*ವೃತ್ತಿರಂಗಭೂಮಿ ನಾಟಕಗಳು ಮತ್ತು ಸಾಂಸ್ಕೃತಿಕ ಸ್ವಾಯತ್ತತೆ*

ವರ್ತಮಾನದ ಸಾಂಸ್ಥಿಕ ಬದುಕು ಸಾಂಸ್ಕೃತಿಕ ಸ್ವಾಯತ್ತತೆ ಕಳೆದು ಕೊಳ್ಳುತ್ತಿದೆ. ರಂಗಭೂಮಿ, ಸಿನೆಮಾ, ಟೀವಿ, ಸಾಮಾಜಿಕ ಜಾಲತಾಣ ಹೀಗೆ ಬಹುಪಾಲು ದೃಶ್ಯಮಾಧ್ಯಮಗಳು ಹೊರಳು ಹಾದಿ ಹಿಡಿದಿವೆ. ದುರಂತವೆಂದರೆ ಅದನ್ನು ಅಭಿವ್ಯಕ್ತಿ ಮಾಧ್ಯಮದ ಕ್ರಾಂತಿಯಂತೆ ಬಿಂಬಿಸಲಾಗುತ್ತಿದೆ. ಜನಾಭಿರುಚಿ ಜಲಪಾತದಂತೆ ಜರ್ರನೆ ಜರಿದು ಪತನದ ಹಾದಿ ಹಿಡಿಯುವಲ್ಲಿ ಅವುಗಳ ಪಾಲು ಹಿರಿದಾದುದು. ಅದಕ್ಕಾಗೇ ಕೆಲವು  ಮಾಧ್ಯಮಗಳು ಟೊಂಕಕಟ್ಟಿ ನಿತಾಂತ ನಿಂತಿರುವುದು ನಿಗೂಢವೇನಲ್ಲ. 

ಒಂದು ಕಾಲದಲ್ಲಿ ಅವಿಭಜಿತ ಕುಟುಂಬ ಪ್ರೀತಿ, ಖರೇ ಖರೇ ದೇಶಭಕ್ತಿ, ಸಮಷ್ಟಿ ಗೌರವ, ರಸಾನುಭೂತಿ, ಅಂತಃಕರಣಗಳ ಭಾವಾಭಿವ್ಯಕ್ತಿಯಂತಿದ್ದ ವೃತ್ತಿರಂಗ ನಾಟಕಗಳು ಆ ಎಲ್ಲಾ ಹೃದಯಸ್ಪರ್ಶಿ  ಸಂವೇದನೆಗಳನ್ನು ಕಳಕೊಂಡು ಮನುಷ್ಯ ಸಂಬಂಧಗಳಿಂದ ದೂರ ಸರಿಯುತ್ತಿವೆ. ಅರ್ಥದ ಅಪಮೌಲ್ಯದಿಂದ ಸೊರಗಿ ಸುಣ್ಣವಾಗಿವೆ. ಪ್ರಾಯಶಃ ಅದಕ್ಕೆ ಜಾಗತೀಕರಣದ ಕರಿನೆರಳು ಭಾಗಶಃ ಕಾರಣವಾಗಿರಬಹುದು. ಅವಕ್ಕೆ ಅಸ್ಮಿತೆಯ ಸವಾಲು ಒಂದೆಡೆಯಾದರೆ, ಒಟ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅವಲೋಕಿಸಿದಾಗ ಗ್ಲೋಬೀಕರಣದ ಘೋರ ಪರಿಣಾಮಗಳು ರಂಗಭೂಮಿಯನ್ನು ಧೃತಿಗೆಡಿಸಿರುವುದು  ದೃಗ್ಗೋಚರವಾಗುತ್ತದೆ. ಅವುಗಳ ಪೈಪೋಟಿ ವಿದ್ಯುನ್ಮಾನ ಮಾಧ್ಯಮ ‘ಷೋ’ಗಳ ಜತೆಗೂ ಎನ್ನುವ ತಲ್ಲಣದ ಸುಂಟರಗಾಳಿಗೆ ಸಿಲುಕಿವೆ.

ಆ ಕುರಿತು ಗಂಭೀರ ಅಧ್ಯಯನಗಳ ಅಗತ್ಯವಿದೆ. ಇದುವರೆಗಿನ ಅಧ್ಯಯನಗಳು ವೃತ್ತಿರಂಗ ಪ್ರಾಕಾರ (form) ಕುರಿತಾದ ಚಾರಿತ್ರಿಕ ಅಂಶಗಳು, ಬಯೋಪಿಕ್ ಮಾದರಿಯ ಕಥನಗಳು ಮಾತ್ರ. ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಂವಾದಗಳು ಜರುಗಿಲ್ಲ. ವೃತ್ತಿ ರಂಗಭೂಮಿಯ ಚೈತನ್ಯ ಗುರುತಿಸುವ ಶಾಸ್ತ್ರಬದ್ಧ ಅಧ್ಯಯನಗಳೇ ಆಗಿಲ್ಲ. ವಿವಿಧ ಜ್ಞಾನ ಶಿಸ್ತುಗಳ ಮೂಲಕ ನೋಡುವುದು ದೂರದ ಮಾತೇ ಸರಿ. ಇನ್ನು ವೃತ್ತಿರಂಗಭೂಮಿ ಕುರಿತಾದ ವಿಶ್ವವಿದ್ಯಾಲಯಗಳ ಪಿ. ಎಚ್ಡಿ. ಪ್ರಬಂಧಗಳು ಇದಕ್ಕೆ ಹೊರತಾಗಿಲ್ಲ. ಪದವಿ ಗಳಿಕೆಗೆ ಮಾತ್ರ ಬಹುಪಾಲು ವೃತ್ತಿರಂಗ ಪ್ರಾಕಾರದ ಬಳಕೆಯಂತಾಗಿದೆ. ವಚನ ಚಳವಳಿ ಕಾಲದ ಬಹುರೂಪಿ ಚೌಡಯ್ಯನ ಕಾಯಕವೇ ಬಹುರೂಪದ ರಂಗವೃತ್ತಿ. ಆತ ಪ್ರಪಂಚದ ಮೊಟ್ಟ ಮೊದಲ ವೃತ್ತಿ ರಂಗಕರ್ಮಿ. ಬಹುಳ ಪ್ರಾಚೀನ ಪ್ರಜ್ಞೆಯ ಈ ಪ್ರಕಾರವನ್ನು ವೃತ್ತಿರಂಗಭೂಮಿ ಪಂಡಿತರು ಪ್ರಧಾನ ಸಂಸ್ಕೃತಿ ಧಾರೆಗೆ ತರಲಿಲ್ಲ. ಅಷ್ಟಕ್ಕೂ ಕನ್ನಡದ ಸಮಗ್ರ ರಂಗಸಂಸ್ಕೃತಿಯ ಆಲೋಚನೆಗಳನ್ನು  ಕಟ್ಟುವ ಗಂಭೀರ ಚಿಂತನೆಗಳು ಫಲಿಸಿಲ್ಲ.

ಅಚ್ಚರಿಯೆಂದರೆ ಮೀಮಾಂಸಕರು ಅಂಥದ್ದೊಂದು ಸಾಂಸ್ಕೃತಿಕ ಚಿಂತನೆಯ ಅಗತ್ಯವಿದೆಯೇ ಎಂದು ಸಂದೇಹಿಸಿದರು. ಇನ್ನೊಂದೆಡೆ  ಪ್ರಯೋಗಶೀಲ, ವೈಚಾರಿಕ ನೆಲೆಗಟ್ಟಿನ ಹೊಸ ಅಲೆಯ ಬಹುಪಾಲು ನಾಟಕಗಳು (ಎಲೈಟ್ ಮಂದಿಯ ತಲಸ್ಪರ್ಶಿ ಥಿಯೇಟರ್) ಬೌದ್ಧಿಕ ತಂತ್ರ ಸಾಹಚರ್ಯದಲ್ಲಿ ಕಳೆದು ಹೋದವು. ಅವು ಲೋಕಮಾನಸ ಮುಟ್ಟದಿರುವುದೇ ಮೇಲೆ ಪ್ರಸ್ತಾಪಿಸಿದ ಅಧ್ಯಯನಗಳ ಅಗತ್ಯಗಳನ್ನು ಒತ್ತಿ ಹೇಳುತ್ತದೆ. ಇಂತಹ ಹತ್ತು ಹಲವು ಅಪಸವ್ಯಗಳ ನಡುವೆಯೂ ವೃತ್ತಿರಂಗಭೂಮಿ ಬಗ್ಗೆ ಗ್ರಾಮೀಣರು ಮತ್ತು ಜನಸಾಮಾನ್ಯರು ಉತ್ಕಟ ಪ್ರೀತಿ, ಭರವಸೆ ಉಳಿಸಿಕೊಂಡಿದ್ದಾರೆ. ಆದರೆ ಅದೊಂದು ಕಲಾರಂಗ ಪ್ರಾಕಾರವಾಗಿ ಸಾಂಸ್ಕೃತಿಕ ಸ್ವಾಯತ್ತತೆ ಕಳಕೊಂಡಿದೆ. ಡೈಲ್ಯೂಟ್ ಆಗುತ್ತಿರುವ ಅದರ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುತ್ತಲಿದೆ.

ಬದಲಾದ ಕಾಲಘಟ್ಟದಲ್ಲಿ ವೃತ್ತಿರಂಗ ನಾಟಕಗಳ ಸ್ವರೂಪ, ವೃತ್ತಿಪರತೆ ಬದಲಾಗಿದೆ. ಈ ಬದಲಾವಣೆ ಸಾಂಸ್ಕೃತಿಕ ಸ್ಥಿತ್ಯಂತರವಲ್ಲ. ಅದಕ್ಕೆ ಬದಲು ಅನಾರೋಗ್ಯಕರ ಬೆಳವಣಿಗೆ. ಒಂದು ಬಗೆಯ ಏಕ ಶಿಲಾಕೃತಿಯ ತೇಜೀ ಮಂದೀ ಪ್ರವಾಹದಾಟ. ಹಾಗಾದರೆ ಅದು ಗಲ್ಲಾಪೆಟ್ಟಿಗೆ ಕೇಂದ್ರಿತ ಸರಕು ಉತ್ಪಾದಿತ ಉದ್ಯಮವೇ.? ಹೌದಾಗಿದ್ದಲ್ಲಿ ಯಾವುದೇ ಕಲೆ ವಾಣಿಜ್ಯೀಕರಣಗೊಂಡಾಗ ಸಾಂಸ್ಕೃತಿಕ ಮಾಧುರ್ಯ ಸೇರಿದಂತೆ ಅಂತಃಸ್ಫುರಣದ ಒಟ್ಟು ಚಹರೆಗಳು ಸೃಜನಶೀಲತೆ ಕಳಕೊಳ್ಳುತ್ತವೆ. ಅವಕ್ಕೆ ಮಾರುಕಟ್ಟೆ ಕಲಬೆರಕೆಯ ಬೆರಕಿತನ ಪ್ರಾಪ್ತಿ ಆಗುತ್ತದೆ. ಅಂತೆಯೇ ಅವೀಗ ಫುಲ್ ಕಾಮೆಡಿ ಟೈಟಲ್ ನಾಟಕಗಳು.  ತಂದೆ ಮಗಳ, ಅಕ್ಕ ತಮ್ಮನ…. ಹೀಗೆ ಒಟ್ಟು ಮನುಷ್ಯ ಸಂಬಂಧಗಳಿಗೆ ಆ ಮುಖಾಂತರ ಮುಕ್ಕಿನ ದಾಂಗುಡಿ ಇಡುತ್ತಿವೆ.  

ಒಂದೆರಡು ಸಾಂಕೇತಿಕ ನಿದರ್ಶನ ಇಲ್ಲಿವೆ : ಇತ್ತೀಚಿನ ಹೆಚ್ಚು ಜನಪ್ರಿಯ ಅಂದರೆ ಹದಿನೈದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ, ವಿಕಲಚೇತನರ ಬದುಕಿನ ಸುತ್ತ ಹೆಣೆದ ಕಥಾವಸ್ತುವಿನ ಮತ್ತು ತುಂಬಿ ತುಳುಕಿಸಿದ ಗಲ್ಲಾಪೆಟ್ಟಿಗೆಯ ನಾಟಕವೊಂದನ್ನು ಉದಾಹರಿಸಬಹುದು. ನಾಟಕದ ಉದ್ದಕ್ಕೂ ಕಳ್ಳಪ್ರೇಮಿಗಳಂತೆ  ಮೆಲೋಡ್ರಾಮಾ ಮಾಡುತ್ತಾ, ಕೆಲವೆಡೆ ಚಿತ್ತಚೋರತೆಯ ಸೀಮೋಲ್ಲಂಘನ ಗೈಯ್ದ ಅಕ್ಕ ತಮ್ಮಗಳ  ಸಂಬಂಧ ಇಲ್ಲಿ ಉಲ್ಲೇಖನೀಯ. ತನ್ಮೂಲಕ ಪಾರಂಪರಿಕವಾದ ಸ್ಥಾಪಿತ ಸದಭಿರುಚಿಗಳ ಸಹೃದಯ ಪ್ರೇಕ್ಷಕನಿಗೆ ಇದು ಅರ್ಥವಾಗದ ರಹಸ್ಯವೇನಲ್ಲ. 

” ಅಕ್ಕಾ ಅಕ್ಕಂತ ತಿಳಿದು ವರ್ತಿಸಿದೆ, ಅದನ್ನ ಮಾವ ತಪ್ಪ ತಿಳಕೊಂಡ ” ಎಂದು ನಾಟಕದ ಕ್ಲೈಮ್ಯಾಕ್ಸ್ ಸೀನಲ್ಲಿ ಉಸುರುವ ತರಕಲಾಂಡಿ ಸಬೂಬಿನ ಒಂದೆರಡು ಸಂಭಾಷಣೆಗಳು ಮನುಷ್ಯ ಸಂಬಂಧಗಳನ್ನು ತೀರಾ ತೆಳುವಾಗಿಸಿ ಬಿಡುತ್ತವೆ. ಹೀಗೆ ಆ ನಾಟಕ ವಿವೇಕಭರಿತ ವಿನೋದ ಪ್ರಜ್ಞೆಯನ್ನು ಗಾಳಿಗೆ ತೂರಿ ಕಳಪೆ ಮಟ್ಟದ ಕೆಟ್ಟಹಾಸ್ಯಕ್ಕೆ ಹಾಸಿಗೆಯಾಗುತ್ತದೆ. ಆ ಮೂಲಕ ರಂಗಸೂಕ್ಷ್ಮತೆ, ಸಂವೇದನಾಶೀಲ ಕಲಾತ್ಮಕತೆಯೂ ಕರಗಿ ಹೋಗ್ತವೆ. ಈ ಬಗೆಯ ಫಂಗಸ್ ಹಾಸ್ಯ ಪ್ಯಾಂಡೆಮಿಕ್ ಆಗಿ ಬಹುಪಾಲು ಇತರೆ ನಾಟಕಗಳಲ್ಲೂ ಉಲ್ಬಣವಾಗಿ ಹಬ್ಬಿಕೊಂಡಿರುವ ಅಂಟುಜಾಡ್ಯ. 

ಇತ್ತೀಚೆಗೆ ಏಕ ಪಾತ್ರಾಭಿನಯದ ಮೂಲಕ ಹೆಸರು ಮಾಡಿದ, ಗೌ.ಡಾ. ಖ್ಯಾತಿಯ ವೃತ್ತಿರಂಗ ನಟಿಯೊಬ್ಬಳು ನಿರ್ದೇಶಿಸಿ ನಟಿಸಿದ ಅರಿಶಿಣಗೋಡಿಯವರ ”ಬಸ್ ಕಂಡಕ್ಟರ್” ಎಂಬ ಸಾಮಾಜಿಕ ಕಾಳಜಿಯ ಸುಂದರ ನಾಟಕವನ್ನು ಅವರು

ತಮ್ಮ ಶಕ್ತಿಮೀರಿ ವಿಕೃತಗೊಳಿಸಿದ್ದಾರೆ. ಉತ್ಕೃಷ್ಟ ಪರಂಪರೆಯ ನವರಸಭರಿತ ನಾಟಕ ಪ್ರಾಕಾರವನ್ನು ಕೀಳುದರ್ಜೆಯ ಹಾಸ್ಯಕ್ಕೆ ಸೀಮಿತಗೊಳಿಸಿದ್ದಾರೆ. ಸಖೇದಾಶ್ಚರ್ಯ ಎಂದರೆ ಖಾಸಗಿ ಕ್ಯಾಸೆಟ್ ಕಂಪನಿಯೊಂದು ಇದೇ ನಾಟಕದ ಕ್ಯಾಸೆಟ್ ಮಾಡಿ ಯಥೇಚ್ಛ ಹಣ ಗಳಿಸುತ್ತಿದೆ. 

ಲೋಕೋಪಯೋಗಿ ಸರಕಿನಂತೆ ಇಂಥದನ್ನೇ ಮಾನ್ಯಮಾಡಿ ಇವನ್ನೇ ರೋಲ್ ಮಾಡೆಲ್ ಎಂದುಕೊಂಡ ಹವ್ಯಾಸಿ ರಂಗಭೂಮಿಯ ಗ್ರಾಮೀಣರು ಇದೇ ದುರ್ಚಾಳಿಯ ಹಾದಿ ಹಿಡಿದಿದ್ದಾರೆ. ಈಗಲೂ ರಾಜ್ಯದ ಹಳ್ಳಿ ಹಳ್ಳಿಗಳ ಮೂಲೆ ಮೂಲೆಗಳಲ್ಲಿ ವರ್ಷಕ್ಕೆ ಅಜಮಾಸು ಹತ್ತು ಹದಿನೈದು ಸಾವಿರ ವೃತ್ತಿ ರಂಗನಾಟಕಗಳ ಪ್ರದರ್ಶನ ನೀಡುತ್ತಾರೆ. ನೆನಪಿರಲಿ ಅದಕ್ಕಾಗಿ ನಮ್ಮ ಗ್ರಾಮೀಣ ಹವ್ಯಾಸಿ ಕಲಾವಿದರು ಸರ್ಕಾರದ ಕಿಲುಬು ಕಾಸಿನ ಅನುದಾನಕ್ಕೆ ಜೋತುಬೀಳದೇ ತಮ್ಮ ಸ್ವಂತ ಖರ್ಚಿನಲ್ಲೇ ವೃತ್ತಿರಂಗ ಸಡಗರ ಮೆರೆಯುತ್ತಾರೆ.   

ಅಭಿನಯ, ರಂಗಸಂಗೀತ, ರಂಗಸಜ್ಜಿಕೆ ಇವು ವೃತ್ತಿರಂಗಭೂಮಿಯ ಪ್ರಮುಖ ಪರಂಪರೆಗಳು. ಇವುಗಳಿಗೆ ಕೊಡಲಿಪೆಟ್ಟು ಬಿದ್ದಿದೆ. ರಂಗಸಂಸ್ಕೃತಿ ಪರಂಪರೆಯ ಜಾಗದಲ್ಲಿ ಚಾಲ್ತೀ ಚಲನಚಿತ್ರಗಳ ಅತಿರೇಕದ ಅನುಕರಣೆ. ಅಲ್ಲೆಲ್ಲೂ ಕಂದಪದ್ಯ, ರಂಗಗೀತೆಗಳ ಸುಳಿವಿಲ್ಲ. ಅಧಿಕಾರಿಗಳ ಕೆಂಗಣ್ಣಿನಿಂದಾಗಿ ಐಟಂ ನೃತ್ಯಗೀತೆಗಳಿಲ್ಲ. ಆ ಕೆಲಸ ಸುಲಭದಲ್ಲೇ ಹಾಸ್ಯನಟಿಯೋ, ಇಲ್ಲವೆ ಹೀರೋಯಿನ್ ಮೂಲಕ ಅನಾಯಾಸ ಜರುಗುತ್ತವೆ. ವೃತ್ತಿ ನಾಟಕಗಳಲ್ಲಿ ಕೆಟ್ಟ, ಕೆಟ್ಟ ಸಿನೆಮಾ ಹಾಡುಗಳ ಅಟ್ಟಹಾಸ. ಝಗಮಗಿಸುವ ರಂಗಸಜ್ಜಿಕೆಗಳ ವೈಭವ ಮೆರೆದ ಅದೀಗ ಅಲ್ಲಲ್ಲಿ ಫ್ಲೆಕ್ಸ್, ನೀಲಿ ಪರದೆಗೂ ನಿಲುಕುವಂತಾಗಿದೆ. 

ಇಂತಹ ಅನೇಕಾನೇಕ ಸವಾಲುಗಳ ನಡುವೆಯೂ ಗದುಗಿನ ಗವಾಯಿಗಳ ಕಂಪನಿಯು ಸೇರಿದಂತೆ ಅಸ್ತಿತ್ವಕ್ಕಾಗಿ ಒಂದೆರಡು ಕಂಪನಿಗಳು ಹೋರಾಡುತ್ತಿರುವುದನ್ನು ಅಲ್ಲಗಳೆಯಲಾಗದು. ಕೆಲವುಕಡೆ ನಾಟಕ ಜಾತ್ರೆಗಳ ಕ್ಯಾಂಪುಗಳಲ್ಲಿ ಕಂಪನಿಗಳು ಸ್ವಾತಂತ್ರ್ಯ ಕಳಕೊಂಡಿರುತ್ತವೆ. ಅಲ್ಲೆಲ್ಲ ಖಾಸಗಿ ಕಲ್ಚರಲ್ ಮಾಫಿಯಾಗಳದ್ದೇ ಕಪಿಮುಷ್ಟಿ. ಇದು ಕಂಪನಿಗಳಿಗೆ ಆಗುವ ತೀವ್ರ ಹಿನ್ನಡೆ. ಮುಖ್ಯವಾಗಿ ಕಲಾವಿದರ ಹೊಟ್ಟೆಪಾಡಿನ ಪ್ರಶ್ನೆ. ಹೀಗಿರುವಾಗ ಹೇಗೆ ತಾನೇ ಸಾಂಸ್ಕೃತಿಕ ಸ್ವಾಯತ್ತತೆ ಉಳಿಸಿಕೊಳ್ಳಲು ಸಾಧ್ಯ.? ಹಾಗೆನೋಡಿದರೆ ಹೊಸ ಅಲೆಯ ಪ್ರಯೋಗಶೀಲ ರಂಗಭೂಮಿ, ಕಿರುತೆರೆ, ಸಿನೆಮಾಗಳು ಸಹಿತ ಸಾಂಸ್ಕೃತಿಕ ಸ್ವಾಯತ್ತತೆ ಉಳಿಸಿಕೊಳ್ಳುವುದು ದುಃಸಾಧ್ಯದ ಅಧ್ಯಾಯ.

ಒಟ್ಟಿನಲ್ಲಿ ರಂಗ ಸಂಸ್ಕೃತಿಯ ಸಂಬಂಧಗಳೊಳಗೆ ಅಸಂಬದ್ಧತೆ, ಅಸಭ್ಯತೆಯ ಪ್ರವೇಶವಾಗಿದೆ. ಅದು ಉಪಶಮನವಾಗದ ಹಳೆಯ ಸೋಂಕು. ಒಮ್ಮೊಮ್ಮೆ ಉದರ ಪೋಷಣೆಯ ಹೆಸರಲ್ಲಿ ಅದರ ಪೋಣಿಸುವಿಕೆ ಅದೆಷ್ಟು ದಡ್ಡುಗಟ್ಟಿದೆ ಎಂದರೆ ಅದೊಂದು ಮೌಲ್ಯದಂತೆ ಪ್ರಚಲಿತಗೊಳ್ಳುತ್ತಲಿದೆ. ತೀರಾ ಇತ್ತೀಚೆಗೆ ಮೇಲುಗೈ ಸ್ಥಾಪಿಸುತ್ತಿರುವ ಟೀವಿಗಳ ಕೆಲವು ಕಾಮೆಡಿ ಶೋಗಳಿಗೂ ಅದರ ಆನುಷಂಗಿಕ ಪ್ರಭಾವ.

ಬೇಕೆಂದರೆ ಕಾಮೆಡಿ ಷೋಗಳ ಒಂದೆರಡು ಸ್ಯಾಂಪಲ್ ಇಲ್ಲಿವೆ : 

*ನಿಮ್ಮಣ್ಣ ನಿನಗ ಊಟ ಕೊಡ್ಲಿಲ್ಲಂತ, ನೀನು ಅವನ ಒಂದ್ ಕೈ ಕಟ್ ಮಾಡಿದಿ. ಅಕಸ್ಮಾತ್ತಾಗಿ ನಿಮ್ಮಣ್ಣಗ ಮಕ್ಕಳಾಗದಿದ್ರ  ಏನ್ ಕಟ್ ಮಾಡ್ತಿದ್ದಿ*.?

*ಜಗ್ಗಣ್ಣ ಒಂದ್ ವಿಷಯ ಗೊತ್ತಾ.? ಮದುವಿಗಿಂತ ಮೊದ್ಲು ನನ್ ಬಂದೂಕು  ಹೀಂಗ ನೆಟ್ಟಗ ನಿಂತ್ಕೊತಿತ್ತು ಅಂತ ಮುಷ್ಟಿ ಮಾಡಿದ ಮೊಳದುದ್ದ ಕೈ ನೆಟ್ಟಗೆ ನಿಲ್ಲಿಸಿ, ಮದುವಿ ಆದಮ್ಯಾಲ ನನ್ನ ಬಂದೂಕ ಠುಸ್ಸಂತ ಮಲಗಿತೆಂದು ನೆಟ್ಟಗಿನ ಮುಷ್ಟಿ ಕೈ ಕೆಳಗಿಳಿಸಿ ಬಿಡುತ್ತಾನೆ ಕಲಾವಿದ*. 

ಸಧ್ಯಕ್ಕೆ ಇವೆರಡೇ ಉದಾಹರಣೆ ಸಾಕು. ಇವುಗಳ ವಿವರಣೆಯ ಗೋಜಿಗೆ ಹೋಗದಿರುವುದೇ ಸಭ್ಯತೆಯ ಲಕ್ಷಣವೆಂದು ಭಾವಿಸುವೆ.

ನಾಟಕಕಾರನ ರಂಗಕೃತಿಯ ಮೂಲ ಆಶಯಗಳೆಲ್ಲ ಮಣ್ಣುಪಾಲು. ನಾಟಕದ ಜನ್ಮನಾಮಗಳೇ ಮುಂಡಾಮೋಚಿ ಯದ್ವಾತದ್ವಾ ಹೆಸರುಗಳ ರುದ್ರನರ್ತನ. ಪಾತ್ರದ ಔಚಿತ್ಯವನ್ನೇ ಕಂಗೆಡಿಸುವ ಕೈಗಂಟು ಸಂಭಾಷಣೆಗಳ ಕಿಲುಬಾಟ. ಪಾತ್ರ ಮತ್ತು ಪೂರ್ಣಪ್ರಮಾಣದ ರಂಗಪಠ್ಯ ಆವಾಹನೆ ಮಾಡಿಕೊಂಡು ಅಭಿನಯ ಬದುಕುವುದನ್ನು  ಅರಿಯದಿದ್ದರೆ ಅದು ನಟನೆ ಆಗಬಹುದೇ ಹೊರತು ಅಭಿನಯ ಆಗಲಾರದು. ಅಭಿನಯವೆಂಬುದು ನಟನು ವಿನಯವಂತನಾಗುವುದು. ಅಪ್ಪಟ ಮನುಷ್ಯನಾಗುವುದು ಎಂದರ್ಥ. ಮತ್ತೊಂದು ಉಲ್ಲೇಖಾರ್ಹ ಕಮೆಂಟ್ ಏನೆಂದರೆ : ಯಾವುದೋ ಕಾಲದ ತುಂಬಾ ಸ್ಟೇಲ್ ಆಗಿರುವ ಸವಕಲು ರಂಗಧಾತುಗಳ ಮರುಕಳಿಕೆ. 

ಉದಾಹರಣೆಗೆ ಹೇಳುವುದಾದರೆ : ಆಗರ್ಭ ಶ್ರೀಮಂತ ಮನೆತನದ ಒಡೆಯನೋ, ಒಡತಿಗೋ ಧುತ್ತನೆ ಅಪ್ಪಳಿಸುವ ಬಡತನ. ಅದರ ದ್ಯೋತಕದಂತೆ  ಹರಕಲು ಮತ್ತು ಮಾಸಲು ಬಟ್ಟೆಯೊಂದಿಗೆ, ದೈನ್ಯಭಾವ ಧರಿಸಿಕೊಂಡು  ಹೊಟ್ಟೆಪಾಡಿಗಾಗಿ ರಸ್ತಾಸೀನಲ್ಲಿ ಬೂಟು ಪಾಲಿಷ್ ಮಾಡುವ ಸನ್ನಿವೇಶ. ಇಲ್ಲವೇ ಕರುಣೆ ಉಕ್ಕಿಸುವ  ಸಿನೆಮಾ ಹಾಡಿನೊಂದಿಗೆ ಭಿಕ್ಷೆ ಬೇಡುವ ಜೋಳಿಗೆ ಪ್ರಸಂಗಗಳು. ಸಾಮಾನ್ಯ ಪ್ರೇಕ್ಷಕರ ತೋರಿಕೆಯ ಭಾವ ಕರಗಿ ಸ್ಟೇಜಿಗೆ ಎಸೆಯುವ ಚಿಲ್ಲರೆ ಕಾಸುಗಳು. ಕೃತಕತೆಯ ಇಂತಹ ಕೆಲವು ದೃಶ್ಯಾವಳಿಗಳು ಸಮೂಹ ಸನ್ನಿಯಂತೆ  ಸಾಗಿ ಬಂದಿರುವುದು ಮಣಭಾರದ ಕ್ಲೀಷೆಯಾಗಿ ಹೋಗಿದೆ.

ಪ್ರತಿನಾಯಕನ ಸೃಷ್ಟಿಯ ಪ್ರತಿಮಾ ವಿಧಾನದ ಬದಲಿಗೆ ಖಳನಾಯಕನ ಖದರ್. ಅದಂತೂ ಅತಿರೇಕದ ಆಗರ. ಅಬ್ಬಾ! ಅಲ್ಲಿ ಖಳನಾಯಕನ ಆಗಮನವೆಂದರೆ ಥೇಟ್ ಸಿನೆಮಾ ವಿಲನ್ ಎಂಟ್ರಿಯೇ ಆಗಿರ್ತದೆ. ತುಟಿಯಂಚಲಿ ಸಿಗರೇಟಂತೂ ಖಾಯಂ. ಸಣ್ಣಪುಟ್ಟ  ಅಪ್ಡೇಟ್ ಏನೆಂದರೆ ಹಳೆಯ ಶೋಲೆ ಸಿನೆಮಾ ಉಡುಪಿನ ಗಬ್ಬರ್ ಸಿಂಗ್ ಇಲ್ಲವೇ ಇತ್ತೀಚಿನ ಯಾವುದಾದರೂ ತೆಲುಗು, ಹಿಂದಿ ಸಿನೆಮಾ ವಿಲನ್ ಸ್ಟಂಟ್  ಸ್ಟೈಲ್ ಅನುಕರಣೆ. ಗಂಟಲು ಕೆರೆತಕ್ಕೀಡಾಗುವ, ಪ್ರೇಕ್ಷಕರ ಕಿವಿಗಡಚಿಕ್ಕುವ ಕಿರುಚಾಟದ ವಿಕೃತ ಸಂಗೀತ. ಖಳನಾಯಕನ ದೇಹ ಮತ್ತು ಧ್ವನಿಗಳ ಕಲಾತ್ಮಕತೆ ನೆಗೆದು ಬಿದ್ದು ಹುಳಿಗಟ್ಟುವ ಆರ್ಭಟ. 

ಪಾತ್ರಗಳನ್ನು ತೀವ್ರವಾಗಿ ಜೀವಿಸುವ ಬದಲು ವಿಕಾರಗೊಳಿಸುವ ಕ್ರಿಯೆ ತಾರಕಕ್ಕೇರಿದೆ. ಒಂದುಕಾಲದ ವೃತ್ತಿರಂಗಭೂಮಿಯ ಸೃಷ್ಟ್ಯಾತ್ಮಕ ಮತ್ತು ಸೋಪಜ್ಞಶೀಲ ಸೌಂದರ್ಯಪ್ರಜ್ಞೆ ನಾಪತ್ತೆ. ಸಿನೆಮಾ ಹಾಗೂ ರಿಯಾಲಿಟಿ ಷೋಗಳ ಅನುಕರಣೆ ಇಲ್ಲವೇ ಆದಾನ ಪ್ರದಾನ. ಸಕಾರಾತ್ಮಕವಾದ ಸಾಂಸ್ಕೃತಿಕ ಸ್ಥಿತ್ಯಂತರಗಳ ಕೊರತೆ ಢಾಳಾಗಿ ಕಾಣುತ್ತಿದೆ. ಆದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಪೌರಾಣಿಕ ನಾಟಕಗಳು ಸೃಜನಶೀಲತೆ ಮತ್ತು ರಂಗಶಿಸ್ತು ಕಾಪಿಟ್ಟುಕೊಂಡಿರುವುದು ಖಂಡಿತಾ ಶ್ಲಾಘನೀಯ.

ವ್ಯವಸ್ಥೆಯ ವಿರುದ್ದದ ಹೋರಾಟಕ್ಕೆ ನಿದರ್ಶನವಾಗಬಲ್ಲ ಕಥಾವಸ್ತುವಿನ ನೂರಾರು ಹಳೆಯ ನಾಟಕಗಳು ಬಂದಿವೆ. ಪೌರಾಣಿಕ, ಕೌಟುಂಬಿಕ, ಸಾಮಾಜಿಕ ಸಂವೇದನೆಯಲ್ಲಿ ಅದ್ದಿ ತೆಗೆದ ಅಂದಿನ ನಾಟಕಕಾರರು ಕರುಳಿನ ಕಥೆಗಾರರು. ಅಂತೆಯೇ ಅವರನ್ನು ಕವಿಗಳೆಂದು ಕರೆಯಲಾಯಿತು. ಅವರು ವೃತ್ತಿರಂಗಭೂಮಿಯ ಪೂರ್ವಸೂರಿಗಳು. ಅವರ ಗಂಭೀರ ಓದು ಮತ್ತು ಸಾಹಿತ್ಯಾಧ್ಯಯನ ಸಮಕಾಲೀನ ಕವಿಗಳಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಇಂದಿನವರು ಕವಿಗಳಲ್ಲ ಸಿದ್ಧಸಾಹಿತ್ಯ ಸೂತ್ರದ ನಾಟಕಕಾರರು. ಕುವೆಂಪು, ಅನಕೃ, ತರಾಸು, ಬೇಂದ್ರೆ, ಬೀಚಿಯಂತಹ  ವಾಙ್ಮಯ ಲೋಕದ ಪ್ರಾಜ್ಞರು, ವಿದ್ವಜ್ಜನರು, ಸಾಹಿತಿಗಳು ವೃತ್ತಿ ರಂಗಭೂಮಿ ನಾಟಕಗಳಿಗೆ ಮುಖಾಮುಖಿಗೊಂಡು ಪರಂಪರೆಯನ್ನೇ ಪ್ರೀತಿಸಿ ಪೊರೆದ ಕಾಲವಿತ್ತು. ಈಗ ಅದು ಯಾಕಿಲ್ಲ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಸನ್ನಿಹಿತ. 

ಹೆಸರಾಂತ ಹಳೆಯ ನಾಟಕಗಳ ಆಶಯ ಚೂರುಪಾರು ಎತ್ತಿಕೊಂಡು, ಉಳಿದಂತೆ ತೆಳುಹಾಸ್ಯವೆಲ್ಲ ಕಲಾವಿದರ ಕೊಡುಗೆ. ಇದು ಸಮಕಾಲೀನ ಕೆಲವರ ನಾಟಕ ರಚನೆಯ ತಂತ್ರಗಾರಿಕೆ. ಇಷ್ಟಕ್ಕೆ ಸಮಾಧಾನಗೊಳ್ಳದೆ, ಹಳೆಯ ನಾಟಕಗಳಿಗೇ ಕೆಟ್ಟ ಕೆಟ್ಟದಾದ ಹೊಸ ಹೊಸ ಹೆಸರಿಡುವ ಪಡಪೋಶಿ ಪೊಗರಿನ ಪರಿಪಾಟ. 

*ಮಾವ ಮಂದ್ಯಾಗ ಸೊಸೆ ಸಂದ್ಯಾಗ, ಕಾಗಕ್ಕ ಗುಬ್ಬಕ್ಕ, ಹೆಣ್ಣಿಗೆಹಟ ಗಂಡಿಗೆಚಟ, ಹೌದಲೇ ರಂಗಿ ಊದಲೇನ ಪುಂಗಿ, ನಿಶೆ ಏರಿಶ್ಯಾಳ ನವರಂಗಿ, ಮಬ್ಬ ಹಿಡಿಸ್ಯಾಳ ಮದರಂಗಿ, ಸಿಂಪಲ್ ಹುಡುಗ ಡಿಂಪಲ್ ಹುಡುಗಿ, ಸರಾಯಿ ಅಂಗಡಿ ಸಂಗವ್ವ… ಇವು ಕೆಲವು ಹೊಸ ನಾಟಕಗಳ ಹೊಸ ಹೆಸರುಗಳು. ಈ ಹೆಸರುಗಳಲ್ಲಿ ಅಕ್ಷರಶಃ ಬಳಕೆಗಮ್ಯ ಗ್ರಾಹಕತ್ವದ ಗುಣವಿದೆ. ಇಂತಹ ಪ್ರತಿಯೊಂದು ನಾಟಕದ ಹೆಸರಲ್ಲೇ ಹೆಣ್ಣು ಮತ್ತು ಹೆಣ್ಣಿನ ಶೋಷಣೆಯ ಧ್ವನಿಇದೆ*. ಅಗ್ಗದ ಅಭೀಪ್ಸೆಯ ಕುಚೇಷ್ಟೆ, ಕಿಲಾಡಿತನದ ಅತಿರೇಕಗಳ ಭಾರಕ್ಕೆ ಥಿಯೇಟರ್ ಎಥಿಕ್ಸ್ ಕುಸಿಯುತ್ತಿದೆ. ರಂಗದ ಮೇಲೆ ಜೊತೆಯ ಪಾತ್ರಗಳಿಗೆ ಅವಕಾಶವೇ ಇಲ್ಲದಂತೆ ಹತ್ತಾರು ಸಿನೆಮಾ ಹಾಡುಗಳ  ಹಾಸ್ಯಪಾತ್ರದ ಪುರುಷಹಂಕಾರ.

ತುಂಬಾ ಹಿಂದಕ್ಕೆ ಹಾಸ್ಯ ಋಷಿಗಳ ಕಾಲಕ್ಕೆ ಹೋಗುವುದು ಬೇಡ. ಇದೇ ನಮ್ಮ ಕಾಲಮಾನದ ಮಾಸ್ಟರ್ ಹಿರಣ್ಣಯ್ಯ, ತೀರ್ಥಹಳ್ಳಿ ಶಾಂತಕುಮಾರ್, ವರವಿ ಫಕೀರಪ್ಪ,  ಬಿ. ಓಬಳೇಶ್ ಅಂಥವರು ತಮ್ಮ ನಿರಂತರ ಓದಿನ ನೆರವಿನಿಂದ ಆರ್ಜಿಸಿಕೊಂಡ ರಾಜಕೀಯ ಪ್ರಜ್ಞೆಯ ಮೊನಚು ಮರೆಯಲುಂಟೇ.? ಅಂದಂದಿನ ಸಮಾಜೋಧಾರ್ಮಿಕ, ರಾಜಕೀಯ ಸಂಗತಿಗಳ ಮೇಲೆ ಚೆಲ್ಲಿದ ಝಳಪಿನ ಬೆಳಕು, ಇಲ್ಲವೇ ಕುಟುಕುವ ಚುರುಕುತನವಿತ್ತು. ಅಂತಹ ವಿಡಂಬನೆ, ನವಿರು ಹಾಸ್ಯದ ಬೆಸುಗೆಯ ಜಾಗದಲ್ಲಿ ಇಂದು ಹೇಳಲಾಗದ ವರ್ಸಸ್ ಹೇಳದಿರಲಾಗದ ಗಬ್ಬುನಾತ ಗರ್ಭೀಕರಿಸಿದೆ. ಇದಕ್ಕೆ ಒಂದೆರಡು ಅಪವಾದದ ನಿದರ್ಶನಗಳು ಇಲ್ಲವೆಂದಿಲ್ಲ. 

ಕೊರೊನಾ ಎಂಬ ದುರಿತಕಾಲದ ಸಂಕಟಗಳು, ದಿಲ್ಲಿಯಲ್ಲಿ ನಡೆಯುತ್ತಿರುವ ಈ ಕಾಲಘಟ್ಟದ ರೈತ ಚಳವಳಿ ಮತ್ತು ಬಹುತ್ವದ ಬದುಕಿನ ಇತರೆ ಸಂಗತಿಗಳ ಕುರಿತು ಸಹೃದಯ ಪ್ರೇಕ್ಷಕರ ಗಮನ ಸೆಳೆವ, ಸದಭಿರುಚಿ ಹುಟ್ಟಿಸುವ ಸತ್ವಯುತ ನಾಟಕಗಳು ಹುಟ್ಟಬೇಕೆಂದರೆ ನಾಟಕಕಾರನೆಂಬ ಕವಿಗೆ  ವರ್ತಮಾನದ ವೃತ್ತಾಂತಗಳ ಸ್ಪಷ್ಟ ಅರಿವು, ಸಾಮಾಜಿಕ ಎಚ್ಚರ ಇರಬೇಕು. ತಳಮಟ್ಟದ ಜನಚಳವಳಿಗಳ ಕುರಿತು, ಆಧುನಿಕೋತ್ತರ ವಿದ್ಯಮಾನಗಳ ಅಪ್ಡೇಟ್ ಅಧ್ಯಯನಗಳ ಅಗತ್ಯವಿದೆ. ಅದು ನೀಗುತ್ತಿಲ್ಲ. ಹೀಗಾಗಿ ವೃತ್ತಿರಂಗಭೂಮಿಗೆ ಹೊಸ ನಾಟಕಕಾರ ಮತ್ತು ನಾಟಕಗಳ ಬರ. ಮಹಾನ್ ಮಹಾನ್ ನಾಟಕಕಾರರ ಪ್ರತಿಭೆಯ ಕಡಲು ಆಗಿದ್ದ ಅದೀಗ ಬತ್ತಿದ ಒಡಲಾಗಿದೆ. *ಸೋಜಿಗವೆಂದರೆ ವೃತ್ತಿರಂಗದಲ್ಲಿ ಪ್ರತಿಭಾಶಾಲಿ ಕಲಾವಿದರಿದ್ದಾರೆ. ಅಂತಹ ಪ್ರತಿಭೆಗಳ ಸದ್ಬಳಕೆಗೆ ತೋರಬೇಕಾದ ವಿವೇಕ ಮತ್ತು ವಿವೇಚನೆಯುಳ್ಳ ನುರಿತ ನಿರ್ದೇಶನದ ತೀವ್ರಕೊರತೆ*. ಅದಕ್ಕಾಗಿ ಎರಡು ಸಹಸ್ರ ವರ್ಷಗಳ ಹಿಂದಿನ ಭರತಮುನಿಯೇ ಬರಬೇಕಿಲ್ಲ. ಸಧ್ಯಕ್ಕೆ ಅದೇನಿದ್ದರೂ ಭರ್ತಿಯಾಗಬಲ್ಲ ಗಲ್ಲಾಪೆಟ್ಟಿಗೆಯೆಂಬ ಮಾರುಕಟ್ಟೆಯ ಮಾಯಾವಿ ಸರಕಿನಂತೆ ಬಳಕೆ ಆಗುತ್ತಿರುವುದು ಮಾತ್ರ ಸಾಂಸ್ಕೃತಿಕ ದುರಂತ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “*ವೃತ್ತಿರಂಗಭೂಮಿ ನಾಟಕಗಳು ಮತ್ತು ಸಾಂಸ್ಕೃತಿಕ ಸ್ವಾಯತ್ತತೆ*”

  1. ಪ್ರಬುದ್ಧ ಚಿಂತನೆ ,ಸಕಾಲಿಕ ಬರಹ .🙏ಆದರೆ
    ಆದರೆ ವಿವಾದ ಆಗುವುದಂತೂ ಗ್ಯಾರಂಟಿ!
    ವಿವಾದ ಆಗದಿರಲಿ ಬರಹದ ಹಿಂದಿನ ನಿಜವಾದ ಕಾಳಜಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿ ಅಂತ ಎಲ್ಲರೂ ಅಂತ ಆಶಿಸೋಣ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter