(ಹಾಸ್ಯ/ವಿಡಂಬನೆ ಬರಹ)
” ಕೂಸು ಹುಟ್ಟುವ ಮುಂಚೆ ಕುಲಾವಿ ಏಕೆ? ” ಇದು ರಾಜಕೀಯದಲ್ಲಿ ಈಗ ಸವಕಲು ಗಾದೆ. ಚುನಾವಣೆಗಳು ಇನ್ನೂ ಆರು ತಿಂಗಳುಗಳು ಇದ್ದಾಗಲೇ ಸ್ಪರ್ಧಿಸಬೇಕು ಎನ್ನುವ ಇರಾದೆ ಇರುವ ಚಾಲಾಕಿ ಅಭ್ಯರ್ಥಿಗಳು ತಮ್ಮ ಹೆಸರನ್ನು ಚಾಲ್ತಿಯಲ್ಲಿ ಇಡಲು ಇಂತಹ ಪಕ್ಷದ ಕ್ಷೇತ್ರದ ಆಪೇಕ್ಷಿತ ಅಭ್ಯರ್ಥಿ ಎಂದು ಊರಿನ ಆಯಕಟ್ಟಿನ ಜಾಗಗಳಲ್ಲಿ ಫ್ಲೆಕ್ಸಿಗಳನ್ನು ಹಾಕಿ ಉಳಿದವರಿಗೆ ವಾರ್ನಿಂಗ್ ಕೊಡುತ್ತಾರೆ. ಅಂತೆಯೇ ಅಭಿಮಾನಿಗಳ ( ಪೇಯ್ಡ್ ಹಿಂಬಾಲಕರ! )
ಸಂಘ ಸ್ಥಾಪಿಸಿ ತಮ್ಮ ಹೆಸರಿನಲ್ಲಿ ಉಚಿತ ರಕ್ತ ದಾನ ಶಿಬಿರ ಏರ್ಪಾಡು ಮಾಡುವದು…ದೇವಸ್ಥಾನಗಳ – ಮಸೀದಿಗಳ ಜೀರ್ಣೋದ್ಧಾರಕ್ಕೆ ಹಣಕಾಸು ನೆರವು ಒದಗಿಸುವುದು… ಬಿಸಿಲು ಕಾಲವಾದರೆ ಅಲ್ಲಲ್ಲಿ ನೀರಿನ ಅರವಟಿಗೆ ( ಅದರ ಮೇಲೆ ದೊಡ್ಡ ಫ್ಲೆಕ್ಸಿ ಬೋರ್ಡು ಕಂಪಲ್ಸರಿ! ) ಏರ್ಪಾಡು ಮಾಡುವದು…ತಮ್ಮ ಮಕ್ಕಳ ಮದುವೆ ಮುಂದಿಟ್ಟುಕೊಂಡು ಬಡವರಿಗೆ ( ನೆಪ ಮಾತ್ರಕ್ಕೆ! ) ನೆರವಾಗಲೆಂದು ಸಾಮೂಹಿಕ ಮದುವೆಗಳನ್ನು ಆಯೋಜಿಸಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುವುದು… ಅಲ್ಲಿಯವರೆಗೆ ಸಾರ್ವಜನಿಕವಾಗಿ ಮೂತಿ ( ಮುಸುಡಿ! ) ತೋರಿಸದ ನಾಯಕರು ಧಿಡೀರ್ ಎಂದು ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮತ್ತು ಅವರ ಮನೆಗಳಲ್ಲಿ ಆಗುವ ಸಮಾರಂಭಗಳಿಗೆ ಅದರಲ್ಲೂ ಮುಖ್ಯವಾಗಿ ಸತ್ತವರ ಮನೆಗಳಿಗೆ ಹೋಗಿ ( ಆ ಕುಟುಂಬದ ಸದಸ್ಯರು ಎಷ್ಟು ಪರಿ ಪರಿಯಾಗಿ ಬೇಡವೆಂದು ಬೇಡಿಕೊಂಡರೂ! ) ಅವರಿಗೆ ಸಾಂತ್ವನ ಹೇಳಿ ಬರುವುದು ಇವೊತ್ತಿನ ಟ್ರೆಂಡ್… ಅಲ್ಲದೇ ತಮ್ಮ ಒಡೆತನದ ಹ್ಯಾಂಡ್ ಬಿಲ್ ದಿನಪತ್ರಿಕೆಗಳಲ್ಲಿ ( ಹೆಸರಿಗಷ್ಟೇ ದಿನಪತ್ರಿಕೆ. ಪ್ರಿಂಟ್ ಆಗುವುದು ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ! ) ಮತ್ತು ತಮ್ಮ ಕುಟುಂಬದ ಲೋಕಲ್ ಚಾನಲ್ ಟಿ ವಿ ಯಲ್ಲಿ ತಮ್ಮ ದೊಡ್ಡ ಫೋಟೋಗಳ ಜೊತೆ ಸುದ್ದಿಗಳು ಪ್ರತಿ ನಿತ್ಯ ಪ್ರಸಾರವಾಗುವಂತೆ ನೋಡಿಕೊಳ್ಳುವುದು…ನಮ್ಮ ‘ ಜಾತ್ಯಾತೀತ ‘ ರಾಷ್ಟ್ರದಲ್ಲಿ ಉಪಜಾತಿಗಳ ಸಮಾವೇಶ ಆಯೋಜಿಸುವುದು…ಅವುಗಳಲ್ಲಿ ಪಾಲ್ಗೊಳ್ಳಲು ಸಂಬಂಧ ಪಟ್ಟ ಮಠಾಧೀಶರಿಗೆ ಕಾಣಿಕೆ ಸಮರ್ಪಿಸಿ, ಅಡ್ಡಡ್ಡ ಬಿದ್ದು ಆಹ್ವಾನಿಸುವುದು… ಇತ್ಯಾದಿ… ಇತ್ಯಾದಿ…ಗರಿ ಗರಿ ಖಾದಿ ( ಖದ್ದರ್ ) ಧರಿಸಿದ ನಾಯಕರು ಕ್ಷೇತ್ರದೆಲ್ಲೆಡೆ ಮಿಂಚಿನ ಸಂಚಾರ ಮಾಡುತ್ತಿದ್ದಾರೆ ಎಂದರೆ ಚುನಾವಣೆಗಳು ಹತ್ತಿರ ಬರುತ್ತಿವೆ ಎಂದು ಜನ ಸಾಮಾನ್ಯರ ನಂಬಿಕೆ.
ನಿಲ್ದಾಣದಲ್ಲಿ ಬಸ್ ಬಂದ ಕೂಡಲೇ ಕರವಸ್ತ್ರವನ್ನು ಸೀಟಿನ ಮೇಲೆ ಕಿಟಕಿಯಿಂದ ಹಾಕಿ ರಿಸರ್ವ್ ಮಾಡುವಂತೆ ಚುನಾವಣೆ ಇನ್ನೂ ಐದಾರು ತಿಂಗಳು ಇರುವಂತೆಯೇ ‘ ಬಂಡಲ್ ಪಕ್ಷದ ‘ ಅಭ್ಯರ್ಥಿಯಾಗಿ ರಿಜರ್ವ್ ಮಾಡಿಕೊಂಡ ಗುಂಡಣ್ಣ.
” ನಿಮ್ಮಂತಹ ಬಡವರ ಬಂಧು – ಜನ ನಾಯಕ ಈ ರಾಜ್ಯದಲ್ಲೇ ಇಲ್ಲ ( ಅಲ್ಲಲ್ಲ ದೇಶದಲ್ಲೇ ಇಲ್ಲ! )…ನಿಮ್ಮದು ಅಶ್ವಮೇಧ ಕುದುರೆ…ಗೆಲುವು ನಿಮ್ಮದೇ… ಬೇಕಿದ್ದರೆ ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ಕೊಡುತ್ತೇವೆ…” ಎಂದೆಲ್ಲಾ ಹೊಗಳಿ ಹೊಗಳಿ ಗುಂಡಣ್ಣನನ್ನು ಆಕಾಶದ ಎತ್ತರಕ್ಕೆ ಏರಿಸಿದರು ‘ ಪೇಯ್ಡ್ ಅಭಿಮಾನಿಗಳು ‘ ( ಸದ್ಯ ಹೊನ್ನ ಶೂಲಕ್ಕೆ ಎರಿಸಲಿಲ್ಲ. ಅದೇ ಪುಣ್ಯ! ). ಒಂದೊಂದು ಸಲ ಬಸ್ ಹತ್ತಿದ ಮೇಲೆ ಸೀಟು ರಿಸರ್ವ್ ಮಾಡಲು ಹಾಕಿದ ಕರವಸ್ತ್ರವೇ ನಾಪತ್ತೆಯಾಗಿರುತ್ತದೆ. ಅದೇ ರೀತಿ ಗುಂಡಣ್ಣನ ‘ ಬೀ ಫಾರ್ಮ್ ‘ ಬೇರೆ ಪಕ್ಷದ ಬಲಾಢ್ಯ ( ಹಣಬಲದಿಂದ! ) ನಾಯಕನೊಬ್ಬ ಧಿಡೀರ್ ಪಕ್ಷಾಂತರ ಮಾಡಿ ಎಗರಿಸಿಬಿಟ್ಟ. ರಾಜಕೀಯ ರಂಗ ಪ್ರವೇಶಿಸಿದ ಬಳಿಕ ಅವರಿವರನ್ನು ಅಳುವಂತೆ ಮಾಡಿದ್ದ ಗುಂಡಣ್ಣನಿಗೆ ಈಗ ಸ್ವತಃ ಅಳುವ ಪರಿಸ್ಥಿತಿ ಬಂತು. ಇನ್ನು ಐದು ವರ್ಷ ಅಳುತ್ತಾ ಕೂಡುವ ಬದಲು ಬಯಸದೇ ಬಂದ ಭಾಗ್ಯದ ರೀತಿ ‘ ಬೋಗಸ್ ‘ ಪಕ್ಷದವರು ಕೊಟ್ಟ ಬಾವುಟ ಹಿಡಿದೇ ಬಿಟ್ಟ. ಪಕ್ಷ ನಿಷ್ಠೆ, ತತ್ವ ಸಿದ್ಧಾಂತಗಳೆಲ್ಲ ಮಣ್ಣು ಮುಕ್ಕಲಿ! ಸಾಮಾನ್ಯ ಜನರ ನಿಸ್ವಾರ್ಥ ಸೇವೆ ಮಾಡಲು ಯಾವ ಪಕ್ಷವಾದರೇನು?. ಅಧಿಕಾರ ಮುಖ್ಯ! ‘ ಬಿ-ಫಾರ್ಮ್ ‘ ಕೊಡದ ( ಬಂಡಲ್ ) ಹಳೇ ಪಕ್ಷದಲ್ಲಿದ್ದು ವ್ಯರ್ಥವೆಂದು ‘ ಬೋಗಸ್ ‘ ಪಕ್ಷಕ್ಕೆ ಕೂಡಲೇ ‘ ಜಂಪ್ ಜಿಲಾನಿ ‘ ಮಾಡಿದ ತನ್ನ ಅಸಂಖ್ಯಾತ ( ಕೆಲವೇ ಕೆಲ !) ಬೆಂಬಲಿಗರೊಂದಿಗೆ ರಾಜಕೀಯ ಮುತ್ಸದ್ದಿ ಗುಂಡಣ್ಣ.
ಈ ಬಾರಿ ಶತಾಯು ಗತಾಯವಾಗಿ ಗೆಲ್ಲಲೇಬೇಕು ಎನ್ನುವ ಶಪಥ ಕೈಗೊಂಡಿದ್ದ ಗುಂಡಣ್ಣ ತನ್ನ ಕ್ಷೇತ್ರದಲ್ಲಿ ಒಟ್ಟು ಎಷ್ಟು ಮತದಾರರು ಇದ್ದಾರೆ…ಯಾವ ಯಾವ ಕೆಟಗರಿಯವರು ಎಲ್ಲೆಲ್ಲಿ ಹೆಚ್ಚು ವಾಸವಾಗಿದ್ದಾರೆ ಮತ್ತು ಅವರ ಮನಸಿನಲ್ಲಿ ಏನಿದೆ ಎನ್ನುವುದನ್ನು ಪ್ರತಿಯೊಬ್ಬ ಮತದಾರನ ಮನೆ ಮನೆಗೆ ಹೋಗಿ ಸಂಪೂರ್ಣವಾಗಿ ತಿಳಿಯಲು ಮತ್ತು ಕ್ಷೇತ್ರದ ತಾಜಾ ಪರಿಸ್ಥಿತಿಯ ಸರ್ವೇ ಮಾಡಲು ಬೆಂಗಳೂರಿನ ಪ್ರತಿಷ್ಠಿತ ‘ ಟಿವಿ 420 ‘ ಸಂಸ್ಥೆಗೆ ಒಪ್ಪಿಸಿದ ಸ್ವಂತ ಹಣದಿಂದ ಗುಂಡಣ್ಣ.
ಆ ಸರ್ವೇ ಟೀಂ ಒಂದು ತಿಂಗಳು ಕ್ಷೇತ್ರದ ಎಲ್ಲ ಕಡೆ ಸಂಚರಿಸಿ ಮತ ಹಾಕುವ ಮತದಾರರ ವರ್ಗೀಕರಣ ಹಾಗೂ ಅವರ
ಮನೋಭಾವನೆಗಳನ್ನು ಶೇಖರಿಸಿ ಈ ಕೆಳಗಿನ ಸರ್ವೇ ರಿಪೋರ್ಟ್ ಗುಂಡಣ್ಣನಿಗೆ ಮುಚ್ಚಿದ ಕವರಿನಲ್ಲಿ ಸಲ್ಲಿಸಿತು.
ಆ ಸರ್ವೆಯ ವಿಸ್ತಾರದ ರಿಪೋರ್ಟ್ ತುಂಬಾ ದೊಡ್ಡದಿದೆ. ಅದನ್ನು ಸಂಕ್ಷಿಪ್ತಗೊಳಿಸಿದ ಬಳಿಕ ಅದು ಮತದಾರರನ್ನು ಮುಖ್ಯವಾಗಿ ಮೂರು ಕೆಟಗರಿಗಳಾಗಿ ( ವರ್ಗಗಳಾಗಿ ) ವಿಭಜಿಸಿತು. ಅವು ಈ ಕೆಳಗಿನಂತೆ ಇವೆ.
ಒಂದನೆಯ ಕೆಟಗರಿ
ಕೆಲವರ ಮನೆಗಳ ಮುಂದೆ ‘ ನಾಳೆ ಬಾ ‘ ( ಹಲವು ಆಸ್ತಿಕರ ಮನೆ ಬಾಗಿಲಿಗೆ ಇದನ್ನು ಹಾಕಿರುತ್ತಾರೆ…) ಎನ್ನುವ ಬದಲಿಗೆ ” ನಾವು ಮತದಾನ ಮಾಡುವುದಿಲ್ಲ ” ಎಂದು ಸ್ಪಷ್ಟವಾಗಿ ದೊಡ್ಡ ಅಕ್ಷರಗಳಲ್ಲಿ ಹಾಕಿದ್ದರು. ಅಂತಹ ಮನೆಗಳ ಹಿರಿಯರನ್ನು ವಿಚಾರಿಸಿದಾಗ ” ನಾವು ಯಾರನ್ನೂ ನಂಬುವುದಿಲ್ಲ ಮತ್ತು ಯಾರಿಗೂ ‘ ಮತಭಾಗ್ಯ ‘ ಕರುಣಿಸುವದಿಲ್ಲ. ಹಾಗೆಂದು ನಮ್ಮ ಮತಗಳನ್ನು ಮಾರಿಕೊಳ್ಳುವ ಹೀನ ಸ್ಥಿತಿಗೆ ನಾವು ಇಳಿದಿಲ್ಲ. ಎಲ್ಲ ಪಕ್ಷಗಳ ಆಶ್ವಾಸನೆಗಳು ಹೆಚ್ಚೂ ಕಡಿಮೆ ಮಸಾಲೆ ದೋಸೆಗಳಂತೆ ಒಂದೇ ತರಹ ಕಾಣುತ್ತವೆ. ಈ ಕಡು – ಸುಡು ಬಿಸಿಲಿನ ಮತದಾನದ ದಿನ ನಾವು ಹೊರಗೆ ಬರದೆ ಮನೆಯಲ್ಲೇ ಕೂತು ಅಮೆಜಾನ್, ಪ್ರೈಮ್, ಹಾಟ್ ಸ್ಟಾರ್, ಓಟಿಟಿ ಇತ್ಯಾದಿ ನೋಡುತ್ತಾ ಕಾಲ ಕಳೆಯುತ್ತೇವೆ. ಮಕ್ಕಳೊಂದಿಗೆ ಚೆಸ್, ಕ್ಯಾರಂ, ಪ್ಲೇಯಿಂಗ್ ಕಾರ್ಡ್ಸ್ ಆಡಿ ಎಂಜಾಯ್ ಮಾಡುತ್ತೇವೆ. ನಾವು ಪ್ರಜಾಪ್ರಭುತ್ವದ ಉತ್ಸವ, ಸಂತೆ ಮತ್ತು ಜಾತ್ರೆಗಳನ್ನು ನಂಬುವುದಿಲ್ಲ. ಪೋಲಿಂಗ್ ಬೂತುಗಳತ್ತ ಅಂದು ನಾವು ಅಪ್ಪಿ ತಪ್ಪಿಯೂ ತಲೆ ಹಾಕುವುದಿಲ್ಲ” ಎಂದು ಕೆಲವು ಮನೆಯ ಯಜಮಾನರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರ ಅಭಿಪ್ರಾಯವನ್ನು ನೀವು ದಯವಿಟ್ಟು ಗಮನಿಸಬೇಕು.
ಎರಡನೆಯ ಕೆಟಗರಿ
ಕೆಲವು ಮನೆಯ ಮಾಲಕರು ತಮ್ಮ ಮನೆಗಳ ಮುಂದೆ ” ನಮ್ಮ ಮತ ಮಾರಾಟಕ್ಕಿಲ್ಲ ” ಎಂದು ದೊಡ್ಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಿ ಹಾಕಿದ್ದಾರೆ. ಅವರ ಕುಟುಂಬದ ಹಿರಿಯರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ” ನಾವು ದೇಶ ಪ್ರೇಮಿಗಳು…ಕರ್ನಾಟಕದ
ಅಸಾಮಾನ್ಯ ಮತದಾರರು. ಮತ ಕೇಳಿಕೊಂಡು ಬಂದ ಅಭ್ಯರ್ಥಿಗಳಲ್ಲಿ ನಮ್ಮದು ಒಂದು ಪುಟ್ಟ ಮನವಿ. ತಾವು ಯಾವ ಪಕ್ಷದಿಂದ ಗೆದ್ದು ಬಂದಿರುವಿರೋ ಆ ಪಕ್ಷವನ್ನು ಮತ್ತೆ ಐದು
ವರ್ಷದವರೆಗೆ ಬಿಡಬಾರದು… ಅಂದರೆ ಪಕ್ಷಾಂತರ ಮಾಡಬಾರದು.
ಈ ಐದು ವರ್ಷ ಪೂರ್ತಿ ‘ ನಾಪತ್ತೆ ‘ (ಅಂತರ್ಧಾನ! ) ಯಾಗದೆ ಪ್ರತಿ ಮೂರು ಆರು ತಿಂಗಳಿಗೆ ಒಂದು ಬಾರಿ ಬಂದು ತಮ್ಮ ಮುಖಾರವಿಂದ ತೋರಿಸಿ, ನಮ್ಮನ್ನು ಕಂಡು ಯೋಗಕ್ಷೇಮ ವಿಚಾರಿಸಿಕೊಂಡು ಹೋಗಬೇಕು.. ಹೀಗೆಂದು ತಮ್ಮ ಮನಸಾಕ್ಷಿಯಿಂದ ಸ್ಟಾಂಪ್ ಪೇಪರಿನಲ್ಲಿ ಬರೆದುಕೊಡಬೇಕು. ಇದಕ್ಕೆ ಒಪ್ಪಿಗೆ ಇದ್ದರೆ ನಾವು ಸಮಾನ ಮನಸ್ಕರು ಹಾಗೂ ಕುಟುಂಬ ಸದಸ್ಯರು, ಬಂಧುಗಳು ತಪ್ಪದೆ ತಮಗೆ ಮತ ಹಾಕುತ್ತೇವೆ ” ಎಂದು ಅಭ್ಯರ್ಥಿಗಳಿಗೆ ಪ್ರಾಮಿಸ್ ಮಾಡಿದರು ವಿಶೇಷ ವರ್ಗದ ಹಿರಿಯ ಮತದಾರರು. ಇದನ್ನು ಪ್ರತ್ಯೇಕವಾಗಿ ನೋಟ್ ಮಾಡಿಕೊಳ್ಳಿ.
ಮೂರನೆಯ ಕೆಟಗರಿ
‘ ಸತ್ಯ ಹರಿಶ್ಚಂದ್ರ ‘ ಕಾಲೋನಿಯ ಒಂದು ಮನೆಯ ಮುಂದೆ ಹಾಕಿದ ” ಇಲ್ಲಿ ಮತ ಮಾರಾಟಕ್ಕೆ ಇದೆ – ಅದೂ ಯೋಗ್ಯ ದರದಲ್ಲಿ! ” ಎನ್ನುವ ಬೋರ್ಡ್ ಸರ್ವೇದವರನ್ನು ಕಕ್ಕಾಬಿಕ್ಕಿಯನ್ನಾಗಿಸಿತು. ಕಾರಣ ಅಂತಹ ‘ ಓಪನ್ ಆಫರ್ ‘ ಅವರು ತಮ್ಮ ಜೀವಮಾನದಲ್ಲೇ ಕಂಡಿರಲಿಲ್ಲ. ಯಥಾ ರೀತಿ ಮನೆಯ ಯಜಮಾನರನ್ನು ಭೇಟಿಯಾಗಿ ವಿಚಾರಿಸಿದಾಗ ಅವರ ನೇರ – ದಿಟ್ಟ ನುಡಿಗಳು ಹೀಗೆ ಇದ್ದವು. ” ನಮ್ಮ ಕುಟುಂಬದಲ್ಲಿ ಸರಿ ಸುಮಾರು 25 – 30 ಯೋಗ್ಯ ಮತಗಳಿವೆ. ನಿಮ್ಮ ಭರವಸೆಗಳು, ಉಚಿತ ಭಾಗ್ಯದ ಗ್ಯಾರಂಟಿಗಳನ್ನು ನಾವು ನಂಬುವುದಿಲ್ಲ. ಮತದಾನವಾದ ಬಳಿಕ ನೀವು ಯಾರೋ? ನಾವ್ಯಾರೋ? ನಿಮ್ಮ ವ್ಯಾಪಾರ… ನಿಮ್ಮ ಬಂಡವಾಳ… ನಿಮ್ಮ ಲಾಭಾಂಶ… ಎಲ್ಲಾ ನಿಮಗೇ ಇರಲಿ…ಚುನಾವಣೆಯಲ್ಲಿ ಗೆದ್ದ ಬಳಿಕ ನಿಮ್ಮದು ‘ ಘೋಡಾ ಹೈ ಮೈದಾನ್ ಹೈ… ‘ ಕಾರ್ಯಾಚರಣೆ ಎನ್ನುವುದು ನಮಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ನಾವು ಹೇಳುವದು ‘ ನನ್ನ ಮತ – ನನ್ನ ಹಕ್ಕು ( ರೇಟು! ) ‘ ಎಂದು…ಒಂದು ಬಾರಿ ಹಣ ಪಡೆದುಕೊಂಡ ಬಳಿಕ ನಾವು ಮಾತು ತಪ್ಪುವುದಿಲ್ಲ. ಒಮ್ಮೆ ಮಾರಿದ ಸರಕನ್ನು ಮತ್ತೆ ಇನ್ನೊಬ್ಬರಿಗೆ ಮಾರುವಷ್ಟು ನೀಚರು ( ನಿಮ್ಮಂತೆ! ) ನಾವಲ್ಲ. ಒಂದು ಸಲ ‘ ಡೀಲ್ ‘ ಆದರೆ ಮುಗೀತು! ನಿಮಗೆ ನಮ್ಮ ಅಮೂಲ್ಯ ಮತ ಬೇಕಿದ್ದರೆ ಮತದಾನದ ಎರಡು ಮೂರು ದಿನಗಳ ಮುಂಚೆ ತಾವು ಪೂರ್ತಿ ಹಣ ( ಅಡ್ವಾನ್ಸ್ / ಇನ್ಸ್ಟಾಲ್ಮೆಂಟ್ ಪದ್ಧತಿ ಇಲ್ಲ! ) ಸಂದಾಯ ಮಾಡಿದರೆ ನಿಮ್ಮ ಪಕ್ಷದ ಅಭ್ಯರ್ಥಿಗೆ ನಾವು ನೂರು ಶತ ಮತ ಹಾಕುತ್ತೇವೆ. ಇದು ನಮ್ಮ ಕುಟುಂಬದ ಗ್ಯಾರಂಟಿ ಮತ್ತು ವಾರಂಟಿ!. ಅಲ್ಲದೇ ಒಬ್ಬರಿಗೆ ವಾಗ್ದಾನ ಮಾಡಿ ಇನ್ನೊಬ್ಬರಿಗೆ ಅಡ್ಡ ಮತದಾನ ಮಾಡುವವರು ನಾವಲ್ಲ. ಇದನ್ನು ಬೇಕಿದ್ದರೆ ಸ್ಟಾಂಪ್ ಪೇಪರಿನ ಮೇಲೆ ಬರೆದು ಕೊಡಲು ನಾವು ಸಿದ್ಧ. ತಿಳಿಯಿತೇ… “. ಮತದಾರರ ಈ ಮುಕ್ತ ಅಭಿಪ್ರಾಯವನ್ನು ಕಡೆಗಣಿಸಬೇಡಿ.
ಹೀಗೆ ಸರ್ವೇ ಮಾಡಿದ ರಿಪೋರ್ಟನ್ನು ಇಂಚಿಂಚಾಗಿ ಓದಿದ ಗುಂಡಣ್ಣನಿಗೆ ಎಂದೆಂದೂ ತನ್ನ ಪ್ರೀತಿ ಪಾತ್ರರಾದ ನಾಲ್ಕನೆಯ ಮತ್ತು ದೇಶದ ಅತ್ಯಂತ ಜನಪ್ರಿಯ ಜನತಾ ಕೆಟಗರಿ ( ಜನ ಸಾಮಾನ್ಯರ ) ಬಗ್ಗೆ ವರದಿಯಲ್ಲಿ ಏನೂ ಇರಲೇ ಇಲ್ಲ . ಇವರು ಮನೆ ಮುಂದೆ ಬೋರ್ಡ್ ಹಾಕಿ ಪಬ್ಲಿಸಿಟಿ ಮಾಡಿಕೊಳ್ಳುವವರು ಅಲ್ಲ. ನಿಜ ಹೇಳಬೇಕೆಂದರೆ ದೇಶದ ಪ್ರಜಾಪ್ರಭುತ್ವದ ಹಬ್ಬದ ಸಡಗರದಲ್ಲಿ ಯಾವಾಗಲೂ ಸಂಭ್ರಮದಿಂದ ಪಾಲ್ಗೊಳ್ಳುವವರು ಇವರೇ ಎನ್ನುವ ವಿಷಯ ಹಿರಿಯ ರಾಜಕಾರಿಣಿ ಗುಂಡಣ್ಣನಿಗೆ ತಿಳಿಯದ್ದಲ್ಲ. ಅವರು ಸಾರಾ ಸಗಟಾಗಿ ಮತಗಟ್ಟೆಗೆ ಬರಲು ಎಂತಹ ಎಂತಹ ‘ ಭಾಗ್ಯಗಳನ್ನು ‘ ಕರುಣಿಸಬೇಕು, ಅದರಲ್ಲೂ ಮುಖ್ಯವಾಗಿ ಕತ್ತಲು ರಾತ್ರಿ ( ಮತದಾನದ ಹಿಂದಿನ ದಿನ! ) ಯಲ್ಲಿ ಅವರಿಗೆ ಏನೇನು ಸಮರ್ಪಿಸಬೇಕು ಎಂದು ಈಗಿನ ಪುಟ್ಟ ಮಕ್ಕಳಿಗೂ ತಿಳಿದ ವಿಷಯ. ‘ ಹೆಂಬಾಹ ‘ ( ಹೆಂಡ – ಬಾಡೂಟ – ಹಣ ) ಶ್ರೀ ಸಾಮಾನ್ಯ ಮತದಾರರನ್ನು ಮೆಚ್ಚಿಸುವ ಜನಪ್ರಿಯ ಸ್ತೋತ್ರ ಎಂದು ಗುಂಡಣ್ಣನಿಗೆ ತಿಳಿಯದ ವಿಷಯವಲ್ಲ. ಹೀಗಾಗಿ ಬೂತ್ ಮಟ್ಟದಿಂದ ಬ್ಲಾಕ್ ಮಟ್ಟದವರೆಗೆ ಮೊದಲು ಮತದಾರರ ‘ ಸೇವೆ ‘ ( ನಂತರ ಅವರ ಶೇವ್! ) ಮಾಡಿ ಗೆಲುವು ದಾಖಲಿಸುವ ಏಕ ಮಾತ್ರ ಗುರಿಯತ್ತ ಗಮನ ಹರಿಸಿದ ಜನಪ್ರಿಯ ನಾಯಕ ಗುಂಡಣ್ಣ. ಅದಕ್ಕಾಗಿಯೇ ಎಂದೆಂದೂ ನಂಬಿಕೆಗೆ ಪಾತ್ರರಾದ ಮತ್ತು ಯಾವತ್ತೂ ಕೈ ಬಿಡದ ನಾಲ್ಕನೆಯ ಜನತಾ ಕೆಟಗರಿ ವರ್ಗದ ಮತದಾರರೆಂದರೆ ಗುಂಡಣ್ಣನಿಗೆ ವಿಶೇಷ ಪ್ರೀತಿ…
ಒಟ್ಟಿನಲ್ಲಿ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲುವುದು ಮುಖ್ಯವೇ ಹೊರತು ಯಾವ ( ವಾಮ ) ಮಾರ್ಗದಿಂದ ವಿಜಯ ಸಾಧಿಸಿದ್ದಾರೆ ಎನ್ನುವುದು ಅಲ್ಲವಲ್ಲ ಎಂದು ಗುಂಡಣ್ಣನ ತರ್ಕ. ಹೌದು ಅದು ನಿಜ ತಾನೇ!
10 thoughts on “ಮತದಾರ ಪ್ರಭು!”
ಮತದಾರ ಪ್ರಭು ವಿಡಂಬನೆ ಚನ್ನಾಗಿದೆ. ಹೆಂಬಾಹ ಮತ್ತು ನನ್ನ ಮಾತ – ನನ್ನ ರೇಟು ಯೋಚನೆ ವಾಸ್ತವದ ಕನ್ನಡಿ. ಅಭಿನಂದನೆಗಳು ರಾಘಣ್ಣ.
ಧನ್ಯವಾದಗಳು
ರಾಜಕೀಯ ವಿಡಂಬನಾ ಬರಹ ಚಾಟಿಯೇಟಿನಂತಿದೆ. ಈಗಿನ ವಸ್ತುಸ್ಥಿತಿಯನ್ನು ತೆರೆದಿಟ್ಟಿದೆ.
ಅಭಿನಂದನೆಗಳು.
ಧನ್ಯವಾದಗಳು
ಸದ್ಯದ ರಾಜಕೀಯ ಸಾಗುತ್ತಿರುವ ನಾಗಾಲೋಟದ ಚಿತ್ರಣ ತುಂಬಾನೇ ಮಜ ಕೊಡುತ್ತಿದೆ ಓದುಗರಿಗೆ. ಚಾಟಿ ಏಟಿನ ಪ್ರಯೋಗ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಸಿಂಪ್ಲೀ ಸೂಪರ್.
ಮನದುಂಬಿದ ಅಭಿನಂದನೆಗಳು.
ಧನ್ಯವಾದಗಳು
ರಾಜಕೀಯ ವಿಡಂಬನೆಗಳು ಈಗ ಸಹಜ ಮತ್ತು ಸ್ವಾಭಾವಿಕವಾಗಿವೆ. ಬಹುಶಃ ರಾಜಕೀಯ ವ್ಯಕ್ತಿಗಳು ತಪ್ಪು ಮಾಡಿದಾಗ, ಅವುಗಳನ್ನು ಅವರು ಏಂದೂ ಒಪ್ಪಿಕೊಳ್ಳುವುದಿಲ್ಲ. ಅದರ ಬದಲು ಇನ್ನೊಬ್ಬರ ತಪ್ಪುಗಳ ಪಟ್ಟಿ ಮಾಡುತ್ತಾರೆ. ಅದು ಅವರಿಗೆ ಜಾಯಮಾನವಾಗಿದೆ. ಇನ್ನು ಇಲ್ಲಿ ಮೂಡಿದ ವಿಡಂಬನೆಗಳು ಕಲ್ಪನೆಗಳಲ್ಲ ಏಂದೂ ಕೂಡಾ ಅನ್ನಿಸುತ್ತದೆ. ಇವುಗಳಿಗೆ ಕೊನೆಯೇ ಇಲ್ಲ. ಲೇಖಕರು ಜನರ ಮನ ಗೆದ್ದಿದ್ದಾರೆ. ಅವರಿಗೆ ಮತ್ತು ವಿಶ್ವ ಧ್ವನಿ ಪತ್ರಿಕೆಗೆ ಅಭಿನಂದನೆಗಳು.
ಧನ್ಯವಾದಗಳು
ಪ್ರತಿ ನಾಗರಿಕನ ಮನದಲ್ಲೂ ರಾಜಕೀಯ ರೋ ಸಿಗೆ ತರಿಸಿದೆ
ಆ. ರೋಸಿಗೆಯೇ ಹಾಸ್ಯ ಬರಹ ವಾಗಿದೆ ನಿರೂಪಣೆ ತೀಕ್ಷ್ಣ ವಾಗಿದೆ
ಧನ್ಯವಾದಗಳು