ದುಸುಬುಸನೆ ಉಸಿರು ಬಿಡುತ್ತಾ ಮನೆಯೊಳಗೆ ಹೊಕ್ಕ ಅಪ್ಪುವಿಗೆ ತನ್ನ ಮೈಯ ಸೂಕ್ಷ್ಮರಂಧ್ರಗಳಿಂದ ನೆತ್ತರು ಕುದಿದು ಹೊರಬಂದಂತೆ ಭಾಸವಾಗಿ ಧಬ್ಬೆಂದು ಚಾಪೆಯ ಮೇಲೆ ಬಿದ್ದುಕೊಂಡ.
ಹೌದೇ? ನಾನು ಕಂಡದ್ದು ನಿಜವೇ? ಬಾಬುವಿನ ಮನೆಯ ಹಿಂದಿನ ಬಿದಿರುಮೆಳೆಯ ಬುಡದಲ್ಲಿ, ಶರೀರ ಹಿಂಡಿ ಹಿಪ್ಪೆಯಾಗಿ, ಮೂಳೆಗಳನ್ನೆಲ್ಲ ಚರ್ಮದ ಚೀಲವೊಂದರಲ್ಲಿ ಕಟ್ಟಿ ಬಿಸಾಡಿದಂತೆ ಕಂಡ ಎಳೆಯ ಮಗುವಿನ ಹೆಣ!
“ಅಮ್ಮಾ”
ಅದೆಷ್ಟೋ ಗಂಟೆಗಳ ಬಳಿಕ ಕಣ್ಣುಗಳನ್ನು ತೆರೆದಾಗ ತಲೆ ಅಮ್ಮನ ಮಡಿಲಲ್ಲಿ.
“ನಾನು ನೋಡಿದೆ ಅಮ್ಮಾ. ಪುಟ್ಟ ಮಗು. ಪಾಪ”
“ಹೌದು ಮಗಾ. ನಿನ್ನಪ್ಪನೂ ನೋಡಿ ಬಂದ್ರು”
ಅಮ್ಮನು ತನ್ನಂತೆ ಉದ್ವೇಗಗೊಂಡಿಲ್ಲವೇಕೆ?
“ತುಂಬಾ ಜನ ಇದ್ದರಾ ಅಮ್ಮಾ?”
‘ಹೂಂ. ಬಾಬುವಿನ ತಮ್ಮ ತಂಗಿಯರು ಜೋರಾಗಿ ಅಳ್ತಿದ್ರು. ನೆರೆಹೊರೆಯವರೆಲ್ಲ ಅವರನ್ನು ಸಮಾಧಾನಪಡಿಸ್ತಿದ್ರು. ಸಂಜೀವಣ್ಣ ಮಂಕಾಗಿ ಕೂತಿದ್ದ”
“ಅಮ್ಮಾ ಅದು ಯಾರ ಮಗು?”
ಅವಳಿಗೆ ಉತ್ತರಿಸಲು ಇಷ್ಟವಿಲ್ಲದಂತೆ ಕಂಡಿತು.
“ನೋಡು ಮಗಾ. ನೀನಿಲ್ಲೇ ಆಡಿಕೊಂಡಿರು. ನಾನೊಮ್ಮೆ ಹೋಗಿ ನೋಡ್ಕೊಂಡು ಬರ್ತೇನೆ. ಬರುವಾಗ ಬಾಬುವನ್ನೂ ಕರ್ಕೊಂಡು ಬರ್ತೇನೆ”
ಒಳ್ಳೆಯದಾಯಿತು. ಬಾಬು ಇಲ್ಲಿಗೆ ಬಂದರೆ ವಿಷಯಗಳನ್ನು ಕೇಳಿ ತಿಳಿದುಕೊಳ್ಳಬಹುದು. ನಿನ್ನಮ್ಮನನ್ನು ಪೋಲೀಸರು ಹಿಡಿದುಕೊಂಡು ಹೋಗುವರೇ ಎಂದು ಕೇಳಿದರೆ ಅವನಿಗೆ ಬೇಸರವಾಗದೇ? ಅಪ್ಪುವಿನ ಮನಸ್ಸು ತಿಣುಕಾಡಿತು. ಅಲ್ಲ ಅವಳು ಅಂಥವಳಲ್ಲ. ಸಂಜೀವಣ್ಣನಿಗಾದರೆ ಸ್ವಲ್ಪ ದುರ್ಬುದ್ಧಿಯುಂಟು. ಮನೆಗೆ ಬರುವ ಬೆಕ್ಕುಗಳ ತಲೆಗೆ ಹೊಡೆದು ಕೊಲ್ಲುತ್ತಾನೆ. ನಾಯಿಗಳಿಗೆ ವಿಷ ಹಾಕುತ್ತಾನೆ. ಗದ್ದೆಗೆ ಇಳಿಯುವ ಆಡುಗಳ ಕಾಲು ಮುರಿಯುತ್ತಾನೆ. ದನಗಳನ್ನು ಓಡಿಸಿ ಹಳ್ಳಕ್ಕೆ ಬೀಳಿಸುತ್ತಾನೆ ಅಥವಾ ಕಟುಕರನ್ನು ಕರೆದು ಗುಟ್ಟಾಗಿ ಕಸಾಯಿಖಾನೆಗೆ ಸಾಗಿಸುತ್ತಾನೆ. ಆದರೆ ಅವನ ಹೆಂಡತಿ ಒಳ್ಳೆಯವಳು. ಒಂದುದಿನ ನಾನು ‘ರಾಧಕ್ಕ’ ಎಂದು ಕರೆದಾಗ ಅವಳು “ಅಯ್ಯೋ ಹುಚ್ಚ! ರಾಧತ್ತೆ ಅನ್ನು. ನನ್ನ ಮಗಳನ್ನು ನಿಂಗೆ ಕೊಟ್ಟು ಮದುವೆ ಮಾಡಿಸ್ತೇನೆ” ಎನ್ನುತ್ತಾ ನನ್ನ ಕೈಗೆ ದಾಳಿಂಬೆಯನ್ನು ಕೊಟ್ಟಾಗ ನನಗೆ ಖುಷಿಯಾಗಿ “ಆಗಲತ್ತೇ” ಎಂದಿದ್ದೆ.
ಹೊರಗಿನಿಂದ ಪಾದಸಪ್ಪಳ ಹತ್ತಿರವಾಗತೊಡಗಿತು. ಕಿಟಿಕಿಯಿಂದ ಇಣುಕಿ ನೋಡಿದರೆ ಬಾಬು. ಬಾಡಿದ ಮುಖ. ಕಂದಿದ ಗಲ್ಲ.
“ಬಾಬೂ ಆಡುವ ಬಾ”
“ಹೂಂ”
“ಕುಟ್ಟ, ಅಪ್ಪಿ, ಉಣ್ಣಿ, ನಂದು, ಅಂಬಿಳಿ ಇವರೆಲ್ಲ ಯಾಕೆ ಬರಲಿಲ್ಲ”
“ನನ್ನ ಜೊತೆ ಆಡಬೇಡಿ ಎಂದು ಅವರ ತಂದೆತಾಯಿ ಹೇಳಿದ್ದಾರಂತೆ”
“ಓಹ್! ಬೇಜಾರಲ್ವೇನೋ ಬಾಬು?”
“ಹೌದು”
“ಹಾಗಿದ್ರೆ ಆಡೋದು ಬೇಡ”
“ಸರಿ”
“ಬಾಬು, ನಿಮ್ಮ ಮನೆಯ ಹಿಂದೆ ಆ ಮಗುವಿನ ಹೆಣ ಎಲ್ಲಿಂದ ಬಂತು?”
“ನಂಗೊತ್ತಿಲ್ಲಾ” ಎನ್ನುತ್ತಿದ್ದಂತೆ ಬಾಬುವಿಗೆ ದುಃಖ ಒತ್ತರಿಸಿ ಬಂದು ಬಿಕ್ಕಿದ. ಮುಖವನ್ನು ತುಸು ಮೇಲೆತ್ತಿ ನೋಡಿ ಅಳತೊಡಗಿದ. ಅದನ್ನು ಕಂಡು ಅಪ್ಪುವಿಗೆ ಸಂಕಟವಾಗಿ ಅವನ ಕೈಹಿಡಿದುಕೊಂಡ. ಯಾಕೆ ಹೀಗಾಯಿತು? ಕಳೆದ ದಿನಗಳಲ್ಲಿ ಎಷ್ಟು ಸಂತಸದಿಂದಿದ್ದೆವು!
ಎಂದಿನಂತೆ ಅವರಿಬ್ಬರೂ ಜೊತೆಯಾಗಿ ಶಾಲೆಗೆ ಹೊರಟಿದ್ದರು. ಹಾದಿಯ ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದ ಮಾವಿನಹಣ್ಣು, ಕುಂಟಲಹಣ್ಣು ಮತ್ತು ಹುಣಸೆಬೀಜಗಳು ಅವರನ್ನು ಮುಂದಕ್ಕೆ ಹೋಗಲು ಬಿಡಲಿಲ್ಲ. ಇಬ್ಬರೂ ಅಷ್ಟಿಷ್ಟು ಆರಿಸಿ ಚೀಲದೊಳಗೆ ತುಂಬುತ್ತಿದ್ದಂತೆ ಬಾಬು ನಿಧಾನವಾಗಿ ತನ್ನ ಚೀಲದೊಳಗೆ ಕೈತೂರಿಸಿ ಯಾವುದೋ ವಸ್ತುವೊಂದನ್ನು ಹೊರತೆಗೆದ “ಅಪ್ಪೂ ಇಲ್ನೋಡು”
ಅರೆ! ಪಿಸ್ತೂಲು.
“ಕರುಣಾಕರ ಮಾವ ತಂದುಕೊಟ್ಟದ್ದು.”
“ಅವನು ಯಾರು?”
“ನನ್ನ ಸ್ವಂತ ಮಾವನಲ್ಲ. ಅಮ್ಮ ಬೀಡಿಕಟ್ಟ ತಗೊಂಡು ಹೋಗ್ತಾಳಲ್ಲ, ಅಲ್ಲಿನ ಜನ. ಒಳ್ಳೆಯ ಮನುಷ್ಯ. ಅವನು ಮನೆಗೆ ಬರುವವಾಗ ನಂಗೆ ಮಿಠಾಯಿ, ತಂಪು ಕನ್ನಡಕ, ರೊಂಯೋ ರೊಂಯೋ ಕಾರು ತಂದುಕೊಡ್ತಾನೆ. ನಾನೆಂದರೆ ಭಾರೀ ಪ್ರೀತಿ”
ಅಪ್ಪುವಿನ ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು. ಬಾಬುವಿನ ಮನೆಯ ಪರಿಸ್ಥಿತಿ ನಮಗಿಂತಲೂ ಕಡೆ. ಆದರೂ ಎಂತೆಂಥ ವಸ್ತುಗಳಿವೆ ಅವನಲ್ಲಿ!
ಅಮ್ಮ ಗುಸುಗುಸು ಮಾತಾಡುತ್ತಿದ್ದದು ನೆನಪಾಯಿತು “ರಾಧೆಯ ಬಳಿ ತುಂಬಾ ಚಿನ್ನವಿದೆ. ಬೆಂಡೋಲೆ ಮತ್ತು ಚಿತ್ರಕೆತ್ತಿದ ಬಳೆ. ಪದಕ ಪೋಣಿಸಿದ ಹಾರವನ್ನು ನೋಡಬೇಕು! ಕಡಗವನ್ನು ಕರಗಿಸಿ ಹೊಸ ನಮೂನೆಯಲ್ಲಿ ಮಾಡಿಸ್ತಾಳಂತೆ”
ಅಪ್ಪ ಹೇಳಿದ್ದರು “ಸಂಜೀವನಿಗೆ ದುಡ್ಡಿಗೇನು ಕೊರತೆಯಿದೆ? ಬಾಬುವಿನ ನಂತರ ಹುಟ್ಟಿದ ಇಬ್ಬರು ಮಕ್ಕಳಿಗೂ ಬುದ್ಧಿಮಾಂದ್ಯ. ಎಂಡೋಸಲ್ಫಾನಿನ ಹೆಸರು ಹೇಳಿಕೊಂಡು ಸರಕಾರದಿಂದ ಸಾಕಷ್ಟು ಹಣ ಬಾಚ್ತಾನೆ. ಬೇರೆ ವೈವಾಟುಗಳೂ ಇವೆ”
ಅಂದರೆ ಅವರ ಬಳಿ ಹಣವಿದೆ. ನಮ್ಮಲ್ಲಿ ಮಾತ್ರ ಇಲ್ಲ.
ಅಪ್ಪು ನಿಂತಲ್ಲೇ ಸೆಟೆದ. ತನ್ನ ಚೀಲದೊಳಗೆ ಕೈಹಾಕಿ ಗಿರಿಗಿಟ್ಟಿಯನ್ನು ಹೊರತೆಗೆದ. ಬಾಬು ಆಸೆಗಣ್ಣಿನಿಂದ ನೋಡುತ್ತಾ “ಏ… ನಂಗೆ ಕೊಡ” ಎನ್ನುತ್ತಾ ಕೈಯನ್ನು ಮುಂದೆ ಮಾಡಿದ.
“ಊಂ. ಇದು ನಂದು”
ಬಾಬು ಎಷ್ಟೇ ಗೋಗರೆದರೂ ಅಪ್ಪು ಜಗ್ಗಲಿಲ್ಲ.
“ನಾನು ನನ್ನ ಪಿಸ್ತೂಲನ್ನು ನಿಂಗೆ ಕೊಡ್ತೇನೆ. ನಿನ್ನ ಗಿರಿಗಿಟ್ಟಿ ನಂಕೊಡು”
ಇದನ್ನೇ ಎದುರು ನೋಡುತ್ತಿದ್ದ ಅಪ್ಪು ಒಳಗೊಳಗೆ ಹಿಗ್ಗುತ್ತಾ “ಅದನ್ನು ಕೊಡು ಮೊದಲು” ಎಂದ. ಇಬ್ಬರೂ ತಮ್ಮ ವಸ್ತುಗಳನ್ನು ವಿನಿಮಯ ಮಾಡಿಕೊಂಡರು. ಬಾಬು ಪುರ್ರಂತ ಊದಿ ಗಿರಿಗಿಟ್ಟಿ ತಿರುಗಿಸಿದಾಗ ಅಪ್ಪು ಸಿನೇಮಾ ನಟನಂತೆ ಪಿಸ್ತೂಲು ಹಿಡಿದು ಬೀಗಿದ. ಖಾದರನ ದನವನ್ನು ನೆಕ್ಕುತ್ತಿದ್ದ ಭಟ್ಟರ ಹೋರಿಯ ಮುಸುಡಿಗೆ ಹೊಡೆಯಲು ಗುರಿ ಇಡುತ್ತಿದ್ದಂತೆ ಬಾಬು ಅವನನ್ನು ತಡೆದು “ಬೇಡ ಅಪ್ಪೂ. ದನ ಮತ್ತು ಹೋರಿ ಹತ್ತಿರ ಇರುವಾಗ ಅವುಗಳ ಹತ್ತಿರ ಹೋಗಬಾರದಂತೆ”
“ಹೋದ್ರೆ ಏನಾಗ್ತದೆ?”
“ಅವತ್ತು ನಾರಾಯಣಜ್ಜನ ದನದ ಜೊತೆ ಹೋರಿಯೂ ಕೊಟ್ಟಿಗೆಗೆ ಬಂದಿತ್ತಂತೆ. ದನವನ್ನು ಕಟ್ಟಲು ಅಜ್ಜ ಹಗ್ಗ ತಗೊಂಡು ಹೋದಾಗ ಹೋರಿ ಅವರನ್ನು ಹಾಯ್ದು ಬೀಳಿಸಿತಂತೆ”
“ಆಯ್ತು. ಹಾಗಿದ್ರೆ ಬೇಡ” ಎನ್ನುತ್ತಾ ಅಪ್ಪು ಇಕ್ಕೆಲಗಳಲ್ಲಿದ್ದ ಮುಳ್ಳುಗಳ ಹಿಂಡು, ಕಾಡುಪೊದೆ, ಅಳಿಲು, ಹಕ್ಕಿಗಳಿಗೆ ಗುರಿಯಿಡುತ್ತಿದ್ದವನು ಥಟ್ಟನೆ ತೆಂಗಿನ ಮರದ ಮರೆಗೆ ಸರಿದು “ಬಾಬು, ನೋಡು ನಾನೊಂದು ತಮಾಷೆ ತೋರಿಸ್ತೇನೆ” ಎನ್ನುತ್ತಾ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ ನಾರಾಯಣಿಯ ನಾಯಿಗೆ ಗುಂಡು ಹೊಡೆದು, ಅದು ಕಂಯ್ಕೆಂದು ಬಾಲ ಮುದುರಿ ಓಡಿದಾಗ ‘ಹೋ’ ಎಂದು ಅರಚಿ ಕುಣಿದ.
“ಅಪ್ಪೂ, ಯಾಕೆ ಹೀಗೆ ಮಾಡಿದೆ?”
“ನಾನು ಅಂಗಡಿಯಿಂದ ಮೊಟ್ಟೆ ತಗೊಂಡು ಬರುವಾಗ ಇದು ಸೋಜನ ನಾಯಿಯ ಜೊತೆ ದಾರಿಯಲ್ಲಿ ಮಲಗಿತ್ತು. ನಾನು ಅವುಗಳಿಗೆ ಯಾವ ತೊಂದರೆ ಮಾಡದೆ ಬದಿಯಲ್ಲಾಗಿ ಬಂದರೂ ಅದು ನನ್ನ ಮೈಗೆ ಹಾರಿ ಅಟ್ಟಿಸಿಕೊಂಡು ಬಂದಿತ್ತು”
“ಅಪ್ಪೂ ಸಾಕು. ಶಾಲೆ ತಲುಪಿತು. ನನ್ನ ಪಿಸ್ತೂಲು ಕೊಡು”
“ಹೂಂ… ಕೊಡ್ತೇನೆ ಅಂಬಟೆ”
ಬಾಬುವಿಗೆ ಸಿಟ್ಟು ಬಂತು. ಅವನು ಅಪ್ಪುವಿನ ಕೈಯಲ್ಲಿದ್ದ ಪಿಸ್ತೂಲನ್ನು ಗಬಕ್ಕನೆ ಕಿತ್ತು ಓಡಿದ. ಎಷ್ಟು ಜೋರಾಗಿ ಓಡಿದರೂ ಅಪ್ಪು ಸಮೀಪಿಸಿದ. ಅವನ ಕಾಲಿಗೆ ತನ್ನ ಕಾಲನ್ನು ಅಡ್ಡಕೊಟ್ಟು ಬೀಳಿಸಿ “ನನ್ನೊಟ್ಟಿಗೆ ಆಟ ಆಡ್ತೀಯಾ?” ಎನ್ನುತ್ತಾ ಪಿಸ್ತೂಲನ್ನು ಕಸಿದುಕೊಂಡ.
ಇಬ್ಬರಿಗೂ ಪಾಠದ ಕಡೆ ಗಮನವಿಲ್ಲ. ಕಣ್ಣೆಲ್ಲ ಪಿಸ್ತೂಲಿನ ಮೇಲೆಯೇ. ಒಂದಕ್ಕೆ ಬಿಟ್ಟಾಗ ಬೇಗ ಬಂದುಬಿಡಬೇಕೆಂದು ಅಪ್ಪು ಎಲ್ಲರಿಗಿಂತ ಮೊದಲೇ ಹೋದ. ಬಾಬು ಮಾತ್ರ ಎಲ್ಲರೂ ಹೋಗುವುದನ್ನೇ ಕಾಯುತ್ತಿದ್ದು, ಅಪ್ಪುವಿನ ಚೀಲದಿಂದ ಪಿಸ್ತೂಲನ್ನು ಎಗರಿಸಿ ತನ್ನ ಚೀಲದೊಳಗಿಟ್ಟು ಏನೂ ತಿಳಿಯದವನಂತೆ ಬರೆಯುವುದರಲ್ಲಿ ಮಗ್ನನಾದ. ಉಚ್ಚೆ ಹೊಯ್ಯುತ್ತಿದ್ದ ಅಪ್ಪು ಅದನ್ನೇ ನೋಡುತ್ತಿದ್ದು ಬಾಬು ತನ್ನ ಅಭ್ಯಾಸ ಪುಸ್ತಕವನ್ನು ಮೇಷ್ಟ್ರಿಗೆ ತೋರಿಸಲು ಹೋದಾಗ ಬೆಕ್ಕಿನಂತೆ ಬಂದು ಪಿಸ್ತೂಲನ್ನು ತನ್ನ ಚೀಲಕ್ಕೆ ಸೇರಿಸಿ ಸಂಭಾವಿತನಂತೆ ಕುಳಿತ. ಮಧ್ಯಾಹ್ನ ಶಾಲೆ ಬಿಟ್ಟ ಕೂಡಲೇ ಬಾಬು ಕರೆಯುತ್ತಿದ್ದರೂ ಕಿವಿಗೊಡದೆ ಓಡುತ್ತಾ ಮನೆ ಸೇರಿದ.
ಕೈಕಾಲು ತೊಳೆದು ಅಡುಗೆ ಮನೆಯೊಳಗೆ ಕುಳಿತಾಗ ತಟ್ಟೆಯಲ್ಲಿ ಗಂಜಿ. ಹಳದಿಬಣ್ಣದ ಎಂಥದೋ ಪದಾರ್ಥ. ಅಪ್ಪು ಇಡೀ ಲೋಕಕ್ಕೆ ಶಾಪ ಹಾಕುತ್ತಾ ತಟ್ಟೆಯನ್ನೆತ್ತಿ ತುಟಿಗಳ ನಡುವೆ ಇಟ್ಟು ಒಂದೇ ಉಸಿರಿಗೆ ಸೇದಿ ಕೆಳಗಿರಿಸಿದಾಗ ಅದರಲ್ಲೊಂದು ದ್ವೀಪದ ಹಾಗೆ ಎದ್ದು ನಿಂತ ಅನ್ನವನ್ನು ಮೂತಿ ಸೊಟ್ಟಗೆ ಮಾಡಿ ನೋಡಿದ. ಹೇಗೋ ತಿಂದು ಮುಗಿಸಿ ಎದ್ದು ಹೊರಬರುವಷ್ಟರಲ್ಲಿ ನೇರ ಎದುರಲ್ಲಿದ್ದಾನೆ ಬಾಬು. ಅತ್ತು ಕೊಳೆಯಾದ ಕಣ್ಣುಗಳು. ಅಪ್ಪುವಿನ ತಂದೆಯ ತಲೆ ಕಂಡ ಕೂಡಲೇ “ಲೋಕೇಶಣ್ಣಾ, ಅಪ್ಪು ನನ್ನ ಪಿಸ್ತೂಲು ಕದ್ದಿದ್ದಾನೆ. ಎಷ್ಟು ಕೇಳಿದ್ರೂ ಕೊಡೋದಿಲ್ಲ” ಎಂದ.
“ಅಪ್ಪೂ. ಅವನದ್ದು ಅವನಿಗೇ ಕೊಟ್ಟುಬಿಡು. ಯಾರ್ಯಾರದ್ದೆಲ್ಲ ನಮಗೆ ಬೇಡ” ಅಪ್ಪ ಗದರಿಸುವಂತೆ ಹೇಳಿದರು. ಅಪ್ಪುವಿನ ಮಾನ ಹೋದಂತಾಗಿ “ಇಲ್ಲ ಹೊಡೆದು ಕೊಂದು ಹಾಕಿದ್ರೂ ಕೊಡೋದಿಲ್ಲ. ಏನು ಮಾಡುವೆ?” ಎಂದು ನೆಟ್ಟಗೆ ನಿಂತು ಹೇಳಿದ.
“ಹಣೆಬರಹ ಕೆಟ್ಟವನೇ. ನಂಗೇ ಎದುರಾಡ್ತಿಯಾ?” ಎನ್ನುತ್ತಾ ಕೈಬೀಸಿ ಎರಡು ಬಾರಿಸಿದ ರಭಸಕ್ಕೆ ಅಪ್ಪು “ಅಯ್ಯಯ್ಯೋ, ಕೊಡ್ತೇನೋ. ಹೊಡೀಬೇಡವೋ” ಎಂದು ಬಿದ್ದಲ್ಲೇ ಹೊರಳಾಡಿದ.
ಊಟವಾದ ಬಳಿಕ ತುಸು ವಿಶ್ರಾಂತಿ ಪಡೆಯೋಣವೆಂದು ಅಮ್ಮ ಅಡ್ಡಾದಳು. ಆದರೆ ಅಪ್ಪುವಿಗೆ ನಿದ್ದೆ ಬರಲಿಲ್ಲ. ಅವನ ಮನಸ್ಸು ಎದ್ದು ಬಿದ್ದು ಕುದಿಯುತ್ತಿತ್ತು. ಅಪ್ಪನಿಗೆ ಈಗ ನನ್ನನ್ನು ಕಂಡರೆ ಅಗುವುದಿಲ್ಲ. ಅದರೆ ಸಂಜೀವಣ್ಣನ ಮಕ್ಕಳು ಮನೆಗೆ ಬಂದರೆ ದೂರದೂರಿನ ನೆಂಟರನ್ನು ಕಂಡದ್ದಕ್ಕಿಂತಲೂ ಹೆಚ್ಚಿನ ಸಂತಸ. ‘ಬನ್ನಿರೋ ಕೂತ್ಕೊಳ್ರೋ’ ಅಂತ ಮಡಿಲಲ್ಲಿ ಕೂರಿಸುತ್ತಾರೆ. ಕುರುಕಲು ತಿಂಡಿಗಳನ್ನು ಬಾಚಿ ಕೊಡುತ್ತಾರೆ. ನನಗೆ ಹೊಡೆಯುತ್ತಿದ್ದಂತೆ ಅಮ್ಮ ಬಂದು ತಡೆದಾಗ ಅವರು ಹೇಳಿದ್ದೇನು?
“ಬಾಯ್ಮುಚ್ಚಿ ಕೂತ್ಕೋ ಮೂರು ಕಾಸಿನ ಭೋಸಡಿ. ನಂಗೆ ಕಲಿಸ್ಲಿಕ್ಕೆ ಬರ್ತೀಯಾ? ಈಗಲೇ ಕದೀಲಿಕ್ಕೆ ಸುರು ಮಾಡಿದ್ದಾನೆ ನಿನ್ನ ಮಗ. ನಾಳೆ ಇನ್ನು ಯಾರ್ಯಾರ ಸೊತ್ತಿಗೆ ಕೈಹಾಕ್ತಾನೋ?”
ಅಪ್ಪನೇಕೆ ಹೀಗಾಗುತ್ತಿದ್ದಾರೆ? ಅಮ್ಮನನ್ನೂ ಬೈಯತೊಡಗಿದ್ದಾರೆ. ಸಂಜೀವಣ್ಣನೂ ಹೀಗೆಯೇ. ರಾಧಕ್ಕನೊಡನೆ ಮಾತ್ರವಲ್ಲ, ನಮ್ಮೊಡನೆ ಮಾತನಾಡುವಾಗಲೂ ಉರಿಮೂತಿಯೇ. “ರಾಧೆ ಏನು ಮಾಡ್ತಿದ್ದಾಳೆ?” ಎಂದು ಅಮ್ಮ ಕೇಳಿದರೆ “ಚೆನ್ನಾಗಿದ್ದಾಳೆ” ಎಂದಷ್ಟೇ ಉತ್ತರ. “ಅವಳು ಭಾಳ ಷೋಕಿ. ಸೆಂಟ್, ಸ್ನೋ ಪೌಡರ್ ಎಲ್ಲ ಬೇಕು. ಬಟ್ಟೆಬರೆಯೆಲ್ಲ ಘನಾದ್ದೇ ಆಗ್ಬೇಕು. ಹ್ಮ್… ಅಂಬಲಿ ತಿನ್ನುವವನ ಮೀಸೆ ತಿಕ್ಕಲಿಕ್ಕೆ ಎಲ್ಲಿ ಸಿಗ್ತಾರೆ ಜನ?”
“ತೆಗ್ದು ಕೊಡಪ್ಪಾ. ಮತ್ತಿನ್ಯಾವಾಗ ಉಟ್ಟುತೊಟ್ಟು ಮಾಡ್ತಾಳೆ?” ಅಪ್ಪ ಹಾಗೆನ್ನುವಾಗ ಕತ್ತಿಯಿಂದ ಗೀರಿದಂತೆ ಅವನ ಹಣೆ ನೆರಿಗೆಗಟ್ಟುತ್ತಿತ್ತು. ನರ ಹುರಿಹಗ್ಗದಂತೆ ಬಿಗಿದುಕೊಳ್ಳುತ್ತಿತ್ತು. ಅಪ್ಪನನ್ನು ನುಂಗುವಂತೆ ನೋಡಿ “ಬರ್ತೇನೆ” ಎಂದವನೇ ಎದ್ದು ಹೊರಟು ಹೋಗುತ್ತಿದ್ದ. ಅಲ್ಲವೇ ಮತ್ತೆ? ನನ್ನಮ್ಮನಿಗೆ ಒಂದು ಕರವಸ್ತ್ರವನ್ನೂ ತೆಗೆದುಕೊಡದ ಅಪ್ಪ ಬಾಕಿದ್ದವರಿಗೆ ಉಪದೇಶಿಸುವುದನ್ನು ನೋಡಿದರೆ…
ಯೋಚನೆಗಳು ಮುಂದಕ್ಕೆ ಹರಿಯದಂತೆ ಅವನ ನರಗಳು ಬಿಗಿದುಕೊಂಡವು. ಏನೋ ನಿರ್ಧಾರ ಮಾಡಿದವನಂತೆ ಮೆಲ್ಲನೆ ಎದ್ದು ಬಾಬುವಿನ ಮನೆಗೆ ಹೋಗಿ ಬಗ್ಗಿ ನೋಡಿದ. ಅವನು ಅಲ್ಲಿಲ್ಲ! ಪಿಸ್ತೂಲು ಮಾತ್ರ ಮೇಜಿನ ಮೇಲೆ ಇದೆ. ಅದರ ಮೇಲಿನಿಂದ ಕಣ್ಣು ತೆಗೆಯದೆ ಒಳಗೆ ಹೋಗಿ ನೋಡಿದರೆ ಅಯ್… ಯಾರದು ಕತ್ತಲ ಮೂಲೆಯಲ್ಲಿ ರಾಧಕ್ಕನ ಹತ್ತಿರ ಕುಳಿತವನು? ಅವನ ಬೊಗಸೆ ತುಂಬಾ ಚಿನ್ನಾಭರಣಗಳು. ಅದನ್ನು ಪಡೆದುಕೊಳ್ಳುವಂತೆ ಎರಡೂ ಕೈಗಳನ್ನೊಡ್ಡಿ ಹಿಡಿದಿರುವ ರಾಧಕ್ಕ.
“ರಾಧಕ್ಕ”
ಆ ವ್ಯಕ್ತಿ ಕಿಡಿತಗುಲಿದಂತೆ ಎಚ್ಚರಗೊಂಡು ಗಕ್ಕನೆ ಕತ್ತು ಹೊರಳಿಸಿದ.
“ಅಪ್ಪ!”
ದಿಗಿಲು ಬಿದ್ದ ಅಪ್ಪುವಿನ ಬಾಯಿಯಿಂದ ಹೊರಟ ಉದ್ಗಾರ ಅವನಿಗರಿಯದಂತೆ ದೊಡ್ಡದಾದಾಗ ಅಪ್ಪನ ಕಣ್ಣುಗಳಲ್ಲಿ ಬೆಂಕಿ ಕಾಣಿಸಿತು. ಏನೋ ಮಾತನಾಡುವಂತೆ ತುಟಿಗಳು ಅಲುಗಿದವೇ ಹೊರತು ದನಿ ಹೊರಡಲಿಲ್ಲ. ಅಪ್ಪುವನ್ನು ನೋಡಿದ್ದೇ ರಾಧಕ್ಕ ತನ್ನ ಉಬ್ಬಿದ ಹೊಟ್ಟೆಯನ್ನು ಸೆರಗಿನಿಂದ ಮರೆಗೊಳಿಸುತ್ತಾ ಹೇಗು ಹೇಗೋ ಎದ್ದು ಬಂದಳು. ಅವನನ್ನು ಮುದ್ದಿಸುತ್ತಾ ಅಡುಗೆಕೋಣೆಗೆ ಕರೆದುಕೊಂಡು ಹೋಗಿ ಕೋಡುಬಳೆಗಳನ್ನು ಕೊಟ್ಟಳು. ಚಡ್ಡಿಯ ಎರಡು ಜೇಬುಗಳಲ್ಲೂ ತುಂಬಿಸುತ್ತಾ “ಕೋಲಕ್ಕೆ ಹೋಗುವಾಗ ಹಾಕಿಕೊಳ್ಳಲು ಚಿನ್ನ ಬೇಕೆಂದು ನಿನ್ನಮ್ಮ ಕೇಳಿದ್ದಳು. ಕೋಲ ಕಳೆಯಿತಲ್ಲ. ಅದನ್ನು ಹಿಂತಿರುಗಿಸಲು ಬಂದಿದ್ದಾರೆ. ಸಂಜೀವಣ್ಣ ಇಲ್ಲವಲ್ಲ. ಹಾಗೆ ನಾನೇ ತಗೊಂಡೆ” ಎಂದು ಕಿಟಿಕಿಯ ಹೊರಗೆ ಕೈತೋರಿಸಿ “ಅಪ್ಪೂ, ನಿನಗೆ ಆ ಗುಡ್ಡದ ತುದಿಗೆ ಹೋಗಲು ಇಷ್ಟ. ಅಲ್ಲವಾ?” ಅಂತ ಕೇಳಿದಳು. “ಇವರನ್ನು ಇಲ್ಲಿ ಕಂಡ ಸಂಗತಿ ಯಾರಲ್ಲೂ ಹೇಳಬೇಡ ಆಯ್ತಾ” ಎಂದು ಪಿಸುಗುಟ್ಟಿದಳು. ಅವಳು ಹೇಳಿದ್ದಕ್ಕೆಲ್ಲ ಹೂಂಗುಟ್ಟಿ ಇನ್ನೇನು ಹೊರಗೆ ಓಡಬೇಕೆನ್ನುವಷ್ಟರಲ್ಲಿ ಅಪ್ಪುವಿಗೆ ತಾನು ಬಂದುದೇಕೆ ಎಂದು ನೆನಪಾಗಿ “ರಾಧಕ್ಕ, ನಾನು ಈ ಪಿಸ್ತೂಲನ್ನು ಅಡಗಿಸಿಡ್ತೇನೆ. ಬಾಬುವಿನಲ್ಲಿ ಹೇಳಬೇಡ” ಎಂದಾಗ ಅವಳು ಆಗಬಹುದೆಂಬಂತೆ ತಲೆ ಆಡಿಸಿದಳು. ಅವನು ಅಲ್ಲಿದ್ದ ಪಿಸ್ತೂಲನ್ನು ಎತ್ತಿಕೊಂಡು ಓಡುವ ಗಡಿಬಿಡಿಯಲ್ಲಿ, ಅವನಿಗೆ ನೆನಪಾದದ್ದೇ ಬೇರೆ. ಹಿಂದೊಮ್ಮೆ ನಾನು ಗುಬ್ಬಿಯೆಂಜಲು ಮಾಡಿದ ಹಣ್ಣನ್ನು ಬಾಬುವಿಗೆ ಕೊಟ್ಟಾಗ ರಾಧಕ್ಕ ಅವನಿಗೇ ಹೊಡೆದಿದ್ದಳು. ಗುರುವ ನೀರು ಕುಡಿದ ಮಣ್ಣಿನ ಲೋಟವನ್ನು ದೂರಕ್ಕೆ ಎಸೆದಿದ್ದಳು. ಚುಕ್ರನ ಮಗುವನ್ನು ಎತ್ತಿಕೊಂಡದ್ದಕ್ಕೆ ಬಾಬುವನ್ನು ಬೈಯುತ್ತಿದ್ದಂತೆ “ಬ್ರಾಹ್ಮಣರಿಗಿಂತಲೂ ಜಾಸ್ತಿಯಾಯ್ತಲ್ಲ ನಿಂದು?” ಅಂತ ಸಂಜೀವಣ್ಣ ಅವಳನ್ನು ಗದರಿದರೂ ಲೆಕ್ಕಿಸದೆ ಬಾಬುವಿನ ತಲೆಗೆ ನೀರನ್ನು ಸುರಿದಿದ್ದಳು. ಹಾಗಿದ್ದರೆ ನನ್ನಪ್ಪ ಅವಳ ಚಿನ್ನಾಭರಣವನ್ನು ಮುಟ್ಟಿದರೆ ಅಗಬಹುದೇ? ಮುಟ್ಟಿ ಹಿಂತಿರುಗಿಸಿದರೆ ತೆಗೆದಿಟ್ಟುಕೊಳ್ಳಬಹುದೇ?
ಬಾಬುವಿನ ಪಿಸ್ತೂಲನ್ನು ಅವನ ಮನೆಯ ಹಿಂದೆಯೇ ಹುಗಿದಿಟ್ಟು ಗುಡ್ಡದ ತುದಿಯಲ್ಲಿ ಸಾಯಂಕಾಲದವರೆಗೆ ಆಟವಾಡಿ ಹಿಂತಿರುಗುವಾಗ ಅಪ್ಪುವಿಗೆ ಅಚ್ಚರಿ-ಆಘಾತ. ಸಂಜೀವಣ್ಣ ಅಬ್ಬರಿಸುತ್ತಾ ಬಾಬುವಿಗೆ ಹೊಡೆಯುತ್ತಿದ್ದ.
“ಹೇಳು. ಕಣ್ಣಪ್ಪನಿಗೆ ಅಡಿಕೆ ಮತ್ತು ಗೇರುಬೀಜಗಳನ್ನು ಕೊಟ್ಟದ್ದು ಯಾರು? ನಿಜ ಹೇಳು. ಇಲ್ಲದಿದ್ರೆ…”
“ಅಪ್ಪಾ! ನಾನೇ ಕೊಟ್ಟದ್ದು… ಅಲ್ಲಲ್ಲ ಕ್ರಯಕ್ಕೆ ಮಾರಿದ್ದು”
“ಅದೆಲ್ಲಿತ್ತು?”
“ನಾನೇ ಹೆಕ್ಕಿ ತೆಗೆದಿಟ್ಟುಕೊಂಡಿದ್ದೆ ಅಪ್ಪಾ”
“ಬೋಳಿಮಗನೇ ಸುಳ್ಳು ಹೇಳ್ತೀಯಾ? ನಮ್ಮದನ್ನೇ ಕದ್ದುಕೊಟ್ಟೆಯಲ್ಲಾ”
“ಅಯ್ಯೋ ಹೊಡೀಬೇಡಪ್ಪಾ!”
ಅಪ್ಪುವಿನ ಕರುಳೆದ್ದು ಮಿಡಿಯಿತು. ಅಡಿಕೆ ಮತ್ತು ಗೇರುಬೀಜಗಳನ್ನು ಸಂಗ್ರಹಿಸಲು ಬಾಬು ಅದೆಷ್ಟು ಶ್ರಮ ಪಟ್ಟಿದ್ದ! ಹಗಲಿರುಳೆನ್ನದೆ, ಚಳಿ ಬಿಸಿಲೆನ್ನದೆ ಅಬ್ದುಲ್ಲನ ಗುಡ್ಡೆ, ದಾಮೋದರನ ತೋಟ, ಸೋಜನ ಹಿತ್ತಿಲು ಹೀಗೆ ಹತ್ತು ಹಲವು ಕಡೆಗಳಿಂದ ಯಾರಿಗೂ ಕಾಣದಂತೆ ಹೆಕ್ಕಿ ಕೂಡಿಟ್ಟುಕೊಂಡಿದ್ದ. ಪಾಪ! ಅವನ ಪಿಸ್ತೂಲನ್ನು ಅವನಿಗೇ ಕೊಟ್ಟುಬಿಡೋಣ. ಅಡಿಕೆ, ಗೇರುಬೀಜಗಳನ್ನು ರಾಧಕ್ಕ ನನ್ನ ಅಪ್ಪನಿಗೆ ಕೊಟ್ಟುದನ್ನು ಹೇಳಿಬಿಡೋಣ ಎನಿಸಿತು. ಆದರೆ ಅಪ್ಪನ ಉರಿಗಣ್ಣು ನೆನಪಾಗಿ ಮೈ ಬೆವರಿತು.
ಕೆಲವು ದಿನಗಳ ನಂತರ ಅಪ್ಪು ಸದ್ದಿಲ್ಲದೆ ಬಾಬುವಿನ ಅಂಗಳಕ್ಕೆ ಬಂದು ಇಣುಕಿ ನೋಡಿದ. ಅವನ ತಮ್ಮ ನಿದ್ದೆ ಮಾಡುತ್ತಿದ್ದ. ತಂಗಿ ಏನೋ ಗೀಚುತ್ತಿದ್ದಳು. ಅಪ್ಪುವಿನ ಬರವನ್ನು ದೂರದಿಂದಲೇ ಕಂಡ ಬಾಬು “ಹೇ…ಇಲ್ಲಿ…ಈ ಕಡೆ” ಎಂದು ಕೂಗಿದ. ವಿಧೇಯ ಸೈನಿಕನಂತೆ ಅಪ್ಪು ಅವನ ಬಳಿಗೆ ಹೋದ. ದೃಷ್ಟಿ ಸೇರಿಸುವ ಧೈರ್ಯ ಮಾಡಲಿಲ್ಲ.
“ಆಡೋಣವಾ?”
ಅಪ್ಪುವಿಗೆ ಅಚ್ಚರಿಯಾಯಿತು. ಬಾಬು ಹೀಗೆನ್ನುವನೆಂದು ಅವನು ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ಅವನ ಹುರುಪು ಹೆಚ್ಚಿ “ಬಾಬೂ, ನಿನ್ನ ಪಿಸ್ತೂಲು ನಿಂಗೆ ಬೇಡವಾ?” ಎಂದ. ಬೆಚ್ಚಿ ಬೀಳುವ ಸರದಿ ಬಾಬುವಿನದ್ದು “ಎಲ್ಲಿದೆ?”
“ಬಾ ತೋರಿಸ್ತೇನೆ” ಎನ್ನುತ್ತಾ ಅಪ್ಪು ಅವನ ಕೈ ಹಿಡಿದು ಮುಂದೆ ನಡೆದ. ಮನೆಯ ಹಿಂದಿನ ಬಿದುರು ಮೆಳೆಯ ಬುಡಕ್ಕೆ ಕರೆತಂದ. “ಇಗೋ ಇಲ್ಲಿ” ಎಂದವನೇ ಒಂಥರಾ ಆವೇಶದಿಂದ ಮಣ್ಣನ್ನು ಕೆದಕಲು ಶುರುಮಾಡಿದ. ಉಗುರುಗಳ ಕೆರೆತಕ್ಕೆ ತಕ್ಕಂತೆ ಬಿಚ್ಚಿಕೊಳ್ಳತೊಡಗಿದ ಮಣ್ಣಿನ ಪದರಗಳನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಮೈಯಲ್ಲಿ ಆಘಾತದ ಅಲೆಗಳು ಸಂಚರಿಸಿದವು. ಕಿರುಚಲು ತೆರೆದ ಬಾಯಿಯೊಳಗಿನಿಂದ ದನಿಯೇ ಹೊರಡಲಿಲ್ಲ. ದಿಗ್ಗನೆ ಎದ್ದರೂ ಕಾಲುಗಳನ್ನು ಓಡದಂತೆ ಗಟ್ಟಿಯಾಗಿ ಹಿಡಿದಿಟ್ಟಂತೆ ತೋರುತ್ತಿತ್ತು. ಕೊರಳನ್ನು ಯಾರೋ ಹಿಸುಕುತ್ತಿರುವಂತೆ ಭಾಸವಾಗುತ್ತಿತ್ತು.
“ರಾಧಕ್ಕಾ” ಗಂಟಲ ಪೇಶಿಗಳು ಹರಿಯುವಂತೆ ಅಪ್ಪು ಚೀರಿದ.
“ಇಲ್ಲ ಅಪ್ಪು. ಇಲ್ಲಿ ಯಾರೂ ಇಲ್ಲ”
“ಎಲ್ಲಿ ಹೋಗಿದ್ದಾರೆ?”
“ಅಮ್ಮನ ಹೊಟ್ಟೆಯಿಂದ ರಕ್ತ ಬರಲು ಶುರುವಾಗಿತ್ತು. ಅಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ” ನಡುಗುವ ದನಿಯಲ್ಲಿ ಬಾಬು ಹೇಳಿದ. ಅಪ್ಪುವಿನ ಎದೆಬಡಿತ ಜೋರಾಯಿತು. ಇನ್ನೇನು ಮಾಡುವುದು?
“ಅಪ್ಪೂ. ಇದೇನು ಮಾಂಸದ ಮುದ್ದೆ? ಕಪ್ಪೆಯದ್ದು ಅಂತ ಕಾಣ್ತದೆ. ರಕ್ತ ಮತ್ತು ಮಣ್ಣು ಮಾತ್ರವೇ ಇಲ್ಲಿರೋದು”
ಅಪ್ಪು ತಲೆಯೆತ್ತಿದ. ಕಣ್ಣುಗಳು ಬೆಂಕಿ ಕಾರುತ್ತಿದ್ದವು. ತಲೆಕೆಟ್ಟವನಂತೆ ಒಂದೇ ಸವನೆ ಬಡಬಡಿಸುತ್ತಾ ಗಟ್ಟಿಯಾಗಿ ಚೀರಿ ಹೇಳಿದ “ಅಲ್ಲ ಬಾಬೂ. ಇದೊಂದು ಮಗು”
“ಅಯ್ಯೋ”
ಆಮೇಲೆ ಅಪ್ಪು ಹಿಂದೆಮುಂದೆ ನೋಡಲಿಲ್ಲ. ಕುಂಡೆಗೆ ಕಾಲು ಕೊಟ್ಟು ಒಂದೇ ಓಟ.
ರಾತ್ರಿ ಉಂಡು ಮಲಗಿದ ಅಪ್ಪುವಿನ ಕಣ್ಣುಗಳ ಮುಂದೆ ಬೆಳಗಿನಿಂದ ನಡೆದ ಘಟನೆಗಳ ಪುನರಾವರ್ತನೆ. ಜೀಂಗುಡುವ ಜೀರುಂಡೆಗಳು ಮತ್ತು ಮನೆಯ ಸುತ್ತಲಿನ ಸರಬರ ಸದ್ದು ವಿಚಿತ್ರ ಭಯವನ್ನುಂಟು ಮಾಡುತ್ತಿತ್ತು. ಬಲವಂತವಾಗಿ ರೆಪ್ಪೆ ಬಿಗಿದರೂ ನಿದ್ದೆ ಬಾರದು. ಇದೀಗ ಅಮ್ಮ ಎದ್ದು ಹೊರ ಹೋಗಿದ್ದುದರಿಂದಲೇ ತನಗೆ ಹೀಗಾಗುತ್ತಿದೆಯೇ? ಎಂದುಕೊಳ್ಳುತ್ತಿದ್ದಂತೆ ಬಾಗಿಲು ತೆರೆದ ಸದ್ದು. ಅಮ್ಮ ಒಳಗೆ ಬಂದು ತನ್ನ ಹಾಗೂ ಅಪ್ಪನ ನಡುವೆ ಮಲಗಿದಾಗ ಸ್ವಲ್ಪ ಸಮಾಧಾನ. ಆ ಸಪ್ಪಳಕ್ಕೆ ಎಚ್ಚೆತ್ತ ಅಪ್ಪ “ದನಕ್ಕೆ ಮೇವು ಹಾಕಿದೆಯಾ ವಾರಿಜ?” ಎಂದ.
“ಹೂಂ”
“ನಾನು ಎದ್ದು ಹಾಕ್ತಿದ್ದೆ”
“ನಿದ್ದೆ ಬರಲಿಲ್ಲ. ಹಾಗಾಗಿ ನಾನೇ ಎದ್ದೆ”
ಓಹ್! ನನ್ನಂತೆ ಅಮ್ಮನಿಗೂ ಹೆದರಿಕೆಯಾಗಿರಬೇಕು. ಅದಕ್ಕೇ ನಿದ್ದೆ ಬರಲಿಲ್ಲ. ಎಂದುಕೊಳ್ಳುತ್ತಾ ಅಪ್ಪು ಅವರಿಬ್ಬರ ಪಿಸುಮಾತಿಗೆ ಕಿವಿಗೊಟ್ಟ “ರಾಧೆ ಇನ್ನೂ ಆಸ್ಪತ್ರೆಯಲ್ಲಿದ್ದಾಳಂತೆ. ಪ್ರಜ್ಞೆ ಬರಲಿಲ್ಲವಂತೆ”
“ಈ ವಿಷಯ ಪೋಲೀಸರಿಗೆ ಗೊತ್ತಾದದ್ದು ಹೇಗೆ?”
“ಹೊಟ್ಟೆಯಿಂದ ರಕ್ತಸ್ರಾವ ಆಗುತ್ತಿದ್ದಂತೆ ಗಂಡನೂ ಹೆಂಡತಿಯೂ ಅಸ್ಪತ್ರೆಗೆ ಹೋದರಂತೆ. ತಪಾಸಣೆ ಮಾಡಿದ ಡಾಕ್ಟರು ‘ಮಗುವೆಲ್ಲಿದೆ?’ ಅಂತ ಕೇಳಿದನಂತೆ. ಇವರು ಮೇಲೆ ಕೆಳಗೆ ನೋಡಿದರಂತೆ. ‘ಹೆರಿಗೆಯಾಗದೆ ಹೀಗೆ ರಕ್ತಸ್ರಾವ ಆಗೋದಿಲ್ಲ. ಅದ್ದರಿಂದ ನಿಜ ಹೇಳಿ’ ಅಂತ ಡಾಕ್ಟರು ಬೈದರಂತೆ. ‘ಮಗು ಇಲ್ಲವೇ ಇಲ್ಲ’ ಅಂತ ಸಂಜೀವ ಪಟ್ಟು ಹಿಡಿದನಂತೆ. ಡಾಕ್ಟರು ಕೂಡಲೇ ಪೋಲೀಸರನ್ನು ಕರೆಸಿದರಂತೆ. ಅವರು ಸಂಜೀವನ ಮನೆಗೆ ಬಂದು ಹುಡುಕಿದಾಗ ಬಿದಿರು ಮೆಳೆಯಡಿಯಲ್ಲಿ ಕೆರೆದು ಹಾಕಿದ ಮಣ್ಣಿನ ರಾಶಿಯೆಡೆಯಲ್ಲಿ ಮಗುವಿನ ಹೆಣ. ಸುದ್ದಿ ತಿಳಿಯುತ್ತಿದ್ದಂತೆ ರಾಧೆಯ ಸಮುದಾಯದವರು ಬೀಡಿ ಕೇಂದ್ರಕ್ಕೆ ಹೋಗಿ ಕರುಣಾಕರನಿಗೆ ಹೊಡೆದರಂತೆ. ಅವನ ಎದೆ, ಕರುಳಿಗೆ ಪೆಟ್ಟಾಗಿದೆಯಂತೆ. ಅಷ್ಟಾದರೂ ಅವನು ‘ನಾನಲ್ಲ ನಾನಲ್ಲ’ ಎಂದೇ ಹೇಳ್ತಿದ್ದಾನಂತೆ. ಇನ್ನು ಅಗೋದಿಷ್ಟೇ. ನಾಳೆ ಅವನ ಗುತ್ತಿನವರು ಬಂದು ಇವರೆಲ್ಲರಿಗೂ ಹೊಡೀತಾರೆ”
“ಇದು ಯಾರಿಗೂ ಗೊತ್ತಿರಲಿಲ್ವಾ?”
“ಗೊತ್ತಿದ್ದೇನು? ಇಲ್ಲದಿದ್ರೇನು? ಏನೂ ತಿಳಿಯದ ಆ ಮಕ್ಕಳ ಗತಿಯೇನು?”
“ಅವರನ್ನು ಇಲ್ಲಿ ಮಲಗಿಸುವ ಅಂದುಕೊಂಡಿದ್ದೆ. ಆದರೆ ಅವರು ರಾಜೀವಿಯ ಮನೆಯಲ್ಲಿ ಮಲಗಿದ್ದಾರೆ”
“ಹೂಂ” ಅಪ್ಪ ಗೊಣಗಿದ ಮಂಪರಿನಲ್ಲಿ.
ಮುಸುಕಿನಡಿಯಿಂದ ಕೇಳಿಸಿಕೊಳ್ಳುತ್ತಿದ್ದ ಅಪ್ಪುವಿಗೆ ತಲೆಬಿಸಿಯಾಯಿತು. ನಿದ್ದೆಗೆಟ್ಟು ಹೊರಳಾಡುತ್ತಾ ಮಗ್ಗುಲು ಬದಲಿಸತೊಡಗಿದ. ಕೆಲವು ನಿಮಿಷಗಳ ನಂತರ ಹೇಗೋ ನಿದ್ದೆ ಹತ್ತಿತು. ಆದರೆ ಕಣ್ಣು ಏನನ್ನೋ ಅರಸುತ್ತಾ ಮುಂದೆ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ರಾಧೆಯ ಮುಖ ತೇಲಿ ಬಂದಂತೆ, ಬೆನ್ನಿನ ತುಂಬಾ ಬಿರುಗೂದಲು ಹರಡಿಸಿಕೊಂಡು ಮೋಹಿನಿಯ ಹಾಗೆ ನಕ್ಕಂತೆ, ಅವಳ ಹೊಟ್ಟೆಯೊಳಗೆ ಮಗು ಚಲಿಸಿದಂತೆ, ಹೊಟ್ಟೆ ಒಡೆದು ಮಗು ಹೊರ ಬಿದ್ದಂತೆ, ಕತ್ತಿನಿಂದ ಕಾಲಿನವರೆಗೂ ಬಿಳಿ ಬಿಟ್ಟೆಯಿಂದ ಮುಚ್ಚಿದ ಶರೀರ. ಗೋಣಿಯಲ್ಲಿ ತುರುಕಿದಾಗ ತಲೆಯನ್ನು ಮಾತ್ರ ಹೊರಗೆ ಹಾಕಿದ ಪ್ರಾಣಿಯಂಥ ಮುಖ. ಉಸಿರೆಳೆದುಕೊಳ್ಳುವುದಕ್ಕಾಗಿಯೋ ಎಂಬಂತೆ ಒಡೆದ ಬಾಯಿ. ಕೂಡಲೇ ಅದರ ಕಣ್ಣುಗಳು ಒಮ್ಮೆಲೆ ತೆರೆದುಕೊಂಡು ಅದರೊಳಗಿನಿಂದ ನೆತ್ತರು ಹೊರ ಚಿಮ್ಮತೊಡಗಿದಂತೆ ಭಾಸವಾಗಿ ಫಕ್ಕನೆ ಎಚ್ಚೆತ್ತು ನೋಡಿದರೆ ಸುತ್ತಲೂ ಕತ್ತಲು.