ಮುಂಬೈಯಲ್ಲಿ ಬೆಳಕು ಕಂಡ ಕನ್ನಡದ ಮೊದಲ ಸಾಮಾಜಿಕ ನಾಟಕದ ಕುರಿತು

ಕನ್ನಡ ವಾಙ್ಮಯಕ್ಕೂ ಮುಂಬಯಿಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯ  ಕುರಿತು ಮಾತನಾಡುವಾಗಲೆಲ್ಲ ಅನೇಕ ಬಾರಿ ಮುಂಬಯಿ ಕಡೆ ಮುಖ ಮಾಡಬೇಕಾಗುತ್ತದೆ. ಕನ್ನಡ ವಾಙ್ಮಯಕ್ಕೆ ಮುಂಬಯಿ ಕೊಟ್ಟ ಕೊಡುಗೆಯೂ ಗಮನಾರ್ಹವಾದುದು. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕ ಎಂಬ ಕೀರ್ತಿಗೆ ಪಾತ್ರವಾದ `ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಅಥವಾ ಕನ್ಯಾವಿಕ್ರಯದ ಪರಿಣಾಮವು’ ಪ್ರಕಟವಾದುದು (1887) ಈ ಮಹಾನಗರಿಯಲ್ಲಿಯೇ. ಇಲ್ಲಿದ್ದುಕೊಂಡೇ ಚುರಮುರಿ ಶೇಷಗಿರಿರಾಯರು (ವೃತ್ತಿಯಲ್ಲಿ ಇಂಜಿನಿಯರ್) ಮೊದಲ ಬಾರಿಗೆ ಶಾಕುಂತಲ ನಾಟಕವನ್ನು (1870) ಕನ್ನಡಕ್ಕೆ ತಂದರು. ಕನ್ನಡ ನಾಟಕಗಳ ಹುಟ್ಟು ಮತ್ತು ಬೆಳವಣಿಗೆಯನ್ನು ಕುರಿತು ಮಾತನಾಡುವಾಗಲೂ ಮುಂಬಯಿ ಮಹತ್ವದ ಸ್ಥಾನಮಾನವನ್ನು ಪಡೆದುಕೊಳ್ಳುತ್ತದೆ.

ಸಿಂಗಾರಾರ್ಯನ ಮಿತ್ರವಿಂದಾ ಗೋವಿಂದ ಕನ್ನಡದ ಮೊದಲ ನಾಟಕ ಎಂಬುದು ವಿದ್ವಾಂಸರ ಅಂಬೋಣ. ಇದೊಂದು ಅನುವಾದಿತ ಗೀತ ನಾಟಕ. ಪದ್ಯ ಗಂಧಿಯಾಗಿರುವ ಈ ಕೃತಿಯನ್ನು ನಾಟಕ ಎಂದು ಕರೆಯುವುದು ಅಷ್ಟು ಸಮಂಜಸವಲ್ಲ. ಆದ್ದರಿಂದ 1870ರಲ್ಲಿ ಮುಂಬಯಿಯಲ್ಲಿ ಬೆಳಕು ಕಂಡ ಚುರಮುರಿ ಶೇಷಗಿರಿ ರಾಯರು  ಅನುವಾದಿಸಿದ `ಶಾಕುಂತಲ ನಾಟಕ’ವು ಕೃತಿಯನ್ನು ಕನ್ನಡದ ಮೊದಲ ನಾಟಕವೆಂದು ನಾವು ಗುರುತಿಸಬೇಕಾಗುತ್ತದೆ. ಆದರೂ ಇದೊಂದು ಸ್ವತಂತ್ರ ನಾಟಕವಲ್ಲ ಎಂಬುದನ್ನು ಮರೆಯುವಂತಿಲ್ಲ. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕವು 1887ರಲ್ಲಿ ಮುಂಬಯಿಯಲ್ಲಿ ಅಚ್ಚಾಗಿ ಬೆಳಕು ಕಂಡಿತು.  ಅದರ ಶೀರ್ಷಿಕೆಯೇ ನಮ್ಮ ಗಮನ ಸೆಳೆಯುತ್ತದೆ. `ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಅಥವಾ ಕನ್ಯಾವಿಕ್ರಯದ ಪರಿಣಾಮವು’ ಈ ನಾಟಕದ ಕರ್ತೃ ಯಾರೆಂಬುದು ಮೊದಲ ಆವೃತ್ತಿಯಲ್ಲಿ ದಾಖಲಾಗಿಲ್ಲ. ಅದರ ಬದಲಾಗಿ ಈ ಪುಸ್ತಕವು ಹವ್ಯಕ ಹಿತೇಚ್ಛು ಒಬ್ಬ ವಿದ್ವಾಂಸರಿಂದ ರಚಿಸಲ್ಪಟ್ಟಿದ್ದನ್ನು (1887) ಮುಂಬಯಿ ಭಾರತೀ ಛಾಪಖಾನೆಯ ಅಧ್ಯಕ್ಷರು ತಮ್ಮ ಮುದ್ರಣಾಲಯದಲ್ಲಿ ಛಾಪಿಸಿದರು’. (ಹೆಚ್ಚಿನ ಮಾಹಿತಿಗೆ ಡಾ. ಶಾಲಿನಿ ರಘುನಾಥ ಅವರ `ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ’ ಒಂದು ಅಧ್ಯಯನ ಈ ಕೃತಿಯನ್ನು ನೋಡಬಹುದು).

ಪ್ರಸ್ತುತ ನಾಟಕಕ್ಕೆ ಎರಡು ಶಿರೋನಾಮೆಗಳಿವೆ. ನಾವಿಂದು ಬರೇ `ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ’ ಎಂದು ಹೇಳಿಬಿಡುತ್ತೇವೆ. ಈ ನಾಟಕದ ಸಾಧನೆ ಹಾಗೂ ಅದರ ಆಶಯದ ದೃಷ್ಟಿಯಲ್ಲಿ ಅದರ ಇನ್ನೊಂದು ಶೀರ್ಷಿಕೆ ನಮಗೆ ಮುಖ್ಯವಾಗುತ್ತದೆ. ಅದು `ಕನ್ಯಾ ವಿಕ್ರಯದ ಪರಿಣಾಮವು’. ಆದ್ದರಿಂದ ನಾವು ಆ ನಾಟಕವನ್ನು ಉಲ್ಲೇಖಿಸುವ ಹಾಗೂ ದಾಖಲಿಸುವ ಸಂದರ್ಭದಲ್ಲಿ ಅದರ ಮೊದಲ ಮುದ್ರಣದಲ್ಲಿ ಅಚ್ಚಾದಂತೆ `ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಅಥವಾ ಕನ್ಯಾವಿಕ್ರಯದ ಪರಿಣಾಮವು’ ಎಂದು ಇಟ್ಟುಕೊಳ್ಳಬೇಕು. ಇಗ್ಗಪ್ಪ ಹೆಗಡೇ ಮಾಡಿಕೊಂಡ ವಿವಾಹವು ಈ ನಾಟಕದ ಎಲ್ಲ ದುರಂತಗಳಿಗೆ ಕಾರಣವಾಗುತ್ತದೆ ಎಂಬ ಅಂಶ ನಿಜವಾದರೂ ಅಲ್ಲಿ ಕನ್ಯಾ ವಿಕ್ರಯದಂತಹ ಅನಿಷ್ಠ ಪದ್ಧತಿಯನ್ನು, ಅದರ ಪರಿಣಾಮಗಳನ್ನು ಕುರಿತು ನಮ್ಮ ಗಮನ ಸೆಳೆಯುವುದೇ ಲೇಖಕರ ಮುಖ್ಯ ಉದ್ದೇಶ ಎಂಬುದು ನಾಟಕದ ಅಂತ್ಯಭಾಗದಲ್ಲಿ ಬರುವ ವಿಸ್ತøತ ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಇಗ್ಗಪ್ಪ ಹೆಗಡೇ. ಈಗಾಗಲೇ ಎರಡು ಮದುವೆ ಮಾಡಿಕೊಂಡ ಅರವತ್ತರ ಪ್ರಾಯದವನು. ಆದರೂ ಸಂತಾನವಿಲ್ಲ. ಮಕ್ಕಳ ಹಂಬಲದಿಂದ ಮೂರನೆಯ ಮದುವೆಗೆ ಈಗ ಮತ್ತೆ ಮುಂದಾಗಿದ್ದಾನೆ. ಅದಕ್ಕಾಗಿ ಆತ ತನ್ನ ಅಳಿದುಳಿದ ಆಸ್ತಿಯನ್ನು ಅಡ ಇಡಲು ಮುಂದಾಗುತ್ತಾನೆ. ಎರಡನೆ ಮದುವೆಗಾಗಿ ಮಾಡಿಕೊಂಡ ಸಾಲವೇ ತೀರದಿರುವಾಗ ಕನ್ಯಾಶುಲ್ಕ ಕೊಟ್ಟು ಮೂರನೆಯ ಮದುವೆಗೆ ಈ ಮುದುಕ ಮುಂದಾಗಿದ್ದಾನೆ. ದಲ್ಲಾಳಿಯಾದ ಗಣೇಶ ಭಟ್ಟ ಈ ಸಂದರ್ಭ ನೋಡಿಕೊಂಡು ಎರಡೂ ಕಡೆಯಿಂದ ಸಾಕಷ್ಟು ಹಣ ತಿಂದು ಸುಳ್ಳು ಜಾತಕ ಹೊಂದಿಸಿ ಮದುವೆ ಮಾಡಿಸಿಯೇ ಬಿಡುತ್ತಾನೆ. ಮದುವೆಯಾದ ಕೆಲದಿನಗಳಲ್ಲೇ ಇಗ್ಗಪ್ಪ ಹೆಗಡೇ ಕಾಮಾಲೆ ರೋಗದಿಂದ ನರಳಿ ಸಾವನ್ನಪ್ಪುತ್ತಾನೆ. ಇಗ್ಗಪ್ಪ ಹೆಗಡೇ ಮದುವೆಗೆ ಕಾರಣನಾದವನು ಅವನ ಭಾವ ವಾಸಪ್ಪ ಹೆಗಡೆ. ಈತ ಈ ನಾಟಕದ ಖಳನಾಯಕ. ಮದುವೆಯ ನೆಪದಲ್ಲಿ ಇಗ್ಗಪ್ಪ ಹೆಗಡೆಯ ; ಅವನ ಹೆಂಡತಿ ಸಾವಿತ್ರಿಯ ಬದುಕನ್ನು ಈತನೇ ಮೂರಾಬಟ್ಟೆ ಮಾಡಿದ. ಈ ವಾಸಪ್ಪ ಹೆಗಡೆಯ ನಾಟಕಕ್ಕೆ ಬಲಿಯಾಗಿ ಇಗ್ಗಪ್ಪ ಹೆಗಡೆಯ ಮೂರನೆಯ ಪತ್ನಿ ಸಾವಿತ್ರಿ ಗರ್ಭಿಣಿಯಾಗುತ್ತಾಳೆ. ಸಮಾಜಕ್ಕೆ ಹೆದರಿ ಗರ್ಭಖೂನಿ ಮಾಡಲಾಗುತ್ತದೆ. ಇದು ಬಹಿರಂಗಗೊಂಡು ಅವರು ಕೋರ್ಟು ಕಚೇರಿ ಹತ್ತಬೇಕಾಗುತ್ತದೆ. ಆರೋಪಿಗಳಿಗೆ ಸಣ್ಣ ಪ್ರಮಾಣದ ಶಿಕ್ಷೆಯೂ ಆಗುತ್ತದೆ. ಇಲ್ಲಿಯ ಸಾಮಾಜಿಕ ದೋಷಗಳೂ ಬೆಳಕಿಗೆ ಬರುತ್ತವೆ. ಒಟ್ಟಿನಲ್ಲಿ ಜ್ವಲಂತ ಸಾಮಾಜಿಕ ಸಮಸ್ಯೆಯೊಂದರ ಕಿರುಚಿತ್ರವೇ ಇಲ್ಲಿಯ ಕಥಾನಕ.

ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳಕು ಕಂಡ ನಾಟಕವಿದು. ಇಂದಿಗೂ ನಮ್ಮ ಸಾಮಾಜಿಕ ಹಾಗೂ ಸಾಹಿತ್ಯಿಕ ಸಂದರ್ಭದಲ್ಲಿ ಪ್ರಸ್ತುತವೇ ಆಗಿದೆ. ಮದುವೆ ಎಂಬ ಸಂಸ್ಥೆ ಇರುವ ತನಕ ಈ ನಾಟಕಕ್ಕೆ ಮಹತ್ವ ಇದ್ದೇ ಇದೆ. ಇಂದಿಗೂ ಮದುವೆ ಸಂಸ್ಥೆಯ ವಿದ್ಯಮಾನ ಎಳ್ಳಷ್ಟೂ ಸುಧಾರಿಸಿಲ್ಲ. ಹೆಣ್ಣು ಹೆತ್ತವರ ಗೋಳು ತಪ್ಪಿಲ್ಲ. ಈ ನಾಟಕ `ತೆರ’ದ ಬಗೆಗೆ ಮಾತನಾಡುತ್ತದೆ. ಅದು ವಧುದಕ್ಷಿಣೆ. ಇಂದು ಬೇರೊಂದು ರೂಪದಲ್ಲಿ ಅದು ಕಾಣಿಸಿಕೊಂಡಿದೆ. ಅದೇ ವರದಕ್ಷಿಣೆ. ಇಲ್ಲಿಯೂ ಸಮಸ್ಯೆ ಜ್ವಲಂತ ಹಾಗೂ ಜಟಿಲವಾದುದೇ ಆಗಿದೆ. ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ, ಅನ್ಯಾಯಗಳಿಗೆ ಇತಿಮಿತಿ ಇಲ್ಲ. ಹೀಗಿರುವಾಗ ನೂರು ವರ್ಷಗಳ ಹಿಂದೆಯೇ ಇಂಥ ಒಂದು ಸಾಮಾಜಿಕ ವಿಷಯವನ್ನು ಎತ್ತಿಕೊಂಡು ನಾಟಕ ಬರೆದು ನಮ್ಮನ್ನು ಎಚ್ಚರಿಸಿದ ಶಾಸ್ತ್ರಿಗಳ ದೃಷ್ಟಿಕೋನ ಪ್ರಗತಿಶೀಲ, ಕ್ರಾಂತಿಕಾರಕ, ಪುರೋಗಾಮಿ ಎನ್ನದೇ ಮತ್ತೇನೆನ್ನಬೇಕು. ಪ್ರಸ್ತುತ ನಾಟಕದಲ್ಲಿ ಹವ್ಯಕ ಸಮಾಜದ ಉಲ್ಲೇಖವಿದೆ. ಇಲ್ಲಿಯ ಸಮಸ್ಯೆ ಅವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಇಡೀ ಸಮಾಜಕ್ಕೆ ಅನ್ವಯವಾಗುತ್ತದೆ. ಮದುವೆಯ ವಿಚಾರದಲ್ಲಿ ನಡೆಯುತ್ತಿರುವ ಶೋಷಣೆ, ಅನ್ಯಾಯ ಹಾಗೂ ಸಂಘರ್ಷಗಳಿಂದ ಯಾವ ಸಮಾಜವೂ ಮುಕ್ತವಾಗಿಲ್ಲ ಎಂಬುದು ವಾಸ್ತವ ಸಂಗತಿ. ಕನ್ಯಾಶುಲ್ಕ, ಸಾಲಬಡ್ಡಿ ವ್ಯವಹಾರ, ಲಂಚಾವತಾರ, ಕನ್ಯಾವಿಕ್ರಯ, ಹೆಣ್ಣು ಹೆತ್ತವರ ಕಳವಳ, ಮದುವೆ ಎಂಬ ಸಂಸ್ಥೆಯಲ್ಲಿನ ದಲ್ಲಾಳಿ ವ್ಯವಹಾರ, ಅನಕ್ಷರತೆ ಒಟ್ಟಿನಲ್ಲಿ ಆಗಿನ ಕಾಲದ ಸಾಮಾಜಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನವನ್ನು ಶಾಸ್ತ್ರಿ ಅವರು ಈ ನಾಟಕದಲ್ಲಿ ಮಾಡಿದ್ದಾರೆ.

ನಾಟಕವೊಂದು ಕೃತಿ ರೂಪದಲ್ಲಿ ಪ್ರಕಟವಾಗಿ ಓದುಗನ ಕೈ ಸೇರಬಹುದು. ಆದರೂ ಅದು ಸಾರ್ಥಕವಾಗುವುದು ರಂಗಪ್ರಯೋಗದಿಂದಲೇ. ನಾಟಕ ಓದುವುದಕ್ಕಾಗಿ ಇರುವುದಲ್ಲ ಎಂಬ ಅಭಿಪ್ರಾಯವೂ ಇದೆ. ಆದರೆ ಇವತ್ತು ಕಾಳಿದಾಸ, ಷೇಕ್ಸ್‍ಪಿಯರ್ ಜಗತ್ತಿನಾದ್ಯಂತ ಜನಪ್ರಿಯರಾಗಿರುವುದು ಅವರ ಕೃತಿಗಳನ್ನು ಜನ ಓದಿಯೇ. ನಾಟಕ ಸಾಹಿತ್ಯವೂ ಸಾಕಷ್ಟು ಜನಪ್ರಿಯವಾಗಿದೆ. ಕ. ವೆಂ. ಶಾಸ್ತ್ರಿ ಅವರ `ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಅಥವಾ ಕನ್ಯಾವಿಕ್ರಯದ ಪರಿಣಾಮವು’ ಈ ನಾಟಕದ ಉದ್ದೇಶವೇ ಬೇರೆ ಎಂದು ಗೊತ್ತಾಗುತ್ತದೆ. ಯಾವುದೋ ಒಂದು ನಾಟಕ ಕಂಪನಿಯವರ ಡಿಮಾಂಡ್ ಮೇಲೆ ಈ ನಾಟಕ ಹುಟ್ಟಿಕೊಂಡದ್ದಲ್ಲ. ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಅನ್ಯಾಯ, ಲಂಚಕೋರತನ ಇವುಗಳನ್ನು ಎತ್ತಿ ತೋರಿಸಿ ಅವುಗಳ ವಿರುದ್ಧ ಎತ್ತಿದ ಪ್ರತಿಭಟನೆಯ ಧ್ವನಿ ಈ ನಾಟಕ. ಒಂದು ರೀತಿಯಲ್ಲಿ ಈ ನಾಟಕದ ಧೋರಣೆ `ಬಂಡಾಯ ಸ್ವರೂಪ’ದ್ದು. ತನ್ನ ಸಮಾಜದ ಲೋಪದೋಷಗಳನ್ನು ಯಾವುದೇ ಭಿಡೆ ಮುಲಾಜಿಲ್ಲದೇ ಯಥಾವತ್ತಾಗಿ ಇಲ್ಲಿ ನಾಟಕಕಾರರು ಅಭಿವ್ಯಕ್ತಪಡಿಸಿದ್ದಾರೆ. ಸಮಾಜ ವಿಮರ್ಶೆಯೂ ಈ ನಾಟಕದಲ್ಲಿ ಕೇಳಿಬರುವ ಮತ್ತೊಂದು ಮುಖ್ಯ ಧ್ವನಿ. ನಾಟಕದ ವಸ್ತು, ಭಾಷೆ, ವಿಷಯಗಳಲ್ಲಿಯೂ ಕ್ರಾಂತಿಕಾರಿ ನಿಲುವೇ ಎದ್ದು ಕಾಣುತ್ತದೆ. ನಾಟಕ ಧ್ವನಿಸುವ ಕಟುವಾಸ್ತವವಾದಿ ಧೋರಣೆಯಿಂದಾಗಿ ಅದು ನಮ್ಮ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವೆಂಕಟರಮಣ ಶಾಸ್ತ್ರಿ ಅವರು ಈ ನಾಟಕವನ್ನು ಆಡು ನುಡಿಯಲ್ಲೇ ರಚಿಸಿದ್ದಾರೆ. ಕನ್ನಡದಲ್ಲಿ ಆಡು ನುಡಿಯಲ್ಲೇ ರಚನೆಯಾದ ಮೊದಲ ಕೃತಿ ಇದೆಂದರೂ ತಪ್ಪಾಗಲಿಕ್ಕಿಲ್ಲ. ಪತ್ರಿಕೋದ್ಯಮದ ಎಂದಿನ ಕನ್ನಡ ಭಾಷೆಯನ್ನು ಬದಿಗೊತ್ತಿ ಶಾಸ್ತ್ರಿ ಅವರು ತಮ್ಮ ಮನೆ ಮಾತಿನಲ್ಲಿ (ಹವ್ಯಕ ಉಪಭಾಷೆಯಲ್ಲಿ) ಈ ನಾಟಕವನ್ನು ಎರಕ ಹೊಯ್ದಿದ್ದಾರೆಂಬುದು ಗಮನಾರ್ಹ ಅಂಶವಾಗಿದೆ. ನಾವಿಂದು ಉಪಭಾಷೆಯ ಕುರಿತು ಸಾಕಷ್ಟು ಚರ್ಚೆಯಲ್ಲಿ ತೊಡಗಿಕೊಂಡಿರುವಾಗಲೂ ನಮ್ಮ ಲೇಖಕರು ಆಡುನುಡಿಯಲ್ಲಿ ಕೃತಿಯನ್ನು ರಚಿಸಲು ಹಿಂದೇಟು ಹಾಕುತ್ತಿರುವಾಗ ಶಾಸ್ತ್ರಿ ಅವರು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲೇ ಮಾಡಿದ ಸಾಹಸ ಯಾರನ್ನೂ ಬೆರಗುಗೊಳಿಸುತ್ತದೆ. ಸಹಜ ಸಂಭಾಷಣೆ ಈ ನಾಟಕದ ಧನಾತ್ಮಕ ಅಂಶ. ನಾಟಕ ಆರಂಭವಾಗುವುದೇ ಹೀಗೆ-

ವಾಸ :    ಭಾವಾ, ಇತ್ತಲಾಗಿ ಬಗೇಲಿ ಸಂಚಿತಾ ನೋಣೋ ಯಂತಕ್ಕೋ ನೋಡು; ಇತ್ತಲಾಗಿ ಬೊಪ್ಪ ಹೊಗೇಸಪ್ಪು ಅರಕಾಸೀಗೆ ಕೊಟ್ರೆ ಬ್ಯಾಡಾ, ಬರೀ ಮನೇಕರಿ ತಿಂದ ಹಾಗೇ ಆಗ್ತು.

ಇಗ್ಗ :       ಹೌದೋ ಹಾಳಾಗಿ, ಯಂಗಂತ್ರಾ ಆ ಖರ್ಮದ ಹೊಗೇಸಪ್ಪ ತಿಂಬೋ ಅಂಭ್ಹಾಗೇ ಕಾಣತಿಲ್ಲೆ. ನಿಞÉೀದಿವ್ಸ ಮಾತ್ರ ಆ ಮಾರಿ ಹುಚ್ಚಂಣ ಬಂಯಿದ್ದಾ, ಆಂವಂದ್ ಚೂರ ಹೊಗೇಸಪ್ಪ ಕೊಟ್ಟಿದ್ದಾ ನೋಡು, ಅದಮಾತ್ರ ವಂಚೂರ ತಿಂದದ್ದೇ ಸರಿ……

ಹೊಗೇಸಪ್ಪಿನ ಪ್ರಸ್ತಾಪದಿಂದ ಬಿಚ್ಚಿಕೊಳ್ಳುವ ನಾಟಕ ಇತರ ವಿಷಯಗಳನ್ನು ಚರ್ಚಿಸಲು ಎಡೆ ಮಾಡಿಕೊಡುತ್ತದೆ. ಶಾಸ್ತ್ರಿ ಅವರು ನಾಟಕದಲ್ಲಿ ಆಡುಭಾಷೆಯನ್ನು ಬಳಕೆ ಮಾಡಲು ಚುರಮುರಿ ಶೇಷಗಿರಿರಾಯರಿಂದ ಪ್ರೇರಣೆ ಪಡೆದುಕೊಂಡಿರಬಹುದು; 1870ರಲ್ಲಿ ಮುಂಬಯಿಯಲ್ಲೇ ಪ್ರಕಟವಾದ ಚುರಮುರಿ ಅವರ `ಶಾಕುಂತಲ ನಾಟಕವು’ ಕೃತಿಯನ್ನು ಶಾಸ್ತ್ರಿ ಅವರು ಗಮನಿಸಿರಬಹುದು. ಅದರಲ್ಲಿ ಉತ್ತರ ಕರ್ನಾಟಕದ ಆಡುಭಾಷೆ ಬಳಕೆಯಾದುದನ್ನು ಕಾಣಬಹುದು.

ಪ್ರಸ್ತುತ ನಾಟಕದ ಆರಂಭದ ಭಾಗದಲ್ಲಿ ಇಗ್ಗಪ್ಪ ಹೆಗಡೇ ಮಾಡಿಕೊಂಡ ವಿವಾಹದ ವಿಚಾರವಿದ್ದರೆ ಕೊನೆಯಲ್ಲಿ ಕನ್ಯಾವಿಕ್ರಯದ ಪರಿಣಾಮ ವಿಶೇಷವಾಗಿ ಬಂದಿದೆ. ಶಿರಸಿಯ ಸೆಷನ್ ಕೋರ್ಟಿನಲ್ಲಿ ಲೇಖಕರು ಜಡ್ಜರ ಬಾಯಿಂದ ಆಡಿಸಿರುವ ಮಾತು ಸಮಾಜೋ ಸಾಂಸ್ಕøತಿಕ ಅಧ್ಯಯನದ ಸಂದರ್ಭದಲ್ಲಿ ನಮಗೆ ಮುಖ್ಯವಾಗುತ್ತದೆ. `ಹೆಣ್ಣು ಹುಡುಗಿಯರ ತಾಯಿತಂದೆಗಳು ತಮ್ಮ ತಮ್ಮ ಮಕ್ಕಳನ್ನು ವಿಕ್ರಯ ರೂಪದಲ್ಲಿ ವಿವಾಹ ಮಾಡುವಾಗ ವರನ ಕುಲ, ಶೀಲ, ವಯೋರೂಪಗಳನ್ನು ತುಸು ಮಾತ್ರವೂ ಲಕ್ಷ್ಯಕ್ಕೆ ತರದೆ ಕೇವಲ ದ್ರವ್ಯ ಲೋಭದಿಂದ ಬೇಕಾದಂಥ ವ್ಯಂಗ್ಯರಿಗೆ ಕೊಟ್ಟು ಬಿಡುತ್ತಾರೆ. ಒಬ್ಬ ಪುರುಷನಿಗೆ ಒಬ್ಬಳೇ ಸ್ತ್ರೀಯು. ಹೇಗೆ ವಿದುರ ವೃದ್ಧರು ತಮಗೊಬ್ಬರಿಗೆ ಎರಡು ಮೂರು ವಿವಾಹಗಳನ್ನು ಮಾಡಿಕೊಳ್ಳಲಿಕ್ಕೆ ಪ್ರಾರಂಭಿಸುವರೋ, ಆಗ ತರುಣ ಸ್ತ್ರೀಯರು ತಮ್ಮ ವೃದ್ಧ ವಿದುರ ಪತಿಗಳಿಂದ ಮನಃಪೂರಿತ ರತಿಸುಖಕ್ಕೆ ಪರಾಙ್ಮುಖರಾಗಿ ವ್ಯಭಿಚಾರ ಮಾಡುತ್ತಾರೆ. ಯೋಗ್ಯಾ ಯೋಗ್ಯ ವಿಚಾರಶಕ್ತಿ ಬರುವುದಕ್ಕೆ ವಿದ್ಯಾಪ್ರಸಾರವು ಏನೇನೂ ಇರುವುದಿಲ್ಲ. ವಿದ್ಯೆಯೆಂದರೆ ಎಲ್ಲಾದರೂ ಭಟ್ಟ ಭಿಕ್ಷುಕರು ಬಾಯಿಯಿಂದ ಹೇಳಿ ದುಡ್ಡು ಕೇಳುವ ಮಂತ್ರ ತಂತ್ರಗಳೆಂದು ತಿಳಿಯುತ್ತಾರೆ’ ಇಲ್ಲಿ ನ್ಯಾಯಾಧೀಶರು ಪಟ್ಟಿ ಮಾಡುವ ದೋಷಗಳೆಲ್ಲ ನಾಟಕಕಾರರು ಹೇಳುವ ಮಾತುಗಳೇ ಆಗಿವೆ.

ಸಮಾಜದ ಸ್ವಾಸ್ಥ್ಯ ಹಾಗೂ ಮದುವೆ ಎಂಬ ಸಂಸ್ಥೆಯ ಸುಧಾರಣೆ ಅತ್ಯಂತ ತುರ್ತಿನ ಸಂಗತಿ ಎಂಬುದನ್ನು ಶಾಸ್ತ್ರಿ ಅವರು ಕಳೆದ ಶತಮಾನದಲ್ಲೇ ಮನಗಂಡಿದ್ದರು. ಈ ಎಲ್ಲ ದುರಂತಗಳಿಗೆ ಮುಖ್ಯ ಕಾರಣ ನಮ್ಮ ಸಮಾಜದಲ್ಲಿರುವ ಅನಕ್ಷರತೆ. ಆಧುನಿಕ ಶಿಕ್ಷಣದ ಅಗತ್ಯತೆಯನ್ನೂ ಈ ನಾಟಕ ಒತ್ತಿ ಹೇಳಿದೆ. ಮಂತ್ರತಂತ್ರದಿಂದ ಹಣ ಕೀಳುವುದು ಶಿಕ್ಷಣವಲ್ಲ. ವಿದ್ಯೆ ಎಂಬುದು ಸದಸದ್ವಿವೇಕವನ್ನು ಕಂಡುಕೊಳ್ಳಲು, ಸ್ವಯೋಚನೆಗೆ ಅನುವು ಮಾಡಿಕೊಡಬೇಕೆಂಬ ದಿಟ್ಟ ನಿಲುವು ಈ ನಾಟಕದಲ್ಲಿದೆ. ಸಾಮಾಜಿಕ ಸುಧಾರಣೆಯನ್ನು ಎತ್ತಿ ಹಿಡಿದ ಈ ನಾಟಕ ನಮ್ಮ ಸಾಮಾಜಿಕ ಹಾಗೂ ಸಾಹಿತ್ಯಿಕ ಸಂದರ್ಭದಲ್ಲಿ ಪ್ರಸ್ತುತವೇ ಆಗಿದೆ.

*ಡಾ. ಜಿ. ಎನ್. ಉಪಾಧ್ಯ

ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು

ಮುಂಬಯಿ ವಿಶ್ವವಿದ್ಯಾಲಯ, ವಿದ್ಯಾನಗರಿ

ಮುಂಬೈ- 400 098

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

12 thoughts on “ಮುಂಬೈಯಲ್ಲಿ ಬೆಳಕು ಕಂಡ ಕನ್ನಡದ ಮೊದಲ ಸಾಮಾಜಿಕ ನಾಟಕದ ಕುರಿತು”

  1. Raghavendra Mangalore

    “ಇಗ್ಗಪ್ಪ ಹೆಗಡೆ ಮದುವೆ ಪ್ರಹಸನ ಅರ್ಥಾತ್ ಕನ್ಯಾ ವಿಕ್ರಯದ ಪರಿಣಾಮವು” ಕನ್ನಡದ ಮೊದಲ ನಾಟಕದ ಕಥೆಯ ಸಾರಾಂಶ ಆಗಿನ ಕಾಲದ ವಸ್ತು ಸ್ಥಿತಿ ಬಿಂಬಿಸಿದೆ. ಓದಿ ಸಂತೋಷವಾಯಿತು. ಅದನ್ನು ನೆನಪು ಮಾಡಿದ ಡಾ. ಜಿ. ಏನ್. ಉಪಾಧ್ಯ ಸಾರ್ ಅವರಿಗೆ ಧನ್ಯವಾದಗಳು

  2. Suuperb👌ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಹವ್ಯಕ ನಾಟಕ ಚೆನ್ನಾಗಿದ್ದು ನಾನು ಚಿಕ್ಕವಳಿದ್ದಾಗ ನಾಟಕ ನೋಡಿದ್ದೆ.ಈಗ ಓದಿ ತುಂಬಾ ಖುಷಿಯಾಯ್ತು🙏

  3. ಚಿಂತನೀಯವೂ, ಸಮರ್ಪಕವೂ ಆಗಿರುವ ಸೊಗಸಾದ ವಿಮರ್ಶೆ.ಕೃತಿ ಮತ್ತು ಕೃತಿಕಾರರಿಗೆ ಅರ್ಹವಾಗಿ ಸಲ್ಲಬೇಕಾದ ಗೌರವ. ಅಭಿನಂದನೆಗಳು.

  4. Dr B. Janardana Bhat

    ತುಂಬಾ ಚೆನ್ನಾಗಿದೆ ಲೇಖನ. ನಾಟಕದ ಸಮಗ್ರ ಪರಿಚಯವಾಯಿತು.‌ ಧನ್ಯವಾದಗಳು ಡಾ. ಉಪಾಧ್ಯರಿಗೂ ಸಂಪಾದಕರಿಗೂ.

  5. Managala+Prakash+Shetty

    ತುಂಬಾ ಚೆನ್ನಾಗಿ ವಿವರವಾಗಿ ಮೂಡಿದೆ ಲೇಖನ

  6. ಸುಬ್ರಾಯ ಮತ್ತೀಹಳ್ಳಿ.

    ಶಿಷ್ಟಕನ್ನಡವೇ ಬಲಿಷ್ಠಗೊಳ್ಳದ ಆ ಕಾಲದಲ್ಲಿ ಶಾಸ್ತ್ರಿಗಳು ಆಡುಭಾಷೆಯ ಮೂಲಕ ಒಂದು ಸಮುದಾಯದ ದೋಷ ದೌರ್ಬಲ್ಯವನ್ನು ಧೈರ್ಯದಿಂದ ಅಭಿವ್ಯಕ್ತಿಸಿದರೂ ತನ್ನ ಸಮುದಾಯದ ಸಿಟ್ಟಿಗೆ ಎರವಾಗದಿರಲು ʻʻ ಹವ್ಯಕ ಹಿತೇಚ್ಛುʼʼ ಎಂಬ ನಾಮಧೇಯ ಧರಿಸುತ್ತಾರೆ. ಮುಂಬಯಿಯಲ್ಲಿದ್ದೇ ಕನ್ನಡ ಪತ್ರಿಕೆ ಪ್ರಕಟಿಸುವ ಸಾಹಸಕ್ಕೆ ಇಳಿಯುತ್ತಾರೆ.
    ಇದೀಗ ಶಿಷ್ಟಕನ್ನಡ ಸೊಗಸಾಗಿ ಬೆಳೆದಿದೆ ನಿಜ. ಆದರೆ ಅದೂ ತನ್ನ ಸ್ವಾದವನ್ನು ಕಳೆದುಕೊಳ್ಳುತ್ತಿರುವ ವಾಸ್ತವದಲ್ಲಿ ಮತ್ತೆ ಪ್ರಾದೇಶಿಕ ಭಾಷೆಗೆ ಶರಣಾಗುವ ಪ್ರಕ್ರಿಯೆಯನ್ನು ನಾವು ಕಾಣುತ್ತಿದ್ದೇವೆ. ನಿಜಕ್ಕೂ ಇದು ಆಶಾದಾಯಕ ಬೆಳವಣಿಗೆ. ಕನ್ನಡದಲ್ಲಿಯೇ ನೂರಾರು ವೈವಿಧ್ಯಪೂರ್ಣ ಆಡು ಭಾಷೆಗಳಿವೆ. ಅದರಲ್ಲಿಯ ಸಾವಿರ ಸಾವಿರ ಸಂಖ್ಯೆಯ ಅಪೂರ್ವ ಶಬ್ದಗಳು ಶಬ್ದಕೋಶ ಸೇರದೇ ಹಾಗೇ ಉಳಿದಿವೆ.
    ೧೯೮೭-೮೮ ರಲ್ಲಿ , ಶಿರಸಿಯಲ್ಲಿ ಇಗ್ಗಪ್ಪ ಹೆಗಡೇ…. ನಾಟಕದ ಶತಮಾನೋತ್ಸವ ಅತ್ಯಂತ ಯಶಸ್ವೀಯಾಗಿ ಜರುಗಿತ್ತು. ರಾಜ್ಯಾದ್ಯಂತ ರಂಗ ತಜ್ಞರು ರಂಗಾಸಕ್ತರು ಭಾಗವಹಿಸಿದ್ದರು. ಅದೊಂದು ಸುಂದರ ನೆನಪು.
    ಮರೆಗೆ ಸೇರಿದ್ದ ಈ ನಾಟಕವನ್ನು ಸುಂದರವಾಗಿ ವಿಶ್ಲೇಷಿಸುವ ಮೂಲಕ ನೆನಪಿಸಿದ್ದಕ್ಕೆ ಕೃತಜ್ಞತೆಗಳು.
    ಸುಬ್ರಾಯ ಮತ್ತೀಹಳ್ಳಿ.

  7. ಈ ಪುಸ್ತಕ ಎಲ್ಲಿ ಸಿಗುತ್ತದೆ? ನನಗೆ ಒಂದು ಪ್ರತಿ ಬೇಕು.
    –ಸದಾನಂದ ಹೆಗಡೆ–

  8. ಡಾ.ಸೌಮ್ಯ. ಕೆ.ಸಿ

    ಈ ಕೃತಿ ಎಲ್ಲಿ ದೊರಕುವುದು pls ಹೇಳುವಿರಾ

  9. ಪದೇ- ಪದೇ ಡಾ. ಗಣೇಶ್ ಉಪಾಧ್ಯರ ಬಾಯಿನಲ್ಲಿ ಕೃತಿಗಳಲ್ಲಿ ಈ ನಾಟಕದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದವು. ಅದೇನು ? ಎನ್ನುವ ನನ್ನ ಆಶೆ ಇಂದು ಓದಿ ಕೊನೆಗೊಂಡಿತು. ಬಹಳ ಪರಿಣಾಮಕಾರಿಯಾಗಿದೆ.
    -ಎಚ್ಚಾರೆಲ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter