ಹೀಗೆಯೇ ಕಾಲ ಕಳೆಯುವುದಂತೆ
ನಮಗೆ ತಿಳಿಯದಂತೆ!
ಯುವಕರು ಬಾನಿನ ಎತ್ತರ ಏರಿ
ಏನೋ ಮಾಡಿದೆವೆನ್ನುವರು
ಮುಪ್ಪಿನ ಮುದುಕರು ಮೂಲೆ ಸೇರಿ
ಗೊತ್ತಿದ್ದದ್ದೇ ಗೊಣಗುವರು
ಗಡಿಬಿಡಿಯಲ್ಲಿ ಅಡುಗೆ ಮಾಡಿ
ಡಬ್ಬಿಗಳಲ್ಲಿ ಒಯ್ಯುವರು
ಹೀಗೇ ದಿನಗಳು ಬಂದವು, ಹೋದವು
‘ರಿಟೈರಾಯಿತು’ ಅನ್ನುವರು
ತಲೆಗೆ ಬಳಿದರೂ ಕಾಲಾ ಬಣ್ಣ
ಕಾಲವಾಯಿತಣ್ಣ
ಅಳೆಯಲು,ತಿಳಿಯಲು,ಬೆಳೆಯಲು ಸಮಯ
ಸಾಲದಾಯಿತಣ್ಣ
ನಡೆನುಡಿಯಲ್ಲಿ ಅಡಿಗಡಿಗಡಿಗೆ
ಹಿಡಿತವಿರದೆ ಬಾಳಿ
ಅನುಭವವಿಲ್ಲದ ಅಡುಗೆ ಮಾಡಿದೆವು
ಉಣುವುದೆಂತು ಹೇಳಿ?
ಕಿಂಚಿತ್ ಸಮಯ ಉಳಿದಿದೆಯಂತೆ
‘ಬಾಳಲು’ – ‘ತಿಳಿದಂತೆ’
ಅನುಭವದಡುಗೆ ಅಟ್ಟಲು, ಉಣ್ಣಲು
ಬಡಿಸಲೂಬಹುದಂತೆ!
9 thoughts on “ಹೀಗೆಯೇ ಕಾಲ”
ಕಾಲ ನಿಲ್ಲುವುದಿಲ್ಲ
ಸೊಗಸಾದ ಕವಿತೆ ಸರ್.
ಸರಳವಾದ ಪದಗಳನ್ನು ಬಳಸಿಕೊಂಡು ಯಾಂತ್ರಿಕ ಜೀವನದಲ್ಲಿ ನಮ್ಮ ಸಮಯ ಹೇಗೆ ಸುಮ್ಮನೆ ವ್ಯಯವಾಗುವುದು,ಬದುಕು ನೀರಸವಾಗುವುದೆನ್ನುವುದನ್ನುಹೇಳಿರುವಿರಿ.ಇಷ್ಟವಾಯಿತು.
ಅಭಿವಂದನೆಗಳು ತಮಗೆ.❤️🙏
Nice
ಚಿಂತಾಮಣಿ ಕೊಡ್ಲೆಕೆರೆ ಅವರು ತುಂಬಾ ಅನುಭವಿಗಳು, ಅನುಭಾವಿಗಳು. ಅವರ ಶಬ್ದ ಜೋಡಣೆ ಛಂದ; ಅವು ಮೌಲ್ಯಯುತವಾದವು; ಮಾರ್ಮಿಕವಾದವು. ಇದು ನಿವೃತ್ತರಿಗೆ ನಿರ್ದೇಶನವೋ! ಮಾರ್ಗದರ್ಶನವವೋ!! ಸಂದೇಶವವೋ!!!ಅಥವಾ ಎಲ್ಲವೂ ಅನಿಸುತ್ತಿದೆ. ಅಭಿನಂದನೆಗಳು👌👌💐💐👍👍🙏🙏
ಅನುಭವದ ಅಡುಗೆಯ ಮಾಡಿ ಚೆನ್ನಾಗಿ ಬಡಿಸಿದ್ದೀರಿ , ಆದರೆ ಏನು ಮಾಡುವುದು,ಗರಿ ಗರಿ ದೋಸೆ,ಪಾನಿ ಪುರಿ ಚಪ್ಪರಿಸಿದ ಮನಕೆ ಒಪ್ಪುವದೆಂತು?ಇರಲಿ ಪ್ರಯತ್ನ ಮಾಡುವ.
ಬಾಯಿ ರುಚಿಗೆ ಷಡ್ರಸಗಳ ಸಮಾನತೆ ಇರಬೇಕು.
“ರಸವೆ ಜನನ
ವಿರಸ ಮರಣ
ಸಮ ರಸವೇ ಜೀವನ”
🙏🏼👏💐🙏🏼
ಕಾಲಾಯ ತಸ್ಮೈ ನಮಃ
ಕಾಲಿನ ಕಾಲಿಗೆ ನಮೋನಮಃ
‘ವರಕವಿ’ಯವರ ಪ್ರಭಾವವಿದೆ ಕವಿತೆಯಲ್ಲಿ.
ಬದುಕಿನ ‘ಯಾಂತ್ರಿಕತೆ’ಯ ಬಗ್ಗೆ ಓದುತ್ತಿದ್ದಂತೆ, ಇಂಗ್ಲಿಷ್ ಪೊಯೆಟ್ ಡಬ್ಲ್ಯೂ.ಹೆಚ್.ಡೇವಿಸ್, ೧೯೧೧ ರಲ್ಲಿ ಬರೆದ “Leisure’ ಕವಿತೆ ನೆನಪಾಯಿತು, ಯಾಕೆಂದರೆ, ಆ ಕವಿತೆ ನಮಗೆ S. S. L. C. ಯ ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿತ್ತು.
‘What’s this Life, full of Care
We have no time to Stand and Stare….”
‘ಕಾಲ’ ದ ಬುಡವನ್ನು ನೋಡಿದವರಿಲ್ಲ; ಕೊನೆಯನ್ನು ಮಾರ್ಗದರ್ಶಿಸಿದವರಿಲ್ಲ, ಯಾಕೆಂದರೆ, ಅದು ತರ್ಕದ ಆಯಾಮದ ಪರಿಮಾಣಕ್ಕೆ ದಕ್ಕದ್ದಲ್ಲ.
ಹೀಗಾಗಿ, ಬದುಕಿನ ಬಗೆಗೆ ಬರೆದಿದ್ದೆಲ್ಲ, ಅವರವರ ವೈಯಕ್ತಿಕ ಅನುಭವವೇ ಆಗಿರಬಹುದು, ಕಲ್ಪನೆಯೇ ಆಗಿರಬಹುದು, ಏನೇ ಆದರೂ, ಪ್ರತಿಯೊಂದೂ ಬದುಕಿನ ಅವಿಭಾಜ್ಯ ಅಂಗವೇ ಸರಿ!
ಜೀವನದಲ್ಲಿ ಧ್ಯೇಯವಿದ್ದರೆ ಗೇಯ; ಹೇಯವಿದ್ದರೆ ತ್ಯಾಜ್ಯ, ಕಾಲವಂತೂ ಒಂದು ನಿರ್ಲಿಪ್ತ ಅವ್ಯಯ!
ಈ ಕವಿತೆಯನ್ನು ನಾನು ಓದಿಕೊಂಡಿದ್ದು ಹೀಗೆ:
“ನಡೆನುಡಿಯಲ್ಲಿ ಅಡಿಗಡಿಗಡಿಗೆ
ಹಿಡಿತವಿರದೆ ಬಾಳಿ
ಅನುಭವದಡುಗೆ ಅಟ್ಟಲು, ಉಣ್ಣಲು
ಬಡಿಸಲೂಬಹುದಂತೆ
ಅನುಭವವಿಲ್ಲದ ಅಡುಗೆ ಮಾಡಿದೆವು
ಉಣುವುದೆಂತು ಹೇಳಿ?”
ಕಿಂಚಿತ್ ಸಮಯ ಉಳಿದಿದೆಯಂತೆ
‘ಬಾಳಲು’ – ‘ತಿಳಿದಂತೆ’