ಸುನಂದಾ ಬೆಳಗಾಂವಕರ ಅವರ ‘ಕೈತುತ್ತು’

ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯರ ಅನುಭವಗಳು ಕಿರಿಯರ ಪಾಲಿಗೆ ದಾರಿದೀಪಗಳಾಗಿವೆ. ಅವುಗಳು ಬರಹದ ರೂಪಕ್ಕೆ ಇಳಿದರೆ ಅಮೂಲ್ಯ ನಿಧಿಗಳಾಗುತ್ತವೆ ಎಂಬುದಕ್ಕೆ ಸುನಂದಾ ಬೆಳಗಾಂವಕರರ ‘ಕೈತುತ್ತು’ ಎಂಬ ಲಲಿತಪ್ರಬಂಧಗಳ ಸಂಕಲನವು ಸಾಕ್ಷಿಯಾಗಿದೆ. ಈ ಶೀರ್ಷಿಕೆಯು ಅಜ್ಜಿಯ ಜೀವನಾನುಭವಗಳ ಪಾಠದ ಸವಿಯನ್ನು ಉಣಿಸುತ್ತದೆ. ಇವುಗಳು ಲೇಖಕಿಯ ಕುಟುಂಬದ ಇತಿಹಾಸವಾಗಿವೆ. ಅಜ್ಜಿಯನ್ನು ಕೇಂದ್ರವಾಗಿಟ್ಟುಕೊಂಡ ಪ್ರಬಂಧಗಳು ಕಾವ್ಯದ ಭಾವತೀವ್ರತೆ, ಪ್ರಬಂಧದ ಲಾಲಿತ್ಯಗಳನ್ನು ಮೈಗೂಡಿಸಿಕೊಂಡು ಸಣ್ಣಕತೆಗಳಂತೆ ಓದಿಸಿಕೊಂಡು ಹೋಗುತ್ತವೆ.

ಅಜ್ಜಿ ಎನ್ನುವ ಪದವು ಪ್ರೀತಿ ವಾತ್ಸಲ್ಯಗಳ ಸಂಕೇತವಾಗಿದೆ. ಅವರು ಮೊಮ್ಮಕ್ಕಳನ್ನು ವಿಪರೀತ ಪ್ರೀತಿಸುತ್ತಾರೆ. ಆದರೆ ‘ಅಂತಿಂಥವಳಲ್ಲ ಈ ಅಜ್ಜಿ’ ಎಂಬ ಪ್ರಬಂಧವು ರೂಢಿಗೆ ವಿರುದ್ಧವಾಗಿದೆ. ಹೆಣ್ಣನ್ನು ಗಂಡಿನ ಅಧೀನವಾಗಿ ನೋಡುತ್ತಿದ್ದ ಕಾಲದಲ್ಲಿ, ಗಂಡನನ್ನು ದೇವರೆಂದುಕೊಂಡು ಭಯಭಕ್ತಿಯಿಂದ ಬಾಳಬೇಕಾಗಿದ್ದ ಪುರುಷಪ್ರಧಾನ ವ್ಯವಸ್ಥೆಯ ಆ ದಿನಗಳಲ್ಲಿ ಅಜ್ಜನ ಅಧೀನವಾಗಿ ಬಾಳದೆ ಅಜ್ಜನಿಂದ ‘ಸರಕಾರ’, ‘ಬಾಯವರ’, ‘ವಿಕ್ಟೋರಿಯ ಮಹಾರಾಣಿ’ ಎಂದು ಕರೆಸಿಕೊಂಡು ಸರಸಮಯ ದಾಂಪತ್ಯವನ್ನು ನಡೆಸುತ್ತಿದ್ದ ಅಜ್ಜಿಯು ಎಲ್ಲ ಅರ್ಥದಲ್ಲೂ ಅಜ್ಜನ ಸಹಧರ್ಮಿಣಿಯಾಗಿ ಬಾಳುತ್ತಿದ್ದರು. “ನುಡಿದರೆ ಅನುಭವ ಅರಳಿದಂತೆ. ಕೆರಳಿದರೆ ಕೆಂಡ ಕಾರಿದಂತೆ” (ಪುಟ 22) ಎಂಬ ಸಾಲುಗಳು ಅಜ್ಜಿಯನ್ನು ನೆನೆದಾಗ ಮನಸ್ಸಿಗೆ ಬರುವ ದಯಾರ್ದ ದೀನ ರೂಪವನ್ನು ಇದು ಒರೆಸಿ ತೆಗೆಯುತ್ತವೆ. ಈಕೆಯು ಮೊಮ್ಮಕ್ಕಳನ್ನು ಅತಿಮುದ್ದಿನಿಂದ ಬೆಳೆಸಿ ಹಾಳು ಮಾಡುವುದಿಲ್ಲ. ಏರುದನಿಯಲ್ಲಿ ಬೈಯಲು ಹಿಂಜರಿಯುವುದಿಲ್ಲ. ವಸ್ತುಗಳನ್ನು ಕೊಳ್ಳುವಾಗ ಧಾರಣೆ ಮಾಡುವ ಸಂದರ್ಭದಲ್ಲಿ “ಏನವ್ವಾ ಇಷ್ಟು ದೊಡ್ಡ ಮನಿ ಕಟ್ಟಿ ಸಾಹುಕಾರತಿ ಅದಿ, ಕಸಬರಿಗಿ ಕೊಂಡ್ರೂ ಹೆಚ್ಚು ಬಿಚ್ಚಾಕಿ ಅಲ್ಲ. ನಮ್ಮ ನಿಮ್ಮ ಬಾಳೇವು ಒಂದೇ ಏನ? ನಿಮ್ಮ ಮಂದ್ಯಾಗ ಹಿರ್ಯಾ ಓದಿರ್ತಾನ. ಕೈ ತುಂಬ ಗಳಿಸಿ ತರ್ತಾನ.” (ಪುಟ 28-29) ಎಂದು ಆಕ್ಷೇಪಿಸಿದ ಮಾದರ ಚೆನ್ನಿಗೆ “ನನಗೇನ ರೊಕ್ಕ ಮುಗಿಲ ಮ್ಯಾಲಿಂದ ಬಿದ್ದಿಲ್ಲವ್ವ. ನಾನೂ ನಿನ್ನ ಹಾಂಗ ಕಷ್ಟಪಟ್ಟು ಗಳಿಸೇನಿ. ಹಿಂಡೋ ಆಕಳ ಅಂತ ಕಿವಿಕೋಡು ಹಿಂಡಬಾರದವ್ವಾ. ಹಿರ್ಯಾ ಗಳಿಸ್ತಾನಂತ ನಾವು ಆಕಳಿಸಿದ್ರ ಹ್ಯಾಂಗ ಸಂಸಾರ ಆದಿತವ್ವ. ಅವರ ಕೊಟ್ಟದ್ರಾಗ ನಾವ ದುಡದ ಉಳಸಬೇಕು. ಕೈ ಒಡ್ಡಿದ್ರ ದುಡ್ಡು ಸಿಗೋದಿಲ್ಲವ್ವ. ಕೈಮುಂದ ಇರಬೇಕು. ಇಲ್ಲಂದ್ರ ಎತ್ತಬೇಕು. ಕೊಟ್ರ ಕೊಡು. ಬಿಟ್ರ ಬಿಡು. ಒಣಹರಟೆ ಬೇಡ” (ಪುಟ 28-29) ನೀಡುವ ಉತ್ತರದಲ್ಲಿ ಬದುಕಿನ ತತ್ವವು ಅರಳಿ ನಿಲ್ಲುವ ಕ್ರಮವು ಪರಿಣಾಮಕಾರಿಯಾಗಿದೆ.

ಅನ್ನವಿದ್ದಾಗ ಉಣ್ಣುವ, ಇಲ್ಲದಿದ್ದಾಗ ಉಪವಾಸವಿದ್ದು ತೇಗುವ, ಯಾರ ಬಳಿಯಲ್ಲೂ ಬೇಡಲು ಹೋಗದ ಅಜ್ಜಿಯು ಸ್ವಾಭಿಮಾನದ ಪ್ರತೀಕವಾಗಿದ್ದಾಳೆ. ದುಡಿಮೆ ಮತ್ತು ಕಷ್ಟಗಳು ಕೆಲವೇ ವರ್ಗಕ್ಕೆ ಸೀಮಿತ ಎಂಬ ನಂಬಿಕೆಯನ್ನು ಒಡೆಯುವ ಸಾಲುಗಳು ಗಮನವನ್ನು ಸೆಳೆಯುತ್ತವೆ. “ನಮ್ಮ ಅಜ್ಜಿ ಆಕಾಶದಿಂದ ಇಳಿದವಳಲ್ಲ. ನೆಲದಿಂದ ಬೆಳೆದವಳು. ಸತಿ ಸಾವಿತ್ರಿಯಂತೆ ಗಂಡನನ್ನು ಬದುಕಿಸಿ ತರುವ ಸಾಮಥ್ರ್ಯ ಅವಳಲ್ಲಿ ಇರಲಿಲ್ಲ. ಬಾಪುವಿನ ‘ಬಾ’ಳಂತೆ ತ್ಯಾಗಮಯಿಯಲ್ಲ. ಇತಿಹಾಸದ ಶಾಂತಲೆಯಂತೆ ಶಾಂತಳಲ್ಲ. ಅವಳು ಜೀವನ ನಡೆಸಿದ್ದು ಪುಣ್ಯ ಕತೆ ಕೇಳಲು ಅಲ್ಲ. ತಾನು ಹುಟ್ಟಿ ಬಂದ ಕರ್ತವ್ಯ ಮಾಡಲು. ತನ್ನ ಕರ್ಮ ಸವೆಸಲು. ಹೊಟ್ಟೆಗೆ ಅನ್ನ, ಮೈಗೆ ಬಟ್ಟೆ, ತಲೆಗೆ ಚಪ್ಪರ, ಹೊದೆಯಲು ತುಂಡು ಕವದಿಗಾಗಿ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಹೆಣಗಾಡುವಂತೆ ಆಕೆಯು ಹೆಣಗಾಡಿದಳು.” (ಪುಟ 31) ಎಂಬ ಮಾತುಗಳ ಮೂಲಕ ಲೇಖಕಿಯು ಲಂಕೇಶರ ‘ಅವ್ವ’ನನ್ನು ನೆನಪಿಸುವ ಅಜ್ಜಿಯ ಚಿತ್ರವನ್ನು ಕಟ್ಟಿಕೊಡುತ್ತಾರೆ.

‘ನೆಲಮುಗಿಲಿನಂಥಾ ದಾಂಪತ್ಯ’ವು ಅಜ್ಜ ಅಜ್ಜಿಯರ (ಲೇಖಕಿಯ ತಂದೆಯ ಹೆತ್ತವರು) ಸ್ವಭಾವ ವೈರುಧ್ಯವನ್ನು ಕಾಣಿಸುತ್ತಲೇ ಅದನ್ನು ಮೀರಿ ಹೊಂದಾಣಿಗೆಯ ಬದುಕನ್ನು ಸಾಗಿಸಿದ ಬಗೆಯು ವ್ಯಕ್ತವಾಗುತ್ತದೆ. “ಅಜ್ಜನ ಅಂಗೈಯಲ್ಲಿ ತೂತು. ಅಜ್ಜಿಯದು ಗಟ್ಟಿ ಮುಷ್ಠಿ” (ಪುಟ 32) ಎಂಬ ಸಾಲುಗಳು ಅವರ ಜೀವನ ತತ್ವಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತವೆ. ಬಡತನದಲ್ಲಿ ಬೆಳೆದು ಶ್ರೀಮಂತನಾದ ಅಜ್ಜನು ದಾನಿ. ಅಜ್ಜಿಯದ್ದೂ ದೊಡ್ಡ ಕೈಯೇ ಆದರೂ ಪೂರ್ತಿ ಕೊಡುವ ಮುನ್ನ ನಾಳೆಗೆ ಇರಲಿ ಎಂದು ಚಿಂತಿಸುವವರು. ಬೆಂಕಿ ಮತ್ತು ನೀರು ಪರಸ್ಪರ ವಿರೋಧ ಗುಣವನ್ನು ಹೊಂದಿದ್ದರೂ ಬೆಂಕಿಯ ಸಹಯೋಗದಿಂದ ನೀರು ಹದವಾಗುವಂತೆ ಇಬ್ಬರ ಸಾಮರಸ್ಯದಿಂದ ಬದುಕು ಮಾಗಿದೆ.

ಗಂಡ ಮಧ್ವಾಚಾರ್ಯರು ತಮ್ಮನ್ನು ಬಿಟ್ಟು ಕಾಶಿಗೆ ಹೋದಾಗ ಐವರು ಮಕ್ಕಳಿಗಾಗಿ ಕಷ್ಟಪಟ್ಟು ಸಾಕಿದ ಗಂಗವ್ವನ (ಅಜ್ಜನ ತಾಯಿ) ಬದುಕನ್ನು ‘ತಾಯಿ ಗಂಗವ್ವನ ಏನೆಂದು ನೆನೆಯಲೆ’ ಎಂಬ ಪ್ರಬಂಧವು ಆಪ್ತವಾಗಿ ಕಟ್ಟಿಕೊಡುತ್ತದೆ. ಮದುವೆ ಸಮಾರಂಭದಲ್ಲಿ ದೊರೆತ ಖಾದ್ಯಗಳನ್ನು ಮನೆಗೆ ತಂದು, ಅವುಗಳ ಆಕಾರವನ್ನು ಬದಲಿಸಿ, ಬೇಯಿಸಿ, ಕುದಿಸಿ, ತಿನ್ನಿಸುವ ಆಕೆಯ ಕೈಚಳಕವನ್ನು ಹೊಗಳುವುದರೊಂದಿಗೆ ಅವರಿವರ ಮನೆಯಲ್ಲಿ ಹಪ್ಪಳ ಸಂಡಿಗೆಗಳನ್ನು ಮಾಡಿ, ಜೀವನೋಪಾಯಕ್ಕೆ ಹಾದಿಯನ್ನು ಕಂಡುಕೊಂಡ ಕರ್ಮಯೋಗಕ್ಕೆ ಕನ್ನಡಿಯನ್ನು ಹಿಡಿಯುತ್ತದೆ. ‘ಬಡತನ ಹಾಸಲುಂಟು ಹೊದೆಯಲುಂಟು’ ಎಂಬ ಪ್ರಬಂಧವು ಅದೇ ವಿಷಯವನ್ನು ಇನ್ನೊಂದು ದೃಷ್ಟಿಯಿಂದ ಪರೀಕ್ಷಿಸುತ್ತದೆ. ‘ಬಡತನ’ ಎಂಬ ಪದವಿಲ್ಲದಿರುತ್ತಿದ್ದರೆ ಶೀಷಿಕೆಯು ವಾಚ್ಯವಾಗದೆ ಧ್ವನಿಪೂರ್ಣವಾಗುತ್ತಿತ್ತು.

ಲೇಖಕಿಯ ಕುಟುಂಬದ ಸದಸ್ಯರಲ್ಲಿ ಸೌಹಾರ್ದ ಸಿರಿಯು ನೆಲೆಸಿದೆ. ಮನೆಮಂದಿಗಳ ನಡುವೆ ಹಗೆತನವಿರುವುದಿಲ್ಲ. ಎಲ್ಲದರಲ್ಲೂ ಸಹಕಾರ ತತ್ವವನ್ನು ಕಾಣಬಹುದು. ಪ್ರೀತಿಯ ಸವಿಯನ್ನು ಉಣ್ಣಬಹುದು. ಅಣ್ಣತಮ್ಮಂದಿರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುವ ಚಿಕ್ಕಪ್ಪ ದೊಡ್ಡಪ್ಪಂದಿರು, ಚಿಕ್ಕಮ್ಮ ದೊಡ್ಡಮ್ಮಂದಿರು ಅಲ್ಲಿದ್ದರೂ ಅದರ ವಿರುದ್ಧ ನೆಲೆಯಲ್ಲಿರುವ ಕುಟುಂಬವೂ ಇತ್ತು ಎಂಬುದಕ್ಕೆ ‘ಬಿಸಿಲು ನೆರಳಿನ ಬಾಲ್ಯ’ ಎಂಬ ಪ್ರಬಂಧವು ಸಾಕ್ಷಿಯಾಗುತ್ತದೆ. ಚಿಕ್ಕಪ್ಪನ ಆಸರೆಯು ಅಕ್ಕವ್ವಳಿಗೆ ನೆರಳಾದರೆ ಆತನ ತರತಮ ಧೋರಣೆಯು ಅವಳ ಪಾಲಿಗೆ ಬಿಸಿಲಾಗುತ್ತದೆ. ಚಿಕ್ಕಪ್ಪನ ಅಧಿಕಾರಿಯು ಹಬ್ಬದ ದಿನ ಮನೆಗೆ ಬಂದು ಹೊಸಬಟ್ಟೆಯ ಬಗ್ಗೆ ವಿಚಾರಿಸಿದಾಗ ‘ಹಬ್ಬದ್ದು ಇಲ್ಲ’ ಎಂದು ಬಾಯಿತಪ್ಪಿ ನುಡಿದರೂ ಸಮಯೋಚಿತ ಬುದ್ಧಿಯನ್ನು ಉಪಯೋಗಿಸಿ ‘ಇದೆ ಎನ್ನುವ ಬದಲು ಇಲ್ಲ ಎಂದುಬಿಟ್ಟೆ’ ಎಂದು ಚಿಕ್ಕಪ್ಪನ ಮಾನವನ್ನು ಉಳಿಸುತ್ತಾಳೆ. ಮೇಲ್ನೋಟಕ್ಕೆ ಇದು ಸಣ್ಣ ಪ್ರಸಂಗವಾದರೂ ಆಕೆಯು ಚಿಕ್ಕಪ್ಪ ಚಿಕ್ಕಮ್ಮಮಂದಿರ ಕೆಳಗೆ ಹೇಗೆ ಬಾಳುವೆ ಮಾಡಿದ್ದಿರಬಹುದು ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ.

ಒಬ್ಬಳು ಹುಡುಗಿಯನ್ನು ಇಬ್ಬರು ಬಯಸಿದರೂ ಯೋಗ್ಯನಾದವನು ಅಡೆತಡೆಗಳನ್ನು ಮೀರಿ ಆಕೆಯನ್ನು ಮದುವೆಯಾಗುವ ಕ್ರಿಯೆಯು ‘ತುಂಗೆ ದಡದ ಮಹಿಷಿ’ಯಲ್ಲಿದೆ. ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಆಸರೆಯಲ್ಲಿ ಬದುಕುತ್ತಿದ್ದ ಅಕ್ಕವ್ವಳು ತನಗಿಂತ ಅದೆಷ್ಟೋ ಹೆಚ್ಚು ವಯಸ್ಸಿನವನಾಗಿದ್ದ, ಶ್ರೀಮಂತ ಮನೆತನಕ್ಕೆ ಸೇರಿದ್ದ ಕ್ರಿಷ್ಟಪ್ಪನನ್ನು ಒಲ್ಲದೆ, ಬಡವನಾಗಿದ್ದರೂ ತಾನು ಒಳಗೊಳಗೆ ಪ್ರೀತಿಸುತ್ತಿದ್ದ ರಾಮಚಂದ್ರನನ್ನು ಮದುವೆಯಾಗುತ್ತಾಳೆ. ಇವರ ಸುತ್ತ ಲೇಖಕಿಯು ಸೃಷ್ಟಿಸುವ ಕೌಟುಂಬಿಕ ಜೀವನದ ಸ್ವರೂಪದಲ್ಲಿ ಪ್ರಬಂಧದ ಸತ್ವವು ಅಡಗಿದೆ. ಅವರು ಅದರ ಬಲ ದೌರ್ಬಲ್ಯಗಳನ್ನೂ ಚಿತ್ರಿಸುತ್ತಾರೆ. ಅಕ್ಕವ್ವ, ಅವಳ ಚಿಕ್ಕಮ್ಮ ರಾಧಾ ಕಕ್ಕಿ, ಗಂಗತ್ತೆ ಮತ್ತು ರಾಮಚಂದ್ರ ಆರೋಗ್ಯಕರ ಮೌಲ್ಯಗಳ ಪ್ರತೀಕಗಳು. ಆತ್ಮಗೌರವ, ಆತ್ಮವಿಶ್ವಾಸ, ದುಡಿಮೆ ಇವುಗಳು ಬದುಕಿನ ಶಕ್ತಿಯ ಮೂಲಗಳು. ವರನ ಗುಣದ ಬದಲು ಶ್ರೀಮಂತಿಕೆಯನ್ನೇ ಮುಖ್ಯವಾಗಿ ಕಾಣುವ ಮೌಢ್ಯವು ಅದರ ದೌರ್ಬಲ್ಯ. ಕುರೂಪಿಯೂ, ಗುಣಹೀನನೂ, ವಿಧುರನೂ ಆದ ಕ್ರಿಷ್ಟಪ್ಪನಿಗೆ ಅಕ್ಕವ್ವನನ್ನು ಮದುವೆ ಮಾಡಿಸಲು ಹೊರಡುವ ಚಿಕ್ಕಪ್ಪನ ಅಧಿಕಾರ-ಸಿಟ್ಟು ಸೆಡವುಗಳು, ಕ್ರಿಷ್ಟಪ್ಪನು ಅಯೋಗ್ಯನೆಂದು ಗೊತ್ತಿದ್ದೂ ಆತನಿಗಾಗಿ ಹೆಣ್ಣು ಕೇಳಲು ಬರುವ ಸೋದರಮಾವನ ಮೂರ್ಖತನ ಮುಂತಾದ ಸ್ತರಗಳಲ್ಲಿ ಪ್ರಬಂಧವು ತನ್ನ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.

ಅಕ್ಕವ್ವಳ ಮನಸ್ಸನ್ನು ಅರಿತು ಆಕೆಯನ್ನು ಗಂಗತ್ತೆಯ ಮಗ ರಾಮಚಂದ್ರನಿಗೆ ಮದುವೆ ಮಾಡಿಸುವಂತೆ ಚಿಕ್ಕಪ್ಪನ ಮನ ಒಲಿಸುವಲ್ಲಿ ಯಶಸ್ವಿಯಾಗುವ ರಾಧಾಕಕ್ಕಿಯು ಮತ್ತು ಬಸವಯ್ಯನ ಮದುವೆಯ ಬಗ್ಗೆ ಚಿಕ್ಕಪ್ಪನಿಗೆ ಇದ್ದ ವಿರೋಧವನ್ನು ಮುರಿಯಲು ಕಾರಣವಾಗುತ್ತಾಳೆ. ಲೇಖಕಿಗಿಂತ ಮೂರು ತಲೆಮಾರುಗಳ ಹಿಂದೆ ಹೆಣ್ಣಿಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲದಿದ್ದ ಕಾಲದಲ್ಲಿ ಚಿಕ್ಕಪ್ಪನಂಥ ಶಿಸ್ತಿನ ಸಿಪಾಯಿಯ ಮುಂದೆ ತಾನು ಮೆಚ್ಚಿದವನನ್ನು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸುವ ಅಕ್ಕವ್ವಳು ಬಂಡಾಯದ ಪ್ರತೀಕವಾಗಿದ್ದಾಳೆ. ಇದರ ಹಿಂದೆ ತಾತ್ವಿಕ ನಿಲುಗಳಿಲ್ಲದಿದ್ದರೂ ತನ್ನ ಮಿತಿಯಲ್ಲಿಯೇ ವ್ಯವಸ್ಥೆಯನ್ನು ವಿರೋಧುವ ಅಕ್ಕವ್ವಳಿಗೆ ರಾಮಚಂದ್ರನ ಮೇಲಿನ ಒಲವೇ ಪ್ರೇರಣೆಯಾಗಿರುತ್ತದೆ. ಈ ಪ್ರಬಂಧವು ತನ್ನ ಮೇಲ್ಮೈಯಲ್ಲಿ ತ್ರಿಕೋನ ಪ್ರಣಯದ ಕತೆಯನ್ನು ಹೋಲುತ್ತಿದ್ದರೂ ಒಳಮೈಯಲ್ಲಿ ಬಂಡಾಯದ ವಿನ್ಯಾಸವನ್ನು ಹೊಂದಿರುವ ವಿಚಾರವು ಮಖ್ಯವಾಗುತ್ತದೆ.

‘ಹೂವಾಯಿತು ಮನ’ದಲ್ಲಿ ಮನ ಮೆಚ್ಚಿದ ಇನಿಯನ ಕೈ ಹಿಡಿಯಲು ಬಯಸುವ, ಅವನೊಂದಿಗೆ ಸಂಸಾರಸ್ಥಳಾಗಲು ಪಡುವ ತವಕದ ಸುತ್ತಲೂ ಕಥನವು ಬೆಳೆಯುತ್ತದೆ. ‘ಸೀತೆಗೆ ತಪ್ಪದು ವನವಾಸ’ವು ಅಕ್ಕವ್ವನ ಮದುವೆ ಸಂಭ್ರಮಗಳನ್ನು ನವಿರಾದ ಸ್ನಿಗ್ಧ ವಿವರಗಳಲ್ಲಿ ದಾಖಲಿಸುವಲ್ಲಿ ಮಾತ್ರ ಕುತೂಹಲವನ್ನು ತಾಳದೆ ಆಕೆಯ ವೈವಾಹಿಕ ಬದುಕಿನಲ್ಲಿ ತಲೆದೋರಬಲ್ಲ ಕಷ್ಟಗಳ ಸಾಧ್ಯತೆಯನ್ನು ಧ್ವನಿಸುತ್ತದೆ. ‘ಅಕ್ಕವ್ವಗ ವಸ್ತಾ ಏನೇನ ಹಾಕ್ಯಾರ?’ ಎಂಬ ಪ್ರಶ್ನೆಗೆ ಕ್ರಿಷ್ಟಪ್ಪನ ಸೋದರಮಾವ ಹೊಟ್ಟೆಯುರಿಯನ್ನು ತಾಳಲಾರದೆ “ಅಷ್ಟ ದರಿದ್ರ. ಮಧ್ಯಾಹ್ನ ಹೊತ್ತಿಗೆ ತಿನ್ನಲಿಕೆ ಕೂಳ ಇಲ್ಲ. ಸಾಲ ಸೂಲ ಮಾಡಿ ಮದವಿ ಮಾಡಿಕೊಂಡಾವ. ಅವೇನ ವಸ್ತಾ ಹಾಕ್ತಾವ? ನಾಲ್ಕು ಪುರಂದರದಾಸರ ಪದ” (ಪುಟ 109) ಎಂದು ಅಪಹಾಸ್ಯ ಮಾಡುತ್ತಾನೆ. ಇದು ಅಕ್ಕವ್ವನ ಎದೆಯನ್ನು ಇರಿದರೂ ಆಕೆಯ ಸ್ವಾಭಿಮಾನ ಪುಟಿದೇಳುತ್ತದೆ. ಗಂಡನ ಬಡತನವನ್ನು ಸಹಿಸಲು ಸಿದ್ಧಳಾಗಿದ್ದ ಆಕೆಯ ಮನದಲ್ಲಿ ಸಿರಿವಂತಳಾಗುವ ಛಲ ಹುಟ್ಟಲು ಕಾರಣವಾಗುತ್ತದೆ. ಪುರಂದರದಾಸರು ನೀಡಿದ ‘ನಾರಾಯಣ’ ನಾಮಸ್ಮರಣೆಯನ್ನೇ ಬದುಕಿನ ಮೂಲಮಂತ್ರವಾಗಿಸಿಕೊಂಡು, ಅಪರಿಮಿತ ಶ್ರದ್ಧೆ ವಿಶ್ವಾಸಗಳಿಂದ ಕುಟುಂಬವನ್ನು ಮುನ್ನಡೆಸುವ ಶಕ್ತಿಯನ್ನು ಅಕ್ಕವ್ವಳು ಗಳಿಸಿಕೊಳ್ಳಲಿದ್ದಾಳೆ ಎಂಬ ಸೂಚನೆಯು ದೊರಕುತ್ತದೆ. ಆದರೆ ಇದು ಆಕೆಯ ಬವಣೆಗಳನ್ನು ಪವಾಡದಂತೆ ಬಗೆಹರಿಸುವುದಿಲ್ಲ.

‘ಗಾಡಿ ಉರುಳಿಸುವ ಗಾಲಿ’ ಎಂಬ ಪ್ರಬಂಧದಲ್ಲಿ “ಏನವ್ವ, ಇದ್ದ ಎರಡ ಪರಡಿಯೊಳಗ ಎಷ್ಟ ಅಡಿಗೀ ಮಾಡೀ, ಸಂಸರಕ್ಕ ಶಾಣ್ಯಾಕಿದ್ದಿ” (ಪುಟ 123) ಎಂಬ ಕಮಲಕ್ಕನ ಹೊಗಳಿಕೆಯು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವ ಅಕ್ಕವ್ವನ ಜಾಣತನವನ್ನಲ್ಲದೆ ಆಕೆಯ ಬಡತನವನ್ನೂ ಧ್ವನಿಸುತ್ತದೆ. ಈಕೆಯ ಬಡತನವನ್ನು ಕಂಡ ಕಮಲಾಬಾಯಿಯು ಅಕ್ಕವ್ವನ ಕುಟುಂಬಕ್ಕೆ ಅಗತ್ಯವಾದ ಪಾತ್ರೆ ಪರಡಿಗಳನ್ನು ಕೊಟ್ಟು ಸಹಾಯ ಮಾಡುವಾಗ ಆಕೆಯು ಬೇಡವೆನ್ನುವುದಿಲ್ಲ. ಲೇಖಕಿಯ ಅಜ್ಜಿ (ತಂದೆಯವರ ತಾಯಿ) ಎಷ್ಟೇ ದಯನೀಯ ಪರಿಸ್ಥಿತಿಯಲ್ಲಿದ್ದರೂ ಇತರರಿಂದ ಯಾವುದೇ ರೀತಿಯ ಸಹಾಯವನ್ನು ಸ್ವೀಕರಿಸದವಳಾಗಿದ್ದರೆ ಅಕ್ಕವ್ವಳ ಮನೋಭಾವವು ಅದಕ್ಕಿಂತ ಭಿನ್ನವಾಗಿದೆ. ಆದರೆ ಆಕೆಯ ಗಂಡ ರಾಮಚಂದ್ರನು ಎಂಥ ವಿಷಮ ಪರಿಸ್ಥಿತಿಯಲ್ಲಿಯೂ ಆಕೆಯನ್ನು ಬಿಟ್ಟುಹೋಗದೆ ಆಕೆಯನ್ನು ಹೃದಯವೆಂಬ ‘ಅರಮನೆಯ ಸಿರಿದೇವಿ’ಯಾಗಿಸಿದರೆ ಗಂಗವ್ವಜ್ಜಿಯ ಗಂಡ ಮಧ್ವಾಚಾರ್ಯರುÁಕೆಯನ್ನು ಬಿಟ್ಟು ಕಾಶಿಗೆ ಹೋಗಿ ಸಾಂಸಾರಿಕ ತಾಪತ್ರಯಗಳಲ್ಲಿ ಒಬ್ಬಳೇ ತೊಳಲಾಡುವಂತೆ ಮಾಡುತ್ತಾರೆ.

ಪರಸ್ಪರ ವೈದೃಶ್ಯದಲ್ಲಿ ನಿಲ್ಲುವ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಈ ಸಂಕಲನದ ಮಹತ್ವ ತಿಳಿಯುತ್ತದೆ. ‘ಅರಮನೆಯ ಸಿರಿದೇವಿ’ಯಲ್ಲಿ ಅಕ್ಕವ್ವನ ಸಂಸಾರವು ಆರ್ಥಿಕವಾಗಿ ಶ್ರೀಮಂತವಾಗಿರುವ ದೃಶ್ಯವನ್ನು ಮತ್ತು ಅಕ್ಕವ್ವಳು ತನ್ನ ಬದುಕಿನಲ್ಲಿ ಪಾಲಿಸಿದ ಆದರ್ಶದ ಕುರಿತು ವಿವರಿಸುತ್ತದೆ. ಶ್ರೀಮಂತಿಕೆಯ ಮಜಲನ್ನು ಮುಟ್ಟಲು ಆಕೆ ಕಷ್ಟಪಟ್ಟ ಬಗೆಯನ್ನು ವಿವರಿಸಿದ್ದರೆ ಅದು ಕೂಡ ಸೊಗಸಾದ ಲಲಿತಪ್ರಬಂಧವಾಗುತ್ತಿತ್ತು. ‘ತುಂಗೆ ದಡದ ಮಹಿಷಿ’ಯಂತೆ ‘ಹೂವಾಯಿತು ಮನ’, ‘ಸೀತೆಗೆ ವನವಾಸ ತಪ್ಪದು’, ‘ಅರಮನೆಯ ಸಿರಿದೇವಿ’ ಎಂಬ ಪ್ರಬಂಧಗಳ ಎಳೆಯು ತೆಳ್ಳಗಿದ್ದರೂ ಅವುಗಳನ್ನು ಜೊತೆಯಾಗಿ ಓದಿದರೆ ಮಾತ್ರ ಬರಹಗಳ ಬಿಗಿಯು ಅನುಭವಕ್ಕೆ ಬರುತ್ತದೆ.

ಮದುವೆ ಎಂಬ ವ್ಯವಸ್ಥೆಗೆ ಜೈವಿಕವಾದ ಖಾಸಗಿ ಆಯಾಮಗಳು ಮಾತ್ರವಲ್ಲದೆ ಧಾರ್ಮಿಕ, ಸಾಮಾಜಿಕ ಆಯಾಮಗಳು ಅವಿಭಾಜ್ಯವಾಗಿ ಬೆರೆತಿದ್ದು ಹೆಣ್ಣಿಗೆ ಆಯ್ಕೆಗೆ ಅವಕಾಶವಿಲ್ಲದಿರುವ ಕಾಲದ ಹೆಣ್ಣುಮಕ್ಕಳ ನೋವಿಗೆ ದನಿಯಾದ ಬರಹಗಳು ಇಲ್ಲಿವೆ. ಪತಿಪಾರಾಯಣತೆಯನ್ನು ಮರೆಯದೆ ಸವಾಲುಗಳನ್ನು ಎದುರಿಸುವ ಎದೆಗಾರಿಕೆಯನ್ನು ವ್ಯಕ್ತಪಡಿಸುವ ಪಾತ್ರಗಳು ಹೊಸಯುಗದ ಪ್ರತಿನಿಧಿಗಳಾಗುತ್ತಾರೆ. ಲೇಖಕಿಯು ಎಲ್ಲವನ್ನು ಏಕಪಕ್ಷೀಯವಾಗಿ ನೋಡುವವರಲ್ಲ ಎಂಬುದಕ್ಕೆ ‘ಹುತ್ತದ ಚಿತ್ತದಲ್ಲಿ ಹೆಪ್ಪುಗಟ್ಟಿದ ವಿಷ’ ಎಂಬ ಪ್ರಬಂಧವು ಸಾಕ್ಷಿಯಾಗುತ್ತದೆ. ವೆಂಕಣ್ಣನು ಒಳ್ಳೆಯವನಾದರೂ ರಸಿಕನಾಗಿರುವುದರಿಂದ ಸಂಗೀತ-ನಾಟಕಗಳ ಗೀಳಿಗೆ ಬಿದ್ದು, ಪಾಲಿಗೆ ಬಂದಿದ್ದ ಹೊಲಮನೆಗಳನ್ನು ಹಾಳುಮಾಡಿಕೊಂಡಿರುತ್ತಾನೆ.

ಆತನ ಹೆಂಡತಿ ಚಂದ್ರವ್ವಳು ಗಂಡನ ಮನೆಯ ಬೆಳ್ಳಿ ಬಂಗಾರದಲ್ಲಿ ಸಮಪಾಲು ಕೊಡಬೇಕೆಂದು ಅತ್ತೆಯವರೊಂದಿಗೆ ಜಗಳ ಮಾಡಿದುದರಿಂದ ಗಂಡಹೆಂಡತಿಯರು ಮನೆಯಿಂದ ಹೊರಬೀಳಬೇಕಾಗುತ್ತದೆ. ವೈಭವದಲ್ಲಿ ಮೆರೆದಿದ್ದ ಚಂದ್ರವ್ವಳು ಸೊಂಡೂರ ಹನುಮಂತರಾಯ ಎಂಬ ನ್ಯಾಯವಾದಿಯ ಮನೆಯ ಅಡುಗೆಯವಳಾಗಿ ಬದುಕುತ್ತಾಳೆ. ಲೇಖಕಿಯ ಪ್ರಬಂಧಗಳ ಇತರ ನಾಯಕಿಯರು ಬದುಕಿನಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರೆ ಚಂದ್ರವ್ವಳು ದಾಹ ಪ್ರತೀಕಾರಗಳ ಬೆಂಕಿಯಲ್ಲಿ ಸುಡುತ್ತಿರುತ್ತಾಳೆ. ತನಗೆ ಅನ್ಯಾಯವಾಗಿದೆ, ಬಾಳಿನ ಬೆಳಕು ಇಲ್ಲವಾಗಿದೆ, ತಾನು ಕತ್ತಲಿನ ಕೂಪದಲ್ಲಿ ಬಿದ್ದಿದ್ದೇನೆ ಎಂಬ ಅರಿವು ಆಕೆಯಲ್ಲಿ ಸೇಡಿನ ಭಾವನೆಯನ್ನು ಹುಟ್ಟಿಸುತ್ತದೆ. ಗಂಡನ ಒಳ್ಳೆಯತನಗಳು ಆಕೆಯ ವ್ಯಗ್ರತೆಯನ್ನು ತಣಿಸುವುದಿಲ್ಲ. ದಾರಿ ತಪ್ಪಿದ ಮಕ್ಕಳ ಕುರಿತು “ಆ ಸುಟ್ಟ ಮಕ್ಕಳು ಇದ್ರು ಅಷ್ಟ, ಸತ್ರು ಅಷ್ಟ” (ಪುಟ 75) ಎನ್ನುವ ಆಕೆಯ ಮೃದುಭಾವನೆಗಳು ಸತ್ತಿರುತ್ತವೆ.

ವೆಂಕಣ್ಣನನ್ನು ತನ್ನ ಸಹೋದರ ತಮ್ಮಣ್ಣನ ವಿರುದ್ಧ ಎತ್ತಿಕಟ್ಟಿ, ಮೊಕದ್ದಮೆಯನ್ನು ಹಾಕಿಸಿ ತಮಗೆ ಆಸರೆಯನ್ನು ನೀಡಿದ ಹನುಮಂತರಾಯರನ್ನೇ ತಮ್ಮ ಪರ ವಾದಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ಅವರು ವ್ಯಾಜ್ಯದಲ್ಲಿ ಸೋತಾಗ ಅನ್ನ ನೀಡಿ ಸಲಹಿದ ಹನುಮಂತರಾಯರ ಮೇಲೆ ದ್ವೇಷವನ್ನು ತಲೆಗೇರಿಸಿಕೊಂಡು ಆತನ ಮಗಳಾದ ಕಮಲವ್ವನ ಹತ್ಯೆ ಮಾಡುವ ಮೂಲಕ ನ್ಯಾಯಾಲಯದ ಕಟಕಟೆಯನ್ನೇರಿ ಗಲ್ಲುಶಿಕ್ಷೆಗೆ ಒಳಗಾಗುತ್ತಾಳೆ. ಮರಣವೇ ಆಕೆಯ ಮನೋರೋಗವನ್ನು ಮುಕ್ತಾಯಗೊಳಿಸುವ ಮದ್ದಾಗಿ ಪರಿಣಮಿಸಿದರೂ ತಾನು ಮಾಡಿದ ಕೆಲಸದ ಬಗ್ಗೆ ಆಕೆಗೆ ಪಶ್ಚಾತ್ತಾಪ ಇರುವುದಿಲ್ಲ. ಹೆಣ್ಣನ್ನು ಸಹನಾಮಯಿ, ತ್ಯಾಗಮಯಿಯಾಗಿ ಚಿತ್ರಿಸಿ ರೂಢಿಯಾಗಿರುವ ಹೊತ್ತಿನಲ್ಲಿ ಆಕೆಯನ್ನು ಎಲ್ಲ ರೀತಿಯ ತೆವಲು, ದುರಾಸೆ ಮತ್ತು ಕ್ರೌರ್ಯಗಳ ಮೂರ್ತರೂಪವಾಗಿ ಪ್ರಸ್ತುತಪಡಿಸಿದ ಪ್ರಬಂಧವು ವಾಸ್ತವದ ಇನ್ನೊಂದು ಮಗ್ಗುಲನ್ನು ಶೋಧಿಸುತ್ತದೆ.

ಬಡತನ ಮತ್ತು ಯಾತನೆಗಳು ಕೆಲವೇ ವರ್ಗಕ್ಕೆ ಸೀಮಿತವಾಗಿದ್ದು ಉಳಿದವರೆಲ್ಲರೂ ತಿಂದುಂಡು ಸುಖವಾಗಿ ಬಾಳುವ ಶೋಷಕರೆನ್ನುವ ದ್ವೇಷಬದ್ಧ ಬಾಲಿಶ ನಿಲುವಿಗೆ ಜೋತುಬಿದ್ದಿರುವ ಇಂದಿನ ದಿನಗಳಲ್ಲಿ, ಮೇಲುಜಾತಿಯವರಾಗಿ ಹುಟ್ಟಿದರೆ ನೋವಿಲ್ಲದ ಪರಿಸ್ಥಿತಿ ಇರುತ್ತದೆ ಎಂಬ ಭ್ರಮೆಗೊಳಗಾದವರನ್ನು ಪ್ರಶ್ನಿಸುವ ಧಾಟಿಯಲ್ಲಿ ಇಲ್ಲಿನ ಪ್ರಬಂಧಗಳು ಓದುಗರನ್ನು ತಟ್ಟುತ್ತವೆ. ನಗರಕೇಂದ್ರಿತ ಲೇಖಕ ಲೇಖಕಿಯರನ್ನು ತಟ್ಟದ ಗ್ರಾಮೀಣ ಬದುಕಿನ ಮಹಿಳೆಯರ ಜೀವನಾನುಭವಗಳು ಈ ಮೂಲಕ ದಕ್ಕುತ್ತವೆ. ಸ್ತ್ರೀವಾದಿ ಧೋರಣೆಗಳು ಮತ್ತು ಸಾಂಪ್ರದಾಯಿಕತೆಯ ನಡುವೆ ನಿಂತುಕೊಂಡು ಸಮನ್ವಯದ ಆಶಯವನ್ನು ಪ್ರತಿಪಾದಿಸುವ ಲೇಖಕಿಯು ಆವೇಶದಿಂದ ಕೂಡಿದ ಸಿದ್ಧಾಂತಗಳನ್ನು ಬಿಟ್ಟು ಸಮತೂಕವನ್ನು ಕಾಯ್ದುಕೊಂಡ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವುದು ಗಮನಾರ್ಹವಾಗಿದೆ.

“ಅಕ್ಷರ ಜ್ಞಾನ, ವಿಷಯ ಜ್ಞಾನಗಳಷ್ಟೇ ಶಿಕ್ಷಣವಲ್ಲ. ಆ ಶಿಕ್ಷಣವಿಲ್ಲದೆ ಮನುಷ್ಯ ಬಾಳುವುದು ಕಠಿಣ. ಶಿಕ್ಷಣದಿಂದ ಸಾಧಿಸಬೇಕಾದ ಮುಖ್ಯ ಅಂಶಗಳೆಂದರೆ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳುವುದು. ಅಂಥ ಶಿಕ್ಷಣವನ್ನು ಹಿಂದಿನ ಕಾಲದವರು ತಮ್ಮ ಹೆಣ್ಣು ಮಕ್ಕಳಿಗೆ ಮನೆಯಲ್ಲೇ ನೀಡುತ್ತಿದ್ದರು. ಅಷ್ಟು ಆ ಪರಿಸ್ಥಿತಿಗೆ ಸಾಕಾಗುತ್ತಿತ್ತೇನೋ” (ಪುಟ 112) ಎಂಬ ಸಾಲುಗಳು ಅದಕ್ಕೆ ಉದಾಹರಣೆಯಾಗಿದ್ದು ಹುಡುಗಿಯರಿಗೆ ಶಾಲಾ ಶಿಕ್ಷಣವನ್ನು ಕೊಡದಿರುವುದರ ಬಗೆಗಿನ ಅಸಮಾಧಾನವನ್ನು ನಾಜೂಕಾಗಿ ವ್ಯಕ್ತಪಡಿಸುತ್ತವೆ. ಹೇಳಿಕೊಳ್ಳುವಂಥ ಶಿಕ್ಷಣವಿಲ್ಲದಿದ್ದರೂ ಗಂಡಸಿಗೆ ಹೆಗಲೆಣೆಯಾಗಿ ನಿಂತು, ನಿರ್ಣಾಯಕ ಸಂದರ್ಭದಲ್ಲಿ ಆತನು ಸೋತುಹೋದಾಗ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸಂಸಾರವನ್ನು ದಡಕ್ಕೆ ಮುಟ್ಟಿಸಿದ ರೀತಿಯನ್ನು ಮೆಚ್ಚದಿರಲು ಸಾಧ್ಯವಿಲ್ಲ. ಸಂಪ್ರದಾಯದ ಹಿಡಿತದಲ್ಲಿ ದನಿಯನ್ನು ಕಳೆದುಕೊಂಡ ಹೆಣ್ಣಿನ ಸಂವೇದನೆಗಳನ್ನು ಪರಿಚಯಿಸುವ, ಆಕೆಯ ಹಂಬಲ, ಜೀವನಪ್ರೀತಿ, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿಕೊಂಡು ಅವುಗಳನ್ನು ಎದುರಿಸಿ ಗೆದ್ದ ಬಗೆಯನ್ನು ಮನಗಾಣಿಸಿರುವುದು ಈ ಕೃತಿಯ ಹಿರಿಮೆಯಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಸುನಂದಾ ಬೆಳಗಾಂವಕರ ಅವರ ‘ಕೈತುತ್ತು’”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter