(ಎಡಪಂಥೀಯ ಚಿಂತಕ, ಖ್ಯಾತ ವಿಮರ್ಶಕ, ಜನಪರ ಹೋರಾಟಗಾರ ಜಿ.ರಾಜಶೇಖರ್ ಜೊತೆಗಿನ ಸಾಹಿತ್ಯ ಸಂದರ್ಶನದ ನೆನಪುಗಳು)
*ಜಿ. ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 20 ರ (2022)ರಾತ್ರಿ ನಿಧನರಾದರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ*
ಕನ್ನಡದ ಪ್ರಸಿದ್ಧ ವಿಮರ್ಶಕ ,ವಿಚಾರವಾದಿ, ಮಾರ್ಕ್ಸ್‌ವಾದಿ ಚಿಂತಕ ಜಿ.ರಾಜಶೇಖರ ಅವರು 2019 ರಲ್ಲಿ ಉಡುಪಿಯ ಸೀತಾಬುಕ್ ಹೌಸ್ ಎದುರಿನ ರಸ್ತೆಯಲ್ಲಿ ಒಂದು ಬೆಳಿಗ್ಗೆ ನಾನು ನಡೆದುಹೋಗುತ್ತಿದ್ದಾಗ ಭೇಟಿ ಆಗಿದ್ದರು. “ನೀವು ಜೋಕಟ್ಟೆಯವರಲ್ವ..”ಅನ್ನುತ್ತಾ ನಿಂತು, ವಾಪಸ್ ತಿರುಗಿ ಅಲ್ಲಿಂದ ಹೊಟೇಲ್ ಗೆ ಕರೆದೊಯ್ದರು.ಅಲ್ಲಿ ಚಹ ತಿಂಡಿಯ ನಂತರ ಒಂದಿಷ್ಟು ಹರಟೆ ಹೊಡೆದು ಒಂದೆರಡು ಫೋಟೋ ನಾನೇ ಮೊಬಯಿಲ್ ನಲ್ಲಿ ತೆಗೆದ ನಂತರ ಜಿ ರಾಜಶೇಖರ್ ಬೀಳ್ಕೊಟ್ಟಿದ್ದರು. ಅದೇ ನಮ್ಮದು ಕೊನೆಯ ಭೇಟಿ ಆಗಬಹುದೆಂದು ಆವಾಗ ನನಗೆ ತಿಳಿದಿರಲಿಲ್ಲ.
ತನ್ನ ನಿರ್ಭೀತ ವಿಮರ್ಶಾ,ವೈಚಾರಿಕಾ ಲೇಖನಗಳ ಮೂಲಕ ಕನ್ನಡದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಕಾಣಿಸಿರುವ ಉಡುಪಿಯ ಕೊಳಂಬೆಯ ನಿವಾಸಿ ಜಿ. ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 20 ರ (2022)ರಾತ್ರಿ ನಿಧನರಾದರು.ಅವರು ಕಾಯಿಲೆಯಿಂದ ಬಳಲುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಅಗಲಿದರು. ಕರಾವಳಿ ಜಿಲ್ಲೆಗಳ ಜನಪರ ಹೋರಾಟಗಳು ಹಾಗು ಹೋರಾಟಗಾರರ ಪಾಲಿಗೆ ಇತ್ತೀಚಿನ ತನಕವೂ ಆಪ್ತ ಸ್ನೇಹಿತ ಹಾಗು ಮಾರ್ಗದರ್ಶಕರಾಗಿದ್ದವರು ಜಿ. ರಾಜಶೇಖರ್.
1946 ರ ಎ.4 ರಂದು ಬ್ರಹ್ಮಾವರ ಸಮೀಪದ ಬೈಕಾಡಿಯಲ್ಲಿ ಹುಟ್ಟಿದ ಜಿ.ರಾಜಶೇಖರರು ಆರಂಭದಲ್ಲಿ ಶಿಕ್ಷಕರಾಗಿದ್ದರು.ನಂತರ ಎಲ್ ಐ ಸಿ ಗೆ ಸೇರಿ ಕೊನೆಯವರೆಗೂ ಯಾವುದೇ ಭಡ್ತಿಗೆ ಇಚ್ಚಿಸದೆ ನಿವೃತ್ತಿ ತನಕವೂ ಇಲ್ಲೇ ಇದ್ದವರು.ಎಪ್ಪತ್ತರ ದಶಕದಲ್ಲಿ ಬೀದಿ ಹೋರಾಟಗಳಲ್ಲೆಲ್ಲ ಜಿ.ರಾಜಶೇಖರ ಇದ್ದೇ ಇರುತ್ತಿದ್ದರು. ನಾಡಿನ ಪತ್ರಿಕೆಗಳಲ್ಲಿ ಸಮಕಾಲೀನ ವಿದ್ಯಮಾನಗಳ ನೂರಾರು ಲೇಖನಗಳನ್ನು ಬರೆದರೂ ಇವರು ಪುಸ್ತಕ ಪ್ರಕಟಿಸಿದ್ದು ಬಹಳ ಕಡಿಮೆ. ಹಾಗಿದ್ದೂ ಇವರ ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಕೋಮುವಾದದ ಕರಾಳ ಮುಖಗಳು…..ಇಂತಹ ಕೃತಿಗಳು ಸಾಕಷ್ಟು ಚರ್ಚೆ ಎಬ್ಬಿಸಿವೆ.
ಜಿ .ರಾಜಶೇಖರ ಅವರು ಸೇವಾ ನಿವೃತ್ತರಾಗುವ ತನಕವೂ ನಾನು ಊರಿಗೆ ಹೋದಾಗಲೆಲ್ಲ ಉಡುಪಿಯ ಅಜ್ಜರಕಾಡುವಿನಲ್ಲಿರುವ ಎಲ್ ಐ ಸಿ ಕಛೇರಿಗೆ ಹೋಗಿ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ.ಅವರಲ್ಲಿ ಒಂದಷ್ಟು ಮಾತುಕತೆ ನಡೆಸಿದ ನಂತರ ಕ್ಯಾಂಟೀನ್ ನಲ್ಲಿ ಚಹ ಕುಡಿಸದೆ ಅವರೆಂದೂ ಕಳುಹಿಸಿದ್ದಿಲ್ಲ.
ತೊಂಭತ್ತರ ದಶಕದಲ್ಲಿ ಜಿ ರಾಜಶೇಖರ ಮತ್ತು ನಾನು ಸಾಕಷ್ಟು ಪತ್ರ ವ್ಯವಹಾರ ಮಾಡುತ್ತಿದ್ದೆವು.ಅವರ ಹಲವು ಪತ್ರಗಳು ಈಗಲೂ ನನ್ನಲ್ಲಿವೆ. ನನ್ನ ಸ್ಪಟಿಕದ ಶಲಾಕೆಯಂತೆ ಸಂಕಲನದಲ್ಲಿ ಜಿ.ರಾಜಶೇಖರ ಅವರ ಸಂದರ್ಶನವೂ ಇದೆ. ತೊಂಭತ್ತರ ದಶಕದಲ್ಲಿ ನಾನು ಮುಂಬಯಿಯಲ್ಲಿ ಯಾವೆಲ್ಲ ಪತ್ರಿಕೆಗಳಲ್ಲಿ ಇದ್ದೆನೋ ಕೆಲವು ಸಂಚಿಕೆಗಳನ್ನು ಆಗಾಗ ಅವರಿಗೆ ಕಳುಹಿಸುತ್ತಿದ್ದೆ. ಅವನ್ನೆಲ್ಲ ಓದಿ ಪತ್ರ ಬರೆಯುತ್ತಿದ್ದರು. ಜೊತೆಗೆ ಅವರು ಇಷ್ಟಪಟ್ಟು ಓದಿದ ಪುಸ್ತಕಗಳನ್ನು ನನಗೂ ಓದುವಂತೆ ಹೇಳುತ್ತಿದ್ದರು.
1992 ರಲ್ಲೊಮ್ಮೆ ಬೆಂಗಳೂರಿನ ಪತ್ರಿಕೆಯೊಂದರಲ್ಲಿ ಬಂದ ಅವರ ಲೇಖನದ ಬಗ್ಗೆ ಬಂಡಾಯದ ಯಾವ ಗೆಳೆಯರೂ ಏನೂ ಪ್ರತಿಕ್ರಿಯೆ ತೋರಿಸದೆ ಹೋದ ಬಗ್ಗೆ ಬೇಸರದಿಂದ ನನಗೊಂದು ಪತ್ರ ಬರೆದಿದ್ದರು. ಅವರ ಪತ್ರ ಹೀಗಿತ್ತು – “ನಿಮ್ಮ ಎರಡೂ ಪತ್ರಗಳು ತಲುಪಿವೆ. ನನ್ನ ಲೇಖನ ಮೆಚ್ಚಿಕೊಂಡು ಬರೆದದ್ಧಕ್ಕೆ ಕೃತಜ್ಞತೆಗಳು. ಆದರೆ ನನ್ನ ಲೇಖನದ ಕುರಿತಂತೆ ಬಂಡಾಯದ ಗೆಳೆಯರು ಅಥವಾ ಪಕ್ಷದ ಒಳಗಿನ ಕಾಮ್ರೇಡುಗಳು ಏನೂ ಪ್ರತಿಕ್ರಿಯೆ ತೋರಿಸದೆ ಹೋದ ಬಗ್ಗೆ ನನಗೆ ನಿರಾಶೆಯಾಗಿದೆ. ಕೆಲವು ಗ್ರಹೀತ ಕಲ್ಪನೆಗಳನ್ನು ನಾನು ಪ್ರಶ್ನಿಸಿದ್ದೇ ದ್ರೋಹದ ಕೆಲಸವಾಗಿ ಅವರಿಗೆ ಕಂಡಿರಬೇಕು. ನಾನು ಲೇಖನ ಬರೆದದ್ದರ ಬಗ್ಗೆ ನನಗೆ ಏನೂ ವ್ಯಥೆ ಇಲ್ಲ. ಈಗಲೂ ನಾನು ಸಮಾಜವಾದದ ಮೌಲ್ಯಗಳಲ್ಲಿ ನಂಬಿಕೆ ಇರುವವನು. ಇಂತಹ ಚರ್ಚೆಗಳಿಂದ (ನಮ್ಮದು ತಪ್ಪಾಗಿದ್ದರೂ) ಒಳ್ಳೆಯದೇ ಆಗುತ್ತದೆ ಎಂದು ಕೂಡ ನಾನು ನಂಬಿದ್ದೇನೆ…”
ಮುಂಬಯಿಯಲ್ಲಿ ನಾನಿದ್ದ ಕನ್ನಡ ಪತ್ರಿಕೆಗಳು ತೊಂಭತ್ತರ ದಶಕದಲ್ಲಿ ವಿಶೇಷಾಂಕಗಳನ್ನು ತಂದಾಗಲೆಲ್ಲ ನಾನು ಜಿ. ರಾಜಶೇಖರ ಅವರಿಗೆ ಲೇಖನಕ್ಕಾಗಿ ಪತ್ರ ಬರೆಯುತ್ತಿದ್ದೆ. ಒಂದು ಸಲವೂ ತಪ್ಪಿಸದೇ ಪ್ರೀತಿಯಿಂದ ಲೇಖನಗಳನ್ನು ಕಳುಹಿಸಿಕೊಟ್ಟಿದ್ದರು. ಈ ಸಂಜೆ ಸುದ್ದಿ’ ದೈನಿಕಕ್ಕಾಗಿ ಜಿ ರಾಜಶೇಖರ್ ಅವರನ್ನು 1998ರಲ್ಲಿ ಊರಿಗೆ ಹೋಗಿದ್ದಾಗ ಸಂದರ್ಶಿಸಿ ಲೇಖನ ಕೂಡಾ ಮಾಡಿದ್ದೆ.
ಎರಡು ದಶಕದ ಹಿಂದೆ ಮಂಗಳೂರಿನ ಸರಕಾರಿ ಕಾಲೇಜ್ ನಲ್ಲಿ ಲಂಕೇಶ್ ಸಾಹಿತ್ಯದ ಸೆಮಿನಾರ್ ನಡೆದಾಗ ಜಿ.ರಾಜಶೇಖರ್ ಕೂಡಾ ಓರ್ವ ಭಾಷಣಗಾರರಿದ್ದರು.ಅಲ್ಲಿ ಲಂಕೇಶ್ ಕೂಡಾ ಕಷ್ಟ ಪಟ್ಟು ವೇದಿಕೆಗೆ ಬಂದಿದ್ದರು. ನಾನೂ ಪೂರ್ತಿ ಮುಗಿಯುವವರೆಗೆ ಅಲ್ಲಿದ್ದೆ.ಜಿ.ರಾಜಶೇಖರ್ ಗೋಷ್ಟಿ ಪೂರ್ತಿ ಮುಗಿಯುವ ತನಕ ಇರಬೇಕು ಎಂದು ನನ್ನಲ್ಲಿ ಮೊದಲೇ ಹೇಳಿದ್ದರಿಂದ ಕೂತುಕೊಂಡಿದ್ದೆ . ನಾನು ಲಂಕೇಶ್ ಅವರನ್ನು ಮೊದಲು ನೋಡಿದ್ದೇ ಅಲ್ಲಿ.
ಕೆಲವು ದಿನಗಳ ನಂತರ ಉಡುಪಿಯಲ್ಲಿ ರಾಜಶೇಖರ ಅವರು ಭೇಟಿಯಾದಾಗ ಅಂದಿನ ಮಂಗಳೂರಿನ ಕಾರ್ಯಕ್ರಮದ ನಂತರ ಒಂದು ಅಂಗಡಿಯಲ್ಲಿ ಅವರ ಬ್ಯಾಗ್ ಮರೆತುಬಿಟ್ಟು ಹೋದದ್ದರ ಒಂದು ಕತೆಯನ್ನೂ ಹೇಳಿದ್ದರು! ಜಿ.ರಾಜಶೇಖರ ಅವರ ಸಂದರ್ಶನವನ್ನು ಮತ್ತೆ ನೆನಪಿಸುವುದು ಈ ಸಂದರ್ಭದಲ್ಲಿ ಪ್ರಸ್ತುತ ಅನಿಸಿದೆ.ಸಂದರ್ಶನದ ಕೆಲವು ಮುಖ್ಯಾಂಶಗಳು ಇಲ್ಲಿವೆ:-
ಪ್ರಶ್ನೆ : ಕನ್ನಡದಲ್ಲಿ ಅತ್ಯುತ್ತಮ ಬರಹಗಾರರೆಂದು ಯಾರನ್ನು ಉಲ್ಲೇಖಿಸುವಿರಿ?
ಜಿ. ರಾಜಶೇಖರ್ : ಸದ್ಯಕ್ಕೆ ಲಂಕೇಶ್ ಮತ್ತು ಕಾಮರೂಪಿ.
ಪ್ರಶ್ನೆ : ಇಬ್ಬರೂ ಪತ್ರಕರ್ತರೇ ಆಗಿದ್ದಾರಲ್ಲ!
ಜಿ. ರಾಜಶೇಖರ್ : ನಿಜ, ಇಂಗ್ಲಿಷ್‌ನಲ್ಲಿ ಈ ತನಕ ಮಾರ್ಕ್ವಿಸ್, ಆರ್ವೆಲ್…. ಮೊದಲಾದವರು ಮಾಡಿದ್ದನ್ನು ಲಂಕೇಶ್ ಮತ್ತು ಕಾಮರೂಪಿಯವರಲ್ಲಿ ಕಾಣುತ್ತಿದ್ದೇವೆ. ಕನ್ನಡದ ಅತ್ಯುತ್ತಮ ಗದ್ಯ ಯಾವುದೆಂದರೆ ಲಂಕೇಶ್ ಬರೆಯುವುದೇ ಅತ್ಯುತ್ತಮ ಗದ್ಯವಾಗಿದೆ. ‘ಆಲ್‌ರೌಂಡರ್’ನಲ್ಲೂ ಲಂಕೇಶ್ ರ ಒಂದು ಅಂಕಣದಲ್ಲೂ ಇದನ್ನು ಗಮನಿಸಬಹುದು. ಪತ್ರಿಕಾ ವರದಿಯೊಂದು ಅತ್ಯುತ್ತಮ ಕಾವ್ಯಕ್ಕೆ, ಅತ್ಯುತ್ತಮ ಕತೆ ಕಾದಂಬರಿಗಳಿಗೆ ಸ್ಪರ್ಧೆ ಮಾಡುವ ರೀತಿಯನ್ನು ಕನ್ನಡದಲ್ಲಿ ಕಾಣಿಸಿದವರೇ ಲಂಕೇಶ್. ರಾಜಕೀಯದಲ್ಲೂ ಲಂಕೇಶ್ ಅತ್ಯುತ್ತಮ ನೈತಿಕತೆಗೆ ಸ್ಪಂದಿಸುತ್ತಾರೆ. ಪತ್ರಿಕಾ ಬರವಣಿಗೆಯಲ್ಲಿ ಅಸ್ತಿತ್ವದ ಮೂಲಭೂತ ಸಮಸ್ಯೆಗಳನ್ನು (ನೋವು, ಸಾವು…. ಇತ್ಯಾದಿ) ಅನುಭವಿಸುವುದು, ಇದಕ್ಕೊಂದು ಮಾತುಕೊಡುವುದು…. ಇದು ನಿಜವಾಗಿಯೂ ಲಂಕೇಶ್ ರ ಬಹಳ ದೊಡ್ಡ ಸಾಧನೆ.
ಇನ್ನು ಕಾಮರೂಪಿ ಕೂಡಾ ಒಳ್ಳೆಯ ಕತೆ, ಕಾದಂಬರಿಕಾರ ಮತ್ತು ಇಂಡಿಯಾದ ಒಬ್ಬ ಅತ್ಯುತ್ತಮ ಪತ್ರಕರ್ತರು ಕೂಡಾ. ಇವರು ರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಒಬ್ಬ ಉತ್ತಮ ಪತ್ರಕರ್ತ, ದಕ್ಷಿಣ ಆಫ್ರಿಕಾದಲ್ಲಿ ‘ದಿ ಹಿಂದೂ’, ‘ಫ್ರೆಂಟ್ ಲೈನ್’ನ ಪ್ರತಿನಿಧಿಯಾಗುವ ಮೊದಲು ಈಶಾನ್ಯ ಭಾರತದಲ್ಲಿ ಇವುಗಳ ಪ್ರತಿನಿಧಿಯಾಗಿದ್ದರು. ಈಶಾನ್ಯ ಭಾರತದ ಕುರಿತು ನಾವು ಯಾವ ನಿರ್ಲಕ್ಷ್ಯ ತಳೆದಿರುವೆವೋ ಇದರಿಂದ ನಮ್ಮಲ್ಲಿ ಗಾಢ ಅಜ್ಞಾನ ಕೂಡಾ ಇದೆ. ಆದರೆ ಕಾಮರೂಪಿಯವರು ಈ ಬಗ್ಗೆ ಕರಾರುವಕ್ಕಾದ ಬರವಣಿಗೆ ಬರೆದವರು. ಬಹಳ ಅಧಿಕಾರವಾಣಿಯಿಂದ ಈಶಾನ್ಯ ಭಾರತದ ಕುರಿತಂತೆ ಹೇಳಬಲ್ಲವರು. ಈಗ ನಿಮ್ಮ ಪ್ರಶ್ನೆ-ಕನ್ನಡದಲ್ಲಿ ಯಾವ ಬರಹಗಾರ ಚೆನ್ನಾಗಿ ಬರೆಯಬಲ್ಲ ಎಂಬುದಕ್ಕೆ ನಾನು ಲಂಕೇಶ್, ಕಾಮರೂಪಿ ಹೆಸರನ್ನು ಹೇಳಿದೆ. ಯಾಕೆ ಹೇಳಿದೆ ಅಂದರೆ ಮತ್ತೆ ನಾವು ನವ್ಯದ ಕಡೆಗೇ ನೋಡಬೇಕಾಗಿದೆ. ನವ್ಯದ ನಂತರ ಕನ್ನಡ ಸಾಹಿತ್ಯ ನಿಜವಾಗಿಯೂ ಮರುಭೂಮಿ ಎನಿಸಿದೆ, ಎನ್ನಬೇಕಾಗಿದೆ.
ಪ್ರಶ್ನೆ : ಕನ್ನಡದಲ್ಲಿ ಇತ್ತೀಚೆಗೆ ಬಂದಿರುವ ಉತ್ತಮ ಕೃತಿ ಯಾವುದೆಂದು ಹೇಳುವಿರಿ?
ಜಿ. ರಾಜಶೇಖರ್ : ಸ್ವಲ್ಪ ಕಷ್ಟವಿದೆ ಹೇಳಲು. ಇಂಗ್ಲಿಷ್‌ನಲ್ಲಾದರೆ ನಾಲೈದು ಕೃತಿಗಳನ್ನು ಹೇಳಬಲ್ಲೆ. ಕನ್ನಡದಲ್ಲಿ ಕೇವಲ ಬಿಡಿ ಬಿಡಿಯಾದ ಬರಹಗಳನ್ನು ಹೇಳಬಹುದಷ್ಟೆ. ವಿಶೇಷಾಂಕಗಳಲ್ಲಿ ಬಂದ ಲಂಕೇಶ್‌ರ ಕತೆ, ಗಿರೀಶ್ ಕಾರ್ನಾಡ್ ರ ಕತೆ ಇತ್ಯಾದಿ. ಉತ್ತಮ ಕೃತಿ ಯಾವುದೆಂದರೆ ಹೇಳಲು ಕಷ್ಟ.
ಪ್ರಶ್ನೆ : ಕನ್ನಡದ ಮಹಿಳಾ ಬರಹಗಾರರಲ್ಲಿ ಯಾರನ್ನು ಉಲ್ಲೇಖಿಸಬಹುದಾಗಿದೆ…?
ಜಿ. ರಾಜಶೇಖರ್ : ಪ್ರತಿಭಾ ನಂದಕುಮಾರ್ ಕಾವ್ಯ ಮತ್ತು ಉಮಾರಾವ್ ಅವರ ಗದ್ಯ ಬರಹಗಳನ್ನು. ನನ್ನ ನೀತಿ ಎಂದರೆ ಆಧುನಿಕವಲ್ಲದ್ದನ್ನು ನಾನು ಮೆಚ್ಚಿಕೊಳ್ಳುವುದಿಲ್ಲ. ಕನ್ನಡದ ಕವಯತ್ರಿಯರು ತಾವು ‘ಅಕ್ಕ’ನ ಹಾಗೆ ಬರೆದವರು ಎಂದು ಭ್ರಮಿಸಿ ಬರೆದವರು. ಇನ್ನು ಅರ್ಧದಷ್ಟು ತಾವು ‘ಅಕ್ಕ’ನ ಹಾಗೆ ಅಲ್ಲ ಎಂದು ಸ್ಥಾಪಿಸಲು ಹೊರಟವರು. ಹೆಣ್ಣಿನ ಸ್ಥಿತಿ ಗಂಡಿನ ಸ್ಥಿತಿ ಬೇರೆ ಬೇರೆ ಧ್ರುವಗಳಲ್ಲ. ಮಹಿಳೆಯರ ಸ್ಥಿತಿಯ ಬಗ್ಗೆ ಮಹಿಳೆಯರೇ ಬರೆಯಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಅನೇಕ ಬವಣೆಗಳಿವೆ ನಿಜ. ಅದನ್ನು ಹೆಣ್ಣಿನಷ್ಟೇ ಗಂಡು ಕೂಡಾ ಸೂಕ್ಷ್ಮವಾಗಿ ಅನುಭವಿಸಬಹುದಾಗಿದೆ. ಹೆಣ್ಣಿನ ಸ್ಥಿತಿಯ ಬಗ್ಗೆ ಅತ್ಯುತ್ತಮವಾಗಿ ಬರೆದವರು ಯಾರು ಎಂದರೆ ಕೆಲವರನ್ನು ಹೇಳಬಹುದು – ಮಾಸ್ತಿ, ಚಿತ್ತಾಲ, ಅನಂತಮೂರ್ತಿ, ಲಂಕೇಶ್… ಇಂತವರನ್ನು ಹೇಳುವೆ. ಇನ್ನು ಪ್ರತಿಭಾ, ಉಮಾರಾವ್‌ರಷ್ಟೇ ಸುನಂದಾ ಬೆಳಗಾಂವ್‌ಕರ್ ಇವರ ಬರವಣಿಗೆಯನ್ನೂ ನಾನು ಮೆಚ್ಚುವೆ. ಇನ್ನೂ ಹೇಳುವುದಾದರೆ “ಹಾಂ, ಪರವಾಗಿಲ್ಲ. 35 ಶೇಕಡಾ ಮಾರ್ಕು ಪಡೆದಿದ್ದಾರೆ” ಎಂದು ಹೇಳಬಹುದಾದ ಲೇಖಕಿಯರೂ ಇದ್ದಾರೆ. ತುಂಬಾ ಬರೆದಿರುವವರ ಬಗ್ಗೆಯೂ ಕೆಲವೊಮ್ಮೆ ಹೀಗೆ ಹೇಳಬೇಕಾಗುತ್ತದೆ.
ಪ್ರಶ್ನೆ : ಸಂವೇದನೆಗಳ ಬಗ್ಗೆ ಕೆಲವರು ಮಾತನಾಡುತ್ತಾರಲ್ಲ….
ಜಿ. ರಾಜಶೇಖರ್ : ನಾನು ಆಗಲೇ ಹೇಳಿದಂತೆ ಮಹಿಳೆಯರ ಸ್ಥಿತಿಯ ಬಗ್ಗೆ ಅವರೇ ಬರೆಯಬೇಕು ಎಂದೇನೂ ಇಲ್ಲ. ಇವೆಲ್ಲ ತೀರಾ ಸಾಮಾನ್ಯ ವಿಷಯಗಳು. ಹೆಚ್ಚಿನವರು ಪೂರ್ವ ನಿಶ್ಚಿತವಾದುದನ್ನೇ ಹೇಳುತ್ತಾರೆ. ಅನನ್ಯತೆ ಈ ಯಾವುದರಲ್ಲೂ ಕಾಣುವುದಿಲ್ಲ, ಅಬ್ದುಲ್ ರಶೀದ್‌ರನ್ನು ಬಿಟ್ಟರೆ ಉಳಿದವರೆಲ್ಲ ಪೂರ್ವ ನಿಶ್ಚಿತವಾದುದನ್ನೇ ಬರೆಯಲು ಹೋಗುತ್ತಿದ್ದಾರೆ. ಇವತ್ತು ಯಾರು ಬರೆದರೂ ಇದು ಗೊತ್ತಿದ್ದ ಸಂಗತಿ ಎಂದೇ ಅನಿಸುತ್ತದೆ. ನವ್ಯದಲ್ಲಿದ್ದ ವಿಸ್ಮಯ, ಓದುವ ಕುತೂಹಲ ಈಗಿನ ಯಾವುದರಲ್ಲೂ ಕಾಣಸಿಗುತ್ತಿಲ್ಲ. ಮನಸ್ಸಿನಲ್ಲಿ ಆಗಲೇ ಇರುವ ವಿಷಯಕ್ಕೆ ಸಮರ್ಥನೆ ನೀಡುವ ಓದು ಯಾಕೆ ಬೇಕು? ಎಂತಹ ಓದು ಅದು?
ಪ್ರಶ್ನೆ : ಅಂದರೆ ಕನ್ನಡದಲ್ಲಿ ಇತರ ಉತ್ತಮ ಬರಹಗಾರರೇ ಇಲ್ಲವೆಂದೇ? ಕುತೂಹಲ ಪಡುವಂತೆ ಬರೆಯುವ ಇತರರು ಯಾರೆಂದು ಹೇಳುವಿರಿ?
ಜಿ. ರಾಜಶೇಖರ್ : ಇತ್ತೀಚೆಗೆ ನಾನು ಕುತೂಹಲ ಪಟ್ಟು ಓದುವುದು ಜಯಂತ ಕಾಯ್ಕಿಣಿ ಮತ್ತು ವಿವೇಕ ಶ್ಯಾನ್‌ಭಾಗ್‌ರನ್ನು ಹಾಗೂ ಯೋಗಪ್ಪನವರ್ ಈ ಮೂವರನ್ನು. ತರುಣರಲ್ಲಿ ನನಗೆ ಜಯಂತ್ ಕಾಯ್ಕಿಣಿ ಇಷ್ಟ. ಜಯಂತ್ ಕಾಯ್ಕಿಣಿಗೆ ಎಲ್ಲವನ್ನೂ ಗಮನಿಸುವ, ಗ್ರಹಿಸುವ ಕಣ್ಣು ಇದೆ. ಮತ್ತು ಅವರಿಗೇ ವಿಶಿಷ್ಟವಾದ ಒಂದು ಗದ್ಯವಿದೆ, ನಮ್ಮಲ್ಲಿ ಹೆಚ್ಚಿನ ಗದ್ಯ ಬರಹಗಾರರಿಗೆ, ಕತೆಗಾರರಿಗೆ, ಒಳ್ಳೆಯ ಗದ್ಯ ಎಂದರೆ ಹುಸಿ ಕಾವ್ಯದ ಲಯದಲ್ಲಿ ‘ಪ್ರೆಟಿ’ ಅನ್ನಿಸುವ ತರಹ ಬರೆಯುವುದು. ಜಯಂತ್ ಅದನ್ನು ಮಾಡುವುದಿಲ್ಲ. ನಮ್ಮ ಅನೇಕ ಬರಹಗಾರರ ಹಾಗೇ ಬರೀ ಸುಂದರವಾದುದನ್ನೇ ನೋಡಬೇಕು-ಕೇಳಬೇಕು ಎನ್ನುವಂತಹ ಹಟವೂ ಇಲ್ಲ. ಲಯಬದ್ಧವಾದುದನ್ನೇ ನೋಡಬೇಕೆಂದೂ ಇತರರಂತೆ ಅವರು ಯಾವುದೇ ರೀತಿಯ ಹಟವನ್ನಿಟ್ಟಿಲ್ಲ. ಒಬ್ಬ ಲೇಖಕನಾಗಿ ಕುರೂಪ, ಅಪಶೃತಿ ಇವುಗಳನ್ನೂ ತಿರಸ್ಕರಿಸಲು ಹೋಗುವುದಿಲ್ಲ. ಆದ್ದರಿಂದ ಜಯಂತರ ಬರಹಗಳು ಬಹಳ ಕುತೂಹಲದಿಂದ ಓದುವಂತೆ ಮಾಡುವುವು.
ಪ್ರಶ್ನೆ : ಲಂಕೇಶ್‌ರ ಗದ್ಯ ಬರಹ ಈಗಾಗಲೇ ಮೆಚ್ಚಿದ್ದನ್ನು ತಿಳಿಸಿದಿರಿ. ಹಾಗೆಯೇ ರವಿ ಬೆಳೆಗೆರೆಯವರು ‘ಹಾಯ್ ಬೆಂಗಳೂರ್’ನಲ್ಲಿ ಬರೆಯುವ ಖಾಸ್ಬಾತ್ ಲೇಖನಗಳು?
ಜಿ. ರಾಜಶೇಖರ್ : ಲಂಕೇಶ್ ಎಂತಹ ತಪ್ಪು ಮಾಡಿದರೂ ಕೆಟ್ಟ ಅಭಿರುಚಿ ಎನ್ನುವುದು ಹತ್ತಿರ ಕೂಡಾ ಸುಳಿಯುವುದಿಲ್ಲ. ರವಿಬೆಳಗೆರೆ ಬಗ್ಗೆ ಈ ಮಾತು ಹೇಳುವುದು ಸ್ವಲ್ಪ ಕಷ್ಟ. ಇನ್ನೊಂದು ಮಾತು ಏನೆಂದರೆ ಲಂಕೇಶ್ ಯಾವಾಗಲೂ ಓದುಗನನ್ನು ಮರೆಯುವುದಿಲ್ಲ. ಲಂಕೇಶ್‌ರನ್ನು ಯಾರು ಎಷ್ಟೇ ಪಾಳೆಯಗಾರ ಎಂದರೂ ಓದುಗನ ಸ್ವಾಯತ್ತತೆಯನ್ನು ಲಂಕೇಶ್ ಎಂದೂ ಧಿಕ್ಕರಿಸುವುದಿಲ್ಲ. ಲಂಕೇಶ್‌ರ ಗದ್ಯ ಎಷ್ಟು ಪಾರದರ್ಶಕ ಎಂದರೆ ಆತನ ಉದಾತ್ತತೆಯಷ್ಟೇ ಆತನ ಸಣ್ಣತನವನ್ನು ಮೂಡಿಸಿ ಬಿಡುತ್ತದೆ. ರವಿ ಬೆಳಗೆರೆಗೆ ಪ್ರತಿಭೆ ಇದೆ. ಆದರೆ ಅದನ್ನು ಪೋಲು ಮಾಡುವ ಗುಣವೂ ಇದೆ ಎನ್ನಬೇಕಾಗಿದೆ.
ಪ್ರಶ್ನೆ : ಲಂಕೇಶ್‌ರ ‘ಹುಳಿಮಾವಿನ ಮರ’ದ ಕುರಿತಂತೆ ರಾಮಚಂದ್ರದೇವ ಬರೆದಿರುವ ಮಾತುಗಳು……
ಜಿ. ರಾಜಶೇಖರ್ : ರಾಮಚಂದ್ರ ದೇವರ ಮಾತುಗಳನ್ನು ನಾನು ಒಪ್ಪುವುದಿಲ್ಲ. ಕನ್ನಡದ ಲೇಖಕರು ಬರೆದ ಆತ್ಮಚರಿತ್ರೆಗಳಲ್ಲೇ ‘ಹುಳಿ ಮಾವಿನ ಮರ’ ಕೃತಿ ಅತ್ಯುತ್ತಮವಾದುದು. ಈ ಹಿಂದೆ ಕುವೆಂಪುರವರ ‘ನೆನಪಿನ ದೋಣಿಯಲ್ಲಿ’ ನಾನು ಮೆಚ್ಚಿಕೊಂಡಿದ್ದೇನೆ.ಆದರೆ ಇವೆರಡನ್ನು ಹೋಲಿಸುವುದಕ್ಕಾಗುವುದಿಲ್ಲ, ಹೋಲಿಸಬಾರದು.
ಪ್ರಶ್ನೆ : ಕನ್ನಡದ ಪತ್ರಿಕೆಗಳು ಸಾಹಿತ್ಯಕ್ಕೆ ಸರಿಯಾದ ಅವಕಾಶ ನೀಡುತ್ತಿದೆಯೆಂದು ಅನ್ನಿಸಿದೆಯೋ?
ಜಿ. ರಾಜಶೇಖರ್ :ಲಂಕೇಶ್ ತಮ್ಮ ಪತ್ರಿಕೆಯಲ್ಲಿ 4-5 ಪುಟಗಳಷ್ಟು ನೀಡುವ ಸಾಹಿತ್ಯವಷ್ಟೇ ಗಮನಾರ್ಹವಾದುದು. ಪ್ರಜಾವಾಣಿಯವರೂ ಸಾಹಿತ್ಯ ಪುಟಗಳನ್ನು ಕಡಿಮೆ ಮಾಡುತ್ತಿದ್ದಾರೆ. ನಮ್ಮೆಲ್ಲಾ ಜನಪ್ರಿಯ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಕಡೆಯ ಸ್ಥಾನ ನೀಡಲಾಗುತ್ತಿದೆ. ಸುಧಾ, ತರಂಗಗಳಂತಹ ವಾರಪತ್ರಿಕೆಗಳಲ್ಲೂ ಒಂದೊಂದು ಪುಟದಲ್ಲಿ 4-4 ಕೃತಿಗಳ ವಿಮರ್ಶೆ ಮಾಡುತ್ತಿರುವುದು ಕನ್ನಡ ಸಾಹಿತ್ಯಕ್ಕೆ ಅವಮಾನ. ಇಂತದ್ದರಲ್ಲಿ ಲಂಕೇಶ್ 4-5 ಪುಟಗಳನ್ನೇ ಸಾಹಿತ್ಯಕ್ಕಾಗಿ ನೀಡುತ್ತಿದ್ದಾರಲ್ಲ. ಈ ಪತ್ರಿಕೆ ಆರಂಭವಾದಂದಿನಿಂದ ಅದರ ಎಲ್ಲಾ ಪುಟಗಳನ್ನೂ ಬಿಡದೆ ಓದಿದ್ದೇನೆ. ಕನ್ನಡದ ಅತ್ಯುತ್ತಮ ವಾರ ಪತ್ರಿಕೆ ಲಂಕೇಶ್ ಪತ್ರಿಕೆ.
ಪ್ರಶ್ನೆ : ಕರಾವಳಿ ಜಿಲ್ಲೆಗಳ ಪತ್ರಿಕೆಗಳ ಬಗ್ಗೆ….
ಜಿ, ರಾಜಶೇಖರ್ : ಕರಾವಳಿಯ ಹೆಚ್ಚಿನ ಪತ್ರಿಕೆಗಳು ಮತೀಯವಾದದ ಪೂರ್ವಾಗ್ರಹಗಳಿಂದ ಕೂಡಿವೆ. ಅದರಲ್ಲೂ ಕೆಲವು ‘ಜನಪ್ರಿಯ’ ಪತ್ರಿಕೆಗಳಿಗೆ ಇಲ್ಲಿನ ಪ್ರಜೆಗಳಿಗೆ ಸಮಾನ ಹಕ್ಕು ಇದೆ ಎನ್ನುವ ಕಲ್ಪನೆ ಕೂಡಾ ಇಲ್ಲ. ಕ್ರಿಮಿನಲ್ ಆಪಾದನೆ ಇರುವವರನ್ನು ಜನ ಬಿಡಿಸಿಕೊಂಡು ಹೋಗುವುದು, ನೂರಾರು ಜನ ಒಟ್ಟಾಗಿ ಒಬ್ಬನಿಗೆ ಕಲ್ಲು ಹೊಡೆದು ಸಾಯಿಸುವುದು….. ಇವೆಲ್ಲ ಈ ಸಮಾಜಕ್ಕೆ ಅಂಟಿದ ರೋಗದ ಸೂಚನೆಗಳು ಎಂದು ಕೂಡಾ ಇಲ್ಲಿಯ ಪತ್ರಿಕೆಗಳಿಗೆ ಅನ್ನಿಸುವುದಿಲ್ಲವಲ್ಲ! ನಾನು ಸಣ್ಣಪುಟ್ಟ ಪತ್ರಿಕೆಗಳನ್ನು ಈ ವಿಷಯದಲ್ಲಿ ಅಷ್ಟು ದೂರುವುದಿಲ್ಲ. ದೊಡ್ಡ ಪತ್ರಿಕೆಗಳೇ ಮುಸ್ಲಿಂರು ಅನ್ಯರು ಎನ್ನುವಂತೆ ಚಿತ್ರಿಸಿರುವುದು ಪ್ಯಾಸಿಸ್ಟ್ ಅಲ್ಲದ ಮತ್ತೇನು? ಈಗಂತೂ ಆರೋಗ್ಯಕರ ನಿಲುವನ್ನು ಕೆಲವು ಹೊಸ ಪತ್ರಿಕೆಗಳು ಕಾಣಿಸುತ್ತಿವೆ ಎನ್ನುವುದು ಸಮಾಧಾನ ಪಡಬೇಕಾಗಿದೆ.
ಪ್ರಶ್ನೆ : ನಮ್ಮ ಸರಕಾರದ ಕುರಿತಂತೆ ಏನಾದರೂ..( ಎರಡು ದಶಕದ ಹಿಂದಿನ ಸರಕಾರದ ಬಗೆಗಿನ ಪ್ರಶ್ನೆ)
ಜಿ. ರಾಜಶೇಖರ್ : (ಅರ್ಧದಲ್ಲೇ ತಡೆದು) ಈ ಬಗ್ಗೆ ಏನೂ ಕೇಳಬೇಡಿ. ಜನರೇ ಭ್ರಷ್ಟರಾಗಿದ್ದಾರೆ. ಜನರಿಂದ ಆಯ್ಕೆಯಾದ ಸರಕಾರ ಒಳ್ಳೇದಿರುವುದಾದರೂ ಹೇಗೆ? ನಮ್ಮ ಸರಕಾರ ನಮ್ಮ ಸಮಾಜಕ್ಕೆ ಹಿಡಿದ ರೋಗದ ಸೂಚನೆ. ನಾವೆಲ್ಲ ರೋಗಿಷ್ಟರು. ಕೆಲವರಿಗೆ ಕೈಕಾಲು ಆಡಿಸದಷ್ಟು ರೋಗ. ಇನ್ನು ಕೆಲವರಿಗೆ ನಾನಾ ರೀತಿಯ ಸಾಂಕ್ರಾಮಿಕ ರೋಗ, ಸಮಾಜಕ್ಕೇ ರೋಗ ಹಿಡಿದಿದೆ.
ಪ್ರಶ್ನೆ : ಕೊನೆಯದಾಗಿ ,ಸಾಹಿತ್ಯದ ಪ್ರಶ್ನೆಯಲ್ಲೇ ಮಾತು ಮುಗಿಸೋಣ. ಕನ್ನಡದ ವಿಮರ್ಶಾ ಕ್ಷೇತ್ರ ಹೇಗಿದೆ?
ಜಿ. ರಾಜಶೇಖರ್ : ನಾನು ಆಸಕ್ತಿಯಿಂದ ಓದುತ್ತಿರುವುದು ಕೀರ್ತಿನಾಥ ಕುರ್ತಕೋಟಿ, ಡಿ.ಆರ್. ನಾಗರಾಜ್ ಮತ್ತು ಕೀ.ರಂ. ನಾಗರಾಜ್ ಇವರನ್ನು. ನಾನು ಬರೆದ ವಿಮರ್ಶೆಯನ್ನೇ ನನಗೆ ಮತ್ತೊಮ್ಮೆ ಓದಬೇಕು ಅಂತನ್ನಿಸುವುದಿಲ್ಲ. ಹೀಗಾಗಿಯ ಸಂಕಲನ ತರುವ ಕುರಿತೂ ನನಗೆ ಇಷ್ಟ ಇಲ್ಲ. ನಿಜ ಹೇಳಬೇಕೆಂದರೆ ವಿಮರ್ಶೆಯ ಕುರಿತು ಮಾತನಾಡಲು ಇಷ್ಟವೇ ಇಲ್ಲ ಎನ್ನುವೆ. ಹಲವು ವರ್ಷ ಈ ಬಗ್ಗೆ ವ್ಯರ್ಥ ಮಾಡಿದ್ದೇನೋ ಎಂದೂ ಅನ್ನಿಸುವುದಿದೆ…..
( ರಾಜಶೇಖರ ಅವರ ಈ ಪ್ರತಿಕ್ರಿಯೆಗಳು 1998-1999 ರ ಅವಧಿಯದ್ದು)
ಜಿ.ರಾಜಶೇಖರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
——-