ಸುನಂದಾ ಬೆಳಗಾಂವಕರ ಅವರ ‘ಮೃದ್ಗಂಧ’

ಶ್ರೀಮತಿ ಸುನಂದಾ ಬೆಳಗಾಂವಕರರು ಕನ್ನಡದ ಪ್ರಮುಖ ಬರಹಗಾರ್ತಿಯರಲ್ಲಿ ಒಬ್ಬರು. ‘ಮೃದ್ಗಂಧ’ ಅವರ ಏಕೈಕ ಕಥಾಸಂಕಲನವಾಗಿದೆ. ಇದರಲ್ಲಿರುವ ಎಂಟು ಕತೆಗಳು ಉತ್ತರ ಕರ್ನಾಟಕದ ಸಾಂಸ್ಕೃತಿಕ ಆವರಣದಲ್ಲಿ ಸೃಷ್ಟಿಯಾಗಿವೆ. ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಇಲ್ಲಿನ ಕತೆಗಳಲ್ಲಿ ಧಾರವಾಡದ ಮಣ್ಣಿನ ವಾಸನೆಯನ್ನು ಬೀರುವ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ ಮತ್ತು ಅನಿರೀಕ್ಷಿತ ಮುಕ್ತಾಯಗಳಿಲ್ಲ. ಆಪ್ತವೆನಿಸುವ ನಿರೂಪಣೆಯಿದೆ. ಸಾಂಪ್ರದಾಯಿಕ ಬ್ರಾಹ್ಮಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಚಿತ್ರಿಸುವ ಕತೆಗಳಲ್ಲಿ ಸುಧಾರಣೆಯ ಆವೇಶ, ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಳಿಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕತೆಗಳು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತವೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ.

‘ಕುಂಕುಮ ಭರಣಿ’ ಎಂಬ ಕತೆಯಲ್ಲಿ ಕಾಣಿಸುವ ಕುಟುಂಬದೊಳಗೆ ಪರಸ್ಪರ ಸಂಬಂಧವನ್ನು ಹೊಂದಿದ ಎರಡು ವರ್ಗಗಳಿವೆ. ಮಾವ ಅತ್ತೆಯವರ ಸಂಬಂಧ ಹೊಂದಾಣಿಕೆಯದೆಂದು ಮೇಲ್ನೋಟಕ್ಕೆ ತೋರುವುದಾದರೂ ಅವರ ನಡುವೆ ರಸಿಕತನ ಬೆರೆದ ಸರಸವಿದೆ. ಮಗನಿಗೆ ಸೊಸೆಯ ಮೇಲೆ ರಸಿಕತನವಿಲ್ಲ. ಆದರೂ ಸೊಸೆ ಪರಿಸ್ಥಿತಿಯನ್ನು ಸ್ವೀಕರಿಸಿದ್ದಾಳೆ. ದಾಂಪತ್ಯದಲ್ಲಿ ವಿರಸವಿಲ್ಲದಿದ್ದರೂ ಅತೃಪ್ತಿಯಿದೆ. ಕಳೆದುಹೋದ ಕುಂಕುಮ ಭರಣಿಯು ಕೈಸೇರುವ ಸನ್ನಿವೇಶವು ಅತ್ತೆಯ ದಾಂಪತ್ಯ ಬದುಕಿನ ಗೆಲುವಿನ ಸಂಕೇತವಾಗಿದೆ. ಎರಡು ತಲೆಮಾರನ್ನು ಪ್ರತಿನಿಧಿಸುವ ಅತ್ತೆ ಸೊಸೆಯರ ನಡುವೆ ಗುಣಾತ್ಮಕ ಅಂತರವಿಲ್ಲ. ವರ್ಗಗಳನ್ನು ಮೀರಿದ ಅನುಭವಗಳ ಸಾಮಾನ್ಯತೆಯ ದನಿಯು ಸ್ಪಷ್ಟವಾಗಿ ಕೇಳಿ ಬರುವುದರಿಂದ ಅದಕ್ಕೆ ಸಂಕೀರ್ಣತೆ ಬಂದಿದೆ. ಅತ್ತೆಯವರ ನಿಲುವು ಸಾಂಪ್ರದಾಯಿಕತೆಯ ಸ್ಥಿರೀಕರಣದಂತೆನಿಸಿದರೂ ಬದುಕಿನ ಸಮಗ್ರತೆಯ ದೃಷ್ಟಿಯಿಂದ ಹೆಣ್ಣಿನ ಅಸ್ತಿತ್ವವನ್ನು ಸಮರ್ಥಿಸುತ್ತದೆ. ಹಾಗೆಂದು ಎಲ್ಲ ಕತೆಗಳು ಸಾಂಪ್ರದಾಯಿಕತೆಯನ್ನು ಬೆಂಬಲಿಸುತ್ತವೆ ಎಂದಲ್ಲ. ಬ್ರಾಹ್ಮಣ ಕುಟುಂಬದ ಆಚಾರ ಅನುಷ್ಠಾನಗಳ ನಡುವೆ ಮೂಲೆಗುಂಪಾದ ಮುದುಕಿಯ ಸಂವೇದನೆಗಳನ್ನು ವಿವರಿಸುವ ‘ಉಂಡ ತಳಿಗೆ’ಯು ಸ್ತ್ರೀ ಕೇಂದ್ರಿತವಾಗಿದ್ದರೂ ಕೌಟುಂಬಿಕ ಚೌಕಟ್ಟಿಗೆ ಸೀಮಿತವಾಗಿಲ್ಲ. ಹೆಣ್ಣಿನ ಯಾತನೆಯೇ ಇಲ್ಲಿನ ವಸ್ತುವಾದರೂ ಅದಕ್ಕೆ ಧಾರ್ಮಿಕ ಆಯಾಮವಿದೆ. ಇಲ್ಲಿ ಅಜ್ಜಿಯು ತನ್ನವರಿಂದಲೇ ಶೋಷಣೆಗೊಳಗಾಗುತ್ತಾಳೆ. ಪೂಜೆ ಮುಗಿಯದೆ ಊಟ ಹಾಕುವುದಿಲ್ಲ ಎಂದು ಮಗ ಸೊಸೆಯರು ಹೇಳಿರುವುದರಿಂದ ಆಕೆಯು ಹಸಿದಿರಬೇಕಾಗುತ್ತದೆ. ಬಾರಿ ಬಾರಿಗೂ ಪೂಜೆ ನಡೆಯುವ ಜಾಗದ ಕಡೆ ಇಣುಕಿ ನೋಡುವ ಆಕೆಯ ಹಸಿವಿನ ತೀವ್ರತೆಯು ಮನಮುಟ್ಟುತ್ತದೆ. ಪೂಜೆಯು ಮುಗಿದ ಬಳಿಕ ಮುದುಕಿಯನ್ನು ಮರೆತು ಎಲ್ಲರೂ ಗಡದ್ದಾಗಿ ಊಟ ಮಾಡುತ್ತಾರೆ. ಮನೆಯಲ್ಲಿ ಸಿರಿವಂತಿಕೆಯಿದ್ದರೂ ಹೃದಯ ಶ್ರೀಮಂತಿಕೆಯಿಲ್ಲ. ಪೂಜೆಯ ಆತುರದಲ್ಲಿರುವ ಮಗನಿಗೆ ತನಗೆ ಕೈತುತ್ತು ಉಣಿಸಿದ್ದ ತಾಯಿಯ ಹಸಿವಿನ ಪರಿವೆಯಿಲ್ಲ. ಮುದುಕಿಯಾದ ಆಕೆಯು ಪ್ರತಿಭಟನೆಯ ವಿಚಾರವನ್ನು ಮಾಡಲಾರಳಾದರೂ ಅವಳ ಮೂಕ ಯಾತನೆಯು ವ್ಯವಸ್ಥೆಯ ವಿರುದ್ಧ ಬಂಡೇಳಿಸಬಲ್ಲದು. ವಿಧವೆಯ ಬಾಳಿಗೆ ಅವಕಾಶವಿಲ್ಲದಾಗುವ ಸ್ಥಿತಿ, ತಾಯಿಯಾಗಿ ತನ್ನ ಕರ್ತವ್ಯಗಳನ್ನು ತೀರಿಸಿದ ಬಳಿಕವೂ ಎದುರಾಗುವ ಕುಹಕ ವ್ಯಂಗ್ಯಗಳು, ಸ್ವಂತ ಮಕ್ಕಳಿಂದ ಎದುರಾಗುವ ಅವಮಾನ ಸಂಕಟಗಳ ಚಿತ್ರಣವನ್ನಷ್ಟೇ ನೀಡಿ ವಿರಮಿಸದೆ ಲೇಖಕಿಯು ಜೀವಪರ ನಿಲುವನ್ನು ಹೊಂದಿದ ಪಾತ್ರಗಳನ್ನೂ ಚಿತ್ರಿಸಿ ಕಳಕಳಿಯನ್ನು ಮೆರೆದಿದ್ದಾರೆ. ಪರಿತ್ಯಕ್ತೆಯ ಬದುಕಿನ ಕಷ್ಟ ನಷ್ಟಗಳನ್ನು ಚಿತ್ರಿಸುವುದರೊಂದಿಗೆ ವಸ್ತುನಿಷ್ಠತೆಯನ್ನು ಕಾಯ್ದುಕೊಂಡಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕøತಿಕ ಪರಿಸರವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

‘ಹಾಲಿನ ಋಣ’ದಲ್ಲಿ ಅಚ್ಯುತರಾಯರ ಹೆಂಡತಿಯು ತನ್ನ ಮಗುವನ್ನು ಹೆತ್ತು ತೀರಿಕೊಳ್ಳುತ್ತಾಳೆ. ಆ ಮಗುವಿನ ಪೋಷಣೆಗೆ ಎದೆಹಾಲೇ ಬೇಕು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಆಗರ್ಭ ಶ್ರೀಮಂತರಾದ ಅವರು ತಮ್ಮ ತೋಟದ ಮನೆಯನ್ನು ನೋಡಿಕೊಳ್ಳುವ ಬಸಪ್ಪನನ್ನು ಕಾಣಲು ಹೋದಾಗ ಮಗುವಿಗೆ ಮೊಲೆಯುಣಿಸುತ್ತಿದ್ದ ನೀಲವ್ವನ ಮೊಲೆಗಳು ಅವರ ಕಣ್ಣಿಗೆ ಇರಿಯುವಂತೆ ಕಂಡು ಬರುತ್ತವೆ. ಹಾಲು ಒಸರುತ್ತಿರುವ ಮೊಲೆಗಳನ್ನು ನೋಡುತ್ತಿದ್ದ ರಾಯರ ಕಣ್ಣು ಆಕೆಯ ಎದೆಯನ್ನು ನಡುಗಿಸುತ್ತದೆ. ಮುಂದಿನ ದಿನಗಳಲ್ಲಿ ರಾಯರು ತನ್ನನ್ನು ಏನಾದರೂ ಮಾಡುವರೋ ಎಂದು ತಲ್ಲಣಿಸುತ್ತಿರುವಾಗಲೇ “ಬಸಪ್ಪ, ನಿನ್ನಿಂದ ಒಂದು ಕೆಲಸ ಆಗಬೇಕು. ಈ ಕೆಲಸ ಮಾಡಿದರ ನಿನಗ ತೋಟ ಬಿಟ್ಟು ಕೊಡ್ತೀನಿ. ನಿನ್ನ ಹೆಂಡತಿ ನೀಲವ್ವ…” (ಪುಟ 28) ಎನ್ನುವ ಮಾತುಗಳು ಓದುಗರನ್ನು ಸಂಶಯ, ಕುತೂಹಲ ಮತ್ತು ಉದ್ವಿಗ್ನತೆಯ ಬಿಂದುವಿನ ಮೇಲೆ ನಿಲ್ಲಿಸುತ್ತವೆ. “ನೀಲವ್ವ, ನನ್ನ ಮಗ ಅಣ್ಣಯ್ಯ ನಿನ್ನ ಮಗ ಪರಶು ಅಂತ ತಿಳಿದು ಹೊಟ್ಟೀಗೆ ಕೊಟ್ಟರ ನನ್ನ ಮನಿತನ ಉಳಿಸಿಧಂಗ ಆಗತದ” (ಪುಟ 28) ಎಂದು ಕಂಬನಿ ಮಿಡಿದಾಗ ಕದಡಿದ ನೀರು ತಿಳಿಯಾಗುತ್ತದೆ. ಇಲ್ಲಿ ವಿಧುರನೊಬ್ಬನು ಹೆಣ್ಣಿನ ಮೇಲಿನ ಆಕರ್ಷಣೆಯನ್ನು ಮೀರುವ ವಿಚಾರಕ್ಕಿಂತ ಹಾಲಿನ ರೂಪದಲ್ಲಿ ಅನ್ನದಾತನ ಋಣವನ್ನು ಸಲ್ಲಿಸಬಯಸುವ ನೀಲವ್ವನ ಉದಾತ್ತ ಭಾವನೆಯು ಮುಖ್ಯವಾಗುತ್ತದೆ. ಹೊಟ್ಟೆಗೆ ಹಾಲು ಸಾಲದೆ ಪರಶು ಸಾಯುವ ಸನ್ನಿವೇಶವು ಅತಿಭಾವುಕತೆಗೆ ಕಾರಣವಾಗುತ್ತದೆ. ಆಕೆಯ ಹಾಲು ಕುಡಿದು ಬೆಳೆದ ಅಣ್ಣಯ್ಯನು ಮದುವೆಯಾದ ಬಳಿಕ ಅಚ್ಯುತರಾಯರು ದೀಪಾವಳಿಯ ದಿನದಂದು ನೀಲವ್ವನಿಗೆ ಸೀರೆ ಮತ್ತು ಹಣ ಕೊಡುವುದನ್ನು ನೋಡಿದ ಸೊಸೆ ಉಷಾ ಅವರಿಬ್ಬರ ಮೇಲೆ ಅನೈತಿಕ ಸಂಬಂಧವನ್ನು ಅರೋಪಿಸಿ ಅಣ್ಣಯ್ಯನ ಮುಂದೆ ದೂರುತ್ತಾಳೆ. ಕನಲಿದ ಅಣ್ಣಯ್ಯನು ತನಗೆ ಎದೆಹಾಲುಣಿಸಿ ಸಲಹಿದ ನೀಲವ್ವನಿಗೆ ಹೊಡೆಯುತ್ತಾನೆ. “ಹೆಂಡ್ತಿ ಮಾತ ಕೇಳಿ ನನ್ನ ಮ್ಯಾಲ ಪಾಪದ ಹೊರಿ ಹೊರಿಸಿದ್ಯಾ? ನನ್ನ ನಿನ್ನ ಸಂಬಂಧ ನಿನ್ನ ಅಪ್ಪಾರನ್ನು ಕೇಳು” (ಪುಟ 35) ಎಂದಾಗ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸುತ್ತದೆ. ತಾನು ನೀಲವ್ವನಿಗೆ ಹುಟ್ಟಿದವನೆಂದುಕೊಂಡು ಅಣ್ಣಯ್ಯನು ಮತ್ತಷ್ಟು ದುಡುಕುತ್ತಾನೆ. ನೀಲವ್ವನ ಬದುಕಿನ ಮೌಲ್ಯಗಳು ಆಕೆಯ ಯಾತನೆಗೆ ಕಾರಣವಾಗುತ್ತವೆ. ಅಣ್ಣಯ್ಯನ ಕ್ರೌರ್ಯಕ್ಕೆ ಒಳಗಾದರೂ ತಾಯ್ತನದ ಮೋಹವನ್ನು ಬಿಡಲು ಸಾಧ್ಯವಾಗುವುದಿಲ್ಲ. ಅವನನ್ನು ಶಪಿಸಬೇಕೆಂದು ಒತ್ತಿ ಬರುತ್ತಿದ್ದರೂ ತಾಯ್ತನ ಮತ್ತು ಹಾಲಿನ ಋಣ ಆ ಭಾವನೆಯನ್ನು ತಡೆಯುತ್ತದೆ. ಹೆಣ್ಣು ಗಂಡಿನ ಸಂಬಂಧಗಳನ್ನು ಕಾಮದ ಆಚೆಗಿನ ಭಾವನೆಯಿಂದ ಕಾಣಲು ಸಾಧ್ಯವಾಗದ ಸಮಾಜದ ಸಿನಿಕತನದ ಧೋರಣೆಯ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಕತೆಯಲ್ಲಿ ನೀಲವ್ವನ ಔದಾರ್ಯ ಮತ್ತು ಪ್ರೀತಿ ವಾತ್ಸಲ್ಯಗಳು ವೈಭವೀಕರಣಕ್ಕೊಳಗಾಗಿದ್ದರೂ ಲೇಖಕಿಯು ಚಿತ್ರಿಸಿರುವ ಸಾಮಾಜಿಕ ಸಂದರ್ಭದಲ್ಲಿ ಅವುಗಳು ಅಸಹಜ ಅಥವಾ ಅಸಂಭವ ಎನಿಸುವುದಿಲ್ಲ.

ಮನೆಯಲ್ಲಿರುವ ವೃದ್ಧ ತಂದೆತಾಯಿಯರ ಕುರಿತು ಹೊಸ ತಲೆಮಾರು ಪ್ರೀತಿ ಕಾಳಜಿಗಳನ್ನು ತೋರಿ ತಾವು ಅಲಕ್ಷಿತರಲ್ಲ ಎಂಬ ಭರವಸೆಯನ್ನು ಮೂಡಿಸಬೇಕಾದ ಅಗತ್ಯದ ಕಡೆಗೆ ಬೊಟ್ಟು ಮಾಡುವ ‘ಹಾಲಿನ ಋಣ’, ‘ಉಂಡ ತಳಿಗೆ’ಯಂಥ ಕತೆಗಳು ಮಾನವೀಯ ಸಂಬಂಧಗಳ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ. ಕಾಲ ಕಳೆದಂತೆ ನಿಸ್ಸಾರವೂ ನಿರ್ವೀರ್ಯವೂ ಆಗಿಬಿಡುವ ಬದುಕನ್ನು ಕಣ್ಮುಂದೆ ತರುವ ಕತೆಗಳಲ್ಲಿ ವೃದ್ಧ ತಂದೆತಾಯಿಯರೊಂದಿಗೆ ವಾತ್ಸಲ್ಯ ಮಮಕಾರಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ಕೃತಘ್ನ ಬದುಕು ಅನಾವರಣಗೊಳಿಸುವ ಕತೆಗಳಲ್ಲಿ ಹಿರಿಯರಿಗೆ ಕಿರಿಯರ ಮೇಲಿನ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ- ತಿರಸ್ಕಾರ, ತಪ್ಪುಗ್ರಹಿಕೆ, ತಲೆಮಾರುಗಳ ಅಂತರ, ಪೀಳಿಗೆಗಳ ನಡುವಿನ ಸಂಘರ್ಷಗಳಿಂದಾಗಿ ಮನುಷ್ಯರ ನಡುವೆ ಗೋಡೆ ಕಂದರಗಳು ಸೃಷ್ಟಿಯಾಗಬಾರದು ಎಂಬ ಆಶಯವಿದೆ.

‘ಕತೆ ಓದಿದೆಯಾ’ ಎಂಬ ರಚನೆಯು ಕತೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಒಳಗೊಂಡಿದೆ. ಕತೆಯನ್ನು ಆರಂಭಿಸುವ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಜಾಹ್ನವಿಯ ಸ್ವರಚಿತ ಕತೆಯ ಮೂಲಕ ಕಥನವನ್ನು ಆರಂಭಿಸುತ್ತಾಳೆ. ಮುಂದೆ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ರಾಜಾರಾಯ-ಯಶೋದ ದಂಪತಿಗೆ ಏಳು ವರುಷಗಳ ಬಳಿಕ ಹುಟ್ಟಿದ ಮಗು ಶ್ರೀಕೃಷ್ಣನ ನಾಮಕರಣ ಸಮಾರಂಭದ ಸಂಭ್ರಮ ಸಡಗರದೊಂದಿಗೆ ಆರಂಭವಾಗುವ ಕತೆಯಲ್ಲಿ ಮುಂಬರುವ ಸಾವಿನ ಸುಳಿವು ಇಲ್ಲದಿರುವುದು ಕತೆಗಾರಿಕೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ನಾಮಕರಣಕ್ಕಾಗಿ ಮಗುವನ್ನು ಎತ್ತಿಕೊಂಡು ಬರಲು ಅದರ ಅಕ್ಕ ಸಿಂಧು ಕೋಣೆಗೆ ಬಂದಾಗ ಅದಾಗಲೇ ನಿದ್ದೆಹೋಗಿದ್ದ ಮಗುವಿನ ಮೇಲೆ ಗೋಡೆಗೆ ಅನಿಸಿಟ್ಟ ಹಾಸಿಗೆಯ ಸುರುಳಿಗಳು ಬಿದ್ದು ಉಸಿರುಗಟ್ಟಿ ಸತ್ತಿರುತ್ತದೆ.

ಮಾಸ್ತಿಯವರ ಅನೇಕ ಕತೆಗಳಲ್ಲೂ ನಿರೂಪಕನ ಮೂಲಕ ಕತೆಯನ್ನು ಹೇಳುವ ತಂತ್ರವನ್ನು ಕಾಣುತ್ತೇವೆ. ಅಲ್ಲಿ ನಿರೂಪಕನ ಮೌಲ್ಯಗಳ ಚೌಕಟ್ಟಿನಲ್ಲಿ ಕತೆಯ ಅನುಭವದ ಮೌಲ್ಯಗಳನ್ನು ಬೆಲೆಕಟ್ಟುವ ಮೂಲಕ ಅವುಗಳ ಅರ್ಥವನ್ನು ವಿಸ್ತರಿಸುವ ಪ್ರಯತ್ನವು ಮುಖ್ಯವಾಗುತ್ತದೆ. ಆನಂದಕಂದರ ‘ಮಲ್ಲಮ್ಮನ ಮಹಾಭಾರತ’, ಕಡೆಂಗೋಡ್ಲು ಶಂಕರ ಭಟ್ಟರ ‘ಅದ್ದಿಟ್ಟು’, ಸೇಡಿಯಾಪು ಕೃಷ್ಣ ಭಟ್ಟರ ‘ನಾಗರಬೆತ್ತ’, ಅನಂತಮೂರ್ತಿಯವರ ‘ತಾಯಿ’ ಕತೆಗಳಲ್ಲಿ ಈ ತಂತ್ರವು ತಮ್ಮದೇ ಆದ ಬದಲಾವಣೆಗಳೊಂದಿಗೆ ಕಾಣಿಸಿಕೊಂಡಿವೆ. ಆದರೆ ಅಕ್ಕನ ಮೂಲಕ ತಮ್ಮನ ಸಾವಿನ ಕತೆಯನ್ನು ಹೇಳುವ ‘ಕತೆ ಓದಿದೆಯಾ?’ದ ಕಥನ ತಂತ್ರವು ತಾಯಿಯ ಮೂಲಕ ಮಗಳ ಸಾವನ್ನು ವಿವರಿಸುವ ‘ಅದ್ದಿಟ್ಟಿ’ಗೆ ಸಮೀಪವಾಗಿದೆ. ಕತೆಯನ್ನು ಜಾಹ್ನವಿಯು ಹೇಳಿದಳೆಂಬ ಸೂಚನೆಯನ್ನು ಕೊಟ್ಟು ಲೇಖಕಿಯು ತನ್ನ ಭಾಷೆಯಲ್ಲೇ ಕತೆಯನ್ನು ಹೇಳುವುದಿಲ್ಲ. ಅಲ್ಲಿನ ಪಾತ್ರಗಳಿಗೆ ಅವರದ್ದೇ ಆದ ವ್ಯಕ್ತಿತ್ವ, ಭಾಷೆ, ಶೈಲಿಗಳನ್ನು ಕೊಟ್ಟು ಅವುಗಳ ಮೂಲಕ ಕತೆಯನ್ನು ಹೇಳಿಸುತ್ತಾಳೆ. ಇದು ಯಶೋದೆಯ ಕತೆಯಲ್ಲ. ಆಕೆಯ ಹಿರಿಯ ಮಗಳು ಸಿಂಧುವಿನ ಕತೆ. “ಆ ಹತಭಾಗಿ ಸಿಂಧು ನಾನು. ನಿನ್ನ ಪ್ರಿಯ ಗೆಳತಿ ಜಾಹ್ನವಿ. ಶ್ರೀಕೃಷ್ಣ ನನ್ನ ತಮ್ಮ” (ಪುಟ 165) ಎನ್ನುವ ಮೂಲಕ ಸಿಂಧುವಿನ ಜಾಗದಲ್ಲಿ ಕಾಣಿಸಿಕೊಳ್ಳುವ ಜಾಹ್ನವಿಯು ಯಶೋದೆಯ ಪಾತ್ರದ ವಿಸ್ತರಣವಾಗಿದ್ದು ಆಕೆಯ ವ್ಯಕ್ತಿತ್ವ ಮತ್ತು ಮನೋಧರ್ಮಗಳ ಅಭಿವ್ಯಕ್ತಿಗೆ ಪೂರಕವಾಗಿ ಬರುತ್ತಾಳೆ. ಆದ್ದರಿಂದ ಜಾಹ್ನವಿಯು ಬರೆದ ಕತೆಯಲ್ಲಿನ ಮೆಲೋಡ್ರಾಮದ ಅಂಶಗಳು ಇಲ್ಲವಾಗಿ ಆಕೆಯು ಒಳಕತೆಯನ್ನು ನಿರೂಪಿಸುವ ಮತ್ತು ಪ್ರತಿಕ್ರಿಯಿಸುವ ಪ್ರಕ್ರಿಯೆಯು ಮುಖ್ಯವಾಗುತ್ತದೆ. ಬದುಕಿನ ನಶ್ವರತೆಯನ್ನು ಮನಗಾಣಿಸಿದ ರೀತಿಯು ಮಾರ್ಮಿಕವಾಗಿದೆ. ವ್ಯಾವಹಾರಿಕ ತಿಳುವಳಿಕೆ, ಧರ್ಮಶ್ರದ್ಧೆ, ವಿಧಿಯ ಕೈವಾಡದ ಅರಿವು, ವಾಸ್ತವ ಪ್ರಜ್ಞೆ, ಕರುಳಿನ ನೋವು, ಇವೆಲ್ಲ ಮನಸ್ಸನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತಿದ್ದರೂ ಅವುಗಳನ್ನು ಒಂದೆಡೆಯಲ್ಲಿ ಕೂಡಿಸಿ ಹಿಡಿದ ಮನೋಧರ್ಮ, ನಿರುದ್ವಿಗ್ನ ನಿರೂಪಣೆಯ ಹಿಂದೆ ಕಾಣುವ ಸಂಯಮ, ತಿಳುವಳಿಕೆಗಳು ಮಹತ್ವದ್ದಾಗಿವೆ. ಕತೆಯನ್ನು ಬರೆದ ಮೇಲೆ ಜಾಹ್ನವಿಯು ಮಕ್ಕಳ ಚೌಲಕರ್ಮವನ್ನು ಉದ್ದೇಶಿಸಿ “ಎಂಥ ನಮ್ಮ ಬ್ರಾಹ್ಮಣ ಸಂಪ್ರದಾಯವೋ? ಇದ್ದರೂ ಸತ್ತರೂ ತಲೆಬೋಳಿಸಿಕೊಳ್ಳಬೇಕು. ಜನರು ಒಬ್ಬರಿಗೊಬ್ಬರು ತಲೆ ಬೋಳಿಸುವದು. ದೇವರು ಒಮ್ಮೊಮ್ಮೆ ತಲೆ ಎತ್ತದಂತೆ ಬೋಳಿಸಿ ಬಿಡುವುದು ಸಾಕಾಗುತ್ತಿಲ್ಲವೇನೋ ಜನಕ್ಕೆ” (ಪುಟ 165) ಎಂಬ ಪ್ರಶ್ನೆಯ ಅಗತ್ಯವಿರಲಿಲ್ಲ. ಬಹುಶಃ ಲೇಖಕಿಗೆ ತಮ್ಮ ಮನಸ್ಸಿನ ಧೋರಣೆಯನ್ನು ಪ್ರಕಟಿಸುವ ಆತುರವನ್ನು ತಡೆಯಲು ಸಾಧ್ಯವಾಗದೆ ಹೋಗಿದೆ.

ಬದುಕಿನಲ್ಲಿ ಹುಟ್ಟುವ ಸಮಸ್ಯೆಯನ್ನು ಎದುರಿಸುವ ದಾರಿಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಬೆಳೆಯುವ ‘ಆಣಿಕಲ್ಲ ಮಳಿ’ಯಲ್ಲಿ ತಾಯಿ ಮತ್ತು ಅನೈತಿಕವಾಗಿ ಬಸಿರಾದ ಮಗಳು ತಾವೆಲ್ಲಿ ತಪ್ಪಿದೆವು ಎಂದುಕೊಳ್ಳುತ್ತಾ ತಡಕಾಡುತ್ತಾರೆ. ಮಗಳು ಸಂಗಿಯು ನಿಂಗನಿಗೆ ಬಸಿರಾದಾಗ ಆತನು ಆಕೆಯನ್ನು ಬಿಟ್ಟು ಓಡಿಹೋಗುತ್ತಾನೆ. ಸಂಗಿಯು ಮಗುವನ್ನು ಹೆತ್ತು ಸಾಕುತ್ತಿದ್ದ ದಿನಗಳಲ್ಲಿ ಊರಗೌಡನ ಮಗ ಮತ್ತು ತಂಡದವರು ಆಕೆಯನ್ನು ಬಲಾತ್ಕರಿಸುತ್ತಾರೆ. ನ್ಯಾಯ ಕೇಳಲು ಹೋದ ತಾಯಿ ಮತ್ತು ಗೌಡರ ಮನೆಯವರ ನಡುವೆ ಜಗಳವಾಗುವ ಸಂದರ್ಭದಲ್ಲಿ ಸಂಗಿಯು ಊರಗೌಡ ಮತ್ತು ತಾಯಿಯ ಸಂಬಂಧದಿಂದ ಹುಟ್ಟಿದವಳೆಂಬ ವಿಚಾರವು ಬಯಲಾಗುತ್ತದೆ. ಅಣ್ಣನು ತಂಗಿಯ ಮೇಲೆಯೇ ಅತ್ಯಾಚಾರವನ್ನು ಮಾಡಿದ ವಿಚಾರವು ಪರಿಸ್ಥಿತಿಯ ವ್ಯಂಗ್ಯವಾಗಿ ಕಾಣಿಸಿಕೊಳ್ಳುತ್ತದೆ. ಅಂತ್ಯದಲ್ಲಿ ರಹಸ್ಯವನ್ನು ಸ್ಫೋಟಿಸಿ ಓದುಗರನ್ನು ಬೆಚ್ಚಿ ಬೀಳಿಸುವ ತಂತ್ರವನ್ನು ಬಿಟ್ಟುಕೊಟ್ಟ ಕತೆಯು ಸತ್ಯವನ್ನು ಮೊದಲೇ ನಿರೂಪಿಸಿ, ಅದನ್ನು ಒಪ್ಪಿಕೊಂಡೇ ಪಾತ್ರಗಳ ವರ್ತನೆ, ತಲ್ಲಣ ಮತ್ತು ಯಾತನೆಗಳನ್ನು ಗಮನಿಸುವ ಅವಕಾಶವನ್ನು ನೀಡುತ್ತದೆ. ಊರಿಗೆ ಮರಳಿದ ನಿಂಗನಿಗೆ ತನ್ನ ಪ್ರೇಯಸಿ ಬಲಾತ್ಕಾರಕ್ಕೊಳಗಾದನ್ನು ಅರಿತೂ ಆಕೆಯನ್ನು ಮತ್ತೆ ಸ್ವೀಕರಿಸುವಲ್ಲಿ ಪ್ರಬುದ್ಧತೆಯನ್ನು ಕಾಣುತ್ತೇವೆ. ಅನುಪಮಾ ನಿರಂಜನರ ‘ಒಂದು ಘಟನೆ ಹಾಗೂ ಅನಂತರ’ ಎಂಬ ಕತೆಯಲ್ಲೂ ಹೆಣ್ಣಿನ ಮೇಲೆ ಬಲಾತ್ಕಾರ ನಡೆಯುತ್ತದೆ. ಇಬ್ಬರು ಲೇಖಕಿಯರಿಗೆ ಅತ್ಯಾಚಾರವನ್ನು ಕುರಿತ ವಿವರಕ್ಕಿಂತಲೂ ಪರಿಣಾಮಗಳತ್ತ ಗಮನವಿದೆ. ಆದರೆ ಸುನಂದಾ ಈ ಸನ್ನಿವೇಶವನ್ನು ನಿರ್ವಹಿಸಿರುವ ರೀತಿಯು ಬೇರೆಯಾಗಿದೆ. ‘ಒಂದು ಘಟನೆ ಹಾಗೂ ಅನಂತರ’ ಕತೆಯಲ್ಲಿ ನಾಯಕಿಯ ಅತ್ಯಾಚಾರಕ್ಕೆ ಆಕೆಯ ಗಂಡನು ಸಾಕ್ಷಿಯಾಗಿದ್ದರೆ ‘ಆಣಿಕಲ್ಲ ಮಳಿ’ಯಲ್ಲಿ ಪ್ರಿಯಕರನು ಆಕೆಯನ್ನು ಬಿಟ್ಟು ಓಡಿ ಹೋಗಿದ್ದುದರಿಂದ ನಾಯಕಿ ಎದುರಿಸುವ ಪರಿಸ್ಥಿತಿಗೆ ಅವರು ಕೂಡ ಹೊಣೆಗಾರರಾಗಿದ್ದಾರೆ. ಆದರೆ ತನ್ನನ್ನು ಕಾಪಾಡಲಾರದ ಗಂಡನನ್ನು ಧಿಕ್ಕರಿಸಿ ಹಂಗಿಲ್ಲದ ಬದುಕನನ್ನು ಅರಸುತ್ತಾ ಹೋಗುವುದರಿಂದ ‘ಒಂದು ಘಟನೆ ಮತ್ತು ಅನಂತರ’ ಮತ್ತು ಅಂಥ ಹಲವು ರಚನೆಗಳು ಕತೆಯ ದೃಷ್ಟಿಯಲ್ಲಿ ಕ್ರಾಂತಿಕಾರಿಯಾಗಬಹುದಾದರೂ ಬದುಕಿನ ಭವಿಷ್ಯವು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಕೊಳ್ಳುತ್ತದೆ. ಆದರೆ ‘ಆಣಿಕಲ್ಲ ಮಳಿ’ಯು ಅದಕ್ಕೆ ಹೊರತಾಗಿದೆ. ಸೋಲುಗಳ ಆಚೆಗೂ ಕರೆಯುವ ಬದುಕಿನತ್ತ ಗಂಡುಹೆಣ್ಣುಗಳು ಜೊತೆಯಾಗಿ ಹೆಜ್ಜೆ ಹಾಕಬೇಕಿದೆ ಎಂಬ ನಂಬಿಕೆ, ಕೋಮಲತೆ ಮತ್ತು ಗಟ್ಟಿತನಗಳು ಬೆರೆತ ಮನಸ್ಸು ಇಲ್ಲಿ ಕೆಲಸ ಮಾಡುತ್ತದೆ. ಪಾತ್ರಗಳು ತಮ್ಮ ಚಿಂತನೆಯಿಂದಲೇ ಬದುಕಿನ ಹಾದಿಯನ್ನು ಕಂಡುಕೊಳ್ಳುತ್ತವೆ. ಅದರೊಳಗಿನಿಂದಲೇ ಶಕ್ತಿ ಎದ್ದು ಬರುತ್ತದೆ. ಬದುಕನ್ನು ಇಡಿಯಾಗಿ ನೋಡುವ ದೃಷ್ಟಿಗೆ ಹೆಣ್ಣು ಗಂಡುಗಳು ಅನ್ಯಾಯಕ್ಕೆ ಒಳಗಾದ ಕಾರ್ಯಕಾರಣಗಳು ಕಾಣುವಂತೆ ತನ್ನದೇ ದೋಷ ದೌರ್ಬಲ್ಯಗಳಿಂದ ಬಂಧಿತರಾಗಿರುವುದು ಗೋಚರಿಸುತ್ತದೆ. ಅಂಥ ಸ್ಥಿತಿಯಲ್ಲಿ ಅನುಕಂಪವನ್ನು ಮೆರೆಯುವುದೂ ಸಾಧ್ಯವಾಗುತ್ತದೆ. ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ಯಿಂದ ತೊಡಗಿದ ಈ ಪರಂಪರೆಗೆ ಲೇಖಕಿಯೂ ಸೇರಿದಂತೆ ನಾಗವೇಣಿ ಎಚ್, ಮಿತ್ರಾ ವೆಂಕಟರಾಜ್, ತುಳಸಿ ವೇಣುಗೋಪಾಲ್ ಇಂಥ ಕತೆಗಳನ್ನು ನೀಡಿದ್ದಾರೆ.

“ಧರ್ಮವ್ವ ಯಾರಿಗಾಗಿಯೂ ಸಿದಿಗಿ ಹೆಣೆಯುವುದಿಲ್ಲ. ಚಟ್ಟಕ್ಕಾಗಿ ಗಳ ಕೂಡುವದಿಲ್ಲ. ಪಾಯಿಖಾನೆಗಳಿಗಾಗಿ ಬುಟ್ಟಿ ಮಾರುವುದಿಲ್ಲ. ಲಗ್ನದ ಉಂಡಿಗಳನ್ನು ಹಾಕಲು, ಬಸಿಯಲು, ಹೂ ತುಂಬಲು ಬುಟ್ಟಿಗಳನ್ನು ಹೆಣೆಯುತ್ತಾಳೆ. ಹುಟ್ಟಿದ ಮಗುವುಗಾಗಿ ಮೊರ ಹೆಣೆದು ಕೊಡುತ್ತಾಳೆ.” (ಪುಟ 139) ಎಂಬ ಸಾಲುಗಳು ‘ಬಿದಿರ ಹೂ’ ಕತೆಯ ಮಾದಾರ ಧರ್ಮವ್ವನ ಜೀವಪರ ನಿಲುವನ್ನು ಕೆಲವೇ ಮಾತಿನಲ್ಲಿ ಬಿಚ್ಚಿಡುತ್ತದೆ. ಮನೆ ಮತ್ತು ಮನೆಯ ಹೊರಗೆ ಅವಳು ಅನ್ಯಳಾಗಿದ್ದಾಳೆ. ಅಣ್ಣ ಅತ್ತಿಗೆಯರ ಆಸರೆಯಲ್ಲಿದ್ದ ಆಕೆಯು ತನ್ನ ಅಣ್ಣನ ಹೆಂಡತಿಯೊಂದಿಗೆ ಏಗಲಾರದೆ ಬೇರೆ ಗುಡಿಸಲನ್ನು ಕಟ್ಟಿ ಸ್ವತಂತ್ರಳಾಗಿದ್ದಾಳೆ. ಭ್ರಮೆ ಮತ್ತು ವಾಸ್ತವದ ಲೋಕಗಳಲ್ಲಿ ಅಡ್ಡಾಡುವ ಆಕೆಯು ತನ್ನ ಮಕ್ಕಳನ್ನು ಕಳೆದುಕೊಂಡ ಪರಿಣಾಮವಾಗಿ ಹುಟ್ಟಿದ ಹುಚ್ಚಿನಿಂದ ದೊರೆತ ಸ್ವಾತಂತ್ರ್ಯವನ್ನು ಉಪಯೋಗಿಸುತ್ತಾಳೆ. ಶ್ರೀಮಂತ ಮನೆತನಕ್ಕೆ ಸೇರಿದ ವೀರಪ್ಪನು ಪಾಯಿಖಾನೆಗಾಗಿ ಬುಟ್ಟಿಯನ್ನು ಕೇಳಿದಾಗ “ಹೊಂಡ್ರಿ ಇಲ್ಲಿಂದ. ನನ್ನ ಕೈಲೆ ಹೆಣದ ಬುಟ್ಟಿ ಪಾಯಿಖಾನಿಗಿಡತೀರೇನ್ರಿ? ನಿನ್ನ ಧ್ವಾತರದಾಗ ಮಾಡಿಕೋ” (ಪುಟ 158) ಎಂದು ಬೈಯುವ ಮೂಲಕ ವಾಸ್ತವ ಜಗತ್ತಿನ ಬಗ್ಗೆ ತನ್ನ ಅನಿಸಿಕೆಗಳನ್ನು ಮುಲಾಜಿಲ್ಲದೆ ಹೊರಹಾಕುತ್ತಾಳೆ. ಆದರೆ ವೀರಪ್ಪನು ಅದನ್ನು ಹುಚ್ಚಿಯ ಮಾತೆಂದು ತಳ್ಳಿಹಾಕದೆ ಅವಳಿಗೆ ಹೊಡೆಯುತ್ತಾನೆ. ಧರ್ಮವ್ವನ ಈ ಸ್ವಭಾವವು ಗಂಡಾಂತರದ್ದಾದರೂ ಆಕೆಯು ಅವಳು ಆ ಗುಣವನ್ನು ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಅದು ಅವಳ ಶಕ್ತಿಯ ಕೇಂದ್ರವಾಗಿದೆ. ಇದು ವಾಸ್ತವಕ್ಕೆ ಸಂಬಂಧಿಸಿದಂತೆ ಧರ್ಮವ್ವನ ವ್ಯವಹಾರವಾದರೆ ಭ್ರಮೆಯ ಲೋಕದಲ್ಲಿ ಆಕೆಯು ಬೇರೆ ರೀತಿಯಲ್ಲಿ ಪಾಲುಗೊಳ್ಳುತ್ತಾಳೆ. ಅಲ್ಲಿ ಅವಳ ನಿರ್ದಾಕ್ಷಿಣ್ಯ ಪ್ರವೃತ್ತಿ ಮತ್ತು ಕಠೋರತೆಗಳು ಮಾಯವಾಗಿ ಒಂದು ಬಗೆಯ ದಯನೀಯ ಮೃದುತ್ವವು ಕಾಣಿಸಿಕೊಳ್ಳುತ್ತದೆ. “ಧರ್ಮವ್ವ ಒಂದು ರಾತ್ರಿ ಗಳವನ್ನು ಗಣಿಕೆ ಮಾಡಿದಳು. ಆ ಗಣಿಕೆಗಳು ಸೋಮು, ಸಿವು, ಭೈರು ಚೆನ್ನಿ ಅವಳ ಮಕ್ಕಳಾದವು. ಆ ಮಕ್ಕಳ ಅಂಗಿ ಚಣ್ಣದಲ್ಲಿ ಆ ಗಣಿಕೆಗಳನ್ನು ಸಿಕ್ಕಿಸಿದಳು. ಚೆನ್ನಿ ಗಣಿಕೆಗೆ ಅಂಗಿ ಟೊಪ್ಪಿಗೆ ಹಾಕಿ ಮೊಲೆ ಕುಡಿಸಿದಳು. ಅವರನ್ನೆಲ್ಲ ರಾತ್ರಿ ಮಗ್ಗಲದಲ್ಲಿಟ್ಟುಕೊಂಡು ಮಲಗಿದಳು.” (ಪುಟ 144) ವಾಸ್ತವ ಜಗತ್ತಿನಲ್ಲಿ ಆಕೆಯು ಪ್ರತಿಕ್ರಿಯಿಸುವ ರೀತಿಗೂ ಭ್ರಮಾಲೋಕದಲ್ಲಿ ತೋರುವ ಮಾರ್ದವತೆಗೂ ಸಂಬಂಧವಿರುವುದಿಲ್ಲ. ವಾಸ್ತವದಲ್ಲಿ ಆಕೆಯು ಪರಿತ್ಯಕ್ತೆಯಾದರೆ, ಭ್ರಮಾಲೋಕದಲ್ಲಿ ಅವಳು ತಾಯ್ತನದ ಹಂಬಲವನ್ನು ಹೊಂದಿರುವ ಹೆಣ್ಣು. ಸಾವಿನ ಸಂಕೇತವಾದ ಬಿದಿರಿನ ಹೂವು ಅರಳಿದಾಗ ಅದಕ್ಕಾಗಿಯೇ ಕಾಯುತ್ತಿದ್ದವಳಂತೆ ಆಕೆಯು “ಮೊದಲ ಬಾರಿ ತಾನೇ ಹೆಣೆದ ಸಿದಿಗೆಯ ಮೇಲೆ ಮಲಗಿದ್ದಾಳೆ. ಪಕ್ಕದಲ್ಲಿ ದ್ಯಾವಪ್ಪ, ಸಾಂತವ್ವ, ಸಿದ್ದುರ ಗಣಿಕೆಯನ್ನು ಮಲಗಿಸಿದ್ದಾಳೆ. ಸೋಮು, ಶಿವಿ, ಭೈರುರ ಗಣಿಕೆಗಳನ್ನು ಹೊಟ್ಟೆಗಿಟ್ಟುಕೊಂಡಿದ್ದಾಳೆ. ಚೆನ್ನಿಯ ಗಣಿಕೆಯನ್ನು ಕುಪ್ಪಸದಲ್ಲಿ ತುರುಕಿಕೊಂಡಿದ್ದಾಳೆ. ಅವಳ ಕಣ್ಣುಗಳು ನಿಚ್ಚಳವಾಗಿ ತೆರೆದಿವೆ. ಪ್ರಾಣಪಕ್ಷಿ ಯಾವಾಗ ಗೂಡು ಬಿಟ್ಟು ಹಾರಿ ಹೋಗಿತ್ತೋ ತಿಳಿಯದು” (ಪುಟ 147) ಎಂಬ ಸಾಲುಗಳು ತಾನು ಬಯಸಿದ ಮರಣವನ್ನು ಆವಾಹಿಸಿದ ಬಗೆಯನ್ನು ವ್ಯಕ್ತಪಡಿಸುತ್ತವೆ. ಅವಳ ಪಾಲಿಗೆ ಜೀವಪರವಾಗಿದ್ದ ಬಿದಿರು ಕೊನೆಗೆ ಮರಣದ ಪ್ರತೀಕವಾಗಿ ಬದಲಾದದ್ದು ವಿಶೇಷ.

‘ಹುಲ್ಲೂರ ಹುಚ್ಚಿ’ಯು ಹಳ್ಳಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದ ಕತೆಯಾಗಿದ್ದರೂ ಕೌಟುಂಬಿಕ ಚೌಕಟ್ಟಿನೊಳಗೆ ನಡೆಯುತ್ತದೆ. ಆಗರ್ಭ ಶ್ರೀಮಂತರಾದ ಹುಲ್ಲೂರ ಸಂಗಪ್ಪಣ್ಣನವರು ತಮಗೆ ಮಕ್ಕಳಿಲ್ಲದಿರುವುದರಿಂದ ಬಂಗಾರೆವ್ವನನ್ನು ಎರಡನೇ ಮದುವೆಯಾಗುತ್ತಾರೆ. ಆ ಮೊದಲೇ ಯಾರಿಂದಲೋ ಬಸುರಾಗಿದ್ದ ಆಕೆಯು ಎಂಟು ತಿಂಗಳಲ್ಲಿ ಭಾಗಿಯನ್ನು ಹಡೆಯುತ್ತಾಳೆ. ಹೃದಯಭೇದಕ ನೋವನ್ನು ಅರಗಿಸಿಕೊಂಡ ಸಂಗಪ್ಪಣ್ಣನವರು ಅದನ್ನು ತಮ್ಮ ಮಗುವಿನಂತೆ ಬೆಳೆಸುತ್ತಾರೆ. ಬೆಳೆದು ದೊಡ್ಡವಳಾದಾಗ ಭಾಗಿಯು ತನ್ನ ಜೀವದ ಗೆಳತಿಯಾದ ನಾಗಿಯ ಅಣ್ಣ ಶಿವುವನ್ನು ಪ್ರೀತಿಸುತ್ತಾಳೆ. ಆದರೆ ಸಂಗಪ್ಪಣ್ಣನವರು ಮಗಳನ್ನು ಗದುಗಿನ ಶ್ರೀಮಂತ ವೀರಭದ್ರಪ್ಪನವರ ಮಗ ಮಹೇಂದ್ರನೊಡನೆ ಮದುವೆ ಮಾಡಿಸುತ್ತಾರೆ. ಒಬ್ಬನನ್ನು ಪ್ರೀತಿಸಿ ಇನ್ನೊಬ್ಬನನ್ನು ಮದುವೆಯಾದ ಭಾಗಿಯು ಇಬ್ಬಂದಿತನವನ್ನು ಅನುಭವಿಸುತ್ತಾಳೆ. ಗಂಡನ ಜೊತೆ ಮುಖವಾಡವನ್ನು ಧರಿಸಿಯೇ ಬಾಳಿದರೂ ಆಕೆಗೆ ಶಿವೂನ ನೆನಪುಗಳು ಕಾಡುತ್ತವೆ. ಗಂಡ ಮತ್ತು ಪ್ರಿಯಕರರ ನಡುವಿನ ಅಂತರವನ್ನು ತುಂಬಲಾಗುವುದಿಲ್ಲ. ಶ್ರೀಮಂತಿಕೆಯ ವಾತಾವರಣವು ಪ್ರೀತಿಗಾಗಿ ದಹಿಸುವ ಅವಳ ಮನೋಲೋಕವನ್ನು ಸ್ಪರ್ಶಿಸುವುದಿಲ್ಲ. ಪಕ್ಕದಲ್ಲಿ ಮಲಗಿರುವಾಗ ಕನಸಿನಲ್ಲೂ ಶಿವೂನನ್ನೇ ಆತ್ಮೀಯವಾಗಿ ಕೂಗಿ ಕರೆಯುವ ಕ್ರಿಯೆಗಳು ಮಹೇಂದ್ರನ ಮನದಲ್ಲಿ ಅಸಮಾಧಾನವನ್ನು ಹುಟ್ಟಿಸುತ್ತದೆ. ‘ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಶಿವೂನದ್ದು’ ಎಂಬ ಆರೋಪವನ್ನು ಹೊರಿಸಿ ಆಕೆಯ ಗರ್ಭಪಾತವನ್ನು ಮಾಡಿಸುತ್ತಾನೆ. ತಾನು ಕಚ್ಚೆಹರುಕನಾಗಿದ್ದರೂ ಹೆಂಡತಿ ಕನ್ಯೆಯಾಗಿರಬೇಕೆಂಬ ಪುರುಷಪ್ರಧಾನ ಧೋರಣೆಯು ಇಲ್ಲಿ ವ್ಯಕ್ತವಾಗುತ್ತದೆ. ಇದರಿಂದ ದಾಂಪತ್ಯದ ಬದುಕು ಅಂತರಂಗವನ್ನು ತುಂಬದೆ ಭಾಗಿಯು ಹುಚ್ಚಿಯಾಗುತ್ತಾಳೆ. ಈ ಕತೆಯಲ್ಲಿ ಮೂಡಿಬರುವ ವೈಫಲ್ಯಕ್ಕೆ ಹಲವು ಮುಖಗಳಿವೆ. ಮಾವನವರ ಕಾರುಭಾರುಗಳನ್ನು ನೋಡಿಕೊಳ್ಳುವ ಹೆಸರಿನಲ್ಲಿ ಅತ್ತೆಯವರಾದ ತನ್ನ ವಿಶ್ವಾಸವನ್ನು ಗಳಿಸಿಕೊಂಡು ಹಿಂದೆಯೇ ಬಂದ ಮಹೇಂದ್ರನು ತನ್ನ ಸೆರಗು ಹಿಡಿದಾಗ, ಸೆರಗು ಬಿಚ್ಚಿ, ಹಾಸಿ ಮಲಗಿಸಿ ಅವನ ಮಗುವಿನ ತಾಯಿಯಾದ ಬಂಗಾರೆವ್ವ, ಅಂಥವಳ ಗಂಡನಾಗಿ ಇದನ್ನೆಲ್ಲ ಕಂಡು ಅನುಭವಿಸಬೇಕಾಗಿ ಬಂದ ಸಂಗಪ್ಪಣ್ಣ, ಪ್ರೇಯಸಿ ಭಾಗಿಯನ್ನು ಪಡೆಯಲಾರದೆ ದುಃಖಿಸುವ ಶಿವೂ, ಇವರೆಲ್ಲರೂ ವಿಫಲರೇ. ತಾಯಿಯ ಬಸಿರಿಗೆ ಕಾರಣನಾದವನು ತನ್ನ ಗಂಡನೆಂದು ತಿಳಿದು ಜಗಳವಾಡಿದ ಬಳಿಕ ಮಹೇಂದ್ರನಿಂದ ವಿಷಪ್ರಾಶನಕ್ಕೆ ಒಳಗಾಗಿ ಸಾಯುವ ಭಾಗಿ, ಇದನ್ನು ಕಾಣುವ ಮೊದಲೇ ಕಣ್ಣುಮುಚ್ಚಿದ ಸಂಗಪ್ಪಣ್ಣರನ್ನು ಹೊರತುಪಡಿಸಿ, ಮಗಳ ಮರಣವನ್ನು ಕಣ್ಣಾರೆ ಕಂಡು ಹುಚ್ಚಿಯಾಗಿ ತಿರುಗತೊಡಗಿದ ಬಂಗಾರೆವ್ವನೂ ಸೇರಿದಂತೆ ಮಿಕ್ಕುಳಿದವರಿಗೆ ಮುಕ್ತಿಯ ಸಾಧ್ಯತೆಗಳು ಇಲ್ಲ. ಸಂಕೀರ್ಣ ವಸ್ತುವನ್ನು ನಿರ್ವಹಿಸುವ ಕತೆಯು ಖಚಿತ ದೃಷ್ಟಿಕೋನ, ಸೂಕ್ತ ವಿವರಗಳು ಮತ್ತು ವಿವಿಧ ಸ್ತರಗಳಲ್ಲಿ ನಡೆಯುವ ಅರ್ಥಕ್ರಿಯೆಗಳನ್ನು ಹೊಂದಿದೆ. ಒಳಿತಿನ ಶಕ್ತಿಗಳು ಅಸಹಾಯಕವಾಗಿ ಕೆಡುಕಿನ ಶಕ್ತಿಯೇ ವಿಜೃಂಭಿಸುವ ಸಂದರ್ಭದಲ್ಲಿ ನಾಗಿಯ ಹೆರಿಗೆಯಾದಾಗ ಆಕೆ ‘ಭಾಗಿ, ನನ್ನ ಭಾಗಿ, ಭಾಗೀರಥಿ’ ಎಂದು ಮಗುವನ್ನು ಕೂಗಿ ಕರೆಯುವಲ್ಲಿ ವ್ಯಕ್ತವಾಗುವ ಗೆಳೆತನದ ಉತ್ಕಟತೆ ಮತ್ತು ಕತ್ತಲೆ ಕರಗಿ ಬೆಳಗಾಗುವಂತೆ ಮಗು ನಗುವ ಕ್ರಿಯೆಯು ಕತೆಗೆ ಸಂಬಂಧಿಸಿದಂತೆ ಆಶಾವಾದಿ ಬೆಳವಣಿಗೆಯಾಗಿದೆ.

ಲೇಖಕಿಯು ಸಣ್ಣಕತೆಯ ಆಧುನಿಕ ತಂತ್ರಗಳನ್ನು ಅಲ್ಲಲ್ಲಿ ಪ್ರಯೋಗಿಸಿದ್ದರೂ ಅವರ ಮನಸ್ಸು ಸಂಕ್ಷೇಪಕ್ಕಿಂತ ದೀರ್ಘಕ್ಕೆ, ಆಳಕ್ಕಿಂತ ವಿಸ್ತಾರದೆಡೆಗೆ ಒಲಿದಿದೆ. ನಿರ್ದಿಷ್ಟ ಚೌಕಟ್ಟಿನೊಳಗೆ ಮುಗಿಯುವ ಹೆಚ್ಚಿನ ಕತೆಗಳ ಸಂಪೂರ್ಣತೆಯು ಅವುಗಳಿಗೆ ಮುಳುವಾಗದಿದ್ದರೂ ಇತರ ಕತೆಗಳ ಸೋಲಿಗೆ ಅವುಗಳ ರಾಚನಿಕ ಸ್ವರೂಪವು ಕಾರಣವಾಗಿದೆ. ಲೇಖಕಿಯು ಕತೆಗಳ ಜೊತೆಗೆ ಲಲಿತಪ್ರಬಂಧಗಳನ್ನು ಬರೆದವರು. ಈ ಎರಡು ಪ್ರಕಾರಗಳ ನಡುವೆ ಅಂತರವಿಲ್ಲದಂಥ ಕತೆಗಳು ಮಸುಕಾಗಿ ತೋರುತ್ತವೆ. ವಿಪುಲ ವಿವರಗಳು, ಲೋಕಾಭಿರಾಮದ ಮಾತುಗಳು, ಹಾಡಿನ ಸಾಲುಗಳು ಏಕಾಗ್ರತೆಗೆ ಭಂಗವನ್ನು ಉಂಟು ಮಾಡುತ್ತವೆ. ಅವರ ‘ಕಜ್ಜಾಯ’, ‘ಕೊಡುವುದೇನು ಕೊಂಬುದೇನು?’ ಲಲಿತ ಪ್ರಬಂಧ ಸಂಕಲನಗಳಲ್ಲಿರುವ ಹೆಚ್ಚಿನ ರಚನೆಗಳು ಒಂದರ್ಥಲ್ಲಿ ಸಣ್ಣಕತೆಗಳೇ ಆಗಿವೆ. ಅವುಗಳಲ್ಲಿರುವ ಪ್ರಬಂಧದ ಅಂಶಗಳನ್ನು ಬಿಟ್ಟು ಉಳಿದ ಭಾಗಗಳನ್ನು ಪುನರ್ರಚಿಸಿ, ಕತೆಯ ರೂಪದಲ್ಲಿ ಬೆಳೆಸಿದ್ದರೆ ಕನ್ನಡ ಕಥಾಲೋಕಕ್ಕೆ ಪ್ರಾತಿನಿಧಿಕ ಕತೆಗಳು ದೊರೆಕುವ ಸಾಧ್ಯತೆಗಳಿದ್ದವು.

ಲೇಖಕಿಯ ವಾಸ್ತವವಾದಿ ಶೈಲಿಯು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದ ಸ್ಥಿತಿಗಳನ್ನು ಹಿಡಿದಿಡುತ್ತದೆ. ವ್ಯವಸ್ಥೆಯೊಳಗಿನ ಕ್ರೌರ್ಯ, ಇನ್ನೂ ಉಳಿದಿರುವ ಜಾತಿ ವೈಷಮ್ಯ, ಮನುಷ್ಯತ್ವದ ಸೆಲೆ ಇಲ್ಲದಂತೆ ಹೊಗೆಯಾಡುತ್ತಿರುವ ಸ್ವಾರ್ಥ, ಸಣ್ಣತನ, ಕ್ಷುದ್ರ ಕ್ಷುಲ್ಲಕತೆಗಳು ನೆಮ್ಮದಿಯ ಉಸಿರಿಗೆ ಆಸ್ಪದವಿಲ್ಲದ ನರಕದ ಮುಖಗಳನ್ನು ಅನಾವರಣಗೊಳಿಸುತ್ತವೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಲೇಖಕಿಯ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮಿಕೆಯ ಸಾಧ್ಯತೆಗಳೆಡೆಗೆ ಗಮನವನ್ನು ಹರಿಸುತ್ತದೆ. ಹಳೆಯ ಮತ್ತು ಹೊಸ ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳು ವ್ಯವಸ್ಥೆಯ ವಿರುದ್ಧ ಬಂಡೇಳದಿದ್ದರೂ ಅದನ್ನು ಸಮರ್ಥಿಸದೆ ಬದುಕಿನೊಡನೆ ಹೋರಾಡುತ್ತಾರೆ. ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ, ಹೃದಯವಂತಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭಾಷೆಯನ್ನು ಸೂಕ್ಷ್ಮವಾಗಿ ಬಳಸುವ ಲೇಖಕಿಯು ಸಮಾಜದ ಕ್ರೂರ ವಾಸ್ತವವನ್ನು ನಿರ್ಲಿಪ್ತವಾಗಿ, ಉರಿಯುವ ವಿಷಾದದ ನೆಲೆಯಲ್ಲಿ ಮಂಡಿಸುತ್ತಾ ಕತೆಗೆ ಹೊಸ ಅರ್ಥಗಳನ್ನು ಒದಗಿಸುತ್ತಾರೆ. ತಮ್ಮದೇ ರೀತಿಯಲ್ಲಿ ಕತೆಗಳನ್ನು ಹೇಳುತ್ತಾ ಬದುಕಿನ ವ್ಯಂಗ್ಯವೈರುಧ್ಯಗಳತ್ತ ಗಮನ ಸೆಳೆಯುತ್ತಾರೆ. ಋಣಾತ್ಮಕ ನೆಲೆಯನ್ನು ಮೀರಿ ವಿಶೇಷ ಅರ್ಥವಂತಿಕೆಯನ್ನು ಪಡೆದುಕೊಳ್ಳುವ ಕತೆಗಳು ಮಾನವನ ವಿಚ್ಛಿದ್ರಕಾರಿ ಪ್ರವೃತ್ತಿಯನ್ನು, ಮೌಲ್ಯಗಳ ಕಡೆ ತೋರುವ ತಿರಸ್ಕಾರಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ವಿವರಿಸುತ್ತವೆ. ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತವೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕತೆಗಳಲ್ಲಿ ಕಾದಂಬರಿಯ ವ್ಯಾಪ್ತಿಯು ಕಂಡುಬಂದರೂ ಕಥನಕ್ಕೆ ತಕ್ಕಂತೆ ಅದರ ಸ್ತರ ಮತ್ತು ಕೇಂದ್ರವನ್ನು ಆಯ್ದುಕೊಳ್ಳುವ ಜಾಣ್ಮೆ ಇರುವುದರಿಂದ ಕತೆಯ ಓಟಕ್ಕೆ ತಡೆ ಉಂಟಾಗುವುದಿಲ್ಲ. ಪಾತ್ರದ ಅನುಭವ ಮತ್ತು ವಿಚಾರಗಳ ಚಿತ್ರಣ ಓದುಗನ ಮನಸ್ಸಿನಲ್ಲಿ ಮೂಡಿ ಕ್ರಮೇಣ ಕತೆಯ ರೂಪದಲ್ಲಿ ಬೆಳೆಯುವಾಗ ಅದರೊಳಗಿನ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ನಿರೂಪಣೆಗಳು ಗಮನವನ್ನು ಸೆಳೆಯುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ, ಹಿಂದಿನ ತಲೆಮಾರಿನವರ ಬದುಕನ್ನು ಅರಿತುಕೊಂಡದ್ದರ ಫಲವಾಗಿ ಮೂಡಿದ ಕತೆಗಳು ಬದುಕಿನ ವಿವರಗಳನ್ನು ದಾಖಲಿಸುತ್ತವೆ. ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕøತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರಲು ಅಗತ್ಯವಾದ ಮಾನವೀಯ ಸಾಧ್ಯತೆಗಳನ್ನು ಶೋಧಿಸುತ್ತವೆ. ಸಾಂಸಾರಿಕ ವಿರಸದಲ್ಲಿ ಹುಟ್ಟಿಕೊಳ್ಳುವ ನರಕದ ಅನುಭವಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ಕತೆಗಳು ಮನಸ್ಸನ್ನು ತಟ್ಟುತ್ತವೆ. ಕೇಂದ್ರ ಪಾತ್ರದ ಮರಣದ ಜೊತೆಗೆ ಕತೆಯು ಅಂತ್ಯವನ್ನು ಕಂಡುಕೊಳ್ಳುವ ನಿರೂಪಣ ತಂತ್ರವನ್ನು ಬಳಸಿಕೊಂಡರೂ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಶೋಧಿಸುವಲ್ಲಿ ಲೇಖಕಿಯ ಕನಸು, ತಲ್ಲಣ ಮತ್ತು ಅಪೇಕ್ಷೆಗಳು ಸೂಚಿತವಾಗುವುದರಿಂದ ಕುತೂಹಲಕಾರಿಯಾಗಿ ಕಾಣುತ್ತವೆ. ಒಂದೇ ಆಶಯಕ್ಕೆ ಬಂಧಿತರಾಗದೆ ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕಿಯು ಹೆಣ್ಣಿನ ಬವಣೆಗೆ ಮಾತ್ರ ಮೀಸಲಾಗದೆ ಎಲ್ಲರ ಸಮಸ್ಯೆಗಳನ್ನು ಹಲವು ನೆಲೆಗಳಲ್ಲಿ ಕಾಣಿಸುತ್ತಾರೆ. ಹೆಣ್ಣಿನ ಸಂಕಷ್ಟಗಳ ಬಗ್ಗೆ ಮಾತ್ರ ಬರೆಯುತ್ತಾ ಸರಳೀಕೃತ, ಏಕಮುಖಿಯಾದ ಪುರುಷವಿರೋಧಿ ನೆಲೆಗಳನ್ನು ಮುಟ್ಟಲು ಹಾತೊರೆಯದೆ ಬದುಕಿನ ವಿರಸದ ಕ್ಷಣಗಳನ್ನು, ಸಂಪ್ರದಾಯದ ಸಂಕೋಲೆಗಳನ್ನು ಮೀರುವ ದಿಟ್ಟ ಗಂಡು ಹೆಣ್ಣುಗಳನ್ನು ತೋರುತ್ತಾರೆ. ಸಂಪ್ರದಾಯದ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತಾರೆ.

ವಿವಿಧ ಜಾತಿ, ವಯಸ್ಸು, ಅಂತಸ್ತು, ಆಕೃತಿ, ಭಾವಸ್ಥಿತಿ ಮತ್ತು ಸಂವೇದನೆಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಇವರ ಕತೆಗಳ ಕೇಂದ್ರವಾಗಿದ್ದಾಳೆ. ಸಂಪ್ರದಾಯಸ್ಥರಿಂದ ಆಧುನಿಕರವರೆಗೆ, ಅವಿವಾಹಿತೆಯರಿಂದ ವಿಧವೆಯವರವರೆಗೆ ಈ ಜಗತ್ತು ಹರಡಿಕೊಂಡಿದೆ. ವ್ಯವಸ್ಥೆಯ ಹುಯಿಲಿನಲ್ಲಿ ಸಿಲುಕಿ ಪಡಿಪಾಟಲು ಪಡುತ್ತಿರುವ ಹೆಣ್ಣುಗಳ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಹಿಡಿದಿಡುತ್ತಾ ಯಾವುದೇ ಅಬ್ಬರವಿಲ್ಲದ ತಣ್ಣಗಿನ ಆದರೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವ್ಯವಸ್ಥೆಯ ಒಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ ಪ್ರತಿರೋಧಗಳ ನಡುವೆಯೂ ತಮ್ಮತನವನ್ನು ಕಾಯ್ದುಕೊಳ್ಳುವ ಪಾತ್ರಗಳು ಇಲ್ಲಿವೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಗ್ರಹಿಕೆ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳ ಬಗೆಗಿನ ಗಾಢವಾದ ತಿಳುವಳಿಕೆ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವು ಇಲ್ಲಿ ಕೆಲಸ ಮಾಡಿದೆ. ಪಾತ್ರಗಳ ಅಂತರಂಗವನ್ನು ಹೊಕ್ಕು ಅವರ ನೋವಿಗೆ ಸ್ಪಂದಿಸಲು, ಬದುಕಿನ ಅರ್ಥವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕಿಯೊಳಗಿನ ಜೀವನ ಪ್ರೀತಿಯಿಂದ ಮೂಡಿ ಬಂದಿವೆ. ಕತೆಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿಯಾಗಿದೆ.

ಬಾಂಧವ್ಯದ ಸುಖವು ಇಲ್ಲದಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕತೆಗಳು ಜನರ ತಾಳ್ಮೆಯನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತವೆ. ಅನ್ಯಾಯಕ್ಕೊಳಗಾದವರು ಸಮಾಜಕ್ಕೆ ಕೊಡುವ ಪ್ರತಿಕ್ರಿಯೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸುವ ವಿಧಾನವು ಮುಖ್ಯವೆನಿಸುತ್ತದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಆಧುನಿಕ ಸಮಾಜವು ಎದುರಿಸುತ್ತಿರುವ ದೈನಂದಿನ ಆಗುಹೋಗುಗಳು, ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಇವರ ಕತೆಗಳು ಅಲ್ಲಿನ ಶ್ರೀಮಂತರ ಅಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದವು ಭದ್ರವಾಗಿ ನೆಲೆಗೊಂಡ ನಂತರ ರೂಪುಗೊಂಡ ಕತೆಗಳು ಯಾವುದೇ ಸಿದ್ದಾಂತಕ್ಕೆ ಕಟ್ಟುಬಿದ್ದಿಲ್ಲ. ಗಂಡು ಹೆಣ್ಣಿನ ಸಂಘರ್ಷ, ಸಾಮುದಾಯಿಕ ತಿಕ್ಕಾಟಗಳು ಸೈದ್ಧಾಂತಿಕ ಸ್ವರೂಪದ್ದಾಗಿಲ್ಲ. ಸಮಾಜದ ಕತೆಗಳಾದರೂ ಇಡೀ ಸಮಾಜದ ಸಂವೇದನೆಯಾಗಿ ರೂಪುಗೊಂಡಿದ್ದು ಬದುಕಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿವೆ. ಸರಳವಾದ ರಚನಾಕ್ರಮ, ನೇರವಾದ ನಿರೂಪಣೆಗಳ ಮೂಲಕ ರೂಢ ಭಾವನೆಗಳನ್ನು ಕಲಕಿ ಜೋಡಿಸುವ ಪ್ರಯತ್ನವಿದೆ. ನುಡಿಗಟ್ಟು, ರೀತಿ ನೀತಿ, ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಕತೆಗಳು ಪ್ರೌಢ ಒಳನೋಟಗಳನ್ನು ಹೊಂದಿವೆ. ಈಗಾಗಲೇ ಓದಿರುವ ಹಲವು ಕತೆಗಳ ಸಾಲಿಗೆ ಸೇರಿ ಮರೆತು ಹೋಗಲು ಕಾದಿರುವ ರಚನೆಗಳ ನಡುವೆ ಅನುಭವ ಮತ್ತು ಸೂಕ್ಷ್ಮ ಒಳನೋಟಗಳ ಮೂಲಕ ಸ್ಮರಣೀಯವೆನಿಸಿರುವ ಕತೆಗಳೂ ಇವೆ. ಹಿತಮಿತವಾದ ಬರವಣಿಗೆ-ಆಡಂಬರವಿಲ್ಲದ ನಿರೂಪಣೆ, ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಬದುಕಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುತ್ತವೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕತೆಗಳು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ.

********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಸುನಂದಾ ಬೆಳಗಾಂವಕರ ಅವರ ‘ಮೃದ್ಗಂಧ’”

  1. Chintamani Sabhahit

    ಒಂದು ಸಮಯದಲ್ಲಿ, ಯಾವುದೋ ಒಂದು ಘಟನೆ ನಡೆಯುತ್ತದೆ. ಆ ಘಟನೆಯ ಬೆಳವಣಿಗೆಗೆ ಹಾಗೂ ಅಂತ್ಯಕ್ಕೆ ಅನೇಕ ಹಿನ್ನೆಲೆಗಳಿರುತ್ತವೆ. ಸುದ್ದಿಗಾರನಾದರೆ ಒಂದು ರೋಚಕ ಸುದ್ದಿಯಂತೆ, ಕವಿಯಾದರೆ ಒಂದು ಆತ್ಮ ನಿದರ್ಶನದಂತೆ, ಕತೆಗಾರನಾದರೆ ತನ್ನ ಪಳಗಿದ ಶೈಲಿಯಿಂದ ಸ್ವಾರಸ್ಯಕರ ಓದಿನಂತೆ, ಕಾದಂಬರಿಕಾರನಾದರೆ ಸಮಗ್ರ ಸನ್ನಿವೇಶಗಳ ಚಿತ್ರಣ ಮಾಡುತ್ತ ಆಗಿನ ಸಮಾಜದ ಒಂದು ವೈಖರಿಯನ್ನು ವಿಶದೀಕರಿಸಿ, ಸಾಹಿತ್ಯ ಸಂಗ್ರಹದ ಒಂದು ವಿಶಿಷ್ಟ ಭಾಗವಾಗುತ್ತಾನೆ / ಳೆ. ಪ್ರತಿಯೊಂದರಲ್ಲೂ ಅವರವರ ದೃಷ್ಟಿ, ಗೃಹಿಸಿದ ಬಗೆ, ವ್ಯಾಪ್ತಿ, ಅನುಭವದ ಎಳೆಗಳಲ್ಲಿ, ಕುಸುರಿಯಾಗಿ ಪ್ರತ್ಯಕ್ಷವಾಗುತ್ತದೆ / ಸಾಕ್ಷಿಯಾಗುತ್ತದೆ.

    ಅದೇ ಸನ್ನಿವೇಶವನ್ನು ಓದುಗ, ಸುನಂದಾ ಬೆಳಗಾಂವಕರರ ಬೆಳದಿಂಗಳ ಶೀತಲ, ಸಾಂತ್ವನದ ಶೈಲಿಯಲ್ಲಿ ಆನಂದಿಸುತ್ತಾನೆ. ಅವರ ಧಾರಾವಾಹಿಗಳನ್ನು ಓದಿದವರಿಗೆ, ವಿಶೇಷ ಗುಣ ಲಕ್ಷಣಗಳನ್ನು ಹೊಂದಿದ ಆ ನಿರೂಪಣೆಯ ಲವಲವಿಕೆ, ವಿನ್ಯಾಸ, ಸೊಗಸು ಎಂದೂ ಮಾಸುವದಿಲ್ಲ, ಘಟನೆಯ ಸತ್ಯತೆ ಹೇಗಿದ್ದರೂ ಕೂಡ!

    ಪಟ್ಟಾಜೆಯವರು, ಎಂದಿನ ಸುದೀರ್ಘ ಸಂಶೋಧನಾ ಪ್ರವೃತ್ತಿಯ ಸಂತಸವನ್ನು, ಬೇರೆ ಬೇರೆ ಓದಿನ ಸಮ ಸನ್ನಿವೇಶದ ತಿರುವುಗಳನ್ನು ಪ್ರತಿಬಿಂಬಿಸುತ್ತ, ವಿವರಣೆ – ವಿವೇಚನೆ – ವಿಶ್ಲೇಷಣೆಗಳ ಆಯಾಮದಲ್ಲಿ, ತಮ್ಮ ಅಧ್ಯಯನದ ಪಾಕ ರುಚಿಯನ್ನು ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter