ಕರ್ಮ ಮತ್ತು ಕಾಯಕ

ಚಿತ್ರ: ಮಂಗಳಾ ಶೆಟ್ಟಿ

ಕರ್ಮ ಎನ್ನುವುದು ಕನ್ನಡ ಮೂಲದ ಶಬ್ದವಲ್ಲ. ಅದು ಸಂಸ್ಕೃತದ್ದು. ಅದಕ್ಕೆ ಕನ್ನಡದಲ್ಲಿ ಸಮಾನಾಂತರನಾಗಿ ಇರುವ ಶಬ್ದ ‘ಕೆಲಸ’ ಅಥವಾ ‘ದುಡಿಮೆ’! ಆದರೆ ಈ ಎರಡೂ ಕನ್ನಡ ಶಬ್ದಗಳು, ನಮ್ಮ ಭೌತಿಕವಾದ ಅಥವಾ ಲೋಕವ್ಯವಹಾರಕ್ಕೆ ಸಂಬಂಧಿಸಿದ ‘ಮಾಡುವುದು’ ಎಂಬ ಭಾವ ವಿಶೇಷವನ್ನು ಮಾತ್ರ ಕೊಡುವ ಶಬ್ದವಾಗಿದ್ದು, ಸಂಸ್ಕೃತದ ಕರ್ಮದ ‘ಮೂಲ ಆಶಯ’ದಾಚೆ ಹೊರಳುವುದಿಲ್ಲ!

ಸಂಸ್ಕೃತದ ಕರ್ಮ ಶಬ್ದಕ್ಕೆ – ಸಂಸ್ಕೃತದಲ್ಲಿ ಎಲ್ಲ ಶಬ್ದಗಳಿಗೆ ಇರುವ ಹಾಗೆ – ಅದರ ಹುಟ್ಟಿನ ಮೂಲವಾದ ‘ವ್ಯುತ್ಪತ್ತಿ’ ಉಂಟು. ಪ್ರತಿಯೊಂದು ಶಬ್ದವೂ ಪ್ರತಿ ಶಬ್ದದ ಮೂಲಧಾತುವಿನಿಂದ ಹುಟ್ಟುತ್ತದೆ ಎನ್ನುವುದು ಸಂಸ್ಕೃತದ ವೈಶಿಷ್ಟ್ಯ. ಉದಾಹರಣೆಗೆ ಕರ್ಮ ಎನ್ನುವುದು ‘ಕ್ರಿಯಾತೇ ಇತೀ ಕರ್ಮ’ ಎಂದು ಅದು ತನ್ನ ಸ್ವರೂಪವನ್ನು ಕಟ್ಟಿಕೊಡುತ್ತದೆ. ಪ್ರಾಯಃ ಸಂಸ್ಕೃತ ಹೊರತುಪಡಿಸಿ ಬೇರಾವ ಭಾಷೆಯಲ್ಲೂ ಈ ರೀತಿ ಶಬ್ದ ಹುಟ್ಟುವ ಮೂಲ ಸ್ವರೂಪದ ಕಲ್ಪನೆ (ವ್ಯತ್ಪತ್ತಿ ) ಇಲ್ಲ! ಇಂಗ್ಲೀಷ್‍ನಲ್ಲಿ ನಾವು ಬರೆಯುವ ಶಬ್ದಕ್ಕೆ ಅದರ ಸೈಲ್ಲಿಂಗ್‍ನ ಆಧಾರದಲ್ಲಿ ಅದನ್ನು ಓದಲೇಬೇಕು ಎಂಬ ನಿಯಮ ಇಲ್ಲ. ಒಂದು ಶಬ್ದದ ಉಚ್ಛಾರವನ್ನು ಇಂಗ್ಲೆಡಿನವರು ಒಂದು ರೀತಿ ಹೇಳ ಹೊರಟರೆ, ಅಮೇರಿಕಾದವರು ಬೇರೆ ರೀತಿ ಉಚ್ಚರಿಸಬಹುದು!

ದುಡಿಮೆ ಅಥವಾ ಕೆಲಸವೆನ್ನುವುದು ಹೇಗೆ ಭೌತಿಕವಾದದ್ದು ಎಂದರೆ, ಯಾರೋ ಒಬ್ಬರು ‘ಮನಃ ಪೂರ್ವಕವಾಗಿ ಒಬ್ಬಾತ ದುಡಿಯುತ್ತಿದ್ದಾನೆ’ ಅಂದರೆ ಅದು ಪೂರ್ತಿಯಾಗಿ ಆ ಶಬ್ದಕ್ಕೆ ‘ನ್ಯಾಯ’ ನೀಡಿದ ಹಾಗಾಗುವುದಿಲ್ಲ. ಯಾಕೆಂದರೆ ಇಂಥ ಬಹುತೇಕ ಶಬ್ದಗಳನ್ನು ನಾವು ಅನುಭವಿಸಿಯೇ ಅದರ ಅರ್ಥ ತಿಳಿದುಕೊಳ್ಳಬೇಕೇ ವಿನಾ, ಅದನ್ನು ‘ಆತ್ಮಸ್ಮಾತ್’ ಮಾಡಿಕೊಳ್ಳದೆ ವಿವರಿಸುವುದು ಕಷ್ಟ. ಅದಕ್ಕೇ ನಾವು ಒಬ್ಬನನ್ನು ‘ನೀನೆಲ್ಲಿ ದುಡಿಯುತ್ತಿ?’ ಎಂದು ಪ್ರಶ್ನಿಸಿದಾಗ, ಆತ ತಾನು ‘ಇಂಥದ್ದರಲ್ಲಿ ಇದ್ದೇನೆ’ ಎನ್ನುತ್ತಾನೆ. ಅದು ಕಛೇರಿಯಾಗಿರಬಹುದು, ಮನೆ ಕಟ್ಟುವುದರದ್ದಾಗಿರ ಬಹುದು, ಅದೇ ರೀತಿ ಇನ್ನೂ ಇದೇ ರೀತಿಯಲ್ಲಿ ಬೇರೆ ಬೇರೆ ಉದ್ಯೋಗಗಳನ್ನು ಅದಕ್ಕೆ ‘ಜೋಡಿಸಿ’ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಹೇಳಬಹುದು! ಯಾರೂ ಯಾವ ರೀತಿ ಹೇಳಿದರೂ, ಅದು ಭೌತಿಕವಾಗಿರುವುದೇ ಆಗಿರುತ್ತದೆಯೇ ವಿನಾ ಅದು ‘ಕರ್ಮ’ವಾಗುವುದಿಲ್ಲ. ನಮ್ಮ ಹಿರಿಯರ ಪ್ರಕಾರ ಕರ್ಮವು ಇಹ (ಈಲೋಕ) ಪರ (ಪರಲೋಕ)ವನ್ನು ಜೋಡಿಸುವ ಅಥವಾ ಅವುಗಳಿಗೆ ಸಂಬಂಧ ಕಲ್ಪಿಸುವ ಶಬ್ದ. ಇದು ‘ಲೌಕಿಕ’ವಾಗಿ (ಇಹವಾಗಿ) ಹೇಗಾಗುತ್ತದೆ ಅಂದರೆ, ನಮ್ಮ ಕನ್ನಡ ಶಬ್ದವು ಅದರ ಅರ್ಥವನ್ನು ಸ್ಫುರಿಸುವ ರೀತಿಯಲ್ಲೇ ‘ದುಡಿಮೆ’ ಎಂದಾಗುತ್ತದೆ. ‘ಪರ’ವು ಹೇಗಾಗುತ್ತದೆ ಅಂದರೆ, ನಮ್ಮ ದುಡಿಮೆಯ ಹಿಂದೆ ಅಧ್ಯಾತ್ಮಿಕವಾದ ಒಂದು ಪ್ರಕ್ರಿಯೆಯೇ ಗುರಿಯೋ ಇದ್ದು ಅದು ‘ಸುಕೃತ’ ಮತ್ತು ‘ದುಷ್ಕೃತ್ಯ’ಗಳ ಹೆಸರಿನಲ್ಲಿ ಇರುತ್ತದೆ ಎಂಬಂತಿರುತ್ತದೆ. ಇದನ್ನು ‘ಒಳ್ಳೆಯ ಕೆಲಸ’ ಮತ್ತು ‘ಕೆಟ್ಟ ಕೆಲಸ’ ಎಂಬುದಾಗಿ ವಿಂಗಡಿಸಿದರೂ ಅದು ಪೂರ್ತಿ ಸತ್ಯ ಆಗಿರುವುದಿಲ್ಲ.

ಇದು ಆರ್ಷೇಯ ಭಾರತದ ದೃಷ್ಟಿಯ ಒಳನೋಟದ್ದಾದರೆ, ಆಧುನಿಕ ಕಾಲದಲ್ಲಿ ಅಂದರೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಈ ಕರ್ಮ ಶಬ್ಧಕ್ಕೆ ‘ಕಾಯಕ’ ಎನ್ನುವ ಹೊಸ ಶಬ್ಧವನ್ನು ಟಂಕಿಸಿ, ಆ ‘ಕಾಯಕ’ವು ಇಹಕ್ಕೆ ಅಂದರೆ ಈ ಲೋಕಕ್ಕೇ ಹೆಚ್ಚು ಕೊಡುವಂತೆ ಮಾಡಿದರು. ಹಾಗೆಂದು ‘ಕಾಯಕ’ವು ನಾವು ಸಾಮಾನ್ಯವಾಗಿ ಪರಿಭಾವಿಸುವ ‘ದುಡಿಮೆ’ ಅಲ್ಲ. ಸಂಸ್ಕೃತದ ಕರ್ಮದ ರೀತಿಯದ್ದೂ ಅಲ್ಲ.
ಮತ್ತೇನೆಂದರೆ ಬಸವ ತತ್ತ್ವದಲ್ಲಿ ಕಾಯಕದ ಉದ್ದೇಶ ವ್ಯಕ್ತಿಗತವಾದಷ್ಟೇ ಅಲ್ಲ, ಅದು ‘ಸಮೃದ್ಧ ಸಮಾಜಮುಖಿಯಾದ ಚಿಂತನೆ’ಯದ್ದು. ಅದರಲ್ಲಿ ಆರು ವಿಧಗಳಿದ್ದು ಅದರಲ್ಲಿ ಮೊದಲನೆಯದ್ದು ‘ಕಾಯಕ ಕಡ್ಡಾಯ’ ಎನ್ನುವುದು ಅದು ಕೇವಲ ಭೌತಿಕವಲ್ಲ ಎನ್ನುವುದು ಅಂದರೆ ಅನ್ನವೆಂಬುದು! ಇಂಥ ಅನ್ನ ದೇವರಾಗಬೇಕಾದರೆ ಅದನ್ನು ಗಳಿಸುವ ಮಾಧ್ಯಮವಾದ ‘ಕಾಯಕವು ದೇವರಾಗ ಬೇಕಾಗುತ್ತದೆ’ (ಕಾಯಕವೇ ಕೈಲಾಸ). ಇದನ್ನು ಪರಿಭಾವಿಸಿದ್ದ ಶರಣರು ಅದನ್ನು ಧಾರ್ಮಿಕ ಸಿದ್ಧಾಂತದೊಳಗೆ ತಂದು ‘ಕ್ರಿಯೆಯಿಲ್ಲದ (ಕಾಯಕವಿಲ್ಲದ) ಭಕ್ತನು ಕೇವಲ ‘ಮನುಷ್ಯ’, ಕ್ರಿಯೆ ಇಲ್ಲದ ಮನುಷ್ಯ ರಾಕ್ಷಸ’ ಎಂಬಂತೆ ಹೇಳಿದ್ದಾರೆ.

ಎರಡನೆಯದ್ದು ‘ಕಾಯಕ ದೈಹಿಕ’ ಎನ್ನುವ ಪರಿಕಲ್ಪನೆಯದ್ದಾಗಿದ್ದು, ಅದು ‘ಹೊರಗಣ ಕ್ರೀ (ಕ್ರಿಯೆ) ಆತ್ಮದೊಳಗಣ ಜ್ಞಾನ’ ಎಂಬುದಾಗಿದೆ. ಮೂರನೆಯದ್ದು ‘ಕಾಯಕ ತಾರತಮ್ಯರಹಿತ.’ ಅಂದರೆ ಒಂದು ವ್ಯಕ್ತಿಗಿಂತ ಇನ್ನೊಂದು ವ್ಯಕ್ತಿ ಶ್ರೇಷ್ಠ ಅಥವಾ ಕನಿಷ್ಠ ಎಂಬಂತಿರಬಾರದು ಎನ್ನುವುದಾದರೆ, ನಾಲ್ಕನೆಯದ್ದು ‘ಕಾಯಕ ಐಚ್ಛಿಕ’ ಅಂದರೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ಪರಿಕಲ್ಪನೆ ಇಲ್ಲದೆ ಎಲ್ಲರೂ ಈ ನಾಲ್ಕು ವರ್ಣಗಳಲ್ಲಿ ಸರಿ ಸಮಾನರು ಎಂಬ ಆಶಯದ್ದು. ಐದನೆಯದ್ದು ‘ಕಾಯಕ ಅಧಿಕ ಫÀಲ ನಿರಪೇಕ್ಷಿತ.’ ಅಂದರೆ ಇದು ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನೇ ಸಂಗ್ರಹಿಸಬೇಕು. ಅರ್ಥಾತ್ ‘ನೇಮದ ಕೂಲಿಯಿಂದ ನಿತ್ಯ ಕಾಯಕದಲ್ಲಿ’ ಇರಬೇಕು ಎಂಬ ಪರಿಕಲ್ಪನೆಯಾಗಿದೆ. ಆರನೆಯದ್ದು ‘ಕಾಯಕ ದಾಸೋಹ ಸಹಿತ’ ಅಂದರೆ ಕಾಯಕ ಎನ್ನುವುದು ಸಾರ್ಥಕ್ಯವನ್ನು ಪಡೆಯುವುದು ‘ದಾಸೋಹ’ದಲ್ಲಿ ಎಂಬ ಪರಿಕಲ್ಪನೆಯದ್ದು. ಇಂಥ ದಾಸೋಹವು ಮೂರು ರೀತಿಯಲ್ಲಿ (ತ್ರಿವಿಧ ದಾಸೋಹ) ಇದ್ದು, ಗುರುವಿಗೆ ತನುವಿನ ದಾಸೋಹ, ಲಿಂಗಕ್ಕೆ ಮನದ ದಾಸೋಹ, ಜಂಗಮಕ್ಕೆ ಧನದ ದಾಸೋಹ ಮಾಡಬೇಕು ಎಂಬ ನಿಲುವಿನದ್ದಾಗಿದೆ.

ಈ ನಿಲುವು ಇಂದು ಎಷ್ಟು ವಾಸ್ತವ ಅಥವಾ ಎಷ್ಟು ಸಾಧ್ಯವಾಗಬಹುದು ಎನ್ನುವ ಪ್ರಶ್ನೆ ಕಾಡುವುದು ಸಹಜ! ಆದರೆ ಇದು ಇಂದು ತಾತ್ತ್ವಿಕವಾಗಿ ಇದೆಯಷ್ಟೇ ಎಂದರೆ ತಪ್ಪಾಗದು!

ಅದೇನೇ ಇದ್ದರೂ ಇದೊಂದು ಸಮಸಮಾಜದ ಪರಿಕಲ್ಪನೆಯ ತತ್ತ್ವವಾಗಿದ್ದು ಇಂದಿನ ನಮ್ಮ ಕಮ್ಯುನಿಸಂಗೆ ಹತ್ತಿರವಾದ ಆದರ್ಶದ ಹಾಗಿದೆ ಎಂಬುದನ್ನು ಖಂಡಿತ ಒಪ್ಪಿಕೊಳ್ಳಬೇಕು.

ಭಾರತೀಯ ದರ್ಶನಗಳು ಹೇಳುವ ‘ಕರ್ಮ’ ಮತ್ತು ‘ಕರ್ಮ ಸಿದ್ಧಾಂತ’ಗಳು ಇದಕ್ಕಿಂತ ತೀರಾ ಭಿನ್ನ. ಭಗವದ್ಗೀತೆಯಲ್ಲಿ ಕರ್ಮಕ್ಕೆ ಸಂಬಂಧಿಸಿದ ಪ್ರಮುಖ ಶ್ಲೋಕವೊಂದು ಹೀಗಿದೆ.
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಯತ್ಯ ಕರ್ಮಕೃತ್
ಕಾರ್ಯತೇ ಹ್ಯವಶಃ ಕರ್ಮ ಸರ್ವಪ್ರಕೃತಿಜೈರ್ಗುಣೈಃ
( ಕರ್ಮಯೋಗ ಶ್ಲೋಕ. 5)

‘ಪ್ರತಿಯೊಬ್ಬನೂ ಒಂದು ಕ್ಷಣವೂ ಬಿಡದೆ ತನ್ನ ಪ್ರಕೃತಿಗೆ ಅನುಗುಣವಾಗಿ ಮತ್ತು ಪರವಾಗಿ ಕೆಲಸ ಮಾಡುತ್ತಲೇ ಇರುವನು’ ಎನ್ನುವುದು ಇದರ ಭಾವಾರ್ಥ. ಅದು ನಿಜವೇ ಆಗಿದ್ದರೂ, ‘ಯಾರು ಕರ್ಮೇಂದ್ರಿಯಗಳನ್ನು ನಿಗ್ರಹಿಸಿಯೂ, ಮನಸ್ಸಿನಲ್ಲಿ ಇಂದ್ರಿಯ ವಿಷಯವನ್ನು ಸ್ಮರಿಸುವನೋ, ಅಂಥವನು ವಿಮೂಢಾತ್ಮ ಮತ್ತು ಮಿಥ್ಯಾಚಾರಿ ಎಂಬಂತಾಗುತ್ತದೆ. ಅದೇ ಗೀತೆ (ಕರ್ಮಯೋಗ-6) ‘ಯಾರು ತನ್ನ ಇಂದ್ರಿಯಗಳನ್ನು ಮನಸ್ಸಿನಿಂದ ತಡೆದು ಕರ್ಮೇಂದ್ರಿಯಗಳ ಮೂಲಕ ಕರ್ಮದಲ್ಲಿ ಅನಾಸಕ್ತನಾಗಿರುತ್ತಾನೋ ಅವನು ಶ್ರೇಷ್ಠನೆನೆಸಿಕೊಳ್ಳುತ್ತಾನೆ’ (ಕರ್ಮಯೋಗ – 7) ಎನ್ನುತ್ತದೆ. ಈ ರೀತಿ ಗೀತೆಯು ‘ಕರ್ಮದಲ್ಲಿ ಅನಾಸಕ್ತ’ನಾಗಿರಬೇಕು ಎಂದೂ ಹೇಳುತ್ತದೆ. ಇದನ್ನು ಅನೇಕರು ಅಪಾರ್ಥ ಮಾಡಿಕೊಂಡಿದ್ದಾರೆ. ಅದೇ ರೀತಿಯಲ್ಲಿ
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋsಸ್

ಕರ್ಮಣಿ

ಎಂಬ ಶ್ಲೋಕವನ್ನೂ ನಮ್ಮ ಜನ ತಪ್ಪಾಗಿ ಅರ್ಥೈಸಿದ್ದೇ ಹೆಚ್ಚು! ಬುದ್ಧಿಜೀವಿ ಲೇಖಕರೊಬ್ಬರು ಇದನ್ನು ‘ಉಚಿತವಾಗಿ ಕೆಲಸ ಮಾಡು’ ಎನ್ನುತ್ತಾ ‘ಗೀತೆ ನೀ ಹೇತೆ’ ಎಂಬಂತೆ ಬರೆದದ್ದೂ ಇದೆ!

ವಾಸ್ತವವಾಗಿ ಇದರ ಅರ್ಥ ‘ಕರ್ಮದಲ್ಲಿ ಅನಾಸಕ್ತನಾಗಿರು’ ಅಥವಾ ‘ಕರ್ಮಫಲ’ಕ್ಕೆ ನೀನು ಕಾರಣನಾಗದೆ ಇರು, ಫಲ ನಿರೀಕ್ಷಿಸದೇ ಇರುವ ರೀತಿ ಕೆಲಸ ಮಾಡು’ ಎಂದು ಹೇಳುವುದಲ್ಲ. ಬದಲಾಗಿ ‘ನನ್ನಿಂದಾಗಿ ಇದು ಆಯಿತು. ಈ ಫಲಕ್ಕೆ ನಾನೇ ಒಡೆಯ ಎಂದು ಭಾವಿಸಬೇಡ. ಅದು ಒಳ್ಳೆಯದೇ ಆಗಿದ್ದರೆ, ನಿನಗೆ ಫಲವನ್ನು ತಾನಾಗಿಯೇ ಕೊಟ್ಟೇ ಕೊಡುತ್ತದೆ. ಯಾಕೆಂದರೆ ಫಲದ ನಿರ್ಣಯ ನಿನ್ನಲ್ಲಿಲ್ಲ. ಪ್ರಯತ್ನ ಮಾತ್ರ ನಿನ್ನದು. ಕರ್ಮ ಎನ್ನುವುದು ನಿನ್ನ ನಿರ್ಧಾರದ್ದಲ್ಲ. ಭಗವಂತನ ನಿರ್ಧಾರ’ ಎನ್ನುತ್ತದೆ. ಹಾಗಾಗಿ ಅದರ ಫಲವನ್ನು ದೇವರೇ ನಿರ್ಧರಿಸುತ್ತಾನೆ ಎಂದು ಅದು ಹೇಳುತ್ತದೆ. ಯಾಕೆಂದರೆ ಈ ಮಾತನ್ನು ಯಾರು, ಯಾರಿಗೆ? ಎಲ್ಲಿ? ಮತ್ತು ಯಾಕೆ? ಹೇಳಿದರು ಎಂದು ನೋಡದೆ, ನಾವು ಒಟ್ಟಾರೆಯಾಗಿ ಅದಕ್ಕೆ ಅನರ್ಥ ಕಲ್ಪಿಸಿಕೊಂಡಿದ್ದೇವೆ. ಇದು ಶ್ರೀ ಕೃಷ್ಣನು ಯುದ್ಧ ಭೂಮಿಯಲ್ಲಿ ನಿಸ್ತೇಜನಾಗಿ ನಿಂತಿದ್ದ ಅರ್ಜುನನ್ನು ಪ್ರಚೋದಿಸಲಿಕ್ಕಾಗಿ ‘ನೀನು ಕೌರವಾದಿಗಳನ್ನು ಕೊಂದರೆ, ಅದರ ಫಲದ ದೋಷವು ನಿನಗೆ ತಟ್ಟುವುದಿಲ್ಲ, ಅದರ ಫಲಾಫಲಗಳನ್ನು (ಪಾಪ ಪುಣ್ಯಗಳನ್ನು) ನಿರ್ಧರಿಸುವವನು ಬೇರೊಬ್ಬನಿದ್ದಾನೆ (ಅರ್ಥಾತ್ ನಾನು)’ ಎನ್ನುವುದೇ ಆಗಿದೆ. ಶ್ರೀ ಕೃಷ್ಣನ ಈ ಉದ್ದೇಶದ ನೆಲೆಯಲ್ಲೇ ಈ ಶ್ಲೋಕವನ್ನು ಅರ್ಥೈಸ ಹೊರಟರೆ ಇದು ಆಧ್ಯಾತ್ಮದ ಮಾತುಗಳೇ ಆಗುವುದು ಖಂಡಿತ. ಭೌತಿಕ ನೆಲೆಯಲ್ಲಿ ನೋಡಿದರೆ ‘ಶೋಷಣೆಗೆ ಕಾರಣ’ ಎನ್ನುವುದು ‘ನಿಜವಾಗಿ’ ಕಾಣಬಹುದು.
ಈ ಮಾತಿಗೆ ಗೀತೆಯಲ್ಲೇ ಸ್ಪಷ್ಟನೆ ಇದೆ. ‘ಮೋಕ್ಷ ಸನ್ಯಾಸ ಯೋಗ’ದ (10ನೇ ಅಧ್ಯಾಯದ 17ನೇ ಶ್ಲೋಕ) ಈ ಕೆಳಗಿನ ಶ್ಲೋಕವು.
ಯಸ್ಯ ನಾಹಂ ಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ.
ಹತ್ಪಾಪಿ ಸ ಇಮಾಂಲ್ಲೋಕಾನ್ನ ಹಂತಿ ನನಿಬುಧ್ಯತೇ||
ಮೋಕ್ಷ ಸನ್ಯಾಸಯೋಗ -ಶ್ಲೋಕ-12)

‘ನನ್ನ ಕೈಯಲ್ಲಿ ನೀನು ನಿಮಿತ್ತನಾಗು’ ಎಂಬ ಭಾವವನ್ನು ಹೊಂದಿದ ಶ್ರೀಕೃಷ್ಣನ ಉಪದೇಶದ ಮಾತಾಗಿದ್ದು ‘ಯಾರಿಗೆ ನಾನು ಕರ್ತೃ’ ಎಂಬ ಭಾವ ಇರುವುದಿಲ್ಲವೋ, ಯಾರ ಬುದ್ಧಿ ಮಲಿನವಾಗಿಲ್ಲವೋ ಅವನು ಈ ಲೋಕದಲ್ಲಿ ಯಾರನ್ನು ಕೊಂದರೂ ಆ ಪಾಪವು ಅವನಿಗೆ ತಟ್ಟುವುದಿಲ್ಲ’ ಎಂಬ ಅರ್ಥವನ್ನು ಸ್ಫುರಿಸುತ್ತದೆ. ಇದು ಯುದ್ಧ ಭೂಮಿಯ ನಿಯಮವಾಗಿದ್ದು, ಇಂದೂ ಕೂಡಾ – ಸೇನಾಧಿಪತಿಯ ಆದೇಶದಂತೆ ಇದಿರಾಳಿಗಳನ್ನು ಸಂಹರಿಸುವ ಸೈನಿಕನಿಗೆ ಪಾಪವೂ ಇಲ್ಲ, ಪುಣ್ಯವೂ ಇಲ್ಲ ಎಂಬಂತಿರುವುದು ನಮಗೆ ಗೊತ್ತು. ಯಾಕೆಂದರೆ ಅರ್ಜುನನು ಕುರುಕ್ಷೇತ್ರದಲ್ಲಿ ಎದುರಾಳಿಯಾಗಿರುವವರು ತನ್ನ ಬಂಧುಗಳು ಎಂದು ತರ್ಕಿಸಿದ್ದಾಗ ‘ಅವರನ್ನು ವೈರಿಗಳು ಎಂದು ನೀನು ಪರಿಗಣಿಸಿ ಕೊಲ್ಲುವುದು ಪಾಪವಲ್ಲ. ಅದಕ್ಕೆ ನೀನು ಕಾರಣನೂ ಅಲ್ಲ. ಕೇವಲ ನಿಮಿತ್ತ ಮಾತ್ರ’ ಎಂಬ ಅರ್ಥದ ಸ್ಫುರಣೆಯನ್ನು ಈ ಶ್ಲೋಕವು ನೀಡುತ್ತದೆ.

ಈ ಸನ್ನಿವೇಶವನ್ನು ಗಮನಿಸಿದರೆ, ಒಟ್ಟಾರೆಯಾಗಿ ‘ಫಲಾಫಲ ನಿರೀಕ್ಷಿಸದೆ ಕೆಲಸ ಮಾಡು’ ಎಂಬುದು ಗೀತೆಯನ್ನು ಅರ್ಥಮಾಡದೆ ಅದಕ್ಕೆ ನಾವು ಮಾಡುವ ಅಪಚಾರ ಎಂದಂತಾಗುತ್ತದೆ.

ಇಂಥ ಕರ್ಮದ ಸ್ವರೂಪವನ್ನು ಆಧ್ಯಾತ್ಮಿಕವಾಗಿ (ಭೌತಿಕವಾಗಿ ಅಲ್ಲ) ನೋಡುವುದಾದರೆ ಕರ್ಮದಲ್ಲಿ ಮೂರು ಪ್ರಭೇದಗಳು ಇರುತ್ತವೆ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಇದರಲ್ಲಿ ಮೊದಲನೆಯದು ‘ವಿಹಿತ ಕರ್ಮ’ (ಹಿತವಾದದ್ದನ್ನು ಮಾಡುವುದು) ಅಂದರೆ ಸಾಧನೆಯ ಮೂಲಕ ಅರ್ಥಾತ್ ಆಧ್ಯಾತ್ಮಿಕ ಜ್ಞಾನದ ಮೂಲಕ ಬದುಕನ್ನು ಅರ್ಥ ಮಾಡುವುದು ಮತ್ತು ಅದಕ್ಕೆ ಒಂದು ಅರ್ಥವನ್ನು ಕೊಡುವುದು ಹಾಗೂ ಆ ನೆಲೆಯಲ್ಲೇ ಅದನ್ನು ಅರ್ಥೈಸುವುದು. ಇದರಲ್ಲಿ ಮತ್ತೆ ಎರಡು ಪ್ರಬೇಧಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಒಂದು ಜ್ಞಾನ ಮಾರ್ಗವಾದರೆ; ಇನ್ನೊಂದು ಕರ್ಮ ಮಾರ್ಗವಾಗಿದ್ದು ಈ ಎರಡೂ, ಮಾರ್ಗಗಳನ್ನು ಬಸವಾದಿ ಶರಣರು ಸರಿಯಾಗಿ ಅರ್ಥೈಸಿ, ಈಗಾಗಲೇ ಹೇಳಿದ ರೀತಿಯಲ್ಲಿ ‘ಕಾಯಕ’ವಾಗಿಸಿ ಅದಕ್ಕೆ ಖಚಿತವಾದ ಪರಿಕಲ್ಪನೆಯನ್ನು ಕೊಟ್ಟಿರುವುದು ಸರಿಯಾಗಿದೆ. ಈ ನೆಲೆಯಿಂದ ಚಿಂತಿಸಿದರೆ, ಬಸವ ತತ್ವದ ಕಾಯಕ ಸಿದ್ದಾಂತವು ಭಾರತೀಯ ಸಂಸ್ಕೃತಿ ಮೂಲತತ್ತ್ವಕ್ಕೆ ಹೊರತಾದುದಲ್ಲ. ಸಾಧನೆಯ ಮೂಲಕ ಜ್ಞಾನಾರ್ಚನೆಯನ್ನು ಮಾಡಬೇಕೆನ್ನುವುದು ‘ಜ್ಞಾನಾರ್ಜನೆ’ಯೇ! ನಮ್ಮ ಹಿರಿಯರ ಚಿಂತನೆಯು ಪರಬ್ರಹ್ಮನ ಕುರಿತಾಗಿ ಇದರಲ್ಲೇ ಬರುತ್ತಿದ್ದು, ಇದನ್ನು ನಮ್ಮ ಷಡ್ದರ್ಶನಗಳ ನೆಲೆಯಲ್ಲಿ ಅರ್ಥೈಸಿ, ಅದಕ್ಕೆ ‘ಶಕ್ತಿವಿಶಿಷ್ಟಾದ್ವೈತ’ ಎಂಬ ಹೊಸ ತತ್ತ್ವವನ್ನು ರೂಪಿಸಿದವರು ಶರಣರು. ಅವರಲ್ಲೂ ಅಲ್ಲಮಪ್ರಭುದೇವ ಇದರಲ್ಲಿ ಮೊದಲಿಗನು ಎನ್ನಬೇಕು, ಆಮೇಲೆ ಚೆನ್ನಬಸವಣ್ಣ ಮತ್ತು ಅಕ್ಕಮಹಾದೇವಿಯನ್ನೂ ಇಲ್ಲಿ ಹೆಸರಿಸಬೇಕು.

ಎರಡನೆಯದ್ದು ‘ಕರ್ತವ್ಯಕರ್ಮ’ಗಳಾಗಿದ್ದು ಅವು ಪ್ರತಿಯೊಂದು ವರ್ಣದವರು (ವರ್ಣ ಅಂದರೆ ಜಾತಿಯಲ್ಲ. ಅದು ಕರ್ಮದಿಂದ ಪರಿಗಣಿಸಲ್ಪಟ್ಟ ವೃತ್ತಿ ಮೂಲ) ಮಾಡಬೇಕಾದ ಕರ್ತವ್ಯಗಳಾಗಿದ್ದು, ಬ್ರಾಹ್ಮಣ ವರ್ಣದವರು ಜ್ಞಾನಾರ್ಚನೆ ವಿದ್ಯಾದಾನ ಇತ್ಯಾದಿಯಲ್ಲಿರಬೇಕು. ಕ್ಷತ್ರಿಯ ವರ್ಣದವನು ಇಡೀ ಸಮಾಜವನ್ನು ಸಂರಕ್ಷಿಸುವುದು ಮತ್ತು ಅವರನ್ನು ನೆಮ್ಮದಿಯಾಗಿ ಇಡುವ ಸಮಾಜಮುಖಿ ಕೆಲಸಗಳಲ್ಲಿ ತೊಡಗಬೇಕು. ವ್ಯೆಶ್ಯರು ವಾಣಿಜ್ಯೋದ್ಯಮವನ್ನು ಕೈಗೊಂಡು ಜನರ ಸಂಪನ್ಮೂಲವನ್ನು ಚೆನ್ನಾಗಿ ಕಾಪಿಡಬೇಕು ಮತ್ತು ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸಬೇಕು ಎಂದಿದ್ದರೆ, ಶೂದ್ರವರ್ಣದವರು ಜನಸೇವೆ ಮತ್ತು ಲೋಕಸೇವೆಯಲ್ಲಿ ತಮ್ಮತನವನ್ನು ಮೆರೆಯಬೇಕು ಎಂಬಂತಿದೆ.

ಈ ನಾಲ್ಕು ವರ್ಣಗಳು ಕ್ರಮವಾಗಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ ಎನ್ನುವ ನಾಲ್ಕು ಆಶ್ರಮಗಳನ್ನು ಕಾಲ ಕಾಲಕ್ಕೆ ಅನುಸಾರವಾಗಿ ಪಾಲಿಸುವುದು ‘ಕರ್ಮ’ವಾಗುತ್ತದೆ. ಇದರಲ್ಲೂ ಮತ್ತೆ ಎರಡು ಪ್ರಭೇದಗಳು ಇದ್ದು ಒಂದು ‘ನೈಮಿತ್ತಕ ಕರ್ಮ’ವಾದರೆ ಇನ್ನೊಂದು ‘ನಿತ್ಯಕರ್ಮ’ವಾಗಿದೆ. ಈ ಎರಡೂ ಕೂಡಾ ಪ್ರತಿಯೊಂದು ವರ್ಣಕ್ಕೂ ಪ್ರತಿಯೊಂದು ಆಶ್ರಮಕ್ಕೂ ಸಮಾನವಾಗಿದ್ದು, ನೈಮಿತ್ತಿಕ ಕರ್ಮದಲ್ಲಿ ದೇವತಾರಾಧನೆಗಳು, ಪ್ರಾಯಶ್ಚಿತ ಕರ್ಮಗಳು, ಶಾಂತಿಪೂಜೆಗಳು, ಪಿತೃ ಕಾರ್ಯಗಳು, ತೀರ್ಥಯಾತ್ರೆ, ಯಜ್ಞ ಯಾಗಾದಿಗಳು-ಆಯಾ ವರ್ಣಕ್ಕೆ ಅನುಸಾರವಾಗಿ ಪಾಲಿಸಬೇಕು ಎನ್ನುವುದು ಭಾರತೀಯ ಸಂಸ್ಕೃತಿಯ ಒಟ್ಟು ಆಶಯವಾಗಿದೆ.

ಮೂರನೆಯದ್ದು ಕರ್ಮಕ್ಕೆ ‘ನಿಷಿದ್ಧ ಕರ್ಮ’ ಎನ್ನುವ ಪರಿಕಲ್ಪನೆ ಇದ್ದು, ಇದು ಮೊದಲನೆಯದ್ದಾದ ‘ವಿಹಿತಕರ್ಮ’ ಮತ್ತು ಎರಡನೆಯದಾದ ‘ಕರ್ತವ್ಯಕರ್ಮ’ಕ್ಕಿಂತ ವಿರುದ್ಧವಾದದ್ದಾಗಿದೆ (ಅದನ್ನು ಮೇಲಿನ ಮಾಹಿತಿಗಳಿಂದ ತಿಳಿದುಕೊಳ್ಳಬಹುದು.)

ಈ ಎಲ್ಲಾ ಬಗೆಯ ಕರ್ಮಗಳ ನಡುವೆ ಇವುಗಳಿಗೂ ಅನ್ವಯಿಸುವ ಹಾಗೆ ಮತ್ತೆ ಕರ್ಮವನ್ನು ‘ಪ್ರಾರಬ್ದ ಕರ್ಮ’ ಮತ್ತು ‘ಸಂಚಿತ ಕರ್ಮ’ ಎಂದು ನಮ್ಮ ಶಾಸ್ತ್ರಗಳು ವಿಂಗಡಿಸಿವೆ, ‘ಪ್ರಾರಬ್ಧ ಕರ್ಮ’ವೆಂದರೆ ಹಿಂದಿನ ಜನ್ಮದ ಕರ್ಮಗಳು ಅಂದರೆ ಹಿಂದಿನ ಜನ್ಮದಲ್ಲಿ ಮಾಡಿರಬಹುದಾದ ತಪ್ಪುಗಳು, ಅಧರ್ಮ ಕಾರ್ಯಗಳು, ಮತ್ತು ಆ ಜನ್ಮದಲ್ಲಿ ಅವುಗಳನ್ನು ಪ್ರಾಯಶ್ಚಿತ ಮಾಡಿಕೊಳ್ಳದಿದ್ದರೆ ಅಥವಾ ಅವುಗಳ ಬಗ್ಗೆ ಪಶ್ಚಾತ್ತಾಪ ಪಡೆಯದಿದ್ದರೆ, ಅವು ಈ ಜನ್ಮಕ್ಕೂ ವಂಶವಾಹಿನಿಯಾಗಿ ಜೀನ್ ಸ್ವರೂಪದಲ್ಲಿ ನಮ್ಮ ಜೊತೆ ಬರುತ್ತವೆ ಎಂಬ ಪರಿಕಲ್ಪನೆ. ಅನೇಕರು ಇದನ್ನು ನಂಬುತ್ತಾರೆ. ಅಲ್ಲದೆ ತಾವು ಈ ಜನ್ಮದಲ್ಲಿ ಅದನ್ನು ಅನುಭವಿಸಬೇಕಾಗುತ್ತದೆ ಎನ್ನುವುದೂ ಅವರ ‘ನಂಬಿಕೆ’ಯಾಗಿದೆ. ಈ ಕುರಿತು, ‘ವಿವೇಕ ಚೂಡಾಮಣಿ’ಯಲ್ಲಿ ‘ಪ್ರಾರಬ್ದಂ ಬಲವತ್ತರಂ ಬಲುವಿದಾಂ ಭೋರ್ಗೇತಸ್ಯ ಕ್ಷಯಃ’ ಎಂಬ ಮಾತಿದ್ದು, ಅದು ಈ ನಂಬಿಕೆಯನ್ನು ಸಮರ್ಥಿಸುತ್ತದೆ.

‘ಸಂಚಿತ ಕರ್ಮ’ವೆಂದರೆ ನಾವು ಆಚರಿಸಿದ ಕರ್ಮಗಳು. ಅವುಗಳಲ್ಲಿ ತಪ್ಪುಗಳಾಗಿದ್ದರೆ, ಪ್ರಾಯಶ್ಚಿತಾದಿಗಳಿಂದ ಅವನ್ನು ಪರಿಹರಿಸಿಕೊಳ್ಳಬಹುದು ಎಂಬ ಒಂದು ತಾತ್ತ್ವಿಕ ನಿಲುವಾಗಿದೆ.

ಭಾರತೀಯ ಸನಾತನ ಧರ್ಮವು ಪುನರ್ಜನ್ಮವನ್ನು ಒಪ್ಪುವುದರಿಂದ ‘ಕರ್ಮ’ ಎನ್ನುವುದು ಕೇವಲ ಭೌತಿಕ ನೆಲೆಯ ‘ಕೆಲಸ’ ಎಂಬ ಮಿತ ಅರ್ಥ ನೀಡುವ ಶಬ್ದವಾಗಿರದೆ, ಅದು ‘ಇಹ’ ಮತ್ತು ‘ಪರ’ದ ನಡುವಿನ ಒಂದು ಸಂಬಂಧವನ್ನು ಜೋಡಿಸುವ ಪರಿಕಲ್ಪನೆ ಅಥವಾ ತೊಟ್ಟಿಲಾಗಿದೆ ಎಂದು ನಾವು ಪರಿಕಲ್ಪಿಸಬಹುದು.

ಆದರೆ ‘ಪರ’ ಎನ್ನುವುದು ಉಂಟೋ ಇಲ್ಲವೋ? ಎಂದು ನನ್ನಂಥವನಿಗೆ ತರ್ಕಿಸುವುದು ಕಷ್ಟಸಾಧ್ಯ! ಯಾಕೆಂದರೆ ದೇವರು ಎನ್ನುವುದು ಹೇಗೆ ನಂಬಿಕೆಯ ಆಧಾರದಲ್ಲಿ ಇರುವುದೋ ಹಾಗೇ ಪರವೂ ನಂಬಿಕೆಯಲ್ಲೇ ಹುಟ್ಟಿದೆ ಮತ್ತು ಉಳಿದಿದೆ ಎನ್ನುವುದು ನನ್ನ ನಿಲುವು.

ಬೌದ್ಧ ಧರ್ಮವು ದೇವರ ಬಗ್ಗೆ ಮಾತನಾಡುವುದೇ ಇಲ್ಲ! ಅದು ಅನಾತ್ಮವಾದವನ್ನು ಒಪ್ಪಿದೆ. ಆ ಕಾರಣದಿಂದ ಬೌದ್ಧ ಧರ್ಮದಲ್ಲಿ ಪುನರ್ಜನ್ಮದ ಪರಿಕಲ್ಪನೆ ಇಲ್ಲ. ಉಳಿದ ಹಾಗೆ ಜೈನ ಧರ್ಮವು ಕೂಡಾ ‘ಇಹದ ಧರ್ಮ’ದ ಮೇಲೆಯೇ ಜನ್ಮದ ಸಾರ್ಥಕ್ಯವನ್ನು ಒಪ್ಪುತ್ತದೆ, ಆದರೆ ಪುನರ್ಜನ್ಮವನ್ನು ನಿರಾಕರಿಸುವುದಿಲ್ಲ.

ವಿದೇಶೀಯರ ಪರಿಕಲ್ಪನೆಯಲ್ಲಿ ‘ಕರ್ಮ’ ಎನ್ನುವುದು ಕೇವಲ ‘ವರ್ಕ್’(Work) ಆದರೂ, ಅವರೂ ಅದಕ್ಕೆ Work is Worship ಎನ್ನುತ್ತಾರೆ. ಇದು ‘ಕಾಯಕವೇ ಕೈಲಾಸಕ್ಕೆ’ ಎನ್ನುವ ಪರಿಕಲ್ಪನೆಗೆ ಹತ್ತಿರವಾದದ್ದೇ ಆಗಿದೆ.

ಈ ನೆಲೆಯಲ್ಲಿ ಭಾರತೀಯ ದರ್ಶನಗಳಲ್ಲಿನ ‘ಕರ್ಮ’ಕ್ಕೆ ಭೌತಿಕ ಸ್ವರೂಪಕ್ಕಿಂತ ಅಧ್ಯಾತ್ಮ ಸ್ಪರ್ಶವೇ ಹೆಚ್ಚು ಒತ್ತು ಇದ್ದ ಹಾಗಿದೆ ಎನ್ನಬಹುದು. ಹಾಗಾಗಿ ಮೇಲೆ ವಿವರಿಸಿದ ಕರ್ಮದ ವಿವಿಧ ಮುಖಗಳ ಹಿಂದೆ ‘ಪುರುಷಾರ್ಥ’ದ ಲೇಪನವೂ ಇರುತ್ತದೆ ಎಂದುಕೊಂಡರೆ, ಇಂಥ ಕರ್ಮಗಳ ಪ್ರತಿಯೊಂದು ಮುಖಕ್ಕೂ ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಸೂಕ್ಷ್ಮ ಆವರಣವೂ ಇದೆ ಎಂಬಂತಾಗುತ್ತದೆ. ಈ ನೆಲೆಯಲ್ಲಿ ಬಸವಾದಿ ಶರಣರ ‘ಕಾಯಕ’ವು ವೈದಿಕ ಧರ್ಮದ ‘ಕರ್ಮ’ದ ನಿಷ್ಪತ್ತಿಗಿಂತ ಭಿನ್ನವಾಗಿದ್ದರೂ, ಆಶಯದಲ್ಲಿ ಅದು ‘ಕರ್ಮ’ದ ಹತ್ತಿರ ಹತ್ತಿರವೇ ಇದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಕರ್ಮ ಮತ್ತು ಕಾಯಕ”

  1. Raghavendra Mangalore

    ‘ ಜ್ಞಾನಸತ್ರ ‘ ದ ಲೇಖನ…ಕರ್ಮದ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸಿದ ಪರಿ ತುಂಬಾ ಚೆನ್ನಾಗಿದೆ. ನಮೋ ನಮಃ ಡಾ. ಮೊಗಸಾಲೆ ಅವರಿಗೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter