‘ಉಡುಪಿಯ ಗಾಂಧಿ ‘ ಸಾಂತ್ಯಾರು ಅನಂತಪದ್ಮನಾಭ ಭಟ್ಟರು

ಕವಿ ಎಸ್. ವೆಂಕಟರಾಜರ ತಂದೆ ‘ಉಡುಪಿಯ ಗಾಂಧಿ’ ಎಂದೇ ಖ್ಯಾತರಾಗಿದ್ದ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು (30.01.0884 – 13.05.1948) ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಉಡುಪಿ ಕೇಂದ್ರದ ಬಹಳ ಮುಖ್ಯ ಮುಖಂಡರಾಗಿದ್ದರು. ಮಂಗಳೂರಿನಲ್ಲಿ ಕಾರ್ನಾಡ್ ಸದಾಶಿವರಾಯರಿದ್ದಂತೆ ಉಡುಪಿಯಲ್ಲಿ ಅನಂತಪದ್ಮನಾಭ ಭಟ್ಟರ ಮಾತಿನಂತೆ ಉಳಿದ ಸ್ವಾತಂತ್ರ್ಯ ಹೋರಾಟಗಾರರು ನಡೆದುಕೊಳ್ಳುತ್ತಿದ್ದರು. ಅವರು ಕೂಡ ಕಾರ್ನಾಡರಂತೆ ಆಗರ್ಭ ಶ್ರೀಮಂತರಾಗಿದ್ದುದರಿಂದ ತಮ್ಮ ಸ್ವಂತ ಹಣವನ್ನು ವ್ಯಯ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಆರ್ಥಿಕ ಭದ್ರತೆ ಒದಗಿಸಿದ್ದರು.

ಉಡುಪಿ ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಶಾಲೆಗಳನ್ನು ಇಪ್ಪತ್ತೈದು ವರ್ಷಗಳ ಕಾಲ ನಡೆಸಿದ ಅವರ ಸಾಧನೆ ಕಡಿಮೆಯದಲ್ಲ. (ಕಾರ್ನಾಡ್ ಸದಾಶಿವರಾಯರು ಸ್ಥಾಪಿಸಿದ್ದ ರಾಷ್ಟ್ರೀಯ ಶಾಲೆ 1925 ರಲ್ಲಿಯೇ ಮುಚ್ಚಿಹೋಗಿತ್ತು. ಭಟ್ಟರ ಮೂರು ಶಾಲೆಗಳು 1945 ರಲ್ಲಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದವು). ಅಲ್ಲಿ ದಲಿತ ಹೆಣ್ಣುಮಕ್ಕಳಿಗೆ ಆಶ್ರಮದಂತಹ ಸನಿವಾಸ ಶಿಕ್ಷಣಕ್ಕೆ ಅವರು ವ್ಯವಸ್ಥೆ ಮಾಡಿದ್ದರು. ಅದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯದೆ ಇರುವುದೇ ಆಶ್ಚರ್ಯಕರ. ಸ್ವಾತಂತ್ರ್ಯ ಹೋರಾಟಗಾರ ಪತ್ರಕರ್ತ-ಸಾಹಿತಿಗಳಾದ ಕೆ.ಕೆ. ಶೆಟ್ಟಿಯವರು ಮತ್ತು ಕೆ. ಹೊನ್ನಯ್ಯ ಶೆಟ್ಟಿಯವರು ಸಾಂತ್ಯಾರು ಭಟ್ಟರ ರಾಷ್ಟ್ರೀಯ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು.

ಆನುವಂಶಿಕ ಪಟೇಲರಾಗಿದ್ದ ಅವರು ಗಾಂಧೀಜಿಯವರ ಕರೆಗೆ ಓಗೊಟ್ಟು ಒಮ್ಮೆ ಅದನ್ನು ತೊರೆದಿದ್ದರು; 1939 ರಲ್ಲಿ ಕಾಂಗ್ರೆಸ್ ಆಡಳಿತ ಬಂದಾಗ ಅವರನ್ನು ಮತ್ತೆ ಪಟೇಲರಾಗಿ ನೇಮಿಸಿತು. ಆದರೆ ಅವರ ಬ್ರಿಟಿಷ್ ವಿರೋಧೀ ನಿಲುವಿಗಾಗಿ ಬ್ರಿಟಿಷ್ ಸರಕಾರ ಆಮೇಲೆ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ಕೆಲಸ ಸ್ವಾತಂತ್ರ್ಯ ಬಂದನಂತರ ವೆಂಕಟರಾಜರಿಗೆ ಸಿಕ್ಕಿತು.

ಅನಂತಪದ್ಮನಾಭ ಭಟ್ಟರಿಗೆ ಎರಡು ಬಾರಿ ಜೈಲುಶಿಕ್ಷೆಯಾಗಿತ್ತು. ಉಡುಪಿಯಲ್ಲಿ ಯಾರು ಉಪ್ಪಿನ ಸತ್ಯಾಗ್ರಹ ಇತ್ಯಾದಿಗಳಲ್ಲಿ ಭಾಗವಹಿಸಬೇಕು; ಯಾರು ಹಿಂದೆ ಉಳಿದು ಸಂಘಟನೆಯಲ್ಲಿ ತೊಡಗಬೇಕು ಎನ್ನುವುದನ್ನೆಲ್ಲ ಅವರು ನಿಶ್ಚಯಿಸುತ್ತಿದ್ದುದಕ್ಕೆ ದಾಖಲೆಗಳಿವೆ. ಅವರು ನೇರವಾಗಿ ಗಾಂಧೀಜಿ ಮತ್ತು ರಾಜಾಜಿಯವರಿಂದ ಸೂಚನೆಗಳನ್ನು ಪಡೆದು ಕಾರ್ಯನಿರ್ವಹಿಸುತ್ತಿದ್ದರು.

ಅನಂತ ಪದ್ಮನಾಭ ಭಟ್ಟರು ತೀರಿಕೊಂಡಾಗ `ಅಂತರಂಗ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ರೂಪದ ಶ್ರದ್ಧಾಂಜಲಿ (ಉಡುಪಿ ಗಾಂಧಿ ಇನ್ನಿಲ್ಲ!) ಅವರ ಬದುಕನ್ನು ಹೀಗೆ ಕ್ರೋಢೀಕರಿಸಿದೆ:

“ಇದೇ ತಾ. 13-05-1948ನೇ ಗುರುವಾರ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಕಾಯಬಿಟ್ಟರು. ಸುಮಾರು ನಾಲ್ಕೂವರೆ ತಿಂಗಳ ಅಂತರವಿರುವುದರೆಂದಾಗಲಿಲ್ಲ – ಇಲ್ಲವಾದರೆ ಗುರುವನ್ನಗಲಿ ಬದುಕಿರಲಾರದೆ ಈ ಶಿಷ್ಯ ಮಹಾತ್ಮಾಜೀಯ ಬೆನ್ನು ಹಿಡಿದರೆಂದೇ ಜನ ನಂಬುತ್ತಿತ್ತು. ಶ್ರೀಯುತ ಭಟ್ಟರಿಗಿಂತ ಹೆಚ್ಚಾಗಿ ಪ್ರದರ್ಶನ ರಂಗಗಳಲ್ಲಿ ಕಾಣಿಸುತ್ತಿರುವ ನಮ್ಮಲ್ಲಿಯ ಕೆಲವು ಧುರೀಣರು ಒಂದೊಮ್ಮೆಗೆ ಕಳೆದ ಜನವರಿ ತಾ. 30ನೇ ಶುಕ್ರವಾರ ಅಪರಾಹ್ನ ಗಂಟೆ 6 ಕ್ಕೆ (ಆ ಮುಹೂರ್ತ ಕಳೆದಿರುವುದನ್ನೂ – ಈ ಧುರೀಣರುಳಿದಿರುವುದನ್ನೂ ಕಾಣುತ್ತಿರುವುದರಿಂದಲೇ ಈ ಧೈರ್ಯದ ಮಾತು!) ಫಕ್ಕನೇ ಹೃದಯಸ್ತಂಭನಗೊಂಡು ಹೊರಟು ಹೋಗುತ್ತಿದ್ದರೂ, ಗಾಂಧೀಜಿಯ ಮರಣಕ್ಕಾಗಿ ಸತ್ತರೆಂದು ನಂಬುವವರಿರುತ್ತಿರಲಿಲ್ಲ -ಪ್ರತಿಯೊಬ್ಬನೂ ಆ ಮರಣದ ಹೇತು ಶೋಧಿಸುವ ಡಾಕ್ಟರನೇ ಆಗುತ್ತಿದ್ದ! ಆದರೆ “ಉಡುಪಿ ಗಾಂಧಿ” ಶ್ರೀ  ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ನಾಲ್ಕೂವರೆ ತಿಂಗಳ ನಂತರ ಹೊರಟರೂ ಆಗಿನಿಂದಲೇ ಈ ಪ್ರಯಾಣ ಸಿದ್ಧತೆ ನಡೆದಿರಬಹುದೇ, ಎಂಬ ಅನುಮಾನ ಬರುತ್ತಿದೆ.

ಭಟ್ಟರದು ಸಾಂತ್ಯಾರಿನ ದೊಡ್ಡ ವರ್ಗದಾರ ಮನೆತನ. ಆಸುಪಾಸಿನಲ್ಲೆಲ್ಲಾ ವಿಶೇಷ ಗೌರವ, ಪ್ರತಿಷ್ಠೆಗಳಿಸಿದ್ದ ಕುಲ; ಊರ ಪಟೇಲಿಕೆಯೂ ಇದ್ದಿತು. ಇವರ ತಂದೆ ಶ್ರೀಮಂತಿಕೆಗೂ, ಘನತೆ ಗಾಂಭೀರ್ಯಗಳಿಗೂ ಪ್ರಸಿದ್ಧರಿದ್ದು ಉಡುಪಿಯ ಅಷ್ಟಮಠಗಳಲ್ಲೊಂದರ ಏಜಂಟರಾಗಿದ್ದರು. ಇವರೊಬ್ಬನೇ ಮಗ ತಾರುಣ್ಯದಲ್ಲಿ ಆಡಂಬರದ ಜೀವನ ನಡೆಸುತ್ತಿದ್ದರೆಂದು ಕೇಳುತ್ತೇವೆ. ಮಹಾತ್ಮಾಜೀಯ ಪ್ರಥಮ ಸ್ವಾತಂತ್ರ್ಯ ಸಮರ- ಅಸಹಕಾರ ಚಳುವಳಿ – ಆರಂಭವಾದೊಡನೆಯೇ ಎಲ್ಲವನ್ನೂ ಬಿಟ್ಟುಕೊಟ್ಟು ಅದರಲ್ಲಿ ಸೇರಿಕೊಂಡರು. ಅಲ್ಲಿ ಬಹಳ ಮಂದಿ ಸೇರಿಕೊಂಡದ್ದರಾದ್ದರಿಂದ ಇವರೂ ಅಷ್ಟೇ ಅಲ್ಲ – ತನ್ನನ್ನೇ ಅದಕ್ಕರ್ಪಿಸಿಕೊಂಡರು. ಅಂದಿನಿಂದ ಸಾಯುವವರೆಗೂ ಇವರು `ಸಾಂತ್ಯಾರು ಭಟ್ಟ’ರೂ ಅಲ್ಲ `ಸಾಂತ್ಯಾರು ಪಟೇಲ’ರೂ ಅಲ್ಲ `ಗಾಂಧೀ ಭಟ್ಟರು’! ದೇಶಸೇವೆಗಾಗಿ ಇವರು ತನ್ನ ಪಟೇಲಿಕೆ ಬಿಟ್ಟದ್ದಿದೆ; ಮತ್ತೊಮ್ಮೆ ಸರಕಾರದಿಂದ ಇವರ ಪಟೇಲಿಕೆ ರದ್ದಾಗಿದ್ದಿತು. ಜೈಲು ವಾಸವನ್ನನುಭವಿಸಿದ್ದರು. ಮಿಕ್ಕೆಲ್ಲಾ ಕಡೆಗಳಲ್ಲಿ ಇಂತಹ ಶಾಲೆಗಳು ಮಾಯವಾದ ಮೇಲೂ ಉಳಿದಿದ್ದ ರಾಷ್ಟ್ರೀಯ ಶಾಲೆಗಳೆಂದರೆ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಸ್ಥಾಪಿಸಿ, ನಡೆಯಿಸಿಕೊಂಡು ಬಂದವುಗಳೇ. ತನ್ನ ಊರಲ್ಲಿ ಆಶ್ರಮದಂತಹ ಆಶ್ರಂiÀi ಸ್ಥಾನಕೊಟ್ಟು ಹರಿಜನ ಹುಡುಗಿಯರನ್ನೂ ಸಾಕಿದ್ದರು. ಖಾದೀ ತಯಾರೀ ಮಗ್ಗಗಳನ್ನಿಟ್ಟಿದ್ದರು. ಕಾಂಗ್ರೆಸಿನ  ಸ್ವಾತಂತ್ರ್ಯ ಚಳುವಳಿಗಳ ವೇಳೆ ಉಡುಪಿ ತಾಲೂಕಿನಲ್ಲಿ ಅವುಗಳ ಬೆಂಗೋಲಾಗಿ ದುಡಿದಿದ್ದವರು ಶ್ರೀಯುತ ಭಟ್ಟರು.

ಹೆಚ್ಚೇನು, ಕೆಲವೇ ಮಂದಿ ಅಗ್ರಗಣ್ಯ ರಾಷ್ಟ್ರ ಪ್ರಮುಖರ ಯಥಾಪ್ರತಿ ಸ್ಥಳೀಯ ಬಿಂಬವಾಗಿದ್ದರೆನ್ನಬೇಕು – ನಮ್ಮೀ ಭಟ್ಟರು. ಶ್ರೀಮಂತಿಕೆಯ ಸುಖವಿಲಾಸಗಳನ್ನೂ ಸೂರೆ ಸುಲಿಗೆ ಬುದ್ಧಿಯನ್ನೂ ತ್ಯಜಿಸಿ, ಸಾದಾ ಜೀವನಕ್ಕಿಳಿದು ನೆಹರು, ವಲ್ಲಭಾಯಿ, ರಾಜೇಂದ್ರರಂಥವರು ರಾಷ್ಟ್ರಮುಖಂಡರಾದುದು – ಇವರೂ ಅದೇ ಪ್ರತಿ. ಹೀಗೆ ಆ ರಾಜಕೀಯ ಪ್ರಮುಖರ ವರ್ಗದೊಂದು ಜನ ನಮ್ಮಲ್ಲಿಯೂ ಇದೆ ಎಂದು ತೋರಿಸಲಾಗುವಂತೆಯೇ ವಿನೋಭಾಭಾವೆಯಂತಹ “ಗಾಂಧೀ ಶಿಷ್ಯ”ರ ವರ್ಗದೊಂದು ಜನವೂ ನಮ್ಮಲ್ಲಿದೆ ಎನ್ನಲಾಗುವಂತೆ ಇಡೀ ಜಿಲ್ಲೆಯಲ್ಲಿ ಮೊದಲ ಮನುಷ್ಯನಾಗಿದ್ದುದೆಂದರೆ ಈ `ಸಾಂತ್ಯಾರು ಭಟ್ಟ’ರೇ! ತಕ್ಲಿಯು ಅವರ ಕೈಯ ಆರನೇ ಬೆರಳಾಗಿಯೆ ನೇತಾಡಿಕೊಂಡಿತ್ತು. ಸ್ವತಃ ತಾನು ನೂತ ನೂಲಿನ ಖಾದಿಯನ್ನಲ್ಲದೆ ಬೇರಾವುದನ್ನೂ – ಚರಕ ಸಂಘದ ಸರ್ಟಿಫಿಕೇಟು ಪಡೆದು ಬಂದ ವಸ್ತ್ರವನ್ನು ಕೂಡಾ – ಅವರು ಉಡುತ್ತಿರಲಿಲ್ಲ. ಗಾಂಧೀ ಭಕ್ತರಾದ ಮೇಲೆ ಸ್ವಂತ ಕೈಪಾಕದ್ದೇ ಊಟ – ಅದೂ ಕೆಲವು ನಿಯಮ ನಿರ್ಬಂಧಗಳನ್ನು ಹಾಕಿಕೊಂಡ ಫಲಹಾರ. ಅಂತೂ ಶ್ರೀ ಭಟ್ಟರು ಗಾಂಧೀ ಚಳುವಳಿಗಳಲ್ಲಿ ಸೇರಿಕೊಂಡವರು ಮಾತ್ರವಲ್ಲ – ಅದರಲ್ಲೇ ಲೀನವಾದವರು. ಗಾಂಧೀತತ್ವಗಳನ್ನು ಎತ್ತಿಹಿಡಿದವರಷ್ಟೇ ಅಲ್ಲ – ಅವನ್ನು ಜೀರ್ಣಿಸಿಕೊಂಡು ತನ್ನ ಜೀವನದ ತತ್ವಗಳನ್ನಾಗಿ ಮಾಡಿಕೊಂಡವರು.

ಮೊಣಕಾಲ ಮೇಲಿನ ಮಡೀ ಬೈರಾಸು, ಬಿಳೀ ಖಾದಿ ಜುಬ್ಬ, ತಲೆಯಲ್ಲೊಂದು ಬಿಳೀ ಟೋಪಿ – ಒಮ್ಮೊಮ್ಮೆ ಕಂಠದ ಸುತ್ತ ಬಿಳೀ ಬೈರಾಸು – ಕೈಯಲ್ಲೊಂದು ತಕಲಿ – ಮಳೆಗಾಲದಲ್ಲಿ ಓಲೇ ಕೊಡೆ – ಈ ವೇಷವಿನ್ನು ದಕ್ಷಿಣ ಕನ್ನಡದಲ್ಲಿ (ಪ್ರಾಯಶಃ ಮಿಕ್ಕಕಡೆಗಳವರೂ   `ನಮ್ಮಲ್ಲಿ ಕೂಡಾ’ ಎಂದಿದಕ್ಕೆ ದನಿಗೂಡಿಸಬಹುದು) ಕಾಣಸಿಗುವಂತಿಲ್ಲ. ಗಾಂಧೀ ತತ್ವಗಳ ಕಡೆಗೆ ಹೃದಯವನ್ನು ಮಾರ್ಪಡಿಸುವುದಕ್ಕಾಗಿ ಯಾವ ಹಿರಿಯ ವ್ಯತ್ಯಾಸವನ್ನೂ ನೋಡದೆ, ಊಟದ ಹೊತ್ತು ಮೀರಿ ಜೀರ್ಣವಾಗುವ ಹೊತ್ತಿನವರೆಗೂ ಹಸನ್ಮುಖದಿಂದ ಶಾಂತ ಗಂಭೀರ ಸ್ವರದಿಂದ ಮುಖಾಮುಖಿ ಮಾತನಾಡುತ್ತಾ ಕುಳಿತುಕೊಳ್ಳಬಲ್ಲ ಮಹಾನುಭಾವರು ಇನ್ನು ದೊರೆಯುವಂತಿಲ್ಲ. ಕಾರಣ “ಉಡುಪಿ ಗಾಂಧಿ” – ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು – ಇನ್ನಿಲ್ಲ!” (`ಅಂತರಂಗ’ – 18- 05- 1948).

ಅನಂತ ಪದ್ಮನಾಭ ಭಟ್ಟರು ಪೆರ್ಡೂರ ಸಮೀಪದ ಸಾಂತ್ಯಾರು, ಬೈರಂಪಳ್ಳಿ ಹಾಗೂ ಬೆಳ್ಳರ್ಪಾಡಿ ಗ್ರಾಮಗಳ ಆನುವಂಶಿಕ ಪಟೇಲರಾಗಿದ್ದರು. 1921ರಲ್ಲಿ ಅವರು ಪಟೇಲಿಕೆಯನ್ನು ತೊರೆದು ಗಾಂಧೀಜಿಯವರ ರಾಷ್ಟ್ರೀಯ ಆಂದೋಲನಕ್ಕೆ ಧುಮುಕಿದರು ಮತ್ತು ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. `ತಿಲಕ್ ಸ್ವರಾಜ್ ಫಂಡ್’ ಎಂಬ ನಿಧಿಗೆ ಹಣ ಸಂಗ್ರಹಿಸಿದರು. ಉಪ್ಪಿನ ಸತ್ಯಾಗ್ರಹದ ಕಾಲದಲ್ಲಿ ಭಟ್ಟರು ರೂ. 500/- ದಂಡ ಪಡೆದಿದ್ದರು. ಅದನ್ನವರು ಪಾವತಿಸಲು ನಿರಾಕರಿಸಿ 6 ವಾರಗಳ ಸಜೆಯನ್ನು ಅನುಭವಿಸಿದ್ದರು. ಅಸಹಕಾರ ಚಳುವಳಿಗಾಗಿ 1933ರಲ್ಲಿ ಮತ್ತೊಮ್ಮೆ ಮೂರು ತಿಂಗಳ ಶಿಕ್ಷೆ ಅನುಭವಿಸಿ ದಂಡದ ಹಣವಾದ ರೂ. 500/- ಕಟ್ಟಲು ನಿರಾಕರಿಸಿದ ಕಾರಣ ಅವರ ಆಸ್ತಿಯ ಭಾಗವನ್ನು ಹರಾಜು ಹಾಕಲಾಗಿತ್ತು. ಅನಂತ ಪದ್ಮನಾಭ ಭಟ್ಟರು ತಮ್ಮ 1933ರಲ್ಲಿ ಜೈಲುವಾಸದ ಸಂದರ್ಭದಲ್ಲಿ ಅದೇ ಜೈಲಿನಲ್ಲಿದ್ದ ರಾಜಾಜಿಯವರಿಗೆ ಆತ್ಮೀಯರಾಗಿದ್ದರು. 1939ರಲ್ಲಿ ಕಾಂಗ್ರೆಸ್ ಸರಕಾರ ಆರಿಸಿ ಬಂದ ನಂತರ ಅವರ ಪಟೇಲಿಕೆ ಅವರಿಗೆ ಮರಳಿಸಿಕ್ಕಿತು. ಬ್ರಿಟಿಷ್ ವಿರೋಧಿ ನಿಲುವಿಗಾಗಿ 1942ರಲ್ಲಿಮತ್ತೆ ಕೆಲಸಕಳೆದುಕೊಂಡರು. ಸ್ವಾತಂತ್ರ್ಯಾನಂತರ ಈ ಕೆಲಸ ಸಾಂತ್ಯಾರು ವೆಂಕಟರಾಜರಿಗೆ ಸಿಕ್ಕಿತು.

ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ಮೂರು ರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದ್ದರು. ಸಾಂತ್ಯಾರಿನಲ್ಲಿ ತಿಲಕಾಶ್ರಮ ಎಂಬ ಆಶ್ರಮವನ್ನು ನಡೆಸುತ್ತಿದ್ದರು. 1945ರಲ್ಲಿ ಕಸ್ತೂರ್ಬಾ ಸ್ಮಾರಕ ಸಮಿತಿಯ ವತಿಯಿಂದ ಎಚ್. ನಾರಾಯಣ ರಾವ್ ಎಂಬವರು ಬಂದು ಈ ಸಂಸ್ಥೆಗಳಿಗೆ ಭೇಟಿ ನೀಡಿ ತಿಲಕಾಶ್ರಮವನ್ನು ಸಮಿತಿಯ ಶೈಕ್ಷಣಿಕ ಮತ್ತು ಆರೋಗ್ಯ ಕೇಂದ್ರವನ್ನಾಗಿ ಪರಿಗಣಿಸಲು ಶಿಫಾರಸು ಮಾಡಿದ್ದರು. ಈ ವರದಿಯಲ್ಲಿ ಅವರು, 1921ರಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ರಾಷ್ಟ್ರೀಯ ಶಾಲೆಗಳೆಲ್ಲ ಮುಚ್ಚಿದ್ದರೂ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಮೂರು ಶಾಲೆಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದುದನ್ನು ಶ್ಲಾಘಿಸಿದ್ದಾರೆ (H. Narayana Rao’s Report. 7.12.1945). ಸಾಂತ್ಯಾರಿನ ತಿಲಕಾಶ್ರಮದಲ್ಲಿ ಒಂದು, ದೊಂಡೇರಂಗಡಿ ಮತ್ತು ಬೆಳ್ಳರ್ಪಾಡಿಗಳಲ್ಲಿ ಒಂದೊಂದು ಪ್ರಾಥಮಿಕ ಶಾಲೆಗಳನ್ನು ಭಟ್ಟರು ನಡೆಸುತ್ತಿದ್ದು ಅವು ಗಾಂಧೀ ಸಿದ್ಧಾಂತದ ರಾಷ್ಟ್ರೀಯ ಶಿಕ್ಷಣವನ್ನು ನೀಡುತ್ತಿದ್ದವು. ಶಾಲೆಗಳಲ್ಲಿ ಹತ್ತಿ ಬೆಳೆಯುವುದು, ಜೇನು ಸಾಕಣೆ, ತಕಲಿ ಮತ್ತು ಚರಕಗಳಿಂದ ನೂಲುವುದು ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದವು. ಭಟ್ಟರ ಮನೆಯಲ್ಲಿ ಕೈಮಗ್ಗವಿದ್ದು ಅದರಿಂದ ಬಟ್ಟೆ ತಯಾರುಸಲಾಗುತ್ತಿತ್ತು. ಭಟ್ಟರು ಊರಿನಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿದ್ದರು. ಅವರು ಕೆಲಸಗಾರರಿಗಾಗಿ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದರು.

ಶಾಂತಿನಿಕೇತನದಲ್ಲಿ ಶಿಕ್ಷಣ ಪಡೆದ ಕಾಂಗ್ರೆಸಿಗ ಕೆ.ಕೆ. ಶೆಟ್ಟಿ ಮತ್ತು ನವಯುಗದ ಹೊನ್ನಯ್ಯಶೆಟ್ಟರು ತಿಲಕಾಶ್ರಮದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಒಟ್ಟಿನಲ್ಲಿ ಶ್ರೀ ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು ಒಬ್ಬರು ಶ್ರೇಷ್ಠ ಗಾಂಧೀವಾದಿ ಸಮಾಜ ಸೇವಕರಾಗಿದ್ದರು. ಇವರ ಪತ್ನಿ ಗೌರಮ್ಮನವರು ಗಂಡನ ಜತೆಗೆ ಬೆಳಗಾಂ ಮತ್ತು ಕಾಕಿನಾಡ ಕಾಂಗ್ರೆಸ್ ಅಧಿವೇಶನಗಳಿಗೆ ಹೋಗಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ತಮ್ಮ ಆಭರಣಗಳನ್ನು ಗಾಂಧಿ ಫಂಡಿಗೆ ಅರ್ಪಿಸಿದ್ದರು.

ವೆಂಕಟರಾಜರ ಮೇಲೆ ಅವರ ತಂದೆ ಅನಂತ ಪದ್ಮನಾಭ ಭಟ್ಟರ ಪ್ರಭಾವ ಬಹಳವಾಗಿತ್ತು.

ಅನಂತಪದ್ಮನಾಭ ಭಟ್ಟರ ತಂದೆ (ಸಾಂತ್ಯಾರು ವೆಂಕಟಸುಬ್ಬಾಭಟ್ಟರು ಅಥವಾ ಸಾಂತ್ಯಾರು ಭಟ್ಟರು) ಮಗನ ಜತೆಗೆ ನೇರವಾಗಿ ಮಾತನಾಡುತ್ತಿರಲಿಲ್ಲ. ಆದರೆ ಅವರಿಗೆ ಮಗನ ಮೇಲೆ ಅಭಿಮಾನವಿತ್ತಂತೆ. ಅವರು ಪತ್ನಿಗೆ ಒಂದು ಖಾಯಂ ಸೂಚನೆ ಕೊಟ್ಟಿದ್ದರಂತೆ, “ಅನಂತನಿಗೆ ನನ್ನ ಬಳಿ ಹಣ ಕೇಳಲು ಸಂಕೋಚವಾಗಬಹುದು. ಅವನಿಗೆ ಹಣ ಬೇಕಾದಾಗ ನೀನೇ ಕೊಟ್ಟುಬಿಡು. ನನ್ನನ್ನು ಕೇಳಬೇಕಾಗಿಲ್ಲ. ಹಾಗೆಯೇ ಅವನಾಗಲಿ, ಅವನ ಗೆಳೆಯರಾಗಲಿ ಮನೆಗೆ ಬಂದಾಗ ಊಟೋಪಚಾರ ಮಾಡಬೇಕು”, ಎಂದು. ಹಿಂದಿನ ಕಾಲದ  ಜನರಲ್ಲಿ ಈ ರೀತಿಯ ಬಿಗುವಿನ ವರ್ತನೆ ಮತ್ತು ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸದಿರುವುದು ಸಾಮಾನ್ಯವಾಗಿತ್ತು.

ಸಾಂತ್ಯಾರು ಭಟ್ಟರು ಅಂತರಂಗದಲ್ಲಿ ಬಹಳ ಮಾನವೀಯ ಕಾಳಜಿಗಳಿದ್ದ ವ್ಯಕ್ತಿ. ತಾವು ಮಾಡಿದ ದಾನ ಧರ್ಮಗಳು ಹೊರಗಿನ ಜನರಿಗೆ ತಿಳಿಯದಂತೆ ಕಾಂಗ್ರೆಸ್ ಚಳುವಳಿಗೆ (ಅಂದರೆ ಸ್ವಾತಂತ್ರ್ಯ ಹೋರಾಟಕ್ಕೆ) ಗುಪ್ತವಾಗಿ ಧನ ಸಹಾಯ ಮಾಡುತ್ತಿದ್ದರು. ಪಟೇಲರಾಗಿದ್ದ ಅವರು ವ್ಯಕ್ತವಾಗಿ ಅಂತಹ ಸಹಾಯ ಮಾಡುವುದು ಸಾಧ್ಯವಿರಲಿಲ್ಲ. ಅವರು ಉಡುಪಿಯಲ್ಲಿ ಕೃಷ್ಣಮಠದ ಸಮೀಪ ಬಂದು ನೆಲಸಿದ ಮೇಲೆ ಆನುವಂಶಿಕ ಹುದ್ದೆಯಾಗಿದ್ದ ಪಟೇಲಿಕೆಯನ್ನು ಮಗನಿಗೆ ಬಿಟ್ಟುಕೊಟ್ಟಿದ್ದರು. ಸಾಂತ್ಯಾರು ಭಟ್ಟರಿಗೆ ಒಂದು ಕುದುರೆ ಸಾರೋಟು ಮತ್ತು ಫ್ರಾನ್ಸಿನಿಂದ ಹಡಗಿನ ಮೂಲಕ ತರಿಸಿದ ಫೋರ್ಡ್ ಕಾರು ಇತ್ತು.

ಇವರ ಬಗ್ಗೆ ಒಂದು ಸ್ವಾರಸ್ಯಕರ ಘಟನೆಯಿದೆ : ಸ್ವಾತಂತ್ರ್ಯ ಹೋರಾಟವನ್ನು ಪ್ರೇರೇಪಿಸುವ ಒಂದು ಮೆರವಣಿಗೆಯನ್ನು ಉಡುಪಿಯಲ್ಲಿ ಉಡುಪಿಯ ಕಾಂಗ್ರೆಸ್ ಮುಂದಾಳುಗಳು ಏರ್ಪಡಿಸಿದ್ದರು. ಅದರ ನೇತೃತ್ವ ವಹಿಸಿದ್ದವರು ಅನಂತ ಪದ್ಮನಾಭ ಭಟ್ಟರು. ಕಲ್ಕತ್ತಾದಿಂದ ಬಂದಿದ್ದ ಇಬ್ಬರು ನಾಯಕರು ಮೆರವಣಿಗೆಯ ಮುಂಚೂಣಿಯಲ್ಲಿ ಅನಂತ ಪದ್ಮನಾಭ ಭಟ್ಟರೊಂದಿಗೆ ಸಾಗುತ್ತಿದ್ದರು. ರಥಬೀದಿಯಲ್ಲಿ ತಮ್ಮ ಮನೆಯ ಮುಂದೆ ಮೆರವಣಿಗೆ ಸಾಗುತ್ತಿರಲು ಇದೇನು ಗದ್ದಲ ಎಂದು ನೋಡಲು ಸಾಂತ್ಯಾರು ಭಟ್ಟರು ಹೊರಗೆ ಬಂದರು. ಆಗ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಿದ್ದ ಸ್ಥಳೀಯರೆಲ್ಲ ಒಬ್ಬೊಬ್ಬರಾಗಿ ಅಂಗಡಿ ಮುಂಗಟ್ಟೆಗಳ ಮರೆಗೆ ಸರಿದು ನಿಂತುಕೊಂಡರು. ಕಾಂಗ್ರೆಸ್ ಮುಖಂಡರು ಹಿಂದೆ ನೋಡಿದರೆ ಜನರೆಲ್ಲ ಮಾಯವಾಗುತ್ತಿದ್ದಾರೆ. ಕಲ್ಕತ್ತದಿಂದ ಬಂದವರು ಪರಿಸ್ಥಿತಿಯನ್ನು ಗ್ರಹಿಸಿ ತಮ್ಮ ಬೆಂಬಲಿಗರಿಗೆ ಧೈರ್ಯ ಹೇಳಿದರು : “ಇಂಥ ಶ್ರೀಮಂತರಿಗೆ ಹೆದರಲೇ ಬಾರದು. ಇಂಥವರಿಂದಲೇ ನಮ್ಮ ದೇಶ ಹಾಳಾಗಿರುವುದು. ಬನ್ನಿ … ಬನ್ನಿ…”

ಆಗ ಅವರ ಪಕ್ಕದಲ್ಲಿದ್ದ ಉಡುಪಿಯ ಒಬ್ಬ ಮುಖಂಡರು ಅವರ ಕಿವಿಯಲ್ಲಿ  ಉಸುರಿದರು : “ಸುಮ್ಮನಿರಿ. ಅವರು ನಮ್ಮ ಅನಂತಪದ್ಮನಾಭ ಭಟ್ಟರ ತಂದೆಯವರು. ನಿಮ್ಮನ್ನು ಕಲ್ಕತ್ತದಿಂದ ಕರೆಸಿಕೊಳ್ಳಲು ಹಣಕೊಟ್ಟವರು ಅವರೇ. ಈ ಮೆರವಣಿಗೆ ಮುಗಿದ ಮೇಲೆ ನಿಮ್ಮ ಊಟ ಅವರ ಮನೆಯಲ್ಲಿಯೇ!”

ಕಲ್ಕತ್ತದ ನಾಯಕರು ಪೆಚ್ಚಾದರು. ಸಾಂತ್ಯಾರು ಭಟ್ಟರು ಒಳಗೆ ಹೋದ ಮೇಲೆ ಮೆರವಣಿಗೆ ಮುಂದುವರಿಯಿತು. ಮೆರವಣಿಗೆ ಮುಗಿದ ಮೇಲೆ ಅನಂತಪದ್ಮನಾಭ ಭಟ್ಟರೊಡನೆ ಕಲ್ಕತ್ತದವರೂ ಅವರ ಮನೆಗೆ ಹೋಗಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡರು. ಸಾಂತ್ಯಾರು ಭಟ್ಟರು ಬಂದವರಿಗೆ ಸಂಕೋಚವಾಗದಂತೆ ತಮ್ಮಷ್ಟಕ್ಕೆ ತಾವು ಇದ್ದು, ಹೊರಗೆ ಹೋಗುವಾಗ ಪತ್ನಿಯನ್ನು ಕರೆದು ಮಗನಿಗೆ ಹಣವೇನಾದರೂ ಬೇಕಾದರೆ ಕೊಡುವಂತೆ ಸೂಚಿಸಿ ಹೋದರಂತೆ.

 ಡಾ. ಬಿ. ಜನಾರ್ದನ ಭಟ್

ಚಿತ್ರ ಶೀರ್ಷಿಕೆ:

ಸಾಂತ್ಯಾರು ಅನಂತಪದ್ಮನಾಭ ಭಟ್ಟರ ಯಾವ ಭಾವಚಿತ್ರವೂ ಲಭ್ಯವಿಲ್ಲ. ಅವರ ಪತ್ನಿ ಗೌರಮ್ಮ ಮತ್ತು ಮಕ್ಕಳು (ಕವಿ ಎಸ್. ವೆಂಕಟರಾಜ – ಸಣ್ಣವರು; ಕೃಷ್ಣರಾಜ – ದೊಡ್ಡಮಗ) ಇರುವ ಚಿತ್ರ ಇದು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “‘ಉಡುಪಿಯ ಗಾಂಧಿ ‘ ಸಾಂತ್ಯಾರು ಅನಂತಪದ್ಮನಾಭ ಭಟ್ಟರು”

  1. ಸದಾಶಿವರಾವ್ ನೆನಪಿನಲ್ಲಿ ಇದ್ದರೂ ಭಟ್ಟರ ಹೆಸರು ಉಡುಪಿಯಲ್ಲಿ ಯಾಕೆ ಮರೆಯಾಯಿತು?ಉತ್ತಮ ಮಾಹಿತಿ ಕಣ್ಣು ತರೆಸಿತು

  2. My friend forwarded me this article about my grandpa. It’s wonderful to read about a man about whom my Mother has told me so much . I was born many years after he passed away and never had the privilege to see him. Thank you for the wonderful article.

  3. ಧರ್ಮಾನಂದ ಶಿರ್ವ

    ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ ಅನಂತಪದ್ಮನಾಭ ಭಟ್ಟರನ್ನು ಓದುಗವೃಂದಕ್ಕೆ ಪರಿಚಯಿಸಿದಕ್ಕೆ ಅಭಿನಂದನೆಗಳು.
    ಇಂತಹ ಅನೇಕ ಮಹನೀಯರು ಎಲೆಮರೆಯ ಕಾಯಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿ ಅಮರರಾಗಿದ್ದಾರೆ. ಆದರೆ ಅವರ ಕುರಿತಾದ ಯಾವ ಬರಹಗಳೂ ಇಲ್ಲದಿರುವುದು ಖೇದಕರ. ಭಟ್ಟರ ಭಾವಚಿತ್ರ ಹೇಗೆ ಇಲ್ಲವೋ ಹಾಗೆ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter