‘ಕಾಲಕೋಶ’ ಕೃತಿ ಪರಿಚಯ

(ವಿಭಜನೆ ಸಮಯದ ಕ್ರೌರ್ಯ ಮತ್ತು ಅಮಾಯಕರ ನೋವು)

ಕಾಲಕೋಶ (ಕಾದಂಬರಿ)

ಲೇ: ಶಶಿಧರ ಹಾಲಾಡಿ (09886785967)

ಪ್ರ.ಮುದ್ರಣ: 2021

ಪ್ರ: ಅಂಕಿತ ಪುಸ್ತಕ, ಬೆಂಗಳೂರು

ಬೆಲೆ:160 /- ರೂ.

ಪತ್ರಕರ್ತ ,ಸಾಹಿತಿ  ಶಶಿಧರ ಹಾಲಾಡಿ ಅವರು “ಕಾಲಕೋಶ” ಕಾದಂಬರಿ ರಚಿಸಿ ಹತ್ತು ವರ್ಷಗಳ ನಂತರ ಪುಸ್ತಕ ರೂಪದಲ್ಲಿ ಬಂದಿದೆ. 2020 ರ ಕೊರೊನಾ ಕಾಲದ ಗೃಹಬಂಧನದ ಸಮಯ ಈ ಕಾದಂಬರಿಯನ್ನು ಪರಿಷ್ಕರಿಸಿ ವಿಸ್ತರಿಸಿ ಬರೆದು, ಕೊನೆಗೂ ಅಂಕಿತ ಪ್ರಕಾಶನದ ಮೂಲಕ ಪ್ರಕಟವಾಗಿ ಸಾರಸ್ವತ ಲೋಕದ ಕೈ ಸೇರಿದೆ.

1940 ರ ದಶಕದ ಭಾರತ ಪಾಕ್ ವಿಭಜನೆಯ ಸಂದರ್ಭದ ಚರಿತ್ರೆಯ ದಾಖಲೆಗಳ ಸಂಗತಿಗಳನ್ನು  ಹೇಳುತ್ತಾ “ಈ ಕಾದಂಬರಿಯಲ್ಲಿ ಬರುವ ವ್ಯಕ್ತಿ, ಘಟನೆಗಳು ಕಾಲ್ಪನಿಕ” ಎನ್ನುತ್ತಲೇ ಕಾದಂಬರಿಯನ್ನು ಸ್ವಾರಸ್ಯಕರವಾಗಿ ಬೆಳೆಸಿದ್ದಾರೆ. ಮುಖ್ಯವಾಗಿ ಕಾದಂಬರಿಯ ಪಾತ್ರಗಳು ಮನುಷ್ಯ ಸಂಬಂಧಗಳನ್ನು ಚರ್ಚಿಸುತ್ತವೆ.

ಪ್ರಕೃತಿ ರಮಣೀಯ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕತಾ ನಾಯಕ ಮುಂದೆ ಬ್ಯಾಂಕ್ ಉದ್ಯೋಗಿಯಾಗುತ್ತಾನೆ. ಆದರೆ ಒಂದು ಅನಿವಾರ್ಯ ಪ್ರಸಂಗದಲ್ಲಿ ದಿಢೀರ್ ರಜೆ ಹಾಕಿದಾಗ ಅದಕ್ಕೆ ಶಿಕ್ಷೆ ಎಂಬಂತೆ ದೆಹಲಿಗೆ ವರ್ಗಾವಣೆ ಮಾಡಲಾಗುತ್ತದೆ.

ದೆಹಲಿಗೆ ಬಂದು ವಾರ ಕಳೆದರೂ ಖಾಯಂ ವಸತಿ ಹುಡುಕೋದೆ ಆತನಿಗೆ ಸಮಸ್ಯೆ ಆಗುತ್ತದೆ. ಒಬ್ಬಂಟಿ  ವ್ಯಕ್ತಿಗೆ ಯಾರೂ (ಇಂದಿಗೂ) ಬಾಡಿಗೆ ರೂಮ್ ನಲ್ಲಿ ಇರಿಸಲು ನಿರಾಕರಿಸುತ್ತಾರೆ. ಕತಾ ನಾಯಕನಿಗೂ ಹಾಗೇ ಸಮಸ್ಯೆ ಬಂದಿತು. ಆಗ ನೆರವಿಗೆ ಬಂದವರು ಸಹೋದ್ಯೋಗಿ ಆಪ್ಟೆ. ಅವರ ಕಾರಣ ಅಮರ್ ಸಿಂಗ್ ಎಂಬವರು ರೂಮಿನ ವ್ಯವಸ್ಥೆ ಮಾಡಿಕೊಡುತ್ತಾರೆ.

ಇಲ್ಲಿಂದ ಕಾದಂಬರಿಗೆ ಹೊಸ  ರಂಗು ಬರುತ್ತದೆ. ಅಮರ್ ಸಿಂಗ್ ಅವರು ಪಾಕಿಸ್ತಾನದ ಲಾಹೋರ್ ನಿಂದ ಬಂದವರಾಗಿದ್ದರು.1947 ರಲ್ಲಿ  ಭಾರತ ಪಾಕ್ ವಿಭಜನೆಯಾದಾಗ ಅಲ್ಲಿದ್ದ ತಮ್ಮ ಮನೆ ಸೈಟು.. ಇತ್ಯಾದಿಗಳನ್ನು ಬಿಟ್ಟು ಭಾರತಕ್ಕೆ ಬಂದವರು ಎಂದು ತಿಳಿಯುತ್ತಿದ್ದಂತೆ ಕಾದಂಬರಿ ಮತ್ತೊಂದು ಮಗ್ಗುಲಲ್ಲಿ ಬೆಳೆಯುತ್ತಾ ಹೋಗುವುದು ಗಮನಿಸಬಹುದು.

ಕತಾನಾಯಕನ ರೂಮಿನಲ್ಲಿ ಒಂದು ಫೋಟೋ ಇದೆ. ಅದನ್ನು ತೆಗೆಯಬಾರದು ಎಂದು ಅಮರ್ ಸಿಂಗ್ ಹೇಳ್ತಾರೆ. ಅದು ಅವರ ಮಗನ ಫೋಟೋ. ಕತಾನಾಯಕನನ್ನು ನೋಡಿದಾಗ ಅವರಿಗೆ ಮಗನ ನೆನಪು. (ಈ ಮಗ ದೆಹಲಿಯಲ್ಲೇ ಎಲ್ಲೋ ಇದ್ದಾನೆ ಎಂಬ ಬಲವಾದ ನಂಬಿಕೆ ಅಮರ್ ಸಿಂಗ್ ಪತ್ನಿ ಅವರದ್ದು .ಮುಂದೆ ಒಮ್ಮೆ “ಅವನು ನನಗೆ ಮೊನ್ನೆ ನೋಡಲು ಸಿಕ್ಕಿದ” ಎಂಬ ಮಾತೂ ಹೇಳುತ್ತಾರೆ ಒಂದು ಘಟನೆಯಲ್ಲಿ.

ಇನ್ನು ಆಪ್ಟೆಯವರು ಮಹಾರಾಷ್ಟ್ರದವರು. 1948 ರಲ್ಲಿ  ಗೋಡ್ಸೆಯಿಂದ ಗಾಂಧೀಜಿ ಅವರ ಕೊಲೆಯಾದ ಸಂದರ್ಭದಲ್ಲಿ  ಕೊಂಕಣ ಕ್ಷೇತ್ರ  ರತ್ನಗಿರಿ – ಮುಂಬೈ ಸುತ್ತ ಹರಡಿದ ಹಿಂಸಾಚಾರದ ನೆನಪುಗಳನ್ನು ಮಾಡಿಸುತ್ತಾರೆ.

ಇಲ್ಲಿ ಓದುಗರಿಗೆ ಅಮರ್ ಸಿಂಗ್ ಮತ್ತು ಆಪ್ಟೆಯವರ ಮೂಲಕ ನಲುವತ್ತರ ದಶಕದ ಎರಡು  ಮಹಾನ್ ಘಟನೆಗಳ ಪುನರ್ ದರ್ಶನವಾಗುವುದು. ನಾಯಕ ತನ್ನ ಊರಲ್ಲಿ ಸಂಬಂಧಿಯೊಬ್ಬರ (ದೊಡ್ಡಪ್ಪ) ಕೊಲೆಯ ಸಂದರ್ಭದಲ್ಲಿ ಮಾನವೀಯತೆ ತೋರಿಸಿದ್ದೇ ತಪ್ಪಾಯ್ತೇ ಎಂಬಂತೆ ಶಿಕ್ಷೆಯಾಗಿ ಆತ ದೆಹಲಿಗೆ ವರ್ಗಾವಣೆಯಾದವರು. ಇಲ್ಲಿ ಊರು ಮತ್ತು ದೆಹಲಿ ಎರಡರ ಪರಿಚಯವೂ ಓದುಗರಿಗೆ ಆಗುತ್ತದೆ.

ಕಾದಂಬರಿ ಸ್ವಾತಂತ್ರ್ಯಾ ನಂತರದ  ದಿನಗಳ ವಿವಿಧ ಸಂದರ್ಭಗಳ ಹಿಂಸಾಚಾರವನ್ನು ಮುಂದಿಟ್ಟು ಆತ್ಮಾವಲೋಕನಕ್ಕೆ ಓದುಗರನ್ನು ಪ್ರೇರೇಪಿಸುತ್ತದೆ. ಈ ಬಗ್ಗೆ ಮುಂದಿನ ಪೀಳಿಗೆ ಹೇಗೆ ಕಾಳಜಿ ವಹಿಸಬಹುದು ಎನ್ನುವುದನ್ನೂ ಪರೋಕ್ಷವಾಗಿ ಇಲ್ಲಿ ಓದುಗರಿಗೆ ಅರ್ಥೈಸಿರುವುದೂ ಗಮನಕ್ಕೆ ಬರುತ್ತದೆ.

ಇಲ್ಲೊಂದು ಅಮರ್ ಸಿಂಗ್ ರ ಮಾತು ಹೀಗಿದೆ- ” ಲಾಹೋರ್ ನಿಂದ  ನಾವು ಬರುವಾಗ ಲಾಕರ್ ರೂಮಿನಲ್ಲಿ ನಮ್ಮಲ್ಲಿದ್ದ ಚಿನ್ನ ಬೆಳ್ಳಿ ನಾಣ್ಯ,ಬೆಳ್ಳಿ ಪಾತ್ರೆ ಎಲ್ಲವನ್ನೂ ಇಟ್ಟು ಬೀಗ ಹಾಕಿದ್ದೆವು. ಆದರೆ ಲಾಹೋರ್ ನಲ್ಲಿದ್ದ ನಮ್ಮ ಆ ಮನೆಯನ್ನು ದಂಗೆಕೋರರು  ಲೂಟಿ ಮಾಡಿದರಂತೆ……ಹೀಗೆಲ್ಲ ಆಗುತ್ತದೆ ಅಂತ ಎಣಿಸಿದ್ದೆವಾ? ಗಲಾಟೆ  ಕಡಿಮೆ ಆದ ನಂತರ ವಾಪಸ್ಸು ನಮ್ಮ ಮನೆಗೆ ಹೋಗುವುದು ಅಂತ ಮನಸ್ಸಿನಲ್ಲಿತ್ತು…..”

ಹೀಗೆ 1947 ರ ವಿಭಜನೆಯ ಸಮಯ ಅಮರ್ ಸಿಂಗ್ ಹೇಳುವ (ನಾವಿಬ್ಬರೂ ಕುಳಿತ ಆರೆಂಟು ರಾತ್ರಿ ಅಮರ್ ಸಿಂಗ್ ನ ಕತೆಯನ್ನು ಕೇಳಿಸಿ ಕೊಂಡೆವು ಎಂಬ ಮಾತೂ ಒಂದೆಡೆ  ಇದೆ) ಘಟನೆಗಳಲ್ಲಿ ಅಂದಿನ ಆ ವಲಸೆ ದೃಶ್ಯಗಳು  ದೆಹಲಿ ಪಂಜಾಬ್ ನಲ್ಲಿ ಎಂತಹ ಭೀಕರ ಪರಿಸ್ಥಿತಿ ಸೃಷ್ಟಿಸಿತ್ತು ಎಂದು ಓದುಗನನ್ನು ಭಾವಾವೇಶಕ್ಕೆ ಒಳಪಡಿಸಲೂ ಬಹುದು.

ಕಾದಂಬರಿಯ ಕೊನೆಯಲ್ಲಿ ನಾಯಕ ಮತ್ತು ಆಪ್ಟೆಯವರ ಮಗಳು ಚಂದ್ರಿಕಾರ ಪ್ರೇಮ ಈ ಎಲ್ಲ ಗಲಾಟೆಗಳಿಂದ ಓದುಗನನ್ನು ವಾಸ್ತವ ಪ್ರಪಂಚಕ್ಕೆ ವಾಪಸ್ಸು ಕರೆತರುತ್ತದೆ ಎಂದರೂ ತಪ್ಪಾಗದು.ಕಾದಂಬರಿಯ ಮುಕ್ತಾಯದ ಹಂತದಲ್ಲಿನ ಮಾತುಗಳು  ತೀವ್ರವಾಗಿ ಓದುಗನನ್ನು ಸೆಳೆಯುತ್ತದೆ. ಅದು 1984 ರ ದಿನಗಳು. ಆಗಷ್ಟೇ ದೆಹಲಿಯಲ್ಲಿ ಸಾವಿರಾರು ಜನ ಸಿಖ್ ಜನಾಂಗದವರನ್ನು ಸ್ಥಳೀಯರು ಭೀಕರವಾಗಿ ಕೊಂದುಹಾಕಿದ್ದರು. ಗಲಭೆಗಳು ನಿಯಂತ್ರಣಕ್ಕೆ ಬಂದ ನಂತರ, ಚಂದ್ರಿಕಾ ಮತ್ತು ಕತಾನಾಯಕ ಜ್ಯೋತಿಷಜ್ಞರ ಬಳಿ ತಮ್ಮ ಭವಿಷ್ಯದ ಕುರಿತು ಕೇಳಲು ಹೋಗುತ್ತಾರೆ. ನಾಯಕನಿಗೆ ಅದರಲ್ಲಿ ಕುತೂಹಲವೇನೂ ಇರಲಿಲ್ಲ, ಚಂದ್ರಿಕಾ ಅವಳಿಗೆ ಇದೆ. ಶಾಸ್ತ್ರ ಹೇಳುವ ಮಹಾರಾಜ್ ಅಲ್ಲಿ  ಮುಂದಿನ ಭವಿಷ್ಯ ಹೇಳುವಾಗಿನ ಮಾತುಗಳು ಇನ್ನೂ ಕುತೂಹಲಕರವಾಗಿದೆ-

“ಈ ವರ್ಷದ ವಿಚಾರವೇ ಇಲ್ಲಿ (ಭವಿಷ್ಯದಲ್ಲಿ) ಕಾಣುತ್ತಿಲ್ಲ.ಈ ಗ್ರಂಥವೇ ಹಾಗೆ. ಮುಂದಿನ ವರ್ಷಗಳನ್ನು ತುಂಬ ಚೆನ್ನಾಗಿ ವಿವರಿಸುತ್ತದೆ. 2002 ರಲ್ಲಿ ಗುಜರಾತ್ ನಲ್ಲಿ ಗಲಭೆ, ದೊಂಬಿ, ಬೆಂಕಿ ಕಾರುವ ದಿನಗಳು….ಮತ್ತೆ ನಿಮಗೆ ಬೆಂಗಳೂರಿನಿಂದ  ರಾಮ ಹುಟ್ಟಿದ ನಾಡಿಗೆ ವರ್ಗಾವಣೆ ಆಗುವ ಸಾಧ್ಯತೆಗಳು…..

ಬೆಂಕಿಯುಂಡೆ ಇಡೀ ನಗರವನೇ ನುಂಗಿ ಹಾಕುವ ……” ಇಂತಹ ಸತ್ಯಘಟನೆಗಳ ವಿವರಗಳನ್ನು ಒಂದೆರಡು ಪುಟಗಳಲ್ಲಿ ಸೂಕ್ಷ್ಮವಾಗಿ ತಿಳಿಸಲಾಗಿದೆ. ಆದರೆ ನಾಯಕನು ಮುಂದಿನ 25– 30 ವರ್ಷಗಳ  ನಂತರದಲ್ಲಿ ನಡೆಯುವ  ಕತೆಯ ಬಗ್ಗೆ ಕುತೂಹಲ ತಾಳಲು ಹೋಗೋದಿಲ್ಲ. ಯಾಕೆಂದರೆ ನಾಯಕನ ಕನಸ್ಸು ಏನೆಂದರೆ ಇಪ್ಪತ್ತೈದು ವರ್ಷ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಯಾವುದಾದರೂ ಹಳ್ಳಿ ಸೇರಿ , ಕೃಷಿ  ಮಾಡುತ್ತಾ ಆರಾಮವಾಗಿ ದಿನಕಳೆಯುವ ಇಚ್ಚೆ. 20–30 ವರ್ಷಗಳ ನಂತರದ ಘಟನಾವಳಿಗಳ ಕುರಿತು ಈಗಲೇ ಏಕೆ ಹೆದರಬೇಕು ಎನ್ನುವುದು ನಾಯಕನ ಸ್ಪಷ್ಟ ನಿರ್ಧಾರ.

ಕಾದಂಬರಿಯಲ್ಲಿ ಅಮರ್ ಸಿಂಗ್ ಪಾಕಿಸ್ತಾನ ತ್ಯಜಿಸಿ ದೆಹಲಿಗೆ ಬರುವ ದೃಶ್ಯ, ಗಲಭೆ ನಡೆದಾಗ ಆಪ್ಟೆಯವರ ಆಶ್ರಯ…. ಇಂತಹ ಸಂಗತಿಗಳೆಲ್ಲ ಓದುವಾಗ  ನಿಜಕ್ಕೂ ಆ ಬದುಕು ಎಷ್ಟೊಂದು ಭಯಾನಕವಾಗಿತ್ತಲ್ಲ ಅನ್ನಿಸದೆ ಇರದು. ವಿಭಜನೆ ಸಮಯದ ಕ್ರೌರ್ಯ ಮತ್ತು ಅಮಾಯಕರ ನೋವು…. ಅದನ್ನು ಕಾದಂಬರಿಯಲ್ಲಿ ಹೆಚ್ಚು ವೈಭವೀಕರಿಸದೆ, ನಿರ್ಲಿಪ್ತವಾಗಿ ಹೇಳುತ್ತಾ,  ಒಂದು ಹೃದಯ ಹೀನ ಸಮಾಜವನ್ನು ಓದುಗರ ಮುಂದೆ ಇಲ್ಲೇ ಈವಾಗಲೇ ಅನುಭವಿಸಿದರೇನೋ ಎಂಬಷ್ಟರ ಮಟ್ಟಿಗೆ ಲೇಖಕರ ನಿರೂಪಣಾ ಶಕ್ತಿ ಗೋಚರವಾಗುವುದು.

ಹಳ್ಳಿಯಿಂದಲೋ ಅಥವಾ ಬೆಂಗಳೂರಿನಿಂದ ದೆಹಲಿಗೋ , ಪಾಕಿಸ್ತಾನದಿಂದ  ದೆಹಲಿಗೋ….ಪ್ರತೀ ವಲಸೆಯ ಹಿಂದಿನ ದುರಂತ ಬದುಕು (ಮೊನ್ನೆ  ಕೊರೊನಾ ಲಾಕ್ಡೌನ್ ಸಮಯದ ವಲಸೆಯ ತನಕ) ಯಾವತ್ತೂ ಭಯಾನಕವೇ ಆಗಿರುತ್ತದೆ.

ದೆಹಲಿಯಲ್ಲಿ ಮನೆಮಾಲಕ ಅಮರ್ ಸಿಂಗ್ ರ ಪತ್ನಿ ರಜನಿಸಿಂಗ್ ಹೇಳುವ ಮಾತು-“ಬೇಟಾ ಆವತ್ತು ಓಡಿ ಬರಲು ನಮಗೆ ಈ ಭಾರತ ಇತ್ತು……ಈಗ ಓಡಿ ಹೋಗೋಣ ಅಂದ್ರೆ ಎಲ್ಲಿಗೆ…?” ಯಕ್ಷ ಪ್ರಶ್ನೆ. ಬೀದಿಯಲ್ಲಿ ಗಲಾಟೆಗೆ ಸಿಕ್ಕಿಕೊಂಡ ಆಪ್ಟೆ ಮತ್ತು ನಾಯಕ ಪಾರಾಗುವ  ದೃಶ್ಯ ಇಂದಿಗೂ ಸಾಂದರ್ಭಿಕವೋ ಎಂಬಂತಿದೆ. ಇತಿಹಾಸದ ಘಟನೆಯನ್ನು ನೆನಪಿಸುವುದರ ಜೊತೆಗೆ ಅದನ್ನು ಮುಂದಿಟ್ಟು ಸಮರ್ಥ ಕಾದಂಬರಿಯಾಗಿಸಿದ್ದು ಶಶಿಧರ ಹಾಲಾಡಿಯವರ ಬರಹದ ವಿಶಿಷ್ಟತೆ.

1984 ರ ಗಲಭೆಯಿಂದ ಹಿಡಿದು 1992-93 ರ ಅಯೋಧ್ಯೆ ಗಲಭೆಯ ತನಕದ ಅನೇಕ ಸಂಗತಿಗಳನ್ನು ಮುಂಬಯಿಯಲ್ಲಿದ್ದು ನಾನೂ ಕಣ್ಣಾರೆ ಕಂಡದ್ದರಿಂದ ಈ ಕಾದಂಬರಿಯ ಓದು ನನಗೆ ಹೆಚ್ಚು ಪರಿಣಾಮಕಾರಿಯಾಗಿ ಕಂಡಿತು. ವಿಚಾರ – ಕಲೆ ಎರಡೂ ಬೆರೆತುಕೊಂಡ ಈ ಕಾದಂಬರಿಯಲ್ಲಿ ಆಸಕ್ತಿಯ ಹರವು ವಿಸ್ತಾರವಾದುದು. ಕೊನೆಗೆ ಹೊಸ ಬೆಳಕಿನ ಪಯಣದ ಮೂಲಕ ಈ  ಕಾದಂಬರಿಯು ಮುಗಿಯುತ್ತದೆ. 

———

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter