ವೈದೇಹಿ ಅವರ ‘ಶಿವನ ಮೀಸುವ ಹಾಡು’ –
ಒಂದು ಓದು

ಕನ್ನಡದ ಅದೆಷ್ಟೋ ಬರೆಹಗಾರ್ತಿಯರು ಕುಟುಂಬದೊಳಗೆ ಮಹಿಳೆಯರನ್ನು ಅದುರಿಸುವ ವಿಚಾರಗಳ ಬಗ್ಗೆಯೇ ಬರೆಯುತ್ತಾ, ಅವರ ಮನಸಿನ ಮಾತುಗಳಿಗೆ, ಕನಸು-ಆಕಾಂಕ್ಷೆಗಳಿಗೆ ಕನ್ನಡಿಯನ್ನು ಹಿಡಿದಿದ್ದರೆ ಅವರಲ್ಲೂ ವೈದೇಹಿ ಅವರು ಅಡುಗೆ ಮನೆಯೊಳಗೆ ಬೆಚ್ಚನೆ ಕುಳಿತಿದ್ದ ಸ್ತ್ರೀಲೋಕದ ತಲ್ಲಣಗಳನ್ನು, ಬೇಗುದಿಗಳನ್ನು ಮೆಲ್ಲನೆ ಜಗಲಿಗೆ ಹಿಡಿದು ತಂದವರು. ಅವರು ತೆರೆದಿಟ್ಟ ಮಾನುಷಿಯರ ಮನದ ಮಾತುಗಳು ಗಟ್ಟಿಯಾಗಿಯೇ ಧ್ವನಿಸಲ್ಪಟ್ಟಂತಹವು.

ಅವರ ಸಾಹಿತ್ಯದೊಳಗಿರುವ ಸ್ತ್ರೀ ಮನಗಳ ತೊಳಲಾಟಗಳನ್ನು ಗಮನಿಸಿದರೆ ಅವರ ಧೋರಣೆ ತಿಳಿಯುತ್ತದೆ. ಹಿಂದೆಯೂ ಮಹಿಳೆಯರ ನೋವು-ನಲಿವು ಎಲ್ಲವೂ ಸಾಹಿತ್ಯದಲ್ಲಿ ಕಂಡುಬಂದಿತ್ತಾದರೂ, ಒಂದು ಬಗೆಯಲ್ಲಿ ಪರಂಪರಾಗತ ದೃಷ್ಟಿಕೋನವನ್ನು ಪೂರ್ಣ ತೊರೆಯಲಾಗಿರಲಿಲ್ಲ. ಆದರೆ ಈ ಎಚ್ಚರವನ್ನು ವೈದೇಹಿ ಅವರ ಸಾಹಿತ್ಯದಲ್ಲಿ ಗುರುತಿಸಬಹುದು. ಹೆಣ್ಣಿನ ದೈಹಿಕ ನೋವನ್ನು ಮಾನಸಿಕ ಸ್ತರಕ್ಕೂ ವಿಸ್ತರಿಸಿದ ಅವರ ಬರೆವಣಿಗೆಗಳು ಮುಂದಿನ ಲೇಖಕಿಯರ ಈ ಮಾದರಿಯ ಬರವಣಿಗೆಗೆ ಪ್ರೇರಣೆಯೂ ಆದವು.

ಅವರ ಸ್ತ್ರೀಪಾತ್ರಗಳು ಗಂಡಿನ ಒಲವನ್ನು ಪಡೆಯುವುದನ್ನಷ್ಟೇ ತಮ್ಮ ಗುರಿಯನ್ನಾಗಿಸಿಕೊಂಡವರಲ್ಲ. ಅದರಾಚೆಗೂ ಅದರ ಹರಹಿದೆ. ಗಂಡು-ಹೆಣ್ಣಿನ ಒಲವು ಸಂಬಂಧದ ಹೊರತಾಗಿಯೂ ಬದುಕಿನಲ್ಲಿ ಅನೇಕ ವಿಷಯಗಳಿವೆ ಎಂಬುದನ್ನು ನಿರೂಪಿಸುತ್ತವೆ.

ಅವರ ಬರಹಗಳಲ್ಲಿ ವಸ್ತು ಅಥವಾ ಕಥೆಯ ರೂಪಿಸುವಿಕೆಯಲ್ಲಿ ಸ್ತ್ರೀವಾದೀ ಚಿಂತನೆ ಮುಖ್ಯವಾಗುವುದಿಲ್ಲ. ಯಾವುದೋ ಚಿಂತನೆಯನ್ನು ಹೇಳುವ ಕಾರಣಕ್ಕಾಗಿಯೇ ಅವರ ಸಾಹಿತ್ಯ ರಚನೆಯಾಗಿದೆ ಎಂದೂ ಅನ್ನಿಸುವುದಿಲ್ಲ. ಕಥೆಯ ಜೊತೆಗೇ ಹೇಳಬೇಕಾದ ವಿಚಾರಗಳು ಮಿಳಿತವಾಗಿರುವುದರ ಜೊತೆಗೆ ಕುಂದಾಪುರ ಕನ್ನಡ ಭಾಷಾ ಬಳಕೆಯ ಮೂಲಕ ಪ್ರಾದೇಶಿಕ ಸೊಗಡನ್ನು ಉಣಿಸುತ್ತವೆ.

ಪುರುಷವಿರೋಧಿ ಸ್ತ್ರೀವಾದದ ಧೋರಣೆಯನ್ನು ಅನುಸರಿಸದೆ, ಸ್ತ್ರೀ-ಪುರುಷ ಜಗತ್ತುಗಳ ಬಗೆಗಿನ ಮೃದು ಧೋರಣೆಗಳ ಹಿನ್ನೆಲೆಯಲ್ಲಿ ಸ್ತ್ರೀ ಅಸ್ಮಿತೆಯ ಹುಡುಕಾಟ ನಡೆಸಿದವರು ಅವರು. ಸ್ತ್ರೀ ವಿಶಿಷ್ಟ ಅಭಿವ್ಯಕ್ತಿ ಎನ್ನುವುದು ಪದಬಳಕೆ, ಅನುಭವದ ಅಭಿವ್ಯಕ್ತಿಕ್ರಮ, ಜೀವನದ ದೃಷ್ಟಿಕೋನದ ಮೂಲಕ ಕಾಣಿಸುವಂಥದ್ದು.

ಗೌರಿಯ ಜೊತೆಗಿನ ಈಶ್ವರನ ದಾಂಪತ್ಯ, ಪ್ರಣಯದ ವಿವರಗಳನ್ನು ಚಿತ್ರಿಸುವ ಈ ಕವಿತೆಯು ಪುರಾಣ, ಸಮಕಾಲೀನ ಬದುಕು ಎರಡನ್ನೂ ಜೊತೆಯಾಗಿಯೇ ಸೆರೆ ಹಿಡಿಯುತ್ತದೆ. 'ಶಿವನ ಮೀಸುವ ಹಾಡು' ಎಂಬ ಶೀರ್ಷಿಕೆಯೇ ಅತ್ಯಂತ ಅರ್ಥಪೂರ್ಣವಾಗಿದೆ. ಶಿವ ಜಗದೊಡೆಯ. ಆತನನ್ನೇ ಮೀಯಿಸಿದರೆ ಜಗದೆಲ್ಲ ಗಂಡಸರೂ ಮಿಂದಂತೆ. ಮೀಯುವಾಗ ದೇಹ ತೋಯುತ್ತದೆ. ಅಂತೆಯೇ, ಇಲ್ಲಿ ಗೌರಿಯ ದುಃಖ ಆತನ ಮನವನ್ನೂ ತಟ್ಟುವಂಥ ಹಾಡು ಎಂಬ ಭಾವವಿದೆ. ಗೌರಿಯ ದುಃಖ ಹಾಡಾಗಿ ಹರಿದಾಗ, ಅದು ಶಿವನನ್ನೂ ಆ ನೀರ ಸ್ಪರ್ಶದಿಂದ ನೆನೆಯುವಂತೆ ಮಾಡುತ್ತದೆ.

ಕವಿತೆಯ ಆರಂಭದಲ್ಲಿ ಗೌರಿ ಶಿವನಿಗೆ ಅಭಿಷೇಕವನ್ನು ಮಾಡುತ್ತಾಳೆ. ಇದು ಭಕ್ತಿಭಾವದ ಸಮರ್ಪಣಾ ಕಾರ್ಯ. ಆತನೋ ಮೂರು ಲೋಕ ಸುತ್ತಿ ತಿರುಗಿ ಬಂದರೂ, ಇವಳದು ಭಕ್ತಿಯ ಕಾರ್ಯ. ನಂತರ ಆಕೆ ಅವನ ಕೊಳೆ ತೊಳೆದು ಶುಚಿಗೊಳಿಸಲೆಂದು ಸ್ನಾನಕ್ಕೆ ಕರೆದೊಯ್ಯುತ್ತಾಳೆ. ಮೂರು ಕಾಲುಗಳನ್ನು ಹೊಂದಿರುವ ಮಣೆಯಲ್ಲಿ ಮೂರು ಕಣ್ಣುಗಳುಳ್ಳ ಶಿವನನ್ನು ಅತ್ಯಂತ ಪ್ರೀತಿಯಿಂದ ಕೂರಿಸಿ, ಮೂರು ಜಗದ ತುಂಬಾ ಸದಾ ನಿನಗೆ ಓಡಾಟ. ಹೀಗಿರುವಾಗ ನಿನ್ನ ಕಾಲುಗಳು ಅದೆಷ್ಟು ದಣಿದವೋ ಎನ್ನುತ್ತಾ, ಅವನ ಬಗ್ಗೆ ಕಾಳಜಿಯನ್ನು ತೋರುತ್ತಾ, ಜೊತೆಗೆ ತನ್ನ ಮನದೊಳಗಿನ ಅಸಹನೆ, ಆತಂಕವನ್ನೂ ಮೆಲ್ಲನೆ ತೆರೆದಿಡುತ್ತಾಳೆ. ಶಿವನಿಗೆ ಅಭ್ಯಂಗ ಮಾಡಿಸುವ ಗೌರಿ ಪಾದ ಒತ್ತುವ ನೆಪದಲ್ಲಿ ಶಿವ ಯಾವ ಬೀದಿಗೆ ಹೋಗಿದ್ದಾನೆಂದು ಅವನ ಪಾದ ಮೆತ್ತಿದ ಧೂಳಿನ ಮೂಲಕವೇ ಪತ್ತೆಹಚ್ಚುವ ಚಾಣಾಕ್ಷ ಹೆಣ್ಣು ಮಗಳು. ನೆಪ ಮಾತ್ರಕ್ಕೆ ತನ್ನ ಬೆರಳ ತುದಿಯಿಂದ ಆತನ ಪಾದಕ್ಕೆ ಅಂಟಿದ ಧೂಳಿನ ಕಣವನ್ನು ಎತ್ತಿಕೊಂಡು, ಆ ಪಾದಕ್ಕೆ ಅಂಟಿದ ಧೂಳು ಅದ್ಯಾರ ಮನೆಯದು ಎಂಬುದನ್ನು ಪತ್ತೆಹಚ್ಚಿ, ಮನದೊಳಗೇ ಎಲ್ಲವನ್ನೂ ಅರಿತು, ಮೊಗದಲಿ ಮುಗುಳ್ನಗೆ ಬೀರುವ ನಾಟ್ಯದ ಅಧಿದೇವನಾದ ಅವನನ್ನು ಸ್ನಾನಕ್ಕೆ ಕರೆಯುವಳು. ಈ ಒಂದೇ ಮಾತಿನಲ್ಲಿ ತನ್ನೆಲ್ಲಾ ನೋವು, ಮಾನಸಿಕ ವೇದನೆಗಳನ್ನು ವ್ಯಕ್ತಪಡಿಸುವ ಗೌರಿ, ಮರುಕ್ಷಣವೇ ಗಂಡನಿಗೆ ನೀರೆರೆಯಲು ಹೋಗುತ್ತಾಳೆ. ಆತನ ದೇಹದ ಕೊಳೆಯನ್ನು ಕಳೆಯುವುದರ ಜೊತೆಗೆ ಆತನ ಮನಸಿಗೂ ಮೆಲ್ಲ ಚಿವುಟಿ ತನ್ನ ಅಂತರಂಗದ ಬೇಗೆಯ ಬಿಸಿ ತಾಕಿಸುವಳು. ಅವಳು ಅದುವರೆಗೂ ಮನದೊಳಗೇ ತಡೆಹಿಡಿದ ನೋವಿನ ಬೇಗೆಯ ಅರಿವು ಶಿವನಿಗಿಲ್ಲ. ಎಲ್ಲರನ್ನೂ ಕಾಯುವ, ಪೊರೆಯುವ ಶಿವ ಅದೇಕೋ ಗೌರಿಯ ದುಃಖಕ್ಕೆ ಮೌನ ತಾಳಿದಂತಿದೆ. (ಪುರುಷ ಜಗತ್ತು ಸ್ತ್ರೀ ಮನೋಲೋಕದ ಆತಂಕದ ಬಗ್ಗೆ ನಿರ್ಲಿಪ್ತರು ಎಂಬ ಸೂಚನೆಯೇ?)

'ಮುಗಿಯಿತೇ ಬೇಟೆ?' ಎಂಬುದಾಗಿ ಸಣ್ಣಗೆ ಕೊಂಕನ್ನು ನುಡಿಯುತ್ತಾ, ಮೂಜಗದಲ್ಲೋಡಾಡಿದ ನಟರಾಜನನ್ನು ತಾನೇ ಸ್ನಾನಕ್ಕೆ ಕರೆಯುತ್ತಾಳೆ. 'ಬೇಟೆ' ಎನ್ನುವುದು ಹುಡುಕಾಟದ ಸೂಚಕ. 'ಮುಗಿಯಿತೇ ಬೇಟೆ?' ಅಥವಾ 'ಇನ್ನೂ ಬಾಕಿ ಉಳಿದಿದೆಯೇ?' ಎಂಬ ಪ್ರಶ್ನೆ ಕೇಳುವಾಗ ಆಕೆ ದುಃಖವನ್ನು ಒಡಲೊಳಗೆ ತಡೆಹಿಡಿಯಲು ಒದ್ದಾಡುತ್ತಾಳೆ. ಇಲ್ಲಿ ಶಿವನ ಮನಕ್ಕೂ ನಾಟುವಂತೆ ಆಕೆ ಪ್ರಶ್ನೆಯಿಂದ ಚುಚ್ಚುತ್ತಾಳೆ. ಆಗಲಾದರೂ ಶಿವ ಆ ನೋವಿಗೆ ಮೆಲ್ಲನೇ ವಿಚಲಿತಗೊಳ್ಳಲಿ ಎಂಬ ಆಸೆ ಹೊತ್ತಂತೆ. ಆದರೂ ಮನದ ನೋವನ್ನು ಬಲವಂತವಾಗಿ ಮನದೊಳಗೇ ಅದುಮಿ ಹಿಡಿದು, ಮರೆಮಾಚಿ, ಒಂದೊಂದು ನದಿಯ ನೆನಪಿಗೂ, ಒಂದೊಂದು ತಂಬಿಗೆ ನೀರೆನ್ನುತ್ತಾ, ಗಂಗೆ, ಮಣಿಕರ್ಣಿಕೆಯ ನೆನಪನ್ನು ತರುತ್ತಾಳೆ. ಆ ನೆನಪುಗಳು ಶಿವನಿಗೆ ಇದೆಯೋ ಅಥವಾ ಗೌರಿ ಶಿವನಿಗೆ ನೆನಪು ಮಾಡಿಸುತ್ತಿದ್ದಾಳೋ ಎಂಬಂತಿವೆ ಈ ಸಾಲುಗಳು. ಆದರೆ ಕಡೆಯಲ್ಲಿ ಈ ಕೊನೆಯ ಬಿಂದಿಗೆ ನೀರು ತನ್ನ ಪ್ರತಿದಿನದ ಅಂತರಂಗದ ಬೇಗೆಗೆ ಎನ್ನುತ್ತಾ, ಅವನಿಗಾಗಿ ಸದಾ ಕಾಯುವ, ಕನಲಿಸುವ ತನ್ನ ಬಡ ಮನಸ್ಸಿನ ಆತುರ-ಕಾತರಗಳನ್ನೂ ತೆರೆದಿಡುತ್ತಾಳೆ. ಅವಳ ದುಃಖ ನಿತ್ಯ ನಿರಂತರವಾದುದು. ಕೊನೆಯವರೆಗೂ ಕಾಡುವ ಬೇಗೆ. ಅದರಿಂದ ಬಿಡುಗಡೆ ಇಲ್ಲ. ಜಗದ ತಾಯಿ ಗೌರಿಯಿಂದ ಲೋಕದ ಗೌರಿಯವರೆಗೂ ಎಲ್ಲರದೂ ಇದೇ ಪಾಡು ಎಂಬುದನ್ನೂ ಸೂಚಿಸುತ್ತಾಳೆ. ಮಾತ್ರವಲ್ಲ, ತಮ್ಮದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಎಂಬುದನ್ನು ('ಬಡ ಕನಲು') ತಿಳಿಸುತ್ತಾಳೆ. ಆದರೆ ಆ ಕ್ಷಣ ಅವಳು ಎಷ್ಟೇ ಅದುಮಿ ಹಿಡಿದರೂ, ತಡೆಯಲಾಗದೆ ಯಾರ ಗಮನಕ್ಕೂ ಬಾರದಂತೆ ಅವಳ ಕಣ್ಣಿನಿಂದ ಜಾರುವ ಒಂದು ಹನಿ ನೀರೊಡನೆ ಬೆರೆತು ಮೊದಲೇ ಬಿಸಿಯಾಗಿದ್ದ ನೀರನ್ನು ಅವಳ ಒಡಲ ಬೇಗೆಯ ಕಾರಣ ಇನ್ನಷ್ಟು ಬಿಸಿಯಾಗಿಸುತ್ತದೆ. ಆ ನೀರು ಬಿಸಿಯೇರಲು ಅವಳ ಕಣ್ಣಿನ ಒಂದೇ ಒಂದು ಬಿಂದು ಸಾಕಾಯಿತು. ಹೀಗಿರುವಾಗ ಆ ಬೇಗುದಿಯ ಬಿಸಿ ಅದೆಷ್ಟಿರಬಹುದು? ಎಷ್ಟೇ ನೋವಾದರೂ, ಹೆಣ್ಣು ತನ್ನ ಅಂತರಂಗದ ಬೇಗುದಿಯನ್ನು ಸಹಿಸುವ ರೀತಿಯನ್ನೂ ಇದು ತಿಳಿಸುತ್ತದೆ. ಆ ಕಂಬನಿಯೂ ಅಷ್ಟೇ…ಅದೆಲ್ಲೂ ಜಾರಿದುದು ಕಾಣದಿರಲಿ ಎಂಬಂತೆ ಬೆರೆಯುವುದು ಬಣ್ಣವಿಲ್ಲದ ನೀರಿನೊಡನೆ.

ಮಿಂದ ಒಂದೊಂದು ನದಿಯ ನೆನಪಿಗೆ ಒಂದೊಂದು ಬಿಂದಿಗೆ ನೀರೆನ್ನುತ್ತಾ, ನೀರೆರೆವಾಗ ಅವಳೊಳಗೇ ಇರುವ ತಲ್ಲಣ ಕಣ್ಣೀರಾಗಿ ಹರಿದು, 'ನೀರೊಳಗೆ ಗೌರಿ ಕಂಬನಿ ಬಿಂದು ಮಿಸಕ್ಕನೆ ಬೆರೆತು ಬಿಸಿಯಾಗಲು' ಶಿವ ಬೆವರುತ್ತಾನೆ. ಆದರೆ ಆ ಬಿಸಿ ತಾಕಿದ ತಕ್ಷಣ ಶಿವನ ಮನ ತಡವರಿಸುತ್ತದೆ. ಆತ ಆ ಬಿಸಿಗೆ ಬೆವರುತ್ತಾನೆ. 'ತನ್ನ ವಿಚಾರ ಗೌರಿಗೆ ತಿಳಿಯಿತು' ಎಂಬ ಆತಂಕವೋ ಅಥವಾ ಅವಳ ನೊಂದ ಮನಸಿಗಾಗಿ ಅವನ ಸ್ಪಂದನವೋ ಎಂಬಂತೆ. ಆಗ ಶಿವ ಅವಳಲ್ಲಿ 'ನಿನ್ನ ಬಿಟ್ಟರೆ ನಾನು ಶುದ್ಧ ಬೈರಾಗಿ'ಯಂತೆ ಇಂದ್ರಿಯಗಳನ್ನು ವಶದಲ್ಲಿ ಇಟ್ಟವನು ಎಂದು, 'ನನ್ನ ಬಗ್ಗೆ ಇಂತಹ ಯೋಚನೆಗಳು ಬೇಡ' ಎಂಬಂತೆ ಅವಳನ್ನು ನಂಬಿಸುವ ಮಾತನಾಡುತ್ತಾನೆ. ಆದರೆ ಸತ್ಯದ ಅರಿವಿರುವ ಗೌರಿ ಒಂದೆಡೆ 'ಶಿವನೇ' ಎಂದು ತನ್ನ ಮನದ ಆತಂಕಕ್ಕೆ ದೇವನ ನೆನೆಯುತ್ತಾ, 'ತಾನು ನಿನಗೆ ಎಷ್ಟನೆಯ ಹೆಣ್ಣು?' ಎಂದು ಪ್ರಶ್ನೆಯನ್ನು ಹಾಕುತ್ತಾ, ಮೆಲ್ಲನೆ ಆತನನ್ನು ಮಾತಿನ ಮೂಲಕ ಚಿವುಟುತ್ತಾ, ಅವನನ್ನು ನೀರಿನಿಂದ ಸ್ನಾನ ಮಾಡಿಸುವುದರ ಜೊತೆಗೆ ಅವನ ಮನವನ್ನೂ ಮಾತಿನಲ್ಲೇ ತಾಕುತ್ತಾಳೆ. ಇಲ್ಲಿ ಗೌರಿಯ ಮನವನ್ನು ಗಮನಿಸಬೇಕು. ತನ್ನೊಳಗೆ ಎಷ್ಟೇ ನೋವಿದ್ದರೂ, ಶಿವನಿಗೆ ಚಿವುಟುವಾಗಲೂ ಆಕೆ ಮೃದುತ್ವವನ್ನು ತಾಳುತ್ತಾಳೆ. ಆತನಿಗೆ ಅದೆಲ್ಲಿ ನೋವುಂಟಾಗುವುದೋ ಎಂದು ಮೆಲ್ಲನೆ ಮೃದುವಾಗಿ ಚಿವುಟುತ್ತಾಳೆ.

ಆತನ ಮಾತಿಗೆ ನಕ್ಕ ಗೌರಿ ಬೈರಾಗಿ ಶಿವನ ಮೈಗೆ ಅಂಟಿದ ಬೂದಿಯನ್ನು ತೊಳೆಯುತ್ತ, ಮೈಯ್ಯೊರೆಸಿ, ಆತನನ್ನು ಒಲುಮೆ-ಕಾಳಜಿಯಿಂದ ನೋಡಿಕೊಳ್ಳುತ್ತಾ, ಮೆತ್ತಗೆ ಆತನ ಮೈಯನ್ನು ಒರೆಸಿ, ಆತನಿಗೆ ತಂಪಾದ ಹಾಲನ್ನು ಕುಡಿಸಿ, ತನ್ನ ಮೆತ್ತಗಿನ ತೊಡೆಯ ಮೇಲೆ ಮಲಗಿಸಿ, ತನ್ನ ಬೇಗುದಿಯ ದೇವನಿಗೆ ಅರ್ಪಿಸಿ, ಆತನಲ್ಲಿ ಕೇಳುವಳು: 'ಶಿವನೇ ಎಲ್ಲ ನದಿಗಳನ್ನೂ ನೆನೆದು ಮಲಗು. ಆ ಉಳಿದ ಮನಗಳಲಿ ತೋಯ್ದು, ನೆನೆಯುತ್ತಾ ಮಲಗು' ಎಂಬ ರೇಶಿಮೆಯ ನುಡಿಯೊಡನೆ ವ್ಯಂಗ್ಯವಾಡುತ್ತಾಳೆ. ತನ್ನ ನೋವು ಏನೇ ಇರಲಿ. ಇದು ತನ್ನಂತೆ ಉಳಿದ ಸ್ತ್ರೀ ಮನಗಳ ದುಃಖ ಎಂದು ಭಾವಿಸುವ ಆಕೆ 'ಉಳಿದವರ ನೆನಪು ನಿನಗಿರಲಿ' ಎಂದು ಕೇಳಿಕೊಳ್ಳುತ್ತಾಳೆ. ತನ್ನ ಬಾಳು ಹೀಗಾಯಿತು ಎಂಬ ನೋವಿದ್ದರೂ, ಅವಳ ವಿಶಾಲ ಭಾವ ಮನಮುಟ್ಟುತ್ತದೆ. ಇಲ್ಲೊಂದು ಕುಟುಕುವಿಕೆಯೂ ಅಡಗಿದೆ. ಜೋರಾಗಿ ಧ್ವನಿ ಎತ್ತರಿಸಿ ಹೇಳುವ ಅವಕಾಶ ಆಕೆಗಿಲ್ಲ. ಹಾಗಾಗಿ ನಯವಾಗಿ ಚುಚ್ಚುವಳಾಕೆ. ಗಂಡನ ಮನಸ್ಥಿತಿ ತಿಳಿದಿದ್ದರೂ ಏನನ್ನೂ ಪ್ರಶ್ನಿಸಲಾಗದ ಅಸಹಾಯಕತೆ ಅವಳಲ್ಲಿರುತ್ತದೆ. ಜೋರಾಗಿ ಮಾತನಾಡಿದರೆ ಮತ್ತೆಲ್ಲಿ ಕೈಬಿಟ್ಟು ಹೋಗುವನೋ ಎಂಬ ಭಾವದಿಂದ ಸುಮ್ಮನಾಗುತ್ತಾಳೆ. ಗಂಗೆ-ಗೌರಿಯರ ಕಾಲದಿಂದ ಇದು ಹರಿದು ಬಂದಂತಹುದು.  

ಗೌರಿಯ ರೇಶಿಮೆಯಂಥ ನಯವಾದ ಈ ನುಡಿಗಳನ್ನು ಕೇಳಿದ ವಿಷವನ್ನೇ ನುಂಗಿದ ಸದಾ 'ಬೇಟೆ'ಯ ಬಗ್ಗೆ ಚಿಂತಿಸುವ ಕಿರಾತ ಶಿವನ ಹೃದಯದೊಳಗೆ ಕಚಗುಳಿಯ ಹೂವು ಹರಿಗೋಲಾಗಿ ಸಾಗುತ್ತದೆ. ಆತನ ಮನಕ್ಕೆ ಅದು ನಾಟುವುದೇ ಇಲ್ಲ. ಆ ಹರಿಗೋಲು ಈ ಗೌರಿಯ ದುಃಖ, ಬೇಗುದಿ, ಮನದ ಮಾತುಗಳ ಜೊತೆಗೇ ಮೆಲ್ಲನೆ ದೂರ ಸರಿದು, ಶಿವನನ್ನು ಹತ್ತಿಸಿಕೊಂಡು ಮತ್ತೆ ಗೌರಿಯಿಂದ ದೂರಕ್ಕೆ ಸಾಗುತ್ತದೆ. ಆತ ಗೌರಿ ಜೊತೆಗಿರುವಾಗಲೇ ಅವಳಿಂದ ದೂರವಾಗಿ ಅದೆಲ್ಲೋ ಮತ್ತೆಲ್ಲೋ ಇನ್ನೆಲ್ಲೋ ಅದ್ಯಾರ ನೆನಪಿನಲ್ಲೋ ಕಳೆದುಹೋಗುತ್ತಾನೆ. ಆತನ ಮನಸ್ಸು ಹೀಗೆ ಆಗಾಗ ಗೌರಿಯಿಂದ ದೂರ ಸಾಗುತ್ತಲೇ ಇರುತ್ತದೆ. ಇದೇನೂ ಹೊಸತಲ್ಲ ಆಕೆಗೆ. ಆಕೆಯ ಬಳಿಯಿರುವಾಗಲೇ ದೂರ ಸಾಗಿ ಹೋಗುವ ಮನಸು ಆತನದು ಎಂದಾಕೆಗೆ ತಿಳಿದಿದೆ. ಎಲ್ಲಿಗೆ ಹೋದರೂ ಇಲ್ಲಿಗೆ ಬಂದೇ ಬರುವನೆಂಬ ನಿಜ ಸತ್ಯದ ಅರಿವು, ಅಬ್ಬಬ್ಬಾ… ಅದೆಷ್ಟು ಸಹನೆ ಅವಳಿಗೆ… ಆಶ್ಚರ್ಯ ಎನಿಸುತ್ತದೆ. ಇಲ್ಲಿ ವೈದೇಹಿ ಅವರು ಬಳಸಿದ ಭಾಷೆ, ಆ ಭಾಷೆಯ ಒನಪು, ಲಾಲಿತ್ಯಗಳು ಮನಸ್ಸನ್ನು ತಟ್ಟುತ್ತವೆ. ಗಂಡಿನ ಮನಸ್ಥಿತಿಯನ್ನು ತೆರೆದಿಡುವ ಈ ಸಾಲುಗಳು ಹೆಣ್ಣಿನ ಪ್ರಶ್ನಿಸಲಾಗದ ಅಸಹಾಯಕತೆಯನ್ನೂ ಧ್ವನಿಸುತ್ತವೆ.

ತಾನೆಲ್ಲಾದರೂ ಪ್ರಶ್ನಿಸಿದರೆ ಅಥವಾ ಜಗಳವಾಡಿದರೆ ಮತ್ತೆಲ್ಲಿ ಬರದೇ ಹೋಗುವನೋ ಎಂಬ ಸಂಕಟಕ್ಕೆ ಒಳಗಾಗಿ ಮಿಸುಕಾಡದೆ ಉಳಿದ ಹೆಣ್ಣು, ತನ್ನೆಲ್ಲಾ ತಲ್ಲಣಗಳನ್ನು ಅನಾದಿ ಕಾಲದಿಂದ ನುಂಗುತ್ತಿರುವ ಸೂಚನೆ ಇಲ್ಲಿ ಕಾಣಿಸುತ್ತದೆ. ಆ ಗೌರಿಯೇ ಹೀಗೆ ಎಲ್ಲ ಬೇಗೆಗಳನ್ನೂ ತನ್ನೊಡಲಲ್ಲೇ ಕೆಂಡವಾಗಿ ಕಟ್ಟಿಕೊಂಡಿರುವಾಗ ಇನ್ನು ಲೋಕದ ಹೆಣ್ಣಿನ ದುಃಖ ಆ ಗೌರಿಗಿಂತ ದೊಡ್ಡದೇ…?
ಶಿವ ಜೊತೆಗಿದ್ದೂ ಇಲ್ಲದೇ ಇರುವಂಥ ಅಂದರೆ ಶಿವ ಭೌತಿಕವಾಗಿ ಜೊತೆಗಿದ್ದೂ, ಮಾನಸಿಕವಾಗಿ ದೂರ ಉಳಿವ ಈ ಕ್ಷಣಗಳೆಲ್ಲ ಶಿವನ ಕಾಮನೆಗಳನ್ನು ಪೂರೈಸಲೆಂದೇ ಇರುವ ಶಿವಕಾಮಿ ಗೌರಿಗೆ ಅಂದಿಗೂ ಇಂದಿಗೂ ಆಶ್ಚರ್ಯ ತರುವಂಥದ್ದಲ್ಲ. ಹೊಸದೂ ಅಲ್ಲ. ಹಾಗಾಗಿಯೇ ವೈದೇಹಿ ಕೇಳುತ್ತಾರೆ: 'ಶಿವನಿದ್ದೂ ಇಲ್ಲದ ಈ ಚೋದ್ಯಗಳೆಲ್ಲ ಹೊಸತೇನು ಶಿವಕಾಮಿಗೆ?'
ಆದರೆ ಇಂತಹ ಇರಿತ ಮನವನ್ನು ತಟ್ಟಿದಾಗಲೂ, ಅವನು ಇನ್ನೂ ಇದ್ದಾನೆ ಎಂಬಂತೆ, ಆತನಿಗೆ ತೊಂದರೆ ಆಗದಿರಲಿ ಎಂಬಂತೆ, ಸ್ವಲ್ಪವೂ ಅಲ್ಲಾಡದೇ ಕುಳಿತುಕೊಳ್ಳುವ, ಮನದ ಎಲ್ಲ ತಲ್ಲಣಗಳನ್ನೂ ಮನದೊಳಗೇ ಹಿಡಿದಿಡುವ, ಮನದಲ್ಲಿ ಆಪ್ತತೆ ತುಂಬಿಕೊಂಡಂಥ ಹುಡುಗಿ 'ನಮ್ಮ ಗೌರಿ' ಎನ್ನುತ್ತಾ, ಜಗದ ತಾಯಿಯ ದುಃಖವನ್ನು ಲೋಕದ ಎಲ್ಲ ಗೌರಿಯರ ದುಃಖವನ್ನಾಗಿಸುತ್ತಾರೆ. ಅವಳೋ ಹೊರಗೆ ಜೋರಾಗಿ ಕಾಣಿಸಿದರೂ, ಪ್ರೀತಿಗೆ ಬೇಗನೇ ಕರಗುವ, ಮನದಲ್ಲಿ ಪ್ರೀತಿ ತುಂಬಿದ, ಸುಕೋಮಲ ಮನದಿ ಸ್ವಾಭಿಮಾನ ತುಂಬಿದ ಹುಡುಗಿ. ಮಾತ್ರವಲ್ಲ, ಅವಳು ನಮ್ಮೆಲ್ಲರ ಗೌರಿ. ಗೌರಿ ಜಗದ ತಾಯಿ ಮಾತ್ರವಲ್ಲ. ಗೌರಿ ಲೋಕದ ಮುಗ್ಧ ಹೆಣ್ಣಿಗೆ ರೂಪಕವೂ ಹೌದು. ಎಲ್ಲರ ಮನಸ್ಸನ್ನೂ ಗೆಲ್ಲುವವಳೂ ಹೌದು.

ಈ ಈಶ್ವರನೋ ಜೋಗಿಯಂತೆ ಎಲ್ಲೆಡೆ ತಿರುಗಿ ತನ್ನ ಸಂಚಾರವನ್ನು ಮುಗಿಸಿ ಮತ್ತೆ ಮರಳಿ ಮನೆಗೆ ಬರುತ್ತಾನೆ. ಆಗೆಲ್ಲ ಅವನನ್ನು ಶುಚಿಗೊಳಿಸಲು ಗೌರಿ ಸ್ನಾನಕ್ಕಾಗಿ ಕರೆಯುವಳು. ಅದು ಕೇವಲ ದೇಹವನ್ನು ಶುಚಿಗೊಳಿಸುವ ಸ್ನಾನವಲ್ಲ. ಮನಸಿಗೂ ಕೂಡಾ. ಅವನಿಗೆ ಮದ್ದಿನ ಎಣ್ಣೆಯನ್ನು ಹಚ್ಚಿ ದೇಹಕ್ಕೆ ಯಾವುದೂ ತಾಕದಂತೆ ಕಾಯುತ್ತ, ಅವನ ಮೇಲೆ ಬಿದ್ದ ಕಣ್ಣುಗಳನ್ನು ನಿವಾಳಿಸಿ ತೆಗೆದು, ಮೈಯ ಬಿಸಿ ಹೆಚ್ಚಿಸಿಕೊಂಡಿರುವ ಸದಾ ಮೂರು ಲೋಕ ಸುತ್ತುವ ಆ ಸಂಚಾರಿಗೆ ಗೌರಿ ಕಹಿಯಾದ ಕಿರಾತ ಕಡ್ಡಿಯ ಕಷಾಯ ಕುಡಿಸಿ ಅವನ ಮೈ ಬಿಸಿ ಕಳೆಯಲು ಯತ್ನಿಸುತ್ತಾಳೆ. ಹೀಗೆ ಗೌರಿ ಶಿವನ ಮೈ-ಮನಗಳ ಕೊಳೆ ಕಳೆಯುತ್ತಾಳೆ. ಆ ಮೂಲಕ ಜಗದ ತಾಯಿಯ ದುಃಖ ಜಗದೆಲ್ಲ ನಾರೀರಮಣಿಯರದು ಎಂದು ಕವಿತೆ ಸಾರುತ್ತದೆ.

ಇಲ್ಲಿರುವ ಸ್ತ್ರೀಪರ ಧೋರಣೆಗಳು ಉಕ್ಕೇರಿ ಭೋರ್ಗರೆದು ದುಃಮಿಕ್ಕಿ ಹರಿಯುವವು ಅಲ್ಲ. ನಿಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತಾ ನಡೆದು ಚಿಂತನೆಗೆ ಹಚ್ಚುವವು.
ವಿಷಯ ಲೋಲುಪತೆಗೆ ವಿರುದ್ಧನಾದ ಶಿವನು ಶೃಂಗಾರದ ಸೋಗಿಲ್ಲದೆ, ಸತಿಯ ಲೋಕೋತ್ತರ ಪ್ರೀತಿ ಗೆದ್ದವನು. ಗೌರಿಯ ಮನೋಬಲ, ಗಟ್ಟಿತನ ಮತ್ತು ನಿಲುವು ಇಲ್ಲಿ ವಿಭಿನ್ನವಾದುದು. ಹೀಗೆ ಪರಂಪರೆಯ ಒಪ್ಪಿತ ಮಾದರಿಗಳನ್ನು, ಸಾಂಪ್ರದಾಯಿಕ ಚಿಂತನೆ, ನಂಬಿಕೆಗಳನ್ನು ಪಲ್ಲಟಗೊಳಿಸುವ ಪ್ರಯತ್ನ ಇಲ್ಲಿದೆ. 

ವೈದೇಹಿ ಅವರು ಇಲ್ಲಿ ಇತಿಹಾಸಪೂರ್ವಕಾಲದ ಮಾತೃಸತ್ವದ ದೃಷ್ಟಿಯೊಡನೆ, ಹೆಣ್ಣಿನ ಶಕ್ತಿಯನ್ನೂ, ನೋವನ್ನೂ, ಪರಿಪೂರ್ಣತೆಯ ಸಾಧ್ಯತೆಯನ್ನೂ ತೆರೆದಿಡುತ್ತಾರೆ. ಹಾಡಿನ ಉದ್ದಕ್ಕೂ ಗೌರಿಯ ಹೊರಗೆ ಬಾರದ ದುಃಖ ಮತ್ತು ಸಿಟ್ಟುಗಳೊಡನೆ ಅವಳದು ಪೂರ್ಣ ಸಹನೆಯಲ್ಲ ಎನ್ನುವುದು ವ್ಯಂಗ್ಯ ಮತ್ತು ವಿಡಂಬನೆಗಳ ಧ್ವನಿಗಳ ಮೂಲಕ ಕಾಣಿಸುತ್ತದೆ.

ಜಗನ್ಮಾತೆಯಾಗಿದ್ದ ಗೌರಿ ಗೃಹಿಣಿಯಾಗಿ ಬಂಧಿತಳಾಗಿದ್ದು, ತಾನೇ ಆ ಸ್ಥಿತಿಯನ್ನು ಅಪ್ಪಿದವಳೂ ಆಗಿ ಆಕೆ ಅನುಭವಿಸುತ್ತಿರುವ ಸಹಿಸುವುದು ಬಿಟ್ಟರೆ ಬೇರೆ ದಾರಿ ಕಾಣದ ಮೂಗುಬ್ಬಸದ ವಿವರವಿದೆ.
ಗೌರಿಯ ಸಂಕಟದ ಮೂಲದೊಡನೆ ಶಿವನ ಎಲ್ಲಾ ಆಟವನ್ನು ಅರಿತೂ, ಮದ್ದಿನೆಣ್ಣೆಯ ಪೂಸಿ, ಮೀಯಿಸಿ, ಜ್ವರ ಹಿಡಿಸಿಕೊಂಡಿರುವ ಲೋಕಸಂಚಾರಿಗೆ ಕಿರಾತಕಡ್ಡಿಯ ಕಷಾಯ ಕುಡಿಸಿ ಕಾಯುತ್ತಾಳೆ. ಇದು ಹೆಣ್ಣಿನ ಸಹನೆಯಲ್ಲ. ಬದಲಾಗಿ ಅಸಹಾಯಕ ಮತ್ತು ಸ್ವಾಭಿಮಾನದ ಕುದಿತದ ಜೊತೆಯೇ ಸಾಗುವ ಅನಿವಾರ್ಯ ಸೇವೆಯಾಗಿದೆ. ಇದರೊಂದಿಗೆ ಚುಚ್ಚುವಿಕೆ, ಸುತ್ತಿಬಳಸಿ ಹಂಗಿಸುವ  ಧಾಟಿಯೊಡನೆ ಪ್ರಶ್ನೆಗಳನ್ನು ಎಸೆಯುವ ರೀತಿ ಇಲ್ಲಿದೆ.

ವಿಚಾರಗಳನ್ನು ಸರಳವಾಗಿ ಪ್ರಸ್ತುತಪಡಿಸುವ ಇವರ ರೀತಿ, ಜಗದ ತಾಯಿಯೇ ನಮ್ಮ ಸುತ್ತ ಮುತ್ತುವ ಪಾತ್ರವಾದ ರೀತಿ ಅನನ್ಯ. ಏನೂ ಅರಿಯದಂತೆಯೇ ಹೆಣ್ಣಿನ ಅಂತರಂಗದ ಧ್ವನಿಯನ್ನು ಬುದ್ಧಿಯಿಂದ ಹೃದಯಕ್ಕೆ ತಲುಪಿಸಿದ ಇವರ ಶೈಲಿ ಅತ್ಯಂತ ಆಪ್ತ ಹಾಗೂ ಮನೋಹರ. ಹೆಣ್ಣು ಅನುಭವಿಸುವ ಮಾನಸಿಕ ಸೂಕ್ಷ್ಮಗಳನ್ನು ತೆರೆದಿಡುವ ಇವರ ಕವಿತೆ ಹೆಣ್ಣಿನ ಮಾನಸಿಕ ವೇದನೆಯ ಮುಂದೆ ದೇಹದ ನೋವು ಏನೂ ಅಲ್ಲ ಎಂದು ಸಾರುತ್ತದೆ.

ಸಮಾನತೆಯ ಸದಾಶಯ ಹೊತ್ತ ಮನೋಭೂಮಿಕೆಯ ವೈದೇಹಿ ಅವರ ಈ ಕವಿತೆಯ ಮುಖ್ಯ ಪಾತ್ರಗಳು ಶಿವ-ಶಿವೆಯರ ಸಂಬಂಧದ ಇನ್ನೊಂದು ಆಯಾಮವಾದ ಅರ್ಧನಾರೀಶ್ವರ ಕಲ್ಪನೆ ಲಿಂಗಸಮಾನತೆಯನ್ನು ಸಾರಿದರೂ, ಕವಿತೆ ತೆರೆದಿಡುವ ಗೌರಿಯ ಪ್ರೀತಿ, ಅಸೂಯೆ, ವಾತ್ಸಲ್ಯ, ಇರಿಯುವಿಕೆಯೊಡಗೂಡಿದ ಭಾವದೋಕುಳಿ, ಪುರುಷತತ್ತ್ವಕ್ಕೆ ಧಾರೆ ಎರೆದುಕೊಂಡೂ ಕರಗದೆ ಉಳಿಯುವ ಸ್ತ್ರೀತ್ವದ ಮಾದರಿಯ ಗೌರಿಯ ವಿಶಿಷ್ಟ ಆಯಾಮದ ಮೂಲಕ ವಿಶೇಷ ಅರ್ಥವನ್ನು ಧ್ವನಿಸುತ್ತದೆ. ಶಿವನ ವಿವಾಹೇತರ ಸಂಬಂಧಗಳನ್ನು ಹೇಳುವ ಕವನವು ಅವೆಲ್ಲ ಸಂಕಟವನ್ನು ಗೌರಿ ತಡೆದುಕೊಳ್ಳುವ ಬಗೆಯನ್ನೂ ಚಿತ್ರಿಸುತ್ತದೆ. ಹೀಗೆ ಜಗದ ತಾಯ್ತಂದೆಯರ ಮೂಲಕವೇ ವಿಚಾರಗಳ ಅಭಿವ್ಯಕ್ತಿ ಇಲ್ಲಿರುವುದು ವಿಶೇಷವೇ ಸರಿ. 

* ಡಾ. ಮೈತ್ರಿ ಭಟ್, ವಿಟ್ಲ
ಸಹಾಯಕ ಪ್ರಾಧ್ಯಾಪಕಿ,
ಕನ್ನಡ ವಿಭಾಗ,
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪುತ್ತೂರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter