(ಶ್ರೀ ಸಿದ್ಧರಾಮ ಹೊನ್ಕಲ್ ಅವರ ಗಜಲ್ ಮೈದಾನದಲ್ಲಿ ನಿನ್ನ ಜೊತೆ ಜೊತೆಯಲಿ.. ಹೆಜ್ಜೆಹಾಕಿದಾಗ ಆಸ್ವಾದಿಸಿದ ಮಲ್ಲಿಗೆಯ ಘಮಲು…)
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಆದ ಶ್ರೀ ಸಿದ್ದರಾಮ ಹೊನ್ಕಲ್ ಅವರು ದೈತ್ಯ ಲೇಖಕರೆಂದು ಕನಾ೯ಟಕದಲ್ಲಿ ಚಿರಪರಿಚಿತರಾಗಿದ್ದಾರೆ. ಇವರು ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕವನ , ಲಲಿತ ಪ್ರಬಂಧ , ಪ್ರವಾಸ ಕಥನ ,ಶಾಯಿರಿ ,ಹೈಕು, ಗಜಲ್ ,ಹಾಗೂ ಸಂಪಾದಿಕೆಯ ಕಾರ್ಯನಿರ್ವಹಿಸ್ತಾ ಈಗಾಗಲೇ ಸುಮಾರು 65 ಕ್ಕೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿದ್ದಾರೆ.ಅನೇಕ ಪ್ರತಿಷ್ಠಿತ ಪುರಸ್ಕಾರಗಳು ಸಹ ಇವರಿಗೆ ಸಂದಿರುವುದು ಸಹ ಜನಜನಿತ ಸಂಗತಿ.
ಶ್ರೀ ಸಿದ್ಧರಾಮ ಹೊನ್ಕಲ್
ಸುಮಾರು ಮೂರು ವರ್ಷಗಳ ಹಿಂದೆ ಸಿದ್ದರಾಮ ಹೊನ್ಕಲ್ ಅವರು ಕನ್ನಡ ಗಜಲ್ ಗಳನ್ನು ಬರೆಯಬೇಕೆಂದು ಮನಸ್ಸು ಮಾಡಿ ಒಂದು ವರ್ಷದಲ್ಲಿಯೇ ನಾಲ್ಕು ಗಜಲ್ ಸಂಕಲನಗಳನ್ನು ಪ್ರಕಟಿಸಿ ಎಲ್ಲರಿಗೂ ಆಶ್ಚರ್ಯ ಆಗುವಂತೆ ಮಾಡಿದರು. ಹಗಲು ರಾತ್ರಿ ಆ ಗಜಲ್ ರಾಣಿಯನ್ನು ಅಪ್ಪಿಕೊಂಡು ಆಕೆಯನ್ನು ಆತ್ಮಸಖಿ, ಸಾಥಿ,ಸಂಗಾತಿಯನ್ನಾಗಿ ಮಾಡಿಕೊಂಡು ರಚನೆಗೆ ಬೇಕಾಗುವ ಮೋಹಕವಾದ, ನವಿರಾದ, ನಾಜೂಕದ, ನವಿಲುಗೆರೆಯಂತಹ ಮೃದುವಾದ , ಮಧುರವಾದ ಭಾಷೆಯಿಂದ ಮದರಂಗಿ ಚೆಲುವಿನಂತಹ ಸಾಕಿಯನ್ನು ತಮ್ಮ ಆತ್ಮ ಸಂಗಾತಿಯಾಗಿ ಮಾಡಿಕೊಂಡು ತಮ್ಮ ಮನದಾಳದ ಪ್ರೀತಿ , ಪ್ರೇಮ, ಪ್ರಣಯ ,ವಿರಹ , ಅನುರಾಗ , ಕಾಯುವಿಕೆ, ಮುಂತಾದ ಹೃದಯದ ಭಾವನೆಗಳನ್ನು ಓದುಗರ ಹೃದಯಕ್ಕೆ ತಟ್ಟುವಂತೆ ಕಾವ್ಯಮಯವಾಗಿ ಗಜಲ್ ಗಳನ್ನು ರಚಿಸಿದರು.
ಇಲ್ಲಿವರೆಗೆ ಕನ್ನಡದ ಗಜಲ್ ಸಾಹಿತ್ಯದಲ್ಲಿ ಅನೇಕರು ಅನೇಕ ಗಜಲ್ ಕೃತಿಗಳನ್ನು ರಚಿಸಿದರು ಸಹ ಸಂಪುಟವನ್ನು ಮೊದಲು ತಂದವರು ಎಚ್ ಎಸ್ ಮುಕ್ತಾಯಕ್ಕ. ತಮ್ಮ ಪ್ರಕಟಿತ ಮೂರು ಗಜಲ್ ಸಂಕಲನಗಳನ್ನು ಸೇರಿಸಿ ಒಂದು ಸಂಪುಟವನ್ನು ಪ್ರಕಟಿಸಿದ್ದಾರೆ. ಈಗ ಎರಡನೆಯವರಾಗಿ ಸಿದ್ದರಾಮ ಹೊನ್ಕಲ್ ಅವರು ತಮ್ಮ ನಾಲ್ಕು ಗಜಲ್ ಸಂಕಲನಗಳಾದ ೧.ಆಕಾಶಕ್ಕೆ ಹಲವು ಬಣ್ಣಗಳು.. ೨. ಹೊನ್ನಮಹಲ್ . ೩. ನಿನ್ನ ಪ್ರೇಮವಿಲ್ಲದೇ ಸಾಕಿ … ೪.ಆತ್ಮಸಖಿಯ ಧ್ಯಾನದಲ್ಲಿ ..ಈ ನಾಲ್ಕು ಸಂಕಲನಗಳ ಹಾಗೂ ಹೊಸತಾಗಿ ಬರೆದ ಇನ್ನೊಂದು ಗಜಲ್ ಸಂಕಲನದ ಗಜಲ್ ಗಳು ಸೇರಿದಂತೆ ಹೀಗೆ ಒಟ್ಟು ಐದು ಗಜಲ್ ಸಂಕಲನಗಳನ್ನು ಸೇರಿಸಿ ಈಗ ನಿನ್ನ ಜೊತೆ ಜೊತೆಯಲಿ.. ಎಂಬ ಬೃಹತ್, ಅಷ್ಟೇ ಸುಂದರ ಗಜಲ್ ಸಂಪುಟವನ್ನು ಪ್ರಕಟಿಸಿ ಓದುಗರ ಕೈಗೆ ಇಟ್ಟಿದ್ದಾರೆ.
ಈ ಬ್ರಹತ್ ಗಜಲ್ ಸಂಪುಟವು ನಿನ್ನ ಜೊತೆ ಜೊತೆಯಲಿ.. ಎಂಬ ಸಂಕಲನವು 25-8-2024 ರಂದು ಗುಲಬಗಾ೯ದಲ್ಲಿ ನಡೆದ ಅಖಿಲ ಕರ್ನಾಟಕ ಗಜಲ್ ಸಮ್ಮೇಳನದಲ್ಲಿ ನನ್ನಿಂದ ಲೋಕಾರ್ಪಣೆ ಮಾಡಿಸಿದರು.
ಆ ಸಮ್ಮೇಳನದ ಅಧ್ಯಕ್ಷಳಾದ ನಾನು ಲೋಕಾರ್ಪಣೆ ಮಾಡಿದ್ದು ನನಗೆ ಒಂದು ಹೆಮ್ಮೆಯ ಸಂಗತಿ ಮತ್ತು ಇದು ಒಂದು ಐತಿಹಾಸಕ ಕ್ಷಣ ಎಂದು ಹೇಳಬಹುದು..
ಈ ಬೃಹತ್ ಸಂಪುಟ ನಿನ್ನ ಜೊತೆ ಜೊತೆಯಲಿ.. ಶೀರ್ಷಿಕೆಯ ಸಂಪುಟದಲ್ಲಿ ಒಟ್ಟು 319 ಗಜಲ್ ಗಳಿವೆ, ಸುಂದರ ಚಿತ್ರಗಳು ಇವೆ. ಸಿದ್ದರಾಮ ಹೊನ್ಕಲ್ ಅವರು ಇಲ್ಲಿಯವರೆಗೆ ಬರೆದ ನವಿರಾದ, ಮೃದುವಾದ, ಹೃದಯ ವೇದನೆಯನ್ನು ಹೇಳುವ ವಿರಹದ ಪ್ರೇಮಾಲಾಪದ ಗಜಲ್ ಗಳೇ ಹೆಚ್ಚಾಗಿದ್ದು ಯುವ ಜನರಿಗೆ ಹುಚ್ಚು ಹಿಡಿಸಿ ಅವರ ಭಾವನೆಗಳಿಗೆ ಸ್ಪಂದಿಸುವಂತಿವೆ.
ಅದಲ್ಲದೇ ಸಮಾಜಮುಖಿ,ಜನಮುಖಿ ಆಶಯಗಳ ಸಾಮಾಜಿಕ ,ಅಧ್ಯಾತ್ಮಿಕ ,ವ್ಯಕ್ತಿ ಚಿತ್ರಣ, ಗಜಲ್ ಗಳು ಇದರಲ್ಲಿ ಇವೆ. ಹಾಗೂ ನಾಲ್ಕು ಗಜಲ್ ಸಂಕಲನಗಳ ಮುನ್ನುಡಿ,ಬೆನ್ನುಡಿ ಹೀಗೆ ಕೆಲವು ಮುಖ್ಯರ ಅನಿಸಿಕೆಗಳು ಇಲ್ಲಿ ಇವೆ. ಒಟ್ಟು ಈ ಸಂಪುಟವು 500 ಪುಟಗಳ ಬೃಹತ್ ಸಂಪುಟವಾಗಿದೆ.ಬೆಲೆ.ರೂ.400/-ಕ್ಕೆ ರಿಜಿಸ್ಟರ್ ಪೋಸ್ಟ್ ಲಿ ಕಳಿಸಲಿದ್ದಾರೆ ಎಂಬುದು ಸಂತೋಷದ ವಿಷಯ ಆಗಿದೆ.
ಅವಳು ಮುನಿದು ಹೋದ ಮೇಲೆ ಅವಳಂತೆ ಮತ್ತಾರೂ ಬೇಕೆನಿಸಲಿಲ್ಲ
ಜನ ಸಾಗರದಲ್ಲಿ ಮತ್ತೆ ನೋಡಿದೆ ಇವಳಂತೆ ಮತ್ತಾರೂ ಬೇಕೆನಿಸಲಿಲ್ಲ
*
ಯಾರಿಗೆ ಹೇಳಲಿ ಈ ಹೃದಯದ ದಾವಾನಲ ಮೂಕ ರೋದನವಾಗಿದೆ
ಮಾತು ಮಾತಿನಲೇ ಪ್ರೇಮ ಮಾತಿನಲೇ ಕಲಹ ದೂರಾಗಿಸುವುದು*
*
ಆಗಾಗ ಸೇರಿ ಹೇಗಿರೋಣ ಎಂದು ಒಂದಷ್ಟು ಕ್ಷಣ ಯೋಚಿಸೋಣ ಬಾ
ಹಿತ ನೀಡುವ ಕೆಲ ನೋವು ನಲಿವುಗಳಿಗೆ ಮರುಜೀವ ನೀಡೋಣ ಬಾ
*
ಬಿಸಿಯುಸಿರು ರೋಮಾಂಚನಕೆ ಮೈಮರೆತು ಹೋದೆ
ಬಿಸಿಯುಸಿರಿನಲಿ ಈ ಶಾಂತಿ ಸಮಾಧಾನ ಗೊತ್ತಿರಲಿಲ್ಲ
*
ನಿನಗಾಗಿ ಜೀವ ಹಿಡಿದು ಕುಂತಿಹ ಶಬರಿಯಂತೆ ಕಾದಿರುವೆನು ಸಖಿ
ಆಸೆ ಆಕಾಂಕ್ಷೆಗಳ ಬಯಕೆ ಕೋರಿಕೆ ಬಲ್ಲೆ ನೀ ಬಿಗಿದಪ್ಪಿ ತಣಿಸಬಾರದೆ
*
ಮನಸು ಮಲ್ಲಿಗೆಯಾಗಿಸಿಕೊಂಡು ಕಾದಿಹನು ನಿನಗಾಗಿ ಸಾಕಿ
ಕಂಗಳಲಿ ಕನಸುಗಳ ಮೂಟೆ ಹೊತ್ತು ನಿಂದಿಹನು ನಿನಗಾಗಿ ಸಾಕಿ
*
ಎಲ್ಲಿ ಹೋದಳು ಅವಳು ನನ್ನವಳು ಎಲ್ಲಿ ಹೋದಳು ಸಾಕಿ
ಮನಸ್ಸಿನಲ್ಲಿ ಹುಟ್ಟಿ ಬೀದಿಯಲಿ ಬೆಳೆದವಳು ಅವಳು ಸಾಕಿ
*
ಆಕಾಶದ ತಾರೆಗಳ ತಂದು ಅಂಗಳದಲಿ ನೆಡಬಲ್ಲೆ ನೀ ಹೇಳಿದರೆ
ಈ ಮಧುರ ಕಾವ್ಯ ಲೋಕದಲಿ ಜಗವನೇ ಜಯಿಸಬಲ್ಲೆ ನೀ ಹೇಳಿದರೆ
*
ಹೀಗೆ ಯುವ ಜನರಿಗೆ ಹುಚ್ಚು ಹಿಡಿಸುವಂತಹ ಇಂತಹ ಎಷ್ಟೋ ಗಜಲ್ ಗಳು ಈ ಸಂಪುಟದಲ್ಲಿದ್ದು ಇದು ಸಂಗ್ರಹಕೆ ಯೋಗ್ಯವಾದ ಸಂಪುಟವೆಂದು ನನಗನಿಸುತ್ತದೆ.ಈ ಕೃತಿಯಲ್ಲಿ ಬಹುಮುಖ್ಯವಾಗಿ ಹೊಸಬರು ಗಜಲ್ ರಚನೆಗೆ ಹೇಗೆ ತೊಡಗಿ ಯಶಸ್ಸು ಪಡೆಯಬಹುದು ಎಂದು ಉದಾಹರಣೆ ಸಹಿತ ಬರೆದ ಗಜಲ್ ಗಳ ಬಗೆಗಿನ ಲೇಖನ ಬಹು ಉಪಯುಕ್ತವಾಗಿದೆ.ಇದು ಓದಿದ ಯಾವುದೇ ಕವಿ ಗಜಲ್ ರಚನೆಗೆ ತೊಡಗುವಂತಹ ಒಂದು ಮಾನಸಿಕ ತಯ್ಯಾರಿ ಹೊಂದುವಂತಹ ವ್ಯಾಪಕ ಅಷ್ಟೇ ಸರಳ ನಿರೂಪಣೆ ಇದರಲ್ಲಿ ಇದೆ.
ಲೇಖಕ ಸಿದ್ಧರಾಮ ಹೊನ್ಕಲ್ ಅವರು ಇನ್ನೂ ಅನೇಕ ಗಜಲ್ ಗಳನ್ನು ಬರೆದು ಕನ್ನಡ ಗಜಲ್ ಸಾಹಿತ್ಯ ಸಮೃದ್ಧಿ ಗೊಳಿಸಲೆಂದು ಶುಭ ಹಾರೈಸುವೆ.ಕೃತಿಯನ್ನು ಓದಬಯಸುವವರು ಅವರನ್ನು ಸಂಪರ್ಕಿಸಿ.
- ಪ್ರಭಾವತಿ ಎಸ್ ದೇಸಾಯಿ
ವಿಜಯಪುರ