ರಾಷ್ಟ್ರಕವಿ ಡಾ. ಜಿ.ಎಸ್.ಎಸ್‌ ಹುಟ್ಟುಹಬ್ಬ

(ಬಳ್ಳಾರಿ ಕತಾ ಕಮ್ಮಟದ ನೆನಪಿನಲ್ಲಿ)

“ಹಣತೆ ಹಚ್ಚುತ್ತೇನೆ ನಾನು, ಕತ್ತಲನ್ನು 

ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, 

ಅದು ಇರುವಷ್ಟು ಕಾಲ ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂದು

ಹಣತೆ ಆರಿದ ಮೇಲೆ

ನಾನು ಯಾರೋ ನೀನು ಯಾರೋ…..”

ಈ ಕವಿತೆಯನ್ನು ಮರೆಯಲು ಸಾಧ್ಯವೇ?

ಫೆಬ್ರವರಿ 7, ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಹುಟ್ಟುಹಬ್ಬದ ದಿನ .(ಜನ್ಮ- 07-02-1926) ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಸೌಂದರ್ಯ ಸಮೀಕ್ಷೆ’ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದವರು. ಮೈಸೂರು ವಿವಿ ಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು ಜಿ ಎಸ್ ಎಸ್. ಬೆಂಗಳೂರು ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ, ಬೆಂಗಳೂರು ವಿವಿಕನ್ನಡ ಅಧ್ಯಯನ‌ ಕೇಂದ್ರದ ನಿರ್ದೇಶಕರೂ ಆಗಿದ್ದವರು.

ಜಿ.ಎಸ್.ಎಸ್. ಎಂದೇ ಪರಿಚಿತರಾಗಿದ್ದು, ಕನ್ನಡದ ಕವಿ, ಪ್ರಾಧ್ಯಾಪಕ ವಿಮರ್ಶಕ, ಸಂಶೋಧಕ, ನಾಟಕಕಾರ  ಜಿ ಎಸ್ ಶಿವರುದ್ರಪ್ಪ ಅವರು ಗೋವಿಂದ ಪೈ- ಕುವೆಂಪು ನಂತರ ‘ರಾಷ್ಟ್ರಕವಿ’ ಗೌರವಕ್ಕೆ ಪಾತ್ರರಾದವರು.  ನವೆಂಬರ್ 1, 2006 ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಡಾ.ಜಿ.ಎಸ್. ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಅವರ ನಿಧನದ ಅನಂತರ ಸರಕಾರ ಮತ್ತೊಬ್ಬ ಕವಿಯನ್ನು ರಾಷ್ಟ್ರಕವಿ ಗೆ ಆಯ್ಕೆ ಮಾಡಲು ಮುಂದಾಗಿತ್ತು.ಯಾರನ್ನು ಆಯ್ಕೆ ಮಾಡಬಹುದೆಂದು ಸಲಹೆಗಳನ್ನು ಪಡೆಯಿತು.( ನನಗೂ ಸಂಸ್ಕೃತಿ ಇಲಾಖೆಯಿಂದ ಸಲಹೆ ಕೇಳಿ ಪತ್ರ ಬಂದಿತ್ತು.) ಆದರೆ ‘ರಾಷ್ಟ್ರಕವಿ’ ಅಗತ್ಯ ಇದೆಯೋ ಎಂಬ ಚರ್ಚೆ ಎದ್ದು  ನಂತರ ಸರಕಾರ ಅದನ್ನು ಕೈ ಬಿಟ್ಟಿತ್ತು.

ಡಾ.ಜಿ.ಎಸ್.ಶಿವರುದ್ರಪ್ಪ ನೆನಪಾಗೋದು ನನಗೆ 1988 ರಲ್ಲಿ ಬಳ್ಳಾರಿಯಲ್ಲಿ ಜರಗಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ ಒಂದು ವಾರದ ಕಥಾ ಕಮ್ಮಟದ ಮೂಲಕ . ಆವಾಗ ಡಾ. ಜಿ ಎಸ್ ಶಿವರುದ್ರಪ್ಪ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳ ಕತೆಗಾರ ಪ್ರತಿನಿಧಿಗಳು ಅಲ್ಲಿ ಉಪಸ್ಥಿತರಿದ್ದರು. ನಾನು ಮುಂಬೈಯಿಂದ ಅಭ್ಯರ್ಥಿಯಾಗಿ ಹಾಜರಾಗಿದ್ದೆ .ಆ ಕಮ್ಮಟಕ್ಕೆ 33 ವರ್ಷಗಳು ಕಳೆದರೂ ಆ ಕಮ್ಮಟದ ಪ್ರಭಾವದಿಂದ ಇಂದೂ ನಾನು ಹೊರಬಂದಿಲ್ಲ. ಬಹುಶ: ಕರ್ನಾಟಕ ಸಾಹಿತ್ಯ ಅಕಾಡೆಮಿ ಒಂದು ವಾರ ಕಾಲದ ಕಥಾ ಕಮ್ಮಟವನ್ನು ಅನಂತರ ಮಾಡಿದೆಯೋ ಇಲ್ಲವೋ ನನಗೆ ನೆನಪಿಲ್ಲ. ಅಲ್ಲಿ ಡಾ. ಶಿವರುದ್ರಪ್ಪರ ಜೊತೆ ಕತಾ ಕಮ್ಮಟ ಆಗಿದ್ದರೂ ಬಿಡುವಿನ ವೇಳೆಯಲ್ಲಿ ನಾವು ಕಾವ್ಯದ ಕುರಿತು ಇನ್ನಿತರ ವಿಷಯಗಳ ಚರ್ಚೆ, ಸಂವಾದ ನಡೆಸಿದ್ದು ಇಂದೂ ನೆನಪಾಗುತ್ತಿವೆ. 

ಅದಕ್ಕೂ ಒಂದು ಕಾರಣ ಇದೆ. ಆಗಲೇ ಜಿ.ಎಸ್.ಶಿವರುದ್ರಪ್ಪ ನನಗೆ ಮುಂಬಯಿಯಲ್ಲಿ ಪರಿಚಯ ಆಗಿದ್ದರು. ಕಮ್ಮಟಕ್ಕಿಂತ ಕೆಲವೇ ದಿನಗಳ ಮೊದಲು ಮುಂಬಯಿ ವಿ.ವಿ. ಕನ್ನಡ ವಿಭಾಗದ ಕಾರ್ಯಕ್ರಮಕ್ಕೆ ( ಆವಾಗ ಡಾ.ತಾಳ್ತಜೆ ವಸಂತಕುಮಾರ್ ಮುಖ್ಯಸ್ಥರಿದ್ದರು) ಡಾ. ಜಿ.ಎಸ್.ಎಸ್. ಬಂದಿದ್ದರು. ಅವರನ್ನು ಎಲಿಫೆಂಟಾ ಕೇವ್ಸ್ ಗೆ ಕರೆದೊಯ್ಯುವ ,ದಕ್ಷಿಣ ಮುಂಬಯಿ  ಸುತ್ತಾಡಿಸುವ ಜವಾಬ್ದಾರಿ ನನಗೆ ವಹಿಸಲಾಗಿತ್ತು. ಆಗ ಅಕಾಡೆಮಿಯ ಶ್ರೀನಿವಾಸ್ ಕೂಡಾ ಜೊತೆಗಿದ್ದರು. ಜಿ ಎಸ್ ಎಸ್ ಅವರ ತಾಳ್ಮೆಯ ಮಾತುಗಳು, ಶಾಂತ ವರ್ತನೆ ಯಾವತ್ತೂ ನೆನಪಲ್ಲುಳಿಯುವಂಥದ್ದು.

ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಕುವೆಂಪು ಪರಂಪರೆಯ, ಬಿ.ಎಂ.ಶ್ರೀ ಪರಂಪರೆಯನ್ನು ಮುಂದುವರಿಸಿದ ಡಾ. ಜಿ.ಎಸ್.ಎಸ್ ಅವರು ಜೆ.ಪಿ. ಚಳವಳಿಯ ಸಂದರ್ಭದಲ್ಲಿ ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕರಾಗಿದ್ದರೂ ಲೇಖಕರನ್ನು ಒಟ್ಟುಗೂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಮಾನವಪರ ಕವಿ. ಇವರು ‘ಸಮನ್ವಯ ಕವಿ’ ಪರಂಪರೆಯವರೆಂದೇ ಗುರುತಿಸಿಕೊಂಡವರು.

ನವೋದಯ ಕಾಲ ಘಟ್ಟದಲ್ಲಿ ಜಿ ಎಸ್ ಎಸ್ ಅವರು ಕಾವ್ಯಕೃಷಿ ಆರಂಭಿಸಿದವರು. ನವೋದಯ, ನವ್ಯ ಕಾಲಾವಧಿಯಲ್ಲಿ ಡಾ. ಜಿ.ಎಸ್.ಎಸ್. ಕವಿತೆಗಳು ಇನ್ನಷ್ಟು ಗಮನ ಸೆಳೆಯಿತು. ಬಂಡಾಯ-ದಲಿತ ಸಾಹಿತ್ಯ ಕಾಲ ಘಟ್ಟದಲ್ಲೂ ತಮ್ಮದೇ ತಣ್ಣಗಿನ ಶೈಲಿಯಲ್ಲಿ ಕಾವ್ಯ ಕೃಷಿ ಮಾಡುತ್ತಾ ಬಂದವರು, ಇವರ ಭಾವಗೀತೆಗಳು ಕನ್ನಡಿಗರ ಮನದಲ್ಲಿ ಸದಾ ಉಳಿಯುತ್ತವೆ.

ಎಲ್ಲಾ ರೀತಿಯ ‘ಒಳ್ಳೆಯತನ’ದಲ್ಲಿ ಮೆರೆದ ಜಿ.ಎಸ್.ಎಸ್. ‘ಅಜಾತಶತ್ರು’ವಾಗಿದ್ದರು. ಗೋವಿಂದ ಪೈ ಮತ್ತು ಕುವೆಂಪು ಅವರ ಅನಂತರ ‘ರಾಷ್ಟ್ರಕವಿ’ ಪಟ್ಟವನ್ನು ಪಡೆದ ಮೂರನೇ ಕವಿ ಇವರು. ಕುವೆಂಪು ಅವರ ಶಿಷ್ಯವರ್ಗದಲ್ಲಿ ಜಿ.ಎಸ್.ಎಸ್. ಪ್ರಮುಖರಾಗಿದ್ದರು. ಅವರ ಮಾರ್ಗದರ್ಶನದಲ್ಲೇ ‘ಸೌಂದರ್ಯ ಸಮೀಕ್ಷೆ’ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದವರು. ‘ಪರಂಪರೆಯಿಂದ ಬಂದ ಆಕ್ರೋಶದ ಅರಿವು’ ಅವರ ಕಾವ್ಯದಲ್ಲಿ ಕಾಣಬಹುದಿತ್ತು.

‘ಸ್ತ್ರೀ ಎಂದರೆ ಅಷ್ಟೇ ಸಾಕೇ….’ ‘ಎದೆ ತುಂಬಿ ಹಾಡಿದೆನು…’ ಮತ್ತಿತರ ಅವರ ಕವಿತೆಗಳನ್ನು  ಇಂಗ್ಲಿಷ್‌ಗೆ ಭಾವಾನುವಾದ ಮಾಡಲಾಗಿದ್ದು, ಇನ್ನಷ್ಟು ಕವಿತೆಗಳ ಭಾವಾನುವಾದ ಮಾಡಲಾಗುವುದು ಎಂದು ಕಿರಿಯ ಪುತ್ರ ಡಾ. ಶಿವಪ್ರಸಾದ್  ಹೇಳಿದ್ದರು.

1926 ಫೆಬ್ರವರಿ 7 ರಂದು ಶಿಕಾರಿಪುರದಲ್ಲಿ ಜನಿಸಿದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು 1953ರಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು (ಮೈಸೂರು ವಿಶ್ವವಿದ್ಯಾಲಯ). ಮೂರು ಬಾರಿ ಬಂಗಾರದ ಪದಕ ಪಡೆದ ಹೆಗ್ಗಳಿಕೆಯೂ ಇವರದ್ದು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್, ಅನಂತರ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದಲ್ಲಿ ಪ್ರೊಫೆಸರ್ ವೃತ್ತಿ ನಿರ್ವಹಣೆ ಮಾಡಿದವರು. ಹದಿಮೂರು ಕವನ ಸಂಕಲನ, ನಾಲ್ಕು ಪ್ರವಾಸ ಕಥನಗಳು, ಹದಿನೈದು ಗದ್ಯ ಸಂಕಲನಗಳು.. ಹೀಗೆ ಹತ್ತು ಹಲವು ಕೃತಿಗಳನ್ನು ತಂದಿರುವ ಡಾ. ಜಿ.ಎಸ್.ಎಸ್. ಅವರು ‘ನನ್ನ ಹಣತೆ, ಜಡೆ, ಸ್ತ್ರೀ, ಪಂಪೋತ್ಸವ, ಮುಂಬೈ ಜಾತಕ, ಪ್ರಶ್ನೆ ಮತ್ತು ಉತ್ತರ, ಎಲ್ಲೋ ಮಗು ಅಳುತ್ತಾ ಇದೆ, ಗೋಡೆ, ಪುರುಷ ಸೂಕ್ತ…. ಇತ್ಯಾದಿ ಜನಪ್ರಿಯ ಕವನಗಳ ಮೂಲಕ ಗಟ್ಟಿತನವನ್ನು ಪಡೆದಿರುತ್ತಾರೆ. ಶ್ರೀಸಾಮಾನ್ಯ, ರೈತರ ಪರವಾಗಿ ಕಾವ್ಯವನ್ನು ಬರೆದವರು.

ಇವರ ಪ್ರವಾಸ ಕೃತಿ ‘ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ’ ಇದಕ್ಕೆ ‘ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ’ ಲಭಿಸಿದೆ. ‘ಕಾವ್ಯಾರ್ಥ ಚಿಂತನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 1998ರಲ್ಲಿ ಪಂಪ ಪ್ರಶಸ್ತಿ ಪಡೆದವರು. ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಯೂ ಇವರಿಗೆ ಸಂದಿದೆ. ದಾವಣಗೆರೆಯಲ್ಲಿ ನಡೆದ 61ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2006 ರಲ್ಲಿ ಕರ್ನಾಟಕ ಸರಕಾರ ಇವರಿಗೆ ಗೌರವಯುತ ರಾಷ್ಟ್ರಕವಿ ಗೌರವ ನೀಡಿರುತ್ತದೆ.

ಜಿ.ಎಸ್.ಎಸ್. ಕವಿತೆಗಳಲ್ಲಿ ಅನೇಕವು ಸಿ. ಅಶ್ವತ್, ಮೈಸೂರು ಅನಂತಸ್ವಾಮಿ… ಮೊದಲಾದವರ ಸಂಗೀತ ಸಂಯೋಜನೆಯಲ್ಲಿ ಕನ್ನಡಿಗರ ಮನೆಮನೆಗಳಲ್ಲಿ ಪ್ರಸಿದ್ಧಿಯಾಯಿತು. “ಎದೆ ತುಂಬಿ ಹಾಡಿದೆನು ಅಂದು ನಾನು….

ಮನವಿಟ್ಟು ಕೇಳಿದಿರಿ ಅಲ್ಲಿ ನೀವು….

ಕಾವ್ಯ ಪ್ರಿಯರ ಅಚ್ಚು ಮೆಚ್ಚಿನ ಹಾಡಿನ ಸಾಲುಗಳಿವು. ಕವಿಯೆಂದು ಖ್ಯಾತರಾದರೂ ಸಾಹಿತ್ಯ ವಿಮರ್ಶೆ ಕಾವ್ಯ ಮೀಮಾಂಸೆಗಳ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು. ಜಿ.ಎಸ್.ಎಸ್. ಹೇಳಿದಂತೆ 

“ಹಾಡುವುದು ಕವಿಯೊಬ್ಬನ ಅನಿವಾರ್ಯ ಕರ್ಮ”.

ಅವರು ಇನ್ನೂ ಒಂದು ಮಾತು ಹೇಳಿದ್ದರು…

”ಬರೆಯುತ್ತಾ ಬರೆಯುತ್ತಾ ನಾನೂ ಬದಲಾಗಿದ್ದೇನೆ, ಬೆಳೆದಿದ್ದೇನೆ. ಒಂದು ಕಾಲಕ್ಕೆ ಮುಖ್ಯವೆಂದು ತಿಳಿದುಕೊಂಡದ್ದು ಕ್ರಮೇಣ ಎಷ್ಟೊಂದು ಜಳ್ಳು ಎಂದು ಅನಿಸಿದೆ. ಯಾವುದೇ ರೋಚಕವಾದ ಪಕ್ಷ ಪಂಥಗಳಿಗೆ ಜಿಗಿದುಕೊಳ್ಳುವುದು, ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಂಡಂತೆ ಎಂಬ ‘ಜ್ಞಾನೋದಯ’ ಬಹು ಹಿಂದೆಯೇ ಆಗಿದೆ. ತೆರೆದ ಮನಸ್ಸಿನಿಂದ ಈ ಜೀವನವನ್ನು ಪ್ರೀತಿಸಬೇಕು. ಬಂದ ಎಲ್ಲ ರೀತಿಯ ಅನುಭವಗಳಿಗೂ ಎದೆಯೊಡ್ಡಬೇಕು. ಬದುಕಿನಲ್ಲಿ ಯಾವುದೂ ಅರ್ಥಹೀನವಲ್ಲ ಎನ್ನುವ ಧೋರಣೆಯನ್ನು ಉಳಿಸಿಕೊಳ್ಳಬೇಕು”.

ಈಟಿವಿಯ ಜನಪ್ರಿಯ ಕಾರ್ಯಕ್ರಮವಾಗಿದ್ದ ಎದೆ ತುಂಬಿ ಹಾಡಿದೆನು’ ಡಾ.ಎಸ್. ಪಿ. ಬಾಲಸುಬ್ರಹ್ಮಣ್ಯರ ಸಂಗೀತ ,ಸಾರಥ್ಯದಲ್ಲಿ ಪ್ರಸಾರವಾಗುತ್ತಿದ್ದ ಆ ಶೀರ್ಷಿಕೆಯ ಕವನ ರಚಿಸಿದ್ದು ಡಾ.ಜಿ ಎಸ್ ಎಸ್.

ಅವರ ಎರಡು ಕವನಗಳ ಸಾಲುಗಳನ್ನು ಮತ್ತೊಮ್ಮೆ ನೆನಪಿಸುವುದು ಈ ಸಂದರ್ಭದಲ್ಲಿ ಸೂಕ್ತ ಎಂದು ಭಾವಿಸುತ್ತೇನೆ..

“ಹೇಗೋ ನನ್ನ ಪಾಡಿಗೆ ನಾನು ಬದುಕುತ್ತೇನೆ, ಇದ್ದಷ್ಟು ನೆಲವ ಉತ್ತಿ ಬಿತ್ತಿ ನೀರೆರೆದು

 ಮಲಗಿರುವ ಬೀಜಗಳ ಕಣ್ಣು ತೆರೆಸುತ್ತೇನೆ,

 ನಾಳೆ ಈ ಸಸಿಗಳೆಲ್ಲಾ ವಟವೃಕ್ಷಗಳಾಗಿ

 ಸಾವಿರ ಜನಕ್ಕೆ ನೆರಳಾಗಲೆಂಬ ಮಹದಾಸೆ

 ಇರದಿದ್ದರೂ ಒಂದೆರಡಾದರೂ ಬೀಜವಾಗುವ

 ಹಣ್ಣು ಬಿಟ್ಟಾವೆಂದು ಕಾಯುತ್ತೇನೆ..”   (ಗೋಡೆ-1972)

     —–

   “ಪ್ರೀತಿ ಇಲ್ಲದ ಮೇಲೆ

 ಸಂಶಯದ ಗಡಿಗಳುದ್ದಕ್ಕೂ

 ಸಿಡಿಗುಂಡುಗಳ ಕದನ ನಿಂತೀತು ಹೇಗೆ? 

ಜಾತಿ ಮತ ಭಾಷೆ ಬಣ್ಣಗಳ ಗೋಡೆಯ ನಡುವೆ

ನರಳುವ ಪಾಡು ತಪ್ಪೀತು ಹೇಗೆ

 (ಪ್ರೀತಿ ಇಲ್ಲದ ಮೇಲೆ : 1978)

ರಾಷ್ಟ್ರ ಕವಿ ಡಾ. ಜಿ.ಎಸ್. ಶಿವರುದ್ರಪ್ಪ  ಅವರು 2013 ರ ಡಿಸೆಂಬರ್ 23ರಂದು  ಬನಶಂಕರಿಯಲ್ಲಿರುವ ನಿವಾಸ ಚೈತ್ರದಲ್ಲಿ ವಿಧಿವಶರಾಗುವ ಮೂಲಕ  ಸಾಹಿತ್ಯ ಲೋಕಕ್ಕೆ ಮಂಕು ಕವಿದಂತಾಯಿತು. ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಅವರ ಆಶಯದಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೆ ಡಿಸೆಂಬರ್.26 ರಂದು ಅವರ ಅಂತ್ಯಕ್ರಿಯೆಯು ಸರಳವಾಗಿ ನಡೆಯಿತು. ಹಿರಿಯ ಪುತ್ರ ಜಿ.ಎಸ್‌. ಜಯದೇವ ಅಗ್ನಿಸ್ಪರ್ಶ ಮಾಡಿದ್ದರು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಗಾಯಕರು ‘ಎದೆ ತುಂಬಿ ಹಾಡಿದೆನು ಅಂದು ನಾನು’ ಎಂದು ಹಾಡುತ್ತಿದ್ದಂತೆ ಜಿ.ಎಸ್.ಎಸ್. ಪಂಚಭೂತಗಳಲ್ಲಿ ಐಕ್ಯರಾದರು.

ಜಿ.ಎಸ್.ಎಸ್. ಬದುಕಿದ್ದಾಗ ಪತ್ರ ಬರೆದು ಇಟ್ಟಿದ್ದರು. ಅದರಲ್ಲಿ “ನಾನು ಯಾವುದೇ ಜಾತಿಗೆ ಸೇರಿದವನು ಅಲ್ಲ. ಕರ್ನಾಟಕಕ್ಕೂ ಸೇರಿದವನಲ್ಲ. ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಬಾರದು” ಎಂದು

 ಹೇಳಿದ್ದರು. ಅವರ ಅಸ್ಥಿಯನ್ನು ಮಾತ್ರ ಕಾವೇರಿಯಲ್ಲಿ ವಿಸರ್ಜಿಸಲಾಯಿತು.

———-

ಫೋಟೋ-  1988 ರ ಬಳ್ಳಾರಿ ಕತಾಕಮ್ಮಟದಲ್ಲಿ  ಸಾಹಿತ್ಯ ಪ್ರೇಮಿ ಸಚಿವ ಎಂ.ಪಿ.ಪ್ರಕಾಶ್ ಅವರಿಂದ ಕತಾ ಕಮ್ಮಟದಲ್ಲಿ ಭಾಗವಹಿಸಿದ ಬಗ್ಗೆ ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಶ್ರೀನಿವಾಸ ಜೋಕಟ್ಟೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಗಿನ ಅಧ್ಯಕ್ಷ ಡಾ.ಜಿ.ಎಸ್ ಶಿವರುದ್ರಪ್ಪ, ಚಿತ್ರನಟ ಶಂಕರ್ ನಾಗ್,ಸಾಹಿತಿ ಕುಂ.ವೀರಭದ್ರಪ್ಪ ಇದ್ದಾರೆ. —

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ರಾಷ್ಟ್ರಕವಿ ಡಾ. ಜಿ.ಎಸ್.ಎಸ್‌ ಹುಟ್ಟುಹಬ್ಬ”

  1. ಧರ್ಮಾನಂದ ಶಿರ್ವ

    ಜಿ.ಎಸ್.ಎಸ್. ಅವರ ಕುರಿತಾದ ಸಾಂದರ್ಭಿಕ ಲೇಖನ ಶಿವರುದ್ರಪ್ಪರ ಬದುಕು ಬರಹದ ಎಲ್ಲ ಮಗ್ಗುಲುಗಳನ್ನು ತೆರೆದಿಟ್ಟಿದೆ.
    ಸಂಕ್ಷಿಪ್ತವಾದರೂ ಸೊಗಸಾದ ಲೇಖನ

    ಅವರ ಜನಪ್ರಿಯ ಭಾವಗೀತೆಗಳನ್ನು ಮರೆಯಲುಂಟೇ?

  2. Raghavendra Mangalore

    ಹಣತೆ ಹಚ್ಚುತ್ತೇನೆ ನಾನು, ಕತ್ತಲನ್ನು ಗೆದ್ದು ನಿಲ್ಲುತ್ತೇನೆ ಎಂಬ ಜಿದ್ದಿನಿಂದಲ್ಲ..
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗೊಳಗೆ…
    ಹಾಡುವದು ಅನಿವಾರ್ಯ ಕರ್ಮ ನನಗೆ..
    ಇಂತಹ ಸದಾ ನೆನಪಿನಲ್ಲಿ ಉಳಿಯುವ ಭಾವ ಗೀತೆಗಳನ್ನು ಇನ್ಯಾರು ಬರೆಯಬಲ್ಲರು.
    ತುಂಬಾ ಚೆನ್ನಾಗಿದೆ ಲೇಖನ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter