ವಿವಶ (ಧಾರಾವಾಹಿ ಭಾಗ-14)


ಪ್ರೇಮಾಳ ಮನೆಯಲ್ಲಿ ಗಡದ್ದಾಗಿ ಮಾರಿಯೌತಣ ಉಂಡ ತೋಮ ಮರುದಿನ ಮುಂಜಾನೆ ಉಲ್ಲಸಿತನಾಗಿ ಹೊರಟ. ಆದರೆ ಅವಳ ತೋಟದ ತೊಡಮೆ ದಾಟುತ್ತಲೇ ಅವನಲ್ಲಿ ಉದಾಸೀನವು ಒತ್ತರಿಸಿ ಬಂದು ಉತ್ಸಾಹವೆಲ್ಲ ಇಳಿದು ಹೋಯಿತು. ಹಾಗಾಗಿ ಹೆಡ್ಡಿ ಪರ್ಬುಗಳ ಮನೆಯ ದುಡಿಮೆಗೆ ಹೋಗಲು ಮನಸ್ಸಾಗದೆ ದಾರಿಯುದ್ದಕ್ಕೂ ಪ್ರೇಮಾಳ ಬಗ್ಗೆಯೇ ಯೋಚಿಸುತ್ತ ಹೆಜ್ಜೆ ಹಾಕಿದವನು, ಅಲ್ಲ…, ಈ ಹಿಂದೆ ತಾನು ಎಂಥೆಂಥ ಚೆಂದುಳ್ಳಿ ಚೆಲುವೆಯರಾದ ಹೆಣ್ಣು, ಹೆಂಗಸರನ್ನು ಕಂಡಿಲ್ಲ ಮತ್ತು ಪಣತೊಟ್ಟು ಅವರನ್ನೆಲ್ಲ ತನ್ನ ಬಲೆಗೆ ಕೆಡವಿಕೊಂಡು ಸುಖಿಸಿಲ್ಲ! ಆದರೆ ಅವರ್ಯಾರೂ ಮುಂದಿನ ಒಂದೆರಡು ತಿಂಗಳ ನಂತರ ನನ್ನ ನೆನಪಿನಲ್ಲಿ ಉಳಿದದ್ದೇ ಇಲ್ಲ. ಆದರೆ ಈ ಹುಡುಗಿ ಮಾತ್ರ ಯಾಕೆ ನನ್ನನ್ನು ಇಷ್ಟೊಂದು ಕಾಡುತ್ತಾಳೆ? ಬರೇ ಸುಖಿಸುವ ದೃಷ್ಟಿಯಿಂದ ಇವಳನ್ನು ನೋಡಲು ನನ್ನಿಂದಾಗುತ್ತಿಲ್ಲವಲ್ಲ! ಅವಳ ನೆನಪು ಬಂದಾಗಲೆಲ್ಲ ಒಂಥರಾ ಮಧುರವಾದ ಭಾವನೆ, ಯೋಚನೆಗಳು ಮುತ್ತಿಕೊಳ್ಳುತ್ತವೆ ಯಾಕೆ? ತಾನೂ ಮದುವೆಯಾಗಬೇಕು, ಸಂಸಾರ ಮಾಡಬೇಕು ಎಂಬ ಯೋಚನೆ ಈವರೆಗೆ ನನ್ನಲ್ಲಿ ಸುಳಿಯದಿದ್ದುದು, ಇವಳನ್ನು ಕಂಡ ಮೇಲೆ ಜೀವನ ಪರ್ಯಂತ ಇವಳೊಂದಿಗೇ ಬದುಕಬೇಕು ಎಂಬ ಆಸೆ ಹುಟ್ಟಿದೆಯಲ್ಲ…?ಎಂದು ಪ್ರಶ್ನಿಸಿಕೊಳ್ಳುತ್ತ ನಡೆಯುತ್ತಿದ್ದ. ಆದರೆ ಅವನ ದಡ್ಡ ಮನಸ್ಸಿಗೆ ಅದೊಂದೂ ಅರ್ಥವಾಗಲಿಲ್ಲ. ಆದ್ದರಿಂದ ಸೀದಾ ಹೆನ್ರಿ ಪರ್ಬುವಿನ ಮನೆಯತ್ತ ನಡೆದ.
ಹೆನ್ರಿ ಪರ್ಬುವು ಐವತ್ತು ದಾಟಿದ ಅರೆಹುಚ್ಚನಂಥ ಮನುಷ್ಯ. ಅವನನ್ನು ಮದುವೆಯಾದ ಗುಂಪ್ಸಿಬಾಯಿ ಎಂಬ ಅಮಾಯಕಿ ಹೆಣ್ಣೊಬ್ಬಳು ಆ ಕ್ರೂರ,ಕುಡುಕ ಗಂಡನೊಂದಿಗೆ ತನ್ನ ಪೂರ್ವಜನ್ಮದ ಪಾಪದ ಫಲವೇನೋ ಎಂಬಂತೆ,ಅವನಿಂದ ಮಕ್ಕಳನ್ನೂ ಪಡೆಯದೆ ಇಪ್ಪತ್ತೈದು ವರ್ಷಗಳ ಕಾಲ ಏಗಿದವಳು ತನ್ನ ನಲವತ್ತೈದನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಳು. ಆದ್ದರಿಂದ ಆವರೆಗೆ ಕಂಡೂ ಕಾಣದಂತೆ ಹೆನ್ರಿಯನ್ನು ಕಾಡುತ್ತಿದ್ದ ಹುಚ್ಚು, ಹೆಂಡತಿ ತೀರಿ ಹೋದ ನಂತರ ತಟ್ಟನೆ ಉಲ್ಭಣಿಸಿಬಿಟ್ಟಿತು. ಹಾಗಾಗಿ ಅವನು ಆಗಾಗ ಕುಡಿದು ಮತ್ತೇರಿ ಅನಾಥನಂತೆ ಅಂಗಳದಲ್ಲಿ ಬಿದ್ದುಕೊಂಡು ಹೊರಳಾಡುತ್ತ ಕಿರುಚಾಡುತ್ತಿದ್ದ. ಅದನ್ನು ಕಂಡವರು ಯಾರಾದರೂ ಕನಿಕರದಿಂದ ಅವನ ಸಮೀಪ ಹೋದರೆಂದರೆ ಅವರ ಅವಸ್ಥೆ ಹೇಳತೀರದಷ್ಟು ಶೋಚನೀಯವಾಗುತ್ತಿತ್ತು. ಅಂಥವರನ್ನು ಅವನು ಬಾಯಿಗೆ ಬಂದಂತೆ ಬೈದು, ಅಟ್ಟಾಡಿಸಿ ಹಿಡಿದು ಹೊಡೆದೇ ಬಿಡುತ್ತಿದ್ದ! ಅವನ ಆ ದುಷ್ಕøತ್ಯಕ್ಕೆ ಸಿಲುಕಿ ಹೈರಾಣಾಗುತ್ತಿದ್ದ ನೆರಕರೆಯವರು ಯಾರೂ ಅಪ್ಪಿತಪ್ಪಿಯೂ ಅವನ ಮನೆಯತ್ತ ಸುಳಿಯುವ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಇಂಥವನು ತೋಮನನ್ನು ಕಂಡರೆ ಉಸಿರೆತ್ತದೆ ತಣ್ಣಗಿರುತ್ತಿದ್ದ. ಅದು ಭಯಕ್ಕೋ ಅಥವಾ ಸ್ನೇಹಕ್ಕೋ ಎನ್ನುವುದು ಇಬ್ಬರಿಗೂ ಅರ್ಥವಾಗುತ್ತಿರಲಿಲ್ಲ.ತೋಮ ಆಗಾಗ ಹೆನ್ರಿಯ ಮನೆಗೆ ಬರುತ್ತಿದ್ದ.ಅವನ ಎಂಟ್ಹತ್ತು ತೆಂಗಿನ ಮರಗಳ ಕಾಯಿಗಳನ್ನು ಕೊಯ್ದುಕೊಡುತ್ತಿದ್ದ. ಅದಕ್ಕೆ ಪ್ರತಿಫಲವಾಗಿ ಹೆನ್ರಿಯು ತನಗಾಗಿ ಭಟ್ಟಿಯಿಳಿಸಿರುತ್ತಿದ್ದ ಖಡಕ್ಕು ಗಂಗಸರವನ್ನು ಅವನಿಗೆ ಕೊಡುತ್ತಿದ್ದ. ತೋಮ ಅವನೊಂದಿಗೇ ಕುಳಿತು ಅದನ್ನು ಕುಡಿಯುತ್ತ ಹೆನ್ರಿಯ ಮನಸ್ಸಿಗೆ ಖುಷಿ ನೀಡುವಂಥ ರಂಗಾದ ಮಾತುಗಳನ್ನಾಡಿ ಒಂದಿಷ್ಟು ಹಣವನ್ನೂ ಪಡೆದುಕೊಂಡು ಹಿಂದಿಗುತ್ತಿದ್ದ.
ಇವತ್ತು ತೋಮ ತನ್ನ ಮನೆಗೆ ಬರುವ ಸ್ವಲ್ಪ ಮುಂಚೆಯಷ್ಟೇ ಹೆನ್ರಿಯು ಹಿಂದಿನ ದಿನದ ತಂಗಳನ್ನವನ್ನು ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿಯ ಜೊತೆಗೆ ಪಟ್ಟಾಗಿ ಉಂಡು ಜಗುಲಿಯಲ್ಲಿ ಕುಳಿತು ಉದ್ದುದ್ದ ತೇಗುತ್ತ ಬೀಡಿ ಸೇದುತ್ತಿದ್ದ. ತೋಮ ಬಂದವನು,ಎಲ್ಲದಕ್ಕೂ ಬರೇ ‘ಹ್ಞೂಂ’ ಗುಟ್ಟುವ ಸ್ವಭಾವದ ಹೆನ್ರಿಯೊಡನೆ ಊರ ಒಂದಷ್ಟು ಸಮಾಚಾರವನ್ನು ಮಾತಾಡಿದ. ಅವನೂ ಎಂದಿನಂತೆ ಹ್ಞೂಂಗುಟ್ಟುತ್ತ ತೋಮನ ಮಾತುಗಳನ್ನು ಕೇಳಿದ. ಬಳಿಕ ಬೇರೇನೂ ಮಾತಾಡಲು ತೋಚದ ತೋಮಸಾರಾಯಿ ಕೇಳಿದ. ಹೆನ್ರಿಯು ತೋಮನಿಗೆಂದೂ ಇಲ್ಲವೆನ್ನದವನು ಒಳಗೆ ಹೋಗಿ ಒಂದು ಚೊಂಬು ಸಾರಾಯಿ ತಂದು ಅವನೆದುರಿಟ್ಟು ತಾನೂ ಕುಡಿಯಲು ಕುಳಿತ. ನಿತ್ಯದಂತೆ ಇಂದು ಕೂಡಾ ಚೊಂಬು ಪೂರ್ತಿ ಕುಡಿಯಲಿದ್ದ ತೋಮನಿಗೆ ಪ್ರೇಮಾಳ ನೆನಪು ನವಿರಾಗಿ ಕಾಡಿತು.ಆದ್ದರಿಂದ ಈಗಲೇ ಮೂಗಿನ ಮಟ್ಟ ಕುಡಿದು ಹೋದರೆ ತನ್ನ ಕೆಲಸ ಕೆಡುತ್ತದೆ! ಎಂದುಕೊಂಡವನು ನಿಧಾನವಾಗಿ ಅರ್ಧದಷ್ಟು ಹೊಟ್ಟೆಗಿಳಿಸುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತು. ಹೆನ್ರಿ ಆಗಲೇ ಪೂರ್ಣ ಮತ್ತನಾಗಿ ಜಗುಲಿಯಲ್ಲಿ ಹೊರಳಾಡುತ್ತ ಏನೇನೋ ಗೊಣಗುತ್ತಿದ್ದ. ತೋಮ ತಾನು ಹೊರಡುವುದನ್ನು ತಿಳಿಸಲು ಹೆನ್ರಿಯನ್ನು ಎಬ್ಬಿಸಹೋದ.ಆದರೆ ತೋಮನ ಕೈ ತನ್ನ ಮೈಗೆಸೋಕುತ್ತಲೇ,‘ಹೇಯ್, ಯಾರನಾ ಅದು… ಬ್ಯಾವರ್ಸಿ!ತುಳಿದು ಹಾಕಲಿಕ್ಕುಂಟು ರಂ…ಮಗನೇ…!’ ಎಂದು ಜೋರಾಗಿ ಅರಚಿದ. ತೋಮನಿಗೆ ತಟ್ಟನೆ ಕೆರಳಿತು.ಬಡ್ಡಿಮಗನಿಗೆ ನಾಲ್ಕು ಒದೆಯುವ ಅಂತಲೂ ಅನಿಸಿತು. ಆದರೆ ಹಾಗೆ ಮಾಡಿದರೆ ನಾಳೆಯಿಂದ ಖಡಕ್ ಕಂಟ್ರಿ ಖಂಡಿತಾ ಖೋತಾ! ಎಂದೂ ವಿವೇಕ ಎಚ್ಚರಿಸಿತು. ತಾಳ್ಮೆ ತಂದುಕೊಂಡವನು,‘ಆಯ್ತು ಪರ್ಬುಗಳೇ. ನಾನು ಹೊರಡುತ್ತೇನೆ. ನೀವು ಹೀಗೆಯೇ ಬಿದ್ದು ಹೊರಳಾಡಿಕೊಂಡು ಗೋಡೆಗೆ ತುಳಿಯುತ್ತಿರಿ…!’ ಎಂದು ವ್ಯಂಗ್ಯವಾಗಿ ಹೇಳಿ ನಗುತ್ತ ಎದ್ದ. ‘ಹೇ ಹೋಗ್, ಹೋಗನಾ ಬ್ಯಾವರ್ಸಿ…!’ ಎಂದು ಹೆನ್ರಿ ಮತ್ತೊಮ್ಮೆ ತನ್ನೊಳಗೆ ವಿಜೃಂಭಿಸುತ್ತಿದ್ದ ಯಾರನ್ನೋ ಬೈದುಕೊಂಡ.ತೋಮನಿಗೆ, ಇನ್ನು ತಾನಿಲ್ಲಿನಿಂತರೆ ಕೆಲಸ ಕೆಡುವುದೆಂದು ಗ್ಯಾರಂಟಿ ಎಂದು ಖಾತರಿಯಾಯಿತು. ಹೆನ್ರಿಯ ಯೋಚನೆಯನ್ನು ಬದಿಗೊತ್ತಿ ತನ್ನ ಮನದನ್ನೆಯನ್ನು ನೆನೆಯುತ್ತ ಅವಳ ಮನೆಯ ದಾರಿ ಹಿಡಿದ.
ಹಿಂದಿನ ದಿನದ ಮಾರಿಭೋಜನಕ್ಕೂ ಮತ್ತು ಮರುದಿನದ ಮಧ್ಯಾಹ್ನದ ಪಾಡ್ಯದೂಟಕ್ಕೂ ತೋಮ, ಅಂಗರನ ಮನೆಗೆ ಸಮಯಕ್ಕೆಸರಿಯಾಗಿ ಬಂದಿದ್ದ. ಅದು ಪ್ರೇಮಾಳನ್ನು ಆನಂದದಲ್ಲಿ ಮುಳುಗಿಸಿತ್ತು. ತೋಮತನ್ನ ಮೇಲಿನ ಪ್ರೀತಿಯಿಂದಲೇ ಬರುತ್ತಿದ್ದಾನೆ! ಎಂದು ಯೋಚಿಸಿದ ಅವಳನ್ನುಮಧುರ ಭಾವನೆಯೊಂದು ಗಾಢವಾಗಿ ಆವರಿಸಿತು.ಈಗ ಮನೆಗೆ ಬಂದ ತೋಮನನ್ನುಅಂಗರ ಮತ್ತು ಅಶೋಕ ಇಬ್ಬರೂ ಆತ್ಮೀಯವಾಗಿ ಸ್ವಾಗತಿಸಿದರು. ಇವತ್ತುಅವನಿಗೆ ಕೋಳಿರೊಟ್ಟಿಯೊಂದಿಗೆ ಮೂಡೆ(ಕಡುಬು) ಮತ್ತು ಮಟನ್ ಗಸಿಯ ಸಮಾರಾಧನೆಯಾಯಿತು. ಇಂದು ಕೂಡಾ ಸೊಗಸಾಗಿ ಊಟ ಮಾಡಿದ ತೋಮಮರಳಿ ಪ್ರೇಮಾಳ ಒತ್ತಾಯಕ್ಕೆಂಬಂತೆ ಅಲ್ಲಿಯೇ ಮಲಗಿ ಸುಮಾರು ಹೊತ್ತು ಸಶಬ್ದವಾಗಿ ಗೊರಕೆ ಹೊಡೆದ. ಸಂಜೆಎಚ್ಚರವಾಗಿ ಮುಖಕ್ಕೆ ನೀರು ಸಿಂಪಡಿಸಿಕೊಂಡು ಬರುವ ಹೊತ್ತಿಗೆ ಪ್ರೇಮ ಚಹಾ ತಂದು ಅವನೆದುರಿಟ್ಟಳು. ಅವನುಸಾವಕಾಶವಾಗಿ ಚಹಾ ಕುಡಿದ. ಅಷ್ಟೊತ್ತಿಗೆ ಮಾರಿಯ ಪಾಡ್ಯದ ಪ್ರಯುಕ್ತ ಆ ಸಂಜೆ ನಡೆಯಲಿದ್ದ ಸಣ್ಣಮಟ್ಟದ ಕೋಳಿ ಅಂಕಕ್ಕೆ ಅಂಗರ ಹೊರಟು ನಿಂತವನು ತೋಮನನ್ನೂಕರೆದ. ಹಾಗಾಗಿ ಅವನು ಅಂಗರನ ಹುಂಜವನ್ನು ಬಗಲಿಗೇರಿಸಿಕೊಂಡು ಹೊರಟ.
ಈ ಹಿಂದಿನ ಸುಮಾರು ಎಂಟು ಅಂಕಗಳಲ್ಲಿ ಒಂದು ಸಣ್ಣ ಏಟಿಗೂ ಸಿಲುಕದೆ ವೀರಾವೇಶದಿಂದ ಕಾದಾಡಿ ಗೆಲುವು ಸಾಧಿಸಿದ್ದ ಅಂಗರನ,‘ಕೆಂಪು ಉರಿಯ’ ಹುಂಜವು ಇಂದಿನ ಕಳದಲ್ಲೂ ತನ್ನ ಪ್ರತಿಸ್ಪರ್ಧಿಯೊಂದಿಗೆಹೋರಾಡಿ ತನ್ನ ಕಾಲಿಗೆ ಬಿಗಿದಿದ್ದ ಬಾಳಿ(ಹರಿತವಾದ ಸಣ್ಣ ಚೂರಿ)ನಿಂದಒಂದೇ ತುಳಿತಕ್ಕೆ ಅದನ್ನು ಸಿಗಿದು ಕೆಡವಿಬಿಟ್ಟಿತು. ಪ್ರಥಮ ಸುತ್ತಿನ ವರಸೆಯಲ್ಲೇ ಗೆದ್ದು ಸಿಕ್ಕಿದ, ಸತ್ತ ಕೋಳಿಯನ್ನು ಹೊತ್ತ ತೋಮ ಕೂಡಲೇ ಅದನ್ನು ತಂದು ಪ್ರೇಮಾಳಿಗೊಪ್ಪಿಸಿದ. ಆದರೆ ಎರಡು ದಿನಗಳಿಂದಲೂ ನಿರಂತರವಾಗಿ ಮಾಂಸದ ಅಡುಗೆಯನ್ನು ಮಾಡಿ ಬಡಿಸಿ ಬೇಸತ್ತು ಹೋಗಿದ್ದ ಪ್ರೇಮ, ತೋಮನಿಂದ ಕೋಳಿಯನ್ನೇನೋ ಖುಷಿಯಿಂದಲೇ ತೆಗೆದುಕೊಂಡಳು.ಆದರೆ ಒಳಗೊಯ್ದು ಅಮ್ಮನ ಕೈಗೆ ತುರುಕಿಸುತ್ತ,‘ನೋಡಮ್ಮಾ…! ನಿನ್ನ ಗಂಡನಿಗೆ ಸುಮ್ಮನೆ ಕೂತರೆ ಕುಂಡೆಗೆ ಗೆದ್ದಲು ಹಿಡಿಯುತ್ತದೆ ಅಂತ ಇವತ್ತೂ ಹೋಗಿ ಮತ್ತೊಂದು ಯುದ್ಧ ಗೆದ್ದಿದ್ದಾನೆ. ಆದರೆ ಇದನ್ನು ಹದ ಮಾಡಲು ನನ್ನಿಂದ ಸಾಧ್ಯವಿಲ್ಲ. ಬೇಕಿದ್ದರೆ ನೀನೇ ಮಾಡಿ ಬಡಿಸು ಅವನಿಗೆ!’ ಎಂದು ಸಿಡುಕಿ ಹೊರಗೆ ಬಂದಳು.ಆದರೆ ತೋಮನನ್ನು ಕಂಡವಳ ಮುಖ ಮತ್ತೆ ಸಹಜ ಸ್ಥಿತಿಗೆ ಮರಳಿತು. ತೋಮ ಸ್ವಲ್ಪಹೊತ್ತು ಅವಳೊಡನೆ ಜಗುಲಿಯಲ್ಲಿ ಕುಳಿತು ಚಂದದ ಮಾತಾಡಿದ. ಬಳಿಕ ಮತ್ತೆ ಕೋಳಿಯಂಕಕ್ಕೆ ಹೋದ. ಹಿಂದಿರುಗುವಾಗ ಇಬ್ಬರೂ ಮೂಗಿನ ಮಟ್ಟಕುಡಿದು,ಗೆದ್ದ ಕೋಳಿಯನ್ನೆಳೆದುಕೊಂಡು ತೂರಾಡುತ್ತ ಮನೆಗೆ ಬಂದರು. ಆದರೆ ತೋಮ ಎಷ್ಟು ಕುಡಿದರೂ ಪಕ್ಕನೇ ತಾಳ ತಪ್ಪುವ ಮನುಷ್ಯನಲ್ಲ. ಅಂಗರನು ಬಂದವನು ಧೊಪ್ಪನೆ ಜಗುಲಿಯ ಮೇಲೆ ಅಂಗಾತ ಬಿದ್ದುಕೊಂಡು ಮಣಮಣ ಒದರುತ್ತ ಮಂಪರಿಗೆ ಜಾರಿದ.
ಅಶೋಕ ಆವತ್ತು ರಾತ್ರಿ ತನ್ನ ಗೆಳೆಯನೊಬ್ಬನ ಮನೆಯಲ್ಲಿ ಕೋಳಿ ಅಂಕದ ವಿಶೇಷ ಔತಣಕೂಟವಿದ್ದರಿಂದ ಅಲ್ಲೇ ಉಳಿದಿದ್ದ. ಆದ್ದರಿಂದತೋಮನೇ ಅಂಗರನನ್ನು ಎತ್ತಿ ಹೊತ್ತೊಯ್ದು ಒಳಗೆ ಮಲಗಿಸಿದ. ಗಂಡನ ಅವಸ್ಥೆಯನ್ನು ದಿನಾ ನೋಡುತ್ತಿದ್ದ ದುರ್ಗಕ್ಕನಿಗೆ ಅದೆಲ್ಲ ಅಭ್ಯಾಸವಾಗಿತ್ತು. ಆದರೆ ಇವತ್ತು ತೋಮನಂಥ ಅತಿಥಿಯೆದುರು ಅವನು ಹೀಗೆ ವರ್ತಿಸಿದ್ದು ಅವಳಿಗೆ ತೀರಾ ನೋವುಂಟು ಮಾಡಿತು.‘ಥೂ! ಇವರ ಅವಸ್ಥೆಯೇ…! ಬೇರೆ ಹೊತ್ತಲ್ಲಿ ಹೇಗಾದರಿರಲಿ. ಮನೆಗೆ ಯಾರಾದರೂ ಬಂದಾಗಲಾದರೂ ಸ್ವಲ್ಪ ಮರ್ಯಾದೆಯಿಂದ ಇರಲಿಕ್ಕಾಗುವುದಿಲ್ಲವಾ ಈ ಮನುಷ್ಯನಿಗೆ? ಅವನೊಂದಿಗೆ ಮೂಗಿನ ಮಟ್ಟ ಕುಡಿದು ಬಂದು ಬೀಳುವುದೆಂದರೇನು? ಬಿಲಾಸು ಬಿಟ್ಟದ್ದೆಲ್ಲಿಯಾದರೂ!’ ಎಂದು ಬೈಯ್ಯ ತೊಡಗಿದಳು.ತನ್ನ ಪ್ರಿಯಕರನೆದುರು ಅಮ್ಮ ಕಿರಿಕಿರಿ ಮಾಡತೊಡಗಿದ್ದನ್ನು ಕಂಡ ಪ್ರೇಮಾಳಿಗೆ ಇರುಸು ಮುರುಸಾಯಿತು.ಅವಳುತಕ್ಷಣ,‘ಛೇ!ಛೇ! ಇದೇನಮ್ಮಾ ನಿನ್ನದು ಬಂದವರೆದುರೆಲ್ಲಾ…! ಸ್ವಲ್ಪ ಸುಮ್ಮನಿರಬಾರದಾ…?’ಎಂದು ಮೆಲುದನಿಯಲ್ಲಿಗದರಿಸಿ ಎದ್ದು ಹೊರಗೆ ಬಂದು ತೋಮನನ್ನು ರಾತ್ರಿಯೂಟಕ್ಕೆ ಎಬ್ಬಿಸಿದಳು.
ತೋಮ ಈ ರಾತ್ರಿಯೂ ಕಟ್ಟದ ಕೋಳಿಯ ಪದಾರ್ಥದೊಂದಿಗೆ ಚೆನ್ನಾಗಿ ಉಂಡ. ಜೊತೆಗೆತನ್ನ ಶೆಡ್ಡಿಗೆ ಹೋಗಲುಮರಳಿ ನಿರುತ್ಸಾಹ ಕಾಡಿತು.ಹೋಗಲೋ ಬೇಡವೋ…? ಎಂಬ ಗೊಂದಲಕ್ಕೆ ಬಿದ್ದು ತೊಳಲಾಡಿದ. ಆದರೆ ಪ್ರೇಮಾಳೆದುರು ತೋರಿಸಿಕೊಳ್ಳದೆ, ‘ಆಯ್ತು,ಪ್ರೇಮ ನಾನಿನ್ನು ಹೊರಡುತ್ತೇನೆ. ಎರಡು ದಿನ ನಿಮ್ಮದೇ ಮನೆಯವನೆಂಬಷ್ಟು ಅಭಿಮಾನದಿಂದ ಈ ಬಡವನಿಗೆ ಊಟೋಪಚಾರ ನೀಡಿ ಸತ್ಕರಿಸಿದಿರಿ. ಅದನ್ನು ನನ್ನ ಜೀವಮಾನದಲ್ಲೆಂದೂ ಮರೆಯುವುದಿಲ್ಲ. ನನಗಾದರೂ ಯಾರಿದ್ದಾರೆ ಹೇಳಿ? ನಾನು ಕೂಡಾ ನೀವೇ ನನ್ನವರು ಎಂದುಕೊಂಡು ಸಮಾ ತಿಂದುಂಡು ಖುಷಿಪಟ್ಟೆ!’ ಎಂದು ಆದ್ರ್ರವಾಗಿ ಹೇಳುತ್ತ ಎದ್ದು ಹೊರಡಲನುವಾದ.ಅವನ ಕೊನೆಯ ಮಾತು ಕೇಳಿದ ಪ್ರೇಮಾಳ ಮನಸ್ಸು ಕರಗಿತು. ‘ಅರೆರೇ…!ಈ ಕತ್ತಲೆಯಲ್ಲಿ ಎಲ್ಲಿಗೆ ಹೋಗುತ್ತೀರಿ? ಇವತ್ತೊಂದು ರಾತ್ರಿ ಇಲ್ಲೇ ಇದ್ದು ಹೋದರಾಗದಾ?ಅಲ್ಲಿ ಮನೆಯಲ್ಲಿ ನಿಮ್ಮನ್ನು ಕಾಯುವವರು ಯಾರಿದ್ದಾರೆ?’ ಎಂದುಅಕ್ಕರೆಯಿಂದ ಆಕ್ಷೇಪಿಸಿದಳು. ಪ್ರೇಮಾಳ ಮಾತು ಕೇಳಿದ ತೋಮಆ ಕ್ಷಣ ಇನ್ನೂ ಮಸುಕು ಮಸುಕಾಗಿ ನೆನಪಿದ್ದ ತನ್ನ ಹೆತ್ತವಳನ್ನೇ ಕಂಡಷ್ಟು ಭಾವುಕನಾದ.
‘ಈ ಹುಡುಗಿಗೆ ನನ್ನ ಮೇಲೆ ಯಾಕೆ ಇಷ್ಟೊಂದು ಪ್ರೀತಿ, ಕಾಳಜಿ…? ಈತನಕ ತನ್ನ ಬದುಕಿನಲ್ಲಿ ಇಂಥಒಳ್ಳೆಯ ಹುಡುಗಿಯನ್ನು ತಾನೆಂದೂ ಕಂಡಿಲ್ಲ. ಏನೇ ಆಗಲಿ, ಬದುಕಿದರೆ ಇವಳ ಜೊತೆಯಲ್ಲೇ ಬದುಕಬೇಕು.ಅದೇ ಸಾರ್ಥಕ ಜೀವನ!’ ಎಂದುಕೊಂಡವನು,‘ಅಯ್ಯಯ್ಯಾ…ಮನೆ ಎಷ್ಟು ದೂರವುಂಟು…?ದಾರಿಯೂ ನನಗೇನು ಹೊಸತಲ್ಲವಲ್ಲ…? ಎರಡು ಬೀಡಿ ಸೇದಿ ಮುಗಿವ ಹೊತ್ತಿಗೆ ಮನೆಯಲ್ಲಿರುತ್ತೇನೆ. ನಿಮಗೇಕೆ ಸುಮ್ಮನೆ ತೊಂದರೆ…?’ ಎಂದು ಒಲ್ಲದ ಮನಸ್ಸಿನಿಂದ ಹೇಳಿದ.‘ಅಯ್ಯೋ ನಮಗೆಂಥದು ತೊಂದರೆ? ರಾತ್ರಿ ತುಂಬಾ ಆಯ್ತಲ್ಲವಾ. ಅದಕ್ಕೆ ಹೇಳಿದೆ. ಬೀಡಿ ಗೀಡಿ ಎಳೆಯುವುದೂ ಬೇಡ, ಉಬ್ಬಸ ತಂದುಕೊಳ್ಳುವುದೂ ಬೇಡ. ಇನ್ನೇನು ಮಾತಾಡಬೇಡಿ. ಬನ್ನಿ ಒಳಗೆ.ಇಲ್ಲೇ ಮಲಗಿಕೊಳ್ಳಿ ಚಾಪೆ ಹಾಸುತ್ತೇನೆ!’ ಎಂದು ಕಟ್ಟಪ್ಪಣೆಯಂತೆಯೇ ಹೇಳಿದ ಪ್ರೇಮ ಅವನ ಉತ್ತರಕ್ಕೂ ಕಾಯದೆ ಒಳಗೆ ಹೋಗಿ ಚಾಪೆ,ದಿಂಬು ಮತ್ತು ಹಾಸನ್ನು ತಂದು ಅಪ್ಪನ ಕೋಣೆಯಲ್ಲಿ ನೀಟಾಗಿ ಹಾಸಿದಳು. ಆಗ ತೋಮ ಮತ್ತೊಮ್ಮೆ ಆದ್ರ್ರನಾದವನು,‘ಆಯ್ತು ಮಾರಾಯ್ತಿ, ನೀನು ಹೇಳಿದ ಮೇಲೆ ಮುಗಿಯಿತು. ಮಲಗುತ್ತೇನೆ!’ ಎಂದು ಅವಳನ್ನು ಪ್ರೀತಿಯಿಂದ ನೋಡುತ್ತ ಒಳಗೆ ಹೋದ. ಅವನ ನೋಟದ ಒಳಾರ್ಥವನ್ನು ಗ್ರಹಿಸಿದ ಪ್ರೇಮಾಳೂನಾಚಿ ತನ್ನ ಕೋಣೆಗೆ ಹೋಗಿ ಬಾಗಿಲು ದೂಡಿಕೊಂಡಳು. ಆವತ್ತು ಬಿಡುವಿಲ್ಲದೆ ದುಡಿದು ಸುಸ್ತಾಗಿದ್ದ ದುರ್ಗಕ್ಕ ಆಗಲೇ ಅಡುಗೆಕೋಣೆಯಲ್ಲಿ ನಿದ್ರೆಗೆ ಜಾರಿದ್ದಳು.
ತೋಮ ಚಾಪೆಯ ಮೇಲೆ ಮೈಚೆಲ್ಲಿದ. ಆದರೆ ಅಂಗರನ ಕರ್ಕಶ ಗೊರಕೆಯೂ ಮತ್ತು ಪ್ರೇಮಾಳ ಮೇಲಿನ ಮಧುರ ಕಲ್ಪನೆಯೂ ಸೇರಿ ಅವನ ನಿದ್ರೆಗೆ ಭಂಗ ತಂದವು. ನಿಶ್ಶಬ್ದವಾಗಿ ಎದ್ದು ಕುಳಿತ. ಬಳಿಕ ಏನೋ ಯೋಚಿಸಿ ಚಡಪಡಿಸಿದ. ಕೊನೆಗೆ ಧೈರ್ಯ ಮಾಡಿ ಮೇಲೆದ್ದ. ಕಳ್ಳ ಹೆಜ್ಜೆಗಳನ್ನಿಡುತ್ತ ಪ್ರೇಮಾಳ ಕೋಣೆಯತ್ತ ಹೋಗಿ ಬಾಗಿಲ ಬಳಿ ನಿಂತುಕೊಂಡ. ಇನ್ನೇನು ಮೆಲ್ಲನೆ ಬಾಗಿಲು ಬಡಿಯ ಬೇಕೆಂಬಷ್ಟರಲ್ಲಿ ಅದಾಗಲೇ ಅರೆ ತೆರೆದಿದ್ದನ್ನು ಗಮನಿಸಿದ. ಹಸಿರು ನಿಶಾನೆ ದೊರೆತಂತಾಯಿತು.ಮೆಲ್ಲನೆ ಒಳಗಡಿಯಿಟ್ಟ. ಕೋಣೆಯ ಗೋಡೆಗೆ ಹೊಡೆದಿದ್ದ ಸ್ಟ್ಯಾಂಡಿನ ಮೇಲೆಯಾವುದೋ ದೇವರ ಸಣ್ಣ ಪಟವಿತ್ತು. ಅದರೆದುರು ಎಳ್ಳೆಣ್ಣೆಯ ದೀಪ ಮಂದವಾಗಿ ಉರಿಯುತ್ತಿತ್ತು. ಪ್ರೇಮಾಳೂ ತೋಮನ ನೀರೀಕ್ಷೆಯಲ್ಲಿದ್ದಂತಿತ್ತು. ಆದರೆ ಅವನು ಒಳಗಡಿಯಿಡುತ್ತಲೇ ಅವಳಿಗೆ ವಿಪರೀತ ಭಯವಾಯಿತು. ಆದ್ದರಿಂದ ನಿದ್ರೆಯಲ್ಲಿರುವಂತೆ ನಟಿಸಿದಳು. ತೋಮದೀಪದ ಬೆಳಕಿನಲ್ಲಿ ತನ್ನ ಪ್ರಿಯತಮೆಯ ಮಲಗಿದ ಭಂಗಿಯನ್ನು ಗಮನಿಸಿದ. ಅಂಗಾತ ಮಲಗಿದ್ದವಳ ತುಂಬು ದೇಹಸಿರಿಯನ್ನು ಕಂಡವನು ಉನ್ಮತ್ತನಾಗಿ ಅವಳ ಪಕ್ಕ ಕುಳಿತು ರಟ್ಟೆಯನ್ನು ಹಿಡಿದು,‘ಪ್ರೇಮಾ…!’ ಎಂದುಸುರಿದ. ಅವಳು ಬೆಚ್ಚಿಬಿದ್ದವಳಂತೆ ನಟಿಸಿದಳು. ಅವನು ರಪ್ಪನೆ ಅವಳ ಬಾಯಿಗೆ ಕೈ ಅಡ್ಡ ಹಿಡಿದು,‘ಶ್ಶೂ!’ ಎನ್ನುತ್ತ ಮೃದುವಾಗಿ ಆವರಿಸಿಕೊಂಡ.
ತನ್ನ ಪ್ರಿಯಕರನಿಂದ ಸುಮಾರು ಹೊತ್ತು ಮಧುರವಾದ ಸುಖವನ್ನನುಭವಿಸಿದ ಪ್ರೇಮ ಅವನನ್ನು ಮೃದುವಾಗಿ ಬೆಸೆದುಕೊಂಡು ಹಿತವಾದ ನಿದ್ರೆಗೆ ಜಾರಿದಳು. ಬೆಳಗ್ಗಿನ ಮೊದಲ ಜಾವದಲ್ಲಿ ಧಿಗ್ಗನೆ ಎಚ್ಚರಗೊಂಡವಳು ರಾತ್ರಿ ನಡೆದ ಘಟನೆಯನ್ನು ಕೆಲವುಕ್ಷಣ ಮೆಲುಕು ಹಾಕುತ್ತ ಪುಳಕಿತಳಾದಳು.ಆದರೆ ಈಗ ತಾನಿರುವ ಸ್ಥಿತಿಯನ್ನು ಯೋಚಿಸಿದವಳಿಗೆ ತೀರಾ ಭಯವಾಯಿತು.ಗಾಢ ನಿದ್ದೆಯಲ್ಲಿದ್ದ ತೋಮನನ್ನು ಮೆಲ್ಲನೆ ತಬ್ಬಿ ಮುದ್ದಿಸಿ ಎಚ್ಚರಿಸಿದಳು. ಅವನು ಉದಾಸೀನದಿಂದ ಎದ್ದವನು ದೊಡ್ಡದಾಗಿ ಆಕಳಿಸುತ್ತ ಪ್ರೇಮಾಳತ್ತ ಹೊರಳಿ ಮತ್ತೆ ಅವಳನ್ನು ಬಿಗಿದಪ್ಪಿಕೊಂಡ. ಸ್ವಲ್ಪಹೊತ್ತಿನ ನಂತರಎದ್ದು ಹೋಗಿ ಅಂಗರನ ಕೋಣೆಯಲ್ಲಿ ಮಲಗಿದ.
(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter