ಯಮುನಾ ನದಿ ಎಂದಿನಂತೆ ಹರಿಯುತಿರುವುದು
ಮಳೆಯೂ ಮತ್ತೆ ಅಂದಿನಂತೆ ಸುರಿಯುತಿರುವುದು
ಇಂದು ರಾತ್ರಿ ಕೃಷ್ಣ ಮತ್ತೆ ಹುಟ್ಟಿ ಬರುವನೆ?
ವಸುದೇವನು ಬುಟ್ಟಿಯಲ್ಲಿ ಹೊತ್ತುತರುವನೆ?
ಅಂದಿನಂತೆ ಈ ರಾತ್ರಿಯೂ ಕಾರುಗತ್ತಲು
ಮಳೆಯ ಸದ್ದೆ ತುಂಬಿರುವುದು ಸುತ್ತಮುತ್ತಲು
ಮಳೆಯೇನೂ ದೊಡ್ಡದಲ್ಲ – ಕೃಷ್ಣ ಬರುವನೆ?
ಯಮುನೆ ಹೇಳುತಿಹಳು ಅವನು ಬಾರದಿರುವನೆ?
ಯಮುನಾ ನದಿ ಎಂದಿನಂತೆ ಹರಿಯುತಿರುವುದು
ಮತ್ತೆ ಅವನು ಬರುವನೆಂದು ಕಾಯುತಿರುವುದು
* ಚಿಂತಾಮಣಿ ಕೊಡ್ಲೆಕೆರೆ
5 thoughts on “ಯಮುನಾ ನದಿ ಎಂದಿನಂತೆ”
ಸಾಂದರ್ಭಿಕ ಮತ್ತು ಅರ್ಥಗರ್ಭಿತ ಕವನ.
ಕೃಷ್ಣನ ನಿರೀಕ್ಷೆಯ ಕವಿತೆ ಮುದನೀಡಿದೆ.
ಪ್ರಕೃತಿಯಲ್ಲಿ ಅನೇಕ ಕುತೂಹಲಗಳಿವೆ, ನಮಗೆ ತಿಳಿಯುವ ಆಸಕ್ತಿಯಿದ್ದರೆ. ಆಯಾ ಆವರ್ತನಗಳ ಲಯದ ಲವಲವಿಕೆಯೊಂದಿಗೆ ಬೆರೆತಾಗ ಮಾತ್ರ, ಅದರ ನಿಜ ರುಚಿಯ ಅನುಭವವಾಗುವದು ಸಹಜ. ಕವಿ ಹೃದಯ, ಸೂಕ್ಷ್ಮ ಹಾಗೂ ಮಾರ್ದವವಿರುವುದರಿಂದಲೇ ಅದು ಕ್ರಿಯಾಶೀಲವಾಗಬಲ್ಲುದು; ಮೆದುತನವುಳ್ಳ ಸುಂದರ ಬಂಗಾರದ ಆಭರಣದ ಹಾಗೆ. ಸಮರ್ಪಕ ಹದದಲ್ಲಿ ಕಾಯಿಸಿದಾಗ, ಕಾದಾಗ ಅದು ವಿಶೇಷ, ಆಕರ್ಷಕ, ಮಾರ್ಮಿಕ, ಅರ್ಥಗ್ರಾಹ್ಯತೆಯನ್ನು ಹೊಂದುವ ಕ್ಷಮತೆಯನ್ನು ಮೂರ್ತಿಸುತ್ತದೆ. ಒಳ್ಳೆಯ ಮನಸ್ಸಿನ ಮಾಧ್ಯಮದಿಂದ ದಿಸೆ ಮೂಡಿದಾಗ, ಹೃದಯ ಸ್ರವಿಸುವ ಕಾವ್ಯ, ‘ಪರವಶತೆ’ಯ ಪರಿಯಲ್ಲಿ, ಲೀನವಾಗುತ್ತ ದ್ರವ್ಯವಾಗುತ್ತದೆ; ಶ್ರಾವ್ಯವಾಗುತ್ತದೆ!
‘ಯಮುನಾ ನದಿ ಎಂದಿನಂತೆ’, ಸುತ್ತಮುತ್ತಲಿನ, ಸಕಲ ಸಾಂದರ್ಭಿಕ ಹಿನ್ನೆಲೆಗಳ, ಈಗಾಗಲೇ ಅನುಭವಿಸಿದ ಆವಿಷ್ಕಾರದ ಕ್ಷಣವನ್ನೇ ಹೋಲುತ್ತಿರುವಾಗಿನ ಲಕ್ಷಣಗಳೆಲ್ಲ ಐಕ್ಯವಾಗಿ, ಪುನರಾವರ್ತನೆಯಾಗಬಲ್ಲ ಒಂದು ನೈಜತೆ, ಅಪರೂಪದ ಸ್ರಜನಶೀಲತೆಯಾಗುವ ದ್ರಷ್ಟಿಯಿಂದ ಮೂಡಿದ ಭರವಸೆಯ ಸ್ರಷ್ಟಿಯಾಗಿ, ‘ಭೂತ’ವನ್ನು ನೆನಪಿಸುತ್ತ, ‘ವರ್ತಮಾನ’ದ ಮನನ ಮಾಡುತ್ತ, ‘ಭವಿಷ್ಯ’ವನ್ನು ರೂಪಿಸುಬಲ್ಲ ಧನಾತ್ಮಕ ‘ವಿಶ್ವಾಸ’! ಇದು ಕವಿಮನದ ಪ್ರತಿಬಿಂಬ!
ಸರಳ, ಸುಂದರ, ಧ್ವನಿಪೂರ್ಣ ಕವನ.
ಸುಂದರ ಕವನ