ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಬರವಣಿಗೆಯ ಕಸರತ್ತುಗಳು

ಕನ್ನಡದಲ್ಲಿ ಇತ್ತೀಚೆಗೆ ಬರವಣಿಗೆ ತುಂಬ ಅಗ್ಗವಾಗಿಬಿಟ್ಟಿದೆ. ಯಾರು ಬೇಕಾದರೂ ಲೇಖಕ/ಕಿಯರಾಗಬಹುದು. ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್, ಪ್ರತಿಲಿಪಿ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನ ಗಂಟೆಗೊಂದು ಕವಿತೆಯನ್ನೋ, ಬರಹವನ್ನೋ ಬರೆದು ಬಿಸಾಕುತ್ತಾರೆ. ಇಂತಹ ಸ್ವಯಂಘೋಷಿತ ಲೇಖಕ/ಕಿಯರು ಯಾವುದಾದರೊಂದು ಸಮುದಾಯ ಅಥವಾ ಒತ್ತಡ ಗುಂಪುಗಳ ಸಕ್ರಿಯ ಸದಸ್ಯರಾಗಿರುವುದರಿಂದ ಅವರ ಕವಿತೆ, ಕಥೆ ಮತ್ತು ಬರಹಗಳಿಗೆ ಲೈಕು, ಕಮೆಂಟು ಮತ್ತು ಶೇರ್ ಬಂದೇ ಬರುತ್ತವೆ. ಒಂದು ವೇಳೆ ಇದಾವುದೂ ಬರದಿದ್ದರೆ ಅಂತಹ ಜನರನ್ನು ಅನ್ ಫ್ರೆಂಡ್ ಮಾಡುವುದು, ಬ್ಲಾಕ್ ಮಾಡುವುದು ಇದ್ದೇ ಇರುತ್ತದೆ. ಹೀಗಾಗಿ ಇವರು ಅವರನ್ನು, ಅವರು ಇವರನ್ನು ಹಾಡಿ ಹೊಗಳುತ್ತಾರೆ. “ನೀ ನನಗಾದರೆ… ನಾ ನಿನಗೆ…” ಎಂಬ ಸಹಕಾರ ತತ್ವದ ಆಧಾರದ ಮೇಲೆ ಇವೆಲ್ಲ ನಡೆಯುತ್ತವೆ. ವಿಶೇಷವೆಂದರೆ ಸಾಹಿತ್ಯ ಲೋಕದಲ್ಲಿ ಇದು ತುಂಬ ಜೋರಾಗಿದೆ.
ಪ್ರಸ್ತುತ ಕನ್ನಡ ಸಾಹಿತ್ಯ ಲೋಕದ ಸ್ಥಿತಿ ಹೇಗಿದೆಯೆಂದರೆ ಓದುವವರಿಗಿಂತ ಬರೆಯುವವರು ಹೆಚ್ಚಾಗಿದ್ದಾರೆ! ಈಗ ಯಾರಾದರೊಬ್ಬರ ಕವಿತೆಯನ್ನು ಓದುವವರು ಕೂಡ ಕವಿ/ಕವಯತ್ರಿಯರೇ ಆಗಿರುತ್ತಾರೆ. ಒಬ್ಬ ಕವಿ ಮತ್ತೊಬ್ಬನಿಗೆ ಒಂದು ಕವಿತೆ ಕಳಿಸಿದರೆ, ಆ ಮತ್ತೊಬ್ಬ ಇವನಿಗೆ ಪ್ರತಿಯಾಗಿ ಒಂದು ಕವಿತೆಯನ್ನು ಕಳಿಸುತ್ತಾನೆ. ಇವನು ಅವನನ್ನು ಹೊಗಳುವುದು, ಅವನು ಇವನನ್ನು ಹೊಗಳುವುದು ಆರಂಭವಾಗುತ್ತದೆ. ಮುಂದೆ ಇದು ಪರಸ್ಪರರ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಬರೆಯುವುದರಲ್ಲಿ ಪರ್ಯವಸಾನವಾಗುತ್ತದೆ! ಈ ರೋಗ ಉದಯೋನ್ಮುಖ ಬರಹಗಾರರಲ್ಲಿ ತೀವ್ರವಾಗಿದೆ. ಉದಯೋನ್ಮುಖರೆಂದರೆ ಕೇವಲ ಅನನುಭವಿಗಳಾದ ಯುವಕ/ಯುವತಿಯರು ಮಾತ್ರವಲ್ಲ, ಮಧ್ಯ ವಯಸ್ಕ ಮತ್ತು ಅಪರ ವಯಸ್ಕರಾದ ಪುರುಷ/ಮಹಿಳಾ ಬರಹಗಾರರೂ ಇದರಲ್ಲಿ ಸೇರುತ್ತಾರೆ.
ಕನ್ನಡದ ತುಂಬ ಜನ ಹಿರಿಯ ಲೇಖಕ/ಕಿಯರು ಸಾಹಿತ್ಯದ ಗುಣಮಟ್ಟ ಕುಸಿಯಲು ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಖಂಡಿತ ಹುರುಳಿದೆ. ತಮ್ಮ ಶಿಷ್ಯರಾದ ಉದಯೋನ್ಮುಖರ ತಪ್ಪುಗಳನ್ನು ತಿದ್ದುವ, ಅವರ ಬರಹದ ವಸ್ತು, ಭಾಷೆ, ಶೈಲಿ ಮುಂತಾದವನ್ನು ಸರಿಪಡಿಸಿ, ಬೆಳೆಸಬೇಕಾದ ಹೊಣೆ ಈ ಹಿರಿಯರ ಮೇಲಿದೆ ಆದರೆ ಅವರು ಅಂತಹ ಒಳ್ಳೆಯ ಕೆಲಸಗಳನ್ನು ಖಂಡಿತ ಮಾಡುವುದಿಲ್ಲ ಬದಲಾಗಿ ಅವರ ತಪ್ಪುಗಳನ್ನು ತಿದ್ದುವ ಬದಲು ಅದೇ ಸರಿಯೆಂದು ಸಮರ್ಥಿಸಿಕೊಂಡು ದಾರಿ ತಪ್ಪಿಸುತ್ತಾರೆ. ಅವರಿಗೆ ಬೇಕಾಗಿರುವುದು ತಲೆ ತಗ್ಗಿಸಿ, ನಡು ಬಗ್ಗಿಸಿ ಅವರನ್ನು ಹಿಂಬಾಲಿಸುವ ಕುರಿಗಳೇ ಪರಂತು ಬುದ್ಧಿವಂತರಲ್ಲ!
ತಂದೆಯ ಹೆಸರಿನಲ್ಲಿ ಒಬ್ಬ, ಮಾವನ ಹೆಸರಿನಲ್ಲಿ ಇನ್ನೊಬ್ಬ, ಜಾತಿಯ ಹೆಸರಿನಲ್ಲಿ ಮತ್ತೊಬ್ಬ ಮತ್ತು ಹಣದ ಹೆಸರಿನಲ್ಲಿ ಮಗದೊಬ್ಬ ಕನ್ನಡ ಸಾಹಿತ್ಯ ಲೋಕದಲ್ಲಿ ಪಟ್ಟಭದ್ರ ಸ್ಥಾನ ಪಡೆದಿದ್ದಾರೆ. ಇವರೆಲ್ಲ ಖಂಡಿತ ದೊಡ್ಡ ಬರಹಗಾರರು ಆದರೆ ಅಷ್ಟೇ ಸಣ್ಣ ವ್ಯಕ್ತಿಗಳೂ ಹೌದು. ಕನ್ನಡದ ಮಹತ್ವದ ಲೇಖಕರೊಬ್ಬರ ಕೃತಿಯ ಕುರಿತು ಅರೆಬೆಂದ ಉದಯೋನ್ಮುಖ ಬರಹಗಾರನೊಬ್ಬ ಬರೆದ ಕಳಪೆ ಬರಹವನ್ನು ಇವರು ಬೆಂಬಲಿಸಿದರು. ಹಾಗೆ ಮಾಡುವ ಮೂಲಕ ತಾವೆಷ್ಟು ಸಣ್ಣವರು ಎಂಬುದನ್ನು ಸಾಬೀತು ಪಡಿಸಿದರು. ಯಾವೊಬ್ಬ ಲೇಖಕನ, ಯಾವೊಂದು ಕೃತಿಯೂ ಟೀಕಾತೀತವಲ್ಲ. ಪ್ರತಿಯೊಬ್ಬ ಓದುಗ ಅಥವಾ ಲೇಖಕನಿಗೂ ಯಾವುದೇ ಕೃತಿಯನ್ನು ಮೆಚ್ಚುವ, ಟೀಕಿಸುವ ಮತ್ತು ಅದನ್ನು ಬರಹ ಅಥವಾ ಮಾತಿನ ಮೂಲಕ ಅಭಿವ್ಯಕ್ತಿಸುವ ಸ್ವಾತಂತ್ರ್ಯವಿದೆ. ಆದರೆ ಸಮಕಾಲೀನ ಲೇಖಕರೊಬ್ಬರ ಒಳ್ಳೆಯ ಕೃತಿಯೊಂದನ್ನು ಬೇಕೆಂದೇ ಹತ್ತಿಕ್ಕಲು ನಡೆಸುವ ಇಂತಹ ಪ್ರಯತ್ನಗಳನ್ನು ಕುತಂತ್ರವೆಂದು ಕರೆಯಲಾಗುತ್ತದೆಯೇ ಪರಂತು ವಿಮರ್ಶೆಯೆಂದಲ್ಲ! ಇಂತಹ ಕುತಂತ್ರಿಗಳಿಗೆ ಬೆಂಗಳೂರಿನ ಪಟ್ಟಭದ್ರರು ಪ್ರಾಯೋಜಕರಾದರೆ, ‘ಮಜಾವಾಣಿ’ ಪತ್ರಿಕೆ ಅದಕ್ಕೆ ತಕ್ಕ ವೇದಿಕೆ ಒದಗಿಸಿದೆ.
ಒಬ್ಬೊಬ್ಬ ಅಭಿಮಾನಿಗೆ ಒಬ್ಬೊಬ್ಬ ನಟ ಅಥವಾ ನಟಿ ಅಚ್ಚುಮೆಚ್ಚಿನವರಾಗಿರುತ್ತಾರೆ. ಅದೇ ರೀತಿ ಕನ್ನಡ ಸಾಹಿತ್ಯ ಲೋಕದಲ್ಲಿರುವ ಬೆರಳೆಣಿಕೆಯಷ್ಟು ವಿಮರ್ಶಕರು ಒಬ್ಬೊಬ್ಬ ಅಥವಾ ಅಪರೂಪಕ್ಕೆ ಇಬ್ಬರು ಹೆಚ್ಚೆಂದರೆ ಮೂವರನ್ನು ಗುತ್ತಿಗೆ ಹಿಡಿದು ಬಿಟ್ಟಿರುತ್ತಾರೆ. ತಮ್ಮ ಪ್ರೀತಿಪಾತ್ರರು ಏನೇ ಬರೆದರೂ, ಹೇಗೇ ಬರೆದರೂ ನಡೆಯುತ್ತದೆ. ಅವರನ್ನು ಪ್ರತಿಷ್ಠಾಪಿಸಲು ಈ ವಿಮರ್ಶಕರು ಪಣ ತೊಟ್ಟಿರುವುದರಿಂದ, ಬೇರೆ ಲೇಖಕರು ಎಷ್ಟೇ ಚೆನ್ನಾಗಿ ಬರೆದರೂ ಅದನ್ನು ಗಮನಿಸುವುದಿಲ್ಲ. ಕೆಲವರು ತಮಗಾಗದ ಲೇಖಕರ ಕೃತಿಗಳನ್ನು ವಿರೋಧಿಸಿದರೆ, ಇನ್ನೂ ಕೆಲವರು ತಮಗಾಗದವರ ಕೃತಿಗಳ ಕುರಿತು ತುಟಿಪಿಟಕ್ ಎನ್ನದೇ ಜಾಣ ಮೌನ ವಹಿಸುತ್ತಾರೆ.
ಬೆಂಗಳೂರಿನಲ್ಲಿ ಕಾಟರಾಜು ಎಂಬ ವಿಮರ್ಶಕನೊಬ್ಬನಿದ್ದಾನೆ. ಈ ಮಹಾಶಯನಿಗೆ ಲೇಖಕಿಯರೆಂದರೆ ಇನ್ನಿಲ್ಲದಷ್ಟು ಪ್ರೀತಿ, ವಿಶ್ವಾಸ. ಲೇಖಕಿಯರು ಕೇಳಿದರೂ, ಕೇಳದಿದ್ದರೂ ಅವರ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದುಕೊಡುತ್ತಾನೆ. ವಿಶೇಷವೆಂದರೆ ಇವನು ತುಂಬ ಪ್ರತಿಭಾವಂತ. ಒಳ್ಳೆಯ ವಿಮರ್ಶಕ ಮತ್ತು ಅನುವಾದಕ ಆದರೆ ಮಹಿಳೆಯರ ಕೃತಿಗಳನ್ನು ಕಂಡರೆ ಎಲ್ಲ ಮಾನದಂಡಗಳನ್ನು ಗಾಳಿಗೆ ತೂರಿ ಕೇಕೆ ಹಾಕಿ ಬರೆಯುತ್ತಾನೆ. ಸ್ತ್ರೀ ವ್ಯಾಮೋಹವೇ ಅಂತಹುದು ಅದು ಯಾರನ್ನೂ ಬಿಟ್ಟಿಲ್ಲ, ಇನ್ನು ಹುಲು ಮಾನವನಾದ ಕಾಟರಾಜು ಯಾವ ಲೆಕ್ಕ?
ಕನ್ನಡದ ಮತ್ತೊಬ್ಬ ಸ್ವಯಂಘೋಷಿತ ವಿಮರ್ಶಕ ಮತ್ತು ಚಿಂತಕ ಸತ್ಯರಾಜು ಇವನು ಕಾಟರಾಜುವಿನ ಕಿರಿಯ ಸೋದರನಿದ್ದಂತೆ. ಪ್ರತಿಭಾವಂತನಾದರೂ ತುಂಬ ಪ್ರದರ್ಶನ ಪ್ರಿಯ ಮತ್ತು ಪ್ರಚಾರ ಪ್ರಿಯನಾದ ಇವನಿಗೆ ರಾಷ್ಟ್ರಕವಿ ಕುವೆಂಪು ಅವರೂ ಒಂದೇ ಭದ್ರಾವತಿಯ ನಾರಾಯಣ ಭಟ್ಟನೂ ಒಂದೇ! ಹಿರಿಯ ಕಥೆಗಾರ್ತಿ ವೈದೇಹಿಯವರೂ ಒಂದೇ ಮೈಸೂರಿನ ಶಾಂತಮ್ಮನೂ ಒಂದೇ! ಕನ್ನಡದ ಮಹತ್ವದ ಕವಿ ಗೋಪಾಲಕೃಷ್ಣ ಅಡಿಗರೂ ಒಂದೇ ರಾಯಚೂರಿನ ಉದಯೋನ್ಮುಖ ಕವಿ ಬುಡಣಸಾಬನೂ ಒಂದೇ! ಕನ್ನಡದ ಖ್ಯಾತ ಕವಿ ಕೆ. ವಿ. ತಿರುಮಲೇಶರೂ ಒಂದೇ ಚಾಮರಾಜಪೇಟೆಯ ಉದಯೋನ್ಮುಖ ಕವಿ ಮುಕುಂದನೂ ಒಂದೇ! ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಾನೆ. ಇವನು ಬಾಯಿಗೆ ಬಂದಂತೆ ಹೊಗಳಿ ಬರೆಯುವುದೇ ವಿಮರ್ಶೆ ಎಂದು ತಿಳಿದಂತಿದೆ. ಪೋಲಿ ಕವಿಯೊಬ್ಬನನ್ನು ಅಡಿಗರ ಉತ್ತರಾಧಿಕಾರಿ ಎಂದು ಕರೆಯುವ ಇವನ ಮೂರ್ಖತನಕ್ಕೆ ಏನು ತಾನೇ ಹೇಳಲು ಸಾಧ್ಯ? ಸದ್ಯ ತುಂಬ ಚಾಲ್ತಿಯಲ್ಲಿರುವ ಇವನು ಎಲ್ಲರಿಗೂ ಬೇಕಾದ ವ್ಯಕ್ತಿ. ಅವನನ್ನು ಎದುರು ಹಾಕಿಕೊಂಡ ಉದಯೋನ್ಮುಖರನ್ನು ಹತ್ತಿಕ್ಕುವ ಕಲೆಯೂ ಸಹ ಚೆನ್ನಾಗಿ ಸಿದ್ಧಿಸಿದೆ. ಒಟ್ಟಿನಲ್ಲಿ ಸತ್ಯರಾಜು ಅಂದರಿಕಿ ಮಂಚಿವಾಡು!
ಕಲ್ಯಾಣ ಕರ್ನಾಟಕದ ಮಾಜಿ ಕಥೆಗಾರನೊಬ್ಬ ಕಳಪೆಯಾಗಿ ಬರೆಯುವ ಉದಯೋನ್ಮುಖರ ಗುರು ಮತ್ತು ಪೋಷಕನಾಗಿದ್ದಾನೆ. ಲಿಂಗ, ಜಾತಿ ಮತ್ತು ಪ್ರದೇಶದ ಆಧಾರದ ಮೇಲೆ ಉದಯೋನ್ಮುಖರಿಗೆ ಮಣೆ ಹಾಕುತ್ತಾನೆ. ಉದಯೋನ್ಮುಖರ ಎಂತಹ ಕಳಪೆ ಕೃತಿಗಳನ್ನೂ ಒಳ್ಳೆಯ ಕೃತಿಗಳೆಂದು ಬಿಂಬಿಸಲು ತಿಣುಕಾಡುತ್ತಾನೆ. ಅಶ್ಲೀಲವಾಗಿ ಬರೆಯುವ ಮಹಿಳೆಯರೆಂದರೆ ಇವನಿಗೆ ಪಂಚಪ್ರಾಣ! ಸ್ವಾತಂತ್ರ್ಯಕ್ಕೂ, ಸ್ವೇಚ್ಛಾಚಾರಕ್ಕೂ ವ್ಯತ್ಯಾಸ ಗೊತ್ತಿಲ್ಲದ, ಶೃಂಗಾರಕ್ಕೂ, ಅಶ್ಲೀಲಕ್ಕೂ ವ್ಯತ್ಯಾಸ ಗೊತ್ತಿಲ್ಲದ ಬಿ – ಗ್ರೇಡ್ ಲೇಖಕಿಯರ ಅಶ್ಲೀಲ ಕವನಗಳನ್ನು ಶೃಂಗಾರ ಗೀತೆಗಳೆಂದು ಕರೆದು ‘ಶೃಂಗಾರ’ ಎಂಬ ಪದದ ಅರ್ಥವನ್ನೇ ಮರು ವ್ಯಾಖ್ಯಾನಿಸುವ ಮೂರ್ಖತನ ಮಾಡಿದ್ದಾನೆ. ಶೃಂಗಾರ ದೇವತೆ ಇವನ ತಪ್ಪನ್ನು ಮನ್ನಿಸಲಿ!
ಇತ್ತೀಚೆಗೆ ಪತ್ರಕರ್ತರೆಲ್ಲ ಸಾಹಿತಿಗಳಾಗಿ ಬದಲಾಗಿದ್ದಾರೆ. ಅವರೇನು ಬರೆದರೂ, ತಮ್ಮ ತುತ್ತೂರಿ ಊದಿಕೊಳ್ಳಲು ಅವರ ಪತ್ರಿಕೆ ಮತ್ತು ಪ್ರಕಟಣೆಗಾಗಿ ಹಾತೊರೆಯುವ ಆಸೆಬುರುಕ ಲೇಖಕ/ಕಿಯರು ಅವರ ಹಿಂದೆ ಇದ್ದೇ ಇರುತ್ತಾರೆ. ಒಬ್ಬ ಪತ್ರಕರ್ತ ಇತ್ತೀಚೆಗೆ ಒಂದು ಬೃಹತ್ ಕಾದಂಬರಿ ಬರೆದಿದ್ದಾನೆ. ಅದು ತುಂಬ ದಪ್ಪ ಪುಸ್ತಕ. ಅದು ಗಾತ್ರದಲ್ಲಿ ದೊಡ್ಡದೇ ಹೊರತು ಸತ್ವದಲ್ಲಲ್ಲ! ತೀರ ತೆಳುವಾದ ಕಥಾವಸ್ತು, ಅತಿಯಾದ ವಿವರಗಳು, ಶಿಥಿಲವಾದ ಬಂಧ, ಸಾಧಾರಣ ಭಾಷಾ ಶೈಲಿ ಮತ್ತು ಅಶ್ಲೀಲತೆಯಿಂದ ನರಳುತ್ತದೆ. ದುರ್ದೈವವಶಾತ್ ಬೆಂಗಳೂರಿನ ವಿಮರ್ಶಕ ಕಾಟರಾಜು ಇದನ್ನು ಅದ್ಭುತ ಕಾದಂಬರಿಯೆಂದು ಕರೆದಿದ್ದಾನೆ ಎಂದು ಲೇಖಕ ಹೇಳಿಕೊಂಡಿದ್ದಾನೆ. ಇದು ಎಲ್ಲ ಭಾಷೆಗಳಿಗೂ ಅನುವಾದವಾಗಬೇಕೆಂದು ಸಹ ಹೇಳಿದ್ದಾನಂತೆ. ಕನ್ನಡದ ಮರ್ಯಾದೆ ಕಳೆಯಲು ಅದೊಂದು ಬಾಕಿಯಿದೆಯಷ್ಟೇ!
ಪುಸ್ತಕಗಳ ಮಾರ್ಕೆಟಿಂಗ್ ಈಗ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಳಪೆ ಕೃತಿಗಳನ್ನು ಉತ್ತಮ ಕೃತಿಗಳೆಂದೂ, ಉತ್ತಮ ಕೃತಿಗಳನ್ನು ಕಳಪೆ ಕೃತಿಗಳೆಂದೂ ಬಿಂಬಿಸುವ ವ್ಯವಸ್ಥಿತ ಯತ್ನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೆಲವು ಮಿನಿಮಮ್ ಗ್ಯಾರಂಟಿ ಪ್ರಕಾಶಕರಿದ್ದಾರೆ. ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಪುಸ್ತಕ ಹೊರ ತರುತ್ತಾರೆ. ಕೆಲವರು ಅನುವಾದಿತ ಕೃತಿಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸುತ್ತಾರೆ. ಒಂದು ಬಾರಿ ಓದಿ ಪಕ್ಕಕ್ಕಿಡಬಹುದಾದ ಸಾಧಾರಣ ಪುಸ್ತಕಗಳ ಕುರಿತು ಅಮೋಘ, ಅನನ್ಯ, ಅದ್ಭುತ ಎಂದೂ ಪ್ರಚಾರ ಮಾಡುತ್ತಾರೆ. ಸಾಧಾರಣ ಓದುಗರಿಗೆ ಕ್ಷಣಿಕ ಮನರಂಜನೆ ಕೊಡುವ ಇವು ಒಂದು ಮಟ್ಟಕ್ಕಿಂತ ಮೇಲೇರುವುದಿಲ್ಲ. ಗಜಾನನ ಶರ್ಮಾ, ವಸುಧೇಂದ್ರ, ರವಿ ಬೆಳಗೆರೆ, ಜೋಗಿ ಸೇರಿದಂತೆ ಇತ್ತೀಚೆಗೆ ಬರೆಯುತ್ತಿರುವ ಜನಪ್ರಿಯ ಲೇಖಕರೆಲ್ಲ ಇಂತಹ ಪ್ರಕಾಶಕರ ಪಾಲಿಗೆ ವಿಭೂತಿ ಪುರುಷರಿದ್ದಂತೆ! ಜನಪ್ರಿಯ ಕೃತಿಯೊಂದು ಕೆಲವು ಮರು ಮುದ್ರಣ ಕಂಡರೆ ಅದನ್ನು ಕ್ಲಾಸಿಕ್ ಎಂಬಂತೆ ಬಿಂಬಿಸುತ್ತಾರೆ. ಜನಪ್ರಿಯ ಮತ್ತು ಕ್ಲಾಸಿಕ್ ಕೃತಿಗಳ ನಡುವಿರುವ ವ್ಯತ್ಯಾಸ ಗೊತ್ತಿಲ್ಲದ ಮೂರ್ಖರ ಬಗ್ಗೆ ಇದಕ್ಕಿಂತ ಹೆಚ್ಚು ಏನು ಹೇಳಬಹುದು?
ಬೆಂಗಳೂರಿನಲ್ಲಿ ಒಬ್ಬ ಲೇಖಕ ಕಂ ಪ್ರಕಾಶಕನಿದ್ದಾನೆ. ಆರಂಭದಲ್ಲಿ ಇವನ ಪುಸ್ತಕ ಯಾರೂ ಪ್ರಕಟಣೆಗೆ ತೆಗೆದುಕೊಳ್ಳದ್ದರಿಂದ ಪ್ರಕಾಶಕನಾದ. ಈಗ ಲೇಖಕ ಮತ್ತು ಪ್ರಕಾಶಕನಾಗಿ ಸಾಕಷ್ಟು ಹೆಸರು ಮಾಡಿದ್ದಾನೆ. ಇವನ ಬರವಣಿಗೆಗಿಂತ ಅಬ್ಬರವೇ ಹೆಚ್ಚು! ತನಗಿಂತ ಚೆನ್ನಾಗಿ ಬರೆಯುವ ಯಾವ ಲೇಖಕರ ಪುಸ್ತಕಗಳನ್ನೂ ಇವನು ಪ್ರಕಟಿಸುವುದಿಲ್ಲ. ಅಂತಹವರನ್ನು ಕಂಡರೆ ಅವನಿಗೆ ಆಗುವುದಿಲ್ಲ. ದ್ವಿತೀಯ ದರ್ಜೆಯ ಪುಸ್ತಕಗಳ ಮಾರ್ಕೆಟಿಂಗ್ ಹೇಗೆ ಮಾಡಬಹುದು ಎಂದೇ ಇವನೊಂದು ಪುಸ್ತಕ ಬರೆಯಬಹುದು.
ಒಬ್ಬ ವ್ಯಕ್ತಿ ಲೇಖಕನಾಗಲು ಅವನಲ್ಲಿ ಇನ್ನರ್ ಆ್ಯಪ್ ಒಂದು ಇರಬೇಕಾಗುತ್ತದೆ. ಸಹಜ ಪ್ರತಿಭೆ, ಓದು, ಓಡಾಟ, ಒಡನಾಟದಿಂದ ಲಭಿಸಿದ ಜ್ಞಾನ, ಕಲ್ಪನಾ ಶಕ್ತಿ, ಭಾಷೆಯ ಮೇಲಿನ ಹಿಡಿತ ಹಾಗೂ ಪ್ರಾಮಾಣಿಕ ಅನುಭವವನ್ನು ಬರಹದಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯವಿದ್ದವನು ಮಾತ್ರ ಲೇಖಕನಾಗಲು ಸಾಧ್ಯ. ಬರವಣಿಗೆಯೆಂಬುದು ಸಹಜವಾಗಿ ಅರಳುವ ಹೂವಿನಂತಿರಬೇಕು, ಇಲ್ಲದಿದ್ದರೆ ಅದು ಬೌದ್ಧಿಕ ಕಸರತ್ತಿನಂತಾಗುತ್ತದೆ.
ಪ್ರಾಜ್ಞ ಓದುಗರಿಗೆ ತುಂಬ ವಿಷಾದ ಉಂಟು ಮಾಡಿದ ಸಂಗತಿಯೆಂದರೆ ಇತ್ತೀಚೆಗೆ ‘ಕಥೆ ಬರೆಯುವುದು ಹೇಗೆ?’ ಎಂಬುದರ ಕುರಿತು ಜನಪ್ರಿಯ ಲೇಖಕನೊಬ್ಬ ಗೈಡು ಬರೆದಿರುವುದು! ಶಾಲಾ – ಕಾಲೇಜು ಪರೀಕ್ಷೆ ಪಾಸಾಗಲು ಗೈಡುಗಳಿದ್ದವು. ಈಗ ಕಥೆ ಬರೆಯಲು ಗೈಡು ಬಂದಿದೆ. ಮುಂದೆ ‘ಕವಿತೆ ಬರೆಯುವುದು ಹೇಗೆ?’, ‘ಕಾದಂಬರಿ ಬರೆಯುವುದು ಹೇಗೆ?’ ಎಂಬ ಗೈಡುಗಳೂ ಬರಬಹುದು! ಕರ್ನಾಟಕದಲ್ಲಿ ಇಂತಹ ಗೈಡುಗಳನ್ನು ಓದಿ ಬರೆಯಲು ಪ್ರಯತ್ನಿಸುವ ಪ್ರತಿಭಾ ದರಿದ್ರರಿಗೇನೂ ಕೊರತೆಯಿಲ್ಲ ಅದೇ ಕನ್ನಡ ಸಾಹಿತ್ಯ ಲೋಕದ ಸದ್ಯದ ದುರಂತ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಬರವಣಿಗೆಯ ಕಸರತ್ತುಗಳು”

  1. ವಿಠ್ಠಲ ಶ್ರೀನಿವಾಸ ಕಟ್ಟಿ.

    ಕಲಬುರಗಿಯ (ಕು)ಖ್ಯಾತ ವಿಮರ್ಶಕರೊಬ್ಬರು ವಿಮರ್ಶೆಯ ಬಗ್ಗೆ ಮಾತನಾಡುತ್ತ ಬರವಣಿಗೆಯ ಜತೆಗೆ ತಾವು ಲೇಖಕರ ಅಭ್ಯಾಸ, ದುರಭ್ಯಾಸ, ಅವರ ಜಾತಿಯನ್ನೂ ವಿಮರ್ಶಿಸುತ್ತೇವೆಂದು ಹೇಳಿದ್ದರು. ಅಂದರೆ ಬರವಣಿಗೆಯ ಬಗೆಗಿನ ಅವರ ವಿಮರ್ಶೆಯ ತಿರುಳು ಹೇಗಿರಬಹುದೆಂದು ಊಹಿಸಬಹುದು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter