ಶ್ರೀಧರ ಬಳಗಾರ ಕನ್ನಡದ ಉತ್ತಮ ಕಥೆಗಾರರಲ್ಲೊಬ್ಬರು. ಇದುವರೆಗೆ ಅವರ ‘ಅಧೋಮುಖ’, ‘ಮುಖಾಂತರ’, ‘ಇಳೆ ಎಂಬ ಕನಸು’, ‘ಒಂದು ಫೋಟೋದ ನೆಗೆಟಿವ್’, ‘ಈಸಾಡತಾವ ಜೀವ’ ಮತ್ತು ‘ಮಾಲತಿ ಮಾತಾಡಿದಳು’ ಎಂಬ ಆರು ಕಥಾಸಂಕಲನಗಳು ಪ್ರಕಟವಾಗಿವೆ. ‘ಕೇತಕಿಯ ಬನ’, ‘ಆಡುಕಳ’, ‘ಮೃಗಶಿರ’ ಮತ್ತು ‘ವಿಸರ್ಗ’ ಎಂಬ ನಾಲ್ಕು ಕಾದಂಬರಿಗಳು ಬಂದಿವೆ. ‘ರಥ ಬೀದಿ’, ‘ಕಾಲ ಪಲ್ಲಟ’ ಮತ್ತು ‘ಮೊಳದಷ್ಟು ಹೂವು’ ಅವರ ಲೇಖನ ಸಂಕಲನಗಳು. ‘ಕೇತಕಿಯ ಬನ’ ಬಳಗಾರರ ಚೊಚ್ಚಲ ಕಾದಂಬರಿ. ಇದು ೨೦೦೩ರಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲಾ ಮೂಲಕ ಮೊದಲ ಮುದ್ರಣ ಕಂಡಿತ್ತು.
ಬಳಗಾರರು ಉತ್ತರ ಕನ್ನಡ ಜಿಲ್ಲೆಯವರು. ಆ ನೆಲಕ್ಕೆ ತುಂಬ ಶ್ರೀಮಂತವಾದ ಕಥನ ಪರಂಪರೆಯಿದೆ. ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗರಂತಹ ಮಹತ್ವದ ಲೇಖಕರು ಉತ್ತರ ಕನ್ನಡದವರು. ಬಳಗಾರರು ಸಾಹಿತ್ಯ ಕೃಷಿಯಲ್ಲಿ ತಮ್ಮ ಸಹೋದ್ಯೋಗಿಗಳಾದ ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗರ ಸಮಕಾಲೀನರಾದರೂ ಬರವಣಿಗೆಯಲ್ಲಿ ಅವರಿಗಿಂತ ಭಿನ್ನವಾಗಿ ಕಾಣುತ್ತಾರೆ. ಬಳಗಾರರು ಅಪ್ಪಟ ಉತ್ತರ ಕನ್ನಡ ಜಿಲ್ಲೆಯ ಕಥೆಗಾರರು. ಈಗಾಗಲೇ ಸುಮಾರು ಐವತ್ತಕ್ಕೂ ಅಧಿಕ ಕಥೆಗಳನ್ನು ಪ್ರಕಟಿಸಿರುವ ಬಳಗಾರರ ಮುಕ್ಕಾಲು ಪಾಲು ಕಥೆಗಳು ಉತ್ತರ ಕನ್ನಡದ ಮಣ್ಣಿನಲ್ಲಿ ಬೇರೂರಿ, ಅರಳಿವೆ.
ಕನ್ನಡ ಕಥನ ಸಾಹಿತ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನಜೀವನ ಮತ್ತು ಸಂಸ್ಕೃತಿಯನ್ನು ಖಚಿತ ಮತ್ತು ನಂಬಲರ್ಹ ಎಂಬ ರೀತಿಯಲ್ಲಿ ಮೊದಲು ತಂದವರು ಯಶವಂತ ಚಿತ್ತಾಲರು. ಉತ್ತರ ಕನ್ನಡ ಜಿಲ್ಲೆಯ ನಂತರದ ತಲೆಮಾರಿನ ಲೇಖಕರಿಗೆ ಚಿತ್ತಾಲರ ಪ್ರಭಾವವನ್ನು ಅರಗಿಸಿಕೊಂಡು, ಅದನ್ನು ಮೀರಿ ಬರೆಯುವ ಗುರುತರ ಸವಾಲು ಎದುರಾಗುವುದು ಸಹಜ. ಆ ಸವಾಲನ್ನು ಯಶಸ್ವಿಯಾಗಿ ಎದುರಿಸಿ ಕಥೆಗಾರರಾಗಿ ಬೆಳೆದವರು ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಮತ್ತು ಶ್ರೀಧರ ಬಳಗಾರ ಮಾತ್ರ.
ಉತ್ತರ ಕನ್ನಡ ಜಿಲ್ಲೆಯ ಕುರಿತು ಬಂದ ಕಾದಂಬರಿಗಳನ್ನು ಕುರಿತು ಚಿಂತಿಸಿದಾಗ ಮಾತ್ರ ಅತೃಪ್ತಿ ಉಂಟಾಗುತ್ತದೆ. ಅರವತ್ತರ ದಶಕದಲ್ಲಿ ಬಂದ ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯ ಸಂಪೂರ್ಣ ಕಥನ ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಮುಂದೆ ತೊಂಬತ್ತರ ದಶಕದಲ್ಲಿ ಚಿತ್ತಾಲರ ಮಹತ್ವದ ಕಾದಂಬರಿ ‘ಪುರುಷೋತ್ತಮ’ ಪ್ರಕಟವಾಯಿತು. ಈ ಕಾದಂಬರಿಯ ಕಥನದ ಬಹುಪಾಲು ಘಟಿಸುವುದು ಮುಂಬಯಿ ಮಹಾನಗರದಲ್ಲಿ, ಭಾಗಶಃ ಕಥನ ಮಾತ್ರ ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟಿಸುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ಚಿತ್ತಾಲರ ‘ಮೂರು ದಾರಿಗಳು’ ಪ್ರಕಟವಾದ ನಾಲ್ಕು ದಶಕಗಳ ನಂತರ ಬಂದ ಬಳಗಾರರ ‘ಕೇತಕಿಯ ಬನ’ ಕಾದಂಬರಿ ವಿಶೇಷವಾಗಿ ಗಮನ ಸೆಳೆಯುತ್ತದೆ.
‘ಕೇತಕಿಯ ಬನ’ ಕಾದಂಬರಿಯ ಕಥನ ನಡೆಯುವುದು ಉತ್ತರ ಕನ್ನಡ ಜಿಲ್ಲೆಯ ದಟ್ಟ ಮಲೆನಾಡಿನ ಹಳ್ಳಿಯಾದ ವಾಗಳ್ಳಿಯಲ್ಲಿ. ಸಣ್ಣಕ್ಕ ಎಂಬ ವಿಧವೆ ಮತ್ತು ಅವಳ ಮಕ್ಕಳಾದ ಗೋದಾವರಿ, ಸಾವಿತ್ರಿ, ಕಾವೇರಿ ಮತ್ತು ಗಣೇಶರಿಂದ ಕೂಡಿದ ಕುಟುಂಬದ ಕಥೆ ಕೇಂದ್ರದಲ್ಲಿದ್ದರೂ ಸಾಣು, ಗೋವಿಂದ, ನಾರಾಯಣಪ್ಪ, ಚಂದ್ರಪ್ಪ, ಮಾಚಣ್ಣ, ಉದ್ದಾಲಿ ಮುಂತಾದವರು ಸಹ ಈ ಕುಟುಂಬದೊಂದಿಗೆ ಹಲವು ರೀತಿಯಲ್ಲಿ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಗಂಡನನ್ನು ಕಳೆದುಕೊಂಡು, ಮದುವೆಯ ವಯಸ್ಸಿಗೆ ಬಂದ ಇಬ್ಬರು ಹುಡುಗಿಯರು ಮತ್ತು ಒಬ್ಬ ಚಿಕ್ಕ ವಯಸ್ಸಿನ ಮಗನನ್ನು ಬೆಳೆಸುವ ದೊಡ್ಡ ಜವಾಬ್ದಾರಿ ಸಣ್ಣಕ್ಕನ ಮೇಲಿದೆ. ಅವಳಲ್ಲಿ ಗಂಡ ಬಿಟ್ಟು ಹೋದ ಜಮೀನು, ಐದು ಸಾವಿರದಷ್ಟು ನಗದು ಹಣ ಮತ್ತು ಸ್ವಲ್ಪ ಒಡವೆಗಳಿವೆ. ಗಂಡು ದಿಕ್ಕಿಲ್ಲದ ಮನೆಯಲ್ಲಿ ಸಣ್ಣಕ್ಕನಿಗೆ ಜಮೀನು ಮಾಡಿಸುವುದರೊಂದಿಗೆ, ಹಣ ಮತ್ತು ಒಡವೆಗಳನ್ನು ಕಾಪಾಡಿಕೊಂಡು ಹೋಗುವ ಹೊಣೆ ಸಹ ಇದೆ. ತಿಮ್ಮಣ್ಣ ಬದುಕಿದ್ದಾಗ ಮೂಕಾಂಬಿಕೆ ಎಂಬ ವಿಧವೆಯ ಚಿನ್ನದ ಸರ ಇಸಿದುಕೊಂಡು ಅದನ್ನು ಹಿಂದಿರುಗಿಸದ ಕಾರಣಕ್ಕೆ ಶ್ರೀಮಠ ಹಾಕಿದ ಬಹಿಷ್ಕಾರ ಮತ್ತು ವಿರೋಧಿಯಾದ ಮಾಚಣ್ಣನ ಉಪದ್ರವಗಳನ್ನು ಸಹಿಸಿಕೊಂಡು ಅವಳು ಇದನ್ನೆಲ್ಲ ಮಾಡಬೇಕಿದೆ.
ಕಾದಂಬರಿಯ ಆರಂಭದಲ್ಲೇ ಮಾಚಣ್ಣ ಮತ್ತು ಉದ್ದಾಲಿ ಸೇರಿ ತಿನ್ನಲು ಸಹ ಅಕ್ಕಿ ಉಳಿಯದಂತೆ ಸಣ್ಣಕ್ಕನ ಮನೆ ಜಪ್ತಿ ಮಾಡಿ ಹೋಗುತ್ತಾರೆ. ಈ ಸಂದರ್ಭದಲ್ಲಿ ನೆರವಿಗೆ ಬರುವುದು ಸಾಣು. ಜಮೀನು ಮಾಡಿಸಲು ಸಾಣು ತನ್ನ ಕುಟುಂಬದೊಂದಿಗೆ ವಾಗಳ್ಳಿಯಲ್ಲಿ ಬಂದು ನಿಲ್ಲುತ್ತಾನೆ. ಸಾಣು, ಅವನ ಹೆಂಡತಿ ಗೌರಿ, ಮಗ ಗೋವಿಂದ ಮತ್ತು ಸೊಸೆ ಕಮಲ ಸೇರಿ ಜಮೀನು ಮಾಡುತ್ತಾರೆ. ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪನವರು ಕೂಡ ಸಣ್ಣಕ್ಕನಿಗೆ ಸಾಕಷ್ಟು ಸಹಾಯ ಮಾಡುತ್ತಾರೆ. ಇವರೆಲ್ಲರ ನೆರವಿನಿಂದ ಸಣ್ಣಕ್ಕ ಗಟ್ಟಿಯಾಗಿ ನಿಂತುಕೊಂಡು ಬದುಕು ಸಾಗಿಸಲು ನೆರವಾದರೂ ಅದು ಅವಳ ಕುಟುಂಬದಲ್ಲಿ ಹಲವು ಪಲ್ಲಟಗಳನ್ನುಂಟು ಮಾಡುತ್ತದೆ.
ಜಮೀನು ಮಾಡಿಸಲೆಂದು ಬಂದ ಸಾಣು, ಮಾಂತ್ರಿಕ ಬಾರ್ಕೆಲಾನ ಮಾತು ಕೇಳಿ ನಿಧಿ ಶೋಧನೆಗೆ ತೊಡಗುತ್ತಾನೆ. ಒಂದು ಕಾಲದಲ್ಲಿ ವರ್ಣರಂಜಿತವಾಗಿ ಬದುಕಿದ ಸಾಣು ನಿಧಿ ಶೋಧನೆಯನ್ನು ತೀವ್ರವಾಗಿ ಹಚ್ಚಿಕೊಂಡು ಒದ್ದಾಡುತ್ತಾನೆ. ಆರಂಭದಲ್ಲಿ ಇಂತಹ ಆಕಸ್ಮಿಕ ಧನ ಲಾಭದ ಕುರಿತು ಆಸಕ್ತಿ ತೋರುವ ಸಣ್ಣಕ್ಕ ಬಲು ಬೇಗ ಈ ಭ್ರಮೆಯಿಂದ ಹೊರ ಬರುತ್ತಾಳೆ. ಗೋವಿಂದನ ಒತ್ತಾಸೆಯಿಂದಾಗಿ ಜಾಧವ ಸಾಹುಕಾರರ ಬಳಗಕ್ಕೆ ಊಟ, ತಿಂಡಿ ಪೂರೈಸುವ ಕಾರ್ಯವನ್ನು ಮಾಡುವ ಸಣ್ಣಕ್ಕನ ಮನೆಯಲ್ಲಿ ಇದರಿಂದ ಕೆಲವು ಬದಲಾವಣಾಗಳಾಗುತ್ತವೆ. ಜಾಧವ ಸಾಹುಕಾರರ ನೆರವಿನಿಂದ ಹುಬ್ಬಳ್ಳಿಯಿಂದ ಕೊಂಡು ತಂದ ರೇಡಿಯೋ ಮೂಲಕ ಬಹಿಷ್ಕಾರದ ಕಾರಣದಿಂದ ದೂರವಾದ ಅಕ್ಕಪಕ್ಕದವರು ವಿಚಿತ್ರ ರೀತಿಯಲ್ಲಿ ಹತ್ತಿರ ಬರತೊಡಗುತ್ತಾರೆ.
ಶ್ರೀಮಠದ ಬಹಿಷ್ಕಾರದ ಕಾರಣದಿಂದಾಗಿ ಊರವರಿಗೆ ಎರವಾಗಿ ಬದುಕುತ್ತಿರುವ ಸಣ್ಣಕ್ಕನ ಮಕ್ಕಳಿಗೆ ಊರ ಜನ ಅಥವಾ ಬಂಧು – ಬಳಗದ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲ. ಊರಿನಿಂದ ದೂರ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಅವರಿಗೆ ಊರ ಕುರಿತು, ಊರ ಜನರ ಕುರಿತು ಸದಭಿಪ್ರಾಯವಿಲ್ಲ. ಯಲ್ಲಾಪುರ, ಹುಬ್ಬಳ್ಳಿಯಂತಹ ಪೇಟೆಗಳ ಕುರಿತು ಇರುವ ಆಸಕ್ತಿ, ಕುತೂಹಲಗಳು ಅವರಿಗೆ ಊರ ಬಗ್ಗೆ ಇಲ್ಲ. ಬಹಿಷ್ಕಾರದ ಕಾರಣದಿಂದಾಗಿ ಅವರಿಗೆ ಹಳ್ಳಿಗಿಂತ ಪೇಟೆಯ ಬದುಕೇ ಹೆಚ್ಚು ಅಪ್ಯಾಯಮಾನವೆನಿಸಿದೆ.
ಸಣ್ಣಕ್ಕ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಜಾಧವ ಸಾಹುಕಾರರ ಬಳಗಕ್ಕೆ ಆಶ್ರಯ ಕೊಟ್ಟದ್ದು ಮತ್ತು ರೇಡಿಯೋ ಬಂದ ನಂತರ ಮನೆಯಲ್ಲಿ ಉಂಟಾದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದನ್ನು ಸರಿಪಡಿಸಲು ಪ್ರಯತ್ನಿಸುವ ನಾರಾಯಣಪ್ಪನವರು ಅದರಲ್ಲಿ ಪೂರ್ಣ ಯಶಸ್ವಿಯಾಗುವುದಿಲ್ಲ. ಇತ್ತ ಸಾಣುವಿನ ಕುಟುಂಬ ಮತ್ತು ಸಣ್ಣಕ್ಕನ ಕುಟುಂಬದವರಿಗೂ ನಾರಾಯಣಪ್ಪನವರಲ್ಲಿ ಮೊದಲಿನ ಗೌರವ ಉಳಿದಿಲ್ಲ. ಹೀಗಾಗಿ ನಾರಾಯಣಪ್ಪ ಅಸಹಾಯಕರಾಗಬೇಕಾಗುತ್ತದೆ. ಇದನ್ನೆಲ್ಲ ಸಣ್ಣಕ್ಕ ತುಂಬ ಸೂಕ್ಷ್ಮವಾಗಿ ನಿರ್ವಹಣೆ ಮಾಡುತ್ತಾಳೆ.
ನಾರಾಯಣಪ್ಪನವರ ದೊಡ್ಡ ಮಗ ಶಿವರಾಮನಿಗೆ ಸಣ್ಣಕ್ಕನ ದೊಡ್ಡ ಮಗಳು ಗೋದಾವರಿಯನ್ನು ಮದುವೆ ಮಾಡಿ ಕೊಡಲಾಗಿದೆ. ಕುಂಬ್ರಾಳಿನಲ್ಲಿ ನೆಲೆ ನಿಂತಿರುವ ಗೋದಾವರಿಯದು ಮತ್ತೊಂದು ಕಥೆ. ಮಂಜಪ್ಪನೆಂಬ ಕೇಡಿಯ ಭಯದಿಂದ ಶಿವರಾಮನನ್ನು ಕಾಪಾಡಲು ನಾರಾಯಣಪ್ಪನವರು ಕುಂಬ್ರಾಳಿನಲ್ಲಿ ಚಂದ್ರಪ್ಪನನ್ನು ತಂದು ಪ್ರತಿಷ್ಠಾಪಿಸುತ್ತಾರೆ. ಆದರೆ ಅವನು ನಿಧಾನವಾಗಿ ಗೋದಾವರಿ ಸಹಿತ ಶಿವರಾಮನ ಕುಟುಂಬವನ್ನೇ ವಶಪಡಿಸಿಕೊಂಡು ಆಳತೊಡಗುತ್ತಾನೆ. ತಾವೇ ತಂದು ಕೂರಿಸಿದ ಚಂದ್ರಪ್ಪ ನಾರಾಯಣಪ್ಪನವರಿಗೆ ಮಗ್ಗಲು ಮುಳ್ಳಾಗುತ್ತಾನೆ. ಗೋದಾವರಿಯಂತೂ ಚಂದ್ರಪ್ಪ ಹೇಳಿದಂತೆ ಕುಣಿಯತೊಡಗುತ್ತಾಳೆ. ಅವಳಿಗೆ ಬುದ್ಧಿ ಹೇಳಲು ಹೋದ ಸಣ್ಣಕ್ಕ ಅವಮಾನದಿಂದ ಹಿಂದಿರುಗಬೇಕಾಗುತ್ತದೆ. ಚಂದ್ರಪ್ಪನಿಂದ ಗರ್ಭಿಣಿಯಾದ ಗೋದಾವರಿಯ ಹೆರಿಗೆಯನ್ನು ಸಣ್ಣಕ್ಕನೇ ಮಾಡಬೇಕಾಗುತ್ತದೆ. ಈ ಹೆರಿಗೆಯಲ್ಲಿ ವಿಕಾರ ರೂಪದ ಹೆಣ್ಣು ಶಿಶು ಹುಟ್ಟಿದ ತಕ್ಷಣ ಮರಣ ಹೊಂದಿದರೂ, ಬಾಣಂತನ ಮಾಡಿಸಿಕೊಳ್ಳುವುದು ತನ್ನ ಹಕ್ಕೆಂಬಂತೆ ವರ್ತಿಸುವ ಗೋದಾವರಿಯ ನಡತೆ ಅಚ್ಚರಿ ತರಿಸುವಂತಿದೆ. ಈ ಪ್ರಸಂಗ ತುಂಬ ವ್ಯಂಗ್ಯ ಮತ್ತು ಸಹಾನುಭೂತಿಯಿಂದ ಕೂಡಿದೆ.
ಈ ಕಾದಂಬರಿಯಲ್ಲಿ ಬರುವ ಕಾವೇರಿಯ ಪಾತ್ರ ಮಾತ್ರ ತುಂಬ ಜೀವಂತಿಕೆಯಿದೆ ಕೂಡಿದೆ. ಹೊಸ ಹರೆಯದಲ್ಲಿರುವ ಕಾವೇರಿಗೆ ವಯೋಸಹಜವಾದ ಹಲವು ಆಸೆ, ಆಕಾಂಕ್ಷೆಗಳಿವೆ. ಜೀವನದ ಕುರಿತು ತುಂಬ ಕುತೂಹಲ ಮತ್ತು ಆಸಕ್ತಿಯಿರುವ ಕಾವೇರಿ, ಗೋದಾವರಿ ಮತ್ತು ಸಾವಿತ್ರಿಯರಿಗಿಂತ ಭಿನ್ನ. ಅವಳು ಸಾವಿತ್ರಿಯಂತೆ ಸಾಧುವಲ್ಲ, ಅದೇ ರೀತಿ ಗೋದಾವರಿಯಷ್ಟು ಗಟ್ಟಿಗಿತ್ತಿಯೂ ಅಲ್ಲ. ಆದರೆ ಚಾಣಾಕ್ಷತೆ ಮತ್ತು ಧೂರ್ತತನದಲ್ಲಿ ಗೋದಾವರಿಯನ್ನು ಸಹ ಮೀರಿಸುತ್ತಾಳೆ. ಕಾವೇರಿಯ ವಯೋಸಹಜ ದೈಹಿಕ ಕಾಮನೆಗಳಿಗೆ ಒತ್ತಾಸೆಯಾಗಿ ನಿಲ್ಲುವುದು ಗೋವಿಂದ.
ವಿವಾಹಿತ ಮತ್ತು ಅನುಭವಿಯಾದ ಅವನು ಕಾವೇರಿಯ ಕಣ್ಣಲ್ಲಿರುವ ಕಾಮನೆಯನ್ನು ಗುರುತಿಸುತ್ತಾನೆ. ಇಡಗುಂದಿ ಜಾತ್ರೆಯಲ್ಲಿ ಮೊದಲ ಬಾರಿಗೆ ಕೂಡುವ ಅವರು ನಂತರ ನಿರಂತರವಾಗಿ ಪ್ರಣಯದಾಟ ಮುಂದುವರೆಸುತ್ತಾರೆ. ವಾಗಳ್ಳಿ ಸುತ್ತಮುತ್ತಲಿನ ಕಾಡು, ಹೊಳೆ, ಅಬ್ಬಿ ಅವರ ಪ್ರಣಯದಾಟದ ತಾಣಗಳಾಗುತ್ತವೆ. ಕಾವೇರಿಯ ಹಾಸಿಗೆಯಲ್ಲಿ ಆಕಸ್ಮಿಕವಾಗಿ ಸಿಕ್ಕ ಕಾಮಶಾಸ್ತ್ರದ ಪುಸ್ತಕದಿಂದ ಗಣೇಶನಿಗೆ ಅವಳ ಕುರಿತು ಅನುಮಾನ ಬಂದರೂ ಸಹ ಅವನು ಅದನ್ನು ಅಲಕ್ಷಿಸುತ್ತಾನೆ. ಗೋವಿಂದ-ಕಾವೇರಿಯರ ಈ ನಿರಂತರ ಪ್ರಣಯದ ಫಲವಾಗಿ ಕಾವೇರಿ ಗರ್ಭಿಣಿಯಾಗುತ್ತಾಳೆ. ಈ ವಿಷಯವನ್ನು ಮೊದಲು ಪತ್ತೆ ಹಚ್ಚುವುದು ಇಂತಹ ಪ್ರಣಯದಾಟದಲ್ಲಿ ನುರಿತವಳಾದ ಗೋದಾವರಿ. ಆದರೆ ಅವಳು ಚಂದ್ರಪ್ಪನ ಸಹಾಯದಿಂದ ಹುಬ್ಬಳ್ಳಿಯಲ್ಲಿ ಕಾವೇರಿಯ ಕಳ್ಳ ಬಸಿರು ತೆಗೆಸಲು ನೆರವಾಗುತ್ತಾಳೆ. ಚಾಣಾಕ್ಷಳಾದ ಕಾವೇರಿ ತಾನು ಕುಣಬಿ ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾದೆ ಎಂದು ಗೋವಿಂದನನ್ನು ರಕ್ಷಿಸುವುದರೊಂದಿಗೆ, ತನ್ನನ್ನು ಸಹ ರಕ್ಷಿಸಿಕೊಳ್ಳುತ್ತಾಳೆ. ಕಾವೇರಿಗೆ ಮುಂದೆ ಜಾಧವ ಸಾಹುಕಾರರ ಬಂಧುವೊಬ್ಬರ ಮಗನ ಜೊತೆ ಮದುವೆಯ ಪ್ರಸ್ತಾಪ ಬಂದಾಗ ಅವಳು ತುಂಬ ಸಲೀಸಾಗಿ ಹಳೆಯದನ್ನೆಲ್ಲ ಮರೆತು ಹೊಸ ಬಾಳಿಗೆ ಅಣಿಯಾಗುತ್ತಾಳೆ.
ಕಾದಂಬರಿಯಲ್ಲಿ ನಿಜಕ್ಕೂ ಕರುಣೆ ಹುಟ್ಟುವಂತೆ ಮಾಡುವ ಪಾತ್ರ ಸಾವಿತ್ರಿಯದು. ಗೋದಾವರಿ, ಕಾವೇರಿಯರಂತೆ ಅವಳು ಚಾಣಾಕ್ಷಳಲ್ಲ. ಸಾವಿತ್ರಿ ಎಂಬ ಹೆಸರಿಗೆ ತಕ್ಕಂತೆ ಅವಳು ನಿಜಕ್ಕೂ ಗುಣಸಂಪನ್ನ ಹುಡುಗಿ. ಆದರೆ ಏನೆಲ್ಲ ಆಟವಾಡಿಯೂ ಒಳ್ಳೆಯ ಗಂಡನನ್ನು ಪಡೆಯುವ ಕಾವೇರಿಯ ಮುಂದೆ ಅವಳು ನಿಜಕ್ಕೂ ಅದೃಷ್ಟ ಹೀನಳು. ಶ್ರೀಮಠದ ಬಹಿಷ್ಕಾರ, ಗೋದಾವರಿ ಮತ್ತು ಕಾವೇರಿಯರ ಕುಖ್ಯಾತಿಯ ದೆಸೆಯಿಂದ ಅವಳು ನಲವತ್ತು ವರ್ಷದ, ಎರಡು ಮಕ್ಕಳ ತಂದೆಯಾದ ವೆಂಕಟರಮಣನಿಗೆ ಎರಡನೆಯ ಹೆಂಡತಿಯಾಗಬೇಕಾಗುತ್ತದೆ. ಸಾವಿತ್ರಿ ಇದನ್ನೆಲ್ಲ ಮೂಕಳಂತೆ ಸ್ವೀಕರಿಸುವುದು ಸಣ್ಣಕ್ಕನ್ನನ್ನು ತೀವ್ರ ತಳಮಳಕ್ಕೀಡಾಗುವಂತೆ ಮಾಡುತ್ತದೆ.
ಚಂದ್ರಪ್ಪನ ಸಜೀವ ದಹನ ಗೋದಾವರಿಯ ಬಾಳನ್ನು ಅನಿರೀಕ್ಷಿತ ತಿರುವಿನಲ್ಲಿ ತಂದು ನಿಲ್ಲಿಸಿದರೆ, ಸಣ್ಣಕ್ಕ ಮತ್ತು ನಾರಾಯಣಪ್ಪನವರಿಗೆ ಅವನ ಸಾವನ್ನು ಹೇಗೆ ಸ್ವೀಕರಿಸಬೇಕೆಂಬ ದ್ವಂದ್ವ ಕಾಡುತ್ತದೆ. ಭೂತದ ಪಾಪವನ್ನೆಲ್ಲ ಮರೆತು ಸಂಭ್ರಮದಿಂದ ಮದುವೆಯಾಗುವ ಕಾವೇರಿ ಸಣ್ಣಕ್ಕ ಸೇರಿದಂತೆ ತನ್ನ ತವರಿನವರನ್ನು ತುಚ್ಛವಾಗಿ ಕಾಣುವುದು ಸಣ್ಣಕ್ಕನಿಗೆ ತೀವ್ರ ವಿಷಾದ ಉಂಟು ಮಾಡುತ್ತದೆ. ಕಾದಂಬರಿಯ ಕೊನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣಪ್ಪ ತಮ್ಮ ಅವಿಭಕ್ತ ಕುಟುಂಬ ಒಡೆದು ಛಿದ್ರವಾಗುವುದನ್ನು ತಪ್ಪಿಸಲು ಸಾಧ್ಯವಾಗದೆ, ಅದಕ್ಕೆ ಮೂಕ ಸಾಕ್ಷಿಯಾಗಬೇಕಾಗುತ್ತದೆ.
‘ಕೇತಕಿಯ ಬನ’ದಲ್ಲಿ ಸಣ್ಣಕ್ಕ, ಗೋದಾವರಿ, ಸಾವಿತ್ರಿ, ಕಾವೇರಿ, ಗಣೇಶ, ಗೋವಿಂದ, ನಾರಾಯಣಪ್ಪ, ಸಾಣು, ಚಂದ್ರಪ್ಪ, ಮಾಚಣ್ಣ ಸೇರಿದಂತೆ ಕೆಲವೇ ಕೆಲವು ಪಾತ್ರಗಳ ಮೂಲಕ ಬಳಗಾರರು ಒಂದು ಸುಸಂಬದ್ಧ ಕಥೆಯನ್ನು ಹೆಣೆದಿದ್ದಾರೆ. ಕಾದಂಬರಿಯಲ್ಲಿ ಬರುವ ಉತ್ತರ ಕನ್ನಡದ ದಟ್ಟ ಮಲೆನಾಡಿನ ಪರಿಸರ ಅದರ ಎಲ್ಲ ವಿವರಗಳೊಂದಿಗೆ ಜೀವಂತಗೊಂಡಿದೆ. ಮಲೆನಾಡಿನ ಪರಿಸರದ ವಿವರಗಳು ಸಮೃದ್ಧವಾಗಿದ್ದರೂ ಸಹ ಎಲ್ಲೂ ಅತಿಯೆನಿಸುವುದಿಲ್ಲ.
ಒಂದು ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಬಹಿಷ್ಕಾರದಂತಹ ಸಾಮಾಜಿಕ ಕ್ರೌರ್ಯದ ಪರಿಣಾಮದಿಂದಾಗಿ ಸಣ್ಣಕ್ಕನ ಕುಟುಂಬ ನಲುಗಿದೆ. ಬಹಿಷ್ಕಾರ ಹಾಕಿದ ಊರ ಜನರ ವಿರುದ್ಧ ಮೌನ ಬಂಡಾಯ ಸಾರುವ ಸಣ್ಣಕ್ಕ ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವುದಿಲ್ಲ. ಅವಳಿಗೆ ಸಹಾಯ ಮಾಡಲು ಬಂದವರೆಲ್ಲ ತಿಳಿದೋ, ತಿಳಿಯದೆಯೋ ಅವಳನ್ನು ವಂಚಿಸುತ್ತಾರೆ.
ಹಿರಿಯರಾದ ನಾರಾಯಣಪ್ಪ ತಮ್ಮ ನಪುಂಸಕ ಮಗನಿಗೆ ಗೋದಾವರಿಯನ್ನು ತಂದುಕೊಂಡು ಅನ್ಯಾಯ ಮಾಡುತ್ತಾರೆ. ಚಂದ್ರಪ್ಪನನ್ನು ಕುಂಬ್ರಾಳಿನಲ್ಲಿ ತಂದು ಕೂರಿಸಿ, ಗೋದಾವರಿ ದಾರಿ ತಪ್ಪಲು ಸಹ ಪರೋಕ್ಷವಾಗಿ ಕಾರಣವಾಗುತ್ತಾರೆ. ಸಾವಿತ್ರಿಯನ್ನು ಎರಡು ಮಕ್ಕಳ ತಂದೆಯಾದ ವೆಂಕಟರಮಣನಿಗೆ ದಾಟಿಸುವಲ್ಲಿ ಸಹ ಅವರ ಪಾತ್ರವಿದೆ. ಇನ್ನು ಜಮೀನು ಮಾಡಲೆಂದು ಬಂದ ಸಾಣುವಿನ ಮಗ ಗೋವಿಂದ ಕಾವೇರಿಯ ಜೊತೆ ಸರಸವಾಡಿ, ಮದುವೆಗೆ ಮುಂಚೆ ಅವಳನ್ನು ಗರ್ಭಿಣಿಯನ್ನಾಗಿ ಮಾಡುತ್ತಾನೆ. ಈ ತಪ್ಪುಗಳು ನಡೆಯುವಲ್ಲಿ ಚಂದ್ರಪ್ಪ ಮತ್ತು ಗೋವಿಂದ ಎಷ್ಟು ಜವಾಬ್ದಾರರೋ ಗೋದಾವರಿ ಹಾಗೂ ಕಾವೇರಿ ಕೂಡ ಅಷ್ಟೇ ಜವಾಬ್ದಾರರು. ಸಮಯ, ಸಂದರ್ಭಗಳು ಮನುಷ್ಯನ ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಅಂತಹ ವಿಶಿಷ್ಟ ಸಂದರ್ಭಗಳಲ್ಲಿ ಸಿಕ್ಕು ಒದ್ದಾಡುವವರು ಸಣ್ಣಕ್ಕ, ಗೋದಾವರಿ, ಸಾವಿತ್ರಿ ಮತ್ತು ಕಾವೇರಿ. ಈ ನಾಲ್ಕೂ ಸ್ತ್ರಿ ಪಾತ್ರಗಳು ಮನುಷ್ಯ ಜೀವನದ ಒಳಿತು-ಕೆಡುಕುಗಳಿಗೆ ಒಳ್ಳೆಯ ಉದಾಹರಣೆಯಂತಿದ್ದು, ಕಾದಂಬರಿ ಓದಿ ಮುಗಿಸಿದ ನಂತರವೂ ಸಹ ಓದುಗರ ಮನಸ್ಸಿನಲ್ಲಿ ಉಳಿಯುವಂತಿವೆ.
ಸಾಧಾರಣ ಲೇಖಕರ ಕೈಯಲ್ಲಿ ಸಣ್ಣಕ್ಕ ಎಂಬ ವಿಧವೆ ಮತ್ತು ಅವಳ ಮಕ್ಕಳ ಬಾಳಿನ ಗೋಳಿನ ಕಥೆಯ ಮಟ್ಟಕ್ಕೆ ನಿಲ್ಲಬಹುದಾಗಿದ್ದ ಕಥನ ‘ಕೇತಕಿಯ ಬನ’ದಲ್ಲಿ ಅದನ್ನು ಮೀರಿ ಬೆಳೆಯುವುದಲ್ಲದೆ, ಓದುಗರನ್ನು ಸಹ ಆವರಿಸಿಕೊಳ್ಳುತ್ತದೆ. ಸಣ್ಣಕ್ಕನ ಜೀವನ ಹೋರಾಟ, ನಾರಾಯಣಪ್ಪನವರ ಅವಿಭಕ್ತ ಕುಟುಂಬದ ವಿಘಟನೆ, ಗೋದಾವರಿ-ಚಂದ್ರಪ್ಪರ ಅನೈತಿಕ ಸಂಬಂಧ, ಗೋವಿಂದ-ಕಾವೇರಿಯರ ಅವಿಹಿತ ಪ್ರಣಯ, ಮುಗ್ಧ ಸಾವಿತ್ರಿಯ ಮೂಕ ರೋದನ, ಅತ್ತ ಮುಗ್ಧನೂ ಅಲ್ಲದ, ಇತ್ತ ಪ್ರಬುದ್ಧನೂ ಅಲ್ಲದ ಗಣೇಶನ ತೊಳಲಾಟ, ಬಾರ್ಕೆಲಾನ ಮಾತು ಕೇಳಿ ನಿಧಿ ಶೋಧನೆಗೆ ತೊಡಗುವ ಸಾಣುವಿನ ಮೂಢನಂಬಿಕೆ, ಸಣ್ಣಕ್ಕನಿಗೆ ಉಪದ್ರವ ಕೊಡಲು ಪಣ ತೊಟ್ಟ ಮಾಚಣ್ಣನ ದುಷ್ಟತನ ಸೇರಿದಂತೆ ಹಲವು ಆಯಾಮಗಳಲ್ಲಿ ಬೆಳೆಯುವ ಕಥೆ ಓದುಗರಿಗೆ ಒಂದು ಭಿನ್ನ ಅನುಭವ ನೀಡುತ್ತದೆ.
ಕಾದಂಬರಿಯು ಆರಂಭದಿಂದ ಅಂತ್ಯದವರೆಗೆ ಒಂದೇ ಮಟ್ಟದ ಹದ ಕಾಯ್ದುಕೊಂಡಿದ್ದು, ಓದು ಎಲ್ಲೂ ಶುಷ್ಕವೆನಿಸುವುದಿಲ್ಲ. ಕಾದಂಬರಿಯ ಕೊನೆಯ ಕೆಲವು ಅಧ್ಯಾಯಗಳು ತುಂಬ ವೇಗವಾಗಿ ಓದಿಸಿಕೊಳ್ಳುತ್ತವೆ. ಓದುಗರಿಗೆ ಇಷ್ಟು ಬೇಗ ಮುಗಿದು ಹೋಯಿತಲ್ಲಾ ಎಂದು ಅನಿಸುವಲ್ಲೇ ಕಾದಂಬರಿ ಮುಕ್ತಾಯ ಕಾಣುವುದು ಓದಿನ ರುಚಿಯನ್ನು ಹೆಚ್ಚಿಸಿದೆ.
ಬಳಗಾರರು ಲೇಖಕರ ಮಾತಿನಲ್ಲಿ ಈ ಕಾದಂಬರಿಯ ಕುರಿತು, “ಇದು ಬೆರಳಿನಿಂದ ಬರೆದದ್ದಲ್ಲ, ಕರುಳಿನಿಂದ ಹರಿದದ್ದು…” ಎಂದು ಹೇಳಿರುವ ಮಾತಿನಲ್ಲಿ ಸತ್ಯವಿದೆ. ‘ಕೇತಕಿಯ ಬನ’ ಕೇವಲ ೧೭೪ ಪುಟಗಳ ಕಾದಂಬರಿಯಾದರೂ ಸಹ ಸಾಂದ್ರತೆಯ ದೃಷ್ಟಿಯಿಂದ ತುಂಬ ದಟ್ಟವಾಗಿದೆ. ಒಬ್ಬ ಒಳ್ಳೆಯ ಕಾದಂಬರಿಕಾರನಿಗಿರಬೇಕಾದ ಸಂಯಮ, ಭಾವ ಸೂಕ್ಷ್ಮತೆ ಮತ್ತು ಪ್ರಬುದ್ಧತೆ ಬಳಗಾರರಲ್ಲಿದೆ. ಇದು ಅವರ ಮೊದಲ ಕಾದಂಬರಿ ಅನಿಸುವುದೇ ಇಲ್ಲ, ಅಷ್ಟು ಪ್ರಬುದ್ಧವಾಗಿದೆ. ಯಾವುದೇ ಒಬ್ಬ ಲೇಖಕ ತಾನು ಅನುಭವಿಸಿದ್ದನ್ನು ಓದುಗರಿಗೆ ತಲುಪಿಸುವಲ್ಲಿ ಸಫಲನಾದರೆ ಮಾತ್ರ ಆ ಕೃತಿ ಯಶಸ್ವಿಯಾದಂತೆ. ಬಳಗಾರರ ದಟ್ಟ ಜೀವನಾನುಭವದಿಂದ ಮೂಡಿ ಬಂದ ‘ಕೇತಕಿಯ ಬನ’ ಈ ದೃಷ್ಟಿಯಿಂದ ಖಂಡಿತವಾಗಿಯೂ ಒಂದು ಯಶಸ್ವಿ ಕಾದಂಬರಿ. ಉತ್ತರ ಕನ್ನಡ ಜಿಲ್ಲೆಯ ಜನಜೀವನ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ ಚಿತ್ರಿಸಿದ ಕೆಲವೇ ಕೆಲವು ಕಾದಂಬರಿಗಳಲ್ಲಿ ಇದು ಕೂಡ ಒಂದು.
ಕೇತಕಿಯ ಬನ
ಲೇಖಕರು : ಶ್ರೀಧರ ಬಳಗಾರ
ಪ್ರಥಮ ಮುದ್ರಣ : ೨೦೦೩
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, ಧಾರವಾಡ