ಮಳೆಗಾಲದ ಒಂದು ದಿನ

(ಅಮೇರಿಕೆಯ ಕವಿ ಹೆನ್ರಿ ವಾಡ್ಸವರ್ತ್ ಲಾಂಗ್‌ಫೆಲೋ ( H. W Longfellow) ಅವರ’ The Rainy Day’ ಕವಿತೆ. ಭಾವಾನುವಾದ: ಸೀಮಾ ಕುಲಕರ್ಣಿ,ಕೌಲಾಲಂಪುರ , ಮಲೇಶಿಯ)

ಚಳಿ, ನಡುಕ, ಮೇಲೆ ಕರಿಗತ್ತಲು,
ಧೋಯೆಂದು ಸುರಿವ ಮಳೆ, ಗಾಳಿಗೆಲ್ಲಿದೆ ದಣಿವು?
ದ್ರಾಕ್ಷಾಬಳ್ಳಿ ಇನ್ನೂ ಅಪ್ಪಿಕೊಂಡೇ ಇದೆ ಹಾವಸೆ ಗೋಡೆಯನು,
ಗಾಳಿಯ ರಭಸಕ್ಕುದುರಿವೆ ತರಗೆಲೆ ಪಟಪಟ ಹಗಲೇ ಕತ್ತಲೆಗವಿದು ಬರಿದಾಗಿದೆ ಬದುಕು!

ಸಪ್ಪಾಗಿದೆ ಹೆಪ್ಪುಗಟ್ಟಿದ ಬದುಕು,
ನಿಲ್ಲದು ಮಳೆ, ನಿಲ್ಲದು ಬಿರುಗಾಳಿ,
ಕಳೆದುದರ ನೆನಪು ಹಾರಿಬಂದಿದೆಯಲ್ಲ!
ಚೂರು ಚೂರಾಗಿದೆ ಹರೆಯದ ಆಸೆ , ಶೂನ್ಯವಾಗಿದೆಯಲ್ಲ ಅರ್ಥವಿಲ್ಲದ ಬಾಳು !

ಓ ಎನ್ನ ಮನವೇ ನಲುಗಬೇಡ, ನಿಲ್ಲು
ಅದೋ ಮೋಡದ ಮರೆಯಲ್ಲಿದೆ ಸೂರ್ಯನ ಬೆಳಕು!
ಬೇರೆಯವರಿಗಿಂತ ಹೊರತಾಗಿಲ್ಲ ನನ್ನ ವಿಧಿಯು
ಎಲ್ಲರ ಬಾಳಲ್ಲೂ ಇದ್ದೇಇದೆ ಮಳೆ ಸೆಳಕು, ಇದ್ದರಿರಲಿ ಬಿಡು ಒಳಗೆ ಖಿನ್ನತೆ ಎಷ್ಟಿದ್ದರೂ!

***********

ಹೆನ್ರಿ ವಾಡ್ಸ್‌ವರ್ತ್ ಲಾಂಗ್‌ಫೆಲೋ (ಫೆಬ್ರವರಿ 27, 1807 – ಮಾರ್ಚ್ 24, 1882) ಅವರು ೧೯ ನೇ ಶತಮಾನದ ಜನಪ್ರಿಯ ಅಮೇರಿಕನ್ ಕವಿ ಮತ್ತು ಶಿಕ್ಷಣತಜ್ಞ. ಅವರ ಮೂಲ ಕೃತಿಗಳಲ್ಲಿ “ಪಾಲ್ ರೆವೆರೆಸ್ ರೈಡ್”, “ದಿ ಸಾಂಗ್ ಆಫ್ ಹಿಯಾವಥಾ” ಮತ್ತು “ಇವಾಂಜೆಲಿನ್” ಕವನಗಳು ಸೇರಿವೆ. ಡಾಂಟೆ ಅಲಿಘೇರಿಯ ಡಿವೈನ್ ಕಾಮಿಡಿಯನ್ನು ಸಂಪೂರ್ಣವಾಗಿ ಭಾಷಾಂತರಿಸಿದ ಮೊದಲ ಅಮೇರಿಕನ್ ಅವರಾಗಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಮಳೆಗಾಲದ ಒಂದು ದಿನ”

  1. Sumangala Dandewale

    ಸೀಮಾ, ನೀವು ಜನ್ಮಜಾತ ಕವಯಿತ್ರಿ. ಹೆಸರಾಂತ ಕವಿ ಹೆನ್ರಿ ವರ್ಡ್ಸ್ವರ್ತ್ ಅವರ ಭಾವ ಕವಿತೆಯಲ್ಲಿ ಸುಂದರವಾಗಿ ಮೂಡಿಬಂದಿದೆ. ಅಭಿನಂದನೆಗಳು ತಮಗೆ.

  2. Chintamani Sabhahit

    ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಕವಿತೆಯ ಭಾವಾನುವಾದದ ಸವಾಲುಗಳೆಂದರೆ :

    ಭೌಗೋಲಿಕ ಸೂಕ್ಷ್ಮ ಹಿನ್ನೆಲೆಯ ಗೃಹಣದಲ್ಲಿ, ಮೂಲ ಕವಿಯ ಕಾವ್ಯ ಸಂಕೀರ್ಣತೆಯ ಪ್ರಜ್ಞೆಯನ್ನು ಅರ್ಥವತ್ತಾಗಿ, ಅಂತರಂಗದ ಭಾವನೆಯ ಶೀಘ್ರ ವೇದನಕ್ಕೆ ಚ್ಯುತಿಯಾಗದಂತೆ, ಬೇರೆ ಭಾಷೆಯ ಸೊಗಡಿನ ಅರಿವಿನ ಪಾಕದಲ್ಲಿ, ಸಂವೇದನೆಯನ್ನು ಮೂಡಿಸಿ, ಜೀವಂತವಾಗಿಡಿಸುವದು.

    ಇಂತಹ ಕಾಳಜಿ, ತಹತಹ, ಅನುಭವದ ಪರಿಶ್ರಮ, ಧ್ಯೇಯಗಳೆಂಬ ರೆಕ್ಕೆಗಳೊಂದಿಗೆ, ಪರ ಕಾವ್ಯ ಪ್ರವೇಶ ಮಾಡಿದಾಗ, ಉತ್ತಮಿಕೆಯ ಗುಣ ಸಾಫಲ್ಯದ ಸನಿಹಕ್ಕೆ ತಲುಪಬಹುದು, ಲಕ್ಷಣಗಳ ಕ್ಷತಿ ಬಿರಿಯದಂತೆ.

    ಪ್ರಶಂಸನೀಯ ಉತ್ತಮ ಪ್ರಯತ್ನ!

    ಆದರೆ, ಮೂರೂ ಪ್ಯಾರಾಗಳ ಕೊನೆಯ ಸಾಲುಗಳನ್ನು, ನಾನು ಓದಿಕೊಂಡಿದ್ದು ಹೀಗೆ :

    ಗಾಳಿಯ ರಭಸಕ್ಕುದುರಿವೆ ತರಗೆಲೆ ಪಟಪಟ, ಹಗಲೇ ಬರಿದಾಗಿದೆ ಕತ್ತಲೆಗವಿದು!

    ಚೂರು ಚೂರಾಗಿದೆ ಹರೆಯದ ಆಸೆ , ಶೂನ್ಯವಾಗಿದೆಯಲ್ಲ ಬಾಳು ಅರ್ಥವಿರದೆ!

    ಎಲ್ಲರ ಬಾಳಲ್ಲೂ ಇರಬೇಕು ಮಳೆ ಸೆಳಕು, ಏನಾಯಿತು ಬಿಡು ಖಿನ್ನತೆ ಎಷ್ಟಿದ್ದರೂ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter