ಅಂಗಳದಲ್ಲಿ ಚಪ್ಪಲಿಗಳ ಸದ್ದಾಗುತ್ತಿದ್ದಂತೆ ಬಾಗಿಲಿಗೊರಗಿ ಕುಳಿತು ಬೀಡಿ ಕಟ್ಟುತ್ತಿದ್ದ ವಾರಿಜ ಕತ್ತು ಕೊಂಕಿಸಿ ನೋಡಿದಳು.
ಶಿವರಾಜ!
ಒಳ್ಳೆ ಎತ್ತರವಾಗಿರುವ, ಎತ್ತರಕ್ಕೆ ತಕ್ಕ ತೋರವೂ ಇರುವ ಮೈ. ಹೊಳೆಯುವ ಕಣ್ಣುಗಳು. ಅಚ್ಚುಕಟ್ಟಾಗಿ ಬಾಚಿದ ಸೊಂಪಾದ ಕೂದಲು. ಮೊಣಕಾಲಿನಿಂದ ಕೆಳಗೆ ಇಳಿದ ಬಿಳಿ ನಿಲುವಂಗಿ. ಪಾದದವರೆಗೆ ಇಳಿಬಿಟ್ಟ ಪಂಚೆ. ಅವಳ ಮುಖದಲ್ಲಿ ಮೂಡಿದ ಬೆರಗನ್ನು ಕಂಡು “ಏನು ವಾರಿಜಾ, ನನ್ನನ್ನು ಕಂಡು ಗಾಬರಿಯಾಗಿ ಬಿಟ್ಟೆಯಾ?” ಎಂದು ಮುಗುಳ್ನಗುತ್ತಾ ಹೇಳಿದಾಗ ಆಕೆಗೆ ಏನು ಹೇಳಲೂ ತೋಚಲಿಲ್ಲ. “ಏನು? ನಾನಿಲ್ಲೇ ನಿಂತು ಮಾತಾಡಿ ಹೋದ್ರೆ ಸಾಕೋ? ಒಳಗೆ ಬರೋದು ಬೇಡವೋ?” ಎಂದು ನಕ್ಕಾಗಲೇ ಅವಳಿಗೆ ತನ್ನ ತಪ್ಪಿನ ಅರಿವಾದದ್ದು. ಸಂಕೋಚದಿಂದ ಸರಿದು ನಿಂತು ಹೇಳಿದಳು. “ಬನ್ನಿ”
ಮಾಸಲು ಗೋಡೆಗೆ ಒರಗಿಸಿ ಇಟ್ಟಿದ್ದ ಕೈ ಮುರಿದ ಕುರ್ಚಿಯನ್ನು ಮುಂದೆ ಸರಿಸಿ ಆಕೆ ಬಾಗಿಲ ಮರೆಯಲ್ಲಿ ನಿಂತಳು. ಒಂದೆರಡು ಸಲ ಕುರ್ಚಿಯನ್ನು ಅಲ್ಲಾಡಿಸಿದ ಬಳಿಕ ಶಿವರಾಜನು ಅದರ ಮೇಲೆ ಕುಳಿತ.
“ಹೇಗಿದ್ದಿ ವಾರಿಜಾ? ನಿನ್ನನ್ನು ಹೊರಗೆಲ್ಲೂ ಕಾಣೋದೇ ಇಲ್ವಲ್ಲ? ದಿನಾ ಮನೆಯೊಳಗೇ ಇರೋದಾ?”
“ಹಾಗೇನೂ ಇಲ್ಲ” ನೆಲ ನೋಡುತ್ತಾ ಹೇಳಿದಳು ವಾರಿಜ.
“ನಾನು ಬಂದದ್ದೇಕೆಂದರೆ” ಹೆಗಲಿನಲ್ಲಿದ್ದ ಶಾಲಿನಿಂದ ಕುತ್ತಿಗೆಗೆ ಗಾಳಿ ಬೀಸುತ್ತಾ ಶಿವರಾಜನೆಂದ “ಉಮೇಶ ನಮ್ಮ ಮನೆಗೆ ಕೆಲಸಕ್ಕೆ ಬಾರದೆ ಸುಮಾರು ದಿನ ಆಯ್ತು. ತೋಟ-ಹಿತ್ತಿಲುಗಳ ಕೆಲಸವೆಲ್ಲ ಬಾಕಿಯುಂಟು. ನಿಂಗೆ ಪುರುಸೊತ್ತಿದ್ರೆ ಕೆಲಸಕ್ಕೆ ಬರಲು ಸಾಧ್ಯವಾ?”
“ಆಗಬಹುದು. ಮನೆಗೆಲಸ ಅಷ್ಟೇನೂ ಇರೋದಿಲ್ಲ. ರಾತ್ರಿವರೆಗೂ ಒಬ್ಳೇ ಕೂತು ಬೇಜಾರು”
“ಹಾಗಿದ್ರೆ ನಾಳೆಯಿಂದ…”
“ಸರಿ”
ಅವನು ಹೋದ ಬಳಿಕ ವಾರಿಜ ಯೋಚಿಸಿದಳು. ಗಂಡನಲ್ಲಿ ಕೇಳದೆ ಒಪ್ಪಿಗೆ ಕೊಟ್ಟದ್ದು ತಪ್ಪಾಯಿತೇ? ಏನಿದ್ದರೂ ನಮ್ಮ ಮದುವೆಗೆ ಸಾಲ ಕೊಟ್ಟದ್ದು ಇವರಲ್ಲವೇ? ಆದ್ದರಿಂದ ಅವನು ಹೇಗೂ ಒಪ್ಪದಿರಲಾರ. ನೆರೆಹೊರೆಯವರಾದ ಮೇಲೆ ಪರಸ್ಪರ ಸಹಾಯ ಮಾಡಬೇಕಲ್ಲ.
ಹಿತ್ತಿಲಿನ ಅಂಚಿನಲ್ಲಿ ರಾಶಿ ಹಾಕಿಟ್ಟ ಕಟ್ಟಿಗೆಯನ್ನು ಜೋಡಿಸಿ ಕಟ್ಟುತ್ತಿದ್ದಂತೆ ವಾರಿಜಳ ಬೆನ್ನಿನ ಮೇಲೆ ಯಾರೋ ಕೈ ಇಟ್ಟಂತಾಯಿತು. ಬೆನ್ನ ಹುರಿಗೆ ಚಳಿಗಾಳಿ ಹೊಕ್ಕಂತಾಗಿ ಕೊರಳನ್ನು ಗಕ್ಕನೆ ಹಿಂದಕ್ಕೆ ತಿರುವಿದ ಆಕೆ ‘ಓಹ್’ ಎಂದು ಉದ್ಗರಿಸಿದಳು. ಕಣ್ಣುಗಳಲ್ಲಿದ್ದ ಗಾಬರಿ ಮಾಯವಾಗಿ ನಿರಾಳತೆ ಮೂಡಿತು “ಶಿವರಾಜಣ್ಣ ನೀವಾ!”
“ಅದೆಷ್ಟು ಸಲ ನಾನು ನಿನ್ನನ್ನು ಕರೆದೆ. ಏಕೆ ಓಗೊಡಲಿಲ್ಲ ವಾರಿಜ?”
“ತುಂಬಾ ಸಲ ಕರೆದಿರಾ? ನಂಗೆ ಕೇಳಲೇ ಇಲ್ಲವಲ್ಲಾ!”
“ಮನೆಯ ಜಗುಲಿಯಲ್ಲಿ ನಿಂತು ಕರೆದೆ. ನೀನು ಓಗೊಡಲಿಲ್ಲ. ಹಾಗಾಗಿ ನಿನ್ನ ಹಿಂದೆ ನಿಂತ್ಕೊಂಡು ಕರೆದೆ. ತಿರುಗಿ ಕೂಡ ನೋಡ್ಲಿಲ್ಲ”
“ಅದು…ನಾನು…”
“ನಿನ್ನಲ್ಲೊಂದು ವಿಷಯ ಕೇಳ್ಬೇಕು. ಕೇಳಲಾ?”
ಅವಳು ಮಾತನಾಡಲಿಲ್ಲ. ತಗ್ಗಿಸಿದ ತಲೆಯನ್ನು ಮೇಲೆತ್ತಲೂ ಇಲ್ಲ.
“ನಾನು ಹೇಳಿದ ಎಲ್ಲಾ ಕೆಲಸವನ್ನು ನೀನು ಚೆನ್ನಾಗಿ ಮಾಡ್ತಿ. ಆದ್ರೆ ಕೆಲವು ದಿನಗಳಿಂದ ನಿನ್ನಲ್ಲೇನೋ ಬದಲಾವಣೆ ಕಾಣ್ತಿದೆ. ಏನೋ ಒಂದು ಚಿಂತೆ ನಿನ್ನನ್ನು ಕೊರೆದು ತಿನ್ತಾ ಇದೆ”
“ಹಾಗೇನೂ ಇಲ್ವಲ್ಲಾ!”
“ಇಲ್ಲ ವಾರಿಜಾ…ನೀನು ಮೊದಲಿನಂತಿಲ್ಲ. ನಿನ್ನ ಕೆಲಸ ಕಾರ್ಯಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ತಿದೆ. ಸೌದೆ ಮಾಡುವಾಗ ಮರದ ಗೆಲ್ಲು ಕಡಿಯದೆ ಹಿಡ್ಕೊಂಡು ಎಲ್ಲೋ ನೋಡ್ತಾ ನಿಂತಿರುತ್ತಿ. ನಾಲ್ಕೈದು ಸಲ ಕರೆದಾಗ ಒಮ್ಮೆ ಓಗೊಡುತ್ತಿ. ಮಾತುಗಳು ಆಕಾಶದಿಂದ ಉದುರುವಂತಿರ್ತದೆ. ನಿಜ ಹೇಳ್ಬೇಕಂದ್ರೆ ಯಾವುದೋ ಸಮಸ್ಯೆ ನಿನ್ನನ್ನು ಕಾಡ್ತಿದೆ”
ಮೃದುವಾಗಿ ಮೈ ಸವರುವಂತಿದ್ದ ಮಾತುಗಳನ್ನು ಕೇಳಿದಾಗ ಅವಳಿಗೆ ಹಾಯೆನಿಸಿತು. ಮರುಕ್ಷಣವೇ ಪೇಚಿಗೆ ಸಿಕ್ಕಂತೆಯೂ ಆಯಿತು.
ಮದುವೆಯಾದ ಹೊಸತರಲ್ಲಿ ದಿವಾಕರನು ಕ್ರಮೇಣ ಮುಜುಗರವನ್ನು ಬಿಟ್ಟು ಜತೆಯಲ್ಲೇ ಕುಳಿತು, ಕೈಹಿಡಿದು, ಪಿಸು ನುಡಿದು ನಗುತ್ತಾ, ತಬ್ಬಿ ಮುದ್ದಾಡುತ್ತಾ ಪ್ರೀತಿಯನ್ನು ತೋರತೊಡಗಿದಾಗ ವಾರಿಜಳಿಗೆ ಸಂತಸವೇನೋ ಆಗಿತ್ತು. ಆದರೆ ಕೆಲವು ದಿನಗಳಲ್ಲಿ ಅವನು ಅಂತರ್ಮುಖಿಯಾಗುವುದನ್ನು ಕಂಡು, ಬೆಸುಗೆಯಾಟದಲ್ಲಿ ಮೈ ಚಳಿಗೊಳ್ಳುವುದನ್ನು ನೋಡಿ ‘ಅಯ್ಯೋ! ಏನಿದು?’ ಎಂದು ಗಾಬರಿಗೊಂಡಿದ್ದಳು. ಆದರೆ ಕೆಲವು ದಿನಗಳಲ್ಲೇ ಅವನು ಸಹಜಸ್ಥಿತಿಗೆ ಬಂದಾಗ ‘ಇದು ಮೊದಲ ದಿನಗಳ ಗೊಂದಲ. ಇನ್ನು ಮುಂದೆ ಸರಿಯಾದಾನು’ ಎಂದುಕೊಂಡಿದ್ದಳು. ಕೆಲವು ದಿನಗಳವರೆಗೆ ಸಂಸಾರ ಚೆನ್ನಾಗಿ ನಡೆಯಿತು. ಆದರೆ ದಿವಾಕರ ಮತ್ತೆ ಅನ್ಯಮನಸ್ಕನಾಗತೊಡಗಿದ. ಮಾತಿನಲ್ಲಿ, ಮೌನದಲ್ಲಿ, ಮೈಯ ಚಳಿಯಲ್ಲಿ ಒಣಗತೊಡಗಿದ. ಮಾತಿನ ನಡುವೆ ಆತ ‘ಆಂ ಏನಂದೆ ವಾರಿಜ?’ ಎನ್ನುವುದು, ಒಮ್ಮೊಮ್ಮೆ ‘ನಾನಿವತ್ತು ಮನೆಯಲ್ಲೇ ಇರ್ತೇನೆ. ಕೆಲಸಕ್ಕೆ ಹೋಗೂದಿಲ್ಲ’ ಎನ್ನುವುದು ಮಾಮೂಲಾಯಿತು. ರಾತ್ರಿಯಲ್ಲಿ ತಣಿಸಲಾಗದೆ ಬರೇ ಬಳಲಿಸಿ ಕೆಲವೇ ನಿಮಿಷಗಳಲ್ಲಿ ದಣಿದು ಅಡ್ಡಾಗುವ ದಿವಾಕರನ ಮಗ್ಗುಲಲ್ಲಿ ಮಲಗಿದವಳದ್ದು ಸದ್ದಡಗಿಸಿದ ಬಿಕ್ಕಳಿಕೆ. ಸೊಕ್ಕಿದ ಹರೆಯದ ಕಾಟ ತಾಳಲಾರದೆ ಹತ್ತಿರ ಮಲಗಿದ ಗಂಡನನ್ನು ಹಿಂಡಿ ಹಿಪ್ಪೆ ಮಾಡುವಂತೆ ಅಪ್ಪಿಕೊಂಡಾಗಲೂ ಅವನೊಂದು ಕೊರಡಾದಾಗ ಮೌನವಾಗಿ ಅಳತೊಡಗಿದವಳ ಬಳಿ “ನನ್ನನ್ನು ಕ್ಷಮಿಸಿಬಿಡು ವಾರಿಜಾ. ನಾನು ನಿನ್ನನ್ನು ಮದುವೆಯಾಗಬಾರದಿತ್ತು. ನನ್ನೊಂದಿಗೆ ಬಾಳುವ ಪರಿಸ್ಥಿತಿ ನಿಂಗೆ ಬರಬಾರದಿತ್ತು” ಎಂದ ಬಳಿಕ ನಿದ್ದೆಯಲ್ಲೂ ಆ ಮಾತನ್ನೇ ಆಡತೊಡಗಿದಾಗ, ಮಧ್ಯರಾತ್ರಿಯಲ್ಲೂ ಎದ್ದು ಅರ್ಧರ್ಧ ಗಂಟೆ ಆಗಸ ದಿಟ್ಟಿಸುತ್ತಾ ನಿಲ್ಲತೊಡಗಿದಾಗ ‘ಇವನಿಗೆ ಹುಚ್ಚು ಹಿಡಿದಿರಬಹುದಾ?’ ಎಂದು ಅವಳು ಭಯಪಟ್ಟಳು. “ನಿಮಗೇನೋ ಆಗಿದೆ. ನಾವೊಮ್ಮೆ ಆಸ್ಪತ್ರೆಗೆ ಹೋಗಿ ಬರುವ” ಎಂದಾಗ ಅವನು ಬೆಚ್ಚಿ “ಆಂ…ಏನು? ಹಾಂ…ಅದರಿಂದೇನೂ ಪ್ರಯೋಜನವಿಲ್ಲ” ಎನ್ನತೊಡಗಿ ಇವತ್ತಿಗೆಷ್ಟು ದಿನಗಳಾದವೋ.
ಗಂಡ ಹೆಂಡಿರ ನಡುವಿನ ಸೂಕ್ಷ್ಮ ವಿಚಾರಗಳನ್ನು ಇವರೊಂದಿಗೆ ಹೇಗೆ ಹೇಳುವುದು?
“ದಿವಾಕರ ಅವತ್ತೇ ಹಾಗೆ. ಸಾಮಥ್ರ್ಯ ಸ್ವಲ್ಪ ಕಡಿಮೆ ಎಲ್ಲದ್ರಲ್ಲೂ”
ವಾರಿಜ ಅವಾಕ್ಕಾದಳು. ಎದೆಯೊಳಗೆ ಸಣ್ಣಕ್ಕೆ ನೋವು ಉಕ್ಕಿ ಬರತೊಡಗಿತು. ಹೌದು ಅಥವಾ ಅಲ್ಲ ಎನ್ನಲಾಗದ ಸ್ಥಿತಿ.
“ನಂಗೆ ಅರ್ಥವಾಗ್ತಿದೆ ವಾರಿಜಾ. ಆದರೆ ನಿನ್ನ ಸಮಸ್ಯೆ-ಆತಂಕಗಳಿಗೇನು ಹೇಳಲಿ? ಹೊಂದಾಣಿಕೆಯ ಸಮಸ್ಯೆ ಎಲ್ಲ ಕಡೆ ಇರ್ತದೆ. ಆಮೇಲೆ ಎಲ್ಲ ಸರಿಯಾಗ್ತದೆ. ಸಮಾಧಾನದಿಂದಿರು”
ನಾಳೆಯಿಂದ ಕೆಲಸಕ್ಕೆ ಬರುವ ಅಗತ್ಯವಿಲ್ಲ ಎಂಬುದನ್ನು ನೆನೆದು ವಾರಿಜಳ ಮನಸ್ಸು ನುಚ್ಚು ನೂರಾಗಿತ್ತು. ಆ ಸನ್ನಿವೇಶ ಶಿವರಾಜನನ್ನೂ ಕಾಡುತ್ತಿತ್ತು ಎಂದು ಅವನ ಮುಖವೇ ಹೇಳುತ್ತಿತ್ತು. “ಬೇಸರ. ಅಲ್ಲವೇ ವಾರಿಜ?”
“ಮತ್ತೆ? ಆಗದಿದ್ದೀತೇ?”
“ನಿನ್ನಂಥ ಚುರುಕಿನವಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ವಾರಿಜಾ. ಆದರೇನು ಮಾಡೋದು? ನಾಳೆಯಿಂದ ಉಮೇಶ ಬರ್ತಾನಂತೆ. ಅವನನ್ನು ಹೇಗೆ ಕೈಬಿಡೋದು? ಮೊದಲಿಂದಲೇ ಇದ್ದವನು”
“ಹೌದು. ಅವನಿಗೆ ಅಸಮಾಧಾನವಾಗೋದು ಬೇಡ. ಆಮೇಲೆ ಅವ ಯಾವ ಉಪಕಾರಕ್ಕೂ ಸಿಗಲಿಕ್ಕಿಲ್ಲ” ಎನ್ನುವಾಗ ಅವಳ ಮುಖ ನೋವನ್ನು ಹತ್ತಿಕ್ಕುವುದರಲ್ಲಿ ಸೋಲುತ್ತಿತ್ತು.
ಸಾವಿರ ರೂಪಾಯಿಯ ಮೂರು ನೋಟುಗಳೊಂದಿಗೆ ಶಿವರಾಜ ಐನೂರನ್ನು ಸೇರಿಸಿ ಕೊಟ್ಟಾಗ ಅವಳ ಕಣ್ಣುಗಳು ಅರಳಿದವು. “ಇರಲಿ. ಸೀರೆಯೋ ಏನಾದ್ರೂ ತಗೋ”
“ಸರಿ. ಇನ್ನೇನಾದ್ರೂ ಅಗತ್ಯ ಬಂದ್ರೆ ಕರೀರಿ. ಮರೀಬೇಡಿ. ನನ್ನನ್ನೇ ಕರೀಬೇಕು” ಎನ್ನುತ್ತಾ ಒಂದೆರಡು ಸಲ ತಿರುಗಿ ನೋಡುತ್ತಲೇ ಮನೆಗೆ ಮರಳಿದಳು ಆಕೆ.
“ಹಾದರಗಿತ್ತೀ”
ಗುಡುಗಿನಂತೆ ಎರಗಿದ ಸದ್ದಿನ ಅಬ್ಬರಕ್ಕೆ ವಾರಿಜ ಗಡಬಡಿಸಿ ಎದ್ದು ಕುಳಿತಳು. ಅವಳ ಮಗ್ಗುಲಲ್ಲಿ ಮಲಗಿದ್ದ ಶಿವರಾಜ ಥರಗುಟ್ಟುತ್ತಾ ಅಲ್ಲೇ ಮುದ್ದೆಯಾಗಿ ಬಿದ್ದಿದ್ದ ಅಂಗಿ – ಲುಂಗಿಗಳನ್ನು ಎತ್ತಿಕೊಂಡು ಹಿಂಬಾಗಿಲಿನ ಮೂಲಕ ಹಾರಿ ಓಡಿದ. ಹೊರಗೋಡೆಯ ಮರೆಯಿಂದ ಒಳ ಬಂದ ವ್ಯಕ್ತಿಯನ್ನು ಕಂಡು ವಾರಿಜಳ ಮೈ ಸ್ಪೋಟಗೊಂಡಂತಾಯಿತು.
ದಿವಾಕರ!
ಬಿಗಿದ ಮುಖ. ಕಿಡಿ ಕಾರುವ ಕಣ್ಣು. ತಿದಿಯೊತ್ತಿದಂತೆ ಹೊಮ್ಮುವ ಬಿಸಿಯುಸಿರು. ಅರೆ ತೆರೆದ ಬಾಗಿಲಲ್ಲಿ ನಿಂತ ವಾರಿಜಳ ಮುಖವನ್ನು ಅವನ ಟಾರ್ಚಿನ ಬೆಳಕು ಕ್ಷೀಣವಾಗಿ ಬೆಳಗುತ್ತಿತ್ತು. ಕದಿಯುತ್ತಿರುವಾಗಲೇ ಸಿಕ್ಕಿ ಬಿದ್ದ ಕಳ್ಳಿಯಂತೆ ಮಾತೇ ಹೊರಡದೆ ಬೆಪ್ಪುಗಟ್ಟಿ ನಿಂತ ಹೆಂಡತಿಯನ್ನು ಸುಟ್ಟು ಬಿಡುವಂತೆ ನೋಡಿದ. ಗಲಿಬಿಲಿಯಿಂದ ಮೈ ಮುಚ್ಚಿಕೊಳ್ಳುತ್ತಾ ನಾಚಿಕೆ, ಭಯ, ಅವಮಾನಗಳನ್ನು ತಾಳಲಾರದೆ ತಲೆತಗ್ಗಿಸಿ ನಿಂತ ಕೆದರು ಕೂದಲಿನ ಹೆಂಡತಿಯ ಚಿತ್ರ ಅವನ ಮನಸ್ಸಿನಲ್ಲಿ ನಿಚ್ಚಳವಾಗಿ ನಿಂತಿತು. ಮುಷ್ಠಿಗಳು ಬಿಗಿದುಕೊಳ್ಳತೊಡಗಿದವು. ದವಡೆಯ ಎಲುಬುಗಳು ಕಂಪಿಸತೊಡಗಿದವು. “ಥೂ ನಾಯಿ! ನಾನಿಲ್ಲದ ಹೊತ್ತಲ್ಲಿ” ತಿವಿಯಲು ಬರುವ ಎತ್ತಿನಂತೆ ಒಳನುಗ್ಗಿದ ದಿವಾಕರನು ಅವಳ ಕೊರಳನ್ನು ಒತ್ತಿ ಹಿಡಿದು ಚೀರಿದ “ಕೊಲ್ತೇನೆ ನಿನ್ನನ್ನು ಮೂರ್ಕಾಸಿನ ಬೋಸಡಿ” ಮೃತ್ಯುಭಯದಿಂದಲೋ ಎಂಬಂತೆ ಅವಳ ಕಣ್ಣುಗಳು ಹೊರ ಚಾಚಿಕೊಂಡವು. ಆದರೆ ಥಟ್ಟನೆ ಅವನ ಬಲವೆಲ್ಲ ಸೋರಿ ಹೋದಂತಾಗಿ ಕೈ ಬಿಟ್ಟು ಬಾಗಿಲ ಪಕ್ಕದಲ್ಲಿ ಕುಸಿದು ಕುಳಿತ. ಅವನ ತಲೆಯೊಳಗೆ ಭೂತ ಕುಣಿಯುತ್ತಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಮನದೊಳಗೆ ಹೊರಳಾಡುತ್ತಿದ್ದ ಬೆತ್ತಲೆ ಆಕೃತಿಗಳ ಚಿತ್ರ ಕರಗುತ್ತಿಲ್ಲ. ಅವಳ ಬಿಕ್ಕಿ ಬಿಕ್ಕಿ ಅಳುವ ಸದ್ದು ಅವನನ್ನು ರೋಷ – ದುಃಖಗಳ ಕೂಪಕ್ಕೆ ತಳ್ಳಿತು. ಕುರುಡನಂತೆ ತಡಕಾಡುತ್ತಾ ಒಳಗೆ ಬಂದು ನೆಲದ ಮೇಲೆ ಕುಕ್ಕರಿಸಿದ. ಪ್ರಜ್ಞೆ ತಪ್ಪಿ ಬಿದ್ದಂತಿತ್ತು ಅವನ ಭಂಗಿ. ಹತೋಟಿಗೆ ತರಲು ಸಾಧ್ಯವೇ ಇಲ್ಲವೆಂಬಂತೆ ಅದುರುತ್ತಿದ್ದ ತಲೆ ಅವನಿನ್ನೂ ಎಚ್ಚರವಾಗಿದ್ದಾನೆ ಎಂದು ಸೂಚಿಸುತ್ತಿತ್ತು. ಅವಳ ಬಿಕ್ಕಳಿಕೆಯ ಸದ್ದು ಏರುತ್ತಿದ್ದಂತೆ ದಿವಾಕರನ ಮೈ ಹೊತ್ತಿ ಉರಿಯತೊಡಗಿತು. ಅವನು ಇದ್ದಕ್ಕಿದ್ದಂತೆ ಜಿಗಿದೆದ್ದು ಬೆಂಕಿ ಕಾರುವಂತೆ “ಎಷ್ಟು ದಿನದಿಂದ ನಡೀತಿದೆ ನಿನ್ನ ಧಂಧೆ? ಆ ಸೂಳೇಮಗನನ್ನು ಕರ್ಕೊಂಡದ್ದಕ್ಕೆ ಎಷ್ಟು ಕೊಟ್ಟ ಅವ? ಥೂ! ರಂಡೆ ಉಗೀಬೇಕು ನಿನ್ನ ಮುಸುಡಿಗೆ. ಇನ್ನು ಮುಂದೆ ಅವನೇನಾದ್ರೂ ನಿನ್ನ ಸೆರಗು ಸರಿಸಿದ್ರೆ ಇಬ್ರ ಮಂಡೇನೂ ಒಡೀತೇನೆ ತಿಳ್ಕೋ” ಎಂದು ಅಬ್ಬರಿಸಿ ಹೊರ ನಡೆದ.
ಗಂಡ ಕಣ್ಮರೆಯಾಗುತ್ತಲೇ ಸಿಡಿಲು ಬಡಿದಂತೆ ನೆಲಕ್ಕೊರಗಿದಳು ವಾರಿಜ. ಊರಿನವರ ಒಂದೊಂದು ಕಣ್ಣೂ ದನಿಯೂ ಅವಳನ್ನು ಕ್ರೂರವಾಗಿ ಇರಿಯುತ್ತಿರುವಂತೆ ತೋರಿತು. ರೆಕ್ಕೆ ಮುರಿದ ಹಕ್ಕಿಯಂತೆ ಅವಳ ಹೃದಯ ಒದ್ದಾಡತೊಡಗಿತು. ಯಾವುದರ ಪರಿವೆಯೂ ಇಲ್ಲದೆ ಬಿದ್ದು ಬಿಕ್ಕಳಿಸುತ್ತಿದ್ದಂತೆ ಅವಳೊಳಗಿನ ಉರಿ ಭಯಂಕರವಾಯಿತು. ಮುಚ್ಚಿದ ಕಣ್ಣೊಳಗೆ ಗಂಡನು ನೇಣುಹಾಕಿಕೊಂಡು ತೂಗಾಡುತ್ತಿರುವ ದೃಶ್ಯ! ಬೆದರಿ ದಿಗ್ಗನೆದ್ದು ಕೂರುತ್ತಲೇ ತಲೆಯ ಮೇಲೆ ಗಿಡುಗವೊಂದು ವಿಕಾರವಾಗಿ ಚೀರುತ್ತಾ ಅಗಲ ರೆಕ್ಕೆಗಳನ್ನು ಬಡಿದುಕೊಂಡು ಗಸ್ತು ತಿರುಗುತ್ತಿರುವಂತೆ, ಅದು ಹತ್ತಿರ ಬರುವಾಗ ಕತ್ತಲ ಗುಡ್ಡವೇ ತನ್ನ ಮೇಲೆ ಉರುಳಿದಂತೆ ಭಾಸವಾಗತೊಡಗಿತು. ಯಾವುದೇ ಕ್ಷಣದಲ್ಲೂ ಬೇಟೆಗೆ ಬಲಿಯಾಗುವ ಭಯಕ್ಕಿಂತ, ಥಟ್ಟನೆ ಎರಗದೆ ಬರಿದೇ ಹಿಂಸಿಸುವ ಯಾತನೆಯಿಂದ ಪಾರಾಗುವುದು ಹೇಗೆ?
ಇಲ್ಲ. ದಿವಾಕರ ನನ್ನ ಹತ್ತಿರ ಬರುತ್ತಾನೆ. ತಲೆ ನೇವರಿಸುತ್ತಾನೆ. ‘ವಾರಿಜಾ, ಆದದ್ದು ಆಗಿ ಹೋಯ್ತು. ನಾನು ನಿನ್ನ ಮನಸ್ಸರಿತು ಪ್ರೀತಿಸ್ತಿದ್ರೆ ಹೀಗೆಲ್ಲ ಆಗ್ತಿರಲಿಲ್ಲ. ಎಲ್ಲವನ್ನು ಮರ್ತುಬಿಡು. ನಾವಿಬ್ರು ಇನ್ನಾದ್ರೂ ಸರಿಯಾಗಿರುವ’ ಎನ್ನುತ್ತಾನೆಂದು ಅವಳು ಆಸೆ ಪಟ್ಟಳು. ‘ಹೀಗೆ ಮಾತಿಲ್ಲದೆ ಚಿತ್ರಹಿಂಸೆ ಕೊಟ್ಟು ಕೊಲ್ಲೋದರ ಬದಲು ನನ್ನನ್ನು ಒಂದೇ ಏಟಿಗೆ ಕೊಲ್ಲಬಾರದಾ? ಇಪ್ಪತ್ನಾಲ್ಕು ಗಂಟೆಯೂ ಕಳ್ಳು ಕುಡಿದು, ಹೊತ್ತಿಗೆ ಸರಿಯಾಗಿ ತಿನ್ನದೆ, ಒಮ್ಮೊಮ್ಮೆ ಅಳ್ತಾ, ಮತ್ತೊಮ್ಮೆ ನಗ್ತಾ, ಮೂರು ಹೊತ್ತೂ ಮನೆ ಹೊರಗಿನ ಕಟ್ಟೆ ಮೇಲೆ ಅಸ್ಪಷ್ಟವಾಗಿ ಗೊಣಗ್ತಾ ನಿದ್ದೆ ಹೋಗೋದನ್ನು ನೋಡುವಾಗ ನನ್ನ ಹೊಟ್ಟೆಗೆ ಒನಕೆಯಿಂದ ಕುಟ್ಟಿದಷ್ಟು ನೋವಾಗ್ತದೆ. ನೀನು ನಿನ್ನನ್ನೇ ಕೊಂದುಕೊಳ್ಳೋದೇಕೆ? ನಾನು ಮಾಡಿದ ತಪ್ಪಿಗೆ ನೀನು ಶಿಕ್ಷೆ ಅನುಭವಿಸೋದು ಯಾಕೆ?’ ಎಂದು ಮನದಲ್ಲೇ ಹೇಳಿಕೊಳ್ಳುತ್ತಿದ್ದಂತೆ ಅವಳ ಚಾಪೆ ಕಣ್ಣೀರಿನಿಂದ ತೊಯ್ದು ಹೋಗುತ್ತಿತ್ತು. ಹಣೆಹಣೆ ಚಚ್ಚಿಕೊಳ್ಳುತ್ತಾ ನಿದ್ದೆಗೆಟ್ಟು ಒದ್ದಾಡುತ್ತಿದ್ದಂತೆ ಶಿವರಾಜನನ್ನು ಕೊಂದು ಬಿಡುವಷ್ಟು ರೋಷ ಉಕ್ಕುತ್ತಿತ್ತು. ಆದರೆ ಸುತ್ತಲಿನ ನೀರವತೆ, ಏಕಾಂಗಿತನಗಳು ಬಯಕೆಯನ್ನು ಕೆದಕುವಾಗ ಅವಳ ಮನಸ್ಸು ಹುಚ್ಚು ಕುದುರೆಯಾಗುತ್ತಿತ್ತು. ಎಲ್ಲಿಲ್ಲದ ದಾಹ ತಿದಿಯೊತ್ತುತ್ತಿತ್ತು. ಅವಳೊಳಗಿನ ಹೆಣ್ಣು ಎಚ್ಚೆತ್ತು ಚಿತ್ತವನ್ನು ತಳಮಳಗೊಳಿಸುತ್ತಿದ್ದಳು. ತನ್ನ ಮೈಯನ್ನು ಸುತ್ತುವರಿದ ಶಿವರಾಜನ ಬಲಿಷ್ಠ ತೋಳುಗಳು, ಆ ಕನವರಿಕೆ, ಸುಖದಲ್ಲಿ ಬೆಚ್ಚಗೆ ನರಳಿದ ಪರಿ…
“ವಾರಿಜಾ”
ಆಕೆ ಕಿಡಿ ತಗುಲಿದಂತೆ ಎಚ್ಚರಗೊಂಡಳು. ಯಾರದು ನನ್ನನ್ನು ಕರೆಯುತ್ತಿರುವುದು? ಆಕೆ ಹೊರಗೆ ಬಂದು ನೋಡಿದಳು. ದಿವಾಕರ ಕೆಮ್ಮುತ್ತಲೇ ಇದ್ದ. ಎದೆ ಹಿಡಿದುಕೊಂಡು, ಕಣ್ಣಗುಡ್ಡೆಗಳನ್ನು ತಿರುಗಿಸುತ್ತಾ ಭಯಂಕರವಾಗಿ ಕೆಮ್ಮುತ್ತಿದ್ದ. ಆಮೇಲೆ ಅವನು ರಕ್ತವನ್ನೂ ಕಾರತೊಡಗಿದಾಗ ಅವನ ಸ್ಥಿತಿಯನ್ನು ಹತಾಶೆ ಬೆರಗುಗಣ್ಣುಗಳಿಂದ ನೋಡುತ್ತಾ ನಿಂತಿದ್ದ ವಾರಿಜ ಚಲಿಸದ ಕಂಬದ ಜೊತೆ ತಾನೂ ಕಂಬವಾಗಿ ಬಿಟ್ಟಳು. ಕಣ್ಣೆದುರಲ್ಲಿ ಕಪ್ಪು ಕಪ್ಪಾದುದೇನೋ ಬೊಬ್ಬಿರಿಯುತ್ತಾ ಬಂದಂತೆ, ಗಹಗಹಿಸಿ ನಗುತ್ತಾ ತನ್ನನ್ನು ಗಬಕ್ಕನೆ ಹಿಡಿದು ನೂಕಿದಂತೆನಿಸಿ ತತ್ತರಿಸಿದಳು. ಕಂಬವನ್ನು ಹಿಡಿದುಕೊಂಡ ಕೈಗಳೆರಡೂ ತ್ರಾಣವನ್ನು ಕಳೆದುಕೊಂಡು ಇನ್ನೇನು ಕೆಳಗೆ ಉರುಳಬೇಕೆನ್ನುವಷ್ಟರಲ್ಲಿ ಹೇಗೋ ಸಾವರಿಸಿಕೊಂಡು ನಿಂತಲ್ಲೇ ಕುಸಿದು ಕುಳಿತಳು. ಇದರಿಂದ ಗೊಂದಲಗೊಂಡ ದಿವಾಕರನು ಕುಳಿತಲ್ಲಿಂದ ಏಳಲು ಯತ್ನಿಸುತ್ತಾ ಅವಳನ್ನು ಕೂಗಬೇಕೆಂದುಕೊಳ್ಳುತ್ತಿದ್ದಂತೆ ಅವನ ಎದೆಗೂಡೇ ಕಿತ್ತು ಹೋಗುವಂತೆ ಮಾಲೆ ಮಾಲೆಯಾಗಿ ಪುಟಿಯತೊಡಗಿತು ಕೆಮ್ಮು. ಆದರೂ ಆತನ ದನಿ ಕೆಮ್ಮಿನ ಕರ್ಕಶವನ್ನು ಕೊಚ್ಚಿಕೊಂಡು ‘ವಾರಿಜಾ’ ಎಂದು ಹೊರಗೆ ಹರಿದಾಗ ತಾನು ಅವಳೊಂದಿಗೆ ಮಾತು ಬಿಟ್ಟು ಅದೆಷ್ಟೋ ಕಾಲ ಕಳೆದಿದೆ ಎಂದು ಅವನಿಗನಿಸಲಿಲ್ಲ. ಎಲ್ಲೋ ಕೇಳಿದ್ದೆನಲ್ಲ ಎಂದೆನಿಸುವಂಥ ದನಿಯು ಅವಳ ಕಿವಿಯನ್ನು ತುಂಬಿದಾಗ ಕಣ್ಣೆದುರಿನ ಕತ್ತಲೆ ಸರಿದು ಕಣ್ಣುಗಳನ್ನು ತೆರೆದಳು. ದಿವಾಕರ! ಇದುವರೆಗೆ ಮೌನದ ತಾಣದೊಳಗೆ ಬಚ್ಚಿಟ್ಟು ಕುಳಿತಿದ್ದ ದಿವಾಕರನು ಆಳಕ್ಕಿಳಿದ ಕಣ್ಣುಗಳಿಂದ ಪ್ರೀತಿಯನ್ನು ಸುರಿಸುತ್ತಾ ತನ್ನನ್ನೇ ನೋಡುತ್ತಿದ್ದಾನೆ! ಆಕೆಗೆ ಅದನ್ನು ನಂಬಲಾಗಲಿಲ್ಲ. ಆದರೆ ಅದು ಸತ್ಯ ಎಂದು ಖಚಿತವಾದೊಡನೆ ಹೇಳಿಕೊಳ್ಳಲಾಗದ ಪುಳಕದಲ್ಲಿ ಮೈಮರೆತಳು. ಎರಡಾಗಿ, ನಾಲ್ಕಾಗಿ, ಆರಾಗಿ, ಎಂಟಾಗಿ ಇನ್ನು ಸಾಯುವವರೆಗೂ ಬಿಡುವುದಿಲ್ಲವೇನೋ ಎಂಬಂತೆ ಹೊಮ್ಮತೊಡಗಿದ ಕೆಮ್ಮು ಅವಳನ್ನು ಒಮ್ಮೆಲೇ ಅಲುಗಾಡಿಸಿತು. ಇನ್ನೇನು ಆತ ಬಿದ್ದುಬಿಟ್ಟ ಎನ್ನುವಷ್ಟರಲ್ಲಿ ಅವಳು ಓಡಿ ಬಂದಳು ಅವನ ಬಳಿಗೆ. ಕೈಚಾಚಿ ಗಂಡನನ್ನು ತಬ್ಬಿಕೊಂಡು, ಅವನ ಬಾಯಿಯಿಂದ ಜಿನುಗುವ ರಕ್ತವನ್ನು ಸೆರಗಿನಿಂದ ಒರೆಸುತ್ತಾ ‘ಈ ಕೆಟ್ಟ ಕೆಮ್ಮು ಒಮ್ಮೆ ನಿಲ್ಲಲಿ ದೇವರೇ’ ಎಂದು ಮನದಲ್ಲೇ ಮೊರೆಯಿಡುತ್ತಾ ಕೆಮ್ಮು ನಿಲ್ಲುವ ಕ್ಷಣಕ್ಕಾಗಿ ಕಾಯತೊಡಗಿದಳು. ಏನು ಮಾಡುವುದಕ್ಕೂ ತೋಚದ ಅವಳ ಅಳು ಸದ್ದಿಲ್ಲದೆ ಇಂಗಿಹೋಗಿತ್ತು. ತನ್ನನ್ನು ತಬ್ಬಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ಭೀತಳಾಗಿ ನೋಡುತ್ತಿರುವ ವಾರಿಜಳ ಮೇಲೆ ದಿವಾಕರನಿಗೆ ಹಿಂದೆಂದೂ ಅನಿಸದಷ್ಟು ಮರುಕ ಹುಟ್ಟಿತು. ತಾನೇಕೆ ಇಷ್ಟು ದಿನ ಅವಳನ್ನು ಮೌನದಲ್ಲೇ ಹಿಂಸಿಸಿದೆ ಎಂದರಿಯದೆ ತೊಳಲಾಡುತ್ತಾ ‘ವಾರಿಜಾ ವಾರಿಜಾ’ ಎಂದು ಅವಳ ಎದೆಗೊರಗಿಕೊಂಡು ಕೆಮ್ಮುತ್ತಲೇ ಅತ್ತ. ಅವಳು ಒಮ್ಮೆ ಕಂಗೆಟ್ಟಳಾದರೂ ಗಂಡನ ಹೃದಯ ಅರ್ಥವಾಗದಿರಲಿಲ್ಲ. ತಾನು ಮಾಡಿದ ತಪ್ಪನ್ನು ಈಗಲಾದರೂ ಮನ್ನಿಸಿ ತನ್ನ ಸುತ್ತ ತೋಳುಗಳ ರಕ್ಷಣೆಯನ್ನಿತ್ತ ಗಂಡನೇ ಅವಳಿಗೆ ಸರ್ವಸ್ವವೆನಿಸಿದ. ಇನ್ನು ನಾವು ಹೀಗೆಯೇ ಇರಬೇಕು. ಸಾಯುವವರೆಗೂ ಪರಸ್ಪರ ಆಸರೆಯಾಗಿರಬೇಕು. ಅವನ ಪ್ರೀತಿಯ ತೆಕ್ಕೆಯಲ್ಲಿ ತಾನು ಹೊಸ ಬಾಳನ್ನು ಬಾಳಬೇಕು. ಅದಕ್ಕಿಂತಲೂ ಮೊದಲು ಗಂಡನಿಗೆ ಅಂಟಿದ ಈ ಮಾರಕ ರೋಗವನ್ನು ಕೊಲ್ಲಬೇಕು. ಹಾಗಾದರೆ…
ಅವಳು ಮತ್ತೆ ದಿಕ್ಕೆಟ್ಟಳು.
“ನಾನಿನ್ನು ಹೆಚ್ಚು ಕಾಲ ಉಳಿಯೋದಿಲ್ಲ ವಾರಿಜಾ” ಆಯಾಸದಿಂದ ಕುಗ್ಗಿದ ದನಿ ಭಾರವಾಗಿತ್ತು. ನಾಲಗೆ ತೊದಲುತ್ತಿತ್ತು.
“ಹಾಗೆಲ್ಲ ಹೇಳ್ಬೇಡಿ. ನಿಮಗೆ ಗುಣವಾದೀತು. ನಂಗೆ ನಂಬಿಕೆಯುಂಟು” ವಾರಿಜ ಅವನನ್ನು ಸಂತೈಸುತ್ತಾ ಹೇಳಿದಳು.
“ಮದುವೆಯಾಗಿ ಕೆಲವು ದಿನಗಳಾದ ಮೇಲೆ ಗೊತ್ತಾಯ್ತು ನನ್ನ ಕರುಳಿಗೆ ಕಾನ್ಸರ್ ಬಡಿದಿದೆ ಅಂತ. ನನ್ನ ಎದೆಯೇ ಒಡೆದುಹೋಯ್ತು. ಮದುವೆಯಾಗಿ ನಿನ್ನ ಜೀವನವನ್ನೂ ಹಾಳು ಮಾಡಿದ್ನಲ್ಲಾ ಅಂತ ಸಂಕಟವಾಯ್ತು. ಗೊತ್ತಾದ್ರೆ ನೀನೆಲ್ಲಿ ನನ್ನನ್ನು ಶಪಿಸುವೆಯೋ, ಬಿಟ್ಟು ಹೋಗುವೆಯೋ ಅಂತ ಹೆದರಿಕೆಯಾಯ್ತು. ಹೇಳಬೇಕೆನಿಸಿದ್ರೂ ಹೇಳಲಾಗದೆ, ಪ್ರೀತಿಸಬೇಕೆನಿಸಿದರೂ ಪ್ರೀತಿಸಲಾಗದೆ ಒದ್ದಾಡಿದೆ. ಹುಚ್ಚೇ ಹಿಡಿದಂತಾಯ್ತು. ಹಾಗಾಗಿಯೇ ನಾನು ಒಂಥರಾ…” ಎನ್ನುತ್ತಿದ್ದಂತೆ ದಿವಾಕರನನ್ನು ತಬ್ಬಿಕೊಂಡಿದ್ದ ಅವಳ ಕಣ್ಣೀರು ಅವನ ಭುಜವನ್ನು ತೋಯಿಸತೊಡಗಿತು.
“ಈ ರೋಗವನ್ನು ಗುಣಪಡಿಸಲು ಇನ್ನೇನು ಮಾಡೋದು? ಯಾರ ಮುಂದೆ ಕೈ ಒಡ್ಡೋದು? ನಂಗಂತೂ ಈ ಬದುಕು ಈಗಲೇ…” ಎನ್ನುತ್ತಿದ್ದಂತೆ ವಾರಿಜ ಅವನ ಬಾಯಿಯ ಮೇಲೆ ಬೆರಳುಗಳನ್ನಿಟ್ಟು ‘ಹಾಗೆನ್ನಬೇಡಿ’ ಎಂಬಂತೆ ತಲೆಯಾಡಿಸಿದಳು.
ಆದರೆ ಇಂಥ ಪರಿಸ್ಥಿತಿಯಲ್ಲಿ ಅಷ್ಟು ಹಣ ಕೊಡುವವರು…
ಶಿವರಾಜ ಗೆಲುವಿನ ನಗೆ ಬೀರುತ್ತಾ ತನ್ನ ಮೇಲೆರಗಿದಂತೆ… ಅವನ ತೋಳುಗಳು ಮೈಮೇಲೆ ಹಾವಾಗಿ ಹರಿದಂತೆ…
ಇಷ್ಟು ದಿನ ನನಗಾಗಿ ಅವರನ್ನು ಆಶ್ರಯಿಸಿಕೊಂಡಿದ್ದೆ. ಈಗ ಗಂಡನಿಗಾಗಿ ಆಶ್ರಯಿಸಿಕೊಂಡರೆ ಏನು ತಪ್ಪು?
ಕತ್ತಲು ಕತ್ತು ಹಿಸುಕುತ್ತಿತ್ತು. ದಿವಾಕರ ಕೆಮ್ಮುತ್ತಲೇ ಇದ್ದ. ಆ ಕರ್ಕಶ ದನಿಯ ಹಿನ್ನೆಲೆಯಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುತ್ತಿರುವಂತೆನಿಸಿ ವಾರಿಜ ಕಂಗೆಟ್ಟಳು. ಸದ್ದಾಗದಂತೆ ಹಿಂಬಾಗಿಲನ್ನು ತೆರೆದು ಅತ್ತಿತ್ತ ನೋಡುತ್ತಲೇ ಹೊರಗಿಳಿದು ನಡೆಯತೊಡಗಿದಳು. ಕತ್ತಲೆಯು ತನ್ನನ್ನು ದಟ್ಟವಾಗಿ ಬಿಗಿಯುತ್ತಿದ್ದಂತೆ ತನ್ನೊಳಗೆ ಭಯದ ಮುದ್ದೆಯೊಂದು ಬೆಳೆಯುತ್ತಾ ದೇಹವನ್ನು ಒಡೆದು ಹೊರ ಬರುವಂತೆ ಭಾಸವಾಗಿ ಅವಳ ಪೇಶಿಗಳು ಬಿಗಿದು ಸೆಟೆದುಕೊಳ್ಳತೊಡಗಿದವು. ಸುತ್ತಲೂ ವ್ಯಾಪಿಸಿದ ನೀರವ ಮೌನವನ್ನು ಕೊಂದು ಕಿವಿಗಪ್ಪಳಿಸುವ ಜೀರುಂಡೆಗಳ ಚೀತ್ಕಾರ, ನಾಯಿಗಳ ಊಳು, ತಲೆಯ ಮೇಲಿನಿಂದ ಹಾರುವ ಬಾವಲಿಯ ರೆಕ್ಕೆಗಳ ಫಡಫಡಗಳಿಗೆ ಬೆಚ್ಚಿ ಹೊಡೆದುಕೊಳ್ಳತೊಡಗಿದ ಎದೆಯೊಳಗೆ ಭೂಕಂಪವಾದಂತೆ ಸದ್ದಾಗತೊಡಗಿತು.
ವಾರಿಜ ಚಾವಡಿಯನ್ನೇರಿ ನಿಂತಾಗ ಒಳಗಿನಿಂದ ಮಾತು ಕೇಳಿಸಿತು. “ಶಿವರಾಜನೋರೇ, ಇವತ್ತಿಡೀ ನಾನು ನಿಮ್ಮವಳು. ಆದ್ರೆ ದಿವಾಕರ ಬದುಕಲೇ ಬೇಕು. ಈಗ ಅವ ನನ್ನನ್ನು ಮರೆತಿದ್ದಾನೆ. ಆದ್ರೆ ಮದುವೆಯಾಗೋ ಮುಂಚೆ ನನಗೆ ಅವ ಮಾಡಿದ್ದನ್ನು ಮರೆಯಬಾರದಲ್ಲ…” ಮಾತು ಮುಗಿಯುವ ಮೊದಲೇ ಭಾರವಾದ ನಿಟ್ಟುಸಿರು ಕೋಣೆಯ ತುಂಬಾ ವ್ಯಾಪಿಸುತ್ತಿದ್ದಂತೆ ಏನೊಂದೂ ಅರ್ಥವಾಗದೆ ಆಕೆ ಬೆವರಿದಳು. ಹಸಿಹಸಿಯಾದಳು. ಬಾಗಿಲನ್ನು ದಢಾರನೆ ತೆರೆದು ಒಳನುಗ್ಗಿದವಳೇ “ನಾನು ಸ್ವಾಮೀ ವಾರಿಜ… ನಿಮ್ಮ ವಾರಿಜ” ಎಂದು ಹಿಂದೆ ಮುಂದೆ ನೋಡದೆ ಶಿವರಾಜನ ಮೈಗೆ ಬಿದ್ದು ತಬ್ಬಿಕೊಂಡಳು. ಅನೀರೀಕ್ಷಿತ ಅಪ್ಪುಗೆಯಿಂದ ಗೊಂದಲಕ್ಕೊಳಗಾದ ಶಿವರಾಜ ಮೈಗೆ ಹಾವು ಬಿದ್ದವನಂತೆ ‘ಹಾ’ ಎಂದು ಮೈ ಕೊಡವಿ ದೂರ ಸಿಡಿದಾಗ ಸಮತೋಲನ ತಪ್ಪಿದ ವಾರಿಜ ಬೋರಲು ಬಿದ್ದಳು. ದೀಪ ಆರಿತ್ತು. ತಳ ಕಾಣದ ಆಳದೊಳಗೆಲ್ಲೋ ಮುಳುಗಿದಂತೆ ಆಕೆ ತತ್ತರಿಸತೊಡಗಿದಾಗ ದೂರದಿಂದ ದಿವಾಕರನ ಕೆಮ್ಮು ಸ್ಪಷ್ಟವಾಗಿ ಕೇಳತೊಡಗಿತು.
2 thoughts on “ಕತ್ತಲೆ”
ಕಥೆ ಚನ್ನಾಗಿದೆ
ಎಲ್ಲಾ ಸನ್ನಿವೇಶಗಳು ತೀರಾ ಸರಳವಾಗಿದ್ದರೆ, ಅದು ಸುಪುಷ್ಟ ಸುದ್ದಿಯಾಗಬಹುದು, ಕತೆಯ ಬೆಳವಣಿಗೆಗೆ / ಸ್ವಾರಸ್ಯಕ್ಕೆ ಪೂರಕವಾಗುವುದಿಲ್ಲ. ಒಂದು ಆವರಣ, ಮತ್ತೊಂದು ಅನಾವರಣ. ಅಲ್ಲಲ್ಲಿ ಅನಾವರಣವೇ, ಆವರಣವಾಗುತ್ತಿರುವದೇ ‘ಕತ್ತಲೆ’ಯ ರಹಸ್ಯ. ಈ ಹೆಣೆಯುವಿಕೆಯ ಕಲೆಯಲ್ಲಿ ನಾಜೂಕಿನ ಸೂಕ್ಷ್ಮತೆಯಿದೆ, ಕತೆ ಹೇಳುವ ತವಕವಿದೆ, ದೃಷ್ಟಿಯನ್ನು ಬಿಡದ, ತುಷ್ಟಿಯನ್ನು ಹಿಡಿದಿಡುವ ಲಕ್ಷ್ಯವಿದೆ. ಕತ್ತಲೆಯ ಒಳಗೆ, ಕತ್ತಲೆಯ ಹೊರಗೆ, ಕತ್ತಲೆಯಿಂದ ಬೆಳಕಿಗೆ, ಬೆಳಕಿನಿಂದ ಕತ್ತಲೆಗೆ ಓಲಾಡುವ / ಹೊರಳಾಡುವ ಅರಿವು, ಅರ್ಥಗರ್ಭಿತವಾದ ಸತ್ಯವಾಗುವ ಸಮರ್ಥ ನೇಯ್ಗೆ, ಅಭಿನಂದನೀಯ!
‘ಕತ್ತಲೆ’ಯಲ್ಲಿರುವ ಬೆಳಕು, ಕಣ್ಣಿಗೆ ಕಾಣುವುದಲ್ಲ; ಅದು ಮನಗಾಣುವ ಸತ್ಯ!‘ಕತ್ತಲೆ’ಯ ‘ರಹಸ್ಯ’ವನ್ನು ಭೇದಿಸಲು, ‘ಕತ್ತಲೆ’ಯನ್ನೇ ಆಶ್ರಯಿಸಿ, ಕತ್ತಲಿನಲ್ಲೇ ದಿಟ್ಟವಾಗಿ ದರ್ಶಿಸುತ್ತಾರೆ, ಪಟ್ಟಾಜೆಯವರು!