ಹಾಸ್ಯ/ವಿಡಂಬನೆ ಬರಹ
ಅದು ಯಮ ಲೋಕ ದರ್ಬಾರಿನ ದೊಡ್ಡ ಹಾಲು. ಪ್ರತಿನಿತ್ಯ ಅಲ್ಲಿ ನರರಿಗೆ ಅನೇಕ ರೀತಿಯ ಶಿಕ್ಷೆಗಳು ಜಾರಿಯಲ್ಲಿರುತ್ತವೆ. ಒಂದೆರಡು ಉದಾಹರಣೆಗಳು ಈ ಕೆಳಗಿನಂತಿವೆ.
ಹಂಡೆಯ ಮೇಲೆ ಕಾದ ಬಿಸಿ ನೀರಿನ ಕೊಪ್ಪರಿಕೆಯಲ್ಲಿ ಒಬ್ಬೊಬ್ಬ ನರ ಮಾನವನನ್ನು ಸರದಿ ಪ್ರಕಾರ ಮುಳುಗಿಸಿ ತೇಲಿಸುತ್ತಿದ್ದರು ಅಲ್ಲಿಯ ಭಟರು. ಇನ್ನೂ ಹಲವು ಮಾನವ ಪುಂಗರನ್ನು ಕಂಬಕ್ಕೆ ಕಟ್ಟಿ ದೊಡ್ಡ ಬಾರುಕೋಲಿನಿಂದ ಭಟರು ರಕ್ತ ಬರುವಂತೆ (ಕನ್ನಡದ ಸಿನಿಮಾಗಳಲ್ಲಿನ ರಕ್ತಸಿಕ್ತ ಸೀನುಗಳನ್ನು ನೆನಪಿಸುವಂತೆ!) ಹೊಡೆಯುತ್ತಿದ್ದರು. ಇನ್ನೂ ಕೆಲವರನ್ನು ನೆಲದ ಮೇಲೆ ಸಾಲಾಗಿ ಮಲಗಿಸಿ ಅವರ ಮೇಲೆ ಬುಲ್ಡೋಜರ್ ತರಹದ ವಾಹನದಿಂದ (ವಾಹನ ಮಾತ್ರ ಮೇಡ್ ಇನ್ ಯಮಲೋಕದ್ದು!) ಚಪಾತಿಯಂತೆ ಲಟ್ಟಿಸುತ್ತಿದ್ದರು ಯಮ ಭಟರು. ಆದರೆ ಭೂ ಲೋಕದಿಂದ ಬಂದವರೆಲ್ಲರೂ ನಗು ನಗುತ್ತಾ ಶಿಕ್ಷೆಯ ಮಜಾವನ್ನು ಅನುಭವಿಸುತ್ತಿದ್ದರೇ ಹೊರತು ನೋವಿರಲಿ ಕನಿಷ್ಠ ಪಕ್ಷ ಮುಖದಲ್ಲಿ ಬೇಜಾರು ಸಹಾ ವ್ಯಕ್ತಪಡಿಸುತ್ತಿರಲಿಲ್ಲ.
ಇಂತಹ ಶಿಕ್ಷೆಗಳು ಸರಿಯಾಗಿ ಕಠಿಣವಾಗಿ ಕಾರ್ಯಗತ ಮಾಡಲು ಒಂದು ಸಮಿತಿಯನ್ನು ರಚಿಸಿದ್ದ ಯಮರಾಜ. ಯಥಾ ರೀತಿ ಅಂತಹ ಸಮಿತಿಗಳಿಗೆ ‘ ಹೆಡ್ ‘ ಬೇರೆ ಯಾರೂ ಇರದೆ ನಿಮ್ಮಲ್ಲರ ಸರಿಯಾದ ಊಹೆಯಂತೆ ಚಿತ್ರಗುಪ್ತನೇ ಆಗಿದ್ದ!. ” ಇನ್ನೂ ಎಷ್ಟು ದಿನ ಈ ಹಿಂಸೆಯನ್ನು ಅನುಭವಿಸುವುದು. ನಾವು ಭೂ ಲೋಕದಲ್ಲಿರುವ ವಿಶ್ವದ ಅತೀ ‘ ದೊಡ್ಡ ಪ್ರಜಾಪ್ರಭುತ್ವ’ ದೇಶದ ಚುನಾವಣೆಯಲ್ಲಿ ಪವಿತ್ರ ಮತದಾನ ಮಾಡಿ ಇಲ್ಲಿಗೆ ಬಂದು ಒಂದು ತಿಂಗಳ ಮೇಲಾಯಿತು. ನಮ್ಮ ಹಣೆ ಬರಹ ಎಲ್ಲಿರತ್ತದೋ ಅಲ್ಲಿಗೆ ಹೋಗಲು ಸಿದ್ಧರಿದ್ದೇವೆ. ಆದರೆ, ಇಷ್ಟು ದಿವಸಗಳು ಆದರೂ ಇನ್ನೂ ನಮ್ಮನ್ನು ಎಲ್ಲಿಗೆ ಕಳಿಸಬೇಕೆನ್ನುವ ನಿರ್ಧಾರ ಮಾಡಿಲ್ಲ ಅಂದರೆ ನಿಮಗೆ ನಾಚಿಕೆಯಾಗಬೇಕು. ನಮ್ಮ ಭೂ ಲೋಕದ ಸರಕಾರಗಳನ್ನೂ ಮೀರಿಸುವ ಸೋಮಾರಿತನ ಹೊಂದಿದ ನಿಮ್ಮ ವ್ಯವಸ್ಥೆಗೆ ಧಿಕ್ಕಾರವಿರಲಿ …” ಎಂದು ‘ ಗುಂಪಿನಲ್ಲಿ ಗೋವಿಂದ ‘ ಟೈಪ್ ಆಗದ ಒಬ್ಬ ನಾಯಕ ಜೋರಾದ ಗಟ್ಟಿ ಧ್ವನಿಯಲ್ಲಿ ಅರಚಿದ.
” ನೀವೆಲ್ಲ ಭೂಮಿ ಮೇಲೆ ಭಾರವಾಗಿ ಇಲ್ಲಿಗೆ ಬಂದಿರುವಿರಿ! ಈಗ ಇಲ್ಲಿರುವ ಪಾಪಿಗಳನ್ನು ಎಲ್ಲಿಗೆ ಯಾವಾಗ ಕಳಿಸಬೇಕು ಎಂದು ನಿರ್ಧಾರ ನಾವು ಮಾಡುತ್ತೇವೆ. ನಮ್ಮದು ಸಹಾ ನಿಮ್ಮಂತೆ ಪ್ರಜಾ ಪ್ರಭುತ್ವ ಆಡಳಿತ ಇರುವ ಪ್ರಾಂತ…ತಿಳಿಯಿತೆ?” ಚಿತ್ರಗುಪ್ತ ಕೋರ್ಟ್ ನ್ಯಾಯಾಧೀಶರಂತೆ ಆರ್ಡರ್…ಆರ್ಡರ್… ಎಂದು ದೊಡ್ಡ ಸ್ವರದಲ್ಲಿ ಹೇಳಿದ ಬಳಿಕ ಅಲ್ಲಿಯ ಗೌಜು ಗದ್ದಲ ಕೊಂಚ ಕಡಿಮೆಯಾಯಿತು.
ಸ್ವಲ್ಪ ಹೊತ್ತಿನ ಬಳಿಕ ಡೆಪ್ಯೂಟಿ ಚಿತ್ರಗುಪ್ತ (ಚಿತ್ರಗುಪ್ತನ ಆಪ್ತ ಬಂಟ) ಮೆಲ್ಲನೆ ಘೋಷಿಸಿದ. “ನಿಮ್ಮಲ್ಲಿ ಸ್ವರ್ಗಕ್ಕೆ ಯಾರು ಹೋಗಬೇಕೆಂದು ಅಂದುಕೊಂಡಿದ್ದೀರಿ ಅವರು ‘ ಎಸ್ ‘ ಎನ್ನುತ್ತಾ ಕೈ ಎತ್ತಿ…”. ” ನಾವು ‘ ಎಸ್ ‘ ಅಂದರೆ ನಮ್ಮನ್ನು ಸ್ವರ್ಗಕ್ಕೆ ಕಳಿಸುತ್ತೀರಾ?…ಅಲ್ಲಿಗೆ ಹೋಗೋದು ಬಿಡೋದು ನಮ್ಮಿಷ್ಟವಾ?…ಹೀಗಂತ ಗೊತ್ತಿದ್ದರೆ ಭೂ ಲೋಕದಲ್ಲಿ ಇನ್ನಷ್ಟು ಕೆಟ್ಟ ಕಾರ್ಯ ಮಾಡಿ
ಬರುತ್ತಿದ್ದೆವಲ್ಲ…” ಎಂದು ಪೇಚಾಡಿದ ಗುಂಡಣ್ಣ. ಅಲ್ಲಿ ನೆರೆದ ಬಹಳಷ್ಟು ನರ ಮಾನವರು ಕೂಡ ಗುಂಡಣ್ಣನ ಅಂತಹ ‘ ನೇರ – ದಿಟ್ಟ – ಪ್ರಾಮಾಣಿಕ ‘ ಅಭಿಪ್ರಾಯಕ್ಕೆ ಸಿಳ್ಳೆ ಹೊಡೆದು ಸಹಮತ ವ್ಯಕ್ತಪಡಿಸಿದರು. ” ಆಯ್ತು… ಸ್ವರ್ಗಕ್ಕೆ ಹೋಗಲು ಎಲ್ಲರಿಗಿಂತ ಮೊದಲು ಕೈ ಎತ್ತಿದ ಮಹಾನುಭಾವರು ನೀವು. ಓಕೆ. ನೀವೆಲ್ಲ ಯಾರು? ” ಎಂದು ಡೆಪ್ಯೂಟಿ ಚಿತ್ರಗುಪ್ತ ಪ್ರಶ್ನಿಸಿದ.
” ಸಾರ್…ನಾವೆಲ್ಲ ರಾಜಕೀಯ ಧುರೀಣರು. ಪ್ರಜೆಗಳ ಸೇವೆಗಾಗಿ ಮುಡುಪಾಗಿಟ್ಟ ನಮ್ಮ ‘ ಜೀವ ‘ ವನ್ನು ಅರ್ಧಕ್ಕೆ ನಿಲ್ಲಿಸಿ ಇಲ್ಲಿಗೆ ಕರೆ ತಂದದ್ದು ತಪ್ಪು ಅಲ್ಲವೇ…” ಎಂದು ಪ್ರಶ್ನಿಸಿದ ರಾಜಕೀಯ ನಾಯಕ ಗುಂಡಣ್ಣ. ” ಯಾವುದಕ್ಕಾದರೂ ಸರಿ ನಾವೇ ಮೊದಲು… ನಮ್ಮ ಕುಟುಂಬವೇ ಮೊದಲು… ಎಲ್ಲವೂ ನಮಗೇ ಇರಲಿ ಎನ್ನುವವರು ನೀವೇ ಅಲ್ಲವೇನು?…ನಿಮಗೇಕೆ ಬೇಕು ಸ್ವರ್ಗ! ಪ್ರತೀ ಓಣಿಯ ಪುಟಗೋಸಿ ಲೀಡರ್ ಸಹಾ ನನಗೇ ಸ್ವರ್ಗ ಬೇಕು ಅಂದರೆ ವಿಧಾನ ಸೌಧದಷ್ಟು ಜಾಗ ಸಹಾ ಸಾಲುವುದಿಲ್ಲ! ನೀವು
ಏ ಸಿ ಕಾರುಗಳಲ್ಲಿ ತಿರುಗುತ್ತಾ ಅರಮನೆಯಂತಹ ಸರ್ಕಾರಿ ಭವ್ಯ ಬಂಗಲೆಗಳಲ್ಲಿ ವಾಸಿಸುತ್ತ ಸರ್ಕಾರಿ ಕೃಪಾಪೋಷಿತರಾಗಿ…
ನೂರೆಂಟು (ಅ)ವ್ಯವಾಹರಗಳಲ್ಲಿ ಕೈ ಹಾಕಿ ನೂರಾರು ವಂಧಿ ಮಾಗಧರನ್ನು ಸಾಕುತ್ತಾ ಈಗಾಗಲೇ ಬಹಳ ವರ್ಷ ನಿಮ್ಮ ಬಿಪಿ – ಶುಗರ್ ಜೊತೆಯೊಂದಿಗೆ ಸ್ವರ್ಗ ಸುಖ ಅನುಭವಿಸಿ ಜೀವನ ಸಾಗಿಸಿರುವಿರಿ. ಮತ್ತೆ ನಿಮಗೆ ಸ್ವರ್ಗ ಬೇಕಾ? ” ಎಂದು ಕೋಪದಿಂದ ನುಡಿದ ಡೆಪ್ಯೂಟಿ ಚಿತ್ರಗುಪ್ತ ಅಲ್ಲ ಈ ಬಾರಿ ಸೀನಿಯರ್ ಚಿತ್ರಗುಪ್ತ.
” ಏನು ಸಾರ್ ಅನುಭವಿಸುವುದು? ಯಾವ ಸಮಯದಲ್ಲಿ ಯಾರು ನಮ್ಮ ಹಗರಣವನ್ನು ಬಯಲಿಗೆಳೆಯುತ್ತಾರೋ
ಎನ್ನುವ ಟೆನ್ಶನ್ ಭಯದಿಂದ ಬದುಕುತ್ತಾ ಅಮೂಲ್ಯ ಜೀವ ಕಾಪಾಡಿಕೊಳ್ಳುವದಕ್ಕೆ ಇಬ್ಬರಿಬ್ಬರು ಗನ್ ಮ್ಯಾನ್ ಇಟ್ಟುಕೊಂಡಿದ್ದೆವು…ಅಲ್ಲದೇ ಯಾವಾಗ ಯಾವ ಪಕ್ಷದಲ್ಲಿರಬೇಕು?…ಸಮಯ ಬಂದಾಗ ಯಾವುದಕ್ಕೆ ಜಂಪ್ ಮಾಡಬೇಕು ಎನ್ನುವ ತಲೆಬಿಸಿಯಲ್ಲಿ ಜೀವ ಹೋಗಿದ್ದು ಸಹಾ ತಿಳಿಯಲಿಲ್ಲ…” ಎಂದ ಜನ ನಾಯಕ ಗುಂಡಣ್ಣ ಗಂಭೀರ ಸ್ವರದಲ್ಲಿ.
” ಅದೇ ಎಂದಿನ ಸವಕಲು ಉಪನ್ಯಾಸ ಬೇಡ? ಜನಗಳಿಗೆ ಟೋಪಿ ಹಾಕಿ ಕೋಟಿಗಟ್ಟಲೆ ಸಂಪಾದಿಸಿದ್ದು ಸುಳ್ಳೇನು? ” ಈ ಬಾರಿ ಚಿತ್ರಗುಪ್ತ ತುಸು ಸಿಟ್ಟಿನಿಂದ ನುಡಿದ.
“ಸಾರ್… ಸಂಪಾದಿಸಿದ್ದೆಲ್ಲ ಚುನಾವಣೆಯ ಟಿಕೆಟ್ ಪಡೆಯುವದಕ್ಕೆ… ನಂತರ ಓಟು ಖರೀದಿಸುವದಕ್ಕೇ ಸರಿ ಹೋಯಿತು…ಇವೊತ್ತಿನ ಜಮಾನದಲ್ಲಿ ಎಷ್ಟು ಖರ್ಚು ಮಾಡಿದರೂ ಗೆಲ್ಲುವ ‘ ಗ್ಯಾರಂಟಿ ‘ ಇಲ್ಲ…ಒಂದೊಂದು ಸಲ ‘ ಉಂಡೂ ಹೋದ ಕೊಂಡೂ ಹೋದ ‘ ಎನ್ನುವ ಹಾಗೆ ದುಡ್ದೂ ಹೋಯಿತು – ಡಿಪಾಸಿಟ್ಟೂ ಹೋಯಿತು ಎನ್ನುವಂತಹ ವಿಷಮ ಪರಿಸ್ಥಿತಿ ಅನುಭವಿಸಿದ್ದೇವೆ…ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ನಮ್ಮ ಕಷ್ಟ ನಮಗೇ ಗೊತ್ತು…ಇಂತಹ ಎಲ್ಲ ಬಲವಾದ ಕಾರಣಗಳಿಂದ ಸ್ವರ್ಗಕ್ಕೆ ಹೋಗಲು ನಮಗೆ ಎಲ್ಲ ರೀತಿಯಿಂದ ಅರ್ಹತೆ ಇದೆ…ಆದ್ದರಿಂದ ಅಲ್ಲಿಗೆ ಕೂಡಲೇ ಕಳಿಸುವ ಏರ್ಪಾಟು ಮಾಡಿ” ಎಂದು ಕೋರಸ್ಸಾಗಿ ಒಟ್ಟಿಗೇ ಅರಚಿದರು ರಾಜಕೀಯ ಧುರೀಣರು.
” ಮೌನಂ ಸಮ್ಮತಿ ಲಕ್ಷಣಂ ” ಎನ್ನುವಂತೆ ಒಂದೆರಡು ನಿಮಿಷ ಸುಮ್ಮನಿದ್ದ ಡೆಪ್ಯೂಟಿ ಚಿತ್ರಗುಪ್ತ ಮತ್ತೆ ಹೇಳಿದ. ” ಆಯ್ತು…ನೋಡೋಣ… ಮುಂದಿನ ಬ್ಯಾಚಿನಲ್ಲಿ ಮತ್ಯಾರು ಸ್ವರ್ಗಕ್ಕೆ ಹೋಗಲು ತಯಾರಿದ್ದೀರಿ ಕೈ ಮೇಲಕ್ಕೆತ್ತಿರಿ”. ಅಲ್ಲಿ ನೆರೆದ ಹಲವಾರು ಪ್ರ(ಕು)ಖ್ಯಾತ ಡಾಕ್ಟರುಗಳು, ಲಾಯರುಗಳು, ಸರ್ಕಾರಿ ಅಧಿಕಾರಿಗಳು, ಬು(ಲ)ದ್ಧಿ ಜೀವಿಗಳು ಅಲ್ಲದೇ ಇತರ ಮಾರವಾಡಿ ವ್ಯಾಪಾರಿಗಳು ಸಹಾ ರಾಜಕೀಯ ಧುರೀಣರಂತೆ ನಮ್ಮನ್ನು ಸ್ವರ್ಗಕ್ಕೆ ಶಿಫ್ಟ್ ಮಾಡಬೇಕು ಎಂದು ಹಕ್ಕೊತ್ತಾಯ ಮಾಡಲು ಶುರು ಮಾಡಿದರು.
ಸತ್ತ ಶವಗಳನ್ನು ಇನ್ನೂ ಬದುಕಿರುವರು ಎನ್ನುವಂತೆ ಬಿಂಬಿಸಿ ಐ ಸಿ ಯಲ್ಲಿ ವಾರಗಟ್ಟಲೆ ಇಟ್ಟು ಬಿಲ್ಲು ಗುಂಜಿದ ಡಾಕ್ಟರುಗಳು… ಫಟಿಂಗರು ಮತ್ತು ಗೂಂಡಾಗಳ ಪರ ಸದಾ ವಕಾಲತ್ತು ವಹಿಸುವ ಫೇಮಸ್ ಲಾಯರುಗಳು… ಸರ್ಕಾರದ ಅನುದಾನಗಳನ್ನು ಸಲೀಸಾಗಿ ನುಂಗಿ ನೀರು ಕುಡಿಯುವದನ್ನು ಕರಗತ ಮಾಡಿಕೊಂಡ ಅಧಿಕಾರಿಗಳು ಗೆದ್ದ ಸರ್ಕಾರದ ಪರ ‘ ಜೀ ಹೂಜೂರ್ ‘ ಭಜನೆಯನ್ನು ನಿಷ್ಠೆಯಿಂದ ಮಾಡುವ ಬು(ಲ)ಧ್ಧಿಜೀವಿಗಳು…
ವ್ಯಾಪಾರದ ಇನ್ನೊಂದು ಅರ್ಥವೇ ಮೋಸ ಎಂದು ತಿಳಿದು ಅದರಲ್ಲಿ ನಿಷ್ಣಾತರಾದ ಮಾರವಾಡಿ ವ್ಯಾಪಾರಿಗಳು ಇಲ್ಲಿರುವ ರಾಜಕೀಯ ನಾಯಕರಿಗೆ ಇರುವ ಎಲ್ಲ ಅರ್ಹತೆಗಳು ನಮಗೆ ಕೂಡ ಇರುವುದರಿಂದ ಅವರ ಜೊತೆ ನಮ್ಮನ್ನೂ ಸ್ವರ್ಗಕ್ಕೆ ಕಳಿಸಲೇ ಬೇಕು ಎಂದು ಪುಟ್ಟ ಆಂದೋಲನವನ್ನೇ ಶುರು ಮಾಡಿದರು ‘ ಹೈ ಪ್ರೊಫೈಲ್ ‘ ವರ್ಗದ ಮಹನೀಯರು. ಇಲ್ಲಿದ್ದ ಹಲವರು ಸ್ವರ್ಗಕ್ಕೆ ಎಂಟ್ರಿ ಪಡೆದ ಬಳಿಕ ಈ ಹಾಲಿನಲ್ಲಿ ಉಳಿಯುವವರು ಎಷ್ಟು ಜನ ಎಂದು ಮನದಲ್ಲೇ ಲೆಕ್ಕ ಹಾಕತೊಡಗಿದ ಚಿತ್ರಗುಪ್ತ .
” ಸಾರ್…ಇಲ್ಲಿಯವರೆಗೆ ಪಾಪ ಮಾಡಿದವರು ನರಕಕ್ಕೆ ಮತ್ತು ಪುಣ್ಯ ಮಾಡಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ತಲೆ ತಲಾಂತರದಿಂದ ನಂಬಿಕೊಂಡು ಬಂದಿದ್ದೇವೆ. ಆದರೆ ಇಲ್ಲಿಯೂ ಭೂಲೋಕದಂತೆ ಪ್ರಜಾ ಪ್ರಭುತ್ವ ಬಲಿಷ್ಟಗೊಂಡ ಬಳಿಕ ಪಾಪ ಮಾಡಿದವರು ಸ್ವರ್ಗಕ್ಕೆ ಹೋಗಲು ‘ ದೊಡ್ಡವರಿಗೆ ‘ ಅನುವು ಮಾಡಿಕೊಡುತ್ತೀರೆಂದು ನಮಗೆ ಗೊತ್ತಿರಲಿಲ್ಲ. ಈ ಬದಲಾವಣೆಯ ಕಾರಣದಿಂದಲೋ ಏನೋ ಭೂ ಲೋಕದಲ್ಲಿ ಪಾಪಿಗಳು ‘ ಅಟ್ಟಹಾಸ ‘ ಮೆರೆಯುತ್ತಿದ್ದಾರೆ.
ದೊಡ್ಡವರು ನಮ್ಮನ್ನು ‘ ಶ್ರೀ ಸಾಮಾನ್ಯ ‘ ಎನ್ನುತ್ತಾರೆ. ಪ್ರತಿ ಚುನಾವಣೆಗೆ ತಪ್ಪದೆ ಮತ ಹಾಕುವವರು ನಾವು. ಈಗ ಸ್ವರ್ಗಕ್ಕೆ ಹಾರಲು ಸಿದ್ಧರಾದ ಮಹನಿಯರೇ ನಮಗೆ ಭೂ ಲೋಕದ ‘ ನರಕ ‘ ದ ರುಚಿ ತೋರಿಸಿದವರು. ಅಲ್ಲದೇ
ಏ ಸಿ (ಏರ್ ಕಂಡೀಷನ್) ಮುಖ ಕಾಣದ, 45 ಡಿಗ್ರಿಗಿಂತ ಹೆಚ್ಚಿನ ಬಿಸಿಲಿನಲ್ಲಿ ಕೆಲಸ ಮಾಡುತ್ತಾ ಸಣ್ಣ ಗುಡಿಸಲಿನಂತಹ ಮನೆಗಳಲ್ಲಿ (ಅರಮನೆ ಅಲ್ಲ!) ವಾಸ ಮಾಡುವ ನಾವು ಸಾಮಾನ್ಯ ಜನರು…ದಿನವೂ ನಿಯತ್ತಾಗಿ ದುಡಿದು ತಿನ್ನುವ ಜನರು… ಸ್ವರ್ಗಕ್ಕೆ ‘ ದೊಡ್ಡವರ ‘( ದೊಡ್ಡ ಪಾಪಿಗಳು!) ಜೊತೆ ಬಂದು ನಾವು ಅಲ್ಲಿ ಏನು ಮಾಡುವುದು?…ಮತ್ತದೇ ಅವರ ಕಪಿಮುಷ್ಠಿಯಲ್ಲಿ ಬದುಕುವುದಕ್ಕಿಂತ ನರಕದಲ್ಲೇ ಇರುವುದು ಒಳ್ಳೆಯದು ಸಾರ್… ಅಲ್ಲದೇ ನಾವು ಕೇವಲ ಆಧಾರ್ ಕಾರ್ಡ್ – ವೋಟರ್ ಕಾರ್ಡ್ ಹೊಂದಿದ ಜನ ಸಾಮಾನ್ಯರು ಮಾತ್ರ! ಚುನಾವಣೆ ಸಮಯದಲ್ಲಿ ಮಾತ್ರ ನಮಗೆ ದೊಡ್ಡ ಬೆಲೆ. ಸ್ವರ್ಗಕ್ಕೆ ‘ ದೊಡ್ಡವರ ‘ ಜೊತೆ ಹೋಗುವುದಕ್ಕಿಂತ ನಮಗೆ ಅಭ್ಯಾಸವಾದ ನರಕದಲ್ಲೇ ಇರುವುದು ತುಂಬಾ ಒಳ್ಳೆಯದು ಸಾರ್…ಆದ್ದರಿಂದ ದೊಡ್ಡವರ ಪಾಡು ದೊಡ್ಡವರಿಗೇ ಇರಲಿ… ನಮ್ಮ ಪಾಡಿಗೆ ನಾವಿರುತ್ತೇವೆ…” ಎಂದು ನರಪೇತಲ ನಾರಾಯಣ ‘ ಚಂದ್ರು ‘ ನರಕದಲ್ಲಿ ಸ್ವಯಂ ಇಚ್ಛೆಯಿಂದ ವಾಸಿಸುವರ ಪ್ರತಿನಿಧಿಯಾಗಿ ಸಭೆಯಲ್ಲಿ ಎದ್ದು ನಿಂತು ತನ್ನ ಬಲವಾದ ಅಭಿಪ್ರಾಯ ಮಂಡಿಸಿದ.
ಅದಕ್ಕೆ ತಮ್ಮ ಅನುಮತಿ ಇದೆ ಎನ್ನುವಂತೆ ಜೋರಾಗಿ ಚಪ್ಪಾಳೆ ತಟ್ಟಿ ಅನುಮೋದಿಸಿತು ಉಳಿದ ಶ್ರೀ ಸಾಮಾನ್ಯ ವರ್ಗ! ಪ್ರಜಾ ಪ್ರಭುತ್ವದಲ್ಲಿ ಭಿನ್ನ ಅಭಿಪ್ರಾಯಗಳು ಸಹಜ…ಮುಂದೆ ಯಾವ ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂದು ಗೊತ್ತಾಗದೆ ಸದ್ಯ ಈ ಪರಿಸ್ಥಿತಿಯಿಂದ ಬಚಾವಾದರೆ ಸಾಕು ಎಂದು ಮೌನವಾಗಿ ತಮ್ಮ ತಮ್ಮ ಬಂಗಲೆಗಳನ್ನು ಸೇರಿಕೊಂಡಿತು ಯಮರಾಜ ಮತ್ತು ಚಿತ್ರಗುಪ್ತ ಟೀಂ!
*
18 thoughts on “ಇಲ್ಲೇ ಸ್ವರ್ಗ – ಇಲ್ಲೇ ನರಕ!”
ವಿಡಂಬನೆ ಲಘು ಬರಹ ಚೆನ್ನಾಗಿದೆ
ಧನ್ಯವಾದಗಳು
ಚೆಂದದ ವಿಡಂಬನೆ ಸರ್. ಹಾಸ್ಯ ವಿಡಂಬನೆಗೆ ನೀವು ಆಯ್ಕೆ ಮಾಡಿಕೊಳ್ಳುವ ವಿಷಯ ತುಂಬಾ ಸೊಗಸಾಗಿರುತ್ತೆ.ಅಭಿನಂದನೆಗಳು ಸರ್
ಧನ್ಯವಾದಗಳು ಮೇಡಂ
ವಿಡಂಬನೆ ಲಘು ಬರಹ ಚೆನ್ನಾಗಿದೆ ಸರ್
ಧನ್ಯವಾದಗಳು ಸರ್
ವಿಡಂಬನೆ ರಾಜಕೀಯ ವಿಷಯವನ್ನೊಳಗೊಂಡು ಶ್ರೀಸಾಮಾನ್ಯನ ಅತಂತ್ರ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ.
ಅಭಿನಂದನೆಗಳು.
ಧನ್ಯವಾದಗಳು
ಇದಿನ ಆಡಳಿತ ಸ್ಥಿತಿಯ ವೈರುಧ್ದಗಳನ್ನು ಸೊಗಸಾಗಿ ಚಿತ್ರಿಸಿರುವಿರಿ. ಅಭಿನಂದನೆಗಳು.
ಧನ್ಯವಾದಗಳು
ಭೂಲೋಕದ ಪುಢಾರಿ ಪಾಪಿಗಳು ಯಮಲೋಕದಲ್ಲೂ ಸ್ವರ್ಗಕ್ಕೆ ಹಾರಲು ತಮ್ಮ ಯೋಗ್ಯತೆ ತೋರಿಸಿಕೊಂಡರು. ಆದ್ರೆ, ಶ್ರೀಸಾಮಾನ್ಯ ಈ ಪುಢಾರಿಗಳಿಂದ ದೂರ ಇರುವುದೇ ಸ್ವರ್ಗಸುಖವೆಂದು ಸ್ಪಷ್ಟವಾಗಿ ತಿಳಿಸಿದರು. ವಿಡಂಬನೆ ಅದ್ಭುತವಾಗಿದೆ. ವಿಭಿನ್ನ ವಿಷಯ.ಅಭಿನಂದನೆಗಳು.
ಧನ್ಯವಾದಗಳು
ಇವು ಪ್ರಸ್ತುತ ರಾಜಕೀಯ ಘಟನಾವಳಿಗಳು ಎಗ್ಗಿಲ್ಲದೇ ಸಾಗುತ್ತಿವೆ. ಅಮಾಯಕ ಮತ್ತು ಮುಗ್ಧ ಜನತೆ ರಾಜಕೀಯ ದುರ್ನಡತೆಗೆ ಬಲಿಯಾಗುತ್ತಲೇ ಇದ್ದಾರೆ. ಇದಕ್ಕೆ ಕೊನೆ ಎಂದು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇಂಥಹವುಗಳನ್ನು ಎತ್ತಿ ತೋರಿಸಿದ್ದುದಕ್ಕೆ ಏಮ್. ರಾಘವೇಂದ್ರ ಅವರಿಗೆ ಧನ್ಯವಾದಗಳು ಮತ್ತು ಕೃತಿ ಲೇಖನಕ್ಕೆ ಅಭಿನಂದನೆಗಳು. : ಬಿ.ಟಿ.ನಾಯಕ್.
ದನ್ಯವಾದಗಳು
Nice
Thanks Sir
ಹುಟ್ಟು ಗುಣ ಸುಟ್ಟರೂ ಹೋಗಲ್ಲ ಎನ್ನುವಂತೆ ಸತ್ತರೂ ಹೋಗಲ್ಲ ಎಂಬಂತೆ ರಾಜಕಾರಣಿಗಳು
ಬ್ರಷ್ಟ ಅಧಿಕಾರಿಗಳು ನರಕಕ್ಕೆ ಹೋದರೂ ತಮ್ಮ ಗುಣ ಬಿಡಲಿಲ್ಲ
ಇಂಥವರೊಂದಿಗೆ ಸ್ವರ್ಗ ಕ್ಕೆ ಸೇರುವುದಕ್ಕಿಂತ ನರಕವೇ ಲೇಸು ಎನ್ನುವ ಶ್ರೀ ಸಾಮಾನ್ಯ ನ ವಿಚಾರ ಸರಿಯೇ
ದನ್ಯವಾದಗಳು