ನಿನ್ನ ಮೊಲೆ ತೊಟ್ಟನ್ನು ಕೊಡು ಇಳೆಗೆ

ಮಳೆಯ ಕರುಣೆ
ಅನೇಕ ಬಾರಿ ತಾಯಿಯ ಮೊಲೆ ತೊಟ್ಟಿನ ಹಾಗೆ !

ಒಮ್ಮೊಮ್ಮೆ ಕೂಗದಿದ್ದರೂ ಮಗು
ಓಡಿ ಬಂದು ನೀಡುವುದು
ಇನ್ನೊಮ್ಮೆ ಚೀರಿದರೂ ಮಗು, ಬಾರದೇ
ಒಲೆಯ ಮುಂದೆ ಒಲೆಯಾಗಿಯೇ ಇರುವುದು !

ನನ್ನ ಕೈ ಹಿಡಿದವಳು
ನನ್ನ ಕಣ್ಣ ಮುಂದೆಯೂ ಸೆರಗುಮುಚ್ಚಿ
ಮಕ್ಕಳಿಗೆ ಮೊಲೆಯೂಡುತ್ತಿದ್ದಳು, ಆಗ
ಮೋಡದ ಆಚೆ ಇದ್ದ ಚಂದ್ರ
ಬೆಳಂದಿಗಳಲ್ಲಿ ನಗೆಯಾಗಿ
ನನ್ನ ಕಣ್ಣನ್ನು ಸೆಳೆಯುತ್ತಿದ್ದ

ಸೊಸೆಯಂದಿರ ಕಾಲ ಇದು !
ಮಕ್ಕಳಿಗೆ ಮೊಲೆಯೂಡದ ಅವರು
ಬಾಟ್ಲಿಯಲ್ಲಿ ನಂದಿನಿ ಹಾಲು ತುಂಬಿಸಿ
ಮಕ್ಕಳ ತುಟಿಯಲ್ಲಿ ಇಟ್ಟು, ಅದು
ಕಡೆಬಾಯಲ್ಲಿ ಬರುವುದನ್ನು ನೋಡುತ್ತಾರೆ

ಮಳೆಯೂ ಈಗ ಬದಲಾಗುತ್ತ ಬಂದಿದೆ
ಮುಂಗಾರಿಗೆ ಮುಂಗಾಲಿನಲ್ಲಿ ಒದ್ದು
ಹಿಂಗಾರಿಗೆ ಹಿಂಗಾಲಿನಲ್ಲಿ ತುಳಿದು
ತಾನು ಜವಾಬ್ದಾರಳಲ್ಲ ಎಂಬಂತೆ
ಸುಮ್ಮನಿರುತ್ತದೆ !

ನಾನು ಚಿಕ್ಕವನಿದ್ದಾಗ
ಹನಿಮಳೆಗೆ ಕೈ ಒಡ್ಡುತ್ತಿದ್ದೆ
ಆಗ ಅಪ್ಪ ಅಮ್ಮನ ತುಟಿಗಳಲ್ಲಿ ಬೈಗಳು ಇದ್ದರೂ
ಒಳಗೊಳಗೆ ಅವರು ಮಗುವಾಗುತ್ತಿದ್ದರು

ಮೊನ್ನೆ ಸೆಖೆ ತಡೆಯಲಾರದೆ
ಅಂಗಳಕ್ಕಿಳಿದು ಆಕಾಶ ನೋಡಿದೆ :
ಅಲ್ಲಿ, ನನ್ನ ಕೃತಕ ಹಲ್ಲಿನ ನಗೆ
ನನ್ನನ್ನೇ ಅಣಕಿಸುವುದನ್ನು ನೋಡಿ
ಮರಳಿ ಮನೆಯೊಳಗೆ ಕಾಲಿಟ್ಟೆ

ಕೈ ಮುಗಿವೆ :
ತಾಯಿಯಾಗು ನಿಜದ, ಮಳೆಯೇ ತಾಯಿಯಾಗು ಸಹಜದ !
ನಿನ್ನ ಮೊಲೆತೊಟ್ಟನ್ನು ಕೊಡು ಇಳೆಗೆ
ಮತ್ತು ಒಣಗುತ್ತಿರುವ ನನ್ನ ತುಟಿಗೆ !

  • ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ನಿನ್ನ ಮೊಲೆ ತೊಟ್ಟನ್ನು ಕೊಡು ಇಳೆಗೆ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter