“ಪೋಲೀಸ್ ಸ್ಟೇಶನಿಗೆ ಫೋನ್ ಮಾಡಿದವರು ಯಾರು?”
ಸಬ್ ಇನ್ಸ್‍ಪೆಕ್ಟರ್ ಬಲರಾಜನ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ.
“ಹೆದರಬೇಡಿ. ನಾವು ನಿಮ್ಮ ಶತ್ರುಗಳಲ್ಲ. ನೀವು ಕರೆದುದರಿಂದ ನಾವು ಇಲ್ಲಿಗೆ ಬಂದಿದ್ದೇವೆ. ಆದ್ದರಿಂದ ಯಾವ ಅಳುಕೂ ಇಲ್ಲದೆ ಹೇಳಿ”
ಅರ್ಧ ನಿಮಿಷದ ಮೌನದ ಬಳಿಕ ಗುಂಪಿನೊಳಗಿನಿಂದ ಸಣ್ಣ ದನಿಯು ಕೇಳಿಸಿತು.
“ನಾನು ಸರ್.”
“ನಿಮ್ಮ ಹೆಸರು?”
“ದಾಮೋದರ.”
“ಫೋನಿನಲ್ಲಿ ಹೇಳಿದ ಆ ಜಾಗ ಎಲ್ಲಿ?”
“ಅಗೋ ಅಲ್ಲಿ! ಬನ್ನಿ.”
ಬಲರಾಜನು ತನ್ನ ಜೊತೆಯಲ್ಲಿದ್ದ ಛಾಯಾಗ್ರಾಹಕನನ್ನು ಮುಂದೆ ಮಾಡಿ ಪೇದೆಯ ಜೊತೆಯಲ್ಲಿ ನಡೆದ.
“ಇಲ್ಲೇ ಸರ್ ಜಾಗ.”
ಜೊತೆಯಲ್ಲಿ ಬರುತ್ತಿದ್ದವರನ್ನು ಚದುರಿಸುತ್ತಾ ಬಲರಾಜ ಹತ್ತಿರ ಬಂದು ನೋಡಿದ. ಭೂಮಿ ಬರಿದಾಗಿತ್ತು. ನೆಲದ ಬಸಿರು ಕದಡಿದಂತಾಗಿತ್ತು. ಯಾರದೋ ಕಾಲ್ತುಳಿತಕ್ಕೆ ಸಿಕ್ಕು, ಹೆಂಟೆಗಳೊಡನೆ ಕಿತ್ತುಬಿದ್ದ ಸಸಿಗಳು ಮಾಸದ ಮುಸುಕು ಹರಿದ ಭ್ರೂಣಗಳಂತೆ ಕಾಣುತ್ತಿದ್ದವು. ಪದರ ಬಿಚ್ಚಿದ ಮಣ್ಣಿನಡಿಯಲ್ಲಿ ಜೀರ್ಣಗೊಂಡ ತಲೆಬುರುಡೆ ಮತ್ತು ಎಲುಬಿನ ತುಂಡುಗಳು!
“ನೆಲ ಅಗೆದದ್ದು ಏಕೆ?”
“ಹಿತ್ತಿಲ ಕೆಳಗಿನ ಆ ಎರಡಂತಸ್ತಿನ ಮನೆ ಹಳತಾಗಿ ಮುರಿದು ಬೀಳುವ ಸ್ಥಿತಿಗೆ ತಲುಪಿತ್ತು. ಹಾಗಾಗಿ ಈ ಹಿತ್ತಿಲಿನಲ್ಲಿ ಹೊಸ ಮನೆ ಕಟ್ಟಲು ಹೊರಟೆ. ನಲ್ಲಿಯ ಕೆಲಸಕ್ಕಾಗಿ ಅಗೆಯುತ್ತಿದ್ದಾಗ ಎಲುಬುಗಳು ಹೊರಬಂದವು. ಪ್ರಾಣಿಯದ್ದಾಗಿರಬೇಕೆಂದುಕೊಂಡು ಕೆಲಸ ಮುಂದುವರಿಸಿದೆ. ಆಮೇಲೆ ತಲೆಬುರುಡೆ ಸಿಕ್ಕಿತು. ಮನುಷ್ಯನದ್ದೆಂದು ಗೊತ್ತಾದ ಕೂಡಲೇ ನಿಮಗೆ ಸುದ್ದಿ ಮುಟ್ಟಿಸಿದೆ.”
“ಇಲ್ಲಿ ಶವಸಂಸ್ಕಾರವೇನಾದರೂ ನಡೆದಿತ್ತಾ?”
“ಗೊತ್ತಿಲ್ಲ. ನಾನು ಈ ಊರಿಗೆ ಬರುವ ಮೊದಲು ನಡೆದಿರಬಹುದೇನೋ.”
“ನೀನು ಈ ಊರಿನವನಲ್ಲವಾ?”
“ನಾನು ಗಲ್ಫಿನಲ್ಲಿದ್ದೆ. ನಂಜುಂಡ ವಾಸವಾಗಿದ್ದ ಹಿತ್ತಿಲ ಕೆಳಗಿನ ಮನೆಯೂ ಸೇರಿದಂತೆ ಇಡೀ ಜಮೀನನ್ನು ಖರೀದಿಸಿದ ಬಳಿಕ ಇಲ್ಲೇ ಉಳಿದುಕೊಂಡೆ. ಹೊಸಮನೆ ಕಟ್ಟಲು ಹೊರಟಾಗ ಹೀಗಾಯ್ತು.”
“ಅನೇಕ ವರ್ಷಗಳಿಂದ ಇಲ್ಲೇ ವಾಸವಾಗಿರುವವರು ಯಾರಿದ್ದೀರಿ?”
“ನಾನಿದ್ದೇನೆ ಸರ್” ಮುದುಕನೊಬ್ಬ ಮುಂದೆ ಬಂದ. “ನಾನು ಇಲ್ಲೇ ಹುಟ್ಟಿ ಬೆಳೆದವನು. ಈ ಜಾಗದಲ್ಲಿ ಯಾರ ಶವಸಂಸ್ಕಾರವೂ ಆಗಿಲ್ಲ ಸರ್.”
“ನಂಜುಂಡ ಅಂದರೆ ಯಾರು?”
“ಈ ಪ್ರದೇಶದ ದೊಡ್ಡ ರೌಡಿ. ಕಣ್ಣಲ್ಲಿ ನೆತ್ತರಿಲ್ಲದ ಕ್ರೂರ. ಹೊತ್ತು ಮೂಡುವಾಗಲೇ ಸಾರಾಯಿ ಅಂಗಡಿಗೆ ತೆರಳುತ್ತಿದ್ದ. ನಡುರಾತ್ರಿಯಲ್ಲೇ ಮರಳುತ್ತಿದ್ದ. ಮನೆಯಲ್ಲಿ ಬೊಬ್ಬೆ ಕೂಗು ಆರಂಭವಾಗುವುದು ಆಗಲೇ. ನಂಜುಂಡನಿಗೆ ಅವನ ಹೆಂಡತಿ ಕಾವೇರಿಯ ಮೇಲೆ ಸಂಶಯ. ಅವಕಾಶ ಸಿಕ್ಕಿದಾಗಲೆಲ್ಲ ಅವಳನ್ನು ಬೈಯುತ್ತಿದ್ದ. ಹೊಡೆಯುತ್ತಿದ್ದ. ಅವನು ಮನೆಗೆ ಬರುತ್ತಿದ್ದದ್ದು ಕಾವೇರಿಗೆ ಹೊಡೆಯಲು ಅಥವಾ ಬೇರೆ ಯಾರೂ ಸಿಗದಿದ್ದರೆ ಅವಳ ಜೊತೆ ಮಲಗಲು.”
“ಅವನೀಗ ಎಲ್ಲಿದ್ದಾನೆ?”
“ಎರಡು ವರ್ಷಗಳ ಮೊದಲು ಬೊಂಬಾಯಿಗೆ ಹೋದನೆಂದು ಅವನ ಗೆಳೆಯ ಗೋಪಾಲ ಹೇಳಿದ. ಅವನು ರಾತ್ರಿಯ ಬಸ್ಸಿಗೆ ಊರು ಬಿಟ್ಟ ಎಂದು ಕಾವೇರಿಯೂ ಅಂದಳು. ಅವನ ಕಾಟ ತಪ್ಪಿತಲ್ಲ ಅಂತ ಎಲ್ಲರಿಗೂ ಸಂತಸವಾಯಿತು. ಕೆಲವು ತಿಂಗಳವರೆಗೆ ಕಾವೇರಿ ಒಬ್ಬಳೇ ವಾಸವಾಗಿದ್ದಳು. ನಂಜುಂಡನಿಗೆ ಬೊಂಬಾಯಿಯಲ್ಲಿ ಕೆಲಸ ಸಿಕ್ಕಿದೆಯೆಂದೂ, ಪತ್ರ ಪಗಾರ ಕೈಸೇರಿವೆಯೆಂದೂ ಹೇಳುತ್ತಿದ್ದಳು.”
“ಅವರನ್ನು ಮಾತಾಡಿಸಬೇಕಿತ್ತಲ್ಲ”
“ಕಾವೇರಿ ತವರಿಗೆ ಹೋದಳು.”
“ಯಾವಾಗ?”
“ಮನೆಯನ್ನು ಮಾರಿದ ಬಳಿಕ. ಎರಡೂವರೆ ವರ್ಷಗಳ ಮೊದಲು”
“ಗೋಪಾಲ?”
“ಆಗಾಗ ಕಾಣಲು ಸಿಗುತ್ತಿದ್ದ. ಅವನ ತಾಯಿ ತೀರಿಕೊಂಡ ಮೇಲೆ ಅವನನ್ನು ಕಾಣಲಿಲ್ಲ. ಮನೆಗೆ ಯಾವತ್ತೂ ಬೀಗ.”
ಬಲರಾಜನು ಕೈಗವಸನ್ನು ಧರಿಸಿ ಮಣ್ಣಿನಲ್ಲಿ ಬಿದ್ದಿದ್ದ ಎಲುಬು ತುಂಡುಗಳನ್ನು ಹೆಕ್ಕಿ ತೆಗೆದುಕೊಂಡ. “ಪಿ.ಸಿ, ಇದು ಸಹಜಮರಣವೋ ಕೊಲೆಯೋ ಎಂದು ತಿಳಿಯಬೇಕು. ಈ ತಲೆಬುರುಡೆ ಮತ್ತು ಎಲುಬಿನ ತುಂಡುಗಳನ್ನು ಇವತ್ತೇ ಪ್ರಯೋಗಶಾಲೆಗೆ ಕಳುಹಿಸು”
“ಇನ್ಸ್‍ಪೆಕ್ಟರ್, ನನ್ನನ್ನು ಏಕೆ ಸ್ಟೇಶನಿಗೆ ಕರೆಸಿದಿರಿ? ಏನಾಗಬೇಕಿತ್ತು?”
ಬಲರಾಜನು ಆಕೆಯನ್ನು ಎವೆಯಿಕ್ಕದೆ ನೋಡಿದ. ಅವಳ ಅಂಗಾಂಗಗಳು ಸಡಿಲು ಬಿದ್ದಿರಲಿಲ್ಲ. ರೂಪ ಮಾಸಿರಲಿಲ್ಲ. ಯೌವನ ಅಳಿದಿರಲಿಲ್ಲ.
“ಕಾವೇರಿ, ನೀವು ದಾಮೋದರನಿಗೆ ಮಾರಿದ ಮನೆಯ ಹಿತ್ತಿಲಲ್ಲಿ ತಲೆಬುರುಡೆ ಮತ್ತು ಎಲುಬುಗಳು ಸಿಕ್ಕಿದ್ದವು”
“ಓಹ್! ಅದಕ್ಕೆ?”
“ಅದು ನಿಮ್ಮ ಗಂಡ ನಂಜುಂಡನ ತಲೆಬುರುಡೆ.”
ಕಾವೇರಿಯ ಉಸಿರೇ ಗಂಟಲಲ್ಲಿ ಸಿಕ್ಕಿಕೊಂಡಂತಾಯಿತು. “ಕೊಲೆ?” ದಿಗಿಲು ಬಿದ್ದವಳ ಬಾಯಿಯಿಂದ ಹೊರಟ ಉದ್ಗಾರ ಲೆಕ್ಕ ಮೀರಿ ದೊಡ್ಡವಾದಾಗ ಬಲರಾಜನ ಮಾತು ಅಲ್ಲಿಗೇ ನಿಂತಿತು. ಕರುಳಲ್ಲಿ ಸೇರಿಕೊಂಡ ಕಂಪನವನ್ನು ಹೇಗೆ ತಡೆಯುವುದೆಂದರಿಯದೆ ತಬ್ಬಿಬ್ಬಾಗಿ ನೋಡುತ್ತಿದ್ದವಳ ಕಣ್ಣುಗಳು ಅಗಲವಾಗತೊಡಗಿದವು.
“ಹೌದು. ನಿಗೂಢ ಹತ್ಯೆ.”
“ನಿಮ್ಮ ಊಹೆ ಸರಿಯಾಗಬೇಕಿಲ್ಲ. ಅವನನ್ನು ಕೊಲ್ಲಲು ಯಾರಿಗೂ ಧೈರ್ಯವಿಲ್ಲ. ಹೆಣ ನಂಜುಂಡನದ್ದೇ ಯಾಕಾಗಬೇಕು?”
“ಶವವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿದ್ದರಿಂದ ಮಾಂಸಭಾಗಗಳು ಕರಗಿದ್ದವು. ಕೂದಲು, ಉಗುರು, ಹಲ್ಲು, ತಲೆಬುರುಡೆ, ಎಲುಬುಗಳು ಉಳಿದಿದ್ದವು. ಈ ರೀತಿ ಬಾಕಿ ಉಳಿದ ಎಲುಬು ತುಂಡುಗಳಿಂದ ಹೆಣ ಯಾರದ್ದೆಂದು ತಿಳಿಯಲು ನೆರವಾಗುವ ಸೂಚನೆಗಳು ಸಿಕ್ಕಿದವು.”
“ಓಹೋ! ಸತ್ತವನ ಎಲುಬಿನಲ್ಲಿ ಅವನ ಹೆಸರು ಇದ್ದಿರಬಹುದು ಅಲ್ಲವೇ?”
“ಈ ಹೊತ್ತಲ್ಲಿ ಹಾಸ್ಯದ ಅಗತ್ಯವಿಲ್ಲ. ಹೇಳೋದನ್ನು ಕೇಳು” ಎನ್ನುತ್ತಾ ಬಲರಾಜ ಆಕೆಯನ್ನು ತೀಕ್ಷ್ಣವಾಗಿ ನೋಡಿದ. ಅವನ ದೃಷ್ಟಿ ಅವಳ ಕಣ್ಣುಗಳನ್ನು ಕೊರೆದು ಆಳಕ್ಕಿಳಿಯುತ್ತಿದ್ದಂತೆ ಅವಳ ದುಂಡಗಿನ ಮುಖ ಸೊರಗತೊಡಗಿತು.
“ಶರೀರದ ಕೆಲವು ಪ್ರಧಾನ ಎಲುಬುಗಳಿಂದ ಆ ವ್ಯಕ್ತಿಯ ಎತ್ತರವನ್ನೂ, ಸಾಮಾನ್ಯ ಗಾತ್ರವನ್ನೂ ಲೆಕ್ಕ ಹಾಕಬಹುದು. ತಲೆಬುರುಡೆ ಮತ್ತು ಸೊಂಟದ ಎಲುಬುಗಳ ಆಧಾರದಿಂದ ಅವು ಗಂಡಿನದ್ದೋ, ಹೆಣ್ಣಿನದ್ದೋ ಎಂದು ತಿಳಿಯಬಹುದು. ಸತ್ತವರಿಗೆ ಎಷ್ಟು ವಯಸ್ಸಾಗಿತ್ತು ಎಂದು ಅರಿತುಕೊಳ್ಳಬಹುದು. ಒಂದೇ ಒಂದು ಹಲ್ಲಿನಿಂದ ಶವದ ವಯಸ್ಸು ಎಷ್ಟೆಂದು ನಿರ್ಧರಿಸಬಹುದು. ಸೊಂಟದ ಎಲುಬುಗಳನ್ನು ನೋಡಿದರೆ ವ್ಯಕ್ತಿ ಹೆಣ್ಣೋ, ಹೆತ್ತವಳೋ, ಅಂಗವೈಕಲ್ಯವಿತ್ತೋ ಎಂದು ಪತ್ತೆ ಹಚ್ಚಬಹುದು. ಎಲುಬುಗಳಲ್ಲಿ ಕಂಡುಬರುವ ಜರಿತ, ಮುರಿತಗಳು ಮರಣಕಾರಣದ ಸೂಚನೆಗಳನ್ನು ನೀಡುತ್ತವೆ. ಎಲುಬು ಮತ್ತು ಅವುಗಳಿಗೆ ಅಂಟಿಕೊಂಡಿರುವ ಮಣ್ಣಿನ ರಾಸಾಯನಿಕ ಪರೀಕ್ಷೆ ಮರಣದ ರಹಸ್ಯವನ್ನು ಬಯಲುಗೊಳಿಸುತ್ತದೆ.”
“ರಾಸಾಯನಿಕ ಪರೀಕ್ಷೆ!”
“ಹೌದು. ಹಿತ್ತಿಲಲ್ಲಿ ದೊರಕಿದ ತಲೆಬುರುಡೆ ಮತ್ತು ಎಲುಬಿನ ತುಂಡುಗಳನ್ನು ಸೂಕ್ಷ್ಮ ಪರೀಕ್ಷೆಗೆ ಒಳಪಡಿಸಿದೆವು. ಅವುಗಳು ನಲುವತ್ತು-ನಲುವತ್ತೈದು ವಯಸ್ಸನ್ನು ಹೊಂದಿದ ಗಂಡಸಿನ ಎಲುಬುಗಳಾಗಿದ್ದವು. ಐದಡಿ ಐದಂಗುಲ ಎತ್ತರ, ಸ್ಥೂಲದೇಹ, ಸೊಂಟದ ಎಲುಬು ಮತ್ತು ಕಾಲಿನ ಹಿಮ್ಮಡಿಯಲ್ಲಿ ಕಾಣಸಿಕ್ಕಿದ ವ್ಯತ್ಯಾಸದಿಂದ ಎಡಗಾಲು ಸ್ವಲ್ಪ ಊನವಾಗಿತ್ತು ಎಂದು ತಿಳಿಯಿತು.”
“ಆ ವ್ಯಕ್ತಿ ನಂಜುಂಡನೇ ಏಕಾಗಿರಬೇಕು? ನಲುವತ್ತೈದು ವಯಸ್ಸಿನ, ಐದಡಿ ಎತ್ತರದ, ಎಡಗಾಲು ಸರಿಯಿಲ್ಲದ ಬೇರೆ ವ್ಯಕ್ತಿ ಯಾಕಿರಬಾರದು?”
ಬಲರಾಜ ಮೀಸೆಯಡಿಯಲ್ಲಿ ನಕ್ಕು ಹೇಳಿದ.
“ಹೌದು. ಈ ಸಂದೇಹ ಬಂದದ್ದರಿಂದ ತಲೆಬುರುಡೆ ಮತ್ತು ಮುಖದ ಒಂದೇ ಗಾತ್ರದಲ್ಲಿರುವ ಫೊಟೋ ತೆಗೆದು ಒಂದರ ಮೇಲೆ ಒಂದನ್ನಿಟ್ಟು ಹೋಲಿಸಿ ಅಧ್ಯಯನ ಮಾಡಿದೆವು. ಫೊಟೋದಲ್ಲಿ ಕಾಣಿಸುವ ಮುಖದ ಭಾಗಗಳು ಅಂದರೆ ಕಣ್ಣುಗಳ ಬದಿ, ಮೂಗು, ತುಟಿ, ಗಲ್ಲ, ಕೂದಲುರೇಖೆ, ನೆತ್ತಿಗೆ ಕ್ಯಾಮೆರಾದ ಗ್ರೌಂಡ್ ಗ್ಲಾಸಿನ ಮೇಲೆ ಗುರುತು ಹಾಕಿ, ತಲೆಬುರುಡೆಯನ್ನು ಫೊಟೋದ ಹತ್ತಿರ ಇಟ್ಟು ಅದರಲ್ಲಿನ ವಿವಿಧ ಭಾಗಗಳ ಅಳತೆಗಳನ್ನು ಈ ಮೊದಲೇ ದಾಖಲಿಸಿದ ಅಳತೆಗಳೊಂದಿಗೆ ಹೊಂದಾಣಿಕೆಯಾಗುತ್ತವೆಯೇ ಎಂದು ನೋಡಿ, ಆ ಗಾತ್ರದಲ್ಲಿ ತಲೆಬುರುಡೆಯ ಫೊಟೋ ತೆಗೆದೆವು. ಮುಖ ಮತ್ತು ತಲೆಬುರುಡೆಯ ಎರಡು ಫೋಟೋಗಳನ್ನು ಸಿದ್ಧಪಡಿಸಿ, ಒಂದನ್ನು ಮತ್ತೊಂದರ ಮೇಲಿರಿಸಿ ಅವುಗಳ ನಡುವಿನ ಸೂಕ್ಷ್ಮ ಸಾದೃಶ್ಯಗಳನ್ನು ವಿಶ್ಲೇಷಿಸಿದೆವು.”
“ಆಗ ತಲೆಬುರುಡೆ ಫೊಟೋದಲ್ಲಿರುವ ವ್ಯಕ್ತಿಯದ್ದೋ ಅಲ್ಲವೋ ಎಂದು ತಿಳಿಯುತ್ತದೆಯೇ? ಮನುಷ್ಯರ ಮುಖ ಮತ್ತು ತಲೆಬುರುಡೆಗಳಲ್ಲಿ ವ್ಯತ್ಯಾಸವಿರುವುದಿಲ್ಲವೇ?”
“ಇರುತ್ತದೆ. ಹಾಗಾಗಿ ಸತ್ತ ವ್ಯಕ್ತಿ ಯಾರೆಂದು ತಿಳಿಯುವುದಕ್ಕಾಗಿ ತಲೆಬುರುಡೆಗೆ ಮಯಣ, ಪ್ಲಾಸ್ಟರ್ ಹಚ್ಚಿ ಆಕಾರ ನೀಡಿದೆವು. ಮುಖದ ವಿವಿಧೆಡೆಗಳಲ್ಲಿರುವ ಮಾಂಸದ ಹೊದಿಕೆಯ ದಪ್ಪವನ್ನು ಲೆಕ್ಕ ಹಾಕಿ, ತಲೆಬುರುಡೆಗೆ ಕೃತಕ ಮಾಂಸಗಳನ್ನು ಅಂಟಿಸಿ ಕಣ್ಣು, ಮೂಗು, ಕಿವಿಗಳನ್ನು ರಚಿಸಿದೆವು. ಆಗ ಮುಖದ ಪೂರ್ಣ ಸ್ವರೂಪ ಕಾಣಿಸಿತು” ಎನ್ನುತ್ತಾ ಡ್ರಾಯರನ್ನು ಎಳೆದು, ಅದರೊಳಗೆ ಕೈಹಾಕಿ ಯಾವುದೋ ಒಂದು ವಸ್ತುವನ್ನು ಮೇಜಿನ ಮೇಲಿರಿಸಿದ. ಅದನ್ನು ನೋಡುತ್ತಿದ್ದಂತೆ ಕಾವೇರಿಯ ಮೈಯಲ್ಲಿ ಆಘಾತದ ಅಲೆಗಳು ಚಲಿಸಿದಂತಾಗಿ ತಂತಿಸುರುಳಿಯಂತೆ ತುಯ್ಯುತ್ತಾ ಎದ್ದು ನಿಂತಳು.
ನಂಜುಂಡನ ರುಂಡ! ಅರೆನೆರೆತ ಕೂದಲು, ಬಾತು ಕೆಂಪಾದ ಕಣ್ಣುಗಳು, ಪೊದೆಮೀಸೆ, ಅಗಲ ಕೆನ್ನೆ, ದಪ್ಪತುಟಿ, ತನ್ನನ್ನೇ ದುರುಗುಟ್ಟುತ್ತಿರುವಂಥ ನೋಟ.
“ಅರೆ! ಏನಾಯ್ತು ಕಾವೇರಿಯವರೇ! ಹೆದರಬೇಡಿ. ತಲೆಬುರುಡೆಯ ಆಧಾರದಿಂದ ತಜ್ಞರು ತಯಾರಿಸಿದ ರೂಪವಿದು!”
“ನಂಜುಂಡನ ತಲೆಯನ್ನೇ ಕತ್ತರಿಸಿ ಇಟ್ಟಂತಿದೆ!”
“ಅಂತೂ ಒಪ್ಪಿಕೊಂಡಿರಿ ನೀವು” ಎನ್ನುತ್ತಾ ಮೇಲೆದ್ದ ಬಲರಾಜ “ಕಾನ್ಸ್‍ಟೇಬಲ್, ಇವರನ್ನು ಕರೆದುಕೊಂಡು ಬಾ” ಎಂದು ಪೇದೆಯ ಜೊತೆಯಲ್ಲಿ ನಡೆದ. ಕಾನ್ಸ್‍ಟೇಬಲನ ಜೊತೆಯಲ್ಲಿ ಕಾವೇರಿ ಹಿಂದೆ. ಅರೆಗತ್ತಲು ಓಣಿ. ಎಡಕ್ಕೆ ಕಬ್ಬಿಣದ ಸರಳುಗಳಿಂದ ಕೂಡಿದ ಕೋಣೆ. ಮುಂದೆ ಮತ್ತಷ್ಟು ಕತ್ತಲೆ. ಹತ್ತು ಹೆಜ್ಜೆ ಹಾಕಿದ ಮೇಲೆ ಬಲಭಾಗದಲ್ಲಿ ಒಂದು ಕೋಣೆ. ಸಲಾಕಿಗಳ ಬಾಗಿಲು. ಕಿಟಿಕಿಯಿಲ್ಲ. ಕಣ್ಣುಗಳನ್ನು ಹೊಂದಿಸಿಕೊಂಡು ನೋಡಿದರೆ ಕಾಣಿಸುವ ಮಬ್ಬು ಮೂಲೆ.
“ಏಳು ಬಾ, ನಿನ್ನನ್ನು ನೋಡಲು ಇನ್ಸ್‍ಪೆಕ್ಟರ್ ಬಂದಿದ್ದಾರೆ.”
ಕೀಲಿ ತೆರೆದು ಬಾಗಿಲು ಎಳೆದ ಸದ್ದಾದರೂ ತಿರುಗದೆ ಬರಿ ನೆಲದ ಮೂಲೆಯಲ್ಲಿ ಅಂಗಾತ ಮಲಗಿದ್ದ ವ್ಯಕ್ತಿಯು ದನಿ ಬಂದತ್ತ ಹೊರಳಿ ಮೆಲ್ಲನೆ ಎದ್ದು ನಿಂತ. ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಮಬ್ಬಿನ ಪರದೆಯಿಂದ ಹೊರಗೆ ಬಂದ.
“ಗೋಪಾಲಾ!” ಗಟ್ಟಿಯಾಗಿ ಹೊರಡಬೇಕಿದ್ದ ಕಾವೇರಿಯ ಸ್ವರ ಪಿಸುದನಿಯಾಗಿ ಹೊರಬಂತು. ಅವನ ಕಣ್ಣಲ್ಲಿ ಬೆರಗು.
“ಕಾವೇರಿ! ನೀನಿಲ್ಲಿ?”
“ನಿಮ್ಮ ಗಂಡನನ್ನು ಕೊಂದ ಆರೋಪಿ ಇವನೇ. ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟಿದ್ದಾನೆ”
“ಏನೆಂದು ಬರೆದುಕೊಟ್ಟಿದ್ದಾನೆ ಇನ್ಸ್‍ಪೆಕ್ಟರ್?”
“ನಂಜುಂಡ ಮತ್ತು ಗೋಪಾಲನ ಮನೆಯವರು ದಾಯಾದಿಗಳಾಗಿದ್ದರಂತೆ. ಅವರೊಂದಿಗೆ ಯಾವತ್ತೂ ಜಗಳ ಹೊಡೆದಾಟಗಳಾಗುತ್ತಿದ್ದವಂತೆ. ಹಿರಿಯರು ಕಿರಿಯರೆಂಬ ಭೇದವೆನ್ನದೆ ನಂಜುಂಡ ಎಲ್ಲರ ಮೇಲೂ ಎಗರಾಡುತ್ತಿದ್ದನಂತೆ. ಕೊನೆಗೆ ಅವನು ಎಲ್ಲರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡನಂತೆ. ಅವರ ಸ್ವಯಾರ್ಜಿತ ಸೊತ್ತುಗಳನ್ನು ತನ್ನ ಅಪ್ಪನದ್ದೆಂದು ಕಬಳಿಸಿದನಂತೆ. ಆಮೇಲೆ ಕೋರ್ಟು, ಕೇಸು, ಧಮಕಿ, ಬೈಗುಳ, ಹೊಡೆದಾಟ, ಸಾವುನೋವುಗಳು ಮಾಮೂಲಾದವಂತೆ. ಹಾಗೆ ಸತ್ತವರಲ್ಲಿ ಗೋಪಾಲನ ಅಪ್ಪ ಕಣ್ಣಪ್ಪನೂ ಒಬ್ಬನಂತೆ. ಇದಕ್ಕಾಗಿ ಹೊಂಚು ಹಾಕುತ್ತಿದ್ದ ಗೋಪಾಲ ಸಾರಾಯಿ ಅಂಗಡಿಯಲ್ಲಿ ಕುಡಿದು ಮತ್ತೇರಿ ಬಿದ್ದಿದ್ದ ನಂಜುಂಡನ ಕೊರಳಿಗೆ ಹಗ್ಗ ಬಿಗಿದು ಕೊಂದು ಹೂತು ಹಾಕಿದನಂತೆ.”
ಕಾವೇರಿಗೆ ಏದುಸಿರು ಒತ್ತಿ ಬರತೊಡಗಿತು. “ಗೋಪಾಲಾ, ನೀನು…” ಆಕೆ ಭಾವೋದ್ವೇಗಗೊಂಡಿರುವುದು ದನಿಯಿಂದ ಮಾತ್ರವಲ್ಲ. ಗೋಪಾಲನ ಕೈಗಳನ್ನು ಹಿಡಿದ ಬೆರಳುಗಳ ಬಿಗಿಯಿಂದಲೂ ವ್ಯಕ್ತವಾಗುತ್ತಿತ್ತು.
“ಕಾವೇರಿ, ನೀನು ಮನೆಗೆ ಹೋಗು. ಇಲ್ಲಿಗೆ ಕಾಲಿಡಬೇಡ” ಎನ್ನುತ್ತಾ ಕಣ್ಣೊರೆಸಿಕೊಂಡು ಒಳಗೆ ಹೋಗಲನುವಾದ ಗೋಪಾಲನನ್ನು ತಡೆದು ಬಲರಾಜ ಹೇಳಿದ. “ಇರು, ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ.”
“ಅರ್ಥವಾಗಲಿಲ್ಲ ಸರ್”
“ಭಾವಚಿತ್ರ ಮತ್ತು ತಲೆಬುರುಡೆಯನ್ನು ಅಧ್ಯಯನ ಮಾಡಿದಾಗ ಹೆಣ ನಂಜುಂಡನದ್ದೆಂದು ಖಾತರಿಯಾಯಿತು. ಆದರೆ ಕುತ್ತಿಗೆಗೆ ಹಗ್ಗ ಬಿಗಿದುದರಿಂದ ಆತ ಸತ್ತಿಲ್ಲ.”
ಚೂರಿಯಿಂದ ಗೀರಿದಂತೆ ಗೋಪಾಲನ ಹಣೆಯಲ್ಲಿ ನೆರಿಗೆ ಮೂಡಿತು. ಹುರಿಹಗ್ಗದಂತೆ ನರ ಬಿಗಿದುಕೊಳ್ಳತೊಡಗಿತು. ಮುಖದಲ್ಲಿ ಹರಿದ ಉಗ್ರಕ್ಷೋಭೆ ಎಷ್ಟು ಯತ್ನಿಸಿದರೂ ಹಿಂಗದೆ ಅಲ್ಲೇ ಮಡುಗಟ್ಟಿತು.
“ಅದೇನೇ ಇರಲಿ. ಕೊಲೆಗಾರ ನಾನೆಂದು ಒಪ್ಪಿಕೊಂಡಿದ್ದೇನಲ್ಲ. ಇನ್ನೇನು?”
“ನೀವೇ ಎಲ್ಲವನ್ನೂ ತೀರ್ಮಾನಿಸುವುದಾದರೆ ನಾವೇಕೆ ಇರುವುದು ಗೋಪಾಲ?”
“ಅಂದರೆ?”
“ನೀನು ಕೊಲೆಗಾರನಲ್ಲ.”
“ಹೇಗೆ ಹೇಳುತ್ತೀರಿ?”
“ನೀನು ನಂಜುಂಡನ ಕೊರಳಿಗೆ ಹಗ್ಗ ಬಿಗಿದು ಕೊಂದೆ ಎನ್ನುತ್ತಿರುವೆ. ಆದರೆ ವಿಷ ಸೇವನೆಯೇ ಮರಣಕ್ಕೆ ಕಾರಣವೆಂದು ವೈಜ್ಞಾನಿಕ ವರದಿ ಹೇಳುತ್ತದೆ.”
“ಅಂದರೆ?”
“ಮದ್ಯದಲ್ಲಿ ವಿಷದ ಅಂಶಗಳಿದ್ದವೋ ಅಂತ ನನಗೆ ಸಂಶಯವಿತ್ತು. ನಿಮ್ಮೂರಿಗೆ ಬಂದು ತನಿಖೆ ಮಾಡಿದೆ. ಮದ್ಯದಲ್ಲಿ ವಿಷ ಸೇರಿದ್ದರೆ ಕುಡಿದವರೆಲ್ಲರೂ ಸಾಯಬೇಕಿತ್ತು ಇಲ್ಲವೇ ಅಸ್ವಸ್ಥರಾಗಬೇಕಿತ್ತು. ಹಾಗೇನೂ ಆಗಿರಲಿಲ್ಲ. ನಂಜುಂಡನ ಮದ್ಯದಲ್ಲಿ ಮಾತ್ರ ವಿಷ ಬೆರೆಸಿರಬಹುದೇ ಎಂದು ಊರಿನವರಲ್ಲಿ ಕೇಳಿದೆ. ಸಾರಾಯಿ ಅಂಗಡಿಯ ಉಸ್ತುವಾರಿಯೆಲ್ಲ ನಂಜುಂಡನದ್ದು ಮಾತ್ರವಾಗಿರುವುದರಿಂದ ಅಲ್ಲಿರುವ ಬಾಟಲಿಗೆ ಯಾರೂ ಕೈಹಚ್ಚುವ ಹಾಗಿಲ್ಲ ಎಂದರು. ಆದ್ದರಿಂದ ಅವನ ಆಪ್ತನಂತೆ ನಟಿಸುತ್ತಿದ್ದ ನೀನು ಕೂಡ ಏನೂ ಮಾಡುವಂತಿಲ್ಲ. ಹಾಗಿದ್ದರೆ ಅವನ ಹತ್ಯೆ ಹೇಗಾಯಿತು?”
ಬೋನಿನಲ್ಲಿ ಸಿಕ್ಕಿಬಿದ್ದ ಪ್ರಾಣಿಯಂತೆ ಗೋಪಾಲ ತಳಮಳಿಸಿದ.
“ಅಲ್ಲ…ನಾನೇ…ಅವನನ್ನು…”
ಬಲರಾಜನು ಕಾವೇರಿಯ ಕಡೆ ತಿರುಗಿ ಹೇಳಿದ. “ನೀವೇಕೆ ಅವನ ಪರ ವಾದಿಸಬಾರದು? ಇಲ್ಲಿವರೆಗೂ ಅವನು ನಿಮ್ಮನ್ನು ಕಾಪಾಡುತ್ತಾ ಬಂದಿಲ್ಲವೇ? ಈಗ ಅವನನ್ನು ರಕ್ಷಿಸುವ ಹೊಣೆ ನಿಮ್ಮದಲ್ಲವೇ? ಪಾಪ! ಹೇಗೆ ಒದ್ದಾಡುತ್ತಿದ್ದಾನೆ ಅವನು!”
“ಏನಿದೆಲ್ಲ?” ಕೋಪ ಬೆರೆತ ದನಿಯಲ್ಲಿ ಕಾವೇರಿ ಕೇಳಿದಳು.
“ಕಾವೇರಿಯವರೇ, ನಂಜುಂಡನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾನು ನಿಮ್ಮನ್ನು ಭೇಟಿಯಾಗಬೇಕಿತ್ತು. ಗುರುತು ಹಚ್ಚುವುದಕ್ಕಾಗಿ ನಿಮ್ಮ ಫೊಟೋ ಬೇಕಿತ್ತು. ದಾಮೋದರ ಹಳೆಮನೆಯ ಅಟ್ಟವನ್ನು ಹುಡುಕಾಡಿ ನಿಮ್ಮ ಮತ್ತು ನಂಜುಂಡನ ಮದುವೆಯ ಫೊಟೋ ಕೊಟ್ಟ. ಗೋಪಾಲನ ಮನೆಯ ಗೋಡೆಯಲ್ಲಿ ನೇತುಹಾಕಿದ್ದ ಅವನ ಫೊಟೋವನ್ನು ಕಿಟಿಕಿಯ ಸರಳುಗಳೆಡೆಯಿಂದ ಮೊಬೈಲ್ ಫೋನಿನ ಕ್ಯಾಮೆರಾ ಮೂಲಕ ಸೆರೆಹಿಡಿದೆ. ಅವನ ಪತ್ತೆಗಾಗಿ ಪೇದೆಗಳನ್ನು ಕಳುಹಿಸಿದೆ. ಆತ ತೋರಣಕಟ್ಟೆಯಲ್ಲಿದ್ದಾನೆಂದು ಅವರಿಗೆ ಗೊತ್ತಾಯಿತು. ಅವನಿಗೆ ತಿಳಿಯದಂತೆ ಹಿಂಬಾಲಿಸಿದರು. ರಾತ್ರಿ ಹೊತ್ತಲ್ಲಿ ಆತ ಯಾರ ಮನೆಗೋ ಹೋಗುತ್ತಿದ್ದ. ಕದ ತಟ್ಟಿದಾಗ ಹೆಂಗಸೊಬ್ಬಳು ಬಾಗಿಲು ತೆರೆಯುತಿದ್ದಳು. ಪೇದೆಗಳು ಅಲ್ಲೇ ಇದ್ದ ಗೂಡಂಗಡಿಯವನಲ್ಲಿ ವಿಚಾರಿಸಿದಾಗ ಅವರು ಸಮವಸ್ತ್ರದಲ್ಲಿ ಇಲ್ಲದ ಪೋಲೀಸರೆಂದು ತಿಳಿಯದೆ ಎಲ್ಲವನ್ನೂ ವಿವರಿಸಿದ. ಆಕೆ ಹೊಸತಾಗಿ ಜಮೀನು ಖರೀದಿಸಿದವಳೆಂದೂ, ಗೋಪಾಲನು ಅವಳ ಗಂಡನಲ್ಲವೆಂದೂ, ಹೆಚ್ಚಾಗಿ ರಾತ್ರಿಯಲ್ಲೇ ಬರುತ್ತಿರುತ್ತಾನೆಂದೂ ಹೇಳಿದ.”
ಆಮೇಲೆ ಅಲ್ಲಿ ಸೂಜಿ ಬಿದ್ದರೂ ಕೇಳುವಂಥ ಮೌನ ವ್ಯಾಪಿಸಿಸಿತು. ಇನ್ನು ಯಾರು ಪ್ರಾರಂಭಿಸಬೇಕೆಂದು ಹೊಳೆಯದಂತೆ, ಮಾತನ್ನು ಹೇಗೆ ಮುಂದುವರಿಸಬೇಕೆಂದು ತಿಳಿಯದವರಂತೆ ಬಲರಾಜ ಸುಮ್ಮನಾದ. ಕೆಲವು ಕ್ಷಣಗಳ ಬಳಿಕ ಗಂಭೀರವಾದ ದನಿಯಲ್ಲಿ ಹೇಳಿದ.
“ಆ ಹೆಣ್ಣು ನೀವೇ ಆಗಿದ್ದಿರಿ ಕಾವೇರಿ.”
ಕಾವೇರಿಯ ಮುಖ ಬಿಳುಚಿಕೊಂಡಿತ್ತು. ಸಿಡಿಲಿಗೆ ಸಿಕ್ಕ ಹಕ್ಕಿಯ ರೆಕ್ಕೆಗಳಂತೆ ತೆರೆದುಕೊಂಡ ಕಣ್ಣುಗಳ ಸುತ್ತಲಿನ ಭಾಗ ಥರಥರನೆ ನಡುಗುತ್ತಿತ್ತು.
“ಮಾರುವೇಷದಲ್ಲಿದ್ದ ಪೇದೆಗಳು ನಿಮ್ಮ ಬಳಿ ಬಂದು ‘ನಾಲ್ಕೈದು ವರ್ಷಗಳ ಹಿಂದೆ ನಂಜುಂಡ ನಮಗೆ ಸಾಲ ಕೊಟ್ಟಿದ್ದ. ಅದನ್ನು ಕೈಯಾರೆ ಹಿಂತಿರುಗಿಸಬೇಕಿತ್ತು. ನಾವು ಅವನನ್ನು ಕಾಣಬಹುದೇ?’ ಎಂದು ಕೇಳಿದಾಗ ನೀವು ಗಲಿಬಿಲಿಗೊಂಡಿರಿ. ‘ನನ್ನ ವಿಳಾಸ ಎಲ್ಲಿಂದ ಸಿಕ್ಕಿತು?’ ಅಂತ ಕೇಳಿದಿರಿ. ‘ಗೋಪಾಲ ಕೊಟ್ಟ’ ಎಂದರೂ ನಿಮಗೆ ನಂಬಿಕೆ ಬರಲಿಲ್ಲ. ‘ನಂಜುಂಡ ಬೊಂಬಾಯಿಯಲ್ಲಿದ್ದಾನೆ. ಕಳೆದ ವರ್ಷದಿಂದ ಪತ್ರ ಕಳುಹಿಸುತ್ತಿಲ್ಲ. ಒಮ್ಮೆಯೂ ಊರಿಗೆ ಬಂದಿಲ್ಲ’ ಎಂದು ಹೇಳಿ ಅವರನ್ನು ಸಾಗ ಹಾಕಿದಿರಿ. ಪೇದೆಗಳು ಇದನ್ನು ನನ್ನ ಹತ್ತಿರ ಹೇಳಿದಾಗ ನೀವು ಏನನ್ನೋ ಮರೆಮಾಚುತ್ತೀರಿ ಅನಿಸಿತು. ತವರುಮನೆಯಲ್ಲಿರುತ್ತೇನೆ ಅಂತ ಊರಿನವರಲ್ಲಿ ಹೇಳಿದ ನೀವು ತೋರಣಕಟ್ಟೆಯಲ್ಲಿದ್ದೀರಿ. ನೆರೆಮನೆಯವನಾಗಿದ್ದ ಗೋಪಾಲನೂ ಜೊತೆಯಲ್ಲಿದ್ದಾನೆ. ಸಂಶಯಗಳು ತಲೆಯೆತ್ತಿದರೂ ತಲೆಬುರುಡೆ ನಂಜುಂಡನದ್ದೇ ಎಂದು ನಿರ್ಧಾರವಾಗುವಲ್ಲಿವರೆಗೆ ಯಾವ ತೀರ್ಮಾನಕ್ಕೂ ಬಾರದೆ ಸುಮ್ಮನಿದ್ದೆ.”
ಬಲರಾಜ ಮಾತು ನಿಲ್ಲಿಸಿದ. ಉಸಿರಾಟದ ಲಯಕ್ಕೆ ತಕ್ಕಂತೆ ಕಾವೇರಿಯ ಎದೆ ಒಂದೇ ಸವನೆ ಏರಿಳಿಯುತ್ತಿತ್ತು.
“ಕಾವೇರಿಯವರೇ, ಬೇರೆ ಹೆಂಗಸರು ನಂಜುಂಡನಿಗೆ ವಿಷ ಕೊಟ್ಟು ಕೊಂದು ನಮ್ಮ ಮನೆಯ ಹಿತ್ತಿಲಲ್ಲಿ ಹೂತು ಹಾಕಿದರು ಎನ್ನಬೇಡಿ. ಯಾವ ಹೆಣ್ಣೇ ಇರಲಿ, ಅವನ ಹೆಣವನ್ನು ನಿಮ್ಮ ಮನೆಯವರೆಗೆ ಹೊತ್ತು ತರುವಷ್ಟು ಮೂರ್ಖರಲ್ಲ. ಆದ್ದರಿಂದ ನಿಜ ಹೇಳಿ, ನಂಜುಂಡನ ಆಹಾರದಲ್ಲಿ ವಿಷ ಬೆರೆಸಿಕೊಟ್ಟು ಅವನನ್ನು ಕೊಂದವರು ನೀವೇ ಅಲ್ಲವೇ?”
“ಹ್ಞಾ… ಹ್ಞಾ… ನಾನೇ ಕೊಲೆ ಮಾಡಿದೆ.” ಭೂತ ಹಿಡಿದವಳಂತೆ ಆಕೆ ಚೀರಿದಳು. ಒಳಗಿನಿಂದ ಉಕ್ಕಿ ಬಂದ ಸಂಕಟ ಮುಖದಲ್ಲಿಡೀ ಹರಡಿಕೊಂಡಿತು. ಹೊರ ಬರಲು ದಾರಿ ಕಾಣದೆ ಬಾಯಿಯ ಮೂಲಕ ಅಳುವಾಗಿ ಹೊಮ್ಮಿತು. “ನಂಜುಂಡನ ಸ್ವಭಾವ ಸಾಕಾಗಿ ಹೋಗಿತ್ತು. ಬೇರೆ ಹೆಂಗಸರ ಸಹವಾಸದಿಂದ ದೊರೆತ ಗುಪ್ತ ರೋಗಗಳನ್ನು ನನಗೂ ಅಂಟಿಸಿದ್ದ. ಕಷ್ಟಕಾಲದಲ್ಲಿ ಓಡಿ ಬರುವ ಗೋಪಾಲನೇ ನನಗೆ ಎಲ್ಲವೂ ಆಗಿಬಿಟ್ಟ. ನಂಜುಂಡನ ಕಣ್ಣುತಪ್ಪಿಸಿ ಕದ್ದುಮುಚ್ಚಿ ಸೇರುವುದು ಸರಿಯಲ್ಲವೆನಿಸಿತು. ನಂಜುಂಡನನ್ನು ಮುಗಿಸಿದರೆ ಮಾತ್ರ ಜೊತೆಯಾಗಿ ಬಾಳಲು ಸಾಧ್ಯ ಎಂದರಿತು ಅವನ ಆಹಾರದಲ್ಲಿ ವಿಷ ಬೆರೆಸಿದೆ” ಎನ್ನುತ್ತಿದ್ದಂತೆ ನೀರು ಕಣ್ಣಿನಿಂದಲೂ ತುಳುಕಿ ಹರಿಯಿತು.
“ನೀವಿಬ್ಬರೂ ಸೇರಿ ಮಾಡಿದ ಕೊಲೆ.”
“ಅಲ್ಲ. ಕೊಲೆಯಾದ ಬಳಿಕ ಗೋಪಾಲನಿಗೆ ತಿಳಿಸಿದೆ. ಅವ ಬೆಚ್ಚಿ ಬಿದ್ದ. ನಂಜುಂಡ ಸತ್ತುಹೋದ ಎಂದೆನೇ ಹೊರತು ವಿಷ ಕೊಟ್ಟೆ ಎನ್ನಲಿಲ್ಲ. ಅವನಿಗೆ ನನ್ನ ಮೇಲೆ ಸಂಶಯ ಬಂದಿರಬೇಕು. ಆದರೆ ಏನನ್ನೂ ಹೇಳದೆ ಕೇಳದೆ ಹೆಣವನ್ನು ಹಿತ್ತಿಲಲ್ಲಿ ಹೂತು ಹಾಕಿ, ನಂಜುಂಡ ಕೆಲಸ ಹುಡುಕಿ ಬೊಂಬಾಯಿಗೆ ಹೋದ ಎಂದು ಸುದ್ದಿ ಹಬ್ಬಿಸಿದ. ಯಾರಾದರೂ ಕೇಳಿದರೆ ನನ್ನಲ್ಲೂ ಹಾಗೆನ್ನಲು ಹೇಳಿದ.”
“ಆದರೆ ಕೊಲೆಯ ಆರೋಪವನ್ನು ಏಕೆ ಹೊತ್ತುಕೊಂಡ?”
“ಸರ್” ಮಾತಿಗಾಗಿ ಅನುಮತಿ ಬೇಡುವವನಂತೆ ಗೋಪಾಲ ಕರೆದ. “ನಂಜುಂಡನಿಂದಾಗಿ ಅವಳು ಈಗಾಗಲೇ ಸಾಕಷ್ಟು ನೋವುಂಡಿದ್ದಾಳೆ. ನಂಜುಂಡನನ್ನು ಮದುವೆಯಾದಂದಿನಿಂದ ನರಕವನ್ನೇ ಕಂಡಿದ್ದಾಳೆ. ನಂಜುಂಡನಿಲ್ಲದಿದ್ದಾಗ ಅವಳ ಮನೆವಾರ್ತೆಗೆ ನಾನೇ ನೆರವಾಗುತ್ತಿದ್ದೆ. ಅವಳನ್ನು ನೋಡುವಾಗ, ಅವಳ ಕುರಿತು ನೆನೆಯುವಾಗ ಕನಿಕರವಾಗುತ್ತಿತ್ತು. ಗಂಡಿನ ಪ್ರೀತಿ ಕಾಣದೆ ಕಂಗಾಲಾಗಿದ್ದಾಳೆ ಅನಿಸುತ್ತಿತ್ತು. ಬರಬರುತ್ತಾ ಎಲ್ಲ ರೀತಿಯಲ್ಲೂ ಅವಳಿಗೆ ಹತ್ತಿರವಾದೆ. ಅದುವರೆಗೂ ನನ್ನ ಅಮ್ಮನಿಗಾಗಿ ಬದುಕಿದ್ದೆ. ಈಗ ಇವಳಿಗಾಗಿಯೂ ಜೀವಿಸುತ್ತಿದ್ದೇನೆ ಎನಿಸತೊಡಗಿತು. ಆದ್ದರಿಂದ ನಂಜುಂಡನನ್ನು ಕೊಂದ ಆರೋಪವನ್ನು ನನ್ನ ಮೇಲೆಳೆದುಕೊಂಡೆ.”
“ನಂಜುಂಡ ಸತ್ತ ಕೂಡಲೇ ಊರು ಬಿಟ್ಟು ಹೋಗದೆ, ಅದರಲ್ಲೂ ಇಬ್ಬರು ಜೊತೆಯಾಗಿ ಹೋಗದೆ ಬುದ್ಧಿವಂತಿಕೆಯನ್ನು ತೋರಿಸಿದಿರಿ. ನೀನು ಅವಳಿಗೋಸ್ಕರ ಇಷ್ಟೆಲ್ಲ ಮಾಡಿ ಸೆರೆಮನೆ ಸೇರಿದರೆ ಈ ಒಂಟಿ ಹೆಣ್ಣಿನ ಗತಿ ಏನಾಗಬಹುದು ಯೋಚಿಸಿದ್ದೆಯಾ?”
“ಯೋಚಿಸಿದ್ದೇನೆ ಸರ್. ನಮ್ಮಿಬ್ಬರ ಪೈಕಿ ಯಾರೋ ಒಬ್ಬರು ನಂಜುಂಡನ ಕೊಲೆಯನ್ನು ಮಾಡಿದ್ದಾರೆ ಎಂಬ ಸಂಗತಿ ನಿಮಗೆ ತಿಳಿದಿದೆ ಎಂದು ಕಳೆದವಾರ ನನ್ನನ್ನು ಕರೆಸಿ ವಿಚಾರಣೆ ಮಾಡುವಾಗಲೇ ಗೊತ್ತಾಗಿತ್ತು. ಹಾಗಾಗಿ ಹೆಚ್ಚು ವಾದಿಸದೆ ನಿನ್ನೆ ಒಪ್ಪಿಕೊಂಡೆ.”
“ಯಾಕೆ?”
“ಯಾಕೆಂದರೆ ಕಾವೇರಿ ಈಗ ಬಸುರಿ”
“ಓಹ್!”
“ಈ ಪರಿಸ್ಥಿತಿಯಲ್ಲಿ ಅವಳು ಸೆರೆಮನೆ ಸೇರಿ, ಮಾನಸಿಕವಾಗಿ ಜರ್ಜರಿತಳಾಗೋದು ನನಗೆ ಇಷ್ಟವಿರಲಿಲ್ಲ. ನನ್ನ ಅಮ್ಮನಂತೂ ತೀರಿಹೋದಳು. ಒಂಟಿ ಹೆಂಗಸಿನ ಹೆರಿಗೆ ಬಾಣಂತನ ಯಾರು ಮಾಡುತ್ತಾರೆ ಎಂಬ ತಲೆಬಿಸಿ ಇದ್ದೇ ಇತ್ತು. ನನ್ನನ್ನು ಮೊದಲ ಬಾರಿ ವಿಚಾರಣೆ ಮಾಡಿ ಬಿಟ್ಟ ನಂತರದ ದಿನಗಳಲ್ಲಿ ಅವಳನ್ನು ಆಶ್ರಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ ಬಳಿಕವೇ ನಿಮ್ಮೆದುರು ಶರಣಾದೆ. ಆದರೆ ಈಗ…” ಎನ್ನುತ್ತಿದ್ದಂತೆ ಅವನ ಕೊರಳು ಬಿಗಿದು ಕಣ್ಣುಗಳಲ್ಲಿ ನೀರಿಳಿಯಿತು.
ಬಲರಾಜನು ಗೋಪಾಲನ ಭುಜ ಹಿಡಿದು ಹೇಳಿದ “ನೀನು ಕೊಲೆ ಮಾಡದಿರುವುದರಿಂದ ನಿನ್ನನ್ನು ಸೆರೆಯಿಂದ ಹೊರಬಿಡಬೇಕಾದ್ದು ನನ್ನ ಕರ್ತವ್ಯ. ಇನ್ನೇನು ಹೇಳಲಿ ಗೋಪಾಲ? ನೀನು ಹೋಗಬಹುದು”
“ಆದರೆ ನನ್ನ ಕಾವೇರಿ?”
3 thoughts on “ಬಂಧ”
ಕಥೆಯ ಶೈಲಿ ಹಾಗೂ ಭಾಷೆ ಚನ್ನಾಗಿದೆ. ಕುತೂಹಲ ಮೂಡಿಸುತ್ತದೆ. ಅಭಿನಂದನೆಗಳು.
ಕಥಾ ಹಂದರ ಮತ್ತು ನಿರೂಪಣೆ ಸೊಗಸಾಗಿದೆ. ಒಳ್ಳೆಯ ಕಥೆ.
ಡಾ. ಶುಭಾಷ ಪಟ್ಟಾಜೆ ಯವರ ಈ ‘ಬಂಧ’ ಕಥಾನಕ ಶೈಲಿ ಸರಳ ಸುಂದರ. ಕೊಲೆಯ ತನಿಖೆ ಮಾಡುತ್ತಾ ಓದುಗರಿಗೆ ಫೋರೆನ್ಸಿಕ್ ವಿವರಗಳನ್ನು, ತನಿಖೆಯ ಸ್ಥೂಲ ರೂಪವನ್ನು ತಿಳಿಸಿದ್ದಾರೆ. ಬದುಕುವುದಕ್ಕಾಗಿ ನಡೆದ ಈ ಕೊಲೆಯ ಸಹಭಾಗಿ ಗೋಪಾಲನನ್ನು ಇನ್ಸ್ಪೆಕ್ಟರ್ ಸಧ್ಯಕ್ಕೆ ಆರೋಪ ಮುಕ್ತಗೊಳಿಸುತ್ತಾರೆ. ಆದರೆ, ಗೋಪಾಲನ ಹಾಗೂ ಕಥೆಯ ಕೊನೆಯ ವಾಕ್ಯ ಓದುಗರನ್ನು ಕಥೆ ಮುಗಿದಮೇಲೆ ಯೋಚಿಸಲು ಹಚ್ಚುತ್ತದೆ. ಅದ್ಭುತ ಮುಕ್ತಾಯ. ಅಭಿನಂದನೆಗಳು.