ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಕೆಲವು ಜನಪ್ರಿಯ ಕಾದಂಬರಿಕಾರರು

(ವಿ. ಸೂ.: ಇಂದಿನ ಲೇಖನದೊಂದಿಗೆ ವಿಕಾಸ ಹೊಸಮನಿ ಅವರು ತಮ್ಮ ‘ಮಿಂಚಿನ ಬಳ್ಳಿ’ ನಾಮಾಂಕಿತ ಅಂಕಣ ಬರಹಕ್ಕೆ ವಿರಾಮ ನೀಡುತ್ತಿದ್ದಾರೆ. ವಾಚಕರ ಬಳಗದ ತಾಳ್ಮೆಯನ್ನು ಪರೀಕ್ಷಿಸದೆ ಆದಷ್ಟು ಬೇಗನೇ ತಮ್ಮ ಮುಂದಿನ ಬರಹ ಹೊಸ ಅಂಕಣ ಶೀರ್ಷಿಕೆಯೊಂದಿಗೆ ಬರೆಯಲಿದ್ದಾರೆ. ವಿಶ್ವಧ್ವನಿ ಬಳಗ ಅವರಿಗೆ ಈ ತನಕದ ಬರಹಗಳಿಗಾಗಿ ಕೃತಜ್ಞತೆ ಅರ್ಪಿಸುತ್ತಾ, ಹೊಸ ಬರಹಗಳಿಗೆ ಸ್ವಾಗತ ಬಯಸುತ್ತಿದೆ.- ಸಂ.)

ಕನ್ನಡ ಕಾದಂಬರಿ ಪರಂಪರೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ ಒಂದು ಕ್ಲಾಸಿಕ್ ಅಥವಾ ಕಾರಂತ ಪರಂಪರೆ, ಮತ್ತೊಂದು ಜನಪ್ರಿಯ ಅಥವಾ ಅ.ನ.ಕೃ. ಪರಂಪರೆ. ಕಾರಂತ ಪರಂಪರೆಯಲ್ಲಿ ಬರೆಯುವುದು ಕಷ್ಟ, ಜನಪ್ರಿಯತೆ ಪಡೆಯುವುದು ಇನ್ನೂ ಕಷ್ಟ. ಆದರೆ ಅ.ನ.ಕೃ. ಪರಂಪರೆಯಲ್ಲಿ ಬರೆಯುವುದು ಸುಲಭ ಮತ್ತು ಜನಪ್ರಿಯತೆ ಪಡೆಯುವುದು ಕೂಡ ಕಷ್ಟವಲ್ಲ. ಇರಲಿ, ಜನಪ್ರಿಯ ಕಾದಂಬರಿಗಳನ್ನು ಬರೆಯುವುದು ಸುಲಭದ ವಿಷಯವಲ್ಲ. ಅದಕ್ಕೂ ಕೂಡ ಪ್ರತಿಭೆ ಮತ್ತು ಪರಿಶ್ರಮ ಬೇಕು. ಕನ್ನಡದ ತಥಾಕಥಿತ ವಿಮರ್ಶಕರು ಮತ್ತು ಬುದ್ಧಿಜೀವಿಗಳು ಜನಪ್ರಿಯ ಕಾದಂಬರಿಕಾರರನ್ನು ತುಚ್ಛವಾಗಿ ಕಾಣುತ್ತ ಬಂದಿದ್ದಾರೆ. ಒಂದೇ ಒಂದು ಜನಪ್ರಿಯ ಕಾದಂಬರಿ ಬರೆಯುವ ಸಾಮರ್ಥ್ಯವಿಲ್ಲದ ಇಂತಹ ತಥಾಕಥಿತ ಮಂದಿ ಕನ್ನಡ ಓದುಗರನ್ನು ನಿರಂತರವಾಗಿ ಪೋಷಿಸಿಕೊಂಡು ಬಂದಿರುವ ಜನಪ್ರಿಯ ಕಾದಂಬರಿಕಾರರಿಗೆ ಸಾಮಾನ್ಯ ಗೌರವ ತೋರುವ ಕನಿಷ್ಠ ಸೌಜನ್ಯ ತೋರಿಸಿಲ್ಲ ಎಂಬುದು ವಿಷಾದದ ಸಂಗತಿ. ಇರಲಿ, ಪ್ರಸ್ತುತ ಲೇಖನದಲ್ಲಿ ಕನ್ನಡದ ಕೆಲವು ಜನಪ್ರಿಯ ಕಾದಂಬರಿಕಾರರ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿದ್ದೇನೆ.

ಕೃಷ್ಣಮೂರ್ತಿ ಪುರಾಣಿಕ :
ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರಲ್ಲೊಬ್ಬರಾದ ಕೃಷ್ಣಮೂರ್ತಿ ಪುರಾಣಿಕ ಕನ್ನಡದಲ್ಲಿ ಓದುಗರ ಸಂಖ್ಯೆ ಹೆಚ್ಚಾಗುವಂತೆ ಮಾಡಿದ ಲೇಖಕರಲ್ಲೊಬ್ಬರು. ಅವರು ಸದಭಿರುಚಿಯ, ಸಾಮಾಜಿಕ ಕಾದಂಬರಿಗಳನ್ನು ವಿಫುಲವಾಗಿ ಬರೆದಿದ್ದಾರೆ. ಸುಮಾರು ನೂರಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿರುವ ಅವರಿಗೆ ಮಹಿಳಾ ಓದುಗರೇ ಹೆಚ್ಚು. ನವೋದಯದ ಹಿರಿಯ ಲೇಖಕರಾದ ಮುಗಳಿಯವರು ಯಾವುದೇ ಕಾದಂಬರಿಯನ್ನು ತಾವು ಓದಿ, ಅದು ಚೆನ್ನಾಗಿದೆ ಎಂದು ಮನದಟ್ಟಾದ ನಂತರವೇ ತಮ್ಮ ಹೆಣ್ಣುಮಕ್ಕಳಿಗೆ ಓದಲು ಕೊಡುತ್ತಿದ್ದರಂತೆ. ಆದರೆ ಪುರಾಣಿಕರ ಕಾದಂಬರಿಗಳು ಮಾರುಕಟ್ಟೆಗೆ ಬಂದ ಕೂಡಲೇ ಕೊಂಡು ತಂದು ತಮ್ಮ ಮಕ್ಕಳಿಗೆ ಓದಲು ಕೊಡುತ್ತಿದ್ದರಂತೆ! ಈ ಘಟನೆ ಪುರಾಣಿಕರ ಕಾದಂಬರಿಗಳ ಸದಭಿರುಚಿಯನ್ನು ತೋರಿಸುತ್ತದೆ.

ಪುರಾಣಿಕರ ಕಾದಂಬರಿಗಳು ನವರಸಭರಿತವಾದುವು. ಹೊರ ಜಗತ್ತಿಗೆ ಸದಾ ತಮ್ಮ ಕಣ್ಣು, ಕಿವಿಗಳನ್ನು ತೆರೆದಿಟ್ಟುಕೊಂಡಿದ್ದ ಅವರು ವೈವಿಧ್ಯಮಯ ಕಾದಂಬರಿಗಳನ್ನು ಕೊಟ್ಟರು. ಪ್ರೇಮ, ದಾಂಪತ್ಯದಿಂದ ಮೊದಲ್ಗೊಂಡು ಕರ್ನಾಟಕದ ಏಕೀಕರಣ ಮತ್ತು ಸ್ವಾತಂತ್ರ್ಯ ಚಳುವಳಿಯವರೆಗೆ, ಅಣ್ಣ – ತಮ್ಮಂದಿರ ಕಲಹದಿಂದ ಶುರುವಾಗಿ ರಾಜ್ಯ, ರಾಷ್ಟ್ರ ರಾಜಕಾರಣದವರೆಗೆ, ಸಮಾಜವಾದಿ ರಾಜಕೀಯದಿಂದ ತೊಡಗಿ ಕಾಂಗ್ರೆಸ್ ರಾಜಕಾರಣದವರೆಗೆ ಅವರ ಕಾದಂಬರಿಗಳ ವ್ಯಾಪ್ತಿಯಿದೆ. ‘ಧರ್ಮ ದೇವತೆ’, ‘ಹಿಮಗಿರಿಯ ಗೌರಿ’, ‘ಹಬ್ಬಿದ ಬಳ್ಳಿ’, ‘ಸನಾದಿ ಅಪ್ಪಣ್ಣ’, ‘ಹಾಲುಂಡ ತವರು’, ‘ಮಣ್ಣಿನ ಮಗಳು’ ಮತ್ತು ‘ಬೆವರಿನ ಬೆಲೆ’ ಸೇರಿದಂತೆ ಅವರು ನೂರಾರು ಜನಪ್ರಿಯ ಕಾದಂಬರಿಗಳನ್ನು ಬರೆದಿದ್ದಾರೆ.

ಕನ್ನಡದ ಮೊದಲ ಕಾದಂಬರಿಯಾಧಾರಿತ ಚಲನಚಿತ್ರ ‘ಕರುಣೆಯೇ ಕುಟುಂಬದ ಕಣ್ಣು’ ಪುರಾಣಿಕರ ‘ಧರ್ಮ ದೇವತೆ’ ಕಾದಂಬರಿಯಾಧಾರಿತವಾದುದು. ನಟಸಾರ್ವಭೌಮ ಡಾ. ರಾಜಕುಮಾರರ ಅಮೋಘ ಅಭಿನಯದಲ್ಲಿ ಮೂಡಿ ಬಂದ ಸಾರ್ಥಕ ಚಿತ್ರ ‘ಸನಾದಿ ಅಪ್ಪಣ್ಣ’ ಕೂಡ ಅವರ ಅದೇ ಹೆಸರಿನ ಕಾದಂಬರಿಯಾಧಾರಿತವಾದುದು. ಮಲಯಾಳಂ ನಟಿ ಸಿತಾರ ಅವರನ್ನು ಕರ್ನಾಟಕದ ಮೂಲೆ ಮೂಲೆಗೆ ಪರಿಚಯವಾಗುವಂತೆ ಮಾಡಿದ ‘ಹಾಲುಂಡ ತವರು’ ಅವರ ಅದೇ ಹೆಸರಿನ ಕಾದಂಬರಿಯಾಧಾರಿತ ಚಿತ್ರ. ಕನ್ನಡ ಕಾದಂಬರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಪುರಾಣಿಕರು ಒಂದು ಕಾಲಘಟ್ಟದಲ್ಲಿ ಕನ್ನಡ ಓದುಗರ ಅಭಿರುಚಿಯನ್ನು ತಿದ್ದಿ, ಬೆಳೆಸಿದ ವಿರಳ ಲೇಖಕರಲ್ಲೊಬ್ಬರು.

ಸೂರ್ಯನಾರಾಯಣ ಚಡಗ :
ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ವಿಫುಲವಾಗಿ ಬರೆದ ಜನಪ್ರಿಯ ಕಾದಂಬರಿಕಾರರಲ್ಲಿ ಸೂರ್ಯನಾರಾಯಣ ಚಡಗರೂ ಒಬ್ಬರು. ಅವಿಭಜಿತ ದಕ್ಷಿಣ ಕನ್ನಡ (ಈಗಿನ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು) ಜಿಲ್ಲೆಯ ಒಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣ ನೀಡುವ ಸದಭಿರುಚಿಯ ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಅವರ ಕಥನದಲ್ಲಿ ತುಳುನಾಡಿನ ವಿವಿಧ ಜನಾಂಗಗಳ ಆಚಾರ – ವಿಚಾರ, ನಂಬಿಕೆ, ಆಚರಣೆಗಳು, ಆಹಾರ ಪದ್ಧತಿ ಮುಂತಾದವುಗಳ ಮಾಹಿತಿ ಸಿಗುತ್ತದೆ. ಅವರ ಕಾದಂಬರಿಗಳಲ್ಲಿ ವೈವಿಧ್ಯತೆಯಿದೆ, ಭಾಷೆ ಮತ್ತು ನಿರೂಪಣೆಯಲ್ಲಿ ಲವಲವಿಕೆಯಿದೆ ಜೊತೆಗೆ ಕನ್ನಡ ಜಿಲ್ಲೆಯ ವ್ಯಕ್ತಿ ವೈಶಿಷ್ಟ್ಯಗಳನ್ನು ಸಹ ಅವರು ಚಿತ್ರಿಸಿರುವ ಪಾತ್ರಗಳಲ್ಲಿ ಕಾಣಬಹುದು.

‘ಮನೆತನ’, ‘ಸೀಮಂತಿನಿ’, ‘ದೇವರ ಹೆಂಡತಿ’, ‘ಅರಿಷಿನ ಕುಂಕುಮ’, ‘ಅಮರ ಸರಸ್ವತಿ’, ‘ಸ್ವರ್ಗದ ಬಾಗಿಲು’, ‘ಗಂಗಾ ಭವಾನಿ’, ‘ಮಧುರ ಮೈತ್ರಿ’, ‘ಮನೆಗೆ ಬಂದ ಸೊಸೆ’, ‘ಮನೆ ತುಂಬಿದ ಮಡದಿ’, ‘ಮಾಂಗಲ್ಯ ದೇವರು’, ‘ಬತ್ತದ ಕಣ್ಣೀರು’ ಮತ್ತು ‘ಹೆಣ್ಣು, ಹೊನ್ನು, ಮಣ್ಣು’ ಅವರ ಪ್ರಮುಖ ಕಾದಂಬರಿಗಳು.

ಟಿ.ಕೆ. ರಾಮರಾವ್ :
‘ಸಸ್ಪೆನ್ಸ್ ರಾಮರಾವ್’ ಎಂದೇ ಖ್ಯಾತಿ ಪಡೆದ ಟಿ.ಕೆ. ರಾಮರಾವ್ ಕನ್ನಡದ ಸ್ಟಾರ್ ಲೇಖಕರಲ್ಲೊಬ್ಬರು. ಡಾ. ರಾಜಕುಮಾರ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರದ ಯಶಸ್ಸು ಅವರಿಗೆ ತಾರಾ ಮೌಲ್ಯ ತಂದು ಕೊಟ್ಟಿತು. ಅವರು ಐವತ್ತಕ್ಕೂ ಮಿಕ್ಕಿದ ಪತ್ತೇದಾರಿ, ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದಾರೆ.

ಕನ್ನಡದಲ್ಲಿ ಮೇಲ್ಮಟ್ಟದ ಮತ್ತು ಸದಭಿರುಚಿಯ ಪತ್ತೇದಾರಿ ಕಾದಂಬರಿ ಬರೆದವರು ರಾಮರಾಯರು. ಇಂಗ್ಲಿಷ್ ಮತ್ತು ಇತರೆ ಪಾಶ್ಚಾತ್ಯ ಭಾಷೆಗಳ ಅತ್ಯುತ್ತಮ ಕಾದಂಬರಿಗಳನ್ನು ಓದಿಕೊಂಡಿದ್ದರೂ ಕೂಡ, ಆ ಕಾದಂಬರಿಗಳ ತಂತ್ರ ಮತ್ತು ಶೈಲಿಯನ್ನು ಮಾತ್ರ ಸ್ವೀಕರಿಸಿದ ರಾಮರಾಯರು ಹೊಸ ಕಥಾವಸ್ತುವಿರುವ ಪತ್ತೇದಾರಿ ಕಾದಂಬರಿಗಳನ್ನು ಸೃಷ್ಟಿಸಿದರು. ಅವರ ಕಾದಂಬರಿಗಳು ಭಾರತೀಯ ಮಣ್ಣಿನಲ್ಲಿ ಬೇರೂರಿ ಅರಳಿವೆ. ಅವರ ಕೌತುಕಭರಿತ ಪತ್ತೇದಾರಿ ಕಾದಂಬರಿಗಳು ಅಕ್ಷರಶಃ ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುತ್ತವೆ. ವೈವಿಧ್ಯಮಯ ಕಥಾವಸ್ತು, ವಿಭಿನ್ನ ಪಾತ್ರಗಳು, ಆಕರ್ಷಕ ನಿರೂಪಣೆ, ಸರಳ ಭಾಷೆ ಮತ್ತು ಸದಭಿರುಚಿಯಿಂದಾಗಿ ಅವರ ಕಾದಂಬರಿಗಳು ಗಮನ ಸೆಳೆಯುತ್ತವೆ. ಒಂದು ಕಾಲದಲ್ಲಿ ಅವರ ಕಾದಂಬರಿಗಳ ಸಾವಿರಾರು ಪ್ರತಿಗಳು ಬಿಸಿ ದೋಸೆಗಳಂತೆ ಮಾರಾಟವಾಗುತ್ತಿದ್ದವು. ಕನ್ನಡದಲ್ಲಿ ಬಹುದೊಡ್ಡ ಓದುಗ ವರ್ಗವೊಂದನ್ನು ಪೋಷಿಸಿ, ಬೆಳೆಸಿದ ಸಾರ್ಥಕ ಕೆಲಸವನ್ನು ರಾಮರಾಯರ ಕಾದಂಬರಿಗಳು ಮಾಡಿವೆ.

‘ಮೂರನೆಯ ಕೀಲಿ ಕೈ’, ‘ಶಕುನ ಪಕ್ಷಿ’, ‘ಚಿತ್ರಾವತಿ’, ‘ಆರಿದ ಲಾಂದ್ರ’, ‘ಕಪ್ಪು ನಾಯಿ’, ‘ತೋರು ಬೆರಳು’, ‘ತಾಳೆಯ ಹೂ’, ‘ಸೀಳು ನಕ್ಷತ್ರ’, ‘ಗುಲಾಮ ಹೆಣ್ಣು’, ‘ರಾಣಿಜೇನು’, ‘ಡೊಂಕುಮರ’, ‘ಬೆದರುಬೊಂಬೆ’, ‘ಪಶ್ಚಿಮದ ಬೆಟ್ಟ’, ‘ಸೀಮಾರೇಖೆ’, ‘ಮಣ್ಣಿನ ದೋಣಿ’, ‘ಕೆಂಪು ಮಣ್ಣು’, ‘ಪದ್ಮರಾಗ’, ‘ಕನಸುಗಾರ’, ‘ಆಕಾಶದೀಪ’, ‘ಲಂಗರು’, ‘ರಹಸ್ಯ ಪತ್ರ’ ಮತ್ತು ‘ಚುಕ್ಕೆಯ ಪಾರಿವಾಳ’ ಅವರ ಪ್ರಮುಖ ಕಾದಂಬರಿಗಳು. ರಾಮರಾಯರ ‘ಬಂಗಾರದ ಮನುಷ್ಯ’, ‘ಮರಳು ಸರಪಣಿ’, ‘ಮೂರು ಜನ್ಮ’, ‘ಸೀಳು ನಕ್ಷತ್ರ’, ‘ವರ್ಣ ಚಕ್ರ’, ‘ಮಣ್ಣಿನ ದೋಣಿ’ ಮತ್ತು ‘ಹಿಮಪಾತ’ ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ಸು ಕಂಡಿವೆ.


ನಾ. ಡಿಸೋಜಾ :

ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲೊಬ್ಬರಾದ ನಾಬರ್ಟ್ ಡಿಸೋಜಾ ಯಾನೆ ನಾ. ಡಿಸೋಜಾ ಅವರು ಇದುವರೆಗೆ ಹೆಚ್ಚು ಕಡಿಮೆ ಐವತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳ ವಸ್ತು ವೈವಿಧ್ಯ ಅಗಾಧವಾದುದು. ಬಹುಶಃ ಆಣೆಕಟ್ಟುಗಳ ನಿರ್ಮಾಣದಿಂದ ಮುಳುಗಡೆಗೊಳಗಾದ ಜನರ ಬದುಕು – ಬವಣೆಯನ್ನು ಅವರಷ್ಟು ಹೃದಯಂಗಮವಾಗಿ ಚಿತ್ರಿಸಿದ ಮತ್ತೊಬ್ಬ ಲೇಖಕರಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. ಅಲ್ಪಸಂಖ್ಯಾತ ಸಮುದಾಯವಾದ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಡಿಸೋಜಾ ಅವರು ಆ ಸಮುದಾಯದ ಕುರಿತು ಸೊಗಸಾದ ಕಾದಂಬರಿಗಳನ್ನು ಬರೆದಿದ್ದಾರೆ. ಕ್ರಿಶ್ಚಿಯನ್ ಸಂವೇದನೆಯನ್ನು ಕನ್ನಡ ಕಥಾಲೋಕಕ್ಕೆ ಅದರ ಎಲ್ಲ ಗುಣದೋಷಗಳೊಂದಿಗೆ ಪರಿಚಯಿಸಿದ ಮೊದಲ ಲೇಖಕ ನಾ. ಡಿಸೋಜಾ.

ಲೇಖಕರಾಗಿ ತುಂಬ ವಿಶಾಲ ಮನೋಭಾವ ಮತ್ತು ಆರೋಗ್ಯಕರ ಮನಸ್ಥಿತಿ ಹೊಂದಿರುವ ಡಿಸೋಜಾ ಅವರು ಮಲೆನಾಡಿನ ಕ್ರಿಶ್ಚಿಯನ್, ಮುಸ್ಲಿಂ, ಈಡಿಗ, ಒಕ್ಕಲಿಗ, ಬಂಟ, ಬ್ರಾಹ್ಮಣ ಸೇರಿದಂತೆ ಬಹುತೇಕ ಎಲ್ಲ ಸಮುದಾಯಗಳ ಕುರಿತು ಸಮಾನ ದೃಷ್ಟಿಯಿಂದ ಮತ್ತು ಅಷ್ಟೇ ಪ್ರೀತಿಯಿಂದ ಬರೆದಿದ್ದಾರೆ. . ಪ್ರಕೃತಿಯ ಬಗ್ಗೆ ಅಪಾರ ಪ್ರೀತಿಯುಳ್ಳ ಡಿಸೋಜಾ ಅಭಿವೃದ್ಧಿಯ ಹೆಸರಿನಲ್ಲಿ ಉಂಟಾಗುವ ಪರಿಸರ ನಾಶ, ಅಣೆಕಟ್ಟುಗಳ ನಿರ್ಮಾಣದಿಂದ ಮುಳುಗುವ ಊರುಗಳು, ಆಧುನಿಕತೆಯಿಂದ ಬದಲಾದ ಗ್ರಾಮ ಸಮಾಜ ಮತ್ತು ಮಲೆನಾಡಿನ ಕೃಷಿಕರ ಕುರಿತು ತಮ್ಮ ಕಾದಂಬರಿಗಳಲ್ಲಿ ಬರೆದಿದ್ದಾರೆ. ಅವರು ಕೌಟುಂಬಿಕ, ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳನ್ನು ಸಹ ಬರೆದಿದ್ದಾರೆ.

‘ಮುಳುಗಡೆ’, ‘ದ್ವೀಪ’, ‘ಒಡ್ಡು’, ‘ಮರವಂತೆ’, ‘ಕೊಳಗ’, ‘ಚೆನ್ನಿ, ಚೆನ್ನಮ್ಮ, ಚೆನ್ನಮ್ಮಾಜಿ’, ‘ಕಾಡಿನ ಬೆಂಕಿ’, ‘ಮಾನವ’, ‘ತ್ರಿಕೋನ’, ‘ಇಗರ್ಜಿ ಸುತ್ತಲಿನ ಹತ್ತು ಮನೆಗಳು’, ‘ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ’, ‘ತಿರುಗೋಡಿನ ರೈತ ಮಕ್ಕಳು’, ‘ಹರಿವ ನೀರು’, ‘ನೆಲೆ’, ‘ಕುಂಜಾಲು ಕಣಿವೆಯ ಕೆಂಪು ಹೂ’ ಸೇರಿದಂತೆ ಹಲವು ಜನಪ್ರಿಯ ಕಾದಂಬರಿಗಳು ಓದುಗರಿಂದ ಅಪಾರ ಮೆಚ್ಚುಗೆ ಪಡೆದಿವೆ. ಡಿಸೋಜಾ ಅವರ ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಮನ್ನಣೆ ಪಡೆದಿವೆ.

ಕೆ. ಟಿ. ಗಟ್ಟಿ :
ಕನ್ನಡದ ಅತ್ಯಂತ ಜನಪ್ರಿಯ ಮತ್ತು ವೈಚಾರಿಕ ಮನೋಭಾವದ ಅಪರೂಪದ ಲೇಖಕರು ಕೆ. ಟಿ. ಗಟ್ಟಿ. ಅವರು ಕನ್ನಡ ಸಾಹಿತ್ಯದ ದಿಗ್ಗಜರಾದ ಗೋಪಾಲಕೃಷ್ಣ ಅಡಿಗ ಮತ್ತು ಲಂಕೇಶರಂತಹವರಿಂದ ಮೆಚ್ಚುಗೆ ಪಡೆದವರು. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕನ್ನಡದ ಬಹುತೇಕ ಎಲ್ಲ ವಾರ ಪತ್ರಿಕೆ ಮತ್ತು ಮಾಸ ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ನಿರಂತರವಾಗಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದ್ದವು.

ವಿಭಿನ್ನ ಮತ್ತು ವೈವಿಧ್ಯಮಯ ಕಾದಂಬರಿಗಳನ್ನು ಬರೆದಿರುವ ಗಟ್ಟಿಯವರು ಆಕರ್ಷಕ ಕಥನದೊಂದಿಗೆ ವೈಚಾರಿಕತೆಯನ್ನು ಸಹ ಹದವಾಗಿ ಬೆರೆಸುತ್ತಾರೆ. ಅವರು ತಮ್ಮ ಬರಹದಲ್ಲಿ ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಮನುಷ್ಯ ಸಂಬಂಧಗಳು ಮತ್ತು ಮಾನವ ಸ್ವಭಾವದ ಕುರಿತು ಆಳವಾಗಿ ವಿಶ್ಲೇಷಣೆ ಮಾಡುವ ಅವರ ಕಾದಂಬರಿಗಳು ಗಮನಾರ್ಹವಾಗಿವೆ. ಕಥನ ಕಲೆ ಮತ್ತು ವೈಚಾರಿಕ ಪ್ರಜ್ಞೆಯಿಂದಾಗಿ ಅವರು ಕನ್ನಡದ ಉತ್ತಮ ಕಾದಂಬರಿಕಾರರಲ್ಲೊಬ್ಬರಾಗಿದ್ದಾರೆ.

‘ಶಬ್ದಗಳು’, ‘ಕರ್ಮಣ್ಯೇವಾಧಿಕಾರಸ್ತೇ’, ‘ಅವಿಭಕ್ತರು’, ‘ಗ್ಲಾನಿ’, ‘ಅಬ್ರಾಹ್ಮಣ’, ‘ಇತಿಹಾಸದ ಮೊಗಸಾಲೆಯಲ್ಲಿ’, ‘ಅಂತರಂಗದ ಅತಿಥಿ’, ‘ಪರಿಧಿ’, ‘ಅಭಿಚಾರ’, ”ಮನೆ’, ‘ಕೂಪ’, ‘ಪರುಷ’, ‘ಮೂಕ ಮನ’, ‘ಅರಗಿನಮನೆ’, ‘ಸ್ವರ್ಣಮೃಗ’, ‘ಮಿತಿ’, ‘ಕಾಮರೂಪಿ’, ‘ಕಾಮಯಜ್ಞ’, ‘ಅಶ್ರುತಗಾನ’, ‘ಒಂದು ಕಿಲೋ ಬಂಗಾರ ಮತ್ತು ಏಳು ಮಲ್ಲಿಗೆ ತೂಕದ ಹುಡುಗಿ’, ‘ಶಿಲಾತಪಸ್ವಿ’, ‘ನಿರಂತರ’, ‘ರಸಾತಳ’, ‘ರಾಗಲಹರಿ’ ಮತ್ತು ‘ಕೆಂಪು ಕಳವೆ’ ಅವರ ಪ್ರಮುಖ ಕಾದಂಬರಿಗಳು.

ಬಿ. ಎಲ್. ವೇಣು :
ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಾದ ಬಿ. ಎಲ್. ವೇಣು ಅವರು ಬರೆಯದ ವಿಷಯವಿಲ್ಲ. ಪ್ರೇಮಮಯ, ಕೌಟುಂಬಿಕ, ಸಾಮಾಜಿಕ, ಪತ್ತೇದಾರಿ ಮತ್ತು ಐತಿಹಾಸಿಕ ಸೇರಿದಂತೆ ಅವರು ಸುಮಾರು ಐವತ್ತು ಕಾದಂಬರಿಗಳನ್ನು ರಚಿಸಿದ್ದಾರೆ. ಜನಪ್ರಿಯ ಓದುಗರ ನಾಡಿ ಮಿಡಿತವನ್ನು ತುಂಬ ಚೆನ್ನಾಗಿ ಅರಿತಿದ್ದ ವೇಣು ಅವರು ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ವಿಫುಲವಾಗಿ ಕಾದಂಬರಿ ಬರೆದಿದ್ದಾರೆ. ಇಷ್ಟೇ ಆಗಿದ್ದರೆ ಅವರೊಬ್ಬ ಜನಪ್ರಿಯ ಕಾದಂಬರಿಕಾರರಾಗಿ ಮಾತ್ರ ಉಳಿಯುತ್ತಿದ್ದರು. ಆದರೆ ಅದನ್ನು ಮೀರಿಯೂ ಅವರು ಬೆಳೆದಿದ್ದಾರೆ. ದಲಿತ – ಬಂಡಾಯ ಮನೋಧರ್ಮವನ್ನು ಅವರ ಕಾದಂಬರಿಗಳಲ್ಲಿ ಕಾಣಬಹುದು. ಶೋಷಕರು, ಶೋಷಿತರು ಮತ್ತು ಶೋಷಣೆಯ ಕುರಿತು ಅವರು ಜನಪ್ರಿಯ ಶೈಲಿಯಲ್ಲಿ ಸೊಗಸಾಗಿ ಬರೆಯುತ್ತಾರೆ. ದಮನಿತರ ನೋವಿಗೆ ಬರಹದ ಮೂಲಕ ದನಿಯಾಗುವ ಪ್ರಾಮಾಣಿಕ ಪ್ರಯತ್ನ ಅವರ ಬರವಣಿಗೆಯಲ್ಲದೆ. ವೇಣು ಅವರು ಚಿತ್ರದುರ್ಗದ ಪಾಳೆಯಗಾರರ ಕುರಿತು ಚಾರಿತ್ರಿಕ ಕಾದಂಬರಿಗಳನ್ನು ಬರೆದು ಅಲ್ಲೂ ಕೂಡ ತಮ್ಮದೇ ಆದ ಛಾಪೊತ್ತಿದ ಪ್ರತಿಭಾವಂತರು. ಅವರ ಜನಪ್ರಿಯ ಶೈಲಿಯ ಪ್ರೇಮ ಕಾದಂಬರಿಗಳಿಗೆ ವಿಶೇಷ ಮನ್ನಣೆ ದೊರೆತಿದೆ.

‘ಅತಂತ್ರರು’, ‘ಮೊಬ್ಬಳ್ಳಿಯವರ ಬೆತ್ತಲೆ ಸೇವೆ’, ‘ಪ್ರೇಮ ಜಾಲ’, ‘ಪ್ರೇಮ ಪರ್ವ’, ‘ಅಜೇಯ’, ‘ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ’, ‘ಹೃದಯರಾಗ’, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಗಂಡುಗಲಿ ರಾಜಾವೀರ ಮದಕರಿ ನಾಯಕ’, ‘ಬಿಚ್ಚುಗತ್ತಿ ಭರಮಣ್ಣ ನಾಯಕ’, ‘ಹೆಬ್ಬುಲಿ ಹಿರೇಮದಕರಿ ನಾಯಕ’, ‘ದುರ್ಗದ ಬೇಡರ್ದಂಗೆ’ ಮತ್ತು ‘ಸುರಪುರದ ರಾಜಾ ವೆಂಕಟಪ್ಪ ನಾಯಕ’ ಅವರ ಪ್ರಮುಖ ಕಾದಂಬರಿಗಳು. ‘ಬೆತ್ತಲೆ ಸೇವೆ’, ‘ಪ್ರೇಮಪರ್ವ’, ‘ಅಜೇಯ’, ‘ಪ್ರೇಮ ಜಾಲ’, ‘ಪ್ರೀತಿ ವಾತ್ಸಲ್ಯ’ ಮತ್ತು ‘ಕಲ್ಲರಳಿ ಹೂವಾಗಿ…’ ಸೇರಿದಂತೆ ಅವರ ಕೆಲವು ಕಾದಂಬರಿಗಳು ಚಲನಚಿತ್ರಗಳಾಗಿ ಅಪಾರ ಯಶಸ್ಸು ಗಳಿಸಿವೆ.

ಸುದರ್ಶನ ದೇಸಾಯಿ :
ಕನ್ನಡದ ಖ್ಯಾತ ಪತ್ತೇದಾರಿ ಕಾದಂಬರಿಕಾರರಾದ ಸುದರ್ಶನ ದೇಸಾಯಿ ಹೆಚ್ಚು ಕಡಿಮೆ ಎಂಬತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಅವರು ತಮ್ಮ ರೋಚಕ ಪತ್ತೇದಾರಿ ಕಾದಂಬರಿಗಳ ಮೂಲಕ ಸತತ ನಾಲ್ಕು ದಶಕಗಳ ಕಾಲ ಓದುಗರನ್ನು ರಂಜಿಸಿದ್ದಾರೆ. ಇಯಾನ್ ಫ್ಲೇಮಿಂಗನ ಜೇಮ್ಸ್ ಬಾಂಡ್ ಪಾತ್ರದಿಂದ ಸ್ಫೂರ್ತಿ ಪಡೆದ ದೇಸಾಯಿಯವರು ಕನ್ನಡದಲ್ಲಿ ಅದೇ ಮಾದರಿಯ ಕೆಲವು ರೋಚಕ ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಖೈದಿಯೊಬ್ಬನಿಗೆ ಓದುವ ಹವ್ಯಾಸವಿತ್ತು. ಅವನ ಓದಿನ ಪ್ರೀತಿಗೆ ಪೊಲೀಸರು ಸಹ ಸಾಥ್ ಕೊಡುತ್ತಿದ್ದರು. ಆ ಸಾಹಿತ್ಯಪ್ರಿಯ ಖೈದಿ ದೇಸಾಯಿಯವರ ‘ಹಳದಿ ಚೇಳು’ ಕಾದಂಬರಿ ಓದಿ ಯಾವ ಮಟ್ಟಕ್ಕೆ ಪ್ರಭಾವಿತನಾಗಿದ್ದನೆಂದರೆ ಮರುದಿನ ರಾತ್ರಿ ಕಾದಂಬರಿಯ ದೃಶ್ಯವೊಂದರಲ್ಲಿ ನಡೆದಂತೆಯೇ ಜೈಲಿನ ಗೋಡೆಗಳನ್ನು ಹಾರಿ ತಪ್ಪಿಸಿಕೊಂಡ!

‘ಹಳದಿ ಚೇಳು’, ‘ಕೆಂಪು ಜೇಡ’, ‘ಸೀಳು ನಾಲಿಗೆ’, ‘ನೀಲಿ ಕಣ್ಣುಗಳು’, ‘ಅಸ್ಥಿಪಂಜರ’, ‘ಬೆಂಕಿಯ ಮಡಿಲಲ್ಲಿ’, ‘ವಿಚಿತ್ರ ಅಪರಾಧಿ’, ‘ಯಮದೂತರು’, ‘ತೋಟದ ಮನೆ’, ‘ಬೆಂಕಿ ಬಸಿರು’, ‘ಶೀತಲಕೋಳಿ’, ‘ಕೆರಳಿದ ಸರ್ಪ’, ‘ಆಹ್ವಾನ’, ‘ಸಿಡಿಮದ್ದು’, ‘ಕೆಲ್ಲಿ’, ‘ವೈಫರ್’, ‘ನಯನ’, ‘ಅಮರದೀಪ’ ಮತ್ತು ‘ಎಂಟೆದೆ ಬಂಟ’ ಅವರ ಪ್ರಮುಖ ಕಾದಂಬರಿಗಳು.

ಎಚ್. ಕೆ. ಅನಂತರಾವ್ :
ಕನ್ನಡದಲ್ಲಿ ರಾಜಕೀಯ ವಿಷಯವನ್ನಿಟ್ಟುಕೊಂಡು ಪತ್ತೇದಾರಿ ಕಾದಂಬರಿಗಳನ್ನು ಬರೆದವರು ಎಚ್. ಕೆ. ಅನಂತರಾವ್. ಭಾರತದಲ್ಲಿ ೧೯೭೫ ರಿಂದ ೧೯೭೭ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಜನಪ್ರಿಯ ಕಾದಂಬರಿ ಮತ್ತು ಸಿನಿಮಾವನ್ನು ಅಪಾರವಾಗಿ ಪ್ರಭಾವಿಸಿತು. ಪತ್ತೇದಾರಿ ಕಾದಂಬರಿಗಳು ಮತ್ತು ಮಸಾಲಾ ಸಿನಿಮಾಗಳಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಅವತಾರವಾಯಿತು. ಕನ್ನಡ ಸಿನಿಮಾದ ಮೊದಲ ಆ್ಯಂಗ್ರಿ ಯಂಗ್ ಮ್ಯಾನ್ ಅಂಬರೀಶ ಅವರಿಗೆ ರೆಬೆಲ್ ಸ್ಟಾರ್ ತಾರಾಪಟ್ಟ ತಂದುಕೊಟ್ಟ ಸಿನಿಮಾ ‘ಅಂತ’. ಇದು ಅನಂತರಾವ್ ಅವರ ಅದೇ ಹೆಸರಿನ ಕಾದಂಬರಿಯಾಧಾರಿತ ಚಿತ್ರ. ಹೆಚ್ಚಾಗಿ ರಾಜಕೀಯ ಥ್ರಿಲ್ಲರ್ ಕಾದಂಬರಿಗಳನ್ನು ಬರೆದ ಅವರು ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು.

‘ಅಂತ’, ‘ಅಂತ – ಈಗ’, ‘ಸುಶೀಲ’, ‘ಸೆಳೆತ’, ‘ಮುಕ್ತಿ’, ‘ಶೋಧ’, ‘ಜನಜನಕ’, ‘ಶಾಂತಿಶೋಧ’, ‘ಮಹೂರ್ತ’, ‘ದೇವರಗುಡ್ಡ’, ‘ಜಾಲ’, ‘ಶೋಧನೆ’, ‘ಅಂತಕಿ’, ‘ಅಂಜಿಕೆ’, ‘ಬದುಕು ಭಾಗ್ಯ’, ‘ಬಿಡುಗಡೆ’, ‘ಪ್ರತೀಕಾರ’, ‘ಭ್ರಮಣ’, ‘ಅನಾವರಣ’, ‘ಭೋಗ’, ‘ಅಪೂರ್ವ’, ‘ಕಿರಾತಕರು’, ‘ಸಾವಿನ ಸೀಳು’, ‘ಶಸ್ತ್ರಚಿಕಿತ್ಸೆ’ ಮತ್ತು ‘ಆವೇಶ’ ಸೇರಿದಂತೆ ಸುಮಾರು ನಲವತ್ತು ಕಾದಂಬರಿಗಳನ್ನು ಬರೆದಿದ್ದಾರೆ.

ವಿಜಯ ಸಾಸನೂರು :
ಐ.ಪಿ.ಎಸ್. ಅಧಿಕಾರಿಯಾಗಿದ್ದ ವಿಜಯ ಸಾಸನೂರರು ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲೊಬ್ಬರಾಗಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಕಂಡುಂಡ ಅನುಭವಗಳನ್ನು ರೋಚಕ ಕಾದಂಬರಿಗಳನ್ನಾಗಿ ಹೆಣೆದಿದ್ದಾರೆ. ಜನಪ್ರಿಯ ಶೈಲಿಯ ಪತ್ತೇದಾರಿ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಅವರು ಬರವಣಿಗೆಯಲ್ಲಿ ಸದಭಿರುಚಿ ಕಾಪಾಡಿಕೊಂಡಿದ್ದರು ಎಂಬುದು ಗಮನಾರ್ಹ.

‘ವಿಗ್ರಹಚೋರರು’, ‘ಅಜಿತ್’, ‘ಮಾಯಾ’, ‘ಅಪರಂಜಿ’, ‘ಜ್ವಾಲಾಮುಖಿ’, ‘ಯುದ್ಧ’, ‘ಸಾಮ್ರಾಟ್’, ‘ಶಿವ ತಾಂಡವ’, ‘ನಿರಂಜನ’, ‘ರಾಜಹಂಸ’, ‘ಇಂದ್ರಜಾಲ’, ‘ಶಬ್ದವೇಧಿ’, ‘ಗೀತಸಂಗೀತ’, ‘ಉಸಿರು’, ‘ಚಿಗುರು’, ‘ಪ್ರಳಯ’, ‘ಸ್ವಸ್ತಿಕ್’, ‘ಪಾಂಚಜನ್ಯ’ ಮತ್ತು ‘ಸವ್ಯಸಾಚಿ’ ಅವರ ಪ್ರಮುಖ ಕಾದಂಬರಿಗಳು.

ಕೆ. ಎನ್. ಗಣೇಶಯ್ಯ :
ಕನ್ನಡದ ಯುವ ಪೀಳಿಗೆಯ ಓದುಗರ ನಡುವೆ ತುಂಬ ಜನಪ್ರಿಯರಾದ ಕಾದಂಬರಿಕಾರ ಕೆ. ಎನ್. ಗಣೇಶಯ್ಯ. ಸಸ್ಯಶಾಸ್ತ್ರಜ್ಞರಾದ ಅವರು ಅಪಾರವಾದ ಓದು, ಸಂಶೋಧನೆ ಮತ್ತು ಕ್ಷೇತ್ರ ಕಾರ್ಯ ಮಾಡಿ ಬರೆದ ವೈಜ್ಞಾನಿಕ ಹಾಗೂ ಚಾರಿತ್ರಿಕ ಥ್ರಿಲ್ಲರ್ ಕಾದಂಬರಿಗಳು ಹೊಸ ಸಂಚಲನ ಉಂಟು ಮಾಡಿವೆ. ಇತಿಹಾಸ ಮತ್ತು ವೈಜ್ಞಾನಿಕ ವಿಷಯಗಳತ್ತ ಹೊಸ ಬೆಳಕು ಚೆಲ್ಲುವ ಇವರ ಕಾದಂಬರಿಗಳು ಯುವ ಜನತೆಯಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ಒಳ್ಳೆಯ ಕಾರ್ಯ ಮಾಡಿವೆ.

‘ಕನಕ ಮುಸುಕು’, ‘ಕರಿಸಿರಿಯಾನ’, ‘ಕಪಿಲಿಪಿಸಾರ’, ‘ಚಿತಾದಂತ’, ‘ಮೂಕಧಾತು’, ‘ಶಿಲಾಕುಲವಲಸೆ’, ‘ಬೆಳ್ಳಿಕಾಳ ಬೆಳ್ಳಿ’, ‘ರಕ್ತಸಿಕ್ತ ರತ್ನ’ ಮತ್ತು ‘ಗುಡಿಮಲ್ಲಮ್’ ಸೇರಿದಂತೆ ಡಜನಗೂ ಅಧಿಕ ಥ್ರಿಲ್ಲರ್ ಕಾದಂಬರಿಗಳನ್ನು ಬರೆದಿದ್ದಾರೆ.


ರವಿ ಬೆಳಗೆರೆ :

‘ಹಾಯ್ ಬೆಂಗಳೂರು’ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದ ರವಿ ಬೆಳಗೆರೆ ಒಳ್ಳೆಯ ಲೇಖಕರಾಗಿದ್ದರೂ ಕೂಡ ಜನಪ್ರಿಯತೆಯ ಪರಿಧಿಯನ್ನು ದಾಟಿ ಬರಲಾಗಲಿಲ್ಲ. ಅವರ ಬಹುತೇಕ ಕಾದಂಬರಿಗಳು ಅನುಸೃಷ್ಟಿ, ರೂಪಾಂತರ ಇಲ್ಲವೇ ಅನುವಾದಗಳು. ಅವರ ಕಾದಂಬರಿಗಳಲ್ಲಿ ಸದಭಿರುಚಿಯ ಕೊರತೆಯಿದೆ. ತಮ್ಮದೇ ಆದ ಓದುಗ ವರ್ಗ ಸೃಷ್ಟಿಸಿಕೊಂಡಿದ್ದ ಬೆಳಗೆರೆಯವರು ಸಾಕಷ್ಟು ಜನಪ್ರಿಯ ಶೈಲಿಯ ಮಸಾಲಾ ಕಾದಂಬರಿಗಳನ್ನು ಬರೆದಿದ್ದಾರೆ. ‘ಮಾಂಡೋವಿ’, ‘ಹೇಳಿ ಹೋಗು ಕಾರಣ’, ‘ನೀ ಹಿಂಗ ನೋಡಬ್ಯಾಡ ನನ್ನ’, ‘ಒಮರ್ಟಾ’, ‘ಮಾಟಗಾತಿ’, ‘ಸರ್ಪಸಂಬಂಧ’, ‘ಹಿಮಾಗ್ನಿ’ ಮತ್ತು ‘ಕಾಮಾರಾಜ ಮಾರ್ಗ’ ಅವರ ಕೆಲವು ಜನಪ್ರಿಯ ಕಾದಂಬರಿಗಳು.

ಜೋಗಿ, ಸಂತೋಷಕುಮಾರ ಮೆಹಂದಳೆ, ವಸುಧೇಂದ್ರ, ಗಜಾನನ ಶರ್ಮ ಮತ್ತು ಇತರೆ ಕೆಲವು ಜನಪ್ರಿಯ ಲೇಖಕರು ಕನ್ನಡದಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ. ಜನಪ್ರಿಯ ಶೈಲಿಯ ಮಸಾಲಾ ಕಾದಂಬರಿಗಳಾದ ಇವರ ಕೃತಿಗಳಿಗೆ ಯಾವುದೇ ಸಾಹಿತ್ಯಕ ಮೌಲ್ಯವಿಲ್ಲ. ಜನಪ್ರಿಯತೆ ಮತ್ತು ಹಣ ಗಳಿಕೆಯ ಹಿಂದೆ ಬಿದ್ದಿರುವ ಇಂತಹ ಲೇಖಕರಿಗೆ ಅದಕ್ಕಿಂತ ಹೆಚ್ಚು ಬೇರೆನೂ ಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಅಬ್ಬರ, ಆರ್ಭಟ ಮತ್ತು ಅಟ್ಟಹಾಸ ನೋಡಿದರೆ ತಲೆ ತಿರುಗಿ ಬೀಳುವಂತಾಗುತ್ತದೆ. ಒಂದೆರಡು ಜನಪ್ರಿಯ ಕಾದಂಬರಿ ಬರೆದವರೆಲ್ಲ ಅಹಂಕಾರದಿಂದ ಮತ್ತರಾಗಿ ವರ್ತಿಸುತ್ತಾರೆ.

ಒಬ್ಬ ಎರಡ್ಮೂರು ಕಾದಂಬರಿ ಬರೆದ ಜನಪ್ರಿಯ ಲೇಖಕ ಹುಚ್ಚು ಹಿಡಿದವರಂತೆ ವರ್ತಿಸುತ್ತಿದ್ದಾನೆ. ಪ್ರಪಂಚದ ಇತಿಹಾಸದ ಕುರಿತು ಕಾದಂಬರಿ ಬರೆದಿದ್ದೇನೆಂಬುದೇ ಇವನ ಅಟ್ಟಹಾಸಕ್ಕೆ ಕಾರಣ. ಭ್ರಮಾಲೋಕ ವಿಹಾರಿಯಾದ ಇವನು ಕಾದಂಬರಿಯ ಪ್ರಚಾರಕ್ಕಾಗಿ ಪ್ರವಾಸ ಮಾಡುತ್ತಾನಂತೆ, ಯಾರಿಗೂ ಗೌರವ ಪ್ರತಿ ಕೊಡುವುದಿಲ್ಲವಂತೆ, ಖರೀದಿಸಿದ ಪುಸ್ತಕಗಳಿಗೆ ಮಾತ್ರ ಹಸ್ತಾಕ್ಷರ ಹಾಕುತ್ತಾನಂತೆ! ಇವನ ಕಾದಂಬರಿ ನ ಭೂತೋ, ನ ಭವಿಷ್ಯತಿ ಎಂಬ ಭ್ರಮೆ! ಹೊಸ ಸಿನಿಮಾದ ಪ್ರಚಾರ ಮಾಡುವಂತೆ ತನ್ನ ಕಾದಂಬರಿಯ ಪ್ರಚಾರ ಮಾಡುತ್ತಿದ್ದಾನೆ. ಇವನು ಇಷ್ಟು ಕಂಗಾಲಾಗಿ, ಅಂಗಿ ಹರಿದುಕೊಂಡು, ಸೋಫಿಸ್ಟಿಕೇಟಡ್ ಭಿಕ್ಷುಕನಂತೆ ವರ್ತಿಸುವುದನ್ನು ನೋಡಲಾರದೆ ಓದುಗರು ಪುಸ್ತಕ ಕೊಳ್ಳಬೇಕು! ಈ ದ್ವಿತೀಯ ದರ್ಜೆಯ ಲೇಖಕನಿಗೆ ಅವನಂತವರೇ ಆದ ಓದುಗರು ಮತ್ತು ವಿಮರ್ಶಕರ ಬೆಂಬಲವಿದೆ.

ಮೂರು ಮತ್ತೊಂದು ಜನಪ್ರಿಯ ಕಾದಂಬರಿ ಬರೆದ ನಿವೃತ್ತ ಸರ್ಕಾರಿ ನೌಕರನೊಬ್ಬನಿಗೆ ವರ್ಧಮಾನ, ಮಾಸ್ತಿ ಮತ್ತು ಗಳಗನಾಥ ಪ್ರಶಸ್ತಿಗಳು ದೊರೆಯುತ್ತವೆ. ಸಾಧಾರಣ ಮಟ್ಟದ ಜನಪ್ರಿಯ ಕಾದಂಬರಿಗಳಿಗೆ ಇಂತಹ ಪ್ರತಿಷ್ಠಿತ ಪ್ರಶಸ್ತಿ ಕೊಡುವವರಿಗೆ ದೂರದಿಂದಲೇ ನಮಸ್ಕರಿಸಬೇಕಷ್ಟೆ. ಮೊದಲೇ ತಲೆ ತಿರುಕನಾದ ಆ ನಿವೃತ್ತ ನೌಕರ ಈಗ ಮತ್ತೊಂದು ಐತಿಹಾಸಿಕ ಕಾದಂಬರಿ ಬರೆದಿದ್ದಾನೆ. ಈಗ ಅವನು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಜ್ಞಾನಪೀಠ ಪ್ರಶಸ್ತಿಯ ಕನಸು ಕಾಣಲು ಆರಂಭಿಸಿದರೂ ಅಚ್ಚರಿಯಿಲ್ಲ.

ಮತ್ತೊಬ್ಬ ಲೇಖಕಿ ಪುರಾಣ ಪುಣ್ಯಕಥೆಗಳನ್ನು ವಸ್ತುವಾಗಿಟ್ಟುಕೊಂಡು ದಪ್ಪ ದಪ್ಪದ ಕಾದಂಬರಿಗಳನ್ನು ಬರೆಯುತ್ತಾಳೆ. ಎಲ್ಲರಿಗೂ ಗೊತ್ತಿರುವ, ಈಗಾಗಲೇ ಚರ್ವಿತ ಚವರ್ಣವಾಗಿರುವ ಅದೇ ರಾಮಾಯಣ, ಅದೇ ಮಹಾಭಾರತ, ಅದೇ ಅಷ್ಟಾದಶ ಪುರಾಣಗಳ ಕಥೆಗಳನ್ನು ತನ್ನ ತೊದಲು ಭಾಷೆಯಲ್ಲಿ, ಮಸಾಲಾ ರೂಪದಲ್ಲಿ ಬರೆಯುತ್ತಾಳೆ. ಇವಳಿಗೆ ಬೆಂಬಲ ಕೊಡಲು ಹೆಂಗರುಳಿನ ಲೇಖಕರ ಪಡೆಯೇ ಇದೆ. ಈ ಯಮ್ಮ ಈಗಾಗಲೇ ತನ್ನನ್ನು ತಾನೇ ಕನ್ನಡದ ಮಹತ್ವದ ಲೇಖಕಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾಳೆ!

ಫೇಸ್‌ಬುಕ್, ಇನ್ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿಯೇ ಹುಟ್ಟಿ, ಅಲ್ಲಿಯೇ ಬೆಳೆದು, ಅಲ್ಲಿಯೇ ಸಾಯುವ ಲೇಖಕ/ಕಿಯರು ಮತ್ತು ಓದುಗರ ಸಂಖ್ಯೆ ಹೆಚ್ಚಾಗುತ್ತಿದೆ. ಕಳಪೆ ಪುಸ್ತಕಗಳನ್ನು ಓದಿ, ಅದಕ್ಕಿಂತ ಕಳಪೆಯಾಗಿ ಬರೆದು, ದ್ವಿತೀಯ ದರ್ಜೆಯ ಲೇಖಕ/ಕಿಯರನ್ನು ಮಹಾನ್ ಲೇಖಕರಂತೆ ಬಿಂಬಿಸುವ ಟ್ರೆಂಡ್ ಈಗ ಶುರುವಾಗಿದೆ. ಇತ್ತೀಚೆಗೆ ಹೀಗೆ ಹೆಂಡ ಕುಡಿದ ಮಂಗನಾಂತಾಡುವ ಲೇಖಕರು ಮತ್ತು ಓದುಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾಧಾರಣ ಲೇಖಕ/ಕಿಯರು ಮತ್ತು ಅತೀ ಸಾಧಾರಣ ಅಭಿರುಚಿಯ ಓದುಗರಿಂದ ಸಾಹಿತ್ಯಕ ವಾತಾವರಣ ಹಾಳಾಗುತ್ತಿದೆ. ಲೇಖಕ ಮತ್ತು ಓದುಗ ಇಬ್ಬರೂ ಈಗ ಸಾಹಿತ್ಯಕ ಮೌಲ್ಯಗಳನ್ನು ಗಾಳಿಗೆ ತೂರಿ ಕೋಡಂಗಿಗಳಂತೆ ವರ್ತಿಸುತ್ತಿದ್ದಾರೆ. ಇದೇ ಸದ್ಯದ ಕನ್ನಡ ಸಾಹಿತ್ಯ ಲೋಕದ ದುರಂತ!

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಕೆಲವು ಜನಪ್ರಿಯ ಕಾದಂಬರಿಕಾರರು”

  1. Raghavendra Mangalore

    ವಿಕಾಸ ಹೊಸಮನಿಯವರು ಕನ್ನಡದ ಬಹು ದೊಡ್ಡ ಜನಪ್ರಿಯ ಕಾದಂಬರಿಕಾರರ ಕುರಿತು ಬರೆದ ಲೇಖನ ಸಂಗ್ರಹಯೋಗ್ಯ. ಆದಷ್ಟು ಬೇಗ ಮತ್ತೆ ಹೊಸ ಅಂಕಣದೊಂದಿಗೆ ನಮ್ಮನ್ನು ಮುದಗೊಳಿಸಲಿ. ಅವರ ನೇರ ಹಾಗೂ ದಿಟ್ಟ ಬರಹಗಳು ಓದುವ ಸೌಭಾಗ್ಯ ಮತ್ತೆ ಸಿಗಲಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter