೇದವನ್ನು ಕಲ್ಪಿಸಬೇಕಾಗಿಲ್ಲ ಎಂಬ ಧ್ವನಿಯು ಇಲ್ಲಿದೆ.

‘ಆನೆಬಾಚನೂ ಹೊನ್ನಶಿಲುಬೆಯೂ’ ಎಂಬ ಕತೆಯು ವೈಚಾರಿಕ ಕೃತಿಯಾಗಿದೆ. ಇದು ಆನೆಬಾಚ ರಾಮನ್ ನಾಯರ್ ಮತ್ತು ಹೊನ್ನಶಿಲುಬೆ ತೋಮ ಎಂಬ ಕಳ್ಳರ ಕತೆ ಎಂಬುದಕ್ಕಷ್ಟೇ ಸೀಮಿತವಾಗದೆ ಶ್ರೀಮಂತರ ಆಡಂಬರ, ಧರ್ಮದ ಹೆಸರಿನಲ್ಲಿ ಮಾಡುವ ಮೋಸ ವಂಚನೆಗಳು ಮುಖ್ಯವಾಗುತ್ತವೆ. ಸ್ನೇಹಿತನಿಗೆ ತನ್ನ ಮಗಳ ಮದುವೆಯನ್ನು ಮಾಡಲು ಕಾಸಿಲ್ಲದಿದ್ದಾಗ ತೋಮನು ಇಗರ್ಜಿಯ ಹೊನ್ನ ಶಿಲುಬೆಯನ್ನು ಕದ್ದು, ಮಾರಾಟವನ್ನು ಮಾಡಿ ಆ ಹಣದ ಮೂಲಕ ಸ್ನೇಹಿತನ ಮಗಳ ಮದುವೆಯು ನೆರವೇರಲು ಕಾರಣನಾಗುತ್ತಾನೆ. ಆಮೇಲೆ ಪೋಲೀಸರಿಗೆ ಶರಣಾಗಿ, ವಿಚಾರಣೆಯ ಸಂದರ್ಬದಲ್ಲಿ ‘ಏಸು ಏರಿದ್ದು ಮರದ ಶಿಲುಬೆಗೆ. ಇಗರ್ಜಿಗೇಕೆ ಚಿನ್ನದ ಶಿಲುಬೆ?’ ಎಂದು ನೇರವಾಗಿ ಪ್ರಶ್ನಿಸುತ್ತಾನೆ. ಹೊಟ್ಟೆಗೆ ಆಹಾರವಿಲ್ಲದೆ, ಕೈಯಲ್ಲಿ ಕಾಸಿಲ್ಲದಿರುವ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಆಡಂಬರದ ಕ್ರಿಯೆಗಳು ವ್ಯರ್ಥವೆಂದು ಧ್ವನಿಸುವ ಈ ಮಾತಿಗೆ ಧಾರ್ಮಿಕ ಆಚರಣೆಗಳ ಮೂಲವನ್ನು ಅಲುಗಾಡಿಸುವ ಶಕ್ತಿಯಿದೆ. ಕನ್ನಡದ ಬಂಡಾಯ ಲೇಖಕ ಕುಂ. ವೀ ಅವರ ‘ಕಿವುಡ ನಾಯಿಯಾದ ಪ್ರಸಂಗ’ ಎಂಬ ಕತೆಯಲ್ಲಿ ಬರುವ ಸನ್ನಿವೇಶದೊಂದಿಗೆ ಇದನ್ನು ಹೋಲಿಸಬಹುದು. ಧಾರ್ಮಿಕ ವಿಧಿ ವಿಧಾನಗಳಿಗೆ ಅನುಸಾರವಾಗಿ ಹೆಣದ ಕಾಲಬುಡದಲ್ಲಿರಿಸಿದ್ದ ತೆಂಗಿನಕಾಯಿಗಳಿಗೆ ಕಿವುಡನು ಕೈಹಚ್ಚುವ ಕ್ರಿಯೆಯೂ ಇದೇ ಆಶಯವನ್ನು ವ್ಯಕ್ತಪಡಿಸುತ್ತದೆ.

ಬಷೀರ್ ಅವರು ತಮ್ಮ ಕತೆಗಳನ್ನು ಹಾಸ್ಯಮಯವಾಗಿ ನಿರೂಪಿಸುವುದರಿಂದ ಸಮಸ್ಯೆಯು ಗಂಭೀರತೆಯನ್ನು ಕಳೆದುಕೊಂಡು ಹಗುರವೆನಿಸಿಕೊಳ್ಳುವುದು ನಿಜವಾದರೂ ಇದಕ್ಕೆ ಅಪವಾದವೆನಿಸುವ ಕತೆಗಳೂ ಇವೆ. ‘ಪೋಲೀಸ್ ಪೇದೆಯ ಮಗಳು’ ಎಂಬ ಕತೆಯಲ್ಲಿ ಗಂಡು ಹೆಣ್ಣಿನ ಪ್ರೇಮದೊಂದಿಗೆ ಮಾನವೀಯ ಅನುಕಂಪ ಮತ್ತು ಔದಾರ್ಯ ಮುಂತಾದ ಭಾವಗಳೊಡನೆ ಕ್ರಾಂತಿಕಾರಿಯ ದೇಶಪ್ರೇಮವು ಬೆಸೆದುಕೊಂಡಿದೆ. ‘ಅಮ್ಮ’ ಎಂಬ ಕತೆಯು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮೆನೆಯನ್ನು ಸೇರಿದ ಮಗನು ತೀರಿಕೊಂಡ ವಿಚಾರವನ್ನು ತಿಳಿಯದೆ ಅವನಿಗಾಗಿ ಕಾಯುತ್ತಿರುವ ತಾಯಿಯ ಹೃದಯವನ್ನು ತೆರೆದಿಡುತ್ತದೆ. ಭಾವುಕತೆ ಮತ್ತು ಜೀವಕಾರುಣ್ಯದ ನಿಲುವನ್ನು ಹದವರಿತು ಬೆರೆಸಿದುದರಿಂದ ಇಂಥ ಉತ್ತಮ ಕತೆಗಳನ್ನು ಕೊಡಲು ಅವರಿಗೆ ಸಾಧ್ಯವಾಗಿದೆ.

ಕತೆಗಾರರು ತಮ್ಮ ನಾಯಕಿಯನ್ನು ತೆಳ್ಳಗೆ, ಬೆಳ್ಳಗಿನ ಚೆಲುವೆಯರನ್ನಾಗಿ ಚಿತ್ರಿಸುವ ರೂಢಿಯಿದೆ. ಆದರೆ ‘ತಂಗ’ ಎಂಬ ಕತೆಯ ನಾಯಕಿಯು ಚೆಲುವೆಯಾಗಲೀ, ಸಾಮಾನ್ಯ ಅಂದಗಾತಿಯಾಗಲೀ ಅಲ್ಲ. ಅದರೆ ಅವಳ ಕುರೂಪದ ಬಣ್ಣನೆಯಲ್ಲಿ ಆಕೆಯ ನಡೆನುಡಿ ಮತ್ತು ಚರ್ಯೆಗಳಲ್ಲಿ ಹಾಸ್ಯಪ್ರಜ್ಞೆ ಮತ್ತು ಜೀವನಪ್ರೀತಿಯ ಸೂಚನೆಯನ್ನು ಕಾಣಬಹುದು. ಕತೆಯ ನಾಯಕನು ಅವಳಗಿಂತಲೂ ಕುರೂಪಿ. ಅಂಥವರ ಮನಸ್ಸಿನಲ್ಲೂ ಪ್ರೀತಿ ಪ್ರೇಮದ ಭಾವನೆಗಳಿರುತ್ತವೆ ಎಂಬುದನ್ನು ಮನಗಾಣಿಸುವಲ್ಲಿ, ಅವರು ಎಷ್ಟು ಕುರೂಪಿಗಳೋ ಮನಸ್ಸು ಅಷ್ಟೇ ಶುದ್ಧ ಎಂದು ಅರಿವಿಗೆ ತರುವುದರಲ್ಲಿ ಕತೆಯ ಹೆಚ್ಚುಗಾರಿಕೆಯಿದೆ. ಒಂದೇ ಸೂರಿನಡಿಯಲ್ಲಿ ಬದುಕುವ ಭಿಕ್ಷುಕರಲ್ಲಿ ರಕ್ತಸಂಬಂಧ, ಜಾತಿ ಸಂಬಂಧಗಳನ್ನು ಮೀರಿದ ಆತ್ಮ ಸಂಬಂಧ ಮತ್ತು ಸಹಬಾಳುವೆಯನ್ನು ತೋರಿಸಿಕೊಡುವಲ್ಲಿ ಕತೆಯ ಸತ್ವವಿದೆ. ಭಿಕ್ಷುಕನು ಅನುಭವಿಸುತ್ತಿರುವ ಶೋಷಣೆಗಳನ್ನು ಕಡಿಮೆ ಪದಗಳಲ್ಲಿ ಆದರೆ ಅತ್ಯಂತ ಹೃದಯಸ್ಪರ್ಶಿಯಾಗಿ ನಿರೂಪಿಸಲಾಗಿದೆ. ಆದರೆ ತಂಗ ಒಂದೆರಡು ಸಾಲಿನ ಮಾತನ್ನು ಮಾತ್ರ ಆಡುತ್ತಾಳೆಯೇ ಹೊರತು ತನ್ನ ಭಾವನೆಗಳನ್ನು, ತನಗಾಗುತ್ತಿರುವ ಅನ್ಯಾಯಗಳ ಕುರಿತು ಏನೂ ಹೇಳುವುದಿಲ್ಲ. ಅದು ಅವಳ ಮನಸ್ಸಿಗೆ ತಿಳಿದಿದೆಯೋ, ತನಗರಿವಿಲ್ಲದೆ ಅನುಭವಿಸುತ್ತಿರುವಳೋ ಅಥವಾ ನೋವನ್ನು ನುಂಗಿಕೊಂಡು ಸುಮ್ಮನಿರುವಳೋ ಎಂದು ಸ್ಪಷ್ಟವಾಗುವುದಿಲ್ಲ. ಈ ಸಂದಿಗ್ಧತೆಯು ಓದುಗನಿಗೆ ಅವಳ ಮೇಲಿರುವ ಅನುಕಂಪವನ್ನು ಹೆಪ್ಪುಗಟ್ಟಿಸುತ್ತದೆ. ಶ್ರೀಮಂತರ ಏಟು ತಿಂದು ಬಿದ್ದ ಭಿಕ್ಷುಕನನ್ನು ಕಾಪಾಡಿ ಉಪಚರಿಸುವ ಆಕೆಯ ಕಾಳಜಿ, ಹೊರ ಸೂಸುವ ಪ್ರೀತಿಯನ್ನು ನೋಡುವಾಗ ಬಿಳಿ ಚರ್ಮ, ಉದ್ದವಾದ ಕೂದಲರಾಶಿ, ಎಳಸು ಮೂಗು, ಚೆಂದುಟಿಗಳು ಇದ್ದರೆ ಮಾತ್ರ ಸೌಂದರ್ಯವೆಂಬ ಭಾವನೆಯು ಕ್ಷಣ ಮಾತ್ರದಲ್ಲಿ ಬದಲಾಗುತ್ತದೆ. ಕಣ್ಣಿದ್ದೂ ನೋಡಲಾಗದವರ, ಒಳಗಣ್ಣನ್ನು ತೆರೆದು ಆಂತರಿಕ ಚೆಲುವನ್ನು ಗುರುತಿಸಬೇಕಾದ ಅಗತ್ಯದ ಕಡೆಗೆ ಗಮನವನ್ನು ನೀಡುವಂತಾಗುತ್ತದೆ. ಕನ್ನಡದ ದಲಿತ ಕತೆಗಾರಲ್ಲಿ ಒಬ್ಬರಾದ ಜನಾರ್ದನ ಎರ್ಪಕಟ್ಟೆಯವರ ‘ಚಪಾತಿ, ರೊಟ್ಟಿ ಮತ್ತು ನಾಯಿಗಳು ಎಂಬ ಕತೆಯು ಭಿಕ್ಷುಕರ ಬದುಕಿನ ಮೇಲೆ ನಾಗರಿಕ ಸಮಾಜ ಮತ್ತು ಪ್ರಭುತ್ವಗಳು ಎಸಗುವ ದಾಳಿಯನ್ನು ವಿವರಿಸಿದರೆ ನವ್ಯ ಕತೆಗಾರ ಎಂ. ವ್ಯಾಸ ಅವರ ‘ಗೂಡು’ ಕತೆಯಲ್ಲಿ ಲೈಂಗಿಕ ಶೋಷಣೆಗೊಳಗಾದ ಹುಚ್ಚಿಯನ್ನು ಹುಚ್ಚನೊಬ್ಬನು ಸಂರಕ್ಷಿಸುವ ಸನ್ನಿವೇಶವಿದೆ. ತಂಗ ಕತೆಯೊಂದಿಗಿನ ಸಮ್ಯವ್ಯತ್ಯಾಸಗಳ ಹಿನ್ನಲೆಯಲ್ಲಿ ಈ ಕತೆಗಳನ್ನು ತುಲನೆ ಮಾಡಬಹುದು.

ಕಾಮವನ್ನು ವಸ್ತುವಾಗಿರಿಸಿಕೊಂಡ ‘ಹಸಿವು’ ಎಂಬ ಕತೆಯು ಲೈಂಗಿಕ ಸನ್ನಿವೇಶದಲ್ಲಿ ಸಿಕ್ಕಿಕೊಂಡ ಕೊಚ್ಚುಕೃಷ್ಣನ ಮಾನಸಿಕ, ನೈತಿಕ ಗೊಂದಲ ಮತ್ತು ಯಾತನೆಗಳನ್ನು ಅವನ ಪ್ರಜ್ಞೆಯ ಮೂಲಕ ವ್ಯಕ್ತಪಡಿಸುತ್ತದೆ. ಆತನು ಕೆಟ್ಟವನಾಗಲೀ, ಸಂತನಾಗಲೀ, ಕಾಮುಕನಾಗಲೀ, ಬೈರಾಗಿಯಾಗಲೀ ಅಲ್ಲ. ಶಾಲೆಯ ಪೇದೆಯಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಒಬ್ಬ ಸಾಮಾನ್ಯ ಮನುಷ್ಯ. ಯಾವ ದುರುದ್ದೇಶವೂ ಇಲ್ಲದೆ ಬರಿಯ ಕುತೂಹಲದಿಂದ ಪ್ರಿನ್ಸಿಪಾಲರ ಹೆಂಡತಿಯನ್ನು ಗಮನಿಸುತ್ತಿದ್ದ ಆತನ ವ್ಯಕ್ತಿತ್ವದಲ್ಲಿ ಸೂಕ್ಷ್ಮ ವ್ಯತ್ಯಾಸಗಳು ಉಂಟಾಗುತ್ತವೆ. ಆಕೆಯ ಯೌವನ, ಮೈಕಟ್ಟು, ಸ್ಫುಟವಾಗಿ ತೋರುವ ಅಂಗಾಂಗಗಳು, ಕಾರಿನಿಂದ ಇಳಿಯುವಾಗ ಅದರ ಬಾಗಿಲಿನ ಹಿಡಿಕೆಯನ್ನು ಹಿಡಿದುಕೊಂಡಿದ್ದ ಅವನ ಬೆರಳುಗಳನ್ನು ಸವರಿದ ಆಕೆಯ ಮೊಲೆಗಳು ಅವನೊಳಗಿನ ಬಯಕೆಯನ್ನು ಕೆರಳಿಸುತ್ತದೆ. ತಾನು ತುರಿಮಣೆಯಂಥ ಹಲ್ಲುಗಳನ್ನು ಹೊಂದಿದ ಕೃಶಕಾಯನಾಗಿದ್ದರೂ ‘ಆ ಪ್ರಿನ್ಸಿಪಾಲನಿಗೇಕೆ ಇಷ್ಟು ಸುಂದರಿಯಾದ ಹೆಂಡತಿ?’ ಎಂದುಕೊಳ್ಳುವಷ್ಟು ಲೈಂಗಿಕ ಅಸೂಯೆಯನ್ನು ಅನುಭವಿಸುತ್ತಾನೆ. ಬೀಸಿ ಹೋಗುವ ಸುಳಿಗಾಳಿಯಂತೆ ಆಕೆಯು ಕಣ್ಮರೆಯಾದ ಮೇಲೆಯೂ ಕಾಡತೊಡಗುವ ಕಾಮದ ಆಲೋಚನೆಗಳಿಗೆಲ್ಲ ಬೀದಿಯ ಬದಿಯಲ್ಲಿ ಗಿರಾಕಿಗಳಿಗಾಗಿ ಕಾಯುವ ಎಲಿಸಬೆತ್ ಕೇಂದ್ರವಾಗುತ್ತಾಳೆ. ಆದರೆ ಅದು ಹುಚ್ಚು ಕಾಮಕ್ಕೆ ದಾರಿಯನ್ನು ಮಾಡುವುದಿಲ್ಲ. ಭೋಗಿಸುವ ಇಚ್ಛೆಯಿದ್ದರೂ ಆಕ್ರಮಣಕಾರಿಯಾಗದೆ, ಅವಳ ಬಳಿ ಮಾತನಾಡಿ ಮಾರನೇ ದಿನ ತನ್ನೊಡನೆ ಒಂದಾಗಲು ಒಪ್ಪಿಗೆಯನ್ನು ಪಡೆದು ಆಕೆಗೆ ಸಲ್ಲಿಸಬೇಕಾದ ಪ್ರತಿಫಲದ ಮೊತ್ತವನ್ನು ನಿಗದಿಪಡಿಸಿ ಬರುತ್ತಾನೆ. ಆದರೆ ಕೈಯಲ್ಲಿ ಹಣವು ಇಲ್ಲದಿರುವುದರಿಂದ ಪ್ರಿನ್ಸಿಪಾಲರ ಬಳಿಗೆ ಹೋಗಿ, ತನ್ನ ತಾಯಿಗೆ ಆರಾಮವಿಲ್ಲ ಎಂದು ಸುಳ್ಳು ಹೇಳಿ, ಹಣವನ್ನು ಪಡೆದು ಅಂಗಡಿಗೆ ತೆರಳಿ, ಉತ್ತಮ ಬಟ್ಟೆಗಳನ್ನು ತೊಟ್ಟು, ಸುಗಂಧ ದ್ರವ್ಯವನ್ನು ಚಿಮುಕಿಸಿ, ಎಲಿಸಬೆತ್ತಳಿಗೆ ಕೊಡುವುದಕ್ಕೆಂದು ಉಡುಗೊರೆಯ ಪೊಟ್ಟಣವನ್ನು ಹಿಡಿದು ಆಕೆಯ ಹಾದಿಯನ್ನು ಕಾಯುತ್ತಾನೆ. ಆದರೆ ಆಕೆಯು ಬರುವುದಿಲ್ಲ. ನಾಲ್ಕು ವರ್ಷಗಳು ಕಳೆದ ಬಳಿಕ ಬಡಕಲು ಹೆಂಗಸೊಬ್ಬಳು ಆತನ ಹತ್ತಿರ ಭಿಕ್ಷೆಯನ್ನು ಬೇಡಿದಾಗ ಆಕೆಯೇ ಎಲಿಸಬೆತ್ ಎಂದು ಅವನಿಗೆ ತಿಳಿಯುತ್ತದೆ. ಸೊಗಸುಗಾತಿಯಾಗಿದ್ದವಳು ಮುದುಕಿಯಂತಾದುದನ್ನು ಕಂಡು ಅವನ ಮನಸ್ಸು ಬದಲಾಗುತ್ತದೆ. ಪ್ರೇಮವು ಕರುಣೆಯಾಗಿ ಮಾರ್ಪಡುತ್ತದೆ. ಆಹಾರವನ್ನು ತೆಗೆದುಕೊಟ್ಟ ಬಳಿಕ ಕಂಪಿಸುವ ದನಿಯಲ್ಲಿ ‘ನನ್ನ ನೆನಪಿದೆಯಾ?’ ಎಂದು ಕೇಳುತ್ತಾನೆ. ಆಕೆಯು ಇಲ್ಲವೆಂದಾಗ ನಾಲ್ಕು ವರ್ಷಗಳ ಹಿಂದೆ ಆಕೆಗಾಗಿ ಖರೀದಿಸಿಟ್ಟಿದ್ದ ಉಡುಗೊರೆಯನ್ನು ಅವಳ ಕೈಯಲ್ಲಿಟ್ಟು ತಿರುಗಿಯೂ ನೋಡದೆ ನಡೆಯುತ್ತಾನೆ. ಎಲಿಸಬೆತ್ತಿನ ಮೇಲಿನ ಮೋಹವು ತೊಲಗಿದರೂ ಆತನಲ್ಲಿ ವಿವೇಕ ಮತ್ತು ವಿರಕ್ತಿ ಹುಟ್ಟುವುದಿಲ್ಲ. ಆತ್ಮನಿಂದೆಯನ್ನು ಮಾಡಿಕೊಂಡು ಪರಿಶುದ್ಧ ಹೃದಯನಾಗುವುದಿಲ್ಲ. ಮರುದಿನದಿಂದ ಎಂದಿನಂತೆ ಪ್ರಿನ್ಸಿಪಾಲರ ಹೆಂಡತಿಯನ್ನು ಗಮನಿಸತೊಡಗುತ್ತಾನೆ. ಅತೃಪ್ತ ಕಾಮವು ಉಂಟು ಮಾಡುವ ಸೂಕ್ಷ್ಮ ಮಾರ್ಪಾಟುಗಳು ಮನದೊಳಗೆ ಹಾವಳಿಯೆಬ್ಬಿಸುವ ರೀತಿಯನ್ನು ಅನಾವರಣಗೊಳಿಸಿದ ರೀತಿಯು ಮೆಚ್ಚುವಂತಿದೆ.

ಬ್ರಿಟಿಷರ ಆಡಳಿತದ ಕ್ರೌರ್ಯವನ್ನು ಬಿಚ್ಚಿಡುವ ‘ಟೈಗರ್’ ಎಂಬ ಕತೆಯು ಸಾಂಕೇತಿಕ ರಚನೆಯಾಗಿದೆ. ಎಲ್ಲಿಂದಲೋ ಬಂದು ಆರಕ್ಷಕ ಠಾಣೆಯೊಳಗೆ ಸೇರಿಕೊಂಡ ಬೀದಿನಾಯಿಯು ಅಲ್ಲಿನ ಅವಿಭಾಜ್ಯ ಅಂಗವೆನಿಸಿಕೊಳ್ಳುತ್ತದೆ. ಆರಕ್ಷಕರಿಂದ ಟೈಗರ್ ಎಂದು ಕರೆಸಿಕೊಂಡು ಅವರ ವಿಶೇಷ ಆರೈಕೆಯಲ್ಲಿರುವ ಪುಕ್ಕಲುನಾಯಿಯನ್ನು ಖೈದಿಗಳಿಗೆ ಕಂಡರಾಗದು. ಅವಕಾಶ ಸಿಕ್ಕಾಗಲೆಲ್ಲ ಸೆರೆಮನೆಯ ಕಂಬಿಗಳೆಡೆಯಿಂದ ಕೈಹಾಕಿ, ನಾಯಿಯನ್ನು ಹಿಡಿದು, ಹೊಡೆದು ರೊಚ್ಚು ತೀರಿಸಿಕೊಳ್ಳುತ್ತಾರೆ. ಪೋಲೀಸರಿಂದ ಕ್ರೂರ ಶಿಕ್ಷೆಗಳಿಗೂ ಒಳಗಾಗುತ್ತಾರೆ. ಎಲ್ಲಿಂದಲೋ ಬಂದು ಆಡಳಿತ ವ್ಯವಸ್ಥೆಯ ಭಾಗವಾದ ಬೀದಿನಾಯಿಯು ಹೊರಗಿನಿಂದ ಬಂದು ಭಾರತದಲ್ಲಿ ಮೆರೆಯುವ ಬ್ರಿಟಿಷರಿಗೆ ಸಂಕೇತವಾಗಿದ್ದು, ಇವರು ಹುಟ್ಟುಹಾಕಿದ ವ್ಯವಸ್ಥೆಯನ್ನು ವಿರೋಧಿಸುವ ಹೋರಾಟಗಾರರು ಭಾರತೀಯ ಅಧಿಕಾರಿಗಳಿಂದಲೇ ಶಿಕ್ಷೆಯನ್ನು ಅನುಭವಿಸುವ ವಂಗ್ಯವನ್ನು ಕಾಣುತ್ತೇವೆ. ಮನಸ್ಸಿನಲ್ಲಿ ಅಗ್ನಿಪರ್ವತವು ಕುದಿಯುತ್ತಿದ್ದರೂ ಅದಕ್ಕೆ ಸಂಯಮದ ಚೌಕಟ್ಟನ್ನು ಒದಗಿಸಿದ ಬಷೀರರ ಕಥನ ಕೌಶಲವು ಮುಖ್ಯವಾಗುತ್ತದೆ. ತಗಳಿ ಶಿವಶಂಕರ ಪಿಳ್ಳೆಯವರು ‘ವೆಳ್ಳಪೊಕ್ಕತ್ತಿಲ್’ (ನೆರೆ) ಮತ್ತು ಎಂ. ಟಿ. ವಾಸುದೇವನ್ ನಾಯರ್ ಅವರ ‘ಭಾಗ್ಯ’ ಎಂಬ ಕತೆಗಳನ್ನು ಈ ಕತೆಯೊಂದಿಗೆ ಹೋಲಿಸಬಹುದು. ‘ನೆರೆ’ಯಲ್ಲಿ ತಗಳಿಯವರು ನಾಯಿಯ ಸ್ವಾಮಿ ನಿಷ್ಠೆಯನ್ನು ಮುಖ್ಯವಾಗಿಟ್ಟುಕೊಂಡು ಮಾನವರ ಕೃತಘ್ನತೆಯನ್ನು ವಿಡಂಬಿಸಿದರೆ ನಾಯರ್ ಜನಾಂಗದ ತರವಾಡಿನೊಳಗೆ ಉಸಿರುಗಟ್ಟಿಸುವ ಸಾಂಪ್ರದಾಯಿಕ ಬದುಕಿನ ಹಿಂದೆ ಇರುವ ಮಾನವಜೀವಿಗಳ ನೋವಿನ ಪ್ರತಿಫಲನವನ್ನು ಎಂ. ಟಿ. ವಾಸುದೇವನ್ ನಾಯರ್ ‘ಭಾಗ್ಯ’ ಎಂಬ ಕತೆಯ ನಾಯಿಯ ನಡವಳಿಕೆಗಳಲ್ಲಿ ಕಾಣಬಹುದು. ತುಳಿತಕ್ಕೊಳಗಾಗಿ ಸಾಂಪ್ರದಾಯಿಕ ಬದುಕನ್ನು ಅನಿವಾರ್ಯವಾಗಿ ಒಪ್ಪಿಕೊಂಡರೂ, ತಾಳ್ಮೆಯು ಮಿತಿಮೀರಿದ ಸಿಡಿದು ಪ್ರತಿಭಟಿಸಿದ, ಬದುಕಿನುದ್ದಕ್ಕೂ ಅನಾಥ ಪರಿಸ್ಥಿತಿಯಲ್ಲಿ ಬಾಳಿದ ಪಾಡನ್ನು ಎಂ.ಟಿ. ಯವರು ನಾಯಿಯ ಪ್ರಜ್ಞೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ತಿರಸ್ಕಾರ ಮತ್ತು ಭೇದಭಾವಕ್ಕೊಳಗಾಗಿ ಒಂಟಿತನದ ನೋವಿನಿಂದ ಬಳಲುವ, ಅವಿಭಕ್ತ ಕುಟುಂಬದ ನಡುವೆ ಅನೇಕ ಮಂದಿಗಳ ಜೊತೆ ಬದುಕುವಾಗಲೂ ಅವರು ಏಕಾಕಿತನವನ್ನು ಅನುಭವಿಸುವ, ಹಿರಿಯವರಿಂದ ಬೈಗುಳ, ಹಿಂಸೆ ಮತ್ತು ಶಾಪಗಳಿಗೆ ಗುರಿಯಾದಾಗ ತಮ್ಮನ್ನು ಪ್ರೀತಿಸುವವರು ಯಾರೂ ಇಲ್ಲ ಎಂಬ ಯೋಚನೆಯಿಂದ ನೊಂದುಕೊಳ್ಳುವ, ಒಳ್ಳೆಯ ಊಟ, ಬಟ್ಟೆಬರೆ, ಹುಟ್ಟುಹಬ್ಬಕ್ಕೊಂದು ಪಾಯಸ ಹೀಗೆ ಸೀಮಿತ ಆಸೆಗಳು ಪೂರೈಸದಿದ್ದಾಗ ಸಮವಯಸ್ಕರ ಮುಂದೆ ಅಪಹಾಸ್ಯಕ್ಕೀಡಾಗಿ ಸಂಕಟಪಡುವ, ಸಂಬಂಧ ಮತ್ತು ನಂಬಿಕೆಗಳು ಹಾಳಾಗುವುದರಿಂದ ಅರಕ್ಷಿತ ಭಾವದಿಂದ ತಲ್ಲಣಿಸುವ, ಮನೆಯ ಅವ್ಯವಸ್ಥೆ, ಅಸ್ವಸ್ಥತೆ, ಮತ್ತು ಸುತ್ತುಮುತ್ತಲಿನವರ ಅಪಹಾಸ್ಯಗಳಿಂದ ತಪ್ಪಿಸಿಕೊಂಡು ನಿಶ್ಚಿಂತರಾಗಲು ಹಲವಾರು ಜಾಗಗಳನ್ನು ಹುಡುಕಿಕೊಂಡು ಅಲೆಯುವ ‘ನರಿಯ ಮದುವೆ’ಯ ಕುಂಞ, ‘ಅಕ್ಕ’ ಕತೆಯ ಅಪ್ಪು, ‘ಕತ್ತಲ ಆತ್ಮ’ದ ವೇಲಾಯುಧನ್, ‘ಚಿಕ್ಕ ಚಿಕ್ಕ ಭೂಕಂಪಗಳು’ ಕತೆಯ ಜಾನಕಿಯ ಮನಸ್ಸಿನ ಪ್ರತೀಕವಾಗಿ ‘ಭಾಗ್ಯ’ ಕತೆಯ ನಾಯಿಯ ಪಾತ್ರವು ಮೂಡಿ ಬಂದಿದೆ.

‘ಒಂದು ಭಗವದ್ಗೀತೆಯೂ…’ ಎಂಬ ಕತೆಯು ಬಷೀರರ ಸಾಹಿತ್ಯಕ ಅನುಭವವನ್ನೇ ವಸ್ತುವನ್ನಾಗಿಸಿಕೊಂಡಿದೆ. ಅವರ ಆತ್ಮಕತೆಯ ಕೆಲವು ಪುಟಗಳು ತೆರೆದುಕೊಂಡಿವೆ. ಮಂಗಳೋದಯ ಪ್ರಕಾಶನದವರು ಯಾವುದೇ ಪುಸ್ತಕವನ್ನು ಮುದ್ರಿಸಿದರೂ ಬಷೀರ್, ಎಂ. ಪಿ. ಪೌಲ್ ಮತ್ತು ಚಂಗಂಪುಳ ಕೃಷ್ಣ ಮೆನೋನರಿಗೆ ಗೌರವ ಪ್ರತಿಯನ್ನು ನೀಡುತ್ತಿದ್ದರು. ಆದರೆ ಭಗವದ್ಗೀತೆಯನ್ನು ಮುದ್ರಿಸಿದಾಗ ಆ ಪ್ರತಿಯನ್ನು ಯಾರಿಗೂ ಕೊಡುವುದಿಲ್ಲ. ಇದೇಕೆ ಹೀಗೆ ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಬಷೀರರು ಆಚರಣೆ ಮತ್ತು ಅವುಗಳ ನಡುವಿನ ವೈರುಧ್ಯಗಳನ್ನು ದಾಖಲಿಸುತ್ತಾರೆ. ಕೊನೆಗೆ ಪ್ರಕಾಶಕರು ಭಗವದ್ಗೀತೆಯ ಪ್ರತಿಯನ್ನು ಇಟ್ಟು ಇದನ್ನು ಪಡೆಯಲು ಅರ್ಹರಾದವರು ಯಾರು ಎಂದು ನೀವೇ ತೀರ್ಮಾನಿಸಿ ಎನ್ನುತ್ತಾರೆ. ಬಷೀರ್ ಕೂಡಲೇ ಅದನ್ನು ತೆಗೆದುಕೊಳ್ಳುತ್ತಾರೆ. ಅಲ್ಲಿದ್ದ ಮೂವರು ಲೇಖಕರ ಪೈಕಿ ಒಬ್ಬರು ಹಿಂದೂ, ಇನ್ನೊಬ್ಬರು ಕ್ರೈಸ್ತರು ಮತ್ತು ಮತ್ತೊಬ್ಬರು ಮುಸ್ಲಿಂ. ಯಾವುದೇ ಧರ್ಮಕ್ಕೆ ಸಂಬಂಧಿಸಿದ ಗ್ರಂಥವಿರಲಿ ಅದನ್ನು ಸ್ವೀಕರಿಸಲು ಧಾರ್ಮಿಕ ಮಡಿವಂತಿಕೆಯನ್ನು ತೋರಬೇಕಾಗಿಲ್ಲ. ಭಗವದ್ಗೀತೆ ಮುಸಲ್ಮಾನರಿಗೂ ಅಗತ್ಯ ಎಂಬ ಧ್ವನಿಯು ಜಾತಿಧರ್ಮಗಳು ಮತ್ತು ಅರ್ಹತೆಯ ಪ್ರಶ್ನೆಗಿಂತ ಮುಖ್ಯವಾಗುತ್ತದೆ.

ಮಲಯಾಳಂ ಭಾಷೆಯ ಮಹತ್ವದ ಸಾಹಿತಿ ವೈಕಂ ಮಹಮ್ಮದ್ ಬಷೀರ್ ಅವರ ಕೃತಿಗಳು ಕನ್ನಡದ ಪಾಲಿಗೆ ಹೊಸತಲ್ಲ. ಬಿ. ಕೆ. ತಿಮ್ಮಪ್ಪ, ವೆಂಕಟರಾಜ ಪುಣಿಂಚಿತ್ತಾಯ, ಕೆ. ಕೆ. ನಾಯರ್, ಕೆ. ಕೆ. ಗಂಗಾಧರನ್, ಕೆ. ಕಮಲಾಕ್ಷ ಮುಂತಾದವರ ಅನುವಾದಗಳ ಮೂಲಕ ಅವರು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಿತರಾಗಿದ್ದಾರೆ. ಆದರೆ ಮೋಹನ ಕುಂಟಾರ್ ಅವರು ಪ್ರೇಮವೇ ಮೂಲ ಆಶಯವಾಗಿರುವ ವಿನೋದಮಯ ಕತೆಗಳು, ಹೆಣ್ಣು ಗಂಡಿನ ಪ್ರೇಮಕತೆಗಳು ಮಾತ್ರವಲ್ಲದೆ ಜೀವನಪ್ರೀತಿ, ಮಾನವಪ್ರೇಮ, ದೇಶಪ್ರೇಮಗಳನ್ನು ವಸ್ತುವನ್ನಾಗಿಟ್ಟುಕೊಂಡ ಕತೆಗಳನ್ನು ಅನುವಾದಿಸಿರುವ ವಿಚಾರವು ಮುಖ್ಯವಾಗುತ್ತದೆ. ಬಷೀರ್ ಅವರ ಆಡುಮಾತಿನ ಲಯ, ಧಾಟಿಗಳನ್ನು ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸಿದ್ದುದರಿಂದ ಒಂದೆಡೆಯಲ್ಲಿ ನೀಳವಾಗಿದ್ದು, ಇನ್ನೊಂದೆಡೆಯಲ್ಲಿ ಚುಟುಕಾಗಿರುವ ವಾಕ್ಯಗಳು, ಸಂಸ್ಕøತ ಮಿಶ್ರಿತ ಪದಗಳೊಡನೆ ಆಡುಮಾತಿನ ಲಯವನ್ನು ಹೊಂದಿದ ಪದಗಳ ಸವಿಯು ಹಾಗೇ ಉಳಿದುಕೊಂಡಿದೆ. ಮಾನವ ಪ್ರೇಮವನ್ನು ಪ್ರತಿಪಾದಿಸುವ ಕತೆಗಳನ್ನು ಒಳಗೊಂಡ ಈ ಕೃತಿಯು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸಿಕೊಳ್ಳುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ವೈಕಂ ಮುಹಮ್ಮದ್ ಬಷೀರ್ ಅವರ ‘ಪ್ರೇಮಪತ್ರ’”

  1. Dr Madhavi S Bhandary

    ವೈ ಕಮ್ ಬಶೀರರ ಕಥೆಗಳನ್ನು ಅನುವಾದಿಸಿದ ಡಾ. ಮೋಹನ್ ಕುಂಟಾರರು ಅಭಿನಂದನಾರ್ಹರು.
    ಆ ಕೃತಿಯನ್ನು ಅಷ್ಟೇ ಚನ್ನಾಗಿ ವಿಮರ್ಶೆ ಮಾಡಿದ ಡಾ. ಸುಭಾಷ್ ಪಟ್ಟಾಜೆಯವರಿಗೂ ಅಭಿನಂದನೆಗಳು.
    ಅನುವಾದಿತ ಕೃತಿ ಓದಿದಷ್ಟೇ ಸಂತೋಷವಾಯಿತು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter