ಸೀರೆಯಿಂದ ಅಲಂಕರಿಸಿಕೊಂಡ
ಪುಸ್ತಕಗಳು ಮೇಜಿನ ಮೇಲೆ
ಪ್ರತಿಪುಟ ಹಾಳಾಗದಂತೆ, ಹೊಲಸಾಗದಂತೆ,
ಚಿಕ್ಕ ಮಕ್ಕಳು ಏನೂ ಗೀಚದಂತೆ,
ಮಗುವಿನಂತೆ ಸಮಾಧಾನಿಸಿ
ಮತ್ತೆ ಬರುವವು ಹೊಸ ಪುಸ್ತಕಗಳು
ಜ್ಞಾನದ ಭಂಡಾರ ಹೆಚ್ಚಿಸಿಕೊಳ್ಳಬೇಕಲ್ಲ!
ಹೊಸದಕ್ಕೆ ದಾರಿ ಕೊಟ್ಟು ಕಪಾಟಿನಲ್ಲಿ
ಮೂಲೆಯಲ್ಲೋ ಇರುವ ಗೋಣಿ ಚೀಲದಂತೆ
ಹೀಗೆ ಎಲೆಯ ವರ್ಷಗಳುರುಳಿ
ಕಪಾಟೂ ತುಂಬಿ ಜಾಗ ಇಲ್ಲದಾಗಿ
ಓದುವವರಿಗೋ, ಗ್ರಂಥಾಲಯಲಕ್ಕೋ ನೀಡಿ
ಜ್ಞಾನದ ಕೊಡ ಪಸರಿಸಿದ ಹೆಮ್ಮೆ
ಒಲವಿದ್ದರೂ ಹೊರದೂಡಬೇಕಾದ
ಶಪಿಸಿ ಅನಿವಾರ್ಯ ಪ್ರಸಂಗ
ಬಂಗಾರದ ಪುಸ್ತಕಗಳು
ಓದದವರಿಗೆ ತಗಡು
ಜಪಿಸಿಯಾರು ಚೂರೇ ಚೂರು
ಎಲ್ಲೋ ನುಸುಳಿಕೊಂಡ ಆತ್ಮೀಯತೆಯಿಂದ
ತಾತ್ಕಾಲಿಕ ಅರಣ್ಯದ ಟೆಂಟ್ನಂತೆ
ಎಲೆ ಒಣಗಿದಂತೆ, ಹೂ ಮುದುಡಿದಂತೆ,
ಹಗಲು ಕತ್ತಲೆಯಾದಂತೆ, ಮನುಷ್ಯ
ಮುದುಕನಾದಂತೆ, ಸೇರಬಹುದು
ಪುಸ್ತಕ ರದ್ದಿಯ ಗಂಟಿಗೆ
ಇರದಾಗ ಪ್ರೀತಿಸುವವರು
- ಮಾಲಾ ಮ.ಅಕ್ಕಿಶೆಟ್ಟಿ. ಬೆಳಗಾವಿ.
3 thoughts on “ಸೀರೆಯುಟ್ಟ ಪುಸ್ತಕಗಳು ”
ಕವಯಿತ್ರಿ ಆದುದರಿಂದ ರೂಪಕ ಸೀರೆಯಾಗಿರಬಹುದು, ಇಲ್ಲವಾದರೆ ಅದು ಪ್ಯಾಂಟು, ಬಣ್ಣ ಬಣ್ಣದ ನಿಲವಂಗಿಯೂ ಆಗಬಹುದಿತ್ತು.
ಮೂರನೇ ಕಣ್ಣಿಂದ ಹೊರಬಿದ್ದ ಭಾವನೆಗಳು, ಹರಿಯುವ ನದಿ, ಆಗಾಗ ಭೂಮಿಯೊಳಗೆ ಸೇರುತ್ತಾ, ಮತ್ತೆ ಮತ್ತೆ ಹೊರಬರುವ ಸನ್ನಿವೇಶಗಳು, ಹೇಳುವುದು ಬಹಳವಿದೆ, ಸಮಯದ ಕೊರತೆ ಇಲ್ಲದಿರೆ, ಅನಿಸುತ್ತದೆ.
ಕಾವ್ಯ, ಕವಿ ಹೇಳಿದ್ದಲ್ಲ, ಅದು ಹೇಳದೆ ಇರುವದು ಅನ್ನುವದು ನೆನಪಾದರೆ, ಒಳದೃಷ್ಟಿ ಮಸುಕಾಗುವದಿಲ್ಲ!
ಯಾವ ಪುಸ್ತಕದ ಹಿನ್ನೆಲೆಯೇ ಇರಲಿ, ಯಾವುದೇ ಪುಸ್ತಕಕ್ಕೆ ಅನ್ವಯವಾಗುವ ಹಾಗೆ, ಒಂದು ಹೂವು ಅರಳಿ ತನ್ನ ಬಣ್ಣದ, ಆಕಾರದ, ಪರಿಮಳದ, ನಿಜ ಸೌಂದರ್ಯದ, ಇಹ ಬದುಕಿನ ಕ್ಷಣ ಭಂಗುರದ ತಥ್ಯವನ್ನು ಬಾಚಿ, ತಬ್ಬಿ ಮರೆಯಾಗುವ ಹೊತ್ತಿನಲ್ಲೂ, ಆಸೆ ನಿರಾಸೆಗಳ ಛಾಯೆಯನ್ನು ಬಿಡುವ ಮಾದರಿ, ಶರೀರ ಮರೆಯಾದರೂ, ಅದರ ನೆರಳನ್ನು ತ್ಯಜಿಸದಿರುವದು, ಮೂಕ ಭಾಷೆಗೆ ಒಂದು ಮೆರುಗನ್ನು ನೀಡಿದೆ.
…….ಯಾವ ಪುಸ್ತಕದ ಆತ್ಮ ಚರಿತ್ರೆಯೂ ಆಗಬಹುದು, ಅನ್ನುವಷ್ಟರ ಮಟ್ಟಿಗೆ!
ಭೇಷ್!
ಸರ್ ತಮ್ಮ comment ಓದಿ ಖುಷಿಯಾಯ್ತು.ಕವಿತೆ ಬರೆದದ್ದಕ್ಕೆ ಧನ್ಯ ಭಾವ.ಕವಿತೆ ಕವಿ ಹೇಳಿದ್ದಷ್ಟೇ ಅಲ್ಲ….ಅದು ಓದುಗರ ಯೋಚನೆಯ, ಭಾವದ ವಿಶಾಲ ಲಹರಿ.ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.
ಸರ್ ತಮ್ಮ ಓದಿನ ಪ್ರೀತಿಗೆ ತುಂಬಾ ಧನ್ಯವಾದಗಳು.
ಕವಿತೆ ಬರೀ ಕವಿ ಹೇಳಿದ್ದಲ್ಲ….ಅದನ್ನು ಮೀರಿದ್ದು. ಅದು ಓದುಗನ ಯೋಚನೆಯ ಮತ್ತು ಭಾವನೆಯ ಲಹರಿ.