‘ಹಿಂದೂಸ್ತಾನಿ ಸಂಗೀತ ಉಪಾಸಕ ಡಾ. ಹರೀಶ್ ಹೆಗಡೆ’

ಭೀಮಸೇನ್ ಜೋಷಿ, ರಾಜಗುರು, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಅವರಂತಹ ಮಹಾನ್ ಪ್ರತಿಭೆಗಳನ್ನು ಕಂಡು, ಸಂಗೀತ ಕೇಳಿ ಧನ್ಯತೆ ಪಡೆದ ನಾಡಿದು. ಈಗಿನ ತಲೆಮಾರಿನ ಕಲಾವಿದರು ಹಳಬರಂತೆ ಅಭ್ಯಾಸ ಮಾಡಲಾರರು, ಹಾಡಲಾರರು ಎಂಬುದೇ ಹಲವರ ಅಭಿಪ್ರಾಯ. ಆದರೆ ಈಗಲೂ ಅಲ್ಲಲ್ಲಿ ತುಂಬಾ ಪರಿಶ್ರಮದಿಂದ ಸಂಗೀತ ಸರಸ್ವತಿಯ ಆರಾಧನೆಯನ್ನು ಮಾಡುವವರಿದ್ದಾರೆ ಅದರಲ್ಲಿ ಪ್ರಮುಖವಾಗಿ ಗುರುತಿಸಬೇಕಾದ ಹೆಸರು ಉತ್ತರ ಕನ್ನಡದ ಕನಕನಳ್ಳಿ ಮೂಲದ ಡಾ. ಹರೀಶ್ ಹೆಗಡೆ.

‘ಹಿಂದೂಸ್ತಾನಿ ಸಂಗೀತದ ಆರಾಧನೆಯೇ ನಮ್ಮ ಬದುಕು. ದಿನದಲ್ಲಿ ಸುಮಾರು ಹದಿನೈದು ತಾಸು ಸಂಗೀತದ ಜೊತೆಗಿರುತ್ತೇನೆ. ರಿಯಾಜ್ ಮಾಡುತ್ತೇನೆ, ಕಲಿಸುತ್ತೇನೆ, ಬರೆದರೂ ಸಂಗೀತದ ಕುರಿತಾಗಿಯೇ ಇರುತ್ತದೆ. ಮಾತಾಡಿದರೂ ಸಾಮಾನ್ಯವಾಗಿ ಅದೇ ವಿಷಯ, ಮತ್ತೇನಾರೂ ಮಾಡುತ್ತೇವೆ ಎಂದರೂ ಸಂಗೀತದ ಮುಖಾಂತರ ಅಥವಾ ಸಂಗೀತಕ್ಕಾಗಿ’ ಎಂದು ಡಾ. ಹರೀಶ್ ಹೆಗಡೆಯವರು ವಿವರಿಸುವಾಗ ದ್ವನಿಯಲ್ಲಿ ಸಂಗೀತದ ಕುರಿತಾಗಿ ಅಪಾರ ಪ್ರೇಮವಿತ್ತು, ಆತ್ಮವಿಶ್ವಾಸವಿತ್ತು. ಹರೀಶ್ ಅವರದ್ದು ಸಂಗೀತಕ್ಕಾಗಿಯೇ ಮುಡಿಪಾಗಿಟ್ಟ ಜೀವನ. ಅವರ ಸಂಗೀತ ಪಯಣ ಹೇಗಿದೆ ಎಂಬ ಕುತೂಹಲದಿಂದ ಕೇಳಿದಾಗ ಅವರು ವಿವರಿಸಲಾರಂಭಿಸಿದರು, ನಾನವರ ಮಾತಿಗೆ ಕಿವಿಯೊಡ್ಡಿದೆ.

“ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನನ್ನು ಕಳೆದುಕೊಂಡೆ. ಅಮ್ಮನಿಗೆ ಆಸಕ್ತಿ ಇರುವ ಹಾಡಿನ ಪ್ರೀತಿ ಆನುವಂಶೀಯವಾಗಿಯೇ ನನಗೆ ಬಂದಿತ್ತು. ಶಾಲೆಗೆ ಹೋಗುವಾಗ ರೇಡಿಯೋ ಕೇಳಿ ಕಲಿತ ಹಾಡುಗಳನ್ನು ಸ್ಪರ್ಧೆಗಳಲ್ಲಿ ಹಾಡುತ್ತಿದ್ದೆ. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ. ಊರಿನಲ್ಲಿ ಎಲ್ಲರಿಗೂ ಹಾಡುವ ಆಸಕ್ತಿ ಇತ್ತು, ಭಜನೆ ಮಾಡುತ್ತಿದ್ದರು. ಹೈಸ್ಕೂಲಿಗೆ ಹೋಗುವಾಗ ಸಂಗೀತ ಕ್ಲಾಸ್ ಸೇರಿಕೊಂಡೆ. ಡಿ. ಎನ್ ಗಾಂವ್ಕರ್ ಎಂಬ ಯಲ್ಲಾಪುರ ಮೂಲದ ಕಲಾವಿದರು ಅತ್ಯಂತ ಮಮತೆಯಿಂದ ಸಂಗೀತದ ಪ್ರಾಥಮಿಕ ಪಾಠಗಳನ್ನು ಹೇಳಿಕೊಟ್ಟರು. ಹತ್ತನೆಯ ತರಗತಿಗೆ ಮುಗಿದ ನಂತರ ಉಡುಪಿಯ ಕೃಷ್ಣಮಠಕ್ಕೆ ಸೇರಿಕೊಂಡೆ. ಸಂಸ್ಕøತ ಅಧ್ಯಯನ ಮಾಡಿದೆ. ಜೊತೆಗೆ ಮಹಾಬಲೇಶ್ವರ್ ಭಾಗವತರಿಂದ ಸಂಗೀತ ಪಾಠವನ್ನು ಹೇಳಿಸಿಕೊಂಡೆ. ಬೆಳಿಗ್ಗೆ ನಾಲ್ಕರಿಂದ ಏಳು ಗಂಟೆಯವರೆಗೆ ಹಾಡುತ್ತಿದ್ದೆ. ಜ್ಯೂನಿಯರ್ ಸೀನಿಯರ್ ಎಕ್ಸಾಂ ಗಳನ್ನು ಮುಗಿಸಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎನ್ನುವ ಹಠವಿತ್ತು, ಅಗತ್ಯವೂ ಇತ್ತು. ಕ್ಯಾಸೆಟ್ಟು ಸಿ.ಡಿ ಗಳನ್ನು ಮಾರುವ ಅಂಗಡಿಯಲ್ಲಿ ವ್ಯವಸ್ಥಾಪಕನಾಗಿ ಸಂಜೆಯ ವೇಳೆಗೆ ಕುಳಿತು ಕೊಳ್ಳುತ್ತಿದ್ದೆ. ಅದು ನನಗೆ ತುಂಬಾ ಅನುಕೂಲವಾಯ್ತು.

ಎಲ್ಲಾ ಪ್ರಸಿದ್ದ ಕಲಾವಿದರು ಹಾಡಿದ ಉತ್ಕೃಷ್ಟ ಸಂಗೀತವನ್ನು ಕೇಳುವುದಕ್ಕೆ ಸಾಧ್ಯವಾಯಿತು. ಡಿಗ್ರಿ ಮುಗಿಯುವ ಹೊತ್ತಿಗೆ ನಾನೊಬ್ಬ ಸಂಸ್ಕೃತ ವಿದ್ವಾಂಸನಾಗುವುದಲ್ಲ, ಸಂಗೀತಗಾರನಾಗಬೇಕೆಂಬ ಹಂಬಲ ಬಲಿಯಿತು. ಕಾರಣಾಂತರದಿಂದ ಉಡುಪಿಯಿಂದ ಹಿಂದಿರುಗಿ ನಮ್ಮೂರಿಗೆ ಮರಳಿದೆ. ಹಳ್ಳಿಯಲ್ಲಿದ್ದು ಕೃಷಿ ಮಾಡಿ ಬದುಕ ಬೇಕೆಂದುಕೊಂಡೆ. ಮನಸ್ಸಿನೊಳಗಿದ್ದ ಹಂಬಲ ನನ್ನನ್ನು ಸುಮ್ಮನಿರಗೊಡಲಿಲ್ಲ. ಧಾರವಾಡಕ್ಕೆ ಹೋಗಿ ಸಂಗೀತದಲ್ಲಿ ಬಿ. ಮೂಸಿಕ್ಕಿಗೆ ಅಡ್ಮಿಷನ್ ಮಾಡಿಸಿದೆ. ಪಂಡಿತ ಶ್ರೀಪಾದ ಹೆಗಡೆಯವರಲ್ಲಿ ಸಂಗೀತಾಭ್ಯಾಸ ಮುಂದುವರೆಸಿದೆ. ಪಂ. ಶ್ರೀಪಾದ ಹೆಗಡೆಯವರು ಸಂಗೀತವನ್ನು ಅರಿತು ಹಾಡುವುದು ಹೇಗೆ? ರಾಗವನ್ನು ವಿಸ್ತರಿಸುವುದು ಹೇಗೆ ಎನ್ನುವುದನ್ನು ತುಂಬಾ ಚೆನ್ನಾಗಿ, ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಕಲಿಸಿದರು. ಅವರ ಪತ್ನಿ ನಾಗವೇಣಕ್ಕನೂ ಮಮತೆಯಿಂದ ನೋಡಿಕೊಂಡರು. ಬದುಕಿನ ಅನುಭವ ವಿಸ್ತಾರವಾಯಿತು. ಸಂಗೀತ ಜ್ಞಾನವೂ ಹೆಚ್ಚಾದದ್ದು ಅಲ್ಲಿಯೇ”…. ಒಂದರೆಘಳಿಗೆ ಭಾವುಕರಾಗಿ, ಮೌನ ತಾಳಿದ ಕುಳಿತ ಹರೀಶ್ ಮತ್ತೆ ಮಾತು ಮುಂದುವರೆಸಿದರು.

ಕಾಲೇಜಿನಲ್ಲಿ ಪಂ. ವೆಂಕಟೇಶ್ ಕುಮಾರ, ತರಲಗಟ್ಟಿಯವರು, ರಾಚಯ್ಯ ಹಿರೇಮಠರು, ಡಾ.ನಂದಾ ಪಾಟೀಲರು, ಶಾಂತಾರಾಮ ಹೆಗಡೆಯವರು, ಹಮೀದ್‍ಖಾನ್.. ಹೀಗೆ ಹಲವರಿಂದ ಹರೀಶ್ ಮಾರ್ಗದರ್ಶನ ಪಡೆದರು. ಪ್ರತಿ ನಿತ್ಯವೂ ಸಂಜೆ ಶ್ರೀಪಾದ ಹೆಗಡೆಯವರ ಬಳಿ ಪ್ರತಿ ದಿನ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಎಂಟುವರೆ ಒಂಭತ್ತು ಗಂಟೆಯವರೆಗೆ ಕಲಿಯುವುದು, ಅವರೊಂದಿಗೆ …ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.. ಹೀಗೆ ಸತತವಾಗಿ ಆರು ವರ್ಷಗಳು ಪ್ರತಿ ದಿನವೂ ಹರೀಶ್ ಸಂಗೀತಾಭ್ಯಾಸ ಮಾಡಿದರು. ಬಿ. ಮೂಸಿಕ್ಕಿನಲ್ಲಿ, ಎಂ ಮೂಸಿಕ್ಕಿನಲ್ಲಿ ಗೋಲ್ಡ ಮೆಡಲ್ ಪಡೆದುಕೊಂಡರು. ನೆಟ್ ಎಕ್ಸಾಂ ಪಾಸು ಮಾಡಿದರು. ಸಂಗೀತ ಅಲಂಕಾರ, ಸಂಗೀತ ವಿದ್ವತ್ ಪರೀಕ್ಷೆಯಲ್ಲಿಯೂ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದರು. ಸಂಗೀತಾಭ್ಯಾಸದಲ್ಲಿ ತೋರಿದ ನಿಷ್ಠೆಯ ಫಲವಾಗಿ ವಿಜಯಪುರದಲ್ಲಿ ಅಕ್ಕ ಮಹಾದೇವಿ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಳ್ಳುವ ಅವಕಾಶ ದೊರೆಯಿತು. ಕೆಲಸ ಮಾಡುತ್ತಲೇ ಪಿಎಚ್.ಡಿ ಮಾಡಿದರು.

ಪರಿಣತ ಗುರು- ಯಶಸ್ವೀ ಕಲಾವಿದ
ಹತ್ತು ವರ್ಷಗಳ ಹಿಂದೆ ವಿಜಯಪುರದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಡುವವರ ಸಂಖ್ಯೆಯೇ ಅತ್ಯಂತ ವಿರಳವಾಗಿತ್ತು. ಕೇಳುವವರು ಕೆಲವು ಜನರಿದ್ದರು. ಅಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ತೆರೆದ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ನಾನೇನು ಮಾಡಬೇಕು ಎಂಬುದಕ್ಕಾಗಿ ಹಲವಾರು ವಿಷಯದ ಬಗ್ಗೆ ಹರೀಶ್ ಗಮನ ಹರಿಸಿದರು. ಪ್ರಾಮಾಣಿಕ ಪ್ರಯತ್ನಕ್ಕೆ ಎಂದೂ ಸೋಲಿಲ್ಲ ಎಂಬಂತೆ ನಿಧಾನವಾಗಿ ಸಂಗೀತ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತು. ಮನೆಯಲ್ಲಿಯೂ ಅನೇಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾರಂಭಿಸಿದರು. ಸುರಶ್ರೀ ಮೂಸಿಕ್ ಅಕಾಡಮಿಯನ್ನು ಹುಟ್ಟು ಹಾಕಿದರು. ಮನೆ ಮನೆಯಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾರಂಭಿಸಿದರು.

ನಾಡಿನಾದ್ಯಂತ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆ. ಸಬರ್ಬನ್ ಮ್ಯೂಸಿಕ್ ಫೌಂಡೇಶನ್, ಮುಂಬೈ, ಸ್ವರ ವಿಲಾಸ ಬರೋಡಾ, ಸುರ ಸಿಂಗಾರ ವಿಜಯಪುರ ಹೀಗೆ ಹಲವಾರು ವೇದಿಕೆಯಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ.ತಮ್ಮದೇ ಆದ ಯೂಟ್ಯೂಬ್ ನಲ್ಲಿ ಸಂಗೀತ ಪಾಠಗಳನ್ನು, ವಿವಿಧ ರಾಗಗಳನ್ನು, ಭಕ್ತಿ ಗೀತೆಗಳನ್ನು ಅಪ್ಲೋಡ್ ಮಾಡಿದ್ದಾರೆ. ತಮ್ಮ ಬಳಿ ಕಲಿತ ಮಕ್ಕಳಿಗೆ ಕಾರ್ಯಕ್ರಮ ನೀಡುವುದಕ್ಕಾಗಿ ವೇದಿಕೆ ಬೇಕು ಎನ್ನುವ ಕಾರಣಕ್ಕೆ ಶಿಷ್ಯರ ಸಹಯೋಗದೊಂದಿಗೆ ಪ್ರತಿ ವರ್ಷ ವಾರ್ಷಿಕೋತ್ಸವವನ್ನು ಏರ್ಪಡಿಸುತ್ತಾರೆ. ಕಾರ್ಯಕ್ರಮ ಎರಡು ದಿನವಿಡೀ ನಡೆಯುತ್ತದೆ. ನೂರಾರು ಶಿಷ್ಯರು ಶಾಸ್ತ್ರೀಯ ಸಂಗೀತವನ್ನು ಪ್ರಸ್ಥುತಪಡಿಸುವುದು ಕಾರ್ಯಕ್ರಮವನ್ನು ವಿಶೇಷತೆ.

ಹರೀಶ್ ಅವರ ಪತ್ನಿ ಕವಿತಾ ಪತಿಯ ಶಿಷ್ಯೆ, ಹರೀಶ್ ಅವರು ನಡೆಸುವ ಸಂಗೀತ ಶಾಲೆಯ ಶಿಕ್ಷಕಿ ಕೂಡಾ ಹೌದು. ಮಗ ಸುಸ್ವರ ಉತ್ತಮವಾಗಿ ಹಾಡಬಲ್ಲ ಬಾಲ ಕಲಾವಿದ.
“ಶಿಷ್ಯರನ್ನು ಹೇಗೆ ಕಲಾವಿದರನ್ನಾಗಿ ರೂಪುಗೊಳಿಸಬೇಕೆನ್ನುವ ವಿಷಯವನ್ನು ನಿರಂತರವಾಗಿ ಚಿಂತಿಸುತ್ತೇನೆ, ಹಲವಾರು ಟೆಕ್ನಿಕ್ ಗಳನ್ನು ಅಳವಡಿಸಿಕೊಳ್ಳಲು ಸೂಚಿಸುತ್ತೇನೆ. ಒಬ್ಬ ಇಂಜಿನಿಯರ್ ಹಾಗೂ ಡಾಕ್ಟರ್ ಹೇಗೆ ನಿರಂತರವಾಗಿ ಕಠಿಣ ಪರಿಶ್ರಮ ಪಡಬೇಕೋ ಹಾಗೆಯೇ ಸಂಗೀತ ಕಲಾವಿದರಾಗಲೂ ಬದ್ದತೆ ಪರಿಶ್ರಮ ಬೇಕು. ಅಷ್ಟು ಆಸಕ್ತಿ ಇದ್ದರೆ ಮಾತ್ರ ನನ್ನಲ್ಲಿ ಶಿಷ್ಯತ್ವ ಸ್ವೀಕಾರ ಮಾಡಿ ಎಂದು ಕಂಡೀಷನ್ ಹಾಕಿಯೇ ಮಕ್ಕಳನ್ನು ಕ್ಲಾಸಿಗೆ ಸೇರಿಸಿಕೊಳ್ಳುತ್ತೇನೆ” ಎನ್ನುತ್ತಾರೆ ಹರೀಶ್.

ಸಾಮಾನ್ಯವಾಗಿ ಸಂಗೀತಗಾರರು ಕಲಿಯುವುದು, ರಿಯಾಜ್ ಮಾಡುವುದು, ಕಲಿಸುವುದರಲ್ಲಿ, ಕಾರ್ಯಕ್ರಮ ನೀಡುವುದಕ್ಕೆ ತಮ್ಮ ಪ್ರತಿಭೆಯನ್ನು ಸೀಮಿತವಾಗಿರಿಸಿಕೊಳ್ಳುತ್ತಾರೆ. ಡಾ. ಹರೀಶ್ ಹೆಗಡೆಯವರು ಒಬ್ಬ ಸಂಗೀತ ಕಲಾವಿದರು. ಸಂಗೀತದ ಶಾಸ್ತ್ರ ಜ್ಞಾನದಲ್ಲಿಯೂ ಅವರಿಗೆ ವಿಶೇಷ ಆಸಕ್ತಿ. ಪಿಎಚ್.ಡಿ ಪ್ರಬಂಧ ಬರೆದ ನಂತರವೂ ಅದರಲ್ಲಿ ಆಸಕ್ತಿ ಕಳೆದುಕೊಳ್ಳದೇ ಕನ್ನಡದಲ್ಲಿ ಸಂಗೀತ ಶಾಸ್ತ್ರದಲ್ಲಿ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಸ್ವರಾಲಂಕೃತಿ, ಸಂಗೀತ ಪಾರಿಭಾಷಿಕ ಶಬ್ದಾವಳಿ,ಸ್ವರ ಮಾಲಾ ಶತಕ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಸಗುನ ಗಾನ ತರಂಗ ಎಂಬ ಸಗುಣಾ ಚಂದವರ್ ಕರ್ ಅವರ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿದ್ದಾರೆ. ಗಾಯಕಿ ಡಾ. ನಂದಾಪಾಟೀಲ ಅವರನ್ನು ಕುರಿತಾಗಿ ‘ಡಾ. ನಂದಾ ಪಾಟೀಲ’ ‘ಸಂಗೀತ ವಿಶಾರದೆ’ ಎಂಬ ಹೊತ್ತಿಗೆಯನ್ನು ಬರೆದು ಪ್ರಕಟಿಸಿದ್ದಾರೆ.

‘ಸ್ವರಮಾಲಾ ಶತಕ’ 2021ನೇ ಸಾಲಿನ ಕರ್ನಾಟಕ ರಾಜ್ಯದ ಸಂಗೀತ ಮತ್ತು ನೃತ್ಯ ಅಕಾಡಮಿಯಿಂದ ಕೊಡಮಾಡುವ ಉತ್ತಮ ಪುಸ್ತಕ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಈ ಪುಸ್ತಕ ಇಂಗ್ಲೀಷಿಗೂ ಭಾಷಾಂತರಗೊಂಡಿದೆ. ಹರೀಶ್ ಅವರು ಉತ್ತಮ ಸಂಗೀತ ಸಂಯೋಜಕರು ಕೂಡಾ ಹೌದು, ವಚನಗಳು ಭಕ್ತಿಗೀತೆಗಳು, ಭಾವಗೀತೆಗಳು, ದೇಶಭಕ್ತಿಗೀತೆಗಳನ್ನು ರಾಗಾಧಾರಿತವಾಗಿ ಸಂಯೋಜಿಸುತ್ತಾರೆ. ಆಕಾಶವಾಣಿಯ ಬಿ. ಹೈ ಗ್ರೇಡ್ ಅನುಮೋದಿತ ಕಲಾವಿದರು ಮಾತ್ರವಲ್ಲ ಸಂಯೋಜಕರೂ ಹೌದು. ಅಷ್ಟೇ ಅಲ್ಲದೇ ಗೀತರಚನಕಾರರು ಕೂಡಾ ಹೌದು.
ಹರೀಶ್ ಅವರ ಪ್ರತಿಭೆಯನ್ನು ಗುರುತಿಸಿ ಪ್ರಜಾವಾಣಿ ಪತ್ರಿಕೆಯು 2020 ಯುವ ಪುರಸ್ಕಾರ ನೀಡಿದೆ.ನಂದಾ ಪಾಟೀಲ ವಚನ ಯುವ ಪುರಸ್ಕಾರ… ಹೀಗೆ ಹಲವು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಹರೀಶ್ ಅವರ ಹೆಗ್ಗಳಿಕೆ. ಪ್ರಸ್ಥುತ ಗೋಕರ್ಣದ ವಿಷ್ಣುಗುಪ್ತ ಯುನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂದ್ರ, ಮಧ್ಯ, ತಾರ ಸಪ್ತಕದಲ್ಲಿ ಸುಲಲಿತವಾಗಿ ಸ್ವರ ಸಂಚಾರ ಮಾಡುತ್ತಾ ನೂರಾರು ರಾಗಗಳನ್ನು ಹಾಡಬಲ್ಲ ಸಾಮರ್ಥ್ಯ ಇರುವ ಡಾ. ಹರೀಶ್ ಅವರ ಗಾಯನ ಕೇಳಲು ಸುಮಧುರ. ವಿಸ್ತಾರವಾದ ಆಲಾಪ, ಸೂಕ್ಷ್ಮ ಕುಸುರಿ ಕೆತ್ತಿದಂತಹ ಸ್ವರ ವಿನ್ಯಾಸ, ಭರ್ಜರಿ ತಾನುಗಳು ಇವರ ಗಾಯನದ ವಿಶೇಷತೆಗಳು. ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಮಾತ್ರವಲ್ಲದೇ ಭಕ್ತಿ ಸಂಗೀತ, ವಚನ ಸಂಗೀತಗಳ ಕಾರ್ಯಕ್ರಮಗಳನ್ನೂ ಇವರು ನಡೆಸಿಕೊಡುತ್ತಾರೆ.
ಡಾ. ಹರೀಶ್ ಒಬ್ಬ ಪ್ರಬುದ್ಧ ಕಲಾವಿದರಾಗಿ, ಯಶಸ್ವೀ ಗುರುವಾಗಿ, ಗುರು ಶಿಷ್ಯ ಪರಂಪರೆಯ ಕೊಂಡಿಯಾಗಿ, ಸಂಯೋಜಕರಾಗಿ, ಶಾಸ್ತ್ರಕಾರರಾಗಿ ಹಲವು ಆಯಾಮಗಳಲ್ಲಿ ಬೆಳೆಯುತ್ತಿರುವ ಪ್ರತಿಭಾವಂತರು. ‘ಹರೀಶ್ ಅಂದ್ರೆ ನಮ್ಮ ಮನಿ ಮಗಾ ಇದ್ದ ಹಾಂಗ, ನಾ ಏನ ಕಲಿಸೀದೀನಿ ಅದನ್ನ ಇನ್ನೂ ಎತ್ರರಕ್ಕ ಕೊಂಡೊಯ್ದಾನ, ಏನ ಕಲಿಸ್ತೀನಿ ಅದನ್ನ ತಿಳಕೊಂಡ ಕಲಿತು ಹಾಡೋ ಇಂಥಾ ಶಿಷ್ಯಾ ಸಿಗೋದೂ ನಮ್ಮಂಥಹ ಗುರುಗಳಿಗೂ ಸಂತೋಷವೇ’ ಎನ್ನುತ್ತಾರೆ ಡಾ. ಶ್ರೀಪಾದ ಹೆಗಡೆಯವರು.

ತಾನು ಏರಿದೆತ್ತರ ಎಷ್ಟಾದರೂ ಇರಲಿ ತನ್ನನ್ನು ಈ ಸ್ಥಿತಿಗೆ ಏರಲು ಕಾರಣರಾದ ತನ್ನೆಲ್ಲ ಗುರುಗಳನ್ನು, ಹಿರಿಯರನ್ನು ಸದಾ ಸ್ಮರಿಸುವ, ಗೌರವಿಸುವ ವಿನೀತ ಸ್ವಭಾವದವರು. ಹರೀಶ್. “ನಾ ಇಂದು ಏನ ಆಗೀನಿ ಅದು ನಮ್ಮ ಗುರುಗಳ ಕೃಪೆ” ಎನ್ನುವ ಈ ಸಾಂಸ್ಕೃತಿಕ ಪ್ರತಿಭೆಯನ್ನು ಇನ್ನೂ ಚೆನ್ನಾಗಿ ಕಲಾಸಕ್ತರು, ಸಮಾಜ ಗುರುತಿಸುವಂತಾಗಲಿ ಎಂಬುದೇ ಹಾರೈಕೆ. ಡಾ. ಹರೀಶ್ ಅವರ ಫೋನ್ ನಂಬರ್ ಡಾ. 8892298848
******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “‘ಹಿಂದೂಸ್ತಾನಿ ಸಂಗೀತ ಉಪಾಸಕ ಡಾ. ಹರೀಶ್ ಹೆಗಡೆ’”

  1. Udayakumar G Sindagi Vijayapur

    ಹರೀಶ ಹೆಗಡೆಯವರ ಸಂಗೀತ ಸಾಧನೆಯ ಬಗೆಗೆ ತುಂಬಾ ಮನೋಜ್ನವಾಗಿ ವಿವರಿಸಿದ ಲೇಖಕಿಗೆ ತುಂಬು ಹೃದಯದ ಧನ್ಯವಾದಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter