ಮುಂಬಯಿಯಲ್ಲೂ ಚೆಂಡೆ ಮದ್ದಳೆಯ ಸದ್ದು!

ಮುಂಬಯಿಯಲ್ಲೂ ಚೆಂಡೆ ಮದ್ದಳೆಯ ಸದ್ದು!

ನಾ ಕಂಡ ಮುಂಬಯಿ ಯಕ್ಷರಂಗ 

ಎಲ್ಲ ದುಡಿಮೆಯೂ ಸೃಜನಶೀಲವೇ ಎನ್ನುವ ಬಹುಭಾಷೆ, ಬಹುಸಂಸ್ಕೃತಿಯ ಈ ಮುಂಬಯಿ ಮಹಾನಗರದಲ್ಲಿ ಕನ್ನಡಿಗರು ತಮ್ಮದೇ ಆದ ಅಸ್ಮಿತೆಯನ್ನು ಶತಮಾನಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಮನೆಮಾತು ತುಳು, ಕೊಂಕಣಿ, ಕೊಡವ ,ಬ್ಯಾರಿ, ಏನೇ ಆಗಿದ್ದರೂ ಇವರೆಲ್ಲ ಕನ್ನಡ ಪ್ರೀತಿಯನ್ನು ಕಾಣಿಸಿದರು. ಕನ್ನಡವಾಗಿ ಬದುಕುತ್ತಾ ಬಂದರು. ಕನ್ನಡದ ಸಂಸ್ಕೃತಿಯನ್ನು ಆಚರಣೆಯಲ್ಲಿ ತಂದರು. ಹತ್ತೊಂಭತ್ತನೇ ಶತಮಾನದಲ್ಲಿ ಅವಿಭಜಿತ ದಕ್ಷಿಣ ಕನ್ನಡಿಗರು ಮುಂಬಯಿಯತ್ತ ಹೆಚ್ಚೆಚ್ಚು ಕಾಲಿಡತೊಡಗಿದರು. ಬರುವಾಗ ಅವರು ತಮ್ಮ ಕರಾವಳಿಯ ನಂಬಿಕೆ ಸಂಸ್ಕೃತಿಯನ್ನೂ, ಭೂತಕೋಲ, ಯಕ್ಷಗಾನವನ್ನೂ ತಂದಿದ್ದರು. ಇವತ್ತಿಗೂ 140ಕ್ಕೂಹೆಚ್ಚು ವರ್ಷಗಳಿಂದ ಸಕ್ರಿಯವಿರುವ ಕರಾವಳಿಯವರ ಪ್ರಥಮ ಸಂಸ್ಥೆ ಶ್ರೀಮದ್ಭಾರತ ಮಂಡಳಿ ಇದಕ್ಕೆ ಸಾಕ್ಷಿರೂಪದಲ್ಲಿದೆ. ಮುಂಬಯಿಯಲ್ಲಿ ಕನ್ನಡ ಗಟ್ಟಿಗೊಂಡಿರುವುದು ಸಮೃದ್ದ ಸಾಹಿತ್ಯ ಕೃಷಿಯಿಂದ ಎನ್ನುವುದಕ್ಕಿಂತಲೂ ಇಲ್ಲಿನ ಕನ್ನಡಿಗರಲ್ಲಿರುವ ಆಧ್ಯಾತ್ಮಿಕ ಭಾವನೆಗಳಿಂದ. ಭಜನೆ, ಕೋಲ,ಯಕ್ಷಗಾನ, ತಾಳಮದ್ದಳೆ,  ಅಯ್ಯಪ್ಪ ಪೂಜೆ, ಶನಿಪೂಜೆ, ದಸರಾ ಉತ್ಸವ, ಹಾಗೂ ಫುಟ್‌ಬಾಲ್ ಇಂತಹ ಆಟದ ಮೂಲಕ ಮುಂಬಯಿ ಮಹಾನಗರದಲ್ಲಿ ಕನ್ನಡಿಗರ ಸಂಘ, ಸಂಘಟನೆಗಳು ದೇವಸ್ಥಾನಗಳು ಆರಂಭವಾಗತೊಡಗಿತ್ತು ಎನ್ನುವುದು ಇತಿಹಾಸದ ದಾಖಲೆ. ಇಲ್ಲಿ ಯಕ್ಷಗಾನ,  ಕನ್ನಡ ರಾತ್ರಿಶಾಲೆಗಳ ಮೂಲಕ ಕನ್ನಡದ ಚಟುವಟಿಕೆಗಳು ವಿಸ್ತರಿಸತೊಡಗಿತು ಎನ್ನುವುದು ಹಿರಿಯ ಕನ್ನಡಿಗರ ಅಭಿಮತ.

ಮೂರನೆಯ ಶತಮಾನದಿಂದ ಕನಿಷ್ಟ 9ನೇ ಶತಮಾನದ ತನಕವಾದರೂ ಕನ್ನಡಿಗರ ಆಡಳಿತಕ್ಕೆ ಮುಂಬಯಿ ಒಳಪಟ್ಟಿರುವುದರಿಂದ ಇಲ್ಲಿ ಕನ್ನಡದ ಛಾಪು ಇದ್ದೇ ಇತ್ತು.

ಕಲೆ ಇರುವುದು ಬದುಕಿಗಾಗಿ. ಪ್ರದರ್ಶಕ ಕಲೆಗಳಲ್ಲಿ ಒಂದು ಸಮರ್ಥ ಜನಪದ ಕಲೆಯಾಗಿ ಯಕ್ಷಗಾನ ತನ್ನದೇ ಆದ ಛಾಪು ಬೀರಿದೆ. ಅದೇ ರೀತಿ ತಾಳಮದ್ದಳೆಯನ್ನೂ ಈ ಮಹಾನಗರದಲ್ಲಿ ಗುರುತಿಸಬಹುದು.

ಮುಂಬಯಿ ಕನ್ನಡಿಗರ ವಿವಿಧ ಪ್ರದರ್ಶಕ ಕಲಾಪ್ರಕಾರಗಳಲ್ಲಿ ಯಕ್ಷಗಾನಕ್ಕೆ ಅಗ್ರಸ್ಥಾನವಿದೆ. ಮುಂಬಯಿ ಯಕ್ಷಗಾನ ರಂಗವನ್ನು ಶ್ರೀಮಂತಗೊಳಿಸಿದವರಲ್ಲಿ ಕರಾವಳಿಯ ಕನ್ನಡಿಗರದು ಹೆಚ್ಚಿನ ಕೊಡುಗೆ ಇದೆ. 19ನೇ ಶತಮಾನದ ‘ಕನ್ನಡ ಸುವಾರ್ತೆ (1883- 85) ಪತ್ರಿಕೆಯಲ್ಲಿ ಮುಂಬಯಿಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಗಳ ವರದಿ ಪ್ರಕಟವಾಗಿರುವುದು ಕಂಡಾಗ ಇಲ್ಲಿನ ಕನ್ನಡಿಗರ ಬದುಕಿನಲ್ಲಿ ಯಕ್ಷಗಾನ ಎನ್ನುವುದು ಹಿಂದಿನಿಂದಲೂ ಸ್ಥಾನ ಪಡೆದಿರುವುದು ಗೌರವದ ಸಂಗತಿಯೂ ಹೌದು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ವೈ.ವಿ. ಮಧುಸೂಧನ ರಾವ್ ಅವರು ಸಿದ್ಧಪಡಿಸಿದ  ‘ಮುಂಬಯಿ ಯಕ್ಷಗಾನ ರಂಗಭೂಮಿ’ ಎಂಬ ಮಹಾಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.ಮುಂಬಯಿ ಯಕ್ಷಗಾನ ರಂಗ ಎಷ್ಟು ಸಮೃದ್ದಿಯಾಗಿದೆ ಎನ್ನುವುದಕ್ಜೆ ಈ ಮಹಾಪ್ರಬಂಧವೇ ಸಾಕು.

21 ನೇ ಶತಮಾನದ ಆರಂಭದ ದಶಕದ ತನಕವೂ ಮಳೆಗಾಲ ಪ್ರಾರಂಭವಾಯಿತು ಎಂದರೆ ಜೂನ್‌ನಿಂದ ಸೆಪ್ಟೆಂಬರ್ ತನಕ ಕರಾವಳಿಯ ಹಲವು ಯಕ್ಷಗಾನ ಮೇಳಗಳನ್ನು, ಕಲಾವಿದರನ್ನು ಸಾಕುತ್ತಿದ್ದುದು ಮುಂಬಯಿ ಮಹಾನಗರದ ಯಕ್ಷಗಾನ ಪ್ರಿಯರು. ಯಕ್ಷಗಾನಕ್ಕೆ ಮಳೆಗಾಲದಲ್ಲಿ ಪ್ರದರ್ಶನದ ಅವಕಾಶವನ್ನು ಮೊದಲು ಕಲ್ಪಿಸಿದ ಶ್ರೇಯಸ್ಸು ಮುಂಬಯಿಯ ಯಕ್ಷಪ್ರೇಮಿಗಳದ್ದು ಎಂದು ದಾಖಲಾಗಿದೆ. ಮುಂಬಯಿ ಯಕ್ಷಗಾನ ಪ್ರದರ್ಶನದಲ್ಲಿ ಕನ್ನಡ, ತುಳು, ಇಂಗ್ಲಿಶ್, ಕೊಂಕಣಿ, ಹಿಂದಿ, ಮರಾಠಿ ಭಾಷೆಗಳ ಪ್ರದರ್ಶನ ನಡೆದಿರುವುದು ಕಾಣುತ್ತೇವೆ. ಆ ಮೂಲಕ ಇತರ ಭಾಷಿಕರಿಗೂ ಯಕ್ಷಗಾನದ ಸೊಬಗನ್ನು ಕಾಣಿಸಲಾಗಿದೆ.

ಗೆರೆಸೊಪ್ಪೆಯ ಶಾಂತ ಕವಿಗಳು ಬರೆದ ‘ರಾವಣ ದಿಗ್ವಿಜಯ’ಎಂಬ ಯಕ್ಷಗಾನ ಪ್ರಸಂಗ ಪುಸ್ತಕ ಮುಂಬಯಿ ವಿಶ್ವವಿದ್ಯಾಲಯದಲ್ಲಿ 1862ರಿಂದ 1877ರ ಶೈಕ್ಷಣಿಕ ಅವಧಿಯಲ್ಲಿ ಸ್ನಾತಕೋತ್ತರ ತರಗತಿಗೆ ಪಠ್ಯವಾಗಿರುವುದು ಉಲ್ಲೇಖವಿದೆ.ಇದನ್ನು ಕಂಡಾಗ ಬ್ರಿಟಿಷ್ ಆಡಳಿತ ಕಾಲದಲ್ಲೇ ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ವಿಷಯಕ್ಕೆ ಸ್ಥಾನ ಲಭಿಸಿತ್ತು. ಯಕ್ಷಗಾನವೇ ಮರಾಠಿ ಸಂಗೀತ ನಾಟಕಕ್ಕೆ ಪ್ರೇರಣೆ ಎನ್ನುವ ಮಾತಿದೆ. 1849ರಲ್ಲಿ ಸಾಂಗ್ಲಿಯ ಆಸ್ಥಾನದಲ್ಲಿ ಕರ್ಕಿ ಹಾಸ್ಯಗಾರರ ಮೇಳ ಯಕ್ಷಗಾನ ಪ್ರದರ್ಶಿಸಿತ್ತು. ಆವಾಗ ಸಾಂಗ್ಲಿ ಆಸ್ಥಾನದ ವಿಷ್ಣುಪಂತ್ ಭಾವೆ ಯಕ್ಷಗಾನದಿಂದ ಸ್ಫೂರ್ತಿಪಡೆದು ಮರಾಠಿ ನಾಟಕ ರಚಿಸಿದರು ಎಂಬ ಉಲ್ಲೇಖಗಳು ಸಿಗುತ್ತವೆ.

19ನೆಯ ಶತಮಾನದ ಕಾಲಘಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಮುಂಬಯಿಯಲ್ಲಿ ಹೆಚ್ಚಿಗಿದ್ದರೂ ಯಕ್ಷಗಾನಕ್ಕೆ ಅವರಿಂದ ಅಂತಹ ಬೆಂಬಲ ಸಿಕ್ಕಿರಲಿಲ್ಲವೆಂದೂ, ಇವರಿಂದ ಯಕ್ಷಗಾನ ಮೇಳಗಳು ಸ್ಥಾಪನೆಯಾಗಲಿಲ್ಲವೆಂದೂ ಕಂಡುಬರುತ್ತದೆ. ಯಕ್ಷಗಾನ ಮೇಳಗಳು ಮುಂಬಯಿಯಲ್ಲಿ ಸ್ಥಾಪನೆಯಾದುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳುವ ಕನ್ನಡಿಗರಿಂದ. ಅದು ಇಪ್ಪತ್ತನೆಯ ಶತಮಾನದಲ್ಲಿ.

ಮುಂಬಯಿಯ ಇತಿಹಾಸದಲ್ಲಿ ದಾಖಲಾಗಿರುವ ಕೆಲವು ಪ್ರಮುಖ ಯಕ್ಷಗಾನ ಮಂಡಳಿಗಳು ಇಂತಿವೆ :

1928ರಲ್ಲಿ ಸುರತ್ಕಲ್ ಮಹಾಲಿಂಗೇಶ್ವರಿ ಯಕ್ಷಗಾನ ಮಂಡಳಿ, 1929ರಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ, 1937ರಲ್ಲಿ ಕಾತ್ಯಾಯಿನಿ ಯಕ್ಷಗಾನ ಮಂಡಳಿ,

1938 ರಲ್ಲಿ ಬೈದರ್ಕಳ ಯಕ್ಷಗಾನ ಮಂಡಳಿ,1939ರಲ್ಲಿ ದಾಕ್ಷಾಯಣಿ ಯಕ್ಷಗಾನ ಮಂಡಳಿ, 1940ರಲ್ಲಿ ಪದ್ಮಶಾಲಿ ಸಮಾಜಸೇವಾ ಸಂಘ ಇವರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಭಾ, 1942ರಲ್ಲಿ ಮುಖ್ಯಪ್ರಾಣ ಯಕ್ಷಗಾನ ಮಂಡಳಿ, 1944ರಲ್ಲಿ ಶ್ರೀ ನರಸಿಂಹ ದಶಾವತಾರ ಯಕ್ಷಗಾನ ಮಿತ್ರಮಂಡಳಿ (ಇವರು ರಾಧಾಕೃಷ್ಣ ವೇಷಹಾಕಿ ಮನೆ ಮನೆಗೆ ತೆರಳಿ ಮಂಡಳಿಗೆ ವಂತಿಗೆ ಸಂಗ್ರಹಿಸುತ್ತಿದ್ದರು.)

1945ರಲ್ಲಿ ಶ್ರೀ ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿ ಆರಂಭವಾಗಿದ್ದು ಇಂದಿಗೂ ಪ್ರದರ್ಶನ ನೀಡುತ್ತಿರುವ ಹಳೆಯ ಮಂಡಳಿ. ಇದಕ್ಕೆ ಅಕಾಡೆಮಿಯ ಗೌರವ ಪುರಸ್ಕಾರವೂ ಲಭಿಸಿದೆ (ಇದರ ಸಂಸ್ಥಾಪಕರು ಎರ್ಮಾಳು ಬೂದ ಸುವರ್ಣ), 1956ರಲ್ಲಿ ಕಾಶೀ ಮಠಾಧೀಶರಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ‘ಜನಪ್ರಿಯ ಯಕ್ಷಗಾನ ಮಿತ್ರಮಂಡಳಿ’ ಉದ್ಘಾಟನೆಯಾಯಿತು.

1965ರಲ್ಲಿ ಅಸಲ್ಫೆಯಲ್ಲಿ ‘ಗೀತಾಂಬಿಕ ಕೃಪಾಪೋಷಿತ ಯಕ್ಷಗಾನ ಮಂಡಳಿ’, 1967ರಲ್ಲಿ ಸಾಕಿನಾಕದಲ್ಲಿ ‘ಶ್ರೀದುರ್ಗಾಪರಮೇಶ್ವರಿ ಕಲಾ ಮಿತ್ರಮಂಡಳಿ.

1970ರಲ್ಲಿ ಜೋಗೇಶ್ವರಿಯಲ್ಲಿ ‘ಶ್ರೀ ರಾಘವೇಂದ್ರ ಸ್ವಾಮಿ ಯಕ್ಷಗಾನ ಸಭಾ’  1977ರಲ್ಲಿ ‘ಜಗದಂಬಾ ಯಕ್ಷಗಾನ ಕಲಾಮಂಡಳಿ’, 1978ರಲ್ಲಿ ‘ಯಕ್ಷಗಾನ ಮಿತ್ರವೃಂದ……. ಹೀಗೆ ಈ ಪಟ್ಟಿ ಬೆಳೆಯುತ್ತಲೇ ಬರುತ್ತಿದೆ. ಇಸವಿ 2000ದ ನಂತರ ಮತ್ತೆ ಹಲವಾರು ಹವ್ಯಾಸಿ ಯಕ್ಷ ಮಂಡಳಿಗಳು ಹುಟ್ಟಿದ್ದು ಬಡಗುತಿಟ್ಟು ಯಕ್ಷಗಾನಕ್ಕೂ ಆದ್ಯತೆ ನೀಡಿವೆ.

ಹೀಗೆ ಮುಂಬಯಿ ಮಹಾನಗರದಲ್ಲಿ ಅನೇಕ ಯಕ್ಷಗಾನ ಮಂಡಳಿಗಳು ಸ್ಥಾಪನೆಗೊಂಡಿದ್ದು ಇಂದಿಗೆ ಹಲವು ಕಾಲಗರ್ಭಕ್ಕೆ ಸೇರಿಹೋಗಿವೆಯಾದರೂ ಇನ್ನು ಕೆಲವು ಈಗಲೂ ಸಕ್ರಿಯವಾಗಿವೆ.ಕೆಲವು ಹೊಸತಾಗಿ ಯಕ್ಷಗಾನ ಸಂಸ್ಥೆಗಳು ಹುಟ್ಟಿಕೊಂಡಿವೆ. 

ಯಕ್ಷಗಾನ ರಂಗದ ಕೆಲವು ವೈಶಿಷ್ಟ್ಯಗಳು:

1967ರಿಂದ ಮುಂಬಯಿ ಆಕಾಶವಾಣಿಯಲ್ಲಿ ಯಕ್ಷಗಾನ ಸಾದರಪಡಿಸಲಾಗುತ್ತಿದ್ದರೆ ಅದರ ಶ್ರೇಯಸ್ಸು ದಿ. ಎಂ.ಎಸ್. ಕೋಟ್ಯಾನ್‌ ಅವರಿಗೆ ಸಲ್ಲಬೇಕು.ಮುಂಬಯಿಯ ಕೆಂಪುದೀಪ ಪ್ರದೇಶಗಳಲ್ಲಿ ಕನ್ನಡಿಗ ಹೆಣ್ಣುಮಕ್ಕಳ ಸಂಖ್ಯೆ ಆ ದಿನಗಳಲ್ಲಿ ಹೆಚ್ಚಿಗಿತ್ತು. ಖೇತ್‌ವಾಡಿ-ಕಾಮಾಠಿಪುರದಂತಹ ಕೆಂಪುದೀಪ ಪ್ರದೇಶದಲ್ಲಿ ಈ ಪ್ರೇಕ್ಷಕರಿಗಾಗಿಯೇ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿತ್ತು.

(ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಎಂಭತ್ತು ತೊಂಭತ್ತರ ದಶಕದಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ ಯಕ್ಷಗಾನ ಪ್ರದರ್ಶನ ಜರಗುತ್ತಿದ್ದ ಸಮಯದಲ್ಲಿ ರೆಡ್ ಲೈಟ್ ಏರಿಯಾದ ಕರಾವಳಿಯ ಮಹಿಳೆಯರೂ ಆಗಾಗ ಯಕ್ಷಗಾನ ನೋಡಲು ಬರುತ್ತಿದ್ದರು.ಆವಾಗಿನ ವಿಶೇಷ ಅಂದರೆ ರಾತ್ರಿ ಒಂದು ಗಂಟೆಯ ನಂತರವೇ ಸಭಾಗೃಹ ತುಂಬುತ್ತಿತ್ತು.  ಬಿಯರ್ ಬಾರ್ ನ ಕೆಲಸಗಾರರು ಬಾರ್ ನ ಬಾಗಿಲು ಮುಚ್ಚಿದ ನಂತರವೇ ಯಕ್ಷಗಾನ ನೋಡಲು ಬರುತ್ತಿದ್ದರು.ಹಾಗಾಗಿ ರಾತ್ರಿ ಒಂದು ಒಂದೂವರೆಯ ನಂತರವೇ ಪ್ರೇಕ್ಷಕರು ತುಂಬುತ್ತಿದ್ದರು.)

ಅಂತೆಯೇ 1945ರಲ್ಲಿ ‘ನರಸಿಂಹ’, ‘ಕಾತ್ಯಾಯಿನಿ’ ಮತ್ತು ‘ದಾಕ್ಷಾಯಿಣಿ’ ಮಂಡಳಿಗಳು ಒಟ್ಟು ಸೇರಿ ತ್ರಿವಳಿ ಆಟ ಪ್ರದರ್ಶಿಸಿದ ದಾಖಲೆ ಕಂಡುಬರುತ್ತದೆ. ಅದು ಈಗಿನ ಸ್ಟಾಕ್ ಎಕ್ಸ್‌ಚೇಂಜ್ ಬಳಿ ಪ್ರದರ್ಶಿಸಿತ್ತು.

(1992ರಲ್ಲಿ ಮುಲುಂಡ್‌ನ ಕಾಳಿದಾಸ್ ಹಾಲ್ ನಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ ‘ಪ್ರಚಂಡ ಜೋಡಾಟ’ ನಡೆದಿತ್ತು.ಆದರೆ, ಸಭಾಗೃಹದೊಳಗೆ ಕರ್ಕಶ ಕಿರುಚಾಟವೇ ಕಂಡುಬಂದು ಕೊನೆಗೆ ಅದು ಕೂಡಾಟ ರೂಪದಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ನಾನೇ ಅದರ ವರದಿಯನ್ನು ಕರ್ನಾಟಕ ಮಲ್ಲದಲ್ಲಿ ಬರೆದಿದ್ದೆ- ಶೀರ್ಷಿಕೆ- ನಡೆಯದ ಪ್ರಚಂಡ ಜೋಡಾಟ)

ವಿಠಲ್‌ದಾಸ್ ಪಂಡಿತ್ ‘ದಿಲ್ಕುಶ್ ಮಂಡಳಿ’ ಆರಂಭಿಸಿ ಸೋತು ಕೊನೆಗೆ ಆವಾಗಿನ ನೂರು ರೂಪಾಯಿ ಮೊತ್ತಕ್ಕೆ ಆಟದ ಸಾಮಗ್ರಿಗಳನ್ನು ನರಸಿಂಹ ಮಂಡಳಿಗೆ ಮಾರಿದರು ಎನ್ನುವ ದಾಖಲೆಯೂ ಇದೆ.

ಪೊಲೀಸರೊಮ್ಮೆ ಅನುಮತಿಯ ವಿಷಯದಲ್ಲಿ ಯಕ್ಷಗಾನ‌ ಪ್ರದರ್ಶನಕ್ಕೆ ದಾಳಿ ನಡೆಸಿದಾಗ ಬಣ್ಣ ಹಾಕಿದ್ದ ವೇಷಧಾರಿಗಳು ಓಡಿಹೋಗಬೇಕಾದ ಘಟನೆಯೂ ನಡೆದಿತ್ತು.ಇದನ್ನು ಅಡ್ವೆ ವಾಸು ಶೆಟ್ಟಿಯವರು ಭಾಷಣದ ನಡುವೆ ಒಮ್ಮೆ ಹೇಳಿಕೊಂಡಿದ್ದರು.

ಇನ್ನೊಂದು ಕತೆ ಹೀಗಿದೆ: ದಾದರ್‌ನಲ್ಲಿ ಒಂದು ಯಕ್ಷಗಾನ ಪ್ರದರ್ಶನ ಜರಗಿತ್ತು.ಅದಕ್ಕೆ ಆಗಿನ 60 ರೂಪಾಯಿ ವೀಳ್ಯ ನಿಗದಿಯಾಗಿತ್ತು. ಸಂಘಟಕರಿಗೆ ಮುಂಗಡ ಬಂದ ಹಣ 20 ರೂಪಾಯಿ ಮಾತ್ರ. ಹಾಗಾಗಿ ಬೆಳಿಗ್ಗೆ ಆಗುತ್ತಿದ್ದಂತೆ ಆ ಸಂಘಟಕರು ನಾಪತ್ತೆಯಾದರು ಎನ್ನುವ ಸಂಗತಿಯೂ ಒಂದೆಡೆ ಉಲ್ಲೇಖವಿದೆ.

ಕನ್ನಡಿಗರಿಗೆ ಇಪ್ಪತ್ತನೆಯ ಶತಮಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮುಖ್ಯ ಏರಿಯಾ ಕೋಟೆ ಪ್ರದೇಶ, ಕ್ರಾಸ್ ಮೈದಾನ, ಆಜಾದ್ ಮೈದಾನಗಳೆಲ್ಲ ಅಂದಿನ ಯಕ್ಷಗಾನ ತರಬೇತಿ ಕೇಂದ್ರಗಳಾಗಿದ್ದವು. ದಕ್ಷಿಣ ಮುಂಬಯಿಯಲ್ಲಿ ಅನೇಕ ಕಟ್ಟಡಗಳಲ್ಲೂ ಅಂದಿನ ದಿನಗಳಲ್ಲಿ ಯಕ್ಷಗಾನ ತರಬೇತಿ ನೀಡಲಾಗುತ್ತಿತ್ತು.

ಅಂದು ಹೆಚ್ಚಾಗಿ ಗ್ಯಾಸ್‌ಲೈಟ್ ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು. 40-50ರ ದಶಕದ ನಂತರ ಅಂದಿನ ಮೇಳಗಳಲ್ಲಿ ಒಂದೊಂದೇ ಮುಚ್ಚಿ ಹೋಗತೊಡಗಿತು.

80-90ರ ದಶಕದ ತನಕವೂ ಮುಂಬಯಿಯಲ್ಲಿ ಯಕ್ಷಗಾನ ವಿಜೃಂಭಿಸುತ್ತಲೇ ಇತ್ತು. ಮಾತುಂಗದ ವಿಶ್ವೇಶ್ವರಯ್ಯ ಸಭಾಗೃಹ, ಪರೇಲ್ ನ ದಾಮೋದರ್ ಠಕ್ಕರ್ಸಿ ಹಾಲ್, ಮುಲುಂಡ್ ನ ಕಾಳಿದಾಸ್ ಸಭಾಗೃಹಗಳಲ್ಲಿ ಯಕ್ಷಗಾನಗಳು ಹೆಚ್ಚು ಪ್ರದರ್ಶಿಲ್ಪಡುತ್ತಿತ್ತು.ಇತ್ತೀಚಿನ ದಿನಗಳಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಯಕ್ಷಗಾನ, ತಾಳಮದ್ದಳೆ ಪ್ರದರ್ಶಿಸಲ್ಪಡುತ್ತಿದೆ. ಷಣ್ಮುಖಾನಂದ ಸಭಾಗೃಹದಂತಹ ಅತಿದೊಡ್ಡ ಸಭಾಗೃಹದಲ್ಲೂ ಯಕ್ಷಗಾನ ಪ್ರದರ್ಶನ ಹೌಸ್‌ಫುಲ್ ಆಗಿ ಬ್ಲ್ಯಾಕ್‌ನಲ್ಲಿ ಟಿಕೇಟ್ ಸೇಲ್ ಆಗಿದ್ದೂ ಇದೆ. ಟಿಕೇಟ್ ಸಿಗದೆ ಯಕ್ಷಗಾನ ಪ್ರೇಕ್ಷಕರು ನಿರಾಶರಾಗಿ ತೊಂಭತ್ತರ ದಶಕದಲ್ಲಿ ಒಂದು ಬಾರಿ ಹಾಲ್ ನ ಹೊರಗೆ ಗಲಾಟೆ ಮಾಡಿದಾಗ ಪೊಲೀಸರು ಬಂದು ಲಾಟೀಚಾರ್ಜ್‌ ನಡೆಸಿದ್ದೂ ಯಕ್ಷಗಾನದ ಜನಪ್ರಿಯತೆಗೆ ಉದಾಹರಣೆ.( ಅನಂತರ ಅಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿರಲಿಲ್ಲ.)

ಮುಂಬಯಿಯ ಅಂಬಲಾಲ್ ಜೋಶಿ ಮಾರ್ಗದ ಸನಿಹದಲ್ಲಿ ಆರಂಭದ ದಿನಗಳಲ್ಲಿ ಬಾರೆದ ಬಿತ್ತಿಲ್ (ಬಾಳೆಯ ಹಿತ್ತಲು) ಎಂದು ಕರೆಯುತ್ತಿದ್ದ ಜಾಗದಲ್ಲಿ ಹೆಚ್ಚಾಗಿ ಯಕ್ಷಗಾನ ಚಟುವಟಿಕೆಗಳು ನಡೆಯುತ್ತಿದ್ದುವು. ಹಿರಿಯ ತಲೆಮಾರು ಅಂದಿನ ಯಕ್ಷಗಾನದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುವುದಿದೆ.

ಮುಂಬಯಿಯಲ್ಲಿ ಆ ಕಾಲಕ್ಕೆ ಕೆಲವೊಮ್ಮೆ ಒಂದೇ ದಿನ ಬೇರೆ ಬೇರೆ ಕಡೆ ನಾಲ್ಕೈದು ಯಕ್ಷಗಾನ ಪ್ರದರ್ಶನಗಳು ನಡೆದಿರುವುದು ಕಂಡಾಗ ಇಲ್ಲಿರುವ ಯಕ್ಷಗಾನ ಪ್ರೇಕ್ಷಕರ ಸಂಖ್ಯೆ ಎಷ್ಟು ಎನ್ನುವುದು ಯಾರೂ ಊಹಿಸಬಹುದು.

ಪದವೀಧರ ಯಕ್ಷಗಾನ ಸಮಿತಿ ಮತ್ತು ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನ:

ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ (ಎಪ್ಪತ್ತರ ದಶಕದಲ್ಲಿ) ದಲಿತ ಸಾಹಿತ್ಯಗೋಷ್ಠಿಯನ್ನು ಇರಿಸಬೇಕೆಂದು ಅಂದು ಚೆನ್ನಣ್ಣ ವಾಲೀಕಾರ ಅವರು ಆಗಿನ ಕ.ಸಾ.ಪ ಅಧ್ಯಕ್ಷರನ್ನು ವಿನಂತಿಸಿದಾಗ ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಅಂತಿಲ್ಲ ಎಂದು ಹೇಳಿ ನಿರಾಕರಿಸಲಾಗಿತ್ತು. ಈ ಘಟನೆಯು ಮುಂದಿನ ದಿನಗಳಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ನಾಂದಿಯಾಯಿತು. ಅದೇ ರೀತಿ ಮುಂಬಯಿಯಲ್ಲೂ ಇಂತಹ ಒಂದು ಬಂಡಾಯ ದೃಶ್ಯ ಕಾಣಿಸಿ ಸಾಹಿತ್ಯ ಸಮ್ಮೇಳನದ ವಿರುದ್ಧವಾಗಿ ‘ಯಕ್ಷಗಾನ ಸಾಹಿತ್ಯ ಸಮ್ಮೇಳನ’ವನ್ನೇ ಮುಂಬಯಿಯಲ್ಲಿ ದಾಖಲಿಸಿದೆ. ಅದರ ರೂವಾರಿ ಎಚ್‌.ಬಿ.ಎಲ್. ರಾವ್.

1973ರಲ್ಲಿ ವಿದ್ಯಾರ್ಥಿ ಮತ್ತು ಪದವೀಧರ ಯಕ್ಷಗಾನ ಮಂಡಳಿ ಸ್ಥಾಪನೆಯಾಗಿ ಮುಂದೆ ‘ವಿದ್ಯಾರ್ಥಿ’ ಎನ್ನುವ ಹೆಸರು ಬಿಟ್ಟು ‘ಪದವೀಧರ’ ಎನ್ನುವ ಹೆಸರಿನಲ್ಲಿ ಪದವೀಧರ ಯಕ್ಷಗಾನ ಸಮಿತಿ 1977ರಲ್ಲಿ ನೋಂದಣಿಗೊಂಡಿತು. ಆ ದಿನಗಳಲ್ಲಿ ಇತರ ಕೆಲವು ಯಕ್ಷಗಾನ ಮಂಡಳಿಗಳಿಗೂ ಪದವೀಧರ ಯಕ್ಷಗಾನ ಮಂಡಳಿಗೂ ವಿವಾದ ಕಾಣಿಸಿ ಎಚ್ ಬಿ.ಎಲ್. ರಾವ್ ಅವರ ಮೇಲೆ ಹಲ್ಲೆ ನಡೆದದ್ದೂ ಇದೆ. ನಂತರ ಡಜನ್ನಿಗೂ ಹೆಚ್ಚು ಕೇಸ್ ನಡೆದು ಗೆದ್ದದ್ದು ಎಚ್‌.ಬಿ.ಎಲ್. ರಾವ್.

ಅದು ಅಕ್ಟೋಬರ್ 10 ಮತ್ತು 11, 1981ರ ಸಮಯ. ಮುಂಬಯಿ ಕನ್ನಡಿಗರ ಮೂರನೆಯ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಸಾಹಿತ್ಯಗೋಷ್ಠಿ ಇಡೋಣವೆಂದರೆ ಸಾಹಿತಿ ವ್ಯಾಸರಾಯ ಬಲ್ಲಾಳರು ಒಪ್ಪಲಿಲ್ಲ. ಇದು ಎಚ್.ಬಿ.ಎಲ್. ರಾವ್ ಅವರಿಗೆ ನೋವಾಯಿತು.23-05-1982ರಂದು ಪದವೀಧರ ಯಕ್ಷಗಾನ ಸಮಿತಿಯ ವಾರ್ಷಿಕೋತ್ಸವ ನಡೆಯಿತು. ಅದರ ಆಮಂತ್ರಣ ಪತ್ರದ ಹಿಂಬದಿಯ ಪುಟದಲ್ಲಿ ಒಂದು ವಿಜ್ಞಾಪನೆ ಪ್ರಕಟಿಸಲಾಗಿತ್ತು. ಅದರ ಮುಖ್ಯಾಂಶ ಹೀಗಿತ್ತು–

“ದಿನಾಂಕ 10, 11 ಅಕ್ಟೋಬರ್ 1981ರಂದು ವಿಶ್ವೇಶ್ವರಯ್ಯ ಸ್ಮಾರಕ ಮಂದಿರದಲ್ಲಿ ನಡೆದ ಮುಂಬಯಿ ಕನ್ನಡಿಗರ ಮೂರನೆಯ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದ ಕಾರ್ಯಾಧ್ಯಕ್ಷ ವ್ಯಾಸರಾಯ ಬಲ್ಲಾಳರು ಮತ್ತು ಸದಸ್ಯರು ಯಕ್ಷಗಾನವೆನ್ನುವ ಶಬ್ದವು ವಿಚಾರಗೋಷ್ಠಿಗಳಲ್ಲಿ ಬಾರದಂತೆ ಜಾಗ್ರತೆ ವಹಿಸಿದ್ದರು. ಮುಂಬಯಿಯಲ್ಲಿ ಕನ್ನಡ ಭಾಷೆಯ ಜಾಗೃತಿಗೆ ಕಾರಣ ರಾತ್ರಿ ಶಾಲೆ ಮತ್ತು ಯಕ್ಷಗಾನ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ವೇದಿಕೆಯಲ್ಲಿ ಭಾಷಣ ಬಿಗಿದು ‘ಬರ್ಕಾಸ್ತು’ಗೊಳ್ಳುವ ಸಮ್ಮೇಳನಗಳಿಂದ ಅಲ್ಲ….”

( ಇಲ್ಲಿ ಒಂದು ಮಾತು ಹೇಳಬೇಕಿದೆ: ಎಚ್ ಬಿ ಎಲ್ ರಾಯರ  (ಬಹುಶ: 60 ರ ಶಾಂತಿಯ ಸಮಯ ಇರಬೇಕು) ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ   ವ್ಯಾಸರಾಯ ಬಲ್ಲಾಳ ದಂಪತಿಯನ್ನೇ ದಂಪತಿ ಪೂಜೆಗೆ ಕರೆದು ಅಲ್ಲಿಗೆ ಅವರಿಬ್ಬರ ವಿವಾದ ಕೊನೆಗೊಂಡಿತು.)

ಈ ವಿಜ್ಞಾಪನೆ ಆ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಯಿತು ಹಾಗೂ 1983ರಿಂದ ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನಕ್ಕೆ ನಾಂದಿಯಾಗಿ ಮುಂಬಯಿಯ ಯಕ್ಷಗಾನ ಜಗತ್ತಿನಲ್ಲೇ ಹೊಸತೊಂದು ಕ್ರಾಂತಿಯಾಯಿತು.

1983ರಿಂದ 2012ರ ತನಕ ‘ಪದವೀಧರ ಯಕ್ಷಗಾನ ಸಮಿತಿ’ ನೇತೃತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಹದಿನೈದು ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನ ಜರಗಿತು. ನೂರಾರು ಅಪ್ರಕಟಿತ ಪ್ರಸಂಗಗಳು ಕೃತಿರೂಪಕ್ಕೆ ಬಂದವು. ಧ್ವನಿಸುರುಳಿಗಳು, ಕಮ್ಮಟಗಳು ಹೀಗೆ ಅಕಾಡೆಮಿ ಮಾಡದಂತಹ ಕೆಲಸವನ್ನು ಎಚ್.ಬಿ.ಎಲ್. ರಾವ್ ಮಾಡಿತೋರಿಸಿದರು. ಅನೇಕ ಕಲಾವಿದರಿಗೆ ಸ್ವರ್ಣ ಪದಕದ ಸನ್ಮಾನ ಮಾಡಿದರು.  ಯಕ್ಷಗಾನ ಮುಖವರ್ಣಿಕೆ ಎನ್ನುವ ಅಪರೂಪದ ಚಿತ್ರಗಳನ್ನೊಳಗೊಂಡ ಕೃತಿಯನ್ನು ಎಚ್ ಬಿ.ಎಲ್ ರಾವ್ ನೀಡಿರುವ ಬಹುದೊಡ್ಡ ಕೊಡುಗೆಗಳಲ್ಲೊಂದು.

ತಾಳಮದ್ದಳೆ :-

ವಾಕ್‌ಚಾತುರ್ಯವೇ ಪ್ರಧಾನವಾಗಿರುವ ಯಕ್ಷಗಾನದ ಮತ್ತೊಂದು ಅಂಗ ತಾಳಮದ್ದಳೆ. ಇದು ಕೂಡಾ ಮುಂಬಯಿಯಲ್ಲಿ ಆಕರ್ಷಣೆ ಉಳಿಸಿಕೊಂಡಿದೆ.ಸಮೃದ್ಧಿಯಾಗಿ ಬೆಳೆದಿದೆ. ಅದೇ ಸಮಯ ತಾಳಮದ್ದಳೆ ಕ್ಷೇತ್ರವೂ ಸದ್ದು ಮಾಡುತ್ತಾ ಮುಂಬಯಿಯಲ್ಲಿ 19ನೆಯ ಶತಾಬ್ದಿಯ ಉತ್ತರಾರ್ಧದಿಂದ ಈ ತನಕ ಯಕ್ಷಗಾನ ರಂಗ ಸಮೃದ್ದಿಯಾಗಿ ಬೆಳೆದಿದೆ.

ತಾಳಮದ್ದಳೆ ಕ್ಷೇತ್ರವೂ ಸದ್ದು ಮಾಡುತ್ತಿದೆ. ಅಡ್ವೆ ವಾಸು ಶೆಟ್ಟಿ, ಕೆ.ಕೆ. ಶೆಟ್ಟಿ, ಮುಂತಾದವರ ಹೆಸರು ಇಲ್ಲಿ ಮರೆಯುವಂತಿಲ್ಲ. ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ‘ಅಜೆಕಾರು ಕಲಾಭಿಮಾನಿಗಳ ಬಳಗ’ದ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅದ್ಧೂರಿಯ ತಾಳಮದ್ದಳೆ ಸಾದರಪಡಿಸುತ್ತಿದ್ದಾರೆ.

ಕಟೀಲು ಸದಾನಂದ ಶೆಟ್ಟಿಯವರ ಭ್ರಾಮರಿ ಯಕ್ಷನೃತ್ಯ ಕಲಾನಿಲಯ, ಕನ್ನಡ ಕಲಾಕೇಂದ್ರ… ಮೊದಲಾದವುಗಳು ಆಸಕ್ತರಿಗೆ, ಮಕ್ಕಳಿಗೆ ಯಕ್ಷರಂಗ ತರಬೇತಿಯನ್ನು ನೀಡುತ್ತಾ ಬರುತ್ತಿವೆ.ಇಂದಿಗೂ ಬೇರೆ ಬೇರೆ ವೃತ್ತಿ ಮಾಡಿಕೊಂಡು ಯಕ್ಷಗಾನ ಕಲೆಯನ್ನು ವಿಜೃಂಭಿಸುವುದರಲ್ಲಿ ಇಲ್ಲಿಯ ಕಲಾವಿದರು ಮತ್ತು ಕಲಾಪೋಷಕರನ್ನು ಅಭಿಮಾನದಿಂದ ಪ್ರಶಂಸಿಸಬೇಕು.

 ಒಂದೊಮ್ಮೆ ಶೇಖರ್ ಬೆಳ್ಮಣ್, ಪೊಳಲಿ ಕೇಶವ, ಎಸ್.ಕೆ. ಪ್ರಭು ಗಳಿದ್ದರೆ ನಂತರ ಎಂ.ಟಿ.ಪೂಜಾರಿ, ಕೊಲ್ಯಾರು ರಾಜು ಶೆಟ್ಟಿ…. ಇಂತಹ ಪ್ರಸಂಗಕರ್ತರೂ ಮುಂಬಯಿಯಲ್ಲಿ ಯಕ್ಷರಂಗಕ್ಕೆ ಶ್ರಮಿಸುತ್ತಾ ಬಂದಿದ್ದಾರೆ. 

ಮುಂಬಯಿಯಲ್ಲಿ 1964ರಲ್ಲಿ ಬೈಬಲನ್ನು ‘ಸತ್ಯವಿಜಯ’ ಹೆಸರಿನಲ್ಲಿ ಯಕ್ಷಗಾನಕ್ಕೆ ರೂಪಾಂತರಿಸಿದ ಶ್ರೇಯಸ್ಸು ಎಚ್.ಬಿ.ಎಲ್. ರಾವ್ ಅವರದ್ದು. ಇದು ಬೈಬಲ್ ಮೇಲಿನ ಮೊದಲ ಯಕ್ಷಗಾನ ‘ಏಸುಕ್ರಿಸ್ತ ಚರಿತ್ರೆ’.

ಮುಂಬಯಿಯಲ್ಲಿ ಯಕ್ಷಗಾನ ಪರಂಪರೆಗೆ ಧಕ್ಕೆ ಕಾಣಿಸಿದಾಗ, ಅಶ್ಲೀಲ, ಕೆಳಮಟ್ಟದ ಯಕ್ಷಗಾನ ಪ್ರದರ್ಶನ ನಡೆದಾಗ ಕರಿಪತಾಕೆ ಹಿಡಿದು ಪ್ರತಿಭಟನೆ ನಡೆದ ಘಟನೆಗಳೂ ಇವೆ. ‘ಯಕ್ಷಗಾನ ಸಂರಕ್ಷಣಾ ಸಮಿತಿ’ ಎಂಬ ಬ್ಯಾನರ್ ಅಡಿ ಅದರ ವಕ್ತಾರ ರಾಮಚಂದ್ರ ಉಚ್ಚಿಲ್ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಯಕ್ಷ ಲೋಕದಲ್ಲಿ ‘ವಜ್ರಪುಷ್ಪ’ ಎನ್ನುತ್ತಿದ್ದರು.

ಇದನ್ನೆಲ್ಲ ಗಮನಿಸಿದರೆ ಕನ್ನಡಿಗರ ಸೃಜನಶೀಲ ನೆಲೆಗಳಲ್ಲಿ ಯಕ್ಷಗಾನ ಕಲೆ ಮಾಡಿದಷ್ಟು ಸಾಧನೆಗಳು ಮತ್ತೊಂದು ಪ್ರದರ್ಶಕ ಕಲೆಯಲ್ಲಿ ಕಾಣಸಿಗಲಾರದು. ಕನ್ನಡಿಗರನ್ನು ಇಲ್ಲಿ ಯಕ್ಷಗಾನವೇ ಒಗ್ಗೂಡಿಸಿವೆ.

ಇಂದು ಯಕ್ಷಗಾನ ಮುಂಬಯಿಯಲ್ಲಿ ಹವ್ಯಾಸಿ ಮೇಳಗಳಿಂದ ಸಮೃದ್ಧವಾಗಿದೆ. ಹಲವಾರು ಪ್ರಶಸ್ತಿಗಳು ಯಕ್ಷಗಾನ ಕಲಾವಿದರಿಗೆಂದೇ ಇವೆ. ಗೋರೆಗಾಂವ್‌ ಕರ್ನಾಟಕ ಸಂಘದ ನಾವಡ ದತ್ತಿ ಯಕ್ಷಗಾನ ಪ್ರಶಸ್ತಿ, ಬಿಲ್ಲವರ ಎಸೋಸಿಯೇಶನ್‌ನ ಪ್ರಶಸ್ತಿ.. ಇತ್ಯಾದಿಗಳನ್ನು ಇಲ್ಲಿ ಸ್ಮರಿಸಬೇಕು.

ಮುಂಬಯಿ ಯಕ್ಷಗಾನದಲ್ಲಿ ಮಹಿಳೆಯರ ಪ್ರವೇಶ:

ಅದು 1998 ರ ದಿನಗಳು. ಬಿಎಸ್ ಕೆ ಬಿ ಅಸೋಸಿಯೇಷನ್ ನ ಗೋಕುಲ ಸಭಾಗೃಹದಲ್ಲಿ ಪುರಂದರ ದಾಸರ ಆರಾಧನೋತ್ಸವದಲ್ಲಿ ಹೆಂಗಳೆಯರು ಬಣ್ಣದ ವೇಷ ಹಾಕಿಯೇ ಬಿಟ್ಟರು.ಮೊದಲು ಪ್ರದರ್ಶಿಸಿದ ಯಕ್ಷಗಾನ ‘ಪ್ರಮೀಳಾರ್ಜುನ ಕಾಳಗ’. ಅನಂತರ ಎರಡನೆಯ ವರ್ಷ ‘ನರಕಾಸುರ ವಧೆ’. ಮಹಿಳಾ ಯಕ್ಷಗಾನದ ರೂವಾರಿ ಗೀತಾ ಎಲ್ ಭಟ್. (ಇವರು ಪ್ರಥಮ ಬಾರಿಗೆ ಮುಂಬಯಿಯಲ್ಲಿ ಶಬರಿ ಮಲೆ ಅಯ್ಯಪ್ಪ ಯಕ್ಷಗಾನದಲ್ಲಿ ಮಹಿಷಿ ಪಾತ್ರ ನಿರ್ವಹಿಸಿದ್ದರು.) ಅನಂತರ ಬಂಟ್ಸ್ ಅಸೋಸಿಯೇಷನ್ ಮಹಿಳೆಯರೂ ಯಕ್ಷಗಾನ ಪ್ರದರ್ಶಿಸಿದ್ದಾರೆ. ಗೋರೆಗಾಂವ್ ಕರ್ನಾಟಕ ಸಂಘದ ಮಹಿಳೆಯರು ತಾಳಮದ್ದಳೆ ಸಾದರ ಪಡಿಸಿದ್ದಾರೆ….ಹೀಗೆ ವಿವಿಧೆಡೆ ಇಂದು ಮಹಿಳೆಯರೂ ಯಕ್ಷಗಾನದಲ್ಲಿ ಸಕ್ರಿಯರಾಗಿದ್ದಾರೆ. ಇಂದು ಮುಂಬಯಿಯ ಅನೇಕ ಸಂಘ ಸಂಸ್ಥೆಗಳು ತಮ್ಮದೇ ಆದ ಯಕ್ಷಗಾನ ಕಲಾವಿದರನ್ನು ತಯಾರು ಮಾಡಿದ್ದಾರೆ. ಆಗಾಗ ಈ ಮಹಿಳಾ ಕಲಾವಿದರು ಯಕ್ಷಗಾನ ಬಯಲಾಟ, ತಾಳಮದ್ದಳೆಗಳನ್ನು ಸಾದರಪಡಿಸುತ್ತಲೇ ಇದ್ದಾರೆ.

ಮುಂಬಯಿಯಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಕೂಡಾ ಸಕ್ರಿಯವಿದ್ದು ರಂಗಭೂಮಿ, ಯಕ್ಷಗಾನ ಕಲಾವಿದರುಗಳಿಗೆ ಕೆಲಸ ಮಾಡುತ್ತಿದೆ.

21ನೇ ಶತಮಾನದ ಮೊದಲ ದಶಕದ ನಂತರ ರಾತ್ರಿ ಯಕ್ಷಗಾನಗಳಿಗೆ ( 10.30 ರ ನಂತರ ಲೌಡ್‌ ಸ್ಪೀಕರ್ ನಿಷೇಧದ ಕಾರಣ) ಸರಕಾರದ ಕಾನೂನಿನಂತೆ ಇಲ್ಲಿ ಅವಕಾಶಗಳನ್ನು ನಿರಾಕರಿಸಲಾಗಿ ರಾತ್ರಿ ಯಕ್ಷಗಾನ ಪ್ರದರ್ಶನಗಳು ನಿಲ್ಲುತ್ತಾ ಬಂತು.ಊರಿನಿಂದ ಬರುವ ವೃತ್ತಿ ಮೇಳಗಳ ಸಂಖ್ಯೆಯೂ ಕುಸಿತಕಂಡಿತು. ‘ಸಮಯಮಿತಿ’ಯ ಯಕ್ಷಗಾನ ಪ್ರದರ್ಶನಗಳು ಕಾಣಿಸತೊಡಗಿತು.ಈಗಲೂ ಕನ್ನಡಿಗರ ದೇವಸ್ಥಾನಗಳ ಉತ್ಸವಗಳಲ್ಲಿ, ಅಯ್ಯಪ್ಪ ಪೂಜೆಗಳಲ್ಲಿ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಯಕ್ಷಗಾನ

ಪ್ರದರ್ಶನಗಳು ನಡೆಯುತ್ತಿವೆ. ಸ್ಥಳೀಯ ಕಲಾವಿದರುಗಳಿಗೆ ಸ್ಥಳೀಯ ಯಕ್ಷಗಾನ ಮಂಡಳಿಗಳಿಗೆ ಅವಕಾಶಗಳು ಸಿಗುತ್ತವೆ.

ಒಂದೊಮ್ಮೆ ತಾಯಿನುಡಿ ಪತ್ರಿಕೆ, ಚಿಗುರು ಪತ್ರಿಕೆಗಳು ಪ್ರಕಟಿಸಿರುವ ಯಕ್ಷಗಾನ ವಿಶೇಷ ಸಂಚಿಕೆಗಳನ್ನು ಮರೆಯುವಂತೆಯೇ ಇಲ್ಲ.

ಮುಗಿಸುವ ಮುನ್ನ,:

ಕೊರೊನಾ ಕಾಲದಲ್ಲಿ ಮುಂಬಯಿ ಕಲಾ ಸಂಘಟಕರಲ್ಲಿ ಹೀಗೊಂದು ನಿರ್ಧಾರ ಆಗಿತ್ತು: 2020ರ ಕೊರೊನಾ ಕಾಲಾವಧಿಯಲ್ಲಿ ಕರಾವಳಿ ಜಿಲ್ಲೆಗಳ ಜನರು ‘ಮುಂಬಯಿಯ ತಮ್ಮ ಬಂಧುಗಳು ಊರಿಗೆ ಬರಬೇಡಿ’ ಎಂದು ಹೇಳಿಕೆ ನೀಡಿದ್ದರಿಂದ ಮುಂಬಯಿಯಲ್ಲಿದ್ದ ಕರಾವಳಿಯವರಿಗೆ ಊರಿನವರ ಬಗ್ಗೆ ಒಂದು ರೀತಿಯ ಬೇಸರವೂ ಆಗಿತ್ತು. ಆವಾಗ ಮುಂಬಯಿ ಚೀನಾದ ವುಹಾನ್ ನಂತೆ ಕೊರೊನಾ ಸ್ಪಾಟ್ ಆಗಿತ್ತು. 2021 ರಲ್ಲಿ ಮುಂಬಯಿ ನಗರ ಉಪನಗರಗಳ ಹಲವಾರು ಕಲಾಸಂಘಟಕರು ಒಂದು ನಿರ್ಧಾರಕ್ಕೆ ಬಂದರು. ಹಾಗೂ ಹಲವರ ಸಹಿಯುಳ್ಳ ಒಂದು ಪತ್ರ ಕರ್ನಾಟಕ ಮಲ್ಲ ದೈನಿಕದಲ್ಲಿ ಪ್ರಕಟವಾಯಿತು.ಅದರಲ್ಲಿ ಏನು ಬರೆದಿತ್ತು ಅಂದರೆ-

ಇನ್ನು ಮುಂದೆ ಸದ್ಯ ಊರಿನ ಕಲಾ ತಂಡಗಳನ್ನು ಮುಂಬಯಿಗೆ ಕರೆತರಬಾರದು. ಅವರೆಲ್ಲ ಕೊರೊನಾ ಕಾಲದಲ್ಲಿ ಮುಂಬಯಿಯವರಿಗೆ ಬೆಂಬಲಿಸಿಲ್ಲ. ನಾವು ಮುಂಬಯಿಯಲ್ಲಿ ಇಷ್ಟು ವರ್ಷಗಳಿಂದ ಅವರಿಗೆಲ್ಲ ಪ್ರೋತ್ಸಾಹ ನೀಡಿದ್ದರೂ ಅವರೆಲ್ಲ ಕೊರೊನಾ ಕಾಲದಲ್ಲಿ ಮರೆತಿದ್ದಾರೆ. ಹಾಗಾಗಿ ಇನ್ನು ಮುಂದೆ ಊರಿನ ತಂಡಗಳನ್ನು ಇಲ್ಲಿಗೆ ಕರೆಯಬಾರದು, ಮುಂಬಯಿಯ ಕಲಾ ತಂಡಗಳನ್ನೇ ನಾವಿಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆಯಬೇಕು, ಅವರಿಗೇ ಕಾರ್ಯಕ್ರಮ ಪ್ರದರ್ಶನಕ್ಕೆ ಅವಕಾಶ ನೀಡಿ ಪ್ರೋತ್ಸಾಹಿಸೋಣ …ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ ನಂತರ ಈ ನಿರ್ಣಯದಿಂದ ಹಿಂದೆ ಸರಿದ ಮುಂಬಯಿಯ ಕಲಾ ಸಂಘಟಕರು ಮತ್ತೆ ಊರಿನಿಂದ ತಂಡಗಳನ್ನು ಮುಂಬಯಿಗೆ ಕರೆಸಿಕೊಳ್ಳಲು ಆರಂಭಿಸಿದರು. 

ಇಂದು ಊರಿನಿಂದ ಬರುವ ಹೆಚ್ಚಿನ ತಂಡಗಳ ಯಕ್ಷಗಾನ ಪ್ರದರ್ಶನಗಳು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಜರಗುತ್ತಿವೆ.

ಎಚ್ ಬಿ ಎಲ್ ರಾಯರು ಕ ಸಾ. ಪರಿಷತ್ ನ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾದ ನಂತರ ಒಂದು ದಶಕ ಕಾಲ ಅದರಲ್ಲೇ ಸಕ್ರಿಯರಾಗಿದ್ದರಿಂದ ನಡುವೆ ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನದತ್ತ ಹೆಚ್ಚಿನ ಗಮನ ನೀಡಲು ಅವರಿಗೆ ಸಾಧ್ಯ ಆಗಲಿಲ್ಲ. ಅವರು 2020 ರಲ್ಲಿ ನಿಧನರಾದ ನಂತರವಂತೂ ಇನ್ನು ಮುಂಬಯಿಯಲ್ಲಿ ಆ ರೀತಿಯ ಭವ್ಯ ಯಕ್ಷಗಾನ ಸಾಹಿತ್ಯ ಸಮ್ಮೇಳನ ಕನಸಿನ ಮಾತೇ ಸರಿ. ಆದರೆ ಯಕ್ಷಗಾನ ಪ್ರದರ್ಶನಗಳು ಮುಂಬಯಿಯಲ್ಲಿ ತನ್ನ ಸಂಭ್ರಮವನ್ನು ಮುಂದುವರಿಸುತ್ತಲೇ ಇದೆ. ಅದು ನಿಲ್ಲಲಾರದು.

ಉಡುಪಿಯಲ್ಲಿ ಫೆಬ್ರವರಿ 11, ಮತ್ರು 12  (2023) ರಂದು ಜರಗಿದ ಪ್ರಥಮ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ- 2023 ರ ಸಂದರ್ಭದಲ್ಲಿ ಮುಂಬಯಿ ವಿ.ವಿ.ಕನ್ನಡ ವಿಭಾಗದ ಡಾ.ಜಿ.ಎನ್ ಉಪಾಧ್ಯ ಮತ್ತು ಡಾ.ಪೂರ್ಣಿಮಾ ಎಸ್ .ಶೆಟ್ಟಿ ಅವರ ಸಂಪಾದಕತ್ವದಲ್ಲಿ ‘ಯಕ್ಷಗಾನ ರಂಗಭೂಮಿಗೆ ಮುಂಬೈ ಕೊಡುಗೆ’ ಎನ್ನುವ ಕೃತಿಯನ್ನು ಪ್ರಕಟಿಸಲಾಗಿದೆ.ಆ ಮೂಲಕ ಮುಂಬೈ ಕನ್ನಡಿಗರ ಯಕ್ಷಗಾನ ಪ್ರೀತಿ ಏನೆಂಬುದು ಕರ್ನಾಟಕದ ಒಳಗಿನವರೂ ಅರಿಯಲು ಇದರಿಂದ ನೆರವು ದೊರೆತಿದೆ.  

(ನೆರವು: ಸಂಭವ – 1981, 

ಡಾ.ಈಶ್ವರ ಅಲೆವೂರು ಮತ್ತು 

ಸುಧಾ, ಚಿಗುರು ವಿಶೇಷಾಂಕಗಳಲ್ಲಿ ಶ್ರೀನಿವಾಸ ಜೋಕಟ್ಟೆಯವರ ಲೇಖನಗಳು)

—–

ಶ್ರೀನಿವಾಸ ಜೋಕಟ್ಟೆ, ಮುಂಬಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter