‘ತೊಂಭತ್ತರ ಹುಟ್ಟು ಹಬ್ಬದ ಸಂಭ್ರಮ ದಲ್ಲಿ ಸುವರ್ಣರು’

“ನಾಟಕವೊಂದರಲ್ಲಿ ಕಲಾವಿದರಷ್ಟೇ ಪ್ರೇಕ್ಷಕರೂ ಮುಖ್ಯ” – ರಂಗ ನಿರ್ದೇಶಕ ಸದಾನಂದ ಸುವರ್ಣ.

ಘಟಶ್ರಾದ್ಧ, ತಬರನ ಕತೆ, ಕುಬಿ ಮತ್ತು ಇಯಾಲ, ಮನೆ, ಕ್ರೌರ್ಯ… ಇತ್ಯಾದಿ ಫಿಲ್ಮ್ ಗಳ, ‘ಗುಡ್ಡದ ಭೂತ’ದಂತಹ ದೂರದರ್ಶನದ ಜನಪ್ರಿಯ ಸೀರಿಯಲ್‌ನ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ,ನಿರ್ದೇಶಕ,ನಿರ್ಮಾಪಕ ಸದಾನಂದ ಸುವರ್ಣರು ಡಿಸೆಂಬರ್ 24, 2021 ರಂದು 90 ನೇ ಹುಟ್ಟುಹಬ್ಬ ಆಚರಿಸಿದರು. (ಜನ್ಮ- 24-12-1931).ಬಹುಕಾಲ ಮುಂಬಯಿಯಲ್ಲಿದ್ದ ಸುವರ್ಣರು ಈವಾಗ ಮಂಗಳೂರಲ್ಲಿದ್ದಾರೆ.ಇಲ್ಲಿರುವಾಗ ಆಗಾಗ ಸುವರ್ಣರನ್ನು ಭೇಟಿ ಆಗುವ ಅವಕಾಶಗಳು ಸಿಗುತ್ತಿತ್ತು. ಅವರ ನಾಟಕ ಪ್ರದರ್ಶನಗಳನ್ನು ಕಾಣುವ ಭಾಗ್ಯವೂ ದೊರಕುತ್ತಿತ್ತು.

ಎರಡು ದಶಕಗಳ ಹಿಂದೆ ವರ್ಷ 2000 ದಲ್ಲಿ ನೇಪಾಳ ಪ್ರವಾಸದ ಸಮಯ ನಮ್ಮ ಜೊತೆ ಸದಾನಂದ ಸುವರ್ಣರೂ ಬಂದಿರುವುದು ಮರೆಯಲಾರದ ನೆನಪು. ಸುಮಾರು ಹತ್ತು ದಿನಗಳ ಕಾಲ ನೇಪಾಳದಲ್ಲಿ  ಅವರ ಜೊತೆಗೆ ಅನೇಕ ರಂಗ ನೆನಪುಗಳನ್ನು  ನಮಗೆಲ್ಲ ಕೇಳುವ ಭಾಗ್ಯ ಸಿಕ್ಕಿತ್ತು.

ಸದಾನಂದ ಸುವರ್ಣ ಅಂದ ಕೂಡಲೇ ನನಗೆ ಅವರ ‘ಚಿನ್ನದ ಗೊಂಬೆ’ ಎನ್ನುವ ಕತಾಸಂಕಲನ‌ ಬಿಡುಗಡೆ ಸಮಾರಂಭದ ದೃಶ್ಯವೂ ನೆನಪಾಗುತ್ತದೆ.‌ಈ ಘಟನೆಗೆ ಸುಮಾರು ಇಪ್ಪತ್ತೈದು ವರ್ಷಗಳೇ ಸಂದು ಹೋಗಿವೆ. ತೊಂಭತ್ತರ ದಶಕದ ಮಧ್ಯದಲ್ಲಿ ಈ ಕತಾ ಸಂಕಲನ‌ವು ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಬಿಡುಗಡೆಗೊಂಡಿತ್ತು. ಖ್ಯಾತ ಕವಿ ಬಿ.ಎ.ಸನದಿಯವರು ಕಥಾಸಂಕಲನ‌ ಬಿಡುಗಡೆ ಗೊಳಿಸಿದ್ದರು. ನಾನು ಅ ಕೃತಿಯನ್ನು  ಪರಿಚಯಿಸಿದ್ದೆ(ಆವಾಗ ನಾನು ಸಂಜೆಸುದ್ದಿ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿದ್ದೆ).ಖ್ಯಾತ ಕತೆಗಾರ,ಕಾದಂಬರಿಕಾರ ಡಾ.ವ್ಯಾಸರಾವ್ ನಿಂಜೂರು ಆವಾಗ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿದ್ದರು. ಕರ್ನಾಟಕ ಸಂಘವೇ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅವರೂ ವೇದಿಕೆಯಲ್ಲಿದ್ದರು. ಅಲ್ಲಿ ಸದಾನಂದ ಸುವರ್ಣರು ಮಾತಾಡುತ್ತಾ-“ನನಗೆ ಲೇಖಕ ಎನ್ನುವ ಭ್ರಮೆ ಇಲ್ಲ. ‘ಮೊಗವೀರ’ ಶಾಲೆಯಲ್ಲಿ ಕಲಿಸುತ್ತಿದ್ದಾಗ ಪುಸ್ತಕ ಓದುವ ಆಸಕ್ತಿಯಿತ್ತು. ಆಗ ಕಥೆಗಳನ್ನು ಬರೆಯುತ್ತಿದ್ದೆ. ‘ಸಚೇತನ’ ಪತ್ರಿಕೆ ಆಗ ನಮ್ಮ ಬರವಣಿಗೆಗೆ ಉತ್ತೇಜನ ನೀಡುತ್ತಿತ್ತು. ಅನಂತರ ನಾಟಕ ಮಾಡಲು ಆರಂಭಿಸಿ ನನ್ನ  ಕತೆಗಳು ನಿಂತಿತು”ಎಂದಿದ್ದರು. 

ಚಿನ್ನದ ಗೊಂಬೆ ಕತೆಯನ್ನು ಅನಂತರ  ನಾನು ‘ಇದು ಕರ್ನಾಟಕ’ ವಾರಪತ್ರಿಕೆಯ ವಿಶೇಷಾಂಕದಲ್ಲಿ ಮರು ಮುದ್ರಿಸಿದ್ದೆ.

1996-97 ರಿಂದ  ಸದಾನಂದ ಸುವರ್ಣರ ಅಭಿಮಾನಿಗಳ  ಕನಸಿನ  ‘ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮುಂಬಯಿ’ ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂಬಯಿ ಮಹಾನಗರದಲ್ಲಿ ಜರಗಿಸುತ್ತಿದೆ. ಪ್ರತಿವರ್ಷ ಡಾ. ಶಿವರಾಮ ಕಾರಂತರ ಜನ್ಮದಿನವನ್ನು ಆಚರಿಸುತ್ತಾ ಅವರ ಬದುಕು, ಬರಹ ಮತ್ತವರ ಬಹುಮುಖ ಪ್ರತಿಭೆಗಳನ್ನು ಮುಂಬಯಿಯ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಈ ಮೂಲಕ ಸುವರ್ಣರು ಮಾಡುತ್ತಾ ಬಂದಿದ್ದಾರೆ. ಈ ದಿಸೆಯಲ್ಲಿ 1997ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದೊಂದಿಗೆ ಏರ್ಪಡಿಸಿದ ‘ಕಾರಂತ ಕೃತಿ ಲೋಕ’ ಎಂಬ ವಿಚಾರ ಸಂಕಿರಣ, 1998ರಲ್ಲಿ ಆರು ದಿವಸಗಳ ಕಾರಂತೋತ್ಸವದಲ್ಲಿನ ಉಪನ್ಯಾಸಗಳು, ಕಾರಂತರ ಕುರಿತಾದ ಸಾಕ್ಷ್ಯ ಚಿತ್ರಗಳು ಅಲ್ಲದೇ ಅವರೇ ನಿರ್ದೇಶಿಸಿದ್ದ ಯಕ್ಷರಂಗದ ವಿಶ್ವವಿಖ್ಯಾತ ಯಕ್ಷಗಾನ ಬ್ಯಾಲೆಗಳ ಪ್ರದರ್ಶನವನ್ನು ನಗರದ ಬೇರೆ ಬೇರೆ ಕಡೆ ಸಾದರಪಡಿಸಿದ್ದು ಅಂದಿನ ಪ್ರೇಕ್ಷಕರು ಈಗಲೂ ನೆನಪಿಸಿಕೊಳ್ಳುತ್ತಾರೆ. ಮುಂಬಯಿಯ ಹಲವೆಡೆ ಕಾರಂತೋತ್ಸವವನ್ನೂ ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬರಲಾಗಿದೆ. ಕಾರಂತರ ಹೆಸರಲ್ಲಿ ಶಾಲಾ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯೂ 1998 ರಿಂದ ನಡೆಯತ್ತಾ ಬಂದಿದೆ. ಈ ಹಿಂದೆ  ನಾಟಕ ರಚನಾ ಸ್ಪರ್ಧೆಯನ್ನೂ ಜರಗಿಸಿದ್ದರು.ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಪ್ರತಿ ವರ್ಷವೂ ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ‌ ಕಾರಂತ  ದತ್ತಿ ಉಪನ್ಯಾಸ ನಡೆಸುತ್ತಿದೆ.

ಸದಾನಂದ ಸುವರ್ಣರು ಮುಂಬಯಿಗೆ ಬಂದಾಗ ಅವರಿಗೆ 10 ವರ್ಷ ಪ್ರಾಯ. ಅಂದರೆ ಸುಮಾರುಆರು ದಶಕಗಳಿಂದ ಇವರು ಮುಂಬಯಿಯಲ್ಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದು ನಂತರ ಮಂಗಳೂರಿಗೆ ಹೋದರು. ಎಪ್ಪತ್ತರ ದಶಕದವರೆಗೆ ಮುಂಬಯಿಯಲ್ಲಿ ಕನ್ನಡ, ತುಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯವಾಹಿನಿಯಲ್ಲಿ ಹುಲುಸಾಗಿ ಬೆಳೆದ ನಾಟಕಗಳ ಬೆಳೆ  ತೊಂಬತ್ತರ ದಶಕದಲ್ಲಿ ಕಂಡು ಬರಲಿಲ್ಲ. ಇದು ಸುವರ್ಣರನ್ನು ತೀವ್ರ ಯೋಚಿಸುವಂತೆ ಮಾಡಿತ್ತು. ಟಿ.ವಿ. ಚಾನೆಲ್‌ಗಳ ದಾಂಧಲೆ, ಮೊದಲಿನಂತೆ ಉತ್ಸಾಹಿ ಯುವಕರ ಕೊರತೆ…. ಇವೆಲ್ಲವುಗಳನ್ನು ಗಮನಿಸಿದ ಸುವರ್ಣರು ‘ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸ್ಥಾಪಿಸಿದರು. ಈ ಧರ್ಮದಾಯಿ ಪ್ರತಿಷ್ಠಾನವು ರಂಗಭೂಮಿ, ಚಲನಚಿತ್ರ, ಸಂಗೀತ, ನೃತ್ಯ, ಚಿತ್ರಕಲೆ, ಜಾನಪದ ಮುಂತಾದ ವಿವಿಧ ರಂಗಗಳಲ್ಲಿ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ.

ಬಹಳ ವರ್ಷಗಳ ನಂತರ  ಮುಂಬಯಿಗೆ ವಿದಾಯ ಹೇಳುವ ಮೊದಲು ತೊಂಭತ್ತರ ದಶಕದ ಕೊನೆಗೆ ಸದಾನಂದ ಸುವರ್ಣರು ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸಿ ಅಭಿನಯಿಸಿದ್ದರು. ಆ ದಿನಗಳಲ್ಲಿ ಪ್ರದರ್ಶನಗೊಂಡ ‘ಬಾಲೆ ಬಂಗಾರ್’ ತುಳು ನಾಟಕದಲ್ಲಿ ನಿರ್ದೇಶನದ ಜೊತೆಗೆ ‘ಗುರ್ಕಾರ’ ಪಾತ್ರವನ್ನೂ ತಾವೇ ಮಾಡಿದ್ದರು. ಇದು ಬಂಗಾಲಿಯ ಶಂಭು ಮಿತ್ರರ ನಾಟಕವಾಗಿದೆ. ಇದಕ್ಕಿಂತ ಮೊದಲು ಹಲವಾರು ಪ್ರದರ್ಶನಗಳನ್ನು ಕಂಡ ‘ಗೋಂದೋಳು” ನಾಟಕವನ್ನು ಇವರು ನಿರ್ದೇಶಿಸಿದ್ದರು. ಗೋರೆಗಾಂವ್ ಕರ್ನಾಟಕ ಸಂಘದ ‘ರಂಗಸ್ಥಳ’ ಇದರ ನಿರ್ದೇಶಕರಾಗಿ ‘ಇದು ಯುನಿವರ್ಸಿಟಿ’ ನಾಟಕವನ್ನೂ  ಯಶಸ್ವಿಯಾಗಿ ರಂಗಕ್ಕೆ ತಂದ ಕೀರ್ತಿ ಇವರದ್ದಾಗಿದೆ.ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರನ್ನೂ ಒಂದು ಬಾರಿ ನನಗೆ ಸಮಾರಂಭದಲ್ಲಿ ಪರಿಚಯಿಸಿದ್ದರು. ಗಿರೀಶ್ ಕಾಸರವಳ್ಳಿ ಜೊತೆ ನಾನು ಮಾತುಕತೆ ನಡೆಸಿದ್ದು ಆ ಖುಷಿಗೆ ಕಾರಣರಾದವರು ಸದಾನಂದ ಸುವರ್ಣ.

ಅವರು ಮುಂಬಯಿ ಬಿಟ್ಟು ಮಂಗಳೂರಿಗೆ ಶಾಶ್ವತವಾಗಿ ನೆಲೆಸಲು ಹೋದಾಗ ಅವರ ಸಂದರ್ಶನ ನಡೆಸಿ ಮಂಗಳೂರಿನ ‘ಕನ್ನಡ ಜನ ಅಂತರಂಗ’ ಪತ್ರಿಕೆಯಲ್ಲಿ (2000) ಸಂದರ್ಶನ ಲೇಖನವನ್ನೂ ಪ್ರಕಟಿಸಿದ್ದೆ.ಅದರಲ್ಲಿ ಅವರಾಡಿದ ಕೆಲವು ಮಾತುಗಳು ರಂಗಭೂಮಿಯ ಆಸಕ್ತರಿಗೆ ಇಂದಿಗೂ ಮಾರ್ಗದರ್ಶನವೇ ಆಗಿದೆ.

ನನ್ನ ಪ್ರಶ್ನೆ : ಮುಂಬಯಿಯಲ್ಲಿ ಈಗೀಗ ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಳು- ಕನ್ನಡ ರಂಗಭೂಮಿ ಕ್ಷೀಣಿಸುತ್ತಾ ಬರುತ್ತಿದೆಯೇ? ಇಂತಹ ಸ್ಥಿತಿಯಲ್ಲಿ ತಾವು ಮತ್ತೆ ಸಕ್ರಿಯರಾಗುತ್ತಿದ್ದೀರಿ. ತುಳು- ಕನ್ನಡ ರಂಗಭೂಮಿ ಮತ್ತೆ ಚೇತರಿಸಬಹುದು ಎಂದು ನಂಬುವಿರಾ?

ಸುವರ್ಣ -ನಿಜ ಹೇಳಬೇಕೆಂದರೆ ಆಗಿನ ನಟರಲ್ಲಿದ್ದ ಪ್ರಾಮಾಣಿಕತೆ, ಉತ್ಸಾಹ, ಸ್ಪೂರ್ತಿ ಈಗಿನವರಲ್ಲಿ ನನಗೆ ಕಂಡು ಬರುವುದಿಲ್ಲ. ಆ ದಿನಗಳಲ್ಲಿ ಪ್ರಸಿದ್ಧರೆನಿಸಿದ್ದ ಅನೇಕ ನಿರ್ದೇಶಕರಿದ್ದರು. ಎಲ್ಲರಲ್ಲೂ ಆರೋಗ್ಯಕರ ಸ್ಪರ್ಧೆ ಇತ್ತು. ಈಗ ಅಂತಹ ನಿರ್ದೇಶಕರೂ ಕಂಡು ಬರುತ್ತಿಲ್ಲ. ಆಗಿನಷ್ಟು ರಿಹರ್ಸಲ್ ಸಂಖ್ಯೆಗಳೂ ಕಡಿಮೆಯಾಗಿವೆ. ‘ಥಿಯೇಟರ್ ಲವ್’ ಎಂಬುದು ಈಗಿನವರಲ್ಲಿ ಅಪರೂಪವೇ. ಮೊದಲು ನಿರ್ದೇಶಕರಿಗೆ ಥ್ರಿಲ್ ಆಗದೆ ಅವರು ಖುಷಿಪಡುತ್ತಿರಲಿಲ್ಲ. ಇಂದು ನಾಲ್ಕು ಗೆಳೆಯರು ಹೇಳಿದ್ದಕ್ಕೆ ಸಂತೋಷಪಡುವಂತಾಗಿದೆ. ಥಿಯೇಟರ್ ಮೂವ್‌ಮೆಂಟ್, ಥಿಯೇಟರ್ ಡಿಸಿಪ್ಲಿನ್ ಇಲ್ಲದೆ ಒಳ್ಳೆಯ ನಾಟಕ ಮಾಡಲು ಸಾಧ್ಯವೇ ಇಲ್ಲ. ಒಟ್ಟು ‘ನಾಟಕ ಮಾಡಿದರೆ ಆಯಿತು’ ಎನ್ನುವ ನಿರ್ಲಕ್ಷ್ಯ ಖಂಡಿತಾ ಸಲ್ಲದು. ಅಲ್ಲದೆ, ಇಂದು ರಿಹರ್ಸಲ್‌ನ ಖರ್ಚು, ಸೆಟ್‌ನ ಖರ್ಚು ಕೂಡಾ ವಿಪರೀತವಾಗುತ್ತಿದೆ. ಟಿಕೇಟ್ ಇಟ್ಟರೆ ಜನ ಬರುವುದಿಲ್ಲ. ಅಲ್ಲದೆ ಕಲಾವಿದರಿಗೂ ಅನೇಕ ತಾಪತ್ರಯಗಳು. ಮೊದಲಿನ ದಿನಗಳಲ್ಲಿ ನಾಟಕ ಮಾಡುವುದೂ ನಾವೇ, ಟಿಕೇಟ್ ಮಾರುವುದೂ ನಾವೇ ಆಗಿದ್ದೆವು. ಇಂದು ಕಮಿಟ್‌ಮೆಂಟ್‌ಗಳಿಗೆ ಬೆಲೆಯೇ ಇಲ್ಲದಂತಾಗಿದೆ. ನಮ್ಮನ್ನು ಯಾರೂ ಬೆಳೆಸಿಲ್ಲ. ನಾವೇ ಬೆಳೆದದ್ದು. ಮುಂಬಯಿಯಲ್ಲಿ ಎಲ್ಲಾ ಭಾಷೆಯ ನಾಟಕಗಳು ನೋಡಲು ಸಿಗುತ್ತವೆ. ಆದರೆ, ಕರ್ನಾಟಕದಲ್ಲಿ ಈ ಸೌಲಭ್ಯ ಸಿಗಲಾರದು. ನಾನಿನ್ನೂ ಆಶಾಭಾವನೆ ಕೈ ಬಿಟ್ಟಿಲ್ಲ. ಕೆಲವು ಯುವ ಕಲಾವಿದರು ಬೆಳೆಯುತ್ತಿದ್ದಾರೆ.

ನನ್ನ ಪ್ರಶ್ನೆ : ಈಗ ಒಳ್ಳೆಯ ನಾಟಕವನ್ನು ಆಯ್ಕೆ ಮಾಡುವುದು ಹೇಗೆ ? ಯಾವ ಮಾನದಂಡದಿಂದ ಗುರುತಿಸಬೇಕು?

ಸುವರ್ಣ-ನನ್ನ ಪ್ರಕಾರ ನಾಲ್ಕು ಸೂತ್ರಗಳನ್ನು ಇಲ್ಲಿ ಗಮನಿಸಬೇಕು. ಮೊದಲನೆಯದಾಗಿ ‘ಸಿಲೆಕ್ಷನ್ ಆಫ್ ಪ್ಲೇ ‘.ನಾಟಕವನ್ನು ಯಾವ ಪ್ರೇಕ್ಷಕರಿಗೆ ಮಾಡುತ್ತಿದ್ದೇವೆ ಎಂಬ ಕಲ್ಪನೆ ಇರಬೇಕು. ಊರಿನಿಂದ ಊರಿಗೆ ಪ್ರೇಕ್ಷಕರೂ ಬದಲಾಗುತ್ತಲೇ ಇರುತ್ತಾರೆ. ಕೇವಲ ಕಾಮಿಡಿ ಬುದ್ದಿಜೀವಿಗಳಿಗೆ ಬೇಡ, ಕಾರ್ಮಿಕ ಸಮಸ್ಯೆ ಇತರರಿಗೆ ಬೇಡ. ಹಾಗಾಗಿ ಯಾರಿಗೆ ಈ ನಾಟಕ ಮಾಡುತ್ತಿದ್ದೀರಿ? ಎನ್ನುವುದರ ಗಮನ ಇರಬೇಕು. ಎರಡನೆಯದಾಗಿ ಬಜೆಟ್. ಕೈಯಲ್ಲಿ ದುಡ್ಡಿಲ್ಲದಿದ್ದರೆ ದೊಡ್ಡ ನಾಟಕವನ್ನು ಆಡಲು ಹೋಗಿ ಕಳಪೆ ಪ್ರಯೋಗ ನೀಡುವುದು ತಪ್ಪು. ಮೂರನೆಯದಾಗಿ ನಿರ್ದೇಶಕ ಅವನ ಸಾಮರ್ಥ್ಯಕ್ಕೆ ತಕ್ಕಂತೆ ನಾಟಕವನ್ನು ಆಯ್ಕೆ ಮಾಡಬೇಕು. ದೊಡ್ಡವರ ನಾಟಕಗಳನ್ನೇ ತಾನು ಆಡಿದರೆ ಹೆಸರು ಬರುವುದು ಎಂದು ಗಿರೀಶ್ ಕಾರ್ನಾಡರ ಅಥವಾ ಈಡಿಪಸ್ ನಾಟಕಗಳನ್ನು ಮುಟ್ಟಲು ಹೋಗುವಾಗಲೂ ಯೋಚಿಸಬೇಕು. ನಿರ್ದೇಶಕರಿಗೆ ಸರಿಯಾಗಿ ನಾಟಕ ಅರ್ಥವಾಗದಿದ್ದರೆ ಯಾಕೆ ಆಯ್ಕೆ ಮಾಡಬೇಕು?

ನಾಲ್ಕನೆಯದಾಗಿ ನಾಟಕ ಆಯ್ಕೆ ಮಾಡಿದ ನಂತರ ಅದಕ್ಕೆ ಸರಿಯಾದ ಟೀಮ್ (ತಂಡ) ತನ್ನಲ್ಲಿದೆಯೋ ನೋಡಬೇಕು. ನಾಲ್ಕು ಜನ ಅರ್ಥಾತ್ ನಾಲ್ಕು ಪಾತ್ರ ಒಳ್ಳೆಯದಿದ್ದು ಉಳಿದವರನ್ನು ತುರುಕಿಸಿ ಕೈ ತೊಳೆಯಬಾರದು. ಆಗ ನಾಟಕ ಸಶಕ್ತವಾಗಿ ಮೂಡಿ ಬರುವುದಿಲ್ಲ. ಪ್ರತೀ ಪಾತ್ರಕ್ಕೂ ಸರಿಯಾದ ಕಲಾವಿದರ ಅಗತ್ಯ ಇದ್ದೇ ಇದೆ. ನಾನು ಈ ನಾಲ್ಕು ಸೂತ್ರಗಳಲ್ಲಿಯೇ ನಾಟಕವನ್ನು ಮಾಡುತ್ತಾ ಬಂದವ. ಆ ನಾಟಕ ವಾರ್ಷಿಕೋತ್ಸವದೋ, ವಿಶ್ವವಿದ್ಯಾಲಯದ ಜನರಿಗೋ ,ಹಳ್ಳಿಯ ಪ್ರೇಕ್ಷಕರಿಗೋ ಅಥವಾ ನಗರದ ಪ್ರೇಕ್ಷಕರಿಗೋ….ಇವನ್ನೆಲ್ಲ ಚರ್ಚಿಸಿಯೇ ಮುಂದುವರಿಯುತ್ತೇನೆ.

ನನ್ನ ಪ್ರಶ್ನೆ : ಉರುಳು, ಗೋಂದೋಳು, ಇದು ಯುನಿವರ್ಸಿಟಿ, ಬಾಲೆ ಬಂಗಾರ್… ಹೀಗೆ ತೊಂಭತ್ತರ ದಶಕದ ಕೊನೆಯ ವರ್ಷಗಳಲ್ಲಿ ಮುಂಬಯಿಯ ತುಳು- ಕನ್ನಡ ರಂಗಭೂಮಿಗೆ ಮತ್ತೆ ಜೀವ ತುಂಬುವ ಕೆಲಸ ಮಾಡಿದ್ದೀರಿ. ಆ ಸಮಯ ಹೊಸ ಸಮಸ್ಯೆಗಳನ್ನು  ಎದುರಿಸಿದ್ದೇನಾದರೂ ಇದೆಯಾ?

ಸುವರ್ಣ- ಅಂಥದ್ದೇನೂ ಇಲ್ಲ. ಹತ್ತು ವರ್ಷ ನಾಟ್ಯ ಅಕಾಡೆಮಿಯ ಡಿಪ್ಲೋಮಾ ಕೋರ್ಸ್ ಮಾಡಿದ ನಂತರ ಕನ್ನಡಿಗರಿಗಾಗಿ ಹೊಸ ರೀತಿಯ ನಾಟಕ ಕೊಡಬೇಕೆಂದು ನಿರ್ಧರಿಸಿದ್ದೆ. ಐವತ್ತರ ದಶಕದಲ್ಲಿ ‘ಉದಯ ಕಲಾ ನಿಕೇತನ’ ಮೂಲಕ ಅನೇಕ ಚಟುವಟಿಕೆಗಳನ್ನು ಮಾಡಿದ್ದೆ. ನಂತರ ಕನ್ನಡ ಕಲಾಕೇಂದ್ರದಲ್ಲೂ ಹತ್ತು ವರ್ಷ ನಾಟಕಗಳನ್ನು ಮಾಡಿದ್ದೆ. ಕನ್ನಡ ಕಲಾಕೇಂದ್ರದ ಎಪ್ಪತ್ತರ ದಶಕದಲ್ಲಿನ ನಾಟಕಗಳನ್ನು ಕಂಡು ಬೆಂಗಳೂರಿನವರೂ ಹೊಗಳುತ್ತಿದ್ದರು. ಆದರೆ, ನಾಟ್ಯ ಅಕಾಡೆಮಿಗೆ ಸೇರಿದ ನಂತರ ಹೊಸ ರೀತಿಯ ಸಿದ್ಧಾಂತದ ನಾಟಕಗಳನ್ನು ಮಾಡಲು ಶುರು ಮಾಡಿದೆ. ಸಂಗೀತ, ನೃತ್ಯಕ್ಕೆ ಇದ್ದಂತೆ ಇಲ್ಲಿ ನಾಟಕಕ್ಕೆ ಗುರು ಬೇಕಿಲ್ಲ ಎಂಬ ಭಾವನೆ ಇದ್ದ ಕಾಲವದು. ಆದರೆ ಸಿದ್ಧಾಂತಗಳನ್ನು ಅರ್ಥೈಸಿದ ನಂತರ ನಾಟಕದ ನೋಟಗಳೂ ಬದಲಾಯಿತು. ಮೊದಲೆಲ್ಲ ನಾಟಕದ ಸ್ಕ್ರಿಪ್ಟ್ ನಲ್ಲಿ ಏನಿತ್ತೋ ಅದನ್ನೇ ಮಾಡುತ್ತಿದ್ದರು. ರಂಗ ಕೃತಿ ಬೇರೆ, ರಂಗ ಪ್ರಯೋಗ ಬೇರೆ. ಹಲವು ಕಲೆಗಳ ಸಂಗಮ ಈ ನಾಟಕ. ಪಾತ್ರವನ್ನು ಒಳಹೊಕ್ಕು ಸ್ವೀಕರಿಸಬೇಕು. ಎಲ್ಲಾ ಪಾತ್ರಗಳು ಸರಿಯಾಗಿ ಹೊಂದಿಕೊಂಡರೆ ಮಾತ್ರ ಥಿಯೇಟರ್ ಎಕ್ಸ್ ಪೀರಿಯನ್ಸ್  ಪ್ರೇಕ್ಷಕರಿಗೆ ಮುಟ್ಟಿಸಲು ಸಾಧ್ಯ. ನಾನೀಗ ಓಲ್ಡ್ ಆಗಿದ್ದೇನೆ. ಈ ಎಲ್ಲವನ್ನು ಹೊಸ ಪೀಳಿಗೆಗೆ ಮುಟ್ಟಿಸಬೇಕು ಎಂಬ ಆಸೆಯಿಂದ ಕೆಲವು ಕಲಾವಿದರನ್ನು ಒಟ್ಟು ಮಾಡಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದೇನೆ. ಗೋರೆಗಾಂವ್ ಕರ್ನಾಟಕ ಸಂಘದ ‘ರಂಗಸ್ಥಳ’ದ ಮೂಲಕ ಹಲವರಿಗೆ ರಂಗಾಸಕ್ತಿ‌ ಮೂಡಿದೆ. ಹೀಗಾದರೆ ಮಾತ್ರ ಒಳ್ಳೆಯ ನಾಟಕ ಕೊಡಲು ಸಾಧ್ಯವಾಗುತ್ತದೆ. ಹೊಸಬರನ್ನು ಬೇಕಾದ ಹಾಗೆ ದುಡಿಸಲು ಅಲ್ಲಿ ಸಾಧ್ಯವಿತ್ತು. ‘ಗೋಂದೋಳು’ , ‘ಇದು ಯುನಿವರ್ಸಿಟಿ , ‘ಬಾಲೆ ಬಂಗಾರ್‌ …ಇವೆಲ್ಲ ಹಲವು ಶೋ ನಡೆದಿವೆ. ಇನ್ನು ‘ಉರುಳು’ ಅನೇಕ ಪ್ರದರ್ಶನ ಕಂಡಿದೆ.ಊರಲ್ಲಿಯೂ ಇದು ಪ್ರಶಂಸೆ ಪಡೆದಿದೆ.(ವರ್ಷ 2000 ತನಕದ ಮಾತು ಇದು.)

ನನ್ನ ಪ್ರಶ್ನೆ : ರಂಗ ಶಿಕ್ಷಣ ತರಬೇತಿ ಶಿಬಿರದ ಮೂಲಕ ಕಲಾವಿದರನ್ನು ಸೃಷ್ಟಿಸಿ ನಾಟಕ ಮಾಡಿದ್ದೀರಿ. ಈ ಬಗ್ಗೆ ಯಾವ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿದ್ದಿರಿ?

ಸುವರ್ಣ-ನಾನು ರಂಗ ಶಿಕ್ಷಣ ತರಬೇತಿ ಶಿಬಿರದ ಅಭ್ಯರ್ಥಿಗಳಿಗೆ ಮೊದಲೇ ಹೇಳಿದ್ದೇನೆ- ಒಳ್ಳೆಯ ಕಲಾವಿದರು ಮಾತ್ರವಲ್ಲ ಒಳ್ಳೆಯ ಪ್ರೇಕ್ಷಕರಾದರೂ ನಮಗೆ ಸಂತೋಷವೇ, ನಾಟಕವೊಂದರಲ್ಲಿ ಕಲಾವಿದರಷ್ಟೇ ಪ್ರೇಕ್ಷಕರೂ ಮುಖ್ಯರು. ನಾಟಕವೊಂದರ ರಂಗ ಪ್ರದರ್ಶನದ ನಂತರ ಅದರ ಪೋಸ್ಟ್ ಮಾರ್ಟಂ ಮಾಡುತ್ತೇನೆ. ಆರ್ಟಿಸ್ಟ್‌ಗಳಲ್ಲಿ ಅವರವರಿಗೆ ಕಂಡು ಬಂದ, ಕೇಳಿ ಬಂದ ಕಮೆಂಟ್ಸ್‌ಗಳ ವಿಚಾರಣೆ ಮಾಡುತ್ತೇನೆ. ಇದಕ್ಕಾಗಿ ಸಣ್ಣ ಮೀಟಿಂಗ್ ಕರೆದು ಎಲ್ಲರ ಅನಿಸಿಕೆಗಳ ಚರ್ಚೆ ನಡೆಸುತ್ತೇನೆ. ಥಿಯೇಟರ್ ಒಂದು ಸೀರಿಯಸ್ ಬ್ಯುಸ್‌ನೆಸ್ ಅಂತ ನಮ್ಮವರು ತಿಳಿಯಬೇಕು.

ನನ್ನಪ್ರಶ್ನೆ : ಕೊನೆಯದಾಗಿ ದೂರದರ್ಶನದಲ್ಲಿ ತಮ್ಮ ಗುಡ್ಡದ ಭೂತ’ ಸೀರಿಯಲ್ ಬಂದಿತ್ತು. ಅನಂತರ ‘ಕಾರಂತ ದರ್ಶನ’ ಬಂತು.ಇದರಲ್ಲಿ  ತಮಗೆ ಸ್ವಲ್ಪ ನೋವಾಗಿತ್ತು ಎಂಬ ಮಾತು ಕೇಳಿದ್ದೆ.‌ ನಿಜ ಎಂದಾದರೆ ಯಾಕೆ ?

ಸುವರ್ಣ- ಮುಖ್ಯವಾಗಿ ‘ಪ್ರಾಯೋಜಕರನ್ನು ಕರೆ ತನ್ನಿ’ ಎನ್ನುವುದು ಅಧಿಕಾರಿಗಳ ಹೇಳಿಕೆ. ‘ಗುಡ್ಡದ ಭೂತ’ದಲ್ಲೂ ನನಗೆ ಲಾಭವೇನೂ ಆಗಲಿಲ್ಲ. ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರ ಜೀವನ ಸಾಧನೆಗಳ ಕುರಿತಾದ ಟಿವಿ ಸರಣಿ ‘ಕಾರಂತ ದರ್ಶನ’ ಕಳೆದ ಮೂರು ವರ್ಷಗಳಿಂದ(ವರ್ಷ 2000 ದಲ್ಲಿ ಹೇಳಿದ ಮಾತು.ಹೀಗೂ ಆಗಿತ್ತು ಎನ್ನುವುದು ತಿಳಿದಿರಲಿ ಎಂದು) ಬೆಂಗಳೂರು ದೂರದರ್ಶನದಲ್ಲಿ ಕೊಳೆಯುತ್ತಿದೆ. ಈ ಬಗ್ಗೆ ಕೇಂದ್ರ ಮಂತ್ರಿ ಅನಂತ್ ಕುಮಾರ್‌ಗೆ ಪತ್ರ ಬರೆದಿದ್ದೆ. ಆದರೆ ದೂರದರ್ಶನ ಅಧಿಕಾರಿಗಳು ಉದಾಸೀನ ಭಾವನೆ ಮಾಡಿದ್ದರು. ಒಟ್ಟಾರೆ ಇದು ಅವಗಣನೆಗೆ ಗುರಿಯಾದಂತೆ ಆವಾಗ ಕಂಡಿತು……

ಮುಗಿಸುವ ಮುನ್ನ :ಸದಾನಂದ ಸುವರ್ಣ ಅವರ  ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ (ರಾಣಿ ಅಬ್ಬಕ್ಕ ಕಾಲನಿ) ಮನೆಗೆ ನಾನು ಅನೇಕ ಸಲ ಭೇಟಿ ನೀಡಿದ್ದೇನೆ. 2004 ರಲ್ಲಿ ನಮ್ಮ ಜೋಕಟ್ಟೆಯ  ಮನೆ ಮಾರಿದ ಘಟನೆಯ  ನಂತರ ನಾನು ಸುವರ್ಣರ ಮನೆ ಸಮೀಪ ಸ್ವಲ್ಪ ದೂರದಲ್ಲಿ  ಮೂರು ತಿಂಗಳ ಕಾಲ ಒಬ್ಬನೇ ಬಾಡಿಗೆ ಮನೆಯಲ್ಲಿದ್ದೆ. ಮುಂದೆ ಸದಾನಂದ ಸುವರ್ಣರ ಮನೆಯ ಮೇಲ್ಗಡೆ ಸಾಹಿತಿ ವಿ.ಗ.ನಾಯಕ ಬಂದರು. ಅವರ ಮಗಳು ಸೀತಾಲಕ್ಷ್ಮಿ ಕರ್ಕಿಕೋಡಿ ವಿಜಯ ಕರ್ನಾಟಕ ದೈನಿಕದಲ್ಲಿದ್ದರು. ಹಾಗೆ ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಸುವರ್ಣರನ್ನೂ , ವಿ.ಗ. ನಾಯಕರನ್ನೂ , ಸೀತಾಲಕ್ಷ್ಮೀ ಅವರನ್ನೂ ಭೇಟಿ ಆಗುತ್ತಿದ್ದೆ. ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ,ಬಹುಕಾಲದ ಗೆಳೆಯ ಯು.ಕೆ.ಕುಮಾರನಾಥ್ ಅವರಲ್ಲಿ ಮಾತಾಡಲು ಹೋಗುವುದನ್ನು ತಪ್ಪಿಸಿದವನಲ್ಲ. ಅಲ್ಲಿ ಸೀತಾಲಕ್ಷ್ಮಿ ಇದ್ದರೆ, ಅವರ ಡ್ಯೂಟಿ ಮುಗಿದಿದ್ದರೆ ತಮ್ಮ ಕಾರಲ್ಲಿ ಸುವರ್ಣರ ಮನೆಗೆ  ಕರೆದೊಯ್ಯುತ್ತಿದ್ದರು.ಅಲ್ಲಿಗೆ ಹೋದಾಗಲೆಲ್ಲ ಸುವರ್ಣರೇ ಮಾಡಿಕೊಡುತ್ತಿದ್ದ ಶರ್ಬತ್  ಮತ್ತು ಬಾಳೆಹಣ್ಣು ಸೇವಿಸಲೇ ಬೇಕಿತ್ತು. ಇದೀಗ  ವಿ.ಗ.ನಾಯಕರು ತಮ್ಮ ಹುಟ್ಟೂರು ಉತ್ತರ ಕನ್ನಡಕ್ಕೆ ತೆರಳಿದ್ದಾರೆ. 2020 ರ  ಕೊರೊನಾ ಕಾಲದ ನಂತರ  ನನ್ನ ತಿರುಗಾಟ ಕಡಿಮೆಯಾಗಿದೆ.ಹಾಗೆ ಇತ್ತೀಚೆಗೆ ನಮ್ಮ ಭೇಟಿ ಆಗಿಲ್ಲ.

ಸದಾನಂದ ಸುವರ್ಣ ಅವರಿಗೆ 90 ರ ಹುಟ್ಟು ಹಬ್ಬದ ಶುಭಾಶಯಗಳು.

———–

ಶ್ರೀನಿವಾಸ  ಜೋಕಟ್ಟೆ , ಮುಂಬೈ

————–

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “‘ತೊಂಭತ್ತರ ಹುಟ್ಟು ಹಬ್ಬದ ಸಂಭ್ರಮ ದಲ್ಲಿ ಸುವರ್ಣರು’”

  1. Sadananda Suvarna ra 90ra huttu habbake hardika subhashaya.
    Jokatteyawara Suvarna ra kurita lekhana samayochitavagide,sihi nenapugalannu namagu sihiyaguvante baradiddare Shrinivas.
    Abhinandane.

  2. ಬಹಳ ನಿಷ್ಠೆಯಿಂದ, ಪ್ರೇಮ ಪೂರ್ವಕವಾಗಿ ಬರೆದಿರುವ ಈ ಲೇಖನ ಇನ್ನೂ ಹಲವೆಡೆ ಬೆಳಕು ಕಾಣಲಿ.
    ಸುವರ್ಣ ರ ಸಾಧನೆ ಮತ್ತು ರಂಗಪ್ರೇಮ ಜನ ಜನಿತವಾಗಲಿ.
    ಅವರಿಗೆ ಹುಟ್ಟಿದ ಹಬ್ಬದ ಶುಭಾಶಯಗಳು.
    ಉತ್ತಮ ಲೇಖನ.
    ಡಾ. ಪ್ರೇಮಲತ ಬಿ.

  3. ನಾ.ದಾಮೋದರ ಶೆಟ್ಟಿ

    ಸುವರ್ಣರ ನವದಶಕಗಳ ಪಕ್ಷಿನೋಟವೂ ಇದಾಗಿದೆ. ಅವರು ಮಂಗಳೂರಲ್ಲಿ ನೆಲೆನಿಂತ ಮೇಲೆ ಮಾಡಿದ ರಂಗಕಾಯಕವೂ ವಿಸ್ತಾರವಾಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter