ವಿವಶ (ಧಾರಾವಾಹಿ ಭಾಗ-13)

ಮಥಾಯಸನ ದ್ರಾಕ್ಷಾರಸವನ್ನು ಕುಡಿದು ಮಲಗಿದ ರಾಮಭಟ್ಟ ಮರುದಿನ ಮುಂಜಾನೆ ಉಲ್ಲಾಸದಿಂದಲೇಎದ್ದ. ಗಾಢ ನಿದ್ದೆ ಮತ್ತು ಮದಿರೆಯ ಪ್ರಭಾವದಿಂದಅವನ ಮೈಮನಸ್ಸುಗಳೆರಡೂ ಹಕ್ಕಿಯಂತೆ ಹಾರಾಡುತ್ತಿದ್ದವು. ಅದೇ ಗುಂಗಿನಲ್ಲಿ ನಿತ್ಯಕರ್ಮ ಮುಗಿಸಿ ದೇವಸ್ಥಾನಕ್ಕೆ ಹೋದ.ಅಲ್ಲಿ ರೂಢಿಯಂತೆ ಅನ್ಯಮನಸ್ಕನಾಗಿ ಚಾಕರಿಯನ್ನು ಮಾಡತೊಡಗಿದ.ಆದರೆ ಮಥಾಯಸನ ದ್ರಾಕ್ಷಾರಸದ ರುಚಿಯು ಅವನನ್ನು ದಿನವಿಡೀ ಕಾಡುತ್ತಿತ್ತು. ಅಂದು ಮಥಾಯಸನೂ ತನ್ನ ನಿತ್ಯದ ಕೆಲಸ ಮುಗಿಸಿ ಸಂಜೆಯ ಹೊತ್ತಿಗೆ ಆತುರದಿಂದ ಕಟ್ಟೆಗೆ ಬಂದು ಕುಳಿತು ಗೆಳೆಯನನ್ನು ಕಾಯತೊಡಗಿದ. ಅಷ್ಟರಲ್ಲಿ ರಾಮಭಟ್ಟನೂ ಅಲ್ಲಿಗೆ ಬಂದ. ಗೆಳೆಯನನ್ನು ಕಂಡ ರಾಮಭಟ್ಟನ ಮನಸ್ಸುಮೊದಲಿಗೆ ದ್ರಾಕ್ಷಾರಸವನ್ನು ಕೇಳು ಎಂಬಂತೆ ತುಡಿಯಿತು. ಆದರೆ ಸಂಕೋಚವಾಯಿತು. ಆದ್ದರಿಂದ,‘ಹೇ, ಪರ್ಬು ನಿನ್ನೆಯ ನಿನ್ನ ದ್ರಾಕ್ಷಾರಸದಲ್ಲಿ ಎಂಥ ಮಜವಿತ್ತು ಮಾರಾಯಾ! ರಾತ್ರಿ ಹೋಗಿ ಊಟ ಮಾಡಿ ಮಲಗಿದವನಿಗೆ ಯಮನಿದ್ರೆ ಅಂತಾರಲ್ಲ ಹಾಗೆ ಮಲಗಿಸಿತ್ತು ನಿನ್ನ ಮಾಲು!’ ಎಂದು ಗೆಳೆಯನೆಡೆಗೆ ಪ್ರಶಂಸಾ ದೃಷ್ಟಿ ಬೀರುತ್ತ ಅಂದ. ಅಷ್ಟು ಕೇಳಿದ ಮಥಾಯಸನೂ ಗೆಲುವಾದ.‘ಅಲ್ಲವಾ ಮತ್ತೇ…? ನಾನೇನು ಸುಳ್ಳು ಹೇಳಿದೆನೆಂದುಕೊಂಡೆಯಾ.ಅಮ್ಮ ಯಾವಾಗಲೋ ಒಮ್ಮೊಮ್ಮೆ ಮಾತ್ರ ಅಂಥ ಮಾಲುತಯಾರಿಸುತ್ತಾಳೆ ಮಾರಾಯಾ. ಹ್ಞಾಂ, ನಾಳೆ ಸಂಜೆ ನಿಂಗೆ ಇನ್ನೊಂದು ಮಾಲು ಕೊಡುತ್ತೇನೆ. ಅದು ಗೋಂಕಿನಿಂದ(ಗೇರುಹಣ್ಣು) ಮಾಡುವಂಥದ್ದು. ಅದರ ರುಚಿಯನ್ನೂ ಒಮ್ಮೆ ನೋಡಿಬಿಡುವಿಯಂತೆ. ಆನಂತರನಿನ್ನ ಟೆನ್ಷನ್ ಗಿನ್ಷನ್ ಎಲ್ಲ ಮಂಗಮಾಯವಾಗದಿದ್ದರೆ ಮತ್ತೆ ಹೇಳು!’ಎಂದು ಮಥಾಯಸ ಹೆಮ್ಮೆಯಿಂದ. ಆಗ ರಾಮಭಟ್ಟನಮನಸ್ಸು ಆಸೆಯಿಂದ ಚಡಪಡಿಸಿತು. ‘ಆಯ್ತು, ಆಯ್ತು ಮಾರಾಯಾ,ಅದನ್ನೂ ಒಂದು ಸಲ ಟೇಸ್ಟು ಮಾಡಿ ನೋಡುವ. ಅಂದಹಾಗೆ ನಾನು ನಿನ್ನೆಯಿಂದ ಒಂದು ಮುಖ್ಯ ವಿಷಯವನ್ನು ದೃಢಪಡಿಸಿಕೊಂಡೆ. ಏನೆಂದರೆ, ನನ್ನ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗುತ್ತದೆ. ಹಾಗಾಗಿ ಇನ್ನು ಮುಂದೆ ಜೀವನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನೆ ಬದುಕಿ ಬಿಡುವುದಷ್ಟೆ ನನ್ನ ಕೆಲಸ ಅಂತ ತೀರ್ಮಾನಿಸಿದ್ದೇನೆ ಮಾರಾಯಾ!’ ಎಂದು ರಾಮಭಟ್ಟ ದೀರ್ಘ ಉಸಿರು ದಬ್ಬಿ ಹೇಳಿದ. ಅದಕ್ಕೆ ಮಥಾಯಸನೂ, ‘ಮತ್ತೆಂಥದನಾ? ಸುಮ್ಮನೆ ಇಲ್ಲಸಲ್ಲದ್ದನ್ನು ಯೋಚಿಸುತ್ತ ಮಂಡೆ ಹಾಳು ಮಾಡಿಕೊಳ್ಳುವುದು ಯಾಕೆ! ಅದನ್ನೆಲ್ಲ ಬಿಟ್ಟು ದೇವರು ದಾರಿ ತೋರಿಸಿದ ಹಾಗೆ ಇದ್ದುಬಿಟ್ಟರಾಯ್ತು. ಮುಂದೆಲ್ಲ ಸರಿ ಹೋಗುತ್ತದೆ!’ಎಂದು ತಾನೂ ರಾಮಭಟ್ಟನ ನಿರ್ಧಾರಕ್ಕೆ ಒತ್ತಾಸೆಯಾಗಿ ಮಾತಾಡಿದ. ಅದರಿಂದ ರಾಮಭಟ್ಟ ಮತ್ತೂ ಗೆಲುವಾದ. ಬಳಿಕ ಗೆಳೆಯರಿಬ್ಬರೂ ಇನ್ನಷ್ಟು ಹೊತ್ತು ಹರಟಿದವರು ಎದ್ದು ಬೀಳ್ಗೊಂಡರು.


ಆದರೆ ಮರುದಿನದ ಸಂಜೆಯವರೆಗಿನ ಸಮಯವನ್ನು ರಾಮಭಟ್ಟ ಹೇಗೆ ಕಳೆದನೆಂಬುದು ಅವನಿಗೇ ಅರ್ಥವಾಗಲಿಲ್ಲ! ಅಂದು ಸೋಮವಾರವಾದ್ದರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳಿದ್ದು ದಿನದ ಬಹುಪಾಲನ್ನು ಅವನು ಗರ್ಭಗುಡಿಯೊಳಗೆಯೇ ಕಳೆಯಬೇಕಾಯಿತಾದರೂ ಬ್ರಹ್ಮಲಿಂಗೇಶ್ವರನ ಮೂರ್ತಿಯನ್ನು ಒಮ್ಮೆಯೂ ಕಣ್ಣೆತ್ತಿಯೂ ನೋಡಲೇ ಇಲ್ಲವೆಂಬಷ್ಟು ಚಡಪಡಿಕೆಯಿಂದಲೇ ಅಂದಿನ ಕೆಲಸವನ್ನು ಮುಗಿಸಿದ್ದ. ಹೊರಡುವ ಹೊತ್ತಾಗುತ್ತಲೇ ಆತುರಾತುರವಾಗಿ ದೇವಳದ ಸ್ವಾಮಿಗಳತ್ತ ತೆರಳಿವಾಡಿಕೆಯಂತೆ ಅವರಿಗೆ ಸಾಷ್ಟಾಂಗಬಿದ್ದ. ಅದಕ್ಕೆ ಪ್ರತಿಯಾಗಿ ಅವರು ಹರಸಿದರೋ ಬಿಟ್ಟರೋ ಯಾವುದನ್ನೂ ಗಮನಿಸದೆ ಕೂಡಲೇ ಸೋಮಾರಿಕಟ್ಟೆಗೆ ಧಾವಿಸಿ ಬಂದವನು ಗೆಳೆಯನನ್ನು ಕಾಯುತ್ತ ಕುಳಿತ. ಸ್ವಲ್ಪಹೊತ್ತಿನ ಬಳಿಕ ಮಥಾಯಸನೂ ಬಂದ.ಅವನುನಿನ್ನೆ ತಾನು ಹೇಳಿದಂತೆಯೇ ಗೋವೆ ಸಾರಾಯಿಯನ್ನೂ,ನೆಂಜಿಕೊಳ್ಳಲು ಉಪ್ಪಿನಕಾಯಿಯನ್ನೂ ತಂದಿದ್ದ. ಅವನನ್ನು ಕಂಡ ರಾಮಭಟ್ಟ ತನ್ನ ಚಡಪಡಿಕೆಯನ್ನು ಆದಷ್ಟು ಹತ್ತಿಕ್ಕಿಕೊಂಡು ಗಾಂಭೀರ್ಯ ನಟಿಸಿದ. ಮಥಾಯಸ ಅದೂ ಇದೂ ಮಾತಾಡುತ್ತ ಸಣ್ಣ ಲೋಟವೊಂದಕ್ಕೆ ಸಾರಾಯಿಯನ್ನು ಬಗ್ಗಿಸಿ ಗೆಳೆಯನ ಮುಂದಿಟ್ಟ. ಅದನ್ನೇ ಕಾಯುತ್ತಿದ್ದ ರಾಮಭಟ್ಟ ಚೂರೂ ಅನುಮಾನಿಸದೆ ಆ ಮದಿರೆಯನ್ನು ಹೊಟ್ಟೆಗಿಳಿಸಿದ.ಆದರೆ ಅದರ ರುಚಿ ಮಾತ್ರ ಅವನ ದೊಂಡೆಯನ್ನು ಕತ್ತರಿಸುವಂಥ ಉರಿಯಿಂದ ಕೂಡಿತ್ತು.
‘ಥೂ! ಇದೆಂಥದನಾ ಪರ್ಬು ಹಾಳಾದ್ದು! ನಿನ್ನೆಯ ಮಾಲಿನಂತಿಲ್ಲವಲ್ಲ ಇದು…!’ ಎಂದು ಮುಖಹಿಂಡುತ್ತ ಅಂದ.
‘ಹೌದು ಮಾರಾಯಾ. ಇದು ಸ್ವಲ್ಪ ಬೇರೆಯೇ ಟೇಸ್ಟಿನದ್ದು. ಆದರೆ ಇದರ ಆಟವನ್ನುನೀನಿನ್ನು ಸ್ವಲ್ಪ ಹೊತ್ತಲ್ಲೇ ನೋಡುತ್ತಿ ಬಿಡು. ಆದರೂ ಒಂದು ಮಾತು ಮಾರಾಯಾ, ಈ ಮಾಲನ್ನು ನಮ್ಮಂಥವರು ಡೈಲಿ ಕುಡಿಯಬಾರದು. ಕುಡಿದರೆ ಕರುಳು ತೂತು ಬಿದ್ದು ಸತ್ತೇ ಹೋಗಬೇಕಾದೀತು. ಅಪರೂಪಕ್ಕೊಮ್ಮೆ ಮನಸ್ಸಿಗೆ ತುಂಬಾ ಬೇಜಾರಾದರೆ ಮಾತ್ರ ಕುಡಿಯಲು ಅಡ್ಡಿಯಿಲ್ಲ ನೋಡು!’ ಎಂದು ಮಥಾಯಸನು ತನ್ನ ಗೆಳೆಯನ ಬೆನ್ನು ತಟ್ಟಿ ಹೇಳಿ ಸ್ವಲ್ಪ ಹೊತ್ತಿನ ನಂತರ ಹೊರಟು ಹೋದ. ಆದರೆ ರಾಮಭಟ್ಟನ ಮನಸ್ಸು ಪ್ರತಿನಿತ್ಯವೂ ಬೇಸರ ಮತ್ತುಜಿಗುಪ್ಸೆಯಿಂದಲೇ ಇರುತ್ತದೆ ಎಂದು ಮಥಾಯಸನಿಗೆಹೇಗೆತಿಳಿಯಬೇಕು!
ಮಥಾಯಸ ಹೋದ ಬಳಿಕವೂ ರಾಮಭಟ್ಟ ಸುಮಾರು ಹೊತ್ತು ಗೋಳಿಕಟ್ಟೆಯಲ್ಲಿ ಕುಳಿತುಕೊಂಡ. ಆದರೆ ತಾನು ಕುಡಿದದ್ದು ಕೆಟ್ಟ ಕಳ್ಳಭಟ್ಟಿ ಸಾರಾಯಿ ಎಂದು ಅವನಿಗೆ ಗೊತ್ತಿರಲಿಲ್ಲ. ಆ ಮದಿರೆಯು ಗುಟುಕು ಗುಟುಕಾಗಿ ಅವನ ಒಡಲನ್ನು ಹೊಕ್ಕು ಒಳಗಿನ ಪೆಚ್ಚು ಮನಸ್ಸನ್ನು ಮೆಲ್ಲನೆ ಉದ್ರಿಕ್ತಗೊಳಿಸತೊಡಗಿತು. ಆದ್ದರಿಂದ ಮುಂದಿನ ತುಸು ಹೊತ್ತಲ್ಲಿ ಅವನು ಘೋರ ನಶೆಗೆ ಜಾರಿದ.ಅವನ ನೋವು, ಹತಾಶೆಗಳೆಲ್ಲ ಮೊದಲಿಗೆ ಕ್ಷೀಣ ಸ್ವರದ ಗೊಣಗಾಟದ ಮೂಲಕ ಹೊರಗೆ ಹರಿಯಲಾರಂಭಿಸಿದವು, ಬರಬರುತ್ತ ಯಾರ ಮೇಲೋ ಮತ್ತು ಯಾವುದರ ಮೇಲೋಅಥವಾ ಸ್ವತಃ ತನ್ನ ಮೇಲೆಯೋ ಎಂಬರಿವಾಗದೆ ಸಹಿಸಲಸಾಧ್ಯವಾದ ಕ್ರೋಧದಿಂದ ಹೊರಟ ಅವನ ಮಾತುಗಳು ಕೂಡಲೇ ಬೈಗುಳದ ರೂಪ ತಳೆದು ತಾರಕಸ್ವರದಿಂದ ಹೊಮ್ಮತೊಡಗಿದವು. ಹಾಗೆ ಸುಮಾರು ಹೊತ್ತು ಬೈಯ್ಯುತ್ತಲೇ ಇದ್ದ. ಬಳಿಕ ಸುಸ್ತಾಗಿ ಸುಮ್ಮನಾದ. ಕೊನೆಯಲ್ಲಿ ಅಳು ಒತ್ತರಿಸಿ ಬಂತು. ಮುಖಕ್ಕೆ ಅಂಗೈ ಒತ್ತಿ ಹಿಡಿದುಕೊಂಡು ಗಳಗಳನೇ ಅತ್ತ. ನಂತರ ಎದ್ದು ತೂರಾಡುತ್ತ ಮನೆಗೆ ಹೋದ. ಮನೆಯಂಗಳ ಪ್ರವೇಶಿಸುತ್ತಲೇ ಭಯ ಆವರಿಸಿತು. ಆದ್ದರಿಂದ ಆದಷ್ಟು ಸಂಭಾಳಿಸಿಕೊಳ್ಳುತ್ತ ತನ್ನ ಕೋಣೆಯನ್ನು ಹೊಕ್ಕವನು ಧಡಾರ್ರನೇ ಕದ ಮುಚ್ಚಿ ಬಿದ್ದುಕೊಂಡ. ಜಯಲಕ್ಷ್ಮಮ್ಮ ಬಂದು ಬಾಗಿಲು ಬಡಿದು ಮಗನನ್ನು ಊಟಕ್ಕೆ ಕರೆದರು. ‘ಬೇಡಮ್ಮಾ ದೇವಸ್ಥಾನದಲ್ಲೇ ಮಾಡಿ ಬಂದೆ!’ ಎಂದು ಕಷ್ಟಪಟ್ಟು ಅಂದವನು ಕೂಡಲೇ ಮಂಪರಿಗೆ ಜಾರಿದ. ಆದರೂ ಅವನ ಮನೆಮಂದಿಗೆ ತಮ್ಮ ಮಗ ದಾರಿ ತಪ್ಪುತ್ತಿದ್ದುದರ ಸಣ್ಣ‘ವಾಸನೆ’ಯೂ ಹತ್ತಲಿಲ್ಲ.
ಹೀಗೆ ದ್ರಾಕ್ಷಾರಸದಿಂದ ಆರಂಭವಾದ ರಾಮಭಟ್ಟನ ಕುಡಿತವು ಕ್ರಮೇಣ ದಿನನಿತ್ಯ ಕಳ್ಳಭಟ್ಟಿ ಬಗ್ಗಿಸುವವರೆಗೆ ಮುಂದುವರೆಯಿತು. ಶುರುವಿನಲ್ಲಿ ಸಾರಾಯಿ ನಾಲಿಗೆಗೆ ನೆಂಜಿಕೊಳ್ಳಲು ಉಪ್ಪಿನಕಾಯಿಯನ್ನೋ ಅಥವಾ ತಮಿಳು ತಂಬಿಗಳು ತಯಾರಿಸುತ್ತಿದ್ದ ಹುರಿದ ಬಟಾಣಿ ಮತ್ತು ಕರಿದ ಕಡಲೆ ಅಥವಾ ಬೋಟಿಯನ್ನೋ ತಿನ್ನುತ್ತಿದ್ದವನು ಒಮ್ಮೆ ಮಥಾಯಸನಿಂದಾಗಿಯೇ ಶಿವಕಂಡಿಕೆಯ ಬಸ್ಸು ನಿಲ್ದಾಣದ ಸಮೀಪದ ರಘುರಾಮ ಶೆಟ್ಟರ ಮಿಲಿಟರಿ ಹೊಟೇಲಿನ ಕರಿದ ಮೀನಿನ ರುಚಿಯನ್ನೂ ನೋಡಿದ. ಆವತ್ತಿನಿಂದ ದೇವಸ್ಥಾನದ ಕೆಲಸ ಮುಗಿಯುತ್ತಲೇ ಶೆಟ್ಟರ ಹೊಟೇಲಿನ ಹಿಂಬದಿಯ ಬಾಗಿಲಿನಿಂದ ಮೆತ್ತಗೆ ಒಳಗೆ ನುಸುಳುವವನು ಬಂಗುಡೆ ಮತ್ತು ಬೂತಾಯಿ ಫ್ರೈಗಳನ್ನುಕಟ್ಟಿಸಿಕೊಂಡು ಬಸ್ಸು ಹತ್ತುತ್ತಿದ್ದ. ಗಂಗರಬೀಡಿನಲ್ಲಿ ಬಸ್ಸಿಳಿದು ನೇರವಾಗಿ ಮಥಾಯಸನ ಮನೆಗೆ ಹೋಗಿ ಮಗ್ಗಿಬಾಯಿಗೆ ದುಡ್ಡುಕೊಟ್ಟು ಸಾರಾಯಿ ಕೊಂಡು ಮನೆಯ ಕತ್ತಲ ದಾರಿಯುದ್ದಕ್ಕೂ ಕುಡಿಯುತ್ತ, ಮೀನು ತಿನ್ನುತ್ತ ಸಾಗುವ ಅಭ್ಯಾಸವಿಟ್ಟುಕೊಂಡ. ಆಹೊತ್ತು ರಾಮಭಟ್ಟನಿಂದಹೊಮ್ಮುತ್ತಿದ್ದ ಮತ್ಸ್ಯದ ಪರಿಮಳವನ್ನು ಗ್ರಹಿಸುತ್ತಿದ್ದಮಥಾಯಸನ ಕಾಟು ನಾಯಿಗಳೆರಡೂಅವನು ಮನೆಗೆ ತಲುಪುವವರೆಗೂ ಬಾಲವಲ್ಲಾಡಿಸುತ್ತ ಹಿಂಬಾಲಿಸಿಅವನು ಎಸೆಯುತ್ತಿದ್ದ ಮೀನಿನ ಮುಳ್ಳುಗಳನ್ನು ಕಚ್ಚಾಡಿ ಹೆಕ್ಕಿ ತಿನ್ನುತ್ತಿದ್ದ ದೃಶ್ಯವು ಬಹಳ ಕಾಲ ಗೌಪ್ಯವಾಗಿ ಉಳಿಯಲಿಲ್ಲ.
ಮೊದಮೊದಲು ತನ್ನ ಚಟದ ಸುಳಿವು ಮನೆಮಂದಿಗೆ ತಿಳಿಯದಂತೆ ಜಾಗ್ರತೆವಹಿಸುತ್ತಿದ್ದ ರಾಮಭಟ್ಟ ಬಾವಿಕಟ್ಟೆಯಲ್ಲಿ ಕೈ, ಬಾಯಿಯನ್ನುಚೆನ್ನಾಗಿ ತೊಳೆದುಕೊಂಡು ನಿಶ್ಶಬ್ದವಾಗಿ ಕೋಣೆಸೇರಿಮಲಗುತ್ತಿದ್ದ. ಆದರೆ ಬರಬರುತ್ತ ಮನೆಮಂದಿಯ ಮೇಲೆ ಅವನಲ್ಲಿ ಆಕ್ರೋಶವೂ ಅಸಡ್ಡೆಯೂ ಬೆಳೆಯತೊಡಗಿತ್ತು. ಆದ್ದರಿಂದ ನಾನು ಯಾರಿಗೇಕೆ ಹೆದರಬೇಕು? ನನ್ನ ಸುಖ, ದುಃಖದ ಬಗ್ಗೆ ಅವರು ಯಾರಾದರೂಯಾವತ್ತಾದರೂ ಯೋಚಿಸಿದ್ದುಂಟಾ?ಇನ್ನು ಮುಂದೆ ನಾನೂ ಅವರಮಾನಮರ್ಯಾದೆ ಮತ್ತು ಮನೆತನದ ಗೌರವದ ಬಗ್ಗೆಚೂರೂ ಚಿಂತಿಸುವುದಿಲ್ಲ!ಎಂದು ಯೋಚಿಸಿದವನುಆಮೇಲೆ ರಾಜಾರೋಷವಾಗಿ ಕುಡಿಯಲಾರಂಭಿಸಿದ. ಆದ್ದರಿಂದ ಮುಂದೆ ಅವನ ಕುಡಿತದಗೀಳು ರಸ್ತೆಯಲ್ಲೇ ಬಿದ್ದು ಹೊರಳಾಡುವವರೆಗೂ ತಲುಪಿತು. ಅವನು ರಸ್ತೆಯುದ್ದಕ್ಕೂ ತೂರಾಡುತ್ತತನ್ನ ಮನೆಮಂದಿಗೂ ಮತ್ತು ದೇವಸ್ಥಾನದ ಸ್ವಾಮಿಗಳಿಗೂ ಸಹಸ್ರ ನಾಮಾರ್ಚನೆಗೈಯುತ್ತ ಸಾಗುತ್ತಿದ್ದ ದೃಶ್ಯವು ಬಹಳ ಬೇಗನೇ ಊರ ಸಮಸ್ತ ವೈದಿಕವರ್ಗಕ್ಕೂ ತಿಳಿದುಬಿಟ್ಟಿತು.ಅಷ್ಟರವರೆಗೆ ತಮ್ಮ ಜಾತಿ, ಧರ್ಮ ಮತ್ತುಆಚಾರ,ವಿಚಾರಗಳೊಂದಿಗೆ ಗೌರವದಿಂದ ಬಾಳುತ್ತಿದ್ದ ಬಹುತೇಕ ವಿಪ್ರರಿಗೆರಾಮಭಟ್ಟನ ಘನಕಾರ್ಯವು ದೊಡ್ಡ ಆಘಾತವನ್ನೂ ಅವಮಾನವನ್ನೂ ಅನುಭವಿಸುವಂತೆ ಮಾಡಿತಲ್ಲದೇ ಅವನ ಹತ್ತಿರದ ಸಂಬಂಧಿಕರನೇಕರು ಊರಲ್ಲಿ ತಲೆಯೆತ್ತಿ ತಿರುಗಾಡಲೂ ನಾಚುವಂತೆ ಮಾಡಿತು. ಜೊತೆಗೆ ದೇವಳದ ಸ್ವಾಮಿಗಳಿಗೂ ವಿಷಯ ತಿಳಿದುಅವರೂ ಅವನ ಮೇಲೆ ಮನಸ್ಸು ಮುರಿದುಕೊಂಡುಕೂಡಲೇ ಅವನನ್ನು ಸೇವೆಯಿಂದ ವಜಾಗೊಳಿಸಿಬಿಟ್ಟರು.
ತಮ್ಮ ಬಂಗಾರದಂಥ ಏಕೈಕ ಪುತ್ರಏಕಾಏಕಿ ಕುಡುಕನಾಗಿ ಜಾತಿಭ್ರಷ್ಟನೂ ಆದುದು ಮತ್ತುತಲತಲಾಂತರದಿಂದತಾವು ಪ್ರಾಣಕ್ಕಿಂತಲೂ ಮಿಗಿಲಾಗಿಕಾಪಾಡಿಕೊಂಡು ಬಂದಂಥಘನತೆ ಗೌರವಗಳು ಅವನಿಂದಾಗಿಯೇ ಮಣ್ಣುಪಾಲಾದುದೆಲ್ಲವೂ ಗೋಪಾಲಕೃಷ್ಣ ಭಟ್ಟರನ್ನೂ ಮತ್ತವರ ಕುಟುಂಬಸ್ಥರನ್ನೂತೀವ್ರ ಚಿಂತೆಗೀಡು ಮಾಡಿತು. ಅದರಿಂದ ಭಟ್ಟರಿಗೆ ಮಗನನ್ನು ಹಿಡಿದು ಕೊಂದು ಹಾಕುವಷ್ಟು ಕೋಪ ಉಕ್ಕಿತು. ಆದರೂ ತಾಳ್ಮೆಗೆಡದೆ ಮತ್ತಷ್ಟು ಬುದ್ಧಿವಾದ ಹೇಳುತ್ತಲೂ ದೇವರಿಗೆ ವಿವಿಧ ಹರಕೆ ಮತ್ತು ವಿಶೇಷ ಪೂಜೆ ಪುನಸ್ಕಾರಗಳನ್ನು ನೀಡುತ್ತಲೂಮಗನನ್ನು ಮೊದಲಿನಂತೆ ಮಾಡಬೇಕೆಂದು ನಿರ್ಧರಿಸಿದರು. ಆದರೆ ಅವನುಅದಾಗಲೇ ಆ ಹಾಳು ಕಂದಕಕ್ಕೆ ಬಿದ್ದಿದ್ದವನು ಮತ್ತೆಂದೂ ಮೇಲೇಳಲಾಗದ ಸ್ಥಿತಿಯಲ್ಲಿದ್ದಾನೆಂಬುದನ್ನು ತಿಳಿಯಲು ಅವರಿಗೆ ಹೆಚ್ಚುಕಾಲಹಿಡಿಯಲಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಆವತ್ತೊಮ್ಮೆ ಮಗ ರಾತ್ರಿಯಾದರೂ ಮನೆಗೆ ಬಾರದಿದ್ದುದುಮತ್ತದಕ್ಕೆ ಬದಲಾಗಿ ಭಟ್ಟರ ತೋಟದ ಆಳೊಬ್ಬನು ಬಂದು,‘ಸ್ವಾಮೀ ರಾಂಭಟ್ರು ಚೆನ್ನಾಗಿ ಕುಡಿದು ಸೋಮಾರಿಕಟ್ಟೆಯಲ್ಲಿ ಬಿದ್ದುಕೊಂಡಿದ್ದಾರೆ. ಬೇಗ ಬನ್ನಿ. ಹೋಗಿ ಹೊತ್ತುಕೊಂಡು ಬರುವ!’ ಎಂದು ತಿಳಿಸಿದಾಗಲೇ ಭಟ್ಟರು ತಮ್ಮ ಮಗನ ಆಸೆಯನ್ನು ಕೈಬಿಟ್ಟರು.
ಇತ್ತ ಜಯಲಕ್ಷ್ಮಮ್ಮ ಮಗನ ಅವಸ್ಥೆಯನ್ನು ಕಂಡು ತೀವ್ರ ದುಃಖಕ್ಕೊಳಗಾಗಿ,ಅಯ್ಯೋ ಬ್ರಹ್ಮಲಿಂಗೇಶ್ವರಾ…! ಹಸುವಿನಂಥ ಮನಸ್ಸಿನ ಮಗನ ಬಾಳು ಹಾಳಾಗಿ ಹೋಯ್ತಲ್ಲ…! ಎಂದು ತಲೆ ಬಡಿದುಕೊಂಡು ಅತ್ತರು. ಆದರೆ ತಮ್ಮ ದುಃಖ ಸ್ವಲ್ಪ ಸ್ಥಿಮಿತಕ್ಕೆ ಬಂದ ಕೂಡಲೇ ಅವರ ಕೋಪವು ಊರ ಕಿರಿಸ್ತಾನರ ಮೇಲೆಯೂ ಹರಿಯತೊಡಗಿತು. ತಮ್ಮ ಮಗನ ಜೀವನಮತ್ತು ಈ ಊರ ಹತ್ತು ಹಲವು ಸಜ್ಜನರ ಮನೆತನ ಬೀದಿಪಾಲಾಗುತ್ತಿರುವುದು ಹಾಗೂ ತಲತಲಾಂತರದಿಂದಲೂ ಹತ್ತೂರಲ್ಲಿ ಉತ್ತಮ ಹೆಸರುಗಳಿಸಿದಂಥ ಗಂಗರಬೀಡಿನ ಹೆಸರು ಕೂಡಾ ಕೆಡಲು ಕಿರಿಸ್ತಾನವರ್ಗವೇ ಕಾರಣ! ಎಂದವರು ಗಟ್ಟಿಯಾಗಿ ನಿರ್ಧರಿಸಿಬಿಟ್ಟರು.ಮರುಕ್ಷಣ ಗಂಡನೆದುರು ಹೆತ್ತಕರುಳಿನ ಕೋಪಾವೇಶಗಳು ಸಾರಾಯಿ ಬೇಯಿಸುವ ಕಿರಿಸ್ತಾನರ ಮೇಲೆಲ್ಲಾ ಹಿಡಿಶಾಪದ ಮೂಲಕಹೊರ ಹೊಮ್ಮತೊಡಗಿದುವು. ಪತ್ನಿಯ ಬಾಯಿಯಿಂದ ಅದನ್ನೆಲ್ಲ ಕೇಳಿಸಿಕೊಂಡ ಗೋಪಾಲಕೃಷ್ಣಭಟ್ಟರಿಗೂ ಕಿರಿಸ್ತಾನರ ಮೇಲೆ ತೀವ್ರ ದ್ವೇಷವೆದ್ದಿತು. ತಮ್ಮ ನಂದಗೋಕುಲದಂಥ ಊರಿನಲ್ಲಿ ಹಾಳು ಸಾರಾಯಿ ಬೇಯಿಸುತ್ತ ಬಡವರ ಮನೆಮಠಗಳನ್ನು ಲಗಡಿ ತೆಗೆಯುತ್ತಿರುವ ಕಿರಿಸ್ತಾನರ ಹುಟ್ಟಡಗಿಸಲೇಬೇಕು! ಎಂದು ಅವರು ಮನಸ್ಸಿನಲ್ಲೇ ಶಪಥಗೈದರು. ಮರುದಿನ ಬೆಳ್ಳಂಬೆಳಗ್ಗೆ ತಮ್ಮ ಅಗ್ರಹಾರದ ಕೊನೆಯಲ್ಲಿದ್ದ,ಅಭ್ಯುದಯ ಕಾಲೇಜಿನ ಪ್ರಾಂಶುಪಾಲ ಮಾಧವ ಸಾಮಗರ ಮನೆಗೆ ಧಾವಿಸಿದರು.
ಸಾಮಗರು ಭಟ್ಟರನ್ನು ಆದರದಿಂದ ಬರಮಾಡಿ ಕುಳ್ಳಿರಿಸಿಕೊಂಡು ಮಾತಿಗಿಳಿದರು.ಭಟ್ಟರು ತಮ್ಮ ದುಃಖವನ್ನು ಅವರಲ್ಲಿತೋಡಿಕೊಂಡವರು, ‘ಅದೇನೇ ಆಗಲಿ ಸಾಮಗಾ, ಈ ಸಾರಾಯಿ ಬೇಯಿಸುವಕಿರಿಸ್ತಾನರನ್ನು ಮಾತ್ರ ನಮ್ಮ ಊರಿನಿಂದಲೇ ಒದ್ದು ಓಡಿಸಬೇಕು. ಇನ್ನು ಮುಂದೆಯೂ ಅವರನ್ನು ಹೀಗೆಯೇ ಬಿಟ್ಟೆವೆಂದರೆ ನಮ್ಮವರೆಲ್ಲ ಕುಲಗೆಟ್ಟು ಹೋಗುವ ಕಾಲ ಬಹಳ ದೂರವಿಲ್ಲ ನೋಡು!’ ಎಂದು ಕೋಪದಿಂದ ನುಡಿದರು. ಆದರೆ ಈ ವಿಷಯ ಅದಾಗಲೇ ಸಾಮಗರಿಗೂ ತಿಳಿದಿತ್ತು. ಆದ್ದರಿಂದ ಅವರು,‘ನಾನೂ ಇದನ್ನೇ ಯೋಚಿಸುತ್ತಿದ್ದೆ ಭಟ್ಟರೇ. ರಾಮ ಕೆಟ್ಟಿರುವುದು ನಮ್ಮ ಇಡೀ ಸಮುದಾಯಕ್ಕೆಯಾವುದೋ ಅಪಶಕುನದ ಮುನ್ಸೂಚನೆಯೇ ಎಂಬಂತಿದೆ! ಹಾಗಾಗಿ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಹುಡುಕಬೇಕು. ಆದರೆ ಇದು ನಾವು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ ನೋಡಿ. ನಮ್ಮವರೆಲ್ಲರೂ ಒಗ್ಗೂಡಿ, ಊರ ಪ್ರಮುಖರನ್ನೂ ಸೇರಿಸಿಕೊಂಡು ಈ ಅನಾಚಾರವನ್ನು ಮಟ್ಟಹಾಕಬೇಕು. ಹಾಗಾಗಿಈ ವಿಷಯದಲ್ಲಿ ನೀವೊಬ್ಬರುದೃಢವಾಗಿ ನಿಲ್ಲುತ್ತೀರಾದರೆ ನಮ್ಮ ಎಣಿಕೆಯೂ ಗೆಲ್ಲುತ್ತದೆ!’ ಎಂದು ಸಾಮಗರು ಗಂಭೀರವಾಗಿ ಅಂದರು.
‘ಅಯ್ಯೋ ದೇವರೇ…! ನನ್ನ ವಂಶದ ಕುಡಿಯಾದ ಆ ಮಗುವಿನ ಅವಸ್ಥೆಯನ್ನು ಕಾಣುತ್ತಿದ್ದರೆಹೊಟ್ಟೆಗೆ ಬೆಂಕಿಯಿಟ್ಟಂತಾಗುತ್ತದೆ ಸಾಮಗಾ…! ಹೀಗಿರುವಾಗ ನಾನು ಸುಮ್ಮನಿರುತ್ತೇನೆಯೇ…?ಖಂಡಿತಾ ಇಲ್ಲ. ಅವರನ್ನು ಹೇಗಾದರೂ ಮಾಡಿ ಸದೆಬಡಿಯಲೇಬೇಕು. ಅದಕ್ಕಾಗಿ ನಾನೇನು ಮಾಡಲೂ ಸಿದ್ಧ!’ಎಂದರುಭಟ್ಟರು ರೋಷದಿಂದ. ಅದರಿಂದ ಸಾಮಗರೂ ನೆಟ್ಟಗಾದರು.‘ಅಷ್ಟಾದರೆ ಸರಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ. ನಡೆಯಿರಿ!’ಎನ್ನುತ್ತಎದ್ದ ಸಾಮಗರು ಭಟ್ಟರನ್ನು ಕರೆದುಕೊಂಡು ಮತ್ತೋರ್ವ ವೈದಿಕ ಪ್ರಮುಖರಾದ ಅನಂತ್ರಾಯ ಭಟ್ಟರಮನೆಗೆ ಹೋದರು.ಅನಂತ್ರಾಯರಿಗೂ ವಿಷಯ ತಿಳಿದಿತ್ತು. ಆದ್ದರಿಂದಮೂವರು ಹಿರಿಯರೂ ಆ ಕುರಿತು ದೀರ್ಘ ಮಾತುಕತೆ ನಡೆಸಿದರು.
ಅಲ್ಲಿಯತನಕ ಕಿರಿಸ್ತಾನರು ಹಾಗೂ ಇತರ ಕೆಲವು ಜಾತಿಯವರು ಮಾತ್ರವೇ ಕುಡಿದು ಲೇಲೇ ಹಾಕುವುದನ್ನು ಕಾಣುತ್ತ ಬರುತ್ತಿದ್ದ ವೈದಿಕರು ಅಂಥವರನ್ನು ಸುಧಾರಿಸುವ ದಾರಿ ಕಾಣದೆಅವರ ಮೇಲೆ ಅನುಕಂಪ ಮತ್ತು ವಿಷಾದವನ್ನುಮಾತ್ರವೇ ವ್ಯಕ್ತಪಡಿಸುತ್ತಸುಮ್ಮನಾಗುತ್ತಿದ್ದರು. ಆದರೆ ಆ ವಿಪತ್ತುಇಂದು ತಮ್ಮವರನ್ನೂ ನುಂಗಲು ಹೊಂಚು ಹಾಕುತ್ತಿರುವುದನ್ನು ತಿಳಿದ ಮೇಲೆ ಅವರೆಲ್ಲರೂ ಜಾಗ್ರತರಾಗಿ ಕೂಡಲೇ ಒಂದು ಗಟ್ಟಿ ನಿರ್ಧಾರಕ್ಕೂ ಬಂದುಬಿಟ್ಟರು.ಹಿರಿಯರ ಒಪ್ಪಿಗೆಯ ಮೇರೆಗೆ ಸಾಮಗರು ಅನಂತ್ರಾಯರ ಮನೆಯಲ್ಲಿಯೇಕುಳಿತು ಪರಿಣಾಮಕಾರಿಯಾದ ಅರ್ಜಿಯೊಂದನ್ನು ಬರೆದಿಟ್ಟು ಹಿಂದಿರುಗಿದರು. ಮರುದಿನ ಸಂಜೆ ಊರ ಪ್ರಮುಖ ಬ್ರಾಹ್ಮಣರನ್ನೆಲ್ಲಾ ಅನಂತ್ರಾಯರ ಮನೆಗೆ ಆಹ್ವಾನಿಸಲಾಯಿತು. ಬಂದವರಿಗೆ ಮೂವರು ಹಿರಿಯರೂ ವಿಷಯವನ್ನುಮನಮುಟ್ಟುವಂತೆ ವಿವರಿಸುತ್ತಅವರೆಲ್ಲರಆತ್ಮಗೌರವವನ್ನು ಮತ್ತು ಜಾತಿ, ಧರ್ಮದ ಸ್ವಂತಿಕೆಯನ್ನೂ ಬಡಿದೆಬ್ಬಿಸಿಬಿಟ್ಟರು.ಅದಕ್ಕೆ ಪ್ರತಿಫಲವಾಗಿ ಸಾಮಗರ ಪತ್ರಕ್ಕೆ ನೂರಾರು ಕನ್ನಡ, ಇಂಗ್ಲಿಷ್ ದಸ್ಕತ್ತುಗಳು ಮತ್ತು ವಿವಿಧಾಕಾರದ ಹೆಬ್ಬೆಟ್ಟಿನ ಸಾಕ್ಷಿಗಳೂರಪರಪನೇ ಒತ್ತಲ್ಪಟ್ಟವು ಹಾಗು ಅಲ್ಲಿಂದಲೇ ಸುಮಾರು ಇಪ್ಪತ್ತೈದು ಮಂದಿಯಿದ್ದ ಬ್ರಾಹ್ಮಣರ ತಂಡವೊಂದು ಶಿವಕಂಡಿಕೆಯ ಶಾಸಕ ವಿಷ್ಣುಪತಿಯವರ ಬಳಿಗೆ ಹೊರಟಿತು.
ಶಾಸಕ ವಿಷ್ಣುಪತಿಯವರು ವೈದಿಕ ಹಿರಿಯರನ್ನು ಗೌರವದಿಂದ ಆಹ್ವಾನಿಸಿ ಕುಶಲೋಪರಿ ವಿಚಾರಿಸಿದರು. ನಂತರ ಅವರಿಂದ ಅರ್ಜಿಯನ್ನು ಸ್ವೀಕರಿಸಿ ಕಣ್ಣಾಡಿಸತೊಡಗಿದರು. ಆಗ ಅವರಿಗೆ ಕೆಲವು ವರ್ಷಗಳ ಹಿಂದೆ ನಡೆದ ಘಟನೆಯೊಂದು ಮುನ್ನೆಲೆಗೆ ಬಂತು. ಅದು ವಿಷ್ಣುಪತಿಯವರ ರಾಜಕೀಯ ಪ್ರವೇಶಾರಂಭದ ಕಾಲ. ರಾಜಕೀಯದ ಕುರಿತು ಅವರಿಗೆ ವಿಶೇಷವಾದ ಒಲವಿದ್ದುದರಿಂದ ತಾವೂ ಒಮ್ಮೆ ಈ ನಾಡಿನ ಮಂತ್ರಿಗಳಾಗಿ ರಾಜ್ಯಬಾರ ಮಾಡಬೇಕು ಎಂಬ ಮಹದಾಸೆಯಿತ್ತು. ಅದಕ್ಕಾಗಿ ತಮ್ಮೆಲ್ಲ ಆಪ್ತೇಷ್ಟರ ಸಹಾಯ, ಸಹಕಾರಗಳನ್ನು ಪಡೆದು ಪಕ್ಷೇತರರಾಗಿ ಸ್ಪರ್ಧೆಗೆ ನಿಂತರು. ಆ ಕಾಲದಲ್ಲಿ ಬಿದ್ಕಲ್‍ಕಟ್ಟೆ ಮತ್ತು ಹಾಲಾಡಿಯಲ್ಲಿ ಎರಡು ಗೋಡಂಬಿ ಫ್ಯಾಕ್ಟರಿಗಳು ಮತ್ತು ಶಿವಕಂಡಿಕೆ ಪೇಟೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನಾಲ್ಕು ಬೀದಿಗಳಲ್ಲಿ ಐದಾರು ಬಟ್ಟೆಯ ಮಳಿಗೆಗಳುಹಾಗೂ ವರ್ಷವಿಡೀ ಇಳುವರಿ ನೀಡುವಂಥ ದೊಡ್ಡದೊಂದು ಎಸ್ಟೇಟು ಮಾಲಿಕರಾಗಿದ್ದ ಅವರು ಚುನಾವಣೆ ಗೆದ್ದರೆ ಇದರ ಹತ್ತುಪಟ್ಟು ಸಂಪಾದಿಸಬಹುದೆಂಬ ಭಂಡ ಧೈರ್ಯದಿಂದ ತಮ್ಮ ಆಸ್ತಿಯ ಬಹುಪಾಲು ಲಾಭವನ್ನು ಚುನಾವಣೆ ಗೆಲ್ಲಲೇ ಸುರಿದರು. ಆದರೆ ಅದೇನು ಮಾಡಿದರೂ ತಮ್ಮನ್ನು ಬೆಂಬತ್ತಿ ಬರುತ್ತಿದ್ದ ದುರಾದೃಷ್ಟಕ್ಕೆ ಬಲಿಯಾಗಿದ್ದ ಅವರು ಒಂದಲ್ಲ,ಎರಡಲ್ಲ ಮೂರು ಬಾರಿ ಹೀನಾಯ ಸೋಲು ಕಂಡರು.
ವಿಷ್ಣುಪತಿಯವರ ಆಪ್ತವರ್ಗ ಮತ್ತು ಪಕ್ಷದ ಕಾರ್ಯಕರ್ತರ ಒಕ್ಕೊರಲ ಅಭಿಪ್ರಾಯದ ಪ್ರಕಾರ, ತಮ್ಮ ನಾಯಕನ ಸೋಲಿಗೆ ಮುಖ್ಯ ಕಾರಣಗಂಗರಬೀಡಿನಲ್ಲಿ ಬಹುಸಂಖ್ಯೆಯಲ್ಲಿದ್ದ ಕಿರಿಸ್ತಾನವರ್ಗವೇ ಎಂಬುದಾಗಿತ್ತು. ಆದರೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಷ್ಣುಪತಿಯವರ ಕಾರ್ಯಕರ್ತರು ಗಂಗರಬೀಡಿನ ಕಿರಿಸ್ತಾನರ ಪ್ರತಿ ಮನೆಮನೆಗಳಿಗೂ ತೆರಳಿ ಹದಿನೆಂಟರಿಂದ ತೊಂಭತ್ತೈದರ ವಯಸ್ಸಿನ ಯಾವೊಬ್ಬನನ್ನೂ ಬಿಡದೆ, ತನು ಮನ ಧನಾದಿಗಳಿಂದ ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ನೆಚ್ಚಿನ ನಾಯಕ, ಬಡವರ ಬಂಧು, ಕೊಡುಗೈ ದಾನಿಯಾಗಿರುವ ವಿಷ್ಣುಪತಿಯವರನ್ನೇ ಗೆಲ್ಲಿಸಬೇಕೆಂದು ಇನ್ನಿಲ್ಲದಂತೆ ಓಲೈಸಿ ಒಪ್ಪಿಸಿದ್ದರು. ಆ ಜನರು ಕೂಡಾ ಅಷ್ಟೇ ಹೃದಯಸ್ಪರ್ಶಿಯಾಗಿ ಕಾರ್ಯಕರ್ತರಿಗೆ ಪ್ರತಿಸ್ಪಂದಿಸಿ ವಿಷ್ಣುಪತಿಯವರನ್ನೇ ಗೆಲ್ಲಿಸುವ ಪೂರ್ಣ ಭರವಸೆಯನ್ನೂ ನೀಡಿದ್ದರು. ಆದರೆ ಆ ನಂತರ ನಡೆದ ಕೆಲವು ಸಮೀಕ್ಷೆ ಮತ್ತು ಬಲ್ಲಮೂಲಗಳಿಂದ ತಿಳಿದ ಆಘಾತಕರ ಸಂಗತಿ ಏನೆಂದರೆ,ಕಿರಿಸ್ತಾನರ ಹತ್ತು ಓಟುಗಳು ಕೂಡಾ ವಿಷ್ಣುಪತಿಯವರಿಗೆ ಬೀಳಲಿಲ್ಲ ಎಂಬುದು! ಅಷ್ಟು ತಿಳಿದ ವಿಷ್ಣಪತಿಯವರು ಕುಸಿದು ಹೋದರು. ಈ ಜನರೆಲ್ಲ ಕೂಡಿ, ತಾವು ಆವರೆಗೆ ಕಷ್ಟಪಟ್ಟು ಸಂಪಾದಿಸಿದ ಆಸ್ತಿಯ ಅರ್ಧಪಾಲನ್ನು ನೀರಿನಂತೆ ಪೋಲು ಮಾಡಿಸಿಯೂ ತಮ್ಮನ್ನು ಗೆಲ್ಲಿಸದೆ ಮೋಸ ಮಾಡಿಬಿಟ್ಟರಲ್ಲಾ…? ಎಂಬ ಹತಾಶೆ ಅವರನ್ನು ಬಹಳಕಾಲ ಹಿಂಡಿಹಿಪ್ಪೆ ಮಾಡಿತು. ಆದರೆಅವರು ಅಷ್ಟು ಬೇಗನೇ ಧೃತಿಗೆಡುವ ಮನುಷ್ಯನಾಗಿರಲಿಲ್ಲ.ಆದ್ದರಿಂದ,ಅದೇನೇ ಆಗಲಿ. ನನ್ನ ಇನ್ನುಳಿದ ಮನೆ ಮಠವೆಲ್ಲವೂ ಮಾರಿ ಹೋದರೂ ಚಿಂತೆಯಿಲ್ಲ. ಒಮ್ಮೆಯಾದರೂ ತಾವು ಮಂತ್ರಿಯಾಗದೆ ಬಿಡುವುದಿಲ್ಲ! ಎಂಬ ಜಿದ್ದಿಗೆ ಬಿದ್ದವರು ನಾಲ್ಕನೆಯ ಬಾರಿಯೂ ನಿಂತೇಬಿಟ್ಟರು. ಆದರೆ ಈ ಸಲ ಅವರ ಛಲದ ಪ್ರತಿಫಲವೋ ಅಥವಾ ‘ತಮ್ಮನ್ನೇ ನಂಬಿರುವಂಥ ಮನುಷ್ಯನನ್ನು ಮತ್ತೆ ಮತ್ತೆ ಸೋಲಿಸುವುದು ತಮ್ಮ ಘನತೆಗೂ ಕುಂದು!’ ಎಂದು ಜನರೇ ಭಾವಿಸಿದರೋ ಗೊತ್ತಿಲ್ಲ. ಈ ಬಾರಿಯ ದೊಡ್ಡಮಟ್ಟದ ಗೆಲುವು ವಿಷ್ಣುಪತಿಯವರ ಪಾಲಿಗೊದಗಿತ್ತು!
ಹೀಗಾಗಿ ವಿಷ್ಣುಪತಿಯವರು ತಾವು ಅಂದು ಕೊಂಡಂತೆಯೇ ಅಧಿಕಾರಕ್ಕೆ ಬಂದ ಮೇಲೆ ತಾವು ಕಳೆದು ಕೊಂಡಿದ್ದ ಆಸ್ತಿಯ ಹತ್ತು ಪಟ್ಟನ್ನು ಮೂರೇ ವರ್ಷದಲ್ಲಿ ಮರಳಿ‘ಕಷ್ಟ’ ಪಟ್ಟು ಸಂಪಾದಿಸಿ ಕೊಂಡರು ಎಂಬ ಮಾತು ಬೇರೆ. ಆದರೂ ತಮಗೆ ಎರಡೆರಡು ಬಾರಿ ಹೀನಾಯ ಸೋಲಿನ ರುಚಿಯುಣಿಸುತ್ತ ತಮ್ಮ ಶ್ರೀಮಂತ ಕೋಟೆಯನ್ನು ನುಚ್ಚುನೂರು ಮಾಡಿದವರು ಗಂಗರಬೀಡಿನ ಕಿರಿಸ್ತಾನವರ್ಗವೇ ಎಂಬುದನ್ನು ಆಗಾಗ ನೆನೆಯುತ್ತಲೂ ಮತ್ತು ತಮ್ಮ ಕಾರ್ಯಕರ್ತರ ಬಾಯಿಯಿಂದಲೂ ಅದನ್ನು ಕೇಳುತ್ತಲೂ ಅಶಾಂತರಾಗುತ್ತಿದ್ದ ವಿಷ್ಣುಪತಿಯವರಿಗೆ ಅಂಥ ಕಿರಿಸ್ತಾನರ ಮೇಲೆ ಸಣ್ಣ ಅಸಹನೆಯೊಂದು ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಹೊಗೆಯಾಡುತ್ತಿತ್ತು. ಹಾಗಾಗಿ ಬರಬರುತ್ತ ಅವರು ಯಾವ ರೀತಿಯಿಂದಲಾದರೂ ಅದರ ಪ್ರತೀಕಾರವನ್ನು ತೀರಿಸಿಕೊಳ್ಳುವ ಹುನ್ನಾರದಲ್ಲಿದ್ದರು. ಅದಕ್ಕೀಗ ವಿಪ್ರರು ಬಂದು ಸಲ್ಲಿಸಿದ ಅರ್ಜಿಯೊಂದೇ ಬಲವಾದ ಅಸ್ತ್ರವಾಗಿ ಬಿಟ್ಟಿತು. ಶಾಸಕರೊಳಗಿನ ದ್ವೇಷಾಗ್ನಿಯು ಭಗ್ಗನೇ ಹೊತ್ತಿಕೊಂಡು ಮುಂದಿನ ಗಳಿಗೆಯಲ್ಲಿ ನೇರವಾಗಿ ಅಬಕಾರಿ ಇಲಾಖೆಗೆ ಸೋಕಿತು.ಪರಿಣಾಮ, ಮರುದಿನವೇ ಹತ್ತಿಪ್ಪತ್ತು ಪೊಲೀಸರೊಂದಿಗೆ ಕೂಡಿದ ಮೂರು, ನಾಲ್ಕು ಅಬಕಾರಿ ಜೀಪುಗಳು ದಟ್ಟ ಧೂಳೆಬ್ಬಿಸುತ್ತ ಹೊರಟು ಗಂಗರಬೀಡಿನ ಮೇಲೆ ದಾಳಿಮಾಡಿದುವು. ಸಣ್ಣ ಅನುಮಾನ ಮತ್ತು ಖಚಿತ ಮಾಹಿತಿಯ ಮೇರೆಗೆ ಅನೇಕ ಕಳ್ಳಭಟ್ಟಿ ಬೇಯಿಸುವ ಗುಡಿಸಲು ಹಾಗೂ ಮನೆಗಳನ್ನು ಮಿಂಚಿನವೇಗದಲ್ಲಿ ಮುತ್ತಿಗೆ ಹಾಕಿದುವು. ರಾಬರ್ಟರ ಮನೆಗೆ, ಮಥಾಯಸನ ಮನೆಗೆ, ಪ್ರೆಸಿಂತಾಬಾಯಿಯ ಶೆಡ್ಡಿಗೆ, ಮೋಂತು ನಾಯ್ಕನ ಹಿತ್ತಲಿಗೆ,ತೇಂಕು ಪರ್ಬುವಿನ ಗುಡಿಸಲಿಗೆ, ಸುರೇಶ ಮಡಿವಾಳ ಮತ್ತು ಆನಂದ ಪೂಜಾರಿಯ ಮನೆಯುಪ್ಪರಿಗೆಗೆ ಎಂದೆನ್ನುತ್ತ ಏಕಕಾಲದಲ್ಲಿ ಆಕ್ರಮಣ ಮಾಡಿದ ಅಬಕಾರಿ ಅಧಿಕಾರಿಗಳುನೂರಾರು ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡರು. ಕೈಗೆ ಸಿಕ್ಕಿದವರನ್ನು ಒದ್ದು ಹೆಡೆಮುರಿಕಟ್ಟಿ, ಆಗಿನ ಕಾಲದ ಮುನಿಸಿಪಾಲಿಟಿಯವರು ಬೀದಿ ನಾಯಿಗಳನ್ನು ಉರುಳು ಬೀಸಿ ಹಿಡಿದು ಎಳೆದೊಯ್ಯುವಂತೆಯೇ ಅಟ್ಟಾಡಿಸಿ ಹಿಡಿದು ಕೊಂಡೊಯ್ದರು.
ಆದರಿತ್ತ,ಇಂದು ನಾಳೆಯಲ್ಲಿ ಯಾವ ಕ್ಷಣದಲ್ಲಾದರೂ ತಮ್ಮ ಮೇಲೆ ಅಬಕಾರಿ ದಾಳಿಯಾಗಬಹುದು ಎಂಬ ಸುದ್ದಿಯು ಹಿಂದಿನ ದಿನ ರಾತ್ರಿಯೇ ತಾಮಸನ ಗೆಳೆಯ, ಅಬಕಾರಿ ಇಲಾಖೆಯಲ್ಲಿ ಖಾಸಗಿ ರೈಡರ್ ಆಗಿದ್ದ ಉಮೇಶನಿಂದ ಆಂಥೋನಿಗೆ ತಿಳಿದಾಗಿತ್ತು. ಆದರೆ ಅವನು ಆ ವಿಚಾರವನ್ನು ಬೇರೆ ಯಾರಿಗೂ ತಿಳಿಸದಂತೆಯೂ ಮತ್ತು ತಿಳಿಸಿದರೆ ತನ್ನ ಕೆಲಸಕ್ಕೇ ಕುತ್ತು ಬಂದೀತೆಂದೂ ಕಟ್ಟಪ್ಪಣೆ ಮಾಡಿದ್ದನಾದ್ದರಿಂದ ತಮ್ಮ ಜಾತಿ ಬಾಂಧವರ ಮಾಲನ್ನು ರಕ್ಷಿಸಲಾಗದ ಕೊರಗಿನ ನಡುವೆಯೂ ಆಂಥೋನಿಯು ತನ್ನ ಕಚ್ಚಾ ಮತ್ತು ಪಕ್ಕಾ ಮಾಲುಗಳೆರಡನ್ನೂ ಅಡಗಬೇಕಾದ ತಾಣದಲ್ಲಿ ಭದ್ರವಾಗಿ ಅಡಗಿಸಿಯಾಗಿತ್ತು. ಹಾಗಾಗಿ ಆವತ್ತು ಅಬಕಾರಿ ಅಧಿಕಾರಿಗಳು ಆಂಥೋನಿಯ ಮನೆಗೆ ದಾಳಿಯಿಡುವ ಹೊತ್ತಲ್ಲಿ ಗ್ರೆಟ್ಟಾ ಮತ್ತು ಜೆಸಿಂತಾಬಾಯಿ ಅಂಗಳದಲ್ಲಿ ಕುಳಿತು ತಲೆಯ ಹೇನು ಹೆಕ್ಕುವುದರಲ್ಲಿ ಮಗ್ನರಾಗಿದ್ದರೆ ರಾರ್ಬಟರು ಕಾಯಿಲೆ ಹಿಡಿದು ಉಪ್ಪರಿಗೆಯ ಕೋಣೆಯಲ್ಲಿ ಮಲಗಿದ್ದರು.ರುಮ್ಮನೆ ಧಾವಿಸಿದ ಅಧಿಕಾರಿಗಳು ಮನೆಯ ಒಳಹೊರಗನ್ನುಯದ್ವಾತದ್ವ ಜಾಲಾಡಿಸತೊಡಗಿದರು.ಅಡುಗೆ ಕೋಣೆಯ ಪಾತ್ರೆಪರಡಿ ಮತ್ತು ಕಪಾಟಿನೊಳಗಿದ್ದ ಬಟ್ಟೆಬರೆಗಳನ್ನೂ ಹಾಗೂಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಎಳೆದೆಳೆದು ಕಿತ್ತು ಎಸೆಯುತ್ತ ಸಾಗಿದರು. ಆದರೂ ಏನೂ ಸಿಗದಿದ್ದಾಗ ಹಠ ಬಿಡದೆ ಹಿಂದಿನ ಹಿತ್ತಲಿಗಿಳಿದು ಹುಡುಕ ತೊಡಗಿದರು. ಅಲ್ಲಿಯೂ ಅನುಮಾನ ಬಂದೆಡೆಗಳಲ್ಲೆಲ್ಲ ಕಬ್ಬಿಣದ ಸುರಿಯಗಳಿಂದ ಚುಚ್ಚಿ ತಿವಿದು ಹೊಂಡ ತೋಡಿಯೂ ಶೋಧಿಸಿದರು. ಆದರೂ ರಾಬರ್ಟರ ಮನೆಯಿಂದ ಅವರಿಗೆ ಒಂದೇ ಒಂದು ಕುಡ್ತೆ ಕಂಟ್ರಿ ಸಾರಾಯಿಯೂ ಸಿಗಲಿಲ್ಲ! ಆದ್ದರಿಂದ ಅವರು ನಿರಾಶೆಯಿಂದ ಹಿಂದಿರುಗಿದರು.
(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter