ವಿವಶ (ಧಾರಾವಾಹಿ ಭಾಗ-9)

ಆಂಥೋನಿ ಸಹೋದರರು ಈಗ ದುಬಾರಿ ಬೆಲೆತೆತ್ತು ತಾಜಾ ಹಣ್ಣು ಹಂಪಲುಗಳನ್ನು ಕೊಂಡು ಅಪ್ಪ, ಅಮ್ಮನಿಂದ ಬಳುವಳಿಯಾಗಿ ಬಂದಿದ್ದ ಉತ್ತಮ ಮಟ್ಟದ ಸಾರಾಯಿ ತಯಾರಿಸುವುದನ್ನು ಒಮ್ಮೆ ಇದ್ದಕ್ಕಿದ್ದ ಹಾಗೆ ನಿಲ್ಲಿಸಿಬಿಟ್ಟರು. ಬದಲಿಗೆ ಅದಕ್ಕಿಂತಲೂ ಅಧಿಕ ನಶೆ ಮತ್ತು ಹೆಚ್ಚು ಉನ್ಮಾದ ಕೊಡುವ ಹಾಗೂ ದುಪ್ಪಟ್ಟು ಲಾಭ ತರುವಂಥ ಮಾಲು ತಯಾರಿಸಲು ಹಂಚಿಕೆ ಹೂಡಿದರು. ಅದಕ್ಕಾಗಿ ಅಂಬರಬೆಟ್ಟು ಮತ್ತು ಶಿವಕಂಡಿಕೆಯ ಪ್ರತಿ ವಾರದ ಸಂತೆಗಳಿಗೆ ಹೋಗಿ ಅಲ್ಲೆಲ್ಲ ಜಾಲಾಡಿಸಿ ಕೊಳೆತು ನಾರುವ ಮತ್ತು ಅಗ್ಗಕ್ಕೆ ದೊರೆಯುವ ಹಣ್ಣುಹಂಪಲುಗಳನ್ನು ಕೊಂಡರು. ಹಾಳು ಬೆಲ್ಲ, ವಿಷಕಾರಕ ಅಮೋನಿಯಮ್ ಸಲ್ಫೇಟ್, ಯೂರಿಯಾ ಮತ್ತು ಬ್ಯಾಟರಿ ಶೆಲ್ಲಿನ ಒಳಗಿನ ಕಪ್ಪು ಪುಡಿಯನ್ನೂ ಕೋಳಿ ಹೇಲನ್ನೂ ಯಥೇಚ್ಛವಾಗಿ ಬಳಸಿ, ಕೆಲವು ದಿನಗಳ ಕಾಲ ಅದನ್ನು ಕೊಳೆಯಿಸಿ ಭಟ್ಟಿ ಇಳಿಸುವ ಹೊಸ ತಂತ್ರವೊಂದನ್ನು ಶಿವಕಂಡಿಕೆಯ ಹಳೆಯ ಸಾರಾಯಿ ತಯಾರಕನೊಬ್ಬನಿಂದ ಮೊದಲೇ ಕಲಿತುಕೊಂಡು ಬಂದಿದ್ದವರು ಕೂಡಲೇ ಅದರ ಪ್ರಯೋಗಕ್ಕಿಳಿದು ಯಶಸ್ವಿಯೂ ಆಗಿಬಿಟ್ಟರು. ಈ ಸಾರಾಯಿಯನ್ನು ನಾಲ್ಕೈದು ಗುಟುಕು ಗಂಟಲಿಗೇರಿಸಿದ ಗಳಿಗೆಯೊಳಗೆ ಭರ್ರನೇ ಮತ್ತೇರುವುದನ್ನು ಅನುಭವಿಸಿದ ಊರ ಬಡ ಜನರು ಆಮೇಲೆ ಹೆಚ್ಚುಹೆಚ್ಚಾಗಿ ಆಂಥೋನಿಯ ಮನೆಯತ್ತ ಆಕರ್ಷಿತರಾದರು. ಹೀಗಾಗಿ ಸಂಜೆ ಸರಿದು ಕತ್ತಲೇರುವ ಹೊತ್ತಿಗೆ ರಾರ್ಬಟರ ಮನೆಯ ಹಿತ್ತಲನ್ನು ದೊಂದಿ ಬೆಳಕಿನ  ವ್ಯವಸ್ಥೆಯು ಮಂದವಾಗಿ ಬೆಳಗಿಸುತ್ತಿತ್ತು. ಅದನ್ನು ದೂರದಿಂದ ನೋಡಿದವರಿಗೆ ಅಲ್ಲೊಂದು ವ್ಯವಸ್ಥಿತವಾದ,‘ಬಾರ್ ಅಂಡ್ ರೆಸ್ಟೋರೆಂಟ್’ ತೆರದಿರುವಂತೆಯೇ ಭಾಸವಾಗುತ್ತಿತ್ತು. ಪರಿಣಾಮ, ವ್ಯಾಪಾರವೂ ಭರದಿಂದ ಸಾಗತೊಡಗಿತು.

ಆದರೆ ಅಣ್ಣತಮ್ಮಂದಿರ ಈ ವ್ಯವಹಾರವು ಬಹಳ ಬೇಗನೇ ಅವರ ಮನೆತನದ ಮಾನ ಮರ್ಯಾದೆಯನ್ನು ಗಂಗರ ಬೀಡಿನ ಹಾದಿಬೀದಿಯಲ್ಲಿ ಹರಾಜು ಹಾಕುವ ಮಟ್ಟಕ್ಕೆ ತಲುಪಿತು. ಇದರಿಂದ ರಾರ್ಬಟ್ ದಂಪತಿಗಳುತುಂಬಾ ನೊಂದುಕೊಂಡರು. ಮಕ್ಕಳನ್ನು ತಾವು ಬಾಲ್ಯದಲ್ಲೇ ತಿದ್ದಿತೀಡಿ ಸರಿದಾರಿಗೆ ತರಬೇಕಿತ್ತು. ತಪ್ಪು ಮಾಡಿಬಿಟ್ಟೆವು! ಎಂದು ಪಶ್ಚಾತ್ತಾಪ ಪಡುವ ಹಂತಕ್ಕೆತಲುಪಿದರು. ಆದರೆ ಈಗಲೂ ಕಾಲ ಮಿಂಚಿಲ್ಲ. ಇನ್ನಾದರೂ ಅವರನ್ನು ಸರಿಪಡಿಸಲೇಬೇಕು! ಎಂದೂ ಯೋಚಿಸಿದರು. ಹಾಗಾಗಿ ಆವತ್ತೊಮ್ಮೆ ಮೂವರನ್ನೂ ಪ್ರೀತಿಯಿಂದ ಕರೆದು ಕುಳ್ಳಿರಿಸಿಕೊಂಡರು. ಆದರೆ ಹೆತ್ತವರ ಮನದಿಂಗಿತವನ್ನು ಸೂಕ್ಷ್ಮವಾಗಿ ಅರಿತಿದ್ದ ಮಕ್ಕಳು ಅದಕ್ಕೆ ತಯಾರಾಗಿಯೇ ಬಂದಿದ್ದರು. ರಾಬರ್ಟರು ಮಾತಾಡಲಾರಂಭಿಸಿ, ‘ನೋಡಮ್ಮಾ ಗ್ರೇಟ್ಟಾ ನೀನು ಹಿರಿಯವಳು. ಈ ಮನೆಯನ್ನೂ,ಮನೆತನದ ಗೌರವವನ್ನೂ ಕಾಪಾಡಿಕೊಂಡು ಹೋಗಬೇಕಾದುದು ನಿನ್ನ ಜವಾಬ್ದಾರಿ. ಅದಕ್ಕೆ ತಕ್ಕಂತೆ ನಿನ್ನ ಒಡಹುಟ್ಟಿದವರನ್ನೂ ನೀನು ಮಕ್ಕಳಂತೆ ನೋಡಿಕೊಳ್ಳುತ್ತ ಬಂದಿದ್ದಿ, ಅದು ಸರಿ.ಆದರೆ ಅವರು ಈಗೀಗ ಹಾಳು ದಾರಿ ಹಿಡಿದಿರುವುದನ್ನೂ ನೋಡಿಕೊಂಡು ಸುಮ್ಮನಿರುವುದು ಸರಿಯಾ ಹೇಳು? ಈ ಸಂಸಾರಕ್ಕಾಗಿ ನಾನು ದುಡಿದು ಸಂಪಾದಿಸಿರುವುದೇ ಬೇಕಾದಷ್ಟಿರುವಾಗ ನೀವದನ್ನು ಉತ್ತಮ ರೀತಿಯಲ್ಲಿ  ವೃದ್ಧಿಸಿಕೊಂಡು ಹೋಗುತ್ತ ಊರಲ್ಲಿ ಒಳ್ಳೆಯ ಹೆಸರು ಮಾಡುವುದನ್ನು ಬಿಟ್ಟು ಹೀಗೇಕೆ ಅಡ್ಡ ದಾರಿ ಹಿಡಿದಿರುವಿರಿ ಅಂತ ನಮಗಿಬ್ಬರಿಗೂ ಅರ್ಥವಾಗುತ್ತಿಲ್ಲ ಮಗಳೇ! ನಮ್ಮ ಹಿರಿಯರೂ ನಾವು ಈ ಊರಿನವರಲ್ಲಿ ಗಳಿಸಿದ ಪ್ರೀತಿ, ಗೌರವವನ್ನು ನೀವೂ ಉಳಿಸಿಕೊಳ್ಳುತ್ತ ನಾಲ್ಕು ಜನಕ್ಕೆ ಒಳ್ಳೆಯದನ್ನು ಮಾಡುತ್ತ ಬದುಕಿದರೆ ಮಾತ್ರ ಸ್ವರ್ಗದ ಆ ನಮ್ಮ ತಂದೆ ಏಸುವಿನ ಪ್ರೀತಿ, ಕರುಣೆಗೆ ಪಾತ್ರರಾಗಬಹುದು ಮಕ್ಕಳೇ! ಹಾಗಾಗಿ ಇನ್ನು ಮುಂದಕ್ಕೆನಿಮ್ಮ ಜೀವನವನ್ನು ಅವನಿಗರ್ಪಿಸುವ ಹೂವುಗಳನ್ನಾಗಿ ರೂಪಿಸಿಕೊಳ್ಳುತ್ತೀರೋ  ಅಥವಾ ಯಾರೂ ಕಣ್ಣೆತ್ತಿ ನೋಡದೆ, ಅಸಹ್ಯಪಡುವಂತೆ ಬಾಳುತ್ತೀರೋ ಎಂಬುದನ್ನು ಮೂವರೂ ತಾಳ್ಮೆಯಿಂದ ಯೋಚಿಸಿ ನೋಡಿ!’ ಎಂದು ಮೃದುವಾಗಿ ಬುದ್ಧಿವಾದ ಹೇಳಿದರು.

ಆದರೆ ಆಂಥೋನಿಯು  ಅಪ್ಪನ ಮಾತನ್ನು ತೀರಾ ಅಸಹನೆಯಿಂದಲೇ ಕೇಳಿಸಿಕೊಳ್ಳುತ್ತಿದ್ದವನು, ‘ಇಲ್ನೋಡಿ ಅಪ್ಪಾ, ನಾವೇನೂ ದರೋಡೆ, ವಂಚನೆ ಮಾಡಿ ಹಣ ಗಳಿಸಲು ಹೊರಟವರಲ್ಲ. ಸಾರಾಯಿ ಬೇಯಿಸುವ ಕಸುಬನ್ನು ನೀವೇ ನಮಗೆ ಕಲಿಸಿಕೊಟ್ಟಿರುವುದು ಎನ್ನುವುದೂ ನಿಮಗೆ ನೆನಪಿರಲಿ.ಆದರೆ ಅದನ್ನು ಸ್ವಲ್ಪ ದೊಡ್ಡಮಟ್ಟದಲ್ಲಿ ಬೆಳೆಸುತ್ತ ಶ್ರೀಮಂತರಾಗಬೇಕೆನ್ನುವುದರಲ್ಲಿ ತಪ್ಪೇನುಂಟು? ಹೋಗಲಿ, ನಿಮ್ಮ ದಾರಿಯಲ್ಲೇ ಹೋಗಿ ಬೇಸಾಯ ಮಾಡುವ ಅಂದುಕೊಂಡರೆ, ಇಷ್ಟು ದೊಡ್ಡ ಹೊಲಗದ್ದೆಗಳಲ್ಲಿ ದುಡಿಯಲು ಅಷ್ಟೊಂದು ಆಳುಕಾಳುಗಳಾದರೂ ಈಗೆಲ್ಲಿ ಸಿಗುತ್ತಾರೆ? ಅಂಥ ತಾಪತ್ರಯಗಳೆಲ್ಲ ಬೇಡವೆಂದೇ ನಾವು ಈ ನಿರ್ಧಾರ ಮಾಡಿರುವುದು. ಇನ್ನು ನಿಮಗೂ ವಯಸ್ಸಾಯಿತಲ್ಲವಾ. ಹೀಗಾಗಿ ಅಮ್ಮನೂ ನೀವೂ ನಮ್ಮ ವ್ಯವಹಾರಗಳ ಬಗ್ಗೆತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ನಿಮ್ಮ ಪಾಡಿಗೆ ನೀವು ಆರಾಮವಾಗಿದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಮಗೆಚೆನ್ನಾಗಿ ಗೊತ್ತಿದೆ!’ಎಂದು ಖಾರವಾಗಿ ನುಡಿದ. ಅದಕ್ಕೆ ಗ್ರೇಟ್ಟಾಳೂ,‘ಹೌದೌದು, ಇನ್ನು ನಿಮಗೆ ಈ ಎಲ್ಲ ಉಸಾಬರಿಗಳು  ಯಾಕೆ ಬೇಕಪ್ಪಾ? ಕಾಲ ಬದಲಾಗಿದೆ! ನಿಮ್ಮಂತೆಯೇ ಹಗಲು ರಾತ್ರಿ ಮೂಕಪ್ರಾಣಿಗಳಂತೆ ದುಡಿದು ಸಾಯಲಿಕ್ಕೆ ನಮಗಿಷ್ಟವಿಲ್ಲ.ನಮಗೆ ತಿಳಿದಿರುವ ವಿದ್ಯೆಯನ್ನೇ ಬಳಸಿಕೊಂಡು ಇನ್ನಷ್ಟು ಸಂಪಾದಿಸುವ ದಾರಿಯನ್ನು ನಾವೇ ಕಂಡುಕೊಂಡಿದ್ದೇವೆ. ನೀವು ಸುಮ್ಮನೆ ನಮ್ಮ ಜೀವನದ ಬಗ್ಗೆ ಚಿಂತಿಸುವುದನ್ನು ಬಿಟ್ಟುಬಿಡಿ ಅಷ್ಟೇ!’ ಎಂದು ಅಪ್ಪ, ಅಮ್ಮನನ್ನು ಗದರಿಸಿ ಎದ್ದು ಹೋದಾಗ ಅಣ್ಣತಮ್ಮಂದಿರೂ ಅವಳನ್ನು ಹಿಂಬಾಲಿಸಿದರು.ಆಗ ರಾರ್ಬಟ್ ದಂಪತಿಗೆ ಮಕ್ಕಳ ದೃಷ್ಟಿಯಲ್ಲಿ ತಾವಾಗಲೇ ಮೂಲೆ ಗುಂಪಾಗಿರುವುದು ಸ್ಪಷ್ಟವಾಯಿತು. ಅಂದಿನಿಂದ ಅವರು ಕೂಡಾ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ನೀರಸವಾ ಗಿಬದುಕ ತೊಡಗಿದರು.

ಆದರಿತ್ತ ರಾರ್ಬಟರ ಕೊನೆಯ ಮಗ ಹಿಲಾರಿಯು ಅಕ್ಕ, ಅಣ್ಣಂದಿರ ನೀತಿಗೆಟ್ಟ ಬದುಕಿನಿಂದ ಮೊದಲೇ ರೋಸಿದ್ದವನಿಗೆ ಅವರು ಹಿರಿಯರ ಮಾತುಗಳನ್ನು ಅರ್ಥೈಸಿಕೊಳ್ಳುವ ಮನಸ್ಥಿತಿಯನ್ನು ಯಾವತ್ತೋ ಕಳೆದು ಕೊಂಡಿದ್ದುದೂ ಅರಿವಿಗೆ ಬಂದಿತ್ತು. ಹಾಗಾಗಿ ತಂದೆ, ತಾಯಿಗೆ ತಾನೇ ಆ ಕುರಿತು ಆಗಾಗ ಸಮಾಧಾನ ಹೇಳುತ್ತ ಅಕ್ಕ ಅಣ್ಣಂದಿರ ಬಗ್ಗೆ ಅವನೂ ಉದಾಸೀನ ತಳೆದಿದ್ದ. ಆದರೂ ಅವನಿಗೆ ತನ್ನ ಪ್ರೀತಿಯ ಹಿರಿಯರ ನೆನಪುಗಳನ್ನೂ ಹಾಗೂ ತಾನು ಹುಟ್ಟಿ ಬೆಳೆದ ಸುಂದರ ಸವಿನೆನಪುಗಳನ್ನು ಸಾರುತ್ತಿದ್ದಂಥ ವಿಶಾಲವಾದ ಮನೆಯು ಈಗ ಸಾರಾಯಿ ‘ಅಡ್ಡಾ’ವಾದುದರ ನೋವು ತೀವ್ರವಾಗಿ ಕಾಡುತ್ತಿತ್ತು. ಆದ್ದರಿಂದ ಅವನು ಮುಂದೆ ತನ್ನ ಕಾಲೇಜು ವಿದ್ಯಾಭ್ಯಾಸ ಮುಗಿಯುತ್ತಲೇ ಅನಂತೂರಿನ ರಸಗೊಬ್ಬರದ ಕಾರ್ಖಾನೆಯೊಂದಕ್ಕೆ ನೌಕರಿಗೆ ಅರ್ಜಿ ಸಲ್ಲಿಸಿದವನು ಆಮೇಲೆ ತನ್ನ ತಾಯಿಯ ಅಣ್ಣನ ಅಂದರೆ, ಸೋದರ ಮಾವನ ಮನೆಯಲ್ಲೇ ಹೆಚ್ಚಾಗಿ ಇರತೊಡಗಿದ. ಹಿಲಾರಿಯ ಅತ್ತೆ ಮಾವಂದಿರೂ ಸುಸಂಸ್ಕøತ  ಮನುಷ್ಯರು. ಆದರೆ ರಾರ್ಬಟರ ಮನೆಯಲ್ಲಿ ಅವರ ಮಕ್ಕಳ ಹಾಳು ರಾಜ್ಯಭಾರ ಆರಂಭವಾದುದರಿಂದಲೂ ಮತ್ತು ಊರಲ್ಲಿ ಆ ಮನೆತನದ ಹೆಸರು ಕೆಟ್ಟಿದ್ದರಿಂದಲೂ ಅವರು ಕೂಡಾ ಆ ಮನೆಯ ಸಂಬಂಧವನ್ನು ಕಡಿದುಕೊಂಡಿದ್ದರು. ಆದರೂ ಅವರು ಹಿಲಾರಿಯ ಮೇಲೆ ಅಪಾರ ಪ್ರೀತಿ, ವಾತ್ಸಲ್ಯವನ್ನು ತೋರುತ್ತಿದ್ದರು. ಅದುವೇಹಿಲಾರಿಯ ನೋವಿಗೂ ಸಾಂತ್ವನವಾಗುತ್ತ ಅವನನ್ನು ಅವರೊಂದಿಗೆ ಬಾಳುವಂತೆ ಮಾಡಿತ್ತಲ್ಲದೇ ಅತ್ತೆಯ ಮಗಳು ನೀತಾಳನ್ನೂ ಅವನುಮನಸಾರೆ ಪ್ರೀತಿಸುತ್ತಿದ್ದ.ನೀತಾ ಬೆಳ್ಳಗಿನ, ಸುಂದರವಾದ ಹುಡುಗಿ ಮತ್ತುವಿದ್ಯಾವಂತೆ.ಅವಳು ಕೂಡಾಬಾಲ್ಯದಿಂದಲೇ ಹಿಲಾರಿಯನ್ನು ಇಷ್ಟಪಟ್ಟಿದ್ದಳು.ಕಾರಣ ಹಿಲಾರಿಯ ಸದ್ಗುಣ ಮತ್ತವನ ಶಿಸ್ತುಬದ್ಧ ಜೀವನ. ಅದುಅವಳಿಗೂ,ಅವಳಹೆತ್ತವರಿಗೂ ಬಹಳ ಮೆಚ್ಚುಗೆಯಾಗಿತ್ತು. ಹೀಗಾಗಿಅವರು ತಮ್ಮ ಮಗಳಪ್ರೇಮಸಂಬಂಧಕ್ಕೆಪರೋಕ್ಷವಾಗಿಸಮ್ಮತಿಸಿದ್ದರು. ಆದರೆ ತಾವು ಮುದ್ದಿನ ಗಿಣಿಯಂತೆ ಸಾಕಿ ಬೆಳೆಸಿದ ಏಕೈಕ ಪುತ್ರಿಯನ್ನು ಆ ಕಿರಾತಕರ ಹಾಳು ಕೊಂಪೆಗೆ ತಳ್ಳಲು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ.

ಹಿಲಾರಿಯು ನೀತಾಳನ್ನು ತುಂಬಾ ಬಯಸುತ್ತಿದ್ದ. ಎಷ್ಟೆಂದರೆ ಅವಳ ಜೊತೆಯಿರದ ಒಂದೊಂದು ಕ್ಷಣವೂ ಅವನಿಗೆ ಯುಗದಂತೆ ಭಾಸವಾಗುತ್ತಿತ್ತು.ಸದಾ ಅವಳಿಗಂಟಿಕೊಂಡೇ ಓಡಾಡುತ್ತಿದ್ದ. ಅವಳೂ ಅಷ್ಟೇ, ಅವನು ತನ್ನ ಜೀವದ ಗೆಳೆಯನೆಂಬಷ್ಟು ಆಸೆ, ಪ್ರೀತಿ ತೋರಿಸುತ್ತಿದ್ದಳು.ಹಾಗಾಗಿ ಒಂದು ಹೆಣ್ಣು ತನ್ನ ಪ್ರೀತಿಯ ಗಂಡನಿಗೆ ಮಾಡುವಂತಹ ಸೇವೆಗಳೆಲ್ಲವನ್ನೂ ತಾನೂ ಚಾಚೂತಪ್ಪದೆ ಮಾಡುತ್ತಾ ಅವನ ಮೇಲೆ ಮಗುವಿನಂಥ ಅಕ್ಕರೆಯನ್ನು ತೋರುತ್ತಿದ್ದಳು.ಈ ಯುವ ಪ್ರೇಮಿಗಳು ಸಮಯ ಸಿಕ್ಕಾಗಲೆಲ್ಲಾತಮ್ಮ ಮಧುರ ಭಾವನೆಗಳಿಗೆ ರೆಕ್ಕೆಕಟ್ಟಿಕೊಂಡು ಸಮೀಪದ ಕಾಡು ಗುಡ್ಡ ಮತ್ತು ತಮ್ಮ ಸುತ್ತಲಿನ ತೋಟಗಳಲ್ಲಿ ವಿಹರಿಸುತ್ತ ಮೈಮರೆಯುತ್ತಿದ್ದರು. ಆದರೆ ಹಿಲಾರಿಯಾಗಲೀ, ನೀತಾಳಾಗಲೀ ಮದುವೆಯ ಮುಂಚೆ ತಮ್ಮ ವಯೋ ಸಹಜ ಕಾಮನೆಗಳಿಗೆ ಬಲಿಯಾದವರಲ್ಲ. ಹಿಲಾರಿ, ನೀತಾಳನ್ನು ತನ್ನಸರ್ವಸ್ವವೇ ಎಂದುನಂಬಿದ್ದ. ಆದ್ದರಿಂದ ಆದಷ್ಟು ಬೇಗನೇ ಆಕೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಕನಸನ್ನೂ ಕಾಣುತ್ತಿದ್ದ.

ಇದೇ ಸಮಯದಲ್ಲಿ ಹಿಲಾರಿಗೆ ಅನಂತೂರಿನ ರಸಗೊಬ್ಬರದ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬಂತು. ಕೂಡಲೇ ಹೋಗಿ ಪಾಲ್ಗೊಂಡು ಕೆಲಸಕ್ಕೂ ಆಯ್ಕೆಯಾದ.ಕಂಪನಿಯು ಅವನನ್ನುಒಂದು ವಿಭಾಗದ ಮೇಲ್ವಿಚಾರಕನನ್ನಾಗಿ ನೇಮಿಸಿಕೊಂಡು ಉಳಿದು ಕೊಳ್ಳಲು ವಸತಿ ಸೌಲಭ್ಯವನ್ನೂ ಕಲ್ಪಿಸಿತು. ಇದರಿಂದ ಹಿಲಾರಿಯ ಆತ್ಮವಿಶ್ವಾಸ  ಹೆಚ್ಚಿತು. ಕೆಲಸಕ್ಕೆ ಹಾಜರಾಗಿ ತಿಂಗಳ ಕಾಲ ಹುರುಪಿನಿಂದ ದುಡಿದು ಊರಿಗೆ ಮರಳಿದ. ಅತ್ತೆ ಮಾವಂದಿರೊಡನೆ ಮದುವೆಯ ವಿಚಾರವನ್ನು ಪ್ರಾಸ್ತಾಪಿಸಿದ. ಅವರಿಗೂ ಹಿಲಾರಿಯು ಅವನ ಅಣ್ಣಂದಿರಂತಾಗದೇ ತನ್ನದೇ ಸ್ವತಂತ್ರ ಬದುಕನ್ನು ಆಯ್ದುಕೊಳ್ಳುವ ಉತ್ಸಾಹವನ್ನು ತೋರಿದ್ದು ಹೆಮ್ಮೆಯೆನಿಸಿತು. ಅಲ್ಲದೇ ಮಗಳ ಮದುವೆಯ ವಿಚಾರವನ್ನುಅವರೂ ಯೋಚಿಸಿದ್ದುದರಿಂದ ಅವನ ಮಾತಿಗೆ ಒಪ್ಪಿಗೆ ನೀಡಿದರು. ಆದರೆ ಮಗಳೊಂದಿಗೆ ತಮ್ಮ ಮನೆಯಲ್ಲೇ ಸಂಸಾರ ಹೂಡುವ ನಿರ್ಬಂಧವನ್ನೂ ಹೇರಿದರು.ಅದು ಹಿಲಾರಿಗೂಇಷ್ಟದ ವಿಷಯವೇ ಆಗಿತ್ತು.ಹಾಗಾಗಿ ಮದುವೆಯ ತಯಾರಿಭರದಿಂದ ಸಾಗಿತು. ಹಿಲಾರಿಯು ದುಬೈ ಮತ್ತು ಮುಂಬೈಯಲ್ಲಿದ್ದ ಅಕ್ಕ, ಭಾವದಿಂದಿರನ್ನು ಕರೆಯಿಸಿಕೊಂಡ. ಅಣ್ಣ, ಅಕ್ಕಂದಿರ ವ್ಯವಹಾರಗಳಿಂದಾಗಿ ಅವರಿಗೂ ಮನೆಯ ಪರಿಸ್ಥಿತಿಯು ಬೀದಿಗೆ ಬಿದ್ದುದು ತುಂಬಾ ನೋವು ನೀಡಿತ್ತು. ಇದರಿಂದಅವರು ಕೂಡಾ ಮನೆಗೆ ಹೋಗಲಿಚ್ಛಿಸದೆ ಸೋದರ ಮಾವನ ಮನೆಯಲ್ಲೇ ಬಂದು ಉಳಿದುಕೊಂಡರು.

   ಇತ್ತ ಹಿಂದಿನಿಂದಲೂ ಅತ್ತೆ ಮಾವಂದಿರನ್ನು ಕಂಡರಾಗದ ಮತ್ತು ಸಂಬಂಧದೊಳಗೆ ನೆಂಟಸ್ತಿಕೆ ಬೆಳೆಸಲೂ ಇಷ್ಟವಿಲ್ಲದ ಮಾತ್ರವಲ್ಲದೇಸಹೋದರ ತಮ್ಮನ್ನೊಂದು ಮಾತೂ ಕೇಳದೆ ದಿಢೀರ್ ಮದುವೆ ನಿಶ್ಚಯಿಸಿದ್ದು ಗ್ರೆಟ್ಟಾ, ಆಂಥೋನಿ ಮತ್ತು ತಾಮಸರನ್ನು ಕೆಟ್ಟದಾಗಿ ಕೆರಳಿಸಿಬಿಟ್ಟಿತು. ಆದ್ದರಿಂದ ಆವತ್ತು ಮದುವೆಗೆ ಆಹ್ವಾನಿಸಲುಬಂದ ಹಿಲಾರಿಯನ್ನು ಕಂಡ ಅವರು ಕೆಂಡಾಮಂಡಲರಾದರು. ಅವನು ಒಳಗಡಿಯಿಡುತ್ತಿದ್ದಂತೆಯೇ ಕೆಟ್ಟದಾಗಿ ಬೈಯ್ಯುತ್ತ ಹೊಡೆಯಲೇಅವನ ಮೇಲೆ ನುಗ್ಗಿದರು. ಮಕ್ಕಳದೌರ್ಜನ್ಯವನ್ನು ಕಂಡರಾರ್ಬಟರು ಮತ್ತು ಜೆಸಿಂತಾಬಾಯಿ ಅವರನ್ನುತಡೆಯಲು ಮುಂದಾದರು. ಅಷ್ಟರಲ್ಲಿ ಗ್ರೆಟ್ಟಾರಪ್ಪನೇ ಮುನ್ನುಗ್ಗಿ ಹೋಗಿ ಅಪ್ಪ, ಅಮ್ಮನನ್ನು ಹಿಡಿದು ಎಳೆದೊಯ್ದು ಕೋಣೆಯೊಂದರಲ್ಲಿ ಕೂಡಿ ಹಾಕಿದಳು.ಅವೆಲ್ಲವನ್ನು ಕಂಡು ಹಿಲಾರಿ ತೀವ್ರ ವ್ಯಥೆಪಟ್ಟನಾದರೂ ಸಂಯಮದಿಂದಲೇಹಿಂದಿರುಗಿದ. ಹೀಗಾಗಿ ಪರವೂರಿನ ಅಕ್ಕ ಭಾವಂದಿರೇ ಮುಂದೆ ನಿಂತು ಹಿಲಾರಿಯ ವಿವಾಹವನ್ನು ನಡೆಸಿಕೊಟ್ಟು ಹೊರಟು ಹೋದರು.

   ಮದುವೆಯ ನಂತರ ಹಿಲಾರಿಯುಕೆಲವು ಕಾಲಮಾವನ ಮನೆಯಲ್ಲಿಯೇ ಉಳಿದ. ಆದರೆ ತಾನೊಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬುದು ಅವನ ಬಹುದಿನದ ಆಸೆಯಾಗಿತ್ತು.ಅದೀಗ ಅವನನ್ನು ಬಲವಾಗಿಕಾಡತೊಡಗಿತು. ಆದ್ದರಿಂದ ಆವತ್ತೊಮ್ಮೆ  ಗ್ರೆಟ್ಟಾ, ಆಂಥೋನಿ ಮತ್ತು ತಾಮಸರು ಮೂವರೂ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡೇಅಲ್ಲಿಗೆ ಹೋದ.ಅಂಗಳದಲ್ಲಿ ನಿಂತುಕೊಂಡು,‘ಅಕ್ಕಾ…!’ ಎಂದು ಕರೆದ. ತಮ್ಮನ ಕೂಗು ಮೂವರಿಗೂ ಕೇಳಿಸಿತು. ಮರುಕ್ಷಣ ಅಣ್ಣ ತಮ್ಮಂದಿರ ರಕ್ತವು ಕುದಿಯಿತು. ಕೂಡಲೇ ಹೊರಗೆ ಧಾವಿಸಿದರು. ಅಷ್ಟರಲ್ಲಿ ಗ್ರೇಟ್ಟಾ ಅವರನ್ನು ತಳ್ಳಿಕೊಂಡು ಮುಂದೆ ಬಂದವಳು, ‘ಏನೂ…!’ ಎಂದು ಬಿಸಿಯುಸಿರು ದಬ್ಬುತ್ತ ಪ್ರಶ್ನಿಸಿದಳು.ಒಡಹುಟ್ಟಿದವರ ಕ್ರೋಧದ ಮುಖಗಳನ್ನು ಕಂಡ ಹಿಲಾರಿ ವಿಷಯ ಪ್ರಾಸ್ತಾಪಿಸಲು ತುಸು ಅಳುಕಿದ. ಆದರೂ ಅವನು ಧೈರ್ಯವಂತ. ತಕ್ಷಣ ಅಳುಕನ್ನು ಹಿಮ್ಮೆಟ್ಟಿ, ಬಂದ ವಿಷಯವನ್ನು ಮಾತಾಡಲು ಮುಂದಾದ.‘ಅಕ್ಕಾ ನಾನು, ಸ್ವಂತ ಮನೆ ಕಟ್ಟಬೇಕೆಂದಿದ್ದೇನೆ. ಅದಕ್ಕೆ ನಮ್ಮ ಮೇಲಿನ ಗುಡ್ಡೆಯಲ್ಲಿಸ್ವಲ್ಪ ಜಾಗ ಬೇಕು!’ ಎಂದ ಮೃದುವಾಗಿ. ಮೊದಲೇ ಮದುವೆಯ ವಿಷಯದಲ್ಲಿ ಅವಮಾನಿತರಾಗಿದ್ದ ಸಹೋದರರು ತಮ್ಮನ ಮಾತು ಕೇಳಿ ಇನ್ನಷ್ಟು ಉರಿದವರು, ರಪ್ಪನೇ ಹಿಲಾರಿಯ ಮೇಲೆ ಬಿದ್ದು ಅವನನ್ನು ಯದ್ವಾತದ್ವ ಥಳಿಸತೊಡಗಿದರು. ಆದರಿತ್ತ ಮಾತೆತ್ತಿದರೆ ಸದಾ ಅಣ್ಣ ತಮ್ಮಂದಿರ ನಡುವೆ ಜಗಳ ಮತ್ತು ಹೊಡೆದಾಟವನ್ನೇ ಕಾಣುತ್ತತಾನೂ ಅದನ್ನುಪ್ರೋತ್ಸಾಹಿಸುತ್ತ ಬಂದಿದ್ದ ಗ್ರೆಟ್ಟಾಳಿಗೆ ಇವತ್ತು ಯಾಕೋ ಆ ಕುರಿತು ಒಳಗೊಳಗೆ ಕಿರಿಕಿರಿ ಅನ್ನಿಸಿರಬೇಕು. ಅವಳು ಕೂಡಲೇ ಆಂಥೋನಿ ಮತ್ತು ತಾಮಸರಿಂದ ಹಿಲಾರಿಯನ್ನು ಬಿಡಿಸಿದವಳು, ‘ಇವನುಯಾವತ್ತು ಹುಟ್ಟಿದ ಮನೆಯನ್ನೂ ಮತ್ತು ನಮ್ಮನ್ನೂ ಅಹಂಕಾರದಿಂದ ಎಡವಿ ಹೋದನೋ ಆವತ್ತಿಗೆ ನಮ್ಮ ಪಾಲಿಗೂ ಇವನು ಸತ್ತು ಹೋದ! ಹಾಗಾಗಿ ಇನ್ನು ಮುಂದೆ ಅವನು ಎಲ್ಲಿದ್ದರೆಷ್ಟು ಬಿಟ್ಟರೆಷ್ಟು? ಹಾಳಾಗಿ ಹೋಗಲಿ. ಇನ್ನು ಮುಂದೆ ನೀವಿಬ್ಬರೂ ಅವನನ್ನು ಹೊಡೆಯುವುದಾಗಲೀ, ತಡೆಯುವುದಾಗಲೀ ಮಾಡಬಾರದು! ಅವನಿಗೆ ಹೇಗೆ ಬೇಕೋ ಹಾಗಿದ್ದುಕೊಂಡು ಸಾಯಲಿ!’ ಎಂದು ಬೈದು ರುಮ್ಮನೆ ಒಳಗೆ ನಡೆದುಬಿಟ್ಟಳು.

ಆವತ್ತಿನಿಂದ ಅಕ್ಕ ಮತ್ತು ಅಣ್ಣಂದಿರ ಮೇಲೆ ಹಿಲಾರಿಯ ಮನಸ್ಸು ಕೂಡಾ ಮುರಿದುಬಿತ್ತು. ಇವರು ಇನ್ನೆಂದಿಗೂ ಸರಿದಾರಿಗೆ ಬರುವ ಮನುಷ್ಯರಲ್ಲ! ಎಂದುಕೊಂಡವನು, ಆ ದೇವರು ಇವರಿಗೆ ಎಂದಾದರೂ ಒಳ್ಳೆಯ ಬುದ್ಧಿ ಕೊಡುವ ತನಕ ತನ್ನ ಪಾಲಿಗೂ ಇವರು ಇಲ್ಲವಾದರು! ಎಂದು ತೀರ್ಮಾನಿಸಿ ಅಲ್ಲಿಂದ ಹಿಂದಿರುಗಿದವನು ಅಂದಿನಿಂದ ಅವರ ಕುರಿತು ಸಂಪೂರ್ಣ ಉದಾಸೀನ ತಳೆದುಬಿಟ್ಟ. ಇಷ್ಟಾದಒಂದು ವರ್ಷದೊಳಗೆಗುಡ್ಡದ ಮೇಲೊಂದು ಸುಂದರವಾದ ಮನೆಯನ್ನು ಕಟ್ಟಿಕೊಂಡವನು ಒಂದು ಶುಭದಿನದಂದು ಗ್ರಹಪ್ರವೇಶವನ್ನು ಮುಗಿಸಿತನ್ನ ಜೀವನ ಸಂಗಾತಿಯೊಂದಿಗೆ ಹೊಸ ಬದುಕನ್ನಾರಂಭಿಸಿದ.

ತಮ್ಮ ಮಕ್ಕಳ ಸಾರಾಯಿ ವ್ಯಾಪಾರವು ಉಚ್ಛ್ರಾಯ ಸ್ಥಿತಿಗೆ ತಲುಪುತ್ತಿದ್ದಂತೆಯೇ ರಾಬರ್ಟರು ಆವರೆಗೆ ಶ್ರಮಪಟ್ಟುಕಾಪಾಡಿಕೊಂಡು ಬಂದಿದ್ದಂಥತೆಂಗು, ಕಂಗು ಮತ್ತು ಬಾಳೆಯತೋಟಗಳೆಲ್ಲಆರೈಕೆಗಳಿಲ್ಲದೆ ಒಣಗಲಾರಂಭಿಸಿದ್ದವು. ವಿಶಾಲ ಹೊಲಗದ್ದೆಗಳು ಹಡಿಲು ಬಿದ್ದವು. ನಿಧಾನವಾಗಿ ಸತ್ತು ಧರೆಗುರುಳಿದ ತೆಂಗು, ಕಂಗುಗಳನ್ನು ಗೊಬ್ಬರವನ್ನಾಗಿಸಿಕೊಂಡ ಕರಿಮಾರು ಹಾಡಿಗಳು ಶೀಘ್ರವಾಗಿ ಬೆಳೆಯುತ್ತ ಸಾಗಿದುವು. ಆದರೆ ಇಂಥ ನಿಸರ್ಗದತ್ತಪ್ರಕ್ರಿಯೆಯು ಆಂಥೋನಿ ಮತ್ತುತಾಮಸರ ದೊಡ್ಡಮಟ್ಟದ ಕಂಟ್ರಿ ದಂಧೆಗೆ ಹೊಸ ಮೆರುಗನ್ನೇ ನೀಡಿತೆನ್ನಬೇಕು. ಏಕೆಂದರೆ ಹಿಂದೆಲ್ಲಾ ಮನೆಯ ಹಿಂಬದಿಯ ಹಿತ್ತಲಲ್ಲಿ ಕದ್ದುಮುಚ್ಚಿ ನಡೆಯುತ್ತಿದ್ದ ವ್ಯಾಪಾರವು ಈಗ ದಟ್ಟ ಬನದಂಥ ಕರಿಮಾರು ಹಾಡಿಗಳೊಳಗೆ ನಿರ್ಭಿಡೆಯಿಂದ ಸಾಗತೊಡಗಿತು. ದೂರದ ಶಿವಕಂಡಿಕೆಗೂ, ಸುತ್ತಮುತ್ತಲಿನ ಇತರ ಗ್ರಾಮ ಮತ್ತು ಹಳ್ಳಿಗಳಿಗೂ ರಾರ್ಬಟರ ಹಾಡಿಯಿಂದ ಕ್ಯಾನುಗಟ್ಟಲೆ ಕಳ್ಳಭಟ್ಟಿಯು ಕಾರು, ಬಸ್ಸುಗಳ ಹಳೆಯ ಟ್ಯೂಬುಗಳೊಳಗೆ ತುಂಬಿಕೊಂಡು ಖಾಸಗಿ ಆಟೋ,ಲಾರಿ,ಬಸ್ಸುಮತ್ತು ಸೈಕಲ್ಲುಗಳ ಮೂಲಕ ಸರಬರಾಜು ಆಗತೊಡಗಿತು. ಇದರ ಜೊತೆಗೆ ಗ್ರೆಟ್ಟಾ ಹಂದಿಗಳನ್ನು ಕೂಡಾ ಸಾಕುತ್ತ ಮಾಂಸ ಮಾರಾಟದ ಉಪದಂಧೆಯಲ್ಲೂ ತೊಡಗಿದಳು.

ಇತ್ತ, ಸ್ವಲ್ಪಕಾಲ ಮಕ್ಕಳೊಂದಿಗೆ ಮುನಿಸಿಕೊಂಡು ತಮ್ಮಪಾಡಿಗೆ ತಾವಿದ್ದ  ಜೆಸಿಂತಾಬಾಯಿಯ ಮನಸ್ಸುನಿಧಾನವಾಗಿ ಮೃದುವಾಗತೊಡಗಿತು. ಎಷ್ಟಾದರೂ ತಾವೇ ಹೆತ್ತ ಮಕ್ಕಳಲ್ಲವಾ. ಹೇಗಾದರೂ ಇರಲಿ ಒಟ್ಟಾರೆಅವರು ಚೆನ್ನಾಗಿದ್ದರೆ ಸಾಕು. ತಾವಿನ್ನು ಎಷ್ಟು ಕಾಲಾಂತ ಬದುಕಿಯೇವು.ಇನ್ನು ಮುಂದೆ ದೇವರು ಹೇಗೆ ನಡೆಸುತ್ತಾನೋ ಹಾಗೆ ಸಾಗಿದರಾಯ್ತು ಎಂದುಕೊಂಡವರು ಮೆಲ್ಲನೆ ಮಕ್ಕಳೊಂದಿಗೆಬೆರೆತು,ಹಂದಿ ಸಾಕಾಣೆ ಮತ್ತು ವಾಟೀಸು ತಯಾರಿಸುವುದರಲ್ಲಿ ತಾವೂ ತೊಡಗಿಕೊಂಡರು. ಆದರೆ ರಾರ್ಬಟರು ಬದಲಾಗಲಿಲ್ಲ. ಆದರೆ ಹೆಂಡತಿಯನ್ನೂ ಆಕ್ಷೇಪಿಸದೆ ನಿರ್ಲಿಪ್ತರಾಗಿಬಿಟ್ಟರು. ತಾಯಿಯುತಮ್ಮೊಂದಿಗೆ ರಾಜಿಯಾಗಿವ್ಯವಹಾರದಲ್ಲಿ ಒಲವು ತೋರಿದ್ದು ಮಕ್ಕಳಿಗೂ ನೆಮ್ಮದಿಯಾಯಿತು. ಇದಾದ ಕೆಲವು ಕಾಲದ ನಂತರ ರಾರ್ಬಟರ ಆರೋಗ್ಯಸ್ಥಿತಿಯುತೀವ್ರ ಹದಗೆಡತೊಡಗಿತು.ಅದರಿಂದ ಅವರ ಜೀವನೋತ್ಸಾಹವೂ, ಸಂಸಾರದ ಮೇಲಿನ ಮಮಕಾರವೂ ಕುಂದುತ್ತ ಸಾಗಿದ್ದರಿಂದ ಚಾಪೆ ಹಿಡಿದು ಮಲಗಿಬಿಟ್ಟರು.

***

ಗಂಗರಬೀಡಿನಲ್ಲಿ ಸಾರಾಯಿ ದಂಧೆಯಲ್ಲಿ ತೊಡಗಿದವರಲ್ಲಿ ಮಥಾಯಸ, ಲಿಲ್ಲಿಬಾಯಿ, ಮೋಂತು ಪರ್ಬು ಮತ್ತು ತೇಂಕು ನಾಯ್ಕರಂತಹ ಕಿರಿಸ್ತಾನ ಪ್ರಮುಖರು ಬೇಯಿಸುತ್ತಿದ್ದ ಸಾರಾಯಿ ಕೂಡಾ ಅಕ್ಕಪಕ್ಕದ ಗ್ರಾಮ, ಹಳ್ಳಿ ಮತ್ತು ನಗರಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ಇದು ಪೊಲೀಸರಿಗೂ ಮತ್ತು ಮೇಲಾಗಿ ಅಬಕಾರಿ ಇಲಾಖೆಗೂ ತಿಳಿದ ವಿಚಾರವೇ ಆಗಿತ್ತು. ಆದರೆ ಪೆಡ್ಡಿ ಮತ್ತು ಇತರ ಕಾಳದಂಧಿಗರು ಅಧಿಕಾರಿಗಳೊಂದಿಗಿನ  ಒಪ್ಪಂದದಂತೆ ಆಗಾಗ ತಮ್ಮ ಉತ್ತಮ ಮಟ್ಟದ ಸಾರಾಯಿಯೊಂದಿಗೆ ಕೈತುಂಬಾ ಹಣವನ್ನೂ ಸರಬರಾಜು ಮಾಡುತ್ತ ಅವರ ಬಾಯಿಮುಚ್ಚಿಸುವುದರಲ್ಲಿ ಸಫಲರಾಗುತ್ತಿದ್ದರು. ಆದರೂ ಕೆಲವೊಮ್ಮೆ ಸರಕಾರದ ಕಟ್ಟುನಿಟ್ಟಿನ ಆಜ್ಞೆಯಿಂದಲೋ ಅಥವಾ ಪ್ರಾಮಾಣಿಕ ಮೇಲಾಧಿಕಾರಿಗಳ ಅಪ್ಪಣೆಯ ಮೇರೆಗೋಕೆಲವು ಅಧಿಕಾರಿಗಳುಕಣ್ಣುಕಟ್ಟಿಗೆಂಬಂತೆ ಗಂಗರಬೀಡಿನ ಮೇಲೆ ದಾಳಿ ನಡೆಸುತ್ತಿದ್ದುದುಂಟು. ಆಗೆಲ್ಲ ಅವರುಸಾಮಾನ್ಯ ಉಡುಗೆ ತೊಟ್ಟು ಬಾಡಿಗೆ ಕಾರು ಮತ್ತುಜೀಪುಗಳಲ್ಲಿ ಒಂದಷ್ಟು ಖಾಸಗಿ ರೈಡರ್‍ಗಳನ್ನು ತುಂಬಿಕೊಂಡು ಬಂದು ಆಂಥೋನಿಯಂಥ  ಕೆಲವು ಮುಖ್ಯ ಮನೆಗಳನ್ನು ಮುತ್ತಿಗೆ ಹಾಕಿ,ಒಳಗೆ ಹೊಕ್ಕು ಬಾಗಿಲು ಭದ್ರಪಡಿಸಿಕೊಳ್ಳುತ್ತಿದ್ದರು.ಒಂದೆರಡು ಗಂಟೆಗಳ ನಂತರ ಹೊರಗೆ ಬರುತ್ತಿದ್ದ ಆ ಅಧಿಕಾರಿಗಳ ಮುಖಗಳು ತೃಪ್ತಿಯಿಂದ ಅರಳಿರುತ್ತಿದ್ದವು.ರೈಡರುಗಳ ಕಣ್ಣುಗಳು ಮತ್ತೇರಿ ಕೆಂಪಡರಿರುತ್ತಿದ್ದುವು. ಅಂಥ ಸಮಯದಲ್ಲಿ ಆಂಥೋನಿಯ ಕುಟುಂಬಕ್ಕೆ ಆಗದವರು,‘ಅಬ್ಬಾ ದೇವರೇ…ಕೊನೆಗೂ ನಮ್ಮ ಪ್ರಾರ್ಥನೆ ಫಲಿಸಿತಪ್ಪಾ, ಆಂಥೋನಿಯ ಮನೆಗೆ ಅಬಕಾರಿ ದಾಳಿಯಾಗಿದೆಯಂತೆ! ಆ ನಾಯಿಗಳನ್ನು ಒಂದ್ಹತ್ತು ವರ್ಷವಾದರೂ ಕಂಬಿ ಎಣಿಸುವಂತೆ ಮಾಡಪ್ಪಾ ದೇವರೇ…!’ಎಂದು ಬೇಡಿಕೊಳ್ಳುತ್ತ ನೆಟ್ಟಿಗೆ ಮುರಿಯುತ್ತಿದ್ದರೆ, ಇನ್ನೊಂದಷ್ಟು ಮಂದಿ,‘ಅಯ್ಯಯ್ಯೋ ದೇವರೇ…!ಆಂಥೋನಿಯ ಮನೆಗೆ ದಾಳಿಯಾಯಿಂತೆ! ಇನ್ನು ಮುಂದೆ ಒಳ್ಳೆಯ ಕಂಟ್ರಿ ಎಲ್ಲಿ ಸಿಗುತ್ತದಪ್ಪಾ…? ಆ ಅಧಿಕಾರಿಗಳಿಗೆ ನಮ್ಮ ಊರಿನ ಮೇಲೆಯೇ ಯಾಕೆ ಕಣ್ಣು ಬೀಳುತ್ತದೋಬೋಳಿಮಕ್ಕಳಿಗೆ, ಥೂ!’ ಎಂಬಂಥಶಪಿಸುತ್ತ ದುಸ್ತರ ಚಿಂತೆಗೂ ಬೀಳುತ್ತಿದ್ದರು. ಆದರೆ ಅಧಿಕಾರಿಗಳ ದಿಢೀರ್ ಆಗಮನ ಮತ್ತು ಅಷ್ಟೇ ತುರ್ತಾದ ನಗುಮೊಗದ ನಿರ್ಗಮನಗಳು ಎರಡೂ ವರ್ಗದ ಜನರಲ್ಲಿ ಅಚ್ಚರಿಯನ್ನು ಮೂಡಿಸುತ್ತಿತ್ತು.

ಆದರೆ ಭ್ರಷ್ಟ ಅಧಿಕಾರಿಗಳ ನಡುವೆ ಒಂದಷ್ಟು ಪ್ರಾಮಾಣಿಕ ಅಧಿಕಾರಿಗಳೂ ಇರುತ್ತಿದ್ದರು. ಅಂಥವರು ಯಾವ ಆಮಿಷಕ್ಕೂ ಒಳಗಾಗದೆ ಗಂಗರಬೀಡಿನ ಜನಜೀವನದ ಶ್ರೇಯಸ್ಸಿನ ಉದ್ದೇಶದಿಂದ ಆಂಥೋನಿ ಮತ್ತು ಇತರ ಸಾರಾಯಿ ಬೇಯಿಸುವ ಮನೆಗಳಿಗೆ ಪದೇಪದೇ ಪಟ್ಟು ಬಿಡದೆ ದಾಳಿ ನಡೆಸುತ್ತಿದ್ದರು. ಆದರೆ ಆಂಥೋನಿ, ತಾಮಸನ ಜೊತೆಗಿದ್ದ ಕೆಲವು ಯುವಕರ ತಂಡವು ಅಂಥ ಸಂದರ್ಭವನ್ನು ಎದುರಿಸಲು ಸದಾ ಸಿದ್ಧವಾಗಿರುತ್ತಿತ್ತು.ದಾಳಿಯ ವೇಳೆಯಲ್ಲಿ ನುಗ್ಗಿ ಬರುವಂಥಅಧಿಕಾರಿಗಳನ್ನು ರಪ್ಪನೆ ಹಿಡಿದು ಕೈಕಾಲುಕಟ್ಟಿನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿ ಕಂಗೆಡಿಸಿಬಿಡುತ್ತಿದ್ದರು. ಅಷ್ಟಾದರೂಮತ್ತೂ ಎಗರಾಡುವವರನ್ನು ಗ್ರೆಟ್ಟಾಹಾಗುಅಣ್ಣತಮ್ಮಂದಿರು ಕಡಿದು ಮುಗಿಸಲೂ ತಯಾರಿರುತ್ತಿದ್ದರು. ಇದರಿಂದ ಬೆದರಿ ಕಂಗಾಲಾಗುತ್ತಿದ್ದ ಅಧಿಕಾರಿಗಳು ಕಾಡುಗುಡ್ಡವೆನ್ನದೆ ದಿಕ್ಕಾಪಾಲಾಗಿ ಓಡಿ ಹೋಗಿ ಜೀವ ಉಳಿಸಿಕೊಳ್ಳುವ ಸನ್ನಿವೇಶವೂಅನೇಕರಿಗೆ ಎದುರಾಗಿತ್ತು. ಆಗೆಲ್ಲ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಆರೋಪಿಗಳ ವಿರುದ್ಧ ಕಠಿಣಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದರು. ಆದರೆ ಮೇಲಾಧಿಕಾರಿಗಳಲ್ಲಿ ಅನೇಕರು ಯಾವತ್ತೋ ತಮ್ಮನ್ನು ಗಂಗರಬೀಡಿನ ಕಾಳದಂಧಿಗರಿಗೆ ಮಾರಿಕೊಂಡಾಗಿತ್ತು. ಆದ್ದರಿಂದ ಅಲ್ಲಿ ಮತ್ತೆ ಭ್ರಷ್ಟಾಚಾರವೇ ಮೆಲುಗೈ ಸಾಧಿಸುತ್ತಿತ್ತು. ಹೀಗಾಗಿ ಅಂಥ ಕೇಸುಗಳು ಹೇಳಹೆಸರಿಲ್ಲದಂತೆ ಕೊನೆಯುಸಿರೆಳೆಯುತ್ತಿದ್ದುವು. ಇದರಿಂದ ಬರಬರುತ್ತ ಗಂಗರಬೀಡಿನ ಮೇಲೆ ದಾಳಿ ನಡೆಸಲು ಯಾವ ಅಧಿಕಾರಿಯೂ ಮುಂದೆ ಬರುತ್ತಿರಲಿಲ್ಲ. ಪರಿಣಾಮ,ಕೆಲವೇ ವರ್ಷದೊಳಗೆ ಗಂಗರಬೀಡುವು ‘ಅಕ್ರಮ ಕಳ್ಳಭಟ್ಟಿ ಗ್ರಾಮ!’ ಎಂಬ ಕುಖ್ಯಾತಿ ಪಡೆದು ಸರಕಾರದ ಕೆಂಪುಪಟ್ಟಿಯಲ್ಲಿ ಸೇರಿ ಕೊಂಡಿತು.

(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter