ನಿರೀಕ್ಷೆ

ನಿನ್ನೆ ಸಂಜೆಯ ತನಕ ಇದ್ದ ಟಿನ್ ಶೀಟಿನ ಗುಡಿಸಲು ಇವತ್ತು ನೆಲಸಮವಾಗಿದೆ. ಆ ಮನೆಯೊಳಗೆ ಸುಮಾರು ಮೂರು ವರ್ಷಗಳಿಂದ ಮಳೆ, ಬಿಸಿಲು, ಗಾಳಿಯನ್ನು ಲೆಕ್ಕಿಸದೆ ಅಪ್ಪ ಅಮ್ಮನೊಡನೆ, ತಮ್ಮ ತಂಗಿಯರೊಂದಿಗೆ ತನ್ನ ಪಾಲಿನ ಅರಮನೆಯ ಸುಖ ಕಂಡ ಆ ಪೋರಿಯ ಮನಸ್ಸು ಬರಿದಾಗಿದೆ. ಅಲ್ಲಿ ಯಾವ ಭಾವಗಳು ಇಲ್ಲದ ನಿರ್ವಾತ. ಯಾಕೆಂದರೆ ಭಾವಗಳೇ ಇಲ್ಲದ ಬದುಕು ಅವರದ್ದು. ಗುಡಿಸಲಿನಿಂದ ಆಚೆಗಿಟ್ಟ ಮನೆಯೊಳಗಿನ ಸಾಮಾನುಗಳ ಮೇಲೆ ಅವಳು ನಿರ್ವಿಣ್ಣಳಾಗಿ ಕುಳಿತಿರುವುದನ್ನು ಕಂಡರೆ ಯಾರಿಗಾದರೂ ಮನಸ್ಸು ಅಯ್ಯೋ ಅನಿಸದಿರದು. 

ಅವಳ ವಯಸ್ಸೇನು ಹೆಚ್ಚೆಂದರೆ ಹತ್ತು ಹನ್ನೊಂದರ ಆಚೀಚೆ. ಆದರೆ ಮನೆಯ ಹಿರಿ ಮಗಳಾಗಿ ತನ್ನ ಮಟ್ಟಿನ ಜವಾಬ್ದಾರಿಯನ್ನು ಅರಿತುಕೊಂಡವಳು. ಅವಳ ತಿಳಿವಿಗೆ ದಕ್ಕಿದಂತೆ ಸ್ವಂತ ಊರು ಕಲ್ಬುರ್ಗಿ ಬಹಳ ದೂರ. ಅಲ್ಲಿ ಇರುವ ಒಣ ಬೇಸಾಯದ ಒಂದಿಷ್ಟು ಭೂಮಿ ಮಳೆಯಿಲ್ಲದೆ ಬರಗಟ್ಟಿದೆ. ಮಳೆ ಬಿದ್ದರೆ ಬಿತ್ತುವ ಜೋಳವೂ ಕಳೆದ ಕೆಲ ವರ್ಷಗಳಿಂದ ನಿರೀಕ್ಷಿಸಿದಷ್ಟು ಫಸಲನ್ನು ನೀಡಿಲ್ಲ. ವರ್ಷವಿಡೀ ಉಣ್ಣುವ ಐದು ಹೊಟ್ಟೆಗೆ ಆ ಫಸಲು ಏನೇನೂ ಸಾಲದು. ಹೀಗಾಗಿ ದುಡಿಮೆಗೆ ಅಂಜದ ಹೆತ್ತವರು ಬದುಕಿನ ಬಂಡಿ ಎಳೆಯಲು ಬಂದು ಸೇರಿದ್ದು ಬೆಂಗಳೂರನ್ನು. ಅವರ ದೃಷ್ಟಿಯಲ್ಲಿ ಎಂದೂ ಕಂಡರಿಯದ ದೊಡ್ಡ ನಗರ ಇದು. 

ಇಲ್ಲಿ ಅನಾಯಾಸವಾಗಿ ಸಿಕ್ಕಿದ್ದು ಕಟ್ಟಡ ಕಾರ್ಮಿಕ ಕೆಲಸ. ಹೊಸ ಬಡಾವಣೆಯಲ್ಲಿ ಕಟ್ಟುವ ಮನೆಯೊಂದಕ್ಕೆ ಕೂಲಿ ಕಾರ್ಮಿಕರಾಗಿ ಸೇರಿದ ಅವಳ ಅಪ್ಪ ಅಮ್ಮ ಅಲ್ಲಿಯ ಕಾವಲುಗಾರರಾಗಿಯೂ ನಿಯತ್ತಿನಿಂದ ದುಡಿದವರು. ಆ ಮನೆ ಪೂರ್ಣಗೊಂಡ ಬಳಿಕವೂ ಪಕ್ಕದ ನಿವೇಶನದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಶೆಡ್ಡಿನಲ್ಲಿ ನೆಲೆ ಕಂಡವರು. ಅವರಿಗೆ ದಿನಬಳಕೆಗೆ ಬೇಕಾದ ನೀರನ್ನು ಹೊಸತಾಗಿ ಕಟ್ಟಿದ ಮನೆಯಿಂದಲೇ ಹೊತ್ತು ತರಬೇಕಾಗಿತ್ತು. ಕೆಲವೊಮ್ಮೆ ತನ್ನ ವಯಸ್ಸಿನ ಸಾಮಥ್ರ್ಯಕ್ಕೂ ಮೀರಿದ ದೊಡ್ಡ ಕೊಡದಲ್ಲಿ ಆ ಚಿಕ್ಕ ಹುಡುಗಿ ನೀರನ್ನು ಸೊಂಟದಲ್ಲಿ ಹೊತ್ತು ತರುವಾಗ ಕಂಡವರಿಗೆ ಕನಿಕರ ಮೂಡುತ್ತದೆ. ಸಾಲದಕ್ಕೆ ಮೊನ್ನೆ ಮೊನ್ನೆ ಹುಟ್ಟಿದ ತಮ್ಮನಿಗೆ ಅವಳು ಹೊತ್ತು ಉಣಿಸುವ, ಅತ್ತರೆ ಸಮಾಧಾನಿಸುವ ಪಾಲಕಿಯೂ ಹೌದು. 

ಸುತ್ತಲೂ ತಲೆಎತ್ತಿ ನಿಂತ ಬೃಹದಾಕಾರದ ಸಂಕೀರ್ಣಗಳ ನಡುವೆ ತಮ್ಮ ಬದುಕು ಹೀಗೇಕೆ ಎಂದು ವ್ಯಥಿಸುವ ತಿಳಿವಳಿಕೆ ಅವಳಿಗಿತ್ತೋ ಇಲ್ಲವೋ ತಿಳಿಯದು. ಬೆಳಕು ಹರಿಯುವ ಮುನ್ನ ಗುಡಿಸಲಿನಲ್ಲಿ ಉರಿಯುವ ಸೌದೆ ಒಲೆಯ ಮುಂದೆ ತಾಯಿ ತಟ್ಟುವ ರೊಟ್ಟಿಗಳ ಜೊತೆಗೆ ಅವಳ ದಿನಚರಿ ಆರಂಭವಾಗುತ್ತಿತ್ತು. ಸಣ್ಣಗೆ ಉರಿಯುವ ಬುಡ್ಡಿ ದೀಪದ ಬೆಳಕಲ್ಲಿ ಜೀವನದ ಭರವಸೆಯ ಬೆಳಕನ್ನು ಕಾಣುತ್ತಿದ್ದ ಎಳೆಯ ಜೀವ ಅದು. ರಾತ್ರಿ ಎಂಟಕ್ಕೆಲ್ಲ ಕತ್ತಲಲ್ಲಿ ಕರಗುತ್ತಿದ್ದ ಮನೆಯದು. ನಿನ್ನೆ ಸಂಜೆ ನಿವೇಶನದ ಮಾಲೀಕ ಬಂದು ತಾನು ಮನೆ ಕಟ್ಟುವ ಸಲುವಾಗಿ ಇವರನ್ನು ಎಬ್ಬಿಸುವವರೆಗೂ ಅಲ್ಲಿ ಇವರದ್ದೇ ಬಡ ಸಾಮ್ರಾಜ್ಯವಿತ್ತು. 

ಒಂದು ಮುಂಜಾನೆ ಶಾಲೆಯ ಸಮವಸ್ತ್ರದೊಂದಿಗೆ ಪುಸ್ತಕಭಾರದ ದೊಡ್ಡ ಚೀಲವನ್ನು ಬೆನ್ನಿಗೇರಿಸಿ ಹೊರಟವಳ ಮುಖದಲ್ಲಿ ನಗುವಿನ ಹುಮ್ಮಸ್ಸಿತ್ತು. ಸುತ್ತಮುತ್ತಲಿನ ಉಳಿದ ಮಕ್ಕಳಂತೆ ಮನೆಯೆದುರು ಬಂದು ಹತ್ತಿಸಿಕೊಳ್ಳುವ ಶಾಲೆಯ ವಾಹನದಲ್ಲಿ ಹೊರಟಿಲ್ಲವಾದರೂ ಕಾಲ್ನಡಿಗೆಯಲ್ಲಿ ಹತ್ತಿರದ ಸರಕಾರಿ ಶಾಲೆಗೆ ಹೊರಟ ಅವಳಲ್ಲಿ ಸಂಭ್ರಮವಿತ್ತು. ಹೊಸ ಕೂಸು ಮನೆತುಂಬಿದ ನಂತರ ಅದನ್ನು ನೋಡಿಕೊಳ್ಳಲು ತಾಯಿ ಮನೆಯಲ್ಲಿಯೇ ಉಳಿದ ಕಾರಣ ಇವಳಿಗೆ ಶಾಲೆಯ ಮುಖ ಕಾಣುವ ಬಿಡುಗಡೆಯ ಭಾಗ್ಯ. ಈ ಭಾಗ್ಯ ಅದೆಷ್ಟು ದಿನವಿರುತ್ತದೋ ಆ ಲೆಕ್ಕ ಅವಳಿಗಿಲ್ಲ. ಈ ಕ್ಷಣದ ಸುಖವನ್ನು ಬಾಚಿಕೊಳ್ಳುವ ತವಕ ಮಾತ್ರ ಅವಳಲ್ಲಿ. 

ಕನ್ನಡ ಶಾಲೆಯಲ್ಲಿ ಕಲಿತ ಅಷ್ಟಿಷ್ಟು ಹಾಡನ್ನು, ಜನಗಣಮನ ರಾಷ್ಟ್ರಗೀತೆಯನ್ನು ಮನಸ್ಸಿಗೆ ಬಂದಂತೆ ಕಂಡಲ್ಲಿ ಹಾಡುವ ಉಮೇದು. ತಂಗಿ ತಮ್ಮನೆದುರು ಮನೆಯೆದುರಿನ ಮಣ್ಣ ನೆಲದಲ್ಲಿ ಕೂತು ಪುಸ್ತಕ ಹರವಿ ಬೆನ್ನು ಬಾಗಿಸಿ ಬರೆಯುವಾಗ ಅವಳ ಮನಸ್ಸಿನ ಸಂದಿಯಲ್ಲಿ ಎಲ್ಲೋ ಎಲ್ಲರಂತೆ ತಾನೂ ಹೆಚ್ಚು ಕಲಿತು ವಿದ್ಯಾವಂತಳಾಗ ಬೇಕೆನ್ನುವ ಬಯಕೆ ಒಸರಾಗಿರಬಹುದು. ಬಲ್ಲವರಾರು? ಹೊಟ್ಟೆಗೆ ಹಿಟ್ಟಿಲ್ಲದೆ, ಮನೆಯೊಳಗೆ ಬೆಳಕಿಲ್ಲದೆ, ಬಡತನದ ಬೇಗುದಿಯಲ್ಲಿ ಅರಳಿದ ವಿದ್ಯಾರತ್ನಗಳು ಎಷ್ಟಿಲ್ಲ? ನೆಲಸಮವಾದ ಗುಡಿಸಲಿನ ಕಡೆ ಅವಳ ದೃಷ್ಟಿ ಹೊರಳಿದಾಗ ಅವೆಲ್ಲವೂ ತಮ್ಮಂತಹವರಿಗೆ ನನಸಾಗದ ಕನಸು ಎನ್ನುವ ನೋವು ಅವಳಲ್ಲಿರಬಹುದು.

ಸಂಜೆಯಾಯಿತೆಂದರೆ ಮನೆಯೆದುರಿನ ರಸ್ತೆ ಮಕ್ಕಳಿಂದ ಗಿಜಿಗುಡುತ್ತಿತ್ತು. ಶ್ರೀಮಂತ, ಮಧ್ಯಮವರ್ಗದ ಮಕ್ಕಳು ಭೇದಭಾವವಿಲ್ಲದೆ, ಜಾತಿಮತದ ಹಂಗಿಲ್ಲದೆ ಅಲ್ಲಿ ಆಟಕ್ಕೆ ಒಂದಾಗುತ್ತಿದ್ದರು. ಅವರು ನಡೆಸುವ ಚಿಕ್ಕ ಸೈಕಲ್ಲಿನ ಹಿಂದೆ ಓಡುತ್ತಾ ಇವಳು ಸುಸ್ತಾಗುತ್ತಿದ್ದಳು. ಹುಡುಗಿಯರು ಸೇರಿ ಆಡುವ ಕುಂಟಾಬಿಲ್ಲೆ, ಚೆಂಡಿನ ಆಟಕ್ಕೆ ಇವಳನ್ನು ಜೊತೆಯಾಗಿಸುತ್ತಿದ್ದರು. ಅವರೆಲ್ಲರ ನಡುವೆ ಮಾತುಕತೆ, ಆಟದ ನೆಪದಿಂದ ಇವಳು ಎಲ್ಲರಿಗೂ ಇನ್ನಷ್ಟು ಹತ್ತಿರವಾಗಿದ್ದಳು. ಉಳಿದ ಮಕ್ಕಳ ತಿಂಡಿಯಲ್ಲಿ ಕೆಲವೊಮ್ಮೆ ಇವಳಿಗೂ ಪಾಲು ಸಿಗುತ್ತಿತ್ತು. ಆಟದ ಮಧ್ಯೆ ಜಗಳವೂ ಆಗುತ್ತಿತ್ತು. ಮತ್ತೆ ಅರೆಕ್ಷಣದಲ್ಲಿ ಆ ಜಗಳ ಮರೆತು ಮಕ್ಕಳ ಮನಸ್ಸು ಒಂದಾಗುತ್ತಿತ್ತು. ಗುಡಿಸಲಿನ ಹುಡುಗಿ ಇವಳು ಎಂದು ಅವರ್ಯಾರೂ ಇವಳನ್ನು ದೂರವಿಟ್ಟಿರಲಿಲ್ಲ. ತಳಮಟ್ಟದ ಭಾವವನ್ನು ತೋರಿರಲಿಲ್ಲ. ತಂಗಿ ತಮ್ಮನನ್ನು ಜೊತೆಯಾಗಿಸಿಯೇ ಇವಳು ಅವರ ಮಧ್ಯೆ ಮನದಣಿಯೆ ಆಡುತ್ತಿದ್ದಳು. ಈಗ ತಾನಿರುವ ಗುಡಿಸಲು ನೆಲಸಮವಾಗಿದೆ. 

ಹೋಗಬೇಕಾದಲ್ಲಿ ಹೋಗುವ ಆತಂಕದಲ್ಲಿ ಹೆತ್ತವರಿದ್ದರೆ ಇವಳು ಬೇಸರದ ಮುಖ ಹೊತ್ತು ಮನದೊಳಗಿನ ನೋವಿಗೆ ಮುಖ ಚಿಕ್ಕದು ಮಾಡಿಕೊಂಡು ಬೊಗಸೆ ಕಂಗಳಲ್ಲಿ ಕಾತುರತೆಯನ್ನು ತುಂಬಿಕೊಂಡು ಮನೆಯ ಗಂಟುಮೂಟೆಯ ಮೇಲೇರಿ ಕುಳಿತಿದ್ದಾಳೆ... ಎಲ್ಲಿಗೋ ಹೊರಟ ತನ್ನನ್ನು ಕೊನೆಯ ಕ್ಷಣದಲ್ಲಿ ಇಷ್ಟು ದಿನ ತನ್ನ ಜೊತೆಗೆ ಆಟವಾಡಿಕೊಂಡಿದ್ದ ಬಳಗ ಮಾತನಾಡಿಸಲು ಬರಬಹುದೆನ್ನುವ ಅಪರಿಮಿತ ನಿರೀಕ್ಷೆಯಲ್ಲಿ.... 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

20 thoughts on “ನಿರೀಕ್ಷೆ”

  1. JANARDHANRAO KULKARNI

    ಧರ್ಮಾನಂದ ಶಿರ್ವ ಅವರ ಕಥೆ ‘.ನಿರೀಕ್ಷೆ ‘ ಚನ್ನಾಗಿದೆ. ಮಗುವಿನ ಮನಸ್ಸು ಹೊಕ್ಕು ಮುಂದಿನ ನಿರೀಕ್ಷೆಯ ಬಗ್ಗೆ ಹೇಳಿದ ರೀತಿ, ಬಳಸಿದ ಭಾಷೆ, ಶೈಲಿ ಸೊಗಸಾಗಿದೆ. ಅಭಿನಂದನೆಗಳು.

    1. ವೀರೇಂದ್ರ ನಾಯಕ್ ಚಿತ್ರಬೈಲು

      ಬೆಂಗಳೂರಿನಲ್ಲಿದ್ದಾಗ ನಮ್ಮ ಪಿಜಿಯ ಪಕ್ಕದಲ್ಲೇ ಈ ರೀತಿಯ ಕನಸುಗಳನ್ನು ಹೊತ್ತ ಕಂಗಳನ್ನು ಕಂಡಿದ್ದೇನೆ. ಧಿಡೀರನೇ ಅದೊಂದು ದಿನ ಯಾವ ಸುಳಿವನ್ನೂ ಕೊಡದಷ್ಟು ನಿಶ್ಶಬ್ಧವಾಗಿ ಅವರು ಜಾಗ ಖಾಲಿ ಮಾಡಿಬಿಡುತ್ತಾರೆ…. ಅವರ ಬದುಕನ್ನು ಚಿಕ್ಕದಾಗಿ- ಚೊಕ್ಕದಾಗಿ ಸೊಗಸಾಗಿ ವರ್ಣಿಸಿರುವಿರಿ…

  2. Raghavendra Mangalore

    ಪುಟ್ಟ ಕಥೆಯಲ್ಲಿ ಬಡ ಹುಡುಗಿಯ ಅಂತರಾಳ ಮನ ತಟ್ಟುತ್ತದೆ. ‘ ರಾತ್ರಿ ಎಂಟಕ್ಕೆ ಕತ್ತಲಿನಲ್ಲಿ ಮನೆ ಕರಗುತ್ತದೆ.’ ಈ ವಾಕ್ಯ ಮನ ಸೆಳೆಯಿತು. ಇನ್ನೂ ದೊಡ್ಡದಿದ್ದರೆ ಕಥೆ ಚೆನ್ನಾಗಿರುತ್ತಿತ್ತು ಎಂದು ಓದುಗನಿಗೆ
    ಅನಿಸಿದ್ದು ಸುಳ್ಳಲ್ಲ. ಅಭಿನಂದನೆಗಳು.

    1. ಶೇಖರಗೌಡ ವೀ ಸರನಾಡಗೌಡರ್

      ವಾಸ್ತವದ ಚಿತ್ರಣ ಮನ ಕಲಕುವಂತಿದೆ. ಕಣ್ಣಂಚಿನಲ್ಲಿರುವ ನಿರೀಕ್ಷೆ ಓದುಗರ ಮನಸ್ಸನ್ನು ಅಲುಗಾಡಿಸುತ್ತದೆ.
      ಅಭಿನಂದನೆಗಳು. ಪುಟ್ಟ ಕಥೆಯ ಪೋರಿ ಓದುಗರ ಮನದಲ್ಲಿ ನೆಲೆ ನಿಲ್ಲುತ್ತಾಳೆ.

    1. ಧರ್ಮಾನಂದ ಶಿರ್ವ

      IIC group ನಲ್ಲೂ ನಿಮ್ಮ ಅನಿಸಿಕೆಗಳನ್ನು ನಮೂದಿಸಿ please…
      ಇಲ್ಲಿನ ನಿಮ್ಮ ಅಭಿಪ್ರಾಯಗಳು ಸಂತಸ ತಂದಿವೆ.
      ಧನ್ಯವಾದಗಳು

  3. ಸುನೀತ ಶ್ರೀಪಾದ

    ಹೃದಯ ಬಿಚ್ಚಿ ಮಾತನಾಡುವ ನಿಮ್ಮ ಬರಹ ವಿಶಿಷ್ಟ ಬಗೆಯದು.ಮನ ಕಲಕುವ ಭಾವ. ದಿನ ನಿತ್ಯ ನೋಡುವ ನಮ್ಮ ನಡುವಿನ ಕಥೆಯದರೂ ನಿಮ್ಮ ಬರವಣಿಗೆಯಲ್ಲಿ ಏನೋ ಹೊಸ ಭಾವ.

    1. ಧರ್ಮಾನಂದ ಶಿರ್ವ

      ಕಥೆಯನ್ನು ಅನುಭವಿಸಿ ಬರೆದ ನಿಮ್ಮ ಅನಿಸಿಕೆಗಳಿಗೆ ತುಂಬ ಧನ್ಯವಾದಗಳು. ಇದು ಇಷ್ಟು ಭಾವುಕವಾಗಲು ಕಾರಣ ನಾನು ಕಣ್ಣೆದುರು ಕಂಡ ಸತ್ಯ ಸಂಗತಿಗಳು……

  4. Chintamani Sabhahit

    ನಿಜವಾಗಿ ಹೇಳಬೇಕೆಂದರೆ, ಕಥೆಯೆಂದೇ ಓದಲು ಶುರು ಮಾಡಿದ್ದೆ – ಚರ್ಚಗೇಟಿನಿಂದ ಪ್ರಾರಂಭವಾದದ್ದು ಅಂಧೇರಿಯವರೆಗಾದರೂ ಓದಬಹುದೆಂದು. ಕನಿಷ್ಠ ಬಾಂದ್ರಾದವರೆಗಾದರೂ ಇರಬಹುದಿತ್ತು. ದಾದರ್ ಬಿಡಿ, ಮಹಾಲಕ್ಷ್ಮಿಯಲ್ಲೇ ಕಥೆ ಮುಗಿದು ಹೋಯಿತು – ಉದ್ದ ನೀರೆಲ್ಲ ಸಂಕುಚಿತವಾಗಿ,ಘನ ಭರ್ಪವಾದಂತೆ! ಆಗ ಅರ್ಥವಾಯಿತು : ಲೇಖಕರ ಮನದ ಮೂಲೆಯ ಈ ಕೆಳಗಿನ ಕವಿತೆಯ ‘ನಿರೀಕ್ಷೆ’, ಜನ್ಮ ತಾಳುತ್ತಿದ್ದಂತೆಯೇ ಕತೆಯಾಗಿಬಿಟ್ಟಿದೆಯೆಂದು!

    ‘ನಿನ್ನೆ ಸಂಜೆಯ ತನಕ
    ಇದ್ದ ಗುಡಿಸಲು
    ಇವತ್ತು ನೆಲಸಮ!
    ತನ್ನ ಪಾಲಿನ ಅರಮನೆ
    ಯ ಸುಖ ಕಂಡ ಆ ಪೋರಿ
    ಮನೆಯ ಹಿರಿ ಮಗಳಾಗಿ
    ವರ್ಷವಿಡೀ ಉಣ್ಣುವ ಐದು ಹೊಟ್ಟೆಗೆ
    ವಯಸ್ಸಿನ ಸಾಮರ್ಥ್ಯಕ್ಕೂ ಮೀರಿ
    ದ ದೊಡ್ಡ ಕೊಡದಿಂದ
    ಬುಡ್ಡಿ ದೀಪದ ಬೆಳಕಲ್ಲಿ
    ಜೀವನದ ಭರವಸೆಯ ಬೆಳಕ
    ಕಾಣುತ್ತಿದ್ದ ಎಳೆಯ ಜೀವ!
    ರಾತ್ರಿ ಎಂಟಕ್ಕೆಲ್ಲ
    ಕತ್ತಲಲ್ಲಿ ಕರಗುತ್ತಿದ್ದ ಮನೆ-
    ಬಡ ಸಾಮ್ರಾಜ್ಯ!
    ಒಂದು ಮುಂಜಾನೆ
    ಶಾಲೆ ಕಾಣುವ
    ಬಿಡುಗಡೆಯ ಭಾಗ್ಯ
    ನಡುವೆ ಮಾತುಕತೆ, ಆಟದ ನೆಪ
    ದಿಂದ ಎಲ್ಲರಿಗೂ ಇನ್ನಷ್ಟು
    ಹತ್ತಿರವಾದರೂ,
    ಈಗ ತಾನಿರುವ ಗುಡಿಸಲು
    ನೆಲಸಮವಾಗಿದೆ……
    ಗಂಟುಮೂಟೆಯ ಮೇಲೇರಿ ಕುಳಿತಿದ್ದಾಳೆ,
    ಬಳಗ ಮಾತನಾಡಿಸಲು ಬರಬಹುದೆ?
    ಅನ್ನುವ ನಿರೀಕ್ಷೆಯಲ್ಲಿ….!’

    ನಾನು ಅನುಭವಿಸಿದ್ದು ಈ ಕವಿತೆಯೇ, ಓದದ್ದು ಕತೆಯಾದರೂ!! ದಯವಿಟ್ಟು ಗಮನಿಸಿ, ಮೇಲಿನ ಕವಿತೆಯಲ್ಲಿರುವ ಎಲ್ಲ ಸ್ವಾರಸ್ಯ ಶಬ್ದಗಳೂ ಈ ಕತೆಯಿಂದಲೇ ಕಡೆದಿಟ್ಟದ್ದು!!!

    ಹೀಗಾಗಿ,ಒಂದು ಸುಂದರ ಮಾರ್ದವ ಕವಿತೆಯನ್ನು,ಒಂದು ಸಾಂದ್ರ ಕತೆಯಾಗಿ ರೂಪಿಸಿದ ಲೇಖಕರ ಕಲೆಗೆ, ಮತ್ತೆ ಅವರ ಚುರುಕಿನ ಲೇಖನ ಶೈಲಿಗೆ,ಹಾರ್ದಿಕ ಧನ್ಯವಾದಗಳು.

    1. ಧರ್ಮಾನಂದ ಶಿರ್ವ

      ಕಥೆಯ ಜೀವಾಳವನ್ನು ಹಿಡಿದು ಹೊರಟ ನಿಮ್ಮ ಕವಿತೆ ಮುದನೀಡಿತು. ನೀವೆಂದಂತೆ ಕಥಾವಸ್ತು ಹಿರಿದಾಗಿದ್ದು ಅದನ್ನು ಹಿಡಿದಿಟ್ಟ ಚೌಕಟ್ಟು ಕಿರಿದಾಯಿತು ಎನ್ನುವುದು ಸತ್ಯ. ಓದಿದ ಬಹಳಷ್ಟು ಸಹೃದಯಿಗಳು ಇದೇ ಇಂಗಿತವನ್ನು ಹೊರಹಾಕಿದರು.

      ಕಥೆಯನ್ನು ಮುಂಬಾಯಿ ರೈಲು ಪ್ರಯಾಣಕ್ಕೆ ಹೋಲಿಸಿ ಬರೆದ ವಿಮರ್ಶೆ ನಗುಬರಿಸುವಂತಿದೆ. ಕಥೆಯ ಓದಿನಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಹೆಣೆದ ಕವಿತೆಯ ಶ್ರಮಕ್ಕೆ ವಂದನೆಗಳು.

      ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು.
      ಸಾಧ್ಯವಾದರೆ ನಿಮ್ಮ WhatsApp ನಂಬರನ್ನು ನನ್ನ ಈ ಕೆಳಗಿನ WhatsApp ನಂಬರಿಗೆ ಕಳುಹಿಸಿ.

      9845897021

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter